ವಿಶ್ವವಿದ್ಯಾಲಯದ ವಿಜ್ಞಾನ ಕಾಲೇಜಿನ ಪ್ರೊಫೆಸರ್.

ಭಾರತದಲ್ಲಿಯೇ ಔಷಧಗಳನ್ನು ತಯಾರು ಮಾಡಬೇಕು, ಹೊರದೇಶಗಳ ಕಂಪೆನಿಗಿಂದ ಔಷಧಗಳನ್ನು ತರಿಸಿ ಭಾರತದ ರೋಗಿಗಳು ಅವರಿಗೆ ಲಾಭ ಮಾಡಿ ಕೊಡುವುದು ತಪ್ಪಬೇಕು ಎಂದು ಸುಮಾರು ಎಂಬತ್ತು ವರ್ಷಗಳ ಹಿಂದೆ ಮನೆಯಲ್ಲಿಯೆ ಔಷಧದ ರಾಸಾಯನಿಕಗಳನ್ನು ತಯಾರು ಮಾಡಲು ತೊಡಗಿದ ಆದ್ಯ ಪ್ರವರ್ತಕ.

ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದ ವಿಜ್ಞಾನಿ.

ವಾಸ-ಕಾಲೇಜಿನ ಮೇಲಂತಸ್ತಿನ ಒಂದು ಕೊಠಡಿಯಲ್ಲಿ. ಬೇರೆ ಕಡೆ ವಾಸ ಮಾಡಲು ಅನುಕೂಲವಿಲ್ಲದ ವಿದ್ಯಾರ್ಥಿಗಳು ಕೆಲವರ ವಾಸ ಕೂಡ ಅಲ್ಲಿಯೇ.

ಸಂಬಳ-ರಸಾಯನ ವಿಜ್ಞಾನ ವಿಭಾಗಕ್ಕೆ ದತ್ತಿ. ಇದರಿಂದ ಬರುವ ವರಮಾನ ರಸಾಯನ ವಿಜ್ಞಾನದ ವಿಭಾಗಗಳನ್ನು ಬೆಳೆಸುವುದಕ್ಕೆ ಮತ್ತು ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಡುವುದಕ್ಕೆ ಬಳಕೆ. ಹೀಗೆ ಸಂಬಳದ ಹಣ ಅವರು ದಾನವಾಗಿ ಕೊಟ್ಟದ್ದು- ಅಂದಿನ ಎರಡು ಲಕ್ಷ ರೂಪಾಯಿಗಳು.

ಇಂತಹ ವಿಜ್ಞಾನಿ-ಅಧ್ಯಾಪಕರು ಪ್ರಫುಲ್ಲಚಂದ್ರ ರಾಯ್.

ನೆಲದಲ್ಲಿಟ್ಟ ಆಸ್ತಿ ಮಾಯ!

ಪ್ರಫುಲ್ಲಚಂದ್ರರು ಹುಟ್ಟಿದ್ದು ಬಂಗಾಳದ ಖುಲ್ನಾ ಜಿಲ್ಲೆಯ ರರೂಲಿ ಎಂಬ ಹಳ್ಳಿಯಲ್ಲಿ (ಈಗ ಇದು ಬಂಗ್ಲಾದೇಶದಲ್ಲಿದೆ), ೧೮೬೧ ನೆಯ ಇಸವಿ ಆಗಸ್ಟ್ ಎರಡನೆಯ ದಿನ. ಬಹು ಶ್ರೀಮಂತ ಮನೆತನಕ್ಕೆ ಸೇರಿದವರು. ಇವರ ಮುತ್ತಾತ ಮಾಣಿಕಲಾಲ ರಾಯ್ ಕೃಷ್ಣಾಗರ ಪ್ರಾಂತದ ಬ್ರಿಟಿಷ್ ಕಲೆಕ್ಟರನ ಬಳಿ ದಿವಾನ್ ಅಥವಾ ಮುಖ್ಯಾಧಿಕಾರಿಯಾಗಿದ್ದರು. ಇವರಿಗೆ ಸಂಪಾದನೆ ಚೆನ್ನಾಗಿತ್ತು. ಇವರು ಹಿಂದೆ ಚಲಾವಣೆಯಲ್ಲಿದ್ದ ’ಸಿಕ್ಕಾ’ ರೂಪಾಯಿಗಳನ್ನು ದೊಡ್ಡ ಬುಟ್ಟಿಗಳಲ್ಲಿ ತುಂಬಿ ಕಳ್ಳರ ಕಣ್ಣಿಗೆ ಮಣ್ಣೆರಚಲು ಮೇಲೆ ಬತ್ತಾಸು ಮಿಠಾಯಿಗಳನ್ನು ಮುಚ್ಚಿ ಊರಿಗೆ ಸಾಗಿಸುತ್ತಿದ್ದರಂತೆ! ತಾತ ಆನಂದಲಾಲ ರಾಯ್ ಜೆಸ್ಸೋರಿನ ಶಿರಸ್ತೇದಾರರಾಗಿದ್ದರು. ಇವರು ತಮ್ಮ ಸಂಪಾದನೆಯಿಂದ ಮನೆತನದ ಆಸ್ತಿಯನ್ನು ಇನ್ನೂ ಹೆಚ್ಚಿಸಿದರು. ಆಗಿನ ಕಾಲದಲ್ಲಿ ಹಣ ಮತ್ತು ಒಡವೆಗಳನ್ನು ಭದ್ರವಾಗಿಡಲು ಬ್ಯಾಂಕಿನ ಸೌಕರ್ಯವಿಲ್ಲದಿದ್ದುದರಿಂದ ಜನರು ಅವುಗಳನ್ನು ತಮ್ಮ ಮನೆಗಳಲ್ಲೇ ಹುಗಿದಿಡುತ್ತಿದ್ದರು. ಪ್ರಫುಲ್ಲಚಂದ್ರರ ತಾತ ಮುತ್ತಾತಂದಿರೂ ಇದೇ ಕೆಲಸವನ್ನು ಮಾಡಿದ್ದರು. ಆದರೆ ತಾತ ಆನಂದಲಾಲ ರಾಯ್ ಇದ್ದಕ್ಕಿದ್ದ ಹಾಗೆ ಜೆಸ್ಸೋರಿನಲ್ಲಿ ಸತ್ತು ಹೋದರು. ಪ್ರಫುಲ್ಲಚಂದ್ರರ ತಂದೆ ಹರೀಶಚಂದ್ರರು ಅಲ್ಲಿಗೆ ಹೋಗಿ ಸೇರುವ ಮೊದಲೇ ತಾತ ಕಣ್ಣುಮುಚ್ಚಿದ್ದರಿಂದ ಹುಗಿದಿಟ್ಟ ಹಣಕಾಸಿನ ಬಗ್ಗೆ ಯಾವ ವಿವರವೂ ಅವರಿಗೆ ಸಿಗಲಿಲ್ಲ. ಈ ’ನಿಧಿ’ಯನ್ನು ಹುಡುಕಲು ಹರೀಶಚಂದ್ರರು ಮನೆಯ ನೆಲ ಮತ್ತು ಗೋಡೆಗಳಲ್ಲಿ ಕೆಲವು ಕಡೆ ತೋಡಿಸಿ ನೋಡಿದ್ದುಂಟು. ಪ್ರಫುಲ್ಲರ ತಾಯಿಯೂ ಮಾಂತ್ರಿಕರ ಸಹಾಯದಿಂದ ಒಂದೆರಡು ಸ್ಥಳ ಗುರ್ತಿಸಿ ಅಗೆಸಿದ್ದರು. ಆದರೆ ಯಾರಿಗೂ ಆ ಆಸ್ತಿ ಸಿಕ್ಕಲಿಲ್ಲ! ಹೀಗೆ ಮನೆತನದ ಆಸ್ತಿ ಮಾಯವಾಯಿತು.

ತಂದೆ ಹರೀಶ್ಚಂದ್ರರು

ಪ್ರಫುಲ್ಲಚಂದ್ರರ ತಂದೆ ಹರೀಶಚಂದ್ರರು ಸಂಸ್ಕೃತ, ಪಾರಸಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದರು. ಸಮಾಜ ಸೇವೆಯಲ್ಲಿ ನಿರತರಾಗಿದ್ದರು. ಸಂಗೀತದಲ್ಲಿ ಅವರಿಗೆ ವಿಶೇಷ ಆಸಕ್ತಿ. ಪಿಟೀಲು ನುಡಿಸುತ್ತಿದ್ದರು. ವಿದ್ಯಾಭ್ಯಾಸಕ್ಕೆ ಹೆಚ್ಚು ಬೆಲೆ ಕೊಡುತ್ತಿದ್ದರು.

ತಮ್ಮ ತಂದೆಯವರಿಂದ ಪ್ರಫುಲ್ಲಚಂದ್ರರು ಅನೇಕ ಸದ್ಗುಣಗಳನ್ನು ಪಡೆದುಕೊಂಡರು. ವಿದ್ಯೆಯಲ್ಲಿ ಆಸಕ್ತಿ, ತರ್ಕಸಮ್ಮತವಾದ ವಿಚಾರ, ಬಡವರಲ್ಲಿ, ಕಷ್ಟದಲ್ಲಿರುವವರಲ್ಲಿ ಸಹಾನುಭೂತಿ ಮುಂತಾದವುಗಳಲ್ಲಿ ಹರೀಶಚಂದ್ರರ ಪ್ರಭಾವದಿಂದ ಅವರ ಮಕ್ಕಳೆಲ್ಲರೂ ಪಡೆದುಕೊಂಡರು.

ತಡೆದು ತಡೆದು ಸಾಗಿದ ವಿದ್ಯಾಭ್ಯಾಸ

ಮುಂದೆ ಪ್ರಸಿದ್ಧ ವಿಜ್ಞಾನಿಯಾದ ಪ್ರಫುಲ್ಲಚಂದ್ರರಿಗೆ ಬಾಲ್ಯದಲ್ಲಿ ಶಾಲೆಗೆ ಹೋಗುವುದೆಂದರೆ ಬೇಸರ. ಪ್ರಫುಲ್ಲಚಂದ್ರನ ವಿದ್ಯಾಭ್ಯಾಸ ಮೊದಲು ಆತನ ತಂದೆಯವರೇ ತೆರೆದ ಹಳ್ಳಿಯ ಶಾಲೆಯಲ್ಲಿ ಪ್ರಾರಂಭವಾಯಿತು. ಆದರೆ ಆತ ಶಾಲೆಗೆ ಹೋಗದೆ ಬೇರಾವುದಾದರೂ ಹವ್ಯಾಸದಲ್ಲಿ ತೊಡಗುತ್ತಿದ್ದ. ಶಿಷ್ಯನನ್ನು ಹುಡುಕಿ ತರಲು ಉಪಾಧ್ಯಾಯರು ಹಳ್ಳಿಯ ಮನೆಗಳನ್ನೆಲ್ಲಾ ನೋಡಿ ಬಂದಾಗ ಅನೇಕ ವೇಳೆ ಪಪ್ರಫುಲ್ಲಚಂದ್ರರು ಮರಗಳನ್ನೇರಿ ಅಡಗಿಕೊಂಡಿರುತ್ತಿದ್ದರು.

ಪ್ರಫುಲ್ಲಚಂದ್ರರ ಅಣ್ಣಂದಿರು ಹಳ್ಳಿಯ ಶಾಲೆಯ ಓದು ಮುಗಿಸಿದುದರಿಂದ ಅವರ ಮುಂದಿನ ವಿದ್ಯಾಭ್ಯಾಸಕ್ಕಾಗಿ ೧೮೭೦ ರಲ್ಲಿ ಹರೀಶಚಂದ್ರರು ತಮ್ಮ ಸಂಸಾರವನ್ನು ಕಲ್ಕತ್ತೆಗೆ ತಂದರು. ಇಲ್ಲಿ ಪ್ರಫುಲ್ಲಚಂದ್ರನನ್ನು ’ಹೇರ್ ಸ್ಕೂಲ್’ ಎಂಬ ಆಂಗ್ಲ ಶಾಲೆಗೆ ಸೇರಿಸಿದರು. ಇಲ್ಲಿ ಪುಸ್ತಕಗಳನ್ನು ಓದುವ ಆಸೆ ಪ್ರಫುಲ್ಲನಲ್ಲಿ ಬೆಳೆದು ಹುಡುಗ ಅನೇಕ ಗ್ರಂಥಗಳನ್ನು ಓದಿಕೊಂಡ. ಆದರೆ ಆರೋಗ್ಯವು ಇದ್ದಕ್ಕಿದ್ದ ಹಾಗೆ ಕೆಟ್ಟಿತು. ಅಮಶಂಕೆಯಿಂದ ನರಳಿ ನರಳಿ ಶಾಲೆಯನ್ನು ಬಿಡಬೇಕಾಯಿತು. ರೋಗವೇನೋ ನಿಧಾನವಾಗಿ ವಾಸಿಯಾಯಿತು. ಆದರೆ ಜೀವಮಾನವೆಲ್ಲಾ ಅವರು ಆಗಾಗ ಅಜೀರ್ಣ ಮತ್ತು ನಿದ್ರಾಹೀನತೆಯನ್ನು ಅನುಭವಿಸುವಂತೆ ಮಾಡಿತು. ಅವರು ಇದರಿಂದ ಒಂದು ರೀತಿಯಲ್ಲಿ ಲಾಭವೇ ಆಯಿತೆಂದುಕೊಂಡರಂತೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಫುಲ್ಲಚಂದ್ರರು ಮುಂದೆ ಯಾವಾಗಲು ಆಹಾರದ ವಿಷಯದಲ್ಲಿ ಕಟ್ಟುನಿಟ್ಟಾಗಿದ್ದರು ಮತ್ತು ಸಾಕಷ್ಟು ವ್ಯಾಯಾಮವನ್ನು ತಪ್ಪದೆ ಮಾಡುತ್ತಿದ್ದರು.

ಶಾಲೆಗೆ ಹೋಗಿ ಪಾಠಗಳನ್ನು ಕ್ರಮವಾಗಿ ಓದಿ ಒಪ್ಪಿಸುವುದು ತಪ್ಪಿದ್ದರಿಂದ ಪ್ರಫುಲ್ಲಚಂದ್ರ ಈಗ ತನ್ನ ವೇಳೆಯನ್ನೆಲ್ಲಾ ತನಗಿಷ್ಟವಾದ ಇಂಗ್ಲಿಷ್ ಮತ್ತು ಬಂಗಾಳಿ ಸಾಹಿತ್ಯವನ್ನು ಓದುವುದಕ್ಕೆ ಉಪಯೋಗಿಸುತ್ತಿದ್ದ. ಕೇವಲ ಹತ್ತು ವರ್ಷದವನಾಗಿದ್ದಾಗಲೇ ಯುರೋಪಿನ ಹಿಂದಿನ ಕಾಲದ ಭಾಷೆಗಳಾದ ಲ್ಯಾಟಿನ್ ಮತ್ತು ಗ್ರೀಕ್ಗಳನ್ನು ಕಲಿತ.

ಎರಡು ವರ್ಷಗಳಾದ ಮೇಲೆ ಆರೋಗ್ಯ ಸ್ವಲ್ಪ ಸುಧಾರಿಸಿ ಪ್ರಫುಲ್ಲಚಂದ್ರ ಪುನಃ ಶಾಲೆಗೆ ಸೇರಿಕೊಂಡ. ಆದರೆ ಈಗ ’ಆಲ್ಬರ್ಟ್ಸ್ಕೂಲ್’ ಎಂಬ ಶಾಲೆಗೆ ಸೇರಿದ. ಇಲ್ಲಿನ ಪಾಠ ಹೇಳಿಕೊಡುವ ರೀತಿ ಮತ್ತು ಉಪಾಧ್ಯಾಯರ ನಡವಳಿಕೆ ಆತನಿಗೆ ಮೆಚ್ಚಿಗೆಯಾಯಿತು. ಉಪಾಧ್ಯಾಯರಿಗೂ ಬುದ್ಧಿವಂತನಾದ ಈ ಎಳೆಯ ಹುಡುಗನ ಮೇಲೆ ಹೆಚ್ಚು ಅಭಿಮಾನ ಹುಟ್ಟಿತು. ಪರೀಕ್ಷೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಬಹುಮಾನವನ್ನು ಗಳಿಸುವನೆಂಬ ಆಸೆಯಿಟ್ಟುಕೊಂಡಿದ್ದರು. ಆದರೆ ಪ್ರಫುಲ್ಲಚಂದ್ರ ಯಾವುದೇ ಕಾರಣದಿಂದ ಪುನಃ ಶಾಲೆಯನ್ನು ಬಿಟ್ಟು ಹಳ್ಳಿಗೆ ಬಂದು ಸೇರಿದ. ಇಲ್ಲಿ ತನ್ನ ಜನರೊಂದಿಗೆ ಸೇರಿ ಅವರ ಯೋಗಕ್ಷೇಮವನ್ನು ವಿಚಾರಿಸಿ ಸಹಾಯ ಮಾಡುತ್ತಿದ್ದ. ಇದಕ್ಕೆ ತಾಯಿಯ ಬೆಂಬಲವೂ ಇತ್ತು.

೧೮೭೬ ರಲ್ಲಿ ಪ್ರಫುಲ್ಲಚಂದ್ರ ಪುನಃ ಕಲ್ಕತ್ತೆಗೆ ಬಂದ. ಆಲ್ಬರ್ಟ್ಸ್ಕೂಲನ್ನು ಬಿಟ್ಟು ತನ್ನ ಹಳೆಯ ಹೇರ್ ಸ್ಕೂಲಿಗೆ ಹೋಗಬೇಕೆಂದಿದ್ದ. ಆದರೆ ಅವನ ಉಪಾಧ್ಯಾಯರೆಲ್ಲರೂ ಸೇರಿ ಪ್ರೀತಿಯಿಂದ ಮಾತನಾಡಿಸಿ ತಮ್ಮ ಬಳಿಯೇ ಇರಿಸಿಕೊಂಡರು. ಈ ಸಾರಿ ಪ್ರಫುಲ್ಲಚಂದ್ರ ಚೆನ್ನಾಗಿ ಓದಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದ. ಬಹುಮಾನಗಳ ಸುರಿಮಳೆಯೇ ಆಯಿತು. ೧೮೭೬ ರಲ್ಲಿ ಎಂಟ್ರೆನ್ಸ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಮೆಟ್ರೋಪಾಲಿಟನ್ ಇನ್ಸ್ಟಿಟ್ಯೂಟನ್ನು (ಈಗ ಇದಕ್ಕೆ ವಿದ್ಯಾಸಾಗರ ಕಾಲೇಜ್ ಎಂದು ಹೆಸರು) ಸೇರಿದ.

ತಂದೆ ಹರೀಶ್ಚಂದ್ರರ ಆರ್ಥಿಕ ಪರಿಸ್ಥಿತಿ ಕ್ರಮೇಣ ಕೆಡುತ್ತಾ ಬಂದಿತ್ತು. ಸಾಲ ಹೆಚ್ಚಾಗಿ ಮನೆತನದ ಆಸ್ತಿ ಪಾಸ್ತಿಗಳು ಒಂದೊಂದಾಗಿ ಕೈಬಿಡುತ್ತಿದ್ದುವು. ಖರ್ಚು ಕಡಿಮೆ ಮಾಡಲು ಕಲ್ಕತ್ತೆಯ ಮನೆ ಬಿಟ್ಟು ಅವರು ಹೆಂಡತಿಯೊಂದಿಗೆ ಪುನಃ ಹಳ್ಳಿಗೆ ಬಂದು ಸೇರಿದರು. ಮಕ್ಕಳು ಕಲ್ಕತ್ತೆಯಲ್ಲೇ ಕೊಠಡಿಗಳಲ್ಲಿ ಇದ್ದುಕೊಂಡು ವಿದ್ಯಾಭ್ಯಾಸವನ್ನು ಮುಂದುವರಿಸಿದರು.

ಗಿಲ್ಕ್ರಿಸ್ಟ್ ಬಹುಮಾನ

ಮೆಟ್ರೊಪಾಲಿಟನ್ ಇನ್ಸ್ಟಿಟ್ಯೂಟ್ನ್ಲಿ ಸುರೇಂದ್ರನಾಥ ಬ್ಯಾನರ್ಜಿ, ಪ್ರಸನ್ನಕುಮಾರ ಲಾಹಿರಿ ಮೊದಲಾದ ಪ್ರಸಿದ್ಧ ಅಧ್ಯಾಪಕರಿದ್ದರು. ಇವರ ಉಪನ್ಯಾಸಗಳಿಂದ ಪ್ರಫುಲ್ಲಚಂದ್ರ ಬಹಳ ಪ್ರಭಾವಿತನಾದ. ಹುಡುಗ ಕಲ್ಕತ್ತೆಯ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ರಸಾಯನ ಶಾಸ್ತ್ರದ ತರಗತಿಗಳಿಗೂ ಹೋಗುತ್ತಿದ್ದ. ಅಲ್ಲಿನ ಅಲೆಕ್ಸಾಂಡರ್ ಪೆಡ್ಲರ್ ಎಂಬ ಅಧ್ಯಾಪಕರ ರಸಾಯನ ಶಾಸ್ತ್ರದ ಮೇಲಣ ಉಪನ್ಯಾಸ ಮತ್ತು ವಿಜ್ಞಾನದ ಕಡೆಗೆ ತಿರುಗಿತು. ಸಾಹಿತ್ಯ ಮತ್ತು ಚರಿತ್ರೆಗಳ ಕಡೆ ಹೆಚ್ಚು ಒಲವಿದ್ದರೂ ಅವನು ತನ್ನ ಬಿ.ಎ. ಪರೀಕ್ಷೆಗೆ ವಿಜ್ಞಾನವನ್ನೇ ಆರಿಸಿಕೊಂಡ. ಆದರೆ ಭಾಷೆ-ಸಾಹಿತ್ಯಗಳನ್ನು ಬಿಡಲಿಲ್ಲ. ಲ್ಯಾಟಿನ್ ಮತ್ತು ಫ್ರೆಂಚ್ ಭಾಷೆಗಳನ್ನು ಬಿಡಲಿಲ್ಲ. ಲ್ಯಾಟಿನ್ ಮತ್ತು ಫ್ರೆಂಚ್ ಭಾಷೆಗನ್ನು ಸ್ವಪ್ರಯತ್ನದಿಂದ ಚೆನ್ನಾಗಿ ಕಲಿತುಕೊಂಡ. ಕಾಲೇಜಿನಲ್ಲಿ ಸಂಸ್ಕೃತವನ್ನಂತೂ ಎಲ್ಲರೂ ಕಲಿಯಲೇ ಬೇಕಾಗಿತ್ತು. ಹೀಗೆ ಹಲವಾರು ಭಾಷೆಗಳಲ್ಲಿ ಪ್ರಫುಲ್ಲಚಂದ್ರ ಪ್ರವೀಣನಾದ.

ಆಗಿನ ಕಾಲದಲ್ಲಿ ಲಂಡನ್ ವಿಶ್ವವಿದ್ಯಾಲಯ ’ಗಿಲ್ಕ್ರಿಸ್ಟ್ ವಿದ್ಯಾರ್ಥಿ ವೇತನ’ವನ್ನು ನೀಡಲು ಒಂದು ಸ್ಪರ್ಧೆಯನ್ನು ನಡೆಸುತ್ತಿತ್ತು. ಇದರಲ್ಲಿ ವಿಜಯಿಗಳಾದವರು ಬೇರೆ ದೇಶಕ್ಕೆ ಹೋಗಿ ವಿದ್ಯಾಭ್ಯಾಸ ಮಾಡಬಹುದಾಗಿತ್ತು.

ಎಂತಹ ಅವಕಾಶ=ವಿದ್ಯಾರ್ಥಿವೇತನ ಸಿಕ್ಕರೆ!

ಚುರುಕು ಬುದ್ಧಿಯ ಪ್ರಫುಲ್ಲಚಂದ್ರನಿಗೆ ತಾನೂ ಪರೀಕ್ಷೆಗೆ ಕುಳಿತುಕೊಳ್ಳಬೇಕು ಎಂದು ತೋರಿತು. ಬಹು ಶ್ರೀಮಂತ ಮನೆತನದಲ್ಲಿ ಹುಟ್ಟಿದ್ದ ಹುಡುಗ. ಆದರೆ ಆ ಹೊತ್ತಿಗೆ ಆಸ್ತಿ ಎಲ್ಲ ಹೋಗಿತ್ತು. ಬೇರೆ ದೇಶಕ್ಕೆ ವಿದ್ಯಾಭ್ಯಾಸಕ್ಕೆ ಹೋಗಲು ಇದೊಂದೇ ದಾರಿ! ಆದರೆ ಲ್ಯಾಟಿನ್, ಗ್ರೀಕ್ ಮತ್ತು ಫ್ರೆಂಚ್ ಭಾಷೆಗಳನ್ನು ಚೆನ್ನಾಗಿ ಕಲಿಯಬೇಕಾಗಿತ್ತು. ಶ್ರಮಪಟ್ಟು ಆ ಭಾಷೆಗಳನ್ನು ಕಲಿತರೂ ಸವಿರಾರು ಜನರ ಜೊತೆಗೆ ಸ್ಪರ್ಧೆ!

ಪ್ರಫುಲ್ಲಚಂದ್ರ ಪರೀಕ್ಷೆಗೆ ಕುಳಿತುಕೊಳ್ಳಲು ಧೈರ್ಯ ಮಾಡಿದ. ತನ್ನ ಅಣ್ಣ ಮತ್ತು ಒಬ್ಬ ದಾಯಾದಿಗೆ ಮಾತ್ರ ತಿಳಿಸಿ ಪರೀಕ್ಷೆಗಾಗಿ ಓದತೊಡಗಿದ.

ಈ ಸಮಾಚಾರ ಕೆಲವರಿಗೆ ತಿಳಿದುಬಂದಿತು. ಬಹಳ ಬುದ್ಧಿವಂತನೆನ್ನಿಸಿಕೊಂಡ ಸಹಪಾಠಿಯೊಬ್ಬನು ಒಂದು ದಿನ, “ಈ ಬೃಹಸ್ಪತಿಯ ಹೆಸರು ಇಷ್ಟರಲ್ಲೇ ಲಂಡನ್ ವಿಶ್ವವಿದ್ಯಾಲಯದ ಪತ್ರಿಕೆಯಲ್ಲಿ ಬರುತ್ತದೆ” ಎಂದು ಹಾಸ್ಯಮಾಡಿದ. ಪರೀಕ್ಷೆ ಮುಗಿದ ಕೆಲವು ತಿಂಗಳಿಗೆ ಒಂದು ದಿನ ಪತ್ರಿಎಕಗಳಲ್ಲಿ ಫಲಿತಾಂಶ ಪ್ರಕಟವಾಯಿತು.

ಪ್ರಫುಲ್ಲಚಂದ್ರನಿಗೆ ವಿದ್ಯಾರ್ಥಿವೇತನ ಬಂದಿತ್ತು.

ಕಾಲೇಜಿನ ಪ್ರಿನ್ಸಿಪಾಲರಿಗೆ ಬಹು ಸಂತೋಷ, ಹೆಮ್ಮೆ. ಪ್ರಫುಲ್ಲಚಂದ್ರನನ್ನು ಅಭಿನಂದಿಸಿದರು

ಪ್ರಫುಲ್ಲಚಂದ್ರರು ಬ್ರಿಟನ್ನಿಗೆ ಹೊರಡುವ ನಿರ್ಧಾರವನ್ನು ಮಾಡಿದರು. ಮಗನು ವಿದೇಶಕ್ಕೆ ಹೊರಡಲು ತಂದೆ ಕೂಡಲೇ ಒಪ್ಪಿಗೆ ಕೊಟ್ಟರು. ತಾಯಿ ಏನೆಂದುಕೊಂಡಾರೋ ಎಂದು ಪ್ರಫುಲ್ಲಚಂದ್ರನಿಗೆ ಚಿಂತೆ. ರರೂಲಿಯಲ್ಲಿದ್ದ ತನ್ನ ದಾಯಾದಿಗೆ ಕಾಗದ ಬರೆದು, “ಈ ವಿಷಯವನ್ನು ತನ್ನ ತಾಯಿಗೆ ತಿಳಿಸಿ ಸಮಾಧಾನ ಹೇಳು. ಆಕೆ ಮೊದಲು ವಿರೋಧಿಸಿದರೂ ನಿಧಾನವಾಗಿ ಒಪ್ಪುವಳು” ಎಂದರು. ಆದರೆ ತಾಯಿಯೂ ವಿವೇಕಶಾಲಿಯೇ. ಯಾವ ಅಡ್ಡಿಯನ್ನೂ ಮಾಡಲಿಲ್ಲ.

ಬೀಳ್ಕೊಡಲು ಪ್ರಫುಲ್ಲಚಂದ್ರ ಹಳ್ಳಿಗೆ ಹೋದಾಗ ಮಾತ್ರ ತಾಯಿಗೆ, ಮಗನು ನಾಲ್ಕು ವರ್ಷಗಳ ಕಾಲ ಆಗಲಿ ಹೋಗುತ್ತಾನೆ ಎಂಬ ದುಃಖ ಉಕ್ಕಿಬಂದಿತು. ತಾಯಿಯೆಂದರೆ ಪ್ರಫುಲ್ಲಚಂದ್ರರಿಗೆ ಬಹು ಪ್ರೀತಿ. ಮಗ “ಅಮ್ಮ, ನಾನು ಇಂಗ್ಲೆಂಡಿನಿಂದ ಬಂದು ದೊಡ್ಡ ಹುದ್ದೆ ಪಡೆದು ಸಾಲಗಳನ್ನೆಲ್ಲಾ ತೀರಿಸುತ್ತೇನೆ, ಬಿದ್ದುಹೋಗುತ್ತಿರುವ ನಮ್ಮ ಮನೆಯನ್ನು ಸರಿಯಾಗಿ ಕಟ್ಟಿಸುತ್ತೇನೆ” ಎಂದು ಹೇಳಿ ತಾಯಿಯನ್ನು ಸಮಾಧಾನಪಡಿಸಿದ.

ಇಂಗ್ಲೆಂಡಿನಲ್ಲಿ

೧೮೮೨ ರಲ್ಲಿ ಪ್ರಫುಲ್ಲಚಂದ್ರರು ಬ್ರಿಟನ್ನಿಗೆ ಹೊರಟರು. ಹಡಗಿನ ದೀರ್ಘಕಾಲದ ಪ್ರಯಾಣ ಪ್ರಫುಲ್ಲಚಂದ್ರರಿಗೆ ಕಷ್ಟವೇ ಆಯಿತು. ಸಮುದ್ರದ ಮೇಲೆ ಸಾಗುವ ಹಡಗಿನ ತೂರಾಟದಿಂದ ಉಂಟಾಗುವ ಕಾಯಿಲೆಯಿಂದ ಅವಿರಗೆ ಊಟವೇ ಸೇರುತ್ತಿರಲಿಲ್ಲ.

ಮೂವತ್ತಮೂರು ದಿನಗಳ ಪ್ರಯಾಣ ಮಾಡಿ ಪ್ರಫುಲ್ಲ ಚಂದ್ರರು ಲಂಡನ್ ನಗರವನ್ನು ಸೇರಿಕೊಂಡರು. ಅಲ್ಲಿದ್ದ ಭಾರತೀಯ ವಿದ್ಯಾರ್ಥಿಗಳು ಇವರಿಗೆ ಹಲವು ವಿಧದಲ್ಲಿ ಸಹಾಯ ಮಾಡಿದರು. ಮುಂದೆ ಬಹಳ ಚಳಿಯಿರುವ ಎಡಿನ್ಬರ್ಗ ನಗರಕ್ಕೆ ಹೋಗಬೇಕಾಗಿದ್ದುದರಿಂದ ಬೆಚ್ಚಗಿರುವ ಉಣ್ಣೆ ಬಟ್ಟೆಗಳನ್ನು ತೆಗೆಸಿಕೊಟ್ಟರು.

೪೦೦ ಮೈಲು ದೂರದ ಎಡಿನ್ಬರೊ ನಗರವನ್ನು ತಲಪಿ ಅಲ್ಲಿನ ವಿಶ್ವವಿದ್ಯಾಲಯದಲ್ಲಿ ಪ್ರಫುಲ್ಲಚಂದ್ರರು ಬಿ.ಎಸ್ಸಿ. ತರಗತಿಗೆ ಸೇರಿಕೊಂಡರು. ಅಲ್ಲಿ ರಸಯನ ವಿಜ್ಞಾನ ಪ್ರಾಧ್ಯಾಪಕರಾಗಿದ್ದ ಕ್ರಮ ಬ್ರೌನ್ ಎಂಬುವರಿಂದ ಅವರು ಬಹಳ ಪ್ರಭಾವಿತರಾದರು. ಉಳಿದೆಲ್ಲ ಪಾಠಗಳಿಗಿಂತ ಪ್ರಫುಲ್ಲಚಂದ್ರರಿಗೆ ರಸಾಯನ ವಿಜ್ಞಾನದ ಮೇಲೆ ಹೆಚ್ಚು ಆಸಕ್ತಿ ಹುಟ್ಟಿತು.

ಎಡಿನ್ಬರೋದಲ್ಲಿಯೂ ಅವರ ಆಹಾರ ಬಹು ಸರಳವಾಗಿತ್ತು; ಬಿಡುವಾದಾಗ ದೂರದ ಬೆಟ್ಟ ಮತ್ತು ವನಪ್ರದೇಶಗಳಲ್ಲಿ ತಿರುಗಾಡುತ್ತಿದ್ದರು: ಹೀಗೆ ತಮ್ಮ ಆರೋಗ್ಯವನ್ನು ಎಚ್ಚರಿಕೆಯಿಂದ ಕಾಪಾಡಿಕೊಂಡರು.

ಭಾರತಕ್ಕಾಗಿ

ಬಿ.ಎಸ್ಸಿ ಪರೀಕ್ಷೆಗೆ ಓದುತ್ತಿರುವಾಗ ಒಂದು ದಿನ ಪ್ರಫುಲ್ಲಚಂದ್ರರ ಹೆಸರು ಬ್ರಿಟಿಷ್ ಪತ್ರಿಕೆಗಳಲ್ಲೆಲ್ಲಾ ಪ್ರಕಟವಾಗಿ ಅವರು ಪ್ರಸಿದ್ಧರಾದರು. ಇದರ ಕತೆ ಸ್ವಾರಸ್ಯವಾಗಿದೆ. ಅವರಿಗೆ ತಮ್ಮ ತಾಯಿನಾಡಿನ ವಿಚಾರವಾಗಿ ಎಷ್ಟು ಅಭಿಮಾನವಿತ್ತೆಂಬುದನ್ನೂ ಅದು ತೋರಿಸುತ್ತದೆ. ಭಾರತವು ಆದಷ್ಟು ಬೇಗ ಸ್ವಾತಂತ್ರ್ಯ ಪಡೆಯಬೇಕೆಂಬುದು ಅವರ ತೀವ್ರ ಆಸೆಯಾಗಿತ್ತು.

‘ಇಂಗ್ಲೆಂಡಿನಿಂದ ಬಂದು ಸಾಲಗಳನ್ನು ತೀರಿಸುತ್ತೇನೆ’

೧೮೮೫ರಲ್ಲಿ ಎಡಿನ್ಬರೊ ವಿಶ್ವವಿದ್ಯಾಲಯದ ಮುಖ್ಯಸ್ಥರು ಒಂದು ಬಹುಮಾನವನ್ನು ಪ್ರಕಟಿಸಿದರು. ’ಭಾರತ-ಸಿಪಾಯಿ ದಂಗೆಗೆ ಮೊದಲು ಮತ್ತು ಅನಂತರ’ ಎಂಬ ವಿಷಯವನ್ನು ಕುರಿತು ಅತ್ಯುತ್ತಮ ಪ್ರಬಂಧವನ್ನು ಬರೆದವರಿಗೆ ಆ ಬಹುಮಾನ. ಪ್ರಫುಲ್ಲಚಂದ್ರರು ಈ ಸ್ಪರ್ಧೆಗೆ ಸೇರಿದರು. ೧೮೫೭ ರಲ್ಲಿ ಭಾರತದಿಂದ ಬ್ರಿಟಿಷರನ್ನು ಓಡಿಸಲು ನಡೆದ ಮಹಾ ಹೋರಾಟದ ವಿಷಯವಾಗಿ ಅನೇಕ ಪುಸ್ತಕಗಳನ್ನು ಓದಿದರು. ಆ ಕಾಲದ ಚರಿತ್ರೆ, ರಾಜಕೀಯ ಮತ್ತು ಆರ್ಥಿಕ ಸ್ಥಿತಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದರು. ಲೇಖನವನ್ನು ಬರೆಯಲು ಪ್ರಾರಂಭಿಸಿದಾಗ ಲೇಖನಿಯು ಸರಾಗವಾಗಿಯೇ ಓಡಿತು. ಸ್ಪರ್ಧೆಯ ಫಲಿತಾಂಶ ಹೊರಬಿದ್ದಾಗ ಬಹುಮಾನ ಮತ್ತೊಬ್ಬರಿಗೆ ಹೋಗಿದ್ದರೂ ಪ್ರಫುಲ್ಲಚಂದ್ರರ ಪ್ರಬಂಧವೂ ಅತ್ಯುತ್ತಮ ದರ್ಜೆಯದೆಂದು ತೀರ್ಮಾನವಾಗಿತ್ತು.

ಪ್ರಿನ್ಸಿಪಾಲರಾದ ಸರ್ ವಿಲಿಯಂ ಮ್ಯೂರಲ್ ಅದನ್ನು ವಿಶ್ವವಿದ್ಯಾಲಯದ ಪ್ರಾರಂಭ ಭಾಷಣದಲ್ಲಿ ಉಲ್ಲೇಖಿಸಿ ಹೊಗಳಿದರು. ಪ್ರಫುಲ್ಲಚಂದ್ರರ ಲೇಖನದಲ್ಲಿ ಬ್ರಿಟಿಷರ ಆಡಳಿತದ ಬಗ್ಗೆ ಟೀಕೆ ಇತ್ತು. ತಿಳಿಹಾಸ್ಯವೂ ಇದ್ದಿತು. ಪ್ರಫುಲ್ಲಚಂದ್ರರು ಪ್ರಬಂಧವನ್ನು ವಿಶ್ವವಿದ್ಯಾಲಯದಿಂದ ಹಿಂದಕ್ಕೆ ಪಡೆದು ತಾವೇ ಪ್ರಕಟಿಸಿದರು. ಪ್ರತಿಗಳನ್ನು ತಮ್ಮ ಸಹವಿದ್ಯಾರ್ಥಿಗಳಿಗೂ ಸಾಮಾನ್ಯ ಪ್ರಜೆಗಳಿಗೂ ಹಂಚಿದರು. “ಬ್ರಿಟಿಷ್ ಆಡಳಿತದಲ್ಲಿರುವ ನನ್ನ ದೇಶದ ಸಂಕೋಲೆಗಳನ್ನು ಬಿಡಿಸಲು ನೀವೆಲ್ಲಾ ಸಹಾಯ ಮಾಡಿ” ಎಂದು ಕೇಳಿಕೊಂರು. ಒಂದು ಪ್ರತಿಯನ್ನು ಆಗಿನ ಪಾರ್ಲಿಮೆಂಟ್ ಸದಸ್ಯರಾದ ಜಾನ್ ಬ್ರೈಟ್ ಎಂತಾನಿಗೆ ಕಳುಹಿಸಿದರು. ಆತನು ಭಾರತ ವಿಚಾರದಲ್ಲಿ ಹೆಚ್ಚು ಪ್ರೀತಿಯುಳ್ಳವನು. ಪ್ರಫುಲ್ಲಚಂದ್ರರಿಗೆ ತಾನೇ ಪತ್ರ ಬರೆದು ಭಾರತದ ಬಗ್ಗೆ ಬ್ರಿಟಿಷನ್ ಸರ್ಕಾರದ ಮನೋಭಾವವನ್ನು ಖಂಡಿಸಿದರು; “ಈ ಪತ್ರವನ್ನು ನಿಮಗಿಷ್ಟಬಂದಮತೆ ಉಪಯೋಗಿಸಿಕೊಳ್ಳಬಹುದು” ಎಂದನು. ಪ್ರಫುಲ್ಲಚಂದ್ರರು ಕೂಡಲೇ ಆ ಪತ್ರದ ಪ್ರತಿಗಳನ್ನು ಬ್ರಿಟನಿನ ಪ್ರಮುಖ ಪತ್ರಿಕೆಗಳಿಗೆ ಕಳುಹಿಸಿಕೊಟ್ಟರು. “ಭಾರತೀಯ ವಿದ್ಯಾರ್ಥಿಗೆ ಜಾನ್ಬ್ರೈಟ್ರ ಪತ್ರ” ಎಂಬ ಶಿರೋನಾಮೆಯಲ್ಲಿ ಅವು ಪತ್ರವನ್ನು ಮೊದಲ ಪುಟದಲ್ಲೇ ಪ್ರಕಟಿಸಿದವು. ವಿದ್ಯಾರ್ಥಿಯಾಗಿದ್ದ ಪ್ರಫುಲ್ಲಚಂದ್ರರು ಭಾರತದ ಸ್ಥಿತಿಗೆ ಇಂಗ್ಲೆಂಡಿನ್ಲೆ ಕನ್ನಡ ಹಿಡಿದರು.

೧೮೮೫ರಲ್ಲಿ ಪ್ರಫುಲ್ಲಚಂದ್ರರು ಬಿ.ಎಸ್ಸಿ. ಡಿಗ್ರಿ ಪಡೆದುಕೊಂಡರು. ಆಮೇಲೆ ರಸಾಯನ ವಿಜ್ಞಾನದಲ್ಲಿ ಸಂಶೋಧನೆಗಳನ್ನು ನಡೆಸಿ, ಒಂದು ಪ್ರೌಢಪ್ರಬಂಧವನ್ನು ವಿಶ್ವವಿದ್ಯಾಲಯಕ್ಕೆ ಸಮರ್ಪಿಸಿದರು. ೧೮೮೭ ರಲ್ಲಿ ಅವರಿಗೆ ’ಡಾಕ್ಟರ್ ಆಫ್ ಸೈನ್ಸ್’ ಪದವಿ ಸಿಕ್ಕಿತು. ಬಹುಮಾನ ವೇತನ ಸಿಕ್ಕಿದುದರಿಂದ ಇನ್ನೂ ಒಂದು ವರ್ಷ ಅವರು ಅಲ್ಲೇ ಇದ್ದರು. ಎಡಿನ್ಬರೊದಲ್ಲಿ ಇದ್ದಷ್ಟು ಕಾಲ ಅವರಿಗೆ ಸಿಗುತ್ತಿದ್ದ ಹಣ ಸ್ವಲ್ಪವೇ. ಆದರೂ ಅವರ ನಿತ್ಯಜೀವನ ಬಹಳ ಸರಳವಾಗಿದ್ದುದರಿಂದ ಅಷ್ಟರಲ್ಲೇ ಕಾಲ ಹಾಕಿದರು. ಮತ್ತೊಬ್ಬ ಬಂಗಾಳಿ ವಿದ್ಯಾರ್ಥಿಯ ಜೊತೆಗೆ ವಾಸ ಮತ್ತು ಊಟ.

ಪ್ರಾಧ್ಯಾಪಕ – ವಿಜ್ಞಾನಿ

೧೮೮೮ ರಲ್ಲಿ ಪ್ರಫುಲ್ಲಚಂದ್ರರು ಭಾರತಕ್ಕೆ ಮರಳಿದರು. ಹೊರಡುವ ಮುನ್ನ ತಮ್ಮ ಪ್ರಿನ್ಸಿಪಾಲ್ ಮತ್ತು ಪ್ರೊಫೆಸರ್ಗಳಿಂದ ಪರಿಚಯಪತ್ರಗಳನ್ನು ಪಡೆದುಕೊಂಡರು. ಇದರಿಂದ ತಮಗೆ ಭಾರತದ ಶಿಕ್ಷಣ ಇಲಾಖೆಯಲ್ಲಿ ಕೆಲಸ ಸಿಗುವುದೆಂಬ ಆಸೆ ಅವರಿಗಿದ್ದಿತು. ಆದರೆ ಆಗಿನ ಕಾಲದಲ್ಲಿ ಈ ಇಲಾಖೆಯ ಒಳ್ಳೆಯ ಕೆಲಸಗಳೆಲ್ಲ ಇಂಗ್ಲಿಷರಿಗೇ ಮೀಸಲು. ಡಿ.ಎಸ್ಸಿ. ಯಂತಹ ದೊಡ್ಡ ಪದವಿ ಪಡೆದುಕೊಂಡಿದ್ದರೂ ಪ್ರಫುಲ್ಲಚಂದ್ರರಿಗೆ ಸ್ವದೇಶದಲ್ಲೇ ಮನ್ನಣೆ ದೊರೆಯುವುದು ಕಷ್ಟವಾಯಿತು. ಒಂದು ವರ್ಷ ಕಾಲಕ ಅವರು ಪ್ರಸಿದ್ಧ ವಿಜ್ಞಾನಿ ಜಗದೀಶಚಂದ್ರ ಬೋಸರ ಪ್ರಯೋಗಶಾಲೆಯಲ್ಲಿ ಕೆಲಸ ಮಾಡಿದರು. ಅವರಿಬ್ಬರೂ ಆಪ್ತಮಿತ್ರರು.

ಅಂತೂ ೧೮೮೯ ರಲ್ಲಿ ಪ್ರಫುಲ್ಲಚಂದ್ರರು ಕಲ್ಕತ್ತೆಯ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ರಸಾಯನ ವಿಜ್ಞಾನದ ಸಹಾಯಕ ಪ್ರಾಧ್ಯಾಪಕರಾಗಿ ಸೇರಿದರು. ಸಂಬಳ ೨೫೦ ರೂಪಾಯಿ ಮಾತ್ರ. ಆದರೆ ಅವರಿಗೆ ಈ ಕೆಲಸದಿಂದ ಬಹು ತೃಪ್ತಿ. ತುಂಬ ಉತ್ಸಾಹದಿಂದ ಪಾಠ ಹೇಳಲು ಪ್ರಾರಂಭಿಸಿದರು. ಅನೇಕ ಕುತೂಹಲಕಾರಿ ಪ್ರಯೋಗಗಳು, ಕಥೆಗಳು, ಹಾಸ್ಯದ ಚಟಾಕಿಗಳು ಮುಂತಾದವುಗಳ ಮೂಲಕ ಅವರು ತಮ್ಮ ಪಾಠವನ್ನು ಬಹಳ ಸ್ವಾರಸ್ಯವಾಗಿ ಮಾಡುತ್ತಿದ್ದರು. ಸಂದರ್ಭವಿದ್ದಂತೆ ರವೀಂದ್ರರ ಪದ್ಯಗಳನ್ನೂ, ಭಾರತೀಯ ರಸಾಯನ ವಿಜ್ಞಾನಿ ನಾಗಾರ್ಜುನನ ’ರಸರತ್ನಾಕರ’ ಎಂಬ ಗ್ರಂಥದಿಂದ ಶ್ಲೋಕಗಳನ್ನೂ ಉದಾಹರಿಸುತ್ತಿದ್ದರು. ತರಗತಿಯಲ್ಲಿ ಪಾಠ ಹೇಳುವಾಗ, ಮೂಳೆಗಳನ್ನು ಸುಟ್ಟರೆ ಅದು ಶುದ್ಧವಾದ ರಾಸಾಯನಿಕ ಲವಣ ಆಗುತ್ತದೆ, ಅದು ಅಶುದ್ಧ ವಸ್ತುವಲ್ಲ ಎನ್ನುವುದನ್ನು ತೋರಿಸಲು ಅವರು ತಾವೇ ಒಂದು ಚಿಟಿಕೆ ಬಾಯಿಗೆ ಹಾಕಿಕೊಳ್ಳುತ್ತಿದ್ದರು!

ಭಾರತವು ಮುಂದುವರಿಯಬೇಕಾದರೆ ಕೈಗಾರಿಕೆಗಳಿಂದಲೇ ಸಾಧ್ಯ ಎನ್ನುವುದನ್ನು ಅವರು ಒತ್ತಿ ಹೇಳುತ್ತಿದ್ದರು. ಯುವಕರು ಕೈಗಾರಿಕೆ, ವ್ಯಾಪಾರ ಮತ್ತು ಕಸಬುಗಳಲ್ಲಿ ಶಿಕ್ಷಣ ಪಡೆದು ಕೆಲಸ ಮಾಡಬೇಕು, ಎಲ್ಲರೂ ವಿಶ್ವವಿದ್ಯಾಲಯಗಳಲ್ಲಿ ಪದವೀಧರರಾಗಿ ಗುಮಾಸ್ತೆಗಳಾಗಬಾರದು ಎನ್ನುತ್ತಿದ್ದರು.

ಶಿಕ್ಷಣ ಮಾಧ್ಯಮ ದೇಶಭಾಷೆಯೇ ಆಗಿರಬೇಕೆಂದು ಅವರ ವಾದ. ಇದಕ್ಕಾಗಿ ಅವರು ಬಂಗಾಳಿಯಲ್ಲಿ ವೈಜ್ಞಾನಿಕ ಪಠ್ಯಪುಸ್ತಕಗಳನ್ನು ಬರೆಯತೊಡಗಿದುರ. ರಷ್ಯ ದೇಶದ ರಸಾಯನ ವಿಜ್ಞಾನಿ ಮೆಂಡಲಿಫ್ ಎಂಬಾತನು ತನ್ನ ಪ್ರಸಿದ್ಧ ’ಪೀರಿಯಾಡಿಕ್ ನಿಯಮ’ದ ವಿಚಾರ ರಷ್ಯನ್ ಭಾಷೆಯಲ್ಲೇ ಬರೆದನು. ಅದನ್ನು ತಿಳಿಯಬೇಕೆನ್ನುವವರು ಆ ಭಾಷೆಯನ್ನು ಕಲಿಯಬೇಕಾಯಿತು. ಹೊಸ ಜ್ಞಾನವನ್ನು ನಾವು ಬೆಳೆಸಿದರೆ ಇತರ ದೇಶಗಳವರೂ ನಮ್ಮ ಭಾಷೆಗಳನ್ನು ಕಲಿಯುತ್ತಾರೆ ಎನ್ನುತ್ತಿದ್ದರು.

ಪ್ರಫುಲ್ಲಚಂದ್ರರು ನೆಯಲ್ಲಿಯೆ ರಾಸಾಯನಿಕಗಳನ್ನು ತಯಾರಿಸುವ ಸಾಹಸಕ್ಕೆ ಕೈಯಿಟ್ಟರು.

ಔಷಧಿಗಳನ್ನು ನಮ್ಮ ದೇಶದಲ್ಲಿಯೇ ತಯಾರಿಸೋಣ

ಭಾರತದಲ್ಲಿ ಕೈಗಾರಿಕೆಗಳು ಬೆಳೆಯಬೇಕು, ಇಲ್ಲವಾದರೆ ದೇಶ ಮುಂದಕ್ಕೆ ಬರಲಾರದು ಎಂದು ಎಂಬತ್ತೈದು ವರ್ಷಗಳ ಹಿಂದೆಯೇ ಕಮಡರು ಪ್ರಫುಲ್ಲಚಂದ್ರರು ರೋಗಗಳಿಗೆ ಔಷಧಗಳು ಸಹ ಭಾರತಕ್ಕೆ ಬೇರೆ ದೇಶಗಳಿಂದಲೇ ಬರಬೇಕು, ಇದರಿಂದ ಬೇರೆ ದೇಶಗಳ ವ್ಯಾಪಾರಿಗಳಿಗೆ ಲಾಭ, ಔಷಧಿಗಳನ್ನು ನಮ್ಮ ದೇಶದಲ್ಲಿಯೇ ತಯಾರಿಸೋಣ ಎನ್ನುತ್ತಿದ್ದರು ಪ್ರಫುಲ್ಲಚಂದ್ರರು.

ಯಾರು ಮಾಡಬೇಕು ಈ ಕೆಲಸವನ್ನು?

ಪ್ರಫುಲ್ಲಚಂದ್ರರೇನೂ ಶ್ರೀಮಂತರಲ್ಲ. ಮನೆತನದ ಆಸ್ತಿಯೆಲ್ಲ ಕಯ ಬಿಟ್ಟಿತ್ತು. ಅವರಿಗೆ ಬರುತ್ತಿದ್ದ ಸಂಬಳವೂ ಕಡಿಮೆ.

ಆದರೂ ತಾವೇ ಈ ಸಾಹಸಕ್ಕೆ ಕೈಯಿಟ್ಟರು. ಮನೆಯಲ್ಲಿಯೇ ಕೆಲವು ರಾಸಾಯನಿಕಗಳನ್ನು ತಯಾರಿಸಲು ಪ್ರಾರಂಭಿಸಿದರು. ಕ್ರಮೇಣ ಇದು ಬೆಳೆದು ಪ್ರತ್ಯೇಕ ಸಂಸ್ಥೆಯನ್ನೇ ಮಾಡಬೇಕು ಎಂದು ತೋರಿತು.

ಬಂಡವಾಳಕ್ಕಾಗಿ ಎಂಟು ನೂರು ರೂಪಾಯಿಗಳನ್ನು ಸೇರಿಸುವುದೂ ಕಷ್ಟವಾಯಿತು!

ಅಂತೂ ’ಬೆಂಗಾಲ್ ಕೆಮಿಕಲ್ ಅಂಡ್ ಫಾರ್ಮ ಸ್ಯುಟಿಕಲ್ ವರ್ಕ್ಸ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು.

೧೮೯೪ ರಲ್ಲಿ ಅವರ ತಂದೆ ತೀರಿಕೊಂಡದ್ದು ಪ್ರಫುಲ್ಲಚಂದ್ರರಿಗೆ ಬಲವಾದ ಆಘಾತವಾಯಿತು. ತಂದೆಗೆ ಸಾವಿರಾರು ರೂಪಾಯಿಗಳ ಸಾಲವಿತ್ತು. ಮನೆತನಕ್ಕೆ ಉಳಿದಿದ್ದ ಆಸ್ತಿಯನ್ನು ಮಾರಿ ಸಾಲವನ್ನು ತೀರಿಸಿದ್ದಾಯಿತು.

ಎಲ್ಲ ಕಷ್ಟಗಳ ನಡುವೆಯೂ ತಮ್ಮ ಸಂಸ್ಥೆಯನ್ನು ನಡೆಸಿಕೊಂಡು ಹೋದರು. ಮೊದಮೊದಲು ಇಲ್ಲಿ ತಯಾರಿಸಿದ ರಾಸಾಯನಿಕಗಳನ್ನು ಮಾರಾಟ ಮಾಡುವುದು ಕಷ್ಟವಾಯಿತು. ಹೊದೇಶಗಳಿಂದ ಬಂದ ಪದಾರ್ಥಗಳ ಜೊತೆಗೆ ಸ್ಪರ್ಧೆ ನಡೆಸುವುದು ಸುಲಭವಾಗಿರಲಿಲ್ಲ. ಆದರೆ ಅನೇಕ ಸ್ನೇಹಿತರು ಇವರ ಪ್ರಯತ್ನಕ್ಕೆ ಬೆಂಬಲಕೊಟ್ಟರು. ಇವರ ಸಹಪಾಠಿ ಡಾ. ಅಮೂಲ್ಯಚರಣ್ ಬೋಸರು ಹೆಚ್ಚು ಸಹಾಯ ಮಾಡಿದರು. ಅವರು ಸ್ವತಃ ವೈದ್ಯರಾಗಿದ್ದುದರಿಂದ ಇತರ ಬಂಗಾಳಿ ವೈದ್ಯರ ಸಹಕಾರವೂ ದೊರೆಯಿತು. ಕಾರ್ಖಾನೆಯನ್ನು ನಡೆಸುವುದರಲ್ಲಿ ಹಲವಾರು ರಸಾಯನ ಶಾಸ್ತ್ರ ಪದವೀಧರರು ಉತ್ಸಾಹದಿಂದ ಕೆಲಸ ಮಾಡಿದರು. ಸಂಸ್ಥೆ ಪ್ರಸಿದ್ಧವಾಯಿತು. ಆದರೆ ಅಮೂಲ್ಯಚರಣ್ ಬೋಸರು ಇದ್ದಕ್ಕಿದ್ದ ಹಾಗೆ ೧೮೯೮ ರಲ್ಲಿ ಪ್ಲೇಗ್ ರೋಗಕ್ಕೆ ತುತ್ತಾದರು. ಅವರ ಭಾವಮೈದುನ ಸತೀಶಚಂದ್ರ ಸಿಂಹ ಎಂಬ ತರುಣ ಪದವೀಧರನು ಸಂಸ್ಥೆಯಲ್ಲಿ ಉತ್ಸಾಹದಿಂದ ಕೆಲಸ ಮಾಡುತ್ತಿದ್ದ. ಆತನು ಪ್ರಯೋಗಶಾಲೆಯಲ್ಲಿ ಆಕಸ್ಮಿವಾಗಿ ವಿಷರಾಸಾಯನಿಕ ಸೇವನೆಯಿಂದ ಸತ್ತನು. ಇದೆಲ್ಲಾ ಪ್ರಫುಲ್ಲಚಂದ್ರರಿಗೆ ಬಹಳ ವ್ಯಸವನ್ನುಂಟು ಮಾಡಿತು. ಇಡೀ ಸಂಸ್ಥೆಯ ಹೊಣೆ ಅವರ ಮೇಲೆ ಬಿದ್ದಿತು. ಆದರೂ ಅವರು ಧೈರ್ಯಗೆಡದೆ ಕೆಲಸ ಮುಂದುವರಿಸಿದರು.

ಭಾರತದಲ್ಲಿ ಕೈಗಾರಿಕೆಗಳ ಅಭಿವೃದಧಿಗೆ ಪ್ರಫುಲ್ಲಚಂದ್ರರು ಮಾಡಿದ ಸೇವೆ ಇಷ್ಟೇ ಅಲ್ಲ. ಅನೇಕ ಕಾರ್ಖಾನೆಗಳು ಪ್ರಾರಂಭವಾಗಲು ಅವರು ನೆರವಾದರು. ಬಟ್ಟೆ ಗಿರಣಿಗಳು, ಸಾಬೂನು ಕಾರ್ಖಾನೆಗಳು, ಸಕ್ಕರೆ ಕಾರ್ಖಾನೆಗಳು, ರಾಸಾಯನಿಕ ಕೈಗಾರಿಕೆಗಳು, ಪಿಂಗಾಣಿ ಸಾಮಾನುಗಳ ತಯಾರಿಕೆ, ಪುಸ್ತಕ ಪ್ರಕಟಣೆ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡಿದರು.

ವಿಜ್ಞಾನಿ-ಲೇಖಕ

ಪ್ರೆಸಿಡೆನ್ಸಿ ಕಾಲೇಜಿನಲ್ಲಿ ರಾಸಾಯನಿಕ ಸಂಶೋಧನೆಗಳನ್ನು ಅವರು ಆಸಕ್ತಿಯಿಂದ ನಡೆಸುತ್ತಿದ್ದರು. ಪಾದರಸದ ಕೆಲವು ಲವಣಗಳ ವಿಷಯವಾಗಿ ಅವರು ಪ್ರಕಟಿಸಿದ ಸಂಶೋಧನೆಗಳು ಜಗತ್ಪ್ರಸಿದ್ಧವಾದುವು. ಅವರ ಬಳಿ ಕೆಲಸ ಮಾಡಲು ಅನೇಕ ಮೇಧಾವಿ ವಿದ್ಯಾರ್ಥಿಗಳು ಬಂದರು. ಅವರ ವೈಜ್ಞಾನಿಕ ಲೇಖನಗಳು ಯುರೋಪಿನ ಪ್ರಸಿದ್ಧ ವಿಜ್ಞಾನ ಪತ್ರಿಕೆಗಳಲ್ಲಿ ಪ್ರಕಟವಾಗತೊಡಗಿದವು.

ಭಾರತೀಯ ವಿಜ್ಞಾನದಲ್ಲಿ ಹಿಂದುಳಿದವರು, ಈಚೆಗೆ ಪಾಶ್ಚಾತ್ಯ ದೇಶಗಳವರಿಂದ ವಿಜ್ಞಾನವನ್ನು  ಕಲಿತರು ಎಂದು ಎಷ್ಟೋ ಜನರ ಭಾವನೆ ಅಲ್ಲವೆ? ನಮ್ಮ ದೇಶದ ವಿಷಯ ನಮಗೆ ತಕ್ಕಷ್ಟು ತಿಳಿದಿಲ್ಲ, ನಮ್ಮ ಪೂರ್ವಿಕರು ಎಷ್ಟು ಶ್ರದ್ಧೆಯಿಂದ, ಶ್ರದ್ಧೆಯಿಂದ ಜ್ಞಾನವನ್ನು ಬೆಳೆಸಿ ಕೊಂಡರು ಎಂಬುದನ್ನು ನಾವು ತಿಳಿಯಬೇಕು ಎನ್ನಿಸುತ್ತಿತ್ತು ಪ್ರಫುಲ್ಲಚಂದ್ರರಿಗೆ.

ಅವರಿಗೆ ಮೊದಲಿನಿಂದಲೂ ಹಿಂದು ವಿಜ್ಞಾನಿಗಳು ಬಹಳ ಹಿಂದೆಯೇ ನಡೆಸಿದ ರಾಸಾಯನಿಕ ಪ್ರಯೋಗಗಳಲ್ಲಿ ಆಸಕ್ತಿಯಿತ್ತು. ಪ್ರಸಿದ್ಧ ಫ್ರೆಂಚ್ ವಿಜ್ಞಾನಿ ಬೆರ್ತಲಟ್ ಎಂಬಾತನ ’ಗ್ರೀಕ್ ಆಲ್ಕೆಮಿ’ ಗ್ರಂಥವನ್ನು ಓದಿದ ಮೇಲೆ ಈ ಆಸಕ್ತಿ ಇನ್ನೂ ಹೆಚ್ಚಿತು. ಸಂಸ್ಕೃತ, ಪಾಳಿ, ಬಂಗಾಳಿ ಮುಂತಾದ ಭಾಷೆಗಳಲ್ಲಿರುವ ಪುರಾತನ ಗ್ರಂಥಗಳನ್ನೆಲ್ಲಾ ಓದತೊಡಗಿದರು. ’ರಸೇಂದ್ರಸಾರ ಸಂಗ್ರಹ’ ಎಂಬ ಸಂಸ್ಕೃತ ಗ್ರಂಥವನ್ನು ಕುರಿತು ಒಂದು ಲೇಖನವನ್ನು ಬರೆದು ಬೆರ್ತಲಟ್ನಿಗೆ ಕಳುಹಿಸಿದರು. ಆತನು ಅದನ್ನು ಮುಕ್ತಕಂಠದಿಂದ ಹೊಗಳಿ ಪ್ರಕಟಿಸಿ, ಇನ್ನೂ ಹೆಚ್ಚು ಸಂಶೋಧನೆಗಳನ್ನು ನಡೆಸಿ ಒಂದು ಪುಸ್ತಕವನ್ನೇ ಬರೆಯಿರಿ ಎಂದು ಪ್ರೋತ್ಸಾಹಿಸಿದನು. ಹಲವಾರು ವರ್ಷಗಳ ಕಾಲ ಅಧ್ಯಯನ ಮಾಡಿ ಪ್ರಫುಲ್ಲಚಂದ್ರರು ’ಹಿಂದು ರಸಾಯನ ವಿಜ್ಞಾನದ ಚರಿತ್ರೆ’ ಎಂಬ ಗ್ರಂಥಗಳನ್ನು ಪ್ರಕಟಿಸಿದರು. ಬಹು ಹಿಂದೆಯೇ ಹೇಗೆ ಹಿಂದು ವಿಜ್ಞಾನಿಗಳು ಉಕ್ಕಿನ ತಯಾರಿಕೆ, ಸತುವಿನ ಭಟ್ಟಿ, ಕ್ಷಾರಗಳು, ಪಾದರಸದ ಗಂಧಕ ಲವಣ ಮುಂತಾದುವುಗಳ ವಿಚಾರ ತಿಳಿದುಕೊಂಡಿದ್ದರೆಂಬುದನ್ನು ಈ ಗ್ರಂಥದಲ್ಲಿ ಬಹಳ ಸ್ವಾರಸ್ಯವಾಗಿ ವರ್ಣಿಸಿದ್ದಾರೆ.

ಪ್ರವಾಹಗಳ ಡಾಕ್ಟರ್

೧೯೦೧ ರಲ್ಲಿ ಪ್ರಫುಲ್ಲಚಂದ್ರರಿಗೆ ಮೊದಲೇ ಪರಿಚಿತರಾಗಿದ್ದ ಗೋಪಾಲಕೃಷ್ಣ ಗೋಖಳೆಯವರ ಮನೆಯಲ್ಲಿ ಗಾಂಧೀಜಿಯವರ ಪರಿಚಯವಾಯಿತು. ಗಾಂಧಿಜಿ ದಕ್ಷಿಣ ಆಫ್ರಿಕಾದಿಂದ ಆಗಲೇ ಬಂದಿದ್ದರು. ಪ್ರಥಮ ದರ್ಶನದಲ್ಲೇ ಪ್ರಫುಲ್ಲಚಂದ್ರರಿಗೆ ಗಾಂಧೀಜಿಯವರಲ್ಲಿ ಪೂಜ್ಯಭಾವ ಹುಟ್ಟಿತು. ಅವರ ಸರಳತೆ, ದೇಶಭಕ್ತಿ ಮತ್ತು ಕಾರ್ಯೋನ್ಮುಖತೆ ಪ್ರಫುಲ್ಲಚಂದ್ರರಿಗೆ ಬಹಳವಾಗಿ ಹಿಡಿಸಿತು. “ಸತ್ಯದ ವಿಷಯ ಮಾತನಾಡುವುದು ದೊಡ್ಡದಲ್ಲ, ಅದನ್ನು ಆಚರಿಸುವುದು ದೊಡ್ಡದು” ಎಂದು ಅವರಿಗೆ ಮನದಟ್ಟಾಯಿತು. ಗಾಂಧೀಜಿಯವರಿಗೂ ಪ್ರಫುಲ್ಲಚಂದ್ರರ ವಿಚಾರದಲ್ಲಿ ಹೆಚ್ಚು ಅಭಿಮಾನವಿತ್ತು. ಪ್ರಫುಲ್ಲಚಂದ್ರರು ದೀನದಲಿತರ ಸೇವೆಗಾಗಿ ಎಷ್ಟು ಕೆಲಸ ಮಾಡಬಲ್ಲರೆಂಬುದು ಅವರಿಗೆ ತಿಳಿದಿತ್ತು. ಪ್ರವಾಹಗಳ ಕಾಲದಲ್ಲಂತೂ ಪ್ರಫುಲ್ಲಚಂದ್ರರು ವಿಶೇಷ ರೀತಿಯ ಕೆಲಸ ಮಾಡಿ ಜನರಿಗೆ ಸಹಾಯ ಮಾಡುತ್ತಿದ್ದರು. ಇದಕ್ಕಾಗಿ ಗಾಂಧೀಜಿ ಅವರನ್ನು ’ಪ್ರವಾಹಗಳ ಡಾಕ್ಟರ್’ ಎಂದು ಕರೆಯುತ್ತಿದ್ದರು!

೧೯೦೪ ರಲ್ಲಿ ಪ್ರಫುಲ್ಲಚಂದ್ರರು ಯುರೋಪಿಗೆ ಪ್ರವಾಸ ಹೋದರು. ಅನೇಕ ವಿಜ್ಞಾನಿಗಳಿಗೆ ಪ್ರಯೋಗ ಶಾಲೆಗಳಿಗೂ, ವಿಶ್ವವಿದ್ಯಾಲಯಗಳಿಗೂ ಭೇಟಿ ಕೊಟ್ಟರು. ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್ ಮುಂತಾದ ಕಡೆ ವಿಜ್ಞಾನಿಗಳು ಅವರನ್ನು ಆದರದಿಂದ ಬರಮಾಡಿಕೊಂಡು ವಿಚಾರವಿನಿಮಯ ಮಾಡಿದರು. ಕೆಲವು ವಿಶ್ವವಿದ್ಯಾಲಯಗಳು ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಕೊಟ್ಟವು. ಪಾದರಸದ ನೈಟ್ರೇಟ್, ಅಮೋನಿಯಂ ನೈಟ್ರೇಟ್ ಮುಂತಾದ ರಾಸಾಯನಿಕಗಳ ವಿಚಾರದ ಅವರ ಸಂಶೋಧನೆಗಳನ್ನು ಎಲ್ಲರೂ ಕೊಂಡಾಡಿದರು. ಕೆಲವು ವರ್ಷಗ ನಂತರ ಮತ್ತೆ ಪ್ರಫುಲ್ಲಚಂದ್ರರು ಇಂಗ್ಲೆಂಡಿಗೆ ಭೇಟಿಯಿತ್ತರು. ಲಂಡನ್ ನಗರದಲ್ಲಿ ನೆರೆದ ಬ್ರಿಟಿಷ್ ಸಾಮ್ರಾಜ್ಯದ ವಿಶ್ವವಿದ್ಯಾಲಯಗಳ ಕೂಟದಲ್ಲಿ ಭಾಗವಹಿಸಿ ಭಾಷಣ ಮಾಡಿದರು.

ವಿಜ್ಞಾನಕ್ಕಾಗಿ

ಪ್ರಫುಲ್ಲಚಂದ್ರರೇ ಒಮ್ಮೆ ಹೇಳಿದರು – “ಯೂರೋಪಿನ ಹಲವು ಭಾಗಗಳಲ್ಲಿ ಜನ ಚರ್ಮಗಳನ್ನು ಹೊದ್ದು ಕಾಡು ಮನುಷ್ಯರ ಹಾಗೆ ಬದುಕುತ್ತಿದ್ದ ಕಾಲದಲ್ಲಿ ಭಾರತದಲ್ಲಿ ವಿಜ್ಞಾನಿಗಳು ಅದ್ಭುತವಾದ ರಾಸಾಯನಿಕಗಳನ್ನು ತಯಾರು ಮಾಡುತ್ತಿದ್ದರು.”

ನಾವು ಹೆಮ್ಮೆ ಪಡಬೇಕಾದ ಸಂಗತಿ.

ಪ್ರಫುಲ್ಲಚಂದ್ರರಿಗೆ ಇನ್ನೊಂದು ವಿಷಯವೂ ಚೆನ್ನಾಗಿ ತಿಳಿದಿತ್ತು – ಹಿಂದಿನ ಹಿರಿಮೆಯನ್ನು ಸ್ಮರಿಸಿಕೊಂಡು ಹಿಗ್ಗಿದರೆ ಸಾಲದು, ಮತ್ತೆ ನಮ್ಮ ಹಿರಿಯರ ಜ್ಞಾನಶ್ರದ್ಧೆಯನ್ನು ಬೆಳೆಸಿಕೊಳ್ಳಬೇಕು, ವಿಜ್ಞಾನ ಮತ್ತು ಕೈಗಾರಿಕೆಗಳಲ್ಲಿ ಮುಂದುವರಿಯಬೇಕು.

ಈ ವಿಷಯವನ್ನು ಹೇಳಿ ತೃಪ್ತಿಪಟ್ಟವರಲ್ಲ ಪ್ರಫುಲ್ಲಚಂದ್ರರು. ಹಲವಾರು ಕೆಲಸ ಮಾಡತೊಡಗಿದರು. ೧೯೧೬ ರಲ್ಲಿ ಅವರು ಪ್ರೆಸಿಡೆನ್ಸಿ ಕಾಲೇಜಿನಿಂದ ನಿವೃತ್ತಿ ಹೊಂದಿದರು. ಕಲ್ಕತ್ತಾ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಅಸಂತೋಷ್ ಮುಖರ್ಜಿಯವರು ಅವರನ್ನು ವಿಶ್ವವಿದ್ಯಾಲಯದ ವಿಜ್ಞಾನ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ನೇಮಿಸಿದರು. ಇಲ್ಲಿ ಪ್ರಫುಲ್ಲಚಂದ್ರರು ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ ಕೊಟ್ಟರು. ತಾವೂ ಅವರೊಡನೆ ಸೇರೆ ಹೊಸ ಹೊಸ ಸಂಶೋಧನೆಗನ್ನು ನಡೆಸಿದರು.

ವಿಶ್ವವಿದ್ಯಾಲಯದ ಕಾಲೇಜು ಹೊಸದಾಗಿ ಪ್ರಾರಂಭವಾಗಿತ್ತು. ಅಲ್ಲದೆ ಪ್ರಯೋಗಗಳಿಗೆ ಬೇಕಾದ ಸಲಕರಣೆಗಳೂ ಇರಲಿಲ್ಲ. ಹೀಗಾಗಿ ಕೆಲಸ ನಡೆಸಲು ಬಹಳ ಕಷ್ಟವಾಯಿತು. ಕಾಲೇಜಿನ ನಿಯಮದ ಪ್ರಕಾರ ಅಲ್ಲಿ ಕೆಲಸ ಮಾಡುವ ಪ್ರಾಧ್ಯಾಪಕರೆಲ್ಲರೂ ಭಾರತೀಯರೇ ಆಗಿರಬೇಕಾಗಿತ್ತು. ಪ್ರಾಯಶಃ ಇದು ಬ್ರಿಟಿಷ್ ಸರಕಾರಕ್ಕೆ ಇಷ್ಟವಾಗಲಿಲ್ಲ. ಅಂತೂ ಸರ್ಕಾರ ಯಾವ ಸಹಾಯವನ್ನೂ ಮಾಡಲಿಲ್ಲ. ಪ್ರಫುಲ್ಲ ಚಂದ್ರರೂ ಅವರ ವಿದ್ಯಾರ್ಥಿಗಳೂ ಇದ್ದ ಸಲಕರಣೆಗಳನ್ನೇ ಉಪಯೋಗಿಸಿಕೊಂಡು ಕಷ್ಟಪಟ್ಟು ಕೆಲಸ ಮಾಡಿ ಕಾಲೇಜಿಗೆ ಕೀರ್ತಿ ತಂದರು.

ಈ ಕಾಲೇಜಿನಲ್ಲಿ ಇಪ್ಪತ್ತು ವರ್ಷಗಳ ಕಾಲ ಸತತವಾಗಿ ದುಡಿದರು ಪ್ರಫುಲ್ಲಚಂದ್ರರು. ಅವರು ಮದುವೆಯಾಗಲೇ ಇಲ್ಲ. ಆ ಇಪ್ಪತ್ತು ವರ್ಷಗಳೂ ಕಾಲೇಜಿನಲ್ಲೇ ಮೊದಲಂತಸ್ತಿನ ಒಂದು ಕೊಠಡಿಯಲ್ಲಿ ವಾಸಮಾಡುತ್ತಿದ್ದರು. ಬೇರೆ ಕಡೆ ವಾಸ ಮಾಡಲು ಅನುಕೂಲವಿಲ್ಲದ ಕೆಲವು ವಿದ್ಯಾರ್ಥಿಗಳಿಗೂ ಅಲ್ಲಿಯೆ ಜಾಗ ಕೊಟ್ಟಿದ್ದರು. ೧೯೨೬ ರಲ್ಲಿ, ಅವರಿಗೆ ೭೫ ವರ್ಷ ವಯಸ್ಸಾದಾಗ, ಅವರು ಪ್ರೊಫೆಸರ್ ಹುದ್ದೆಯಿಂದ ನಿವೃತ್ತರಾದರು.

೧೯೨೧ ರಲ್ಲಿ ೬೦ ವರ್ಷ ಮುಟ್ಟಿದಾಗಲೇ ಪ್ರಫುಲ್ಲಚಂದ್ರರು ವಿಶ್ವವಿದ್ಯಾಲಯದಲ್ಲಿ ತಮಗೆ ಬರಲಿರುವ ಉಳಿದ ವರ್ಷಗಳ ಸಂಬಳವನ್ನು ರಸಾಯನ ವಿಜ್ಞಾನ ವಿಭಾಗಕ್ಕೆ ದತ್ತಿಯಾಗಿ ಬಿಟ್ಟರು. ಇದರಿಂದ ಬರುವ ವರಮಾನವನ್ನು ಆ ವಿಭಾಗದ ಅಭಿವೃದ್ಧಿಗೆ ಮತ್ತು ಕೆಲವು ವಿದ್ಯಾರ್ಥಿಗಳಿಗೆ ವೇತನ ಕೊಡುವುದಕ್ಕೆ ಉಪಯೋಗಿಸಲಾಯಿತು. ಈ ದತ್ತಿಯ ಮೊಬಲಗು ಸುಮಾರು ಎರಡು ಲಕ್ಷ ರೂಪಾಯಿಗಳಷ್ಟು ಆಗಿತ್ತು. ಇದಲ್ಲದೆ ಎರಡು ಸಲ ಹತ್ತು ಸಹಸ್ರ ರೂಪಾಯಿಗಳನ್ನು ಪ್ರಾಚೀನ ಭಾರತದ ವಿಜ್ಞಾನಿ ನಾಗಾರ್ಜುನನ ಹೆಸರಿನಲ್ಲಿ ಬಹುಮಾನ ಕೊಡುವುದಕ್ಕೂ, ಪ್ರಾಣಿಶಾಸ್ತ್ರ ಮತ್ತು ಸಸ್ಯಶಾಸ್ತ್ರಗಳಲ್ಲಿ ಉತ್ತಮ ಸಂಶೋಧನೆಗಳಿಗಾಗಿ ಬಹುಮಾನ ಕೊಡುವುದಕ್ಕೂ ದಾನ ಮಾಡಿದರು.

ಪ್ರಫುಲ್ಲಚಂದ್ರರ ಅಗಾಧ ಕೆಲಸ ಮತ್ತು ಸಂಶೋಧನೆಗಳಿಂದ ಅವರಿಗೆ ಗೌರವ ದೊರಕಿತು. ’ಇಂಡಿಯನ್ ಸೈನ್ಸ್ ಕಾಂಗ್ರೆಸ್’, ’ಇಂಡಿಯನ್ ಕೆಮಿಕಲ್ ಸೊಸೈಟಿ’ಗಳಿಗೆ ಹಲವು ಬಾರಿ ಅಧ್ಯಕ್ಷರಾಗಿದ್ದರು. ಅನೇಕ ಭಾರತೀಯ ಮತ್ತು ಪಾಶ್ಚಾತ್ಯ ವಿಶ್ವವಿದ್ಯಾಲಯಗಳು ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿಗಳನ್ನು ಕೊಟ್ಟವು.

ಹಿರಿಯ ವಿಜ್ಞಾನಿ-ದೊಡ್ಡ ವ್ಯಕ್ತಿ

ಪ್ರಫುಲ್ಲಚಂದ್ರರು ಬಹೊ ದೊಡ್ಡ ವಿಜ್ಞಾನಿಗಳು. ಜತೆಗೆ ಬಹುಮುಖವಾದ ವ್ಯಕ್ತಿತ್ವ ಅವರದು. ಹಲವು ವಿಷಯಗಳಲ್ಲಿ ಅವರಿಗೆ ಆಸಕ್ತಿ.

ಪ್ರಫುಲ್ಲಚಂದ್ರರು ಸಾಹಿತ್ಯದಲ್ಲೂ ಬಹಳ ಆಸಕ್ತಿಯನ್ನು ಇಟ್ಟುಕೊಂಡಿದ್ದರು. ಇಂಗ್ಲಿಷ್ ನಾಟಕಕಾರ ಷೇಕ್ಸ್ಪಿಯರ್, ಬಂಗಾಳದ ಮಧುಸೂದನ ದತ್ತ ಮತ್ತು ರವೀಂದ್ರರ ಹಲವು ಕೃತಿಗಳು ಅವರಿಗೆ ಬಾಯಿಪಾಠವಾಗಿದ್ದವು. ಅನೇಕ ಇಂಗ್ಲಿಷ್ ಸಾಹಿತ್ಯ ಕೃತಿಗಳನ್ನು ಅವರು ಚೆನ್ನಾಗಿ ಓದಿಕೊಂಡಿದ್ದರು. ೧೯೩೨ ರಲ್ಲಿ ಅವರು ತಮ್ಮ ಆತ್ಮಚರಿತ್ರೆಯನ್ನು ’ಬಂಗಾಳಿ ರಸಾಯನ ಶಾಸ್ತ್ರಜ್ಞನೊಬ್ಬನ ಜೀವನ ಮತ್ತು ಅನುಭವನಗಳು’ ಎಂಬ ಹೆಸರಿನಲ್ಲಿ ಇಂಗ್ಲಿಷ್ನಲ್ಲಿ ಪ್ರಕಟಿಸಿದರು. ಅನೇಕರು ಈ ಕೃತಿಯನ್ನು ಹೊಗಳಿದ್ದಾರೆ. ಮುಂದೆ ಈ ಪುಸ್ತಕವನ್ನು ಅವರೇ ಬಂಗಾಳಿಯಲ್ಲಿ ’ಆತ್ಮಚರಿತ’ ಎಂಬ ಹೆಸರಿನಲ್ಲಿ ಪ್ರಕಟಿಸಿದರು. ಅವರ ಸಾಹಿತ್ಯ ಸೇವೆಯನ್ನು ಗುರುತಿಸಿ ಎರಡು ಬಾರಿ ಅವರನ್ನು ಬಂಗಾಳಿ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಆರಿಸಲಾಯಿತು.

ಪ್ರಫುಲ್ಲಚಂದ್ರರು ರಾಷ್ಟ್ರೀಯ ಶಿಕ್ಷಣ ಮಂಡಲಿಯ ಅಧ್ಯಕ್ಷರಾಗಿದ್ದರು. ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳು ಬಿ.ಎ., ಬಿ.ಎಸ್ಸಿ., ಎಂ.ಎಸ್ಸಿ. ಮೊದಲಾಗಿ ಪದವಿಗಳನ್ನು ಪಡೆಯುತ್ತಾರೆ, ಆದರೆ ಎಷ್ಟೇ ಸಾಲದು, ನಿಜವಾಗಿ ವಿದ್ಯೆಯನ್ನು ಸಂಪಾದಿಸಬೇಕು ಎಂದು ಅವರ ಖಚಿತ ಅಭಿಪ್ರಾಯ. ಸರಕಾರದ ಕೆಲಸಗಳಿಗಾಗಿ ಡಿಗ್ರಿ ಪಡೆಯುವುದು ವೃಥಾ ಶ್ರಮ, ಅದಕ್ಕೆ ಬದಲು ತಾಂತ್ರಿಕ ಶಿಕ್ಷಣ ಪಡೆದು ಉದ್ಯೋಗಗಳನ್ನು ಪ್ರಾರಂಭಿಸಬೇಕು ಎಂದರು. ’ಯುವಕರು ಸ್ವತಂತ್ರವಾಗಿ ವ್ಯಾಪಾರ ಮತ್ತು ಕೈಗಾರಿಕೆಗಳನ್ನು ಕೈಗೊಳ್ಳಬೇಕು’ ಎಂದು ಅವರು ಹೇಳುತ್ತಿದ್ದರು. ಶಾಲಾಕಾಲೇಜುಗಳಲ್ಲಿ ಮಾತೃಭಾಷೆಯಲ್ಲೇ ಪಾಠ ಹೇಳಬೇಕು, ಜ್ಞಾನಸಂಪತ್ತನ್ನು ನಮ್ಮ ಭಾಷೆಯ ಮೂಲಕವೇ ಪಡೆದುಕೊಳ್ಳುವುದು ಅಸಾಧ್ಯವಲ್ಲ ಎಂದು ಪದೇ ಪದೇ ಹೇಳುತ್ತಿದ್ದರು.

ಸಮಾಜಸೇವೆಯು ಪ್ರಫುಲ್ಲಚಂದ್ರರ ಜೀವನದಲ್ಲಿ ದೊಡ್ಡ ಆದರ್ಶವಾಗಿತ್ತು. ಚಿಕ್ಕಂದಿನಲ್ಲಿ ತಮ್ಮ ತಾಯಿಗೆ “ನಾನು ಸಂಪಾದಿಸಿ ಮನೆಯ ಆಸ್ತಿಯನ್ನು ಅಭಿವೃದ್ಧಿಗೆ ತರುತ್ತೇನೆ” ಎಂದು ಹೇಳಿದ ಮಾತನ್ನು ಅವರು ಆಗಾಗ ನೆನಸಿಕೊಂಡು ನಗುತ್ತಿದ್ದರು. ಅದಕ್ಕಿಂತ ಉತ್ತಮವಾದ ಕೆಲಸ, ಗಳಿಸಿದ ಹಣವನ್ನು ಇತರರ ಸೇವೆಗೆ ಉಪಯೋಗಿಸುವುದು ಎಂದು ಅವರ ನಂಬಿಕೆಯಾಗಿತ್ತು. ಅದರಂತೆಯೇ ತಾವು ಸಂಪಾದಿಸಿದ ಹಣವನ್ನೆಲ್ಲಾ ಅವರು ವಿದ್ಯಾರ್ಥಿಗಳ ಮತ್ತು ದೀನದಲಿತರ ಸೇವೆಗಾಗಿ ವಿನಿಯೋಗಿಸಿದರು.

ಪ್ರಫುಲ್ಲಚಂದ್ರರು ತಮ್ಮ ಸಂಪಾದನೆಯಲ್ಲಿ ಬಹು ಸ್ವಲ್ಪ ಹಣವನ್ನು ಮಾತ್ರ ಸ್ವಂತ ಖರ್ಚಿಗೆ ಇಟ್ಟುಕೊಂಡು ಉಳಿದುದನ್ನೆಲ್ಲಾ ಬಡ ವಿದ್ಯಾರ್ಥಿಗಳಿಗೂ ಶಾಲಾ ಕಾಲೇಜುಗಳಿಗೂ ಕೊಟ್ಟುಬಿಡುತ್ತಿದ್ದರು. ’ಬೆಂಗಾಲ್ ಕೆಮಿಕಲ್ ಕಂಪೆನಿ’ಯ ತಮ್ಮ ಭಾಗದ ಒಂದು ಲಕ್ಷ ರೂಪಾಯಿಗಳ ಷೇರುಗಳನ್ನು ದಾನವಾಗಿ ಕೊಟ್ಟುಬಿಟ್ಟರು. ಅದರ ಬಡ್ಡಿಯನ್ನು ಬಡ ವಿಧವೆಯರಿಗೆ ಮತ್ತು ಅನಾಥರಿಗೆ ಸಹಾಯ ಮಾಡುವುದಕ್ಕೆ ಮತ್ತು ಚರಕ ಮತ್ತು ಖಾದಿ ತಯಾರಿಕೆಗೆ ಉಪಯೋಗಿಸುವಂತೆ ಏರ್ಪಾಡು ಮಾಡಿದರು. ತಮ್ಮ ಉಳಿದ ಆಸ್ತಿಯನ್ನು ಅವರು ’ಬ್ರಹ್ಮ ಸಮಾಜ’ವೆಂಬ ಧಾರ್ಮಿಕ ಸಂಸ್ಥೆಗೂ ಮತ್ತು ತಮ್ಮ ಹಳ್ಳಿ ರರೂಲಿಯಲ್ಲಿ ತಂದೆ ಹರೀಶಚಂದ್ರರ ಹೆಸರಿನಲ್ಲಿ ನಡೆಯುತ್ತಿದ್ದ ಪ್ರೌಢಶಾಲೆಗೂ ಕೊಟ್ಟರು.

ಭಾರತೀಯರು ತಮ್ಮ ಸಮಾಜದಲ್ಲಿರುವ ದೋಷಗಳನ್ನು ತಿದ್ದಿಕೊಳ್ಳಬೇಕು ಎಂದು ಅವ ಉತ್ಕಟ ಬಯಕೆ. ಅಸ್ಪೃಶ್ಯತೆ, ಚಿಕ್ಕವಯಸ್ಸಿನಲ್ಲಿ ಮದುವೆ ಮಾಡುವುದು, ಮದುವೆಯಾಗುವ ತರುಣರು ವರದಕ್ಷಿಣೆ ತೆಗೆದುಕೊಳ್ಳುವುದು ಇಂತಹ ಹಲವು ಪದ್ಧತಿಗಳನ್ನು ತೀವ್ರವಾಗಿ ವಿರೋಧಿಸಿದರು.

ಪ್ರತಿಯೊಂದು ವಿಷಯವನ್ನೂ ಅವರು ವೈಜ್ಞಾನಿಕ ದೃಷ್ಟಿಯಿಂದ ನೋಡಿ ಕಾರ್ಯೋನ್ಮುಖರಾಗುತ್ತಿದ್ದರು. ಕೇವಲ ಮಾತಿನಿಂದ ತೃಪ್ತರಾಗುತ್ತಿರಲಿಲ್ಲ. ಕ್ಷಾಮ, ಪ್ರವಾಹ ಅಥವಾ ಭೂಕಂಪಗಳುಂಟಾದಾಗ ಕಷ್ಟಕ್ಕೊಳಗಾದವರಿಗೆ ಸಹಾಯ ಮಾಡಲು ಸಮಿತಿಗಳನ್ನು ನೇಮಿಸಿ ದಕ್ಷತೆಯಿಂದ ಕೆಲಸ ಮಾಡುತ್ತಿದ್ದರು. ಜನರಿಗೆ ಬೇಗನೆ ಆಹಾರ, ವಸ್ತ್ರ ಮತ್ತು ಹಣ ದೊರೆಯುವಂತೆ ನೋಡಿಕೊಳ್ಳುತ್ತಿದ್ದರು.

೧೯೨೧ ರಲ್ಲಿ ಖುಲ್ನಾ ಜಿಲ್ಲೆಯಲ್ಲಿ ಕ್ಷಾಮವೂ, ೧೯೨೨ ರಲ್ಲಿ ಉತ್ತರ ಬಂಗಾಳದಲ್ಲಿ ಭಾರಿ ಪ್ರವಾಹವೂ ಉಂಟಾಗಿ ಸಾವಿರಾರು ಜನರು ಸಂಕಟಕ್ಕೀಡಾದರು. ಮನೆಮಠಗಳನ್ನೂ ಜಾನುವಾರುಗಳನ್ನೂ ಕಳೆದುಕೊಂಡರು. ಸಹಾಯ ಬೇಕೆಂದು ಅವರು ಬೇಡಿಕೊಂಡಾಗ ಸರ್ಕಾರವು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ. ಆಗ ಪ್ರಫುಲ್ಲಚಂದ್ರರು ಕಲ್ಕತ್ತೆಯಲ್ಲಿ ಐರೋಪ್ಯ ಮತ್ತು ಭಾರತೀಯ ಮುಂದಾಳುಗಳು ಸದಸ್ಯರಾಗಿದ್ದ ಪರಿಹಾರ ಸಮಿತಿಯಲ್ಲಿ ರಚಿಸಿದರು. ತಮ್ಮ ಕಾಲೇಜನ್ನೇ ಕೇಂದ್ರವಾಗಿ ಮಾಡಿಕೊಂಡು ತಾವೂ ವಿದ್ಯಾರ್ಥಿಗಳೂ ಹಗಲಿರುಳು ದುಡಿದು ಹಣ, ಬಟ್ಟೆ ಮತ್ತು ಆಹಾರಗಳನ್ನು ಸಂಗ್ರಹಿಸಿ ಬಡಜನರಿಗೆ ಹಂಚಿ ಉಪಕಾರ ಮಾಡಿದರು. ಪುನಃ ೧೯೩೧ ರ ಬಂಗಾಳದ ಭಾರ ಪ್ರವಾಹದಿಂದ ಅನಾಹುತವಾಯಿತು. ಪ್ರಫುಲ್ಲಚಂದ್ರರು ಪುನಃ ಲಕ್ಷಾಂತರ ಜನರಿಗೆ ಸಹಾಯ ಮಾಡಿದರು.

ಗಾಂಧೀಜಿಯವರ ಚರಕ ಮತ್ತು ಖಾದಿ ವಿಚಾರದಲ್ಲೂ ಪ್ರಫುಲ್ಲಚಂದ್ರರಿಗೆ ವಿಶೇಷ ಅಭಿಮಾನವಿತ್ತು. ಮೊದ ಮೊದಲು “ಕೈಗಾರಿಕೆ ಸಾಧಿಸುವುದನ್ನು ಈ ಒರಟು ಚರಕ ಸಾಧಿಸ ಬಲ್ಲದೇ” ಎಂದು ತಿರಿಸ್ಕಾರಪಟ್ಟರು. ಆದರೆ ಕ್ರಮೇಣ ಹಳ್ಳಿಗಾಡಿನ ಜನರಿಗೆ ಇದರಿಂದ ಕೈಗೆ ಕೆಲಸವೂ, ಸಂಪಾದನೆಯೂ ಸಿಕ್ಕುವುದೆಂಬುದನ್ನು ಆದರ ಕ್ರಮೇಣ ಹಳ್ಳಿಗಾಡಿನ ಜನರಿಗೆ ಇದರಿಂದ ಕೈಗೆ ಕಂಡುಕೊಂಡರು. ಅಂದಿನಿಂದ ತಾವೇ ದಿನಕ್ಕೆ ಒಮದು ಗಂಟೆ ಹೊತ್ತು ತಪ್ಪದೆ ಚರಕದಲ್ಲಿ ನೂಲು ತೆಗೆಯುತ್ತಿದ್ದರು. ಕೊನೆಯವರೆಗೂ ಖಾದಿಯನ್ನೇ ಧರಿಸುತ್ತಿದ್ದರು. ಅವರ ಅತಿಯಾದ ಖಾದಿಪ್ರೇಮವನ್ನು ಕಂಡು ಅವರ ಸ್ನೇಹಿತರು ಕೆಲವರು ಅವರನ್ನು ’ಚರಕಶ್ರೀ’ ಅಥವಾ ’ಸರ್ ಖದ್ದರ್’ ಎಂದು ಕರೆಯುತ್ತಿದ್ದರು!

ತನ್ನ ಶಿಷ್ಯರಲ್ಲಿ ಪ್ರಫುಲ್ಲಚಂದ್ರರಿಗೆ ಬಹು ಪ್ರೀತಿ. ಅವರಲ್ಲಿ ಯಾರಿಗಾದರೂ ಹೆಚ್ಚಿನ ಗೌರವ ಅಥವಾ ಕೀರ್ತಿ ದೊರೆತಾಗ ಬಹು ಸಂತೋಷಪಡುತ್ತಿದ್ದರು. “ಎಲ್ಲಾ ಕಡೆಯೂ ಜಯವನ್ನೇ ಅಪೇಕ್ಷಿಸಿದರೂ ತನ್ನ  ಶಿಷ್ಯ ಅಥವಾ ಮಗನಿಂದ ಮಾತ್ರ ಪರಾಜಯವನ್ನೇ ಸ್ವಾಗತಿಸಬೇಕು” ಎಂಬ ಅರ್ಥದ ಸಂಸ್ಕೃತ ಶ್ಲೋಕವನ್ನು ಅಂತಹ ಸಂದರ್ಭಗಳಲ್ಲಿ ಹೇಳುತ್ತಿದ್ದರು. ಮೇಘನಾದ ಸಹಾ, ಶಾಂತಿಸ್ವರೂಪ ಭಟ್ನಾಗರ್ ಮೊದಲಾದ ಹಲವರು ಪ್ರಸಿದ್ಧ ಭಾರತೀಯ ವಿಜ್ಞಾನಿಗಳಿಗೆ ಶಿಕ್ಷಣ ಕೊಟ್ಟವರು ಇವರು.

ಪ್ರಫುಲ್ಲಚಂದ್ರರು ತಮ್ಮ ದೈನಂದಿನ ಕಾರ್ಯಕ್ರಮವನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದರು. ಆಹಾರ, ವ್ಯಾಯಾಮ, ಪ್ರವಚನ ಮುಂತಾದುವುಗಳಲ್ಲಿ ನಿಯಮದ ಪ್ರಕಾರ ನಡೆದುಕೊಳ್ಳುತ್ತಿದ್ದರು. ಶುಭ್ರವಾದ ಖಾದಿ ಬಟ್ಟೆ ಧರಿಸುತ್ತಿದ್ದರು. ಆದರೆ ಅವನ್ನು ಇಸ್ತ್ರಿ ಮಾಡಿಕೊಳ್ಳುವುದು ಅಪರೂಪ. ಬೇರೆಯವರು ಅವರ ಸೇವೆ ಮಾಡುವುದನ್ನು ಅವರು ಸ್ವಲ್ಪವೂ ಒಪ್ಪುತ್ತಿರಲಿಲ್ಲ. ತಮ್ಮ ಬಟ್ಟೆಗಳನ್ನು ತಾವೇ ಒಗೆದುಕೊಳ್ಳುತ್ತಿದ್ದರು. ಅವರು ಸ್ವಂತಕ್ಕಾಗಿ ಮಾಡುವ ಖರ್ಚಿನಲ್ಲಿ ಬಹಳ ಜಾಗರೂಕರಾಗಿರುತ್ತಿದ್ದರು. ಆದರೆ ಇತರರಿಗೆ ಸಹಾಯ ಮಾಡುವುದರಲ್ಲಿ ಧಾರಾಳವಾಗಿದ್ದರು. ಒಂದು ದಿನ ಅವರ ಊಟ ಉಪಚಾರವನ್ನು ನೋಡಿ ಕೊಳ್ಳುತ್ತಿದ್ದ ವಿದ್ಯಾರ್ಥಿಯೊಬ್ಬ ಅವರಿಗಾಗಿ ದಿನವೂ ಕೊಳ್ಳುತ್ತಿದ್ದ ಬಾಳೆಹಣ್ಣಿಗಾಗಿ ಅರ್ಧ ಆಣೆಯ (ಈಗಿನ ಮೂರು ಪೈಸೆ) ಬದಲು ಒಂದೂವರೆ ಆಣೆ (ಈಗಿನ ಒಂಬತ್ತು ಪೈಸೆ) ಖರ್ಚು ಮಾಡಿದ. ದೊಡ್ಡ, ರುಚಿಕರವಾದ ಹಣ್ಣುಗಳು ಗುರುಗಳಿಗೆ ಇರಲೆಂದು ಹೀಗೆ ಮಾಡಿದ್ದ. ಆದರೆ ಅವರು ಹಣ ಪೋಲು ಮಾಡಿದೆ ಎಂದು ಅವನನ್ನು ಅಕ್ಷೇಪಿಸಿದರು. ಅದೇ ದಿನ ಅಭಯಾಶ್ರಮಕ್ಕೆ ದುಡ್ಡು ಸಾಲದೆ ಬಂದಿದೆಯೆಂದು ತಿಳಿಸಲು ಘೋಷ್ ಎಂಬುವರು ಬಂದರು. ಪ್ರಫುಲ್ಲಚಂದ್ರರು ಅದೇ ವಿದ್ಯಾರ್ಥಿಯನ್ನು ಕರೆದು ಪಾಸ್ ಪುಸ್ತಕ ನೋಡಿ ಬ್ಯಾಂಕಿನಲ್ಲಿ ತಮ್ಮ ಲೆಕ್ಕದಲ್ಲಿ ಹಣ ಎಷ್ಟಿದೆಯೆಂಬುದನ್ನು ಹೇಳು ಎಂದರು. ಅವರ ಲೆಕ್ಕದಲ್ಲಿ ೩೫೦೦ ರೂಪಾಯಿ ಇತ್ತು. ಪ್ರಫುಲ್ಲಚಂದ್ರರು ಕೂಡಲೇ ೩೦೦೦ ರೂಪಾಯಿಗಳಿಗೆ ಚೆಕ್ ಬರೆದು ಘೋಷ್ರಿಗೆ ಕೊಟ್ಟರು. ಬೆಳಿಗ್ಗೆ ಒಂದು ಆಣೆಗೆ ನನ್ನನ್ನು ಅಷ್ಟು ಬಯ್ದ ಇವರು ಮೂರು ಸಾವಿರ ರೂಪಾಯಿಗಳನ್ನು ಹಿಂದು ಮುಂದೆ ನೋಡದೆ ಕೊಟ್ಟುಬಿಟ್ಟರಲ್ಲ ಎಂದು ವಿದ್ಯಾರ್ಥಿ ಆಶ್ಚರ್ಯಪಟ್ಟ.

ತಾವು ಧರಿಸುವ ಬಟ್ಟೆಗಳಲ್ಲಿ ಪ್ರಫುಲ್ಲಚಂದ್ರರು ಬಹಳ ಸರಳವಾಗಿರುತ್ತಿದ್ದರು. ಐರೋಪ್ಯ ವಸ್ತ್ರಗಳನ್ನು ಭಾರತೀಯರು ತೊಡುವುದು ಅವರಿಗೆ ಬೇಸರವನ್ನು ಉಂಟುಮಾಡುತ್ತಿತ್ತು. ಅವರ ಸರಳವಾದ ಉಡುಪಿನಿಂದ ಒಮ್ಮೊಮ್ಮೆ ಅವರಿಗೆ ತೊಂದರೆಯಾಗುತ್ತಿತ್ತು. ಒಂದು ಸಲ ಸರ್ಕಾರದ ಒಂದು ಸಮಿತಿಯಲ್ಲಿ ಅವರನ್ನು ಸೇರಿಸಲಾಗಿತ್ತು. ಕಲ್ಕತ್ತೆಯ ಗ್ರ್ಯಾಂಡ್ ಹೋಟೆಲಿನಲ್ಲಿ ಸಮಿತಿ ಸೇರುವುದಿತ್ತು. ಪ್ರಫುಲ್ಲಚಂದ್ರರು ಅಲ್ಲಿಗೆ ಸಭೆ ಪ್ರಾರಂಭವಾಗುವ ಹೊತ್ತಿಗೆ ಸ್ವಲ್ಪ ಮೊದಲೇ ಹೋಗಿ ಇತರರಿಗಾಗಿ ಕಾಯುತ್ತಿದ್ದರು. ಕಾವಲುಗಾರ ಇವರನ್ನು ನೊಡಿದ. ಇವರ ಬಹು ಸರಳ ಉಡುಪನ್ನು ಕಂಡು ಯಾರೋ ಆಳೆಂದು ತಿಳಿದುಕೊಂಡ. “ನಿನ್ನ ಯಜಮಾನರು ಯಾವಾಗ ಬರುತ್ತಾರೆ?” ಎಂದು ಕೇಳಿದ! ಮತ್ತೊಮ್ಮೆ ಒಂದು ಹೋಟೆಲಿನ ’ಲಿಫ್ಟ್’ ಯಂತ್ರದಲ್ಲಿ ಮೇಲೆ ಹೋಗಲು ಅಲ್ಲಿನ ಚಾಲಕ ಇವರಿಗೆ ಬಿಡಲಿಲ್ಲ. “ನಿಮ್ಮಂತಹವರು ಮೆಟ್ಟಿಲನ್ನು ಹತ್ತಿ ಹೋಗಬೇಕು, ಇದು ಐರೋಪ್ಯರಿಗೆ ಮಾತ್ರ” ಎಂದ. ಭಾರತೀಯ ಉಡುಪಿಗೆ ಆದ ಈ ಅಪಮಾನವನ್ನು ಪ್ರಫುಲ್ಲಚಂದ್ರರು ಸಹಿಸಲಿಲ್ಲ. ಕೂಡಲೇ ಹೋಟೆಲಿನ ಮಾಲೀಕರಿಗೆ ತಿಳಿಸಿ ಚಾಲಕನಿಗೆ ಬುದ್ಧಿ ಹೇಳಿಸಿದರು.

ಪ್ರಫುಲ್ಲಚಂದ್ರರು ಮೂರು ಸಾವಿರ ರೂಪಾಯಿಗಳಿಗೆ ಚೆಕ್ ಬರೆದು ಕೊಟ್ಟುಬಿಟ್ಟರು.

ಅನೇಕ ವರ್ಷಗಳ ಕಾಲ ಪ್ರಫುಲ್ಲಚಂದ್ರರು ಸಂಜೆಯ ಹೊತ್ತು ಕಲ್ಕತ್ತೆಯ ದೊಡ್ಡ ಮೈದಾನದಲ್ಲಿ ತಮ್ಮ ಸ್ನೇಹಿತರ ಮತ್ತು ವಿದ್ಯಾರ್ಥಿಗಳ ಜೊತೆ ಒಂದೆರಡು ಗಂಟೆ ಕಾಲ ಕಳೆಯುತ್ತಿದ್ದರು. ಈ ಗೋಷ್ಠಿಯಲ್ಲಿ ಸ್ವಾರಸ್ಯವಾದ ಚರ್ಚೆ ಮತ್ತು ವ್ಯಾಖ್ಯಾನಗಳು ನಡೆಯುತ್ತಿದ್ದುವು.

ತಮಗೆ ಹೆಚ್ಚು ಸಮಯ ಸಿಕ್ಕಾಗ ಪ್ರಫುಲ್ಲಚಂದ್ರರು ತಾವು ಹುಟ್ಟಿ ಬೆಳೆದ ರರೂಲಿ ಗ್ರಾಮಕ್ಕೆ ಹೋಗಿ ಅಲ್ಲಿನ ಸರಳ ಜೀವಿಗಳೊಂದಿಗೆ ಕಾಲ ಕಳೆಯುತ್ತಿದ್ದರು. ಅವರ ಯೋಗಕ್ಷೇಮವನ್ನು ವಿಚಾರಿಸಿಕೊಂಡು ಕೈಲಾದಷ್ಟು ಸಹಾಯ ಮಾಡುತ್ತಿದ್ದರು. ತಮ್ಮ ಹಳ್ಳಿಯ ಜೀವನವನ್ನು ಅವರು ಎಂದಿಗೂ ಮರೆಯಲಿಲ್ಲ.

ಅವರ ೭೦ನೆಯ ಹುಟ್ಟುಹಬ್ಬದ ಸಮಾರಂಭದಲ್ಲಿ ಕವಿ ರವೀಂದ್ರನಾಥ ಠಾಕುರರು ಪ್ರಫುಲ್ಲಚಂದ್ರರ ಆದರ್ಶ ಜೀವನವನ್ನು ಬಾಯಿತುಂಬಾ ಹೊಗಳಿದರು. ಉಪನಿಷತ್ತುಗಳಲ್ಲಿ “ನಾನು ಒಂದಾಗಿದ್ದವನು ಹಲವು ಆದೆ” ಎಂದು ಹೇಳಿರುವಂತೆ ಪ್ರಫುಲ್ಲಚಂದ್ರರು ತಮ್ಮ ಜೀವನವನ್ನೇ ಶಿಷ್ಯರಿಗಾಗಿ ಸವೆಸಿ ಈಗ ಅವರಲ್ಲಿ ಒಂದಾಗಿದ್ದಾರೆ ಎಂದರು.

ತಮ್ಮ ೭೫ ನೆಯ ವಯಸ್ಸಿನಲ್ಲಿ ಆಚಾರ್ಯ ಪ್ರಫುಲ್ಲಚಂದ್ರರು ಪ್ರೊಫೆಸರ್ ಹುದ್ದೆಯಿಂದ ನಿವೃತ್ತರಾದರು. ೧೯೪೧ ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದವರೂ, ಸಾರ್ವಜನಿಕರೂ ಅವರ ೮೦ನೇ ಹುಟ್ಟಿದ ಹಬ್ಬವನ್ನು ಆಚರಿಸಿದರು.

೧೯೪೪ರ ಜೂನ್ ೧೬ ರಂದು ಆಚಾರ್ಯ ಪ್ರಫುಲ್ಲಚಂದ್ರ ರಾಯ್ ಅವರು ತಾವು ಇಪ್ಪತ್ತೈದು ವರ್ಷಗಳನ್ನು ಕಳೆದ ಕೊಠಡಿಯಲ್ಲೆ ಪ್ರಾಣ ಬಿಟ್ಟರು. ಆಗ ಅವರಿಗೆ ಎಂಬತ್ತಮೂರು ವರ್ಷ ವಯಸ್ಸು.

ಭಾರತಕ್ಕೆ ಸ್ವಾತಂತ್ರ್ಯವಿಲ್ಲದ ಕಾಲದಲ್ಲಿ, ಸ್ವತಂತ್ರ ವೈಜ್ಞಾನಿಕ ಸಂಶೋಧನೆಗೆ ಭಾರತದಲ್ಲಿ ಸಲಕರಣೆಗಳೂ ಅವಕಾಶವೂ ಇಲ್ಲದಿದ್ದ ಕಾಲದಲ್ಲಿ ಹೊರದೇಶಗಳವರೂ ಮೆಚ್ಚುವಂತಹ ಸಂಶೋಧನೆಗಳನ್ನು ಮಾಡಿದ ಕಾರ್ಯಪಟು, ಪ್ರತಿಭಾವಂತರು ಆಚಾರ್ಯ ರಾಯ್. ’ಮರ್ಕ್ಯುರಸ್ ನೈಟ್ರೇಟ್’ ಎಂಬ ವಸ್ತು ಇರಬಹುದು ಎಂದೇ ವಿಜ್ಞಾನಿಗಳಿಗೆ ತಿಳಿದಿರಲಿಲ್ಲ. ಈ ಹೊಸ ವಸ್ತುವನ್ನು ರಾಯ್ ಅವರು ಕಂಡುಹಿಡಿದಾಗ ಹೊರದೇಶಗಳ ವಿಜ್ಞಾನಿಗಳೂ ಅವರನ್ನು ಮೆಚ್ಚಿಕೊಂಡರು. ಭಾರತೀಯರು ಹಿಂದುಳಿದವರು, ಪಶ್ಚಿಮದೇಶಗಳವರಿಂದ ಅವರು ಎಲ್ಲವನ್ನೂ ಕಲಿಯಬೇಕು ಎಂದು ಜಗತ್ತು ತಿಳಿದುಕೊಂಡಿದ್ದಾಗ ’ಹಿಂದು ರಸಾಯನ ವಿಜ್ಞಾನದ ಚರಿತ್ರೆ’ಯನ್ನು ಬರೆದು ಬಹು ಮಂದಿ ಭಾರತೀಯರ ಮತ್ತು ಹೊರದೇಶಗಳವರ ಕಣ್ಣನ್ನು ತೆರೆಸಿದರು. ಅವರು ಸ್ವಲ್ಪ ದೊಡ್ಡವರಾಗುವ ಹೊತ್ತಿಗೆ ಕುಟುಂಬ ಸಾಲಗಳ ಹೊರೆಯನ್ನು ಹೊತ್ತಿತ್ತು. ಅದನ್ನು ತೀರಿಸಿದ್ದು ಮಾತ್ರವಲ್ಲ, ತಾವು ಸುಮಾರು ಐವತ್ತು ವರ್ಷಗಳ ಕಾಲದಲ್ಲಿ ಸಂಪಾದಿಸಿದ ಹಣವನ್ನೆಲ್ಲ ಬಡವರಿಗಾಗಿ, ವಿದ್ಯಾರ್ಥಿಗಳಿಗಾಗಿ, ವಿಜ್ಞಾನದ ಸಂಶೋಧನೆಗಾಗಿ ಕೊಟ್ಟುಬಿಟ್ಟರು. ಪ್ರವಾಹ, ಕ್ಷಾಮ, ಭೂಕಂಪ, ಯಾವ ವಿಪತ್ತು ಎರಗಿದಾಗಲೂ ಈ ವಿಜ್ಞಾನಿ – ಅಧ್ಯಾಪಕ ನೆರವಿನ ಕೆಲಸಕ್ಕೆ ಮುಂದಾಳು. ವಿಜ್ಞಾನಿ ಎಂದು ಪ್ರಯೋಗಶಾಲೆಯಲ್ಲಿ ಕುಳಿತವರಲ್ಲ. ದೊಡ್ಡ ವಿಜ್ಞಾನಿ, ಉಜ್ವಲ ದೇಶಾಭಿಮಾನಿ, ಸಮಾಜ ಸೇವಕ, ಬಹು ಮಾನವೀಯ ಗುಣಗಳಿಂದ ಬೆಳಗುತ್ತಿದ್ದ ಹಿರಿಯ ವ್ಯಕ್ತಿ ಆಚಾರ್ಯ ಪ್ರಫುಲ್ಲಚಂದ್ರ ರಾಯ್.