ಇಂದಿನ ಪೀಳಿಗೆಯು ಭರತನಾಟ್ಯ ಕಲಾವಿದರಲ್ಲಿ ಪ್ರತಿಭಾ ಪ್ರಹ್ಲಾದ್‌ರ ಹೆಸರು ಮುಂಚೂಣಿಯಲ್ಲಿದೆ. ಖ್ಯಾತ ಗುರು ಯು.ಎಸ್.ಕೃಷ್ಣರಾವ್ ಚಂದ್ರ ಭಾಗಾದೇವಿ, ವಿ.ಎಸ್. ಮುತ್ತುಸ್ವಾಮಿ ಪಿಳ್ಳೆಯವರಲ್ಲಿ ಶಿಷ್ಯ ವೃತ್ತಿ ನಿರ್ವಹಿಸಿದ ಇವರು ಕಳೆದ ೨೫ ವರ್ಷಗಳಿಂದ ನೃತ್ಯ ತತ್ಪರೆಯಾಗಿ ವಿಶ್ವದಾದ್ಯಂತ ೨೦೦೦ಕ್ಕೂ ಮೀರಿ ಕಾರ್ಯಕ್ರಮಗಳನ್ನಿತ್ತಿದ್ದಾರೆ.

ಅವುಗಳಲ್ಲಿ ಪ್ರಮುಖವಾದುವೆಂದರೆ ಖಜುರಾಹೋ ಉತ್ಸವ, ಕೋನಾರಕ್ ಉತ್ಸವ, ಉಸ್ತಾದ್ ಅಲ್ಲಾಉದ್ದೀನ್ ಖಾನ್ ಸಮೂರೋಹ್, ದುರ್ಗಾಲಾಲ್ ಸಂಸ್ಮರಣ ನೃತ್ಯೋತ್ಸವ, ಸ್ಪಿರಿಟ್ ಆಫ್ ಫ್ರೀಡಂ ಕಾರ್ಯಕ್ರಮ, ತಾನ್ ಸೆನ್-ತ್ಯಾಗರಾಜ ಸಮೂರೋಹ್, ಟೋಕಿಯೋದ ಅಂತರರಾಷ್ಟ್ರೀಯ ಓಕ್ಲೋಹಮಾ ಕಮ್ಯೂನ್, ಪುಣೆಯ ಗಣೇಶ ಉತ್ಸವ ಮತ್ತು ತಂಜಾವೂರು, ಚಿದಂಬರಂಗಳ ನೃತ್ಯಾಂಜಲಿ ಕಾರ್ಯಕ್ರಮಗಳು.

ಬೆಂಗಳೂರು ವಿಶ್ವವಿದ್ಯಾಲಯದ ಎಂ.ಎಸ್.ಪದವೀಧರೆಯಾದ ಈಕೆ ಅಮೇರಿಕೆಯ ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯದ ಆಹ್ವಾನದ ಮೇಲೆ ೧೯೮೭ರಲ್ಲಿ ಅಲ್ಲಿನ ಪ್ರದರ್ಶನ ಕಲಾ ವಿಭಾಗದ ಪದವಿಪೂರ್ಣ ತರಗತಿಗಳಿಗೆ ಆ ಮಾಧ್ಯಮದಲ್ಲಿ ಪಾಠ ಹೇಳಿದುದಲ್ಲದೇ ಅಲ್ಲಿನ ಅನೇಕ ವಿಶ್ವವಿದ್ಯಾಲಯಗಳಲ್ಲಿ  ನರ್ತಿಸಿ, ಸೋದಾಹರಣ ಭಾಷಣಗಳನ್ನು ಇತ್ತಿದ್ದಾರೆ. ಅಂತೆಯೇ ಅದೇ ವರ್ಷ ಮ್ಯಾಂಚೆಸ್ಟರ್‌ನಲ್ಲಿ ಜರುಗಿದ ವಿಶ್ವ ಕನ್ನಡ ಸಮ್ಮೇಳನದಲ್ಲೂ ನರ್ತಿಸಿದ್ದಾರೆ.

ಪ್ರತಿಭಾರ ಕಾರ್ಯಕ್ಷೇತ್ರಕ್ಕೆ ವಿಸ್ತಾರ. ವಿಶ್ವ ಸಂಸ್ಥೆಯ ಅಂಗ ಸಂಸ್ಥೆಗಾಗಿ ಥಾಯ್‌ಲ್ಯಾಂಡ್, ಏಷ್ಯನ್ ಫೆಸಿಫಿಕ್ ಟ್ರಾನ್ಸ್ ಅಲೈಯನ್ಸ್ ವತಿಯಿಂದ ಮನಿಲಾಗಳಲ್ಲಿಯೂ ಇವರ ಕಾರ್ಯಕ್ರಮ ಮತ್ತು ಸೋದಾಹರಣಗಳ ಜರುಗಿವೆ.

ಈಗ ಕೆಲವು ವರ್ಷಗಳ ಹಿಂದೆ ತಮ್ಮದೇ ಆದ ಪ್ರಸಿದ್ಧ ಪ್ರತಿಷ್ಠಾನ ಎಂಬ ಸಂಸ್ಥೆಯನ್ನು ಆರಂಭಿಸಿ, ಅದರ ಮೂಲಕ ಸಂಗೀತ ನೃತ್ಯ ಉತ್ಸವಗಳನ್ನು ಹಮ್ಮಿಕೊಂಡಿದ್ದಾರೆ.

ಅಲ್ಲದೇ, ಹೈದರಾಬಾದಿನಲ್ಲಿ ಮಾಧ್ಯಮಗಳನ್ನು ಕುರಿತ ಅಂತರ ರಾಷ್ಟ್ರೀಯ ಸಮ್ಮೇಳನಕ್ಕೆ ಆಹ್ವಾನಿತರಾಗಿ ಇವರು ’ಭರತನಾಟ್ಯದಲ್ಲಿ ಮಾಧ್ಯಮದ ಸ್ಥಾನ’ ಎಂಬ ವಿಷಯದ ಬಗ್ಗೆ ಪ್ರಸ್ತುತಪಡಿಸಿದ ಉಪನ್ಯಾಸ ಮೆಚ್ಚುಗೆಯನ್ನು ಗಳಿಸಿದೆ. ಉತ್ತರ ಕರ್ನಾಟಕದಲ್ಲಿನ ದೇವದಾಸಿ ನೃತ್ಯ ಪದ್ಧತಿಯನ್ನು ಕುರಿತ ವ್ಯಾಸಂಗಕ್ಕೆ ಕೇಂದ್ರದ ಜೂನಿಯರ್ ಫೆಲೋಶಿಪ್ ಗಳಿಸಿರುವ ಪ್ರತಿಭಾರಿಗೆ ದೂರದರ್ಶನದಲ್ಲಿ ’ಎ’ ದರ್ಜೆ ಪಡೆದ ಅತ್ಯಂತ ಕಿರಿಯ ಕಲಾವಿದೆ ಎಂಬ ಹೆಗ್ಗಳಿಕೆಯೂ ಇದೆ. ಅಂತೆಯೇ ಆ ಮಾಧ್ಯಮದಲ್ಲಿ ಖ್ಯಾತಿವೆತ್ತ ’ಶ್ರುತಿ’, ’ನೂಪುರ್‌’ ಮತ್ತು ’ನೆಕ್ಷರ್ ಇನ್‌ಸ್ಟೋನ್‌’ಗಳ ಮುಖ್ಯ ಭೂಮಿಕೆಯೂ ಇವರದ್ದೆ. ಇವರು ಅನೇಕ ಸಂಸ್ಥೆಗಳಿಗಾಗಿ ರಚಿಸಿರುವ ಪ್ರಬಂಧಗಳೂ ಅಪಾರ. ಅಂತೆಯೇ ಇವರಿಗೆ ಸಂದಿರುವ ಬಿರುದುಗಳು ಹೇರಳ. ಅವುಗಳಲ್ಲಿ ’ಶೃಂಗಾರಮಣಿ’, ’ನಾಟ್ಯಭಾರತಿ’ ಮತ್ತು ’ಮಹಿಳಾ ಶಿರೋಮಣಿ’ ಹೆಸರಿಸುವಂಥವು. ಈಗ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ೧೯೯೬-೯೭ನೇ ಸಾಲಿನ ’ಕರ್ನಾಟಕ ಕಲಾಶ್ರಿ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.