ಪ್ರತಿಭೆ ಎಂದರೇನು ಎಂಬುದನ್ನು ಭಾರತೀಯ ಆಲಂಕಾರಿಕರು ಖಚಿತವಾದ ಮಾತುಗಳಲ್ಲಿ ವಿವರಿಸಿದ್ದರೂ, ಕಾವ್ಯನಿರ್ಮಾಣ ಸಮಯದ ಮನಃಸ್ಥಿತಿಯನ್ನು ವರ್ಣಿಸಿದ್ದರೂ, ಕವಿಪ್ರತಿಭೆ ಹೇಗೆ ಕೆಲಸ ಮಾಡುತ್ತದೆ, ಅದರ ಪರಿಕರಗಳೇನು ಎನ್ನುವ ಮನಸ್‌ಶಾಸ್ತ್ರೀಯವಾದ ವಿವರಣೆಯನ್ನು ಕೊಡಲಾಗಿಲ್ಲ. ಅದರ ಸ್ವರೂಪವನ್ನು ವರ್ಣಿಸಿದ್ದಾರೆಯೆ ಹೊರತು, ಅದರ ಕಾರ್ಯವಿಧಾನವನ್ನು ವಿಚಾರಿಸಿಲ್ಲ. ಆದರೆ ಪಾಶ್ಚಾತ್ಯ ಕಾವ್ಯಮೀಮಾಂಸೆಯಲ್ಲಿ Imagination ಅಥವಾ ‘ಪ್ರತಿಭೆ’ಯ ಕಾರ್ಯ ವಿಧಾನವನ್ನು, ಕವಿಮನೋಮಂದಿರದ ಪ್ರಯೋಗಶಾಲೆಯನ್ನು ಪ್ರವೇಶಮಾಡಿ ಮನಶ್ಯಾಸ್ತ್ರೀಯವಾದ ರೀತಿಯಲ್ಲಿ ವಿವರಿಸಲಾಗಿದೆ.

ಕಾವ್ಯವು ಅನುಕರಣವೇ ಅಥವಾ ನಿರ್ಮಿತಿಯೆ ಎಂಬ ಬಗ್ಗೆ ಪಾಶ್ಚಾತ್ಯರಲ್ಲಿ ಸುದೀರ್ಘವಾದ ಚರ್ಚೆ ನಡೆದಿದೆ. ಪಾಶ್ಚಾತ್ಯ ದಾರ್ಶನಿಕನಾದ ಪ್ಲೇಟೋ ಈ ಲೋಕವೇ ಮೂಲ ದಿವ್ಯರೂಪವೊಂದರ ಛಾಯೆ, ಅಥವಾ ಅನುಕರಣೆ ಎಂದು ಭಾವಿಸಿದನು.  ಕಲೆಗಾರ ಮಾಡುವುದೇನಿದ್ದರೂ ಈ ಲೋಕದ ಅನುಕರಣೆ. ಆದಕಾರಣ ಅನುಕರಣೆಯ ಅನುಕರಣೆಯಾಗಿರುವ ಕಲೆ ಅಷ್ಟೇನೂ ಪುರಸ್ಕಾರ ಯೋಗ್ಯವಲ್ಲ ಎನ್ನುವುದು ಅವನ ಅಭಿಪ್ರಾಯ. ಆದರೆ ಪ್ಲೇಟೋನ ಶಿಷ್ಯನಾದ ಅರಿಸ್ಟಾಟಲ್ ಕಲೆಯನ್ನು ಕೇವಲ ಅನುಕರಣೆಯ ಫಲವೆಂಬುದನ್ನು ಒಪ್ಪದೆ, ಅದು ಒಂದು ಆದರ್ಶದ ಪ್ರತಿಮಾನ  (representation) ಎನ್ನುತ್ತಾನೆ. ಕಲಾವಿದ ಅನುಕರಿಸುತ್ತಾನೆ ಎಂದರೆ ಕೇವಲ ಬಹಿರಂಗವನ್ನು ಮಾತ್ರ ಯಥಾವತ್ತಾಗಿ ಅನುಕರಿಸುತ್ತಾನೆಂದು ಅರ್ಥವಲ್ಲ; ಅವನು ಅಂತರಂಗದ ಅವಸ್ಥೆಗಳನ್ನು, ಭಾವಸ್ಥಿತಿಗಳನ್ನು ಪ್ರತಿನಿಧಿಸುತ್ತಾನೆ.  ಫಿಲೋಸ್ಟ್ರೇಟಸ್ ಮತ್ತು ಪ್ಲಾಟಿನಸ್ ಇವರು “ಅನುಕರಣೆ ಕಂಡುದನ್ನು ಮಾತ್ರ ಹಿಡಿದಿರಿಸಿದರೆ, ಪ್ರತಿಭೆ ಕಾಣದುದನ್ನೂ ಚಿತ್ರಿಸುತ್ತದೆ”[1] ಎಂದು ಕಲಾನಿರ್ಮಿತಿಯ ಬಗೆಗೆ ಬೇರೆಯ ಮಾತನ್ನು ಹೇಳಿದರು. ಪ್ಲೇಟೋನಿಂದ ಹಿಡಿದು ಎಲಿಸಬತ್‌ಳ ಕಾಲದವರೆಗೆ, ಎಂದರೆ ಹದಿನೇಳನೆಯ ಶತಮಾನದ ತನಕ Imagination ಎಂದರೆ ಕೇವಲ Imitation ಅಥವಾ ಅನುಕರಣ ಎಂದಲ್ಲದೆ ಅದಕ್ಕಿಂತ ಹೆಚ್ಚಿನ ಅರ್ಥ ಪ್ರಚಲಿತವಾಗಿರಲಿಲ್ಲ ಎನ್ನುವುದು ಸ್ವಾರಸ್ಯವಾಗಿದೆ. ಹೀಗಾಗಲು ಕಾರಣ, ಅಂದಿನ ಕಾವ್ಯಮೀಮಾಂಸೆಗೆ ಹಿನ್ನೆಲೆಯಾಗಿದ್ದ ತತ್ವಶಾಸ್ತ್ರವೇ.  ಹದಿನೇಳನೆಯ ಶತಮಾನದವರೆಗಿನ ತತ್ವಶಾಸ್ತ್ರವೆಲ್ಲಾ ಮನುಷ್ಯನ ಮನಸ್ಸು ಒಂದು ಕನ್ನಡಿಯಂತೆ ಸುತ್ತಣ ಲೋಕವನ್ನು ಪ್ರತಿಫಲಿಸಬಲ್ಲದು. ಒಂದು ಬಿಳಿಯ ಹಾಳೆಯಂತೆ ಬಹಿರಂಗ ಜಗತ್ತಿನ ಮೂಡಿಕೆಗಳನ್ನು ಪಡೆಯಬಲ್ಲುದು, ಇಷ್ಟು ಹೊರತು ಅದು ಏನನ್ನಾದರೂ ಸೃಜಿಸುವ ಸಾಮರ್ಥ್ಯವನ್ನು ಪಡೆದುಕೊಂಡಿಲ್ಲ ಎಂದೇ ಪ್ರತಿಪಾದಿಸುತ್ತದೆ. ಹದಿನೇಳನೆಯ ಶತಮಾನದ ವೇಳೆಗೆ, ಪ್ರತಿಭೆಯನ್ನು ಕುರಿತ ಚರ್ಚೆ ಮುಂದುವರಿದ ರೂಪದ್ದು ಮಾತ್ರವಲ್ಲದೆ, ಕೆಸ್ತಧಾರ್ಮಿಕ ಭಾವನೆಗಳ ಸೇರ್ಪಡೆಯಿಂದ, ಕಾವ್ಯ ಬುದ್ಧಿಗೆ ಅಥವಾ ವಿಚಾರಕ್ಕೆ ನಿಲುಕದ ಸತ್ಯಗಳನ್ನು ಒಳಹೊಕ್ಕು ನೋಡಬಲ್ಲದು, ಅದು ಸ್ವರ್ಗಮರ್ತ್ಯಗಳ ನಡುವಣ ಸೇತುವೆ ಎಂದೂ ಭಾವುಕವಾಗಿ ಅಭಿವ್ಯಕ್ತವಾಗತೊಡಗಿತ್ತು. ಈ ಪರಿಸ್ಥಿತಿಯಲ್ಲಿ ಥಾಮಸ್ ಹಾಬ್ಸ್ ಎಂಬ ತತ್ವಶಾಸ್ತ್ರಜ್ಞನು ಕಾವ್ಯನಿರ್ಮಿತಿಯ ಬಗೆಗೆ ಇದ್ದ ಧಾರ್ಮಿಕ ಸಿದ್ಧಾಂತವನ್ನು ಅಲುಗಾಡಿಸಿದುದು ಮಾತ್ರವಲ್ಲ, ಸಾಹಿತ್ಯ ಸಿದ್ಧಾಂತಕ್ಕೆ ಮನಸ್‌ಶಾಸ್ತ್ರೀಯವಾದ ನೆಲೆಯನ್ನು ಏರ್ಪಡಿಸಿದನು.  ೧೬೫೧ರಲ್ಲಿ ಅವನು ಬರೆದ Leviathan ಎಂಬ ಗ್ರಂಥದಲ್ಲಿ “ಈ ಮನಸ್ಸೆನ್ನುವುದು ಮೂಲತಃ ಇಡಿಯಾಗಿ ಅಥವಾ ಬಿಡಿಯಾಗಿ ಇಂದ್ರಿಯಗಳ ಮೂಲಕ ಅನುಭವಗಳನ್ನು ಪಡೆಯದೆ ಏನನ್ನೂ ಭಾವಿಸಿಕೊಳ್ಳಲಾರದು; ಈ ಬಗೆಯ ಚಿತ್ರಗಳ ಉಗ್ರಾಣದಿಂದ Imagination ಎನ್ನುವುದು ಸಾಧ್ಯವಾಗುತ್ತದೆ”[2] -ಎಂದು ಹೇಳುತ್ತಾನೆ. …………?[3] ೧೭೧೬ರಲ್ಲಿ ಷ್ಯಾಪ್ಟ್ ಬರಿ ಎಂಬ ಲೇಖಕನು “ಕವಿ ಎಂದರೆ ವಾಸ್ತವವಾಗಿ ಎರಡನೆಯ ನಿರ್ಮಾಪಕ” -ಎಂದು ಒಂದೆಡೆ ಬರೆಯುತ್ತಾನೆ.  ಇಮ್ಯಾನುಯಲ್ ಕ್ಯಾಂಟ್ (೧೭೨೪-೧೮೦೪) ಎಂಬ ತತ್ವಶಾಸ್ತ್ರಜ್ಞನು “ಈ ಮನಸ್ಸು ತನಗೆ ಅರಿವಿಲ್ಲದೆಯೇ ಸೃಜಿಸುವ ಸಾಮರ್ಥ್ಯವನ್ನು ಪಡೆದಿದೆ” ಎಂದು ಉದ್ ಘೋಷಿಸಿದ್ದಲ್ಲದೆ, ಈ ಸೃಜನ ಸಾಮರ್ಥ್ಯವನ್ನು ಕುರಿತು ಹೀಗೆ ವಿವರಿಸುತ್ತಾನೆ: “ಮನಸ್ಸಿನ ಈ ಕ್ರಿಯೆ ತನಗೆ ಬಂದೊದಗುವ ಅನುಭವಗಳನ್ನು ಸಂಯೋಜಿಸುವ ಸಾಮರ್ಥ್ಯ ಉಳ್ಳದ್ದು.  ಮನಸ್ಸು ಸೃಜನಾತ್ಮಕವಾದದ್ದು ಎಂದರೆ ಅರ್ಥ ಇಷ್ಟೆ: ಲೋಕಾನುಭವಗಳು ನಮ್ಮ ಮನಸ್ಸಿಗೆ ಯಾವುದೋ ಒಂದು ಕ್ರಮಬದ್ಧವಾದ ವ್ಯವಸ್ಥೆಯಲ್ಲಿ ಬಂದೊದಗುವುದಿಲ್ಲ; ಅಲ್ಲದೆ ಮನಸ್ಸು ತನ್ನ ಸುತ್ತಣ ಅನುಭವಗಳನ್ನು ಕನ್ನಡಿಯಂತೆ ಪ್ರತಿಫಲಿಸುವುದಿಲ್ಲ. ಅಥವಾ ಒಂದು ಬಿಳಿಹಾಳೆಯಂತೆ ಅನುಭವದ ಒತ್ತುಗಳನ್ನು ಪಡೆಯುತ್ತದೆ ಎಂದೂ ಅಲ್ಲ. ಅದರ ಬದಲು, ಅದು ತನಗೆ ಸಂವೇದನೆಯ ರೂಪದಲ್ಲಿ ಪ್ರಾಪ್ತವಾದ, ಈ ಅವ್ಯವಸ್ಥಿತ ಅನುಭವಗಳನ್ನು ಗ್ರಹಿಸಿ, ಅವುಗಳನ್ನು ಒಂದು ವ್ಯವಸ್ಥೆಯಲ್ಲಿ ಸಂಘಟಿಸುತ್ತದೆ.”[4] ಇದೇ ಕಾಲದ ಇನ್ನೊಬ್ಬ ಲೇಖಕನಾದ ಎಡ್ಮಂಡ್ ಬರ್ಕ್ ಎನ್ನುವವನು ಕ್ಯಾಂಟನ ವಿಚಾರಕ್ಕೆ ದನಿಗೂಡಿಸಿ “ಮನುಷ್ಯನ ಮನಸ್ಸಿಗೆ ತನ್ನದೇ ಆದೊಂದು ಸೃಜನ ಸಾಮರ್ಥ್ಯವಿದೆ”[5] -ಎನ್ನುತ್ತಾನೆ.  ಹೀಗೆ ಮನುಷ್ಯನ ಮನಸ್ಸು ಕೇವಲ ಅನುಕರಣ ಪ್ರವೃತ್ತವಾದ ಜಡಸ್ವಭಾವದ್ದಲ್ಲ, ತನ್ನದೇ ಆದ ಸೃಜನ ಸಾಮರ್ಥ್ಯವುಳ್ಳ ಕ್ರಿಯಾತ್ಮಕ ಸ್ವಭಾವದ್ದು ಎಂಬ ಮಾತನ್ನು ಕ್ಯಾಂಟ್ ಮತ್ತಿತರರು ಹೇಳಿದನಂತರ ಕವಿಕಾರ್ಯಕ್ಕೆ ಒಂದು ವಿಶೇಷವಾದ ಮಹತ್ವ ಬಂದಂತೆ ಕಾಣುತ್ತದೆ. ಬರಬರುತ್ತಾ ವಿಜ್ಞಾನ ದೃಷ್ಟಿ ಬೆಳೆದ ಹಾಗೆ, ಜೀವವಿಜ್ಞಾನ ಮತ್ತು ಮನೋವಿಜ್ಞಾನಗಳು ಮುಂದುವರಿದಂತೆ, ಮನಸ್ಸಿನ ಪದರ ಪದರಗಳನ್ನು ಒಳಹೊಕ್ಕು ವಿಶ್ಲೇಷಣೆಗೆ ತೊಡಗಿದಂತೆ ಮನಸ್ಸಿನ ಅಪೂರ್ವ ಶಕ್ತಿಗಳೇನೆಂಬುದರ ಪರಿಚಯ ಲಭಿಸಿದೆ. ಅದರಲ್ಲಿಯೂ ವಿಶೇಷ ಸೃಜನಾತ್ಮಕ ಸಾಮರ್ಥ್ಯವುಳ್ಳ ಕವಿಮನಸ್ಸಿನ ಪರಿಶೀಲನೆಯೂ ಮನೋವಿಜ್ಞಾನದ ಅಧ್ಯಯನದ ವಸ್ತುವಾಗತೊಡಗಿದೆ.

ಪ್ರೊ. J.Z. ಯೂಂಗ್ ಎನ್ನುವವರು ತಮ್ಮದೊಂದು ಕೃತಿಯಲ್ಲಿ ಹೀಗೆ ಹೇಳುತ್ತಾರೆ: “ನಮ್ಮ ಒಬ್ಬೊಬ್ಬರ ಮೆದುಳೂ ಅವನ ಅಥವಾ ಅವಳ ಲೋಕವೊಂದನ್ನು ಅಕ್ಷರಶಃ ಸೃಜಿಸುತ್ತದೆ.”[6] ಚಕಿತಗೊಳಿಸುವ ಈ ಹೇಳಿಕೆ ಮನುಷ್ಯನ ಮನಸ್ಸು ಸೃಜನಾತ್ಮಕವಾದದ್ದೆ ಅಲ್ಲವೆ ಎಂಬ ಸಂದೇಹವಾದಕ್ಕೆ ಮುಕ್ತಾಯವನ್ನು ತಂದಿತು.  ಪ್ರತಿಯೊಬ್ಬನ ಮೆದುಳೂ ಸೃಷ್ಟಿಸುವ ಸಾಮರ್ಥ್ಯ ಉಳ್ಳದ್ದು ಎಂದ ಮೇಲೆ, ಯಾರಲ್ಲಿ ಈ ಸೃಜನ ಸಾಮರ್ಥ್ಯ ಅತ್ಯಧಿಕ ಪ್ರಮಾಣದಲ್ಲಿ ಅಭಿವ್ಯಕ್ತವಾಗುವುದೋ ಅಂಥ ಕವಿ-ಕಲಾವಿದರ ಪ್ರತಿಭೆಯನ್ನು ಕೇವಲ ಅನುಕರಣೆ ಮಾತ್ರ ಎಂದು ಹಿಂದಿನಂತೆ ಇಂದೂ ಭಾವಿಸುವುದು ಹಾಸ್ಯಾಸ್ಪದವಾಗುತ್ತದೆ.*

Imagination ಅಥವಾ ಪ್ರತಿಭೆಯನ್ನು ಕುರಿತು ಪಾಶ್ಚಾತ್ಯ ವಿಮರ್ಶಕರಲ್ಲಿ ಬಹುಮಂದಿ ಎತ್ತಿ ಹೇಳುವ ವಿಷಯವೆಂದರೆ ಅದೊಂದು ಅನುಭವಗಳನ್ನು ಸಂಘಟಿಸುವ ಸಾಮರ್ಥ್ಯ ಎನ್ನುವುದು.  ಒಂದು ಅನುಭವವನ್ನು ಮತ್ತೊಂದು ಅನುಭವದಿಂದ ಬೇರ್ಪಡಿಸುವ, ಮತ್ತು ಸಾಮಾನ್ಯವಾಗಿ ಒಂದು ಮತ್ತೊಂದಕ್ಕೆ ಸಂಬಂಧವಿಲ್ಲವೆಂಬಂತೆ ತೋರುವ ಅಂಶಗಳನ್ನು ಸಂಘಟಿಸುವ ಪ್ರವೃತ್ತಿ ಪ್ರತಿಭೆಯ ಕಾರ್ಯಗಳಲ್ಲಿ ಒಂದಾಗಿದೆ. ನಮ್ಮೆಲ್ಲರಿಗೂ ದಿನದಿನವೂ ಅನುಭವದ ಮೇಲೆ ಅನುಭವಗಳು ಬಂದರೂ, ಅವು ಒಂದು ವ್ಯವಸ್ಥಿತ ರೂಪದಲ್ಲೇನೂ ಬರುವುದಿಲ್ಲ; ಬಂದ ಅನುಭವಗಳು ಒಂದರ ಮೇಲೊಂದು ಸಂಘಾತಗೊಂಡು ನಮ್ಮ ಮನಸ್ಸಿನ ಅನೇಕ ಸ್ತರಗಳಲ್ಲಿ ಬಿದ್ದಿರುತ್ತವೆ.  ಇವುಗಳಲ್ಲಿ ಎಷ್ಟೋ ಕಾಲಕ್ರಮೇಣ ಮರೆತು ಹೋಗಬಹುದು; ಇನ್ನೆಷ್ಟೋ ನೆನಪಿನಲ್ಲಿ ಅಚ್ಚಳಿಯದೆ ಉಳಿಯಬಹುದು. ಕವಿಯಲ್ಲೂ ಇಂಥ ನೂರಾರು ಅನುಭವಗಳನ್ನು ಒಂದು ಮತ್ತೊಂದರಿಂದ ಬೇರ್ಪಡಿಸಿ ವ್ಯವಸ್ಥೆಗೊಳಿಸಿ ಅಭಿವ್ಯಕ್ತಪಡಿಸುವ ಸಾಮರ್ಥ್ಯವನ್ನು ಪಡೆದಿದ್ದಾನೆ. “ಕವಿಗೂ ಸಾಮಾನ್ಯ ಮನುಷ್ಯನಿಗೂ ವ್ಯತ್ಯಾಸವಿರುವುದು ಇಲ್ಲಿ.  ಸಾಮಾನ್ಯವ್ಯಕ್ತಿ ತನ್ನ ಅನುಭವಗಳನ್ನೂ ವಿಚಾರ ಪರಂಪರೆಗಳನ್ನೂ ತೊಡಕಿಲ್ಲದೆ ಸಮನ್ವಯಗೊಳಿಸಿ ವ್ಯವಸ್ಥೆಗೆ ತರಲಾರನು.”[7] ಯಾಕೆಂದರೆ “ಅನುಭವಗಳನ್ನು ಗೊಂದಲವಿಲ್ಲದೆ ನಿರ್ವಹಿಸಲು ಬಾರದಿರುವ ಕಾರಣ ಸಾಮಾನ್ಯ ವ್ಯಕ್ತಿ ತನ್ನ ಚಿತ್ತವೃತ್ತಿಗಳಲ್ಲಿ ಹತ್ತಕ್ಕೆ ಒಂಬತ್ತರಷ್ಟನ್ನು ಮೇಲಕ್ಕೇಳದಂತೆ ಅದುಮಿಟ್ಟು ಹೇಗೋ ದಾರಿ ನಡೆಯುತ್ತಾನೆ.  ಕವಿಯಾದರೋ ಅನುಭವಗಳನ್ನು ವ್ಯವಸ್ಥೆಗೊಳಿಸುವ ಒಂದು ವಿಶೇಷ ಸಾಮರ್ಥ್ಯದಿಂದ ಅಭಿವ್ಯಕ್ತಿಯನ್ನು ಸಾಧಿಸುತ್ತಾನೆ”[8] ಬಿಡಿ ಬಿಡಿ ಅನುಭವಗಳನ್ನು ‘ಇಡಿ’ಯಾಗಿ ಕೂಡಿಸುವ ಕಾರ್ಯ ಸೃಜನಾತ್ಮಕ ಮನಸ್ಸಿಗೆ ಮಾತ್ರ ಸಾಧ್ಯ. ಹೀಗೆ ವ್ಯವಸ್ಥೆಗೊಳಿಸುವ ಕ್ರಿಯೆ ಬಹುಮಟ್ಟಿಗೆ ಕವಿಯ ಸುಪ್ತಪ್ರಜ್ಞೆಯಲ್ಲಿಯೇ ನಡೆದು, ಕಾವ್ಯರೂಪದಲ್ಲಿ ನಿರರ್ಗಳವಾಗಿ ಹೊಮ್ಮುತ್ತದೆ.

ಅನುಭವಗಳನ್ನು ವ್ಯವಸ್ಥೆಗೊಳಿಸುವ ಪ್ರತಿಭಾವ್ಯಾಪಾರಕ್ಕೆ ಅಗತ್ಯವಾದ ಸಾಧನವೆಂದರೆ ಸ್ಮರಣೆ. ಯಾರಲ್ಲಿ ಈ ಸ್ಮೃತಿ ಅಥವಾ ಸ್ಮರಣಶಕ್ತಿ ವಿಶೇಷವಾಗಿದೆಯೋ ಅಂಥವನು, ಮನಸ್ಸಿನಲ್ಲಿರುವ ಈ ಸ್ಮರಾಣಾನುಭವಗಳನ್ನು ಸಮರ್ಪಕವಾಗಿ ವ್ಯವಸ್ಥೆಗೊಳಿಸಬಲ್ಲನು.  ಪ್ರತಿಭೆಯಲ್ಲಿ ಈ ಸ್ಮರಣೆಯ ಕಾರ್ಯ ಮಹತ್ವದೆಂಬುದನ್ನು ಪ್ರಾಚೀನ ಗ್ರೀಕ್ ಲೇಖಕರು ಗುರುತಿಸಿ “ಕಾವ್ಯ ಎನ್ನುವುದು ನೆನಪಿನ ಮಗಳು ಎಂದು ಕರೆದಿದ್ದಾರೆ. ಪ್ರತಿಭೆ ಪುಷ್ಟಗೊಳ್ಳುವುದು ಕವಿಯ ಸ್ಮೃತಿಯಲ್ಲಿ ತುಂಬಿದ ಪ್ರತಿಮೆಗಳಿಂದಲೆ. ಅಷ್ಟೇ ಅಲ್ಲ ಈ ಸ್ಮರಣೆ ಕವಿ ತಾನೊಬ್ಬನು ತನ್ನ ಅನುಭವದಿಂದ ಪಡೆದಷ್ಟು ಮಾತ್ರದಿಂದ ಅಲ್ಲ. ಅವನಲ್ಲಿ ತನ್ನ ಜನಾಂಗದ ಪರಂಪರಾಗತವಾದ ಸ್ಮೃತಿಗಳೂ ಸುಪ್ತವಾಗಿರುತ್ತವೆ.”[9] “ಬಹುಶಃ ಸ್ಮರಣೆಯೆ ಕಾವ್ಯನಿರ್ಮಾಣ ಸಾಮರ್ಥ್ಯ ಎಂಬ ಮಾತು ನಿಜವಿರಬೇಕು.  ಯಾಕೆಂದರೆ ಪ್ರತಿಭೆ ಎನ್ನುವುದು ಸ್ಮರಣಾನುಭವಗಳನ್ನು ಸಂಘಟಿಸುವ ಕ್ರಿಯೆ.  ನಮ್ಮ ನೆನಪಿನಲ್ಲಿ ಇಲ್ಲದ ಅಥವಾ ನಮಗೆ ಗೊತ್ತಿಲ್ಲದ ಯಾವುದನ್ನೂ ನಾವು ಕಲ್ಪಿಸಿಕೊಳ್ಳಲಾರೆವು. ನಾವು ಏನನ್ನಾದರೂ ಕಲ್ಪಿಸಿಕೊಳ್ಳುತ್ತಿದ್ದೇವೆ ಎಂದರೆ, ನಾವು ಎಂದೋ ಪಡೆದ ಅನುಭವಗಳನ್ನು ಜ್ಞಾಪಿಸಿಕೊಂಡು ಅವುಗಳನ್ನು ಬೇರೊಂದು ಸಂದರ್ಭಕ್ಕೆ ಜೋಡಿಸಿಕೊಂಡು ನೋಡಬಲ್ಲ ಸಾಮರ್ಥ್ಯ ನಮಗಿದೆ ಎಂದು ಅರ್ಥ.”[10] ನಾವು ನಮ್ಮ ದೈನಂದಿನ ವ್ಯವಹಾರದಲ್ಲಿ ನಮಗರಿವಿಲ್ಲದೆಯೆ, ನಮ್ಮ ನೆನಪಿನ ಉಗ್ರಾಣದ ಅನುಭವಗಳನ್ನು ಬೇರ್ಪಡಿಸಿ ಮತ್ತೊಂದು ಅನುಭವದ ಸಂದರ್ಭಕ್ಕೆ ಜೋಡಿಸಿ ಮಾತನಾಡುತ್ತೇವೆ. ತೀರ ಸೋಮಾರಿಯಾದವನನ್ನು ಕಂಡಾಗ ‘ಇವನೊಂದು ಎಮ್ಮೆ’ ಎನ್ನುತ್ತೇವೆ; ಚೇಷ್ಟೆ ಮಾಡುವವನನ್ನು ನೋಡಿ ‘ಇದೊಂದು ಕಪಿ’ ಎನ್ನುತ್ತೇವೆ. ಈ ನೆನಪು ಎಂದೋ ಕಂಡದ್ದರ ಅನುಭವದ್ದು ಮಾತ್ರವಾಗಿರದೆ, ಓದಿದ, ಕೇಳಿದ ಚಿತ್ರಗಳಿಂದಲೂ ಬಂದದ್ದಾಗಿರಬಹುದು.  ‘ಇವನೊಬ್ಬ ಬಕಾಸುರ’ ಎಂದಾಗ, ‘ಇಂದ್ರಭೋಗ’ ಎಂದಾಗ, ‘ಇವನೊಂದು ನರಿ’, ‘ಇವನ ಹೊಟ್ಟೆ ಒಂದು ಕುಂಬಳಕಾಯಿ’ -ಹೀಗೆ ವ್ಯಂಗ್ಯ, ವಿನೋದ, ಕಟಕಿಗಳಲ್ಲಿ ಎಲ್ಲೆಲ್ಲಿಂದಲೋ ನೆನಪಿನ ಬಲದಿಂದ ಚಿತ್ರಗಳನ್ನು ಬರಮಾಡಿಕೊಂಡು ಸಂಘಟಿಸಿ ಮಾತನಾಡುತ್ತೇವೆ. ಕಣ್ಣನ್ನು ಕಮಲಕ್ಕೆ, ಮೀನಿಗೆ, ಮಾವಿನ ಹಣ್ಣಿನ ಹೋಳಿಗೆ, ಕೈಯನ್ನು ತಳಿರಿಗೆ, ಶರೀರವನ್ನು ಬಳ್ಳಿಗೆ, ಮುಡಿಯನ್ನು ನವಿಲಿನ ತೋಕೆಗೆ, ನಡೆಯನ್ನು ಹಂಸದ ನಡಿಗೆಗೆ, ಸಿಂಹದ ಅಥವಾ ಆನೆಯ ನಡಿಗೆಗೆ, ಹೋಲಿಸುವ ಕವಿಗಳ ಉಪಮಾ ನಿರ್ಮಾಣ ಕಾರ್ಯದಲ್ಲಿ ಈ ಸ್ಮರಣಾನುಭವಗಳ ಸಮೃದ್ಧಿಯನ್ನು ಕಾಣಬಹುದು.  “ಈ ದೃಷ್ಟಿಯಿಂದ ಪ್ರತಿಭೆ ಎನ್ನುವುದು ವಿಲಕ್ಷಣವಾದ ಹಾಗೂ ಸ್ಪಷ್ಟವಾದ ಸ್ಮರಣೆ ಎನ್ನಬಹುದು; ಆದರೆ ಅಷ್ಟೇ ಅಲ್ಲ, ಅದಕ್ಕಿಂತಲೂ ಮಿಗಿಲಾದದ್ದು,”[11] ಕವಿಯಲ್ಲಿ ತನ್ನ ಅನುಭವ ಕೋಶದಲ್ಲಿರುವ ಸಮೃದ್ಧವಾದ ಸ್ಮರಣಾನುಭವಗಳನ್ನು ತಕ್ಕ ಸಮಯದಲ್ಲಿ ಬರಮಾಡಿಕೊಳ್ಳುವ ಮತ್ತು ಅವುಗಳನ್ನು ವಿಶೇಷ ರೀತಿಯಲ್ಲಿ ಸಂಘಟಿಸಿ ಕೊಡುವ ಪ್ರತಿಭಾಶಕ್ತಿ ಉಳಿದವರಿಗಿಂತ ವಿಶೇಷವಾಗಿರುತ್ತದೆ.  ಈ ಸಂಘಟನೆಯಲ್ಲಿ ಒಂದು ಮತ್ತೊಂದಕ್ಕೆ ಸಾದೃಶ್ಯವಿರುವ ಸಂಗತಿಗಳ ನೆನಪನ್ನು ಮಾಡಿಕೊಳ್ಳುವುದಕ್ಕಿಂತ, ಒಂದು ಮತ್ತೊಂದಕ್ಕೆ ಸಂಬಂಧವಿಲ್ಲ ವೆನ್ನುವಂತಹ ವಿಲಕ್ಷಣವಾದ ಸಂಗತಿಗಳನ್ನೂ ಸಂಘಟಿಸುವುದರಲ್ಲಿ ಪ್ರತಿಭೆಯ ವಿಶೇಷತೆಯನ್ನು ಗುರುತಿಸಬಹುದು.  ನಿದರ್ಶನಕ್ಕೆ ಪಂಪನ ‘ವಿಕ್ರಮಾರ್ಜುನ ವಿಜಯ’ ದಿಂದ ಒಂದು ಸಂದರ್ಭವನ್ನು ಗಮನಿಸಬಹುದು: ಭೀಮ-ಜರಾಸಂಧ ಇವರಿಬ್ಬರ ಯುದ್ಧವನ್ನು ವರ್ಣಿಸುತ್ತಾ ಕವಿ ಎರಡು ಪ್ರತಿಮೆಗಳನ್ನು ಮುಂದಿಡುತ್ತಾನೆ.

ತತ್‌ಕುಲಶೈಲಂ ಕುಲಶೈಲದೊಳ್ ಕಲುಷದಿಂದ ಪೋರ್ವಂತೆವೊಲ್ ಪೋರ್ದು
ನೈದಿಲ ಕಾವಂ ತುದಿಗೆಯ್ದೆ ಸೀಳ್ವ ತೆರದಿಂ
ಸೀಳ್ದಂ ಜರಾಸಂಧನಂ (ಪಂ.ಭಾ: ೬-೨೭)

-ಇಲ್ಲಿ ಎರಡು ಪರಸ್ಪರ ವಿರುದ್ಧವಾದ ಪ್ರತಿಮೆ ಅಥವಾ ಚಿತ್ರಗಳಿವೆ. ಒಂದು, ಭೀಮ ಜರಾಸಂಧರು ಹೋರಾಡಿದ್ದು, ಒಂದು ಕುಲಪರ್ವತ ಮತ್ತೊಂದು ಕುಲಪರ್ವತದೊಂದಿಗೆ ಹೋರಾಡಿದಂತಿತ್ತು ಎನ್ನುವುದು; ಇನ್ನೊಂದು, ಇಂಥ ಹೋರಾಟದ ಪರಿಣಾಮ, ಭೀಮ ಜರಾಸಂಧನನ್ನು ಸೀಳಿ ಬಿಸುಟಿದ್ದು, ನೈದಿಲೆಯ ಹೂವಿನ ಕಾವನ್ನು ಸೀಳಿ ಬಿಸಾಡಿದಷ್ಟು ಸಲೀಸಾಗಿತ್ತು ಎನ್ನುವುದು.  ಪರ್ವತಗಳ ಪ್ರತಿಮೆ ಒಂದು, ನೈದಿಲೆಯ ಹೂವನ್ನು ಸೀಳುವ ಕ್ರಿಯೆ ಇನ್ನೊಂದು. ಯುದ್ಧ ಮತ್ತು ಅದರ ಮುಕ್ತಾಯದಂಥ ಒಂದೇ ಘಟನೆಯನ್ನು ಎರಡು ಪರಸ್ಪರ ವಿರುದ್ಧವಾದ, ಬಹುಮಟ್ಟಿಗೆ ಅಸಂಬದ್ಧವೆಂಬಂತಹ ಪ್ರತಿಮೆಗಳನ್ನು ಬಳಸುವುದರ ಮೂಲಕ, ಒಂದು ಕ್ರಿಯೆಯನ್ನು ಸೂಚಿಸುವ ಒಂದು ಪ್ರತಿಮೆಯಿಂದ ಮತ್ತೊಂದು ಕ್ರಿಯೆಯನ್ನು ಸೂಚಿಸುವ ಇನ್ನೊಂದು ಪ್ರತಿಮೆಗೆ ಯಾವ ಆಘಾತವೂ ಇಲ್ಲದಂತೆ ಸಲೀಸಾಗಿ ಇಳಿಯುವ ಈ ಸಮತೂಕ ಆಶ್ಚರ್ಯಕರವಾಗಿದೆ. ಇಬ್ಬರು ಭೀಮಕಾಯರಾದ ವ್ಯಕ್ತಿಗಳ  ಹೋರಾಟವನ್ನು ‘ಒಂದು ಕುಲಪರ್ವತ ಮತ್ತೊಂದು ಕುಲಪರ್ವತದೊಂದಿಗೆ ಹೋರಾಡಿದಂತಿತ್ತು’ ಎಂಬ ಒಂದೇ ಮಾತಿನಲ್ಲಿ ಆ ಹೋರಾಟದ ಮಹತ್ತನ್ನು ಸಹೃದಯರ ಪರಿಭಾವನೆಗೆ ತಂದುಕೊಟ್ಟು, ತಟಕ್ಕನೆ ‘ನೈದಿಲಕಾವಂ ತುದಿಗೆಯ್ದೆ ಸೀಳ್ವ ತೆರದಿಂ ಸೀಳ್ದಂ’ ಎಂಬ ಮಾತಿನಲ್ಲಿ ಅತ್ಯಂತ ಸರಳವಾದ, ಹೂವೊಂದನ್ನು ತುದಿಯವರೆಗೂ ಸೀಳುವ ಚಿತ್ರಕ್ಕೆ ಓದುಗರ ಮನಸ್ಸನ್ನು ತಂದು, ಯುದ್ಧದ ಪರಿಣಾಮವನ್ನು ವರ್ಣಿಸಿರುವುದು ಆಶ್ಚರ್ಯಕರವಾಗಿದೆ. ‘ಕುಲಶೈಲ’ ‘ನೈದಿಲಕಾವು’ ಈ ಎರಡು ಚಿತ್ರಗಳಿಗೆ, ಸಾಮಾನ್ಯ ವ್ಯವಹಾರದಲ್ಲಿ ಯಾವ ಸಂಬಂಧವೂ ಇಲ್ಲ; ಆದರೆ ಈ ಎರಡನ್ನೂ ಒಂದೇ ಕ್ರಿಯೆಯ ವರ್ಣನೆಗೆ ಸಂಘಟಿಸಿದ್ದು ಕವಿ ಪ್ರತಿಭೆಯ ಅಪೂರ್ವತೆಗೆ ಸಾಕ್ಷಿಯಾಗಿದೆ.

ಪ್ರತಿಭೆಯ ಕಾರ್ಯದಲ್ಲಿ ಸ್ಮರಣಾನುಭವಗಳ ಪಾತ್ರ ದೊಡ್ಡದು ಎಂಬುದನ್ನು ಪಾಶ್ಚಾತ್ಯ ವಿಮರ್ಶಕರು ಒತ್ತಿ ಹೇಳಿದಷ್ಟರ ಮಟ್ಟಿಗೆ ಭಾರತೀಯ ಆಲಂಕಾರಿಕರು ವಿವರಿಸಿ ಹೇಳದಿದ್ದರೂ, ಪ್ರತಿಭೆಯಲ್ಲಿ ಸ್ಮರಣೆಯ ಅಂಶವೂ ಮುಖ್ಯವಾದುದೆಂಬುದನ್ನು ಗುರುತಿಸದೆ ಇಲ್ಲ. ಪ್ರತಿಭೆಯನ್ನು ನವನವ ಉನ್ಮೇಷಶಾಲಿನಿಯಾದ  ಪ್ರಜ್ಞೆ ಎಂದು ನಮ್ಮವರು ಕರೆದಿದ್ದಾರೆ. ‘ಪ್ರಜ್ಞೆ’ ಎಂಬುದು ‘ಸ್ಮೃತಿ’, ‘ಬುದ್ಧಿ’ ಮತ್ತು ‘ಮತಿ’ ಈ ಮೂರನ್ನು ಒಳಗೊಳ್ಳುತ್ತದೆ ಎಂಬ ಮಾತನ್ನು ಆಗಲೆ ಗಮನಿಸಲಾಗಿದೆ. ರಾಜಶೇಖರನು ತನ್ನ ಕಾವ್ಯಮೀಮಾಂಸೆಯಲ್ಲಿ ಕಾವ್ಯಕ್ಕೆ ಎಂಟು ಜನ ತಾಯಂದಿರು ಎಂದು ಎಂಟು ಬಗೆಯ ಸಾಮರ್ಥ್ಯಗಳನ್ನು ಹೇಳುವ ಪಟ್ಟಿಯಲ್ಲಿ ‘ಸ್ಮೃತಿ ದಾರ್ಢ್ಯವೂ’ (ದೃಢವಾದ ಜ್ಞಾಪಕಶಕ್ತಿ) ಒಂದೆಂದು ಪರಿಗಣಿಸಿದ್ದಾನೆ.[12] ಕಾವ್ಯ ನಿರ್ಮಿತಿಗೆ, ಪಾಶ್ಚಾತ್ಯರಂತೆ ದೃಢವಾದ ಜ್ಞಾಪಕಶಕ್ತಿ ಅಗತ್ಯವೆಂಬುದನ್ನು ನಮ್ಮವರೂ ಪ್ರಾಸಂಗಿಕವಾಗಿ ಗುರುತಿಸಿದರೂ ಪ್ರತಿಭೆಯ ಕಾರ್ಯ ನಿರ್ವಹಣೆಯಲ್ಲಿ ಈ ‘ಸ್ಮೃತಿ’ಯ ಪಾತ್ರವೇನು ಎನ್ನುವ ಸಂಗತಿಯನ್ನು ಹೇಳಲಿಲ್ಲ.

ಪಾಶ್ಚಾತ್ಯ ವಿಮರ್ಶಕರು ಪ್ರತಿಭೆಯ ಲಕ್ಷಣವನ್ನು ಕುರಿತು ಹೇಳಿರುವ ಮತ್ತೊಂದು ಅಭಿಪ್ರಾಯವೆಂದರೆ “ಅದು ಅನ್ಯಮನೋಧರ್ಮಗಳನ್ನು ಸಹಾನುಭೂತಿಯಿಂದ ಒಳಹೊಕ್ಕು ನೋಡುವ, ಮತ್ತು ವಿಶೇಷತಃ ಅಂತರನುಭವಗಳನ್ನು ಅಭಿವ್ಯಕ್ತಪಡಿಸುವ ಸಾಮರ್ಥ್ಯ”[13] ಎನ್ನುವುದು. ಇದಂತೂ ಬಹು ಮುಖ್ಯವಾದ ಅಂಶವೆ. ಪ್ರತಿಭಾವಂತನ ಅಥವಾ ಕವಿಯ ಮನೋಧರ್ಮವೇ ಅಂಥದ್ದು: ಕೀಟ್ಸ್ ಕವಿ ಹೇಳಿದ ಹಾಗೆ ಕವಿಯ ವ್ಯಕ್ತಿತ್ವ ಸದಾ ಅನ್ಯಮನೋಧರ್ಮಗಳನ್ನು ಒಳಹೊಕ್ಕು ಸಹಾನುಭೂತಿಯಿಂದ ನೋಡುತ್ತದೆ. ನಾವಾದರೋ ಲೋಕದಲ್ಲಿ ವ್ಯಕ್ತಿಗಳನ್ನು ಒಂದೇ ಮಗ್ಗುಲಿನಿಂದ ನೋಡುತ್ತೇವೆ; ಕವಿ ಸಮಗ್ರವಾಗಿ ನೋಡುತ್ತಾನೆ. ಸಮಗ್ರವಾಗಿ ನೋಡುವುದು ಎಂದರೆ, ವಸ್ತು ಅಥವಾ ವ್ಯಕ್ತಿಗಳ ಅಂತರಂಗವನ್ನು ಪ್ರವೇಶಿಸಿ, ಆಯಾ ಮನಃಸ್ಥಿತಿಗಳನ್ನು ಬದುಕಿ ನೋಡುವುದು ಎಂದು ಅರ್ಥ. ಸಂಪೂರ್ಣ ತಾದಾತ್ಮ ವಿಲ್ಲದೆ ನಾವು ಯಾವುದರ ಅಂತರಂಗವನ್ನೂ ಅರಿಯಲಾಗುವುದಿಲ್ಲ. ಕವಿಯಾದವನು ತನ್ನ ಕೃತಿಯಲ್ಲಿ ಒಂದೊಂದು ಪಾತ್ರವನ್ನು ಚಿತ್ರಿಸುವಾಗ ಆಯಾ ಪಾತ್ರದ ಅಂತರಂಗವನ್ನು ಹೊಕ್ಕು ಸಹಾನುಭೂತಿಯಿಂದ ನೋಡಿ ಆಯಾ ಪಾತ್ರಗಳ ಸ್ವಭಾವವನ್ನು ಚಿತ್ರಿಸುತ್ತಾನೆ. ಭಾರತೀಯ ಆಲಂಕಾರಿಕರು ಈ ಒಂದು ಸಾಮರ್ಥ್ಯಕ್ಕೆ ‘ದರ್ಶನ’ ಎಂದು ಕರೆದಂತೆ ತೋರುತ್ತದೆ. ಹೇಮಚಂದ್ರನ ಕಾವ್ಯಾನುಶಾಸನದಲ್ಲಿ

ವಿಚಿತ್ರವಾದ ಧರ್ಮಾಂಶತತ್ವ ಪ್ರಖ್ಯಾಚ ದರ್ಶನಂ|
ಸ ತತ್ವ ದರ್ಶಯಾದೇವ ಶಾಸ್ತ್ರೇಷು ಪಠಿತಃ ಕವಿಃ||

“ಜಗತ್ತಿನ ವಿವಿಧ ವಸ್ತುಗಳ ಧರ್ಮಾಂಶದ ತತ್ವವನ್ನು ಕಾಣುವುದೇ ದರ್ಶನ. ತತ್ವ ದರ್ಶನವನ್ನು ಹೊಂದಿರುವಷ್ಟಕ್ಕೇ ಒಬ್ಬನಿಗೆ ‘ಕವಿ’ ಎಂಬ ಹೆಸರು ಶಾಸ್ತ್ರಗಳಲ್ಲಿ ಉಕ್ತವಾಗಿದೆ”[14] ದರ್ಶನ ಎಂದರೆ ಸುಮ್ಮನೆ ನೋಡುವುದಲ್ಲ; ಒಳಹೊಕ್ಕು ನೋಡುವುದು. ಕವಿ ಎಂದರೆ ಕ್ರಾಂತದರ್ಶಿ-ಹೊರಗಿನ ಹೊದಿಕೆಯನ್ನು ಸರಿಸಿ ಅಂತರಂಗವನ್ನು ನೋಡುವವನು, ಮತ್ತು ‘ಸರ್ವದೃಕ್’ ಸಮಸ್ತವನ್ನೂ ಕಾಣಬಲ್ಲವನು ಎಂಬ ಮಾತು ಈಶಾವಾಸ್ಯ ಉಪನಿಷತ್ತಿನಲ್ಲಿ ಬಂದಿದೆ.

“ಪ್ರತಿಭೆಯ ಪ್ರಮುಖವಾದ ಹಾಗೂ ಪರಿಚಿತವಾದ ಕಾರ್ಯವೆಂದರೆ, ಚಿತ್ರ ನಿರ್ಮಾಣ ಸಾಮರ್ಥ್ಯ; ವಾಸ್ತವವಾಗಿ ದೃಗ್ಗೋಚರವಾಗುವ ಅಥವಾ ಎಂದೂ ಇರಲಾರದ ವಸ್ತುಗಳ ಚಿತ್ರವನ್ನು ಕಲ್ಪಿಸುವ ಸಾಮರ್ಥ್ಯ.”[15] “ಸ್ಫುಟವಾದ ಚಿತ್ರ ನಿರ್ಮಾಣಶಕ್ತಿ.”[16] ಕೇವಲ ಅನುಕರಣೆಗೂ ಪ್ರತಿಭೆಗೂ ವ್ಯತ್ಯಾಸವಿರುವುದು ಇಲ್ಲಿಯೇ; “ಅನುಕರಣೆ ಕಂಡದ್ದಕ್ಕೆ ಮಾತ್ರ ರೂಪು ಕೊಟ್ಟರೆ, ಪ್ರತಿಭೆ ಕಾಣುದುದನ್ನೂ ಕಂಡಿತೆಂಬಂತೆ ರೂಪಿಸಿ ತೋರುತ್ತದೆ.”[17] “ಪ್ರತಿಭೆ ಎನ್ನುವುದು ಕೇವಲ ಒಂದು ಕನ್ನಡಿ ಎಂದೂ, ಪ್ರತಿಮೆಗಳು ಅದರಲ್ಲಿ ಪ್ರತಿಫಲಿತವಾಗುತ್ತವೆ ಎಂದೂ ತಿಳಿಯಬಾರದು, ಕ್ರಿಯಾಭಿಮುಖವಾದಾಗ ಅದು ಕವಿ ಸತ್ಯವನ್ನು ಶೋಧಿಸುವ ಒಂದು ಸಾಧನವೂ ಹೌದು.”[18] ಕವಿ ತೆಳುಗಾಳಿಗೆ ಒಲೆಯುವ ಬಳ್ಳಿಯೊಂದನ್ನು ಕಂಡು “ಲತಾನಟಿ” ಎಂದು ಕರೆದಾಗ, ಅದು ಅವನು ತಾನು ಕಂಡ ಎರಡು ಸಂಗತಿಗಳ ಸಾದೃಶ್ಯದಿಂದ ನಿರ್ಮಿಸಿದ ಚಿತ್ರವಾಗುತ್ತದೆ. ಆದರೆ ಒಂದು ದೇಶದ ಪುರಾಣ ಸಾಮಗ್ರಿಯನ್ನು ನೋಡಿದರೆ ಅಲ್ಲಿ ವಿಲಕ್ಷಣವಾದ ಸಂಗತಿಗಳ, ವ್ಯಕ್ತಿಗಳ, ಚಿತ್ರಗಳನ್ನು ಕಾಣಬಹುದು.  ಪ್ರತಿಭೆ ವಾಸ್ತವವಾಗಿ ಇಲ್ಲದ್ದನ್ನೂ ಚಿತ್ರಿಸಬಲ್ಲದು ಎಂದರೆ, ಅದು ಚಿತ್ರಿಸುವುದೆಲ್ಲವೂ ಬಹು ಮಟ್ಟಿಗೆ ಸುಳ್ಳು ಎಂದು ಅರ್ಥವಲ್ಲ; ಹಾಗೆ ಚಿತ್ರಿತವಾದದ್ದು ಯಾವ ಸತ್ಯಕ್ಕೆ ಸಂಕೇತವಾಗಿದೆ ಅಥವಾ ಪ್ರತಿಮೆಯಾಗಿದೆ ಎಂಬುದನ್ನು ಗ್ರಹಿಸದೆ ಹೋದಾಗ ಪ್ರತಿಭಾ ನಿರ್ಮಿತಿಯ ಬಗೆಗೆ ಇಂಥ ಹೇಳಿಕೆಗಳು ಹುಟ್ಟಿಕೊಳ್ಳುತ್ತವೆ.  ಪಾಶ್ಚಾತ್ಯರಲ್ಲೂ ಪ್ರತಿಭೆಯನ್ನು ಸುಳ್ಳು-ಪೊಳ್ಳುಗಳ ತಾಯಿ -ಎಂದೂ ಕರೆದದ್ದುಂಟು. ನಮ್ಮಲ್ಲೂ “ಕಾವ್ಯ ಸುಳ್ಳನ್ನು ಹೇಳುತ್ತದೆ” ಎಂಬ ಕೆಲವರ ಆಕ್ಷೇಪಣೆಗೆ, ರಾಜಶೇಖರನೆಂಬ ಆಲಂಕಾರಿಕ ಉತ್ತರ ಕೊಟ್ಟಿದ್ದಾನೆ. ಪ್ರತಿಭಾ ನಿರ್ಮಿತವಾದದ್ದು ಸತ್ಯವೇ ಸುಳ್ಳೇ -ಎಂಬ ಚರ್ಚೆ ಇಲ್ಲಿ ಅಪ್ರಕೃತ. ಆದರೆ ‘ಕಾವ್ಯ ಸತ್ಯ’ ಎಂಬುದು ಲೋಕ ಸತ್ಯದಿಂದ ಭಿನ್ನವಾದದ್ದು: ಯಾಕೆಂದರೆ ಕಾವ್ಯ ಅಥವಾ ಪ್ರತಿಭಾ ನಿರ್ಮಿತಿ ಎಂಬುದು ಒಂದು ವಿಶಿಷ್ಟವಾದ, ಪರಿವರ್ತಿತ ಜಗತ್ತು. ಆದುದರಿಂದ ಪ್ರಾತಿಭಾಸಿಕ ಸತ್ಯವನ್ನು ನೋಡುವ ರೀತಿಯೆ ಬೇರೆ ಆಗಬೇಕು ಎಂದು ಇಲ್ಲಿ ಹೇಳಿದರೆ ಸಾಕು. ಆದರೂ ಯಾವ ಪ್ರತಿಭಾ ನಿರ್ಮಾಣವೂ ನಿರಾಧಾರ ಶೂನ್ಯದಿಂದ ಹೊಮ್ಮಲು ಸಾಧ್ಯವಿಲ್ಲ; ತಾನು ಪಟ್ಟ ಅನುಭವಗಳಿಗೆ ಒಂದು ರೀತಿಯ ಅತಿಶಯತೆಯನ್ನು ನಿರ್ಮಿಸುವುದರಲ್ಲಿಯೆ ಪ್ರತಿಭೆಯ ಅಪೂರ್ವತೆ ಇದೆ. ಎಂದರೆ ಯಾವೆಲ್ಲ ಅನುಭವಗಳಿಗೂ ದೃಗ್ಗೋಚರವಾಗುವ ಅಥವಾ ಮನೋಗೋಚರವಾಗುವ ಚಿತ್ರಗಳಲ್ಲಿ ಅಥವಾ ಪ್ರತಿಮೆಗಳಲ್ಲಿ ರೂಪಧಾರಣೆ ಮಾಡಿ ನಿಲ್ಲಿಸುವ ಶಕ್ತಿ ಪ್ರತಿಭೆಗೆ ಇದೆ.* ಹೀಗೆ ಚಿತ್ರ ನಿರ್ಮಾಣ ನಡೆಯುವುದು ಉಪಮಾ-ರೂಪಕಾದಿಗಳ ಮೂಲಕ. ಸಾಲಂಕೃತ ಭಾಷಾ ನಿರ್ಮಾಣ ಕೌಶಲ್ಯದ ಮೂಲಕವೆ ಕವಿಪ್ರತಿಭೆ ಅನುಭವಗಳಿಗೆ ಆಕಾರವನ್ನು ಕೊಡುತ್ತದೆ. ಯಾವ ಕವಿಯಲ್ಲಿ ವಿಶೇಷವಾದ ಈ ರೂಪಕ-ಪ್ರತಿಮಾ ನಿರ್ಮಾಣಗಳನ್ನು ಕಾಣುತ್ತೇವೆಯೊ ಅವನನ್ನು ಪ್ರತಿಭಾವಂತ ಎನ್ನುತ್ತೇವೆ. ಕವಿಯ ಉಕ್ತಿ ವೈಚಿತ್ರ  ವೆನಿಸಿಕೊಳ್ಳುವ ಈ ಚಿತ್ರನಿರ್ಮಿತಿಯನ್ನು ಕುಂತಕನೆಂಬ ಭಾರತೀಯ ಆಲಂಕಾರಿಕ ‘ವಕ್ರೋಕ್ತಿ’ ಎಂದು ಕರೆದಿದ್ದಾನೆ. ‘ವಕ್ರತೆ’ ಎಂದರೆ ‘ವಿಚಿತೆವ ಅಭಿದಾ’ (ವಿಚಿತ್ರವಾದ ಅಭಿವ್ಯಕ್ತಿ) ಎಂದು ಅವನ ವಿವರಣೆ. ಕಾವ್ಯದ ಭಾಷೆಯಲ್ಲಿ ಚಿತ್ರವೂ ಇದೆ; ಲೋಕ-ಶಾಸ್ತ್ರಾದಿ ಭಾಷೆಗಿಲ್ಲದ ಒಂದು ವೈಚಿತ್ರ ವೂ ಇದೆ. ಹೊಸ ಹೊಸ ಅರ್ಥವನ್ನು ಕಾಣುವ ಪ್ರತಿಭೆ ‘ನವನವ ಉಲ್ಲೇಖ’ದ ಮಾಧ್ಯಮವಾಗಿ ಭಾಷೆಯನ್ನು ಪರಿವರ್ತಿಸಿ, ಉಪಮಾ ರೂಪಕಾದಿ ಚಿತ್ರ ನಿರ್ಮಾಣದಲ್ಲಿ ಕಾವ್ಯಭಾಷೆಯನ್ನು ‘ಸಾಲಂಕೃತ’ವನ್ನಾಗಿ ಮಾಡುತ್ತದೆ. ಹೀಗೆ ‘ಸಾಲಂಕೃತ ಭಾಷಾ ನಿರ್ಮಾಣ ಸಾಮರ್ಥ್ಯವೂ’ ಪ್ರತಿಭೆಯ ಕಾರ್ಯವೇ.

ಕಾವ್ಯದ ರೀತಿ ಅಥವಾ ಶೈಲಿಯೂ ಪ್ರತಿಭಾ ನಿರ್ಮಿತವಾದದ್ದು ಮಾತ್ರವಲ್ಲ, ಒಂದು ನಿರ್ದಿಷ್ಟವಾದ ಪರಿಣಾಮ ತೀವ್ರತೆಗಾಗಿ ಅನುಭವಗಳನ್ನು ವ್ಯವಸ್ಥೆಗೊಳಿಸುವ ತಂತ್ರರಚನಾ ಕೌಶಲವೂ ಪ್ರತಿಭೆಯಿಂದ ನಿಯಂತ್ರಿತವಾದದ್ದು. ಕಾವ್ಯ ಕಲೆಗಳಲ್ಲಿ ಕಂಡು ಬರುವ ತಾಂತ್ರಿಕ ಸಿದ್ಧಿಗಳಿಗೆ (technical triumphs) ಈ ಮಾತು ಅನ್ವಯಿಸುತ್ತದೆ. “ಯಾವುದು ಶಬ್ದ ಸಮೂಹವನ್ನೂ ಅರ್ಥಪುಂಜವನ್ನೂ ಅಲಂಕಾರ ತಂತ್ರವನ್ನೂ ಇದೇ ಬಗೆಯ ಉಕ್ತಿಮಾರ್ಗವನ್ನೂ ಹೃದಯದಲ್ಲಿ ಹೊಳೆಯಿಸುತ್ತದೋ ಅದೇ ಪ್ರತಿಭೆ”[19] ಎಂದ ರಾಜಶೇಖರನ ಮತದೊಂದಿಗೆ, ಕಾವ್ಯದಲ್ಲಿ ಏನೇನು ವೈಚಿತ್ರ ಗಳುಂಟೋ ಅದೆಲ್ಲವೂ ಪ್ರತಿಭೆಯ ಪರಿಣಾಮವೆ-

ಯತ್‌ಕಿಂಚನಾಪಿ ವೈಚಿತ್ರ  ತತ್ ಸರ್ವಂ ಪ್ರತಿಭೋದ್ಭವಂ”

-ಎಂದ ಕುಂತಕನ ಹೇಳಿಕೆಯನ್ನೂ ಇಲ್ಲಿ ನೆನೆಯಬಹುದು.

ಪಾಶ್ಚಾತ್ಯ ಕಾವ್ಯಮೀಮಾಂಸೆಯಲ್ಲಿ Imagination ಅನ್ನು ಕುರಿತು ಕೋಲ್‌ರಿಜ್‌ನ ಬರವಣಿಗೆಯಲ್ಲಿ ಕಂಡು ಬರುವ ವಿಚಾರಗಳು ಅಮೂಲ್ಯವೂ ವಿಶಿಷ್ಟವೂ ಆಗಿರುವುದಷ್ಟೇ ಅಲ್ಲ, ವಿಶೇಷ ಚರ್ಚಾಸ್ಪದವೂ ಮತ್ತು ಪ್ರಭಾವಶಾಲಿಯೂ ಆಗಿವೆ. ಕೋಲ್‌ರಿಜ್ ಪ್ರತಿಪಾದಿಸಿರುವ ಸಿದ್ಧಾಂತದಲ್ಲಿ ಪ್ಲಾಟಿನಸ್ ಮತ್ತು ಇಮ್ಯಾನುಯಲ್ ಕ್ಯಾಂಟ್ ಇವರ ವಿಚಾರಗಳ ಪ್ರಭಾವವನ್ನು ಗುರುತಿಸಬಹುದಾಗಿದೆ.

“ಕೋಲ್‌ರಿಜ್‌ನ ಕಾವ್ಯಸಿದ್ಧಾಂತದ ಬಗೆಗೆ ಎರಡು ಆಕ್ಷೇಪಣೆಗಳಿವೆ : ಒಂದು ತನ್ನ ಆತ್ಮಚರಿತ್ರೆ (Autobiography) ಯೊಂದಿಗೆ ತತ್ವಶಾಸ್ತ್ರ  (phlosophy)ವನ್ನು ಬೆರೆಸುತ್ತಾನೆ ಎಂಬುದು; ಎರಡನೆಯದು ಕಾವ್ಯಮೀಮಾಂಸೆಯೊಂದಿಗೆ ತತ್ವಶಾಸ್ತ್ರವನ್ನು ಬೆರೆಸುತ್ತಾನೆ ಎಂಬುದು.”[20] ಕೋಲ್‌ರಿಜ್‌ನ ಕಾವ್ಯಮೀಮಾಂಸೆಯೊಂದಿಗೆ ತತ್ವಶಾಶ್ತ್ರ ಬೆರೆತಿರುವುದು ನಿಜ. ಈ ಮಾತು ಭಾರತೀಯ ಆಲಂಕಾರಿಕರ ವಿಚಾರದಲ್ಲೂ ನಿಜ.

ದೇವರು ಈ ಸೃಷ್ಟಿಯನ್ನು ನಿರ್ಮಿಸಿದ್ದಾರೆ. ಆದಕಾರಣ ಅವನದೇ ಒಂದು ಅಂಶವಾದ ಮಾನವನಲ್ಲಿಯೂ ಈ ಸೃಷ್ಟಿಸುವ ಶಕ್ತಿ ಸಹಜವಾಗಿಯೆ ಇದೆ ಎಂಬ ಭಾವನೆಯನ್ನು ಕೋಲ್‌ರಿಜ್ ಅಂಗೀಕರಿಸುತ್ತಾನೆ. ತನ್ನ Biographia Literariaದಲ್ಲಿ “ಆ ಅನಂತವಾದ ‘ನಾನು’ ಎಂಬುದರ ಅನಾದಿ ಸೃಜನಕ್ರಿಯೆಯ ಒಂದು ಪುನರಾವೃತ್ತಿ ಈ ಸಾಂತವಾದ ಮನಸ್ಸಿನಲ್ಲಿ ನಡೆಯುತ್ತಿದೆ”[21] – ಎಂಬ ಈ ಭಾವನೆಯ ಅವನ ಪ್ರತಿಭಾ ಸಿದ್ಧಾಂತಕ್ಕೆ ಬುನಾದಿಯಾಗಿದೆ.

ಕೋಲ್‌ರಿಜ್ ಪ್ರಕಾರ ನಮ್ಮ ಎಲ್ಲ ಅರಿವಿನ ಮೂಲ ಸತ್ವವೇ Imagination ಅಥವಾ ಪ್ರತಿಭೆ. ನಾವು ವಾಸ್ತವ ಎಂದು ಭಾವಿಸುವ ಈ ಲೋಕ ಕೂಡ ನಮ್ಮ ಪ್ರತಿಭೆಯ ಕಣ್ಣಿಗೆ ಕಂಡದ್ದೇ. ಯಾಕೆಂದರೆ, ನಾವು ಜಗತ್ತನ್ನು ನೋಡುವುದು ಎಂದರೆ, ಅದನ್ನು ನಮ್ಮ ಮನೋಧರ್ಮದ ಮೂಲಕವಾಗಿಯೆ ನೋಡುತ್ತೇವೆ; ಅಥವಾ ಅದನ್ನು ಯಥಾವತ್ತಾಗಿ ನೋಡದೆ ಸಾಂಕೇತಿಕವಾಗಿಯೆ ಗ್ರಹಿಸುತ್ತೇವೆ. ಹೀಗೆ ಪ್ರತಿಯೊಬ್ಬನೂ ತನ್ನ ಮೂಲಕ ಕಾಣುವ ಈ ವಾಸ್ತವ ಜಗತ್ತು ಎನ್ನುವುದು ಔಪಚಾರಿಕವಾದದ್ದು; ಆದರೆ ಅದು ಮೂಲತಃ ಅವನವನ “ಕಲ್ಪನೆ”ಯೇ. ಯಾವ ಸಾಮರ್ಥ್ಯದ ಸಹಾಯದಿಂದ ಮನುಷ್ಯ ತನ್ನ ಇಂದ್ರಿಯಗಳ ಮೂಲಕ ಜಗತ್ತನ್ನು ಪುನಃ ಸೃಷ್ಟಿಸಿಕೊಳ್ಳುತ್ತಾನೋ ಅದನ್ನು ಕೋಲ್‌ರಿಜ್ “Primary Imagination” -ಮೂಲ ಪ್ರತಿಭೆ -ಎಂದು ಕರೆಯುತ್ತಾನೆ.  ನಾವು ಕಾಣುವ ವ್ಯಾವಹಾರಿಕವಾದ ಈ ಜಗತ್ತು ನಮ್ಮ ಮೂಲ ಪ್ರತಿಭೆಯ ಜಗತ್ತು. ಈ ಪ್ರಥಮ ದೃಷ್ಟಿಗೆ ಕಂಡ ಜಗತ್ತನ್ನು ಕವಿಯ ಸೃಜನಾತ್ಮಕ ಪ್ರತಿಭೆ ಮುರಿದು, ಕರಗಿಸಿ ಅದರಿಂದ ಬೇರೊಂದು ನಿರ್ಮಿತಿಯಲ್ಲಿ ತೊಡಗುವ ಕಾರಣ ಕವಿಪ್ರತಿಭೆಯನ್ನು ಕೋಲ್‌ರಿಜ್ ‘ದ್ವಿತೀಯ ಪ್ರತಿಭೆ’ – Secondary Imagination ಎಂದು ಕರೆಯುತ್ತಾನೆ. ಆದಕಾರಣ ಸ್ವಾರ್ಥ ಹಾಗೂ ಪ್ರಾಯೋಜನಿಕವಾದ ಮೂಲಪ್ರತಿಭೆಯ ದೈನಂದಿನ ಚಿರಪರಿಚಿತ ಜಗತ್ತಿನ ಅನುಭವಗಳನ್ನು ಮುರಿದು, ಕರಗಿಸಿ, ಅದೇ ಸಾಮಗ್ರಿಯಿಂದ ‘ದ್ವಿತೀಯ ಪ್ರತಿಭೆ’ ಅಥವಾ ಕವಿಪ್ರತಿಭೆ, ಬೇರೊಂದು ಕಾವ್ಯಜಗತ್ತನ್ನು ನಿರ್ಮಾಣ ಮಾಡುತ್ತದೆ.[22]

ಪ್ರತಿಭೆಯನ್ನು ‘ಮೂಲ, ಮತ್ತು ‘ದ್ವಿತೀಯ’ ಎಂದು ಕೋಲ್‌ರಿಜ್ ವಿಭಾಗಿಸಿ ನೋಡಿದ್ದು ಕಾವ್ಯಮೀಮಾಂಸೆಯ ನೆಲೆಯಲ್ಲಿ ಪ್ರತಿಭೆಯನ್ನು ಕುರಿತು ವಿಚಾರ ಮಾಡುವಲ್ಲಿ ಕೊಂಚ ಗೊಂದಲಕ್ಕೆ ಈಡು ಮಾಡುತ್ತದೆಯಾದರೂ,* ಪ್ರತಿಭೆ ಎನ್ನುವುದು ಕಾವ್ಯನಿರ್ಮಿತಿಯಲ್ಲಿ ಮಾತ್ರವಲ್ಲ, ಅದು ಸಮಸ್ತ ಅನುಭವಗಳ ಮೂಲ ಸತ್ವವಾಗಿದೆ ಎಂದು ಅದರ ವ್ಯಾಪಕತ್ವವನ್ನು ಸ್ಥಾಪಿಸಿದ್ದು ತಾತ್ವಿತ  ಮಹತ್ವವನ್ನು ಉಳ್ಳದಾಗಿದೆ.+ ಕೋಲ್‌ರಿಜ್‌ನ ಈ ತಾತ್ವಿಕ ದೃಷ್ಟಿಗೆ ಪೂರಕವಾಗಬಹುದಾದ ಮತ್ತೊಂದು ವಿಷಯ ವಿಸ್ಮಯವನ್ನು ಕುರಿತದ್ದು: ಈ ಜಗತ್ತು ಅನೇಕ ಬಗೆಯ ವಿಸ್ಮಯಗಳ ಒಂದು ಸಮೂಹ. ಆದಿಮಾನವನು ಎಲ್ಲೆಲ್ಲೂ ವಿಸ್ಮಯವನ್ನು ಕಾಣಬಲ್ಲವನಾಗಿದ್ದರಿಂದ, ಅವನ ಅನುಭವವೆಲ್ಲಾ ವಿಸ್ಮಯವೇ ಆಗಿತ್ತೆಂದೂ, ಅದರ ಪರಿಣಾಮವಾಗಿ ಅವನು ಮಾತಾಡಿದ್ದೆಲ್ಲಾ ಕಾವ್ಯಕ್ಕೆ ಸಮೀಪವಾಗಿತ್ತೆಂದೂ ಕೆಲವರ ಅಭಿಪ್ರಾಯ. ಬದುಕಿನ ಅತ್ಯಮೂಲ್ಯವಾದ ಸತ್ವವೆಂದರೆ ವಿಸ್ಮಯವೇ. ಮೊದಮೊದಲಿಗೆ ಎಲ್ಲರ ಅನುಭವವೂ ವಿಸ್ಮಯಮೂಲವಾದದ್ದೆ. ಎಳೆಯಂದಿನಲ್ಲಿ ನಾವು ಕಾಣುತ್ತಿದ್ದ ವಿಸ್ಮಯ ಬರಬರುತ್ತಾ ದೈನಂದಿನ ಚಿರಪರಿಚಿತ ಸಾಧಾರಣತೆಯಲ್ಲಿ ಲಯವಾಗಿ ಹೋಗುತ್ತದೆ; ಅನಂತರ ನಾವು ವಿಸ್ಮಯಗಳನ್ನು ಬೇರೆ ಬೇರೆಯ ಕಡೆಗಳಲ್ಲಿ ಹುಡುಕಲು ತೊಡಗುತ್ತೇವೆ.  ನೆಲದ ಮೇಲೆ ಹರಿಯುವ ಮೊರೆಯುವ ನೀರು ವಿಸ್ಮಯ; ಅದು ಆವಿಯಾಗಿ ಮೇಲೇರಿ ಆಕಾಶದಲ್ಲಿ ಮೋಡವಾಗಿ ಬಗೆಬಗೆಯ ಆಕಾರಗಳನ್ನು ತಾಳಿ ತೇಲುವುದು ಇನ್ನೊಂದು ವಿಸ್ಮಯ; ಗಿಡದಲ್ಲಿ ಬೆಳಗಾಗ ಬಣ್ಣ ಬಣ್ಣದ ಹೂ ಅರಳಿ ಕಣ್ಣನ್ನು ಸೆಳೆಯುವುದೊಂದು ವಿಸ್ಮಯ; ಬೀಜದೊಳಗಿನಿಂದ ಮೆಲ್ಲಗೆ ಮೊಳಕೆಯೆದ್ದು, ಗಿಡವಾಗಿ ಪುಟಿದು ಮರವಾಗಿ ಬೆಳೆದು ಕೊಂಬೆ ರೆಂಬೆಗಳನ್ನು ಚಾಚಿ ನಿಲ್ಲುವುದು ವಿಸ್ಮಯ. ಆದರೆ ಈ ಎಲ್ಲ ವಿಸ್ಮಯವೂ ಬರಬರುತ್ತಾ ಮರೆತು ಹೋಗಿ, ನೀರು, ಮೋಡ, ಹೂವು, ಗಿಡ, ಮರ ಎಂಬ ಸಾಧಾರಣ ಚಿರಪರಿಚಿತವಾದ ‘ವಸ್ತು’ಗಳಾಗಿ, ಸಂಗತಿ (facts) ಗಳಾಗಿ ಮಾತ್ರ ಇವು ನಮ್ಮ ಅನುಭವಕ್ಕೆ ಸಲ್ಲುತ್ತವೆ. ಆದರೆ ಈ ಚಿರಪರಿಚಿತ ಸಾಧಾರಣ ವಾಸ್ತವದ  ವಸ್ತುಗಳನ್ನು, ಕವಿ ತನ್ನ ಪ್ರತಿಭೆಯಿಂದ ಮತ್ತೆ ಪುನರ್‌ನಿರ್ಮಿಸಿ ವರ್ಣನೆಯ ಮೂಲಕ ಕೊಟ್ಟಾಗ, ನಾವು ಮತ್ತೊಮ್ಮೆ ಹಿಂದೆ ವಿಸ್ಮಯಕಾರಿಯಾಗಿದ್ದು ಆಮೇಲೆ ಸಾಧಾರಣವಾಗಿದ್ದ ಈ ಸಂಗತಿಗಳಲ್ಲಿ ಮತ್ತೆ ವಿಸ್ಮಯವನ್ನೂ ಹೊಸತನವನ್ನೂ ಅನುಭವಿಸಿ ಆನಂದಿಸುತ್ತೇವೆ. ಯಾಕೆಂದರೆ ಯಾರನ್ನು ಕವಿ ಅಥವಾ ಕಲಾವಿದ ಎಂದು ಕರೆಯುತ್ತೇವೋ ಅವರು, ಉದ್ದಕ್ಕೂ ಈ ವಿಸ್ಮಯವನ್ನು ಉಳಿಸಿಕೊಂಡು ಬಂದವರಾಗಿರುತ್ತಾರೆ; ವಿಸ್ಮಯವನ್ನು ಕಾಣುವ ಹಾಗೂ ಕಟ್ಟುವ ಸಾಮರ್ಥ್ಯವನ್ನು ಬೆಳೆಯಿಸಿಕೊಂಡಿರುತ್ತಾರೆ. ಆದುದರಿಂದಲೇ ಕಲಾಕೃತಿಗಳಲ್ಲಿ ನಾವು ಕಾಣುವ ಅದೇ ಲೋಕಾನುಭವಗಳು ನಮಗೆ ಆಶ್ಚರ್ಯವನ್ನು ಹುಟ್ಟಿಸುವಂತಿರುತ್ತವೆ. ನಿದರ್ಶನಕ್ಕೆ ಚಿರಪರಿಚಿತವಾದ ಹೂವೊಂದನ್ನು ಕುರಿತು

ಏನೀಕ್ಷಿಸಲಿಂತರಳಿದೆ
ತಾವರೆ ಹೂದಿಟ್ಟಿ!

-ಎಂದು ಕವಿ ಪು.ತಿ.ನ. ಅವರು, ತಾವು ಕಂಡ ಆಶ್ಚರ್ಯವನ್ನು ಭಾಷೆಯಲ್ಲಿ ಕಟ್ಟಿ ನಿಲ್ಲಿಸಿದಾಗ, ತಾವರೆಯ ಹೂವನ್ನು ‘ಸುಮ್ಮನೆ’ ನೋಡಿದ್ದ ನಮಗೆ “ಏನನ್ನು ನೋಡಲೆಂದು ಹೀಗೆ ಈ ತಾವರೆ ಹೂ ಕಣ್ಣನ್ನು ಅರಳಿಸಿದೆ!” -ಎಂಬ ವರ್ಣನೆ, ನಮಗೆ ತಾವರೆ ಹೂ ಅರಳುವ ಬಗೆಯಲ್ಲಿ ನಾವು ಕಾಣದಿದ್ದ ಬೇರೊಂದು ಆಶ್ಚರ್ಯವನ್ನೂ, ಈ ತಾವರೆ ಹೂವು ಯಾವುದೋ ಚೈತನ್ಯ ಶರೀರದ ಒಂದು ಕಣ್ಣು ಎಂಬಂತೆ ಭಾವಿಸಿದ ವಿಶೇಷತೆಯು ಸಂತೋಷವನ್ನೂ ಉಂಟುಮಾಡುತ್ತದೆ. ಹಾಗೆ ನೋಡಿದರೆ ವಿಜ್ಞಾನಿಯ ಅನುಭವ ಕೂಡ ಮೂಲತಃ ವಿಸ್ಮಯ ರೂಪದ್ದೆ. ನ್ಯೂಟನ್ ಎಂಬ ವಿಜ್ಞಾನಿ, ಸೇಬಿನ ಹಣ್ಣೊಂದು ಮರದಿಂದ ಉದುರಿಬಿದ್ದುದನ್ನು ಕಂಡಾಗ ಅವನ ಪಾಲಿಗೆ ಅದೊಂದು ಆಶ್ಚರ್ಯದಂತೆ  ತೋರಿರಬೇಕು. ವಿಜ್ಞಾನಿ ಈ ಆಶ್ಚರ್ಯದ ಮೂಲಕ್ಕೆ ಪ್ರಶ್ನೆಗಳ ಬೆನ್ನೇರಿ ಅನ್ವೇಷಣೆಗೆ ಹೊರಟಾಗ, ಆಶ್ಚರ್ಯವನ್ನು ತನ್ನ ಚಿಂತನೆಯ ಪ್ರಯೋಗ ಶಾಲೆಯಲ್ಲಿ ಉಳಿಸಿ, ತಾನು ಕಂಡ ವೈಜ್ಞಾನಿಕ ಸತ್ಯದೊಂದಿಗೆ ಹಿಂದಿರುಗಿ ಬರುತ್ತಾನೆ; ಕವಿಯಾದರೋ ಆಶ್ಚರ್ಯದ ಹಿಂದೆ ಹೋಗಿ, ಸತ್ಯವನ್ನು ಸೌಂದರ್ಯದ ಸಮೇತ ಕಟ್ಟಿತಂದು, ಆನಂದಾನುಭವಕ್ಕೆ ದಾರಿ ಮಾಡಿಕೊಡುತ್ತಾನೆ.

ಈ ವಿವರಣೆಯ ಹಿನ್ನೆಲೆಯಲ್ಲಿ ನೋಡಿದಾಗ, ಜಗತ್ತು ಮೂಲತಃ ವಿಸ್ಮಯದ್ದೆ ಆಗಿದ್ದರೂ, ಅದು ನಮ್ಮ ಪಾಲಿಗೆ ದೈನಂದಿನ ಸಾಧಾರಣ ಅನುಭವವೇ ಆಗುವಂತೆ, ಈ ಲೋಕ ಪ್ರಥಮವಾಗಿ ನಮ್ಮ ಪ್ರತಿಭೆಯಿಂದ ಗೃಹೀತವಾದದ್ದಾದರೂ, ಈ ‘ಮೂಲಪ್ರತಿಭೆ’ಯ ಜಗತ್ತನ್ನು ವ್ಯಾವಹಾರಿಕ ಅಥವಾ ವಾಸ್ತವ ಎಂದೇ ತಿಳಿಯುತ್ತೇವೆ. ಸ್ವಾರ್ಥಮೂಲವಾದ, ಪ್ರಾಯೋಜನಿಕವಾದ ಲೋಕದಲ್ಲಿ ಯಾವ ಬಗೆಯ ನಲವೂ ಶುದ್ಧರೂಪದಲ್ಲಿ ನಮಗೆ ದೊರೆಯುವುದಿಲ್ಲ. ಆದಕಾರಣ ‘ದ್ವಿತೀಯ ದೃಷ್ಟಿ’ಯಾದ ಕವಿಪ್ರತಿಭೆ ಮಾಡುವ ಮೊದಲ ಕಾರ್ಯವೆಂದರೆ, ‘ಪ್ರಥಮದೃಷ್ಟಿ’ಯ ಜಗತ್ತನ್ನು ಮುರಿಯುವುದು. ಹೀಗೆ ಮುರಿಯದೆ ಅದು ಬೇರೊಂದನ್ನು ನಿರ್ಮಾಣ ಮಾಡಲು ಸಾಧ್ಯವೇ ಇಲ್ಲ. ಆದುದರಿಂದ ಈ ವ್ಯಾವಹಾರಿಕ ಜಗತ್ತಿನ ಬಗ್ಗೆ ನಮಗಿರುವ ಭಾವನೆಗಳನ್ನು ಗ್ರಹಿಕೆಗಳನ್ನು ಮುರಿದು ಅದೇ ಸಾಮಗ್ರಿಯಿಂದ ಬೇರೊಂದು ಅನೂಹ್ಯವಾದುದನ್ನು ಕಟ್ಟುವ ಕಾರ್ಯದಲ್ಲಿ ಪ್ರವೃತ್ತವಾಗುತ್ತದೆ. ಕವಿ ಮೋಡಗಳನ್ನು ನೋಡಿ-

ಬಾನಿನ ಜಗುಲಿಯ ನೀಲಿಯಲಿ
ಬಿಳಿಮುಗಿಲಿನ ಕೂಸಾಡುತಿದೆ
ಎಂದಾಗ, ದಾರಿಯ ಬದಿಯಲ್ಲಿರುವ ಹೂಬಳ್ಳಿಯೊಂದನ್ನು ನೋಡಿ,
ಯಾರೂ ತುಳಿಯದ ಹಾದಿಯ ಬದಿಯಲಿ
ಮೌನದೊಳಿರುವಳು ಈ ಚೆಲುವೆ

ಎಂದಾಗ, ಮೋಡವೆಂದರೆ ಬರಿಯ ನೀರಿನ ಆವಿ ಎಂಬ ವ್ಯಾವಹಾರಿಕ ಜಗತ್ತಿನ ತಿಳಿವಳಿಕೆಯನ್ನು, ಬಳ್ಳಿ ಎಂದರೆ ಅದೊಂದು ಸಸ್ಯಜಾತಿ, ಅದಕ್ಕಿಂತ ಹೆಚ್ಚಿಗೆ ಏನೂ ಇರಲಿಕ್ಕಿಲ್ಲವೆಂಬ, ನಮ್ಮ ‘ಮೂಲ ಪ್ರತಿಭಾ’ ನಿರ್ಮಿತವಾದ (World of Primary Imagination) ಅನುಭವವನ್ನು, ಮುರಿದು ಮೋಡ ಎನ್ನುವುದು ಬಾನಿನ ಜಗುಲಿಯಲ್ಲಿ ಆಡುವ ಕೂಸು ಎಂದು, ಬಳ್ಳಿ ಎಂದರೆ ಯಾರೂ ತುಳಿಯದ ಹಾದಿಯ ಬದಿಯ ಚೆಲುವೆ ಎಂದು ಕವಿಪ್ರತಿಭೆ ಅಥವಾ ದ್ವಿತೀಯ ಪ್ರತಿಭೆ (Secondary Imagination) ಕಟ್ಟಿದಾಗ, ಸಾಧಾರಣ ಸಂಗತಿಗಳನ್ನು ಪರಿಚಿತವಾದ ನೆಲೆಯಿಂದ ಬೇರೊಂದನ್ನಾಗಿ ಪರಿವರ್ತಿಸಿ, ಬೇರೊಂದು ನೆಲೆಗೆ ಏರಿಸಿದ ಕಾರ್ಯವಾಗಿದೆ.[23] ವಾಸ್ತವಾನುಭವ ಕಣ್ಣನ್ನು ಕಣ್ಣು ಎಂದು ಕರೆದರೆ, ಪ್ರತಿಭೆ ಅದನ್ನು ಕಮಲ, ಮೀನು, ನಕ್ಷತ್ರ ಎನ್ನುತ್ತದೆ; ವಾಸ್ತವಾನುಭವ ಕಮಲವನ್ನು ಕಮಲ ಎಂದರೆ, ಪ್ರತಿಭೆ ಕಮಲವನ್ನು ಕಣ್ಣು ಎನ್ನುತ್ತದೆ!

“ಕೋಲ್‌ರಿಜ್‌ನ ಪ್ರತಿಭಾ ತತ್ವದಲ್ಲಿ ಎರಡು ಮುಖ್ಯವಾದ ಚಿಂತನ ಧಾರೆಗಳಿರುವಂತೆ ತೋರುತ್ತದೆ: ಒಂದು, ಸುತ್ತಣ ಪ್ರಕೃತಿಯೊಂದಿಗೆ ನಾವು ಪಡೆಯುವ ತಾದಾತ್ಮ್ಯದಿಂದ ಅದು ಹೊಮ್ಮುತ್ತದೆ; ಮತ್ತೊಂದು, ತನಗೆ ತಾನೇ ಸ್ವತಂತ್ರವಾದ ಇಚ್ಛಾಶಕ್ತಿಯೊಂದರಿಂದ ಅದು ನಿಷ್ಟನ್ನವಾಗತಕ್ಕದ್ದು. ಈ ಎರಡೂ ಕವಿಯ ಇಡೀ ವ್ಯಕ್ತಿತ್ವದ ನೆರವನ್ನು ಅಪೇಕ್ಷಿಸುತ್ತವೆ.”[24] ಕಾವ್ಯ ನಿರ್ಮಿತಿಯ ಸಮಯದಲ್ಲಿ ಅಥವಾ ಪ್ರತಿಭೆ ಕ್ರಿಯಾಶೀಲವಾಗುವ ಸಂದರ್ಭದಲ್ಲಿ, ಕವಿ ತನ್ನ ಸಮಸ್ತ ಆತ್ಮವನ್ನೇ ಅದರೆಲ್ಲ ಶಕ್ತಿ ಸಾಮರ್ಥ್ಯಗಳೊಂದಿಗೆ, ಒಂದು ಕೇಂದ್ರ ಬಿಂದುವಿಗೆ ತಂದು ನಿಲ್ಲಿಸಿಕೊಳ್ಳುತ್ತಾನೆ. ಸಮಸ್ತ ಆತ್ಮ (the whole sole of man) ಎಂದರೇನು? ಅದನ್ನೆ ಕೋಲ್‌ರಿಜ್ ಅಂತರ್ಮನಸ್ಸು (inner sense) ಎಂದು ಕರೆದಿದ್ದಾನೆ. ಈ  ಅಂತರ್ಮನಸ್ಸು ಸುತ್ತಣ ಲೋಕದೊಂದಿಗೆ ವ್ಯವಹರಿಸುವಾಗ, ಅದು ಅವನವನ ಅಭಿರುಚಿ-ಸಂಸ್ಕಾರ-ದೃಷ್ಟಿಕೋನಗಳಿಗೆ ಅನುಸಾರವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆಯಾಗಬಹುದು. ಈ ಅಂತರ್ಮನಸ್ಸಿನಿಂದಲೇ ಕವಿ ಪರಮ ಸತ್ಯವನ್ನೂ ಗ್ರಹಿಸುವುದು. ಹೀಗೆ ಸತ್ಯವನ್ನು ಗ್ರಹಿಸಿ ಅಭಿವ್ಯಕ್ತಪಡಿಸುವ ಪ್ರತಿಭಾ ವ್ಯಾಪಾರದಲ್ಲಿ ಕವಿಯ ಸಮಸ್ತ ವ್ಯಕ್ತಿತ್ವವೂ ಒಂದು ಚೈತನ್ಯದಂತೆ ಪ್ರವರ್ತಿಸುತ್ತದೆ.[25]

ಕೋಲ್‌ರಿಜ್‌ನು ಇಷ್ಟೊಂದು ವಿವರವಾಗಿ ತನ್ನ ಪ್ರತಿಭಾ ತತ್ವವನ್ನು ಹೇಳಿರದಿದ್ದರೂ, ಇದುವರೆಗಿನ ವಿವರಣೆಯನ್ನು ಅವನ ಸಿದ್ಧಾಂತದ ಎಳೆಗಳಿಂದಲೇ ಕಟ್ಟಲಾಗಿದೆ. ಕೋಲ್‌ರಿಜ್‌ನೆ ಮತ್ತೊಂದೆಡೆ ಪ್ರತಿಭೆ ಎಂದರೇನೆಂಬುದನ್ನು ಹೀಗೆ ವಿವರಿಸಿದ್ದಾನೆ: “ಯಾವ ಒಂದು ಸಂಘಟನಾಶೀಲವಾದ ಮಾಂತ್ರಿಕ ಶಕ್ತಿಯನ್ನು ನಾವು ‘ಪ್ರತಿಭೆ’ ಎಂಬ ವಿಶೇಷಾರ್ಥದಲ್ಲಿ ಹೆಸರಿಸುತ್ತೇವೋ ಅದು, ಪರಸ್ಪರ ವಿರುದ್ಧವೆಂಬಂತೆ ತೋರುವ, ವಿಸಂಗತವೆಂದು ತೋರುವ ಗುಣಗಳನ್ನು ಸಮತೂಕದಲ್ಲಿರಿಸುವ ಅಥವಾ ಹೊಂದಿಸುವ ಕ್ರಿಯೆಯಲ್ಲಿ, ಹಳೆಯ ಹಾಗೂ ಚಿರಪರಿಚಿತವಾಗಿರುವ ಲೋಕವಸ್ತುಗಳಿಗೆ ಒಂದು ಬಗೆಯ ನವತ್ವವನ್ನೂ ಮತ್ತು ಹೊಸ ಕಾಂತಿಯನ್ನೂ ತಂದು ಕೊಡುವುದರಲ್ಲಿ, ಸಾಧಾರಣಕ್ಕಿಂತ ಅತಿಶಯವಾದ ಭಾವಸ್ಥಿತಿಯಲ್ಲಿ, ನಮಗೆ ಬಳಕೆಯಾಗಿರುವ ಕ್ರಮಕ್ಕಿಂತ ಬೇರೆಯಾದ ಒಂದು ವಿಶೇಷ ಕ್ರಮಬದ್ಧತೆಯನ್ನು ತರುವುದರಲ್ಲಿ, ಜಾಗೃತವಾದ ವಿವೇಚನೆಯಲ್ಲಿ, ಉತ್ಸಾಹಪೂರ್ಣವಾದ ದೃಢವಾದ ಸ್ವಾತ್ಮ ಸ್ವಾಮ್ಯದಲ್ಲಿ ಉದಾತ್ತವಾದ ಅಥವಾ ಅಪ್ರತಿಹತವಾದ ಭಾವದಲ್ಲಿ ತನ್ನನ್ನು ತಾನು ಪ್ರಕಟಪಡಿಸಿಕೊಳ್ಳುತ್ತದೆ. ಅದು ಅನೇಕ ಸಂಗತಿಗಳನ್ನು ಒಂದು ಕೇಂದ್ರ ಬಿಂದುವಿಗೆ ಕರಗಿಸಿ ನಿಲ್ಲಿಸುವ ಒಂದು ಪ್ರಧಾನವಾದ ಆಲೋಚನೆ ಅಥವಾ ಭಾವನೆಯಿಂದ ಒಂದರ ಹಿಂದೆ ಒಂದರಂತೆ ಬರುವ ವಿಚಾರಗಳನ್ನು ಮಾರ್ಪಡಿಸುವ ಗೇಯಾತ್ಮಕ ಪ್ರಜ್ಞೆ.”[26]

ಪ್ರತಿಭೆಯನ್ನು ಕುರಿತು ಕೋಲ್‌ರಿಜ್ ಮಾಡುವ ಸಾರವತ್ತಾದ ಈ ವರ್ಣನೆಯಲ್ಲಿ ಭಾರತೀಯ ಆಲಂಕಾರಿಕರು ಪ್ರತಿಭೆಯನ್ನು ಕುರಿತು ಹೇಳಿದ ಅನೇಕ ಅಂಶಗಳಿಗೆ ಸಮಾನವಾದ ಅಂಶಗಳು ಕಾಣುತ್ತವೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ. ಪ್ರತಿಭೆ ಎಂಬುದೊಂದು ಸಂಘಟನಾ ಸಾಮರ್ಥ್ಯ ಉಳ್ಳ ‘ಮಾಂತ್ರಿಕಶಕ್ತಿ’ (magical power) ಎನ್ನುತ್ತಾನೆ ಕೋಲ್‌ರಿಜ್. ಅಭಿನವಗುಪ್ತರು ಪ್ರತಿಭೆಯನ್ನು ‘ಅಪೂರ್ವ ವಸ್ತು ನಿರ್ಮಾಣ ಕ್ಷಮಾ ಪ್ರಜ್ಞಾ’ (ಅಪೂರ್ವ ವಸ್ತುಗಳನ್ನು ನಿರ್ಮಾಣ ಮಾಡುವ ಸಾಮರ್ಥ್ಯ ಉಳ್ಳದು) ಎನ್ನುತ್ತಾರೆ. ‘ಅಪಾರವಾದ ಕಾವ್ಯ ಸಂಸಾರದಲ್ಲಿ ಕವಿಯೇ ಪ್ರಜಾಪತಿ; ಅವನು ತನಗೆ ಹೇಗೆ ರುಚಿಸುವುದೋ ಹಾಗೆ ಈ ವಿಶ್ವವನ್ನು ಪರಿವರ್ತನಗೊಳಿಸುತ್ತಾನೆ’ -ಎಂದು ಆನಂದವರ್ಧನನು ಹೇಳಿದ ಮಾತನ್ನು ಇಲ್ಲಿ ನೆನೆಯಬಹುದು. ಮೂಲ ಪ್ರತಿಭೆಯ ಜಗತ್ತನ್ನು (World of Primary Imagination) ದ್ವಿತೀಯ ಪ್ರತಿಭೆ ಅಥವಾ ಕವಿಪ್ರತಿಭೆ (Secondary Imagination) ಮುರಿದು ಬೇರೊಂದು ಕಲಾನಿರ್ಮಿತಿಯಲ್ಲಿ ತೊಡಗುತ್ತದೆ ಎಂದು ಕೋಲ್‌ರಿಜ್ ಹೇಳಿದ ಮಾತುಗಳೊಂದಿಗೆ, ಕವಿಯ ಕಾರ್ಯದಲ್ಲಿ “ಅಪೂರ್ವತೆ” ಇದೆ ಎಂದೂ, ಕವಿ ಚಿರಪರಿಚಿತವಾದ ಲೋಕವಸ್ತುಗಳನ್ನು ಅಥವಾ ಲೋಕಾನುಭವಗಳನ್ನು ತನಗೆ ರುಚಿಸಿದ ರೀತಿಯಲ್ಲಿ ಪರಿವರ್ತಿಸುವುದೆ ಅದಕ್ಕೆ ಕಾರಣವೆಂದೂ ಆನಂದವರ್ಧನನು ಹೇಳಿದ ಮಾತುಗಳೊಂದಿಗೆ ಹೋಲಿಸಿ ನೋಡಿದರೆ ಅಭಿಪ್ರಾಯಗಳ ಸಾಮ್ಯ ಗೋಚರಿಸುತ್ತದೆ. “ಹಳೆಯ ಹಾಗೂ ಚಿರಪರಿಚಿತವಾದ ಲೋಕವಸ್ತುಗಳಿಗೆ ಒಂದು ಬಗೆಯ ನವತ್ವ (Sense of Novelty) ಮತ್ತು ಹೊಸ ಹೊಗರು (Freshness) ಗಳನ್ನು ತಂದುಕೊಡುವ” ಕಾರ್ಯವನ್ನು ಪ್ರತಿಭೆ ಮಾಡುತ್ತದೆ ಎಂದು ಕೋಲ್‌ರಿಜ್ ಹೇಳುತ್ತಾನೆ.  ಭಾರತೀಯ ಆಲಂಕಾರಿಕರು ಪ್ರತಿಭೆಯನ್ನು ಕುರಿತು ಹೇಳುವಲ್ಲಿ “ನವನವತ್ವ” “ಅಪೂರ್ವತೆ” “ನವ್ಯ” ಇತ್ಯಾದಿ ಮಾತುಗಳು ಬಳಕೆಯಾಗಿವೆ. ಇವು ಪ್ರತಿಭೆಯ ವಿಶಿಷ್ಟ ಲಕ್ಷಣವನ್ನು ಸೂಚಿಸುತ್ತವೆ. ಲೋಕ ವ್ಯವಹಾರದ ಮಾತುಗಳಲ್ಲಿ ಅವು ಕೇವಲ ಅಭಿಪ್ರಾಯ ವಿನಿಮಯದ ತಾತ್ಕಾಲಿಕ ಪ್ರಯೋಜನಕ್ಕೆ ಬಳಕೆಯಾಗುವುದರಿಂದ, ಅಲ್ಲಿನ ಮಾತುಗಳಿಗೆ ‘ಹೊಸತನ’ವಾಗಲಿ ‘ಅಪೂರ್ವತೆ’ಯಾಗಲಿ ಲಭಿಸುವುದಿಲ್ಲ; ಬದಲು, ಆಡಿದ್ದನ್ನು ಆಡಿ ಬೇಸರವೂ ಬರಬಹುದು. ಶಾಸ್ತ್ರಗಳಲ್ಲಾದರೋ ಮಾತು ಖಚಿತವಾಗಿ, ಸ್ಫುಟವಾಗಿ, ಆದಷ್ಟು ನಿರಲಂಕಾರಿಕವಾಗಿ ಇರಬೇಕಾಗುತ್ತದೆ. ಅಲ್ಲದೆ ಶಾಸ್ತ್ರದಲ್ಲಿ ನಿರೂಪಿತವಾಗುವ ವಿಷಯಗಳಾದರೋ ಯಾವುದೋ ವಿಚಾರವನ್ನೋ ಸಿದ್ಧಾಂತವನ್ನೋ ತಾರ್ಕಿಕವಾಗಿ ಪ್ರತಿಪಾದಿಸುವ ಕಾರಣ, ಆ ವಿಚಾರವನ್ನು ಒಮ್ಮೆ ತಿಳಿದುಕೊಂಡ ಕೂಡಲೆ, ಒಂದು ಹೊಸ ವಿಚಾರವನ್ನು ತಿಳಿದುಕೊಂಡ ಬೌದ್ಧಿಕ ತೃಪ್ತಿಯಷ್ಟೆ ಅದರ ನಿಲುಗಡೆಯಾಗುತ್ತದೆ. ಅಲ್ಲದೆ ತಿಳಿದುಕೊಂಡಾಗ ಇದ್ದ ‘ಹೊಸತನ’ ಶಾಸ್ತ್ರದ ನಿರೂಪಣೆಯಲ್ಲಿ, ಮತ್ತೆ ಮತ್ತೆ ಓದಿದಾಗ ಹಾಗೆಯೇ ಉಳಿಯಲಾರದು. ಕಾವ್ಯದಲ್ಲಾದರೋ ಒಂದೇ ಒಂದು ಸೊಗಸಾದ ವರ್ಣನೆಯನ್ನು ಮತ್ತೆ ಮತ್ತೆ ಓದಿದರೂ ಅದು ತನ್ನ ‘ಹೊಸತನ’ವನ್ನು ಕಳೆದುಕೊಳ್ಳುವುದಿಲ್ಲ; ಹಳೆಯದಾಯಿತೆಂಬ ಬೇಸರ ಬರುವುದಿಲ್ಲ. ಕಾವ್ಯದಲ್ಲಿನ ಈ ಪರಿವರ್ತಿತಾನುಭವ, ಎಷ್ಟು ಸಲ ಓದಿದರೂ, ನಮ್ಮ ಅಂದಂದಿನ ಅನುಭವಕ್ಕೆ ಅನುಸಾರವಾಗಿ ಹೊಸ ಹೊಸತಾಗಿಯೇ ಪ್ರತೀತವಾಗುತ್ತದೆ. ಕಾವ್ಯಾಭಿವ್ಯಕ್ತಿಗಿರುವ ಈ ‘ನವ ನವ ಉನ್ಮೇಷ’ಕ್ಕೆ ಕಾರಣ ಅದು ಕೇವಲ ಬುದ್ಧಿಜನ್ಯವಾದುದಲ್ಲ, ಪ್ರತಿಭಾಜನ್ಯವಾದುದು ಎನ್ನುವುದೆ ಆಗಿದೆ.  ಅದೇ ಚಿರಪರಿಚಿತ ಮಾತುಗಳು, ಪದಗಳು. ಆದರೂ ಕವಿ ಅಪರಿಚಿತವಲ್ಲದ ಸಾಮಗ್ರಿಯಿಂದ, ಅಪರಿಚಿತ ವಿನೂತನವಾದ ಅರ್ಥವನ್ನು ಕಟ್ಟಿ ನಿಲ್ಲಿಸುತ್ತಾನೆ. ಇದೇ ಪ್ರತಿಭೆಯ ವಿಶೇಷತೆ.*

ಕೋಲ್‌ರಿಜ್ ಪ್ರತಿಭಾತತ್ವವನ್ನು ಕುರಿತು ಹೇಳುವಲ್ಲಿ ಕವಿಯ ಕಾವ್ಯ ನಿರ್ಮಾಣ ಸಾಮರ್ಥ್ಯವನ್ನು ಅಥವಾ ಕಾವ್ಯಾಭಿವ್ಯಕ್ತಿಯಲ್ಲಿ ಕಂಡುಬರುವ ಪ್ರತಿಭೆಯ ತರ- ತಮಗಳನ್ನು Imagination ಮತ್ತು Fancy ಎಂದು ಎರಡಾಗಿ ವಿಭಾಗಿಸಿ ನೋಡಿದ ಸಂಗತಿ ಪಾಶ್ಚಾತ್ಯ ಕಾವ್ಯಮೀಮಾಂಸೆಯಲ್ಲಿ ವಿವಾದಾಸ್ಪದವೂ, ವಿಚಾರಣೀಯವೂ ಆಗಿದೆ.  Fancy ಎಂಬ ಪದಕ್ಕೆ ಸಂವಾದಿಯಾಗಿ “ಕಲ್ಪನೆ” ಎಂಬ ಪದವನ್ನು ಇರಿಸಿಕೊಂಡು, ಪ್ರತಿಭೆ (Imagination) ಮತ್ತು ‘ಕಲ್ಪನೆ’  (Fancy)ಗಳಿಗೆ ಇರುವ ಸಂಬಂಧ ಹಾಗೂ ಅಂತರಗಳನ್ನು ಪರಿಶೀಲಿಸಬಹುದು.

ನಾವು ಇಂದಿಗೂ ಕಾವ್ಯಮೀಮಾಂಸೆಯ ಶಾಸ್ತ್ರೀಯವಾದ ನೆಲೆಯಲ್ಲಿ ಮಾತನಾಡದೆ ಇದ್ದಾಗ, ಬಹುಮಟ್ಟಿಗೆ ‘ಪ್ರತಿಭೆ’ ಮತ್ತು ‘ಕಲ್ಪನೆ’ಗಳನ್ನು ಸಮಾನವಾದ ಅರ್ಥಗಳಲ್ಲಿಯೇ ಬಳಸಿಬಿಡುತ್ತೇವೆ. ಅಷ್ಟೇ ಅಲ್ಲ; ಕಾವ್ಯ ವಿಮರ್ಶೆಯ ನೆಲೆಯಲ್ಲಿಯೂ ಅನೇಕರು ಈ ಎರಡು ಪದಗಳನ್ನು ಒಂದೇ ಎಂದು ಭಾವಿಸುವ ಸಂಭವ ಉಂಟು. ಪಾಶ್ಚಾತ್ಯ ವಿಮರ್ಶೆಯ ಇತಿಹಾಸದಲ್ಲಿಯೂ ಹೀಗೇ ಆಗಿದೆ. Fancy ಎಂಬುದು  Fantasia ಎಂಬುದರ ಸಂಕ್ಷಿಪ್ತ ರೂಪ. Fantasia ಲ್ಯಾಟಿನ್ ಭಾಷೆಯ ಪದ. Fantasia ಎಂದರೆ ಮೊದಲ ದರ್ಜೆಯ ಸೃಜನಕ್ರಿಯೆ ಎಂದೂ, Imagination ಗೌಣ ಎಂದೂ ಇಟಲಿಯಲ್ಲಿ ತಿಳಿಯಲಾಗಿತ್ತು. ಜರ್ಮನಿಯಲ್ಲೂ ಹೀಗೆಯೇ. ಇಂಗ್ಲೆಂಡಿನಲ್ಲಿ ಕೆಲವರನ್ನು ಬಿಟ್ಟರೆ, ಉಳಿದವರು Fancy ಮತ್ತು Imagination ಎರಡೂ ಸಮಾನಾರ್ಥಕಗಳೆಂದು ತಿಳಿದಿದ್ದರು. Fancy ಮತ್ತು Imagination ಎರಡನ್ನೂ ಸಮಾನಾರ್ಥಕಗಳೆಂದೂ, ಕಾವ್ಯಕ್ರಿಯೆಯಲ್ಲಿ ಅವೆರಡಕ್ಕೂ ಅಂತಹ ವ್ಯತ್ಯಾಸ ಮಾಡುವ ಅಗತ್ಯವಿಲ್ಲವೆಂದೂ ವಿಮರ್ಶಕರೂ ಮತ್ತು ಕವಿಗಳೂ ಭಾವಿಸಿದ್ದುಂಟು. ಕೋಲ್‌ರಿಜ್‌ನೇ ಈ ಎರಡೂ ಮೂಲತಃ ಒಂದೇ ಎಂದು ಮೊದ ಮೊದಲು ಭಾವಿಸಿದ್ದವನು, ಬರಬರುತ್ತ ಅವೆರಡೂ ಬೇರೆಯೇ ಎಂಬ ಸಂಶಯಕ್ಕೆ ಸಿಲುಕಿ ವಿಚಾರ ಮಾಡತೊಡಗಿ, ಕಾವ್ಯಾಭಿವ್ಯಕ್ತಿಯಲ್ಲೇ ಕೆಲವೆಡೆ ಕವಿ ಕೇವಲ ಕೌಶಲದಿಂದ ರಚಿಸಿದ ಭಾಗಗಳಿಗೂ, ಪ್ರತಿಭೆಯಿಂದ ನಿರ್ಮಿಸಿದ ಭಾಗಗಳಿಗೂ ತಕ್ಕಷ್ಟು ವ್ಯತ್ಯಾಸವನ್ನು ಕಂಡುಕೊಂಡ ಮೇಲೆ Fancy ಮತ್ತು Imagination ಈ ಎರಡಕ್ಕೂ ವ್ಯತ್ಯಾಸವಿದೆ ಎಂಬುದನ್ನು ಪ್ರತಿಪಾದಿಸಿದನು. ಈ ಬಗೆಗೆ ವಿಮರ್ಶಕರಲ್ಲಿ ಸಾಕಷ್ಟು ವಾದ- ವಿವಾದಗಳಿವೆ.

Fancy ಎಂಬ ಮಾತಿಗೆ ಇಂದಿಗೂ, ಹಗುರವಾದ, ಲಘುವಾದ, ಕೃತಕವಾದ ಚಮತ್ಕಾರಿಕವಾದ, ಮನೋರಂಜಕವಾದ, ಗಂಭೀರವಲ್ಲದ, ಗಾಢವಲ್ಲದ -ಎಂಬ ಅನೇಕ ಅರ್ಥಗಳು ಪ್ರಚಲಿತವಾಗಿವೆ. ಕಾವ್ಯದಲ್ಲಿಯೂ ಕವಿಪ್ರತಿಭೆ ಕೆಲವಡೆ ಮೇಲೆ ಮೇಲೆ ತೇಲುವ, ಕಂಡ ಸೊಗಸುಗಳೊಡನೆ ಚೆಲ್ಲಾಟವಾಡುವ, ಕೆಲವು ಸಂಗತಿಗಳನ್ನು ಸ್ಮರಣೆಗಳನ್ನು ಕೇವಲ ಕೂಡಿಸುವ ಹಾಗೂ ಜೋಡಿಸುವ ಒಂದು ಸ್ತರದಲ್ಲಿ ಕೆಲಸ ಮಾಡಿರುವುದನ್ನು ಕಾಣಬಹುದು; ಮತ್ತೆ ಕೆಲವೆಡೆ ಕವಿ ಪ್ರತಿಭೆ ವಸ್ತುಗಳ ಆಳಕ್ಕೆ ಇಳಿದು, ಗಂಭಿರವಾದ ಸತ್ಯಗಳನ್ನೋ, ಮೌಲ್ಯಗಳನ್ನೋ, ಮಹತ್ತನ್ನೋ ಗ್ರಹಿಸಿ ಪ್ರತಿಮಾ ರೂಪದಲ್ಲಿ ಕಡೆದು ನಿಲ್ಲಿಸಿ, ಓದುಗರ ಗಾಢವಾದ ಪರಿಭಾವನೆಗೆ ದಾರಿ ಮಾಡಿಕೊಡುವುದನ್ನು ಕಾಣಬಹುದು. ಈ ಎರಡು ವ್ಯತ್ಯಾಸಗಳನ್ನು ಕಾವ್ಯದ ಪರಿಣಾಮದಲ್ಲಿ ಗುರುತಿಸಿದ ಕೋಲ್‌ರಿಜ್, ಒಂದನ್ನು Fancy (ಕಲ್ಪನೆ) ಎಂದೂ, ಮತ್ತೊಂದನ್ನು Imagination (ಪ್ರತಿಭೆ) ಎಂದೂ ಕರೆದಂತೆ ತೋರುತ್ತದೆ.

“ಆಧುನಿಕ ಮನಸ್‌ಶಾಸ್ತ್ರ Fancy ಮತ್ತು Imagination ಎಂಬ ವಿಭಾಗ ಕ್ರಮವನ್ನು ಒಪ್ಪುವುದಿಲ್ಲವಾದರೂ, Fancy ಎಂಬ ಮಾತು ಸಾಹಿತ್ಯ ವಿಚಾರಕವಾದ ಚರ್ಚೆಗಳಲ್ಲಿ, ಅಷ್ಟೊಂದು ಆಳಕ್ಕೆ ಇಳಿಯದೆ ಮೇಲೆ ಮೇಲೆಯೆ ವಿಹರಿಸುವ ಕವಿ ಪ್ರತಿಭೆಯ ಇನ್ನೊಂದು ಮುಖವನ್ನು ನಿರ್ದೇಶಿಸಲು ಬಳಕೆಯಾಗುತ್ತಿದೆ.”[27] ಕೋಲ್‌ರಿಜ್‌ನ ಪಾಲಿಗೆ Fancy ಮತ್ತು Imagination ಈ ಎರಡೂ, ಸತ್ಯವನ್ನು ಗ್ರಹಿಸುವ ಶಕ್ತಿಗಳೇ.  ಆದರೆ ಈ ಎರಡೂ ಹೇಗೆ ಭಿನ್ನ ಎಷ್ಟು ಭಿನ್ನ ಎಂಬ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ.  “Fancy ಮತ್ತು Imagination” ಬಗ್ಗೆ ಮಾತನಾಡಿದ ಯಾರೂ ಈ ಎರಡರ ವಿಚಾರವನ್ನು ಸರಿಯಾಗಿ ತಿಳಿದುಕೊಂಡಂತೆ ಕಾಣುವುದಿಲ್ಲ”[28] ಎಂದು ವಾಲ್ಟರ್ ಪೇಟರನೂ; “ಯಾವುದನ್ನು Fancy ಎಂದು ಕರೆಯುತ್ತಾರೋ ಅಂಥದೇನೂ ಇಲ್ಲವೆ ಇಲ್ಲ, ಅದು ಕೋಲ್‌ರಿಜ್‌ನ ಚಿತ್ತಭ್ರಮೆಗಳಲ್ಲಿ ಒಂದು, ಇಂಥ ಚಿತ್ತಭ್ರಮೆಗಳ ಒಂದು ಲಾಯವನ್ನೆ ಅವನು ಇರಿಸಿದ್ದ”[29] ಎಂದು ಅಬರ್ ಕ್ರೋಂಬಿಯೂ; “ಕೋಲ್‌ರಿಜ್ ಕಾವ್ಯನಿರ್ಮಾಣ ಶಕ್ತಿಯನ್ನು Fancy ಮತ್ತು Imagination ಎಂದು ವಿಭಾಗಿಸುವುದು ಹೊಸ ಹೊಸ ರೀತಿಯೆಂದು ತಪ್ಪಾಗಿ ಭಾವಿಸಿದಂತೆ ತೋರುತ್ತದೆ. ಆದರೂ ಅವೆರಡರ ವ್ಯತ್ಯಾಸವನ್ನು ಅವನು ಹೊಸ ರೀತಿಯಲ್ಲಿ ಮಾಡಿ ತೋರಿಸಿದ್ದಾನೆ.[30] ಎಂದು ವಾಟ್ಸನ್ನನೂ; “ಕೋಲ್‌ರಿಜ್ Fancy ಮತ್ತು Imagination ಬಗೆಗೆ ಸ್ಪಷ್ಟಪಡಿಸಿದ ವ್ಯತ್ಯಾಸವನ್ನು ಕೆಲವರು ಅರ್ಥವಿಲ್ಲದ್ದು ಎಂದು ಕರೆದಿದ್ದಾರೆ. ಆದರೆ ವಾಸ್ತವವಾಗಿ ಇದು ಬಹು ಮೌಲಿಕವಾದ ವ್ಯತ್ಯಾಸವೆ”[31] ಎಂದು ಎಸ್.ಸಿ. ಸೆನ್‌ಗುಪ್ತ ಅವರೂ ಹೇಳುತ್ತಾರೆ.

Imagination ಅನ್ನು ಕುರಿತು ಕೋಲ್‌ರಿಜ್‌ನ ವಿವರಣೆಯನ್ನು ಹಿಂದೆಯೆ ಹೇಳಲಾಗಿದೆ. ಇನ್ನು Fancy ಎಂದರೇನು ಎಂಬ ಬಗ್ಗೆ ಅವನು ಹೇಳುವುದು ಇಷ್ಟೆ: “Fancy” ಎಂಬುದು ಕೆಲವು ನಿಶ್ಚಿತ ಹಾಗೂ ಸಿದ್ಧರೂಪಗಳೊಂದಿಗೆ ವ್ಯವಹರಿಸುತ್ತದೆ; ಅದರಲ್ಲಿಯೂ ಅದು ಕಾಲ-ದೇಶಗಳ ಕ್ರಮಬದ್ಧತೆಯೊಳಗಣ ಸ್ಮರಣೆಗಳನ್ನು ವಿಶೇಷವಾಗಿ ಅವಲಂಬಿಸುತ್ತದೆ.”[32] “Fancy” ಎಂಬುದು ಕೇವಲ ಗ್ರಹಿಕೆ ಅಥವಾ ಸ್ಮರಣೆಗಳಿಗಿಂತ ಮೇಲಿನ ಸ್ತರದ್ದು. ಆದರೆ Imagination ಗಿಂತ ಕೆಳಗಿನ ಹಂತದ್ದು. ಅದು ತಾನು ಗ್ರಹಿಸಿದ್ದೆಲ್ಲವನ್ನೂ ನವ ನವತ್ವದಿಂದ ದೀಪ್ತಗೊಳಿಸುವ ಬದಲು, ಮೊದಲೇ ಸಿದ್ಧವಾದ, ಅಂದರೆ ನಿಯತ ಮತ್ತು ನಿಶ್ಚಿತವಾದ ಸಾಮಗ್ರಿಗಳಿಂದ ಕೆಲವು ಮಾದರಿಗಳನ್ನು ರಚಿಸುತ್ತದೆ. ಅದು ಪ್ರತಿಮೆಗಳನ್ನು ಒಂದರ ಜತೆಗೊಂದು ಇಡಬಲ್ಲದೆ ಹೊರತು, ಅವುಗಳನ್ನು ಒಂದಾಗುವಂತೆ ಬೆಸೆಯಲಾರದು. ಅದರ ಕಾರ್ಯ ಯಾಂತ್ರಿಕವಾದದ್ದು; ಅಲ್ಲಿ ಅದು ಕೂಡಿಸಿದ ಸಾಮಗ್ರಿಗಳು ಜತೆ ಜತೆಗಿದ್ದರೂ, ಅವು ತಮ್ಮ ಭಿನ್ನತೆಯನ್ನು ಪ್ರಕಟಿಸುತ್ತವೆ. ಆದರೆ Imaginationನಿಂದ ನಡೆಯುವ ಕ್ರಿಯೆ ರಾಸಾಯನಿಕ ಸ್ವರೂಪದ್ದು, ಅಲ್ಲಿ ಗೃಹೀತವಾಗುವ ಅಂಶಗಳು ಅಷ್ಟರಮಟ್ಟಿಗೆ ತಮ್ಮ ಪ್ರತ್ಯೇಕ ಅಸ್ತಿತ್ವವನ್ನು ಕಳೆದುಕೊಂಡು, ಬೇರೊಂದೆಂಬಂತೆ ಭಾಸವಾಗುವ ಬೆಸುಗೆಯನ್ನು ಪಡೆದುಕೊಳ್ಳುತ್ತದೆ.”[33] ಕವಿ ಪ್ರತಿಭೆ (Imagination) ಒಂದು ರೀತಿಯಲ್ಲಿ ಕೆಳಗಿನ ಸ್ತರದಲ್ಲಿ ಕೆಲಸ ಮಾಡುವಾಗ ಅದನ್ನು Fancy ಎಂದೂ, ಮೇಲಿನ ಸ್ತರದಲ್ಲಿ ಕೆಲಸ ಮಾಡುವಾಗ Imagination ಎಂದೂ ಕರೆಯಬಹುದೆಂದು ತೋರುತ್ತದೆ. ಕಾವ್ಯನಿರ್ಮಾಣ ಕ್ರಿಯೆಯಲ್ಲಿ ಕವಿಪ್ರತಿಭೆ ಈ ಬಗೆಯ ಏರಿಳಿಕೆಯಲ್ಲಿರುತ್ತದೆ. ಕಲ್ಪನೆ ಅಥವಾ Fancy ಕಂಡ ರೂಪಗಳ, ಕೆಲವು ಸಿದ್ಧಸ್ಮರಣೆಗಳ ಸಂಘಟನೆಯಷ್ಟರಲ್ಲೆ ಆಟವಾಡಿದರೆ, Imagination ಅಥವಾ ‘ಪ್ರತಿಭೆ’ ವಸ್ತುಗಳ ಅಂತಸ್ಸತ್ವವನ್ನು ಗ್ರಹಿಸಿ ಪ್ರತಿಮಾ ರೂಪದಲ್ಲಿ ಹರಳುಗೊಳಿಸಿಕೊಡುತ್ತದೆ. ಹೆಣ್ಣಿನ ವರ್ಣನೆಯಲ್ಲಿ “ಮಲ್ಲಿಕಾಸ್ಮಿತರುಚಿರೆ, ಕುಂದಕುಟ್ಮಲರದನೆ, ಪಲ್ಲವಾಧರೆ, ಭೃಂಗಕುಂತಲೆ, ಕುಸುಮಗಂಧಿ” ಎಂದು ಕೇವಲ ಕೆಲವು ಸಾದೃಶ್ಯಗಳ ಜೋಡಣೆಯಲ್ಲಿ ತಲ್ಲೀನವಾಗುವುದು ಕೇವಲ ಕಲ್ಪನೆಯ ಅಥವಾ Fancy ಯ ಕಾರ್ಯವಾಗಿದೆ.  ಈ ಜೋಡಣೆ ನಮ್ಮಲ್ಲಿ ಮೊದಲು ವಿಸ್ಮಯವನ್ನು ಉಕ್ಕಿಸಬಹುದು; ಒಂದು ಮಟ್ಟದ ಸಂತೋಷವನ್ನೂ ನೀಡಬಹುದು. ಇಷ್ಟಲ್ಲದೆ, ಅದು ಯಾವ ಗಾಢವಾದ ಸತ್ಯವನ್ನಾಗಲಿ, ಪರಿಭಾವನಾ ಯೋಗ್ಯವಾದ ಚಿಂತನೆಯನ್ನಾಗಲಿ, ಮೌಲ್ಯವನ್ನಾಗಲಿ ಕೊಡುವುದಿಲ್ಲ. ದ್ರೌಪದಿಯ ಜಡೆ ಮುಡಿಯನ್ನು ಭೃಂಗ ಮಾಲೆಗೋ, ಕಪ್ಪು ಮೋಡಕ್ಕೋ ಹೋಲಿಸುವ ಪ್ರಯತ್ನಗಳಲ್ಲಿ ನಾವು Fancy ಅಥವಾ ಕಲ್ಪನೆಯನ್ನು ಗುರುತಿಸಿದರೆ, ಅದೇ ದ್ರೌಪದಿಯ ಜಡೆ ಮುಡಿಯನ್ನು “ಕುರುಕುಲ ಜೀವಾಕರ್ಷಣ ಪರಿಣತ ಕಾಳಹಸ್ತ” -ಎಂದು ರನ್ನನು ವರ್ಣಿಸಿದಾಗ, “ಆ ಮಹೀಶಕ್ರತುವರದೊಳುದ್ದಾಮಮುನಿಜನಪೂತ ಮಂತ್ರಸ್ತೋಮ ಪುಣ್ಯ ಜಲಾಭಿಷೇಚನದ ಶ್ರೀಮುಡಿ” -ಎಂದು ನಾರಣಪ್ಪನು ವರ್ಣಿಸಿದಾಗ, ಆ ಕಾವ್ಯದ ಸಂದರ್ಭದಲ್ಲಿ ಅದು ತಾಳುವ ಧ್ವನಿಪ್ರತಿಮೆ ನಿಜವಾಗಿಯೂ ಪ್ರತಿಭೆಯ (Imagination) ನಿರ್ಮಿತಿ ಎಂಬುದು ಖಚಿತವಾಗುತ್ತದೆ. ಎಂದರೆ ಹೀಗೆ ‘ಕಲ್ಪನೆ’ ‘ಪ್ರತಿಭೆ’ಗಳು ಕಾವ್ಯದ ಸಮಯ ಸಂದರ್ಭದ ವಸ್ತುಸ್ಥಿತಿಗೆ ಅನುಸಾರವಾಗಿ, ಕಾರ್ಯ ಪ್ರವೃತ್ತವಾಗಿರುವುದನ್ನು ಗಮನಿಸುವುದು ನಮಗೆ ಸಾಧ್ಯವಾಗಬಹುದಾದರೂ, ಎಷ್ಟೋ ಸಂದರ್ಭಗಳಲ್ಲಿ ಈ ಏರಿಳಿವುಗಳು ಒಂದಕ್ಕೊಂದು ಪೂರಕವಾಗಿಯೂ ಬರುವುದುಂಟು. ಒಂದು ವರ್ಣಾನಾ ಸಾಮಗ್ರಿ ಕಲ್ಪನೆಯ ಸ್ತರದಿಂದ ಪ್ರತಿಭೆಯ ಸ್ತರಕ್ಕೆ ಏರುವುದನ್ನು ಕಾಣಬಹುದು. ನಿದರ್ಶನಕ್ಕೆ,

ಅಳುವ ಕಂದನ ತುಟಿಯು ಹವಳದಾ ಕುಡಿಹಂಗ
ಕುಡಿ ಹುಬ್ಬು ಬೇವಿನೆಸಳಂಗ|| ಕಣ್‌ನೋಟ
ಶಿವನ ಕೈ ಅಲಗು ಹೊಳೆದ್ಹಾಂಗ||

ಎಂಬಲ್ಲಿ  ಮಗುವಿನ ತುಟಿ, ಹುಬ್ಬುಗಳ ವರ್ಣನೆಯಲ್ಲಿರುವ ಕಲ್ಪಕ ಶಕ್ತಿ (Fancy) ಮಗುವಿನ ಕಣ್ಣಿನ ನೋಟವನ್ನು ವರ್ಣಿಸುವಲ್ಲಿ ತಲುಪಿರುವ ನೆಲೆ ನಿಜಕ್ಕೂ ಪ್ರತಿಭೆಯ (Imagination)ದೆಂಬುದರಲ್ಲಿ ಸಂದೇಹವಿಲ್ಲ. ಮಗುವಿನ ತುಟಿಯನ್ನು ಹವಳಕ್ಕೂ, ಕುಡಿಹುಬ್ಬನ್ನು ಬೇವಿನ ಎಸಳಿಗೂ ಹೋಲಿಸುವುದರಲ್ಲಿ ಕಂಡು ಬರುವ ಸ್ವಾರಸ್ಯ ರಮ್ಯವಾಗಿದೆ; ಆದರೆ ಮಗುವಿನ ಕಣ್ ನೋಟವನ್ನು ‘ಶಿವನ ಕೈ ಅಲಗು ಹೊಳೆದ್ಹಾಂಗ’ ಎನ್ನುವುದಂತೂ, ಅನಿರ್ವಚನೀಯವಾದ ಯಾವುದೋ ಒಂದನ್ನು ತಂದು ನಮ್ಮ ಮನಸ್ಸನ್ನು ತಲ್ಲೀನಗೊಳಿಸುವ ಸಾಮರ್ಥ್ಯವನ್ನು ಪಡೆದಿದೆ.

ಈ ವಿವರಣೆ ಕಲ್ಪನೆ ಮತ್ತು ಪ್ರತಿಭೆಗಳಿಗೆ ಇರಬಹುದಾದ ವ್ಯತ್ಯಾಸವನ್ನು ಸ್ಪಷ್ಟಪಡಿಸುತ್ತದೆ. ಈ ಎರಡೂ ಬೇರೆ ಬೇರೆ ಎಂದು ಕಾವ್ಯಾಭಿವ್ಯಕ್ತಿಗಳಲ್ಲಿ ತಕ್ಕ ಮಟ್ಟಿಗೆ ಗುರುತಿಸಬಹುದಾದರೂ, ಮೂಲತಃ ಈ ಎರಡೂ ಒಂದೇ ಕಾವ್ಯ ನಿರ್ಮಾಣ ಶಕ್ತಿಯ ತರ-ತಮಗಳು ಎನ್ನುವುದು ಗಮನಿಸಬೇಕಾದ ಸಂಗತಿಯಾಗಿದೆ.  “ವಾಸ್ತವವಾಗಿ Imagination ಮತ್ತು Fancy ಈ ಎರಡೂ, ಬೇರೆ ಬೇರೆಯ ಎರಡು ಸಾಮರ್ಥ್ಯಗಳಲ್ಲ; ಆ ಎರಡೂ ಒಂದೇ. ಅವೆರಡಕ್ಕಿರುವ ವ್ಯತ್ಯಾಸ ಅವು ನಿರ್ವಹಿಸುವ ಸಾಮಗ್ರಿಗಳಲ್ಲಿ ಇಲ್ಲ, ಆ ಶಕ್ತಿ ಅಭಿವ್ಯಕ್ತವಾಗುವ ತೀವ್ರತೆಯ ತರತಮಗಳಲ್ಲಿದೆ.”[34] ಕವಿಪತ್ರಿಭೆ ಕಾರ್ಯೋನ್ಮುಖವಾಗುವ ಸಮಯ ಸಂದರ್ಭಕ್ಕೆ ಅನುಸಾರವಾಗಿ, ಅದು ಕೆಲವಡೆ ಕಲ್ಪನಾ ವಿಲಾಸದಲ್ಲಿ, ಕೆಲವಡೆ ಪ್ರತಿಮಾ ನಿರ್ಮಿತಿಯಲ್ಲಿ ತೊಡಗುತ್ತದೆ. ಕೆಲವರು ಈ ಒಂದೊಂದು ಸಾಮರ್ಥ್ಯ ಯಾವ ಯಾವ ಕವಿಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ವ್ಯಕ್ತವಾಗುವುದೋ ಅದರ ಆಧಾರದ ಮೇಲೆ ಆಯಾ ಕವಿಯ ತರ- ತಮಗಳನ್ನು ಗುರುತಿಸುವುದುಂಟು. ಕೆಲವರಲ್ಲಿ ಕಾವ್ಯ ನಿರ್ಮಿತಿ ಕೇವಲ ಹಗುರವಾದ, ಲಘುವಾದ ಬೆಡಗಿನ ನೆಲೆಯಲ್ಲಿ ವಿಶೇಷವಾಗಿ ನಿಲ್ಲುವುದುಂಟು; ಮತ್ತೆ ಕೆಲವರಲ್ಲಿ ಆಳವಾದ ಅಂತರ್‌ದೃಷ್ಟಿ ಬದುಕಿನ ಮೌಲ್ಯಗಳನ್ನು ಸಂಕೇತ ಪ್ರತಿಮೆಗಳಲ್ಲಿ ರೂಪಿಸುವುದರಲ್ಲಿ ವಿಶೇಷವಾಗಿ ನಿಲ್ಲುತ್ತದೆ. “ಪ್ರತಿಭೆಯ ತಾರತಮ್ಯದಿಂದಲೆ ಕವಿಗಳ ಪ್ರತಿಷ್ಠೆ ಅಥವಾ ಸ್ಥಾನ-ಮಾನ ಈ ಲೋಕದಲ್ಲಿ ಬೇರೆ ಬೇರೆಯಾಗುತ್ತದೆ” -ಎಂದು ರಾಜಶೇಖರನು ತನ್ನ ಕಾವ್ಯಮೀಮಾಂಸೆಯಲ್ಲಿ ಹೇಳಿರುವುದನ್ನು[35] ಇಲ್ಲಿ ನೆನೆಯ ಬಹುದು. ಕಲ್ಪನೆ ಮತ್ತು ಪ್ರತಿಭೆ, ಈ ತಾರತಮ್ಯ ಕಾವ್ಯನಿರ್ಮಾಣ ಸಮರ್ಥವಾದ ಪ್ರತಿಭೆಯಲ್ಲಿನ ತಾರತಮ್ಯವೇ. ಆದರೆ ಯಾರನ್ನಾದರೂ ನಾವು ಈತ ಕಲ್ಪನಾ ಪ್ರಧಾನವಾದ ಕವಿ, ಈತ ಪ್ರತಿಭಾ ಪ್ರಧಾನವಾದ ಕವಿ ಎಂದು ವಿಭಾಗಿಸಿ ನೋಡುವುದಾಗಲಿ, ಬೆಲೆ ಕಟ್ಟುವುದಾಗಲಿ ಸರಿ ಅಲ್ಲ. ಪ್ರತಿಭಾಶಕ್ತಿಯ ತಾರತಮ್ಯದಿಂದ ಕವಿಗಳ ತರ-ತಮಗಳನ್ನು ಗುರುತಿಸಬಹುದೆ ಹೊರತು, ಪ್ರತಿಭೆಯೊಳಗಣ ತಾರತಮ್ಯವಾದ Fancy ಮತ್ತು Imaginationಗಳ ಮೇಲೆ ಗುರುತಿಸಬಾರದು. ಯಾಕೆಂದರೆ ಪ್ರತಿಭೆ ಎನ್ನುವುದು ಕಲ್ಪನೆ (Fancy) ಯನ್ನು ಬಿಟ್ಟು ಇರಲು ಸಾಧ್ಯವಿಲ್ಲ. ಕೋಲ್‌ರಿಜ್‌ನೆ ಹೇಳಿದ ಹಾಗೆ “Imagination must have Fancy”[36] -ಎಂಬ ಮಾತನ್ನು ಗಮನಿಸಬೇಕು. ಅಂತೂ ಈ ವಿಭಾಗಕ್ರಮ ಯಾವ ರೀತಿಯಲ್ಲಿಯೂ ಕಾವ್ಯ ವಿಮರ್ಶೆಗೆ ನೆರವಾಗಲಾರದು; ಹೆಚ್ಚೆಂದರೆ ಕಾವ್ಯಾಭಿವ್ಯಕ್ತಿಯಲ್ಲಿ ಎಲ್ಲೆಲ್ಲಿ ಕವಿಪ್ರತಿಭೆ, ಕಲ್ಪನೆಯ ನೆಲೆಯಲ್ಲಿ ಕೆಲಸ ಮಾಡಿದೆ, ಎಲ್ಲೆಲ್ಲಿ ‘ನಿಜವಾದ ಪ್ರತಿಭೆ’ ಎನ್ನಿಸಿಕೊಂಡಿದೆ ಎನ್ನುವುದನ್ನು ಗುರುತಿಸುವ ಕುತೂಹಲಕ್ಕೆ ಸಹಾಯಕವಾಗಬಹುದು.


[1] I.A. Richards : Coleridge on Imagination (second Edn.) p.25.

[2] R.L. Brett : Fancy and Imagination, p. 10

[3] ಅಲ್ಲೇ, ಪು. ೫೨.

[4] D.J. James : Scepticism and poetry. P. 19.

[5] R.L. Brett : Fancy and Imagination, 27.

[6] Raymond Williams : The Long Revolution, p. 16.

* ನರಜೀವಕಣ (Nerve Cell) ಗಳ ಸಂಖ್ಯೆಯ ದೃಷ್ಟಿಯಿಂದ ಸಾಮಾನ್ಯ ಮನುಷ್ಯನ ಮತ್ತು ಅತ್ಯಂತ ಪ್ರಭಾವಶಾಲಿಯಾದ ವ್ಯಕ್ತಿಯ ನಡುವೆ ಅಂತಹ ವ್ಯತ್ಯಾಸವೇನೂ ಇಲ್ಲ; ಆದರೆ ಪ್ರತಿಭಾಶಾಲಿಗಳಲ್ಲಿ ಅದೇ ಸಂಖ್ಯೆಯ ನರಜೀವಕಣಗಳು ಸಾಮಾನ್ಯ ಮನುಷ್ಯನಲ್ಲಿಗಿಂತ ಹೆಚ್ಚು ಸಂಕೀರ್ಣವಾಗಿರುತ್ತವೆ ಮತ್ತು ಅವರು ಉಳಿದವರಿಗಿಂತ ಮಿಗಿಲಾದ ಸುಪ್ತ ಪ್ರಜ್ಞಾ ಸಾಮರ್ಥ್ಯವನ್ನು ಪಡೆದವರಾಗಿರುತ್ತಾರೆ. ಅವರಿಗೆ ಎಲ್ಲ ಆವಶ್ಯಕ ಸಂಗತಿಗಳನ್ನೂ ನೆನಪಿನಲ್ಲಿಟ್ಟು ಕೊಳ್ಳುವ ಶಕ್ತಿ ಇರುವುದು ಮಾತ್ರವಲ್ಲ. ಆ ದತ್ತಾಂಶಗಳನ್ನು ನೂತನ ಹಾಗೂ ಸುಂದರ ಸಂಯೋಜನೆಗಳಲ್ಲಿ ಪುನಾರಚಿಸಬಲ್ಲ ಸಾಮರ್ಥ್ಯವೂ ಇರುತ್ತದೆ – ಎಂದು ಬೆನ್ ಎನ್ನುವರು Reflection of Genius ಎಂಬ ಲೇಖನದಲ್ಲಿ ಹೇಳುತ್ತಾರೆ.

ನೋಡಿ : ಮೆದುಳು ಮತ್ತು ಸೃಜನಶೀಲ ಪ್ರಕ್ರಿಯೆ, ಬಿ.ಎಸ್. ಸುರೇಶ್ : ‘ಆಲೋಕ’, ಜುಲೈ ೧೯೭೯.

[7] June Downey : Creative Imagination, p. 164

[8] I.A. Richards : Principles of Literary Criticism, p. 243.

[9] R.L. Brett : Fancy and Imagination, p. 8.

[10] Stephen Spender : The making of poem, p. 57.

[11] K. Krishnamurthy : Essays in Sanskrit Criticism. p. 189

[12] ತೀ.ನಂ. ಶ್ರೀಕಂಠಯ್ಯ : ಭಾರತೀಯ ಕಾವ್ಯಮೀಮಾಂಸೆ, ಪು. ೧೮೩

[13] I.A. Richards : Principles of Literary Criticism, p. 241.

[14] ತೀ.ನಂ. ಶ್ರೀಕಂಠಯ್ಯ; ಭಾರತೀಯ ಕಾವ್ಯಮೀಮಾಂಸೆ, ಪು. ೧೭೨.

[15] H.C. Caudwell :Creative Impulse, p. 17

[16] I.A. Richards : Principles of Literary Criticism, p. 239.

[17] I.A. Richards : Coleridge on Imagination, p. 25.

[18] C. Day Lewis : The Poetic Image, p. 177.

* ….. And, as imagination bodies forth
the forms of things unknown, the poet’s pen
turns them to shapes and gives to airy nothing
A local habitation and a name` – Shakespeare

[19] ತೀ.ನಂ. ಶ್ರೀಕಂಠಯ್ಯ : ಭಾರತೀಯ ಕಾವ್ಯಮೀಮಾಂಸೆ, ಪು. ೧೬೩.

[20] R.L. Brett. Fancy and Imagination, p. 31.

[21] Selected Poetry and Prose of Coleridge : Ed. Donald A. Stauffer. p. 263. (cha XIII of BiographiaLiteraria)

[22] D.J. James : Scepticism and poetry. p. 16, 17.

* ಕೋಲ್‌ರಿಜ್‌ನಿಗಿಂತ ಮೊದಲು ಈ ವಿಷಯವನ್ನು ಕುರಿತು ಜೋಸೆಫ್ ಅಡಿಸನ್ (೧೬೭೨-೧೭೧೯) ನಡೆಯಿಸಿದ ಚಿಂತನೆಗಳು ಗಮನಾರ್ಹವಾಗಿವೆ: ಆತ ‘ಸ್ಪೇಕ್ಟೇಟರ್’ಎಂಬ ಪತ್ರಿಕೆಯಲ್ಲಿ ಪ್ರಕಟಿಸಿದPleasures of Imaginationಎಂಬ ಲೇಖನಮಾಲೆಯಲ್ಲಿ ಕಲಾ ಆನುಭವವೆಲ್ಲವೂ ಕಲ್ಪನಾಮೂಲವಾದುದು ಎಂದು ಪ್ರತಿಪಾದಿಸಿದ್ದಾನೆ. “ಇಂದ್ರಿಯಗಳು (ಅದರಲ್ಲಿಯೂ ವಿಶೇಷವಾಗಿ ಕಣ್ಣು) ಒದಗಿಸುವ ಜ್ಞಾನವೇ ಕಲ್ಪನೆಯ ಕಾರ್ಯಕ್ಕೆ ಆಧಾರವೆಂದೂ ಅಂಥದರಿಂದ ಉಂಟಾಗುವ ಸಂತೋಷಾನುಭವವನ್ನು ಮೂಲ (ಪೆಮರಿ) ಮತ್ತು ಜನ್ಯ (ಸೆಕೆಂಡರಿ) ಎಂದು ಎರಡು ವಿಧವಾಗಿ ವಿಂಗಡಿಸಿ, ನಿಸರ್ಗದಲ್ಲಿಯ ಭವ್ಯ ಅಥವಾ ಅಸಾಧಾರಣ ದೃಶ್ಯಗಳು ಮೊದಲನೆಯ ಬಗೆಯವಾದರೆ, ಕಂಡದ್ದು (ದೃಶ್ಯಾನುಭವಗಳು) ನೆನಪಿನೊಂದಿಗೆ ಸೇರಿಕೊಂಡಾಗ ಉಂಟಾಗುವ ಅಂತರಂಗದಲ್ಲಿನ ಚಿತ್ರಗಳು ಎರಡನೆಯ ಬಗೆಯವೆಂದು ವಿವರಿಸುತ್ತಾನೆ. ಕಲಾನುಭವದಲ್ಲಿ ಈ ಎರಡನೆಯದೆ ಮಹತ್ವದ್ದು…..”

– ಎಂ.ವಿ. ಇನಾಂದಾರ್ : ಪಾಶ್ಚಾತ್ಯ ವಿಮರ್ಶೆಯ ಸಂಪ್ರದಾಯ ಯುಗ, ಪು. ೧೪೫.

+ ಕಾವ್ಯಮೀಮಾಂಸೆಯ ಮಟ್ಟಿಗೆ ನಮಗೆ ವ್ಯಾವಹಾರಿಕ ಮತ್ತು ಪ್ರಾತಿಭಾಸಿಕ ಎಂಬ ಮಾತುಗಳೇ ಸಾಕು. ವ್ಯಾವಹಾರಿಕ ಅಥವಾ ವಾಸ್ತವ ಕೂಡಾ ಪ್ರತಿಭಾ ನಿರ್ಮಿತವಾದ್ದು ಎಂಬ ವಿಚಾರ ಅನಗತ್ಯ. ಏಕೆಂದರೆ ‘ಪ್ರತಿಭೆ’ಎಂದರೆ ‘ಕವಿಪ್ರತಿಭೆ’ಎಂಬ ಅರ್ಥವಷ್ಟೆ ನಮಗೆ ಪ್ರಕೃತವಾದದ್ದು.

[23] It has indeed to break down the world of ‘every day` perception. And in this destructive element, necessarily present in the poetic imagination, consists this difference in the mode of operation…. The world of familiarity and selfish solicitude is the world of Primary Imagination; that world is dissolved and dissipated; and out of the same materials operated on however by a revivified imagination a new world is made : D.J. James : Scepticism and poetry, p. 17-18.

[24] The pelican Guide to English Literature : From Blake to Byron, Ed. Boris ford p. 190.

[25] V.K.Gokak : Coleridge’s Aesthetics, p. 17, 18, 19.

[26] Quoted by: I.A. Richards: Principles of Literary Criticism, p. 242

* “ತ ಏವ ಪದಸಂಘಾತಾಸ್ತಾ ಏವಾರ್ಥ ವಿಭೂತಯಃ|
ತಥಾಪಿ ನವ್ಯಂ ಭವತಿ ಕಾವ್ಯಂ ಗ್ರಥನ ಕೌಶಲಾತ್||”
ರಸಾರ್ಣವ ಸುಧಾಕರ : ೧-೨೪೨
ಉದ್ಧ ತ : ತೀ.ನಂ. ಶ್ರೀ : ಭಾರತೀಯ ಕಾವ್ಯಮೀಮಾಂಸೆ, ಪು. ೧೬೮.

[27] T.N. Sreekantaiya : Imagination in Indian Poetics and Other Literary studies, p. 11.

[28] Walter pater : Appreciations, p. 37.

[29] Aber Crombie : The Idea of Great Poetry, p. 58.

[30] Quoted by E.J. Furlong : Imagination, p. 20.

[31] S.C. Sengupta : Towards a Theory of Imagination, p. 40.

[32] Donald A. Stuffer. (ed) : Selected poetry and prose of Coleridge p. 263.

[33] Basil Willey : Nineteenth Century Studies. p. 24

[34] Livingston Lowes : Road to Xanadu, p. 103.

[35] ರಾಜಶೇಖರ : ಕಾವ್ಯಮೀಮಾಂಸೆ, ಪು. ೨೬ (ಅನು: ಡಾ. ಕೆ. ಕೃಷ್ಣಮೂರ್ತಿ)

[36] Quoted by I.A. Richards : Coleridge on Imagination, p. 75.