ಕಂದ || ಶ್ರೀತಳ್ತುರದೊಳ್ ಕೌಸ್ತುಭಜಾತದ್ಯುತಿ ಬಳಸಿ ಕಾಂಡಪಟದಂತಿರೆ ಸಂ|

ಪ್ರೀತಿಯಿನಾ[1] ವನನಗಲಳ್ನೀತಿ-ನಿರಂತರನುದಾರನಾ ನೃಪ-ತುಂಗಂ ||೧||

ಕೃತಕೃತ್ಯಮಲ್ಲನಪ್ರತಿಹತ-ವಿಕ್ರಮನೊಸೆದು ವೀರನಾರಾಯಣನ -|

ಪ್ಪತಿಶಯ-ಧವಳಂ ನಮಗೀಗತರ್ಕಿತೋಪಸ್ಥಿತ-ಪ್ರತಾಪೋದಯಮಂ ||೨||

ಶ್ರೀ ವಿಶದ-ವರ್ಣೆ ಮಧುರಾರಾವೋಚಿತೆ ಚತುರ-ರುಚಿರ-ಪದ-ರಚನೆ ಚಿರಂ |

ದೇವಿ ಸರಸ್ವತಿ ಹಂ[2]ಸೀ-ಭಾವದೆ ನೆಲೆಗೊಳ್ಗೆ ಕೂರ್ತು ಮನ್ಮಾನಸದೊಳ್ ||೩||

 

(ಅನುವಾದಕನ ಮಂಗಳಪದ್ಯಗಳು)

ಪರಮ ಶ್ರೀವಿಜಯಪರಂಪರೆಯುಂ ನೃಪತುಂಗಮಾರ್ಗದಾಲೋಕನಮುಂ |

ನಿರುತಂ ಸುಕರಂ ಪೊಸೆತೆನೆ ವಿರಚಿಸುವಂ ಕೃಷ್ಣಮೂರ್ತಿ

ಸರಸತಿಯೊಲವಿಂ ||೧||

ದಂಡಿಯ ಕಾವ್ಯಾದರ್ಶಂ ಪಂಡಿತರಿಂ ಮಾನ್ಯಮಪ್ಪ ಬಾಮಹಕೃತಿಯುಂ |

ಪಿಂಡಿತಮೆನಲವುಗಳನೊಳಗೊಂಡೀ ಕೃತಿ ಕನ್ನಡಕ್ಕೆ ಪ್ರಥಮಾದರ್ಶಂ ||೨||

 

ಗುರುಗಳ ಕರುಣಾಲವದಿಂದುರುದುರ್ಗಮ ಕಾವ್ಯಶಾಸ್ತ್ರಪಾರಾವಾರಂ |

ಪರಿಗತಮೆನಿಪುದು ಸಹಜಂ ದೊರೆಕೊಂಡಿರಲಿಂತು ಗದ್ಯ- ಮುಪಗತಸಾರಂ ||೩||

 

ಹೊಸಗನ್ನಡ ಗದ್ಯಾನುವಾದಮೊದಲನೆಯ ಪರಿಚ್ಛೇದ

೧-೨. ಕೌಸ್ತುಭರತ್ನದಿಂದ ಪಸರಿಸುವ ಕಾಂತಿ (ರಂಗಸ್ಥಳದ) ತೆರೆಯಂತೆ ಹರಡಿರಲು, ಯಾರ ವಕ್ಷಃಸ್ಥಲವನ್ನು ಲಕ್ಷ್ಮೀದೇವಿಯು ಅನುರಾಗದಿಂದ ಎಂದೂ ಅಗಲದೆ ಇರುವಳೋ, ಆ ‘ನೀತಿ ನಿರಂತರ’, ‘ಉದಾರ’, ‘ನೃಪತುಂಗ’, ‘ಕೃತಕೃತ್ಯಮಲ್ಲ’, ‘ಅಪ್ರತಿಹತ-ವಿಕ್ರಮ’ ‘ಅತಿಶಯಧವಳ’ (ಇತ್ಯಾದಿ ಬಿರುದಾವಳಿಗಳಿಂದ ಭೂಷಿತನಾದ) ಶ್ರೀ ವೀರನಾರಾಯಣನು ನಮಗೆ ಸಕಲ ಸಾಹಸದ ಏಳ್ಗೆಯೂ ತಾಣಾಗಿಯೇ ಬಂದೊದಗುವಂತೆ ಪ್ರೀತಿಯಿಂದ ದಯೆಗೈಯಲಿ !

೩. ಅಚ್ಚ ಬಿಳಿಯ ಮೈಬಣ್ಣದವಳೂ, ಇಂಚರದವಳೂ, ಚತುರ ಸುಂದರ ವಚನಗಳನ್ನೇ ರಚಿಸುವವಳೂ ಆದ ಸರಸ್ವತೀದೇವಿಯ ಮಾನಸಸರೋವರದಲ್ಲಿ ಹಂಸಿಯು ನೆಲಸುವಂತೆ ನನ್ನ ಮಾನಸ ಅಥವಾ ಚಿತ್ತದಲ್ಲಿ ಅಕ್ಕರೆಯಿಂದ ನೆಲೆಗೊಳ್ಳಲಿ !

 

ಪೂರ್ವಕವಿ ಪ್ರಶಂಸೆ

ಪರಮಾಲಂಕಾರೊಚಿತ-ವಿರಚನೆಗಳ್ ನೆಗೞ್ಗುಮಾರ ವದನೋದರದೊಳ್ |

ನೆರಮಕ್ಕಾ ಪರಮ ಕವೀಶ್ವರರೆಮಗೀ ಕೃತಿಯೊಳಕೃತಕಾಚಾರಪರರ್ ||೪||

ನೃಪತುಂಗನ ಆಸ್ಥಾನದ ವಿದ್ವತ್ಸಭೆಯವರು

ಶ್ರುತದೊಳ್ ಭಾವಿಸಿ ನೋೞ್ಪೊಡೆ ಸತತಂ ಕವಿ-ವೃಷಭರಾ ಪ್ರಯೋಗಂಗಳೊಳಂ |

ಕೃ[3]ತ-ಪರಿಚಯ-ಬಲನಪ್ಪನನತಿಶಯಧವಳನ ಸಭಾಸದರ್ ಮನ್ನಿಸುವರ್ ||೫||

ವ್ಯಾಕರಣ-ಕಾವ್ಯ-ನಾಟಕ-ಲೋಕ-ಕಳಾ-ಸಮಯಮಾದಳಂಕೃಥಿಗಳೊಳಂ |

ವ್ಯಾಕುಳನಲ್ಲದನೇ[4]ಕೆ ವಿವೇಕ-ಬೃಹಸ್ಪತಿಯ ನಗರಮಂ ಪುಗುತರ್ಪಂ ||೬||

 

ಅವಿವೇಕಿಗಳ ಸ್ವಭಾವ

ಮೃ[5]ಗ-ಪಶು-ಗನಂಗಳೊಳಗ[6]ಣಿತ-ನಿಜ-ಜಾತಿ-ಜನಿತ-ಭಾಷೆಗಳೆಂದುಂ |

ನೆಗೞ್ದಂತಿರೆ ನರರೊಳಮಪ್ರಗಲ್ಭ-ವಚನ-ಪ್ರವೃತ್ತಿ ನೆಗೞ್ಗು ಸಹಜಂ ||೭||

೪. ಯಾರ ಮುಖ ಮಧ್ಯದ ಹೊರಬಂದ ಪದರಚನೆಗಳು ಉತ್ತಮ ಅಲಂಕಾರಗಳಿಂದ ಸಂಗತವಾಗಿಯೇ ಇರುವವೋ ಅಂತಹ ಶ್ರೇಷ್ಠ ಹಾಗು ಸದಾಚಾರ ಸಂಪನ್ನರಾದ ಕವೀಶ್ವರರು ನಮಗೆ ಈ ಕೃತಿಯಲ್ಲಿ ನೆರವಾಗಲಿ !

೫. ವಿಚಾರಮಾಡಿ ನೋಡಿದ್ದಾದರೆ, ಶಾಸ್ತ್ರಜ್ಞಾನದಲ್ಲಿಯೂ ಕವಿಶ್ರೇಷ್ಠರ ಪ್ರಯೊಗಗಳಲ್ಲಿಯೂ ಹೆಚ್ಚಿನ ಪರಿಣಿತಿಯ ಬಲವಿರುವಾತನನ್ನು ಮಾತ್ರ ‘ಅತಿಶಯ ಧವಳ’ನ ಸಭಾಸದರು ಮನ್ನಿಸುವರು.

೬. ವ್ಯಾಕರಣ, ಕಾವ್ಯ, ನಾಟಕ, ಲೋಕವಿದ್ಯೆಗಳು, ಕಲಾವಿದ್ಯೆಗಳು, ದರ್ಶನಗಳು ಮತ್ತು ಅಲಂಕಾರಗಳಲ್ಲಿ ಆಸಕ್ತನಲ್ಲದವನು ‘ವಿವೇಕಬೃಹಸ್ಪತಿ’ಯೆನಿಸಿದ ನೃಪತುಂಗನ ಪಟ್ಟಣವನ್ನೇಕೆ ಪ್ರವೇಶಿಸುವನು?

೭. (ವನ್ಯ) ಮೃಗಗಳು, (ಮಿಕ್ಕ) ಪಶುಗಳು, ಹಕ್ಕಿಗಳೂ-ಇವುಗಳ ಗುಂಪಿನಲ್ಲಿ ಕೂಡ ತಮ್ಮ ತಮ್ಮ ಜಾತಿಗನುಗುಣವಾದ ಭಾಷೆಗಳಿರುವುದು ಪ್ರಸಿದ್ಧ. ಹಾಗೆಯೇ ಮನುಷ್ಯರಲ್ಲಿಯೂ ಮುಗ್ಧ ಮಾತಿನ ಪ್ರವೃತ್ತಿ ಸ್ವಭಾವಸಿದ್ಧವಾಗಿಯೇ ಬರುತ್ತದೆ.

ಗುಣವಿದು ದೋಷಮಿದೆಂಬೀ ಗಣಿದಮನೆತ್ತಱ*ಗುಮಶ್ರುತ-ಪ್ರಕೃತಿ-ಜನಂ |

ತೃಣ-ಸಸ್ಯ-ಘಾಸ-ವಿಷಯ-ಪ್ರಣಯಂ ಸಮ-ವೃತ್ತಿಯಪ್ಪವೋಲ್

ಮೃಗ-ಗಣದೊಳ್ ||೮||

 

ಕಾವ್ಯಜ್ಞ ಪ್ರಶಂಸೆ

ಅದಱ*ಂ ಪರಮಾಗಮ-ಕೋವಿದನಪ್ಪುದು ಪೂರ್ವ-ಕಾವ್ಯ-ರಚನೆಗಳಂ ತಾಂ |

ಮೊದಲೊಳ್ ಕಲ್ತಂಗಲ್ಲದೆ ಪದದೊಳ್ ಜಾಣುಂ ಬೆಡಂಗುಮಕ್ಕುಮೆ

ಕೃತಿಯೊಳ್ ||೯||

ಜಡ-ಜನಮುಮೆಲ್ಲಮೋದಂ ತಡೆಯದೆ ಕಲ್ಗುಂ ಗುರುಪದೇಶ-ಕ್ರಮದಿಂ |

ನುಡಿ[7]ವಲ್ಮೆಯಲ್ತದೇಂ ಕಲ್ತೊಡನೋದುವುವ[8]ಲ್ತೆ ಗಿಳಿಗಳುಂ ಪುರುಳಿಗಳುಂ ||೧೦||

 

 

ಕಾವ್ಯ ಕಾರಣಗಳು

ಪ್ರ[9]ತಿಭಾವತ್ವಮುಮಕೃತಕ-ಚತುರತೆಯುಂ ಪರಮ-ಬುಧ-ಜನೋಪಾಸನಮುಂ |

ಶ್ರುತ[10]ಪರಿಚಯಮುಂ ತರ್ಕುಂ ಪ್ರತೀತಿಯಂ

ವಾಗ್ವಿದಗ್ಧತಾ-ನಿಪುಣತೆಯೊಳ್ ||೧೧||

 

 

೮. ‘ಇದು ಗುಣ, ಇದು ದೋಷ’ ಎಂಬ ವಿವೇಚನೆಯನ್ನು ವಿದ್ಯೆ ಕಲಿಯದ ಸಾಮಾನ್ಯ ಜನ ಹೇಗೆ ತಿಳಿದೀತು? ಮೃಗಗಳ ಸಮೂಹದಲ್ಲಿ ಹುಲ್ಲು, ಸಸ್ಯ, ಮೇವು-ಯಾವದಿರಲಿ ತಿನ್ನುವಾಸೆ ಒಂದೇ ಬಗೆಯಾದಾಗಿರುವಂತೆಯೇ (ಕಲಿಯದ ಜನರ ಅಭಿರುಚಿಯೂ ವಿವೇಚನಾರಹಿತವಾಗಿರುತ್ತದೆ).

೯. ಆದುದರಿಂದ ಮನುಷ್ಯನು ಶ್ರೇಷ್ಠ ಶಾಸ್ತ್ರಪಾರಂಗತನಾಗಬೇಕು. ಹಿಂದಿನ ಕಾವ್ಯರಚನೆಗಳನ್ನು ಮೊದಲು ಕಲಿಯದಿದ್ದವನಿಗೆ (ತಾನು ರಚಿಸುವ) ಕೃತಿಯಲ್ಲಿ ನುಡಿಯ ಜಾಣ್ಮೆಯಾಗಲಿ ಸೊಬಗಾಗಲಿ ಬರುವುದೆ?

೧೦. ಮಂದಬುದ್ಧಿಗಳಾದ ಜನ ಕೂಡ ಗುರುಗಳ ಉಪದೇಶಾನುಸಾರ ಎಲ್ಲ ಶಾಸ್ತ್ರವಿದ್ಯೆಯನ್ನೂ ಬೇಗ ಕಲಿಯಬಹುದು. ಆದರೆ ಅದೇನೂ ವಾಕ್ಪರಿಣತಿಯಾಗದು. ಗಂಡುಗಿಳಿ ಹೆಣ್ಣುಗಿಳಿಗಳೆಲ್ಲ ಕಲಿತ ಮಾತನ್ನು ಹಾಗೆಯೇ ಉಚ್ಚರಿಸುತ್ತವೆಯಷ್ಟೆ?

೧೧. ಪ್ರತಿಭೆಯ ಅಸ್ತಿತ್ವ, ಸಹಜವಾದ ಚತುರತೆ, ವಿದ್ವಜ್ಜನರ ಸೇವೆ, ಶಾಸ್ತ್ರಗಳ ಪರಿಚಯ-(ಎಲ್ಲವೂ ಸೇರಿ) ವಾಕ್ಪ್ರೌಢಿಮೆಯ ಅತಿಶಯ-ಜ್ಞಾನವನ್ನು (ಒಬ್ಬನಿಗೆ) ತಂದುಕೊಡುವವು.

 


[1] ನಾವಗಮಗಲಳ್ ‘ಪಾ’ (=ಕೆ.ಬಿ. ಪಾಠಕ್ ಆವೃತ್ತಿ, ಬೆಂಗಳೂರು, ೧೮೯೮).

[2] ಹಂಸವಿಭಾವದೆ ‘ಪಾ’.

[3] ಕೃತಿ ‘ಕ’ (=ಗೌರ‍್ನಮೆಂಟ್ ಓರಿಯಂಟಲ್ ಲೈಬ್ರರಿ, ಮದ್ರಾಸ್ ಹಸ್ತಪ್ರತಿ; ‘ಪಾ’ದಲ್ಲಿ ಉಲ್ಲಿಖಿತ).

[4] ನೇಕ ‘ಪಾ’

[5] ಮೃಗಪತಿ ‘ಅ’ ‘ಬ’ (‘ಅ’=ಮೈಸೂರು ಓರಿಯಂಟಲ್ ಲೈಬ್ರರಿ ಹಸ್ತಪತಿ ನಂ. ೧೨೫

[6] ಳಮಪ್ರತಿಹತವಚನ ‘ಅ’ ‘ಬ’.

[7] ನುಡಿಯಲ್ಕೆ ‘ಅ’ ನುಡಿಯಲ್ತದಂ ಕಲ್ತೊಡನೋದುವ ಬಲ್ಮೆ ‘ಬ’

[8] ದಲ್ತೆ ‘ಪಾ’ ಮತ್ತು ‘ಮ’ (=ಮದ್ರಾಸ್ ಯೂನಿವರ್ಸಿಟಿ ಆವೃತ್ತಿ, ಸಂಪಾದಕರು- ಎ. ವೆಂಕಟರಾವ್ ಮತ್ತು ಎಸ್. ಶೇಷ ಐಯ್ಯಂಗಾರ,  ೧೯೩೦).

[9] ಮತಿಭಾವತ್ವ ‘ಅ’

[10] ಕೃತಿ ‘ಪಾ’ ‘ಮ’