ಉ|| ಶ್ರೀಯನರಾಕಿ ಸಾಧನ ಪಯೋನಿಯೊಳ್ ಪಡೆದುಂ ಧರಿತ್ರಿಯಂ
ಜೀಯೆನೆ ಬೇಡಿಕೊಳ್ಳದೆ ವಿರೋ ನರೇಂದ್ರನೊತ್ತಿಕೊಂಡುಮಾ|
ತ್ಮೀಯ ಸುಪುಷ್ಪಪಟ್ಟಮನೊಡಂಬಡೆ ತಾಳ್ದಿಯುಮಿಂತುದಾತ್ತ ನಾ
ರಾಯಣನಾದ ದೇವನೆಮಗೀಗರಿಕೇಸರಿ ಸೌಖ್ಯಕೋಟಿಯಂ||  ೧

ಚಂ|| ಮುಳಿಸು ಲಲಾಟನೇತ್ರಶಿಖಿ ಮೆಚ್ಚೆ ವಿನೂತ ರಸಪ್ರಸಾದಮು
ಜ್ಜಳ ಜಸಮಂಗಸಂಗತ ಲಸದ್ಭಸಿತಂ ಪ್ರಭುಶಕ್ತಿ ಶಕ್ತಿ ನಿ|
ರ್ಮಳಮಣಿಭೂಷಣಂ ಫಣಿವಿಭೂಷಣಮಾಗೆ ನೆಗೞ್ತೆಯಂ ಪುದುಂ
ಗೊಳಿಸಿದನೀಶ್ವರಂ ನೆಗೞ್ದುದಾರ ಮಹೇಶ್ವರನೀಗೆ ಭೋಗಮಂ|| ೨

ಉ|| ಚಂಡ ವಿರೋಸಾಧನ ತಮಸ್ತಮಮೋಡೆ ವಿಶಿಷ್ಟ ಪದ್ಮಿನೀ
ಷಂಡಮರಲ್ದು ರಾಗದಿನೊಱಲ್ದಿರೆ ಯಾಚಕ ಭೃಂಗಕೋಟಿ ಕೈ|
ಕೊಂಡು ನಿರಂತರಂ ತಗುಳ್ದು ಕೀರ್ತಿಸೆ ಮಿಕ್ಕೆಸೆವ ಪ್ರಚಂಡ ಮಾ
ರ್ತಾಂಡನಲರ್ಚುಗೆನ್ನ ಹೃದಯಾಂಬುಜಮಂ ನಿಜ ವಾಙ್ಮರೀಚಿಯಿಂ|| ೩

ಚಂ|| ಸಹಜದ ಚೆಲ್ವಿನೊಳ್ ರತಿಯ ಸೋಲದ ಕೇಳಿಕೆಯೊಳ್ ಪೊದೞ್ದು ಸ
ನ್ನಿಹಿತವೆನಿಪ್ಪಪೂರ್ವ ಶುಭಲಕ್ಷಣ ದೇಹದೊಳೊಳ್ಪನಾಳ್ದು ಸಂ|
ದಹಿಕಟಕ ಪ್ರಸಾದದೆ ಮನೋಜನುಮಂ ಗೆಲೆವಂದನಾಗಳುಂ
ಸಹಜಮನೋಜನೋಜನೆಮಗೀಗೆ ವಿಚಿತ್ರ ರತೋತ್ಸವಂಗಳು|| ೪

೧. ಅಮೃತಮಥನ ಕಾಲದಲ್ಲಿ ಉದ್ಭವಿಸಿದ ಲಕ್ಷ್ಮಿಯನ್ನು ಶ್ರಮವಿಲ್ಲದೆ ಪಡೆದ, ಬಲಿಚಕ್ರವರ್ತಿಯಿಂದ ಬೇಡಿ ಭೂಮಿಯನ್ನು ಪಡೆದ, ಪುಷ್ಪಪಟ್ಟವೆಂಬ ಸಾಮಾನ್ಯ ಶಿರೋಭೂಷಣವನ್ನು ಪಡೆದ ನಾರಾಯಣನಂತಲ್ಲದೆ ಶತ್ರುಸೈನ್ಯವೆಂಬ ಸಮುದ್ರದ ಮಂಥನದಿಂದ ಜಯಲಕ್ಷ್ಮಿಯನ್ನು ಬೇಡದೆ ಶತ್ರುರಾಜರುಗಳನ್ನು ಮೆಟ್ಟಿ ಭೂಮಿಯನ್ನೂ ತನ್ನ ಯೋಗ್ಯತೆಗೆ ಅನುಗುಣವಾದ ಸುಪುಷ್ಪಪಟ್ಟವೆಂಬ ಶಿರೋಭೂಷಣವನ್ನು ಪಡೆದು ಉದಾತ್ತನಾರಾಯಣನೆನಿಸಿಕೊಂಡಿರುವ ದೇವನಾದ ಅರಿಕೇಸರಿಯು ನಮಗೆ ಸೌಖ್ಯರಾಶಿಯನ್ನು ಕೊಡಲಿ.

೨. ಅರಿಕೇಸರಿಯ ಕೋಪವೇ ಈಶ್ವರನ ಹಣೆಗಣ್ಣಿನ ಬೆಂಕಿಯಾಗಿರಲು ಅವನ ಮೆಚ್ಚಿಗೆಯೇ ಶ್ಲಾಘ್ಯವೂ ರಸಯುಕ್ತವೂ ಆದ ಅವನ ಪ್ರಸಾದ. ಅರಿಕೇಸರಿಯ ಯಶಸ್ಸೇ ಈಶ್ವರನು ಶರೀರಕ್ಕೆ ಲೇಪಿಸಿಕೊಂಡಿರುವ ಕಾಂತಿಯುಕ್ತವಾದ ವಿಭೂತಿಯಾಗಿರಲು ಅರಿಕೇಸರಿಯ ಶಕ್ತಿತ್ರಯಗಳಲ್ಲಿ ಒಂದಾದ ಪ್ರಭುಶಕ್ತಿ ಈಶ್ವರನ ಶಕ್ತಿದೇವತೆಯಾಗಿರಲು ಇವನ ನಿರ್ಮಲವಾದ ರತ್ನಭೂಷಣಗಳೇ ಅವನ ನಾಗಭೂಷಣವಾಗಿರಲು ವಿಶೇಷ ಪ್ರಸಿದ್ಧಿಯನ್ನು ತನ್ನಲ್ಲಿ ಅಳವಡಿಸಿಕೊಂಡಿರುವ ಈಶ್ವರನೂ ಉದಾರಮಹೇಶ್ವರನೆಂದು ಪ್ರಸಿದ್ದಿಯನ್ನು ಪಡೆದಿರುವ ಅರಿಕೇಸರಿಯೂ ಸೌಖ್ಯರಾಶಿಯನ್ನು ಕೊಡಲಿ.

೩. ಕ್ರೂರಿಗಳಾದ ಶತ್ರುಸೈನ್ಯವೆಂಬ ಕತ್ತಲೆಯ ಮೊತ್ತವು ಓಡಿಹೋಗುತ್ತಿರುವ ವಿಶೇಷ ಗುಣಗಳಿಂದ ಕೂಡಿದ ತಾವರೆಯ ಸಮೂಹವು (ಅರಿಕೇಸರಿಯ ಪರವಾಗಿ ಪದ್ಮಿನಿ ಜಾತಿಯ ಸ್ತ್ರೀಯರ ಸಮೂಹವು) ಅರಳಿ ಪ್ರೀತಿಸಿ ಸಂತೋಷದಿಂದಿರಲು, ತಿರುಕನೆಂಬ ದುಂಬಿಗಳ ಸಮೂಹವು ತೃಪ್ತಿಯಿಂದ ಎಡಬಿಡದೆ ಹಿಂಬಾಲಿಸಿ ಹೊಗಳುತ್ತಿರಲು ಅತ್ಯಕವಾಗಿ ಪ್ರಕಾಶಿಸುತ್ತಿರುವ ಸೂರ್ಯನೂ ಪ್ರಚಂಡ ಮಾರ್ತಂಡನೆಂಬ ಬಿರುದಿನಿಂದ ಕೂಡಿದ ಅರಿಕೇಸಕರಿಯೂ ತಮ್ಮ ಮಾತೆಂಬ ಕಿರಣದಿಂದ ನನ್ನ ಹೃದಯಕಮಲವನ್ನು ಅರಳಿಸಲಿ.

೪. ತನ್ನ ಹುಟ್ಟಿನಿಂದಲೇ ಸಹಜವಾಗಿ ಬಂದ ಸೌಂದರ್ಯದಿಂದಲೂ ಎಂದೂ ಸೋಲದ ಸಂಭೋಗಕ್ರೀಡೆಯಿಂದಲೂ ಅಪೂರ್ವವಾದ ಶುಭಲಕ್ಷಣಗಳಿಂದ ಕೂಡಿದ ಶರೀರದ ವೈಭವದಿಂದಲೂ ಸರ್ಪಭೂಷಣನಾದ ಈಶ್ವರನ ಪ್ರಸಾದದಿಂದಲೂ ಕೂಡಿ ಸಹಜಮನ್ಮಥನಿಗೂ ಆಚಾರ್ಯನಾಗಿರುವ ಅರಿಕೇಸರಿಯು ಯಾವಾಗಲೂ ರಮಣೀಯವೂ ವೈವಿಧ್ಯಮಯವೂ ಆದ ಸುಖ ಸಂತೋಷಗಳನ್ನು ದಯಪಾಲಿಸಲಿ. (ಮನ್ಮಥನು ಶರೀರವಿಲ್ಲದವನು; ಈಶ್ವರನ ಕೋಪಕ್ಕೆ ಪಾತ್ರನಾದವನು;

ವಕ್ತವ್ಯವಿಶೇಷ : ಈ ಪದ್ಯದಲ್ಲಿ ಬರುವ ‘ಪುಷ್ಪಪಟ್ಟ’ವೆಂಬುದು ಶಿಲ್ಪಾಶಾಸ್ತ್ರಕ್ಕೆ ಸಂಬಂಸಿದ ಶಬ್ದ. ರಾಜರೂ ದೇವತೆಗಳೂ ಧರಿಸುವ ಶಿರೋವೇಷ್ಪನಗಳಲ್ಲಿ ಜಟಾ, ಮೌಳಿ, ಕಿರೀಟ, ಕರಂಡ, ಶಿರಸ್ತ್ರಕ, ಕುಂಡಲ, ಕೇಶಬಂಧ, ಧಮ್ಮಿಲ, ಅಲಕ, ಚೂಡ, ಮಕುಟ, ಪಟ್ಟ ಎಂಬ ಹನ್ನೆರಡು ವಿಧಾನಗಳಿವೆ. ಅರಿಕೇಸರಿಯು ಸಾಮಾನ್ಯ ಸಾಮಂತ ರಾಜನಲ್ಲದುದರಿಂದ ಸುಪುಷ್ಪಪಟ್ಟವನ್ನು ಧರಿಸಿದ್ದಾನೆ, ಇವುಗಳಲ್ಲಿ ಪಟ್ಟರೆಂಬುದು ಪತ್ರಪಟ್ಟ, ರತ್ನಪಟ್ಟ, ಪುಷ್ಪವೃಷ್ಟಿ ಎಂದು ಮೂರು ವಿಧ. ಇಲ್ಲಿಯ ಪುಷ್ಪವೃಷ್ಟಿ ಯೆಂಬ ಪಾಠವನ್ನು ಪುಷ್ಪಪಟ್ಟ ಎಂದು ತಿದ್ದಿಕೊಳ್ಳಬೇಕು.

ಚಂ|| ಕ್ಷಯಮಣಮಿಲ್ಲ ಕೇೞ್ದು ಕಡೆಗಂಡವನಾವನುಮಿಲ್ಲೆನಲ್ ತದ
ಕ್ಷಯನಿ ತಾನೆ ತನ್ನನೊಸೆದೋಲಗಿಪಂಗರಿದಿಲ್ಲೆನಿಪ್ಪ ವಾ|
ಙ್ಮಯಮನಿತರ್ಕಮಂಬಿಕೆ ಸರಸ್ವತಿ ಮನ್ಮುಖಪದ್ಮರಂಗದೇ
ೞ್ಗೆಯನೆಡೆಗೊಂಡು ಕೊಂಡುಕೊನೆದೀಗರಿಗಂಗೆ ವಿಶುದ್ಧ ಬುದ್ಧಿಯಂ|| ೫

ತಿಸುಳದೊಳುಚ್ಚಳಿಪ್ಪ ಪೊಸ ನೆತ್ತರೆ ಕೆಂದಳಿರಾಗೆ ಕಣ್ಗಗು
ರ್ವಿಸುವಿನಮೊಕ್ಕು ನೇಲ್ವ ಕರುಳೋಳಿಯೆ ಬಾಳಮೃಣಾಳಮಾಗೆ ಮಿ||
ಕ್ಕಸುರರ ಮೆಯ್ಯೊಳಾದ ವಿರಹಾಗ್ನಿಯನಾಱಸುತಿಂತೆ ತನ್ನ ಕೂ
ರಸಿಯೊಳಡುರ್ತು ಕೊಂದಸಿಯಳಿ ರ್ಕ್ವಸಿಯೊಳ್ ಪಡೆಮೆಚ್ಚೆ ಗಂಡನಾ|| ೬

ಮಲ್ಲಿಕಾಮಾಲೆ|| ಎನ್ನ ದಾನಮಿದಾಗಳುಂ ಮಧುಪಾಶ್ರಯಂ ಧರೆಗವ್ಯವ
ಚ್ಛಿನ್ನ ದಾನಮಿದಾಗಳುಂ ವಿಬುಧಾಶ್ರಯಂ ಗೆಲೆವಂದನೆ||
ನನ್ನಿಜೋನ್ನತಿಯಿಂದವಿ ಪತಿಯೆಂದು ಮೆಚ್ಚಿ ವಿನಾಯಕಂ|
ತಾನ್ನಿಮಿರ್ಚುದೆ ಕಬ್ಬಮಂ ನಯದಿಂ ಗುಣಾರ್ಣವ ಭೂಪನಾ|| ೭

ಚಂ|| ಬಗೆ ಪೊಸತಪ್ಪುದಾಗಿ ಮೃದುಬಂಧದೊಳೊಂದುವುದೊಂದಿ ದೇಸಿಯೊಳ್|
ಪುಗುವುದು ಪೊಕ್ಕ ಮಾರ್ಗದೊಳೆ ತಳ್ವುದು ತಳ್ತೊಡೆ ಕಾವ್ಯಬಂಧಮೊ||
ಪ್ಪುಗುಮೆಳಮಾವು ಕೆಂದಳಿರ ಪೂವಿನ ಬಿಣ್ದೊಯಿಂ ಬೞಲ್ದು ತುಂ
ಬಿಗಳಿನೆ ತುಂಬಿ ಕೋಗಿಲೆಯ ಬಗ್ಗಿಸೆ ಸುಗ್ಗಿಯೊಳೊಪ್ಪುವಂತೆವೋಲ್|| ೮

ಉ|| ಆ ಸಕಳಾರ್ಥ ಸಂಯುತಮಳಂಕೃತಿಯುಕ್ತಮುದಾತ್ತ ವೃತ್ತ್ವಿ ವಿ
ನ್ಯಾಸಮನೇಕ ಲಕ್ಷಣಗುಣಪ್ರಭವಂ ಮೃದುಪಾದಮಾದ ವಾ|
ಕ್ಛ್ರೀ ಸುಭಗಂ ಕಳಾಕಳಿತಮೆಂಬ ನೆಗೞ್ತೆಯನಾಳ್ದ ಕಬ್ಬಮಂ|
ಕೂಸುಮನೀವುದೀವುದರಿಕೇಸರಿಗಲ್ಲದವಸ್ತುಗೀವುದೇ|| ೯

ರತಿಯ ಸಂಭೋಗಕ್ರೀಡೆಯಲ್ಲಿ ಸೀಮಿತನಾದವನು. ಅರಿಕೇಸರಿಯಾದರೋ ಸೌಂದರ್ಯದಿಂದ ಕೂಡಿದ ಶರೀರವುಳ್ಳವನೂ ಈಶ್ವರಾನುಗ್ರಹಕ್ಕೆ ಪಾತ್ರನಾದವನೂ ವಿವಿಧ ಸಂಭೋಗಕೇಳಿಯುಳ್ಳವನೂ ಆಗಿರುವುದರಿಂದ ಇವನು ಮನ್ಮಥನಿಗೂ ಆಚಾರ್ಯನಾಗಿದ್ದಾನೆ ಎಂಬುದು ಭಾವ)

೫. ಸ್ವಲ್ಪವೂ ನಾಶವಿಲ್ಲದ, ಯಾರಿಂದಲೂ ಅದರ ಕೊನೆಯನ್ನು ತಿಳಿಯುವುದಕ್ಕಾಗದ, ತನಗೆ ತಾನೆ ಅಕ್ಷಯನಿಯಾಗಿರುವ, ಅವಳನ್ನು ಸೇವಿಸಿದವರಿಗೆ ಅಸಾಧ್ಯವಾವುದೂ ಇಲ್ಲವೆನಿಸುವ, ಸಮಸ್ತ ವಾಙ್ಮಯಕ್ಕೂ ತಾಯಿಯಾದ ಸರಸ್ವತೀದೇವಿಯು ಕಮಲದಂತಿರುವ ಮುಖವೆಂಬ ರಂಗಸ್ಥಳದ ಏಳಿಗೆಯನ್ನೊಳಗೊಂಡು ಅರಿಕೇಸರಿಗೆ ಸಂತೋಷದಿಂದ ನಿಷ್ಕಲ್ಮಷವಾದ ಬುದ್ಧಿಯನ್ನು ದಯಪಾಲಿಸಲಿ.

೬. ತನ್ನ ತ್ರಿಶೂಲದಿಂದ ಮೇಲಕ್ಕೆ ಚಿಮ್ಮುತ್ತಿರುವ ಹೊಸರಕ್ತವೇ ಕೆಂಪಾದ ಚಿಗುರಾಗಿರಲು ಕಣ್ಣಿಗೆ ಭಯವನ್ನುಂಟುಮಾಡುತ್ತ ಹೊರಕ್ಕೆ ಸೂಸಿ ನೇತಾಡುತ್ತಿರುವ ಕರುಳುಗಳ ಸಮೂಹವೇ ಎಳೆಯ ತಾವರೆಯ ದಂಟಾಗಿರಲು ಹದ್ದುಮೀರಿದ ರಾಕ್ಷಸರ ದೇಹದಲ್ಲುಂಟಾದ ಅಗಲಿಕೆಯೆಂಬ ಬೆಂಕಿಯನ್ನು ಅವು ಆರಿಸುತ್ತ ತನ್ನ ಹರಿತವಾದ ಕತ್ತಿಯನ್ನು ಆಶ್ರಯಿಸಿಕೊಂಡಿರುವ ಕೃಶಾಂಗಿಯಾದ ದುರ್ಗಿಯು ಪಡೆಮೆಚ್ಚಗಂಡನೆಂಬ ಬಿರುದುಳ್ಳ ಅರಿಕೇಸರಿಯ ಕತ್ತಿಯನ್ನು ಸೇರಿಸಿಕೊಂಡಿರಲಿ.

೭. ಮಧುಪಾಶ್ರಯಂ (ಅಂದರೆ ದುಂಬಿಗಳಿಗೆ ಅವಲಂಬನವಾದುದು- ಬಾಹ್ಯಾರ್ಥದಲ್ಲಿ; ಧ್ವನಿಯಲ್ಲಿ – ಮದ್ಯಪಾನ ಮಾಡುವವರಿಗೆ ಅವಲಂಬನವಾದುದು) ಅರಿಕೇಸರಿಯ ದಾನವು (ವಸ್ತುಗಳನ್ನು ಪ್ರದಾನ ಮಾಡುವುದು-ಕೊಡುಗೆಯು) ವಿಬುಧಾಶ್ರಯಂ ಅಂದರೆ ವಿದ್ವಾಂಸರಿಗೆ ಅವಲಂಬನವಾದುದು. ಆದುದರಿಂದ ಈ ರಾಜನಾದ ಅರಿಕೇಸರಿಯು ತನ್ನ ಮೇಲ್ಮೆಯಿಂದ ನನ್ನನ್ನು ಗೆದ್ದಿದ್ದಾನೆ ಎಂಬ ಮೆಚ್ಚಿಗೆಯಿಂದ ವಿನಾಯಕನು ಗುಣಾರ್ಣವನೆಂಬ ಬಿರುದಾಂಕಿತನಾದ ಈ ಅರಿಕೇಸರಿಯ ವಿಷಯಕವಾದ ಈ ಕಾವ್ಯವನ್ನು ನಯವಾಗಿ ವಿಸ್ತರಿಸಲಿ.

೮. ಕಾವ್ಯವು ನವನವೋಜ್ವಲವಾಗಿರಬೇಕು. ಮೃದು ಶಬ್ದಗಳ ಜೋಡಣೆಯಿಂದ ಕೂಡಿರಬೇಕು. ಅಚ್ಚಗನ್ನಡ ಶೈಲಿಯಲ್ಲಿ ರಚಿತವಾಗಿರಬೇಕು. ಸಂಸ್ಕೃತ ಶೈಲಿಯೊಂದಿಗೆ ಹೊಂದಿಕೊಂಡಿರಬೇಕು. ಹೀಗೆ ಸೇರಿಕೊಂಡಿದ್ದರೆ ಕಾವ್ಯರಚನೆಯ ವಸಂತಕಾಲದಲ್ಲಿ ಮಾವಿನ ಮರವು ಕೆಂಪಾದ ಚಿಗುರು ಮತ್ತು ಹೂವುಗಳ ಭಾರದಿಂದ ಜೋತುಬಿದ್ದು ತುಂಬಿಗಳಿಂದ ಆವೃತವಾಗಿ ಕೋಗಿಲೆಯ ಕೂಜನದಿಂದ ಪ್ರಕಾಶಿಸುವ ಹಾಗೆ ಶೋಭಾಯಮಾನವಾಗಿರುತ್ತದೆ.

೯. ಸಮಸ್ತನಾದ ಅರ್ಥಗಳನ್ನೊಳಗೊಂಡಿರುವುದೂ ಅಲಂಕಾರಗಳಿಂದ ಕೂಡಿದುದೂ ಉತ್ತಮವಾದ ವೃತ್ತಿ ವಿನ್ಯಾಸದಿಂದ ಯುಕ್ತವಾದುದೂ ಮೃದುಪದಪಾದಗಳನ್ನುಳ್ಳ ವಾಕ್ಸಂಪತ್ತಿನಿಂದ ಸುಂದರವಾಗಿ ಕಲಾನ್ವಿತವಾದುದೂ

ಚಂ|| ಕವಿಗಳ ನಾಮಧಾರಕ ನರಾಪರೋಳಿಯೊಳೀತನೊಳ್ಳಿದಂ
ಕವಿ ನೃಪನೀತನೊಳ್ಳಿದನೆನಲ್ ದೊರೆಯಲ್ತು ನೆಗೞ್ತೆವೆತ್ತ ಸ|
ತ್ಕವಿಗಳ ಷೋಡಶಾವನಿಪರೋಳಿಯೊಳಂ ಕವಿತಾಗುಣಾರ್ಣವಂ
ಕವಿತೆಯೊಳಗ್ಗಳಂ ಗುಣದೊಳಗ್ಗಳಮೆಲ್ಲಿಯುವಿ ಗುಣಾರ್ಣವಂ|| ೧೦

ಚಂ|| ಕತೆ ಪಿರಿದಾದೊಡಂ ಕತೆಯ ಮೆಯ್ಗಿಡಲೀಯದೆ ಮುಂ ಸಮಸ್ತ ಭಾ
ರತಮನಪೂರ್ವಮಾಗೆ ಸಲೆ ಪೇೞ್ದ ಕವೀಶ್ವರರಿಲ್ಲ ವರ್ಣಕಂ|
ಕತೆಯೊಳೊಡಂಬಡಂ ಪಡೆಯೆ ಪೇೞ್ವೊಡೆ ಪಂಪನೆ ಪೇೞ್ಗುಮೆಂದು ಪಂ
ಡಿತರೆ ತಗುಳ್ದು ಬಿಚ್ಚೞಸೆ ಪೇೞಲೊಡರ್ಚಿದೆನೀ ಪ್ರಬಂಧಮಂ|| ೧೧

ಚಂ|| ಲಲಿತಪದಂ ಪ್ರಸನ್ನ ಕವಿತಾಗುಣಮಿಲ್ಲದೆ ಪೂಣ್ದು ಪೇೞ್ದ ಬೆ
ಳ್ಗಳ ಕೃತಿಬಂಧಮುಂ ಬರೆಪಕಾಱಂ ಕೈಗಳ ಕೇಡು ನುಣ್ಣನ|
ಪ್ಪಳಕದ ಕೇಡು ಪೇೞಸಿದೊಡರ್ಥದ ಕೇಡೆನೆ ಪೇೞ್ದು ಬೀಗಿ ಪೊ|
ಟ್ಟಳಿಸಿ ನೆಗೞ್ತೆಗಾಟಿಸುವ ದುಷ್ಕವಿಯುಂ ಕವಿಯೆಂಬ ಲೆಕ್ಕಮೇ|| ೧೨

ಉ|| ವ್ಯಾಸಮುನೀಂದ್ರ ರುಂದ್ರ ವಚನಾಮೃತರ್ವಾಯನೀಸುವೆಂ ಕವಿ
ವ್ಯಾಸನೆನೆಂಬ ಗರ್ವಮೆನಗಿಲ್ಲ ಗುಣಾರ್ಣವನೊಳ್ಪು ಮನ್ಮನೋ|
ವಾಸಮನೆಯ್ದೆ ಪೇೞ್ದಪೆನದಲ್ಲದೆ ಗರ್ವಮೆ ದೋಷಮೞಗಂ
ದೋಷಮೆ ಕಾಣೆನೆನ್ನಱವ ಮಾೞ್ಕೆಯ ಪೇೞ್ವೆನಿದಾವ ದೋಷಮೋ|| ೧೩

ಚಂ|| ವಿಪುಳ ಯಶೋವಿತಾನ ಗುಣವಿಲ್ಲದನಂ ಪ್ರಭು ಮಾಡಿ ಪೂರ್ವ ಭೂ
ಮಿಪರ ಪದಂಗಳಂ ಪುಗಿಸಿ ಪೋಲಿಪೊಡೀತನುದಾತ್ತ ಪೂರ್ವ ಭೂ|
ಮಿಪರುಮನೊಳ್ಪಿನೊಳ್ ತಗುಳೆವಂದೊಡೆ ಕಥೆಯೊಳ್ ತಗುಳ್ಚಿ ಪೋ
ಲಿಪೊಡೆನಗೞಯಾದುದು ಗುಣಾರ್ಣವ ಭೂಭುಜನಂ ಕಿರೀಟಿಯೊಳ್|| ೧೪

ಎನಿಸಿಕೊಂಡಿರುವ ಕಾವ್ಯವನ್ನೂ ಕನ್ಯೆಯನ್ನೂ ಅರಿಕೇಸರಿಗಲ್ಲದೆ ಅಪಾತ್ರರಾದ ಮತ್ತಾರಿಗೊ ಅರ್ಪಿಸುವುದೇ? (ಕನ್ಯೆಯ ವಿಷಯವಾಗಿ ಅರ್ಥಮಾಡುವಾಗ ಅರ್ಥ ಎಂಬ ಶಬ್ದಕ್ಕೆ ಐಶ್ವರ್ಯವೆಂದೂ ವೃತ್ತಿಯೆಂಬ ಶಬ್ದಕ್ಕೆ ನಡವಳಿಕೆಯೆಂದೂ ಪಾದವೆನ್ನುವುದಕ್ಕೆ ಕಾಲು ಎಂದೂ ತಿಳಿಯಬೇಕು. ಕಾವ್ಯದೃಷ್ಟಿಯಿಂದ ವೃತ್ತಿಯೆಂಬ ಶಬ್ದಕ್ಕೆ ಅಭಿದಾ, ವ್ಯಂಜನಾ ಮತ್ತು ಲಕ್ಷಣಾ ಎಂಬ ಶಕ್ತಿಗಳಾಗಲಿ ಕೃಶಿಕೀ, ಭಾರತೀ, ಸಾತ್ವತೀ, ಆರಭಟೀ ಎಂಬ ವೃತ್ತಿಗಳಾಗಲಿ ಆಗಬಹುದು).

೧೦. ಹೆಸರಿಗೆ ಮಾತ್ರ ಕವಿಗಳೆನಿಸಿಕೊಂಡಿರುವವರ ಸಾಲಿನಲ್ಲಿ ಕವಿಯೆಂದಾಗಲಿ ಸಾಮಾನ್ಯವಾಗಿ ರಾಜರೆಂಬ ಹೆಸರನ್ನು ಮಾತ್ರ ಧರಿಸಿರುವವರ ಗುಂಪಿನಲ್ಲಿ ರಾಜನೆಂದಾಗಲಿ ಕರೆಸಿಕೊಳ್ಳುವುದು ವಿಶೇಷವೇನೂ ಇಲ್ಲ. ಸತ್ಕವಿಗಳ ಸಾಲಿನಲ್ಲಿ ಪಂಪನು ಕವಿತಾಗುಣಾರ್ಣವನೆಂದೂ, ಷೋಡಷರಾಜರ ಶ್ರೇಣಿಯಲ್ಲಿ ಅರಿಕೇಸರಿಯು ಗುಣಾರ್ಣವನೆಂದೂ ಪ್ರಸಿದ್ಧರಾಗಿದ್ದಾರೆ.

೧೧. ಕಥೆಯ ವಸ್ತುವು ಹಿರಿದಾಗಿದ್ದರೂ ಅದರ ವಸ್ತುವಿನ್ಯಾಸವು ನಷ್ಟವಾಗದಂತೆ ಸಮಗ್ರಭಾರತದ ಕತೆಯನ್ನು ಅಪೂರ್ವವಾಗಿ ಹೇಳಿದ ಕವಿಗಳು ಕಳೆದ ಕಾಲದಲ್ಲಿ ಇದುವರೆಗೆ ಯಾರೂ ಇಲ್ಲ. ವರ್ಣನಾಂಶಗಳಾದ ಅಷ್ಟಾದಶ ವರ್ಣನೆಗಳೂ ಕಥಾಂಶಗಳೊಡನೆ ಸಮಂಜಸವಾಗಿ ಹೊಂದಿಕೊಳ್ಳುವಂತೆ ಹೇಳುವುದಾದರೆ ಪಂಪನು ಮಾತ್ರ ಶಕ್ತ ಎಂದು ಪಂಡಿತರು ಒಂದೇ ಸಮನಾಗಿ ಹೇಳಿ ಸ್ತೋತ್ರ ಮಾಡುತ್ತಿರಲು ಈ ಉತ್ತಮ ಕಾವ್ಯವನ್ನು ಹೇಳಲು ತೊಡಗಿದ್ದೇನೆ.

೧೨. ಲಲಿತವಾದ ಶಬ್ದಗಳೂ ಪರಿಶುದ್ಧವಾದ ಗುಣಗಳೂ ಇಲ್ಲದೆ ಕಾವ್ಯವನ್ನು ಬರೆಯಬೇಕೆಂಬ ಒಂದು ಹಟದಿಂದಲೇ ರಚಿಸಿದ ದಡ್ಡರ ಕೃತಿರಚನೆ ಅದೊಂದು ಕಾವ್ಯರಚನೆಯೇನು? ಅದು ಬರಹಗಾನರ ಕೈಗೆ ಶ್ರಮವನ್ನುಂಟುಮಾಡತಕ್ಕದ್ದು; ಬರೆಯಲ್ಪಡಬೇಕಾಗಿರುವ ನಯವಾದ ಓಲೆಗರಿಗಳ ದಂಡ! ವಾಚನಮಾಡಿದರೆ ಅರ್ಥಕ್ಕೆ ಹಾನಿಯನ್ನುಂಟುಮಾಡುವ ಕಾವ್ಯರಚನೆ ಮಾಡಿ ಉಬ್ಬಿ ಅಹಂಕಾರದಿಂದ ಯಶಸ್ಸಿಗಾಗಿ ಹಾತೊರೆಯುತ್ತಿರುವ ಬಣಗುಕವಿಯು ಕವಿಯೆಂಬ ಗಣನೆಗೆ ಬರತಕ್ಕವನೆ?

೧೩. ನಾನು ವ್ಯಾಸಮಹರ್ಷಿಗಳ ವಿಸ್ತಾರವಾದ ಕಾವ್ಯವೆಂಬ ಅಮೃತ ಸಾಗರವನ್ನು ಈಜುತ್ತೇನೆ. ಆದರೆ ಕವಿ ವ್ಯಾಸನೆಂಬ ಗರ್ವ ಮಾತ್ರ ನನಗಿಲ್ಲ. ಗುಣಾರ್ಣವನಾದ ಅರಿಕೇಸರಿಯು ಸತ್ಸ್ವಭಾವರು ನನ್ನ ಮನೋಮಂದಿರವನ್ನು ಪ್ರವೇಶಿಸಿರುವುದರಿಂದ ಈ ಕಾವ್ಯವನ್ನು ಹೇಳುತ್ತಿದ್ದೇನೆ. ಈ ರೀತಿಯಾದ ಪ್ರೀತಿಪ್ರದರ್ಶನವು ದೋಷವಾಗುತ್ತದೆಯೇ? ನನಗೆ ತಿಳಿದಷ್ಟು ನಾನು ಹೇಳುತ್ತೇನೆ. ಇದರಲ್ಲಿ ಯಾವ ದೋಷವಿದೆ?

೧೪. ಹಿಂದಿನ ಕೆಲವು ಕವಿಗಳು ವಿಸ್ತಾರವಾದ ಯಶೋರಾಶಿಯಿಲ್ಲದವನನ್ನು ತಮ್ಮ ಕಾವ್ಯದ ನಾಯಕನನ್ನಾಗಿ ಮಾಡಿ ಪ್ರಾಚೀನ ರಾಜರ ಸದ್ಗುಣಗಳನ್ನೆಲ್ಲ ಅವರಲ್ಲಿ ಆರೋಪಣೆ ಮಾಡಿ ಹೋಲಿಸುತ್ತಾರೆ. ಆದರೆ ಗುಣಾರ್ಣವನಾದ ಅರಿಕೇಸರಿಯು ತನ್ನ ಸದ್ಗುಣಗಳಿಂದ ಪೂರ್ವಕಾಲದ ರಾಜರನ್ನು

ಕಂ|| ಶ್ರೀಮಚ್ಚಳುಕ್ಯ ವಂಶ
ವ್ಯೋಮಾಮೃತಕಿರಣನೆನಿಪ ಕಾಂತಿಯನೊಳಕೊಂ|
ಡೀ ಮಹಿಯೊಳಾತ್ಮವಂಶಶಿ
ಖಾಮಣಿ ಜಸಮೆಸೆಯೆ ಯುದ್ಧಮಲ್ಲಂ ನೆಗೞ್ದ|| ೧೫

ಆತ ನಿಜಭುಜವಿಜಯ
ಖ್ಯಾತಿಯನಾಳ್ದಾಳ್ದನಕಬಲನವನಿಪತಿ|
ವ್ರಾತ ಮಣಿಮಕುಟಕಿರಣ
ದ್ಯೋತಿತಪಾದಂ ಸಪಾದಲಕ್ಷ ಕ್ಷಿತಿಯಂ|| ೧೬

ಏನಂ ಪೇೞ್ವುದೊ ಸಿರಿಯು
ದ್ದಾನಿಯನೆಣ್ಣೆಯೊಳೆ ತೀವಿ ದೀರ್ಘಿಕೆಗಳನಂ|
ತಾ ನೃಪತಿ ನಿಚ್ಚಲಯ್ನೂ
ಱುನೆಯನವಗಾಹಮಿರಿಸುವಂ ಬೋದನದೊಳ್|| ೧೭

ಶ್ರೀಪತಿಗೆ ಯುದ್ಧಮಲ್ಲ ಮ
ಹೀಪತಿಗೆ ನೆಗೞ್ತೆ ಪುಟ್ಟೆ ಪುಟ್ಟಿದನಖಿಳ|
ಕ್ಷ್ಮಾಪಾಲ ಮೌಳಿಮಣಿ ಕಿರ
ಣಾಪಾಳಿತ ನಖಮಯೂಖರಂಜಿತ ಚರಣಂ|| ೧೮

ಅರಿಕೇಸರಿಯೆಂಬಂ ಸುಂ
ದರಾಂಗನತ್ಯಂತ ವಸ್ತುವಂ ಮದಕರಿಯಂ|
ಹರಿಯಂ ಪಡಿವಡೆಗುರ್ಚಿದ
ಕರವಾಳನೆ ತೋಱ ನೃಪತಿ ಗೆಲ್ಲಂಗೊಂಡಂ|| ೧೯

ನಿರುಪಮ ದೇವನ ರಾಜ್ಯದೊ
ಳರಿಕೇಸರಿ ವೆಂಗಿವಿಷಯಮಂ ತ್ರಿ ಕಳಿಂಗಂ|
ಬೆರಸೊತ್ತಿಕೊಂಡು ಗರ್ವದೆ
ಬರೆಯಿಸಿದಂ ಪೆಸರನಖಿಳ ದಿಗ್ಭಿತ್ತಿಗಳೊಳ್|| ೨೦

ಸೋಲಿಸುತ್ತಿರುವುದರಿಂದ ಮಹಾಭಾರತದ ಕಥೆಯಲ್ಲಿ ಅವನ ಕಥೆಯನ್ನು ಸೇರಿಸಿ ಗುಣಾರ್ಣವ ಮಹಾರಾಜನನ್ನು ಅರ್ಜುನನಲ್ಲಿ ಹೊಂದಿಸಿ ವರ್ಣಿಸಲು ನನಗೆ ಪ್ರೀತಿಯಾಯಿತು.

೧೫. ಸಂಪದ್ಯುಕ್ತವಾದ ಚಾಳುಕ್ಯವಂಶವೆಂಬ ಆಕಾಶಕ್ಕೆ ಚಂದ್ರನೆನಿಸುವ ತೇಜಸ್ಸಿನಿಂದ ಕೂಡಿ ತನ್ನ ವಂಶಕ್ಕೆ ಶಿರೋಭೂಷಣನಾಗಿರುವ ಯುದ್ಧಮಲ್ಲನೆಂಬುವನು ಈ ಭೂಮಿಯಲ್ಲಿ ಕೀರ್ತಿವಂತನಾಗಿ ಪ್ರಸಿದ್ಧನಾದನು.

೧೬. ಆತನು ತನ್ನ ಭುಜಬಲದ ವಿಜಯದ ಖ್ಯಾತಿಯನ್ನು ಹೊಂದಿ ಅಕಬಲನೂ ರಾಜಸಮೂಹದ ರತ್ನಖಚಿತವಾದ ಕಿರೀಟಗಳ ಕಾಂತಿಯಿಂದ ಬೆಳಗಲ್ಪಟ್ಟ ಪಾದವುಳ್ಳವನೂ ಆಗಿ ಸಪಾದಲಕ್ಷ ಭೂಮಿಯನ್ನು ಆಳಿದನು.

೧೭. ಆತನು ಬೋದನವೆಂಬ ತನ್ನ ರಾಜಧಾನಿಯಲ್ಲಿ ಬಾವಿಗಳನ್ನು ಎಣ್ಣೆಯಲ್ಲಿ ತುಂಬಿ ಪ್ರತಿದಿನವೂ ಐನೂರಾನೆಗಳನ್ನು ಮಜ್ಜನ ಮಾಡಿಸುತ್ತಾನೆ ಎಂದರೆ ಆತನ ಐಶ್ವರ್ಯಾತಿಶಯವನ್ನು ಏನೆಂದು ಹೇಳುವುದೋ.

೧೮. ಐಶ್ವರ್ಯವಂತನಾದ ಈ ಯುದ್ಧಮಲ್ಲ ಮಹಾರಾಜನಿಗೆ ಕೀರ್ತಿ ಹುಟ್ಟಿದ ಹಾಗೆ ಸಮಸ್ತರಾಜರ ಕಿರೀಟಗಳ ರತ್ನಕಾಂತಿಯಿಂದ ಪೋಷಿತವಾದ ಕಾಲಿನುಗುರುಗಳ ಕಿರಣಗಳಿಂದ ಪ್ರಕಾಶಿಸುತ್ತಿರುವ ಪಾದಗಳನ್ನುಳ್ಳ

೧೯. ಅರಿಕೇಸರಿಯೆಂಬ ಸುಂದರಾಂಗನಾದ ಮಗನು ಹುಟ್ಟಿದನು. ಆ ರಾಜನು ತನಗೆ ಪ್ರತಿಭಟಿಸಿದ ಸೈನ್ಯಕ್ಕೆ ತನ್ನ ಒರೆಯಿಂದ ಹೊರಗೆಳೆದ ಕತ್ತಿಯನ್ನೇ ತೋರಿ ವಿಶೇಷ ಬೆಲೆಬಾಳುವ ವಸ್ತುಗಳನ್ನೂ ಮದ್ದಾನೆಗಳನ್ನೂ ಕುದುರೆಗಳನ್ನೂ ಲಾಭವಾಗಿ ಪಡೆದನು. ಈ ಅರಿಕೇಸರಿಯು ರಾಷ್ಟ್ರಕೂಟ ರಾಜನಾದ ನಿರುಪಮದೇವನ ಆಳ್ವಿಕೆಯಲ್ಲಿ ಮೂರು ಕಳಿಂಗ ದೇಶಗಳ ಸಮೇತವಾಗಿ ವೆಂಗಿಮಂಡಲವನ್ನು ಗೆದ್ದು ಸ್ವಬಾಹುಬಲದಿಂದ ತನ್ನ ಪ್ರತಿಷ್ಠೆಯನ್ನು ಸಮಸ್ತದಿಕ್ಕಿನ ಗೋಡೆಗಳಲ್ಲಿಯೂ ಬರೆಯಿಸಿದನು.

೨೦ ಕ್ಷತ್ರಿಯೋಚಿತವಾದ ಶೌರ್ಯಪ್ರತಾಪಾದಿ ತೇಜೋಗುಣಗಳು ಆ ಕ್ಷತ್ರಿಯರ ವಂಶದಲ್ಲಿ ಸ್ಥಿರವಾಗಿ ನಿಂತುದು ಈ ಅರಿಕೇಸರಿಯ ಮಹತ್ಕಾರ್ಯಗಳಿಂದ.

ಕ್ಷತ್ರಂ ತೇಜೋಗುಣಮಾ
ಕ್ಷತ್ರಿಯರೊಳ್ ನೆಲಸಿ ನಿಂದುದಾ ನೆಗೞುದಿ|
ಕ್ಷತ್ರಿಯರೊಳಮಿಲ್ಲೆನಿಸಿದು
ದೀ ತ್ರಿಜಗದೊಳೆಸಗಿದೆಸಕಮರಿಕೇಸರಿಯಾ|| ೨೧

ಅರಿಕೇಸರಿಗಾತ್ಮಜರರಿ
ನರಪ ಶಿರೋದಳನ ಪರಿಣತೋಗ್ರಾಸಿ ಭಯಂ|
ಕರಕರರಾಯಿರ್ವರೊಳಾವ್
ದೊರೆಯೆನೆ ನರಸಿಂಹ ಭದ್ರದೇವರ್ ನೆಗೞ್ದರ್|| ೨೨

ಕಂ|| ಅವರೊಳ್ ನರಸಿಂಗಂಗತಿ
ಧವಳಯಶಂ ಯುದ್ಧಮಲ್ಲನಗ್ರಸುತಂ ತ|
ದ್ಭುವನ ಪ್ರದೀಪನಾಗಿ
ರ್ದವಾರ್ಯವೀರ್ಯಂಗೆ ಬದ್ದೆಗಂ ಪಿರಿಯ ಮಗಂ|| ೨೩

ಪುಟ್ಟಿದೊಡಾತನೊಳಱವೊಡ
ವುಟ್ಟಿದುದಱವಿಂಗೆ ಪೆಂಪು ಪೆಂಪಿನೊಳಾಯಂ|
ಕಟ್ಟಾಯದೊಳಳವಳವಿನೊ
ಳೊಟ್ಟಜೆ ಪುಟ್ಟಿದುದು ಪೋಲ್ವರಾರ್ ಬದ್ದೆಗನಂ|| ೨೪

ಬಲ್ವರಿಕೆಯೊಳರಿನೃಪರ ಪ
ಡಲ್ವಡೆ ತಳ್ತಿಱದು ರಣದೊಳಾ ವಿಕ್ರಮಮಂ|
ಸೊಲ್ವಿನಮಾವರ್ಜಿಸಿದಂ
ನಾಲ್ವತ್ತೆರಡಱಕೆಗಾಳೆಗಂಗಳೊಳೀತಂ|| ೨೫

ಚಂ|| ವನಪರೀತ ಭೂತಳದೊಳೀತನೆ ಸೋಲದ ಗಂಡನೆಂಬ ಪೆಂ
ಪಿನ ಪೆಸರಂ ನಿಮಿರ್ಚಿದುದುಮಲ್ಲದೆ ವಿಕ್ರಮದಿಂದೆ ನಿಂದಗು|
ರ್ವೆನಲಿಱದಾಂತರಂ ಮೊಸಳೆಯಂ ಪಿಡಿವಂತಿರೆ ನೀರೊಳೊತ್ತಿ ಭೀ
ಮನನತಿಗರ್ವದಿಂ ಪಿಡಿಯೆ ಮೆಯ್ಗಲಿ ಬದ್ದೆಗನನ್ನನಾವನೋ|| ೨೬

ಮ|| ಮುಗಿಲಂ ಮುಟ್ಟಿದ ಪೆಂಪು ಪೆಂಪನೊಳಕೊಂಡುದ್ಯೋಗಮುದ್ಯೋಗದೊಳ್
ನೆಗೞುಜ್ಞಾಫಲಮಾಜ್ಞೆಯೊಳ್ ತೊಡರ್ದಗುರ್ವೊಂದೊಂದಗುರ್ವಿಂದಗು|
ರ್ವುಗೊಳುತ್ತಿರ್ಪರಿಮಂಡಳಂ ಜಸಕಡರ್ಪಪ್ಪನ್ನೆಗಂ ಸಂದನೀ
ಜಗದೊಳ್ ಬದ್ದೆಗನನ್ನನಾವನಿೞಕುಂ ಭ್ರೂಕೋಟಿಯಂ ಕೋಟಿಯಂ|| ೨೭

ಇವನ ಕಾರ್ಯಗಳು ಮೂರು ಲೋಕಗಳಲ್ಲಿ ಪ್ರಸಿದ್ಧರಾದ ಪ್ರಾಚೀನ ರಾಜರುಗಳಲ್ಲಿಯೂ ಇಲ್ಲವೆಂದೆನಿಸಿತು.

೨೨. ಆ ಅರಿಕೇಸರಿಗೆ ಶತ್ರುರಾಜರ ತಲೆಯನ್ನು ಸೀಳುವುದರಲ್ಲಿ ಸಮರ್ಥವೂ ಹರಿತವೂ ಆದ ಕತ್ತಿಯಿಂದ ಭಯಂಕರವಾದ ಬಾಹುಗಳನ್ನುಳ್ಳ ಇವರಿಗೆ ಸಮಾನರಾರಿದ್ದಾರೆ ಎನ್ನಿಸಿಕೊಂಡ ನರಸಿಂಹ ಭದ್ರದೇವರೆಂಬ ಇಬ್ಬರು ಮಕ್ಕಳು ಪ್ರಸಿದ್ಧರಾದರು.

೨೩. ಅವರಲ್ಲಿ ನರಸಿಂಹನಿಗೆ ನಿರ್ಮಲಯಶಸ್ಸಿನಿಂದ ಕೂಡಿದ ಇಮ್ಮಡಿ ಯುದ್ಧಮಲ್ಲನು ಹಿರಿಯ ಮಗ. ಪ್ರಪಂಚಕ್ಕೆಲ್ಲ ತೇಜೋವಂತನೂ ಅಸಮಪ್ರತಾಪಶಾಲಿಯೂ ಆಗಿದ್ದ ಆ ಯುದ್ಧಮಲ್ಲನಿಗೆ ಬದ್ದೆಗನು (ಭದ್ರದೇವನು) ಹಿರಿಯ ಮಗ

೨೪. ಹೀಗೆ ಹುಟ್ಟಿದ ಭದ್ರದೇವನಿಗೆ ಜೊತೆಯಲ್ಲಿಯೇ ಜ್ಞಾನವೂ ಜ್ಞಾನದೊಡನೆ ಹಿರಿಮೆಯೂ ಹಿರಿಮೆಯೊಡನೆ ದ್ರವ್ಯಲಾಭಾದಿಗಳೂ ಅವುಗಳೊಡನೆ ಪರಾಕ್ರಮಾತಿಶಯಾದಿಗಳೂ ಹುಟ್ಟಿದುವು. (ಇಂತಹ) ಭದ್ರದೇವನನ್ನು ಹೋಲುವವರಿದ್ದಾರೆ?

೨೫. ಈ ಭದ್ರದೇವನು ಬಲವಾದ ಧಾಳಿಯಲ್ಲಿ ಶತ್ರುರಾಜರು ಚದುರಿ ಓಡಿಹೋಗುವಂತೆ ಪ್ರತಿಭಟಿಸಿ ತನ್ನ ಶೌರ್ಯವನ್ನು ಜನಗಳೆಲ್ಲ ಕೊಂಡಾಡುವಂತೆ ಯುದ್ಧಮಾಡಿ ನಲವತ್ತೆರಡು ಸುಪ್ರಸಿದ್ಧ ಕಾಳಗಗಳಲ್ಲಿ ತನ್ನ ಪ್ರತಾಪವನ್ನು ಪ್ರಕಟಿಸಿದನು.

೨೬. ಸಮುದ್ರದಿಂದ ಸುತ್ತುವರಿಯಲ್ಪಟ್ಟ ಭೂಮಂಡಲದಲ್ಲಿ ಇವನೊಬ್ಬನೇ ಯಾರಿಗೂ ಸೋಲದ ವೀರ ಎಂಬ ಹಿರಿಮೆಯನ್ನು ಗಳಿಸಿದ್ದಲ್ಲದೆ ತನ್ನನ್ನು ಪ್ರತಿಭಟಿಸಿದವರನ್ನು ಪರಾಕ್ರಮದಿಂದ ಎದುರಿಸಿ ಭಯಂಕರವಾಗಿ ಇರಿದು ಯುದ್ಧಮಾಡಿದ ಭೀಮನೆಂಬ ರಾಜನನ್ನು ನೀರಿನಲ್ಲಿ ಮುಳುಗಿಸಿ ಮೊಸಳೆಯನ್ನು ಹಿಡಿವಂತೆ ವಿಶೇಷ ದರ್ಪದಿಂದ ಹಿಡಿದಿರುವಾಗ ಈ ಶೂರನಾದ ಭದ್ರದೇವನಂತಹ (ಶೂರ) ನಾವನಿದ್ದಾನೆ.

೨೭. (ಈ ಭದ್ರದೇವನ) ಅತ್ಯುನ್ನತವಾದ ಹಿರಿಮೆಯೂ ಹಿರಿಮೆಯಲ್ಲಿ

ಕಂ|| ಮೇರುವ ಪೊನ್ ಕಲ್ಪಾಂಘ್ರಿಪ
ದಾರವೆ ರಸದೊಱವು ಪರುಸವೇದಿಯ ಕಣಿ ಭಂ|
ಡಾರದೊಳುಂಟೆನೆ ಕುಡುವ ನಿ
ವಾರಿತ ದಾನಕ್ಕೆ ಪೋಲ್ವರಾರ್ ಬದ್ದೆಗನಂ|| ೨೮

ತರಳ|| ಸುರಭಿ ದೇವತೆಯೆಂಬ ಕಾಪಿನೆ ಮಾಣ್ದುದೇಱುವುದೊಂದೆಂ
ದಿರದೆ ಮಾಣ್ದುದು ದೇವ ವಾರಣವೇೞೆ ಉಂಟವು ಪೋದೊಡಾ|
ಖರಕರಂಗರಿದೆಂದೆ ಮಾಣ್ದಿರೆ ಮಾಣ್ದುವಾ ಹರಿ ನೀನೆ ಪೇ
ೞರಿಯವೆಂದಿವು ಭದ್ರದೇವರ ಚಾಗದೊಳ್ಪೊಱಗಾದುವೇ|| ೧೯

ಕಂ|| ಆ ಬದ್ದೆಗಂಗೆ ವೈರಿತ
ಮೋಬಳ ದಶಶತಕರಂ ವಿರಾಜಿತ ವಿಜಯ|
ಶ್ರೀ ಬಾಹು ಯುದ್ಧಮಲ್ಲನಿ
ಳಾ ಬಹು ವಿಧರಕ್ಷಣ ಪ್ರವೀಣ ಕೃಪಾಣಂ|| ೩೦

ಆತ್ಮಭವನನಾರಾಪ
ನಾತ್ಮಜನಾ ನಹುಷ ಪೃಥು ಭಗೀರಥ ನಳ ಮಾ|
ಹಾತ್ಮರನಿೞಸಿ ನೆಗೞ್ದ ಮ
ಹಾತ್ಮಂ ನರಸಿಂಹನಱವಿನೊಳ್ ಪರಮಾತ್ಮಂ|| ೩೧

ಮಾಂಕರಿಸದಱವು ಗುರು ವಚ
ನಾಂಕುಶಮಂ ಪಾೞಯೆಡೆಗೆ ಪೊಣರ್ದರಿಬಲಮಂ|
ಕಿಂಕೊಳೆ ಮಾೞ್ಪೆಡೆಗಣಮೆ ನಿ
ರಂಕುಶಮೆನಿಸಿದುದು ಮುನಿಸು ಭದ್ರಾಂಕುಶನಾ|| ೩೨

ತಱಸಂದು ಲಾೞರೊಳ್ ತ
ಳ್ತಿಱದೇಱಂ ಪೇೞೆ ಕೇಳ್ದು ಮಂಡಲಮಿನ್ನುಂ|
ತಿಱುನೀರಿಕ್ಕುವುದೆನಿಸಿದ
ತಱಸಲವಿನ ಚಲದ ಬಲದ ಕಲಿ ನರಸಿಂಹಂ|| ೩೩

ಕೂಡಿಕೊಂಡ ಕಾರ್ಯಕಲಾಪಗಳಲ್ಲಿ ಹುದುಗಿಕೊಂಡಿರುವ ಆಜ್ಞಾಫಲವೂ ಅದರಲ್ಲಿ ಸೇರಿರುವ ಭಯವೂ ಭಯದಿಂದ ಆಶ್ಚರ್ಯಗೊಳ್ಳುತ್ತಿರುವ ಶತ್ರುಸಮೂಹವೂ ಅವನ ಕೀರ್ತಿಗೆ ಆಶ್ರಯವಾಗುತ್ತಿರಲು ಆ ಭದ್ರ ದೇವನು ಭೂಮಂಡಲದಲ್ಲಿ ಸುಪ್ರಸಿದ್ದನಾದನು. ಒಂದು ಸಲ ಹುಬ್ಬುಹಾರಿಸುವುದರಿಂದ ಕೋಟ್ಯಂತರ ಸೈನ್ಯವನ್ನು ಇಳಿಸಿಬಿಡುವ ಅವನಂಥವರು ಬೇರೆ ಯಾರಿದ್ದಾರೆ?

೨೮. ಆ ಭದ್ರದೇವನ ಭಂಡಾರದಲ್ಲಿ ಮೇರುಪರ್ವತದ ಚಿನ್ನವೂ ಕಲ್ಪವೃಕ್ಷದಾರಾಮವೂ ಸಿದ್ಧರಸದೂಟೆಯೂ ಸ್ಪರ್ಶಶಿಲೆಯ ಗಣಿಯೂ ಇವೆಯೆಂದರೆ ಅವಿಚ್ಛಿನ್ನವಾದ ದಾನಕ್ಕೆ ಭದ್ರದೇವನನ್ನು ಹೋಲುವರಾರಿದ್ದಾರೆ.

೩೦-೩೧. ಆ ಭದ್ರದೇವನಿಗೆ ಶತ್ರುಗಳೆಂಬ ಕತ್ತಲೆಗೆ ಸೂರ್ಯನ ಹಾಗಿರುವವನೂ ಪ್ರಕಾಶಮಾನಳಾದ ವಿಜಯಲಕ್ಷ್ಮಿಯಿಂದ ಕೂಡಿದ ಬಾಹುವುಳ್ಳವನೂ ಭೂಮಿಯನ್ನು ನಾನಾ ರೀತಿಯಲ್ಲಿ ರಕ್ಷಣ ಮಾಡುವ ಸಾಮರ್ಥ್ಯವುಳ್ಳ ಕತ್ತಿಯುಳ್ಳವನೂ ಆದ (ಮೂರನೆಯ) ಯುದ್ಧಮಲ್ಲನು ಮಗನಾದನು. ಆ ಯುದ್ಧಮಲ್ಲ ಮಹಾರಾಜನ ಮಗನಾದ ನರಸಿಂಹನು ಪ್ರಸಿದ್ಧರಾದ ನಹುಷ, ಪೃಥು, ಭಗೀರಥ, ನಳರೆಂಬ ಮಹಾತ್ಮರನ್ನು ಮಹಿಮೆಯಲ್ಲಿ ಮೀರಿಸಿದ ಪ್ರಸಿದ್ಧಿಯುಳ್ಳವನೂ ಜ್ಞಾನದಲ್ಲಿ ಸಾಕ್ಷಾತ್ ಪರಮಾತ್ಮನೂ ಆದವನು.

೩೨. ಭದ್ರ ಜಾತಿಯ ಆನೆಗಳಿಗೆ ಅಂಕುಶಸ್ವರೂಪನಾದ ಆ ನರಸಿಂಹನ ಜ್ಞಾನವು ಕ್ರಮಪರಿಪಾಲನಾ ಸಂದರ್ಭದಲ್ಲಿ ಗುರುವಚನವೆಂಬ ಅಂಕುಶವನ್ನು ನಿರಾಕರಿಸುವುದಿಲ್ಲ. ಆದರೆ ಪ್ರತಿಭಟಿಸಿದ ಶತ್ರುವನ್ನು ಇದಿರಿಸುವ ಸಂದರ್ಭದಲ್ಲಿ ಭದ್ರಾಂಕುಶನ ಕೋಪವು ತಡೆಯಿಲ್ಲದುದು ಎಂದೆನಿಸಿಕೊಂಡಿತು. (ಅಂದರೆ ನ್ಯಾಯ ಪರಿಪಾಲನೆಯಲ್ಲಿ ಅವನ ವಿವೇಕವು ಗುರುಜನರ ಆದೇಶವನ್ನು ಉಲ್ಲಂಘಿಸುತ್ತಿರದಿದ್ದರೂ ಶತ್ರುಸೈನ್ಯದೊಡನೆ ಯುದ್ಧ ಮಾಡುವಾಗ ಅವನ ಕೋಪವು ಯಾವ ಅಂಕೆಗೂ ಸಿಕ್ಕುತ್ತಿರಲಿಲ್ಲ).

೩೩. ನರಸಿಂಹನು ಎಂದೋ ಹಟದಿಂದ ಲಾಟದೇಶದ (ದಕ್ಷಿಣ ಗುಜರಾತು) ಮೇಲೆ ಬಿದ್ದು ಯುದ್ಧಮಾಡಿದ ವಿಷಯವನ್ನು ಇಂದು ಹೇಳಲು ಅದನ್ನು ಕೇಳಿ ಆ ಲಾಟದೇಶದವರು ಇನ್ನೂ ಆ ಸತ್ತವರಿಗೆ ತರ್ಪಣೋದಕವನ್ನು ಕೊಡುತ್ತಿದ್ದಾರೆ