ಹೂಡಿದ್ದ ಬಡಕಲು ಕುದುರೆಗಳ ಕಂಡು
ನಕ್ಕನು ಋತುಪರ್ಣರಾಜ
ಕಾರ್ಕೋಟಕನ ವಿಷದಿಂದ ವಿಕೃತಾಂಗನಾದ
ನಳ
ಸಾರಥಿಯಾಗಿ ನಡೆಸಿದನು ರಥವ.

ನಾಳೆ ಸ್ವಯಂವರದ ಹೊತ್ತಿಗೆ
ಹೋಗಿ ಸೇರುವುದುಂಟೆ ನಿಷಧವನ್ನು ?
ಪ್ರಶ್ನೆಗುತ್ತರವಾಗಿ ಸುಳಿನಗೆಯೊಡನೆ
ಮಿಂಚಿದವು ಪ್ರತಿಭೆಯ ಕಣ್ಣು.

ಗಾಳಿದಾರಿಯ ಸೀಳಿ ಚಲಿಸಿರಲು ರಥಚಕ್ರ
ಬೆರಗಾಗಿ ತಲೆದೂಗಿದನು ರಾಜ.
ಮೆಚ್ಚಿದೆನಯ್ಯ ಬಾಹುಕ ; ನೀನು ಬಲ್ಲಾತ
ಅಶ್ವ ಹೃದಯದ ವಿದ್ಯೆ, ನಾನೂ
ಬೇರೊಂದರಲಿ ಪಂಡಿತ ; ಕೇಳು
ಬೇಕಾದರೀ ಕೆಳಗೆ ತಲೆಯೆತ್ತಿ
ಶಾಖೋಪಶಾಖೆಗಳ ಚಾಚಿರುವ ಮರದಲ್ಲಿ
ಎಲೆಗಳೆಷ್ಟೆಂದು ಹೇಳುತ್ತೇನೆ.

ರೊಯ್ಯನಿಳಿಯಿತು ರಥ ಆಕಾಶದಿಂದ ಕೆಳಕ್ಕೆ,
ಕ್ಷಣಾರ್ಧದಲ್ಲಿ ಎಣಿಸಿದನು ಋತುಪರ್ಣ
ಮರದ ಎಲೆಗಳ ಸಂಖ್ಯೆ :
ಎಂಬತ್ತು ಸಹಸ್ರ ಲಕ್ಷದ ಮೇಲೆ
ನಾನೂರ ತೊಂಬತ್ತು.
ತಂಗಾಳಿಗೊಲೆವ ಮರ, ನಸುನಕ್ಕು
ತಲೆದೂಗಿತ್ತು !

ಮೆಚ್ಚಿದನು ಬಾಹುಕನು
ಋತುಪರ್ಣ ಪಾಂಡಿತ್ಯಕ್ಕೆ
ಮತ್ತೆ ನಿಶ್ಶಬ್ದವಾಗಿ ಏರಿತು ರಥ
ಮೂಡಿದ ಹಾಗೆ ಕುದುರೆಗೆ ರೆಕ್ಕೆ.