ಮಿಂಚಿನ ಗೊಂಚಲ ಹೂವರಳಿಹುದೀ
ತಂತಿಯ ಕಂಬದ ತುದಿಯಲ್ಲಿ !
ದಾರಿಯ ಬದಿಯಲಿ, ಕೇರಿ ಕೇರಿಯಲಿ
ಮನೆಮನೆಯಲಿ ಮೇಣ್ ಸೌಧದಲಿ
ಎಲ್ಲೆಲ್ಲಿಯು ಮಿನುಮಿನುಗುತಿವೆ
ಕಣ್ಮನವನು ಕೋರೈಸುತಿವೆ.

ಮೋಡದೊಳಡಗಿದ ಮಿಂಚನು ತುಡುಕಿ
ಶಕ್ತಿಯೆಲ್ಲವನು ಯಂತ್ರದೊಳಡಕಿ,
ಕಂಬಕಂಬಗಳ ಹಂದರದಲ್ಲಿ
ಲಂಬಿಸಿ ಹಬ್ಬಿರೆ ತಂತಿಯ ಬಳ್ಳಿ
ಹೂವಾಗಿಸಿದೀ ಮಾನವ ಸೃಷ್ಟಿ
ತಾರಾಲೋಕದ ಪ್ರತಿಸೃಷ್ಟಿ !