Waiting for Godot’ ನಾಟಕದಿಂದ ಪ್ರಸಿದ್ಧನಾದ ಸ್ಯಾಮುಯಲ್ ಬೆಕೆಟ್ ಮುಖ್ಯವಾಗಿ ತಾನು ಕಾದಂಬರಿಕಾರನೆಂದೂ, ಕುತೂಹಲಕ್ಕಾಗಿ, ಖುಷಿಗಾಗಿ ತಾನು ನಾಟಕಗಳನ್ನು ಬರೆಯುವುದೆಂದೂ ಹೇಳಿಕೊಂಡಿದ್ದಾನೆ. ಜಾಯ್ಸ್ ಮತ್ತು ಯೇಟ್ಸ್‌‌ರಂತೆ ಬೆಕೆಟ್ ಐರ್ಲೆಂಡಿನವ : ಸಾಹಿತ್ಯದಲ್ಲಿ ಸಾಂಕೇತಿಕತೆಯ ಪಂಥವನ್ನು ತುಳಿದ ಅವರಂತೆಯೇ ಕಲೆಯಲ್ಲಿ ಸುಲಭವಾದದ್ದನ್ನು, ಸಾಧಾರಣವಾದದ್ದನ್ನು ತಿರಸ್ಕರಿಸಿದವ; ಹೊಸದನ್ನು, ಕಷ್ಟವಾದದ್ದನ್ನು ಭಾಷೆ ತಂತ್ರಗಳಲ್ಲಿ ಸದಾ ಪ್ರಯತ್ನಿಸುತ್ತ, ಸಾಮಾಜಿಕ ಮನುಷ್ಯ ನೋಡಲು ಅಂಜುವ ಜೀವನಾನುಭವದ ಮೂಲದ ರಹಸ್ಯಗಳನ್ನು, ಅನಿವಾರ್ಯವಾದ ಸಂಕಟಗಳನ್ನು ಶೋಧಿಸುತ್ತಿರುವ ಪ್ರಯೋಗಶೀಲ ಲೇಖಕ. ಮನುಷ್ಯ ಸ್ವರೂಪದ ನಿಜದಶನ ಸಾಧ್ಯವಾಗುವುದು ಅವನ ನಿತ್ರಾಣ, ದೈನ್ಯ, ನಿಸ್ಸಹಾಯಕ ಅವಸ್ಥೆಗಳಲ್ಲಿ ಎಂದು ಇವನು ಭಾವಿಸುತ್ತಾನೆಂಬುದು Mollony, Malone Dies, Krapp’s Last Tape ಎನ್ನುವ ಕೃತಿಗಳಿಂದ ತಿಳಿಯುತ್ತದೆ. ಈ ಎಲ್ಲ ಕೃತಿಗಳ ನಾಯಕರೂ ಒಂದೋ ವೃದ್ಧರು, ಅಥವಾ ನಿರ್ಬಲರಾದ ತಪ್ತರು ಎಂಬುದು ಗಮನಾರ್ಹ. ಯೌವನದ ಹುರುಪಿನಲ್ಲಿ ಮರೆಯಾಗಿ ಅಡಗಿರುವ ಮನುಷ್ಯನ ನಿಜವಾದ ಪಾಡು ಅವನ ದುರ್ದೆಶೆಯಲ್ಲಿ ವ್ಯಕ್ತವಾಗುತ್ತದೆ ಎಂದು ಬೆಕೆಟ್ ಭಾವಿಸುವುದೇ ಇದಕ್ಕೆ ಕಾರಣ. ಈ ದೃಷ್ಟಿಯಿಂದ ನೋಡಿದಲ್ಲಿ ಬೆಕೆಟ್ ಬಾದಲೇರ್‌ಎಲಿಯಟ್ಟರಂತೆ ಕ್ರಿಶ್ಚಿಯನ್ ಪರಂಪರೆಗೆ ಸೇರಿದ ಲೇಖಕ ಎನ್ನಿಸುತ್ತದೆ. ಆದ್ದರಿಂದ ಅಹಂಕಾರಜನ್ಯವಾದ ಆದರ್ಶವಾದವನ್ನೂ ಪ್ರಗತಿಪರ ರಾಜಕೀಯ ತತ್ವಗಳನ್ನೂ ಇವನು ಅನುಮಾನದಿಂದ ಕಾಣುತ್ತಾನೆ.

ಬೆಕೆಟ್ಟನ ಹುಡುಕಾಟ ಮಾತೃಭೂಮಿ, ಮಾತೃಭಾಷೆಗಳನ್ನು ಬದಲಾಯಿಸುವ ತನಕವೂ ಹೋಗಿದೆ. ಇಂಗ್ಲಿಷ್ ಭಾಷೆ ತೀರ ನಯವಾಗಿ, ಅಮೂರ್ತವಾಗಿ ಸತ್ತಿದೆ ಎನ್ನಿಸಿದ್ದರಿಂದ ತನ್ನ ಯುದ್ಧೋತ್ತರ ಕೃತಿಗಳನ್ನೆಲ್ಲ ತಾನು ಕಲಿತ ಭಾಷೆಯಾದ ಫ್ರೆಂಚಿನಲ್ಲಿ ಬರೆದೆ ಎನ್ನುತ್ತಾನೆ ಬೆಕೆಟ್, ತನ್ನ ಅನುಭವದ ಲೋಕವನ್ನು ಬೆತ್ತಲೆಗೊಳಿಸಿ ನಿಷ್ಠುರವಾಗಿ ನೋಡಬೇಕೆಂದು ಬಯಸುವ ಇವನ ಪ್ರತಿಭೆಗೆ ಮಾತೃಭಾಷೆಯ ಮೋಹಕವಾದ ಜಾಲದಲ್ಲಿ ಸಿಕ್ಕಿಬೀಳುತ್ತಿದ್ದ ತನ್ನ ಹಿಂದಿನ ಬರವಣಿಗೆಯ ಕ್ರಮವನ್ನು ಫ್ರೆಂಚಿನ ಮೂಲಕ ಬದಲಿಸಿಕೊಳ್ಳಬೇಕಾಯಿತು. ಹೀಗೆ ಅವನು ಬರೆದ ಫ್ರೆಂಚ್ ಕೃತಿಗಳಲ್ಲಿ ಹಲವನ್ನು ಅವನೇ ಇಂಗ್ಲಿಷಿಗೆ ಭಾಷಾಂತರಿಸಿದ್ದಾನೆ.

ಬೆಕೆಟ್ ದಿಗ್ಭ್ರಮೆಗೊಳಿಸುವಷ್ಟು ನವ್ಯಲೇಖಕನಾದರೂ ಯೂರೋಪ್ ಸಾಹಿತ್ಯದ ಪರಂಪರೆಯಿಂದ ಸತ್ವವ್ನು ಸಾಕಷ್ಟು ಪಡೆದವನು. ಇಟಲಿಯ ಪುರಾತನ ಡಾಂಟೆ, ಫ್ರಾನ್ಸಿನ ಆಧುನಿಕ ಫ್ರೂಸ್ಟ್, ಐರ್ಲೆಂಡಿನ ಕಟುವಾದ ಮಾತಿನ ಸ್ವಿಫ್ಟ್, ಕಾದಂಬರಿಯನ್ನು ತಲೆಕೆಳಗು ಮಾಡಿದ ಲೀಲಾಪ್ರವೃತ್ತಿಯ ಸ್ಟರ್ನ್, ಯೂರೋಪಿನ ತತ್ವ ಶಾಸ್ತ್ರಜ್ಞರು – ಎಲ್ಲರಿಂದಲೂ ಬೆಕೆಟ್ ಪ್ರೇರಿತನಾಗಿದ್ದಾನೆ.

ಜಾಯ್ಸನ ನಿಕಟವರ್ತಿಯಾಗಿದ್ದ ಬೆಕೆಟ್, ೨೦ರ ದಶಕದ ಪ್ರಯೋಗಶೀಲ ಪರಂಪರೆಯ ಕೊನೆಯ ಬರಹಗಾರ ಎನ್ನಬಹುದು. ಜಾಯ್ಸ್‌ನಂತೆಯೇ ಯಾವ ತಾತ್ವಿಕ, ರಾಜಕೀಯ, ಸಾಮಾಜಿಕ, ಧಾರ್ಮಿಕ ಕಟ್ಟುಪಾಡುಗಳಿಗೂ ಬದ್ಧನಾಗದೆ ಒಂಟಿಯಾಗಿ ನಿಂತಿರುವ ಸಾಹಿತಿ ಇವನು. ಸಾಹಿತ್ಯದ ಉದ್ಯೋಗ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ, ಅವುಗಳನ್ನು ಕುರಿತು ಚಿಂತಿಸುವುದು; ಸಾಹಿತ್ಯ ವಿಮರ್ಶೆಯ ಕಸಬು ಕಲಾಕೃತಿಗಳ ಅರ್ಥಗಳನ್ನು ವಿವರಿಸುವುದಿಲ್ಲ, ಅವುಗಳ ಬಗ್ಗೆ ಮಾಡುವ ಚಿಂತನೆ – ಎನ್ನುತ್ತಾನೆ ಬೆಕೆಟ್.

ಫ್ರೂಸ್ಟನ ಬಗ್ಗೆ ಬರೆಯುತ್ತ ಬೆಕೆಟ್ ಹೇಳಿರುವ ಮಾತುಗಳು ಇವು : ಕಲೆ ಟಿಲಿಪಸ್ಸಿನ ಈಟಿ ಇದ್ದ ಹಾಗೆ. ಟಿಲಿಪಸ್ಸಿನ ಈಟಿ ತಿವಿದು ಗಾಯಗೊಳಿಸುವ ಸಾಧನ ಮಾತ್ರವಲ್ಲ, ಈ ಗಾಯದ ನಿಧಾನ ಕೂಡ. ವಾಸ್ತವ ಮಾರ್ಗದ ಕಲೆ ಅನುಭವದ ನಿರ್ಜೀವ ಮಾಹಿತಿಯನ್ನು ಮಾತ್ರ ಕೊಟ್ಟೀತು; ಆದರೆ ವಕ್ರಮಾರ್ಗದ ಸಾಂಕೇತಿಕ ಕಲೆ ಜೀವಂತ ಸತ್ಯವನ್ನು ದಟ್ಟವಾಗಿ ಸೃಷ್ಟಿಸುತ್ತದೆ. ೧೯೩೨ರಲ್ಲಿ ಇವನು ಸಹಿ ಹಾಕಿದ ಒಂದು ಮ್ಯಾನಿಫೆಸ್ಟೊ ಕಲೆಯ ದರ್ಶನ ಸ್ವಯಂಸಿದ್ಧವೆಂದೂ, ಬದುಕಿನ ಬಹಿರಂಗ ಸ್ವರೂಪಕ್ಕಿಂತ ಅಂತರಂಗ ಹೆಚ್ಚು ಮಹತ್ವಪೂರ್ಣವಾದದ್ದೆಂದೂ, ಕಲೆ ಸುಪ್ತಪ್ರಜ್ಞೆಯಿಂದ ಉಕ್ಕಿ ಬರತಕ್ಕದ್ದೆಂದೂ ಸಾರುತ್ತದೆ. ಈ ದೃಷ್ಟಿಯಿಂದ ನಮ್ಮ ವಾಸ್ತವಿಕ ಕಲ್ಪನೆಗಳನ್ನೆಲ್ಲ ತಲೆಕೆಳಗು ಮಾಡಿಬಿಡಬಲ್ಲ, ಅನುಭವದ ಜಡ್ಡನ್ನು ಉತ್ತಬಲ್ಲ ಸರ‍್ರಿಯಲಿಸ್ಟ್ ಕಲೆ ಬೆಕೆಟ್‌ಗೆ ಅವಶ್ಯವಾಯಿತು.

ಆಲ್‌ಫ್ರೆಡ್ ಜಾರಿ ಮತ್ತು ಅಂಟೋನಿನ್ ಆರ್ಟೊ ಅವರ ನಾಟಕಗಳು ಮತ್ತು ಪ್ರಬಂಧಗಳು ಬೆಕೆಟ್ಟಿಗೆ ತನ್ನ ವಿಚಾರಗಳನ್ನು ಸ್ಪಷ್ಟಪಡಿಸಿಕೊಳ್ಳಲು ಸಹಾಯವಾದುವು. ಅಂದರೆ ಅಸಂಗತ ನಾಟಕದ ಮುಖ್ಯ ಸ್ವರೂಪದ ರೂಪರೇಷೆಗಳು ಈ ಇಬ್ಬರು ಲೇಖಕರಲ್ಲಿ ಸಿಗುತ್ತವೆ. ಅರ್ಟೊ ೧೯೩೮ ರಲ್ಲಿ The Theatre and Its Double ಎನ್ನುವ ಕ್ರಾಂತಿಕಾರಿ ಗ್ರಂಥವನ್ನು ಪ್ರಕಟಿಸಿದ. ನಾಟಕವೆಂದರೆ ಕೇಳುವುದಕ್ಕೆ ಮಾತ್ರವಲ್ಲದೆ ನೋಡುವುದಕ್ಕಾಗಿಯೂ ಇರುವ ಕಲೆ ಎಂದು ಸ್ಪಷ್ಟವಾಗಿ ಸಾಧಿಸಿದ ಪುಸ್ತಕದ ಇದು.

ಆರ್ಟೋನ ಒಟ್ಟು ವಿಚಾರವನ್ನು ಹೀಗೆ ಸಂಗ್ರಹಿಸಬಹುದು; ಅಸಂಗತವಾದದ್ದು ಬೆರಗು ಗೊಳಿಸುತ್ತದೆ; ಜಾಡಿಗೆ ಬಿದ್ದ ಬುದ್ಧಿಯನ್ನು, ಸ್ಮೃತಿಯನ್ನು ಹೊಸದಿಕ್ಕಿನಲ್ಲಿ ದುಡಿಸಿಕೊಂಡು ಅಪರಿಚಿತ ಸತ್ಯಗಳು ನಮಗೆ ಕಾಣುವಂತೆ ಮಾಡುತ್ತದೆ; ದೈವದಲ್ಲಿ ನಂಬಿಕೆ ಮರೆಯಾಗಿ ಹೋದ ನಮ್ಮ ಪ್ರಪಂಚದ ಮೂಲಭೂತ ತಾತ್ವಿಕ ಸಮಸ್ಯೆಗಳನ್ನು ಎತ್ತುತ್ತದೆ.

ಇದು ಸಾಧ್ಯವಾಗಲು ಆರ್ಟೋ ಹಿಂಸೆಯ ಚಿತ್ರಣ ರಂಗಭೂಮಿಯಲ್ಲಿ ಅನಿವಾರ್ಯವೆನ್ನುತ್ತಾನೆ. ಯಾಕೆಂದರೆ ಹಿಂಸೆಯ ಮುಖಾಂತರ ಮಾತ್ರ ನಮ್ಮ ಮನಸ್ಸು ಬೆಚ್ಚಿ ತನ್ನ ಹೊಯ್ದಾಟದ ಮೂಲದಲ್ಲಿ ಏನಿದೆ ಎಂಬುದನ್ನು ಗ್ರಹಿಸಬಲ್ಲುದು. ಆದರೆ ರಂಗಭೂಮಿಯ ಮೇಲೆ ಬರುವ ಕ್ರೌರ್ಯ ದ್ವೇಷರಹಿತವಾಗಿರತಕ್ಕದ್ದು; ಅನುಭಾವಿಯ ಕಾಮುಕತೆಯಂತೆ ಶುದ್ಧವಾಗಿ ತಾತ್ವಿಕವಾಗಿ ಇರತಕ್ಕದ್ದು.

ಆರ್ಟೋ ರಂಗಭೂಮಿ ತನ್ನದೇ ಭಾಷೆಯನ್ನಾಡಬಲ್ಲ ಜೀವಂತ ಸ್ಥಳವೆನ್ನುತ್ತಾನೆ. ಆದ್ದರಿಂದ ನಾಟಕಕಾರ ಅದರ ವಿವಿದ ಅಂಗಗಳಿಗೆ ತಮ್ಮದೇ ಆದ ಮಾತುಗಳನ್ನು ಆಡಲು ಅವಕಾಶ ಮಾಡಿಕೊಡಬೇಕು. ಬೂರ್ಶ್ವಾ ವರ್ಗದ ಮನರಂಜನೆಗೆಂದು ಇರುವ ರಂಗಭೂಮಿ ಮನುಷ್ಯನ ಪ್ರಾಕೃತ ಪ್ರವೃತ್ತಿಗಳನ್ನು ಚಿತ್ರಿಸಲು ಅಂಜಿ ಸಪ್ಪೆಯಾಗಿದೆ. ಪ್ರಾಚೀನ ರಂಗಭೂಮಿಯಂತೆಯೇ ನಮ್ಮ ರಂಗಭೂಮಿ ಕೂಡ ನಯನಾಜೂಕುಗಳನ್ನು ಧಿಕ್ಕರಿಸಿ ಪ್ರೇಕ್ಷಕನಲ್ಲಿ ದಾರ್ಶನಿಕ ಭಯವನ್ನು ಹುಟ್ಟಿಸಬೇಕು; ಹುಟ್ಟು ಮತ್ತು ಸಾವಿನ ರಹಸ್ಯಗಳನ್ನು ಎಚ್ಚರವಾಗಿಡಬೇಕು. ಹೀಗೆ ಪ್ರೇಕ್ಷಕನಲ್ಲಿ ಭಯವನ್ನು ಉಂಟುಮಾಡುವುದರ ಮುಖಾಂತರ ಮಾತ್ರ ಅವನನ್ನು ತನ್ನ ಅದೃಷ್ಟದ ಬಗ್ಗೆ ಚಿಂತಿಸುವಂತೆ ಮಾಡುವುದು ಸಾಧ್ಯ. ರಂಗಭೂಮಿ ‘ಕ್ರೂರ’ವಾಗಬೇಕು : ಅಂದರೆ, ಇಂತಹ ಒಳಗುದಿಯನ್ನು, ತಳಮಳವನ್ನು ಉಂಟುಮಾಡುವ ಸಾಮರ್ಥ್ಯ ಹೊಂದಿರಬೇಕು ಎಂದು ಅರ್ಥ.

ಅಬ್ಸರ್ಡ್ ನಾಟಕಕಾರರು ಅಲ್ಪವಾದ ಹಾಸ್ಯ, ಅಥವಾ ಮೆಲೊಡ್ರಾಮಗಳ ಮುಖಾಂತರ ಪ್ರೇಕ್ಷಕರನ್ನು ತಣಿಸುವ ರಂಗಭೂಮಿಯನ್ನು ಧಿಕ್ಕರಿಸುತ್ತಾರೆ. ಅರ್ಥಪೂರ್ಣವಾದ ನಗುವೆಂದರೆ ಅರಾಜಕ, ನಿರಂಕುಶ ನಗು. ಭಯದಿಂದ ಹಿಂದೆಗೆಯದ ಜೀವಂತ ರಂಗಭೂಮಿ ಹೀಗೆ ಅರಾಜಕ ಖುಷಿಯಿಂದ ನಕ್ಕು, ನಗಿಸಿ ನಿಜವಾದ ಟ್ರಾಜಿಕ್ ಅನುಭವವನ್ನು ಸೃಷ್ಟಿಸುತ್ತದೆ.

ಆರ್ಟೋನ ಈ ತತ್ವಗಳು ಜೀನೆ, ಅಯನೆಸ್ಕೊ, ಅಡವೊವ್, ಬೆಕೆಟ್ಟರ ಮೇಲೆ ಗಾಢವಾದ ಪ್ರಭಾವ ಮಾಡಿವೆ. ಆರ್ಟೋನಿಂದ ಪ್ರಭಾವಿತನಾದ ಬ್ಲಿನ್ ಎನ್ನುವ ನಿರ್ದೇಶಕ ಬೆಕೆಟ್ಟನ Waiting for Godot ಅನ್ನು ರಂಗದ ಮೇಲೆ ತಂದ ಎನ್ನುವುದು ಗಮನಾರ್ಹ.

ಬೆಕೆಟ್ಟನ ನಾಟಕಗಳಿಗೆ ಅತ್ಯಂತ ಸರಳವಾದ ರಂಗಸಜ್ಜಿಕೆ ಸಾಕು. Waiting for Godot ನಾಟಕ ನಡೆಯುವುದು ರಸ್ತೆಯೊಂದರ ಬದಿಯಲ್ಲಿ; ಹಿನ್ನೆಲೆಯಲ್ಲಿ ಒಂದು ಮರ ಮಾತ್ರ ಇದೆ. Endgame ನಲ್ಲಿ ನಾವು ಕಾಣುವುದು ಒಂದು ಖಾಲಿ ಕೋಣೆ, ಕಸದ ತೊಟ್ಟಿಗಳು, ಮತ್ತು ಹ್ಯಾಮ್ ಕೂರುವ ಕುರ್ಚಿ. Krapp’s Last Tape ನಲ್ಲಿ ಒಬ್ಬ ಹಣ್ಣಾದ ಮುದುಕ ತನ್ನ ಯೌವನದ ಕಾಲದ ಟೇಪನ್ನು ಕೇಳಿಸಿಕೊಳ್ಳುತ್ತ ಟೇಪ್ ರಿಕಾರ್ಡರಿನ ಎದುರು ಕೂತಿರುತ್ತಾನೆ. ಸಾಂಪ್ರದಾಯಿಕ ರಂಗಭೂಮಿ ನೈಜತೆಯ ಭ್ರಾಂತಿಯನ್ನು ಉಂಟುಮಾಡಲು ಶ್ರಮಿಸುತ್ತದೆ; ಆದರೆ ಬೆಕೆಟ್ಟಿಗೆ ರಂಗಸಜ್ಜಿಗೆ ವಾಸ್ತವಿಕತೆಯ ಉದ್ದೇಶಪೂರ್ವಕ ಅಣಕಾಟ, ಗೇಲಿ, ಇದು ರಂಗಭೂಮಿ, ಇವರು ಪಾತ್ರಧಾರರು ಎಂಬುದನ್ನು ಬೆಕೆಟ್ ಮರೆಯುವುದೇ ಇಲ್ಲ; ಬೆಕೆಟ್ ನಾಟಕದ ನಟರೂ ಮರೆಯುವುದಿಲ್ಲ.

ಬ್ಲಿನ್ Waiting for Godot ನಾಟಕವನ್ನು ಮೊದಲು ನಿರ್ದೇಶಕನಕ್ಕೆ ಆರಿಸಿಕೊಳ್ಳಲು ಕಾರಣ : ಕಡಿಮೆ ಖರ್ಚಿನಲ್ಲಿ ಈ ನಾಟಕವನ್ನು ರಂಗ್ಕೆ ತರಲು ಸಾಧ್ಯ ಎಂಬುದು. ಕೇವಲ ಐದು ಜನ ಗಂಡು ಪಾತ್ರಧಾರಿಗಳು ಮಾತ್ರ ಈ ನಾಟಕಕ್ಕೆ ಸಾಕು. ಬ್ಲಿನ್‌ನಿಗೆ ಮೊದಲು ಈ ನಾಟಕದ ಆಳವಾದ ಯಾವ ಅರ್ಥಗಳೂ ಹೊಳೆದಿರಲಿಲ್ಲವಂತೆ. ಆದರೆ ಬ್ಲಿನ್ ಮಾಡಿದ ಎಲ್ಲ ತಿದ್ದುಪಡಿಗಳನ್ನೂ ಒಪ್ಪಿಕೊಂಡ ಬೆಕೆಟ್‌ನಾಟಕವನ್ನು ಇಂಗ್ಲಿಷಿಗೆ ಭಾಷಾಂತರಿಸಿದ. ನಾಟಕದ ಮುಖ್ಯಪಾತ್ರಗಳಾದ ಎಸ್ಟ್ರಗನ್ ಮತ್ತು ಲಾಡಿಮೀರರು ಅಲೆಮಾರಿ ಬೇವರ್ಸಿಗಳೆಂಬುದು ಬ್ಲಿನ್ ಕೊಟ್ಟ ಸೂಚನೆ.

Waiting for Godot ಕಥೆಯೇ ಇಲ್ಲದ ನಾಟಕ. ಘಟನೆಯಿಂದ ಘಟನೆಗೆ ಭಾವನೆಗಳು ಬೆಳೆಯುತ್ತ ಕೊನೆಗೆ ಶಿಖರಸ್ಥಿತಿಗೆ ಮುಟ್ಟುವ ಸಾಂಪ್ರದಾಯಿಕ ಶಿಲ್ಪ ಈ ನಾಟಕದಲ್ಲಿ ಇಲ್ಲ. ನಾಟಕದ ಸ್ಥಾಯಿಭಾವ ಬೇಸರಿಕೆ; ಮನುಷ್ಯನ ಅನಿಶ್ಚಿತಿ. ತೆರೆಯೆದ್ದೊಡನೆ ಕಾಣುವುದು ಯಾವುದೋ ಒಂದು ರಸ್ತೆ, ಎಲೆಯಿಲ್ಲದ ಒಂದು ಮರ, ಬೂಟನ್ನು ಕಾಲಿನಿಂದ ಕಳಚಲು ಒದ್ದಾಡುತ್ತ ಏದುಸಿರು ಬಿಡುವ ಒಬ್ಬ ಬೇವರ್ಸಿ. ದಾಪುಕಾಲು ಹಾಕುತ್ತ ಇನ್ನೊಬ್ಬ ಬೇವರ್ಸಿ ಪ್ರವೇಶಿಸುತ್ತಾನೆ. ಬೂಟನ್ನು ಬಿಚ್ಚಲಾರದ ಗೋಳು, ಬಿಟ್ಟುಹೋದನೆಂದು ತಿಳಿದ ಸಂಗಾತಿ ಹಿಂದಕ್ಕೆ ಬಂದ ಸಂತೋಷ. ನೇಣುಹಾಕಿಕೊಂಡು ಸಾಯಬೇಕೆಂಬ ವಿಚಾರ, – ಹೀಗೆ ಇಬ್ಬರ ನಡುವೆ ಮಾತು ಬೆಳೆಯುತ್ತದೆ. ಹೋಗುವ ಮಾತಾಡುತ್ತಾರೆ, ಇರುವ ಮಾತಾಡುತ್ತಾರೆ, ಕಾಯುವ ಮಾತಾಡುತ್ತಾರೆ, ಏಸುಕ್ರಿಸ್ತ, ಪಾಪಿಗಳ ಉದ್ಧಾರ, ಕ್ಯಾರೆಟ್ಟು, ಹಿಂದೊಮ್ಮೆ ಕೆಲಸದಲ್ಲಿದ್ದ ದ್ರಾಕ್ಷಿತೋಟ, ಯೌವನ, ಮುಪ್ಪು, ಷಂಡತನ – ಮಾತು ಅಸಂಬದ್ಧವಾಗಿ, ಕೆಲವೊಮ್ಮೆ ಬೇಸರಿಕೆಯ ರಗಳೆಯಾಗಿ, ಕೆಲವೊಮ್ಮೆ ಆತುರ ಹೊಗೆಯಾಡುವ ಉದ್ವಿಗ್ನತೆಯಾಗಿ ಸಂಗೀತದ ಪಲ್ಲವಿಯಂತೆ ಪುನರಾವರ್ತಿತವಾಗುತ್ತದೆ. ಒಬ್ಬ ಈಗ ಹೇಳಿದ ಮಾತುಗಳನ್ನೆ ಇನ್ನೊಬ್ಬ ಆಮೇಲೆ ಮರೆಯುತ್ತಾನೆ, ಯಾವುದು ನಿಜ, ಯಾವುದು ಸುಳ್ಳು ಎಂಬುದು ತಿಳಿಯಲಾರದಂತೆ ಮಾತು ಗಂಟಾಗುತ್ತದೆ, ಗೋಜಲಾಗುತ್ತದೆ. ಇಬ್ಬರೂ ತಾವು ಗೋಡೋಗಾಗಿ ಕಾಯುತ್ತಿದ್ದೇವೆ ಎಂದುಕೊಳ್ಳುತ್ತಾರೆ. ಆದರೆ ಗೋಡೋ ಯಾರು, ಅವನಿಗಾಗಿ ಎಲ್ಲಿ ಯಾಕೆ ಕಾದಿರಬೇಕು, ಯಾವತ್ತು ಕಾದಿರಬೇಕು – ಎಲ್ಲವೂ ಅಸ್ಪಷ್ಟ. ನಿರರ್ಗಳವಾದ ಮಾತು ಇದ್ದಕ್ಕಿದ್ದಂತೆ ನಿಂತುಬಿಡುತ್ತದೆ. ತಮಾಷೆಯಂತೆ ಕಾಣುವ ಘಟನೆಗಳ ಉದ್ದಕ್ಕೂ ತೀವ್ರವಾದ ಅಸ್ವಸ್ಥತೆ, ಬೇಸರಿಗೆ, ಬಳಲಿಕೆ ಕಾಣಿಸಿಕೊಳ್ಳುತ್ತದೆ.

ಅಡ್ಡಾದಿಡ್ಡಿಯಾಗಿ ಹೀಗೆ ಮಾತು ಬೆಳೆಯುತ್ತಿದ್ದಂತೆಯೇ ಒಬ್ಬ ಪ್ರವೇಶಿಸುತ್ತಾನೆ. ಅವನ ಕತ್ತಿಗೆ ಹಗ್ಗ ಬಿಗಿದಿದೆ, ಕೈಯಲ್ಲಿ ಬುಟ್ಟಿ, ಭಾರವಾದ ಬ್ಯಾಗು, ಮಡಿಸುವ ಒಂದು ಸ್ಟೂಲಿದೆ. ಇವನು ಮಧ್ಯದ ರಂಗಕ್ಕೆ ಬರುವಷ್ಟು ಹೊತ್ತಿಗೆ ಹಗ್ಗದ ಇನ್ನೊಂದು ತುದಿಯನ್ನು ಹಿಡಿದವನೊಬ್ಬ – ಕೈಯಲ್ಲಿ ಚಾಟಿ ಹಿಡಿದವ – ಕಾಣಿಸಿಕೊಳ್ಳುತ್ತಾನೆ. ಚಾಟಿ ಹಿಡಿದಿರುವಾತ ಐರಿಷ್ ಜಮೀನು ದಾರರ ಅಪರಾವತಾರದಂತಿರುವ ದರ್ಪವಂತ. ಹೆಸರು ಪೋಸೊ. ಇವನ ಮಾತು, ನಡೆ, ನುಡಿ ಎಲ್ಲವೂ ಗತ್ತಿನದು. ಇನ್ನೊಬ್ಬ ಲಕ್ಕಿ – ಪೋಸೋನ ಗುಲಾಮ. ಎಸ್ಟ್ರಗನ್ ಮತ್ತು ಲಾಡಿ ಮಿರ್‌ಗೋಡೋಗಾಗಿ ಕಾಯುತ್ತಿರುವ ಇಬ್ಬರು ಬೇವಸಿಗಳು – ಪೋಸೋನೇ ಗೋಡೋ ಇರಬಹುದೆ ಎಂದು ಕಾತರರಾಗಿ ಈ ಯಜಮಾನ ಗುಲಾಮರ ವಿಚಿತ್ರ ವರ್ತನೆಯನ್ನು ಕುತೂಹಲದಿಂದ ನೋಡುತ್ತಾರೆ. ಲಕ್ಕಿ ಯಂತ್ರದಂತೆ ಪೋಸೋನನ್ನು ಅನುಸರಿಸುತ್ತಾನೆ. ಲಕ್ಕಿಯ ವರ್ತನೆ ಒಂದು ಅರ್ಥಹೀನ ಪ್ಯಾಂಟೊಮೈಮ್.

ಸ್ಟೂಲಿನ ಮೇಲೆ ಆರಾಮಾಗಿ ಕೂತು ಪೋಸೋ ರಾವಿನಿಂದ ಕೋಳಿಯನ್ನು ತಿನ್ನುತ್ತಾನೆ. ಲಕ್ಕಿಗೆ ಎಲುಬಿನ ಚೂರುಗಳನ್ನು ಎಸೆಯುತ್ತಾನೆ. ಎಸ್ಟ್ರಗನ್ ಅದನ್ನೆತ್ತಿ ಆಸೆಯಿಂದ ಚೀಪುತ್ತಾನೆ. ಲಕ್ಕಿಯ ಕತ್ತಿನ ಸುತ್ತ ಹಗ್ಗದಿಂದಾಗಿ ವ್ರಣವಾಗಿರುವುದನ್ನು ಕರುಣೆಯಿಂದ ಬೇವರ್ಸಿಗಳು ಪರೀಕ್ಷಿಸುತ್ತಾರೆ. ಆಗ ಲಕ್ಕಿ ಒಬ್ಬ ಬೇವರ್ಸಿಗೆ ಛಟೀರನೆ ಬಿಗಿಯುತ್ತಾನೆ.“ಏ ಹಂದಿ, ಚಿಂತಿಸು” ಎಂದು ಯಜಮಾನ ಹೇಳಿದೊಡನೆ ಲಕ್ಕಿ ಮಾತಾಡಲು ಪ್ರಾರಂಭಿಸುತ್ತಾನೆ. ಅವನ ನಿರರ್ಗಳ ದೀರ್ಘ ಭಾಷಣ ಬರೀ ಜಾರ್ಗನ್ನುಗಳ ಕಲಸುಮೇಲೋಗರ. ಅದರ ಅಸ್ಪಷ್ಟ ಸಂದೇಶ ಮನುಷ್ಯನ ನಾಗರಿಕತೆ ಅವನತಿಯ ದಾರಿ ಹಿಡಿದಿದೆ ಎಂದು. ಪೋಸೋ ಮತ್ತು ಲಕ್ಕಿ ಹೊರಟುಹೋದ ಮೇಲೆ ಒಬ್ಬ ಹುಡುಗ ಪ್ರವೇಶಿಸುತ್ತಾನೆ. ಗೋಡೋನ ವಿಷಯವನ್ನು ಹುಡುಗನೂ ಎತ್ತುತ್ತಾನೆ. ಆದರೆ ಹುಡುಗ ಯಾರು, ಅವನು ತರುವ ವಾರ್ತೆಯೇನು ಅಸ್ಪಷ್ಟವಾಗಿಯೇ ಉಳಿಯುತ್ತದೆ. ಒಂದು ಕ್ಷಣದಲ್ಲೇ ಬೆಳಕು ಆರಿ, ಕತ್ತಲಾಗಿ, ಚಂದ್ರೋದಯವಾಗುತ್ತದೆ. ಒಬ್ಬ ಬೇವರ್ಸಿ ‘ಹೋಗೋಣವೇ?’ ಎನ್ನುತ್ತಾನೆ. ಇನ್ನೊಬ್ಬ ‘ಆಗಲಿ’ ಎನ್ನುತ್ತಾನೆ. ಆದರೆ ಇಬ್ಬರೂ ಚಲಿಸುವುದಿಲ್ಲ. ತೆರೆ ಬೀಳುತ್ತದೆ.

ಎರಡನೆ ಅಂಕದಲ್ಲಿ ಆಗಿರುವ ಬದಲಾವಣೆಯೆಂದರೆ ಮರದಲ್ಲಿ ಚಿಗುರಿದ ನಾಲ್ಕೈದು ಎಲೆಗಳು ಮಾತ್ರ. ಈ ನಾಟಕದಲ್ಲಿ ಚಿಗುರುವುದು ಮರ ಮಾತ್ರ ಎಂಬುದು ಗಮನಿಸಬೇಕಾದ್ದು. ಇಬ್ಬರು ಬೇವರ್ಸಿಗಳು ಮತ್ತದೇ ಮಾತುಗಳನ್ನು ಆಡುತ್ತಾರೆ. ಪೋಸೋ ಮತ್ತು ಲಕ್ಕಿಯರನ್ನು ನೋಡಿದ್ದ ಯಾವುದೋ ಕಾಲದಲ್ಲಿ ನಡೆದಿದ್ದ ಘಟನೆಯೆಂಬಂತೆ ಅವರು ಚರ್ಚಿಸುತ್ತಾರೆ. ಇರುವ ವಿಚಾರ, ಹೋಗುವ ವಿಚಾರ, ಸಾಯುವ ವಿಚಾರ, ಗೋಡೋಗಾಗಿ ಕಾಯುವ ವಿಚಾರ ಮತ್ತೆ ಎತ್ತುತ್ತಾರೆ. ಲಕ್ಕಿ ಮತ್ತು ಪೋಸೋ ಮತ್ತೆ ಪ್ರವೇಶಿಸುತ್ತಾರೆ. ಹಿಂದಿನ ದರ್ಪವಾಗಲಿ ಗತ್ತಾಗಲಿ ಪೋಸೋನಲ್ಲಿ ಈಗ ಇಲ್ಲ. ಅವನು ಈಗ ಕುರುಡ; ಲಕ್ಕಿಯಿಲ್ಲದೆ ಅವನ ಪಥ ಸಾಗುವುದಿಲ್ಲ. ಮತ್ತು ಅದೇ ಹುಡುಗ ಬರುತ್ತಾನೆ. ಬೇವರ್ಸಿಗಳು ಅವನ ಹತ್ತಿರ ಗೋಡೋನ ಮಾಹಿತಿ ಕೇಳುತ್ತಾರೆ. ಅವನಿಗೆ ಗಡ್ಡವಿದೆಯೆ? ಅವನ ಬಣ್ಣವೇನು? ಒಳ್ಳೆಯ ಯಜಮಾನನೆ? – ಇತ್ಯಾದಿ. ಹುಡುಗ ಹೊರಟು ಹೋಗುತ್ತಾನೆ. ಮೊದಲನೆ ಅಂಕದ ಕೊನೆಯಲ್ಲಿಯಂತೆಯೇ ಈಗಲೂ ಒಬ್ಬ ಬೇವರ್ಸಿ ‘ಹೋಗೋಣವೆ?’ ಎಂದು ಕೇಳುತ್ತಾನೆ. ಇನ್ನೊಬ್ಬ ‘ಆಗಲಿ ಎನ್ನುತ್ತಾನೆ. ಆದರೆ ಹಿಂದಿನಂತೆ ಇಬ್ಬರೂ ಚಲಿಸುವುದಿಲ್ಲ. ತೆರೆ ಬೀಳುತ್ತದೆ.

ನಾಟಕ ಗಹನವಾಗಿಯೇ ಕೊನೆಗೂ ಉಳಿಯುತ್ತದೆ. ವಿವರಿಸಿದ ಕೂಡಲೆ ತನ್ನ ಗುಟ್ಟನ್ನು ಬಿಟ್ಟುಕೊಟ್ಟು ಸರಳವಾಗಿಬಿಡುವ ಒಗಟಿನಂತಲ್ಲ ಈ ನಾಟಕ. ತನ್ನ ರಹಸ್ಯವನ್ನು ಬಚ್ಚಿಟ್ಟು ಕೊಂಡು ನಮ್ಮನ್ನು ಚಿಂತಿಸಲು ಹಚ್ಚುವ ಶಕ್ತಿ ಈ ನಾಟಕಕ್ಕಿದೆ. ಕಣ್ಣಿಗೆ, ಕಿವಿಗೆ ಮೊದಲಿನಿಂದ ಕೊನೆಯವರೆಗೂ ಹೊಸದಾಗಿರುವ ಈ ನಾಟಕಕ್ಕೆ ಜಡ್ಡಾದ ನಮ್ಮ ಭಾವನೆಗಳನ್ನು ಪುಸಲಾಯಿಸಿ ಎಚ್ಚರಿಸುವ, ಕಾಡುವ ಸತ್ವ ಇದೆ. ಕೆಲವೊಂದು ಘಟನೆಗಳು ಅಸ್ಪಷ್ಟವಾಗಿ ಅರ್ಥವಾಗುತ್ತವೆ. ಈಗ ದರ್ಪದಿಂದಿದ್ದು ಮುಂದೆ ಕುರುಡಾಗುವ ಪೋಸೋ ದಬ್ಬಾಳಿಕೆಯ ನಿರರ್ಥಕತೆಯನ್ನು ಸೂಚಿಸುತ್ತಾನೆ. ಪೋಸೋ ಸೊರಗಿದ ಗುಲಾಮನ ಮೇಲೆ ಅವಲಂಬಿಯಾದ ಸೋತ ಯಜಮಾನನಾದರೆ, ಲಕ್ಕಿ ಬುದ್ಧಿಜೀವಿಯ ದ್ರಾಬೆತನವನ್ನು ಸಂಕೇತಿಸುತ್ತಾನೆ. ಒಬ್ಬನನ್ನು ಬಿಟ್ಟು ಇನ್ನೊಬ್ಬ ಇರಲಾರ. Endgame ನಲ್ಲಿ ಹ್ಯಾಮ್ ಮತ್ತು ಕ್ಲೊವ್‌ರ ಸಂಬಂಧ ಈ ಬಗೆಯದೆ. ಹ್ಯಾಮ್ ನಿಲ್ಲಲಾರ, ಕ್ಲೊವ್ ಕೂರಲಾರ. ಎಸ್ಟ್ರಗನ್ ಮತ್ತು ಲಾಡಿಮೀರರು ಕೂಡ ಪರಸ್ಪರ ದ್ವೇಷಿಸುವ, ಪ್ರೀತಿಸುವ, ಆದರೆ ಒಬ್ಬರನ್ನೊಬ್ಬರು ಬಿಟ್ಟಿರಲಾರದ ಬಂಧಿತರು. ಒಬ್ಬ ತೋರ, ಇನ್ನೊಬ್ಬ ಸಪುರ; ಒಬ್ಬ ಆಸೆಬುರುಕ, ಇನ್ನೊಬ್ಬ ಸೂಕ್ಷ್ಮ ಮನಸ್ಸಿನವ; ಒಬ್ಬನ ಕಾಲು ನಾರುತ್ತದೆ, ಇನ್ನೊಬ್ಬನ ಬಾಯಿ ನಾರುತ್ತದೆ.

ಸರ್ಕಸ್ಸಿನ ಬಫೂನು ತಾನು ನಗದೆ ಪ್ರೇಕ್ಷಕರನ್ನು ನಗಿಸಲೆಂದು ಮಾಡುವಂತಹ ನಟನೆಗಳು ನಾಟಕದುದ್ದಕ್ಕೂ ಬರುತ್ತವೆ. ಲಾರೆಲ್ ಮತ್ತು ಹಾರ್ಡಿಯರಂತೆ ಹ್ಯಾಟುಗಳನ್ನು ಬದಲಾಯಿಸಿ ಕೊಳ್ಳುವುದು; ಬೂಟನ್ನು ಬಿಚ್ಚಲು ಒದ್ದಾಡುವುದು; ಪ್ಯಾಂಟ್ ಜಾರಿ ಬೀಳುವುದು; ಇದ್ದಕ್ಕಿದ್ದಂತೆ ನಿದ್ದೆ ಹೋಗುವುದು; ಥಟ್ಟನೆ ಎಚ್ಚರವಾಗುವುದು; ಕಾಲುಗಳನ್ನು ಅಗಲಿಸಿ ನಡೆಯುವುದು; ಮೂತ್ರಶಂಕೆ ತೀರಿಸಿಕೊಳ್ಳಲು ಅವಸರದಿಂದ ಓಡುವುದು; ಈಗ ಜಗಳವಾಡುವುದು, ಮತ್ತೆ ಅಪ್ಪಿ ಮುದ್ದಿಡುವುದು; ಮುತ್ತಿಟ್ಟೊಡನೆ ಬಾಯಿ ವಾಸನೆಯಿಂದ ಹೇಸಿ ದೂರ ಸರಿಯುವುದು; ಹ್ಯಾಟ್‌ನಿಂದ ಕೀಟವನ್ನು ಓಡಿಸಲು ಶ್ರಮಿಸುವುದು – ಹೀಗೆ ದಿನನಿತ್ಯದ ಎಲ್ಲ ಕರ್ಮಗಳೂ ನಾಟಕದಲ್ಲಿ ಸಾಂಗವಾಗಿ, ನಿಧಾನವಾಗಿ, ಬುದ್ಧಿಪೂರ್ವಕವಾಗಿ ಅಭಿನಯಿಸಲ್ಪಡುವುದರಿಂದ ನಮಗೆ ಒಗ್ಗಿಹೋದದ್ದರ ಹಿಂದರುವ ಅಸಂಬದ್ಧತೆಯ ದರ್ಶನವಾಗುತ್ತದೆ.

ನಾಟಕದಲ್ಲಿ ಕೆಲವು ಸಾರಿ ಕ್ರೌರ್ಯ ಕಾಣಿಸಿಕೊಳ್ಳುತ್ತದೆ. ತನ್ನ ದರ್ಪಪ್ರದರ್ಶನದ ಸುಖಕ್ಕಾಗಿ ಪೋಸೋ ಲಕ್ಕಿಯನ್ನು ಹಿಂಸಿಸುತ್ತಾನೆ; ಸಹಾನುಭೂತಿಯನ್ನು ತೋರಿಸಲು ಬಂದ ಬೇವರ್ಸಿ ಎಸ್ಟ್ರಗನ್ ಅನ್ನು ಗುಲಾಮ ಲಕ್ಕಿ ಥಳಿಸುತ್ತಾನೆ; ಬೇವರ್ಸಿ ಎಸ್ಟ್ರಗನ್ ಲಕ್ಕಿಯನ್ನು ಒದೆಯುತ್ತಾನೆ; ಕುರುಡನಾದ ಪೋಸೋನ ಬಾಯಿ ಮುಚ್ಚಿಸಲೆಂದು ಲಾಡಿಮೀರ್‌ಅವನನ್ನು ಹೊಡೆಯುತ್ತಾನೆ, ಸರ್ಕಸ್ಸಿನ ಬಫೂನರಿಯಂತೆಯೇ ಮ್ಯೂಸಿಕ್‌ಹಾಲಿನ ಮಾತಿನ ಚಕಮಕಿಯನ್ನೂ, ಕಾಮೆಡಿಗೆ ಮೂಲ ಆಕರವಾದ ಮೂಕಾಭಿನಯವನ್ನೂ ಬೆಕೆಟ್ ಉಪಯೋಗಿಸಿಕೊಳ್ಳುತ್ತಾನೆ. ಬಾಯಿ ತುಂಬ ಹರಟುವ ಪಾತ್ರಗಳು ಇದ್ದಕ್ಕಿದ್ದಂತೆ ನಿಶ್ಚಲರಾಗಿ ಬಿಡುತ್ತಾರೆ. ಮಾತು – ಮೌನ ಬೆರೆತ ಈ ಹಾಸ್ಯ ಕರುಣ ಮಿಶ್ರಿತ ವಕ್ರಲಯದಲ್ಲಿ ಮನುಷ್ಯನ ಪಾಡನ್ನು ಸಂಕೇತಿಸುವ ಶಕ್ತಿ ಗುಪ್ತವಾಗಿ ಹರಿಯುತ್ತಿರುವುದು ನಿಧಾನವಾಗಿ ಹೊಳೆಯುತ್ತದೆ.

ಬೆಕೆಟ್ಟಿನದು ನಿಷ್ಕ್ರಮಣದ ದಾರಿಯಿಲ್ಲದ, ಕೊನೆಯಿಲ್ಲದ ಪ್ರಪಂಚ. Endgameನ ಹ್ಯಾಮ್‌ಸಾಯಲಾರ. ಕ್ಲೊವ್ ಬಿಟ್ಟುಹೋಗಲಾರ. ಗೋಡೋ ಬರುವುದೇ ಇಲ್ಲ. ನಾವು ಸ್ವಸಂತೃಪ್ತಿಯಲ್ಲಿ ಅವಚಿಕೊಂಡಿರುವ ಎಷ್ಟೋ ಭ್ರಾಂತಿಗಳನ್ನು ಕಂಡು ಬೆಕೆಟ್ ವಿಷಾದದಿಂದ ನಗುತ್ತಾನೆ. ಪ್ರೇಮ ಅವನಿಗೆ ಒಂಟಿತನ ಮತ್ತು ಪರಸ್ಪರ ದೂಷಣೆಯ ಮರುಭೂಮಿಯಂತೆ ಕಾಣುತ್ತದೆ. ಆದರೂ ನಗುವ ಶಕ್ತಿಯನ್ನು, ಸಹಾನುಭೂತಿಯನ್ನು ಕಳೆದುಕೊಳ್ಳದ ನೋವನ್ನು ಗುರುತಿಸಬಲ್ಲ ಬರಹಗಾರ ಬೆಕೆಟ್. ಸಿನಿಕನ ಸಂತೃಪ್ತ ನಗುವಲ್ಲ ಬೆಕೆಟ್‌ನದು. ಬದುಕು ಅಸಂಬದ್ಧವೆನ್ನಿಸಿದರೂ ಮನುಷ್ಯ ಈ ಅಸಂಬದ್ಧತೆಯನ್ನು ಮೀರಲು ಮಾಡುವ ಸಾಹಸವನ್ನು ಸಹಾನುಭೂತಿಯನ್ನು ಬೆಕೆಟ್ ಕಾಣುತ್ತಾನೆ. ತನ್ನ ಪಾತ್ರಗಳಂತೆಯೇ ಇವನೂ ಅಸ್ವಸ್ಥವಾದ ಸಂವೇದನೆಯ ಬರಹಗಾರ ಎನ್ನಿಸುತ್ತದೆ ನಮಗೆ. ಪ್ರವಾದಿಯ ನಿಶ್ಚಿತ ಧೋರಣೆ – ಧಾಟಿಗಳಿಲ್ಲದೆ, ಉದಾರವಾದಿಯ ಸಂದೇಹ ಕಾತರಗಳಿಂದ ಬರೆಯುವ ಇವನ ಕಲೆಯಲ್ಲಿ ಆಪ್ತವಾಕ್ಯದ ಸಹೃದಯತೆ ಅಡಗಿದೆ. ಕಾಲದ ಜೈಲಿನಲ್ಲಿ ಕನಸುತ್ತ, ಶ್ರಮಿಸುತ್ತ, ಭ್ರಮಿಸುತ್ತಿರುವ ಮನುಷ್ಯ ಮೀರಿ ನಿಲ್ಲುವ ಕೆಲವೇ ಮುಹೂರ್ತಗಳು ಕಲೆಯ ಪ್ರಭೆಯಲ್ಲಿ ಮಾತ್ರ ಗೋಚರಿಸುತ್ತವೆಂದು ತಿಳಿದ ಬೆಕೆಟ್ ಆಧುನಿಕ ಕಲಾ ಪ್ರಪಂಚದ ಏಕಾಗ್ರ ಮನಸ್ಸಿನ ಸಾಹಸಿಯಾಗಿದ್ದಾನೆ.

—-
ಕೃಪೆ : ಆಕಾಶವಾಣಿ, ಬೆಂಗಳೂರು

* * *