ತಣ್ಣಗೆ ಉರಿವ
ಸಣ್ಣ ಹಣತೆಯ ಕಣ್ಣ ಬೆಳಕಿನಲ್ಲಿ
ಜಗತ್ತಿನ ತೇಜಸ್ಸೆಲ್ಲವೂ ತುಂಬಿಕೊಂಡಿದೆ
ಒಂದೇ ಒಂದು ಹಣತೆಯ ಕಣ್ಣಿನಲ್ಲಿ

ಭತ್ತದ ಗದ್ದೆಯ ವಿಸ್ತಾರದ ತೆನೆಯೊಂದರಲ್ಲಿ
ಈ ನೆಲದ ಫಲವಂತಿಕೆಯೆಲ್ಲವೂ ಮನೆಮಾಡಿಕೊಂಡಿದೆ
ಒಂದೇ ಒಂದು ತೆನೆಯ ತೆಕ್ಕೆಯಲ್ಲಿ,

ಮುಂಜಾವದಲ್ಲಿ
ಹಸುರ ಮೇಲೆ ಮಿರು ಮಿರುಗುವಿಬ್ಬನಿಯ ತೊಟ್ಟಿಲಲ್ಲಿ
ಸಪ್ತಸಾಗರದ ಜಲವೆಲ್ಲವೂ ಮಲಗಿಕೊಂಡಿದೆ
ಒಂದೇ ಒಂದು ಇಬ್ಬನಿಯ ತೊಟ್ಟಿಲಲ್ಲಿ.

ಹೆಸರಿಲ್ಲದ
ಪುಟ್ಟ ಕವಿಯೊಬ್ಬನ ಕವನದೊಂದು ಪಂಕ್ತಿಯಲ್ಲಿ
ನಿನ್ನೆಯ ಆಸೆಗಳು, ನಾಳೆಯ ಕನಸುಗಳು ಕಾಯುತ್ತಿವೆ
ಒಂದೇ ಒಂದು ಕವಿತೆಯ ಪಂಕ್ತಿಯಲ್ಲಿ.

ಕಣ್ಣೀರಲ್ಲಿ ನೆನೆದ
ಹಸಿದ ಹೊಟ್ಟೆಯೊಳಗುರಿವ ಸಿಟ್ಟಿನಲ್ಲಿ
ನಾಳಿನ ಕ್ರಾಂತಿಯ ಜ್ವಾಲಾಮುಖಿಗಳು ಹೊಗೆಯಾಡುತ್ತಿವೆ
ಹಸಿದ ಹೊಟ್ಟೆಯೊಳಗುರಿವ ಸಿಟ್ಟಿನಲ್ಲಿ