ಕುಂಡದ ಗಿಡಕ್ಕೇನು ಗೊತ್ತುಂಟೊ
ತಾಯ್ನೆಲದ ಜಲದ ಜೀವಂತ ಪ್ರಜ್ಞೆ !
ದಿನಕ್ಕೊಮ್ಮೆ ಕ್ರಮಬದ್ಧವಾಗಿ ಹನಿಸಿದ
ನಲ್ಲಿಯ ನೀರು.
ಅಂಗಡಿಯಿಂದ ತಂದುದುರಿಸಿದ ಗೊಬ್ಬರ,
ಅಷ್ಟರಲ್ಲೇ ಒಂದೆರಡು ಎಲೆ ಬಿಚ್ಚಿ, ನಾಲ್ಕಾರು
ಹೂ ಬಿಟ್ಟರಷ್ಟೇ ಸಂಭ್ರಮ
ಮೃಗಾಲಯದ ಪಂಜರದೊಳಗೆ ಗರಿಗೆದರಿ
ಕುಣಿವ ನವಿಲಿನ ವಿಭ್ರಮ.

ಬಂತು ಮಳೆ ಹಗಲೂ ಇರುಳು :
ಮನೆಸುತ್ತ ನೆಲವ ತಬ್ಬಿದ್ದ, ಕಾಲೂರಿದ್ದ
ಹಸುರಿನ, ಮರ ಮರದ, ಗಿಡಗಂಟಿಗಳ
ತಲೆಗೂದಲಿಂದ ಬೇರಿನ ತನಕ
ಬಿರುಗಾಳಿ-ಗುಡುಗು-ಮಿಂಚುಗಳೆಲ್ಲ ಹನಿಯಾಗಿಳಿದು
ನರನರದಲ್ಲಿ ಯಾವುದೋ ಮೇಳಗಾನ
ಆಕಾಶದಪ್ಪುಗೆಯಿಂದ ನೆಲವೆಲ್ಲ ಮಿದುವಾಗಿ
ಹೊಸತೊಂದು ಅನುಭವದ ಸ್ನಾನ-ಪಾನ.

ಮಳೆ-ಮಿಂಚು-ಬಿರುಗಾಳಿಗಳ ದಿಬ್ಬಣ ತೆರಳಿ
ತಗ್ಗು-ದಿನ್ನೆಗಳಲ್ಲಿ ಮಗಿಲ ಹೆಜ್ಜೆ.
ಆದರೂ ಮನೆಯಂಗಳದ ಈ ಕುಂಡದ ಗಿಡಕ್ಕೆ
ಸುತ್ತಣ ನೆಲದ ಹಸುರಿಗಾದನುಭವ ಪ್ರಜ್ಞೆಯೆ ಇಲ್ಲ.
ಇದು ಒಂದು ಕುಂಡದನಾಥಾಲಯದಲ್ಲಿ
ಬಲವಂತವಾಗಿ ತಂದಿರಿಸಿರುವ ಜೀವಂತ ಮುಗ್ಧ ಶಿಶು.
ಹೇಗಾದರೂ ಮಾಡಿ ಕುಂಡವನ್ನೊಡೆದು
ನೆಲದಲ್ಲಿದರ ಬೇರನ್ನಿಡು,
ತಾಯ ಮೊಲೆಹಾಲಿಗಿದರ ತುಟಿಯನ್ನಿಡು.