(ಯಾವುದೇ ಬಗೆಯ ಶಾಸ್ತ್ರಬದ್ಧ ತತ್ವಗಳಿಗೂ ಒಂದು ಕಲಾಕೃತಿಗೂ ಇರಬಹುದಾದ ಸಂಬಂಧಗಳ ಬಗೆಗೆ ನಾನು ಆಡಬೇಕೆಂದಿರುವ ಮಾತುಗಳು ನಾವು ಇಲ್ಲಿ ನಡೆಸಲಿರುವ ಚರ್ಚೆಗೆ ಮುನ್ನುಡಿಯಾಗಲಿ ಎಂದು ನನ್ನ ಆಸೆ. ಬರಿಯ ಇಂಗ್ಲಿಷ್ ವಿಮರ್ಶಕರನ್ನೇ ನನ್ನ ವಿಚಾರಕ್ಕೆ ತಳಹದಿಯನ್ನಾಗಿಟ್ಟುಕೊಂಡು ನಾನು ಆಡುವ ಮಾತುಗಳು ಕನ್ನಡದ ಸಾಹಿತ್ಯ ಸಂದರ್ಭದಲ್ಲಿ ಎಷ್ಟು ಪ್ರಯೋಜನವಾಗಬಲ್ಲವು ಎಂಬ ಸಂದೇಹ ನನಗಿದೆ. ಕನ್ನಡದ ಸಾಹಿತ್ಯ ಕೃತಿಗಳನ್ನು ಚರ್ಚಿಸುವಾಗ ಬೇರೊಂದು ನಾಡಿನಲ್ಲಿ ನಮ್ಮ ವಿಚಾರ ಸಂಕಿರಣದ ಸಮಸ್ಯೆಯ ಬಗ್ಗೆ ನಡೆದಿರುವ ವಿಚಾರ ಒಂದು ತಾತ್ವಿಕ ಹಿನ್ನೆಲೆಯಂತೆ ಬಳಸಲ್ಪಡಬೇಕೆಂದು ನನ್ನ ಕೋರಿಕೆ. ಇದಲ್ಲದೆ ಇಂಗ್ಲಿಷ್ ಸಾಹಿತ್ಯ ವಿಮರ್ಶಕರು ಹೀಗೆಲ್ಲ ಅಂದಿದ್ದಾರೆ, ಆದ್ದರಿಂದ ಅವರು ಅಂದದ್ದೆಲ್ಲವೂ ಕನ್ನಡ ಸಾಹಿತ್ಯಕೃತಿಗಳಿಗೂ ಅನ್ವಯವಾಗತಕ್ಕವು ಎಂಬ ಭ್ರಮೆಯನ್ನು ಹುಟ್ಟಿಸುವ ಅಳತೆಗೋಲನ್ನಾಗಿ ಈ ಲೇಖನವನ್ನು ನಾವು ಬಳಸುವುದಿಲ್ಲವೆಂದು ನಂಬಿದ್ದೇನೆ.)

ಸಾಹಿತ್ಯಕ್ಕೂ ಶಾಸ್ತ್ರಬದ್ಧ ತತ್ವಕ್ಕೂ ಇರುವ ಸಂಬಂಧ ಮುಖ್ಯವಾಗಿ ಎರಡು ದೃಷ್ಟಿಗಳಿಂದ ಪ್ರಶ್ನಿಸಲ್ಪಟ್ಟಿದೆ. ಮೊದಲನೆಯದಾಗಿ ತತ್ವದ ನಿಲುವಿನಿಂದ; ಎರಡನೆಯದಾಗಿ ಸಾಹಿತ್ಯದ ನಿಲುವಿನಿಂದ. ತತ್ವಶಾಸ್ತ್ರಜ್ಞರೇ ಆಗಲಿ, ಸಾಹಿತ್ಯ ವಿದ್ಯಾರ್ಥಿಗಳೇ ಆಗಲಿ ಈ ಸಂಬಂಧವನ್ನು ಪ್ರಶ್ನಿಸುವಾಗ ದೃಷ್ಟಿ ಬೇರೆ ಇದ್ದರೂ ಇಬ್ಬರಲ್ಲೂ ಒಂದು ಸಾಮಾನ್ಯ ಅಭಿಪ್ರಾಯವಿದ್ದಂತೆ ಕಾಣುತ್ತದೆ. ಸಾಹಿತ್ಯವೆಂದರೆ ಇಬ್ಬರ ದೃಷ್ಟಿಯಲ್ಲೂ ರಸಯೋಗ; ಈ ರಸಸೃಷ್ಟಿಗೆ ಯಾವುದು ಪೂರಕ ಮತ್ತು ಯಾವುದು ಬಾಧಕ ಎಂಬುದೇ ಈ ಇಬ್ಬರೂ ಯೋಚಿಸುವ ವಿಷಯ. ರಸನಿರ್ಮಾಣವೇ ಕಾವ್ಯದ ಗುರಿ ಎಂದು ಒಪ್ಪುವ ಈ ಎರಡು ನಿಲುವುಗಳಲ್ಲೂ ಏನೇನನ್ನು ಬಿಡುವುದರ ಮುಖಾಂತರ ಸಾಹಿತ್ಯ ಪರಿಶುದ್ಧವಾಗುತ್ತದೆ ಎಂಬುದು ಮುಖ್ಯ ಪ್ರಶ್ನೆಯಾಗುತ್ತದೆ. ದರ್ಶನ ಶಾಸ್ತ್ರ, ಸಮಾಜ ಶಾಸ್ತ್ರ, ರಾಜಕೀಯ ಶಾಸ್ತ್ರ ಇತ್ಯಾದಿ ವಿಷಯಗಳನ್ನು ಅಭ್ಯಾಸ ಮಾಡಿದವರು ತಮ್ಮ ಶಾಸ್ತ್ರಗಳಿಂದ ಪಡೆಯಲಾರದೆ ಇರುವ ಒಂದು ಅನುಭವವನ್ನು ಸಾಹಿತ್ಯದಿಂದ ಅಪೇಕ್ಷಿಸುತ್ತಾರಾದ್ದರಿಂದ ಸಾಹಿತ್ಯದಲ್ಲಿ ವೈಚಾರಿಕತೆ ಇರಕೂಡದೆಂದು ಇವರು ವಾದಿಸುತ್ತಾರೆ.

ಆದರೆ ಇದರ ಧೋರಣೆಗಳಿಗಿಂತ ಲಯನರ್ ಟ್ರಿಲ್ಲಿಂಗ್‌ನ ಅಭಿಪ್ರಾಯವೇ ನನಗೆ ಹೆಚ್ಚು ಸೂಕ್ತವೆನ್ನಿಸುತ್ತದೆ. ಟ್ರಿಲ್ಲಿಂಗ್‌ನ ಪ್ರಕಾರ ಸಾಹಿತ್ಯದಿಂದ ದೊರೆಯುವ ಅನುಭವಕ್ಕೂ ಶಾಸ್ತ್ರಬದ್ಧವಾದ ತತ್ವಗಳಿಂದ ದೊರೆಯುವ ಅನುಭವಕ್ಕೂ ಮೂಲಭೂತವಾದ ಭೇದವಿದೆ ಎಂದು ಹೇಳುವುದು ಕಷ್ಟ. ಇದನ್ನು ವಾದಿಸುತ್ತ ಟ್ರಿಲ್ಲಿಂಗ್‌ನು ಯೇಟ್ಸ್‌ನ ಎರಡು ಸಾಲುಗಳಿಂದ ತನಗೆ ದೊರಕಿದ ಅನುಭವ ಯಾವ ರೀತಿಯಲ್ಲಿ ಫ್ರಾಯ್ಡ್‌ನ “An Outline of Psychoanalysis” ದಿಂದ ಪಡೆದ ಅನುಭವಕ್ಕಿಂತ ಪ್ರತ್ಯೇಕವೆಂಬುದನ್ನು ವಿಂಗಡಿಸಲಾರೆ ಎನ್ನುತ್ತಾನೆ.

ಟ್ರಿಲ್ಲಿಂಗ್‌ನ ವಾದದಿಂದ ನಾವು ಕಾಣಬುದಾದದ್ದು ಇದು : ಸಾಹಿತ್ಯದಲ್ಲಿ ಏನೇನನ್ನು ಬಿಡುವುದರ ಮುಖಾಂತರ ನಮ್ಮ ರಸಪ್ರಶ್ನೆ ಪರಿಶುದ್ಧವಾಗುತ್ತದೆ ಎನ್ನುವ ಆಧಾರದ ಮೇಲೆ ನಿರ್ಧರಿತವಾಗುವ ಸೌಂದರ್ಯೋಪಾಸಕನ ಸಾಹಿತ್ಯ – ಸಿದ್ಧಾಂತ ನಮ್ಮ ನಿಜವಾದ ಅನುಭವಕ್ಕೆ ನಿಲ್ಲಲಾರದ ರಸತತ್ವ ಎಂಬುದು. ಇದೇ ಪ್ರಬಂಧದಲ್ಲಿ ಟ್ರಿಲ್ಲಿಂಗ್‌ನು ಯೇಟ್ಸ್ ಮತ್ತು ಎಲಿಯಟ್‌ರು ಹೇಗೆ ತಮ್ಮ ಸಾಹಿತ್ಯ ಕೃತಿಗಳಿಗೆ ಅನುಗುಣವಾದ ಶಾಸ್ತ್ರಬದ್ಧ ತಾತ್ವಿಕ ನಿಲುವನ್ನು ಕಟ್ಟಿಕೊಂಡಿದ್ದಾರೆ ಎಂಬುದನ್ನು ತೋರಿಸುತ್ತಾನೆ. ಹಾರ್ಡಿಂಗ್ ಎಂಬ ವಿಮರ್ಶಕನು ಎಲಿಯಟ್‌ನ ‘ಫೋರ್ ಕ್ವಾರ‍್ಟರ್’ ಪದ್ಯ ತತ್ವಗಳ ಸೃಷ್ಟಿಯಲ್ಲಿ ತೊಡಗಿದೆ ಎನ್ನುತ್ತಾನೆ. ಬರ್ಟ್ರಂಡ್ ರಸೆಲ್ಲನು ತನ್ನ ‘ಹಿಸ್ಟಿರಿ ಆಫ್ ವೆಸ್ಟರ‍್ನ್ ಫಿಲಾಸಫಿ’ ಎಂಬ ಗ್ರಂಥದಲ್ಲಿ ಲಾರೆನ್ಸನನ್ನು ಕೂಡ ತಾತ್ವಿಕರ ಗುಂಪಿನಲ್ಲಿ ಚರ್ಚಿಸುವ ಅವಶ್ಯಕತೆಯನ್ನು ಮನಗಂಡಿದ್ದಾನೆ. ಆದರೆ ಇದರ ಜೊತೆಯಲ್ಲೇ ಎಲಿಯಟ್‌ನ “ಫೋರ್ ಕ್ವಾರ‍್ಟರ್ಸ್‌’ನಲ್ಲಿ ಕಾವ್ಯಶಕ್ತಿ ಕುಂದಿದೆಯೆಂದೂ ಲಾರೆನ್ಸ್ ಒಬ್ಬ ಮಹಾ ನೈತಿಕಾ ಪ್ರವಾದಿ, ಉತ್ತಮ ಕಾದಂಬರಿಕಾರನಲ್ಲವೆಂದೂ ವಾದಿಸುವ ಅಭಿಪ್ರಾಯಗಳಿವೆ.

ಶಾಸ್ತ್ರಬದ್ಧ ತತ್ವದ ನಿಲುವಿನಿಂದ ಸಾಹಿತಿಗಳನ್ನು ಚಿಂತಕರು ಎಂದು ಪರಿಗಣಿಸುವುದರ ವಿರುದ್ಧ ಇರುವ ಆರೋಪಗಳನ್ನು ಮೊದಲು ನೋಡೋಣ. ತತ್ವಶಾಸತ್ರದ ದೃಷ್ಟಿಯಿಂದ ವಾದಿಸುವ ಜಾರ್ಜ್ ಬೊವಾಸ್ ಎಂಬವನು ಟ್ರಿಲ್ಲಿಂಗ್‌ನಿಗಿಂತ ಪ್ರತ್ಯೇಕವಾದ ಅಭಿಪ್ರಾಯವನ್ನು ಮಂಡಿಸಿದ್ದಾನೆ. ಇವನ ಪ್ರಕಾರ ಕಾವ್ಯದಲ್ಲಿ ಬರುವ ತತ್ವಗಳು ಅನೇಕ ವೇಳೆ ಹಳಸಿದವು ಮತ್ತು ಸುಳ್ಳಿನ ಕಂತೆಗಳು. ಆದರೆ ಲವ್‌ಜಾಯ್ ಎಂಬವನ ಪ್ರಕಾರ ಇವು ಸುಳ್ಳಲ್ಲವಾದರೂ ಎರವಲು ಪಡೆದವು; ಮತ್ತು ತತ್ವಗಳ ಬೆಳವಣಿಗೆಯ ಇತಿಹಾಸದಲ್ಲಿ ಸಾಹಿತ್ಯವನ್ನೂ ಪರೀಕ್ಷಿಸಲು ಬಯಸುವವರಿಗೆ ಕಾವ್ಯದಲ್ಲಿ ಸಿಕ್ಕುವ ವಿಚಾರಗಳೆಲ್ಲ ನೀರುನೀರಾದ ತತ್ವಶಾಸ್ತ್ರದ ಅಭಿಪ್ರಾಯಗಳೇ ಹೊರತು ಸ್ವತಂತ್ರ ಚಿಂತನೆಗಳಲ್ಲ. ವೆಲಕ್ ಮತ್ತು ವಾರನ್ ಎನ್ನುವ ವಿಮರ್ಶಕರಂತೂ ಮಹಾಕವಿಗಳ ಪ್ರಸಿದ್ಧ ವಾಕ್ಯಗಳೆಲ್ಲವೂ ಎಲ್ಲರಿಗೂ ಗೊತ್ತಿರುವ ಸನಾತನ ತತ್ವಗಳ ಸ್ಮರಣೀಯ ಪುನರುಕ್ತಿಗಳೆಂದು ಭಾವಿಸುತ್ತಾರೆ. ವಿಚಾರದ ಇತಿಹಾಸದಲ್ಲಿ ಸಾಹಿತಿಗಳು ಗಣನೀಯವಾಗಿ ಕಂಡರೂ ಇದಕ್ಕೆ ಕಾರಣ – ಈ ವಿಮರ್ಶಕರ ಪ್ರಕಾರ – ಸಾಹಿತ್ಯ ತತ್ವಶಾಸ್ತ್ರದ ಇತಿಹಾಸವನ್ನು ಪ್ರತಿಬಿಂಬಿಸುವುದೇ. ಶೇಕ್ಸ್‌ಪಿಯರ್‌ನ ‘ಟ್ರಾಯಿಲಸ್’ನಲ್ಲಿ ಬರುವ ಯೂಲಿಸಿಸ್‌ನ ಪ್ರಸಿದ್ಧ ಭಾಷಣದಲ್ಲಿ ಮೊಂಟೇನ್‌ನ ಕೆಲವು ಅಭಿಪ್ರಾಯಗಳು, ಸ್ಟಾಯಿಸಿಸಂನ ಕೆಲವು ವಿಚಾರಗಳು ಕಂಡು ಬರುತ್ತವೆ ಎಂದು ಗುರುತಿಸುವುದರಲ್ಲಷ್ಟೇ ಇವರ ಕೆಲಸ ಮುಗಿಯುತ್ತದೆ. ಈ ದೃಷ್ಟಿಯಿಂದ ನೋಡುವಾಗಲೆಲ್ಲ ಸಾಹಿತ್ಯ ಮತ್ತು ತತ್ವದ ದಾಂಪತ್ಯದಲ್ಲಿ ತತ್ವ ಗಂಡಾಗಿಯೂ ಸಾಹಿತ್ಯ ಮೃದುವಾಗಿ ಕಾಣಬೇಕಾದ ಹೆಣ್ಣಾಗಿಯೂ ಪರಿಗಣಿಸಲ್ಪಡುತ್ತದೆ.

ತತ್ವಶಾಸ್ತ್ರಜ್ಞರ ಈ ವಿಚಾರವನ್ನು ಸಾಹಿತ್ಯ ವಿಮರ್ಶಕರೂ ಕೂಡ ಬಹಳ ಮಟ್ಟಿಗೆ ಒಪ್ಪಿಕೊಂಡಂತೆ ನಮಗೆ ಕಾಣುತ್ತದೆ. ಎರಡು ನಿಲುವುಗಳಿಗೂ ಮೂಲಭೂತವಾದ ಧೋರಣೆ : ರಸಾನುಭವದ ಪರಿಶುದ್ಧತೆ. ಯಾವ ಸಂಗತಿಗಳನ್ನು ಬಿಡುವುದರ ಮುಖಾಂತರ ಸಾಹಿತ್ಯ ಶುದ್ಧವಾಗುತ್ತದೆ ಎಂಬ ಬಗ್ಗೆ ರಾಬರ್ಟ್ ಪೆನ್ ವಾರೆನ್‌ನು ಬೇರೆ ಬೇರೆ ವಿಮರ್ಶಕರನ್ನು ಓದಿ ಒಂದು ಪಟ್ಟಿಯನ್ನು ಸಿದ್ಧಪಡಿಸಿದ್ದಾನೆ. ಈ ಪಟ್ಟಿ ಅರ್ಥಪೂರ್ಣವಾಗಿದೆ :

೧. ಸಾಮಾನ್ಯ ಹೇಳಿಕೆಗಳು, ಸತ್ಯಗಳು, ವಿಚಾರಗಳು ಮತ್ತು ‘ಅರ್ಥ’.

೨. ವಿಶಿಷ್ಟವಾದ ಅಥವಾ ತೊಡಕಾದ ಬೌದ್ಧಿಕ ಪ್ರತೀಕಗಳು.

೩. ಅಸುಂದರವಾದ, ಅಸಹ್ಯವಾದ ಸಂಗತಿಗಳು.

೪. ಸನ್ನಿವೇಶ, ಕಥನ ಮತ್ತು ತಾರ್ಕಿಕ ಬೆಳವಣಿಗೆ.

೫. ವಾಸ್ತವಿಕ ವಿವರಣೆಗಳು.

೬. ಧಾಟಿಯಲ್ಲಿ ಮತ್ತು ‘ಮೂಡ್’ನಲ್ಲಿ ಮಾಡುವ ಬದಲಾವಣೆಗಳು.

೭. ವ್ಯಂಗ್ಯ.

೮. ಛಂದಸ್ – ಶರೀರದಲ್ಲಿ ಮಾಡುವ ಬದಲಾವಣೆಗಳು, ನಾಟಕೀಯವಾದ ಲಯದ ಹೊಂದಿಕೆಗಳು ಮತ್ತು ಕರ್ಕಶ ಶಬ್ಧಗಳು.

೯. ಛಂದಸ್ಸು.

೧೦. ಕವಿಯ ಸ್ವಂತಕ್ಕೆ ಸಂಬಂಧಪಟ್ಟ ಭಾವನೆಗಳು.

ಸಾಹಿತ್ಯ ಸಂಗೀತದಂತಹ ಪರಿಶುದ್ಧ ರಸಪ್ರಜ್ಞೆಯಾಗಬೇಕೆಂದು ಬಯಸುವ ಯಾವ ವಿಮರ್ಶಕನೂ ಕೂಡ ಈ ಹತ್ತು ಅಂಶಗಳೂ ಒಟ್ಟಾಗಿ ಸಾಹಿತ್ಯದಲ್ಲಿರಕೂಡದೆಂದು ಹೇಳಿದ್ದಿಲ್ಲ. ಮುಖ್ಯವಾಗಿ ಕಾವ್ಯವನ್ನು ಪರಿಶೀಲಿಸುವುದಾದರೆ ಇದರ ಜೀವಾಳವಿರುವುದು ಪ್ರತಿಮಾಕಲ್ಪನೆಯಲ್ಲಿ ಮತ್ತು ಉಕ್ತಿಯ ವಕ್ರತೆಯಲ್ಲಿ ಎಂಬುದನ್ನು ನಾವು ಒಪ್ಪಿದರೂ ಕೂಡ ಪದಸಂಯೋಜನೆಯಿಂದ (ಅದು ಎಷ್ಟೇ ವಿಶಿಷ್ಟ ರೀತಿಯದಿರಲಿ) ಕಾವ್ಯ ಹೊರತಾಗಲಾರದು; ಮತ್ತು ಈ ಪದಸಂಯೋಜನೆ ಕವಿತೆಯನ್ನು ಕೂಡ ವಿಚಾರದ ಜೊತೆಗೆ ಕೂಡಿಸುತ್ತದೆ ಎಂಬುದನ್ನು ಮರೆಯಲು ಸಾಧ್ಯವಿಲ್ಲ. ಯಾಕೆಂದರೆ, ಹೆಗೆಲ್ ವಾದಿಸುವಂತೆ ಪದಸಂಯೋಜನಕ್ರಿಯೆಯಲ್ಲಿಯೇ ವೈಚಾರಿಕತೆ ಅಡಿಗಿದೆ. ಏನೇ ಆಗಲಿ ಕಾವ್ಯಕ್ಕೂ ಕಾವ್ಯದಿಂದೊದಗುವ ತತ್ವಾರ್ಥಕ್ಕೂ ಇರುವ ಸಂಬಂಧವನ್ನೂ ಅತ್ಯಂತ ಸರಳವೂ ಸ್ಪಷ್ಟವೂ ಎಂದು ಭಾವಿಸುವುದು ಹೇಗೆ ತಪ್ಪಾಗುತ್ತದೋ ಹಾಗೆಯೇ ಕಾವ್ಯ ಯಾವ ವಿಚಾರದ ನೆಲೆಗೂ ಸಿಲುಕದ ಪರಿಶುದ್ಧ ಕ್ರಿಯೆ ಎಂದು ಭಾವಿಸುವುದೂ ತಪ್ಪಾಗುತ್ತದೆ.

ಸಾಹಿತ್ಯ ಪ್ರಕಾರಗಳಲ್ಲೇ ಭೇದಗಳನ್ನು ಕಲ್ಪಿಸಿಕೊಳ್ಳುವುದರ ಮುಖಾಂತರ ವಿಚಾರಕ್ಕೂ ಸಾಹಿತ್ಯಕ್ಕೂ ಇರುವ ಸಂಬಂಧದಲ್ಲೂ ಸೂಕ್ಷ್ಮ ವ್ಯತ್ಯಾಸಗಳನ್ನು ಮಾಡಿದವರಿದ್ದಾರೆ. ಸಾರ್ತ್ರ್ ಮುಖ್ಯವಾಗಿ ಪದ್ಯ ಗದ್ಯದ ನಡುವೆ ಒಂದು ಸೂಕ್ಷ್ಮ ಭೇದವನ್ನು ಕಲ್ಪಿಸುತ್ತಾನೆ. ಇಲ್ಲಿ ಸಾರ್ತ್ರ್‌ನ ಅಭಿಪ್ರಾಯವನ್ನು ಚರ್ಚಿಸಲು ಕಾರಣ, ಇವನು ಗದ್ಯಸಾಹಿತ್ಯವೆಲ್ಲವೂ ಉದ್ದೇಶಬದ್ಧವಾಗಿರಬೇಕೆಂದು ವಾದಿಸುವವರಲ್ಲಿ ಪ್ರಮುಖನಾದ್ದರಿಂದ. ಒಂದು ತತ್ವಕ್ಕಾಗಲಿ, ಜೀವನದೃಷ್ಟಿಗಾಗಲಿ, ರಾಜಕೀಯ ನಿಲುವಿಗಾಗಲಿ ಗಂಟುಬಿದ್ದಲ್ಲದೆ ಸಾಹಿತಿ ಗದ್ಯದಲ್ಲಿ ಬರೆಯಲಾರ ಎಂದು ಇವನ ಮತ. ಆದರೆ ಇವನ ಪ್ರಕಾರ ಕವಿಗೆ ಮಾತ್ರ ಶಬ್ದಗಳು ಸಜೀವ ವಸ್ತುಗಳೇ ವಿನಾ ಚಿನ್ಹೆಗಳಲ್ಲ; ಶಬ್ದಗಳೆಲ್ಲ ಬರಿಯ ಚಿನ್ಹೆಗಳೆಂದು ಭಾವಿಸುವ ಪ್ರಪಂಚ ಗದ್ಯಕ್ಕೆ ಸೇರಿದ್ದು. ಕಾವ್ಯವು ಚಿತ್ರಕಲೆ, ಶಿಲ್ಪಕಲೆ ಮತ್ತು ಸಂಗೀತದಂತಹ ಕಲೆ, ಕವಿಗಳು ಭಾಷೆಯನ್ನು ಬರಿ ಉಪಯೋಗಿಸಿಕೊಳ್ಳಲು ಒಪ್ಪುವವರಲ್ಲ. ಶಬ್ದಗಳು ಕವಿಗೆ ಚಾಚಿಕೊಂಡಿರುವ ಸೂಕ್ಷ್ಮಾಂಗಗಳು ಇದ್ದ ಹಾಗೆ. ಶಬ್ದಗಳು ಅರ್ಥಸೂಚಕಗಳಲ್ಲ, ಅರ್ಥಗಳನ್ನು ಬೆಳೆಸುವಂಥವು. ವಿಷಯಗಳನ್ನು ಕವಿ ಗುರುತಿಸುವ ಕ್ರಮ ಬರೀ ಅವುಗಳ ಶಾಬ್ದಿಕ ಹೆಸರುಗಳ ಮೂಲಕವಲ್ಲ : ಒಂದು ಮೌನವಾದ ಸಂಬಂಧವನ್ನು ನೇರವಾಗಿ ಅವುಗಳ ಜೊತೆ ಬೆಳೆಸಿಕೊಳ್ಳುವುದರ ಮುಖಾಂತರ. ಹೀಗೆ ಒಂದು ಬಗೆಯ ಪ್ರಭೆಯಲ್ಲಿ ಭೂಮಿ, ನೀರು ಇತ್ಯಾದಿ ಪಂಚಭೂತಗಳು ಮತ್ತು ಇತರ ಜೀವಿಗಳು ಪರಸ್ಪರ ಸಂಬಂಧಿಗಳಂತೆ ಅವನ ಅನುಭವಕ್ಕೆ ಗೋಚರಿಸುತ್ತವೆ. ಹೀಗೆ ಕಂಡದ್ದರ ಜೀವಂತ ಪ್ರತಿಚಿತ್ರವನ್ನು ಪುನಃ ಕವಿ ಶಬ್ದಪ್ರಪಂಚದಲ್ಲಿ ಪಡೆಯಲು ಹುಡುಕಾಡುತ್ತಾನೆ. ಇವನು ಮೊದಲೇ ಹೊರಗೆ ನಿಂತವನಾದ್ದರಿಂದ ಚಂಚಲವಾದ ಸತ್ಯವನ್ನು ಹಿಡಿಯಲು ಬಲೆಯ ಹಾಗೆ ಶಬ್ದಗಳನ್ನು ಉಪಯೋಗಿಸಿಕೊಳ್ಳುತ್ತಾನೆಯೇ ವಿನಾ ಅರ್ಥಸೂಚಕಗಳಂತೆ ಮಾತುಗಳನ್ನು ವಿವರಿಸಲು ಬಳಸಿ ವಿಷಯಗಳ ನಡುವೆ ತಾನೂ ಬಂದು ಬೀಳಲು ಇಚ್ಛಿಸುವುದಿಲ್ಲ. ಒಟ್ಟಿನಲ್ಲಿ ಕವಿಗೆ ಭಾಷೆ ಎಂದರೆ ಪ್ರಪಂಚಕ್ಕೆ ಹಿಡಿದ ಕನ್ನಡಿಯಾಗಿದೆ. ಮಾತಿನ ನಾದಮಯತೆ, ಉದ್ದಗಲ, ಗಂಡು – ಹೆಣ್ಣುತನ, ದೃಷ್ಟಿಗೋಚರ ಸ್ವರೂಪ ಎಲ್ಲವೂ ಕೂಡಿಕೊಂಡು, ಭಾಷೆಯೆಂದರೆ ಅರ್ಥವನ್ನು ಸೂಚಿಸುವ, ವಿವರಿಸುವ ಸಾಧನದಂತಲ್ಲದೆ ಅರ್ಥಕ್ಕೆ ಬದಲಾಗಿ ನಿಲ್ಲುವ ಒಂದು ರಕ್ತ ಮಾಂಸದಿಂದ ಕೂಡಿದ ಮುಖದಂತೆ ಕವಿಗೆ ಕಾಣುತ್ತದೆ. ಇದು ಸ್ಥೂಲವಾಗಿ ಸಾರ್ತ್ರ್ ಕಾವ್ಯದ ವೈಶಿಷ್ಟ್ಯದ ಬಗ್ಗೆ ಕೊಡುವ ವಿವರಣೆ.

ಹೀಗೆ ಸಾರ್ತ್ರ್‌ನ ಪ್ರಕಾರ ಕಾವ್ಯದಲ್ಲಿ ಶಬ್ದಕ್ಕೂ ವಸ್ತುವಿಗೂ ನಡುವೆ ಒಂದು ಅನ್ಯೋನ್ಯವಾದ ಸಂಬಂಧ ಏರ್ಪಡುತ್ತದೆ. ಸಾರ್ತ್ರ್‌ನ ಪ್ರಕಾರ ಇದು ಒಂದು ಪದ – ವಸ್ತುಗಳ ಮಾಂತ್ರಿಕ ಸಂಬಂಧ. ಹೀಗೆ ಕಾವ್ಯ ಯಾವುದಾದರೂ ಒಂದು ವಸ್ತುವಿನ ವರ್ಣನೆ ಮಾತ್ರವಾಗದೆ ಪ್ರತಿ ವಸ್ತುವೇ ಆಗಿಬಿಡುವುದರಿಂದ ಕಾವ್ಯವನ್ನು ಭಾಷಾಂತರಿಸುವುದು ಅಸಾಧ್ಯ. ಕಾವ್ಯದ ಅರ್ಥ ನಮಗೆ ಸ್ಫುರಿಸುತ್ತಿದ್ದಂತೆಯೇ ಅದರ ಶಬ್ದದೇಹವೂ ನಮಗೆ ಕಾಣುತ್ತಲೇ ಇರುತ್ತದೆ; ಅಂದರೆ ಹೀಗೆ ಸ್ಫುರಿಸುತ್ತಿರುವ ಅರ್ಥಕ್ಕೆ ಕಾವ್ಯದ ಶಬ್ದ ದೇಹ ಒಂದು ಪ್ರತಿಮೆಯಾಗಿ ನಿಲ್ಲುತ್ತದೆ. ಕಾವ್ಯವೆಂದರೆ ಸ್ಮರಣೀಯ ಮಾತೆಂದು ನಾವು ಪರಿಗಣಿಸಲು ಇದೇ ಕಾರಣ. ಆದ್ದರಿಂದ ಸಾರ್ತ್ರ್ ಕಾವ್ಯದ ಶಬ್ದದೇಹವನ್ನು ‘ಪದ – ವಸ್ತು’ ಎಂದು ಪರಿಗಣಿಸುತ್ತಾನೆ, ಪಿಕಾಸೋಗೆ ಕನಸಿನಲ್ಲಿ ಒಮ್ಮೆ ಬೆಂಕಿಪೊಟ್ಟಣ ತನ್ನ ಬೆಂಕಿಪೊಟ್ಟಣದ ಸ್ವರೂಪವನ್ನು ಕಳೆದುಕೊಳ್ಳದೆಯೇ ಬಾವಲಿಯ ಹಾಗೆಯೂ ಕಾಣಿಸಿತಂತೆ. ಪಿಕಾಸೋನನ ಈ ಬೆಂಕಿಪೊಟ್ಟಣತ್ವ ಕಳೆದುಕೊಳ್ಳದ ಬಾವಲಿತ್ವದ ಪ್ರತಿಮೆಯಂತೆಯೇ ಕಾವ್ಯದಲ್ಲಿಯೂ ಸಹ ಶಬ್ದ ಮತ್ತು ಅರ್ಥಗಳ ನಡುವೆ ಒಂದನ್ನಿನ್ನೊಂದು ಕಳೆಯದಂತಹ ಸಂಬಂಧವೇರ್ಪಡುತ್ತದೆ. ಚಿತ್ರಕಲೆ ಮತ್ತು ಸಂಗೀತದಲ್ಲಿ ಬಣ್ಣ ಮತ್ತು ನಾದಗಳು ಕೆಲಸ ಮಾಡುವಂತೆ ಈ ಪದ – ವಸ್ತುಗಳೂ ಕೂಡ ಮಾಂತ್ರಿಕವಾಗಿ ಪರಸ್ಪರಹೊಂದಿ, ಆಕರ್ಷಿಸಿ, ವಿರೋಧಿಸಿ, ಒಂದನ್ನಿನ್ನೊಂದು ಹೊತ್ತಿಸಿ, ಮಥಿಸಿ, ‘ಪದಗುಚ್ಛ – ವಸ್ತು’ಗಳಾಗುತ್ತವೆ, ಎನ್ನುತ್ತಾನೆ ಸಾರ್ತ್ರ್.

ಸಾರ್ತ್ರ್‌ನ ಈ ವಿವರಣೆಯಲ್ಲಿ ಕವಿ ಕಾಣೆಯಾಗುತ್ತಾನೆ ಎಂಬುದು ಗಮನಿಸಬೇಕಾದ ಸಂಗತಿ. ಕವಿ ಭಾಷೆಯನ್ನು ವಾಹಕವಾಗಿ ಉಪಯೋಗಿಸುವುದಿಲ್ಲ ಎಂಬುದನ್ನು ಒಪ್ಪಬಹುದಾದ ಸಂಗತಿಯಾದರೂ, ಭಾಷೆಯೇ ತನ್ನ ಬರಿಯ ಸಾಧನತ್ವವನ್ನು ಕಳೆದುಕೊಳ್ಳಲೋಸ್ಕರ ಕವಿಯನ್ನು ತನ್ನ ಮಾಧ್ಯಮವಾಗಿ ಉಪಯೋಗಿಸಿಕೊಳ್ಳುತ್ತದೇನೋ ಎನ್ನುವ ಭ್ರಮೆಯನ್ನು ಹುಟ್ಟಿಸುವ ಹಾಗೆದೆ ಸಾರ್ತ್ರ್‌ನ ಒಟ್ಟಿನ ನಿಲುವು. ಕವಿ ತನ್ನ ವ್ಯಕ್ತಿತ್ವದಿಂದ ಪಾರಾಗಿ ಮೂಸೆಯಲ್ಲಿರುವ ವೇಗವರ್ಧಕದಂತೆ ಕೆಲಸ ಮಾಡುತ್ತಾನೆ ಎಂಬ ಎಲಿಯಟ್‌ನ ವಿಚಾರದ ಜೊತೆಗೆ ಸಾರ್ತ್ರ್‌ನ ಈ ತತ್ವವನ್ನು ಹೋಲಿಸಿ ನೋಡಬಹುದು. ಗದ್ಯಲೇಖಕನಿಗಿಂತ ಕವಿ ಎಲ್ಲಿ ಭಿನ್ನ ಎನ್ನುವುದನ್ನು ನಿರ್ಧರಿಸಲು ಈ ವಿವರಣೆಗಳು ಉಪಯುಕ್ತವಾಗುತ್ತವೆ ಎಂಬುದು ನಿಜ. ಆದರೆ ನಮ್ಮ ಅನುಭವ ಹೇಳುವಂತೆ ಎಲ್ಲ ಕಾವ್ಯವೂ ಸಾರ್ತ್ರ್‌ನ ಆದರ್ಶದ ‘ಪದಗುಚ್ಛವಸ್ತು’ಗಳಲ್ಲ. ಎಲಿಯಟ್‌ನ “Waste Land” ಅನೇಕ ಭಾಗಗಳು ಕಾದಂಬರಿಯೊಂದರ ನಾಟಕೀಯ ಸನ್ನಿವೇಶಗಳನ್ನು ‘ಮಾಂಟಾಜ್’ನಲ್ಲಿ ಕೂಡಿಸಿಟ್ಟಂತೆ ಕಾಣುತ್ತದೆ. ಆದರೆ ಇವನ “Marina” ಕವನ ಗದ್ಯಕ್ರಿಯೆಗಿಂತ ಎಷ್ಟು ದೂರದಲ್ಲಿ ಕಾವ್ಯ ಇರುವುದು ಸಾಧ್ಯವೋ ಅಷ್ಟು ದೂರದಲ್ಲಿದೆ ಅನ್ನಿಸುತ್ತದೆ. ಹಾಗೆಯೇ ಲಾರೆನ್ಸ್‌ನ “Women in Love”ನಲ್ಲಿ ಬರುವ ಕೆಲವು ದೃಶ್ಯಗಳನ್ನು ಪಿಕಾಸೋನ ಬೆಂಕಿಪೊಟ್ಟಣ – ಬಾವಲಿ ಪ್ರತಿಮೆಯಂತೆ ಇಬ್ಬಗೆಯ ಅರ್ಥಗಳನ್ನೂ ಮಾಂತ್ರಿಕ ಸೂಚನೆಗಳನ್ನೂ ಪಡೆದ ಕಾವ್ಯಭಾಗಗಳನ್ನಾಗಿಯೂ ಕಾಣಬಹುದು. ಅಲ್ಲದೆ ಕೋಲರಿಜ್ ಭಾವಿಸುವಂತೆ ಒಂದು ದೀರ್ಘ ಕವನದಲ್ಲಿ ಕಾವ್ಯ ಅತಿಯಾಗುವುದೂ ಸಾಧ್ಯ. ಒಟ್ಟಿನಲ್ಲಿ ಸಾರ್ತ್ರ್ ಕವಿಯನ್ನು ಭಾವಿಸುವ ರೀತಿ ರಮ್ಯ ಸಂಪ್ರದಾಯದ ಕನಸುಗಾರರನ್ನು ನೆನಪು ಮಾಡಿಕೊಡುತ್ತದೆಂಬುದು ಗಮನಿಸಬೇಕಾದ ಸಂಗತಿ.

ಕವಿಯ ಬಗ್ಗೆ ಈ ಧೋರಣೆಯನ್ನು ನಾವು ಒಪ್ಪುವುದು ಕಷ್ಟವಾಗಲು ಕಾರಣ : ಕವನ ತನ್ನನ್ನು ನೋಡೆಂದು ಮಾತ್ರ ಓದುಗನನ್ನು ಕರೆಯುತ್ತದೆ, ಆದರೆ ಇದಕ್ಕಿಂತ ಹೆಚ್ಚಿನ ಯಾವ ಗಂಭೀರ ಚಿಂತನೆಯನ್ನೂ ಮಾಡುವುದಿಲ್ಲವೆಂಬ ಧೋರಣೆಗೆ ಸಾರ್ತ್ರ್ ಎಡೆಗೊಡಬಹುದು ಎಂದು ನಮಗೆ ಅನ್ನಿಸುವುದರಿಂದ. ವಿಮರ್ಶಕನಿಗೆ ಇಷ್ಟು ಮುಖ್ಯವೆಂದು ಕಾಣುವ ರಸಪ್ರಜ್ಞೆ ಸ್ವತಃ ಕವಿಗೇ ಕಾವ್ಯ ರಚಿಸುವ ಹೊತ್ತಿನಲ್ಲಿ ಮತ್ತು ಆಮೇಲೆ ದ್ವಿತೀಯ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದಿರಬಹುದು ಎಂದು ಟ್ರಿಲ್ಲಿಂಗ್ ಹೇಳುವುದು ಹೆಚ್ಚು ಸರಿ ಎನಿಸುತ್ತದೆ. (ಉದಾಹರಣೆಗೆ ವಚನಕಾರರು.) ಕಾವ್ಯವೂ ಕೂಡ ಓದುಗರ ಮೇಲೆ ನೈತಿಕವಾಗಿ ಕೆಲಸ ಮಾಡಿದ್ದು ಉಂಟು ಎಂಬುದನ್ನು ನಾವು ಮರೆಯಕೂಡದು. ಜಾನ್ ಸ್ಟುವರ್ಟ್ ಮಿಲ್ ವರ್ಡ್ಸ್‌ವರ್ತ್‌ನ ಕಾವ್ಯದಿಂದ ಹೇಗೆ ಪ್ರಭಾವಿತನಾದ ಎಂಬುದನ್ನು ನಾವು ಇಲ್ಲಿ ನೆನೆಯಬಹುದು. ಒಬ್ಬ ವಿಮರ್ಶಕ ಕವನದ ಪದಪ್ರಯೋಗದ ಕಡೆ ಬೆರಳುಮಾಡಿ ಅದರ ಸೌಂದರ್ಯವನ್ನು ಎತ್ತಿ ತೋರಿಸಬಹುದು: ಇನ್ನೊಬ್ಬ ಕವನದ ಸಂಕೀರ್ಣವಾದ ತಾತ್ವಿಕ ದೇಹವನ್ನು ವಿಶ್ಲೇಷಿಸಿ ತನ್ನ ಮೆಚ್ಚುಗೆಯನ್ನು ವ್ಯಕ್ತ ಪಡಿಸಬಹುದು. ಆದರೆ ಈ ಎರಡು ವಿಧಾನಗಳಲ್ಲಿ ಯಾವುದಾದರೂ ಒಂದು ಕಾವ್ಯದ ಸ್ವರೂಪವನ್ನೇ ನಿರ್ಧಾರ ಮಾಡುವ ಏಕೈಕ ಮಾರ್ಗವೆಂದು ತಿಳಿದಾಗ ತಪ್ಪಾಗುವ ಸಂಭವವಿದೆ. ಈ ಎರಡು ಅತಿಗಳನ್ನು ಬಿಟ್ಟು ಹಾರ್ಡಿಂಗ್ ಎಂಬ ವಿಮರ್ಶಕ ರೋಸನ್‌ಬರ್ಗ್‌ನ ಕಾವ್ಯದ ಬಗ್ಗೆ ಹೇಳುವ ಈ ಮಾತುಗಳು ಹೆಚ್ಚು ಸೂಕ್ತವೆಂದು ನನ್ನ ಎಣಿಕೆ : “ಪ್ರಾಯಶಃ ಅನೇಕ ಕವಿಗಳ ಹಾಗೆ ಇವನೂ ಕೂಡ ತನ್ನ ಆಲೋಚನೆಗಳು ಇನ್ನೂ ಉದಯೋನ್ಮುಖವಾಗಿದ್ದ ಅವಸ್ಥೆಯಲ್ಲಿಯೇ ಭಾಷೆಯನ್ನು ಅವುಗಳ ಜೊತೆ ಕೆಲಸ ಮಾಡಿಸಲು ಹಚ್ಚಿದ ಎನ್ನಿಸುತ್ತದೆ. ತನ್ನ ಆಲೋಚನೆಗಳನ್ನು ಮೊದಲು ಸಾಧಾರಣ ಸ್ವರೂಪಗಳಿಗೆ ತಂದು ನಂತರ ಅವುಗಳಿಗೆ ತಕ್ಕ ಶಬ್ದಗಳನ್ನು ಹುಡುಕುವುದರ ಬದಲು ರೋಸನ್‌ಬರ್ಗ್ ಪ್ರಾರಂಭದಲ್ಲೇ ತರ್ಕಕ್ಕಾಗಲೀ, ಅರ್ಥಸ್ಪಷ್ಟತೆಗಾಗಲೀ ತವಕಿಸದೆ ಭಾಷೆಯನ್ನು ಭಾವನೆಗಳ ಸಂಗಡ ತೊಡಗಿಸಿದ…” (ಸಾರ್ತ್ರ್ ಹೋಗುವ ಅತಿಗೆ ಹಾರ್ಡಿಂಗ್ ಹೋಗುವುದಿಲ್ಲವೆಂಬುದು ಇಲ್ಲಿ ಗಮನಿಸಬೇಕಾದ್ದು.)

ಹಾರ್ಡಿಂಗ್‌ನ ಈ ಮಾತನ್ನು ಎತ್ತಿ ಲೀವಿಸ್ ತನ್ನ ಪ್ರಬಂಧ “Tragedy and Medium” ನಲ್ಲಿ ವಿಚಾರ ಮಾಡಿದ್ದಾನೆ. ತತ್ವಶಾಸ್ತ್ರಜ್ಞ ಸಂತಯಾನನಿಗೆ ಲೀವಿಸ್ ಹೇಳುವಂತೆ ಒಂದು ಕಲಾಕೃತಿಯ ಹೆಚ್ಚಳವಿರುವುದು ಆ ಕಲಾಕೃತಿಯಲ್ಲಿ ಅಡಗಿರುವ ತತ್ವಗಳ ಮುಖಾಂತರ, ಸಾಹಿತ್ಯ ವಿಮರ್ಶಕ ಜಾನ್‌ಸನ್ ಕೂಡ, ವಿಶದವಾಗದಿದ್ದಲ್ಲಿ, ಅಂದರೆ ಸ್ಪಷ್ಟಮಾತುಗಳಲ್ಲಿ ನುಡಿಯದಿದ್ದಲ್ಲಿ, ಅಂತಹ ನೈತಿಕ ಪ್ರಜ್ಞೆ ಕಾವ್ಯದಲ್ಲಿ ಇಲ್ಲವೆಂದೇ ಭಾವಿಸುತ್ತಾನೆ. ಇದನ್ನು ಕುರಿತು ಲೀವಿಸ್ ತತ್ವಜ್ಞಾನಿಗಳಲ್ಲಿರುವ ಕಾವ್ಯದ ಬಗೆಗಿನ ತಿಳಿವಳಿಕೆ ಎಷ್ಟು ಬಾಲಿಶವಾದದು ಎಂದು ಹೀಗೆ ಹೇಳುತ್ತಾನೆ : “ಮೊದಲೇ ಪ್ರಸಿದ್ಧವಾದ ಭಾವನೆಗಳಿಗೆ ಕಾವ್ಯ ವಾಹಕವಾಗಬೇಕೆಂದು ಬಯಸುವ ಈ ತತ್ವಜ್ಞಾನಿಗಳೆಲ್ಲರೂ ಕಾವ್ಯದ ಬಗ್ಗೆ ಸರಿಯಾದ ತಿಳಿವಳಿಕೆಯಿಲ್ಲದೆ ಮಾತನಾಡುತ್ತಾನೆ. ಶೇಕ್ಸ್‌ಪಿಯರ್‌ನ ಮಾಧ್ಯಮ ಏನನ್ನು ಹೇಳುತ್ತದೋ ಅದನ್ನು ಸೃಷ್ಟಿಸುತ್ತದೆ ಕೂಡ.”

ಪ್ರಾರಂಭದಲ್ಲೇ ಸ್ಪಷ್ಟವಾಗಿರುವ ವಿಚಾರಗಳಿಗೆ ಭಾಷೆಯನ್ನು ಬರೀ ವಾಹಕವಾಗಿ ಉಪಯೋಗಿಸಿದಾಗ ಆಗಬಹುದಾದ ನಷ್ಟ ತತ್ವಕ್ಕೆ; ಕಾವ್ಯ ತತ್ವಶಾಸ್ತ್ರದ ಆಲೋಚನೆಗಳನ್ನು ನೀರು ನೀರಾಗಿ ಬಳಸಿಕೊಳ್ಳುತ್ತದೆ ಎಂದು ಲವ್‌ಜಾಯ್ ಹೇಳುವುದು ಆಗ ನಿಜವಾಗುತ್ತದೆ. ಆದರೆ ಕವಿ ತತ್ವಶಾಸ್ತ್ರಜ್ಞನಿಗೆ ಎದುರಾಗಿ ನಿಲ್ಲುವುದು ಶೋಧನಾತ್ಮಕವಾದ ಭಾಷೆಯ ಉಪಯೋಗವನ್ನು ಮಾಡಿದಾಗ ಮಾತ್ರ. ಆಗ ಕವಿಗೆ ತನ್ನನ್ನೇ ತಾನು ಮೀರುವ ಸಾಧ್ಯತೆ ಇದೆ. ಮೊದಲೇ ನಿಶ್ಚಿತವಾದ ತನ್ನ ಆತ್ಮಜ್ಞಾನವನ್ನೂ, ಅಹಂಕಾರದಲ್ಲಿ ನಿರ್ಧರಿತವಾದ ತನ್ನ ಸ್ವರೂಪವನ್ನು ಕವಿಗೆ ಮೀರುವುದು ಹೀಗೆ ಶೋಧನಾತ್ಮಕವಾಗಿ ಭಾಷೆಯನ್ನು ಉಪಯೋಗಿಸಿಕೊಂಡಾಗ ಮಾತ್ರ ಸಾಧ್ಯವಾಗುತ್ತದೆ ಎಂದು ಲೀವಿಸ್ ವಾದಿಸುತ್ತಾನೆ. ಆದ್ದರಿಂದ ಲೀವಿಸ್‌ನಂಥವರಿಗೆ ತತ್ವಶಾಸ್ತ್ರ ಕೊಡುವ ಜ್ಞಾನಕ್ಕಿಂತ ಹೆಚ್ಚು ಬೆಳೆಯುಳ್ಳ ಅನುಭವಿಸಿದ್ದ ತಿಳಿವಳಿಕೆಯನ್ನು ಸಾಹಿತಿ ಕೊಡುತ್ತಾನೆ.

ಈತನಕ ನಾವು ಮತ್ತು ತತ್ವಗಳ ಸಂಬಂಧದಲ್ಲಿ ಮೂರು ಬಗೆಯ ವಿಚಾರಗಳನ್ನು ಮಂಡಿಸಿದವರನ್ನು ಕಂಡಿದ್ದೇವೆ. ಮೊದಲನೆಯದಾಗಿ: ಸಾಹಿತ್ಯದ ರಸಲೋಕಕ್ಕೆ ತತ್ವಗಳು ಪರಕೀಯ ಎಂದು ಭಾವಿಸುವ ಸಾಹಿತ್ಯಪರವಾದಿಗಳು. ಎರಡನೆಯದಾಗಿ : ‘ತತ್ವಶಾಸ್ತ್ರಜ್ಞರು ಯೋಚಿಸುತ್ತಾರೆ, ಸಾಹಿತಿಗಳೂ ಈ ವಿಚಾರಗಳನ್ನು ಬಳಸಿಕೊಳ್ಳುತ್ತಾರೆ’ ಎಂದು ವಾದಿಸುವ ತತ್ವಶಾಸ್ತ್ರಪರರು. ಮೂರನೆಯದಾಗಿ: ಸಾಹಿತಿ ತನ್ನ ಭಾಷೆಯ ವಿಶಿಷ್ಟವಾದ ಶೋಧನಾತ್ಮಕ ಬಳಕೆಯಿಂದ ತತ್ವಗಳನ್ನು ಸೃಷ್ಟಿಸಿಕೊಳ್ಳುತ್ತಾನೆ ಎಂದು ಲೀವಿಸ್‌ನಂತೆ ಭಾವಿಸುವವರು.

[1]

ಒಂದು ಸಾಹಿತ್ಯವನ್ನು ಓದುವಾಗ ಅದರಲ್ಲಿ ತಾತ್ವಿಕ ಗಾಢತೆಯಿಂದ ನಮಗೆ ದೊರಕಿದ ಆನಂದವೆಷ್ಟು? ಮತ್ತು ರಸಪ್ರಜ್ಞೆಯಿಂದ ಬಂದ ಸುಖವೆಷ್ಟು ? – ಎಂದು ವಿಂಗಡಿಸುವುದು ಕೃತಕವಾಗುತ್ತದೆ. ನಾವು ಗಯಟೆಯೆನ್ನಾಗಲಿ ಡಾಸ್ಟೊವಸ್ಕಿಯನ್ನಾಗಲಿ ಓದುವುದಕ್ಕೆ ಕಾರಣ ಇವರ ತಿಳಿವಳಿಕೆ ಕೂಡ ಗಾಢವಾದದ್ದು ಎಂಬುದೇ ಆಗಿದೆ. ಅಲ್ಲದೆ, ಎಷ್ಟು ತತ್ವವನ್ನು ಸಾಹಿತ್ಯ ಪ್ರಕಾರಗಳು ಜೀರ್ಣಿಸಿಕೊಳ್ಳಬಲ್ಲವು; ಯಾವ ಅತಿಗೆ ಹೋದರೆ ಅಜೀರ್ಣವಾಗುತ್ತದೆ ಎಂದು ನಿಖರವಾಗಿ ಹೇಳುವುದು ಕಷ್ಟ. ಎಷ್ಟೋ ಉತ್ತಮ ಕಲಾಕೃತಿಗಳು ಒಂದು ಹೊಸ ತಾತ್ವಿಕ ತಿಳಿವಳಿಕೆಯನ್ನು ಮುಂದುವರಿಸಿದ ಅಥವಾ ಸೃಷ್ಟಿಸಿದ ಪ್ರಸಂಗಗಳು ಅನೇಕವೇಳೆ ನಮಗೆ ಸಾಹಿತ್ಯ ಚರಿತ್ರೆಯಲ್ಲಿ ದೊರೆಯುತ್ತವೆ. ತನ್ನ ಕಾಲದ ಅತ್ಯಂತ ಪ್ರಜ್ಞಾಪೂರ್ಣ ಸ್ಥಿತಿಯಲ್ಲಿ ನಿಂತು ಸಾಹಿತಿ ಬರೆಯುತ್ತಾನೆ ಎಂಬ ಲೀವಿಸ್ ಮತ್ತು ರಿಚರ್ಡ್ಸ್‌ರ ಮಾತು ಇದನ್ನು ಸಮರ್ಥಿಸುತ್ತದೆ. ತತ್ವಶಾಸ್ತ್ರ ಕೇಳುವ ಮನುಷ್ಯನ ಅದೃಷ್ಟಕ್ಕೆ ಸಂಬಂಧಿಸಿದ ಮೂಲಭೂತ ಪ್ರಶ್ನೆಗಳನ್ನೆಲ್ಲ ಸಾಹಿತ್ಯವೂ ಕೇಳುತ್ತದೆ; ಅಲ್ಲದೆ ತರ್ಕಬದ್ಧ ಯೋಚನೆಗೆ ಅಸಾಧ್ಯವಾದಂತಹ ಜರೂರಿನಿಂದ ಮತ್ತು ಅನುಭವ ಪ್ರಾಮಾಣ್ಯದಿಂದ ಇವಕ್ಕೆ ಉತ್ತರವನ್ನು ಹುಡುಕುತ್ತದೆ.[2]

ವೆಲೆಕ್ ಮತ್ತು ವಾರೆನ್‌ನಂಥ ವಿಮರ್ಶಕರು ಎಷ್ಟು ತಾತ್ವಿಕತೆಯನ್ನು ಸಾಹಿತ್ಯ ಜೀರ್ಣಿಸಿ ಕೊಳ್ಳಬಲ್ಲದು ಎಂದು ಪ್ರಶ್ನಿಸಿದರೆ, ಇತ್ತೀಚಿನ ವಿಮರ್ಶಕರು ಕೃತಿಕಾರನ ಉದ್ದೇಶ ಭಾಷೆಯಲ್ಲಿ ಸಂಭವಿಸಿತೇ ಇಲ್ಲವೇ ಎಂದು ನೋಡುತ್ತಾರೆ. ‘ಜೀರ್ಣ’ ಶಬ್ದಕ್ಕಿಂತ ಈ ‘ಸಂಭವ’ ಎನ್ನುವ ಮಾತು ಹೆಚ್ಚು ಉಪಯುಕ್ತವಾದುದು, ಲೀವಿಸ್‌ನ ಪ್ರಕಾರ ಸಾಹಿತ್ಯದಲ್ಲಿ ಸಂಭವಿಸಿದಷ್ಟು ಉದ್ದೇಶ ಮಾತ್ರ ಸಾರ್ಥಕವಾದಂತೆ; ಈ ಉದ್ದೇಶ ಕಾವ್ಯದಲ್ಲಿ ಸಂಭವಿಸಿತೇ ಇಲ್ಲವೇ ಎಂಬುದು ತಿಳಿಯುವುದು ವಿಮರ್ಶಕನ ಸಂವೇದನೆಯ ಮೂಲಕ. ಜೀವಂತವಾದ ಒಂದು ವಸ್ತು ಹೇಗೆ ತನಗೆ ಅನ್ನಿಸುತ್ತದೆ ಎಂಬ ಅವನ ಪರಿಜ್ಞಾನದ ಮೇಲೆ ವಿಮರ್ಶಕನ ಸಂವೇದನಾ ಶಕ್ತಿ ಅವಲಂಬಿಸಿದೆ. ಆದ್ದರಿಂದ ಒಬ್ಬ ವಿಮರ್ಶಕರಿಗೆ ಜೀವನದ ಆಳವಾದ ಕೇಂದ್ರದಿಂದ ಸಹಜವಾಗಿ ಬೆಳೆದುಬಂದದ್ದು ಯಾವುದು ಮತ್ತು ಬೇಕಾಗಿಯೇ ಕೃತ್ರಿಮವಾಗಿ ನಿಯೋಜಿಸಿದ್ದು ಯಾವುದು ಎಂಬ ತಾರತಮ್ಯ ಜ್ಞಾನವಿರಬೇಕು. ಹೀಗೆ ಕವಿಯ ಉದ್ದೇಶ ಸಂಭವಿಸುತ್ತದೋ ಇಲ್ಲವೋ ಎಂಬುದನ್ನು ಕಾಣಬಲ್ಲ ವಿಮರ್ಶಕನಿಗೆ ಕವಿ ಹೊರಟ ಉದ್ದೇಶವೇ ಬೇರೆ ಆದರೆ, ಕಾವ್ಯದಲ್ಲಿ ನಿಜವಾಗಿ ಸಂಭವಿಸಿದ್ದೇ ಬೇರೆ ಎಂದು ಗೋಚರಿಸುವುದೂ ಸಾಧ್ಯ. ‘ಸಾಹಿತಿ ಏನು ಹೇಳುತ್ತಾನೆ ಕೇಳಬೇಡ, ಕತೆ ಏನು ಹೇಳುತ್ತದೆ ನೋಡು’ ಎಂದು ಹೇಳುವಾಗಲೂ ಲಾರೆನ್ಸ್ ಇದೇ ಮಾತನ್ನು ಸಮರ್ಥಿಸುತ್ತಾನೆ.

‘ಸಂಭವಿಸುವುದು’ ಎಂದರೆ ಸಾಹಿತ್ಯದಲ್ಲಿ ಏನು ಎನ್ನುವ ಪ್ರಶ್ನೆ ಬಂದಾಗ ವಿಮರ್ಶಕರ ನಡುವೆ ಭಿನ್ನಾಭಿಪ್ರಾಯವಿರುವುದು ಸಾಧ್ಯ, ಯಾವ ಯಾವ ಮಾರ್ಗಗಳನ್ನು ಹಿಡಿದು ಸಾಹಿತಿ ಬರೆದಲ್ಲಿ – ಅಂದರೆ ಯಾವ ರೀತಿಯ ತಾಂತ್ರಿಕ ಯಶಸ್ಸಿನ ಮೂಲಕ – ಸಾಹಿತ್ಯದಲ್ಲಿ ಸಾಹಿತಿಯ ಉದ್ದೇಶ ಸಂಭವಿಸುತ್ತದೆ ಎಂಬುದನ್ನು ಕುರಿತು ಚರ್ಚಿಸುವಾಗ, ವಿಮರ್ಶಕರಿಗೆ ತಮತಮಗೆ ಮೆಚ್ಚಿದ ವಿಧಾನಗಳ ಮುಖಾಂತರ ಮಾತ್ರ ಕವಿಯ ಉದ್ದೇಶ ಕಾವ್ಯದಲ್ಲಿ ಸಂಭವಿಸುತ್ತಿದೆ ಎಂಬ ಪೂರ್ವ ಕಲ್ಪನೆಗಳು ಇರುವುದು ಸಾಧ್ಯವೆನ್ನುವುದನ್ನು ನಾವು ಮರೆಯಕೂಡದು, ಕೀಟ್ಸ್‌ನ “Ode to Autumn” ಎಂಬ ಪದ್ಯವನ್ನು ಲೀವಿಸ್ ವಿಮರ್ಶಿಸುವಾಗ ಭಾವಾಭಿನಯ ಮಾಡಬಲ್ಲ ಪದಯೋಜನೆಯ ಮುಖಾಂತರವೇ ಕವಿಯ ಉದ್ದೇಶದ ಪೂರ್ಣ ಸಂಭವ ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯವನ್ನು ನಾವು ಕಾಣಬಹುದು. ಲೀವಿಸ್‌ನ ಅರ್ಥದಲ್ಲಿ ‘ಸಂಭವಿಸುವುದು’ ಎಂದರೆ ‘ಆಗಿಸು’ವುದು; ಎಂದರೆ ನಿಜವಾಗಿಸುವುದು. ಇದು ಮುಖ್ಯವಾಗಿ ಸಾಧ್ಯವಾಗುವುದು ಭಾಷೆ ನಮ್ಮ ಇಂದ್ರಿಯಗಳನ್ನೆಲ್ಲ ದುಡಿಸಿಕೊಳ್ಳುವ ದಟ್ಟತೆಯನ್ನು ಪಡೆದಾಗ. ಇಂದ್ರಿಯಾನುಭವಕ್ಕೆ ಅತ್ಯಂತ ಸೂಕ್ಷ್ಮವಾಗಿ ಸಿಗುವಂತೆ ದಟ್ಟವೂ ಗಾಢವೂ ಆದ ಭಾಷೆಯಲ್ಲಿ ಮಾತ್ರ ಕವಿಯ ಅತ್ಯುನ್ನತ ಸಫಲತೆಯನ್ನು ಲೀವಿಸ್ ಕಾಣುತ್ತಾನೆಂಬುದು ಗಮನೀಯ. ಬರೀ ಮನೋಗ್ರಾಹ್ಯವಾದ ಅನುಭವಗಳನ್ನು ಸೂಚಿಸುವ ಅಮೂರ್ತ ಪ್ರತೀಕಯೋಜನೆ ಲೀವಿಸ್‌ಗೆ ಹಿಡಿಸುವುದಿಲ್ಲವೆನ್ನುವುದು ಅವನು ಶೆಲ್ಲಿಯ “Ode to the West Wind” ಪದ್ಯವನ್ನು ಟೀಕಿಸುವ ಕಾರಣಗಳಿಂದ ಸ್ಪಷ್ಟವಾಗುತ್ತದೆ.

ಯಾವುದರ ಮೂಲಕ ಕವಿಯ ಉದ್ಧೇಶ ಕವನದಲ್ಲಿ ಸಂಭವಿಸುತ್ತದೆ ಎಂಬ ಲೀವಿಸ್ ಪರೀಕ್ಷೆಗೂ ಮತ್ತು ಎಲಿಯಟ್‌ನ ‘ವಸ್ತುಪ್ರತಿರೂಪ’ ತತ್ವಕ್ಕೂ ಸಂಬಂಧವಿದೆ ಎನ್ನಿಸುತ್ತದೆ. ಎಲಿಯಟ್‌ನ ಮಾತಿನಲ್ಲಿಯೇ ‘ವಸ್ತುಪ್ರತಿರೂಪ’ ಎಂದರೆ ಇದು : “ಕಲಾಕೃತಿಯಲ್ಲಿ ಭಾವನೆಗಳನ್ನು ವ್ಯಕ್ತಪಡಿಸಲು ಇರುವ ಒಂದೇ ಮಾರ್ಗವೆಂದರೆ, ಈ ಭಾವನೆಗಳ ಅಭಿವ್ಯಕ್ತಿಗೆ ಅವಶ್ಯವಾದ ವಸ್ತುಪ್ರತಿರೂಪಗಳನ್ನು ಹುಡುಕುವುದು; ಅಂದರೆ ಯಾವ ವಿಶಿಷ್ಟ ಭಾವನೆಗಳನ್ನು ಓದುಗರಲ್ಲಿ ಪ್ರಚೋದಿಸಬೇಕೋ ಆ ಭಾವನೆಗಳನ್ನು ಉಂಟುಮಾಡಬಲ್ಲ ವಸ್ತುಗಳನ್ನು, ಸನ್ನಿವೇಶಗಳನ್ನು, ಘಟನಾವಳಿಗಳನ್ನು ಕವಿ ನಮಗೆ ದೊರಕಿಸುವುದು. ಹೀಗೆ ಬಹಿರಂಗಗೊಳಿಸಲ್ಪಟ್ಟ ದ್ರವ್ಯಗಳ ಮೂಲಕ ಮಾತ್ರ ಕಾವ್ಯ ಓದುಗನಲ್ಲಿ ಈ ಭಾವನೆಗಳನ್ನು ಥಟ್ಟನೆ ಪ್ರಚೋದಿಸುತ್ತದೆ.” ತತ್ವಗಳು ಕಾವ್ಯದಲ್ಲಿ ಹೇಗೆ ಮೈತಳೆಯಬೇಕು ಎನ್ನುವ ಉದ್ದೇಶದಿಂದಲೇ ಎಲಿಯಟ್ ಮಾತನಾಡದಿದ್ದರೂ ಸಹ ಅನೇಕ ವಿಮರ್ಶಕರು ಈ ಅರ್ಥದಲ್ಲಿಯೇ ಎಲಿಯಟ್‌ನ ವಿಚಾರವನ್ನೂ ಬಳಸಿಕೊಂಡಿದ್ದಾರೆ. ಎಲ್ಲದಕ್ಕೂ ವಸ್ತುಪ್ರತಿರೂಪ ಕವಿ ದೊರಕಿಸಿಕೊಳ್ಳಬೇಕೆಂಬ ವಿಚಾರ ಮಾತ್ರ ಸ್ವತಸ್ಸಿದ್ಧ ಸಾಹಿತ್ಯತತ್ವವೇನೂ ಅಲ್ಲ. ಒಂದು ಕಾದಂಬರಿ ವಸ್ತುಪ್ರತಿರೂಪದ ಸಹಾಯವಿಲ್ಲದೆ ನೇರವಾಗಿ ತತ್ವಗಳನ್ನು ಉಪಯೋಗಿಸಿಕೊಳ್ಳಬಲ್ಲುದು; ವ್ಯಕ್ತಿಗಳನ್ನೋ ಸನ್ನಿವೇಶಗಳನ್ನೋ ಬಳಸಿಕೊಳ್ಳುವಂತೆಯೇ ತತ್ವಗಳನ್ನೂ ಕೂಡ ಒಬ್ಬ ಕಾದಂಬರಿಕಾರ ನೇರವಾಗಿ ಬಳಸಿಕೊಳ್ಳಬಲ್ಲ. (ಉದಾಹರಣೆಗೆ ಡಾಸ್ಟೊವಸ್ಕಿ.)

ತತ್ವಗಳು ಕವಿಯ ಸೃಷ್ಟ್ಯಾತ್ಮಕತೆಗೆ ಮಾರಕವಾಗಬಲ್ಲವು ಎನ್ನುವ ಅಭಿಪ್ರಾಯವನ್ನು ಸೂಚಿಸಿದವನೂ ಎಲಿಯಟ್‌ನೇ. ಹೆನ್ರಿ ಜೇಮ್ಸ್ ಬಗ್ಗೆ ಮಾತನಾಡುತ್ತ, ಯಾವ ತತ್ವದಿಂದಲೂ ಭ್ರಷ್ಟವಾಗದಂತಹ ಉತ್ತಮ ಮನಸ್ಸು ಇವನಿಗಿತ್ತು ಎಂಬ ಮಾತನ್ನು ಆಡಿದ್ದಾನೆ. ಸಾಹಿತ್ಯವೆಂದರೆ ಜ್ಞಾನಮಾಧ್ಯಮ ಎಂದು ತಿಳಿದಿದ್ದ ೧೯ನೆಯ ಶತಮಾನದ ವಿಮರ್ಶಕರ ವಿರುದ್ಧ ಎಲಿಯಟ್ ತನ್ನ ಅಭಿಪ್ರಾಯವನ್ನು ಹೀಗೆ ವ್ಯಕ್ತಪಡಿಸಿದ್ದೇನೋ ಸರಿಯೇ. ಮನಃಶಾಸ್ತ್ರ ಇತ್ಯಾದಿ ತತ್ವಗಳ ಶಾಸ್ತ್ರಭಾಷೆಯ ಭಾರದಲ್ಲಿ ಸರಳವಾದಂಥ ಅನುಭವಗಳೂ ಅನಾವಶ್ಯಕವಾದ ಜಿಗುಟನ್ನು ಪಡೆಯಬಲ್ಲದು ಎಂಬ ಅಪಾಯ ನಿಜ. ಮನೋವಿಜ್ಞಾನಿಯ ಶಾಸ್ತ್ರಭಾಷೆಯಲ್ಲಿ ನಿಮ್ಮ ಅನುಭವಗಳನ್ನು ಹೇಳ ಹೊರಟಾಗ ಎಷ್ಟು ಹಾಸ್ಯಾಸ್ಪದವಾಗಬಲ್ಲುದು ಎಂಬುದಕ್ಕೆ ಟ್ರಿಲ್ಲಿಂಗನು ಈ ಉದಾಹರಣೆ ಕೊಟ್ಟಿದ್ದಾನೆ: “Their libidinal impulses being reciprocal, they activated their individual erotic drives and integrated them within the same frame of reference.” ಅಂದರೆ, ಸರಳವಾದ ಮಾತಿನಲ್ಲಿ – ಅವರು ಪ್ರೀತಿಸಿದರು ಮತ್ತು ಮದುವೆಯಾದರು.

ತತ್ವಗಳು ಸಾಹಿತ್ಯಕ್ಕೆ ಮಾರಕವಾಗಬಲ್ಲವು ಎನ್ನುವುದಕ್ಕಿಂತ ಹೆಚ್ಚಾಗಿ ತತ್ವಗಳ ಬಗ್ಗೆಯೇ ಸಾಹಿತಿಗಳು ದ್ವೇಷದಿಂದ ನಡೆದುಕೊಂಡಿದ್ದಾರೆ ಎಂಬುದಕ್ಕೆ ಅನೇಕ ಉದಾಹರಣೆಗಳಿವೆ. ಬರ್ನಾರ್ಡ್ ಷಾನ “Arms and the Man” ನೋಡಿದ ಅನಂತರ ಯೇಟ್ಸ್ ಹೀಗೆ ಹೇಳುತ್ತಾನೆ : “ಮೆಚ್ಚುಗೆ ಮತ್ತು ದ್ವೇಷದಿಂದ ನಾನು ‘Arms and the Man’ ನನ್ನು ನೋಡಿದೆ. ನಾಟಕ ನನಗೆ ನಿರ್ಜೀವವೂ ತರ್ಕ ಶುದ್ಧವೂ ಆಗಿ ಕಂಡಿತೇ ವಿನಾ ಜೀವಂತವಾದುದಕ್ಕೆ ಸಹಜವಾದ ವಕ್ರತೆ ಅದರಲ್ಲಿ ಇಲ್ಲ.” ಇನ್ನೊಂದು ಪದ್ಯದಲ್ಲಿ ಯೇಟ್ಸ್ ಹೀಗೆ ಹೇಳಿದ್ದಾನೆ :

“God guard me from those thoughts men think
In the minds alone;
He that sings a lasting song
Sings in a marrow – bone.”

ಅತಿ ಬೌದ್ಧಿಕತೆಯನ್ನು ಯೇಟ್ಸ್‌ನ ಹಾಗೆ ಲಾರೆನ್ಸ್ ಕೂಡ ಖಂಡಿಸುತ್ತಾನೆ. ರಕ್ತಹೀನ ಅಸ್ಥಿಪಂಜರದಂತಿದ್ದ ತನ್ನ ಕಾಲದ ನಾಟಕಗಳನ್ನು ನೋಡಿ ಅವನು ಹೇಸಿ, ಇಂಚುಪಟ್ಟಿಯಲ್ಲಿ ಅಳತೆಮಾಡಿ ಜೀವನದ ಬಗ್ಗೆ ನಿರ್ಣಯಿಸುವ ಷಾ, ಗಾಲ್ಸ್‌ವರ್ದಿ ಮತ್ತು ಬಾರ್ಕರ್ ನಾಟಕಗಳ ವಿರುದ್ಧ ಸಿಡಿದೇಳಬೇಕೆಂದು ಘೋಷಿಸಿದ್ದಾನೆ. ಸ್ಫೂರ್ತಿಯುತವಾಗಿರಬೇಕಾದ ಬರಹಗಾರನ ಭಾವನಾಮಯತೆಯನ್ನು ಅಮೂರ್ತ ತತ್ವವಿಚಾರಗಳು ಕೆಡಿಸುತ್ತವೆ ಎಂಬ ಕಾರಣದಿಂದ ಎಲ್ಲ ಬಗೆಯ ಅಮೂರ್ತತೆಯನ್ನು ಲಾರೆನ್ಸ್ ದ್ವೇಷಿಸುತ್ತಿದ್ದನು. ಬೌದ್ಧಿಕವಾದ ಅತಿಪ್ರಜ್ಞೆಗೆ ಜೋತುಬಿದ್ದ ತನ್ನ ಜನಾಂಗ ಬಾಳಿನ ಸಮಗ್ರತೆಯನ್ನು ಪಡೆಯಲಾರದೆಂಬುದೇ ಲಾರೆನ್ಸ್‌ನ ಈ ದ್ವೇಷಕ್ಕೆ ಕಾರಣ. ಆದ್ದರಿಂದ ಲಾರೆನ್ಸ್ ವಿಜ್ಞಾನವನ್ನು ದ್ವೇಷಿಸುತ್ತಿದ್ದ : ಚಂದ್ರನ ಬಗ್ಗೆ ವಿಜ್ಞಾನಿಗಳು ಕೊಡುವ ವಿವರಣೆಯನ್ನು ಧಿಕ್ಕರಿಸಿ ಪುರಾತನರು ಚಂದ್ರನನ್ನು ‘ಆರ್ಟಿಮಿಸ್’ ಎಂದು ಕರೆದದ್ದೇ ತನ್ನ ಅನುಭವಕ್ಕೆ ಹೆಚ್ಚು ಹತ್ತಿರವಾದದ್ದು ಎಂದು ವಾದಿಸುತ್ತಿದ್ದ.

ವೆಲ್ಸ್ ಮತ್ತು ಗಾಲ್ಸ್‌ವರ್ದಿಯಂಥವರ ಬಗ್ಗೆ ಲಾರೆನ್ಸ್ ವ್ಯಕ್ತಪಡಿಸುತ್ತಿದ್ದ ಪ್ರತಿಭಟನೆ ಸ್ಪೆಂಡರನ ಒಂದು ವಿಚಾರವನ್ನು ನೆನಪಿಗೆ ತರುತ್ತದೆ. ಸ್ಪೆಂಡರ್ ತನ್ನ ವಿಮರ್ಶೆಯೊಂದರಲ್ಲಿ ಲಾರೆನ್ಸ್, ಜೇಮ್ಸ್, ಕಾನ್ರಾಡ್ ಮತ್ತು ವರ್ಜಿನಿಯಾ ವುಲ್ಫ್ ಬರಹಗಾರರನ್ನು ‘ಆಧುನಿಕ’ರೆಂದೂ, ಷಾ, ಗಾಲ್ಸ್‌ವರ್ದಿ, ವೆಲ್ಸರನ್ನು ‘ಸಮಕಾಲೀನ’ರೆಂದೂ ಕರೆದಿದ್ದಾನೆ. ಆಧುನಿಕರಿಗೆ ಪ್ರಗತಿಯಲ್ಲಿ ನಂಬಿಕೆಯಿಲ್ಲ; ತತ್ವ, ವಿಜ್ಞಾನ ಇತ್ಯಾದಿಗಳೆಂದರೆ ಇವರಿಗೆ ಆಗದು; ಇವರು ಬೌದ್ಧಿಕತೆಯನ್ನು ವಿರೋಧಿಸಿ ಜೀವನದ ಆಳದಲ್ಲಿರುವ ಸತ್ಯದ ಅನ್ವೇಷಣೆಗೆ ಹೊರಟ ಕವಿಗಳು. ‘ಸಮಕಾಲೀನ’ರಾದರೋ ಪ್ರಗತಿವಾದಿಗಳು, ಸಮಾಜಪರರು, ನಾಗರೀಕತೆಯ ಮೂಲಕ ಮನುಷ್ಯನ ಉದ್ಧಾರವನ್ನು ಬಯಸುವವರು. ಲಾರೆನ್ಸ್‌ಗೆ ವಿಚಾರ ಕೂಡ ಭಾವನಾಮೂಲವಾಗಿರ ಬೇಕಾದದ್ದು; ದೈಹಿಕವಾಗಿ ಹುಟ್ಟಿದಂಥ ಮತ್ತು ದೈಹಿಕತೆಯಲ್ಲಿ ಮೂಲವಿಲ್ಲದ ಯಾವ ವಿಚಾರವೇ ಆಗಲಿ ಅವನಿಗೆ ವರ್ಜ್ಯ. ಲಾರೆನ್ಸ್‌ನ ದೃಷ್ಟಿಯಿಂದ ನೋಡಿದಾಗ ವಿಚಾರ ಕೃತಿಯಲ್ಲಿ ಹೇಗೆ ಮೈತಾಳಬೇಕು ಎನ್ನುವ ಚರ್ಚೆಗೆ ಹೊಸ ಪರಿಮಾಣ ಸಿಕ್ಕದಂತಾಗುತ್ತದೆ. ಕವಿಯ ಉದ್ದೇಶ ಭಾಷೆಯಲ್ಲಿ ಸಂಭವಿಸಬೇಕು : ಯಾಕೆಂದರೆ ವಿಚಾರಗಳೂ ಸಹ ಐಂದ್ರಿಕ ಜೀವನದಲ್ಲಿ ಮೈ ಗೂಡಬೇಕಾದವು; ಇಲ್ಲದಿದ್ದರೆ ಇವು ರಾಕ್ಷಸವಾಗುತ್ತವೆ – ಎನ್ನುವ ಅರ್ಥ ಬರುವಂತೆ ಲಾರೆನ್ಸ್ ಮಾತಾಡುತ್ತಿದ್ದಾನೆ ಎನ್ನಿಸುತ್ತದೆ. ಹೀಗೆ ನೋಡಿದಾಗ ಸಾಹಿತ್ಯ ವಿಮರ್ಶಕನ ‘ಸಂಭವ ತತ್ವ’ ಬರಿಯ ಸಾಹಿತ್ಯ ತತ್ವವಾಗದೆ ಒಂದು ಜೀವನತತ್ವೂ ಆಗಿ ಕಾಣುತ್ತದೆ. ದೈಹಿಕತೆಯಲ್ಲಿ ಮೂಲವಿಲ್ಲದ ವಿಚಾರಗಳು ತಮ್ಮ ಸುತ್ತ ತಾವೇ ಸುತ್ತಿ ಮನುಷ್ಯನನ್ನು ಅಮಾನುಷಗೊಳಿಸುತ್ತವೆ; ಸ್ವಯಂಚಾಲಕತ್ವ ಪಡೆದು ಭೂತಗಳಾಗುತ್ತವೆ – ಎಂಬ ಭಯ ಈ ತತ್ವವಿರೋಧಿಗಳಿಗೆಲ್ಲ ಇದ್ದೇ ಇದೆ. ಲಾರೆನ್ಸ್ ಇನ್ನೂ ಮುಂದೆ ಹೋಗಿ ಶೇಕ್ಸ್‌ಪಿಯರ್‌ನ ಕಾಲದಲ್ಲಿ ಬೌದ್ಧಿಕ ಪ್ರಜ್ಞೆಗೂ ದೈಹಿಕ ಪ್ರಜ್ಞೆಗೂ ನಡುವೆ ಕಂದಕ ಬಿದ್ದು ಮನುಷ್ಯ ಪ್ರಜ್ಞೆಯಲ್ಲಿ ಬಿರುಕುಬಿಟ್ಟಿತು; ಇದನ್ನು ಮತ್ತೆ ಸಾಹಿತ್ಯದಲ್ಲಿ ಒಂದುಗೂಡಿಸಬೇಕು ಎಂದು ಹೇಳುತ್ತಾನೆ.

ಲಾರೆನ್ಸ್‌ಗಾಗಲೀ, ಯೇಟ್ಸ್‌ಗಾಗಲೀ, ತತ್ವಗಳು, ಅತಿಬೌದ್ಧಿಕತೆಯ ರಕ್ತಹೀನ ದ್ರವ್ಯಗಳು. ಇಂತಹ ‘ಆಧುನಿಕ’ ವಿಚಾರವನ್ನು ವಿರೋಧಿಸುವ ‘ಸಮಕಾಲೀನ’ ಸ್ನೋನಂಥವರಿಗೆ ಲಾರೆನ್ಸ್ ಮತ್ತು ಯೇಟ್ಸರು ಬುದ್ಧಿಹೀನ ಒಡ್ಡರಂತೆ ಕಾಣುತ್ತಾರೆ. ಆದರೆ, ಲಾರೆನ್ಸ್‌ನಾಗಲೀ, ಯೇಟ್ಸ್‌ನಾಗಲೀ ಹೀಗೆ ತತ್ವಗಳನ್ನು ವಿರೋಧಿಸುವಾಗ ಅತ್ಯಂತ ಮಹತ್ವದ ಒಂದು ತಾತ್ವಿಕ ನಿಲುವನ್ನೇ ತೆಗೆದುಕೊಳ್ಳುತ್ತಾರೆ ಎಂಬುದನ್ನು ನಾವು ಅನೇಕವೇಳೆ ಮರೆತುಬಿಡುತ್ತೇವೆ.

ಇಲ್ಲಿಯವರೆಗಿನ ನಮ್ಮ ಪರಿಶೀಲನೆಯನ್ನು ಸ್ಥೂಲವಾಗಿ ನೋಡುವುದಾದರೆ ನಮಗೆ ಅನ್ನಿಸುವುದು ಇಷ್ಟು : ಸಾಹಿತ್ಯ ಪರಿಶುದ್ಧವಾಗಲಿ ಎಂದು ತತ್ವಗಳನ್ನು ವಿರೋಧಿಸುವವರು ತತ್ವಗಳು ಜೀವನದ ಮೇಲೆ ಹೇಗೆ ಪ್ರಭಾವ ಮಾಡುತ್ತವೆ ಎಂಬುದನ್ನು ಮರೆತು ಸಾಹಿತ್ಯವನ್ನು ಚಿಲ್ಲರೆಯಾಗಿಸುತ್ತಾರೆ. ಸಾಹಿತ್ಯದಲ್ಲಿ ಸ್ಪಷ್ಟವಾಗಿ ಬರುವ ತತ್ವಗಳನ್ನು ಮಾತ್ರ ಗಮನಿಸುತ್ತ ನಾಟಕೀಯವಾಗಿ ಸಂಭವಿಸುವ ಕವಿಯ ಉದ್ದೇಶವನ್ನು ಗಣನೆಗೆ ತೆಗೆದುಕೊಳ್ಳದ ತತ್ವಶಾಸ್ತ್ರಜ್ಞರು ಸಾಹಿತ್ಯಕ್ಕೂ ತತ್ವಗಳಿಗೂ ನಡುವೆ ಇರುವ ಸಂಬಂಧವನ್ನು ಸರಳಗೊಳಿಸುತ್ತಾರೆ. ವಸ್ತುಪ್ರತಿ ರೂಪವಾದಿಗಳ ಮತ್ತು ಸಂಭವವಾದಿಗಳ ‘ಸಂಭವಿಸುವುದು’ ಎಂದರೇನು, ‘ವಸ್ತುಪ್ರತಿರೂಪ’ ಎಂದರೇನು ಎಂಬ ಬಗ್ಗೆ ಕೆಲವೊಮ್ಮೆ ಸಂಕುಚಿತ ಧೋರಣೆಯನ್ನು ತಾಳುತ್ತಾರೆ. ಅತಿ ಬುದ್ಧಿಯಿಂದ ಉದ್ಭವಿಸುವ ತತ್ವಗಳನ್ನೆಲ್ಲ ವಿರೋಧಿಸುವ, ಅನುಭವದ ಗಾಢತೆಗೆ ಮಾತ್ರ ಹೆಚ್ಚು ಬೆಲೆಕೊಡುವ ಸಾಹಿತಿಗಳೆಲ್ಲರೂ ಬುದ್ಧಿಯ ಕ್ರಿಯೆಯನ್ನೇ ಮಾರಕವಾಗಿ ಕಾಣುವ ಅತಿಗೆ ಹೋಗುತ್ತಾರೆ. ಆದರೆ “ಶೇಕ್ಸ್‌ಪಿಯರ್ ಹಿರಿಮೆಯನ್ನು ಒಂದು ಮಾತಿನಲ್ಲಿ ವಿವರಿಸುವುದಿದ್ದರೆ ಅದು ಅವನ ಬುದ್ಧಿಶಕ್ತಿಯ ಹಿರಿಮೆಯಲ್ಲಿದೆ” ಎಂಬ ಕಾರ್ಲೈಲ್‌ನ ಸರಳ ವಾಕ್ಯದಲ್ಲಿರುವ ದೊಡ್ಡ ಸತ್ಯವನ್ನು ನಾವು ಮರೆಯಕೂಡದು, ‘ಬುದ್ಧಿ’ ಎನ್ನುವ ಶಬ್ದದಲ್ಲಿ ಎಲ್ಲವೂ ಅಡಗಿದೆ ಎನ್ನುವ ಅರ್ಥ ಬರುವಂತೆ ಕಾರ್ಲೈಲ್‌ನು ತಿಳಿಯುವುದು ಅಪಾಯಕಾರಿಯಾಗಬಹುದಾದಂತೆಯೇ ಶೇಕ್ಸ್‌ಪಿಯರ್‌ನಾಗಲಿ, ಡಾಂಟೆಯಾಗಲಿ ಯಾವ ಸ್ವತಂತ್ರ ವಿಚಾರವನ್ನು ಮಾಡಲಿಲ್ಲ ಎಂಬ ಎಲಿಯಟ್‌ನ ಪ್ರತಿಕ್ರಿಯಾತ್ಮಕ ಧೋರಣೆಯೂ ಅಪಾಯಕಾರಿ. ಆದರೆ ಎಲಿಯಟ್, ಕಾರ್ಲೈಲ್‌ರ ನಡುವೆ ಕಾರ್ಲೈಲ್‌ನ ಮಾತೇ ಹೆಚ್ಚು ಸರಿ ಎಂದು ಟ್ರಿಲ್ಲಿಂಗ್ ಹೇಳಿರುವುದು ಒಪ್ಪತಕ್ಕ ಸಂಗತಿ ಎಂದು ನನಗೆ ಅನ್ನಿಸುತ್ತದೆ.

ಆದರೆ ಸಾಹಿತ್ಯಕೃತಿಯ ಅಡಿಗಲ್ಲು ಯಾವುದಾದರೊಂದು ತತ್ವ ಎಂದು ತಿಳಿಯುವುದರಿಂದ ಕೃತಿಯ ಸಂಕೀರ್ಣತೆಗೆ ಅಪಾಯ ಒದಗುತ್ತದೆ ಎಂಬ ವೆಲೆಕ್ ಮತ್ತು ವಾರೆನ್‌ರ ವಿಚಾರವನ್ನು ನಾವು ಗಮನದಲ್ಲಿಡಬೇಕು. ಒಂದು ಸಾಹಿತ್ಯಕೃತಿಗೆ ನಮ್ಮ ಎಲ್ಲ ಗಮನವನ್ನು ಹರಿಯಿಸಬೇಕೆಂದು ಇಚ್ಛಿಸುವಾಗ ನಾವು ಗಮನಿಸುವ ಅನೇಕ ಸಂಗತಿಗಳಲ್ಲಿ ವಿಚಾರವೂ ಒಂದು. ಆದರೆ ಈ ವಿಚಾರ ಸಾಹಿತ್ಯದ ಅಸಂಖ್ಯ ಹಾಸುಹೊಕ್ಕಿನಲ್ಲಿ ಸಿಕ್ಕಿರುವ ಒಂದು ಎಳೆ ಎನ್ನುವುದನ್ನು ನಾವು ಮರೆಯಕೂಡದು.

ಸಾಹಿತ್ಯದಲ್ಲಿ ಸಿಗುವುದೆಲ್ಲ ನೀರುನೀರಾದ ತತ್ವಗಳು ಎನ್ನುವ ಲವ್‌ಜಾಯ್‌ನ ವಾದ ಒಪ್ಪತಕ್ಕದ್ದಲ್ಲವೆಂಬುದು ಕೆಲವು ಉದಾಹರಣೆಗಳಿಂದ ನಮಗೆ ಗೊತ್ತಾಗುತ್ತದೆ. ಉದಾಹರಣೆಗೆ ರುಸೋನ ಉದಾತ್ತ ಕಾಡುಮನುಷ್ಯನ ಜೊತೆ ಲಾರೆನ್ಸ್‌ನ ‘ಗೇಮ್ ಕೀಪರ್’ನನ್ನು ಹೋಲಿಸಿ; ಅಥವಾ ಸಾರ್ತ್ರ್‌ನ ತಾತ್ವಿಕ ಬರಹಗಳಲ್ಲಿ ಕಾಣುವ ಅಸ್ತಿತ್ವವಾದದ ಜೊತೆ ಅವನ ಕಾದಂಬರಿಗಳಲ್ಲಿ ಬರುವ ಅಸ್ತಿತ್ವವಾದವನ್ನು ಹೋಲಿಸಿ; ಅಥವಾ ಜೀವನಸಂದರ್ಭಗಳಲ್ಲಿ ಶೇಕ್ಸ್‌ಪಿಯರ್ ಉಪಯೋಗಿಸಿಕೊಂಡ ಮೆಕವೆಲ್ಲಿ, ಸಿನೆಕಾ ಮತ್ತು ಮಾಂಟೇನ್‌ರ ತತ್ವಗಳನ್ನು ಈ ಬರಹಗಾರರ ತತ್ವಗಳ ಜೊತೆಗೆ ಹೋಲಿಸಿ, ಸಾಹಿತ್ಯಕೃತಿಯೊಂದರಲ್ಲಿ ಅದರ ಒಳಗೆ ಅಡಕವಾಗಿರುವ ವಿವಿಧ ದೃಷ್ಟಿಕೋನಗಳ ಪರೀಕ್ಷೆಗೆ ಯಾವುದಾದರೂ ಒಂದು ತತ್ವ ಒಳಗಾದಾಗ ಅದು ಶಾಸ್ತ್ರದ ತಾರ್ಕಿಕ ಸಂದರ್ಭದಲ್ಲಿ ಪಡೆಯುವ ಅರ್ಥಕ್ಕಿಂತಲೂ ಹೆಚ್ಚಿನ ಅರ್ಥವನ್ನು ಪಡೆಯುತ್ತದೆ. ಆದ್ದರಿಂದಲೇ ಸಾಹಿತಿ ಕೃತಿರಚನೆಯಲ್ಲಿ ತೊಡಗಿದಾಗ ರಚನಾತಂತ್ರ ಅವನಿಗೆ ಮುಖ್ಯವಾಗುತ್ತದೆ. ಯಾಕೆಂದರೆ ತರ್ಕದ ಒಂದು ನೇರದೃಷ್ಟಿಗಲ್ಲದೆ ಅನುಭವದ ಹಲವು ಒತ್ತಡಗಳಿಗೆ ಒಂದು ವಿಚಾರವನ್ನು ಒಳಪಡಿಸುವುದು ಸಾಹಿತಿಗೆ ಸಾಧ್ಯವಾಗುವುದು ಕೃತಿಯ ವಿಶಿಷ್ಟ ತಂತ್ರದ ಮೂಲಕ. ತಾರ್ಕಿಕ ಅಭಿವ್ಯಕ್ತಿಗೆ ನಿಲುಕಲಾರದ ಹಲವು ದೃಷ್ಟಿಕೋನಗಳನ್ನು ಹೀಗೆ ಸಾಹಿತಿ ನಮಗೆ ಕೃತಿಬಂಧದಲ್ಲಿಯೇ ಒದಗಿಸುತ್ತಾನೆ. ಹಾಗೆ ನೋಡಿದಲ್ಲಿ ಹೊಸದೊಂದು ಸಾಹಿತ್ಯ ಪ್ರಕಾರದ ಸೃಷ್ಟಿಯೇ ಒಂದು ಹೊಸ ತತ್ವದ ಸೃಷ್ಟಿಯೆಂದು ಹೇಳಬಹುದು: ಸಂಗೀತ ಲಯದಲ್ಲಿ ಆಗುವ ಬದಲಾವಣೆ ಇತಿಹಾಸದ ಒಟ್ಟು ಗತಿಯಲ್ಲಾಗುವ ಬದಲಾವಣೆಗೆ ಸೂಚಕ ಎನ್ನುವ ಪ್ಲೇಟೋನ ಮಾತನ್ನು ಇಲ್ಲಿ ನೆನೆಯಬಹುದು. ಸಾಹಿತ್ಯದ ಶೋಧನ – ಸೃಷ್ಟಿಮಾರ್ಗ ತತ್ವ ಶಾಸ್ತ್ರಜ್ಞನ ಗಾಢ ಚಿಂತನೆಗೆ ಸರಿಸಮವಾಗಿ ಕೆಲಸಮಾಡಿದ ಉದಾಹರಣೆಗಳು ಸಾಹಿತ್ಯ ಚರಿತ್ರೆಯ ಉದ್ದಕ್ಕೂ ನಮಗೆ ಕಾಣುತ್ತವೆ. ಇಲ್ಲದಿದ್ದಲ್ಲಿ ಸಾಹಿತ್ಯದಿಂದ ಫ್ರಾಯ್ಡ್ ಮನಃಶಾಸ್ತ್ರವನ್ನೂ, ಬಾಲ್ಜಾಕ್‌ನಿಂದ ಮಾರ್ಕ್ಸ್ ಅರ್ಥನೀತಿಯನ್ನೂ ತಿಳಿದುಕೊಳ್ಳುವುದು ಅಸಾಧ್ಯವಾಗುತ್ತಿತ್ತು.

ಗ್ರಂಥಋಣ

1. Lionel Tirlling : The Liberal Imagination

2. George Boas : Philosophy and Poetry

3. A.O. Lovejoy : The Great Chain of Being

4. Rene Wellek & Austin Warren : Theory of Literature

5. Rober Penn Warren :“Pure and Impure Poetry”. Kenyon Review, Spring 1943.

6. J.P.Sartre : What is Literature.

7. F.R. Leavis : The Common Pursuit.

8. T.S. Eliot : Selected Prose.

9. D.H. Lawrence : Selected Literary Criticism.

10. D.W. Harding : “T.S. Eliot, 1925 – 1935”, Scrutiny 5 (Sept. 1936).

ಈ ಲೇಖನವನ್ನು ಬರೆಯಲು ನಾನು ಉಪಯೋಗಿಸಿಕೊಂಡ ಎಲ್ಲ ಪುಸ್ತಕಗಳ ಹೆಸರನ್ನು ಇಲ್ಲಿ ಕೊಟ್ಟಿಲ್ಲ. ಮತ್ತು ಮೇಲೆ ನಮೂದಿಸಿದ ಲೇಖಕರ ಅಭಿಪ್ರಾಯಗಳನ್ನು ಕನ್ನಡದ ಜಾಯಮಾನಕ್ಕೆ ಒಗ್ಗುವಂತೆ ನಾನು ಭಾಷಾಂತರಿಸಿದ್ದೇನೆಯೆ ವಿನಾ ಅವರ ಮಾತುಗಳನ್ನು ಪದಶಃ ಭಾಷಾಂತರಿಸಿಲ್ಲ. ಆದ್ದರಿಂದ ನನ್ನ ಅನುಕೂಲಕ್ಕೆ ತಕ್ಕಂತೆ ಅವರ ಧೋರಣೆಗಳಲ್ಲಿ ವ್ಯತ್ಯಾಸಗಳಾಗಿರಬಹುದಾದ ಭಯ ನನಗಿದೆ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

* * *


[1]    ಗದ್ಯಸಾಹಿತ್ಯದಲ್ಲಿ ವಿಚಾರ ಬೇಕೆಂದೂ, ಕಾವ್ಯದಲ್ಲಿ ಮಾತ್ರ ವಿಚಾರಕ್ಕೆ ಸ್ಥಾನವಿಲ್ಲವೆಂದೂ ವಾದಿಸುವ ಸಾರ್ತ್ರ್ ಈ ಮೂರು ಪಂಗಡಗಳಿಗೂ ಸೇರುವುದಿಲ್ಲ.

[2]    ಉದಾಹರಣೆಗೆ ಫ್ರಾಯ್ಡ್‌ನೇ ತಿಳಿಸಿರುವಂತೆ ಪ್ರಾಚೀನಸಾಹಿತ್ಯ ಆ ಕಾಲದ ಮನಃಶಾಸ್ತ್ರಜ್ಞರಿಗಿಂತಲೂ ಮುಂದಾಗಿತ್ತು.