ವ|| ಎನ್ನ ಗೆಯ್ದ ಕಾಮಾಕ್ರಾಂತಕ್ಕೆ ಕಾಮಕೃತಮೇಂ ಪಿರಿದಲ್ತು-
ಕಂ|| ಎತ್ತ ವನಮೆತ್ತ ಮೃಗಯಾ
ವೃತ್ತಕವಿ ತಪಸಿಯೆತ್ತ ಮೃಗಮೆಂದೆಂತಾ|
ನೆತ್ತೆಚ್ಚೆನಾತ್ಮಕರ್ಮಾ
ಯತ್ತಂ ಪೆಱತಲ್ತಿದೆಲ್ಲಮಘಟಿತಘಟಿತಂ ||

ವ|| ಎಂದು ಚಿಂತಿಸುತ್ತುಂ ಪೊೞಲ್ಗೆ ಮಗುೞ್ದುವಂದು ಗಾಂಗೇಯ ಧೃತರಾಷ್ಟ್ರ ವಿದುರರ್ಕಳ್ಗೆ ತದ್ವೃತ್ತಾಂತಮೆಲ್ಲಮಂ ಪೇೞ್ದು ಸಮಸ್ತವಸ್ತುಗಳಂ ದೀನಾನಾಥಜನಂಗಳ್ಗೆ ಸೂಗೊಟ್ಟು ನಿಜಪರಿರಾರಮಂ ಬರಿಸಿ-

ಉ|| ಸಾರಮನಂಗ ಜಂಗಮಲತಾ ಬಲಿತಾಂಗಿಯರಿಂದಮಲ್ತೆ ಸಂ
ಸಾರಮಿದೆಂಬುದಿನ್ನೆನಗೆ ತಪ್ಪುದು ತನ್ಮುನಿ ಶಾಪದಿಂದಿಮಿ|
ನ್ನಾರುಮಿದರ್ಕೆ ವಕ್ರಿಸದಿರಿಂ ವನವಾಸದೊಳಿರ್ಪೆನೆಂದು ದು
ರ್ವಾರ ಪರಾಕ್ರಮಂ ತಳರೆ ಬಾರಿಸಿವಾರಿಸಿ ಕುಂತಿ ಮಾದ್ರಿಯರ್|| ೧೧೪

ವ|| ಬೆನ್ನ ಬೆನ್ನನೆ ಬರೆ ಚಿನ್ನ ಬಿನ್ನನೆ ಪೋಗಿ-

ಖಚರುಪ್ಲುತ ತ|| ತುಂಗ ವನ್ಯ ಮತಂಗಜ ದಂತಾಘಾತ ನಿಪಾತಿತ ಸಲ್ಲಕೀ
ಭಂಗಮಂ ಮಣಿಮೌಕ್ತಿಕ ನೀಳ ಸ್ಥೂಳ ಶಿಲಾ ಪ್ರವಿಭಾಷಿತೋ|
ತ್ತುಂಗಮಂ ಮುನಿಮುಖಮುಖಾಂಭೋಜೋದರ ನಿರ್ಗತಮಂತ್ರ ಪೂ
ತಾಂಗಮಂ ನೃಪನೆಯ್ದಿದನುದ್ಯಚ್ಛೃಂಗಮನಾ ಶತಶೃಂಗಮಂ|| ೧೧೫

ವ|| ಆ ಪರ್ವತದ ವಿಪುಳ ವನೋಪಕಂಠಗಳೊಳ್ ತಾಪಸಕನ್ಯೆಯರ್ ನಡಪಿದೆಳಲತೆಗಳೊಳೆಱಗಿ ತುಱುಗಿ ಸಾಮವೇದಧ್ವನಿಯೊಳ್ ಮೊರೆವ ತುಂಬಿಗಳುಮಂ ಪಣ್ತೆಱಗಿದ ತದಾಶ್ರಮದ ತರುಗಳ ಮೇಗಿರ್ದು ಪುಗಿಲ್ ಪುಗಿಲೆಂದಿತ್ತ ಬನ್ನಿಮಿರಿಮೆಂಬ ಪೊಂಬಣ್ಣದ ಕೋಗಿಲೆಗಳುಮಂ ಮುನಿಕುಮಾರರೋದುವ ವೇದವೇದಾಂಗಂಗಳಂ ತಪ್ಪುವಿಡುದು ಜಡಿದು ಬಗ್ಗಿಸುವ ಪದುಮರಾಗದ ಬಣ್ಣದರಗಿಳಿಗಳುಮಂ ಸುರಭಿಗಳ ತೊರೆದ ಮೊಲೆಗಳನುಣ್ಬವಱ ಮಱಗಳಂ ಪೋಗೆ ನೂಂಕಿ ಕೂಂಕಿ ಮೊಲೆಗಳನುಣ್ಬ ಕಿಶೋರ ಕೇಸರಿಗಳುಮಂ ತಮ್ಮೊಡನೆ ನಲಿದಾಡುವ ಕಿಶೋರಕೇಸರಿಗಳಂ ಪಿಡಿದು ತೆಗೆವ ಕರಿಕಳಭಂಗಳುಮನಾಗಳಾಪಳುವಂಗಳಿಂದೆ ಪಾಯ್ವ ಪುಲಿಗಳ ಮಱಗಳೊಳ್ ಪರಿದಾಡುವ ತರುಣ ಹರಿಣಂಗಳುಮಂ ಮತ್ತಂ ಮುತ್ತ ಕುರುಡತವಸಿಗಳ ಕೈಯಂ ಪಿಡಿದುಯ್ದವರ ಗುಹೆಗಳಂ ಪುಗಿಪ ಪೊಱಮಡಿಪ ಚಪಳ ಕಪಿಗಳುಮಂ ಹೋಮಾಗ್ನಿಯನೆಱಂಕೆಯ ಗಾಳಿಯಿಂ ನಂದಲೀಯದುರಿಪುವ ರಾಜಹಂಸೆಗಳುಮಂ ಮುನಿಗಣೀಶ್ವರರೊಡನೆ ದಾಳಿವೂಗೊಯ್ವೊಡನೆವರ್ಪ ಗೋಳಾಂಗೂಳಂಗಳುಮಂ ನೋಡಿ ತಪೋವನದ ತಪೋಧನರದ ತಪೋಧನರದ ತಪಪ್ರಭಾವಕ್ಕೆ ಚೋದ್ಯಂಬಟ್ಟು-

ಮಾಡಿದ ಕಾಮಕ್ರೀಡಾವಿಘ್ನಕ್ಕೆ ತಡೆಯಿಲ್ಲದ ಈ ಶಾಪವು ಹಿರಿದೇನಲ್ಲ – ೧೧೩. ಈ ಕಾಡೆಲ್ಲಿಯದು; ಈ ಬೇಟೆಯ ಕಾರ್ಯವಲ್ಲಿಯದು, ಈ ತಪಸ್ವಿಯೆಲ್ಲಿಯವನು, ಮೃಗವೆಂದು ನಾನು ಇದನ್ನು ಹೇಗೆ ಹೊಡೆದೆ, ಅಸಂಬದ್ಧವಾದ ಇದೆಲ್ಲ ನನ್ನ ಪ್ರಾಚೀನ ಕರ್ಮಾನವಲ್ಲದೆ ಬೇರೆಯಲ್ಲ ವ|| ಎಂದು ಹೋಚಿಸುತ್ತ ಪಟ್ಟಣಕ್ಕೆ ಹಿಂದಿರುಗಿ ಬಂದು ಭೀಷ್ಮ, ಧೃತರಾಷ್ಟ್ರ, ವಿದುರರಿಗೆ ಆ ಸಮಾ ಆ ಸಮಾಚಾರವನ್ನೆಲ್ಲ ಹೇಳಿ ಸಮಸ್ತವಸ್ತುಗಳನ್ನೂ ದೀನರೂ ಅನಾಥರೂ ಆದ ಜನಗಳಿಗೆ ಉದಾರವಾಗಿ ದಾನಮಾಡಿ ತನ್ನ ಪರಿವಾರವನ್ನು ಬರಮಾಡಿ- ೧೪೪. ಸಂಸಾರವು ಸಾರವತ್ತಾಗಿರುವುದು ಮನ್ಮಥನ ನಡೆದಾಡುವ ಬಳ್ಳಿಗಳಂತಿರುವ ಸುಂದರಾಂಗಿಯರಿಂದಲ್ಲವೇ? ಆ ಋಷಿಶಾಪದಿಂದ ಇನ್ನು ಅದು ನನಗೆ ಇಲ್ಲವಾಯಿತು. ವನವಾಸದಲ್ಲಿರುತ್ತೇನೆ? ಇದಕ್ಕೆ ಮತ್ತಾರೂ ಅಡ್ಡಿಮಾಡಬೇಡಿ ಎಂದು ಅಪ್ರತಿಮ ಪರಾಕ್ರಮಿಯಾದ ಆ ಪಾಂಡುರಾಜನು ಕಾಡಿಗೆ ಹೊರಟನು. ಕುಂತಿ ಮಾದರಿಯರು ಅವನನ್ನು ತಡೆದು ವ|| ಹಿಂದೆ ಹಿಂದೆಯೇ ಬಂದರು.

೧೧೫. ಎತ್ತರವಾದ ಕಾಡಾನೆಯ ದಂತದ ಪೆಟ್ಟಿನಿಂದ ಉರುಳಿಸಲ್ಪಟ್ಟು ಮುರಿದ ಬೇಲದ ಮರಗಳನ್ನುಳ್ಳುದೂ ಮುತ್ತು ಮತ್ತು ರತ್ನಗಳನ್ನೊಳಗೊಂಡ ನೀಲವೂ ಸ್ಥೂಲವೂ ಆದ ಕಲ್ಲುಬಂಡೆಗಳಿಂದ ಪ್ರಕಾಶಮಾನವಾದುದೂ ಬಹಳ ಎತ್ತರವಾದುದೂ ಋಷಿಶ್ರೇಷ್ಠರ ಮುಖಕಮಲಗಳಿಂದ ಹೊರಹೊರಟ ಮಂತ್ರಗಳಿಂದ ಪವಿತ್ರವಾದ ಶರೀರವುಳ್ಳದೂ ಎತ್ತರವಾದ ಲೋಡುಗಳಿಂದ ಕೂಡಿದುದೂ ಆದ ಶತಶೃಂಗ ಪರ್ವತವನ್ನು ಪಾಂಡುರಾಜನು ಬಂದು ಸೇರಿದನು. ವ|| ಆ ಪರ್ವತದ ತಪ್ಪಲು ಪ್ರದೇಶದಲಿ ತಾಪಸಕನ್ಯೆಯರು ಸಾಕಿ ಬೆಳೆಸಿದ ಬಳ್ಳಿಗಳನ್ನು ಮುತ್ತಿ ಗುಂಪುಗೂಡೆ ಸಾಮವೇದಧ್ವನಿಯ ಶಬ್ದಮಾಡುತ್ತಿರುವ ದುಂಬಿಗಳನ್ನೂ ಫಲಭಾರದಿಂದ ಬಾಗಿದ ಆ ಆಶ್ರಮದ ಗಿಡಗಳ ಮೇಲಿದ್ದು ‘ಪ್ರವೇಶಿಸಿ, ಬನ್ನಿ, ಇಲ್ಲಿ ವಾಸಿಸಿ’ ಎನ್ನುತ್ತಿರುವ ಹೊಂಬಣ್ಣದ ಕೋಗಿಲೆಗಳನ್ನೂ ಋಷಿಕುಮಾರರು ಅಧ್ಯಯನ ಮಾಡುತ್ತಿರುವ ವೇದವೇದಾಂಗಗಳಲ್ಲಿ ತಪ್ಪನ್ನು ಕಂಡುಹಿಡಿದು ಆಕ್ಷೇಪಿಸಿ ಸರಿಪಡಿಸುವ ಪದ್ಮರಾಗವೆಂಬ ರತ್ನದ ಬಣ್ಣದಿಂದ

ಚಂ|| ವಿನಯದಿನಿತ್ತ ಬನ್ನಿಮಿರಿಮೆಂಬವೊಲಿಂಚರದಿಂದಮೊಯ್ಯನೊ
ಯ್ಯನೆ ಮಱದುಂಬಿಗಳ್ ಮೊರೆವುವೞ್ಕಱ ಳೊಲ್ದೆಱಪಂತೆ ತಳ್ತ ಪೂ|
ವಿನ ಪೊಸ ಗೊಂಚಲಿಂ ಮರನಿದೇನೆಸೆದಿರ್ದುವೊ ಕಲ್ತುವಾಗದೇ
ವಿನಯಮನೀ ತಪೋಧನರ ಕೈಯೊಳೆ ಶಾಖಿಗಳುಂ ನಗೇಂದ್ರದಾ|| ೧೧೬

ವ|| ಎಂದು ಮೆಚ್ಚುತ್ತುಮೆನಗೆ ನೆಲಸಿರಲೀ ತಪೋವನಮೆ ಪಾವನಮೆಂದು ತಪೋವನದ ಮುನಿಜನದ ಪರಮಾನುರಾಗಮಂ ಪೆರ್ಚಿಸಿ ಕಾಮಾನುರಾಗಮಂ ಬೆರ್ಚಿಸಿ ತದಾಶ್ರಮದೊಳಾಶ್ರಮಕ್ಕೆ ಗುರುವಾಗೆ ಪಾಂಡುರಾಜನಿರ್ಪನ್ನೆಗಮಿತ್ತ ಧೃತರಾಷ್ಟ್ರನ ಮಹಾದೇವಿಯಪ್ಪ ಗಾಂಧಾರಿ ನೂರ್ವರ್ಮಕ್ಕಳಂ ಪಡೆವಂತು ಪರಾಶರಮುನೀಂದ್ರನೊಳ್ ಬರಂಬಡೆದಳೆಂಬುದಂ ಕುಂತಿ ಕೇಳ್ದು ತಾನುಂ ಪುತ್ರಾರ್ಥಿನಿಯಾಗಲ್ ಬಗೆದು-

ಚಂ|| ವಿಸಸನದೊಳ್ ವಿರೋನೃಪರಂ ತೆಱದೊಟ್ಟಲುಮರ್ಥಿಗರ್ಥಮಂ
ಕಸವಿನ ಲೆಕ್ಕಮೆಂದು ಕುಡಲುಂ ವಿಪುಳಾಯತಿಯಂ ದಿಗಂತದೊಳ್|
ಪಸರಿಸಲುಂ ಕರಂ ನೆವ ಮಕ್ಕಳನೀಯದೆ ನೋಡೆ ನಾಡೆ ನೋ
ಯಸಿದಪುದಿಕ್ಷುಪುಷ್ಪದವೊಲೆನ್ನಯ ನಿಷಲ ಪುಷ್ಪದರ್ಶನಂ|| ೧೧೭

ವ|| ಎಂದು ಚಿಂತಾಕ್ರಾಂತೆಯಾಗಿರ್ದ ಕುಂತಿಯಂ ಕಂಡು ಪಾಂಡುರಾಜನೇಕಾಂತದೊಳಿಂತೆಂದಂ-

ಉ|| ಚಿಂತೆಯಿದೇನೊ ಸಂತತಿಗೆ ಮಕ್ಕಳೆ ನೆಟ್ಟನೆ ಬಾರ್ತೆಯಪ್ಪೊಡಿ
ನ್ನಿಂತಿರವೇಡ ದಿವ್ಯ ಮುನಿಪುಂಗವರಂ ಬಗೆದೀರ್ಪಿನಂ ನಿಜಾ|
ತ್ಯಂತ ಪತಿವ್ರತಾಗುಣದಿನರ್ಚಿಸಿ ಮೆಚ್ಚಿಸು ನೀಂ ದಿಗಂತ ವಿ
ಶ್ರಾಂತ ಯಶರ್ಕಳಂ ವರ ತನೂಭವರಂ ಪಡೆ ನೀಂ ತಳೋದರೀ|| ೧೧೮

ಕೂಡಿದ ಶ್ರೇಷ್ಠವಾದ ಗಿಳಿಗಳನ್ನೂ ಹಸುಗಳ ಹಾಲು ತುಂಬಿದ ಕೆಚ್ಚಲುಗಳನ್ನು ಉಣ್ಣುತ್ತಿರುವ ಅವುಗಳ ಕರುಗಳನ್ನು ಪಕ್ಕಕ್ಕೆ ತಳ್ಳಿ ಓರೆಯಾಗಿ ಹಾಲುಕುಡಿಯುತ್ತಿರುವ ಸಿಂಹದ ಮರಿಗಳನ್ನೂ ತಮ್ಮೊಡನೆ ನಲಿದಾಡುತ್ತಿರುವ ಸಿಂಹದ ಮರಿಗಳನ್ನು ಹಿಡಿದೆಳೆಯುವ ಆನೆಯ ಮರಿಗಳನ್ನೂ ಆಗಾಗ ಅಲ್ಲಿ ಎಡೆಯಾಡುತ್ತಿರುವ ಹುಲಿಯ ಮರಿಗಳ ಜೊತೆಯಲ್ಲಿ ಹರಿದಾಡುತ್ತಿರುವ ಜಿಂಕೆಯ ಮರಿಗಳನ್ನೂ ಮತ್ತು ಕುರುಡರಾದ ಮುದಿತಪಸ್ವಿಗಳ ಕೈ ಹಿಡಿದು ಅವರ ಗುಹೆಗಳನ್ನು ಪ್ರವೇಶಮಾಡಿಸುವ ಹಾಗೆಯೇ ಅಲ್ಲಿಂದ ಹೊರಡಿಸುವ ಚಪಳವಾದ ಕಪಿಗಳನ್ನೂ ಹೋಮಾಗ್ನಿಯು ನಂದಿಹೋಗದಂತೆ ತಮ್ಮ ರಕ್ಕೆಯ ಗಾಳಿಯಿಂದ ಬೀಸಿ ಉರಿಸುತ್ತಿರುವ ರಾಜಹಂಸಗಳನ್ನೂ ಮುನೀಂದ್ರ ಸಮೂಹದೊಡನೆ ದಾಳಿಯ ಹೂವನ್ನು ಕುಯ್ಯುವ ಮತ್ತು ಜೊತೆಯಲ್ಲಿ ಬರುವ ಕಪಿಗಳನ್ನೂ ನೋಡಿ ಆ ತಪೋವನದ ತಪಸ್ಸನ್ನೇ ಧನವನ್ನಾಗಿ ಉಳ್ಳ ಆ ಋಷಿಶ್ರೇಷ್ಠರ ತಪಸ್ಸಿನ ಪ್ರಭಾವಕ್ಕೆ ಆಶ್ಚರ್ಯಪಟ್ಟನು. ೧೧೬. ಇದೇನು! ಇಲ್ಲಿಯ ದುಂಬಿಯ ಮರಿಗಳು ವಿನಯದಿಂದ ಈ ಕಡೆ ಬನ್ನಿ, ಇಲ್ಲಿರಿ ಎನ್ನುವ ಹಾಗೆ ಮನೋಹರವಾದ ಧ್ವನಿಯಿಂದ ನಿಧಾನವಾಗಿ ಶಬ್ದಮಾಡುತ್ತಿವೆ. ಮರಗಳೂ ತಾವು ಹೊತ್ತಿರುವ ಹೊಸಹೂವಿನ ಗೊಂಚಲಿನ ಭಾರದಿಂದ ಪ್ರೀತಿಯಿಂದ ಒಲಿದು ಬಾಗಿದಂತೆ ಏನು ಸೊಗಸಾಗಿದೆ ! ಈ ಪರ್ವತಶ್ರೇಷ್ಠದ ಮರಗಳೂ ಈ ತಪೋಧನರ ಕೈಯಿಂದಲೇ ನಮ್ರತೆಯನ್ನು ಕಲಿತವಾಗಿರಬೇಕಲ್ಲವೇ? ವ|| ಎಂದು ಮೆಚ್ಚುತ್ತ ನಾನು ವಾಸವಾಗಿರಲು ಈ ತಪೋವನವೇ ಪವಿತ್ರವಾದುದು ಎಂದು ಆ ತಪೋವನದ ಮುನಿಜನರ ವಿಶೇಷ ಪ್ರೀತಿಯನ್ನು ಹೆಚ್ಚಿಸಿ ಕಾಮದಲ್ಲಿ ತನಗಿದ್ದ ಪ್ರೀತಿಯನ್ನು ಹೆದರಿ ಓಡಿಹೋಗುವ ಹಾಗೆ ಮಾಡಿ ಆ ಆಶ್ರಮದಲ್ಲಿ ಪಾಂಡುರಾಜನು ಆಶ್ರಮದ ಗುರುವಾಗಿ ಇದ್ದನು. ಈ ಕಡೆ ಧೃತರಾಷ್ಟ್ರನ ಮಹಾರಾಣಿಯಾದ ಗಾಂಧಾರಿಯು ನೂರುಮಕ್ಕಳನ್ನು ಪಡೆಯುವಂತೆ ವ್ಯಾಸಮಹರ್ಷಿಗಳಿಂದ ವರವನ್ನು ಪಡೆದಳೆಂಬುದನ್ನು ಕುಂತಿ ಕೇಳಿ ತಾನೂ ಮಕ್ಕಳನ್ನು ಬಯಸುವವಳಾದಳು. ೧೧೭. ಯುದ್ಧದಲ್ಲಿ ಶತ್ರುರಾಜರನ್ನು ಕತ್ತರಿಸಿ ರಾಶಿಹಾಕುವ ಸಾಮರ್ಥ್ಯವುಳ್ಳ, ಯಾಚಕರಿಗೆ ದ್ರವ್ಯವನ್ನು ಕಸಕ್ಕೆ ಸಮನಾಗಿ ಎಣಿಸಿ ದಾನಮಾಡುವ ತಮ್ಮ ಪರಾಕ್ರಮವನ್ನು ದಿಕ್ಕುಗಳ ಕೊನೆಯಲ್ಲಿಯೂ ಪ್ರಸಾರ ಮಾಡಲು ಸಮರ್ಥರಾದ ಮಕ್ಕಳುಗಳನ್ನು ಕೊಡದೆ ನೋಡು ನೋಡುತ್ತಿರುವ ಹಾಗೆಯೇ ನನ್ನ (ತಿಂಗಳ ಮುಟ್ಟು) ರಜಸ್ವಲೆತನವು ಕಬ್ಬಿನ ಹೂವಿನಂತೆ ನಿಷಲವಾಯಿತು. ವ|| ಎಂಬ ಚಿಂತೆಯಿಂದ ಕೂಡಿದ್ದ ಕುಂತಿಯನ್ನು ನೋಡಿ ಪಾಂಡುರಾಜನು ರಹಸ್ಯವಾಗಿ ಹೀಗೆಂದು ಹೇಳಿದನು. ೧೧೮. ಕೃಶೋದರಿಯಾದ ಎಲೌ ಕುಂತಿಯೇ ಈ ಚಿಂತೆಯೇಕೆ ನಿನಗೆ? ನಮ್ಮ ವಂಶಕ್ಕೆ ನೇರವಾಗಿ ಪುತ್ರಸಂತಾನದ ಪ್ರಾಪ್ತಿಯಾಗಬೇಕಾದರೆ ಇನ್ನು ಮೇಲೆ ನೀನು ಹೀಗಿರಬೇಡ; ಋಷಿಶ್ರೇಷ್ಠರಿಂದ ನಿನ್ನ ಇಷ್ಪಾರ್ಥಸಿದ್ಧಿಯಾಗುವ ಹಾಗೆ ನಿನ್ನ ವಿಶೇಷವಾದ ಪತಿವ್ರತಾಗುಣದಿಂದ ನೀನು ಪೂಜೆಮಾಡಿ ಅವರನ್ನು ಮೆಚ್ಚಿಸು. ದಿಕ್ಕುಗಳ ಕೊನೆಯವರೆಗೆ ವ್ಯಾಪ್ತಿಯಾದ

ವ|| ಎಂದೊಡೆ ಕೊಂತಿಯಿಂತೆಂದಳೆನ್ನ ಕನ್ನಿಕೆಯಾ ಕಾಲದೊಳ್ ನಾನೆನ್ನ ಮಾವಂ ಕೊಂತಿಭೋಜನ ಮನೆಯೊಳ್ ಬಳೆವಂದು ದುರ್ವಾಸ ಮಹಾಮುನಿಯರೆಮ್ಮ ಮನೆಗೆ ನಿಚ್ಚಕ್ಕಂ ಬರ್ಪರವರೆನ್ನ ವಿನಯಕ್ಕಂ ಭಕ್ತಿಗಂ ಬೆಸಕೆಯ್ವುದರ್ಕಂ ಮೆಚ್ಚಿ ಮಂತ್ರಾಕ್ಷರಂಗಳನಯ್ದಂ ವರವಿತ್ತರೀಯಯ್ದು ಮಂತ್ರಕಯ್ವರ್ಮಕ್ಕಳಂ ನಿನ್ನ ಬಗೆಗೆ ಬಂದವರನಾಹ್ವಾನಂ ಗೆಯ್ಯಲವರ ಪೋಲ್ವೆಯ ಮಕ್ಕಳಂ ಪಡೆವೆಯೆಂದು ಬೆಸಸಿದೊಡೀಗಳೆನ್ನ ಪುಣ್ಯದಿಂ ದೊರೆಕೊಂಡು ದೊಳ್ಳಿತ್ತೆಂಬುದಂ ದಿವ್ಯಮುನಿವಾಕ್ಯಮಮೋಘವಾಕ್ಯಮಕ್ಕುಮದರ್ಕೇನುಂ ಚಿಂತಿಸಲ್ವೇಡೆಂ ದೊಡಂತೆ ಗೆಯ್ವೆನೆಂದು ತೀರ್ಥಜಲಂಗಳಂ ಮಿಂದು ದಳಿಂಬವನುಟ್ಟು ಮುತ್ತಿನ ತೊಡಿಗೆಗಳಂ ತೊಟ್ಟು ದರ್ಭಶಯನದೊಳಿರ್ದು-

ಉ|| ಜ್ಞಾನದಿನಿರ್ದು ನಿಟ್ಟಿಪೊಡೆ ದಿವ್ಯ ಮುನೀಂದ್ರನ ಕೊಟ್ಟ ಮಂತ್ರ ಸಂ
ತಾನಮನೋದಿಯೋದಿ ಯಮರಾಜನನದ್ಭುತತೇಜನಂ ಸರೋ|
ಜಾನನೆ ಜಾನದಿಂ ಬರಿಸೆ ಬಂದು ಯಮಂ ಬೆಸನಾವುದಾವುದಾ
ತ್ಮಾನುಗತಾರ್ಥಮೆಂದೊಡನಗೀವುದು ನಿನ್ನನೆ ಪೋಲ್ವ ಪುತ್ರನಂ|| ೧೧೯

ವ|| ಎಂಬುದುಂ ತಥಾಸ್ತುವೆಂದು ತನ್ನಂಶಮನಾಕೆಯ ಗರ್ಭದೊಳವತರಿಸಿ ಯಮಭಟ್ಟಾರಕನಂತರ್ಧಾನಕ್ಕೆ ಸಂದನನ್ನೆಗಮಾ ಕಾಂತೆಗೆ-

ಚಂ|| ಹಿಮ ಧವಳಾತಪತ್ರಮನೆ ಪೋಲೆ ಮುಖೇಂದುವ ಬೆಳ್ಪು ಪೂರ್ಣ ಕುಂ
ಭಮನೆ ನಿರಂತರಂ ಗೆಲೆ ಕುಚಂಗಳ ತೋರ್ಪು ಪತಾಕೆಯೊಂದು ವಿ|
ಭ್ರಮಮನೆ ಪೋಲೆ ಪುರ್ವಿನ ಪೊಡರ್ಪೊಳಕೊಂಡುದವಳ್ಗೆ ಗರ್ಭ ಚಿ
ಹ್ನಮೆ ಗಳ ಗರ್ಭದರ್ಭಕನ ಸೂಚಿಪ ಮುಂದಣ ರಾಜ್ಯಚಿಹ್ನಮಂ|| ೧೨೦

ವ|| ಅಂತು ಕೊಂತಿಯ ಗರ್ಭಭಾರಮುಂ ತಾಪಸಾಶ್ರಮದನುರಾಗಮುಮೊಡನೊಡನೆ ಬಳೆಯೆ ಬಂಧುಜನದ ಮನೋರಥಂಗಳು ಮೊಂಬತ್ತನೆಯ ತಿಂಗಳುಮೊಡನೊಡನೆ ನೆಯೆ-

ಕಂ|| ವನನಿಯಿಂದಂ ಚಂದ್ರಂ
ವಿನತೋದರದಿಂ ಗರುತ್ಮನುದಯಾಚಳದಿಂ|
ದಿನಪನೊಗೆವಂತೆ ಪುಟ್ಟಿದ
ನನಿವಾರ್ಯ ಸುತೇಜನೆನಿಪನಿನಜನ ತನಯಂ|| ೧೨೧

ಯಶಸ್ಸಿನಿಂದ ಕೂಡಿದ ಶ್ರೇಷ್ಠರಾದ ಮಕ್ಕಳನ್ನು ಪಡೆಯುತ್ತೀಯೆ ವ|| ಎಂದು ಹೇಳಲು ಕುಂತಿಯು ಹೀಗೆಂದಳು- ನಾನು ಕನ್ನಿಕೆಯಾಗಿ ನನ್ನ ಮಾವನಾದ ಕುಂತಿಭೋಜನ ಮನೆಯಲ್ಲಿ ಬೆಳೆಯುತ್ತಿರುವಾಗ ದುರ್ವಾಸ ಮಹರ್ಷಿಗಳು ನಮ್ಮ ಮನೆಗೆ ಪ್ರತಿದಿನವೂ ಬರುತ್ತಿದ್ದವರು ನನ್ನ ವಿನಯಕ್ಕೂ ಭಕ್ತಿಗೂ ಸೇವೆ ಮಾಡಿದುದಕ್ಕೂ ಮೆಚ್ಚಿ ಅಯ್ದು ಮಂತ್ರಾಕ್ಷರಗಳನ್ನು ವರವಾಗಿ ಕೊಟ್ಟರು. ಈ ಅಯ್ದು ಮಂತ್ರಕ್ಕೂ ನಿನ್ನ ಮನಸ್ಸಿಗೆ ಬಂದವರನ್ನು ನೆನೆದು ಆಹ್ವಾನ ಮಾಡಲು ಅವರನ್ನು ಹೋಲುವ ಅಯ್ದು ಮಕ್ಕಳನ್ನು ಪಡೆಯುತ್ತೀಯೆ ಎಂದು ಅಪ್ಪಣೆ ಕೊಡಿಸಿದರು. ಈಗ ಅದು ನನ್ನ ಪುಣ್ಯದಿಂದ ದೊರೆಕೊಂಡುದು ಒಳ್ಳೆಯದಾಯಿತು ಎಂದು ಹೇಳಿದಳು. ಪಾಂಡುವು ‘ದಿವ್ಯಋಷಿಗಳ ಮಾತು ಬಹುಬೆಲೆಯುಳ್ಳದ್ದು ; ಅದಕ್ಕೇನೂ ಯೋಚಿಸಬೇಡ, ಹಾಗೆಯೇ ಮಾಡು’ ಎಂದುನು. ಕುಂತಿಯು ಹಾಗೆಯೇ ಮಾಡುತ್ತೇನೆಂದು ಹೇಳಿ ಪವಿತ್ರ ತೀರ್ಥಗಳಲ್ಲಿ ಸ್ನಾನಮಾಡಿ ಶುಭ್ರವಸ್ತ್ರವನ್ನು ಧರಿಸಿ ಮುತ್ತಿನ ಆಭರಣವನ್ನು ತೊಟ್ಟು ದರ್ಭೆಯಿಂದ ಮಾಡಿದ ಹಾಸಿಗೆ ಮೇಲಿದ್ದು ೧೧೯. ಋಷಿಶ್ರೇಷ್ಠನಾದ ದುರ್ವಾಸನು ಕೊಟ್ಟ ಮಂತ್ರಸಮೂಹವನ್ನು ಜ್ಞಾನದಿಂದ ಏಕಾಗ್ರಚಿತ್ತದಿಂದ ಪಠನಮಾಡಿ ಕಮಲಮುಖಿಯಾದ ಆ ಕುಂತಿಯು ಅದ್ಭುತವಾದ ತೇಜಸ್ಸಿನಿಂದ ಕೂಡಿದ ಯಮರಾಜನನ್ನು ಆಹ್ವಾನಿಸಿದಳು. ಯಮನು ಬಂದು ‘ಮಾಡಬೇಕಾದ ಕಾರ್ಯವಾವುದು ನಿನ್ನ ಇಷ್ಟಾರ್ಥವೇನು’ ಎಂದನು. ‘ನಿನ್ನನ್ನು ಹೋಲುವ ಮಗನನ್ನು ನನಗೆ ದಯಪಾಲಿಸಬೇಕು’ ಎಂದಳು. ವ|| ಯಮಭಟ್ಟಾರಕನು ‘ತಥಾಸ್ತು’ ಎಂದು ತನ್ನಂಶವನ್ನು ಅವಳ ಗರ್ಭದಲ್ಲಿ ಇಳಿಸಿಟ್ಟು ಮರೆಯಾದನು. ಆಗ

೧೨೦. ಅವಳ ಮುಖಕಮಲದ ಬಿಳುಪು ಹಿಮದಂತೆ ಬೆಳ್ಳಗಿರುವ ಶ್ವೇತಚ್ಛತ್ರವನ್ನು ಸೂಚಿಸಿತು. ಕಪ್ಪುಸ್ತನಗಳು ಪೂರ್ಣಕುಂಭಗಳ ಆಕಾರವನ್ನು ಪಡೆದವು. ಹುಬ್ಬಿನ ವಿಸ್ತಾರವು ಧ್ವಜದ ವಿಸ್ತಾರವನ್ನು ಪ್ರದರ್ಶಿಸಿತು. ಅವಳ ಗರ್ಭದಲ್ಲಿರುವ ಬಾಲಕನ ಮುಂದಣ ರಾಜ್ಯಚಿಹ್ನವನ್ನು ಸೂಚಿಸುವಂತೆ ಅವಳಿಗೆ ಗರ್ಭಚಿಹ್ನೆಗಳುಂಟಾದವು. ವ|| ಹಾಗೆ ಕುಂತಿಯ ಗರ್ಭಭಾರವೂ ಆ ತಪಸ್ವಿಗಳ ಆಶ್ರಮದ ಪ್ರೀತಿಯೂ ಜೊತೆಜೊತೆಯಲ್ಲಿಯೇ ಅಭಿವೃದ್ಧಿಯಾಗುತ್ತಿರಲು ಅವಳ ಬಂಧುಜನದ ಇಷ್ಟಾರ್ಥವೂ ಒಂಬತ್ತನೆಯ ತಿಂಗಳೂ ಒಟ್ಟಿಗೆ ಪೂರ್ಣವಾದುವು. ೧೨೧. ಸಮುದ್ರದಿಂದ ಚಂದ್ರನೂ ವಿನತಾದೇವಿಯ ಹೊಟ್ಟೆಯಿಂದ ಗರುಡನೂ ಉದಯಪರ್ವತದಿಂದ ಸೂರ್ಯನೂ

ಪುಟ್ಟುವುದುಂ ಧರ್ಮಮುಮೊಡ
ವುಟ್ಟಿದುದೀತನೊಳೆ ಧರ್ಮನಂಶದೊಳೀತಂ|
ಪುಟ್ಟಿದನೆಂದಾ ಶಿಶುಗೊಸೆ
ದಿಟ್ಟುದು ಮುನಿಸಮಿತಿ ಧರ್ಮಸುತನೆನೆ ಪೆಸರುಂ|| ೧೨೨

ವ|| ಅಂತು ಪೆಸರನಿಟ್ಟು ಪರಕೆಯಂ ಕೊಟ್ಟು-

ಕಂ|| ಸಂತಸದಿನಿರ್ದು ಮಕ್ಕಳ
ಸಂತತಿಗೀ ದೊರೆಯರಿನ್ನುಮಾಗದೊಡೆಂತುಂ|
ಸಂತಸಮೆನಗಿಲ್ಲೆಂದಾ
ಕಾಂತೆ ಸುತಭ್ರಾಂತೆ ಮುನ್ನಿನಂತೆವೊಲಿರ್ದಳ್|| ೧೨೩

ಮಂತ್ರಾಕ್ಷರ ನಿಯಮದಿನಭಿ
ಮಂತ್ರಿಸಿ ಬರಿಸಿದೊಡೆ ವಾಯುದೇವಂ ಬಂದೇಂ|
ಮಂತ್ರಂ ಪೇೞೆನೆ ಕುಡು ರಿಪು
ತಂತ್ರಕ್ಷಯಕರನನೆನಗೆ ಹಿತನಂ ಸುತನಂ|| ೧೨೪

ವ|| ಎಂಬುದುಮದೇವಿರಿದಿತ್ತೆನೆಂದು ವಿಯತ್ತಳಕ್ಕೊಗೆದೊಡಾತನಂಶಮಾಕೆಯ ಗರ್ಭ ಸರೋವರದೊಳಗೆ ಚಂದ್ರಬಿಂಬದಂತೆ ಸೊಗಯಿಸೆ-

ಚಂ|| ತ್ರಿವಳಿಗಳುಂ ವಿರೋ ನೃಪರುತ್ಸವಮುಂ ಕಿಡೆವಂದುವಾನನೇಂ
ದುವ ಕಡುವೆಳ್ಪು ಕೂಸಿನ ನೆಗೞ್ತೆಯ ಬೆಳ್ಪುವೊಲಾಯ್ತು ಮುನ್ನೆ ಬ|
ಳ್ಕುವ ನಡು ತೋರ್ಪ ಮೆಯ್ಯನೊಳಕೊಂಡುದು ಪೊಂಗೊಡನಂ ತಮಾಳ ಪ
ಲ್ಲವದೊಳೆ ಮುಚ್ಚಿದಂದದೊಳೆ ಚೂಚುಕಮಾಂತುದು ಕರ್ಪನಾಕೆಯಾ|| ೧೨೫

ಕಂ|| ಆ ಸುದತಿಯ ಮೃದು ಪದ ವಿ
ನ್ಯಾಸಮುಮಂ ಶೇಷನಾನಲಾರದೆ ಸುಯ್ದಂ|
ಬೇಸಱನೆಂದೊಡೆ ಗರ್ಭದ
ಕೂಸಿನ ಬಳೆದಳವಿಯಳವನಳೆವರುಮೊಳರೇ|| ೧೨೬

ವ|| ಅಂತು ಗರ್ಭನಿರ್ಭರ ಪ್ರದೇಶದೊಳರಾತಿಗಳ್ಗಂತಕಾಲಂ ದೊರೆಕೊಳ್ವಂತೆ ಪ್ರಸೂತಿ ಕಾಲಂ ದೊರೆಕೊಳೆ-

ಹುಟ್ಟುವಂತೆ ತೇಜೋಮೂರ್ತಿಯಾದ ಯಮಪುತ್ರನು ಜನಿಸಿದನು. ೧೨೨. ಇವನು ಹುಟ್ಟಲಾಗಿ ಇವನೊಡನೆಯೇ ಧರ್ಮವೂ ಹುಟ್ಟಿತು. ಯಮಧರ್ಮನ ಅಂಶದಿಂದ ಈತ ಹುಟ್ಟಿದ್ದಾನೆ ಎಂದು ಆ ಋಷಿಸಮೂಹವು ಆ ಮಗುವಿಗೆ ಪ್ರೀತಿಯಿಂದ ಧರ್ಮಸುತನೆಂಬ ಹೆಸರನ್ನಿಟ್ಟಿತು. ವ|| ಹಾಗೆ ಹೆಸರಿಟ್ಟು ಹರಕೆಯನ್ನು ಕೊಟ್ಟರು ೧೨೩. ಸಂತೋಷದಿಂದಿದ್ದು ಮಕ್ಕಳ ಸಂತತಿಗೆ ಇವನಿಗೆ ಸಮಾನರಾದ ಇನ್ನೂ ಇತರರೂ ಆಗದಿದ್ದರೆ ಹೇಗೂ ನನಗೆ ಸಂತೋಷವಿಲ್ಲ ಎಂದು ಮಕ್ಕಳ ಭ್ರಮೆಯಿಂದ ಕೂಡಿದ ಆ ಕುಂತಿಯು ಮೊದಲಿನ ಹಾಗೆಯೇ ಇದ್ದಳು. ೧೨೪. (ಅಲ್ಲದೆ) ಮಂತ್ರಾಕ್ಷರವನ್ನು ಜಪಿಸುವ ವಿಯಿಂದ ವಾಯುದೇವನನ್ನು ಆಹ್ವಾನಿಸಿ ಬರಿಸಲಾಗಿ ಅವನು ‘ಇಷ್ಟಾರ್ಥವೇನು ಹೇಳು’ ಎನ್ನಲು ‘ವೈರಿಸೈನ್ಯವನ್ನು ನಾಶಪಡಿಸುವವನು ಎನ್ನಿಸಿಕೊಳ್ಳುವ ಹಿತನಾದ ಮಗನನ್ನು ಕೊಡು’ ಎಂದಳು. ವ|| ವಾಯುದೇವನು ‘ಇದೇನು ಮಹಾ ದೊಡ್ಡದು. ಕೊಟ್ಟಿದ್ದೇನೆ’ ಎಂದು ಹೇಳಿ ಆಕಾಶಪ್ರದೇಶಕ್ಕೆ ನೆಗೆಯಲು, ಆತನಂಶವು ಅವಳ ಗರ್ಭಸರೋವರದಲ್ಲಿ ಚಂದ್ರಬಿಂಬದಂತೆ ಸೊಗಯಿಸಿತು. ೧೨೫. ಅವಳ ಹೊಟ್ಟೆಯ ಮೇಲಿನ ಮೂರು ಮಡಿಪು (ರೇಖೆ)ಗಳೂ ವೈರಿರಾಜರ ಸಂತೋಷವೂ (ಒಟ್ಟಿಗೆ) ನಾಶವಾದುವು. ಅವಳ ಮುಖದಲ್ಲಿರುವ ಹೆಚ್ಚಾದ ಬಿಳುಪುಬಣ್ಣವು ಗರ್ಭದಲ್ಲಿರುವ ಮಗುವಿನ ಯಶಸ್ಸಿನ ಬಿಳಿಯ ಬಣ್ಣದಂತಾಯಿತು. ಮೊದಲು ಬಳುಕುತ್ತಿದ್ದ ನಡುವು ದಪ್ಪನಾದ ಆಕಾರವನ್ನು ಪಡೆಯಿತು. ಅವಳ ಮೊಲೆಯ ತೊಟ್ಟು ಚಿನ್ನದ ಕಲಶವನ್ನು ಹೊಂಗೆಯ ಚಿಗುರಿನಿಂದ ಮುಚ್ಚಿದಂತೆ ಕಪ್ಪುಬಣ್ಣವನ್ನು ತಾಳಿತು. ೧೨೬. ಸುಂದರವಾದ ದಂತಪಂಕ್ತಿಯಿಂದ ಕೂಡಿದ ಆ ಕುಂತಿಯು ಮೃದುವಾದ ಹೆಜ್ಜೆಯಿಡುವುದನ್ನು ಆದಿಶೇಷನು ತಾಳಲಾರದೆ ಕಷ್ಟದಿಂದ ನಿಟ್ಟುಸಿರು ಬಿಟ್ಟನು, ಎಂದರೆ ಗರ್ಭದಲ್ಲಿರುವ ಕೂಸು ಬೆಳೆದ ಅಳತೆಯ ಪ್ರಮಾಣವನ್ನು ಅಳೆಯುವವರೂ ಇದ್ದಾರೆಯೇ? (ಇಲ್ಲವೆಂದೇ ಅರ್ಥ) ವ|| ಹಾಗೆ

ಕಂ|| ಶುಭ ತಿಥಿ ಶುಭ ನಕ್ಷತ್ರಂ
ಶುಭ ವಾರಂ ಶುಭ ಮುಹೂರ್ತಮೆನೆ ಗಣಕನಿಳಾ|
ಪ್ರಭುವೊಗೆದನುದಿತ ಕಾಯ
ಪ್ರಭೆಯೊಗೆದಿರೆ ದಳಿತ ಶತ್ರುಗೋತ್ರಂ ಪುತ್ರಂ|| ೧೨೭

ಭೀಮಂ ಭಯಂಕರಂ ಪೆಱ
ತೇ ಮಾತೀ ಕೂಸಿನಂದವಿತನ ಪೆಸರುಂ|
ಭೀಮನೆ ಪೋಗೆನೆ ಮುನಿಜನ
ವಿ ಮಾೞ್ಕೆಯಿನಾಯ್ತು ಶಿಶುಗೆ ಪೆಸರನ್ವರ್ಥಂ|| ೧೨೮

ವ|| ಅಂತು ಭರತಕುಲತಿಲಕರಪ್ಪಿರ್ವರ್ಮಕ್ಕಳಂ ಪೆತ್ತು ಕೊಂತಿ ಸಂತಸದಂತ ಮನೆಯ್ದಿರ್ಪುದುಮತ್ತ ಧೃತರಾಷ್ಟ್ರನ ಮಹಾದೇವಿಯಪ್ಪ ಗಾಂಧಾರಿ ಕೇಳ್ದು ತನ್ನ ಗರ್ಭಂ ತಡೆದುದರ್ಕೆ ಕಿನಿಸಿ ಕಿಂಕಿರಿವೋಗಿ-

ಕಂ|| ಸಂತತಿಗೆ ಪಿರಿಯ ಮಕ್ಕಳ
ನಾಂ ತಡೆಯದೆ ಪಡೆವೆನೆಂದೊಡೆನ್ನಿಂ ಮುನ್ನಂ|
ಕೊಂತಿಯೆ ಪಡೆದಳ್ ಗರ್ಭದ
ಚಿಂತೆಯದಿನ್ನೇವುದೆಂದು ಬಸಿಱಂ ಪೊಸೆದಳ್|| ೧೨೯

ಪೊಸೆದೊಡೆ ಪಾಲ್ಗಡಲಂ ಮಗು
ೞ್ದಸುರರ್ ಪೊಸೆದಲ್ಲಿ ಕಾಳಕೂಟಾಂಕುರಮಂ|
ದಸದಳಮೊಗೆದಂತೊಗೆದುವು
ಬಸಿಱಂ ನೂಂದು ಪಿಂಡಮರುಣಾಕೀರ್ಣಂ|| ೧೩೦

ವ|| ಅವಂ ಕಂಡು ಕಿನಿಸಿ ಪರ್ಚೆೞವೆಲ್ಲವಂ ಪೊಱಗೆ ಬಿಸುಟು ಬನ್ನಿಮೆಂಬುದುಂ ವ್ಯಾಸಭಟ್ಟಾರಕಂ ಬಂದು ಗಾಂಧಾರಿಯಂ ಬಗ್ಗಿಸಿ-

ಚಂ|| ಒದವುಗೆ ನಿನ್ನ ಸಂತತಿಗೆ ನೂರ್ವರುದಗ್ರ ಸುತರ್ಕಳೊಂದೆ ಗ
ರ್ಭದೊಳೆನೆ ಕೆಮ್ಮನಿಂತು ಪೊಸೆದಿಕ್ಕಿದೆ ಪೊಲ್ಲದುಗೆಯ್ದೆಯೆಂದು ಮಾ|
ಣದೆ ಮುನಿ ನೂಱುಪಿಂಡಮುಮನಾಗಳೆ ತೀವಿದ ಕಮ್ಮನಪ್ಪ ತು
ಪ್ಪದ ಕೊಡದೊಳ್ ಸಮಂತು ಮಡಗಿಟ್ಟೊಡೆ ಸೃಷ್ಟಿಗೆ ಚೋದ್ಯಮಪ್ಪಿನಂ|| ೧೩೧

ಗರ್ಭವು ಬೆಳೆಯುತ್ತಿದ್ದೆಡೆಯಲ್ಲಿ ಶತ್ರುಗಳಿಗೆ ಅವಸಾನಕಾಲವುಂಟಾಗುವ ಹಾಗೆ ಹೆರಿಗೆಯ ಕಾಲವು ಸಮೀಪಿಸಲು- ೧೨೭. ಜೋಯಿಸನು ಶುಭತಿಥಿ, ಶುಭನಕ್ಷತ್ರ, ಶುಭಮುಹೂರ್ತ ಎಂದು ಹೇಳುತ್ತಿರಲು ಜೊತೆಯಲ್ಲಿಯೇ ಹುಟ್ಟಿದ ಶರೀರಕಾಂತಿಯು ಹರಡುತ್ತಿರಲು ಲೋಕಕ್ಕೆಲ್ಲ ರಾಜನೂ ಶತ್ರುಸಂಹಾರಕನೂ ಆದ ಮಗನು ಹುಟ್ಟಿದನು. ೧೨೮. ಈ ಮಗುವಿನ ರೀತಿ ಅತಿಭಯಂಕರವಾದುದು. ಬೇರೆಯ ಮಾತೇನು? ಅವನ ಹೆಸರು ಕೂಡ ಭೀಮನೆಂದೇ ಆಗಲಿ ಎಂದು ಋಷಿಗಳು ಎನ್ನಲು ಅದೇ ರೀತಿ ಆ ಶಿಶುವಿಗೆ ಹೆಸರು ಅನ್ವರ್ಥವಾಗಿಯೇ (ಅರ್ಥಕ್ಕೆ ಹೊಂದಿಕೊಳ್ಳುವ ಹಾಗೆ) ಭೀಮನೆಂದಾಯಿತು. ವ|| ಹಾಗೆ ಭರತಕುಲತಿಲಕರಾದ ಇಬ್ಬರು ಮಕ್ಕಳನ್ನು ಹೆತ್ತು (ಪಡೆದು) ಕುಂತಿಯು ಸಂತೋಷದ ಪರಮಾವಯನ್ನು ಹೊಂದಿರಲು ಆ ಕಡೆ ಧೃತರಾಷ್ಟ್ರನ ಮಹಾರಾಣಿಯಾದ ಗಾಂಧಾರಿಯು ಕೇಳಿ ತನ್ನ ಗರ್ಭವು ತಡವಾದುದಕ್ಕೆ ಕೋಪಿಸಿ ಕಿರಿಕಿರಿಯಾಗಿ- ೧೨೯. ವಂಶಕ್ಕೆ ಹಿರಿಯರಾದ ಮಕ್ಕಳನ್ನು ನಾನು (ಸಾವಕಾಶವಿಲ್ಲದೆ) ಮೊದಲು ಪಡೆಯುತ್ತೇನೆಂದಿದ್ದರೆ ನನಗಿಂತ ಮುಂಚೆ ಕುಂತಿಯೇ ಪಡೆದಳು. ಇನ್ನು ಮೇಲೆ ಗರ್ಭದ ಚಿಂತೆಯದೇಕೆ ಎಂದು ಹೊಟ್ಟೆಯನ್ನು ಕಿವುಚಿದಳು. ೧೩೦. ಕ್ಷೀರಸಮುದ್ರವನ್ನು ಪುನ ರಾಕ್ಷಸರು ಕಡೆಯಲು ಅಂದು ಕಾಳಕೂಟವೆಂಬ ವಿಷದ ಮೊಳಕೆ ಅತಿಶಯವಾಗಿ ಹುಟ್ಟಿದ ಹಾಗೆ ಗಾಂಧಾರಿಯ ಗರ್ಭದಿಂದ ರಕ್ತದಿಂದ ತುಂಬಿದ ನೂರೊಂದು ಭ್ರೂಣಗಳು ಹುಟ್ಟಿದುವು. ವ|| ಅವನ್ನು ನೋಡಿ ಕೋಪಿಸಿ ಬೆಂಕಿಬೆಂಕಿಯಾಗಿ ಇವುಗಳೆಲ್ಲವನ್ನೂ ಹೊರಗೆ ಬಿಸಾಡಿಬನ್ನಿ ಎಂದು ಹೇಳಲು ವ್ಯಾಸಮಹರ್ಷಿಯು ಬಂದು ಗಾಂಧಾರಿಯನ್ನು ಗದರಿಸಿ- ೧೩೧. ‘ನಿನ್ನ ಸಂತತಿಗೆ ಒಂದೇ ಗರ್ಭದಲ್ಲಿ ನೂರುಜನ ಶ್ರೇಷ್ಠರಾದ ಮಕ್ಕಳು ಹುಟ್ಟಲಿ ಎಂದಿರಲು ನಿಷ್ಪ್ರಯೋಜನವಾಗಿ ಹೀಗೆ ಹೊಟ್ಟೆಯನ್ನು ಕಿವುಚಿಬಿಟ್ಟೆ, ಅಯೋಗ್ಯವಾದುದನ್ನು ಮಾಡಿದೆ’ ಎಂದು ಬಿಡದೆ ಆ ಋಷಿಯು ಆ ನೂರು ಭ್ರೂಣಗಳನ್ನು ಆಗಲೇ ಗಮಗಮಿಸುವ ತುಪ್ಪದಿಂದ ತುಂಬಿದ ಕೊಡದಲ್ಲಿ ಸುರಕ್ಷಿತವಾಗಿಡಿಸಿದನು. ಸಮಸ್ತಲೋಕಕ್ಕೂ ಆಶ್ಚರ್ಯವುಂಟಾಗುವ ಹಾಗೆ

ವ|| ಅಂತು ನೂರ್ವರೊಳೊರ್ವನಗುರ್ಬು ಪರ್ಬಿ ಪರಕಲಿಸೆ ಸಂಪೂರ್ಣ ವಯಸ್ಕನಾಗಿ ಘೃತಘಟವಿಘಟನುಮಾಗೆ ಪುಟ್ಟುವುದುಂ-

ಕಂ|| ಪ್ರತಿಮೆಗಳೞ್ತುವು ಮೊೞಗಿದು
ದತಿ ರಭಸದೆ ಧಾತ್ರಿ ದೆಸೆಗಳುರಿದುವು ಭೂತ|
ಪ್ರತತಿಗಳಾಡಿದುವೊಳಱದು
ವತಿ ರಮ್ಯಸ್ಥಾನದೊಳ್ ಶಿವಾ ನಿವಹಂಗಳ್|| ೧೩೨

ವ|| ಅಂತೊಗೆದನೇಕೋತ್ಪಾತಂಗಳಂ ಕಂಡು ಮುಂದಱವ ಚದುರ ವಿದುರನಿಂತೆಂದಂ-

ಕಂ|| ಈತನೆ ನಮ್ಮ ಕುಲಕ್ಕಂ
ಕೇತು ದಲಾನಱವೆನಲ್ಲದಂದೇಕಿನಿತು|
ತ್ಪಾತಂ ತೋರ್ಪುವು ಬಿಸುಡುವು
ದೀತನ ಪೆಱಗುೞದ ಸುತರೆ ಸಂತತಿಗಪ್ಪರ್|| ೧೩೩

ವ|| ಎಂದೊಡಂ ಪುತ್ರಮೋಹ ಕಾರಣಮಾಗಿ ಧೃತರಾಷ್ಟ್ರನುಂ ಗಾಂಧಾರಿಯುಮೇಗೆಯ್ದುಮೊಡಂಬಡದಿರ್ದೊಡುತ್ಪಾತ ಶಾಂತಿಕ ಪೌಷ್ಟಿಕ ಕ್ರಿಯೆಗಳಂ ಮಹಾ ಬ್ರಾಹ್ಮಣರಿಂದಂ ಬಳೆಯಿಸಿ ಬದ್ದವಣಮಂ ಬಾಜಿಸಿ ಮಂಗಳಮಂ ಪಾಡಿಸಿ ಕೂಸಿಂಗೆ ದುರ್ಯೋಧನನೆಂದು ಪೆಸರನಿಟ್ಟು ಮತ್ತಿನ ಕೂಸುಗಳ್ಗೆಲ್ಗಂ ದುಶ್ಶಾಸನಾದಿಯಾಗಿ ನಾಮಂಗಳನಿಟ್ಟು ಪರಕೆಯಂ ಕೊಟ್ಟು-

ಮ|| ಸುಕಮಿರ್ಪನ್ನೆಗಮಿತ್ತ ಕುಂತಿ ಶತಶೃಂಗಾದ್ರೀಂದ್ರದೊಳ್ ದಿವ್ಯ ಬಾ
ಲಕನಿನ್ನೊರ್ವನನುಗ್ರವೈರಿ ಮದವನ್ಮಾತಂಗ ಕುಂಭಾರ್ದ್ರ ಮೌ|
ಕ್ತಿಕ ಲಗ್ನೋಜ್ಜ ಲ ಬಾಣನಂ ಪ್ರವಿಲಸದ್ಗೀರ್ವಾಣ ದಾತವ್ಯ ಸಾ
ಯಕ ಸಂಪೂರ್ಣ ಕಳಾಪ್ರವೀಣನನಿಳಾಭಾರ ಕ್ಷಮಾಕ್ಷೂಣನಂ|| ೧೩೪

ವ|| ಅಂತು ಸರ್ವ ಲಕ್ಷಣ ಸಂಪೂರ್ಣನಪ್ಪ ಮಗನನಮೋಘಂ ಪಡೆವೆನೆಂಬುದ್ಯೋಗಮನೆತ್ತಿಕೊಂಡು ಪಾಂಡುರಾಜನಂ ತಾನುಂ-

ಚಂ|| ಎಱಗಿಯುಮೊರ್ಮೆ ದಿವ್ಯ ಮುನಿಗಾರ್ತುಪವಾಸಮನಿರ್ದುಮೊರ್ಮೆ ಕೊ
ಯ್ದಱಕೆಯ ಪೂಗಳಿಂ ಶಿವನನರ್ಚಿಸಿಯುಂ ಬಿಡದೊರ್ಮೆ ನೋಂತುಮೋ||
ದಱವರ ಪೇೞ್ದ ನೋಂಪಿಗಳನೊರ್ಮೆ ಪಲರ್ಮೆಯುಮಿಂತು ತಮ್ಮ ಮೆ
ಯ್ಮವಿನಮಿರ್ವರುಂ ನಮೆದರೇನವರ್ಗಾದುದೊ ಪುತ್ರದೋಹಳಂ|| ೧೩೫

ಅವುಗಳು ಅಲ್ಲಿ ಬೆಳೆದವು. ವ|| ಆ ನೂರುಜನರಲ್ಲಿ ಒಬ್ಬನು ಭಯವು ಹಬ್ಬಿ ಹರಡುವ ಹಾಗೆ ತುಂಬಿದ ಪ್ರಾಯವುಳ್ಳವನಾಗಿ ತುಪ್ಪದ ಕೊಡವನ್ನು (ಮಡಕೆ) ಒಡೆದುಕೊಂಡು ಹುಟ್ಟಿಬಂದನು. ೧೩೨. ಆಗ (ಅರಮನೆಯಲ್ಲಿದ್ದ) ವಿಗ್ರಹಗಳು ರೋದನಮಾಡಿದುವು; ಬಹು ರಭಸದಿಂದ ಭೂಮಿಯು ಗುಡುಗಿತು. ದಿಕ್ಕುಗಳು ಹತ್ತಿ ಉರಿದುವು; ಪಿಶಾಚಿಗಳ ಸಮೂಹವು ಕುಣಿದಾಡಿದುವು. ಅತಿಮನೋಹರವಾದ ಸ್ಥಳಗಳಲ್ಲೆಲ್ಲ ನರಿಯ ಗುಂಪುಗಳು ಕೂಗಿಕೊಂಡವು. ವ|| ಹಾಗೆ ಉಂಟಾದ ಅನೇಕ ಉತ್ಪಾತ (ಅಪಶಕುನ)ಗಳನ್ನು ಕಂಡು ಭವಿಷ್ಯಜ್ಞಾನಿಯೂ ಬುದ್ಧಿವಂತನೂ ಆದ ವಿದುರನು ಹೀಗೆಂದನು. ೧೩೩. ಈತನೇ ನಮ್ಮ ವಂಶವನ್ನು ಹಾಳುಮಾಡುವ ಕೇತುಗ್ರಹ; ಹಾಗಿಲ್ಲದಿದ್ದರೆ ಏಕೆ ಇಷ್ಟು ದುರ್ನಿಮಿತ್ತಗಳಾಗುತ್ತಿದ್ದುವು. ಇವನನ್ನು ಹೊರಗೆ ಎಸೆಯುವುದು. ಇವನ ಹಿಂದೆಯ ಉಳಿದವರೇ ವಂಶೋದ್ಧಾರಕರಾಗುತ್ತಾರೆ. ವ|| ಎಂಬುದಾಗಿ ಹೇಳಿದರೂ ಪುತ್ರಮೋಹ ಕಾರಣದಿಂದ ಧೃತರಾಷ್ಟ್ರನೂ ಗಾಂಧಾರಿಯೂ ಏನು ಮಾಡಿದರೂ (ಎಸೆಯುವುದಕ್ಕೆ) ಒಪ್ಪದಿರಲು ಉತ್ಪಾತಶಾಂತಿಗಾಗಿಯೂ ಮಂಗಳವರ್ಧನಕ್ಕಾಗಿಯೂ ಶಾಂತಿಕರ್ಮಗಳನ್ನು ಬ್ರಾಹ್ಮಣರಿಂದ ಮಾಡಿಸಿ ಮಂಗಳ ವಾದ್ಯವನ್ನು ಹಾಡಿಸಿ ಕೂಸಿಗೆ ದುರ್ಯೋಧನನೆಂದು. ಹೆಸರಿಟ್ಟು ಉಳಿದ ಮಕ್ಕಳಿಗೆಲ್ಲ ದುಶ್ಶಾಸನನೇ ಮೊದಲಾದ ಹೆಸರುಗಳನ್ನಿಟ್ಟು ಆಶೀರ್ವಾದ ಮಾಡಿದರು. ೧೩೪. ಈ ಕಡೆ ಶ್ರೇಷ್ಠವಾದ ಶತಶೃಂಗಪರ್ವತದಲ್ಲಿ ಕುಂತಿಯು ಭಯಂಕರನಾದ ಶತ್ರುಗಳೆಂಬ ಮದ್ದಾನೆಗಳ ಒದ್ದೆಯಾದ ಮುತ್ತುಗಳು ಅಂಟಿಕೊಂಡಿರುವ ಉಜ್ವಲವಾದ ಬಾಣಗಳನ್ನುಳ್ಳವನೂ ದೇವತೆಗಳಿಂದ ಕೊಡಲ್ಪಟ್ಟ ದಿವ್ಯಾಸ್ತ್ರಪ್ರಯೋಗದಲ್ಲಿ ಸಂಪೂರ್ಣ ನಿಪುಣನಾಗಿರುವವನೂ ರಾಜ್ಯಭಾರ ಮಾಡುವ ಶಕ್ತಿಯಲ್ಲಿ ಸ್ವಲ್ಪವೂ ಊನವಿಲ್ಲದವನೂ ವ|| ಹಾಗೆಯೇ ಸರ್ವಲಕ್ಷಣ ಸಂಪೂರ್ಣನೂ ಆದ ಮಗನನ್ನು ಬೆಲೆಯಿಲ್ಲದ ರೀತಿಯಲ್ಲಿ ಪಡೆಯಬೇಕೆಂಬ ಕಾರ್ಯದಲ್ಲಿ ತೊಡಗಿ ಪಾಂಡುರಾಜನೂ ತಾನೂ ೧೩೫. ಒಂದು ಸಲ ದಿವ್ಯಮುನಿಗಳಿಗೆ ನಮಸ್ಕಾರ ಮಾಡಿಯೂ ಮತ್ತೊಂದು ಸಲ ಉಪವಾಸವಿದ್ದೂ ಬೇರೊಂದು ಸಲ ಪ್ರಸಿದ್ಧರಾದ ಹೂವುಗಳನ್ನು ಕೊಯ್ದು ಶಿವನನ್ನು ಆರಾಸಿಯೂ ಇನ್ನೊಂದು ಸಲ ಶಾಸ್ತ್ರಜ್ಞರು ಹೇಳಿದ ವ್ರತಗಳನ್ನು ನಿರಂತರ ನಡೆಯಿಸಿಯೂ ಒಂದುಸಲವೂ