ಫೀನಿಕ್ಸ್ ವಿಮಾನ ನಿಲ್ದಾಣದ ಹವಾನಿಯಂತ್ರಿಕ ಮೊಗಸಾಲೆಯಲ್ಲಿ, ನನಗಾಗಿ ಕಾದಿದ್ದ ಮೂರ್ತಿಯವರ ಜತೆ ಹೊರಕ್ಕೆ ಕಾಲಿಟ್ಟಾಗ, ತಲೆಯ ಮೇಲೆ ಬಡಿಯುವ ಬಿಸಿಲಿನ ಝಳ ನನ್ನನ್ನು ಗಾಬರಿಗೊಳಿಸಿತು. ಮೂರ್ತಿಯವರಂತೂ ಬೆವತು ನೀರಿಳಿಯುತ್ತಿದ್ದರು. ನಾನೀಗ ದಟ್ಟ ಹಸುರಿನ ಮಧ್ಯ ಹಾಗೂ ಪಶ್ಚಿಮ ಅಮೆರಿಕವನ್ನು ದಾಟಿ, ಅಷ್ಟೇನೂ ಸಸ್ಯಸಮೃದ್ಧವಲ್ಲದ ದಕ್ಷಿಣಕ್ಕೆ ಬಂದಿದ್ದೇನೆ ಎನ್ನುವ ಅರಿವಾಯಿತು. ಸ್ಯಾನ್‌ಫ್ರಾನ್ಸಿಸ್ಕೋ ಬಿಟ್ಟ ಮೇಲೆ ಮೊಟ್ಟ ಮೊದಲ ಬಿಸಿ ತಾಗಿದ್ದು ಲಾಸ್ ಏಂಜಲೀಸ್‌ದಲ್ಲಿ. ಇದೀಗ ಅರಿಜ್ಹೋನಾದ ಮರುಭೂಮಿಯ ಉಷ್ಣವಲಯದೊಳಕ್ಕೆ ಪ್ರವೇಶಿಸಿದ್ದೆ. ನನ್ನನ್ನು ಬರಮಾಡಿಕೊಂಡ, ಬಿ.ಎಸ್.ಬಿ. ಮೂರ್ತಿಯವರು ಹೇಳಿದರು: ‘ನಾನು ಒಬ್ಬ ಎಂಜಿನಿಯರ್, ಈ ಮೊದಲು ನಾನು ಅಮೆರಿಕಾದ ಉತ್ತರದ ಪರಿಸರದಲ್ಲಿ ಸರ್ಕಾರಿ ಸೇವೆಯಲ್ಲಿದ್ದೆ. ಆದರೆ ಅಲ್ಲಿನ ಛಳಿ ತಡೆಯಲಾರದೆ ದಕ್ಷಿಣದ ಅರಿಜ್ಹೋನಾದ ಈ ಊರಿಗೆ ವರ್ಗಮಾಡಿಸಿಕೊಂಡೆ. ಈ ಭಾಗದ ಹವಾಮಾನ ನಮ್ಮ ಕರ್ನಾಟಕದ ಹಾಗೇ ಇದೆ, ಅಂತ ಈ ಕಡೆ ಬಂದೆ’. ನಾನೆಂದೆ : ‘ಕರ್ನಾಟಕದ ಹಾಗೇನೂ ಇದೆ; ಅಂದರೆ ಕರ್ನಾಟಕದ ಬಳ್ಳಾರಿ – ರಾಯಚೂರು ಜಿಲ್ಲೆಗಳ ಹಾಗೆ!’

ಸಂಜೆ ಫೀನಿಕ್ಸ್ ನಗರಕ್ಕೆ ಮೂವತ್ತು – ನಲವತ್ತು ಮೈಲಿ ದೂರದಲ್ಲಿರುವ ‘ಸೂಪರ್‌ಸ್ಟಿಷನ್ ಮೌಂಟನ್’ ತೋರಿಸಲು ಮೂರ್ತಿಯವರು ನನ್ನನ್ನು ಕರೆದುಕೊಂಡು ಹೋದರು. ಒಂದೂಕಾಲು ಗಂಟೆಯ ಪಯಣದ ಉದ್ದಕ್ಕೂ ದಾರಿಯ ಎರಡೂ ಬದಿಗೆ, ಇಡೀ ದಿನ ಬಿಸಿಲಿನ ಬಡಿತಕ್ಕೆ ಬಸವಳಿದ ಬರಡು ಬಯಲು ಬಿಸಿಯುಸಿರನ್ನು ಹೊಮ್ಮಿಸುತ್ತಿತ್ತು. ಅಲ್ಲಲ್ಲಿ ವಿಲಕ್ಷಣವಾದ ಕುರುಚಲು ಪೊದೆಗಳು ಹರಡಿಕೊಂಡಿದ್ದವು.

ಸೂಪರ್‌ಸ್ಟಿಷನ್ ಮೌಂಟನ್ ಎಂಬ ವಿಲಕ್ಷಣವಾದ ಹೆಸರಿನ ಬೆಟ್ಟಗಳ ಬಳಸುದಾರಿಯನ್ನೇರಿ ಒಂದೆಡೆ ನಿಂತಾಗ, ಸಂಜೆಯ ಸೂರ‍್ಯ ದೂರದ ಪಶ್ಚಿಮದಲ್ಲಿ ಸುಸ್ತಾಗಿ ಇಳಿಯುತ್ತಿದ್ದ. ಬೆಟ್ಟಗಳ ಮೈಯೆಲ್ಲ ಒಂದು ಬಗೆಯ ಕಂದು – ಕೆಂಪು ಬಣ್ಣದ ರಮ್ಯತೆಯನ್ನು ತೊಟ್ಟುಕೊಂಡಿತ್ತು. ಈ ಬೆಟ್ಟಗಳ ನಡುವೆ ಅಲ್ಲಲ್ಲಿ ಹರಡಿಕೊಂಡ ಕುರುಚಲು ಪೊದೆಗಳ ಮಧ್ಯೆ ಥಟ್ಟನೆ ಮೇಲೆದ್ದು ವಿಲಕ್ಷಣವಾದ ತೋಳುಗಳನ್ನೆತ್ತಿದಂತೆ ತೋರುವ ಕ್ಯಾಕ್ಟಸ್ – ಆಥವಾ ಕಳ್ಳಿ ಜಾತಿಗೆ ಸೇರಿದ ಸಸ್ಯ ವಿಶೇಷಗಳು, ಈ ಬೆಟ್ಟದ ಮೈಯೊಳಗೆ ನಿಲ್ಲಿಸಿದ ಬೆದರುಬೊಂಬೆಗಳಂತೆ ತೋರುತ್ತಿದ್ದವು. ಈ ಅರಿಜ್ಹೋನಾ ಪರಿಸರಕ್ಕೆ ವಿಶಿಷ್ಟವಾದ, ನೆಲದಿಂದ ಎತ್ತರಕ್ಕೆ ಎದ್ದು ಎರಡು ಮೂರು ಕವಲುಗಳಾಗಿ, ಒಂದು ರೀತಿಯ ತ್ರಿಶೂಲಗಳಂತೆ ತೋರುವ, ಹಸಿರು ತೋಳುಗಳ ತುಂಬ ಒಂದು ಬಗೆಯ ಮುಳ್ಳು ತುಂಬಿದ ಈ ಕ್ಯಾಕ್ಟಸ್‌ಗಳ ನಿಲುವು, ಸಂಜೆಯ ನಸುಗತ್ತಲಲ್ಲಿ ಯಾರನ್ನಾದರೂ ಬೆಚ್ಚಿ ಬೀಳಿಸುವುದಂತೂ ನಿಶ್ಚಯ. ನಾವು ಮುಂದೆ ಹೋದಂತೆ ಹೋದಂತೆ, ಬೆಟ್ಟದ ಒಳಭಾಗ ಮತ್ತಷ್ಟು ಕಣಿವೆಗಳಿಂದ, ಸಂಜೆ ಮಬ್ಬಿನೊಳಗೆ ರಹಸ್ಯಗಳಂತೆ ಅಲ್ಲಿ ನುಗ್ಗಿ ಇಲ್ಲಿ ಮರೆಯಾಗಿ ಮತ್ತೆಲ್ಲೋ ಕಾಣಿಸಿಕೊಳ್ಳುವ ರಸ್ತೆಗಳಿಂದ, ಆಗಾಗ ಧುತ್ತೆಂದು ಎದ್ದು ನಿಲ್ಲುವ ಮೊರಡು ಬಂಡೆಗಳಿಂದ, ಬಂಡೆಗಳ ಮರೆಯಲ್ಲಿ ವಿಲಕ್ಷಣವಾದ ಬಾಹುಗಳನ್ನೆತ್ತಿ ನಿಂತ ಕ್ಯಾಕ್ಟಸ್‌ಗಳಿಂದ – ನಾವು ಯಾವುದೋ ಪ್ರಾಚೀನ, ಅನಾಗರಿಕ, ಮಾಟದ ಲೋಕವೊಂದನ್ನು ಪ್ರವೇಶಿಸುತ್ತಿರುವ ಅನುಭವವಾಯಿತು. ಇದನ್ನು ಸೂಪರ್‌ಸ್ಟಿಷನ್ ಮೌಂಟನ್ (ಮೂಢನಂಬಿಕೆಗಳ ಪರ್ವತ) ಎಂದು ಹಿಂದಿನ ಇಲ್ಲಿನ ಆದಿವಾಸಿಗಳು ಕರೆದದ್ದು ಸಾರ್ಥಕವಾಗಿದೆ ಎಂಬ ಭಾವನೆ ದೃಢವಾಯಿತು.

ಸಂಜೆ ಮಬ್ಬಿನ ದಾರಿಯ ಎತ್ತರದ ನಿಲುಗಡೆಯೊಂದರಲ್ಲಿ ಕಾರು ನಿಲ್ಲಿಸಿ, ಕಣಿವೆಯ ಕೆಳಗಿನ ತೊಟ್ಟಿಲಲ್ಲಿ ಮಲಗಿ ಸಂಜೆಯಾಕಾಶದ ಹೊನ್ನಬಣ್ಣವನ್ನು ಜೀರ್ಣಿಸಿಕೊಳ್ಳುತ್ತಿದ್ದ ಸರೋವರವೊಂದನ್ನು ನೋಡುತ್ತ ನಿಂತೆವು. ನೋಡುತ್ತ ನಿಂತ ಹಾಗೆ ಕೆಳಗಿನ ಆ ಸರೋವರದ ಕಡೆಯಿಂದ ಮೇಲೇರಿ ಬರುವ ದಾರಿಯಲ್ಲಿ ಒಂದರ ಹಿಂದೊಂದು ಕಾರುಗಳು ಬಂದು, ನಮ್ಮ ಪಕ್ಕದಲ್ಲೆ ಹಾದು ಹೋದವು. ಕೆಲವು ಕಾರುಗಳ ಬೆನ್ನ ಮೇಲೆ ಮತ್ತೆ ಅವುಗಳಿಗೆ ಜೋಡಿಸಲಾದ ಜಂಟಿವಾಹನದ ಮೇಲೆ ದೋಣಿಗಳನ್ನು ಕಟ್ಟಿ ನಿಲ್ಲಿಸಲಾಗಿತ್ತು. ಅಂದರೆ ಈ ಜನ ಬೆಳಗಿನಿಂದ ಸಂಜೆಯತನಕ, ನಾವು ದೂರದಲ್ಲಿ ಕಂಡ ಆ ಸರೋವರದ ನೀರ ಮೇಲೆ, ದೋಣಿಗಳಲ್ಲಿ ಕೂತು, ಮೀನು ಹಿಡಿಯುವುದರಲ್ಲೋ ಅಥವಾ ಕ್ರೀಡಾ ವಿನೋದಗಳಲ್ಲೋ ತೊಡಗಿದವರು. ಈ ಅಮೆರಿಕಾದ ಜನ ತಮ್ಮ ಸುತ್ತಣ ನಿಸರ್ಗದೊಂದಿಗೆ ಬೆರೆತು, ಅದನ್ನು ತಮ್ಮ ಸುಖಸಂತೋಷಗಳಿಗೆ ಬಳಸಿಕೊಳ್ಳುವುದು ಹೇಗೆ ಅನ್ನುವುದನ್ನು ಚೆನ್ನಾಗಿ ಬಲ್ಲವರು.

ಸಾಕಷ್ಟು ಕತ್ತಲಾಗುವವರೆಗೆ ಈ ಭೀತಿಯ ಭೂತದ ಕಣಿವೆಯಲ್ಲಿ ನಿಂತು, ಸದ್ದೇ ಇಲ್ಲದ ಆ ಬೆಟ್ಟದ ಏರಿಳಿವುಗಳ ವಿಲಕ್ಷಣ ಆಕೃತಿಗಳನ್ನು ಕಾರಿನ ಮುಂದಿನ  ದೀಪಗಳು ತೆರೆದು ತೋರುತ್ತಿದ್ದ ದಾರಿಯಲ್ಲಿ, ಫೀನಿಕ್ಸ್ ಕಡೆಗೆ ಹೊರಟೆವು. ಉದ್ದಕ್ಕೂ ಬಿಸಿಯ ವಾತಾವರಣದಲ್ಲಿ ಬೆವರುತ್ತಾ ಮೂರ್ತಿಯವರ ಮನೆಗೆ ಬಂದು ಕಾರು ನಿಲ್ಲಿಸಿ, ಅವರ ಮನೆಯೊಳಗಣ ಹವಾನಿಯಂತ್ರಿತ ಕೊಠಡಿಯೊಳಗೆ ಪ್ರವೇಶಿಸಿದಾಗಲೇ, ನಮ್ಮ ತಾಪ ತಗ್ಗಿತು.

ಮೂರ್ತಿಯವರೂ, ಅವರ ಸಮೀಪಬಂಧುವಾದ ಶ್ರೀಮತಿ ಪ್ರೇಮಾ ಅವರೂ ಅಡುಗೆಯ ಕೆಲಸದಲ್ಲಿ ತೊಡಗಿದರು. ನಾನು ನನಗಾಗಿ ಬಿಟ್ಟುಕೊಟ್ಟ ಕೋಣೆಯೊಳಗೆ ವಿಶ್ರಮಿಸುತ್ತಾ ಕೂತಾಗ ಮೂರ್ತಿಯವರು ಅಂದಿನ ದಿನಪತ್ರಿಕೆಗಳ ಒಂದು ಕಂತೆಯನ್ನು ನನಗೆ ಕೊಟ್ಟು. ಅದರ ಜತೆಗೆ ಅವರಿಗೆ ಬಂದ ಕೆಲವಾರು ಮುದ್ರಿತ ಪತ್ರಗಳನ್ನು ನನ್ನ ಮುಂದೆ ಹಾಕಿ, ‘ನೋಡಿ, ಈ ದೇಶದಲ್ಲಿ ನಮಗೆ ಎಂತೆಂಥ ಪತ್ರಗಳು ಬರುತ್ತವೆ’ ಎಂದರು. ನೋಡಿದೆ. ವಿವಿಧ ಸಂಸ್ಥೆಗಳಿಂದ, ಸಾಲ ನೀಡುವ ಭರವಸೆಯನ್ನು ಘೋಷಿಸುವ ಪತ್ರಗಳು. ನೀವು ಮನೆ ಕಟ್ಟಿಕೊಂಡಿದ್ದೀರಾ? ಕಟ್ಟಲು ಅಥವಾ ಕೊಳ್ಳಲು ಸಾಲ ಬೇಕೆ? ನಮಗೆ ಬರೆಯಿರಿ. ಕಾರು ಕೊಳ್ಳುತ್ತೀರಾ? ಹಾಗಾದರೆ ನಮ್ಮಲ್ಲಿ ಸಾಲ ಪಡೆಯಿರಿ. ಉದ್ಯೋಗಕ್ಕೆ ಬಂಡವಾಳ ಬೇಕೆ? ಹಾಗಾದರೆ ಸಾಲಕ್ಕೆ ಅರ್ಜಿ ಹಾಕಿ. ಇತ್ಯಾದಿ. ಪತ್ರಗಳನ್ನು ಅತ್ತ ಹಾಕಿ, ಮತ್ತೊಂದೆರಡು ಪತ್ರಗಳನ್ನು ನೋಡಿದೆ. ಅವು ಬೇರೆ ಬೇರೆ ಶವಸಂಸ್ಕಾರ ಸಂಸ್ಥೆಗಳಿಂದ ಬಂದ ಪತ್ರಗಳು! ಅವುಗಳ ಮೊದಲ ವಾಕ್ಯವೇ, ‘ನೀವು ನಿಮ್ಮ ಅಂತ್ಯಸಂಸ್ಕಾರದ ಬಗ್ಗೆ ಎಂದಾದರೂ ಯೋಚಿಸಿದ್ದೀರಾ?’ – ಎಂದು ಪ್ರಾರಂಭವಾಗಿ, ‘ಹಾಗಾದರೆ ನಿಮ್ಮ ಹೆಸರನ್ನು ಈಗಲೇ ನೋಂದಾಯಿಸಿಕೊಳ್ಳಿರಿ’ ಎಂದು ಮುಕ್ತಾಯವಾಗುತ್ತವೆ. ಈ ನಡುವೆ, ನೀವು ಸತ್ತಾಗ ನಿಮ್ಮ ಶವಸಂಸ್ಕಾರವನ್ನು ಯಾವ ರೀತಿ, ಯಾವ ಧಾರ್ಮಿಕ ವಿಧಿಗಳಿಗೆ ಅನುಸಾರವಾಗಿ ಮಾಡಬೇಕು, ಅದಕ್ಕೆ ತಗಲುವ ವೆಚ್ಚಗಳೇನು? ಮತ್ತು ಈ ವೆಚ್ಚವನ್ನು ನೀವು ಎಷ್ಟು ಕಂತುಗಳಲ್ಲಿ ಕಟ್ಟಬೇಕಾಗುತ್ತದೆ ಇತ್ಯಾದಿ ವಿವರಗಳನ್ನೂ ಆ ಪತ್ರದಲ್ಲಿ ನಮೂದಿಸಲಾಗಿತ್ತು. ಇದನ್ನು ನೋಡಿ ಆಶ್ಚರ್ಯಪಡುವಂಥದೇನೂ ಇಲ್ಲ. ದಿನ ಬೆಳಗಾದರೆ, ಅದನ್ನು ಕೊಂಡುಕೊಳ್ಳಿರಿ, ಇದನ್ನು ಕೊಂಡುಕೊಳ್ಳಿರಿ ಎಂಬ ಜಾಹೀರಾತುಗಳ ಮೂಲಕ, ಕಂತು ಕಂತುಗಳಾಗಿ ಹಣ ಪಡೆದು ವಸ್ತುಗಳನ್ನು ಕೊಟ್ಟು ನಿಮ್ಮ ಬದುಕು ಸುಖಸಂತೋಷದಿಂದ ಕೂಡಿರಲಿ ಎಂದು ಆಶಿಸುವ  ರೀತಿಯಲ್ಲಿಯೇ, ‘ನಾಳೆ ನೀವು ಸತ್ತ್ತರೆ, ನಿಮ್ಮ ಶವಸಂಸ್ಕಾರದ ಬಗ್ಗೆ ಯೋಚಿಸಿದ್ದೀರಾ, ಹಾಗಾದರೆ ಆ ಜವಾಬ್ದಾರಿಯನ್ನು ನಮಗೆ ವಹಿಸಿರಿ’ – ಎಂಬ ಧಾಟಿಯ ಪತ್ರಗಳೂ ಸಹ ಮನುಷ್ಯನ ನೆಮ್ಮದಿ ಹಾಗೂ ಶ್ರೇಯಸ್ಸನ್ನೆ ಉದ್ದೇಶಿಸಿದವುಗಳಾಗಿವೆ. ಈ ದೇಶದ ಸಾಂಸಾರಿಕ ಸಂಬಂಧಗಳ ಹಿನ್ನೆಲೆಯಲ್ಲಿ, ವಯಸ್ಸಾದ ಜನ ತಮ್ಮ ಶವಸಂಸ್ಕಾರದ ಬಗ್ಗೆ ತಾವೇ ಮುಂಗಡವಾಗಿ ಯೋಚಿಸುವ ಅಗತ್ಯ ಒದಗುವುದು ಆಶ್ಚರ್ಯದ ಸಂಗತಿಯೇನಲ್ಲ. ಎಲ್ಲ ಬಾಂಧವ್ಯಗಳೂ ಒಂದು ಹಂತದಲ್ಲಿ ಕೊಂಡಿ ಕಳಚಿಕೊಂಡು, ಮನುಷ್ಯ ಏಕಾಂಗಿಯಾಗಬೇಕಾದಂಥ ಈ ಪರಿಸರದಲ್ಲಿ ಈ ‘ಶವಸಂಸ್ಕಾರ ಸಂಸ್ಥೆ’ಗಳಂಥ ವ್ಯವಸ್ಥೆಗಳು ಎಷ್ಟು ಅಗತ್ಯವಾದವುಗಳೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

***

ಜಗತ್ತಿನ ಏಳು ಮಹಾದ್ಭುತಗಳಲ್ಲಿ ಒಂದು ಎಂದು ಪರಿಗಣಿತವಾಗಿರುವ ‘ಗ್ರ್ಯಾಂಡ್ ಕ್ಯಾನಿಯನ್’ ಅನ್ನು ತೋರಿಸಲು ಮೂರ್ತಿಯವರು ಬೆಳಿಗ್ಗೆ ಎಂಟು ಗಂಟೆಯ ಹೊತ್ತಿಗೆ ನನ್ನನ್ನು ಕರೆದುಕೊಂಡು ಹೊರಟರು. ಪ್ರಯಾಣದ ಉದ್ದಕ್ಕೂ, ಫೀನಿಕ್ಸ್‌ನಿಂದ ಗ್ರ್ಯಾಂಡ್ ಕ್ಯಾನಿಯನ್‌ವರೆಗಿನ ಇನ್ನೂರ ಐವತ್ತು ಮೈಲಿಗಳ ಸುದೀರ್ಘ ಪಯಣದ ಉದ್ದಕ್ಕೂ, ಮತ್ತು ರಾತ್ರಿ ಉಳಿದುಕೊಂಡಾಗ, ನಮಗೆ ಬೇಕಾಗುವ ಎಲ್ಲ ಸಾಮಗ್ರಿಗಳನ್ನೂ, ತಿನಿಸುಗಳನ್ನೂ, ತಂಪು ಪಾನೀಯಗಳನ್ನೂ ಅವರು ವಿವರವಾಗಿ ಲೆಕ್ಕ ಹಾಕಿ ಕಾರಿನಲ್ಲಿ ಜಮಾಯಿಸಿಕೊಂಡಿದ್ದರು. ವೃತ್ತಿಯಿಂದ ಎಂಜಿನಿಯರ್ ಆದರೂ, ಮೂರ್ತಿಯವರು ಒಬ್ಬ ಅಧ್ಯಯನಶೀಲರೆಂದೇ ವಿಚಾರಪರರೆಂದೇ ನನಗೆ ಮನವರಿಕೆಯಾಯಿತು. ದಾರಿಯುದ್ದಕ್ಕೂ ಅವರು ನನ್ನೊಡನೆ ಚರ್ಚಿಸದ ವಿಷಯವೇ ಇರಲಿಲ್ಲ. ಸಾಹಿತ್ಯ, ಧರ್ಮ, ಕಲೆ ಇಂಥ ಎಷ್ಟೋ ವಿಚಾರಗಳನ್ನು ಕುರಿತು ನಾವು ಮಾತನಾಡುತ್ತ, ನಮಗೆ ದಾರಿ ಸಾಗಿದ್ದೇ ಗೊತ್ತಾಗಲಿಲ್ಲ. ಅಲ್ಲಲ್ಲಿ ಪ್ರೇಕ್ಷಣೀಯವಾದ ಸ್ಥಳ ಕಂಡಿತೆಂದರೆ, ‘ಬನ್ನಿ, ಇಲ್ಲಿ ನಿಮ್ಮ ಕಣ್ಣಿಗೊಂದು ಹಬ್ಬವಿದೆ’ ಎಂದು ಕಾರು ನಿಲ್ಲಿಸಿ ನನಗೆ ಅದನ್ನು ತೋರಿಸದ ಹೊರತು ಅವರಿಗೆ ತೃಪ್ತಿಯೇ ಇರಲಿಲ್ಲ. ಹಾಗೆ ನೋಡಿದರೆ ಅರಿಜ್ಹೋನಾದ ಈ ಬೆಂಗಾಡಿನಲ್ಲಿ ಸೌಂದರ್ಯಕ್ಕಿಂತ ರೂಕ್ಷತೆಯೇ ಮಿಗಿಲು. ಒಂದೇ ಸಮನೆ ಉರಿಯುವ ಬಿಸಿಲಿನ ಕೆಳಗೆ ಬಿದ್ದುಕೊಂಡ ಹೆದ್ದಾರಿಯ ಇಕ್ಕೆಲಗಳಲ್ಲೂ ಹಸುರಿಲ್ಲದ ಬೋಳು ಬಯಲುಗಳ ಏರಿಳಿತ, ಹಾಗೂ ಅಲ್ಲಲ್ಲಿ ಕಾಣಿಸಿಕೊಳ್ಳುವ ಕಲ್ಲು ಗುಡ್ಡಗಳ ಕಣಿವೆಗಳು, ಮತ್ತು ಈ ಗುಡ್ಡಗಳ ಮೈಯ ಮೇಲೆ ವಿಲಕ್ಷಣವಾದ ತೋಳುಗಳನ್ನೆತ್ತಿಕೊಂಡು ನಿಂತ ಪಾಪಾಸುಕಳ್ಳಿ (ಕ್ಯಾಕ್ಟಸ್) ಗಳ ವಕ್ರ ವಿನ್ಯಾಸಗಳ ಸಮೃದ್ಧಿ – ಇವೇ ಈ ದಾರಿಯ ನಿಸರ್ಗ ವಿಶೇಷಗಳೆನ್ನಬೇಕು. ಸುಮಾರು ಎರಡು ಗಂಟೆಗಳ ಕಾಲ ಈ ದಾರಿಯ ಮೇಲೆ ಉರುಳಿದ ನಂತರ, ‘ಮಾಂಟಿಜೂಮಾಕ್ಕೆ’ ಎಂಬ ಕೈಮರದ ಸೂಚನೆಯಂತೆ ಸ್ವಲ್ಪದೂರ ಹೋಗಿ ಹತ್ತಿರದಲ್ಲಿದ್ದ ಮಾಹಿತಿಕೇಂದ್ರ  (Information Centre) ದ ಬಳಿ ಕಾರು ನಿಲ್ಲಿಸಿದೆವು. ಆ ಮಾಹಿತಿಕೇಂದ್ರ ತ್ರಿಕೋನಾಕಾರದ ಒಂದು ಆಕರ್ಷಕವಾದ ಕಟ್ಟಡ. ಅದು ಮುಖ್ಯವಾಗಿ ವರ್ಡಿವ್ಯಾಲಿ ಎಂಬ ಈ ಪರಿಸರಕ್ಕೆ ಸಂಬಂಧಿಸಿದ್ದು. ಈ ಮಾಹಿತಿ ಕೇಂದ್ರದಲ್ಲಿ ಈ ಅರಿಜ್ಹೋನಾ ರಾಜ್ಯದೊಳಗೆ ಇದ್ದ ರೆಡ್‌ಇಂಡಿಯನ್ ಜನಾಂಗವನ್ನು ಕುರಿತು, ಚಿತ್ರಗಳ ಮೂಲಕ ಪುಸ್ತಕಗಳ ಮೂಲಕ, ಹದಿನೈದು ನಿಮಿಷದ ಅವಧಿಯ ಸಾಕ್ಷ್ಯಚಿತ್ರ ಪ್ರದರ್ಶನಗಳ ಮೂಲಕ ಪರಿಚಯ ಮಾಡಿಕೊಡುವ ವ್ಯವಸ್ಥೆ ಇದೆ. ಈ ಮಾಹಿತಿ ಕೇಂದ್ರದಿಂದ ಕೆಲವು ಮೈಲಿ ಮುಂದಕ್ಕೆ ಹೋದರೆ ಮಾಂಟಿಜೂಮಾ ಕೋಟೆ ಇದೆ. ವಾಸ್ತವವಾಗಿ ಅದು ಕೋಟೆ ಅಲ್ಲ. ಎತ್ತರವಾದ ಸುಣ್ಣಕಲ್ಲು ಬಂಡೆಗಳ ಬೆಟ್ಟದ ಗೋಡೆ. ಈ ಬೆಟ್ಟದ ಗೋಡೆಗಳ ಹಲವು ಹಂತಗಳಲ್ಲಿರುವ ದೊಡ್ಡ ದೊಡ್ಡ ಗುಹೆಯಾಕಾರದ ನೆಲೆಗಳಲ್ಲಿ, ಅಡ್ಡಗೋಡೆಗಳನ್ನು ನಿರ್ಮಿಸಿ, ಕೋಣೆಗಳನ್ನಾಗಿ ಮಾಡಿಕೊಂಡು, ಒಂದು ಕಾಲಕ್ಕೆ ಜನರು ವಾಸಮಾಡಿದ್ದರ ಸೂಚನೆಗಳಿವೆ. ನೆಲಮಟ್ಟದಿಂದ ಸುಮಾರು ಎಂಬತ್ತರಿಂದ ನೂರು ಅಡಿಗಳ ಎತ್ತರದಲ್ಲಿನ ಈ ಕೋಣೆಗಳಲ್ಲಿ, ರೆಡ್‌ಇಂಡಿಯನ್ ಬುಡಕಟ್ಟಿಗೆ ಸೇರಿದ ಜನ, ಸುಮಾರು ಹನ್ನೆರಡನೆಯ ಶತಮಾನದಲ್ಲಿ  ವಾಸಿಸುತ್ತಿದ್ದರೆಂದು ಹೇಳಲಾಗಿದೆ. ಈ ಬೆಟ್ಟ ಬಂಡೆಯ ಗೂಡುಗಳಲ್ಲಿ ಇಪ್ಪತ್ತು ಕೋಣೆಗಳಿದ್ದು ನೂರಾರು ಜನ ವಾಸಿಸುತ್ತಿದ್ದರೆಂದು ಉಹಿಸಬಹುದಾಗಿದೆ. ಈ ಎತ್ತರವನ್ನು ಆ ಜನ ಏಣಿಗಳ ಮೂಲಕ ಹತ್ತುತ್ತಿದ್ದರೆಂದು ತೋರುತ್ತದೆ. ಆದರೆ ಈ ಜನ ಇಲ್ಲಿಗೆ ಎಲ್ಲಿಂದ ಬಂದರು, ಮತ್ತು ಯಾವಾಗ ಏಕೆ ಈ ಗುಹೆಯ ನೆಲೆಗಳನ್ನು ಬಿಟ್ಟು ಎಲ್ಲಿಗೆ ಹೋದರು – ಎಂಬುದು ಚರಿತ್ರಕಾರರನ್ನು ಇಂದಿಗೂ ಕಾಡುವ ಪ್ರಶ್ನೆಗಳಾಗಿವೆ. ಆದರೆ ಇಲ್ಲಿ ದೊರೆತ ಅಂದಿನ ಜನದ ಕೊರಳ ಮಣಿಸರಗಳು, ಬಿದಿರುಬುಟ್ಟಿಗಳು, ಮಡಕೆಗಳು, ಈ ಎಲ್ಲ ಸಾಮಗ್ರಿಗಳಿಂದ ಇತಿಹಾಸ ಸಂಶೋಧಕರು, ಈ ಜನ ಬಹುಶಃ ೧೨೫೦ ರಿಂದ ೧೪೦೦ ರವರೆಗೆ ಈ ಪರಿಸರದಲ್ಲಿ ಇದ್ದರೆಂದು ಊಹಿಸಲು ಅವಕಾಶವಾಗಿದೆ.

ವಾಸ್ತವವಾಗಿ ಈ ಅರಿಜ್ಹೋನಾ ಪ್ರಾಂತ್ಯದಲ್ಲಿ ಒಂದು ಕಾಲಕ್ಕೆ ಅಮೆರಿಕಾದ ಮೂಲನಿವಾಸಿಗಳಾದ ರೆಡ್  ಇಂಡಿಯನ್ ಜನರೇ ಬಹು ಸಂಖ್ಯಾತರಾಗಿದ್ದರು. ಎತ್ತರವಾದ ಬೆಟ್ಟಗಳ ಗೋಡೆಗಳ ಆಸರೆಗಳಲ್ಲಿ, ಪರ್ವತದ ಕಣಿವೆಗಳಲ್ಲಿ ಮತ್ತು ಮರುಭೂಮಿಯ ಹಲವು ನೆಲೆಗಳಲ್ಲಿ ವಾಸಮಾಡುತ್ತಿದ್ದ ಈ ಜನರನ್ನು, ಮೆಕ್ಸಿಕೋ ಕಡೆಯಿಂದ ಈ ನಾಡನ್ನು ಪ್ರವೇಶಿಸಿದ, ಸ್ಪೆಯಿನ್ ದೇಶದ ಧಾಳಿಕಾರರು, ಬೆನ್ನಟ್ಟಿ ಬೇಟೆಯಾಡಿದರು. ಸ್ಪೆಯಿನ್ ದೇಶದ ಬಿಳಿಯರ ಬಂದೂಕಿನ ಸಿಡಿಗುಂಡುಗಳ ಎದುರಿಗೆ, ಈ ದೇಶೀಯರ ಬಿಲ್ಲು – ಬಾಣ – ಭರ್ಜಿಗಳು ನಿರುಪಯುಕ್ತವಾಗಿ ಪರಿಣಮಿಸಿದವು. ಅಲ್ಲಿ ಇಲ್ಲಿ ತಲೆಮರೆಸಿಕೊಂಡು ಬದುಕಿದ ಈ ಜನ, ಈಗಲೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇಂದಿಗೂ ಅರಿಜ್ಹೋನಾ ರಾಜ್ಯದಲ್ಲಿ ನಾಲ್ಕು ಭಾಷೆಗಳನ್ನು ಆಡುವ ಹದಿಮೂರು ರೆಡ್‌ಇಂಡಿಯನ್ ಬುಡಕಟ್ಟುಗಳಿವೆ ಎಂದು ಲೆಕ್ಕ ಹಾಕಲಾಗಿದೆ. ಇಪ್ಪತ್ತು ಕಡೆಗಳಲ್ಲಿ ಈ ಜನ ತಮ್ಮ ಬಿಡಾರಗಳನ್ನು  ಹೂಡಿಕೊಂಡು ನೆಲೆಸಿದ್ದಾರೆ. ಇವರಲ್ಲಿ ‘ನವಾಜೋ’ ಎಂಬ ಬುಡಕಟ್ಟಿಗೆ ಸೇರಿದ ಜನರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಈಗ ಅವರ ಸಂಖ್ಯೆ ಎಪ್ಪತ್ತು ಸಾವಿರ ಎಂದು ಅಂದಾಜು ಮಾಡಲಾಗಿದೆ. ಅವರು ತಾವು ಆಯ್ಕೆ ಮಾಡಿದ ಪ್ರತಿನಿಧಿಗಳಿಂದ ಆಳಲ್ಪಡುವ ಪ್ರತ್ಯೇಕ ಆಡಳಿತ ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದಾರೆ. ಅವರದೇ ಆದ ಪೋಲೀಸ್ ಪಡೆ, ಅವರದೇ ಆದ ನ್ಯಾಯಾಲಯ ಪದ್ಧತಿ ಇದೆ. ನ್ಯಾಯಾಲಯಗಳಲ್ಲಿ ನ್ಯಾಯತೀರ್ಮಾನ ಮಾಡಿಕೊಳ್ಳಲು ಆಯಾ ಪ್ರದೇಶದ ಹಾಗೂ ಬುಡಕಟ್ಟಿನ ಕಾನೂನುಗಳಿವೆ. ಆದರೆ ಯಾವ ‘ಲಾಯರ್’ಗಳನ್ನೂ ಈ ನವಾಜೋ ನ್ಯಾಯಾಲಯಗಳು ಒಳಕ್ಕೆ ಬಿಟ್ಟುಕೊಳ್ಳುವುದಿಲ್ಲ! ನವಾಜೋ ಬುಡಕಟ್ಟುಗಳವರ ಆಚಾರ ವಿಚಾರಗಳಲ್ಲಿ, ಹಿಂದಿನಿಂದ ಬಂದ ಸಂಪ್ರದಾಯಗಳದ್ದೇ ಹಿಡಿತ. ಅಳಿಯನಾದವನು, ತನ್ನ ಅತ್ತೆ ಅವನ ಮನೆಗೆ ಬಂದ ಹೊತ್ತಿನಲ್ಲಿ, ಅವಳ ಮುಖವನ್ನು ನೋಡಲೇ ಕೂಡದು; ಒಂದು ವೇಳೆ ನೋಡಿದನೋ, ದೊಡ್ಡ ದಂಡವನ್ನು ತೆರಬೇಕಾಗುತ್ತದೆ. ಇತರ ಹಲವು ಬುಡಕಟ್ಟುಗಳಲ್ಲಿಯಂತೆ ವಿವಾಹ ವಿಚ್ಛೇದನವೂ ಇವರಲ್ಲಿ ರೂಢಿಯಲ್ಲಿದೆ. ಮತ್ತು ಅದು ತೀರಾ ಸರಳ ಸ್ವರೂಪದ್ದು. ಗಂಡ ಹೊರಗೆ ಹೋದವನು ಮನೆಗೆ ಬಂದಾಗ, ತನಗೆ ಸಂಬಂಧಿಸಿದ ವಸ್ತುಗಳು ಹೊಸಿಲಾಚೆಗೆ ಬಿದ್ದಿದ್ದರೆ, ತನ್ನ ಹೆಂಡತಿ ತನಗೆ ‘ಸೋಡಾಚೀಟಿ’ ಕೊಟ್ಟಿದ್ದಾಳೆಂದು ತಿಳಿದುಕೊಳ್ಳತಕ್ಕದ್ದು!

ಒಂದು ಕಾಲಕ್ಕೆ ರೆಡ್‌ಇಂಡಿಯನ್ ಜನಾಂಗದವರು ವಾಸಮಾಡುತ್ತಿದ್ದ ‘ಮಾಂಟಿಜೂಮಾ’ ಬೆಟ್ಟದ ಗೋಡೆಗಳನ್ನು ನೋಡಿಕೊಂಡು ಮತ್ತೆ ನಮ್ಮ ಪ್ರಯಾಣ ಗ್ರ್ಯಾಂಡ್ ಕ್ಯಾನಿಯನ್ನಿನ ದಾರಿಯನ್ನು ಹಿಡಿಯಿತು. ಸುಮಾರು ನಲವತ್ತೈದು ನಿಮಿಷಗಳ ದಾರಿಯ ನಂತರ ‘ಫ್ಲಾಗ್ ಸ್ಟಾಫ್’ ಎಂಬ ದೊಡ್ಡ ಊರೊಂದನ್ನು ಹಾದು  ಮುಂದುವರಿದಂತೆ, ನೆಲದ ಬಣ್ಣ ಹಾಗೂ ವಾತಾವರಣದ ಹವಾಮಾನ, ಬದಲಾದ ಅನುಭವವಾಯಿತು. ಅದುವರೆಗೂ ಕಂಡ ಬಯಲುನಾಡು ಹಿಂದಾಗಿ, ಅತ್ಯಂತ ಸಸ್ಯ ಸಮೃದ್ಧವಾದ ಅರಣ್ಯದ ವಿಸ್ತಾರ ನಮ್ಮ ದಾರಿಯ ಎರಡೂ ಬದಿಗೆ ಹಬ್ಬಿಕೊಂಡಿತ್ತು. ಈ ಮರಗಳ ಎಲೆಗಳಲ್ಲಿ ಎಷ್ಟೋ ಆಗಲೇ ಚಿನ್ನದ ಬಣ್ಣಕ್ಕೆ ತಿರುಗಿದ್ದವು. ದಾರಿ ಉದ್ದಕ್ಕೂ, ‘ಈ ಅರಣ್ಯದ ಹೆದ್ದಾರಿಗಳನ್ನು ಗಲೀಜು ಮಾಡುವುದು ಕಾನೂನಿನ ಪ್ರಕಾರ ಅಪರಾಧ’ ಎಂದು ತಿಳಿಸುವ ಬೋರ್ಡುಗಳಿದ್ದವು. ದಾರಿ ಬದಿಗೆ ಅಲ್ಲಲ್ಲಿ ಕಸ ಹಾಕಲು ಡಬ್ಬಿಗಳನ್ನು ಇರಿಸಲಾಗಿತ್ತು. ನಾವು ಒಂದೆಡೆ ‘ಪಾರ್ಕಿಂಗ್ ಏರಿಯಾ’ದಲ್ಲಿ ಕಾರು ನಿಲ್ಲಿಸಿ, ಮನೆಯಿಂದ ತಂದ ಚಪಾತಿಯನ್ನು ತಿಂದು, ಹಣ್ಣಿನ ರಸ ಕಡಿದು, ಮತ್ತೆ ಎರಡೂ ಕಡೆ ಹಸಿರು-ಹೊನ್ನು ಎಲೆಗಳಿಂದ ಕಿಕ್ಕಿರಿದ ಮರಗಳ ದಾರಿಯಲ್ಲಿ ಮುಂದುವರಿದೆವು. ಕ್ರಮೇಣ ದಟ್ಟಮರಗಳ ಕಾಡು ಹಿಂದಾಗಿ ಅಸಂಖ್ಯಾತ ಕುರುಚಲು ಗಿಡಗಳು ಬೆಳೆದ ಬಯಲನ್ನು ಪ್ರವೇಶಿಸಿದೆವು. ಒಂದೆಡೆ ಗ್ರ್ಯಾಂಡ್ ಕ್ಯಾನಿಯನ್‌ಗೆ ಇಪ್ಪತ್ತೈದು ಮೈಲಿ ಎಂಬ ಬೋರ್ಡ್ ಕಾಣಿಸಿತು. ಆದರೆ, ದೂರದಲ್ಲಿ ಯಾವುದೇ ಬೆಟ್ಟದ ಸಾಲೂ ಕಣ್ಣಿಗೆ ಕಾಣದೆ, ಕಣ್ಣಳತೆಗೆ ನಿಲುಕುವ ದೂರವೆಲ್ಲಾ ಬಟಾಬಯಲೇ ಆಗಿತ್ತು. ಗ್ರ್ಯಾಂಡ್ ಕ್ಯಾನಿಯನ್ ಎಂಬುದೊಂದು ಭಾರೀ ಕಣಿವೆ ಎಂದು ಚಿತ್ರಗಳಲ್ಲಿ ನೋಡಿದ್ದೆ; ಆದರೆ ಹಾಗೆ ಕಣಿವೆಗಳಿರಬೇಕಾದರೆ ಎತ್ತರವಾದ ಪರ್ವತ ಶ್ರೇಣಿಗಳಿರಬೇಕಲ್ಲ, ಅವು ಎಲ್ಲಿ ಎಂಬುದು ನನ್ನ ಪ್ರಶ್ನೆಯಾಗಿತ್ತು. ಕಾರು ಮುಂದೆ ಚಲಿಸಿ ಒಂದರ್ಧಗಂಟೆಯೊಳಗಾಗಿ ನಾವು ‘ಗ್ರ್ಯಾಂಡ್ ಕ್ಯಾನಿಯನ್ ವಿಲೇಜ್’ ಅನ್ನು ತಲುಪಿದೆವು. ಈ ಹಳ್ಳಿಯಿಂದ ಗ್ರ್ಯಾಂಡ್ ಕ್ಯಾನಿಯನ್ ಕಂದರಗಳ ಮೇಲೆ ಹಾರಾಡಿ ನೋಡಲು ಹೆಲಿಕಾಪ್ಟರ್ ಸರ್ವಿಸ್ ಇದೆ ಎಂಬ ಜಾಹಿರಾತು ಕಣ್ಣಿಗೆ ಬಿತ್ತು. ಈ ಹಳ್ಳಿಯನ್ನು ದಾಟಿ ಮುಂದೆ ಹೋದಂತೆ ದಟ್ಟವಾದ ಅರಣ್ಯ ನಮ್ಮನ್ನು ಎದುರುಗೊಂಡಿತು. ಈ ಅರಣ್ಯದ ಪ್ರವೇಶ ದ್ವಾರದಲ್ಲಿ. ‘ದಿ ಗ್ರ್ಯಾಂಡ್ ಕ್ಯಾನಿಯನ್ ನ್ಯಾಷನಲ್ ಪಾರ್ಕ್’ (ಗ್ರ್ಯಾಂಡ್ ಕ್ಯಾನಿಯನ್ ರಾಷ್ಟ್ರೀಯ ಉದ್ಯಾನ) ಎಂದು ಬೋರ್ಡು ಹಾಕಲಾಗಿತ್ತು. ಈ ಪ್ರವೇಶ ದ್ವಾರದಲ್ಲಿ ಎರಡು ಡಾಲರ್ ಸುಂಕ ಕೊಟ್ಟು, ರಸೀದಿ  ಪಡೆದು ಮುಂದೆ ಹೋದೆವು. ದಟ್ಟ ಹಸುರಿನ ಕಾಡಲ್ಲದೆ, ಯಾವ ಗುಡ್ಡ- ಬೆಟ್ಟವೂ ಗೋಚರಿಸಲಿಲ್ಲ. ಈ ಅರಣ್ಯದ ದಾರಿಗಳನ್ನು ಹಾದು, ನೆಲೆ ನಿಲ್ಲಲು ವಸತಿಯೊಂದನ್ನು ಹುಡುಕಿಕೊಂಡು ಹೊರಟೆವು. ಮೂರ್ತಿಯವರು ಫೀನಿಕ್ಸ್ ನಗರದಿಂದ ದೂರವಾಣಿಯ ಮೂಲಕ ಮೊದಲೇ ನಮಗಾಗಿ ರಿಸರ‍್ವ್ ಮಾಡಿಸಿದ ‘ಯಾವಪೈ ಲಾಡ್ಜ್’ ಎಂಬ ವಸತಿ ಗೃಹ ಸಿಕ್ಕಿತು. ಆಗಲೇ ಮಧ್ಯಾಹ್ನದ ಮೂರು ಗಂಟೆಯಾಗಿದ್ದರಿಂದ, ಈ ವಸತಿ ಗೃಹದೊಳಗೆ ನಮ್ಮ ಸಾಮಾನುಗಳನು ತೆಗೆದಿರಿಸಲು ಈಗ ಸಮಯವನ್ನು ವ್ಯರ್ಥಮಾಡುವುದು ಬೇಡ ಎಂದು, ಈ ವಸತಿಗೃಹದ ಕೊಠಡಿ ನಮಗೆ ರಿಸರ‍್ವ್ ಆಗಿರುವುದನ್ನು ಖಚಿತಪಡಿಸಿಕೊಂಡು, ಕೊಠಡಿಯ ಬೀಗದಕೈಯ್ಯನ್ನು ಪಡೆದುಕೊಂಡು ನಿಂತನಿಲುವಿನಲ್ಲೇ ಗ್ರ್ಯಾಂಡ್ ಕ್ಯಾನಿಯನ್ ನೋಡಲು ಹೊರಟೆವು. ಒಂದೆಡೆ ಕಾರು ನಿಲ್ಲಿಸಿ, ದಟ್ಟಹಸುರಿನ ನಡುವಣ ಕಾಲುದಾರಿಯಲ್ಲಿ ಹೋಗಿ ನೋಡುತ್ತೇವೆ, ನಾವು ನಿಂತ ಸಮತಲ ಪ್ರದೇಶವೇ ಹಠಾತ್ತನೆ ಸಹಸ್ರಾರು ಅಡಿಗಳ ಪಾತಾಳಕ್ಕೆ ಧುಮುಕಿ ಬಿದ್ದ ಅನುಭವವಾಯಿತು. ನಾವು ನಿಂತಲ್ಲಿಂದ, ಅನೇಕ ಸಾವಿರ ಅಡಿಗಳಾಳಕ್ಕೆ ಮತ್ತು ಅಗಲಕ್ಕೆ ಬಾಯ್ದೆರೆದುಕೊಂಡ ಮಹಾಪ್ರಪಾತವೂ, ಆ ಪ್ರಪಾತದೊಳಗೆ ನಿಂತ, ಹಾಗೂ ತಲೆಯೆತ್ತಿ ಕೂತ ಅಸಂಖ್ಯ ಶಿಲಾ ವಿನ್ಯಾಸಗಳ ಆಕಾರಗಳೂ ಮಧ್ಯಾಹ್ನದ ಬಿಸಿಲಿನಲ್ಲಿ ಅನೇಕ ವರ್ಣಗಳಿಂದ ಹೊಳೆಯುತ್ತಿವೆ. ಕೆಂಪು-ಕಂದು-ಪಚ್ಚೆ-ಹಳದಿ-ಕೆಂಗಾವಿ-ಬಂಗಾರ ಇತ್ಯಾದಿ ಬಣ್ಣಗಳು ಆ ಕಣಿವೆಯೊಳಗಣ ಕಲ್ಲು ಪದರಗಳ ಮೈಯ್ಯಲ್ಲಿ ರಂಜಿಸುತ್ತಿವೆ. ವಿಸ್ತಾರವಾದ ಈ ಕಂದರದ ಅನೇಕ ಸಹಜ ಶಿಲ್ಪಕಲಾಕೃತಿಗಳ ಇಕ್ಕಟ್ಟಿನಲ್ಲಿ, ಕೆಳಗೆಲ್ಲೋ ಪ್ರವಹಿಸುವ ಕೊಲೆರೆಡೋ ನದಿ ಅಲ್ಲಿ ಇಲ್ಲಿ ಕಾಣಿಸುತ್ತದೆ. ಈ ಕೊಲೆರೆಡೋ ನದಿ, ಅದರ ಅಕ್ಕಪಕ್ಕದಲ್ಲಿ ನಿಂತ ಕಣಿವೆ ಗೋಡೆಗಳ ಮೈಯ್ಯನ್ನು ಅನೇಕ ಸಾವಿರ ವರ್ಷಗಳಿಂದ ಕೊರೆದೂ – ಉಜ್ಜೀ ಈ ಬಗೆಯ ವಿಲಕ್ಷಣ ಆಕೃತಿಗಳನ್ನು ಮೂಡಿಸಿದೆ ಎಂದು ಹೇಳಲಾಗಿದೆ. ಈ ಮಹಾ ಪ್ರಪಾತದ ಆಳ ಎರಡು ಸಾವಿರ ಅಡಿಗಳು; ಅಗಲ ಆರುನೂರು ಅಡಿಗಳಿಂದ ಹಿಡಿದು ಹದಿನೆಂಟು ಮೈಲಿಗಳಷ್ಟು. ಒಟ್ಟು ಇನ್ನೂರ ಎಂಬತ್ತು ಮೈಲಿಗಳ ಉದ್ದಕ್ಕೆ ಚಾಚಿಕೊಂಡಿರುವ ಈ ರುದ್ರ ಕಂದರ ಸೀಮೆಯಲ್ಲಿ, ಕೊಲೆರೆಡೋ ನದಿ ಅಕ್ಕಪಕ್ಕದ ಪ್ರಪಾತ ಶಿಲಾಭಿತ್ತಿಗಳನ್ನು ಕೊರೆದುಕೊಂಡು ಮಹಾವೇಗದಿಂದ ಧಾವಿಸುತ್ತದೆ. ಈ ಸುದೀರ್ಘ ಪಾತ್ರ-ಪಥದಲ್ಲಿ ಕೊಲೆರೆಡೋ ನದಿ, ಒಂದು ನೂರಾ ಅರವತ್ತು ಕಡಿದಾದ ಇಳಿಜಾರುಗಳಲ್ಲಿ ಧುಮುಕಿ ಮುನ್ನಡೆಯುತ್ತದೆ. ಆದರೆ, ಪ್ರಪಾತದ ತುಟಿಯಂಚಿನಲ್ಲಿ ನಿಂತು ನೋಡುವ ನಮ್ಮ ಕಣ್ಣಿಗೆ ಈ ನದಿ ಎಲ್ಲೋ ಕಾಲು ಮುರಿದುಕೊಂಡು ತೆವಳುತ್ತಿರುವಂತೆ ಭಾಸವಾಗುತ್ತದೆ. ಈ ಪ್ರಪಾತದಂಚಿನ ಕಾಲುದಾರಿಗಳ ಮೂಲಕ ಅನೇಕ ಸಾಹಸಿಗಳು ಇಳಿದು ಪಾತಾಳ ಪ್ರವೇಶದಲ್ಲಿ ತೊಡಗಿದ್ದರು; ಮತ್ತೆ ಕೆಲವರು ಇಂಥ ಅವರೋಹಣಕ್ಕೆಂದೇ ದೊರೆಯುವ ಹೇಸರಗತ್ತೆಗಳ ಮೇಲೆ ಕುಳಿತು, ಈ ದಾರಿಗಳಲ್ಲಿ ಹೊರಟಿದ್ದರು.

ಬಿಟ್ಟ ಕಣ್ಣು, ಬಿಟ್ಟ ಬಾಯಿಗಳಾಗಿ ನಿಂತ ನಾವು, ಈ ಮಹಾ ಪ್ರಪಾತದಂಚಿನ ಉದ್ದಕ್ಕೂ ಹುಚ್ಚು ಹಿಡಿದವರಂತೆ ಅಲೆದಾಡಿದೆವು. ಅಲೆದಾಡಿದೆವು ಎಂದರೆ ನಡೆದು ಹೋದೆವು ಎಂದಲ್ಲ; ಅನೇಕ ಮೈಲಿಗಳುದ್ದಕ್ಕೂ ಇದನ್ನು ಬೇರೆ ಬೇರೆಡೆಗಳಲ್ಲಿ ನಿಂತು ನೋಡಬೇಕೆಂದರೆ, ಕಾರುಗಳಲ್ಲೋ, ಬಸ್ಸುಗಳಲ್ಲೋ ಹೋಗಬೇಕು. ಎಷ್ಟು ನೋಡಿದರೂ, ಹೇಗೆ ನೋಡಿದರೂ ಈ ಪ್ರಪಾತವೈಭವ, ಬೃಹತ್ತಾದ ಆಯಸ್ಕಾಂತದಂತೆ ನಮ್ಮನ್ನು ಸೆಳೆಯುತ್ತಿತ್ತು. ಮೈಲಿ ಮೈಲಿಗಳ ಅಗಲಕ್ಕೆ ಹರಹಿಕೊಂಡ ಈ ಪ್ರಪಾತಪ್ರಪಂಚದೊಳಗಿಂದ ಬಹುವರ್ಣಮಯವಾದ ಶಿಖರ ಗೋಪುರಗಳೋ, ದೇಗುಲ ಶಿಲ್ಪಗಳೋ ಎಂಬಂಥ ಆಕೃತಿಗಳು ಅಸ್ತವ್ಯಸ್ತವಾಗಿ ಕಿಕ್ಕಿರಿದಿವೆ. ಪಾತಾಳ ಪ್ರತಿಭೆಯ ಹುಚ್ಚು ಮನಸ್ಸೊಂದು, ತನಗಿಚ್ಛೆ ಬಂದಂತೆ ಕೆತ್ತಿ ನಿಲ್ಲಿಸಿದ ವಿವಿಧಾಕಾರಗಳಿಗೆ, ಸಂಜೆಯ ಬಿಸಿಲು ಬಣ್ಣ ಬಳಿಯುವ ಕಾರ‍್ಯದಲ್ಲಿ ತನ್ಮಯವಾಗಿತ್ತು. ಈ ಅದೃಶ್ಯ ಹಸ್ತದ ಅಸಂಖ್ಯ ವರ್ಷಗಳ ಶಿಲ್ಪಕಲಾ ಕೌಶಲವನ್ನು ಹಲವು ಹತ್ತು ದಿಕ್ಕುಗಳಿಂದ ನೊಡುತ್ತಾ, ನಮ್ಮಂತೆಯೇ ಸಂಭ್ರಮಿತರಾದ ಬಹು ಸಂಖ್ಯೆಯ ಪ್ರವಾಸಿಗಳ ಜತೆಗೆ ಸಂಚರಿಸಿದೆವು. ಬಹುದೇಶದ, ಬಹುವರ್ಣದ, ಬಹುಭಾಷೆಯ ಪ್ರವಾಸಿಗಳು ಈ ಪ್ರಪಾತದಂಚಿನ ದೃಶ್ಯವೀಕ್ಷಣಾ ಬಿಂದುಗಳಲ್ಲಿ ನಿಂತು ನೋಡುತ್ತಿದ್ದರು: ಚಡ್ಡಿ ಹಾಕಿದ ಪಡ್ಡೆ ಹುಡುಗಿಯರು; ತಲೆ ಕೆದರಿಕೊಂಡು ಹಿಪ್ಪಿಗಳಂತೆ ತೋರುವ ಯುವಕರು; ಕೈಯ್ಯಲ್ಲಿ ಕೈ ಹಾಕಿ, ಮೈಗೆ ಮೈ ಬೆಸೆದುಕೊಂಡು ಪ್ರಪಾತದಂಚಿನಲ್ಲಿಯೇ ತುಟಿ ಸೇರಿಸಿಕೊಂಡು ನಿಂತ ಹದಿಹರೆಯದ ಹುಡುಗ ಹುಡುಗಿಯರು; ವಯಸ್ಸಾದರೂ ಬಗೆ ಬಗೆಯ ಸಿಂಗಾರ ಮಾಡಿಕೊಂಡು, ಕಿವಿಗೆ ಲೋಲಾಕು, ಕೊರಳಿಗೆ ಮುತ್ತಿನ ಸರ ಹಾಕಿಕೊಂಡು ತೊನೆದಾಡುವ ಮುದುಕಿಯರು; ವಿವಿಧ ನೆಲೆಗಳಲ್ಲಿ, ವಿವಿಧ ಭಂಗಿಗಳಲ್ಲಿ ನಿಂತು ಫೋಟೋ ತೆಗೆಯಿಸಿಕೊಳ್ಳುವ ಸಂಸಾರವಂದಿಗರು; ಇಡೀ ಪ್ರಪಾತದೃಶ್ಯಗಳನ್ನು ವಿಡಿಯೋ ಮಾಡಿಕೊಳ್ಳುವ ಕುಶಲಿಗಳು.

ಸಂಜೆಯ ಸೂರ‍್ಯ. ತನ್ನ ಕೊನೆಯ ಕಿರಣಗಳನ್ನು ಹಿಂದಕ್ಕೆಳೆದುಕೊಂಡು ಕಂದರದಾಚೆಗೆ ಮರೆಯಾದ. ಅದುವರೆಗೂ ಕಂಡ ವರ್ಣ ವಿಲಾಸಗಳು ದೀಪವಾರಿದ ಮೇಲಿನ ರಂಗಸ್ಥಲದಂತೆ ಕಳಾಹೀನವಾದವು. ವಿಲಕ್ಷಣವಾದ ನಿಶ್ಯಬ್ದವೊಂದು ಇಳೆಯನ್ನು ತಬ್ಬಿಕೊಂಡಿತು. ಕತ್ತಲು, ಮೆತ್ತಗೆ ತನ್ನ ರೆಕ್ಕೆಯನ್ನು ಹಾಸತೊಡಗಿತು. ನಾವು ನಮ್ಮ ವಸತಿಗೃಹವಾದ ‘ಯಾವಪೈ ಲಾಡ್ಜ್’ ನ್ನು ಕುರಿತು ಹೊರಟೆವು.

‘ಯಾವಪೈ’- ಅನ್ನುವುದು ರೆಡ್ ಇಂಡಿಯನ್ ಹೆಸರು, ಗ್ರ್ಯಾಂಡ್ ಕ್ಯಾನಿಯನ್ ಎಂದು ಕರೆಯಲಾಗುವ ಈ ಕೊಲೆರೆಡೋ ಪ್ರಪಾತ ಮೊದಲು ರೆಡ್‌ಇಂಡಿಯನ್ ಜನಾಂಗದವರ ನೆಲೆಯಾಗಿತ್ತು. ಬಿಲ್ಲು ಬಾಣಗಳನ್ನು ಹಿಡಿದು ಬೇಟೆಯಾಡುತ್ತ, ಪ್ರಪಾತದೊಳಗಿನ ನದೀ ತೀರದ ಬಂಡೆ ಗುಹೆಗಳ ವಿಸ್ತಾರದಲ್ಲಿ ಬದುಕುತ್ತ, ಯಾರ ಕಣ್ಣಿಗೂ ಬೀಳದಂತೆ ವಿಹರಿಸುತ್ತ ಇದ್ದ ಈ ಜನರನ್ನು, ಬಂಗಾರವನ್ನು ಹುಡುಕಿಕೊಂಡು ಬಂದ ಸ್ಪೇನ್ ದೇಶದ ಬಿಳಿಯರು, ತಮ್ಮ ಬಂದೂಕುಗಳಿಂದ ಗುಂಡು ಹಾರಿಸಿ ಆಕ್ರಮಣ ಮಾಡಿದಾಗ, ಈ ಮೂಲನಿವಾಸಿಗಳು ಇಲ್ಲಿಂದ ಕಾಲ್ತೆಗೆದಂತೆ ಕಾಣುತ್ತದೆ. ಈಗಲೂ ಅಂದಿನ ರೆಡ್‌ಇಂಡಿಯನ್ ಬುಡಕಟ್ಟಿಗೆ ಸೇರಿದ ಒಂದಷ್ಟು ಸಂಸಾರಗಳು, ಈ ಕೊಲೆರೆಡೋ ಪ್ರಪಾತದ ಒಳಭಾಗದಲ್ಲಿ ಮನೆ ಮಾಡಿಕೊಂಡಿದ್ದಾರಂತೆ. ಈ ‘ಚರಿತ್ರೆ’ಯನ್ನು ಕುರಿತು ಅದ್ಭುತವಾದ ಸಾಕ್ಷ್ಯಚಿತ್ರವೊಂದನ್ನು, ನಾವು ರಾತ್ರಿ ಎಂಟೂವರೆಯ ಹೊತ್ತಿಗೆ ಗ್ರ್ಯಾಂಡ್ ಕ್ಯಾನಿಯನ್ ವಿಲೇಜ್‌ನಲ್ಲಿರುವ ಐಮಾಕ್ಸ್ ಥಿಯೇಟರಿನಲ್ಲಿ ನೋಡಿದೆವು. ಈ ಚಿತ್ರದ ಹೆಸರು `”Hidden Secrets of Grand Cannyon’ (ಗ್ರ್ಯಾಂಡ್ ಕ್ಯಾನಿಯನ್ನಿನ ಗುಪ್ತ ರಹಸ್ಯಗಳು). ಈ ಪ್ರಪಾತದ ಪಾತಾಳ ಪ್ರಪಂಚದ ವಿಸ್ಮಯಗಳನ್ನೂ, ಕೊಲೆರೆಡೋ ನದಿಯ ಭೋರ್ಗರೆವ ಪ್ರವಾಹದಲ್ಲಿ ನಾಡ ದೋಣಿಗಳಲ್ಲಿ ಪಯಣ ಹೊರಟವರ ಭಯಂಕರ – ಅದ್ಭುತ ಅನುಭವಗಳನ್ನೂ ಸಾಕ್ಷಾತ್ತಾಗಿ ಕಣ್ಣಿಗೆ ಕಟ್ಟಿ ನಮ್ಮನ್ನೂ ಆ ಅನುಭವದೊಳಕ್ಕೇ ಸೆಳೆದುಕೊಂಡು ಹೋಗುವ, ಈ ಸಾಕ್ಷ್ಯಚಿತ್ರವನ್ನು ನೋಡದೆ ಹೋದರೆ, ಈ ಗ್ರ್ಯಾಂಡ್ ಕ್ಯಾನಿಯನ್ನಿನ ಪ್ರವಾಸ ಅಪೂರ್ಣವಾದಂತೆಯೇ.

ಮೈ ನಡುಗಿಸುವ ಛಳಿಯಲ್ಲಿ, ಮನೆಯಿಂದ ತಂದ ಊಟವನ್ನು ಮುಗಿಸಿ, ಯಾವಪೈ ಲಾಡ್ಜ್‌ನ ಕೋಣೆಯೊಳಗೆ ಹೊದ್ದುಕೊಂಡು ಮಲಗಿದ್ದೊಂದೇ ಗೊತ್ತು. ಗಾಢವಾದ ನಿದ್ದೆಯ ಕಂದರದೊಳಗೆ, ಗ್ರ್ಯಾಂಡ್ ಕ್ಯಾನಿಯನ್ನಿನ ಕನಸಿನ ಹೊಳೆಯಲ್ಲಿ ತೇಲಿ, ಎಚ್ಚರದ ದಡಕ್ಕೆ ಬಂದಾಗ ಬೆಳಿಗ್ಗೆ ಏಳೂವರೆ ಗಂಟೆ.

ಬೇಗ ಬೇಗ ಸಿದ್ಧವಾಗಿ, ಹತ್ತಿರದ ರೆಸ್ಟೋರಾಂಟ್ ಒಂದರಲ್ಲಿ ಉಪಹಾರ ಮುಗಿಸಿ, ಮತ್ತೆ ಗ್ರ್ಯಾಂಡ್ ಕ್ಯಾನಿಯನ್ನಿನ ಅಂಚಿಗೆ ನುಗ್ಗಿದೆವು. ಬೆಳಗಿನ ಬೆಚ್ಚನೆಯ ಬಂಗಾರದ ಬಿಸಿಲಲ್ಲಿ, ಆ ಮಹಾಪ್ರಪಾತದೊಳಗಿನ ಶಿಲಾಶಿಲ್ಪಾಕೃತಿಗಳು, ಬಹುವರ್ಣಮಯವಾಗಿ ಶೋಭಿಸುತ್ತಿದ್ದವು. ಈ ಪ್ರಪಾತ ಪ್ರಪಂಚದ ನಿಯತಿಯೆ ಬೇರೆ ಅನ್ನುವಂತೆ, ಆ ಪಾತಾಳದ ಮನೋಮಯದ ಅಜ್ಞಾತ ಸ್ತರಗಳಿಂದ, ಅಸಂಖ್ಯ ಸುಂದರ ವರ್ಣದ ಆಕೃತಿಗಳು ಮೂಡಿ, ಈಗ ತಾನೇ ಪ್ರದರ್ಶನಕ್ಕೆ ಸಿದ್ಧವಾಗಿವೆಯೋ ಎಂಬಷ್ಟು ಹೊಚ್ಚ ಹೊಸದಾಗಿ ಕಾಣುವ ಬಹು ಬಗೆಯ ಗೋಪುರಾಕಾರದ ಶಿಲಾವಿನ್ಯಾಸಗಳು ಹರಡಿಕೊಂಡಿದ್ದವು. ಸೂರ‍್ಯನ ಬಿಸಿಲು, ಈ ಆಕೃತಿಗಳ ಒಂದೊಂದು ಮಗ್ಗುಲನ್ನೂ ಅನಾವರಣ ಮಾಡುತ್ತ ಬಂದ ಹಾಗೆ, ಪ್ರತ್ಯಕ್ಷವಾಗತೊಡಗಿದ ವರ್ಣವಿಲಾಸ ಅನುಪಮವಾದದ್ದು. ಈಗ ನಸುಗೆಂಪಾದದ್ದು, ಸ್ವಲ್ಪ ಹೊತ್ತಿಗೆ ಪಚ್ಚೆಯಾಗುತ್ತಿತ್ತು; ಈಗ ಕಂದು ಬಣ್ಣವಾದದ್ದು ಸ್ವಲ್ಪ ಹೊತ್ತಿಗೆ ಬೂದು ಬಣ್ಣವಾಗುತ್ತಿತ್ತು. ಈ ಕಂದರ ಶಿಲ್ಪದ ಕಲ್ಲಿನ ಗುಣವೇ ಹಾಗೆ. ಅದೇನು ಕಲ್ಲೋ, ಸೃಷ್ಟಿಕರ್ತನ ಮನದೊಳಗಿನ ಕನಸೋ, ನಾನು ಇದುವರೆಗೂ ಅನೇಕ ಕಡೆ, ಅನೇಕ ಸಲ ಕಂಡ ಎಲ್ಲಾ ದೇವಾಲಯಗಳ ಕುಸುರಿ ಕೆಲಸಗಳ ಕೌಶಲದ ಮೂಲನಿಧಿ, ಇಲ್ಲಿನ ಸಹಜ ಶಿಲಾವಿನ್ಯಾಸಗಳಲ್ಲಿ ನಿಕ್ಷಿಪ್ತವಾಗಿದೆಯೋ ಎಂಬ ಭ್ರಮೆಯನ್ನು ಕವಿಸುವ, ಈ ದೃಶ್ಯವಿಸ್ತಾರವನ್ನು ನೋಡಲು ಜಗತ್ತಿನ ಎಲ್ಲಾ ಕಡೆಗಳಿಂದ ಜನ ಬರುವುದು ಆಶ್ಚರ್ಯವೇನಲ್ಲ.

ಈ ಪ್ರಪಾತದಂಚುಗಳ ಉದ್ದಕ್ಕೂ ನಿಂತು ನೋಡಲು ತಕ್ಕ  ದೃಶ್ಯ ವೇದಿಕೆಗಳ ಹತ್ತಿರ ಅಲ್ಲಲ್ಲಿ ಕೆಲವು ಸಣ್ಣ ಮ್ಯೂಸಿಯಂಗಳೂ ಇವೆ. ಅಲ್ಲಿ ಈ ಪ್ರಪಾತವನ್ನು ಕುರಿತ ಮಾಹಿತಿಗಳೂ, ಈ ಪ್ರಪಾತವನ್ನು ಸೆರೆಹಿಡಿದ ಚಿತ್ರಗಳೂ ಇವೆ. ನಾವು ಪ್ರವೇಶಿಸಿದ ಇಂಥ ಒಂದು ಮ್ಯೂಸಿಯಂನೊಳಗೆ, ಈ ಕಂದರದ ನಕ್ಷೆ ಹಾಗೂ ಮಾಹಿತಿಗಳನ್ನು ನಮೂದಿಸಲಾಗಿತ್ತಲ್ಲದೆ, ಇದೇ ಸ್ಥಳದಿಂದ ನೋಡಿದರೆ, ಈ ಕಣಿವೆಯ ಹರಹಿನಲ್ಲಿ ಗೋಚರಿಸುವ ದೇಗುಲಾಕಾರದ ಶಿಲಾಕೃತಿಗಳಿಗೆ ಬ್ರಹ್ಮ, ಶಿವ, ವಿಷ್ಣು, ಬುದ್ಧ, ಜಾರತೂಷ್ಟ್ರ – ಹೀಗೆ ಹೆಸರು ಕೊಡಲಾದದ್ದನ್ನು ಕಂಡು ಚಕಿತನಾದೆ. ಭಾರತೀಯ ಮತ್ತು ಜಗತ್ತಿನ ದೇವತೆಗಳ ಹಾಗೂ ಮಹಾಪುರುಷರ ಹೆಸರನ್ನು, ಮಂಡಲಾಕಾರವಾಗಿ ಹರಹಿಕೊಂಡು ಪ್ರಪಾತದೊಳಗೆ ಎದ್ದು ಕುಳಿತ ಆಕೃತಿಗಳಿಗೆ ಇಟ್ಟವರ ಅಭಿರುಚಿಯನ್ನೂ, ಔದಾರ್ಯವನ್ನೂ ಖಂಡಿತವಾಗಿಯೂ ಅಭಿನಂದಿಸಬೇಕಾಗಿದೆ.

ಬಿಡಲಾರದ ಮನಸ್ಸಿನಿಂದ, ಆ ಅಯಸ್ಕಾಂತ ದೃಶ್ಯಾದ್ಭುತಗಳಿಂದ ನಮ್ಮನ್ನು ಬಿಡಿಸಿಕೊಂಡು, ಜಗತ್ತಿನ ಏಳು ಅದ್ಭುತಗಳಲ್ಲಿ ಒಂದು ಎಂದು ಕರೆಯಲಾದ ಈ ಪ್ರಪಾತವೈಭವದ ನೆಲೆಗಳಿಂದ, ಫೀನಿಕ್ಸ್ ಕಡೆಗೆ ನಾವು ಹೊರಟೆವು. ಹೊರಡುವ ಮುನ್ನ ಒಂದೆಡೆ ಈ ಗ್ರ್ಯಾಂಡ್ ಕ್ಯಾನಿಯನ್ ರಾಷ್ಟ್ರೀಯ ಉದ್ಯಾನವನ್ನು ಕುರಿತ ಮಾಹಿತಿ ಪ್ರದರ್ಶನವೊಂದನ್ನು ನೋಡಿದೆವು. ೨೮೫ ಮೈಲಿ ಉದ್ದಕ್ಕೆ ಚಾಚಿಕೊಂಡಿರುವ  ಗ್ರ್ಯಾಂಡ್ ಕ್ಯಾನಿಯನ್ ಕಂದರ ಶ್ರೇಣಿಯಲ್ಲಿ, ೨೧೭ ಮೈಲಿಗಳಷ್ಟು ಪ್ರದೇಶವನ್ನು ರಾಷ್ಟ್ರೀಯ ಉದ್ಯಾನವೆಂದು ಪರಿಗಣಿಸಲಾಗಿದೆ. ಈ ರಾಷ್ಟ್ರೀಯ ಉದ್ಯಾನದ ಒಟ್ಟು ವಿಸ್ತೀರ್ಣ, ೬,೮೩,೫೭೫ ಎಕರೆಗಳು. ನಾವು ಈ ಪರಿಸರಕ್ಕೆ ಬರುವ ಹೊತ್ತಿಗೆ ಸಮುದ್ರ ಮಟ್ಟದಿಂದ ಸುಮಾರು ಏಳು ಸಾವಿರ ಅಡಿಗಳಷ್ಟು ಎತ್ತರಕ್ಕೆ ಏರಿರುತ್ತೇವೆ. ಈಗ ನನಗೆ ಅರ್ಥವಾಯಿತು, ನಾವಿದ್ದದ್ದೇ ಏಳು ಸಾವಿರ ಅಡಿಗಳೆತ್ತರದ ಪರ್ವತಸದೃಶ ನೆಲೆಯಲ್ಲಿ ಎಂದು. ಇಲ್ಲದಿದ್ದರೆ ಈ ಅಗಾಧವಾದ ಕಂದರಗಳು ನಿರ್ಮಾಣ ವಾಗುತ್ತಿದ್ದುದಾದರೂ ಹೇಗೆ? ಸಾರಸ್ಯವೆಂದರೆ, ಪೀನಿಕ್ಸ್ ನಗರದಿಂದ ಈ ಎತ್ತರಕ್ಕೆ ಬರುವ ತನಕ ನಾವು ಏರಿಕೆಯ ಪಯಣದಲ್ಲಿದ್ದೇವೆ ಎಂದು ಅನ್ನಿಸುವುದೇ ಇಲ್ಲ. ಈಗ ನಮ್ಮ ಮರು ಪ್ರಯಾಣದ ದಾರಿಯಂತೂ ಇದನ್ನು ಖಚಿತಪಡಿಸುವಂತಿತ್ತು. ಗ್ರ್ಯಾಂಡ್ ಕ್ಯಾನಿಯನ್‌ದಿಂದ ಫಿನಿಕ್ಸ್ ವರೆಗಿನ ದಾರಿಯುದ್ದಕ್ಕೂ ಹಾಕಿದ ಸೂಚನಾ ಫಲಕಗಳು ಅಲ್ಲಲ್ಲಿನ ಎತ್ತರವನ್ನು ಖಚಿತಪಡಿಸುತ್ತಿದ್ದವು.

ಬಿರುಬಿಸಿಲು ಬಡಿಯುತ್ತಿದ್ದ ಹೆದ್ದಾರಿಯ ಉದ್ದಕ್ಕೂ ಎರಡೂ ಬದಿಗೆ ನಿಂತ ವಿಲಕ್ಷಣ ಬಾಹು ಭಂಗಿಯ ಕ್ಯಾಕ್ಟಸ್‌ಗಳನ್ನು ನೋಡುತ್ತಾ ಫೀನಿಕ್ಸ್ ಕಡೆ ಹೊರಟೆವು. ನಾವು ಗ್ರ್ಯಾಂಡ್ ಕ್ಯಾನಿಯನ್‌ಗೆ ಬಂದ ದಾರಿ, ಈಗ ನಾವು ಹಿಂತಿರುಗುವ ದಾರಿಗೆ ಸಮಾನಾಂತರವಾಗಿ ಅಲ್ಲಲ್ಲಿ ಕಾಣುತ್ತಿತ್ತು. ಒಂದು ಸಲಕ್ಕೆ ಮೂರು ವಾಹನಗಳು ಚಲಿಸಲು ಅನುಕೂಲವಾದ ಈ ಜೋಡಿ ಹೆದ್ದಾರಿಯಲ್ಲಿ ಅಲ್ಲಲ್ಲಿ ವಿಶ್ರಾಂತಿಗಾಗಿ ವಾಹನಗಳನ್ನು ನಿಲ್ಲಿಸುವ  ತಂಗುದಾಣಗಳಿದ್ದವು. ಇಲ್ಲಿಂದ ಮುಂದಿನ ವಿಶ್ರಾಂತಿಯ  ನೆಲೆ ಹತ್ತು ಮೈಲಿಗಳು ಎಂಬ ಸೂಚನೆ ಕಂಡೊಡನೆಯೇ, ಹಾಗೆ ಆ ಕಡೆ ಹೊರಳುವವರು ಕಾರಿನ ವೇಗವನ್ನು ಕಡಮೆ ಮಾಡಿಕೊಂಡು ಹೆದ್ದಾರಿಯ ಪಕ್ಕಕ್ಕೆ ಸರಿದು ಮುಂದುವರಿಯುತ್ತಾರೆ. ಅನಂತರ ನಿಮ್ಮ ಬಲಕ್ಕೆ (ಈ ದೇಶದಲ್ಲಿ ವಾಹನಗಳೆಲ್ಲಾ ರಸ್ತೆಯ ಬಲಬದಿಯಲ್ಲೇ ಸಂಚರಿಸುವುದು) ಒಂದು ಮೈಲಿ ದೂರದಲ್ಲಿ, Rest area ಕ್ಕೆ ದಾರಿ ಎಂಬ ಹೊರಳುದಾರಿ ಕಾಣಿಸುತ್ತದೆ. ಆ ದಾರಿಯ ಗುಂಟ ಹೋದರೆ ಅದೊಂದು ರೆಸ್ಟ್ ಏರಿಯಾ. ನಾವು ಇಂಥದೊಂದು ಕಡೆ ಬಂದು ನಿಂತೆವು. ಅಲ್ಲೊಂದು ಪುಟ್ಟ ಉಪಹಾರ ಮಂದಿರ; ಸ್ವಚ್ಛವಾದ ಶೌಚಾಲಯಗಳು; ಹೊರಗೆ ಕೂತು ವಿಶ್ರಮಿಸಲು ಕುರ್ಚಿಗಳು; ಕಸವನ್ನು ಹಾಕಲು ನಮ್ಮಲ್ಲಿನ ಪೋಸ್ಟ್ ಬಾಕ್ಸ್ ಮಾದರಿಯ ದೊಡ್ಡ ಡಬ್ಬಿಗಳು; ಮಕ್ಕಳು ಆಡಿಕೊಳ್ಳಲು ಸಣ್ಣದೊಂದು ಆಟದ ಬಯಲು; ಅಲ್ಲಿ ಮಕ್ಕಳಿಗಾಗಿ ಜೋಕಾಲಿಗಳು, ಜಾರುಬಂಡೆಗಳು, ಪಕ್ಕದಲ್ಲೆ ಕಾರಿಗೆ ಪೆಟ್ರೋಲು ತುಂಬಿಸಿಕೊಳ್ಳುವ ವ್ಯವಸ್ಥೆ, ಎಷ್ಟೊಂದು ಮುಂದಾಲೋಚನೆ, ಎಷ್ಟೊಂದು ಅಚ್ಚುಕಟ್ಟು, ಮನುಷ್ಯನ ಮೂಲಭೂತ ಅಗತ್ಯಗಳೇನು ಎಂಬುದನ್ನು ಯೋಚಿಸಿ, ಅದಕ್ಕೆ ತಕ್ಕ ಅನುಕೂಲತೆಗಳನ್ನು ಕಲ್ಪಿಸಿ, ನೆಮ್ಮದಿಯನ್ನೂ ಪ್ರಯಾಣದ ಬಗ್ಗೆ ಸಂತೋಷದ ಭಾವನೆಗಳನ್ನೂ ಉಳಿಸಿಕೊಡುವ ಈ ವ್ಯವಸ್ಥೆಯ ಹಿಂದೆ ಎಂಥ ಒಳ್ಳೆಯ ಹೃದಯವಂತಿಕೆ ಕಾಣುತ್ತದೆ. ನಮ್ಮಲ್ಲಿಯಾದರೋ ದಾರಿ ಉದ್ದಕ್ಕೂ ಹೆದ್ದಾರಿಗೇ ಒತ್ತಿಕೊಂಡ ಹಳ್ಳಿಗಳು – ಊರುಗಳು. ದಾರಿ ಬದಿಗೇ ಬೀಡಿ, ಸಿಗರೇಟು ಮಾರುವ ಡಬ್ಬದ ಅಂಗಡಿಗಳು. ತಡಿಕೆ ಹೋಟೆಲುಗಳು, ಅವುಗಳಲ್ಲಿ ಗೊಯ್ಯೆಂದು ನೊಣಗಳು ಮುತ್ತುವ ತಿಂಡಿ ಪದಾರ್ಥಗಳು. ಪ್ರಯಾಣದ ಆಯಾಸದಿಂದ ಬಸ್ಸು-ಕಾರುಗಳಿಂದ ಕೆಳಕ್ಕೆ ಇಳಿದ ಜನಕ್ಕೆ ಶೌಚಾಲಯದ ಅನುಕೂಲಗಳಿಲ್ಲ. ಈ ಕಾರಣದಿಂದ ಅಂಗಡಿಗಳ ಹಿಂದೆ, ಮರಗಳ ಮರೆಯಲ್ಲಿ ನಿಂತು ಉಚ್ಚೆ ಹೊಯ್ಯುವ ಗಂಡಸರು; ಅಲ್ಲಲ್ಲಿ ಶೌಚಕ್ಕೆ ಕೂತ ಹಳ್ಳಿಯ ಮಕ್ಕಳು. ಇನ್ನು ಹೆಂಗಸರ ಪಾಡು ಹೇಳತೀರದು. ಮನೆ ಮನೆಯೊಳಗಣ ಕಸವನ್ನು ಒಂದೆಡೆ ಹಾಕಲು ಯಾವ ವ್ಯವಸ್ಥೆಯೂ ಇಲ್ಲ. ಎಲ್ಲ ಮನೆಗಳವರೂ ಗುಡಿಸಿ ತಂದು ಕಸ ಹಾಕುವುದು ಬೀದಿಗೇ. ಇನ್ನು ಸಣ್ಣ ಪುಟ್ಟ ಊರುಗಳ ಸ್ಥಿತಿಯನ್ನಂತೂ ಹೇಳುವುದೇ ಬೇಡ. ಇಡೀ ದೇಶವನ್ನು ನಾವು ದೊಡ್ಡದೊಂದು ಕಸದ ಬುಟ್ಟಿಯನ್ನಾಗಿ ಮಾಡಿದ್ದೇವೆ. ಮನುಷ್ಯರ ಮೂಲಭೂತ ಅಗತ್ಯಗಳನ್ನು ಕುರಿತು ಒಂದಿಷ್ಟೂ ಯೋಚನೆ ಮಾಡದ ಆಡಳಿತಗಾರರಿಂದ ತುಂಬಿದೆ ನಮ್ಮ ದೇಶ. ದಿನಬೆಳಗಾದರೆ ಸರ್ಕಾರದ ಖರ್ಚಿನಲ್ಲಿ ದೇಶ ವಿದೇಶಗಳಿಗೆ ಹೋಗಿ ಬರುತ್ತಾರಲ್ಲ ನಮ್ಮ ಮಂತ್ರಿಗಳು, ಶಾಸಕರು, ಅಧಿಕಾರಿಗಳು, ಅವರು ಅಲ್ಲಿ ಹೋಗಿ ಬಂದು ಏನು ಮಾಡಿದ್ದಾರೆ? ಅವರು ನೋಡಿದ ದೇಶ ವಿದೇಶಗಳಲ್ಲಿರುವ ಸೌಲಭ್ಯಗಳು ನಮ್ಮಲ್ಲಿ ಯಾಕೆ ಇಲ್ಲ, ಅವು ನಮ್ಮಲ್ಲೂ ಇರುವಂತೆ ಮಾಡುವುದು ಹೇಗೆ ಎಂದು  ಯೋಚಿಸಿದ್ದಾರೆಯೆ? ಮಾತೆತ್ತಿದರೆ ಮಡಿ ಮಡಿ ಎಂದು ಹಾರುವ ಜನಕ್ಕೆ ನಮ್ಮಲ್ಲಿ ಕೊರತೆಯಿಲ್ಲ. ‘ಮಡಿ’ ಎಂದರೆ, ತಾವು ಸ್ನಾನ ಮಾಡಿದಾಗ ಯಾರನ್ನೂ ಮುಟ್ಟಿಕೊಳ್ಳದೆ ಇರುವ ಸ್ಥಿತಿ ಎಂಬ ಸಂಕುಚಿತಾರ್ಥವೊಂದೇ ಪ್ರಧಾನ. ‘ಮಡಿ’ ಎಂದರೆ ನಿಜವಾದ ಒಳಗು – ಹೊರಗುಗಳ ಸ್ವಚ್ಛತೆ ಅನ್ನುವುದು ಇವರ ತಲೆಗೇ ಹೋಗುವುದಿಲ್ಲ. ಆದರೆ ಇದೇ ಅಮೆರಿಕಾದಲ್ಲಿ (ಇಲ್ಲಿಯೂ ಕೊಳಕು ಇಲ್ಲವೆಂದೇನೂ ಅಲ್ಲ) ಬಹುಮಟ್ಟಿಗೆ, ತಮ್ಮ ಪರಿಸರವನ್ನು ಜನ ತುಂಬ ಸ್ವಚ್ಛವಾಗಿ ಇರಿಸಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಂತೂ ಕಸ ಹಾಕುವುದು ದಂಡನಾರ್ಹವಾದ ಅಪರಾಧವಾಗಿದೆ. ಹೆದ್ದಾರಿಗಳ ವಿಚಾರದಲ್ಲೂ ಈ ಮಾತು ನಿಜ. ಚಿಕ್ಕಂದಿನಿಂದಲೂ, ತಮ್ಮ ಮನೆಯನ್ನೂ, ಮನೆಯಾಚೆಯ ಪರಿಸರವನ್ನೂ ಸ್ವಚ್ಛವನ್ನಾಗಿರಿಸಿಕೊಳ್ಳುವುದು ಜೀವನದ ಒಂದು ವಿಧಾನವೆಂಬಂತೆ ಈ ಜನ ರೂಢಿಸಿಕೊಂಡಿದ್ದಾರೆ.

ಪ್ರಯಾಣದ ಮಧ್ಯಂತರ ‘ರೆಸ್ಟ್ ಏರಿಯಾ’ದಲ್ಲಿ ಕೂತು ತುಂಬ ವಿಷಾದದಿಂದ ನಮ್ಮ ದೇಶದ ಪರಿಸ್ಥಿತಿಯನ್ನು ಕುರಿತು ಚಿಂತಿಸತೊಡಗಿದೆ. ‘ಏನು ಸುಮ್ಮನೆ ಕೂತಿರಲ್ಲ, ನಡೀರಿ ಹೋಗೋಣ’ ಎಂದರು ಮೂರ್ತಿಯವರು, ಮತ್ತೆ ಕಾರು ರೆಸ್ಟ್ ಏರಿಯಾದ ಕವಲಿನಿಂದ ಹೆದ್ದಾರಿಯನ್ನು ಸೇರಿ, ಫೀನಿಕ್ಸ್ ಕಡೆ ಚಲಿಸತೊಡಗಿತು. ಸಂಜೆ ಸುಮಾರು ನಾಲ್ಕುವರೆಯ ಹೊತ್ತಿಗೆ ಮನೆ ತಲುಪಿ, ಸೊಗಸಾದ ಕಾಫಿ ಕುಡಿಯುತ್ತ ಅವತ್ತಿನ ಪತ್ರಿಕೆಯನ್ನು ಕೈಗೆತ್ತಿಕೊಂಡೆ. ದಪ್ಪಕ್ಷರದ ಸುದ್ದಿಯೊಂದು ಕಣ್ಣಿಗೆ ಬಿತ್ತು; ಅಕ್ಟೋಬರ್ ಒಂದನೆ ತಾರೀಖು ಸಂಜೆ ಲಾಸ್‌ಏಂಜಲೀಸ್‌ದಲ್ಲಿ ಭೂಕಂಪ. ನೂರಾರು ಜನರಿಗೆ ಗಾಯ. ಎಲಾ ಇದರ, ನಾನು ಲಾಸ್‌ಏಂಜಲೀಸ್ ಬಿಟ್ಟ ಮಾರನೆ ದಿನ, ಗ್ರ್ಯಾಂಡ್‌ಕ್ಯಾನಿಯನ್ನಿನ ದಾರಿಯಲ್ಲಿರುವಾಗ-ಸಂಭವಿಸಿದೆ ಭೂಕಂಪ ಮೂರು ದಿನಗಳ ಕೆಳಗಷ್ಟೇ ನನ್ನನ್ನು ವಿಮಾನ ನಿಲ್ದಾಣಕ್ಕೆ ಕರೆತರುವ ದಾರಿಯಲ್ಲಿ, ‘ನಾವು ಇನ್ನು ಒಂದು ದೊಡ್ಡ ಭೂಕಂಪವನ್ನು ನಿರೀಕ್ಷಿಸುತ್ತಿದ್ದೇವೆ’ ಎಂದು ಶ್ರೀನಿವಾಸ್ ಅವರು ಹೇಳಿದ್ದು ಇಷ್ಟು ಬೇಗ ನಿಜವಾಯಿತೆ ಎಂದು ಆಶ್ಚರ್ಯಪಟ್ಟೆ. ಕೂಡಲೇ ಲಾಸ್‌ಏಂಜಲೀಸ್‌ಗೆ ಫೋನು ಹಚ್ಚಿ, ನಾನು ಅತಿಥಿಯಾಗಿ ಉಳಿದುಕೊಂಡಿದ್ದ ಶ್ರೀನಿವಾಸ್ ಅವರನ್ನು ಸಂಪರ್ಕಿಸಿದೆ. ಆಚೆ ಕಡೆ ಫೋನ್ ಎತ್ತಿಕೊಂಡವರು, ಸೌಮ್ಯ (ಶ್ರೀಮತಿ ಶ್ರೀನಿವಾಸ್) : ‘ಹೌದು, ನೀವು ಇಲ್ಲಿಂದ ಹೋದ ಮರುದಿನವೇ ಇಲ್ಲಿ ಭೂಕಂಪವಾಯಿತು. ನಮ್ಮ ಮನೆಗೆ ಏನೂ ಆಗಿಲ್ಲ. ಒಂದಷ್ಟು ಬಾಗಿಲು ಕಿಟಕಿ ಅಲ್ಲಾಡಿದವು; ಪಾತ್ರೆಗಳು ಧಡಧಡಾಂತ ಉರುಳಿ ಹೋದವು. ಕಟ್ಟಡಗಳು ಕುಸಿದು ಹೆಚ್ಚಿನ ಡ್ಯಾಮೇಜ್ ಆಗಿರೋದು ‘ಡೌನ್ ಟೌನಿ’ನಲ್ಲಿ’.