ಕಲೆ ಎಂದರೇನು ಎನ್ನುವ ಪ್ರಶ್ನೆಗೆ ಮೊದಲ ಉತ್ತರ ಅದೊಂದು ಅನುಕರಣೆ ಎನ್ನುವುದು.  ಪ್ರಾಚೀನ ಮಾನವನು ತನ್ನ ಸುತ್ತ ನಡೆಯುವ ವ್ಯಾಪಾರಗಳನ್ನು ಅನುಕರಿಸಿದಾಗ ಕಲೆಯ ಉಗಮವಾಯಿತು ಎಂದು ಹೇಳಲಾಗಿದೆ.  ಇಂದಿಗೂ ಮಕ್ಕಳು ದೊಡ್ಡವರ ಮತ್ತು ಸುತ್ತಣ ಲೋಕದ ನಡವಳಿಕೆಯನ್ನು ಅನುಕರಿಸಿ ತೋರಿಸುತ್ತವೆ.  ಹೀಗೆ ತನ್ನ ಸುತ್ತ ಕಂಡದ್ದನ್ನು ಅನುಕರಿಸುವ ಒಂದು ಶಕ್ತಿ ಮನುಷ್ಯನಲ್ಲಿದೆ, ಮತ್ತು ಹಾಗೆ ಅನುಕರಿಸುವುದರಲ್ಲಿ ಏನೋ ಒಂದು ಸೊಗಸಿದೆ, ತೃಪ್ತಿಯೂ ಇದೆ.  ಯಾರನ್ನು ಕಲೆಗಾರ ಎಂದು ಕರೆಯುತ್ತೇವೆಯೋ ಅವನು ಮಾಡುವುದು ಕೂಡ ಒಂದು ವಿಶೇಷ ರೀತಿಯ ಅನುಕರಣೆಯೆ ಎಂದು ಗ್ರೀಕ್ ತತ್ವಜ್ಞ ಪ್ಲೇಟೋನ ವಾದ. ನಾಟ್ಯ ಎನ್ನುವುದು ಸ್ವಭಾವಗಳ ಅನುಕರಣ ಎನ್ನುತ್ತದೆ ಭರತಮುನಿಯ ನಾಟ್ಯಶಾಸ್ತ್ರ. ಒಟ್ಟಿನಲ್ಲಿ, ಅನುಕರಿಸುವುದರಲ್ಲಿಯೆ ಒಂದು ಸುಖವಿದ್ದರೂ, ಸೊಗಸಿದ್ದರೂ, ಸೃಜನಶೀಲನಾದ ಕಲೆಗಾರನ ಮನಸ್ಸು ಇಷ್ಟರಲ್ಲಿಯೆ ತೃಪ್ತವಾಗುವುದಿಲ್ಲ; ತಾನು ಕಂಡದ್ದನ್ನು ಮಾತ್ರವಲ್ಲ, ಕಂಡದ್ದರ ಒಳಗನ್ನು ಮತ್ತು ಕಂಡದ್ದರ ಆಚೆಗೂ ಇರಬಹುದಾದದ್ದನ್ನು ಗ್ರಹಿಸಿ ರೂಪಿಸುವ ಕಡೆಗೆ ಅವನ ಮನಸ್ಸು ತುಡಿಯುತ್ತದೆ.  ಮನುಷ್ಯನ ಮನಸ್ಸಿಗಿರುವ ಈ ಸೃಷ್ಟಿಕರ್ತೃತ್ವ ಪ್ರಖರವಾದಷ್ಟೂ ಕೇವಲ ಕಂಡದ್ದನ್ನು ಕಂಡರಿಸುವ ಕಾರ್ಯ, ಅಂಥ ಮನಸ್ಸಿಗೆ ತೀರ ಪರಿಮಿತವೂ ಅತೃಪ್ತಿಕರವೂ ಆಗಿ ತೋರುತ್ತದೆ.  ಒಣಗಿ ನಿಂತ ಮರವೊಂದನ್ನು ನೋಡಿ, ಅನುಕರಣಬುದ್ಧಿ ಅದನ್ನು ಯಥಾವತ್ತಾಗಿ ಪಟವೊಂದರ ಮೇಲೆ ಚಿತ್ರಿಸುತ್ತದೆ.  ಆ ಚಿತ್ರ ಚೆನ್ನಾಗಿರುವ ಅನುಕರಣವಾಗಬಹುದು; ಅದನ್ನು ನೋಡಿದವರಿಗೆ ಆ ಚಿತ್ರ ಒಂದು ರೀತಿಯ ಸಂತೋಷವನ್ನೂ ಕೊಡಬಹುದು.  ಆದರೆ ತೀವ್ರವಾದ ಸೃಜನ ಸಾಮರ್ಥ್ಯವುಳ್ಳ ಕಲಾವಿದನ ಪ್ರತಿಕ್ರಿಯೆ ಇಂಥ ಸಂದರ್ಭದಲ್ಲಿ ಬೇರೆಯೆ ಆಗಿರುತ್ತದೆ.  ಅವನು ಅನುಕರಣ ಪಟುವಿನಂತೆ ಕೇವಲ ಮರವನ್ನು ಮಾತ್ರ ಕಾಣುವುದಿಲ್ಲ; ಅವನು ಆ ಮರದ ಸಾಂಕೇತಿಕ ಅರ್ಥವನ್ನು ಕಾಣುತ್ತಾನೆ.  ಹಾಗಾದಾಗ ಅವನು ಆ ಮರವನ್ನು ಯಥಾವತ್ತಾಗಿ ಅನುಕರಿಸಿ ಚಿತ್ರಿಸದೆ ಆ ಮರ ಯಾವುದಕ್ಕೆ ಸಂಕೇತವೆಂದು ಅವನ ಒಳಗಣ್ಣಿಗೆ ಹೊಳೆಯಿತೋ ಆ ಅರ್ಥವನ್ನು ಚಿತ್ರಿಸಿ ತೋರುತ್ತಾನೆ.  ಒಣಗಿದ ಮರ ಇಂಥ ಕಲಾವಿದನಿಗೆ, ಬದುಕಿನ ಶುಷ್ಕತೆಗೆ, ವೃದ್ಧಾಪ್ಯಕ್ಕೆ, ನಿರ್ವೀರ್ಯತೆಗೆ ಸಂಕೇತವೆಂಬಂತೆ ಕಂಡಿರಬಹುದು.  ಇಲ್ಲಿ ಆಗಲೇ ‘ಅನುಕರಣೆ’ಯನ್ನು ಹಿಂದಿಕ್ಕಿ ಕಲಾವಿದನ ಕಾರ್ಯ ಬೇರೊಂದು ‘ನಿರ್ಮಾಣ’ದ ನಿಲುವಿಗೆ ಏರುತ್ತದೆ.  ಇನ್ನಷ್ಟು ಪರಿಭಾವನೆಯಿಂದ ಆ ಕಲಾವಿದ, ಒಣ ಮರವೊಂದನ್ನು ಬರೆದು, ಅದರ ಕೊಂಬೆಯ ತುದಿಯಲ್ಲಿ ಆಗತಾನೆ ಹೊಮ್ಮುವ ಚಿಗುರನ್ನು ಚಿತ್ರಿಸಿ, ಆ ಚಿತ್ರಕ್ಕೆ ‘ಬದುಕಿನ ದಾಹ’ ಎಂದು ಹೆಸರನ್ನು ಕೊಡುತ್ತಾನೆಂದು ಭಾವಿಸೋಣ.  ಆಗ ಆ ಚಿತ್ರ, ಬದುಕಿನ ದಾಹಕ್ಕೆ, ತಾನು ಎಷ್ಟೇ ಒಣಗಿದರೂ ತನ್ನಲ್ಲಿ ಜೀವಂತಿಕೆಯ ಸೆಲೆ ಇದೆ ಎಂಬ, ಏನಾದರೂ ತಾನು ಚಿಗುರಿಯೇ ತೀರುತ್ತೇನೆಂಬ ಚಿರಂತನ ದಾಹಕ್ಕೆ ಸಂಕೇತವಾಗುತ್ತದೆ.  ಹೀಗೆ ಲೋಕದ ವಸ್ತುಗಳಾಗಲಿ, ವ್ಯಕ್ತಿಗಳಾಗಲಿ, ಅನುಭವಗಳಾಗಲಿ, ಸೃಜನಶೀಲ ಕಲಾವಿದನ ಕಣ್ಣಿಗೆ ಒಂದು ವಿಶೇಷವಾದ ಅರ್ಥವಂತಿಕೆಯನ್ನು ಯಾವಾಗ, ಹೊಳೆಯಿಸುತ್ತವೆಯೋ ಆಗ, ನಮ್ಮ ದೈನಂದಿನ ಚಿರಪರಿಚಿತವಾದ ವ್ಯಾವಹಾರಿಕ ನೆಲೆಯಿಂದ, ಬೇರೊಂದು ಅರ್ಥಪೂರ್ಣವಾದ ನಿಲುವಿಗೆ ಏರುತ್ತವೆ.  ಹಿಂದೆ ಹೇಳಿದ ನಿದರ್ಶನವನ್ನೆ ಕುರಿತು ಹೇಳುವುದಾದರೆ, ನಿಸರ್ಗದ ಒಂದು ಭಾಗವಾಗಿದ್ದ, ಕೇವಲ ಅವಜ್ಞತೆಗೆ ಪಾತ್ರವಾಗಿದ್ದ ‘ಒಣಮರ’ ನಿಜವಾದ ಕಲಾವಿದನ ದೃಷ್ಟಿಯಲ್ಲಿ ಬದುಕಿನ ಚಿರಂತನ ಅರ್ಥವಂತಿಕೆಯ ಪರಿಧಿಯೊಳಕ್ಕೆ ಬಂದು, ಬೇರೊಂದು ನಿಲುವನ್ನು ಪಡೆದು ನಮಗೆ ವಿಶೇಷ ರೀತಿಯ ಆಹ್ಲಾದವನ್ನು ನೀಡುತ್ತದೆ.  ಈ ರೀತಿಯಲ್ಲಿ ಗೋಚರಿಸುವ ವಸ್ತುಗಳ ಒಳಗೆ ಬೇರೊಂದು ಅರ್ಥವನ್ನು ಕಾಣುವ ಹಾಗೂ ಕಟ್ಟುವ ಈ ಸಾಮರ್ಥ್ಯವನ್ನೆ ನಾವು ಪ್ರತಿಭೆ ಎಂದು ಕರೆಯುತ್ತೇವೆ.

ಪ್ರತಿಭೆ ಎಂದರೇನು? ಅದರ ಪರಿಕರಗಳೇನು? ಅದು ಕವಿ-ಕಲಾವಿದರಲ್ಲಿ ಯಾವ ರೀತಿಯಲ್ಲಿ ಕೆಲಸ ಮಾಡುತ್ತದೆ? ಇತ್ಯಾದಿ ಪ್ರಶ್ನೆಗಳಿವೆ.  ಅದರ ವಿಲಾಸವನ್ನು ಕವಿಗಳೂ ರಸಿಕರೂ ಉದ್ದಕ್ಕೂ ಗೌರವಿಸಿದ್ದಾರೆ.  ಕಾವ್ಯನಿರ್ಮಾಣ ಸಾಮರ್ಥ್ಯವಾದ ಈ ಪ್ರತಿಭೆಯ ಪ್ರಕಾಶವನ್ನು ಕಂಡು ‘ಇದೇನ್ ಅಳವಗ್ಗಳಮೋ ಕವೀಂದ್ರರಾ’ ಎಂದು ಉದ್ಗಾರವೆತ್ತುತ್ತಾನೆ ನೇಮಿಚಂದ್ರ; ಕವಿಯ ಕಣ್ಣು ಒಂದು ಆವೇಶದ ಮಾಧುರ್ಯದ ಮತ್ತಿನಲ್ಲಿ, ಸ್ವರ್ಗದಿಂದ ಮರ್ತ್ಯಕ್ಕೆ, ಮರ್ತ್ಯದಿಂದ ಸ್ವರ್ಗಕ್ಕೆ ಹೊಳೆದು, ಗಾಳಿಗಾಳಿಯಾದ ಸಂಗತಿಗಳಿಗೆ ಒಂದು ನಾಮ-ರೂಪವನ್ನು ದಾನಮಾಡುತ್ತದೆ ಎನ್ನುತ್ತಾನೆ ಷೇಕ್ಸ್‌ಪಿಯರ್; ಅದು ನೀರ ಮೇಲೂ, ನೆಲದ ಮೇಲೂ ಇಲ್ಲದ ಒಂದು ಪ್ರಕಾಶ ಎನ್ನುತ್ತಾನೆ ವರ್ಡ್ಸ್‌ವರ್ತ್;  ಅದೊಂದು ಸರಸ್ವತಿಯ ಕೃಪೆ ಎನ್ನುತ್ತಾರೆ ಅನೇಕ ಭಾರತೀಯ ಕವಿಗಳೂ ಮತ್ತು ಆಲಂಕಾರಿಕರು.  ಅಂತೂ ಈ ಸಾಮರ್ಥ್ಯ ಹೇಗೆ ಬಂತು, ಏಕೆ ಬಂತು ಎನ್ನುವುದು ಇತರರಿಗಿರಲಿ, ಕವಿಗೇ ತಿಳಿಯದಿರುವಾಗ ಅದನ್ನು ಬೌದ್ಧಿಕವಾಗಿ ವಿಶ್ಲೇಷಿಸುವುದಕ್ಕಿಂತ ಅದಕ್ಕೊಂದು ಅತಿಮಾನುಷವಾದ ಕಾರಣವನ್ನು ಕಲ್ಪಿಸಿ ಕೈ ತೊಳೆದುಕೊಂಡು ಬಿಡುವುದರಲ್ಲಿಯೆ ಬಹುಮಂದಿ ಪ್ರವೃತ್ತರಾಗಿದ್ದಾರೆ.  ಎಲ್ಲಿಯೆ ಆಗಲಿ, ಬುದ್ಧಿಗೆ ಅತೀತವೆಂದು ಕಂಡುಬಂದ ಸಂಗತಿಗಳಿಗೆ, ಅಲೌಕಿಕತೆಯ ಬಣ್ಣ ಕಟ್ಟುವುದು ಸಹಜವಾದ ವಿಷಯವಾಗಿದೆ. ಹೀಗಾಗಿ ಅನೇಕ ಭಾರತೀಯ ಹಾಗೂ ಪಾಶ್ಚಿಮಾತ್ಯ ಆಲಂಕಾರಿಕರು, ಕವಿಯ ಕಾವ್ಯನಿರ್ಮಾಣಕೌಶಲಕ್ಕೆ ಇರುವ ಅತಿಶಯತೆಯನ್ನು  ಕುರಿತು ಅದೊಂದು ವರ, ಅದೊಂದು ಕೃಪೆ, ಜನ್ಮಾಂತರ ಸಂಸ್ಕಾರ -ಇತ್ಯಾದಿಯಾಗಿ ವರ್ಣಿಸಿದ್ದಾರೆ.  ಹೀಗೆ ಈ ವಿಚಾರವನ್ನು ಒಂದು ಅಲೌಕಿಕ ನೆಲೆಗೆ ಕೂರಿಸಿದ ಕೂಡಲೆ, ಇದಕ್ಕೆ ಇನ್ನೂ ಕೆಲವು ಅಂಶಗಳು ಸಲೀಸಾಗಿ ಬಂದು ಸುತ್ತಿಕೊಳ್ಳುತ್ತವೆ.  ಕವಿ ದೇವಾಂಶ ಸಂಭೂತ; ಅವನೊಬ್ಬ ಸಾಧಕ; ಋಷಿ ಅಲ್ಲದವನು ಕವಿಯಾಗಲಾರ; ಅಂಥವನ ಧ್ಯಾನಸ್ಥಿತಿಯಲ್ಲಿ ಕಾವ್ಯ ಅವತರಿಸುತ್ತದೆ; ಸರಸ್ವತಿಯ ಕೃಪೆಗೆ ಪಾತ್ರರಾಗುವ ಇಂಥ ಶುಚಿಶೀಲರಿಗೆ, ಅವಳೇ ಬೇಕಾದ ಅರ್ಥಗಳನ್ನು ಕಾಣಿಸುತ್ತಾಳೆ; Poetry is something Divine -ಹೀಗೆ ಕಾವ್ಯಮೀಮಾಂಸೆ ಮಡಿ ಉಟ್ಟುಕೊಂಡು, ವೇದಾಂತವೋ, ತಾತ್ವಿಕವೋ ಆದ ಪರಿಭಾಷೆಯಲ್ಲಿ ದಾರಿ ತಪ್ಪುತ್ತದೆ.

ಆದರೆ ಕವಿ ಒಬ್ಬ ಮನುಷ್ಯನೆಂದೂ, ಕಾವ್ಯ ಎನ್ನುವುದು ಅನುಭವಗಳ ಒಗ್ಗೂಡಿಕೆಯಿಂದ ವಿಶೇಷವಾದ ರೀತಿಯಲ್ಲಿ ರೂಪುತಾಳುವ ಒಂದು ಮಾನಸಿಕ ಕ್ರಿಯೆ ಎಂದೂ ಗಮನಿಸುವ ಮನೋವೈಜ್ಞಾನಿಕ ದೃಷ್ಟಿಗೆ, ಕಾವ್ಯ ಪ್ರತಿಭೆಯನ್ನು ಕುರಿತ, ವೇದಾಂತ ಹಾಗೂ ತಾತ್ವಿಕವಾದಿಗಳ ಅಲೌಕಿಕ ಸಂಬಂಧಿಯಾದ ಉದ್ಗಾರಗಳು ಅವೈಜ್ಞಾನಿಕವೆಂಬಂತೆ ತೋರುವುದು ಸಹಜ.  ಆಗ “Art is human and not divine; profane not sacred”[1] -ಎಂದು ಘೋಷಿಸುವ, ಪ್ರತಿಭಾ ವ್ಯಾಪಾರದ ಬಗ್ಗೆ ಇದ್ದ ಅನವಶ್ಯಕ ಸಂಭ್ರಾಂತಿಗಳನ್ನು ಕಡಿಮೆಮಾಡಿ, “ಪ್ರತಿಭೆಯಲ್ಲಿ ಅಂತಹ ವಿಲಕ್ಷಣ ರಹಸ್ಯತಮವಾದದ್ದೇನೂ ಇಲ್ಲ; ಮಾನವ ಮತಿಯ ಇತರ ವ್ಯಾಪಾರಗಳಿಗೆ ಇಲ್ಲದ ಅದ್ಭುತವೇನೂ ಅದಕ್ಕಿಲ್ಲ”[2] -ಎನ್ನುವ ಸಾಧಾರಣದ ನೆಲೆಗೆ ತರುವ ಪ್ರಯತ್ನಗಳೂ ನಡೆದಿವೆ.

ಪ್ರತಿಭೆ ಎನ್ನುವುದು ಏನೋ ಒಂದು ಅಲೌಕಿಕ ಶಕ್ತಿ. ಅದರಲ್ಲಿ ಮಾನವ ಮತಿಯ ಬೇರೆಯ ವ್ಯಾಪಾರಗಳಿಗೆ ಇಲ್ಲದ ಏನೋ ಒಂದು ಗೂಢತೆ, ಪಾವಿತ್ರ್ಯತೆ ಇದೆ ಎನ್ನುವ ಭಾವುಕ ದೃಷ್ಟಿಯಾಗಲಿ, ಪ್ರತಿಭೆ ಎನ್ನುವುದರಲ್ಲಿ ಅಂತಹ ಗುಹ್ಯಾತ್ ಗುಹ್ಯತರವಾದದ್ದಾಗಲಿ, ಅಲೌಕಿಕತೆಯಾಗಲಿ ಇಲ್ಲ, ಅದೊಂದು ಮಾನವ ಮತಿಯ ಹಲವು ವ್ಯಾಪಾರಗಳಲ್ಲಿ ಒಂದು ಮಾತ್ರ ಎಂಬ ನಿರ್ಭಾವುಕ ದೃಷ್ಟಿಯಾಗಲಿ, ಸಮರ್ಪಕ ಎಂದು ನಮಗೆ ತೋರುವುದಿಲ್ಲ. ಒಂದು, ಪ್ರತಿಭಾಶಕ್ತಿಯನ್ನು ದೈವತ್ವದ ಅಟ್ಟಕ್ಕೇರಿಸಿದರೆ, ಮತ್ತೊಂದು ಅದರ ಮಹತ್ವವನ್ನು ಕಡೆಗಣಿಸಿ ಬೀದಿಗೆಳೆಯುತ್ತದೆ.  ಆದರೆ ಬಹುಶಃ ನಿಜಾಂಶ ಈ ಎರಡರ ನಡುವೆ ಇರಬೇಕು; ಇದೆ. ಅದೊಂದು ದೈವಾಂಶ ಸಂಭೂತವಾದದ್ದು, ಜನ್ಮಾಂತರ ರೂಪವಾದದ್ದು ಎಂದವರು ಗಮನಿಸಿದ್ದು, ಅದು ಎಲ್ಲರಲ್ಲಿಯೂ ಇಲ್ಲದೆ, ಯಾಕೆ ಕೆಲವರಲ್ಲಿ ಮಾತ್ರ ಇದೆ ಎಂಬುದನ್ನು.  ಯಾರೋ ಕೆಲವರು ಮಾತ್ರ ಆಶ್ಚರ್ಯವೆಂಬಂತೆ ತೋರುವ ಈ ಒಂದು ಸಾಮರ್ಥ್ಯವನ್ನು ಪಡೆದುಕೊಂಡು ಬಂದಿರುತ್ತಾರೆ.  ಇಂಥವರ ಕೃತಿಯಲ್ಲಿ ಕಾಣುವ ಒಂದು ವಿಶೇಷತೆ, ಹೊಳಪು, ದೈನಂದಿನ ಸರಳ-ಸಾಧಾರಣ ಅಭಿವ್ಯಕ್ತಿಗಳಲ್ಲಿ ಕಾಣುವುದಿಲ್ಲ.  ಆದ್ದರಿಂದ ಅಸಾಧಾರಣವೆಂಬಂತೆ ತೋರುವ, ಕಲಿಸಿದರೆ ಬಾರದ, ಕೇವಲ ಪ್ರಯತ್ನದಿಂದ ಸಿದ್ಧಿಸದ, ಕೆಲವರಲ್ಲಿ ಲೀಲಾಜಾಲವಾಗಿ ಪ್ರಸ್ಫುಟವಾಗುವ ಈ ವಿಶೇಷಾಭಿವ್ಯಕ್ತಿ ಸಾಮರ್ಥ್ಯವನ್ನು ಏನು ಮಾಡಿದರೂ ಬುದ್ಧಿಪೂರ್ವಕವಾಗಿ ಗ್ರಹಿಸಿ ವಿವರಿಸಲಾಗದ ಕಾರಣದಿಂದ, ಅದನ್ನು ಅಲೌಕಿಕವೆಂದೋ, ಅಪೌರುಷೇಯವೆಂದೋ ಕರೆದಂತೆ ತೋರುತ್ತದೆ.  ಆದರೆ ಈ ದೃಷ್ಟಿಯನ್ನು ತಿರಸ್ಕರಿಸಿ ಕವಿಯನ್ನು ಕೇವಲ ಮನುಷ್ಯ ಮಾತ್ರನೆಂದೂ, ಪ್ರತಿಭೆ ಏನಿದ್ದರೂ ಮಾನವಮತಿಯ ಇತರ ವ್ಯಾಪಾರಗಳಂತೆ ಒಂದೆಂದೂ ಪರಿಗಣಿಸುವ ವಾಸ್ತವವಾದಿಗಳೂ, ಈ ಕಲಾನಿರ್ಮಾಣ ಸಾಮರ್ಥ್ಯ ಎಲ್ಲೋ ಕೆಲವರಲ್ಲಿ ಮಾತ್ರ ಇದೆ ಎಂಬುದನ್ನೂ, ಅದು ಕಲಿಸಿದರೆ ಅಥವಾ ಪ್ರಯತ್ನ ಪಟ್ಟರೆ ಬರುವುದಲ್ಲ ಎನ್ನುವುದನ್ನೂ ತಿಳಿಯದವರೇನಲ್ಲ.  ಆದರೂ ಈ ಕಲಾನಿರ್ಮಾಣ ಸಾಮರ್ಥ್ಯಕ್ಕೆ ಅನವಶ್ಯಕವಾಗಿ ಹಾಗೂ ಪರಂಪರಾಗತವಾಗಿ ಪ್ರಾಪ್ತವಾದ ವೈಭವೋಪೇತವಾದ ಸಂಭ್ರಾಂತಿಯಿಂದ ಕೂಡಿದ ಮಾತುಗಳನ್ನು ತಿರಸ್ಕರಿಸುವ ರಭಸದಲ್ಲಿ, ತೊಟ್ಟಿಲು ಸಮೇತ ಮಗುವನ್ನೂ ಎಸೆದರೆಂಬಂತೆ, ಪ್ರತಿಭೆಯ ವಿಶೇಷತೆಯನ್ನೂ ಅಸಾಧಾರಣತೆಯನ್ನೂ ಕಡೆಗಣಿಸಿದ್ದು ಸರಿ ಎಂದು ನಮಗೆ ತೋರುವುದಿಲ್ಲ.  ಕವಿಯೂ ಎಲ್ಲರಂತೆ ಒಬ್ಬ ಮನುಷ್ಯನೆಂಬುದೇನೋ ನಿಜ; ಆದರೆ ಎಲ್ಲರಲ್ಲಿಯೂ ಇರಲಾರದ ಒಂದು ಅಸಾಧಾರಣ ಸಾಮರ್ಥ್ಯ ಕಲೆಗಾರನಾದ ಮನುಷ್ಯನಲ್ಲಿ ಇದೆ ಎಂಬುದನ್ನು ಯಾಕೆ ಒಪ್ಪಬಾರದು?  ಕಲಾವಿದನ ಸಾಮರ್ಥ್ಯದಲ್ಲಿ ಗೂಢಾತ್ ಗೂಢತರವಾದದ್ದು ಏನೂ ಇಲ್ಲವೆಂದೂ, ಅದೂ ಮಾನವ ಮನಸ್ಸಿನ ಶಕ್ತಿಗಳಲ್ಲಿ ಒಂದು ಎನ್ನುವುದನ್ನು ಅಲ್ಲಗಳೆಯಬೇಕಾಗಿಲ್ಲ; ಆದರೆ ಪ್ರತಿಭೆ ಎನ್ನುವುದು ಯಾರ ಮನಸ್ಸಿನ, ಎಂಥ ಮನಸ್ಸಿನ ಹಾಗೂ ಯಾವ ರೂಪದ ಶಕ್ತಿ ಎಂಬುದನ್ನು, ಯಾವ ಮನಸ್‌ಶಾಸ್ತ್ರಜ್ಞನು ಪರಿಶೀಲಿಸಿದರೂ, ಅದು ವಿಶೇಷ ಸಂವೇದನಾಶೀಲವಾದ ಮನಸ್ಸಿನ ಒಂದು ಅಸಾಧಾರಣ ಸಾಮರ್ಥ್ಯವೆಂಬುದನ್ನು ಒಪ್ಪಬೇಕಾಗುತ್ತದೆ.

ನಮ್ಮ ಮನಸ್ಸು ಎರಡು ರೀತಿಗಳಲ್ಲಿ ವ್ಯವಹರಿಸುತ್ತದೆ: ಬುದ್ಧಿಪೂರ್ವಕವಾಗಿ ಮತ್ತು ಭಾವಪೂರ್ವಕವಾಗಿ.  ತನ್ನ ಸುತ್ತಾ ನಡೆಯುವ ಸಂಗತಿಗಳನ್ನು ಕಂಡು ಬುದ್ಧಿ ಪ್ರಶ್ನಿಸುತ್ತದೆ; ವಿಚಾರ ಮಾಡುತ್ತದೆ; ವಿಶ್ಲೇಷಿಸುತ್ತದೆ.  ಮತ್ತೆ ಕೆಲವು ವೇಳೆ ಮನಸ್ಸು ಏನೇನನ್ನೊ ಕಲ್ಪಿಸಿಕೊಳ್ಳುತ್ತದೆ; ಭಾವಿಸುತ್ತದೆ, ಊಹಿಸುತ್ತದೆ. ಗಗನದ ನೀಲಿಯಲ್ಲಿ ತೇಲುವ ಮೋಡಗಳನ್ನು ಕಂಡು, ಬುದ್ಧಿ ಹೇಳುತ್ತದೆ, ಅದು ಬರಿಯ ನೀರಿನ ಆವಿ, ಆಮ್ಲಜನಕ ಜಲಜನಕಗಳ ಸಂಯೋಜನೆಯಿಂದ ರೂಪುಗೊಂಡ ಆಕಾರ ಮಾತ್ರ ಎಂದು.  ಆದರೆ ಭಾವನೆಯ ಕಣ್ಣಿಗೆ ಅದೊಂದು ಸೋಜಿಗ; ಆ ಮೋಡಗಳು ಬರಿಯ ಮೋಡಗಳೆಂದು ತೋರದೆ, ಸ್ವರ್ಗದೆಡೆಗೆ ಧಾವಿಸುವ ಇಂದ್ರನ ಕುದುರೆಗಳಂತೆ ತೋರಬಹುದು; ಗಗನ ಸರೋವರದಲ್ಲಿ ವಿಹರಿಸುವ ಹಂಸಗಳಂತೆ ತೋರಬಹುದು; ಬಾನಿನ ಜಗುಲಿಯ ನೀಲಿಯಲ್ಲಿ ಆಡುವ ಕೂಸುಗಳಂತೆ ತೋರಬಹುದು. ಹೀಗೆ ಅಂದಂದಿನ ಮನಃಸ್ಥಿತಿಗೆ ಅನುಸಾರವಾಗಿ ಒಂದೇ ವಸ್ತು ಬೇರೆ ಬೇರೆಯ ಕಾಲದಲ್ಲಿ ಬೇರೆ ಬೇರೆಯ ರೀತಿ ಕಾಣಬಹುದು.  ಹಾಗೆ ತೋರಿದ್ದು ಸುಳ್ಳು ಎಂದಲ್ಲ; ಅದೂ ಸತ್ಯವೇ. ಆದರೆ ಇದು ವಿಜ್ಞಾನಿಯ ಕಣ್ಣಿಗೆ ಗೋಚರಿಸುವ ಸತ್ಯವಲ್ಲ.  ಭಾವುಕನ ದೃಷ್ಟಿಗೆ ಕಂಡ ಭಾವನಾ ಸತ್ಯ.  ಈ ರೀತಿಯ ತೋರಿಕೆಯಲ್ಲಿ ಏನೋ ಒಂದು ಸೊಗಸಿದೆ.  ಯಾಕೆಂದರೆ ಮೋಡ ಎಂದರೆ ಕೇವಲ ನೀರಿನ ಆವಿ ಎಂದು ಹೇಳುವ ಬುದ್ಧಿಯ ವಿವರಣೆಯ ತಿಳವಳಿಕೆಯಿಂದ ಬೇಸತ್ತ ಮನಸ್ಸಿಗೆ ಇಲ್ಲಿ ಬಿಡುಗಡೆ ದೊರೆಯುತ್ತದೆ.  ದೈನಂದಿನ ಬೌದ್ಧಿಕ ತಾರ್ಕಿಕ ಸತ್ಯದಿಂದ ಲಭಿಸುವ ತೃಪ್ತಿಯಿಂದಾಚೆಗೆ ನೀರಡಸಿ ನಿಲ್ಲುವ ಮನಸ್ಸಿಗೆ, ಕಲ್ಪನೆಯ, ಭಾವನೆಯ ಕ್ರಿಯೆ ಅನಂತ ಅವಕಾಶಗಳನ್ನು ಒದಗಿಸುತ್ತದೆ.  ಎಷ್ಟೋ ವೇಳೆ ಅಗ್ರಾಹ್ಯವಾದದ್ದು, ಬುದ್ಧಿಯ ಹಿಡಿತಕ್ಕೆ ಸಿಕ್ಕದೆ ಹೋದದ್ದು, ಇವುಗಳಿಂದಾದ ಸೋಲಿಗೆ, ಮನಸ್ಸು ಅದರಿಂದಾಚೆಗೆ ಇರಬಹುದಾದ ಏನೋ ಒಂದನ್ನು ಕಲ್ಪಿಸಿಕೊಂಡು ಸುಖಿಸುತ್ತದೆ.  ದೇವರು, ಪರಲೋಕ, ಇತ್ಯಾದಿಗಳ ವಿಚಾರದಲ್ಲಂತೂ ಮನುಷ್ಯನ ಕಲ್ಪನೆಯೊಂದೇ ಸಾಧನವಾಗಿದೆ.  ನಮ್ಮಂತೆಯೇ ನಮ್ಮ ದೇವರುಗಳು; ನಮ್ಮ ಸುತ್ತಮುತ್ತ ಕಂಡ ಅಥವಾ ಕಾಣದ ಸುಖ-ದುಃಖಗಳ ಅತಿಶಯತೆಯಿಂದಲೆ ಸ್ವರ್ಗ ಅಥವಾ ನರಕಗಳ ಕಲ್ಪನೆ.  ಯಾವ ದೇಶದ ಪುರಾಣವನ್ನು ನೋಡಿದರೂ ಶತಶತಮಾನಗಳ ಕಾಲ ಆ ದೇಶದ ಮನಸ್ಸು ಕಲ್ಪಿಸಿದ ದೇವಾನುದೇವತೆಗಳ ರೂಪವನ್ನು ಒಂದು ರೀತಿಯಲ್ಲಿ ಸ್ಥಾಯಿಯನ್ನಾಗಿಸಿ ಪರಂಪರಾಗತವಾಗಿ ರಕ್ಷಿಸಿಕೊಂಡು ಬಂದ ಕಾರಣದಿಂದ, ಆಯಾ ದೇಶದ ಈ ಸ್ಥಾಯೀಕಲ್ಪನಾ ಭಂಡಾರದ ಪರಿಸರದಲ್ಲಿ ಬೆಳೆಯುವ ವ್ಯಕ್ತಿಗಳು ಅದಕ್ಕನುಗುಣವಾಗಿ ತಮ್ಮ ಕಲ್ಪನೆಗಳನ್ನು ರೂಪಿಸಿಕೊಳ್ಳುತ್ತಾರೆ.  ಎಂದರೆ ಕಲ್ಪನೆಯೆಲ್ಲವೂ ಸುಳ್ಳಿನ ಕಂತೆಯ ಮೇಲೆ ನಿಂತದ್ದು ಎಂದಲ್ಲ; ಯಾವ ಕಲ್ಪನೆಯಲ್ಲೂ ವಾಸ್ತವ ಕಾಲುಪಾಲಿನಷ್ಟಾದರೆ ಕಲ್ಪಕತೆ ಮುಕ್ಕಾಲು ಪಾಲಿನಷ್ಟು ಸೇರಿಕೊಂಡಿರುತ್ತದೆ.  ಲಕ್ಷ್ಮಿ; ಪಾರ್ವತಿ; ದುರ್ಗೆ;  ಇಂದ್ರ; ಯಮ; ಸ್ವರ್ಗ; ನರಕ; ಕಾಮಧೇನು; ಕಲ್ಪವೃಕ್ಷ ಇತ್ಯಾದಿಗಳು, ನಮ್ಮ ಲೋಕಸತ್ಯಗಳಿಗೋ, ತತ್ವಗಳಿಗೋ, ಅನುಭವಗಳಿಗೋ, ಆದರ್ಶಗಳಿಗೋ ಕೊಟ್ಟ ರೂಪ ಮತ್ತು ಇಟ್ಟ ಹೆಸರುಗಳಾಗಿವೆ ಎನ್ನುವುದು ಸ್ಪಷ್ಟವಾದ ವಿಚಾರವಾಗಿದೆ.  ಶತಶತಮಾನಗಳಿಂದಲೂ ಒಂದು ದೇಶದ ಮನಸ್ಸು ಸಾಮೂಹಿಕವಾಗಿ ಆಶಿಸಿದ, ಭಾವಿಸಿದ, ಕಲ್ಪಿಸಿದ ಈ ಸಾಮಗ್ರಿಯಿಂದಲೇ ಆಯಾ ದೇಶದ ಕಲ್ಪನಾಸಾಮಗ್ರಿ ಕವಿ-ಕಲಾವಿದರ ಮೂಲದ್ರವ್ಯವಾಗಿ ಒದಗಿ ಬರುತ್ತದೆ.

ಅನುಕರಣೆ ಹೇಗೋ, ಹಾಗೆ ಕಲ್ಪನೆ ಕೂಡ ಮನುಷ್ಯನಿಗೆ ಸಹಜವಾದದ್ದು.  ಅನುಕರಣೆ ಕಂಡದ್ದನ್ನು ಕಂಡ ಹಾಗೆ ಇಳಿಸುವುದಕ್ಕೆ ಪ್ರಯತ್ನಿಸಿದರೆ, ಕಲ್ಪನೆ ಕಂಡದ್ದರ ಒಳಗನ್ನು, ತಾನು ಕಾಣಬೇಕೆನ್ನುವುದು ಹೇಗಿರಬೇಕೆಂದು ಬಯಸುವುದೊ ಅದನ್ನು ರೂಪಿಸುವುದರಲ್ಲಿಯ ಪ್ರವೃತ್ತವಾಗುತ್ತದೆ.  ಅಜ್ಜಿ ಕತೆಯಿಂದ ಹಿಡಿದು ಮಹಾಕಾವ್ಯದ ತನಕ, ಸೋಮಾರಿಯ ಹಗಲುಗನಸಿನಿಂದ ಹಿಡಿದು ಮಹಾಕವಿಯ ‘ದರ್ಶನ’ದ ತನಕ ಈ ಕಲ್ಪನೆಯ ಮಜಲುಗಳನ್ನು ಗುರುತಿಸಬಹುದು.

ಕಲ್ಪನೆ ಎನ್ನುವುದು ವಾಸ್ತವಕ್ಕೆ ವಿರೋಧಿಯಾದುದಾಗಲಿ, ಅಥವಾ ಅವಾಸ್ತವ ವಾದುದಾಗಲಿ ಅಲ್ಲ.  ಕೆಲವರ ಪ್ರಕಾರ ನಾವು ಯಾವುದನ್ನು ವಾಸ್ತವ ಎನ್ನುತ್ತೇವೋ ಅದು ಕೂಡಾ ಕಲ್ಪನೆಯೇ! “ನಮಗೆ ದೊರೆಯುವ ಯಾವೆಲ್ಲಾ ಬಗೆಯ ತಿಳಿವುಗಳ ಮೂಲದ್ರವ್ಯ ಕಲ್ಪನೆಯೇ!”[3] ಲೋಕವಾಸ್ತವವನ್ನು ನಾವು ಸಾಧಾರಣ ಎಂದು ತಿಳಿದಿದ್ದೇವೆ; ಆದರೆ ಪರಿಸ್ಥಿತಿ ಹಾಗಿಲ್ಲ. ನಮ್ಮ ಅನುಭವಕ್ಕೆ ಬರುವ ಈ ಜಗತ್ತೂ ಕಲ್ಪನೆಯದೇ. ಹಾಗಾದರೆ ಇದು ಯಾರ ಕಲ್ಪನೆ ಎಂದರೆ, ಉತ್ತರ, ಅದು ಬೇರೊಂದು ಅತೀತ ಶಕ್ತಿಯದು ಎನ್ನಬಹುದೇನೋ. ಹೀಗಿರುವಲ್ಲಿ ಸತ್ಯ ಅಥವಾ ವಾಸ್ತವ ಯಾವುದು? ಸತ್ಯ ಇದರಾಚೆಯದು. ಈ ಲೋಕ ಒಂದು ತೋರಿಕೆ. ಉಪನಿಷತ್ತಿನ ಮಾತಿನಲ್ಲಿ ಹೇಳುವುದಾದರೆ, ನಾವು ವಾಸ್ತವ ಎಂದು ತಿಳಿದಿರುವ ಈ ಲೋಕವೇನಿದ್ದರೂ ಆ ಮೂಲ ಸತ್ಯದ ಮೇಲೆ ಮುಚ್ಚಿರುವ ಮಿರುಮಿರುಗುವ ಬಂಗಾರದ ಹೊದಿಕೆ. ಶಂಕರಾಚಾರ್ಯರ ಮಾತಿನಲ್ಲಿ ಹೇಳುವುದಾದರೆ ಮಾಯೆ. ಇರುವ ಹಾಗೆ ತೋರುತ್ತದೆ, ಆದರೆ ತೋರುವ ಹಾಗೆ ಅದು ಇಲ್ಲ. ವೇದಾಂತಿಗಳ ಮಾತು ಹಾಗಿರಲಿ. ಕವಿ ಕೋಲ್‌ರಿಜ್ ತನ್ನ Imagination ತತ್ವವನ್ನು ಇಂಥ ಒಂದು ಸಿದ್ಧಾಂತದ ಮೇಲೆ ನಿಲ್ಲಿಸಿದ್ದಾನೆ. ಅವನ ಪ್ರಕಾರ ಈ ಜಗತ್ತು ಕೂಡ ನಮ್ಮ ಕಲ್ಪನೆಯೇ. ಲೋಕವನ್ನು ಕುರಿತ ನಮ್ಮ ಗ್ರಹಿಕೆಗಳೆಲ್ಲವೂ ಕಲ್ಪನೆಯ ಪರಿಣಾಮಗಳೇ. ಹಾಗೆ ನೋಡಿದರೆ ಕಲ್ಪನೆ ಎನ್ನುವುದು ನಮ್ಮೆಲ್ಲ ಅನುಭವಗಳಿಗೆ ಮೂಲಭೂತವಾದದ್ದು. ಈ ಲೋಕ ಎನ್ನುವುದು ನಾವು ನಮ್ಮ ಕಲ್ಪನೆಯ ಕಣ್ಣಿನ ಮೂಲಕ ಕಂಡದ್ದು. ಆದ ಕಾರಣ ಎಲ್ಲರಿಗೂ ಚಿರಪರಿಚಿತವಾದ ವ್ಯಾವಹಾರಿಕ ಜಗತ್ತು ಕಲ್ಪನಾ ನಿರ್ಮಿತವಾದದ್ದು. ಕೋಲ್‌ರಿಜ್ Imagination ಅನ್ನು ಎರಡು ರೀತಿಯದೆಂದು ವಿಭಾಗಿಸುತ್ತಾನೆ. ಒಂದು Primary imagination ಇದು ಲೋಕವನ್ನು ನಾವು ಗ್ರಹಿಸುವ ರೀತಿಗೆ ಅವನು ಕೊಟ್ಟ ಹೆಸರು. ಇನ್ನೊಂದು Secondary imagination. ಈ ಲೋಕಾನುಭವವನ್ನು ಕವಿ ಕಲ್ಪನೆ ಮುರಿದು, ಕರಗಿಸಿ, ಬೇರೊಂದಾಗಿ ಪರಿವರ್ತನೆ ಮಾಡಿಕೊಡುವ ಪ್ರತಿಭಾವ್ಯಾಪಾರಕ್ಕೆ ಅವನು ಕೊಟ್ಟ ಹೆಸರು.  ಎಂದರೆ ನಮ್ಮ ಲೋಕಾನುಭವವಾಗಲಿ, ಮತ್ತು ಈ ಲೋಕಾನುಭವದಿಂದಲೆ ಕವಿ ನಿರ್ಮಿಸುವ ಕಲಾ ಅನುಭವವಾಗಲಿ ಎರಡೂ ಕಲ್ಪನೆಯ ಕಾರ್ಯಗಳೇ ಎಂದು ಕೋಲ್‌ರಿಜ್‌ನ ಅಭಿಪ್ರಾಯ.

ಕಾವ್ಯವು ಪ್ರಧಾನವಾಗಿ ಅನುಕರಣವೇ ಅಥವಾ ನಿರ್ಮಾಣವೆ ಎಂಬ ವಿಚಾರವಾಗಿ ಪಾಶ್ಚಾತ್ಯರಲ್ಲಿ ನಡೆದಷ್ಟು ಚರ್ಚೆ ನಮ್ಮಲ್ಲಿ ನಡೆಯಲಿಲ್ಲ?[4] ಹಾಗೆಯೇ ನಮ್ಮ ಆಲಂಕಾರಿಕರಿಗೆ ಸಾಕಷ್ಟು ತತ್ವ-ವೇದಾಂತಾದಿಗಳ ಹಿನ್ನೆಲೆ ಇದ್ದರೂ, ಪ್ರತಿಭಾ ತತ್ವವನ್ನು ಹೇಳುವಲ್ಲಿ ಕೋಲ್‌ರಿಜ್ ಕವಿಯಂತೆ, ಈ ಲೋಕ ಕೂಡ ಕಾಲ್ಪನಿಕವೆ ಅಲ್ಲವೆ ಎನ್ನುವ ಚರ್ಚೆಗೆ ಇಳಿಯದೆ, ಅದನ್ನು ವೇದಾಂತಿಗಳಿಗೇ ಬಿಟ್ಟು, ಕವಿ ಪ್ರತಿಭೆಯ ಸ್ವರೂಪವನ್ನು ಬಹು ಸೊಗಸಾಗಿ ವ್ಯಾಖ್ಯಾನಿಸಿದ್ದಾರೆ.  ಪ್ರತಿಭೆ ಎನ್ನುವುದು ಬ್ರಹ್ಮಸೃಷ್ಟಿಗೂ ಒಂದು ಕೈ ಮಿಗಿಲಾದದ್ದು ಎಂದೂ, ಅಪಾರವಾದ ಕಾವ್ಯ ಸಂಸಾರದಲ್ಲಿ ಕವಿಯೊಬ್ಬನೇ ಪ್ರಜಾಪತಿ; ಅವನು ತನಗೆ ರುಚಿಸಿದಂತೆ ಈ ಲೋಕಾನುಭವಗಳನ್ನು ಮಾರ್ಪಡಿಸಿ, ‘ಅಪೂರ್ವ ವಸ್ತು ನಿರ್ಮಾಣ’ದಲ್ಲಿ ತೊಡಗಿರುವನೆಂದೂ, ಕಾವ್ಯದಲ್ಲಿ ಕಾಣುವ ಯಾವೆಲ್ಲ ವೈಚಿತ್ರ್ಯವೂ ಪ್ರತಿಭೋದ್ಭವವೆಂದೂ, ಕವಿ ಪ್ರತಿಭೆಯ ತಾರತಮ್ಯದಿಂದಲೇ ಕವಿಗೂ ಕವಿಗೂ, ಕೃತಿಗೂ ಕೃತಿಗೂ ಇರುವ ಭೇದವನ್ನೂ ಬೆಲೆಯನ್ನೂ ಗುರುತಿಸಲು ಸಹಾಯಕವಾಗುವುದೆಂದೂ, ಪ್ರತಿಭೆಯ ಮಹತ್ತನ್ನು ಭಾರತೀಯ ಆಲಂಕಾರಿಕರು ವಿಶೇಷವಾದ ರೀತಿಯಲ್ಲಿ ವಿವರಿಸಿದ್ದಾರೆ.

ಇದುವರೆಗಿನ ನಿರೂಪಣೆಯಲ್ಲಿ ಧಾರಾಳವಾಗಿ ಊಹೆ, ಭಾವನೆ, ಕಲ್ಪನೆ, ಪ್ರತಿಭೆ ಇತ್ಯಾದಿ ಪದಗಳನ್ನು ನಾವು ಬಳಸಿದ್ದರೂ, ಕಾವ್ಯಮೀಮಾಂಸೆಯ ಶಾಸ್ತ್ರೀಯವಾದ ನೆಲೆಯಲ್ಲಿ ಈ ಒಂದೊಂದು ಮಾತುಗಳ ಮಿತಿ ಹಾಗೂ ವ್ಯಾಪ್ತಿಗಳನ್ನು ಪರಿಶೀಲಿಸುವುದು ಅಗತ್ಯವಾಗಿದೆ.  ಯಾಕೆಂದರೆ ಈ ಎಲ್ಲ ಪದಗಳೂ ಕಾವ್ಯಕಲಾ ನಿರ್ಮಾಣ ಸಾಮರ್ಥ್ಯವನ್ನು ಕುರಿತು ಹೇಳುತ್ತವೆಯಾದರೂ, ಅವುಗಳ ಅರ್ಥ ಒಂದೇ ಅಲ್ಲ, ಮತ್ತು ಅನೇಕರು ಈ ಎಲ್ಲ ಪದಗಳನ್ನು ಒಂದೇ ಅಥವಾ ಸಮಾನವಾದ ಅರ್ಥದಲ್ಲಿ ಬಳಸುತ್ತಾರೆ.  ಅದೂ ಕೂಡ ಸರಿ ಅಲ್ಲ ಎಂದು ತೋರಿಸುವುದು ನಮ್ಮ ಉದ್ದೇಶವಾಗಿದೆ.

ಇಂಗ್ಲಿಷ್‌ನಲ್ಲಿಯೂ ಇದೇ ಗೊಂದಲವಿದೆ. Genius, Imagination, Intultion, Fancy, Conception ಇತ್ಯಾದಿ ಪದಗಳು ಕಾವ್ಯಕಲಾ ನಿರ್ಮಾಣ ಸಾಮರ್ಥ್ಯವನ್ನು ನಿರ್ದೇಶಿಸಲು ಬಳಕೆಯಾಗುತ್ತಿವೆ.  ನಮ್ಮಲ್ಲಿಯೂ ಶಕ್ತಿ, ಪ್ರತಿಭಾನ, ಪ್ರತಿಭೆ, ಕಲ್ಪನೆ, ಊಹೆ, ಭಾವನೆ ಇತ್ಯಾದಿ ಪದಗಳಿವೆ. ಇವುಗಳೊಂದೊಂದರ ಅರ್ಥವನ್ನು ಈಗ ಸೂಚಿಸಿದ ಇಂಗ್ಲಿಷ್ ಪಾರಿಭಾಷಿಕಗಳ ಹಿನ್ನೆಲೆಯಲ್ಲಿ ವಿಚಾರ ಮಾಡುವ ಅಗತ್ಯವಿದೆ.

ಈಗ ಕಲ್ಪನೆ ಎನ್ನುವ ಪದವನ್ನೇ ಪರಿಶೀಲಿಸೋಣ. ಈ ಪದ ನಮ್ಮಲ್ಲಿದ್ದರೂ ಅದನ್ನು ಇವತ್ತಿನ ಇಂಗ್ಲಿಷಿನ Imagination ಎಂಬ ಪದದ ಅರ್ಥಕ್ಕೆ ಸಂವಾದಿಯಾಗಿ ನಮ್ಮ ಆಲಂಕಾರಿಕರು ಬಳಸುತ್ತಿರಲಿಲ್ಲ ಎನ್ನುವುದು ಸ್ವಾರಸ್ಯವಾದ ಸಂಗತಿಯಾಗಿದೆ.  ಕಲ್ಪನೆ ಎಂದರೆ ಸಮಾರೋಪ ಎಂದು ಪ್ರಾಚೀನ ಆಲಂಕಾರಿಕನಾದ ಭಾಮಹನ ಅಭಿಪ್ರಾಯ.[5] ತಾರ್ಕಿಕರ ಪ್ರಕಾರ ಕಲ್ಪನೆ ಎಂದರೆ ನಾಮ, ಜಾತಿ ಮುಂತಾದವುಗಳನ್ನು ವಸ್ತುವಿಗೆ ಆರೋಪಿಸುವುದು. ಅಂದರೆ ನಮ್ಮ ಭಾವನೆಗಳನ್ನು ವಸ್ತುವಿಗೆ ಆರೋಪಿಸಿ ನೋಡುವ ‘ಚೇತನಾರೋಪಣ’ವೆ ಕಲ್ಪನೆ. ಪ್ರತಿಭಾ ವ್ಯಾಪಾರದಲ್ಲಿ ಚೇತನಾ ರೋಪಣೆಯ ಅಂಶವನ್ನೇನೋ ನಾವು ಗುರುತಿಸಬಹುದು. ಇಂಗ್ಲಿಷ್ ಕಾವ್ಯ ಮೀಮಾಂಸೆಯಲ್ಲಿ ಇದನ್ನು Pathetic Fallacy ಎಂದು ಕರೆಯುತ್ತಾರೆ. ಪಾಶ್ಚಾತ್ಯ ಸೌಂದರ್ಯಮೀಮಾಂಸೆಯಲ್ಲಿ ಎನ್‌ಫಿಲಿಂಗ್ (Einfulung) ಅಥವಾ ಎಂಪೆಥಿ (Empathy) ಎಂದು ಕರೆಯುತ್ತಾರೆ.[6] ಭಾರತೀಯ ಕಾವ್ಯಮೀಮಾಂಸೆಯಲ್ಲಿ ಕಲ್ಪನೆ ಎಂಬ ಮಾತಿಗೆ ‘ಸಮಾರೋಪ’ವೆಂಬ ಅರ್ಥವನ್ನಷ್ಟೆ ಕೊಟ್ಟು ಬಳಸಿದಂತೆ ತೋರುತ್ತದೆಯೇ ಹೊರತು, ಅದನ್ನು ಪ್ರತಿಭೆಗೆ ಸಂವಾದಿ ಎಂದಾಗಲಿ ಪ್ರತಿಭೆಯ ಒಂದು ಮಜಲು ಎಂಬಂತಾಗಲಿ ಪರಿಗಣಿಸಿದಂತೆ ತೋರುವುದಿಲ್ಲ. ಕಲ್ಪನೆ* ಎಂಬ ಪದ, ಈಗ ಆಧುನಿಕ ಕಾವ್ಯ ವಿಮರ್ಶೆಯಲ್ಲಿ ಇಂಗ್ಲಿಷಿನ Imagination ಎಂಬ ಪದಕ್ಕೆ ಸಂವಾದಿಯಾಗಿ ವಿಶೇಷವಾಗಿ ಬಳಕೆಯಾಗತೊಡಗಿದೆ. ಕಲ್ಪನೆ ಎಂಬ ಪದವನ್ನು ನಾವು ಖಚಿತವಾದ ಅರ್ಥದಲ್ಲಿ ಬಳಸುವುದಾದರೆ Imaginationಗೆ ಅದನ್ನು ಸಂವಾದಿಯಾಗಿ ಬಳಸುವ ಬದಲು, ಇಂಗ್ಲಿಷಿನಲ್ಲಿ ಯಾವುದನ್ನು Fancy ಎನ್ನುತ್ತಾರೆಯೋ, ಆ ಪದಕ್ಕೆ ಸಂವಾದಿಯಾಗಿ ನಾವು ಇರಿಸಿಕೊಳ್ಳುವುದು ಒಳ್ಳೆಯದು.

ಮತ್ತೊಂದು ಪದ ಪ್ರತಿಭಾನ+. ನಮ್ಮ ಆಲಂಕಾರಿಕರು ಶಕ್ತಿ, ಪ್ರತಿಭೆ ಮತ್ತು ಪ್ರತಿಭಾನ ಈ ಮೂರನ್ನೂ ಒಂದೇ ಎಂದು ಭಾವಿಸಿದಂತೆ ತೋರುತ್ತದೆ. ಪ್ರತಿಭಾನ ಎಂಬುದು ಸರಿಯಾಗಿ ನೋಡಿದರೆ ಇಂಗ್ಲೀಷಿನ Intuition ಎಂಬ ಪದಕ್ಕೆ ಸಂವಾದಿಯಾಗಿ ಬಳಸಬೇಕಾದದ್ದು. ‘ಕವಿತ್ವ ಬೀಜಂ ಪ್ರತಿಭಾನಂ’ ಎಂದು ವಾಮನನು ಹೇಳುತ್ತಾನೆ.[7] ಅದೇ ಸೂತ್ರದ ವೃತ್ತಿಯಲ್ಲಿ ಬರುವ ವಿವರಣೆ ಪ್ರತಿಭಾನವನ್ನು ಪ್ರತಿಭೆಯೊಂದಿಗೆ ಸಂವಾದಿಯೆಂಬ ಅರ್ಥವನ್ನು ಕೊಡುತ್ತದೆ.  ನಾಗವರ್ಮನು ತನ್ನ ಕಾವ್ಯಾವಲೋಕನದಲ್ಲಿ ಕಾವ್ಯದ ಪರಿಕರಗಳನ್ನು ಹೇಳುವಲ್ಲಿ ‘ಪ್ರತಿಭಾನ’ವನ್ನು ಮೊದಲನೆಯದೆಂದು ಹೇಳುತ್ತಾನೆ; ಅಲ್ಲದೆ ಮುಂದೆ ಅದನ್ನು ವಿವರಿಸುವಾಗ ‘ಪ್ರತಿಭಾನಂ ಶಕ್ತಿ’ ಎಂದು ಹೇಳಿ, ‘ಶಕ್ತಿ’ ಮತ್ತು ‘ಪ್ರತಿಭಾನ’ಗಳೆರಡೂ ಒಂದೇ ಎಂಬ ಅಭಿಪ್ರಾಯವನ್ನು ಮಂಡಿಸಿದ್ದಾನೆ.[8] ಕಾವ್ಯದ ಕಾರಣ ಸಾಮಗ್ರಿಯನ್ನು ಹೇಳುವಲ್ಲಿ ಮಮ್ಮಟನು ‘ಶಕ್ತಿರ್ನಿಪುಣತಾ ಲೋಕಶಾಸ್ತ್ರ ಕಾವ್ಯಾದ್ಯವೇಕ್ಷಣಾತ್’[9] ಎಂದು, ಶಕ್ತಿಯನ್ನು ಮೊದಲು ಹೆಸರಿಸುತ್ತಾನೆ. ರುದ್ರಟನು ತನ್ನ ‘ಕಾವ್ಯಾಲಂಕಾರ’ದಲ್ಲಿ “ಸಮಾಹಿತವಾದ ಮನಸ್ಸಿನಲ್ಲಿ ಅನೇಕ ಪ್ರಕಾರವಾಗಿ ಅರ್ಥವೂ, ಅದನ್ನು ತಿಳಿಸಲು ಕ್ಲಿಷ್ಟವಲ್ಲದ ಪದಗಳೂ ಯಾವುದರಿಂದ ಹೊಳೆಯುವುದೋ ಅದೇ ಶಕ್ತಿ. ಇದನ್ನೇ ಪ್ರತಿಭೆಯಿಂದ ಇತರರು ಕರೆಯುವರು”[10] ಎನ್ನುತ್ತಾರೆ. ರಾಜಶೇಖರನು ಮಾತ್ರ ಶಕ್ತಿಗೆ ವಿಸ್ತಾರವಾದ ಅರ್ಥವನ್ನು ಕೊಟ್ಟು ‘ಶಕ್ತಸ್ಯ ಪ್ರತಿಭಾತಿ ಶಕ್ತಸ್ಯ ವ್ಯುತ್ಪದ್ಯತೇ’- ಎಂದರೆ, ಶಕ್ತಿ ಉಳ್ಳವನಿಗೇ ಪ್ರತಿಭಾ ವ್ಯುತ್ಪತ್ತಿಗಳೆರಡೂ ಒದಗುವುವು ಎನ್ನುತ್ತಾನೆ.[11] ಈ ಎಲ್ಲ ಮಾತುಗಳಿಂದ ಸ್ಪಷ್ಟವಾಗುವುದು ಇಷ್ಟು: ಶಕ್ತಿ, ಪ್ರತಿಭೆ, ಮತ್ತು ಪ್ರತಿಭಾನ ಈ ಮೂರನ್ನೂ ನಮ್ಮ ಆಲಂಕಾರಿಕರು ಹೆಚ್ಚು ಕಡಮೆ ಸಮಾನಾರ್ಥಕಗಳೆಂದೇ ಭಾವಿಸಿದಂತೆ ತೋರುತ್ತದೆ. ಇಂದು ಇಂಗ್ಲಿಷ್ ಕಾವ್ಯಮೀಮಾಂಸೆಯ ಪದಗಳ ಹಿನ್ನೆಲೆಯಲ್ಲಿ ಕಾವ್ಯನಿರ್ಮಾಣ ಸಾಮರ್ಥ್ಯವನ್ನು ಸೂಚಿಸುವ ಈ ಕೆಲವು ಪದಗಳನ್ನು ಬಳಸುವಾಗ ಯಾವುದು ಯಾವುದಕ್ಕೆ ಸಂವಾದಿ ಎಂಬ ಬಗ್ಗೆ ಖಚಿತವಾದ ನಿಲುವನ್ನು ತಾಳಬೇಕಾಗಿದೆ. ಆಚಾರ್ಯ ತೀ.ನಂ.ಶ್ರೀ. ಅವರು ‘ಭಾರತೀಯ ಕಾವ್ಯಮೀಮಾಂಸೆ’ಯಲ್ಲಿ ಈ ಬಗ್ಗೆ ಕೊಟ್ಟಿರುವ ಸೂಚನೆ ಹೀಗಿದೆ: “ನಮ್ಮ ಕಾವ್ಯ ಚರ್ಚೆಯಲ್ಲಿ ‘ಶಕ್ತಿ’ ಎಂಬುದನ್ನು ವಿಶಾಲತರವಾದ Genius ಎಂಬ ಅರ್ಥದಲ್ಲಿಯೂ, ‘ಪ್ರತಿಭೆ’ ಎಂಬುದನ್ನು ವಿಶಿಷ್ಟವಾದ Imagination ಎಂಬ ಅರ್ಥದಲ್ಲಿಯೂ ನಿಯತವಾಗಿ ಉಪಯೋಗಿಸುವುದು ಉತ್ತಮ.  ‘ಪ್ರತಿಭಾನ’ ಎಂಬ ಇನ್ನೊಂದು ಸಮಾನ ಪದವುಂಟು. ಅದಕ್ಕೆ ‘Intuition’ ಎಂಬ ಅರ್ಥವನ್ನು ಕೊಡಬಹುದು. ಕನ್ನಡದಲ್ಲಿ ಬರೆಯುವಾಗ ಕೆಲವರು Imagination ಎಂಬುದಕ್ಕೆ  ‘ಭಾವನೆ’, ‘ಕಲ್ಪನೆ’, ಎಂಬ ಪ್ರತಿಶಬ್ದಗಳನ್ನು ಇಟ್ಟುಕೊಳ್ಳುತ್ತಾರೆ, ಆದರೆ ‘ಭಾವನೆ’ ಎಂದರೆ “Contemplation, Meditation” ಎಂದು ಅರ್ಥ (ರಸಗಂಗಾಧರಕಾರನ ಪ್ರಯೋಗವನ್ನು ಗಮನಿಸಿ); ‘ಕಲ್ಪನೆ’ ಎಂಬುದನ್ನು “Fancy, Conception” ಎಂಬವಕ್ಕೆ ಸಮಾನವಾಗಿ ಅಂಗೀಕರಿಸೋಣ.”[12] ತೀ.ನಂ.ಶ್ರೀಯವರ ಈ ಸೂಚನೆ ತುಂಬ ಸಮರ್ಪಕವಾಗಿದೆ ಎಂಬುದು ನಮ್ಮ ಅಭಿಪ್ರಾಯ ಕೂಡ.

‘ಶಕ್ತಿ ಎಂಬ ಪದವನ್ನು ‘Genius’ ಎಂಬ ಪದಕ್ಕೆ ಸಂವಾದಿಯಾಗಿ ನಾವು ಬಳಸುವಾಗ, ‘Genius’ ಎಂಬ ಪದದ ಅರ್ಥವ್ಯಾಪ್ತಿಯನ್ನು ಗಮನಿಸಬೇಕಾದದ್ದು ಅಗತ್ಯವಾಗಿದೆ. ಜೀನಿಯಸ್ ಎಂಬ ಪದ ಅಸಾಧಾರಣವಾದ ಮಟ್ಟದಲ್ಲಿನ ಸೃಜನ ಸಾಮರ್ಥ್ಯವನ್ನು ಸೂಚಿಸುತ್ತದೆ. ಸ್ವೋಪಜ್ಞತೆ, ಸೃಷ್ಟ್ಯಾತ್ಮಕತೆ, ಮತ್ತು ಯಾರೂ ಈ ಮೊದಲು ಕೈ ಹಾಕದ ಕ್ಷೇತ್ರವೊಂದರಲ್ಲಿ ಹಿಂದಿಲ್ಲದ ಒಂದು ಹೊಸ ವಿಕ್ರಮವನ್ನು ಸ್ಥಾಪಿಸುವ ಸಾಮರ್ಥ್ಯ – ಈ ಅರ್ಥಗಳನ್ನು ಆ ಪದ ಒಳಗೊಳ್ಳುತ್ತದೆ.[13] ‘ಜೀನಿಯಸ್’ ಎಂದು ಯಾರನ್ನು ಕರೆಯುತ್ತೇವೋ, ಅಂತಹ ‘ಶಕ್ತ’ನಿಗೂ (man of Genius) ಮತ್ತು ಕೇವಲ ಕುಶಲ (man of talent) ನಿಗೂ ಇರುವ ವ್ಯತ್ಯಾಸವನ್ನು ಕೆಲವರು ಗುರುತಿಸಿದ್ದಾರೆ. “ಕುಶಲನಾದವನು ತನ್ನ ಕಾಲದ ಆಶೋತ್ತರಗಳಿಗೆ ರೂಪು ಕೊಡುತ್ತಾ ತನ್ನ ಕಾಲದವರೊಂದಿಗೆ ಕೈಕೈ ಹಿಡಿದು ನಡೆದರೆ, ‘ಶಕ್ತ’ (man of Genius) ನಾದವನು ತನ್ನ ಕಾಲದವರು ಕಾಣಲಾರದುದರ ಕಡೆಗೆ ಕೈ ತೋರಿಸುತ್ತಾನೆ.[14] “ಶಕ್ತಿ (Genius) ಎಂದರೆ ಸಮಸ್ತ ಸಂಗತಿಗಳನ್ನು ಸುಸಮರ್ಥವಾಗಿ ಗ್ರಹಿಸುವ ಒಂದು ಪ್ರಜ್ಞೆ”[15] ಎಂದು ಷೋಷನ್ ಹೌರ್ ಹೇಳುತ್ತಾನೆ. “ ‘ಶಕ್ತಿ’ ಎಂದರೆ ಚಿತ್ತಭೂಮಿಯ ಅಜ್ಞಾತದ ತಲಾತಲದಲ್ಲಿ ಹುದುಗಿದ ಅನುಭವಗಳನ್ನು ಸ್ಫೂರ್ತಿಯಿಂದ ಮೂರ್ತೀಭವಿಸುವ ಸಾಮರ್ಥ್ಯ”[16] ಎಂಬುದು ಮನಸ್ ಶಾಸ್ತ್ರೀಯವಾದ ವಿವರಣೆ.

“ತೀರಾ ಅನಾಯಾಸವಾಗಿ ತನ್ನ ಕಾಲದ  ಸುಪ್ತ ಶಕ್ತಿಗಳನ್ನು ಉಪಯೋಗಿಸಿಕೊಂಡು ಬದುಕಿನ ಅಪಾರವಾದ ಸತ್ವವನ್ನು ಅಭಿವ್ಯಕ್ತಗೊಳಿಸುವುದು “ಜೀನಿಯಸ್’ನ ಲಕ್ಷಣ”[17] “ಜನಾಂಗ, ಪರಿಸರ ಮತ್ತು ತನ್ನ ಕಾಲ ಈ ಮೂರರ ಪರಿಣಾಮವೆ ಶಕ್ತ (man of Genius) ನಲ್ಲಿ ಮೂರ್ತೀಭವಿಸುತ್ತದೆ.”[18] ಶಕ್ತಿವಂತನೆಂದರೆ “ವೈಪರೀತ್ಯಗಳನ್ನು ಸಂಘಟಿಸುವ, ತನ್ನ ಕಾಲದ ಜನಾಂಗದ ಅನ್ವೇಷಕ ಹಾಗೂ ಅಭಿವ್ಯಕ್ತಿಯ ಸಾಮರ್ಥ್ಯಗಳನ್ನು ಒಂದು ಜ್ವಲಂತ ಕೇಂದ್ರಕ್ಕೆ ತಂದು ನಿಲ್ಲಿಸುವ ಶಕ್ತಿ.”[19] ‘ಶಕ್ತಿ’ ಎಂದರೆ, “ಒಂದು ಕಾಲದ ಸಾರಭೂತವಾದ ಗುಣಲಕ್ಷಣಗಳನ್ನು, ತನ್ನ ಜನಾಂಗದ ಅತ್ಯಂತ ಶ್ರೀಮಂತವಾದ ಹಾಗೂ ಅತ್ಯುತ್ಕೃಷ್ಟವಾದ ಸತ್ವವನ್ನು, ಅತ್ಯಧಿಕ ಪ್ರಮಾಣದಲ್ಲಿ ಮತ್ತು ಪ್ರಭಾವಶಾಲಿಯಾದ ರೀತಿಯಲ್ಲಿ ಅಭಿವ್ಯಕ್ತಪಡಿಸುವ ಸಾಮರ್ಥ್ಯ. ಒಂದು ರೀತಿಯಲ್ಲಿ ‘ಶಕ್ತಿ’ಯುಳ್ಳವನನ್ನು ಆ ಕಾಲದ ಅತಿಮಾನವನೆಂದೇ ಹೇಳಬೇಕು.”[20] ಯಾಕೆಂದರೆ “ಶಕ್ತಿ ಎನ್ನುವುದು ಪ್ರಯತ್ನ ಪೂರ್ವಕವಾಗಿ ಪಡೆಯುವಂಥದ್ದಲ್ಲ; ಅದೊಂದು ಅಪೌರುಷೇಯವಾದ ಸಾಮರ್ಥ್ಯ.”[21]

ಶಕ್ತಿ ಅಥವಾ Genius ಅನ್ನು ಕುರಿತ ಈ ಕೆಲವು ವಿವರಣೆಗಳನ್ನು ನೋಡಿದರೆ ಯಾವುದನ್ನು ‘ಜೀನಿಯಸ್’ ಎಂದು ಗುರುತಿಸುತ್ತೇವೋ ಅದು, ಕೇವಲ ಕಲಾಭಿವ್ಯಕ್ತಿಗೆ ಮಾತ್ರ ಸೀಮಿತವಾದುದಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.  ಕಲೆ ಕೂಡಾ ಶಕ್ತಿವಂತನಿಗೆ ಒಂದು ಮಾಧ್ಯಮ ಮಾತ್ರ. ಕಲೆಯಲ್ಲೋ, ವಿಜ್ಞಾನದಲ್ಲೋ, ತತ್ವಶಾಸ್ತ್ರದಲ್ಲೋ, ಯೋಗವಿಜ್ಞಾನದಲ್ಲೋ, ಅಧ್ಯಾತ್ಮದಲ್ಲೋ, ಹೀಗೆ ಬೇರೆ ಬೇರೆಯ ಅನುಭವದ, ಸಾಧನೆಯ ಕ್ಷೇತ್ರಗಳಲ್ಲಿ ಯಾವ ವ್ಯಕ್ತಿ ತನ್ನ ಕಾಲದ ಸಮಸ್ತ ಜನಾಂಗದ ಅಂತಃಸತ್ವವನ್ನು ಅತ್ಯಧಿಕ ಪ್ರಮಾಣದಲ್ಲಿ, ಅತ್ಯುತ್ಕೃಷ್ಟವಾದ ರೀತಿಯಲ್ಲಿ ಅಭಿವ್ಯಕ್ತಪಡಿಸುವನೋ ಅಂಥವನನ್ನು ‘ಜೀನಿಯಸ್’ ಅಥವಾ ‘ಶಕ್ತಿ ಸಂಪನ್ನ’ ನೆಂದು ಕರೆಯಬಹುದು. ಲಿಯೋನಾರ್ಡೋ ಡಾವಿಂಚಿ, ಗಾಂಧಿ, ಐನ್‌ಸ್ಟೀನ್, ಅರವಿಂದರು; ವಾಲ್ಮೀಕಿ, ವಿವೇಕಾನಂದ ಇಂಥವರನ್ನು ‘ಶಕ್ತಿವಂತ’ (Men of Genius) ಎಂದು ಗುರುತಿಸಬಹುದು. ಯಾಕೆಂದರೆ ಈ ‘ವಿಭೂತಿ’[22]ಗಳ ವಿಶಿಷ್ಟಾಭಿವ್ಯಕ್ತಿಯಲ್ಲಿ ಅಂದಂದಿನ ಸಮಗ್ರ ಜನಾಂಗವು ತನ್ನೊಳಗಿನ ಅತ್ಯುತ್ಕೃಷ್ಟವಾದುದನ್ನು ಅತ್ಯುತ್ಕೃಷ್ಟವಾದ ರೀತಿಯಲ್ಲಿ ಪ್ರಕಾಶಪಡಿಸಿಕೊಂಡಿರುತ್ತದೆ.

ಭಾರತೀಯ ಆಲಂಕಾರಿಕರು ‘ಶಕ್ತಿ’ಯನ್ನು ಕುರಿತು, ಈ ಬಗೆಯ ಯಾವ ವಿವರಣೆ ವ್ಯಾಖ್ಯಾನಗಳನ್ನು ಮಾಡದಿದ್ದರೂ ಶಕ್ತಿ ಮತ್ತು ಪ್ರತಿಭೆಗಳನ್ನು ಸಮಾನಾರ್ಥಕವಾಗಿಯೇ ಬಳಸಿದರೂ ರಾಜಶೇಖರನೆಂಬ ಆಲಂಕಾರಿಕನು ಮಾತ್ರ, ಶಕ್ತಿಗೆ ಪ್ರತಿಭೆಗಿಂತ ವಿಶಿಷ್ಟವಾದ ಸ್ಥಾನವನ್ನು ಕೊಟ್ಟು ಅಭ್ಯಾಸ ಮತ್ತು ಪ್ರತಿಭೆ ಎರಡರಿಂದಲೂ ಕವಿಯಲ್ಲಿ ಮೂಡುವ ವಿಶೇಷತೆಯನ್ನು ‘ಶಕ್ತಿ’ ಎಂದು ಕರೆದದ್ದು ಗಮನಿಸಬೇಕಾದ ಸಂಗತಿಯಾಗಿದೆ. ಆದರೆ ಪ್ರತಿಭಾವಂತನಾದ ಕವಿ ತನ್ನಲ್ಲಿ ಎಷ್ಟರಮಟ್ಟಿಗೆ ಈ ‘ಶಕ್ತಿ’ಯನ್ನು ಉಳ್ಳವನಾಗುತ್ತಾನೆಯೋ ಅಷ್ಟರಮಟ್ಟಿಗೆ ಅವನ ಕಾವ್ಯ ಉನ್ನತ ಮಟ್ಟದ್ದಾಗುವುದರಲ್ಲಿ ಸಂಶಯವಿಲ್ಲ.  ಹಾಗೆ ನೋಡಿದರೆ ನಾವು ಯಾರನ್ನು ಮಹಾಕವಿ ಎಂದು ಪರಿಗಣಿಸುತ್ತೇವೆಯೋ ಅವರಲ್ಲಿ ಈ ‘ಶಕ್ತಿ’ ಅತ್ಯಧಿಕ ಪ್ರಮಾಣದಲ್ಲಿರುತ್ತದೆ.

ನಾವು ಪರಿಶೀಲಿಸಬೇಕಾಗಿರುವ ಇನ್ನೊಂದು ಪದ ‘ಪ್ರತಿಭಾನ’. ಇದನ್ನು ಇಂಗ್ಲಿಷಿನ ‘Intuition’ ಗೆ ಸಂವಾದಿಯಾಗಿ ಇರಿಸಿಕೊಳ್ಳಬಹುದು. ‘Intuition’ ಅಥವಾ ಪ್ರತಿಭಾನ ಎಂದರೆ, ಅದೊಂದು ಕವಿ-ಕಲಾವಿದರಿಗಿರುವ ಅಂತರ್ ದೃಷ್ಟಿ. ಕಾರ‍್ಯ-ಕಾರಣಕ್ಕೆ ಅತೀತವಾದ ಒಂದು ಗ್ರಹಣ ಸಾಮರ್ಥ್ಯ. ಜಂಗಮ ಜಗತ್ತಿನ ನಿರಂತರ ಚಲನೆಯನ್ನು ಪ್ರವೇಶಿಸಿ ವಸ್ತು ಸತ್ಯವನ್ನು ಗ್ರಹಿಸಿ ರೂಪಿಸುವ ಒಂದು ಶಕ್ತಿ. ಕವಿಯಾಗಲಿ ವಿಜ್ಞಾನಿಯಾಗಲಿ ಯಾವುದೋ ಒಂದು ವಿಶೇಷ ರೀತಿಯಲ್ಲಿ ತಟಕ್ಕನೆ ವಸ್ತುವಿನ ಸತ್ಯವನ್ನು ಗ್ರಹಿಸುವ ವಿಧಾನ ಇದು. ಈ ಗ್ರಹಿಕೆಯ ಸ್ವರೂಪವನ್ನು ಇತರ ಬುದ್ಧಿವ್ಯಾಪಾರಗಳಂತೆ ಕಾರ್ಯ-ಕಾರಣ ತರ್ಕದಿಂದ ವಿವರಿಸಲು ಸಾಧ್ಯವಾಗುವುದಿಲ್ಲ.[23] ಕ್ರೋಚೆ ಎಂಬ ಎಂಬ ಸೌಂದರ್ಯ ಶಾಸ್ತ್ರಜ್ಞನು ಈ ಒಂದು ಸಿದ್ಧಾಂತವನ್ನು ವಿಸ್ತಾರವಾಗಿ ಪ್ರತಿಪಾದಿಸಿದ್ದಾನೆ.[24] ಕವಿ ಪ್ರತಿಭೆ ಕೆಲಸ ಮಾಡುವುದು ಪ್ರತಿಭಾನ (Intuition) ದಿಂದ ಗೃಹೀತವಾದ ಸಂಗತಿಗಳ ಮೇಲಿನಿಂದ. ಪ್ರತಿಭಾನ ಯಾವ ಸತ್ಯಗಳನ್ನು ಗ್ರಹಿಸಿ ನೀಡುವುದೋ ಅದಕ್ಕೊಂದು ರೂಪ ನಿರ್ಮಾಣ ಮಾಡುವುದು ಪ್ರತಿಭೆ.

ಆಗಲೇ ನಾವು ಗುರುತಿಸಿರುವಂತೆ ‘ಪ್ರತಿಭಾನ’ವನ್ನು ನಮ್ಮ ಆಲಂಕಾರಿಕರು ‘ಶಕ್ತಿ’ ಹಾಗೂ ‘ಪ್ರತಿಭೆ’ಗೆ ಸಂವಾದಿಯಾಗಿಯೆ ಬಳಸಿದ್ದಾರೆ. ಆದರೆ ಪ್ರತಿಭಾನ, ಶಕ್ತಿ ಮತ್ತು ಪ್ರತಿಭೆ ಎಂಬ ಈ ಮೂರು ಪದಗಳು ಒಂದೇ ಭಾವನೆಯನ್ನು ಅಭಿವ್ಯಕ್ತ ಪಡಿಸುವಂತಿದ್ದ ಪಕ್ಷದಲ್ಲಿ ಈ ಮೂರರಲ್ಲಿ ಯಾವುದಾದರೂ ಒಂದೇ ಪದ ಸಾಕಾಗಿತ್ತಲ್ಲವೇ ಎನ್ನಿಸುತ್ತದೆ.  ಆದರೆ ಪಾಶ್ಚಾತ್ಯ ವಿಮರ್ಶೆಯಲ್ಲಿ Genius, Intuition ಮತ್ತು Imagination ಈ ಮೂರಕ್ಕೂ ಗುರುತಿಸಬಹುದಾದ ವ್ಯತ್ಯಾಸವಿರುವಂತೆ, ನಮ್ಮಲ್ಲಿ ಶಕ್ತಿ, ಪ್ರತಿಭಾನ ಮತ್ತು ಪ್ರತಿಭೆಗಳಿಗೆ ವ್ಯತ್ಯಾಸವಿದೆ ಎಂಬುದನ್ನು ಗುರುತಿಸಿಲ್ಲ.  ಕವಿಯ ಕಾವ್ಯ ನಿರ್ಮಾಣ ಸಾಮರ್ಥ್ಯವನ್ನು ಸೂಚಿಸಲು ನಮ್ಮ ಆಲಂಕಾರಿಕರು ಈ ಮೂರು ಪದಗಳನ್ನೂ ಬಳಸಿದ್ದಾರೆ.  ಆದಕಾರಣ ಈ ಮೂರು ಪದಗಳು ಬೇರೆ ಬೇರೆಯ ಶಕ್ತಿ ಸಾಮರ್ಥ್ಯಗಳನ್ನು ಸೂಚಿಸುತ್ತವೆ ಎಂದು ನಾವು ಸಮರ್ಥಿಸತೊಡಗಿದರೆ, ಆ ಮೂರು ಪದಗಳು ಸೂಚಿಸುವ ಅರ್ಥ ಹಾಗೂ ಕ್ರಿಯೆಯಲ್ಲಿ ವ್ಯತ್ಯಾಸವಿದೆಯೆಂದು ತೋರಿಸಲು ಸಾಕಷ್ಟು ಆಧಾರಗಳೇ ಇಲ್ಲ.  ಆದರೆ ಇಂದು ನಾವು ಈ ಮೂರು ಪದಗಳನ್ನು Genius, Intuition, Imaginationಗೆ ಸಂವಾದಿಯಾಗಿ ಬಳಸಲು ಸಾಧ್ಯವಿದೆ; ಹಾಗೆ ಬಳಸುವುದು ಒಳ್ಳೆಯದು, ಆಧುನಿಕ ಕಾವ್ಯಮೀಮಾಂಸೆಯ ಭಾಷೆ ಹಾಗೂ ಪರಿಭಾಷೆಗಳ ದೃಷ್ಟಿಯಿಂದ.

ಇನ್ನು ‘ಪ್ರತಿಭೆ’ ಎಂಬ ಪದ. ಇದನ್ನಂತೂ Imgination ಎಂಬ ಪದಕ್ಕೆ ಸಂವಾದಿಯಾಗಿ ಬಳಸುವುದರಲ್ಲಿ ಯಾವ ತೊಂದರೆಯೂ ಇಲ್ಲ.  ನಮ್ಮ ಆಲಂಕಾರಿಕರು ವಿಶೇಷವಾಗಿ ಬಳಸಿರುವುದು ಪ್ರತಿಭೆ ಎಂಬ ಪದವನ್ನೇ.  ಪ್ರತಿಭಾತತ್ವ ವಿಶೇಷವಾದ ರೀತಿಯಲ್ಲಿ ನಮ್ಮ ಆಲಂಕಾರಿಕರಲ್ಲಿ ಚರ್ಚಿತವಾಗಿದೆ.  ರಾಜಶೇಖರನೆಂಬ ಆಲಂಕಾರಿಕ ತನ್ನ ‘ಕಾವ್ಯಮೀಮಾಂಸೆ’ ಎಂಬ ಗ್ರಂಥದಲ್ಲಿ ಇದರ ಚರ್ಚೆಗೆ ಇಡೀ ಒಂದು ಅಧ್ಯಾಯವನ್ನೇ ಮೀಸಲಾಗಿರಿಸಿದ್ದಾನೆ…. ಅವನನ್ನು ಬಿಟ್ಟರೆ ಕುಂತಕನು ತನ್ನ ವಕ್ರೋಕ್ತಿ ಜೀವಿತದಲ್ಲಿ, ತನ್ನ ವಕ್ರೋಕ್ತಿ ಸಿದ್ಧಾಂತವನ್ನೇ ಪ್ರತಿಭಾವ್ಯಾಪಾರದ ವರ್ಣನೆಗೆ ಬರೆದಂತೆ ತೋರುತ್ತದೆ….. ಆನಂದವರ್ಧನ, ಅಭಿನವಗುಪ್ತರು ಅಲ್ಲಲ್ಲಿ ಹೇಳಿರುವ ಒಂದೊಂದು ಮಾತಿನಲ್ಲಿ, ಭಟ್ಟ ತೌತನ ‘ಕಾವ್ಯ ಕೌತುಕ’ದ ಉಪಲಬ್ಧವಾದ ತುಣುಕುಗಳಲ್ಲಿ, ಮತ್ತಿತರ ಆಲಂಕಾರಿಕರು ಅಲ್ಲೊಮ್ಮೆ ಇಲ್ಲೊಮ್ಮೆ ಹೇಳಿರುವ ಮಾತುಗಳಲ್ಲಿ ಪ್ರತಿಭಾತತ್ವದ ನಿರೂಪಣೆಯನ್ನು ಗುರುತಿಸಬಹುದು.[25]

ಭಾರತೀಯ ಆಲಂಕಾರಿಕರ ಪ್ರಕಾರ ಪ್ರತಿಭೆಯೆ ಕವಿತ್ವದ ಬೀಜ. “ಅದು ಜನ್ಮಾಂತರದಿಂದ ಬಂದ ಒಂದು ಸಂಸ್ಕಾರ ವಿಶೇಷ, ಅದಿಲ್ಲದೆ ಕಾವ್ಯವೇ ಹುಟ್ಟದು”[26] ಎನ್ನುತ್ತಾನೆ ವಾಮನ. ಕಾವ್ಯದಲ್ಲಿ ಯಾವ ಯಾವ ವೈಚಿತ್ರ್ಯಗಳು ಉಂಟೋ,  ಅವೆಲ್ಲವೂ ಪ್ರತಿಭೋದ್ಭವವಾದದ್ದು ಎಂಬುದು ಕುಂತಕನ ಮತ.[27] “ಪ್ರತಿಭೆ ಎಂಬ ಶಬ್ದದ ಅಕ್ಷರಾರ್ಥ ‘ಹೊಳಹು’… ಸಮಾಹಿತವಾದ ಮನಸ್ಸಿನಲ್ಲಿ ಅನೇಕ ಪ್ರಕಾರವಾಗಿ ಅರ್ಥವೂ, ಅದನ್ನು ತಿಳಿಸಲು ಕ್ಲಿಷ್ಟವಲ್ಲದ ಪದಗಳೂ ಯಾವುದರಿಂದ ಹೊಳೆಯುವುವೋ ಅದೇ ಶಕ್ತಿ. ಇದನ್ನೇ ಪ್ರತಿಭೆ ಎಂದು ಇತರರು ಕರೆಯುವರು”[28] ಎನ್ನುತ್ತಾನೆ ರುದ್ರಟ. ಎಂದರೆ ಮನಸ್ಸಿನಲ್ಲಿ ಅದರಲ್ಲೂ ಸಮಾಹಿತವಾದ ಅಥವಾ ಕಾವ್ಯಾನುಭವದಲ್ಲಿ ನಿಶ್ಚಲವಾಗಿ ನಿಂತ ಮನಸ್ಸಿನಲ್ಲಿ ಅರ್ಥಗಳು ಹೊಳೆಯುವ ಕ್ರಿಯೆ ಮೊದಲನೆಯದು; ಮತ್ತು ಹೀಗೆ ಹೊಳೆದ ಅರ್ಥಗಳನ್ನು ಉಚಿತವಾದ ಮಾತುಗಳಲ್ಲಿ ಕಟ್ಟುವ ಕ್ರಿಯೆ ಎರಡನೆಯದು.  ಈ ಎರಡೂ ಪ್ರತಿಭೆಯ ಕಾರ್ಯ ಎಂಬುದು ಸ್ಪಷ್ಟವಾಗಿದೆ. ಎಂದರೆ ಕವಿಯಾದವನು ತನ್ನ ಅಂತರಂಗದ ಅನುಭವಗಳಿಗೆ ಉಚಿತವಾದ ಮಾತುಗಳಲ್ಲಿ ಆಕಾರ ನೀಡುವ ಸಾಮರ್ಥ್ಯವನ್ನೆ ಪ್ರತಿಭೆ ಎಂದು ಹೇಳಿದಂತಾಯಿತು.  ಹೀಗೆ ಅರ್ಥಗಳು ಹೊಳೆಯುವ, ಹಾಗೂ ಅವುಗಳಿಗೆ ಮಾತಿನ ರೂಪದಲ್ಲಿ ಮೈ ನೀಡುವ ಕಾರ್ಯ ಚಿತ್ತದ ಯಾವೆಲ್ಲ ಸ್ಥಿತಿಯಲ್ಲಿಯೂ ನಡೆಯತಕ್ಕವಲ್ಲ; ಅದು ಯಾವುದೋ ಒಂದು ನಿರ್ದಿಷ್ಟವಾದ ಚಿತ್ತಸ್ಥಿತಿಯಲ್ಲಿ ಮಾತ್ರ ಸಾಧ್ಯ.  ಮನಸ್ಸಿನ ಆ ಸ್ಥಿತಿಯನ್ನು ರುದ್ರಟನ ಸೂತ್ರ ವಿವರಿಸುತ್ತದೆ, ‘ಮನಸಿ ಸದಾ ಸುಸಮಾಧಿನಿ’ (ಸಮಾಹಿತವಾದ ಮನಸ್ಸಿನಲ್ಲಿ) ಎಂಬ ಮಾತಿನಲ್ಲಿ.  ‘ಸಮಾಧಿಸ್ಥವಾದ’ ಎಂದರೆ ಕಾವ್ಯ ನಿರ್ಮಾಣಕ್ಕೆ ಅಗತ್ಯವಾದ ಒಂದು ಪರಿಭಾವನೆಯಲ್ಲಿ.  ವಡ್ಸ್‌ವರ್ತ್‌ನ ಮಾತಿನಲ್ಲಿ ಹೇಳುವುದಾದರೆ ಒಂದು tranquilityಯಲ್ಲಿ ಪ್ರತಿಭೆ ಜಾಗೃತವಾಗುತ್ತದೆ.  ಮಹಿಮ ಭಟ್ಟನೆಂಬ ಆಲಂಕಾರಿಕ, ತನ್ನ ‘ವ್ಯಕ್ತಿವಿವೇಕ’ದಲ್ಲಿ “ರಸಾನುಗುಣ ಶಬ್ದಾರ್ಥ ಚಿಂತಾ ಸ್ತಿಮಿತ ಚೇತಸಃ-ರಸಕ್ಕೆ ಅನುಗುಣವಾದ ಶಬ್ದಾರ್ಥಗಳನ್ನು ಕುರಿತ ಚಿಂತನೆಯಲ್ಲಿ ಕವಿಯ ಚೇತಸ್ಸು ನಿಶ್ಚಲವಾಗಿರುವಾಗ” – ಎಂದು ಕವಿಮನಸ್ಸಿನ ಸಮಾಧಿಯನ್ನು ವರ್ಣಿಸುತ್ತಾನೆ.  “ಸಮಾಧಿ ಎಂದರೆ ಮನಸ್ಸಿನ ಏಕಾಗ್ರತೆ” ಎಂದು ಹೇಳಿದ ರಾಜಶೇಖರ, ಪ್ರತಿಭೆಯನ್ನು ಕುರಿತು “ಯಾವುದು ಶಬ್ದ ಸಮೂಹವನ್ನೂ ಅರ್ಥಪುಂಜವನ್ನೂ ಅಲಂಕಾರ ತಂತ್ರವನ್ನೂ ಇದೇ ಬಗೆಯ ಇತರ ಉಕ್ತಿಮಾರ್ಗವನ್ನೂ ಹೃದಯದಲ್ಲಿ ಹೊಳೆಯಿಸುತ್ತದೋ ಅದೇ ಪ್ರತಿಭೆ”[29] -ಎನ್ನುತ್ತಾನೆ.  ಈ ಕೆಲವು ವಿವರಣೆಗಳಿಂದ ಸ್ಪಷ್ಟವಾಗುವುದು ಇಷ್ಟು : ಕವಿ ಯಾವುದೋ ಒಂದು ಚಿತ್ತಸ್ವಾಸ್ಥದ, ಪರಿಭಾವನೆಯ ಸ್ಥಿತಿಯಲ್ಲಿರುವಾಗ, ಅವನ ಅಂತರಂಗದಲ್ಲಿ ಅನೇಕ ಪ್ರಕಾರವಾದ ಅರ್ಥಗಳು ಹೊಳೆಯುತ್ತವೆ; ಹಾಗೆಯೇ, ಆ ಹೊಳೆದ ಅರ್ಥಗಳನ್ನು ಕಟ್ಟಿಕೊಡಲು ತಕ್ಕ ಪದಗಳೂ, ಪದಪುಂಜಗಳೂ, ಅಲಂಕಾರಾದಿ ತಂತ್ರಗಳೂ ಹೊಳೆಯುತ್ತವೆ.  ಹೀಗೆ ಕವಿಯ ಭಾವ ಭಾವನೆಗಳಿಗೆ ವಾಗರ್ಥ ರೂಪದ ಅಭಿವ್ಯಕ್ತಿ ಯಾವುದರಿಂದ ಸಾಧ್ಯವಾಗುತ್ತದೆಯೋ ಆ ಶಕ್ತಿಯೇ ಪ್ರತಿಭೆ.

ಇದೇ ಅಭಿಪ್ರಾಯವನ್ನು ಬಹು ಸೊಗಸಾಗಿ ವಿವರಿಸುವ ಭಟ್ಟತೌತನ ‘ಕಾವ್ಯಕೌತುಕ’ದ ಈ ಒಂದು ತುಣುಕು ತುಂಬ ಪ್ರಸಿದ್ಧವಾಗಿದೆ:

ಪ್ರಜ್ಞಾ ನವನವೋಲ್ಲೇಖ ಶಾಲಿನೀ ಪ್ರತಿಭಾ ಮತಾ

-ಈ ಒಂದು ತುಣುಕು ಹೇಮಚಂದ್ರನ ಕಾವ್ಯಾನುಶಾಸನದಲ್ಲಿ ಮತ್ತು ಮಮ್ಮಟನ ‘ಕಾವ್ಯಪ್ರಕಾಶ’ಕ್ಕೆ ಮಾಣಿಕ್ಯ ಚಂದ್ರನು ಬರೆದ ‘ಸಂಕೇತ’ ಎಂಬ ವ್ಯಾಖ್ಯಾನದಲ್ಲಿ ದೊರೆಯುತ್ತದೆ.  ಈ ಪಂಕ್ತಿಗೆ ಕ್ಷೇಮೇಂದ್ರನ ‘ಔಚಿತ್ಯ ವಿಚಾರ ಚರ್ಚೆ’ಯಲ್ಲಿ “ಪ್ರಜ್ಞಾ ನವನವೋನ್ಮೇಷಶಾಲಿನೀ” ಎಂಬ ಪಾಠಾಂತರವೂ ಉಂಟು.[30] ಇದರ ಜತೆಗೆ ಅಭಿನವಗುಪ್ತರ ‘ಧ್ವನ್ಯಾಲೋಕ ಲೋಚನ’ದಲ್ಲಿ ಬರುವ “ಪ್ರತಿಭಾ ಅಪೂರ್ವ ವಸ್ತು ನಿರ್ಮಾಣ ಕ್ಷಮಾ ಪ್ರಜ್ಞಾ.”[31] ಎಂಬ ಇದೇ ಅರ್ಥದ ಮಾತನ್ನು ಜೊತೆಗಿರಿಸಿಕೊಂಡು ಹೀಗೆ ನೋಡಬಹುದು:

ಪ್ರಜ್ಞಾ ನವನವೋನ್ಮೇಷಶಾಲಿನೀ ಪ್ರತಿಭಾ ಮತಾ
ಪ್ರಜ್ಞಾ ನವನವೋಲ್ಲೇಖ ಶಾಲಿನೀ ಪ್ರತಿಭಾ ಮತಾ
ಪ್ರತಿಭಾ ಅಪೂರ್ವ ವಸ್ತು ನಿರ್ಮಾಣ ಕ್ಷಮಾ ಪ್ರಜ್ಞಾ.

ಪ್ರತಿಭೆಯನ್ನು ಕುರಿತ ಮೂರು ಮಾತುಗಳನ್ನು ನಾವು ಮೇಲೆ ಕಾಣಿಸಿದ ಅನುಕ್ರಮದಲ್ಲಿ ಇರಿಸಿರುವುದು ವಿವರಣೆಯ ಸೌಲಭ್ಯಕ್ಕಾಗಿ ಮಾತ್ರವಲ್ಲದೆ, ಪ್ರತಿಭಾ ತತ್ವದ ವಿವರಣೆ ತಾರ್ಕಿಕವಾಗಿಯೂ ಸಮ್ಮತವಾಗುವುದೆಂಬ ಉದ್ದೇಶದಿಂದ.

ಮೇಲಿನ ಹೇಳಿಕೆಗಳ ತಾತ್ಪರ್ಯವನ್ನು ನಮ್ಮ ಮಾತುಗಳಲ್ಲಿ ಹೇಳುವುದಾದರೆ: ‘ನವನವ ಉನ್ಮೇಷಶಾಲಿನಿಯಾದ -ಎಂದರೆ ಹೊಸ ಹೊಸ ಅರ್ಥಗಳನ್ನು ಹೊಳೆಯಿಸುವ ಪ್ರಜ್ಞೆಯೆ ಪ್ರತಿಭೆ; ನವನವ ಉಲ್ಲೇಖಶಾಲಿನಿಯಾದ -ಎಂದರೆ ಹೊಸ ಹೊಸ ವರ್ಣನೆಗಳನ್ನು ರಚನೆಗಳನ್ನು ಅಥವಾ ಉಕ್ತಿ ಕ್ರಮವನ್ನು ರೂಪಿಸುವ -ಪ್ರಜ್ಞೆಯೆ ಪ್ರತಿಭೆ; ಅಪೂರ್ವವಾದ ವಸ್ತುವನ್ನು ನಿರ್ಮಾಣ ಮಾಡುವ ಸಾಮರ್ಥ್ಯವುಳ್ಳ ಪ್ರಜ್ಞೆಯೇ ಪ್ರತಿಭೆ.

ಎಂದರೆ ಪ್ರತಿಭೆ ಎನ್ನುವುದೊಂದು ಪ್ರಜ್ಞೆ.  ಆ ಸ್ಥಿತಿಯಲ್ಲಿ ಮನಸ್ಸಿಗೆ ಹೊಸ ಹೊಸ ಅರ್ಥಗಳು ಹೊಳೆಯುತ್ತವೆ, ಹಾಗೆಯೇ ಹೊಳೆದ ಆ ಹೊಸ ಹೊಸ ಅರ್ಥಗಳು, ಹೊಸ ಹೊಸ ಮಾತುಗಳಲ್ಲಿ ಉಲ್ಲೇಖಿತವಾಗುತ್ತವೆ.  ಹೀಗೆ ಅಪೂರ್ವವಾದ ವಸ್ತುವನ್ನು ನಿರ್ಮಾಣ ಮಾಡುವ ಸಾಮರ್ಥ್ಯವೇ ಪ್ರತಿಭೆ. ಈ ಮೂರು ಸೂತ್ರಗಳು ಪ್ರತಿಭೆಯನ್ನು ಕುರಿತು ಹೇಳಬೇಕಾದ್ದನ್ನೆಲ್ಲ ಹೇಳುತ್ತವೆ.

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಮಾತು ‘ಪ್ರತಿಭೆ ಎನ್ನುವುದು ಒಂದು ಪ್ರಜ್ಞಾ ವಿಶೇಷ’ -ಎಂಬುದು. ‘ಪ್ರಜ್ಞೆ’ ಎಂಬ ಮಾತು ಪ್ರತಿಭೆಯ ವರ್ಣನೆಯಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತದೆ.  ‘ಪ್ರಜ್ಞೆ’ ‘ಪ್ರತಿಭೆ’ ಇತ್ಯಾದಿ ಪದಗಳನ್ನು ನಮ್ಮ ಆಲಂಕಾರಿಕರು, ಕವಿಯ ಕೃತಿ ನಿರ್ಮಾಣ ಸಾಮರ್ಥ್ಯವನ್ನು ವಿವರಿಸುವ ಸಂದರ್ಭದಲ್ಲಿ ಬಳಸುವರಾದರೂ, ಈ ಮಾತುಗಳು ಕಾವ್ಯಮೀಮಾಂಸೆಗೆ ಹಿನ್ನೆಲೆಯಾದ ಭಾರತೀಯ ತತ್ವಶಾಸ್ತ್ರ ಹಾಗೂ ವಿವಿಧ ದರ್ಶನಗಳಲ್ಲಿ ಈ ಮೊದಲೆ ಬಳಕೆಯಾದವುಗಳೆಂಬುದನ್ನು ನಾವು ಗಮನಿಸಬೇಕು. ಕಾವ್ಯಮೀಮಾಂಸೆಗೆ ತೊಡಗಿದ ಭಾರತೀಯ ಆಲಂಕಾರಿಕರಲ್ಲಿ ಹಲವರು, ಆಗಮ, ನ್ಯಾಯ, ವೈಶೇಷಿಕ ಇತ್ಯಾದಿ ತತ್ವಜ್ಞಾನಗಳ ಗಾಢವಾದ ಪರಿಚಯವನ್ನುಳ್ಳವರಾಗಿದ್ದರು.  ಈ ದೃಷ್ಟಿಯಿಂದ ನೋಡಿದರೆ ಭಾರತೀಯ ಕಾವ್ಯಮೀಮಾಂಸೆಯ ಹಿಂದೆ, ಭಾರತೀಯ ತತ್ವಜ್ಞಾನದ ವಿಚಾರಧಾರೆಯೊಂದು ನಿರಂತರವಾಗಿ ಹರಿದುಬಂದಿದೆ; ಹಾಗೆ ನೋಡಿದರೆ ಯಾವುದೇ ದೇಶದ ಸಾಹಿತ್ಯ ಮೀಮಾಂಸೆಗೆ ಆಯಾ ದೇಶದ ತತ್ವಜ್ಞಾನದ ಹಿನ್ನೆಲೆಯೊಂದು ಇದ್ದೇ ಇರುತ್ತದೆ.  ಅದರಲ್ಲೂ ಕಾವ್ಯ ನಿರ್ಮಿತಿಯಂಥ ಸೃಜನಕ್ರಿಯೆಯನ್ನು ವಿವರಿಸುವಾಗ, ಇಡೀ ಸೃಷ್ಟಿಯ ರಹಸ್ಯವನ್ನು ಕುರಿತು ಕಾಲದಿಂದ ಕಾಲಕ್ಕೆ ಜಿಜ್ಞಾಸುಗಳು ವ್ಯಕ್ತಪಡಿಸಿರುವ ವಿಚಾರಗಳು ನೆರವಿಗೆ ಬರುತ್ತವೆ; ಯಾಕೆಂದರೆ ತತ್ವಜ್ಞಾನಿಗಳಂತೆ, ಕವಿಯೂ ಈ ಸೃಷ್ಟಿಯ ರಹಸ್ಯವನ್ನು ಅರಿಯುವ ಮತ್ತು ನಿರೂಪಿಸುವ ಕಾರ್ಯದಲ್ಲಿ ತೊಡಗಿರುತ್ತಾನೆ.  ಹೀಗೆ ಕವಿ ಜಗತ್ತಿನ ವಸ್ತು ಸತ್ಯವನ್ನು ಅರಿಯುವ ವಿಶೇಷ ಸಾಮರ್ಥ್ಯವನ್ನು ಕುರಿತ ಚರ್ಚೆಯಲ್ಲಿ, ಅದರ ಹಿನ್ನೆಲೆಗಿರುವ ಇನ್ನೊಂದು ಕ್ಷೇತ್ರವಾದ ತತ್ವಶಾಸ್ತ್ರದ ಪಾರಿಭಾಷಿಕ ಪದಗಳು, ಬಳಕೆಗೆ ಬರುವುದು ತೀರಾ ಸಹಜವಾಗಿದೆ.

ಭಾರತೀಯ ತತ್ವಶಾಸ್ತ್ರದ ಇತಿಹಾಸದಲ್ಲಿ ಮನುಷ್ಯನ ಬುದ್ಧಿಶಕ್ತಿಯ ಪರಿಮಿತಿಗಳನ್ನು ಹೇಳುವ ಮತ್ತು ಇದೇ ಕಾರಣಕ್ಕಾಗಿ ಬೇರೊಂದು ವಿಶಿಷ್ಟ ಸಾಮರ್ಥ್ಯದ ಕಡೆಗೆ ಗಮನ ಸೆಳೆಯುವ ಸಂದರ್ಭದಲ್ಲಿ ಪ್ರತಿಭಾತತ್ವದ ಪ್ರಸ್ತಾಪ ಬರುತ್ತದೆ.  ಮತ್ತು ಪ್ರತಿಭೆಯ ಉಗಮ ಪ್ರಜ್ಞೆಯಲ್ಲಿ ಎಂದು ಹೇಳಲಾಗಿದೆ.

ಈ ಜಗತ್ತನ್ನು ಮಾನವಮತಿ ಕರಣ (ಇಂದ್ರಿಯ)ಗಳ ಮೂಲಕ ಗ್ರಹಿಸುತ್ತದೆಯಾದರೂ, ಹಾಗೆ ಗ್ರಹಿಸುವ ವಸ್ತುಸತ್ಯ ಅಂಶಿಕವಾದದ್ದು. ಆದುದರಿಂದ ವಸ್ತು ಸತ್ಯವನ್ನು ಯಥಾಸ್ವರೂಪದಲ್ಲಿ ಮತ್ತು ಸಮಗ್ರವಾಗಿ ಗ್ರಹಿಸಲು, ಇಂದ್ರಿಯಜ್ಞಾನಕ್ಕೆ ಮೀರಿದ ಬೇರೊಂದು ವಿಶೇಷ ಸಾಮರ್ಥ್ಯ ಬೇಕಾಗುತ್ತದೆ.  ಇದನ್ನೆ ಪ್ರತಿಭಾ ಮತ್ತು ಪ್ರಜ್ಞಾ ಎಂಬ ಪದಗಳಿಂದ ಭಾರತೀಯ ತತ್ವಶಾಸ್ತ್ರ ಸೂಚಿಸುತ್ತದೆ.

ಆಗಮ, ನ್ಯಾಯ, ವೈಶೇಷಿಕಗಳಲ್ಲಿ ಮತ್ತು ಪ್ರಾಸಂಗಿಕವಾಗಿ ವೇದಾಂತದಲ್ಲಿ ಪ್ರತಿಭಾ ಎಂಬ ಪದ ಪರಾಜ್ಞಾನವನ್ನು ಸೂಚಿಸುತ್ತದೆ.  ಯೋಗಶಾಸ್ತ್ರದಲ್ಲಿ ಪ್ರಜ್ಞಾ ಎಂಬುದೇ ಪ್ರತಿಭೆಗೆ ಪರ್ಯಾಯವಾಗಿ ಬಳಸಲಾದ ಪದ.  ವ್ಯಾಕರಣದಲ್ಲಿ ಪ್ರಜ್ಞಾ ಮತ್ತು ಪ್ರತಿಭಾ ಎರಡೂ, ಅರ್ಥದಲ್ಲಿ ಒಂದೇ ಎಂದು ಪರಿಗಣಿಸಲಾಗಿದೆ.  ಬೌದ್ಧ ಸಾಹಿತ್ಯದಲ್ಲಿ ಪ್ರಜ್ಞಾ ಎಂಬ ಪದವೆ ಮತ್ತೆ ಮತ್ತೆ ಬಳಕೆಯಾಗಿದೆ; ಆದರೆ ಪ್ರತಿಭಾ ಎಂಬ ಮಾತು ಅಲ್ಲಿ ಕಾಣದು. ಆಶ್ಚರ್ಯದ ಸಂಗತಿ ಎಂದರೆ, ಜೈನ ತತ್ವಶಾಸ್ತ್ರದ ಪದಗಳ ಸಮೂಹದಲ್ಲಿ ಈ ಎರಡರಲ್ಲಿ ಒಂದು ಪದವೂ ಕಾಣಿಸುವುದಿಲ್ಲ-ಅವಧಿಜ್ಞಾನ, ಕೇವಲ ಜ್ಞಾನಗಳ ಪ್ರಸ್ತಾಪವಿದ್ದರೂ.[32]

ಇಲ್ಲೆಲ್ಲಾ  ಪ್ರಜ್ಞಾ (ಪ್ರಜ್ಞೆ) ಎಂಬ ಪದ, ನಿರಂತರ ಸಾಧನೆಯಿಂದ, ವಿಕಲ್ಪಗಳಿಂದ ಬಿಡುಗಡೆ ಹೊಂದಿದ ಮನಸ್ಸು, ಯೋಗದ ಮೂಲಕ ಪಡೆದುಕೊಳ್ಳುವ ಒಂದು ವಿಶೇಷ ರೀತಿಯ ಅರಿವು; ಅದು ತಾನು ಕಾಣುವ ವಸ್ತುವಿನೊಂದಿಗೆ ಸಂಪೂರ್ಣ ತಾದಾತ್ಮ್ಯವನ್ನು ಪಡೆಯುವುದರ ಮೂಲಕ ವಸ್ತು ಸತ್ಯವನ್ನು ನಿಚ್ಚಳವಾಗಿ ಕಾಣಬಲ್ಲದು, ಮತ್ತು ವಸ್ತುಗಳು ಹೇಗೆ ಹೊರಗೆ ಗೋಚರಿಸುತ್ತವೆಯೋ ಹಾಗಲ್ಲದೆ, ವಸ್ತುಗಳು ನಿಜವಾಗಿಯೂ ಹೇಗಿವೆಯೋ ಹಾಗೆ ಅದನ್ನು ಗ್ರಹಿಸಬಲ್ಲುದು.  ಇದು ಎಲ್ಲ ತಾತ್ವಿಕ ನಿಲುವುಗಳೂ ಸಮಾನವಾಗಿ ಒಪ್ಪುವ ವಿಚಾರ.  ಕವಿಯು ವಸ್ತು ಸತ್ಯವನ್ನು ಗ್ರಹಿಸುವ ಕ್ರಮವೂ ಇದೇ ರೀತಿಯದಾಗಿರುವುದರಿಂದ, ಅವನ ಕಾವ್ಯನಿರ್ಮಿತಿಯ ಪ್ರಧಾನ ಪರಿಕರವಾದ ಈ ಪ್ರಜ್ಞಾ ವಿಶೇಷವನ್ನು ‘ಪ್ರತಿಭೆ’ ಎಂಬ ಪದದಿಂದ ನಿರ್ದೇಶಿಸಲಾಗಿದೆ.  ವಾಸ್ತವವಾಗಿ ಭಾರತೀಯ ತತ್ವಶಾಸ್ತ್ರದಲ್ಲಿ ‘ಪ್ರಜ್ಞಾ’ ಹಾಗೂ ‘ಪ್ರತಿಭಾ’ -ಈ ಎರಡೂ ಬಹುಮಟ್ಟಿಗೆ ಸಂವಾದಿ ಪದಗಳಾಗಿವೆ.  ಪ್ರಜ್ಞೆ ಎಂಬುದು ಒಂದು ವಿಶೇಷ ರೀತಿಯ ಚಕ್ಷುಸ್ (ಕಣ್ಣು) ಎಂದು ಶಿವಪುರಾಣ ಹಾಗೂ ಭಗವದ್ಗೀತೆಯಲ್ಲಿ ಆಲಂಕಾರಿಕವಾಗಿ ಹೇಳಲಾಗಿದೆ. ಅದು ಹಿಂದು-ಇಂದು-ಮುಂದುಗಳನ್ನು ಏಕಕಾಲಕ್ಕೆ ತೆರೆದು ತೋರಿಸುವ ‘ದಿವ್ಯ ಚಕ್ಷುಸ್’ ಎಂದೂ ವರ್ಣಿತವಾಗಿದೆ. ಭಾರತೀಯ ಕಾವ್ಯಮೀಮಾಂಸೆಯೂ ‘ಪ್ರಜ್ಞೆ’ ಎಂಬುದಕ್ಕೆ ಮೇಲೆ ವಿವರಿಸಿದ ಅರ್ಥವನ್ನೇ ಪ್ರತಿಪಾದಿಸುತ್ತದೆ. “ಪ್ರಜ್ಞೆ ಎಂದರೆ ಅರಿಯುವ ಶಕ್ತಿ. ಹಿಂದೆ ಆದುದನ್ನು ನೆನೆಯುವುದು ‘ಸ್ಮೃತಿ’; ಈಗ ನಡೆಯುವುದನ್ನು ಪರಿಶೀಲಿಸುವುದು ‘ಬುದ್ಧಿ’; ಮುಂದೆ ಆಗುವುದನ್ನು ಊಹಿಸುವುದು ‘ಮತಿ’. ನಮ್ಮವರ (ಆಲಂಕಾರಿಕರ) ಮತದಂತೆ ಈ ತ್ರಿಕಾಲದ ವಿಷಯವನ್ನೂ ಪ್ರಜ್ಞೆ ಒಳಗೊಳ್ಳುತ್ತದೆ.”[33] ಕವಿಯ ಪ್ರತಿಭಾರೂಪದ ಪ್ರಜ್ಞೆಯನ್ನು ಕುರಿತು ಹೇಳುವಲ್ಲಿ, ಕವಿ ತ್ರಿಕಾಲಾಬಾಧಿತ ಸತ್ಯವನ್ನು ಅಭಿವ್ಯಕ್ತಪಡಿಸುವ ದ್ರಷ್ಟಾರನೆಂದೂ, ಋಷಿ ಎಂದೂ ಪ್ರಶಂಸಿಸುವ ಧೋರಣೆಯೊಂದು ಬೆಳೆದುಬಂದದ್ದು ಆಶ್ಚರ್ಯವೇನಲ್ಲ. ಒಟ್ಟಿನಲ್ಲಿ ಈ ಎಲ್ಲ ವಿವರಣೆಗಳಿಂದ ‘ಪ್ರಜ್ಞೆ’ ಎಂಬುದು ವಿಶೇಷವಾದ ರೀತಿಯಲ್ಲಿ ಹಾಗೂ ಸಮಗ್ರವಾಗಿ ವಸ್ತು ಸತ್ಯವನ್ನು ಕವಿ ನೋಡುವ ಹಾಗೂ ಗ್ರಹಿಸುವ ಒಂದು ಸಾಮರ್ಥ್ಯ ಎಂಬಷ್ಟು ಸಂಗತಿಯನ್ನು ನಾವು ಒಪ್ಪಬಹುದೆಂದು ತೋರುತ್ತದೆ.

‘ಪ್ರಜ್ಞೆ’ ಎನ್ನುವುದು ಒಂದು ವಿಶೇಷವಾದ ರೀತಿಯಲ್ಲಿ ಅರಿಯುವ ಸಾಮರ್ಥ್ಯ ಎಂಬ ಮಾತನ್ನು ಹೇಳಿದೆವು. ನಮ್ಮ ಸುತ್ತ ನೂರಾರು ನೋಟಗಳಿವೆ; ನೂರಾರು ಘಟನೆಗಳು ನಡೆಯುತ್ತವೆ. ನಮಗೆ ಅವುಗಳೆಲ್ಲದರ ಬಗೆಗೆ ಅರಿವಿದೆ. ಆದರೆ ಅವು ಅರಿವಿನ ಮೇಲ್‌ಪದರದಲ್ಲೋ, ಅಂಚಿನಲ್ಲೋ ಹಾದು ಹೋಗುತ್ತವೆಯೆ ವಿನಾ, ನಮ್ಮ ‘ಪ್ರಜ್ಞೆ’ಯ ವಸ್ತುಗಳಾಗುವುದಿಲ್ಲ.  ಎಷ್ಟೋ ವಸ್ತುಗಳನ್ನು ಸಂಗತಿಗಳನ್ನು ನಾವು ನೋಡುತ್ತೇವೆ; ಆದರೆ ಗಮನಿಸುವುದಿಲ್ಲ. ಆದರೆ ಸುತ್ತಣ ಅನುಭವಗಳಲ್ಲಿ ಕೆಲವು ಯಾವುದೋ ಕಾಲದಲ್ಲಿ ನಮ್ಮ ಅರಿವಿನ ಅಂಚನ್ನು ದಾಟಿ, ಸಂವೇದನೆಯ ಸಂಗತಿಗಳಾಗಿ ನಮ್ಮ ಚಿತ್ತವನ್ನು ಕಲಕಬಹುದು; ನೆನಪಾಗಿ ಉಳಿಯಬಹುದು; ಪ್ರಜ್ಞೆಯ ವಸ್ತುವಾಗಬಹುದು. ಎಂದರೆ ಯಾವ ಸಂದರ್ಭದಲ್ಲಿ ವಸ್ತುಗಳಾಗಲಿ, ಅನುಭವಗಳಾಗಲಿ, ‘ಅವು ಕೇವಲ ಅಲ್ಲಿವೆ’ ಎಂಬಷ್ಟರ ಮಟ್ಟಿನ ಅರಿವಿನ ವಿಷಯ ಮಾತ್ರವಾಗದೆ, ನಮ್ಮ ತೀವ್ರ ಸಂವೇದನೆಯ ಸಂಗತಿಗಳಾಗುತ್ತವೆಯೋ ಆಗ ಅವು  ನಮ್ಮ ಪ್ರಜ್ಞೆಗೆ ಒಳಗಾಗುತ್ತವೆ. ಪು.ತಿ.ನ. ಅವರ ಮಾತಿನಲ್ಲಿ ಹೇಳುವುದಾದರೆ, “ಅರಿವಿನ ಸಂವೇದನಾ ರೂಪವನ್ನು ಪ್ರಜ್ಞೆ ಎನ್ನಬಹುದಲ್ಲವೇ? ಸಂವೇದನೆಯಿಲ್ಲದೆ ಯಾವುದರ ಅರಿವೂ ನಮಗಾಗದು. ಮಗು ಅಳುತ್ತಿದ್ದರೆ ಮಲತಾಯಿಗೆ ಅದರ ಅಸುಖದ ಅರಿವು ಮಾತ್ರವಾಗುತ್ತದೆ. ತಾಯಿಗೋ ಆ  ಅಸುಖದ ‘ಪ್ರಜ್ಞೆ’ ಮೂಡುತ್ತದೆ.”[34] ತಾಯಿಗೆ ಆಗುವ ಈ ಅನುಭವಕ್ಕೆ ಕಾರಣ ಆ ಮಗು ತನ್ನ ದೇಹದ ದೇಹ; ಜೀವದ ಜೀವ. ಆದಕಾರಣ ತಾಯಿಯ ಕರುಳು ಮಗು ಅತ್ತರೆ ಆ  ಅಸುಖದ ಕೇವಲ ಅರಿವಲ್ಲ ‘ಪ್ರಜ್ಞೆ’ಯನ್ನು ಅನುಭವಿಸುತ್ತದೆ.* ಎಂದರೆ ಯಾವ ಅನುಭವದಲ್ಲಿ ಅನುಭವದ ವಸ್ತು ಹಾಗೂ ಅನುಭವಿಸುವ ಚೇತನ ಒಂದು ರೀತಿಯ ಪ್ರೀತಿಯ, ಪ್ರಾಣಮಯ ಸಂಬಂಧವನ್ನು ಪಡೆಯುತ್ತದೆಯೋ ಆ ಮನಃಸ್ಥಿತಿಯನ್ನು ‘ಪ್ರಜ್ಞೆ’ ಎಂದು ಕರೆಯಬಹುದು. ಈ ದೃಷ್ಟಿಯಿಂದ ನೋಡಿದರೆ ಕವಿಗೂ ಲೋಕಾನುಭವಗಳಿಗೂ ಇರುವ ಸಂಬಂಧ ಕೇವಲ ಅರಿವಿನ ಸಂಬಂಧವಲ್ಲ, ಪ್ರಜ್ಞೆಯ ಸಂಬಂಧ. ಲೋಕದ ಚೆಲುವು-ಒಲವು, ನೋವು-ನಲಿವು, ಹಾಗೂ ಯಾವೆಲ್ಲ ಅನುಭವಗಳೂ ಕವಿಯ ತೀವ್ರ ಸಂವೇದನಾರೂಪದ ಅನುಭವಕ್ಕೆ ಒಳಗಾಗುವುದರಿಂದ ಅವು ಅವನ ಪ್ರಜ್ಞೆಯ ವಿಷಯವಾಗುತ್ತವೆ.  ಕೀಟ್ಸ್ ಹೇಳಿದ: ಕವಿಗೆ ವ್ಯಕ್ತಿತ್ವವೆಂಬುದೆ ಇಲ್ಲ; ಯಾಕೆಂದರೆ ಅವನು ಸದಾ ಅನ್ಯಮನೋಧರ್ಮಗಳನ್ನು ಒಳಹೊಕ್ಕು ತಾದಾತ್ಮ ದಿಂದ ನೋಡುತ್ತಾನೆ.  ಒಂದು ಹಕ್ಕಿ ಹುಳುವನ್ನು ಕುಕ್ಕುತ್ತಿದ್ದರೆ, ಕವಿಗೆ ಅದು ಅವನ ಸಂವೇದನೆಯ ವಸ್ತುವಾದಾಗ, ಕವಿ ಆ ಒಂದು ಕ್ಷಣದಲ್ಲಿ ಕುಕ್ಕುವ ಹಕ್ಕಿಯ ಹಸಿವನ್ನೂ, ಕುಕ್ಕಿಸಿಕೊಳ್ಳುವ ಹುಳುವಿನ ಸಂಕಟವನ್ನೂ ಏಕಕಾಲದಲ್ಲಿಯೆ ಅನುಭವಿಸಿ ನೋಡಬಲ್ಲ. ಹೀಗೆ ಏಕಕಾಲದಲ್ಲಿಯೇ ಭಿನ್ನ ಮನೋಧರ್ಮಗಳನ್ನು ಒಳಹೊಕ್ಕು ತನ್ನ ಸಂವೇದನೆಯಲ್ಲಿ ಆ ಅನುಭವವನ್ನು ನಿಲ್ಲಿಸಿಕೊಳ್ಳುವ ಸಾಮರ್ಥ್ಯವೇ ಪ್ರಜ್ಞೆ.  “ಜಗತ್ತು ದುಃಖ ಭೂಯಿಷ್ಠವಾದುದು ಎಂಬುದು ಯಾರಿಗೆ ಗೊತ್ತಿಲ್ಲ? ಆದರೆ ಅದರ ಪ್ರಜ್ಞೆ ನಮಗಿಲ್ಲ. ಆ ‘ಪ್ರಜ್ಞೆ’ಯನ್ನು ಪಡೆದುದರಿಂದ ಬುದ್ಧ ಕಾಡಿಗೋಡಿ ಪ್ರಬುದ್ಧನಾದ.  ಸುಸಂಸ್ಕೃತವಾದ ಚೈತನ್ಯ ಮಾತ್ರ ತನ್ನ ಅತ್ಯುನ್ನತ ಸ್ಥಿತಿಯಲ್ಲಿ ‘ಪ್ರಜ್ಞೆ’ಯನ್ನು ಪಡೆಯಬಲ್ಲದು.”[35] ಕವಿ ಇಂತಹ ಸುಸಂಸ್ಕೃತ ಚೇತನ. ಕಾಮನಬಿಲ್ಲು ಸುಂದರವಾಗಿದೆ ಎಂಬುದು ಎಲ್ಲರ ಅರಿವಿನ ವಿಷಯ; ಆದರೆ ಅದು ವರ್ಡ್ಸ್‌ವರ್ತ್‌ನಂತಹ ‘ಸುಸಂಸ್ಕೃತ ಚೈತನ್ಯ’ದ ಸಂವೇದನೆಯ, ಪ್ರಜ್ಞೆಯ ವಿಷಯವಾದಾಗ-

-My heart leaps up when I
behold a rainbow in the sky

ಎಂಬ ಅಭಿವ್ಯಕ್ತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಇಲ್ಲಿರುವುದು ಕಾಮನಬಿಲ್ಲು ಕವಿಪ್ರಜ್ಞೆಯ ವಸ್ತುವಾದದ್ದರ ಅನುಭವ; ಕವಿಪ್ರಜ್ಞೆಗೆ ಕಾಮನಬಿಲ್ಲು, ವಸ್ತುವಾದಾಗ ಯಾವ ಆತ್ಮೀಯವಾದ ಅನುಭವ ವಿಶೇಷದಲ್ಲಿ ಕವಿ ನಿಂತನೆಂಬುದರ ನಿರೂಪಣೆ. ಎಸ್ರಾಪೌಂಡ್ ಒಂದೆಡೆ ಕಾಡಿನ ಮರಗಳ ನಡುವೆ ನಿಂತು-

I stood amid the wood
and was a tree

-ಎನ್ನುತ್ತಾನೆ. ಇದು ಆ ಮರಗಳು ಅಲ್ಲಿವೆ, ಅವುಗಳ ನಡುವೆ ನಾನೂ ನಿಂತಿದ್ದೆ ಎಂಬ ಅರಿವಿನ ವಿಷಯದ ವರದಿ ಅಲ್ಲ; ಮರಗಳ ನಡುವೆ ನಿಂತೂ, ತಾನೂ ಒಂದು ಮರವಾದೆನೆನ್ನುವಷ್ಟರ ಮಟ್ಟಿಗೆ ಪಡೆದ ತೀವ್ರಾನುಭವದ ಅಥವಾ ಪ್ರಜ್ಞೆಯ ವರ್ಣನೆ.  ಇದೊಂದು ತಾದಾತ್ಮಾ ನುಭೂತಿ. ವಾಲ್ಮೀಕಿ ಮಹರ್ಷಿ ಒಂದು ಬೆಳಿಗ್ಗೆ ತಮಸಾ ನದೀ ತೀರದಲ್ಲಿ ಕ್ರೌಂಚ ಮಿಥುನಗಳಲ್ಲಿ ಒಂದನ್ನು ಬೇಡನು ಕೊಂದದ್ದನ್ನು ಕಂಡಾಗ, ಗಂಡು ಹಕ್ಕಿಯ ಸುತ್ತ ಹೆಣ್ಣು ಹಕ್ಕಿ ಚೀತ್ಕರಿಸಿದುದನ್ನು ಕೇಳಿದಾಗ, ಅವನ ‘ಪ್ರಜ್ಞೆ’ಯಲ್ಲಿ, ಆ ಹೆಣ್ಣು ಹಕ್ಕಿಯ ಶೋಕ, ಕೇವಲ ಒಂದು ಹಕ್ಕಿಯ ಶೋಕ ಮಾತ್ರವಾಗದೆ, ದುಃಖಾರ್ತರಾದ ಎಲ್ಲರ ಸಂಕಟದಂತೆ, ವಾಲ್ಮೀಕಿಯ ಸುಸಂಸ್ಕೃತ ಚೇತನದ ತೀವ್ರಾನುಭೂತಿಗೆ ಕಾರಣವಾಯಿತು.  ಪ್ರಜ್ಞೆ ಎಂದರೆ ತೀವ್ರವಾದ ಅನುಭೂತಿ. ಕವಿ-ಕಲಾವಿದನು ಲೋಕವನ್ನು ನೋಡುತ್ತಾನೆ ಎಂದರೆ ಸುಮ್ಮನೆ ನೋಡುತ್ತಾನೆ ಎಂದಲ್ಲ.  “ವಸ್ತುವೊಂದನ್ನು ಗಮನಿಸುವುದು ಎಂದರೆ, ಅದು ಅಲ್ಲಿದೆ ಎಂಬುದನ್ನು ಗುರುತಿಸುವ ಕ್ರಿಯೆಯಷ್ಟೆ ಅಲ್ಲ; ಅದನ್ನು ಹೊಸತೊಂದು ರೀತಿಯಲ್ಲಿ ಅಸ್ತಿತ್ವಕ್ಕೆ ತಂದುಕೊಳ್ಳುವುದು-ಅದಕ್ಕೊಂದು ಹೊಸ ನಿಲುವನ್ನು ನೀಡುವುದು. ಹೀಗೆ ವಸ್ತುವೊಂದನ್ನು, ವಿಶೇಷವಾದ ಅಸ್ತಿತ್ವದಲ್ಲಿ ನಿಲ್ಲಿಸುವುದು ಒಂದು ಸೃಜನಾತ್ಮಕ ಕ್ರಿಯೆ.”[36] ಹೀಗೆ ಕವಿಯ ಪ್ರಜ್ಞಾರೂಪದ ಅನುಭವದಲ್ಲಿ ಲೋಕಾನುಭವಗಳಿಗೆ ಬೇರೊಂದು ಅಸ್ತಿತ್ವ ಪ್ರಾಪ್ತವಾಗುತ್ತದೆ.  ಯಾವ ಒಂದು ಸ್ಥಿತಿಯಲ್ಲಿ ಕಾಳಿದಾಸನು – ತನ್ನ  ಅನುಭವದ್ದೊ, ಅಥವಾ ಬೇರೆಯವರ ಅನುಭವದ್ದೊ – ಸತಿಪತಿಯರ ವಿರಹವೇದನೆಯನ್ನು ತನ್ನ ತೀವ್ರ ಸಂವೇದನಾರೂಪದ ಪ್ರಜ್ಞೆಯ ವಸ್ತುವನ್ನಾಗಿ ಮಾಡಿಕೊಂಡನೋ ಆಗ, ಆ ಅನುಭವವನ್ನು ಕಟ್ಟಲು ತಕ್ಕ ಕಥಾಶರೀರವೂ, ತಕ್ಕ ಪದಪುಂಜಾದಿಗಳೂ ಹೊಳೆದು ‘ಮೇಘದೂತ’ವಾಗಿ ಅಭಿವ್ಯಕ್ತವಾಯಿತೋ ಅಂದಿನಿಂದ, ಸತಿ-ಪತಿ ವಿರಹಭಾವ ಹೊಸತೊಂದು ನೆಲೆಯಲ್ಲಿ ನಿಂತು ಜಗತ್ತಿನ ಎಲ್ಲ ಕಾಲದವರ ಆಸ್ವಾದ್ಯದ ವಸ್ತುವಾಗಿದೆ.

ಪ್ರತಿಭೆಯನ್ನು ನವನವ ಉನ್ಮೇಷಶಾಲಿನಿ ಹಾಗೂ ನವನವ ಉಲ್ಲೇಖಶಾಲಿನಿ  ಎಂದು ನಮ್ಮವರು ಕರೆದದ್ದು ಅರ್ಥಪೂರ್ಣವಾಗಿದೆ. ಸಹಸ್ರಾರು ವರ್ಷಗಳಿಂದ ಅದೇ ಲೋಕ ಮತ್ತು ಅನುಭವಗಳು ಕವಿಪ್ರಜ್ಞೆಗೆ ಸಾಮಗ್ರಿಗಳಾದರೂ, ಈ ಪ್ರಜ್ಞೆಯ ವಿಶೇಷ ಲಕ್ಷಣವೆಂದರೆ, ಲೋಕಾನುಭವಗಳನ್ನು ಹೊಸ ಹೊಸದಾಗಿ ಕಾಣುವ ಹಾಗೂ ಹೊಸ ಹೊಸದಾಗಿ (ಮಾತುಗಳಲ್ಲಿ) ಕಟ್ಟುವ ಕಾರ್ಯವೇ ಆಗಿದೆ.  ಶಾಸ್ತ್ರದ ವಿಷಯ ಒಮ್ಮೆ ತಿಳಿದುಕೊಂಡಾಗ ಹೊಸದೆಂಬಂತೆ ತೋರಿ, ಒಂದು ಬಗೆಯ ತೃಪ್ತಿಯನ್ನು ನೀಡಿ, ಅನಂತರ ಹಳೆಯದಾಗಬಹುದು; ಆದರೆ ಕಾವ್ಯರೂಪವನ್ನು ತಾಳಿದ ವಿಷಯ ಹಳೆಯದಾಗುವುದಿಲ್ಲ. ಮತ್ತೆ ಮತ್ತೆ ಹೊಸ ಹೊಸ ಅರ್ಥಗಳನ್ನು ಹುಟ್ಟಿಸುತ್ತಾ ‘ನವನವ’ವಾಗುತ್ತದೆ.  ಹಾಗಾಗಬೇಕಾದರೆ ಅಂದಂದಿನ ಕವಿಪ್ರಜ್ಞೆಯಲ್ಲಿ ಅದು, ‘ನವ ನವ ಉನ್ಮೇಷವನ್ನು-ಹೊಸ ಹೊಸ ಅರ್ಥವನ್ನು ಪಡೆಯಬೇಕು; ಅಷ್ಟೇ ಅಲ್ಲ ಕವಿಗೆ ಹೊಳೆದ ಈ ಹೊಸ ಅರ್ಥ ‘ನವನವ ಉಲ್ಲೇಖಶಾಲಿನಿ’ಯಾಗಬೇಕು. ಎಂದರೆ ಹೊಸ ಹೊಸ ಪದರಚನೆ, ಅಥವಾ ಅಭಿವ್ಯಕ್ತಿಯಲ್ಲಿ ರೂಪವನ್ನು ತಾಳಬೇಕು. ಕವಿಗೆ ಹೊಳೆದ ಅರ್ಥ ‘ನವನವ’ವಾಗಿದ್ದು  ಅವನು ಉಲ್ಲೇಖ (ಅಭಿವ್ಯಕ್ತಿ)ಕ್ಕೆ ಬಳಸುವ ಭಾಷೆ ಆಗಲೆ ಸಿದ್ಧವಾದದ್ದೊ, ಸವೆದದ್ದೊ, ಅನುಕರಣದ್ದೊ ಆದರೆ, ಅಲ್ಲಿ ಭಾವಕ್ಕೆ ತಕ್ಕ ಭಾಷೆ ಒದಗಿಬರದೆ ‘ನವನವ ಉಲ್ಲೇಖಶಾಲಿನಿ’ಯಾಗದೆ ಪ್ರತಿಭೆ  ಅಸಮರ್ಪಕವಾಗಿದೆ ಎಂದು ಅನ್ನಿಸುತ್ತದೆ. ಈ ದೃಷ್ಟಿಯಿಂದ ‘ನವನವ ಉನ್ಮೇಷ ಶಾಲಿನಿ’ಯಾದ ಭಾವ ‘ನವನವ ಉಲ್ಲೇಖಶಾಲಿನಿ’ಯಾದ ಅಭಿವ್ಯಕ್ತಿಯಲ್ಲಿ ಸಂಪೂರ್ಣ ಸಂಯೋಜನೆಗೊಂಡಾಗಲೇ, ಅದು ನಿಜವಾದ ಪ್ರತಿಭೆಗೆ ಸಾಕ್ಷಿಯಾಗುತ್ತದೆ. ಆದ ಕಾರಣವೆ ಪ್ರತಿಭೆಯ ವರ್ಣನೆಯನ್ನು ಕುರಿತು ಈ ಎರಡು ಮಾತುಗಳೂ ಒಂದಕ್ಕೊಂದು ಪೂರಕವಾದವು ಎಂದು ನಾವು ಭಾವಿಸಿದ್ದೇವೆ.  ಯಾವ ಒಂದು ಸಾಹಿತ್ಯ ಪರಂಪರೆಯಲ್ಲಿ ‘ನವನವ ಉನ್ಮೇಷ’ ಹಾಗೂ ‘ನವನವ ಉಲ್ಲೇಖ’ದ ಸಾಧ್ಯತೆಗಳು ತೀರಿ ಹೋಗಿರುವುವೋ, ಅಲ್ಲಿ ಆ ಸಂಪ್ರದಾಯದ ಸತ್ವ ಬತ್ತಿ, ಚರ್ವಿತಚರ್ವಣದ ಪರಿಸ್ಥಿತಿಯುಂಟಾಗಿ ಮತ್ತೊಂದು ಪ್ರಜ್ಞೆಯ ನವನವ ಉನ್ಮೇಷಕ್ಕೆ, ಹಳೆಯ ಮಾತುಗಳನ್ನು ಮುರಿದು ಹೊಸ ಭಾಷಾಪ್ರಯೋಗವನ್ನು ನಿರ್ಮಿಸುವ ‘ನವನವ ಉಲ್ಲೇಖಕ್ಕೆ’ ನಡೆಯುವ ಪ್ರಯತ್ನಗಳು ಸಾಹಿತ್ಯದಲ್ಲಿ ಕ್ರಾಂತಿಯನ್ನು ತರುತ್ತವೆ.

‘ನವನವತ್ವ’ ಎಂಬ ಮಾತಿಗೆ ವ್ಯಾಖ್ಯಾನವೆಂಬಂತಿರುವ ಇನ್ನೊಂದು ಮಾತು, ಅಭಿನವಗುಪ್ತರ ಸೂತ್ರದಲ್ಲಿರುವ ‘ಅಪೂರ್ವತೆ’ ಎಂಬುದು. ‘ಪ್ರತಿಭಾ ಅಪೂರ್ವ ವಸ್ತು ನಿರ್ಮಾಣ ಕ್ಷಮಾ ಪ್ರಜ್ಞಾ’ – ಎಂಬ ಸೂತ್ರದ ಪ್ರಕಾರ, ಪ್ರತಿಭೆ ಎನ್ನುವುದು ಅಪೂರ್ವ ವಸ್ತುಗಳನ್ನು ನಿರ್ಮಾಣಮಾಡುವ ಸಾಮರ್ಥ್ಯ ಉಳ್ಳದ್ದು.  ಪ್ರತಿಭಾ ನಿರ್ಮಿತಿ ‘ನವನವ’ವಾಗಿರಲು ಕಾರಣ ಅದು ‘ಅಪೂರ್ವ’ವಾಗಿದೆ ಎನ್ನುವುದು. ‘ಅಪೂರ್ವ’ ಎಂದರೆ ಹಿಂದೆ ಎಂದೂ ಈ ರೀತಿಯಲ್ಲಿರಲಿಲ್ಲ ಎನ್ನಿಸುವಂಥಾದ್ದು; ಎಂದರೆ ಈ ನಿರ್ಮಿತಿ ಹಿಂದಿನ ಕವಿಗಳ ಅಭಿವ್ಯಕ್ತಿಯನ್ನು ನೆನಪಿಗೆ ತಾರದಷ್ಟು, ಅದು ಅವನದೇ ಸ್ವಂತದ್ದು ಎನ್ನಿಸುವಂಥಾದ್ದು. ಪ್ರತಿಯೊಬ್ಬ ಸಮರ್ಥನಾದ ಕವಿಯ ಅಗ್ಗಳಿಕೆ ಇರುವುದು, ತನ್ನ ಕೃತಿ ಎಷ್ಟರ ಮಟ್ಟಿಗೆ ‘ಅಪೂರ್ವ’ವಾಗಿದೆ ಎನ್ನುವುದರ ಮೇಲೆಯೇ.

ಪ್ರತಿಭೆಯಿಂದ ನಿರ್ಮಿತವಾದ ಕೃತಿ ವಾಸ್ತವವಾಗಿ ಒಂದು ‘ಅಪೂರ್ವ ವಸ್ತು’ವೇ. ಕಾವ್ಯಕ್ಕೆ ‘ಪೂರ್ವ’ವಾದದ್ದು ಲೋಕ ಅಥವಾ ಬ್ರಹ್ಮಸೃಷ್ಟಿ. ಕಾವ್ಯಕ್ಕೆ ‘ಪೂರ್ವ’ವಾದ ಈ ಲೋಕ, ಪ್ರಜ್ಞಾರೂಪವಾದ ಕವಿಪ್ರತಿಭೆಯನ್ನು ಪ್ರವೇಶಿಸಿ ‘ಅಪೂರ್ವ’ವಾಗುತ್ತದೆ. ‘ಅಪೂರ್ವ’ ಎಂದರೆ ‘ಪೂರ್ವ ಅಲ್ಲದ್ದು’ ಎಂದು ಅರ್ಥವೆ ಹೊರತು, ‘ಪೂರ್ವಕ್ಕೆ ವಿರುದ್ಧವಾದದ್ದು’ ಅಥವಾ ವಿಮುಖವಾದದ್ದು ಎಂದು ಅರ್ಥವಲ್ಲ.  ಕವಿಕೃತಿಗೆ ‘ಪೂರ್ವ’ವಾದ ಈ ಲೋಕ ‘ಅ-ಪೂರ್ವ’ವಾಗಲೂ ಕಾರಣ, ಆಯಾ ವಸ್ತುಗಳಿಗೆ ಕವಿಪ್ರತಿಭೆಯಿಂದ ಒದಗುವ ರೂಪಾಂತರವೇ.  ಹೀಗೆ ಚಿರಪರಿಚಿತವಾದ ಲೋಕವಸ್ತುಗಳು, ಅಪರಿಚಿತ ವಿನೂತನವೆಂಬಂತೆ ರೂಪಾಂತರಗೊಳ್ಳುವ ಕಾರ್ಯವು ಪ್ರತಿಭೆಯಲ್ಲಿ ನಡೆಯುವುದು ಹೇಗೆ ಎಂಬುದನ್ನು ಆನಂದವರ್ಧನನು ‘ಧ್ವನ್ಯಾಲೋಕ’ದಲ್ಲಿ ವಿವರಿಸಿದ್ದಾನೆ. “ಅಪಾರವಾದ ಕಾವ್ಯ ಸಂಸಾರದಲ್ಲಿ ಕವಿಯೆ ಸೃಷ್ಟಿಕರ್ತ. ಅವನು ತನಗೆ ಹೇಗೆ ರುಚಿಸುವುದೋ ಹಾಗೆ ವಿಶ್ವವನ್ನು ಪರಿವರ್ತಿಸುತ್ತಾನೆ”[37] -ಎಂಬ ಮಾತಿನಲ್ಲಿ ಈ ‘ಪರಿವರ್ತನೆ’ ಅಥವಾ ರೂಪಾಂತರ ಕ್ರಿಯೆ ಪ್ರತಿಭೆಯ ಪ್ರಮುಖವಾದ ಕಾರ್ಯ ಎಂಬುದು ಸ್ಪಷ್ಟವಾಗಿದೆ.  ಈ ರೂಪಾಂತರ ಕವಿಪ್ರತಿಭೆಯ ಕಾರ್ಯವಾದರೂ, ಈ ಪರಿವರ್ತನ ಕಾರ್ಯ ಆಯಾ ಕವಿಯ ವಿಶಿಷ್ಟ ಮನೋಧರ್ಮಕ್ಕೆ ಅವನವನಿಗೆ ರುಚಿಸಿದ ಹಾಗೆ (ಯಥಾಸ್ಮೈರೋಚತೇ…) ನಡೆಯುತ್ತದೆ ಎಂಬ ಮಾತು ವಿಶೇಷವಾಗಿ ಗಮನಿಸಬೇಕಾದದ್ದು.  ಕವಿ ಒಬ್ಬ ವಿಶಿಷ್ಟ ವ್ಯಕ್ತಿ; ಈ ವಿಶಿಷ್ಟ ವ್ಯಕ್ತಿ ತನ್ನ ಸಂಸ್ಕಾರ-ಅಭಿರುಚಿಗಳಿಗೆ ಅನುಸಾರವಾಗಿ, ಲೋಕಾನುಭವಗಳನ್ನು ತನ್ನ ಕಾವ್ಯಾನುಭವಗಳನ್ನಾಗಿ ಪರಿವರ್ತಿಸಿ ‘ಅಪೂರ್ವತೆ’ಯನ್ನು ತರುತ್ತಾನೆ. ಕವಿಪ್ರತಿಭೆಯಲ್ಲಿ ಕಂಡುಬರುವ ತಾರತಮ್ಯಕ್ಕೆ ಕವಿಯ ವಿಶಿಷ್ಟ ಅಭಿರುಚಿ- ಸಂಸ್ಕಾರಗಳಿಂದ ರೂಪುಗೊಳ್ಳುವ ಮನೋಧರ್ಮಗಳೆ ಕಾರಣ. “ಪ್ರತಿಭೆಯ ತಾರತಮ್ಯದಿಂದಲೇ ಈ ಲೋಕದಲ್ಲಿ ಕವಿಗಳ ಪದವಿಗಳೂ ಬೇರೆ ಬೇರೆಯಾಗುತ್ತವೆ’[38] ಎಂಬ ರಾಜಶೇಖರನ ಉಕ್ತಿಯೂ ಈ ಮೇಲಿನ ಅಭಿಪ್ರಾಯವನ್ನೇ ಸಮರ್ಥಿಸುತ್ತದೆ.

ಭಾರತೀಯ ಆಲಂಕಾರಿಕರ ಪ್ರಕಾರ ಪ್ರತಿಭೆ ಎನ್ನುವುದು ಕಾವ್ಯ ನಿರ್ಮಾಣ ಸಮರ್ಥವಾದ ಒಂದು ಪ್ರಜ್ಞೆ.  ಈ ಪ್ರಜ್ಞೆಯಲ್ಲಿ ಕವಿ ಲೋಕಾನುಭವಗಳನ್ನು ತನಗೆ ಹೇಗೆ ರುಚಿಸುತ್ತದೆಯೋ ಹಾಗೆ ಪರಿವರ್ತಿಸುತ್ತಾನೆ. ಈ ಪರಿವರ್ತನ ಕ್ರಿಯೆಯಲ್ಲಿ ಅವನಿಗೆ ‘ನವನವ ಉನ್ಮೇಷವೂ’ ಮತ್ತು ಆ ಅನುಭವದ ಉನ್ಮೇಷವನ್ನು ಹಿಡಿದು ರೂಪಿಸಲು ತಕ್ಕ ‘ನವನವ ಉಲ್ಲೇಖ’ ಸಾಮಗ್ರಿಯೂ ಒದಗಿ ಬರುತ್ತದೆ. ಈ ರೀತಿಯಿಂದ ನೋಡಿದರೆ “ಪ್ರತಿಭಾ ವ್ಯಾಪಾರವು ದೃಷ್ಟಿಯೂ ಹೌದು; ಸೃಷ್ಟಿಯೂ ಹೌದು”[39] ಅದು ಚಿರಪರಿಚಿತವಾದದ್ದರಲ್ಲೆ ಹೊಸ ಹೊಸ ಅರ್ಥಗಳನ್ನು ಕಾಣುತ್ತದೆ. ಮತ್ತು ಕಂಡದ್ದನ್ನು ಹೊಸ ಹೊಸ ರೀತಿಯಲ್ಲಿ ಕಟ್ಟುತ್ತದೆ. ಅಂತರಂಗದ ಅನುಭವ, ಬಹಿರಂಗದ ಅಭಿವ್ಯಕ್ತಿಯನ್ನು ತಾಳುವವರೆಗಿನ ಕವಿಮನಸ್ಸಿನ ವ್ಯಾಪಾರವನ್ನು ‘ಪ್ರತಿಭೆ’ ಎಂಬ ಹೆಸರಿನಿಂದ ನಮ್ಮ ಆಲಂಕಾರಿಕರು ಕರೆದಿದ್ದಾರೆ.


[1] Herbert Read : The Philosophy of Modern Art, p. 68.

[2] I.A. Richards : Principles of Literary Criticism, p. 191.

[3] D.J. James : Scepticism and Poetry, p.15

[4] ತೀ.ನಂ.ಶ್ರೀ. ಭಾರತೀಯ ಕಾವ್ಯಮೀಮಾಂಸೆ.  “ಅನುಕರಣ, ನಿರ್ಮಾಣಗಳೆರಡಕ್ಕೂ ಕಾವ್ಯದಲ್ಲಿ ಸ್ಥಾನವಿದೆ. ರಸದ ದೃಷ್ಟಿಯಿಂದ ಪರಿಶೀಲಿಸಿದಲ್ಲಿ ಇವೆರಡೂ ಒಂದಕ್ಕೊಂದು ವಿರೋಧಿಗಳಲ್ಲ; ಪರಸ್ಪರ ಪೂರಕಗಳು….” (ಪು. ೨೦೮, ಎರಡನೆ ಮುದ್ರಣ, ೧೯೬೧)

[5] ಭಾಮಹ : ಕಾವ್ಯಾಲಂಕಾರ ೫-೬, ೭,

[6] James L. Jarrett : The Quest for Beauty, P. 132

* ‘ಕಲ್ಪನಾ’-ಎಂಬ ಪದ ಸಂಸ್ಕೃತದಲ್ಲಿ ಅಲಂಕರಣ ಮಾಡುವುದು, ಜೋಡಿಸುವುದು, ಹೊಂದಿಸುವುದು, ರಚಿಸುವುದು, ಮನಸ್ಸಿನಲ್ಲಿ ಮೂಡುವ ಭಾವನೆ, ಆಲೋಚನೆ, ಎಂಬರ್ಥಗಳಲ್ಲಿ ಬಳಕೆಯಾಗಿದೆ. V.S. Apte : Sanskrit English Dictionary, p. 343.

+ ಈ ಪದ ವಾಲ್ಮೀಕಿ ರಾಮಾಯಾಣದಲ್ಲೆ ಇದೆ – ರಾಮನನ್ನು ವರ್ಣಿಸುವ ಸಂದರ್ಭದಲ್ಲಿ:
ಧರ್ಮಾರ್ಥ ಕಾಮ ತತ್ವಜ್ಞಃ ಸ್ಮೃತಿಮಾನ್ ಪ್ರತಿಭಾನವಾನ್
ಲೌಕಿಕೇ ಸಮಯಾಚಾರೇ ಕೃತಿ ಕಲ್ಪೋ ವಿಶಾರದಃ
ಶ್ರೀ ಮದ್ವಾಲ್ಮೀಕಿ ರಾಮಾಯಣಂ; ಅಯ್ಯೊಧ್ಯಾಕಾಂಡ (ಪೂರ್ವಾರ್ಧ) ಸರ್ಗ-೧-೨೨

[7] ವಾಮನ : ಕಾವ್ಯಾಲಂಕಾರ ಸೂತ್ರ ವೃತ್ತಿ ೧-೧೧೧-೧೬.

[8] ನಾಗವರ್ಮ : ಕಾವ್ಯಾವಲೋಕನ, ಪದ್ಯ ೪೨೪.

[9] ಮಮ್ಮಟ : ಕಾವ್ಯಪ್ರಕಾಶ ೧-೩.

[10] ‘ಮನಸಿ ಸದಾ ಸುಸಮಾಧಿನಿ ವಿಸ್ಫುರಣಮನೇಕಧಾಭಿದೇಯಸ್ಯ
ಅಕ್ಷಿಷ್ಟಾನಿ ಪ ದಾನಿ ಚ ವಿಭಾಂತಿ ಯಸ್ಯಾಮಸೌ ಶಕ್ತಿಃ!
ಪ್ರತಿಭೇತ್ಯಪರೈರುದಿತಾ….’ (ಕಾವ್ಯಾಲಂಕಾರ : ೧-೧೫, ೧೬)
ತೀ.ನಂ.ಶ್ರೀ. : ಭಾರತೀಯ ಕಾವ್ಯಮೀಮಾಂಸೆ, ಪು. ೧೬೨

[11] ರಾಜಶೇಖರ : ಕಾವ್ಯಮೀಮಾಂಸೆ : (ಕನ್ನಡ ಅನುವಾದ : ಪು. ೨೨) ಡಾ. ಕೆ. ಕೃಷ್ಣಮೂರ್ತಿ.

[12] ತೀ.ನಂ. ಶ್ರೀಕಂಠಯ್ಯ : ಭಾರತೀಯ ಕಾವ್ಯಮೀಮಾಂಸೆ : ಪು. ೧೬೨ (ಅಡಿ ಟಿಪ್ಪಣಿ)

[13] EncyclopaediaBritanica : Vo. 10. p. 103 (1965 edition)

[14] E.F. Carrett : What is Beauty? p. 52 (Foot Note)

[15] Quoted by D.J. James : Scepticism and Poetry. p. 177.

[16] Loius K. Anspacher : The Challenge of the Unknown : p. 108.

[17] Loius K. Anspacher : The Challenge of the Unknown, p. 122

[18] S.C. Sen Gupta : Towards a theory of imagination, p. 102.

[19] Herbert Read : The Philosophy of Modern Art, p. 40.

[20] K.W. Wild -Intuition, p. 147.

[21] Aurobindo : Letters of Sri Aurobindo, Third Series, p. 302.

[22] “ವಿಭೂತಿಯೆಂದರೆ ವಿಶೇಷವಾದ ಭೂತಿ ಎಂದರೆ ಆಗುವಿಕೆ….. ಈಶ್ವರನ ಅಥವಾ ಈಶ್ವರೀಶಕ್ತಿಯ ಈ ಭೂತಿ ಅಥವಾ ಆಗುವಿಕೆ ಎಲ್ಲಿ ತನ್ನ ಸಾಮಾನ್ಯ ಪ್ರಮಾಣಕ್ಕಿಂತಲೂ ಅಧಿಕತರವಾಗಿ ಅಥವಾ ತನ್ನ ಸಾಮಾನ್ಯ ರೀತಿಗಿಂತಲೂ ಪರತರವಾಗಿ ಕಾಣಿಸಿಕೊಳ್ಳುತ್ತದೆಯೋ  ಅಲ್ಲಿ ‘ವಿಭೂತಿ ಮೂಡುತ್ತದೆ’-ಕುವೆಂಪು : ವಿಭೂತಿ ಪೂಜೆ, ಪು. ೩

[23] A.E. Powell: The Romantic Theory of Poetry, Chap.II. p. 15-25.

[24] ಜಿ.ಎಸ್. ಶಿವರುದ್ರಪ್ಪ : ಸೌಂದರ್ಯ ಸಮೀಕ್ಷೆ : ನೋಡಿ, ಪು. ೮೭-೯೫ (ದ್ವಿತೀಯ ಮುದ್ರಣ -೧೯೭೦)

[25] T.N. Sreekantaiya : Imagination in Indian Poetics and Other Literary studies, p. 12

[26] ವಾಮನ : ಕಾವ್ಯಾಲಂಕಾರ ಸೂತ್ರ ವೃತ್ತಿ. ಪು. ೩೨ (ಅನು: ಡಾ. ಕೆ. ಕೃಷ್ಣಮೂರ್ತಿ)

[27] T.N. Srikantaiya, Imagination in Indian Poetics and Other Literarystudies, p. 12

[28] ತೀ.ನಂ. ಶ್ರೀಕಂಠಯ್ಯ : ಭಾರತೀಯ ಕಾವ್ಯಮೀಮಾಂಸೆ, ಪುಟ ೧೬೨

[29] ಅಲ್ಲೇ, ಪು. ೧೬೩.

[30] ಅಲ್ಲೇ, ಪು. ೧೬೧ (ಅಡಿಟಿಪ್ಪಣಿ)

[31] ಅಲ್ಲೇ, ಪು. ೧೬೭ (ಅಡಿಟಿಪ್ಪಣಿ)

[32] The Doctrine of Partibha in Indian Philosophy; GopinathKaviraj (Annals of Bhandarkar Oriental Research Institute, Poona, Vol, V, Part I and II)

[33] ತೀ.ನಂ. ಶ್ರೀಕಂಠಯ್ಯ : ಭಾರತೀಯ ಕಾವ್ಯಮೀಮಾಂಸೆ, ಪು. ೧೪೦ (೧೯೬೧)

[34] ಪು.ತಿ. ನರಸಿಂಹಾಚಾರ್ : ಕಾವ್ಯಕುತೂಹಲ, ಪು. ೧೪.

* ‘ಕಣ್ಣರಿಯದೊಡಂ ಕರುಳರಿಯದೇ’ಎಂಬ ಸೂಕ್ತಿ ‘ಪ್ರಜ್ಞೆ’ಯ ವಿವರಣೆಯಂತಿದೆ.

[35] ಪು.ತಿ.ನ. : ಕಾವ್ಯ ಕುತೂಹಲ, ಪು. ೧೪

[36] William Walsh : The use of Imagination, p. 135

[37] ಅಪಾರೇ ಕಾವ್ಯಸಂಸಾರೇ ಕವಿರೇವ ಪ್ರಜಾಪತಿಃ! ಯಥಾಸ್ಮೈರೋಚತೇ ವಿಶ್ವಂ ತಥೇದಂ ಪರಿವರ್ತತೇ…. ಆನಂದ ವರ್ಧನನ ಧ್ವನ್ಯಾಲೋಕ; ೩-೪೨ರ ನಂತರದ ಪರಿಕರ ಶ್ಲೋಕ..

[38] ರಾಜಶೇಖರ : ಕಾವ್ಯಮೀಮಾಂಸೆ (ಪದವಾಕ್ಯವಿವೇಕ) ಅನು : ಡಾ. ಕೃಷ್ಣಮೂರ್ತಿ,  ಪು. ೨೬.

[39] ತೀ.ನಂ. ಶ್ರೀಕಂಠಯ್ಯ: ಭಾರತೀಯ ಕಾವ್ಯಮೀಮಾಂಸೆ, ಪು. ೧೬೬