ಆಲಸದೆ ಮಾಡಿ ಬೇಸಱದೆ ಸಾಲ್ಗುಮಿದೆನ್ನದೆ ಮೆಯ್ಸೊಗಕ್ಕೆ ಪಂ
ಬಲಿಸದೆ ನಿದ್ದೆಗೆಟ್ಟು ನಿಡು ಜಾಗರದೊಳ್ ತೊಡರ್ದೇಕ ಪಾದದೊಳ್|
ಬಲಿದುಪವಾಸದೊಳ್ ನಮೆದು ನೋಂಪಿಗಳೊಳ್ ನಿಯಮ ಕ್ರಮಂಗಳಂ
ಸರಿಸಿದರಂತು ನೋನದೆ ಗುಣಾರ್ಣವನಂ ಪಡೆಯಲ್ಕೆ ತೀರ್ಗುಮೇ|| ೧೩೬

ವ|| ಅಂತೊಂದು ವರ್ಷಂಬರಂ ಭರಂಗೆಯ್ದು ನೋಂತು ಪೂರ್ವಕ್ರಮದೊಳೊಂದುದಿವಸಮುಪವಾಸಮನಿರ್ದಗಣ್ಯ ಪುಣ್ಯತೀರ್ಥ ಜಲಂಗಳಂ ಮಿಂದು ದಳಿಂಬಮನುಟ್ಟು ದರ್ಭಶಯನದೊಳಿರ್ದು-

ಮ|| ಸುಲಿಪಲ್ ಮಿಂಚಿನ ಗೊಂಚಲುಟ್ಟ ದುಗುಲಂ ಗಂಗಾನದೀ ಪೇನಮು
ಜ್ಜ ಲ ಮುಕ್ತಾಭರಣಂ ತರತ್ತರಳ ತಾರೋದಾರ ಭಾ ಭಾರಮಂ|
ಗಲತಾ ಲಾಲಿತ ಸಾಂದ್ರ ಚಂದನರಸಂ ಬೆಳ್ದಿಂಗಳೆಂಬೊಂದು ಪಂ
ಬಲ ಬಂಬಲ್ಗೆಡೆಯಾಗೆ ಬೆಳ್ಪಸದನಂ ಕಣ್ಗೊಪ್ಪಿತಾ ಕಾಂತೆಯಾ|| ೧೩೭

ವ|| ಅಂತು ತನ್ನ ಕೈಕೊಂಡು ಬೆಳ್ಪಸದನದೊಳ್ ಕೀರ್ತಿಶ್ರೀಯಂ ವಾಕ್ಶ್ರೀಯುಮನನುಕರಿಸಿ ಮಂತ್ರಾಕ್ಷರ ನಿಯಮದೊಳಿಂದ್ರನಂ ಬರಿಸೆ-

ಕಂ|| ನೆನೆದ ಮನಂ ಪೆಱಗುೞದ
ತ್ತೆನೆ ಬೆಳಗುವ ರತ್ನದೀಪ್ತಿ ಸುರಧನು ನೆಗೆದ|
ತ್ತೆನೆ ನೆಯ್ದಿಲ್ಗೊಳನಲರ್ದ
ತ್ತೆನೆ ಕಣ್ಗಳ ಬಳಗಮಾಗಳಿಂದ್ರಂ ಬಂದಂ|| ೧೩೮

ಬೆಸನೇನೇಗೆಯ್ವುದೊ ನಿನ
ಗೊಸೆದೇನಂ ಕುಡುವುದೆಂದೊಡೆಂದಳ್ ಮಕ್ಕಳ್|
ಒಸಗೆಯನೆನಗೀವುದು ನಿ
ನ್ನೆಸಕದ ಮಸಕಮನೆ ಪೋಲ್ವ ಮಗನಂ ಮಘವಾ|| ೧೩೯

ಅನೇಕಸಲವೂ ತಮ್ಮ ಶರೀರವು ಕೃಶವಾಗುವ ಹಾಗೆ ಇಬ್ಬರೂ ನಮೆದರು. ಅವರಿಗೆ ಮಕ್ಕಳನ್ನು ಪಡೆಯಬೇಕೆಂಬ ಆಶೆ ಅತ್ಯಕವಾಯಿತು. ೧೩೬. ಆಲಸ್ಯವಿಲ್ಲದೆ ವ್ರತಮಾಡಿ, ಬೇಸರಿಕೆಯಿಂದ ಇದು ಸಾಕು ಎನ್ನದೆ, ಶರೀರಸುಖಕ್ಕೆ ಹಂಬಲಿಸದೆ, ನಿದ್ದೆಗೆಟ್ಟು, ದೀರ್ಘವಾದ ಜಾಗರಣೆಗಳಲ್ಲಿ ಸೇರಿಕೊಂಡು, ಒಂದು ಕಾಲಿನಲ್ಲಿ ನಿಂತುಕೊಂಡು, ಉಪವಾಸದಿಂದ ಕೃಶರಾಗಿ ವ್ರತಗಳಲ್ಲಿ ನಿಯಮವನ್ನು ತಪ್ಪದೆ ಪಾಲಿಸಿದರು. ಹಾಗೆ ವ್ರತಮಾಡದೆ ಗುಣಸಮುದ್ರನಾದ ಅರ್ಜುನನನ್ನು (ಆ ಬಿರುದಿನಿಂದ ಕೂಡಿದ ಅರಿಕೇಸರಿಯನ್ನು) ಪಡೆಯಲು ಸಾಧ್ಯವೇ? ವ|| ಹಾಗೆ ಒಂದು ವರ್ಷದವರೆಗೆ ಶ್ರದ್ಧೆಯಿಂದ ವ್ರತಮಾಡಿ ಹಿಂದಿನ ರೀತಿಯಲ್ಲಿಯೇ ಒಂದು ದಿವಸ ಉಪವಾಸವಿದ್ದು ಲೆಕ್ಕವಿಲ್ಲದಷ್ಟು ಪುಣ್ಯತೀರ್ಥಗಳಲ್ಲಿ ಸ್ನಾನಮಾಡಿ ಧೌತವಸ್ತ್ರವನ್ನುಟ್ಟು ದರ್ಭದ ಹಾಸಿಗೆಯ ಮೇಲಿದ್ದು ವ್ರತವನ್ನು ಪಾಲಿಸಿದಳು.

೧೩೭. ಅವಳ ಶುಭ್ರವಾದ ಹಲ್ಲೇ ಮಿಂಚಿನ ಗೊಂಚಲು, ಧರಿಸಿರುವ ರೇಷ್ಮೆಯ ವಸ್ತ್ರವೇ ಗಂಗಾನದಿಯ ಬಿಳಿಯ ನೊರೆ, ಚಂಚಲವಾಗಿ ಅಲುಗಾಡುತ್ತಿರುವ ಮುತ್ತಿನಹಾರದ ಕಾಂತಿಪ್ರಸರವೂ ಅಂಗಕ್ಕೆ ಲೇಪಿಸಿಕೊಂಡಿರುವ ಗಟ್ಟಿಯಾದ ಶ್ರೀಗಂಧದ ರಸವೂ ಬೆಳುದಿಂಗಳೆಂಬ ಸಂದೇಹಕ್ಕೆ ಅವಕಾಶವಾಗಿರಲು ಆ ಕುಂತೀದೇವಿಯ ಬಿಳಿಯ ಬಣ್ಣದ ಅಲಂಕಾರವು ಕಣ್ಣಿಗೆ ಮನೋಹರವಾಗಿದ್ದಿತು. ವ|| ಹಾಗೆ ತಾನು ಅಂಗೀಕರಿಸಿದ ಬಿಳಿಯ ಬಣ್ಣದ ಅಲಂಕಾರದಲ್ಲಿ ಯಶೋಲಕ್ಷ್ಮಿಯನ್ನೂ ವಾಕ್‌ಲಕ್ಷ್ಮಿಯಾದ ಸರಸ್ವತಿಯನ್ನೂ ಅನುಕರಿಸಿ ಮಂತ್ರಾಕ್ಷರಗಳನ್ನು ಸಕ್ರಮವಾಗಿ ಪಠಿಸಿ ಇಂದ್ರನನ್ನು ಬರಮಾಡಿದಳು. ೧೩೮. ಧ್ಯಾನಮಾಡಿದ ಮನಸ್ಸು ಹಿಂದೆ ಉಳಿಯಿತು ಎನ್ನುವ ಹಾಗೆಯೂ ಪ್ರಕಾಶಮಾನವಾದ ರತ್ನಕಾಂತಿಯು ಕಾಮನಬಿಲ್ಲಾಗಿ ನೆಗೆದು ತೋರಿತು ಎನ್ನುವ ಹಾಗೆಯೂ ಅವನ ಸಾವಿರ ಕಣ್ಣುಗಳ ಸಮೂಹವು ನೆಯ್ದಿಲೆಯ ಕೊಳವು ಅರಳಿತು ಎನ್ನುವ ಹಾಗೆಯೂ ತರಲು ಆಗ ಇಂದ್ರನು ಬಂದನು. (ಅಂದರೆ ಇಂದ್ರನು ಕುಂತಿಯ ಮನೋವೇಗವನ್ನೂ ಮೀರಿ ರತ್ನಕಿರೀಟಗಳ ಕಾಂತಿಯಿಂದಲೂ ಅರಳಿಸಿಕೊಂಡಿರುವ ಸಾವಿರ ಕಣ್ಣುಗಳಿಂದಲೂ ಬಂದನೆಂಬುದು ಭಾವ). ೧೩೯. ಅಪ್ಪಣೆಯೇನು? ಏನು ಮಾಡಬೇಕು? ನಿನಗೆ ಪ್ರೀತಿಯಿಂದ ಏನನ್ನು ಕೊಡಲಿ? ಎಂದು ಇಂದ್ರನು ಕೇಳಲು ಕುಂತಿಯು ಹೇಳಿದಳು. ಇಂದ್ರದೇವಾ ಮಕ್ಕಳ ನಲಿವನ್ನೂ ನಿನ್ನ ಪರಾಕ್ರಮಕ್ಕೆ ತಕ್ಕ ಶೌರ್ಯವುಳ್ಳ ಮಗನನ್ನು ಕೊಡಬೇಕು ಎಂದಳು.

ವ|| ಎಂಬುದುಮಾಕೆಯ ಬಗೆದ ಬಗೆಯೊಳೊಡಂಬಡುವಂತೆ ಕುಲಗಿರಿಗಳ ಬಿಣ್ಪುಮಂ ಧರಾತಳದ ತಿಣ್ಪುಮನಾದಿತ್ಯನ ತೇಜದಗುಂತಿಯುಮಂ ಚಂದ್ರನ ಕಾಂತಿಯುಮಂ ಮದನನ ಸೌಭಾಗ್ಯಮುಮಂ ಕಲ್ಪತರುವಿನುದಾರಶಕ್ತಿಯುಮನೀಶ್ವರನ ಪ್ರಭುಶಕ್ತಿಯುಮಂ ಜವನ ಬಲ್ಲಾಳ್ತನಮುಮಂ ಸಿಂಹದ ಕಲಿತನಮುಮನವರವರ ದೆಸೆಗಳಿಂ ತೆಗೆದೊಂದುಮಾಡಿ ಕೊಂತಿಯ ದಿವ್ಯಗರ್ಭೋದರಮೆಂಬ ಕುಕ್ತಿಪುಟೋದರದೊಳ್ ತನ್ನ ದಿವ್ಯಾಂಶಮೆಂಬ ಮುಕ್ತಾಫಲೋದ ಬಿಂದುವನಿಂದ್ರಂ ಸಂಕ್ರಮಿಸಿ ನಿಜನಿವಾಸಕ್ಕೆ ಪೋದನನ್ನೆಗಮಿತ್ತ ಕೊಂತಿಯುಮಂದಿನ ಬೆಳಗಪ್ಪ ಜಾವದೊಳ್ ಸುಖನಿದ್ರೆಯಾಗಿ-

ಚಂ|| ಕುಡಿವುದನೇೞುಮಂಬುಯುಮಂ ಕುಲಶೈಲಕುಳಂಗಳಂ ತಗು
ಳ್ದಡರ್ವುದನೊಂದು ಬಾಳ ರವಿ ತನ್ನಯ ಸೋಗಿಲ ಮೇಗೆ ರಾಗದಿಂ|
ಪೊಡರ್ವುದನಂತೆ ದಿಕ್ಕರಿಗಳಂಬುಜಪತ್ರ ಪುಟಾಂಬುವಿಂ ಬೆಡಂ
ಗಡಸಿರೆ ಮಜ್ಜನಂಬುಗಿಪುದಂ ಸತಿ ಕಂಡೊಸೆದಳ್ ನಿಶಾಂತದೊಳ್|| ೧೪೦

ವ|| ಅಂತು ಕಂಡು ಮುನಿಕುಮಾರರೋದುವ ವೇದನಿನಾದದಿಂ ವಿಗತ ನಿದ್ರೆಯಾಗಿ ಪಾಂಡುರಾಜಂಗಮಲ್ಲಿಯ ಮುನಿಜನಂಗಳ್ಗ ಮಱಪಿದೊಡವರಾ ಕನಸುಗಳ್ಗೆ ಸಂತೋಷಂಬಟ್ಟು-

ಚಂ|| ಕುಡಿವುದಱಂದಮಭ್ಧಿಗಳನಬ್ಧಿಪರೀತ ಮಹೀಶನಂ ತಗು
ಳ್ದಡರ್ವುದಱಂ ಕುಲಾದ್ರಿ ಪರಿವೇಷ್ಟಿತನಂ ತರುಣಾರ್ಕನೞ್ಕಱಂ|
ಪೊಡರ್ವುದಱಂದಮೆಂದುಮುದಿತೋದಿತನಂ ದಿಗಿಭಂಗಳೆಂಟುಮೊ
ಳ್ಪೊಡರಿಸಿ ಮಜ್ಜನಂಬುಗಿಸೆ ಕಂಡುದಱಂ ಕಮಲಾಭಿರಾಮನಂ|| ೧೪೧

ವ|| ಇಂತಪ್ಪ ಮಗನಂ ನೀನಮೋಘಂ ಪಡೆವೆಯೆಂದು ಮುನಿಜನಂಗಳ್ ಪೇೞ್ವ ಶುಭ ಸ್ವಪ್ನಫಲಂಗಳೊಡನೊಡನೆ ಗರ್ಭಚಿಹ್ನಂಗಳುಂ ತೋ ಪಗೆವರ ಪೆಂಡಿರ ಮೊಗಂಗಳುಮಾಕೆಯ ಕುಚಚೂಚುಕಂಗಳುಮೊಡನೊಡನೆ ಕಂದಿದುವಾಕೆಯ ವಳಿತ್ರಯಂಗಳುಂ ಪಗೆವರ ಶಕ್ತಿತ್ರಯಂಗಳುಮೊಡನೊಡನೆ ಕೆಟ್ಟುವಾಕೆಯ ಬಾಸೆಗಳುಂ ಪಗೆವರ ಬಾೞ್ವಾಸೆಗಳುಮೊಡನೊಡನಸಿಯವಾದುವಾಕೆಯ ಮಂದಗಮನಮುಂ ಪಗೆವರ ಮನಂಗಳುಮೊಡನೊಡನಲಸಿಕೆಯ ಕೈಕೊಂಡುವಾಕೆಯ ನಡುವಿನ ಬಡತನಮುಂ ಪಗೆವರ ಸಿರಿಯುಮೊಡನೊಡನೆ ಕೆಟ್ಟುವಾ ಸಮಯದೊಳ್-

ವ|| ಅವಳು ಆಶೆಪಟ್ಟಂತೆಯೇ ಒಪ್ಪಿಕೊಂಡು ಕುಲಪರ್ವತಗಳ ಭಾರವನ್ನೂ ಭೂಮಿಯ ತೂಕವನ್ನೂ ಸೂರ್ಯನ ತೇಜಸ್ಸಿನ ಆಕ್ಯವನ್ನೂ ಚಂದ್ರನ ಕಾಂತಿಯನ್ನೂ ಮನ್ಮಥನ ಸೌಭಾಗ್ಯವನ್ನೂ ಕಲ್ಪವೃಕ್ಷದ ಔದಾರ್ಯವನ್ನೂ ಈಶ್ವರನ ಪ್ರಭುಶಕ್ತಿಯನ್ನೂ ಯಮನ ಶೌರ್ಯವನ್ನೂ ಸಿಂಹದ ಪರಾಕ್ರಮವನ್ನೂ ಅವು ಒಂದೊಂದರಿಂದಲೂ ತೆಗೆದು ಒಟ್ಟಿಗೆ ಶೇಖರಿಸಿ ಕುಂತಿಯ ಶ್ರೇಷ್ಠವಾದ ಗರ್ಭವೆಂಬ ಮುತ್ತಿನ ಚಿಪ್ಪಿನ ಒಳಗಡೆ ತನ್ನ ದಿವ್ಯಾಂಶವೆಂಬ ಮುತ್ತಿನ ಹನಿಯನ್ನು ಬೆರಸಿಟ್ಟು ಇಂದ್ರನು ತನ್ನ ವಾಸಸ್ಥಳಕ್ಕೆ ಹೋದನು. ಅಷ್ಟರಲ್ಲಿ ಈ ಕಡೆ ಕುಂತಿಯು ಮುಂದಿನ ಬೆಳಗಿನ ಜಾವದಲ್ಲಿ ಸುಖನಿದ್ರೆಯನ್ನು ಹೊಂದಿ ೧೪೦. ರಾತ್ರಿಯ ಕೊನೆಯ ಭಾಗದಲ್ಲಿ ತಾನು ಸಪ್ತಸಮುದ್ರಗಳನ್ನು ಕುಡಿಯುವುದನ್ನೂ ಸಪ್ತಕುಲಪರ್ವತಗಳನ್ನು ಕ್ರಮವಾಗಿ ಹತ್ತುವುದನ್ನೂ ಬಾಲಸೂರ್ಯನು ತನ್ನ ಮಡಲಿನಲ್ಲಿ ಸಂತೋಷವಾಗಿ ಹೊರಳಾಡುವುದನ್ನೂ ಹಾಗೆಯೇ ದಿಗ್ಗಜಗಳನ್ನೂ ಕಮಲಪತ್ರದ ಮೇಲಿರುವ ನೀರಿನಿಂದ ಸುಂದರವಾಗಿ ಕಾಣುತ್ತಿರುವ ಸರೋವರದಲ್ಲಿ ಸ್ನಾನ ಮಾಡಿಸುತ್ತಿರುವುದನ್ನೂ ಸ್ವಪ್ನದಲ್ಲಿ ಕಂಡು ಸಂತೋಷಪಟ್ಟಳು. ವ|| ಹಾಗೆ ಕನಸನ್ನು ಕಂಡು ಋಷಿಕುಮಾರರು ಪಠಿಸುವ ವೇದಘೋಷದಿಂದ ಎಚ್ಚೆತ್ತು ಪಾಂಡುರಾಜನಿಗೂ ಅಲ್ಲಿದ್ದ ಋಷಿಸಮೂಹಕ್ಕೂ ಆ ಕನಸಿನ ವಿಷಯವನ್ನು ತಿಳಿಸಲು ಅವರು ಆ ಕನಸುಗಳಿಗೆ ಸಂತೋಷಪಟ್ಟು ಅದರ ಅರ್ಥವನ್ನು (ಸಂಕೇತ) ವಿವರಿಸಿದರು. ೧೪೧. ಸಪ್ತಸಮುದ್ರಗಳನ್ನು ಕುಡಿಯುವುದರಿಂದ ಸಮುದ್ರವು ಬಳಸಿದ ಭೂಮಿಗೆ ಒಡೆಯನನ್ನೂ ಕುಲಪರ್ವತಗಳನ್ನು ಹತ್ತುವುದರಿಂದ ಕುಲಪರ್ವತಗಳಿಂದ ಸುತ್ತುವರಿಯಲ್ಪಟ್ಟ ರಾಜ್ಯವನ್ನುಳ್ಳವನನ್ನೂ ಬಾಲಸೂರ್ಯನು ಮಡಿಲಿನಲ್ಲಿ ಹೊರಳಾಡುವುದರಿಂದ ಏಕಪ್ರಕಾರದ ಅಭಿವೃದ್ಧಿಯನ್ನು ಪಡೆಯುವನನ್ನೂ ಎಂಟು ದಿಗ್ಗಜಗಳನ್ನೂ ಶೋಭಾಯಮಾನವಾಗಿ ಸ್ನಾನ ಮಾಡಿಸುವುದನ್ನು ಕಂಡುದರಿಂದ ಕಮಲದಂತೆ ಆಕರ್ಷಕವಾದ ಸೌಂದರ್ಯವುಳ್ಳ ಮಗನನ್ನು ವ|| ನೀನು ಪಡೆಯುತ್ತೀಯೆ ಎಂದು ಮುನಿಜನಗಳು ಹೇಳಿದ ಶುಭಸ್ವಪ್ನಫಲಗಳ ಜೊತೆಯಲ್ಲಿಯೇ ಗರ್ಭಚಿಹ್ನೆಗಳೂ ತೋರಲಾಗಿ ಶತ್ರುರಾಜರಸ್ತ್ರೀಯರ ಮುಖವೂ ಆಕೆಯ ಮೊಲೆಯ ತೊಟ್ಟುಗಳೂ ಒಟ್ಟಿಗೆ ಕಂದಿದುವು (ಕಪ್ಪಾದವು). ಆಕೆಯ ಹೊಟ್ಟೆಯ ಮೂರು ಮಡಿಪುಗಳೂ ಶತ್ರುರಾಜರ ಪ್ರಭುಶಕ್ತಿ, ಮಂತ್ರಶಕ್ತಿ ಮತ್ತು ಉತ್ಸಾಹಶಕ್ತಿ ಎಂಬ ಶಕ್ತಿತ್ರಯಗಳ ಜೊತೆ ಜೊತೆಯಲ್ಲಿಯೇ ನಾಶವಾದುವು. ಆಕೆಯ ಬಾಸೆಗಳೂ (ಹೊಕ್ಕುಳಿನಿಂದ ಎದೆಯವರೆಗಿರುವ ಕೂದಲಿನ ಸಾಲು) ಶತ್ರುಗಳ ಬಾಳುವ ಆನೆಗಳೂ ಜೊತೆ ಜೊತೆಯಲ್ಲಿಯೇ ಕೃಶವಾದುವು. ಆಕೆಯ ಮಂದಗಮನವೂ ಶತ್ರುಗಳ ಮನಸ್ಸೂ ಜೊತೆ ಜೊತೆಯಲ್ಲಿಯೇ ಆಲಸ್ಯವನ್ನು ಹೊಂದಿದುವು.

ಉ|| ಉರ್ಚಿದ ಬಾಳೊಳಾತ್ಮ ಮುಖಬಿಂಬಮನೞಯೆ ನೋಡಲುಂ ಮನಂ
ಪೆರ್ಚಿ ಧನುರ್ಲತಾ ಗುಣ ನಿನಾದಮನಾಲಿಸಿ ಕೇಳಲುಂ ಮನಂ|
ಬೆರ್ಚದೆ ಸಿಂಹ ಪೋತಕಮನೋವಲುಮಾಕೆಯ ದೋಹಳಂ ಕರಂ
ಪೆರ್ಚಿದುದಾ ಗುಣಾರ್ಣವನ ಮುಂದಣ ಬೀರಮನಂದೆ ತೋರ್ಪವೋಲ್|| ೧೪೨

ವ|| ಮತ್ತಮೇೞುಂ ಸಮುದ್ರಂಗಳ ನೀರನೊಂದುಮಾಡಿ ವಿಯಲುಂ ವೇಳಾ ವನ ಲತಾಗೃಹೋದರ ಪುಳಿನಸ್ಥಳ ಪರಿಸರಪ್ರದೇಶ ದೊಳ್ ತೊೞಲಲುಮೞಯಾಗೆ-

ಕಂ|| ಬಳೆದ ನಿತಂಬದೆ ಕಾಂಚೀ
ಕಳಾಪಮಂ ಕಟ್ಟಲಣಮೆ ನೆಯದಿದೆಂದ|
ಗ್ಗಳಿಸಿ ಕುಳಿಕೆಗಳಿನೇಂ ಕ
ಣ್ಗೊಳಿಸಿದುದೋ ಸುಭಗೆಯಾದ ಸುದತಿಯ ಗರ್ಭಂ|| ೧೪೩

ವ|| ಅಂತು ತೆಕ್ಕನೆ ತೀವಿದ ಮೆಯ್ಯೊಳಲರ್ದ ಸಂಪಗೆಯರಲಂತೆ ಬೆಳರ್ತ ಬಣ್ಣಂ ಗುಣಾರ್ಣವಂಗೆ ಮಾಡಿದ ಬಣ್ಣದಂತೆ ಸೊಗಯಿಸಿ ಬೆಳೆದು-

ಕಂ|| ತುಡುಗೆಗಳೊಳ್ ಸರಿಗೆಯುಮಂ
ಕಡುವಿಣ್ಣಿತ್ತೆನಿಸಿ ನಡೆದುಮೋರಡಿಯನಣಂ|
ನಡೆಯಲುಮಾಱದೆ ಕೆಮ್ಮನೆ
ಬಿಡದಾರಯ್ವನಿತುಮಾಗೆ ಬಳೆದುದು ಗರ್ಭಂ|| ೧೪೪

ವ|| ಅಂತಾ ಬಳೆದ ಗರ್ಭದೊಳ್ ಸಂಪೂರ್ಣಪ್ರಸವಸಮಯಂ ದೊರೆಕೊಳೆ ಗ್ರಹಂಗಳೆಲ್ಲಂ ತಂತಮ್ಮುಚ್ಚ ಸ್ಥಾನಂಗಳೊಳಿರ್ದು ಷಡ್ವರ್ಗ ಸಿದ್ಧಿಯನುಂಟುಮಾಡೆ ಶುಭಲಗ್ನೋದಯದೊಳ್-

ಕಂ|| ಭರತಕುಲ ಗಗನ ದಿನಕರ
ನರಾತಿಕುಳಕಮಳಹಿಮಕರಂ ಶಿಶು ತೇಜೋ|
ವಿರಚನೆಯುಂ ಕಾಂತಿಯುಮಾ
ವರಿಸಿರೆ ಗರ್ಭೋದಯಾದ್ರಿಯಿಂದುದಯಿಸಿದಂ|| ೧೪೫

ಆಕೆಯ ನಡುವಿನ ಬಡತನವೂ (ಸಣ್ಣದಾಗಿರುವಿಕೆ-ಕೃಶತೆ) ಶತ್ರುಗಳ ಐಶ್ವರ್ಯವೂ ಜೊತೆಯಲ್ಲಿಯೇ ಕೆಟ್ಟವು ; ಆ ಸಮಯದಲ್ಲಿ ೧೪೨. ಮುಂದಿನ ಗುಣಾರ್ಣವನ (ಅರ್ಜುನನ-ಅರಿಕೇಸರಿಯ) ವೀರ್ಯವನ್ನು ಆ ದಿನವೇ ತೋರ್ಪಡಿಸುವಂತೆ ಕುಂತಿಯ ಬಸಿರ ಬಯಕೆಯು ಒರೆಗಳೆದ ಕತ್ತಿಯಲ್ಲಿ ತನ್ನ ಮುಖಮಂಡಲವನ್ನು ನೋಡಿಕೊಳ್ಳುವುದಕ್ಕೂ ಉತ್ಸಾಹದಿಂದ ಬಿಲ್ಲಿನ ಟಂಕಾರಶಬ್ದವನ್ನು ಮನವಿಟ್ಟು ಕೇಳುವುದಕ್ಕೂ ಸ್ವಲ್ಪವೂ ಹೆದರದೆ ಸಿಂಹದ ಮರಿಯನ್ನು ಸಲಹುವುದಕ್ಕೂ ಆಶೆಪಟ್ಟು ವಿಶೇಷವಾಗಿ ಹೆಚ್ಚಿತು ವ|| ಮತ್ತು ಸಮುದ್ರಗಳ ನೀರನ್ನು ಒಟ್ಟಿಗೆ ಸೇರಿಸಿ ಸ್ನಾನಮಾಡಲೂ ಸಮುದ್ರದ ಅಂಚಿನಲ್ಲಿರುವ ಕಾಡಿನಲ್ಲಿಯೂ ಬಳ್ಳಿವನೆಗಳ ಒಳಭಾಗದಲ್ಲಿಯೂ ಮರಳುದಿಣ್ಣೆಗಳ ಸುತ್ತಲೂ ಎಡೆಯಾಡಲೂ ಆಶೆಯಾಯಿತು. ೧೪೩. ತುಂಬಿ ಬೆಳೆದ ಪೃಷ್ಠಭಾಗದಿಂದ ನಡುಕಟ್ಟನ್ನು ಕಟ್ಟಲೂ ಸ್ವಲ್ಪವೂ ಸಾಧ್ಯವಿಲ್ಲವೆನ್ನುವ ರೀತಿಯಲ್ಲಿ ಆ ಸೌಭಾಗ್ಯಶಾಲಿನಿಯಾದ ಕುಂತಿಯ ಗರ್ಭವು ಬೆಳೆದು ವಿಶೇಷವಾದ ನೂಲಿನ ಕುಳಿಕೆಗಳಿಂದ ಅತಿ ಮನೋಹರವಾಯಿತು. ವ|| ಹಾಗೆ ಪೂರ್ಣವಾಗಿ ತುಂಬಿಕೊಂಡ ಮೈಯಲ್ಲಿ ಅರಳಿದ ಸಂಪಗೆಯ ಹೂವಿನಂತೆ ಬಿಳುಪಾದ ಬಣ್ಣವು ಗುಣಾರ್ಣವನಿಗೆ ಮಾಡಿದ ಬಣ್ಣದಂತೆಯೇ ಸೊಗಸಾಗಿ ಬಳೆದು ೧೪೪. ಅವಳು ಧರಿಸಿರುವ ಆಭರಣಗಳಲ್ಲಿ ಒಂದು ಸರಿಗೆಯೂ ಬಹುಭಾರವುಳ್ಳದ್ದೆನಿಸಿ ಓಡಾಡಲು ಒಂದು ಹೆಜ್ಜೆಯನ್ನೂ ಇಡಲಾರದೆ ಸುಮ್ಮನೆ ಹಿಂದಿರುಗಿ ನೋಡುವಷ್ಟು ಗರ್ಭವು ಬೆಳೆಯಿತು. ವ|| ಹಾಗೆ ಬೆಳೆದ ಗರ್ಭದಲ್ಲಿ ತುಂಬಿದ ಹೆರಿಗೆಯ ಕಾಲವು ಪ್ರಾಪ್ತವಾಗಲು ನವಗ್ರಹಗಳೆಲ್ಲ ತಮ್ಮ ತಮ್ಮ ಉಚ್ಚಸ್ಥಾನಗಳಲ್ಲಿದ್ದು ಲಗ್ನ, ಹೋರಾ, ದ್ರೇಕ್ಕಾಣ, ನವಾಂಶ, ದ್ವಾದಶಾಂಶ ಮತ್ತು ತ್ರಿಂಶಾಂಶಗಳೆಂಬ ಷಡ್ವರ್ಗಗಳ ಸಿದ್ಧಿಯನ್ನುಂಟುಮಾಡಿದ ಶುಭಲಗ್ನ ಪ್ರಾಪ್ತವಾದಾಗ ೧೪೫. ಭರತವಂಶವೆಂಬ ಆಕಾಶಕ್ಕೆ ಸೂರ್ಯನೂ ಶತ್ರುಗಳ ವಂಶವೆಂಬ ತಾವರೆಗೆ ಚಂದ್ರನೂ ಆದ ಶಿಶುವು

ಉದಯಿಸುವುದುಮಮೃತಾಂಶುವಿ
ನುದಯದೊಳಂಭೋ ವೇಲೆ ಭೋರ್ಗರೆವವೊಲೊ|
ರ್ಮೊದಲೆಸೆದುವು ಘನಪಥದೊಳ್
ತ್ರಿದಶಕರಾಹತಿಯಿನೊಡನೆ ಸುರದುಂದುಭಿಗಳ್|| ೧೪೬

ವ|| ಅಂತು ಮೊೞಗುವ ಸುರದುಂದುಭಿಗಳುಂ ಪರಸುವ ಜಯಜಯ ಧ್ವನಿಗಳುಂ ಬೆರಸು ದೇವೇಂದ್ರಂ ಬರೆ ದೇವವಿಮಾನಂಗಳೆಲ್ಲಂ ಶತಶೃಂಗಪರ್ವತಮಂ ಮುಸುಱಕೊಂಡು-

ಕಂ|| ದೇವರ ಪಗಳ ರವದೊಳ್
ದೇವರ ಸುರಿವರಲ ಸರಿಯ ಬೆಳ್ಸರಿಯೊಳ್ ತ|
ದ್ದೇವ ವಿಮಾನಾವಳಿಯೊಳ್
ತೀವಿದುದೊರ್ಮೊದಲೆ ಗಗನದಿಂ ಧರೆ ಮಧ್ಯಂ|| ೧೪೭

ವ|| ಅಂತು ಹಿರಣ್ಯಗರ್ಭಬ್ರಹ್ಮಂ ಮೊದಲಾಗೆ ವ್ಯಾಸ ಕಶ್ಯಪ ವಸಿಷ್ಠ ವಾಲ್ಮೀಕಿ ವಿಶ್ವಾಮಿತ್ರ ಜಮದಗ್ನಿ ಭಾರದ್ವಾಜಾಗಸ್ತ್ಯ ಪುಲಸ್ತ್ಯ ನಾರದ ಪ್ರಮುಖರಪ್ಪ ದಿವ್ಯಮುನಿಪತಿಗಳುಮೇಕಾದಶರುದ್ರರುಂ ದ್ವಾದಶಾದಿತ್ಯರುಮಷ್ಟವಸುಗಳುಮಶ್ವಿನೀ ದೇವರುಂ ಮೊದಲಾಗೆ ಮೂವತ್ತಮೂದೇವರುಂ ಇಂದ್ರಂಬೆರಸು ವೈಮಾನಿಕ ದೇವರುಂ ನೆರೆದು ಪಾಂಡುರಾಜನುಮಂ ಕುಂತಿಯುಮಂ ಪರಸಿ ಕೂಸಿಂಗೆ ಜನ್ಮೋತ್ಸವಮಂ ಮಾಡಿ-

ಕಂ|| ನೋಡುವನಾ ಬ್ರಹ್ಮಂ ಮುಂ
ಡಾಡುವನಮರೇಂದ್ರನಿಂದ್ರನಚ್ಚರಸೆಯರೆ|
ೞುಡುವರೆಂದೊಡೆ ಪೊಗೞ
ಲ್ವೇಡ ಗುಣಾರ್ಣವನ ಜನ್ಮದಿನದ ಬೆಡಂಗಂ|| ೧೪೮

ವ|| ಅಂತು ಪಿರಿದುಮೊಸಗೆಯಂ ಮಾಡಿ ದೇವಸಭೆಯುಂ ಬ್ರಹ್ಮಸಭೆಯುಮೊಡನಿರ್ದು ನಾಮಕರಣೋತ್ಸವ ನಿಮಿತ್ತಂಗಳಪ್ಪ ನಾಮಂಗಳೊಳೀತಂ ಸಕಲ ಭುವನ ಸಂಸ್ತೂಯಮಾನಂ ಚಾಳುಕ್ಯವಂಶೋದ್ಭವಂ ಶ್ರೀಮದರಿಕೇಸರಿ ವಿಕ್ರಮಾರ್ಜುನನುದಾತ್ತನಾರಾಯಣಂ ಪ್ರಚಂಡ ಮಾರ್ತಾಂಡನುದಾರಮಹೇಶ್ವರಂ ಕದನತ್ರಿಣೇತ್ರಂ ಮನುಜ ಮಾಂಧಾತಂ ಪ್ರತಿಜ್ಞಾ ಗಾಂಗೇಯಂ ಶೌಚಾಂಜನೇಯನಕಳಂಕರಾಮಂ ಸಾಹಸಭೀಮಂ ಪ್ರತ್ಯಕ್ಷಜೀಮೂತವಾಹನಂ ಜಗದೇಕಮಲ್ಲಂ ಪರಸೈನ್ಯ ಭೈರವಂ ಅತಿರಥ ಮಥನಂ ವೈರಿಗಜಘಟಾವಿಘಟನಂ ವಿದ್ವಿಷ್ಟ ವಿದ್ರಾವಣನರಾತಿ ಕಾಳಾನಳಂ ರಿಪುಕುರಂಗಕಂಠೀರವಂ ವಿಕ್ರಾಂತತುಂಗಂ ಪರಾಕ್ರಮಧವಳಂ ಸಮರೈಕಮೇರು ಶರಣಾಗತ

ತೇಜಸ್ಸಿನ ರಚನೆಯೂ ಪ್ರಕಾಶವೂ ತುಂಬಿರಲು ಗರ್ಭವೆಂಬ ಉದಯಪರ್ವತದಿಂದ ಉದಯಿಸಿದನು. ೧೪೬. ಹುಟ್ಟಲಾಗಿ ಚಂದ್ರೋದಯ ಸಮಯದಲ್ಲಿ ಸಮುದ್ರದಲೆಗಳು ಆರ್ಭಟಮಾಡುವ ಹಾಗೆ ಆಕಾಶಮಾರ್ಗದಲ್ಲಿ ದೇವತೆಗಳ ಕೈಚಪ್ಪಾಳೆಗಳೊಡನೆ ದೇವದುಂದುಭಿಗಳೂ (ದೇವತೆಗಳ ಮಂಗಳವಾದ್ಯ) ಕೂಡಲೇ ಒಟ್ಟಿಗೆ ಶಬ್ದಮಾಡಿದುವು ವ|| ಹಾಗೆ ಭೋರ್ಗರೆಯುತ್ತಿರುವ ದೇವದುಂದುಭಿಗಳೊಡನೆ ಹರಕೆಯ ಜಯಜಯಶಬ್ದಗಳನ್ನೂ ಸೇರಿಸಿಕೊಂಡು ದೇವೇಂದ್ರನು ಬರಲಾಗಿ ಇತರ ದೇವತೆಗಳ ವಿಮಾನಗಳೆಲ್ಲವೂ ಶತಶೃಂಗಪರ್ವತವನ್ನು ಮುತ್ತಿಕೊಂಡು ೧೪೭. ದೇವತೆಗಳ ವಾದ್ಯಧ್ವನಿಯಿಂದಲೂ ದೇವತೆಗಳು ಸುರಿಸುತ್ತಿರುವ ಪುಷ್ಪವೃಷ್ಟಿಪ್ರವಾಹದಿಂದಲೂ ಆ ದೇವತೆಗಳ ವಿಮಾನಪಂಕ್ತಿಗಳಿಂದಲೂ ಭೂಮ್ಯಾಕಾಶಗಳ ಮಧ್ಯಭಾಗವು ತುಂಬಿಹೋಯಿತು.

ವ|| ಹೀಗೆ ಹಿರಣ್ಯಗರ್ಭ ಬ್ರಹ್ಮನೇ ಮೊದಲಾಗಿ ವ್ಯಾಸ, ಕಶ್ಯಪ, ವಸಿಷ್ಠ, ವಾಲ್ಮೀಕಿ, ವಿಶ್ವಾಮಿತ್ರ, ಜಮದಗ್ನಿ, ಭಾರದ್ವಾಜ, ಅಗಸ್ತ್ಯ, ಪುಲಸ್ತ್ಯ, ನಾರದ ಪ್ರಮುಖರಾದ ದಿವ್ಯಋಷಿಶ್ರೇಷ್ಠರೂ ಏಕಾದಶರುದ್ರರೂ ದ್ವಾದಶಾದಿತ್ಯರೂ ಅಷ್ಟವಸುಗಳೂ ಅಶ್ವಿನೀದೇವತೆಗಳೂ ಮೊದಲಾದ ಮೂವತ್ತು ಮೂರು ದೇವರೂ ಇಂದ್ರನೊಡಗೂಡಿ ವೈಮಾನಿಕದೇವತೆಗಳೂ ಒಟ್ಟಾಗಿ ಸೇರಿ ಪಾಂಡುರಾಜನನ್ನೂ ಕುಂತಿಯನ್ನೂ ಹರಸಿ ಮಗುವಿಗೆ ಜನ್ಮೋತ್ಸವವನ್ನು ಮಾಡಿ ೧೪೮. ಆ ಬ್ರಹ್ಮನು (ತೃಪ್ತಿಯಾಗದೆ) ನೋಡುತ್ತಾನೆ; ದೇವೇಂದ್ರನು ಮುದ್ದಾಡುತ್ತಾನೆ, ಅಪ್ಸರಸ್ತ್ರೀಯರು (ಮಗುವನ್ನು ನೋಡಿ ಸಂತೋಷದಿಂದ) ಎದ್ದು ಕುಣಿದಾಡುತ್ತಾರೆ ಎಂದ ಮೇಲೆ ಗುಣಾರ್ಣವನ ಜನ್ಮೋತ್ಸವದ ಸೊಗಸನ್ನು ಹೊಗಳಬೇಡವೇ? ವ|| ಹಾಗೆ ವಿಶೇಷೋತ್ಸವವನ್ನು ನಡೆಸಿ ದೇವಸಭೆಯವರೂ ಬ್ರಹ್ಮಸಭೆಯವರೂ ಒಟ್ಟಿಗಿದ್ದು ಹೆಸರಿಡಲು ಕಾರಣವಾದುವುಗಳಲ್ಲಿ ಈತನು ಸಕಲಲೋಕಗಳಿಂದ ಹೊಗಳಲ್ಪಡುವ ಚಾಳುಕ್ಯವಂಶದಲ್ಲಿ ಹುಟ್ಟಿದ ಶ್ರೀಮದರಿಕೇಸರಿ, ವಿಕ್ರಮಾರ್ಜುನ, ಉದಾತ್ತನಾರಾಯಣ, ಪ್ರಚಂಡಮಾರ್ತಾಂಡ (ವಿಶೇಷತೇಜಸ್ಸನ್ನುಳ್ಳ ಸೂರ್ಯ) ಉದಾರಮಹೇಶ್ವರ (ಔದಾರ್ಯದಲ್ಲಿ ಶಿವನ ಹಾಗಿರುವವನು), ಕದನತ್ರಿಣೇತ್ರ (ಯುದ್ಧದಲ್ಲಿ ಮುಕ್ಕಣ್ಣನಂತಿರುವವನು), ಮನುಜಮಾಂಧಾತ (ಮನುಷ್ಯರಲ್ಲಿ ಮಾಂಧಾತ ಚಕ್ರವರ್ತಿಯಂತಿರುವವನು), ಪ್ರತಿಜ್ಞಾಗಾಂಗೇಯ (ಪ್ರತಿಜ್ಞೆ ಮಾಡುವುದರಲ್ಲಿ ಪಣ ತೊಟ್ಟ ಭೀಷ್ಮನಂತಿರುವವನು),

ಜಲನಿ ವಿನಯವಿಭೂಷಣಂ ಮನುನಿದಾನನನೂನದಾನಿ ಲೋಕೈಕ ಕಲ್ಪದ್ರುಮಂ ಗಜಾಗಮ ರಾಜಪುತ್ರನಾರೂಢಸರ್ವಜ್ಞಂ ಗಂಧೇಭ ವಿದ್ಯಾಧರಂ ನೃಪ ಪರಮಾತ್ಮಂ ವಿಬುಧ ವನಜವನ ಕಳಹಂಸಂ ಸುರತಮಕರಧ್ವಜಂ ಸಹಜಮನೋಜಂ ಆಂಕುಚಕಳಶ ಪಲ್ಲವಂ ಕರ್ಣಾಟೀ ಕರ್ಣಪೂರಂ ಲಾಟೀಲಲಾಮಂ ಕೇರಳೀಕೇಳಿಕಂದರ್ಪಂ ಸಂಸಾರಸಾರೋದಯಂ ಮಱುವಕ್ಕದಲ್ಲೞಂ ನೋಡುತ್ತೆ ಗೆಲ್ವಂ ಪಾಣ್ಬರಂಕುಸಂ ಅಮ್ಮನ ಗಂಧವಾರಣಂ ಪಡೆಮೆಚ್ಚೆ ಗಂಡಂ ಪ್ರಿಯಗಳ್ಳಂ ಗಣನಿ ಗುಣಾರ್ಣವಂ ಸಾಮಂತಚೂಡಾಮಣಿಯೆಂದಿಂತಿವು ಮೊದಲಾಗೆ ಪಲವುಮಷ್ಪೋತ್ತರಶತನಾಮಂಗಳನಿಟ್ಟು ವಿಶೇಷಾಶೀರ್ವಚನಂಗಳಿಂ ಪರಸಿ-

ಉ|| ಸಪ್ತ ಸಮುದ್ರ ಮುದ್ರಿತ ಧರಾತಳಮಂ ಬೆಸಕೆಯ್ಸು ವಿಱದು
ದ್ದ ಪ್ತ ವಿರೋ ಸಾಧನಮನಾಹವದೊಳ್ ತಱದೊಟ್ಟು ವಿಶ್ವದಿ|
ಗ್ವ್ಯಾಪ್ತ ಯಶೋವಿಳಾಸಿನಿಗೆ ವಲ್ಲಭನಾಗು ನಿರಂತರ ಸುಖ
ವ್ಯಾಪ್ತಿಗೆ ನೀನೆ ಮೊತ್ತಮೊದಲಾಗರಿಕೇಸರಿ ಲೋಕಮುಳ್ಳಿನಂ|| ೧೪೯

ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರ ಪ್ರಸಾದೋತ್ಪನ್ನ ಪ್ರಸನ್ನ ಗಂಭೀರವಚನರಚನ ಚತುರ ಕವಿತಾಗುಣಾರ್ಣವ ವಿರಚಿತಮಪ್ಪ ವಿಕ್ರಮಾರ್ಜುನ ವಿಜಯದೊಳ್ ಪ್ರಥಮಾಶ್ವಾಸಂ

ಶೌಚಾಂಜನೇಯ, (ಶುಚಿತ್ವದಲ್ಲಿ ಹನುಮಂತನಂತಿರುವವನು), ಆಕಳಂಕರಾಮ (ಕಲ್ಮಷ ರಹಿತನಾದ ರಾಮನಂತಿರುವವನು), ಸಾಹಸಭೀಮ (ಭಯಂಕರವಾದ ಸಾಹಸವುಳ್ಳವನು), ಜಗದೇಕಮಲ್ಲ (ಜಗತ್ತಿನಲ್ಲೆಲ್ಲ ಶೂರನಾಗಿರುವವನು), ಪ್ರತ್ಯಕ್ಷಜೀಮೂತವಾಹನ (ಎದುರಿಗೇ ಇರುವ ದಾನಶೀಲನೂ ವಿದ್ಯಾಧರ ಚಕ್ರವರ್ತಿಯೂ ಆದ ಜೀಮೂತವಾಹನ), ವಿದ್ವಿಷ್ಟವಿದ್ರಾವಣ (ಶತ್ರುಗಳನ್ನು ಓಡಿಹೋಗುವಂತೆ ಮಾಡುವವನು), ಮನುನಿದಾನ (ಮನುಚಕ್ರವರ್ತಿಯಂತೆ ಆದಿಪುರುಷನಾದವನು), ಪರಸೈನ್ಯಭೈರವ (ಶತ್ರುಸೈನ್ಯಕ್ಕೆ ಭಯಂಕರನಾಗಿರುವವನು), ಅತಿರಥಮಥನ (ಅತಿರಥರನ್ನು ಕಡೆದುಹಾಕುವವನು), ವೈರಿಗಜಘಟಾವಿಘಟನ (ಶತ್ರುಗಳೆಂಬ ಆನೆಗಳ ಸಮೂಹವನ್ನು ಭೇದಿಸುವವನು), ಅರಾತಿಕಾಲಾನಲ (ಶತ್ರುಗಳಿಗೆ ಕಾಲಾಗ್ನಿಯಂತಿರುವವನು), ರಿಪುಕುರಂಗಕಂಠೀರವ (ಶತ್ರುಗಳೆಂಬ ಜಿಂಕೆಗೆ ಸಿಂಹದಂತಿರುವವನು), ವಿಕ್ರಾಂತತುಂಗ (ಪರಾಕ್ರಮದ ಔನ್ನತ್ಯವನ್ನುಳ್ಳವನು) ಪರಾಕ್ರಮಧವಳ (ಶೌರ್ಯದಿಂದ ಬೆಳ್ಳಗಿರುವ ಯಶಸ್ಸನ್ನುಳ್ಳವನು), ಸಮರೈಕಮೇರು (ಯುದ್ಧದಲ್ಲಿ ಒಂದು ಮೇರು ಪರ್ವತದಂತಿರುವವನು), ಶರಣಾಗತ ಜಲನಿ (ಆಶ್ರಿತರಿಗೆ ಸಮುದ್ರದೋಪಾದಿಯಲ್ಲಿರುವವನು), ವಿನಯವಿಭೂಷಣ (ನಮ್ರತೆಯನ್ನೇ ಆಭರಣವನ್ನಾಗಿ ಉಳ್ಳವನು), ಅನೂನದಾನಿ (ಊನವಿಲ್ಲದೆ ದಾನಮಾಡುವವನು), ಲೋಕೈಕಕಲ್ಪದ್ರುಮ (ಸಮಸ್ತಲೋಕಕ್ಕೂ ಒಂದೇ ಕಲ್ಪವೃಕ್ಷದಂತಿರುವವನು) ಗಜಾಗಮರಾಜಪುತ್ರ (ಹಸ್ತಿಶಾಸ್ತ್ರದಲ್ಲಿ ರಾಜಪುತ್ರನಂತಿರುವವನು), ಆರೂಢಸರ್ವಜ್ಞ (ಅಶ್ವಾರೋಹಣ ವಿದ್ಯೆಯನ್ನು ಸಂಪೂರ್ಣವಾಗಿ ತಿಳಿದವನು), ಗಂದೇಭವಿದ್ಯಾಧರ (ವಿದ್ಯಾಧರದಲ್ಲಿ ಮದ್ದಾನೆಯಂತಿರುವವನು), ನೃಪಪರಮಾತ್ಮ (ರಾಜರಲ್ಲಿ ಪರಮಾತ್ಮನಂತಿರುವವನು), ಸುರತಮಕರಧ್ವಜ (ಸಂಭೋಗದಲ್ಲಿ ಮನ್ಮಥನಂತಿರುವವನು), ಸಹಜಮನೋಜ (ಸ್ವಭಾವವಾದ ಮನ್ಮಥ), ವಿಬುಧವನಜವನ ಕಳಹಂಸ (ಪಂಡಿತರೆಂಬ ಕಮಲಸರೋವರದ ಕಲಹಂಸದಂತಿರುವವನು), ಆಂಕುಚಕಳಶ ಪಲ್ಲವ (ಆಂಧ್ರಸ್ತ್ರೀಯರ ಮೊಲೆಗಳೆಂಬ ಕಳಸಕ್ಕೆ ಚಿಗುರಿನಂತಿರುವವನು), ಕರ್ಣಾಟೀಕರ್ಣಪೂರ (ಕರ್ಣಾಟಸ್ತ್ರೀಯರ ಕಿವಿಯಾಭರಣದಂತಿರುವವನು), ಲಾಟೀಲಲಾಮ (ಲಾಟದೇಶದ ಸ್ತ್ರೀಯರ ಹಣೆಯಾಭರಣ), ಕೇರಳೀಕೇಳಿಕಂದರ್ಪ (ಕೇರಳದೇಶದ ಸ್ತ್ರೀಯರ ಕ್ರೀಡೆಯಲ್ಲಿ ಮನ್ಮಥನ ಹಾಗಿರುವವನು), ಸಂಸಾರಸರೋದಯ (ಸಂಸಾರರಹಸ್ಯವನ್ನು ತಿಳಿದು ಅಭಿವೃದ್ಧಿಯಾಗುತ್ತಿರುವವನು), ಮರುವಕ್ಕದಲ್ಲಳಂ (ಶತ್ರುಸೈನ್ಯವನ್ನು ಭಯಪಡಿಸುವವನು) ನೋಡುತ್ತೆ ಗೆಲ್ವ (ದೃಷ್ಟಿಯಿಂದಲೇ ಗೆಲ್ಲುವವನು), ಪಾಣ್ಬರಂಕುಸ (ಜಾರರಿಗೆ ಅಂಕುಶಪ್ರಾಯನಾದವನು), ಅಮ್ಮನ ಗಂಧವಾರಣ (ತಂದೆಯ ಮದ್ದಾನೆ) ಪಡೆಮೆಚ್ಚೆಗಂಡ (ಸೈನ್ಯವು ಮೆಚ್ಚುವ ಹಾಗಿರುವ ಶೂರ), ಪ್ರಿಯಗಳ್ಳ (ಪ್ರಿಯಳನ್ನು ಅಪಹರಿಸಿದವನು), ಗುಣನಿ (ಗುಣಗಳ ಗಣಿ), ಗುಣಾರ್ಣವ (ಗುಣಸಮುದ್ರ) ಸಾಮಂತಚೂಡಾಮಣಿ (ಆಶ್ರಿತರಾಜರಲ್ಲಿ ತಲೆಯಾಭರಣದಂತಿರುವವನು), ಇವೇ ಮೊದಲಾದ ನೂರೆಂಟು ಹೆಸರುಗಳನ್ನಿಟ್ಟು ವಿಶೇಷಾಶೀರ್ವಾದಗಳಿಂದ ಹರಸಿದರು. ೧೪೯. ಎಲೈ ಅರಿಕೇಸರಿಯೇ ನೀನು ಲೋಕವಿರುವವರೆಗೆ ಏಳು ಸಮುದ್ರಗಳಿಂದ ಮುದ್ರಿಸಲ್ಪಟ್ಟ (ಸುತ್ತುವರಿಯಲ್ಪಟ್ಟ) ಭೂಮಂಡಲವನ್ನೂ ನಿನ್ನ ಆಜ್ಞಾನವನ್ನಾಗಿ ಮಾಡು. ನಿನ್ನನ್ನು ಮೀರಿ ಗರ್ವಿಷ್ಠರಾದ ಶತ್ರುರಾಜಸೈನ್ಯವನ್ನು ಯುದ್ಧದಲ್ಲಿ ಕತ್ತರಿಸಿ ಹಾಕು. ಸಮಸ್ತದಿಕ್ಕುಗಳಲ್ಲಿಯೂ ವ್ಯಾಪಿಸಿಕೊಂಡಿರುವ ಯಶೋಲಕ್ಷ್ಮಿಗೆ ಪತಿಯಾಗಿ ನಿರಂತರವಾದ ಸುಖಭೋಗಗಳಿಗೆ ನೀನೆ ಮೊತ್ತಮೊದಲಿಗನಾಗು ಎಂದೂ ಹರಿಸಿದರು.