ಎಲ್ಲಿದ್ದೀರಿ ಓ ನನ್ನ ಮಕ್ಕಳೇ ಬನ್ನಿ
ನಾನು ಬಿರಿದರಳಿ ಕರೆವ ಸಾವಿರ ದಳದ
ಕಮಲ ; ಸೌರಭದ ಗಾಳಿ ನೆಲಮುಗಿಲ
ನಡುವೆ. ರೆಕ್ಕೆ ಬೀಸುತ್ತ ಬನ್ನಿರೋ ಬನ್ನಿ
ಭೃಂಗಗಳಾಗಿ ಝೇಂಕರಿಸುತ್ತ ನನ್ನ ಬಳಿಗೆ.

ಎಲ್ಲಿ ಸೊರಗಿದ್ದೀರಿ ಓ ನನ್ನ ಹಣತೆಗಳೆ,
ಮೈಯೆಲ್ಲ ಬೆಳಕಾಗಿ ಹೊತ್ತಿ ಸಾವಿರ
ಬತ್ತಿ, ಜ್ಯೋತಿಯಾಗಿದ್ದೇನೆ. ಕತ್ತಲಿನ
ದಾರಿಯನು ಸೀಳುತ್ತ ಬನ್ನಿರೋ
ತುಂಬಿಕೊಳ್ಳಿರಿ ಎದೆಗೆ ಬೆಳಕುಗಳನು.

ಯಾವ ಪ್ರಕ್ಷುಬ್ಧ ಕಡಲಿನ ಮೇಲೆ, ಬಿರು-
ಗಾಳಿಯಲ್ಲಲೆವ ಓ ನನ್ನ ದೋಣಿಗಳೆ
ಬನ್ನಿರೋ ಬನ್ನಿ, ಈ ಪ್ರಶಾಂತ ಚಂದ್ರ ತೀರಗ-
ಳಲ್ಲಿ ಕೂತಿದ್ದೇನೆ ನಿಮಗಾಗಿ, ಹಗಲು
ಇರುಳೂ ನಿಮ್ಮ ದಾರಿ ಕಾಯುತ್ತ.

ಬಿರುಗಾಳಿಗಳನ್ನು ಹಿಡಿದು ಪಳಗಿಸುತ
ಮಿಂಚುಗಳನ್ನೆ ಬಿತ್ತಿಬೆಳೆ ತೆಗೆವ
ಸಾಹಸದ ಕಿಡಿಗಳೇ, ಭರವಸೆಯ
ಕುಡಿಗಳೇ, ಬನ್ನಿರೋ ಬನ್ನಿ, ಕಾಯು-
ತಿದೆ ನಿಮಗಾಗಿ ನನ್ನ ಹೃದಯ.