ಕನ್ನಡದಲ್ಲಿ ಈ ವರೆಗೆ ಗಮನಾರ್ಹವಾದ ಕೆಲವು ಯೋಜನೆಗಳು ರೂಪುಗೊಂಡಿವೆ. ಉಪ ಸಂಸ್ಕೃತಿಗಳ ಅಧ್ಯಯನ. ಕನ್ನಡ ಸಾಹಿತ್ಯ ಮರು ಮೌಲ್ಯೀಕರಣ, ಬುಡಕಟ್ಟು ಮಹಾಕಾವ್ಯ ಮಾಲೆ ಮುಂತಾದವುಗಳು; ಇವುಗಳ ಅಶಂದಾತ್ಮಕ ಹೊಸತನದಿಂದ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರಕ್ಕೆ ಮೌಲಿಕ ಕೊಡುಗೆಯನ್ನು ನೀಡಿದವುಗಳು.

ಅಂತಹವೇ ಮಹಾತ್ವಾಕಾಂಕ್ಷಿ ಕ್ರಿಯಾ ಯೋಜನೆಗಳ ಸಾಲಿನಲ್ಲಿ ನಿಲ್ಲುವಂತಾದ್ದು ನಮ್ಮ ವಿಶಿಷ್ಟ ಯೋಜನೆ “ಸಂಸ್ಕೃತಿ ಮಹಿಳಾ ಮಾಲಿಕೆ” ಸಂಪುಟಗಳು.

ಈ ವರೆಗೆ ಮಹಿಳೆಯ ಸಾಂಸ್ಕೃತಿಕ ಕೊಡುಗೆ, ಸ್ಥಾನಮಾನ ಹಾಗೂ ಅದರ ಬದಲಾಗುತ್ತಿರುವ ಚಹರೆಗಳನ್ನು ಕೇಂದ್ರವಾಗಿರಿಸಿಕೊಂಡ ಅಧ್ಯಯನ ಮಾಲಿಕೆ ಬಂದಿರಲಿಲ್ಲ. ಸಂಸ್ಕೃತಿ ಎನ್ನುವುದು ಇಡಿಯಾದ ಘಟಕವಾಗಿರುವ ಸಂದರ್ಭದಲ್ಲೇ ಹಲವು ಕ್ರೀಯಾಶೀಲ ಬಿಡಿ ಘಟಕಗಳ ಸಂಯುಕ್ತ ರೂಪವು ಆಗಿರುತ್ತದೆ.

ಕರ್ನಾಟಕ ಸರ್ಕಾರ ಇದೇ ಮೊದಲ ಬಾರಿಗೆ ಸಾಹಿತ್ಯ ಅಕಾಡೆಮಿಗೆ ಮಹಿಳಾ ಅಧ್ಯಕ್ಷರನ್ನು ನೇಮಿಸಿ ಸ್ತುತ್ಯಾರ್ಹ ಕೆಲಸ ಮಾಡಿತು. ಮಹಿಳಾ ಅಧ್ಯಕ್ಷರು, ಮಹಿಳಾ ಸದಸ್ಯರ ಸಂಖ್ಯಾ ಬಾಹುಳ್ಯದಿಂದ ರಚಿತವಾಗಿದ್ದ ಅಕಾಡೆಮಿ ಮಹಿಳಾ ಆಶಯಗಳನ್ನು ಮುಂಚೂಣಿ ನೆಲೆಗೆ ತರುವ ಹಲವು ಕಾರ್ಯಕ್ರಮಗಳನ್ನು ಕೈಗೊಂಡಿತು.

ಸಾಂಸ್ಕೃತಿಕ ಅರಿವಿನ ದೃಷ್ಟಿಯಿಂದ ಮಹಿಳಾ ನೆಲೆಗಳನ್ನು ಪರಿಶೀಲಿಸುವುದು ಈ ಇಡೀ ಕಾರ್ಯ ಯೋಜನೆಯ ಉದ್ದೇಶ. ಮಹಿಳೆ ಎಲ್ಲಾ ಸಮಾಜಗಳಂತೆ ನಮ್ಮಲ್ಲೂ ಕಲ್ಚರ್ ಆಫ್ ಸೈಲೆನ್ಸ್‌ವಲಯಕ್ಕೆ ನಿರ್ಬಂಧಿಸಲ್ಪಟ್ಟಿರುವವಳು. ಅದು ನುಡಿದಿಲ್ಲ ಎಂದ ಮಾತ್ರಕ್ಕೆ ಮಹಿಳೆ ಸಾಂಸ್ಕೃತಿಕವಾಗಿ ಮಿಡಿದಿಲ್ಲ ಎಂದಲ್ಲ. ದುಡಿಮೆಯಲ್ಲಿ ಸಂಪತ್ತಿನ ನಿರ್ಮಾಣದಲ್ಲೂ ಆಕೆಯ ಮೌನ ಮಿಡಿತ ಇದೆ. ತುಸು ಜಾಸ್ತಿಯೇ ಇದೆ.

ಹಾಗೆ ನೋಡಿದರೆ ‌ಅದು ಮೂಕ ಮೌನವಲ್ಲ. ನುಡಿವ ಮೌನ. ಸಾಂಸ್ಕೃತಿಕ ಕ್ರಿಯಾಶೀಲತೆಯ ಪ್ರಧಾನ ಧಾತು. ಮಹಿಳಾ ಕೇಂದ್ರದಲ್ಲೇ ಹೆಚ್ಚು ಸಕ್ರಿಯವಾಗಿದೆ.

ಅದು ಶಿಷ್ಟ, ಪರಿಶಿಷ್ಟ ಇತ್ಯಾದಿ ಯಾವ ಪ್ರಕಾರದಲ್ಲೇ ಆಗಿರಲಿ ಮಹಿಳಾ ನೆಲೆಗಳಿಂದಲೇ ಸಂಸ್ಕೃತಿಯ ಶಿಶು ಹಾಲೂಡಿಸಲ್ಪಡುತ್ತದೆ. ಬೆಚ್ಚಗೆ ಪೋಷಿಸಲ್ಪಡುತ್ತದೆ. ಅತ್ಯಂತ ಹೆಚ್ಚಾಗಿ ಜನಪದ ಗೀತೆಗಳನ್ನು ಹಾಡಬಲ್ಲವರು ಮಹಿಳೆಯರೇ, ಕತೆ ಹೇಳಬಲ್ಲವರು ಅವ್ವಂದಿರೇ, ಊರಮ್ಮಗಳಿಗೆ ನಡೆದುಕೊಂಡು ಅವರ ಮಹಿಳಾ ಪ್ರತಾಪಗಳನ್ನು ಪ್ರಚುರಪಡಿಸುವವರು ಗ್ರಾಮೀಣ ಮಹಿಳೆಯರೇ, ಮದುವೆ, ಶೋಭನ, ಚೌಲ ನಾಮಕರಣಗಳಲ್ಲಿ ಸಡಗರಿಸಿ ಓಡಾಡಿ, ಪ್ರತೀ ಶಾಸ್ತ್ರವನ್ನೂ ರಿವಾಜು ತಪ್ಪದಂತೆ ಮಾಡಿ, ದನಿಯೆತ್ತಿ ಸೋಬಾನ ಹಾಡಿ, ಮೈಲಾರನ ಪೂಜೆ ಅಥವಾ ಗಂಗಮ್ಮನ ಪೂಜೆ, ಮಾದಪ್ಪನ ಪೂಜೆ ಅಥವಾ ಬೇವಿನಟ್ಟಿ ಕಾಳಿಯ ಪೂಜೆಗಳ ಕಡೆಯಲ್ಲಿ ಮಂಗಳಗೀತೆ ಹಾಡಿ ತಮ್ಮ ಸಾಂಸ್ಕೃತಿಕ ಅಸ್ತಿತ್ವದ ಕುರುಹುಗಳನ್ನು ಸಾಬೀತುಗೊಳಿಸುತ್ತಲೇ ಇರುತ್ತಾರೆ.

ಮಧ್ಯಮ ವರ್ಗವೂ ಸೇರಿದಂತೆ, ಜನ ಸಮುದಾಯಗಳ ನಡುವೆ ಮೌಲ್ಯ, ನೀತಿ ನಡವಳಿಕೆಗಳ ಗುಣಮಟ್ಟವನ್ನು ಕಾಪಾಡಿಕೊಂಡು ಬರುವವರು ಮಹಿಳೆಯರು.

ಹೀಗಿದ್ದಾಗಲೂ ಸಾಂಸ್ಕೃತಿಕ ಲಾಂಛನಗಳಾಗಿ ಪುರುಷ ವರ್ಗದ್ದೇ ಪ್ರಧಾನ ಮೆರವಣಿಗೆ ನಡೆದುಕೊಂಡು ಬಂದಿದೆ. ಶೌರ್ಯ ಮತ್ತು ಅಕ್ರಮಣಗಳು ಸಮಾಜದ ಆದಿಮ ಪ್ರವೃತ್ತಿಯ ಒಂದು ಅಂಶವಾಗಿದ್ದುಕೊಂಡು ಅವುಗಳನ್ನು ಮರೆಸುವ ಪುರುಷ ಪ್ರಧಾನ ವ್ಯವಸ್ಥೆ ಅದೇ ಸಂದರ್ಭದಲ್ಲಿ ಸೃಜನೆ ಮತ್ತು ಪೋಷಣೆಯ ಹೆಣ್ತನದ ಪ್ರಧಾನ ಅಂಶಗಳನ್ನು ಹಿನ್ನೆಲೆಗೆ ತಳ್ಳಿಬಿಟ್ಟಿರುವುದು ಎಲ್ಲಾ ಕಡೆಯಲ್ಲೂ ನಡೆದಿದೆ.

ಉತ್ಪಾದನಾ ರಂಗದಲ್ಲಿ ಅಧಿಪತ್ಯ ಏರ್ಪಡಿಸಿಕೊಂಡ ಶಕ್ತಿಗಳೇ, ಸಾಂಸ್ಕೃತಿಕ ಸಂಪತ್ತಿನ ಒಡೆತನವನ್ನೂ ತಮ್ಮ ಲಿಂಗತ್ವದ ನೆಲೆಯಲ್ಲಿ ಕೇಂದ್ರೀಕರಿಸಿಕೊಂಡಿದ್ದು ಕಂಡು ಬರುತ್ತದೆ. ಕರ್ನಾಟಕದ ಧರ್ಮ ಮತ್ತು ದಾರ್ಶನಿಕ ಧಾರೆಗಳಲ್ಲಿ “ಶಕ್ತಿಯೋಗ”ದ ಆಕರದಿಂದಲೇ “ಶಿವಯೋಗ”ದ ಹಾದಿಗಳು ಮೈದಳೆದಿದ್ದನ್ನು ಹಲವಾರು ಚಿಂತಕರು ಗುರುತಿಸಿದ್ದಾರೆ. ಅದು ಹೇಗೋ ಶಿವ-ಶಕ್ತಿಯ ಸಂಯೋಗವಿಲ್ಲದೆ ಸೃಷ್ಟಿಯ ನಿಲುಗಡೆಯಿಲ್ಲ ಎಂದು ಭಾವಿಸುವ ಅವೈದಿಕವಾದ ಲಾಕುಳ, ಪಾಶುಪತ, ಕಾಳಾಮುಖ ಮುಂತಾದ ಶೈವ ಪಂಥಗಳು ತಮ್ಮ ಚೇತನದ ಧಾರೆಗಳನ್ನು “ಶಕ್ತಿ, ಕೇಂದ್ರಿತವಾದ ತಾಂತ್ರಿಕತೆ”ಯಲ್ಲಿ ರೂಢಿಸಿಕೊಂಡಿದ್ದರೂ, ಅಂತಿಮವಾದ ನಿಲುವಿನಲ್ಲಿ ಶಿವೋಪಾಸನೆ ಮಾತ್ರವಾಗಿ ವಿಜೃಂಭಿಸಿದೆ, ಶಕ್ತಿಯಿಲ್ಲದೆ ಶಿವನಿಲ್ಲ ಆದ್ದರಿಂದ ಶಿವೋಪಾಸನೆಯು ಶಕ್ತಿಯ ಆರಾಧನೆಯೂ ಆಗಿದೆ ಎಂಬ ತಾತ್ವಿಕ ಆಕೃತಿಯನ್ನು ನಿರ್ಮಿಸಲಾಯಿತು.

ಈ ತಾತ್ವಿಕ ಆಕೃತಿ ಬಹಳ ಸೂಕ್ಷ್ಮವಾಗಿ ನಿದರ್ಶಿಸುತ್ತಿರುವಂತೆ “ಶಕ್ತಿ” ತತ್ವವನ್ನು ಮರೆಯಲಾಗಿಲ್ಲ. ಆದರೆ ಮರೆಯಲ್ಲಿಡಲಾಗಿದೆ. ಈ “ದರ್ಶನ” ರೂಪಕ ನಿದರ್ಶಿಸುತ್ತಿರುವ ಬಗೆಯಲ್ಲೇ ಸಾಂಸ್ಕೃತಿಕ “ಶಕ್ತಿ”ಯ ನೆಲೆಗಳನ್ನು ಸಾಮಾಜಿಕವಾಗಿಯೂ ಮರೆಯಲ್ಲಿಡುತ್ತಾ ಬರಲಾಗಿದೆ.

ಇದಕ್ಕಿರುವ ಕಾರಣಗಳು-ಬೆಳವಣಿಗೆಯ ಹಾದಿಗಳು ಚರಿತ್ರೆಗೆ ಸಂಬಂಧಪಟ್ಟ ವಿಷಯಗಳು. ಸಾಮಾಜಿಕ ಉತ್ಪಾದನಾ ಕ್ಷೇತ್ರದಲ್ಲಿ ಮಹಿಳಾ ದುಡಿಮೆಯ ಚಟುವಟಿಕೆಗಳನ್ನು ಕೇವಲ ಪೂರಕ ಎಂದು ವರ್ಣಿಸಿದ ರೀತಿಯಲ್ಲೇ ಮಹಿಳಾ ಸಂಸ್ಕೃತಿ ನೆಲೆಗಳನ್ನೂ ಪೂರಕ ಎಂದು ಕರೆಯುತ್ತಾ ಬರಲಾಗಿದೆ.

ಈ ಪೂರಕ ಎಂಬ ವರ್ಣನೆಯಲ್ಲಿಯೇ ಅದು ದ್ವಿತೀಯ ಹಾಗೂ ಅಧೀನ ಎಂಬ ಧ್ವನಿ ಅಡಗಿಸಿಕೊಂಡಿರುವುದನ್ನು ನೋಡಬಹುದಾಗಿದೆ. ಈ ಚಾರಿತ್ರಿಕ ನಡೆಯ ಹಾದಿಯನ್ನು ಬದಲಿಸಿ ನಡೆಯುವುದು ದೀರ್ಘಕಾಲದ ಪ್ರಯಾಣ. ಸಾಂಸ್ಕೃತಿಕವಾಗಿ ಜೀವಂತವಾಗಿರುವ ನೆಲೆಗಳನ್ನು ಗುರುತಿಸಿ, ಅವುಗಳ ಸತ್ವವನ್ನು ಮುನ್ನೆಲೆಗೆ ತಂದು ಪರಿಚಯಿಸಿ, ಆ ಮೂಲಕ ಶಿವ-ಶಕ್ತಿ ಸಂಯೋಗದ ಅರ್ಥಪೂರ್ಣತೆಯ ಅರಿವನ್ನು ಬೆಳೆಸುವ ಕೆಲಸವಾಗಬೇಕು ಎಂದು ಸಂಸ್ಕೃತಿ ಮಹಿಳಾ ಮಾಲಿಕೆ ಉದ್ದೇಶಿಸಿದೆ.

“ಅರಿವು” ಮೂಡಿದೊಡನೆ “ಇರುವು” ಗೊತ್ತಾಗುತ್ತದೆ. ಇರವು ಕಂಡೊಡನೆ ಅದಕ್ಕೆ ಪ್ರಾತಿನಿಧ್ಯವನ್ನು ಕೊಡುವ ಪ್ರಕ್ರಿಯೆಗೆ ಒತ್ತಾಸೆ ಒದಗುತ್ತದೆ. ಅಂತಹ ಒಂದು ಪ್ರಯತ್ನವೇ ಸಂಸ್ಕೃತಿ ಮಹಿಳಾ ಮಾಲಿಕೆಯ ಸಂಪುಟಗಳು.

ಕರ್ನಾಟಕದ ಜನ ಜೀವನದಲ್ಲಿ ಹಲವಾರು ಕುಲ ಸಮುದಾಯಗಳು ಈಗಲೂ ಗುರುತಿಸಲ್ಪಡುವ ಸಾಂಸ್ಕೃತಿಕ ಚಹರೆಗಳನ್ನು ಉಳಿಸಿಕೊಂಡಿವೆ. ಒಂದು ಮಟ್ಟಿಗೆ ಅನನ್ಯತೆಯನ್ನು ಇಂತಹ ಪಂಗಡಗಳ ಆಚರಣೆ, ವಿಧಿವಿಧಾನ, ನಂಬುಗೆಗಳಲ್ಲಿ ನಾವು ಕಾಣಬಹುದು. ಜನಗಣತಿಯಲ್ಲಿ ಜಾತಿಯೊಂದನ್ನು ಪರಿಗಣಿಸುವಾಗ ಅದರ ಉದ್ಯೋಗ, ಸಾಮಾಜಿಕ ಸ್ಥಾನಮಾನ ಇತ್ಯಾದಿಗಳ ಆಧಾರದಲ್ಲಿ ಒಂದೊಂದು ಜಾತಿಯನ್ನು ಒಂದೊಂದು ಜಾತಿ ಗುಂಪಿಗೆ ಸೇರಿಸಿ ವರ್ಗೀಕರಿಸಲಾಗುತ್ತದೆ.

ಸಾಂಸ್ಕೃತಿಕ ಅಧ್ಯಯನಗಳು ಈ ಬಗೆಯ ದುಂಡಾದ “ಗಣತಿ”ಗಳ ಮೂಲಕ ನಡೆದರೆ ಹೆಚ್ಚು ಪ್ರಯೋಜನವಾಗುವುದಿಲ್ಲ. ವೈಶಿಷ್ಟ್ಯತೆ ಮತ್ತು ವೈವಿಧ್ಯತೆಗಳ ಆಧಾರದಲ್ಲಿ ಗಮನ ಹಾಕಿದಾಗ ಮಾತ್ರವೇ ಸಾಂಸ್ಕೃತಿಕ ನೇಯ್ಗೆಯ ಎಳೆಗಳು ನಿಚ್ಚಳವಾಗಿ ತಮ್ಮ ತಮ್ಮ ಸಾಮರ್ಥ್ಯ ಹಾಗೂ ಸೌಂದರ್ಯದೊಂದಿಗೆ ಗೋಚರವಾಗುತ್ತವೆ.

ನಮ್ಮ ಗಮನವೂ ಮುಖ್ಯವಾಗಿ ಈ ವೈಶಿಷ್ಟ್ಯತೆಗಳನ್ನು ಕುರಿತಾಗಿದೆ. ಜಾತಿ ಸಮುದಾಯಗಳನ್ನು ಅವುಗಳ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಪರಿಶೀಲಿಸಬೇಕೆಂದೊಡನೆ ನಾವು ಜಾತಿ ಬಣಗಳ ತಖ್ತೆ ತೆಗೆಯಬೇಕಾಗುತ್ತದೆ. ಇದೊಂದು ಸಂಕೀರ್ಣವಾದ ಸೂಕ್ಷ್ಮಗ್ರಾಹಿತ್ವ ಕೆಲಸ. ಆ ಬಗೆಯ ಸಾಂಸ್ಕೃತಿಕ ಎಚ್ಚರವನ್ನು ಇಟ್ಟುಕೊಂಡು ಜಾತಿಕುಲಗಳನ್ನು, ಜನಗಣತಿಯಾಧಾರದ ಜಾತಿ ಗುಂಪುಗಳ ನಡುವೆ ರಾಶಿ ಹಾಕದೆ, ಬೆರೆತ ನವಧ್ಯಾನ ರಾಶಿಯೊಳಗಿನ ಪ್ರತಿಧಾನ್ಯದ ರೂಪು ರೇಖೆಯನ್ನೂ ಮುತುವರ್ಜಿಯಿಂದ ಗಮನಿಸಿ ಸಂಸ್ಕೃತಿ ಎಂಬ ಈ ಸಂಯುಕ್ತ ವಸ್ತುವಿನಲ್ಲಿ ಕರಗಿದಂತಿರುವ ಆದರೂ ತನ್ನ ರಾಸಾಯನಿಕ ಸಂಯೋಜನೆ ಕಳೆದುಕೊಂಡಿರದ ವಿವರಗಳನ್ನು ದಾಖಲಿಸಲು, ವಿವರಿಸಲು, ವಿಶ್ಲೇಷಿಸಲು ಈ ಮಾಲಿಕೆ ಪ್ರಯತ್ನಪಟ್ಟಿದೆ.

ಉದಾಹರಣೆಗೆ ಹೇಳಬೇಕೆಂದರೆ ಒಕ್ಕಲಿಗ ಎಂದು ಕರೆಯಲ್ಪಡುತ್ತಿರುವ ಜಾತಿ ಗುಂಪಿನಲ್ಲಿರುವ ಹಲವು ಘಟಕಗಳಿವೆ. ಗಂಗಟಿಕಾರ, ನಾಮಧಾರಿ, ಕಂಚಿಟಿಗ ಮುಂತಾಗಿ ಇದೇ ಮಾತು ಕುರುಬ, ಬೇಡ, ಬೆಸ್ತ, ಗೊಲ್ಲ ಮುಂತಾದ ಎಲ್ಲಾ ಜನಸಮುದಾಯಗಳಿಗೂ ಅನ್ವಯವಾಗುತ್ತದೆ.

ವಿಶಿಷ್ಟವಾದ ಈ ಸಾಂಸ್ಕೃತಿಕ ಘಟಕಗಳು ಹಲವಾರು ಹಿನ್ನೆಲೆಗಳಿಂದಾಗಿ ರೂಪುಗೊಂಡಿರುತ್ತದೆ. ಆಯಾ ಸಾಂಸ್ಕೃತಿಕ ಸಮುದಾಯದ ಜನರ ಸಹಯೋಗ ಸಂಸರ್ಗ ಮತ್ತು ಸನ್ನಿವೇಶಗಳು ಪ್ರತಿಯೊಂದು ಘಟಕದಲ್ಲೂ ಕೆಲವು ಸಾಮಾನ್ಯೀಕರಣಗಳನ್ನು ಉಂಟುಮಾಡಿರುತ್ತದೆ. ಅದೇ ಸನ್ನಿವೇಶದಲ್ಲಿ ಅದರ ವೈಶಿಷ್ಟತೆಯ ಚಹರೆಗಳೂ ಉಳಿದುಕೊಂಡಿರುತ್ತವೆ. ಜೀವನೋಪಾಯದ ತಹಳದಿ, ಪ್ರಾದೇಶಿಕ ಭೌಗೋಳಿಕ ಅಂಶಗಳು ಈ ಬಗೆಯ ಸಾಮಾನ್ಯೀಕರಣಗಳನ್ನು ಪ್ರತಿಯೊಂದು ಘಟಕದಲ್ಲಿ ಒಡಮೂಡಿಸುವಲ್ಲಿ ಪ್ರಧಾನ ಪಾತ್ರ ನಿರ್ವಹಿಸುತ್ತವೆ. ಹೀಗಿರುವಾಗ ಸಂಸ್ಕೃತಿ ಘಟಕಗಳಾದ ಜನಸಮುದಾಯಗಳನ್ನು ಅಧ್ಯಯನ ಮಾಡುವಾಗ ಹಲವಾರು ಅಂಶಗಳು. ನಮೂನೆಗಳ ಪುನರಾವೃತ್ತಿ ಕಂಡುಬಂದರೆ ಆಶ್ಚರ್ಯವಿಲ್ಲ.

ಅಧ್ಯಯನಕ್ಕೊಳಪಡಿಸಿದ ಸಾಂಸ್ಕೃತಿಕ ಘಟಕಗಳ ನಡುವೆ ಇರುವ ಸ್ಥೂಲ ಸಾಮಾನ್ಯೀಕೃತ ಅಂಶಗಳು, ಹಾಗೆಯೇ ಅಲ್ಲಿ ವ್ಯಕ್ತಗೊಳ್ಳುವ ವಿಶಿಷ್ಟಾಂಶಗಳು ಇವುಗಳ ನಡುವೆ ಸೂಕ್ತವಾಗಿ ಸಮತೋಲನ ಉಂಟುಮಾಡುವ ರೀತಿಯಲ್ಲಿ ಸಂಸ್ಕೃತಿ ಮಹಿಳಾ ಮಾಲಿಕೆಯ ಕಾರ್ಯಯೋಜನೆಯನ್ನು ರೂಪಿಸಲಾಗಿದೆ. ಸಂಸ್ಕೃತಿಯ ಏಕಾಕಾರ ಪ್ರತಿಬಿಂಬವನ್ನು ಅದು ವಾಸ್ತವಿಕವಲ್ಲವೆಂಬ ಕಾರಣಕ್ಕೆ ನಿರಾಕರಿಸಬೇಕಾಗಿರುವಂತೆಯೇ, ಪ್ರತಿಯೊಂದು ಸಂಸ್ಕೃತಿಯೂ ಅತ್ಯಂತ ಭಿನ್ನತೆಗಳನ್ನು ಹೊಂದಿರುತ್ತದೆ ಎಂಬ ಅತಿರಂಜಿತ ಕಲ್ಪನೆಯನ್ನು ಇಟ್ಟುಕೊಳ್ಳಬೇಕಾಗಿಲ್ಲ.

ಅರಣ್ಯ ಪ್ರದೇಶಗಳಲ್ಲಿ, ಗಿರಿವನಗಳಲ್ಲಿ ಸಾಮಾನ್ಯ ಸಂಪರ್ಕ ಸಂವಹನಗಳಿಂದ ಅಂತರ ಉಳಿಸಿಕೊಂಡಿರುವ ಬುಡಕಟ್ಟು ಸಂಸ್ಕೃತಿಗಳನ್ನು ಅಧ್ಯಯನ ಮಾಡುವಾಗ ಎದ್ದು ಕಾಣುವ ಸಾಂಸ್ಕೃತಿಕ ಭಿನ್ನತೆಗಳು, ಗ್ರಾಮೀಣ ಸಮುದಾಯದ ಜಾನಪದದಲ್ಲಿ ಒಂದಾಗಿರುವ ಜಾತಿ ಉಪಜಾತಿಗಳ ನಡುವೆ ಕಂಡು ಬರದೇ ಇರಬಹುದು, ಆದರೆ ಇದರಲ್ಲೂ ಗಮನಾರ್ಹ ವೈಶಿಷ್ಟ್ಯತೆಗಳಿರುತ್ತವೆಂಬುದೇ ಸಂಸ್ಕೃತಿ ಸಂರಚನೆಯ ಚಮತ್ಕಾರವಾಗಿದೆ.

ದೂರದಿಂದ ನೋಡಿದರೆ ಒಂದೇ ಎಂಬಂತೆ ಕಾಣುವ ಜನಪದ ಸಂಸ್ಕೃತಿ ಅದರೊಳಗೆ ಸಾವಿರದೊಂದು ವೈವಿಧ್ಯತೆಯನ್ನು ಒಳಗೊಂಡಿರುತ್ತದೆ. ಒಂದೇ ಜಾತಿಯ ದಾಸ ಒಕ್ಕಲು ಮತ್ತು ಜೋಗಪ್ಪನ ಒಕ್ಕಲುಗಳ ನಡುವೆ ಕಂಡು ಬರುವ ವಿಭನ್ನತೆಗಳಿಂದ ಹಿಡಿದು, ಒಂದೇ ಜಾತಿಯ ಬೇರೆ ಬೇರೆ ಭೌಗೋಳಿಕ ಸೀಮೆಯ ಜನರ ನಡುವೆ ಇರುವ ವ್ಯತ್ಯಾಸಗಳು ಹಲವು. ಕೆಲವು ಸಲ ಒಂದೇ ಭೌಗೋಳಿಕ ಸೀಮೆಯಲ್ಲಿದ್ದಾಗಲೂ ಅವುಗಳ ಆರಂಭಿಕ ಕಾಲಘಟ್ಟದ ಸಮುದಾಯ ಜೀವನ ರೂಪಿಸಿ ಉಳಿಸಿದ ಸಂಸ್ಕೃತಿ ಕಾರಣಗಳು ಭಿನ್ನತೆಗೆ ಕಾರಣವಾಗಿರಬಹುದು.

ಒಂದೇ ಭೌಗೋಳಿಕ ಸೀಮೆ. ಒಂದೇ ಆರಂಭಿಕ ಸಮುದಾಯ ಜೀವನದ ಹಿನ್ನೆಲೆ ಇದ್ದರೂ ಕಾಲದ ನಡಿಗೆಯಲ್ಲಿ ಬೇರೆ ಬೇರೆ ಸಮುದಾಯಗಳು ಆಧರಿಸುವ ಜೀವನದ ಉಪಪತ್ತಿಗಳ ನಡುವೆ ಬರುವ ಭಿನ್ನತೆ ಹಲವು ಭಿನ್ನ ಸಾಂಸ್ಕೃತಿಕಾಚರಣೆಗಳ ಅಸ್ತಿತ್ವಕ್ಕೆ ಕಾರಣವಾಗಬಹುದು.

ಸಾವಿರಾರು ಜಾತಿ ಉಪಜಾತಿಗಳಿಂದ, ಕಸುಬುದಾರ ಪಂಗಡಗಳಿಂದ ಕೂಡಿರುವ ಕರ್ನಾಟಕದ ಸಾಂಸ್ಕೃತಿಕ ಭಿತ್ತಿಯನ್ನು ಅದರ ಎಲ್ಲಾ ಸಾಮ್ಯತೆ ಹಾಗೂ ಭಿನ್ನತೆಗಳ ಸಮೇತ ಅಧ್ಯಯನ ಮಾಡುವುದು ಅತ್ಯಂತ ದೀರ್ಘಕಾಲದ ಸಂಕೀರ್ಣ ಪ್ರಕ್ರಿಯೆಯ ಕಾರ್ಯ. ಅದು ಏಕಕಾಲದಲ್ಲಿ ಮಾನವ ಶಾಸ್ತ್ರೀಯ, ಸಮಾಜಶಾಸ್ತ್ರೀಯ ಚರಿತ್ರೀಯ ಹಾಗೂ ಸಾಂಸ್ಕೃತಿಕ ವಿಶ್ಲೇಷಣೆಯ ಆಯಾಮಗಳನ್ನು ಹೊಂದಿರುತ್ತದೆ.

ಸಂಸ್ಕೃತಿ ಮಹಿಳಾ ಮಾಲಿಕೆಯ ಅಧ್ಯಯನಕ್ಕೆ ಆ ಪ್ರಮಾಣದ ವ್ಯಾಪಕತೆ ಒದಗಿದೆಯೆಂದು ಹೇಳಲು ಸಾಧ್ಯವಿಲ್ಲ. ಇದ್ದುದರಲ್ಲೇ ಕಣ್ಣಿಗೆ ಗೋಚರವಾಗುವ ವೈವಿಧ್ಯಮಯ ಸಮುದಾಯಗಳನ್ನು ಅರಿಸಿಕೊಂಡು ಆಯಾ ಸಂಸ್ಕೃತಿಗಳೊಳಗೆ ಮಹಿಳೆಯರ ನೆಲೆ-ಬೆಲೆ ಏನಾಗಿದೆ ಎಂಬುದರ ಮೇಲೆ ಬೆಳಕು ಚೆಲ್ಲುವ ದಿಸೆಯಲ್ಲಿ ಈ ಮಾಲಿಕೆಯಲ್ಲಿ ಪ್ರಯತ್ನಿಸಲಾಗಿದೆ.

ಪ್ರತಿಯೊಂದು ಸಂಸ್ಕೃತಿಯ ಹಿನ್ನೆಲೆ, ಅದರ ಪ್ರಧಾನ ಚಹರೆಗಳು, ಅದರಲ್ಲಿ ಮಹಿಳೆಯರ ಪ್ರಾತಿನಿಧಿಕತೆ, ಪಾಲ್ಗೊಳ್ಳುವಿಕೆ, ಕಾಲಕಾಲಕ್ಕೆ ಅದರಲ್ಲಿ ವ್ಯಕ್ತಗೊಂಡಿರುವ ಬದಲಾವಣೆಗಳು, ವರ್ತಮಾನದ ಆ ಸಮುದಾಯದಲ್ಲಿ ಮಹಿಳೆಯರ ಸಾಂಸ್ಕೃತಿಕ ಕ್ರಿಯಾಶೀಲತೆಯ ವ್ಯಾಪ್ತಿ ಹಿಗ್ಗಿದೆಯೇ-ಕುಗ್ಗಿದೆಯೇ, ಹಾಗೂ ಅದಕ್ಕಿರಬಹುದಾದ ಕಾರಣಗಳೇನು ಎಂಬ ಅಧ್ಯಯನ ಚೌಕಟ್ಟನ್ನು ಈ ಮಾಲಿಕೆಯ ಲೇಖನಗಳಿಗೆ ಇರಿಸಿಕೊಳ್ಳಲಾಗಿದೆ.

ಈ ರೀತಿಯಿಂದ, ಆರಿಸಿಕೊಂಡಿರುವ ಪ್ರತಿಯೊಂದು ಸಮುದಾಯದ ಸಾಂಸ್ಕೃತಿಕ ಚರಿತ್ರೆ ಹಾಗೂ ಅದರ ವರ್ತಮಾನದ ಸ್ವರೂಪವನ್ನು ಮಂಡಿಸುತ್ತಲೇ ಅದರಲ್ಲಿ ಮಹಿಳೆಯ ಸಾಂಸ್ಕೃತಿಕ ಗತಕಾಲ ಮತ್ತು ವರ್ತಮಾನದ ವಾಸ್ತವಿಕ ಚಿತ್ರಗಳನ್ನು ಪ್ರತಿಫಲಿಸುವ ಪ್ರಯತ್ನ ಇದಾಗಿದೆಯೆನ್ನಬಹುದು.

ಯಾವುದೇ ಅಧ್ಯಯನವೆಂಬುದು ಒಂದು ಅವಿರತ ಪ್ರಕ್ರಿಯೆ. ಕಾಲದಿಂದ ಕಾಲಕ್ಕೆ ಬಲಗೊಳ್ಳುತ್ತಾ ಹೊಸ ಒಳನೋಟಗಳನ್ನು ಪಡೆದುಕೊಳ್ಳುತ್ತಾ ವಿವರ ಗ್ರಹಿಕೆಯಲ್ಲಿ ಹೆಚ್ಚು ನಿಶಿತಗೊಳ್ಳುತ್ತಾ ವಿಶ್ಲೇಷಣೆಗೆ ಸೂಕ್ಷ್ಮತೆಗಳನ್ನು ರೂಢಿಸಿಕೊಳ್ಳುತ್ತಾ ಹೋಗಬೇಕಾಗಿರುವ ನಿರಂತರ ಭೌದ್ಧಿಕ ಕ್ರಿಯೆ ಅದು.

ಈ ಹಂತಕ್ಕೆ ಇದು “ಇಂತೀ ನಮಸ್ಕಾರಗಳು” ಎಂಬಷ್ಟು ಖಚಿತವಾಗಿ ಮುಗಿದುಹೋಯಿತು ಎಂಬ ಮಾತೇ ಅಧ್ಯಯನ ಪ್ರಕ್ರಿಯೆಗೆ ಹೊಂದುವುದಿಲ್ಲ. ಪ್ರತಿ ಸಂಸ್ಕೃತಿಯನ್ನು ಹತ್ತಿಪ್ಪತ್ತು ವರ್ಷಗಳ ಕಾಲಾವಧಿಯಲ್ಲಿ ಪುನರ್ ಶೋಧನೆಗೆ ಪುನರ್ ಚಿಂತನೆಗೆ ಒಳಪಡಿಸಬೇಕಾದ ಅಗತ್ಯವಿರುತ್ತದೆ. ಆದರೆ ಯಾವುದೇ ಮಹಾ ಪ್ರಯಾಣವಾದರೂ ಒಂದಿಲ್ಲೊಂದು ಕಡೆ ಆರಂಭವಾಗಿರಬೇಕಲ್ಲವೇ. ಆ ಅರ್ಥದಲ್ಲಿ ನಮ್ಮ ಸಂಸ್ಕೃತಿಯಲ್ಲಿ “ಮಹಿಳೆ”ಯನ್ನು ಕಾಣುವ ಕಂಡರಿಸುವ ಸುದೀರ್ಘ ರಚನಾತ್ಮಕ ಸಾಂಸ್ಕೃತಿಕ ಪ್ರಕ್ರಿಯೆಗೆ ಸಂಸ್ಕೃತಿ ಮಹಿಳಾ ಮಾಲಿಕೆ ಸಂಪುಟಗಳು ಆರಂಭ ಹಾಡಿವೆ. ಅಲ್ಲಲ್ಲಿ ಆಗಾಗ ಪ್ರಾಸಂಗಿಕವಾಗಿ ಸಂಸ್ಕೃತಿ ಮತ್ತು ಮಹಿಳೆ ಎಂದು ಮಂಡಿತವಾಗುತ್ತಿದ್ದ ಬರಹಗಳಿಗಿಂತ ಹೆಚ್ಚು ನಿರ್ದಿಷ್ಟವಾಗಿ; ಗಮನ ಕೇಂದ್ರಿತವಾಗಿ ಮಹಿಳೆಯನ್ನು ನಮ್ಮನಾಡಿನ ವಿವಿಧ ಜಾತಿ ಸಮುದಾಯಗಳ ಎರಕವನ್ನು ಭಿತ್ತಿಯನ್ನಾಗಿಸಿಕೊಂಡು ಅರ್ಥೈಸುವ ಪ್ರಯತ್ನವೇ ಈ ಸಂಸ್ಕೃತಿ ಮಹಿಳಾ ಮಾಲಿಕೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಹಮ್ಮಿಕೊಂಡಿರುವ “ಸಂಸ್ಕೃತಿ ಮಹಿಳಾ ಮಾಲಿಕೆ” ಯೋಜನೆಯ ಮೇರೆಗೆ ಒಬ್ಬೊಬ್ಬ ಸಂಪಾದಕರಿಗೆ ತಲಾ ಹತ್ತು ಸಂಸ್ಕೃತಿಗಳನ್ನು ಒಪ್ಪಿಸಿ ಹತ್ತು ಜನ ಲೇಖಕ/ಲೇಖಕಿಯರಿಂದ ಪ್ರತಿಯೊಬ್ಬರೂ ಒಂದೊಂದು ಸಂಸ್ಕೃತಿಯನ್ನು ಮಹಿಳಾ ಕೇಂದ್ರೀಕೃತ ನೆಲೆಯಲ್ಲಿ ಸಂಶೋಧನಾತ್ಮಕ ಅಧ್ಯಯನವನ್ನು ನಡೆಸಿ ಸುಮಾರು ಐವತ್ತು ಪುಟಗಳ ಲೇಖನ ಬರೆದುಕೊಡಲು ಕೋರಲಾಗಿತ್ತು. ಈ ಅಧ್ಯಯನದಲ್ಲಿ ವಿಶೇಷವಾಗಿ ಮಹಿಳೆಗೆ ಹೆಚ್ಚು ಒತ್ತು ಕೊಡಲಾಗಿದೆ. ಪ್ರತಿಯೊಂದು ಸಂಸ್ಕೃತಿಯಲ್ಲಿ ಜವಾಬ್ದಾರಿಯ ಬಹುಪಾಲು ಪುರುಷರಿಗಿಂತ ಹೆಚ್ಚಾಗಿ ಸ್ತ್ರೀಯೇ ನಿಭಾಯಿಸುತ್ತಾಳೆ. ಒಂದು ಸಂಸ್ಕೃತಿ ಬೆಳೆದು ರೂಢಿಗತವಾಗಿ ಮುಂದುವರೆಯುವಲ್ಲಿ ಆ ಸಂಸ್ಕೃತಿಯ ಮಹಿಳೆಯ ಪಾಲ ಹೆಚ್ಚಿನದು. ಆದ್ದರಿಂದ ಮಹಿಳೆಯನ್ನೇ ಪ್ರಮುಖವಾಗಿಟ್ಟುಕೊಂಡು ಒಂದು ನೂರು ಸಂಸ್ಕೃತಿಗಳ ಅಧ್ಯಯನ ಮಾಡಿದ ಈ ಯೋಜನೆಯ ಒಂದು ಸಂಪುಟ ಹತ್ತು ಲೇಖನಗಳನ್ನೊಳಗೊಂಡಂತೆ ಒಟ್ಟು ಹತ್ತು ಸಂಪುಟಗಳನ್ನು ಹೊರತರುವ ಆಶಯ ಹೊಂದಿದೆ.

ಈ ಯೋಜನೆಯಡಿಯಲ್ಲಿ ಪ್ರಕಟವಾಗುತ್ತಿರುವ ಎಲ್ಲ ಸಂಪುಟಗಳ ಎಲ್ಲ ಲೇಖನಗಳ ಮೌಲಿಕತೆ ಒಂದೇ ಮಟ್ಟದಲ್ಲಿ ಇಲ್ಲದಿರಬಹುದು. ಆದರೆ ಸಂಪೂರ್ಣ ಯೋಜನೆಯೇ ಒಂದು ಘಟಕವಾಗಿ ತನ್ನದೇ ಆದ ವಿಶಿಷ್ಟ ಮೌಲಿಕತೆಯನ್ನು ಹೊಂದಿದೆಯೆಂಬುದು ಸತ್ಯ.

ಈ ಯೋಜನೆಯಲ್ಲಿ ಬಹಳಷ್ಟು ಜನ ಲೇಖಕ ಲೇಖಕಿಯರು ಪರಿಶ್ರಮಪಟ್ಟು ಕ್ಷೇತ್ರಕಾರ್ಯ ನಿರ್ವಹಿಸಿ ಸಂಶೋಧನಾತ್ಮಕ ಅಧ್ಯಯನದಲ್ಲಿ ತೊಡಗಿ ಲೇಖನಗಳನ್ನು ಸಿದ್ಧಪಡಿಸಿಕೊಟ್ಟಿದ್ದಾರೆ. ಅವರನ್ನು ಕೃತಜ್ಞತೆಯಿಂದ ನೆನೆಯುವುದು ನನ್ನ ಮೊದಲ ಕರ್ತವ್ಯ. ಈ ಯೋಜನೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ ಮತ್ತು ಅಕಾಡೆಮಿಯ ಎಲ್ಲ ಕೆಲಸ ಕಾರ್ಯಗಳಿಗೆ ತುಂಬು ಹೃದಯದಿಂದ ಸಹಕಾರ ನೀಡುತ್ತ ಬಂದಿರುವ ಸದಸ್ಯರಿಗೂ ನನ್ನ ಪ್ರೀತಿಯ ಕೃತಜ್ಞತೆಗಳು ಸಲ್ಲಲೇಬೇಕು. ಅಂತೆಯೇ ರಿಜಿಸ್ಟಾರ್‌ ಆಗಿರುವ ನನ್ನ ಪ್ರೀತಿಯ ಹುಡುಗ ವಿ.ಎನ್‌.ಮಲ್ಲಿಕಾರ್ಜುನ ಸ್ವಾಮಿ ಮತ್ತು ಸಿಬ್ಬಂದಿವರ್ಗ, ಅರ್ಥಪೂರ್ಣ ಮುಖಪುಟ ರಚಿಸಿಕೊಟ್ಟ ಕಲಾವಿದ ಶ್ರೀ ಶ್ರೀಪಾದರವರು, ಅಂದವಾಗಿ ಮುದ್ರಿಸಿಕೊಟ್ಟ ಪ್ರಿಂಟ್‌ಪಾರ್ಕ್‌ಮುದ್ರಣ ಸಂಸ್ಥೆ ಮಾಲೀಕರು ಇವರೆಲ್ಲರ ಸಹೃದಯದ ಸಹಕರವನ್ನು ನೆನೆಯುತೇನೆ. ಅಗಣಿತ ಹಿತೈಷಿಗಳನ್ನು ಹೃತ್ಪೂರ್ವಕವಾಗಿ ಸ್ಮರಿಸುತ್ತೇನೆ.

ಮತ್ತೊಮ್ಮೆ ಎಲ್ಲರಿಗೂ ಧ್ಯನವಾದಗಳು.

ಮಾರ್ಚ್ ೨೦೦೮
ಡಾ.ಗೀತಾ ನಾಗಭೂಷಣ