ಪ್ರಭಾವತೀದೇವಿಜಯಪ್ರಕಾಶ್ ನಾರಾಯಣರ ಹೆಂಡತಿ, ಗಾಂಧೀಜಿಯ ಅಚ್ಚು ಮೆಚ್ಚಿನ ಶಿಷ್ಯೆ. ಗಾಂದೀಜಿಯವರ ಉಪದೇಶದ ಜೀವಂತ ನಿದರ್ಶನವಾಯಿತು ಇವರ ಬದುಕು. ಗಂಡನ ನೆರಳಾಗಿ ಬದುಕಿದರು. ದೇಶಕ್ಕಾಗಿ ತಮ್ಮ ಬಾಳನ್ನೆ ಮುಡಿಪಾಗಿಟ್ಟರು.

ಪ್ರಭಾವತೀದೇವಿ

ನಮ್ಮ ದೇಶದ ಮಹಾಕಾವ್ಯಗಳಲ್ಲಿ ಮತ್ತು ಚರಿತ್ರೆಯಲ್ಲಿ ಅನೇಕ ಮಹಾಪುರುಷರ ಹೆಸರುಗಳು-ರಾಮ, ಲಕ್ಷ್ಮಣ, ಧರ್ಮರಾಜ, ಬುದ್ಧ, ಅಶೋಕ ಮೊದಲಾದವರ ಹೆಸರುಗಳು ಪ್ರಸಿದ್ಧವಾಗಿವೆ. ನಮ್ಮ ಕಾಲದಲ್ಲೇ ಶ್ರೀ ರಾಮಕೃಷ್ಣ ಪರಮಹಂಸರ, ವಿವೇಕಾನಂದರ ಹೆಸರು ಕೇಳಿದ್ದೇವೆ. ಗಾಂಧೀಜಿ ಹೆಸರು ಕೇಳಿಲ್ಲವೆ? ಹಾಗೆಯೆ ಮಹಾಸತಿಯರೂ ಅನೇಕರು ಇದ್ದರು. ಸೀತೆ, ಊರ್ಮಿಳೆ, ಸಾವಿತ್ರಿ ಇವರ ಕತೆಯನ್ನೆಲ್ಲ ನೀವು ಕೇಳಿದ್ದೀರಿ. ರಾಮಕೃಷ್ಣ ಪರಮಹಂಸರ ಪತ್ನಿ ಶಾರದಾದೇವಿಯವರ ಮತ್ತು ಗಾಂಧೀಜಿಯವರ ಹೆಂಡತಿ ಕಸ್ತೂರಬಾ ಕತೆಯನ್ನೂ ಕೇಳಿರಬಹುದು. ಈಗ ನಾವು ಕೇಳುವ ಕತೆಯೂ ಅಂಥ ಮಹಾಸತಿಯದು.

ನಮ್ಮ ದೇಶದ ದೊಡ್ಡ ನಾಯಕರು ಜಯಪ್ರಕಾಶ್ ನಾರಾಯಣ್, ದೇಶಕ್ಕೋಸ್ಕರ ಅವರು ಎಲ್ಲವನ್ನು ತ್ಯಾಗ ಮಾಡಿದವರು. ವೀರ ಸ್ವಾತಂತ್ರ್ಯ ಸೈನಿಕರು. ಕಾಯಿಲೆ ಮಲಗಿರುವಾಗಲೂ, ದೇಶಸೇವೆಯಲ್ಲೆ ಮುಳುಗಿದ್ದರು. ಜಯಪ್ರಕಾಶರ ಪತ್ನಿಯವರೇ ಪ್ರಭಾವತೀದೇವಿ. ಅವರೇನೂ ಸಾಧಾರಣ ವ್ಯಕ್ತಿಯಲ್ಲ. ದೇಶಸೇವೆಗೋಸ್ಕರ ತಮ್ಮನ್ನೇ ಅರ್ಪಿಸಿಕೊಂಡವರು. ಗಾಂಧೀಜಿಯವರ ಸೇವೆ, ಕಸ್ತೂರಬಾ ಅವರ ಸೇವೆ ಹಾಗೂ ತಮ್ಮ ಪತಿಯ ಸೇವೆಯಲ್ಲೆ ತಮ್ಮ ಬದುಕನ್ನೆಲ್ಲ ಸವೆಸಿದವರು. ಅವರಿಗೆ ಸೇವೆ ಮಾಡುವುದು ಒಂದೇ ಆಸೆ. ಹಣಕಾಸು, ಒಡವೆ ವಸ್ತ್ರ, ಸುಖ, ಸಂತೋಷ ಏನೂ ಬೇಡ. ಸೇವೆಯೆ ಎಲ್ಲವೂ.

ಬಾಲ್ಯ

ಉತ್ತರ ಭಾರತದ ಬಿಹಾರದಲ್ಲಿ ದರ್ಭಾಂಗ ಒಂದು ಜಿಲ್ಲೆ. ಅದೇ ಹಿಂದಿನ ಮಿಥಿಲೆ. ಜನಕರಾಜನ ರಾಜ್ಯ. ಅಲ್ಲೇ ಸೀತೆ ಹುಟ್ಟಿದ್ದು. ಎಪ್ಪತ್ತು ವರ್ಷದ ಹಿಂದೆ ಅಲ್ಲಿ ಬ್ರಜಕಿಶೋರ ಪ್ರಸಾದ್ ಅನ್ನುವ ವಕೀಲರಿದ್ದರು. ಅವರು ಬಿಹಾರಿನ ದೊಡ್ಡ ಮುಖಂಡರು. ಎಲ್ಲರಿಗೂ ಬೇಕಾದವರು. ಪುರಸಭೆ, ಬ್ಯಾಂಕು, ವಿದ್ಯಾರ್ಥಿ ಸಮ್ಮೇಳನ, ಕಾಂಗ್ರೆಸ್ ಕೆಲಸ, ವಿದ್ಯಾಪೀಠ ಎಲ್ಲದರಲ್ಲೂ ಅವರು ಸೇವೆ ಮಾಡುತ್ತಿದ್ದರು. ವಕೀಲಿ ಕೆಲಸದಿಂದ ಬೇಕಾದಷ್ಟು ಸಂಪಾದನೆ ಇತ್ತು. ಆದರೆ ಗಾಂಧೀಜಿಯವರು ಸ್ವಾತಂತ್ರ್ಯಕ್ಕಾಗಿ ಸತ್ಯಾಗ್ರಹ ಚಳುವಳಿ ಆರಂಭಿಸಿದರಲ್ಲ ಆಗ ಬ್ರಜಕಿಶೋರಬಾಬು ಎಲ್ಲವನ್ನು ತ್ಯಾಗ ಮಾಡಿದರು, ದೇಶಸೇವೆಗೆ ನಿಂತರು. ಬಿಹಾರಿನ ಚಂಪಾರಣ್ಯ ಅನ್ನುವ ಕಡೆಯಲ್ಲೆ ಗಾಂಧೀಜಿ ಮೊದಲು ಸತ್ಯಾಗ್ರಹ ನಡೆಸಿದ್ದು. ಆ ಕೆಲಸದಲ್ಲಿ ಬ್ರಜಕಿಶೋರರೇ ಗಾಂಧೀಜಿಯ ಬಲಗೈ. ಅವರು ತುಂಬ ಸರಳಜೀವಿ, ಸತ್ಯವಂತರು, ನೀತಿವಂತರು. ಹಿಡಿದ ಕೆಲಸವನ್ನು ಬಿಡದೆ ಸಾಧಿಸುವವರು. ಜೊತೆಗೇ ನಮ್ಮ ಸಮಾಜ ಒಳ್ಳೆಯದಾಗಬೇಕು, ಅದರ ಕೆಟ್ಟ ರೂಢಿಗಳೆಲ್ಲ ಹೋಗಬೇಕು ಅನ್ನುವ ವಿಚಾರ ಉಳ್ಳವರು.

ಬ್ರಜಕಿಶೋರರ ಹೆಂಡತಿ ಫೂಲಝರೀದೇವಿ. ಹಳೆಯ ಕಾಲದ ಹೆಂಗಸು, ತುಂಬ ಮಡಿ ಆಚಾರ. ಅವರ ಮಗಳು ಪ್ರಭಾವತೀದೇವಿ ಹುಟ್ಟಿದ್ದು ೧೯೦೬ ನೆಯ ಇಸವಿ ಜೂನ್ ತಿಂಗಳ ಆರನೆಯ ತಾರೀಖು. ಪ್ರಭಾ ತುಂಬ ಮುದ್ದಿನ ಹುಡುಗಿ. ಗಂಡುಮಕ್ಕಳಂತೆಯೆ ಬೆಳೆದಳು. ಷರಾಯಿ ಹಾಕಿಕೊಳ್ಳುತ್ತಿದ್ದಳು. ಅವಳಿಗೆ ಒಳ್ಳೆ ಬಟ್ಟೆ, ಒಡವೆಗಳ ಮೇಲೆ ಆಸೆ ಇಲ್ಲ. ಸೊಗಸು ಸಿಂಗಾರವೂ ಬೇಕಿಲ್ಲ. ಯಾವಾಗಲೂ ಏನಾದರೂ ಕೆಲಸ ಮಾಡಬೇಕು ಅನ್ನುವುದೇ ಆಸೆ. ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಮನೆ ಬಿಟ್ಟು ಆಚೆಗೆ ಹೋಗುವುದೇ ಕಡಿಮೆ. ಬುರುಕಿ ಹಾಕಿಕೊಳ್ಳುವ ಪದ್ಧತಿ ಬೇರೆ. ಬ್ರಜಕಿಶೋರರ ಮನೆಯಲ್ಲಿ ಇದೆಲ್ಲ ಇರಲಿಲ್ಲ.

ಮನೆಯಲ್ಲಿ ಕೆಲಸಕ್ಕೆ ಆಳು ಇದ್ದರೂ, ಪ್ರಭಾ ತಾನೇ ಮಾಡಬೇಕೆಂದು ಹೋಗುವಳು. ಹಾಲು ಕರೆಯುವುದು, ಕಸ ಗುಡಿಸುವುದು, ತೋಟದ ಕೆಲಸ ಎಲ್ಲಕ್ಕೂ ಮುಂದು. ಅಡುಗೆ ಮಾಡಲು ಹೋಗುವಳು. ಅಡುಗೆಯವನು ಬೇಡ ಎಂದು ತಡೆದರೆ ‘‘ಒಲೆಗೆ ನೀರು ಸುರಿದು ಬಿಡತೇನೆ’’ ಅಂತ ಬೆದರಿಕೆ ಹಾಕುವಳು. ಪ್ರಭಾ ಶಾಲೆಗೆ ಹೋಗಲಿಲ್ಲ. ಮನೆಯಲ್ಲಿ ತಂದೆ ಕಲಿಸಿದ್ದೇ ನಾಲ್ಕು ಅಕ್ಷರ. ನಮ್ಮ ಸಂಪ್ರದಾಯ, ಆಚಾರ,ಪೂಜೆ, ಹಾಡು ಅಷ್ಟೆ ಕಲಿತದ್ದು.

ಚಂಪಾರಣ್ಯದಲ್ಲಿ ಸತ್ಯಾಗ್ರಹ ನಡೆಯಿತು ಅಂದೆವಲ್ಲ, ಆಗ ಗಾಂಧೀಜಿ ಅಲ್ಲಿಗೆ ಬಂದಿದ್ದರು. ಅವರಿಗೂ ಬ್ರಜ ಕಿಶೋರರಿಗೂ ಗೆಳೆತನ. ಚುರುಕು ಹುಡುಗಿ ಪ್ರಭಾಳನ್ನು ನೋಡಿ ಗಾಂಧೀಜಿಗೆ ಮೆಚ್ಚಿಗೆ ಆಯಿತು. ‘‘ನನಗೆ ಹೆಣ್ಣು ಮಕ್ಕಳು ಇಲ್ಲ. ಪ್ರಭಾಳನ್ನು ಕಳಿಸಿಕೊಡಿ. ಇವಳು ನನ್ನ ಮಗಳೇ ಆಗಲಿ’’ ಎಂದು ಕೇಳಿದ್ದರು. ಆದರೆ ಪ್ರಭಾಳ ತಾಯಿ ಇದಕ್ಕೆ ಒಪ್ಪಲಿಲ್ಲ.

ಜಯಪ್ರಕಾಶರ ಪತ್ನಿ

ಒಂದು ದಿನ ಬ್ರಜಕಿಶೋರ ಬಾಬು ಮತ್ತು ರಾಜೇಂದ್ರಬಾಬು (ಭಾರತದ ಮೊದಲ ರಾಷ್ಟ್ರಪತಿ) ಮಾತಾಡುತ್ತ ಇದ್ದರು. ಆಗ ಇಬ್ಬರು ಹುಡುಗರು ಬಂದರು. ಒಬ್ಬ ಜಯಪ್ರಕಾಶ ನಾರಾಯಣ. ಇನ್ನೊಬ್ಬ ಶಂಭು. ಜಯಪ್ರಕಾಶ್ ಹದಿನೆಂಟು ವರ್ಷದ ಯುವಕ. ಲಕ್ಷಣವಾಗಿದ್ದ. ಕಾಲೇಜು ವಿದ್ಯಾರ್ಥಿ. ಸಿತಾಬದಿಯಾರಾದ ಹರಸೂದ ಯಾಲರ ಮಗ. ಅವನನ್ನು ನೋಡಿ ಬ್ರಜಕಿಶೋರರಿಗೆ ಸಂತೋಷವಾಯಿತು. ಇವನು ಪ್ರಭಾಳಿಗೆ ಸರಿಯಾದ ಗಂಡು ಅನ್ನಿಸಿತು. ಸರಿ, ಜಯಪ್ರಕಾಶರ ತಂದೆ ಜೊತೆ ಮಾತುಕತೇನೂ ಆಯಿತು. ಮದುವೆ ಗೊತ್ತಾಗಿಯೆ ಹೋಯಿತು. ಆಗ ೧೯೨೦ನೆ ಇಸವಿ. ಪ್ರಭಾಗೆ ೧೫ ವರ್ಷ. ಮದುವೆ ಸರಳವಾಗಿ ನಡೆಯಿತು.

ಅತ್ತೆ ಮನೆಯಲ್ಲಿ ಸ್ವಲ್ಪ ಕಾಲ ಇದ್ದು ಪ್ರಭಾ ಮತ್ತೆ ತಾಯಿ ಮನೆಗೆ ಹೋದಳು. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅಂತ ಜಯಪ್ರಕಾಶ್ ಅಮೆರಿಕಾಕ್ಕೆ ಹೊರಟರು. ಆಗ ಪ್ರಭಾ ತೌರುಮನೆಯಲ್ಲಿ ಕೆಲವು ದಿನ, ಅತ್ತೆ ಮನೆಯಲ್ಲಿ ಕೆಲವು ದಿನ ಇರುತ್ತ ಹಿರಿಯರೆಲ್ಲರ ಸೇವೆ ಮಾಡುತ್ತಿದ್ದಳು.

ಗಾಂಧೀಜಿಯ ಆಶ್ರಮಕ್ಕೆ

ಪ್ರಭಾವತಿಗೆ ಗಾಂಧೀಜಿಯ ಆಶ್ರಮಕ್ಕೆ ಹೋಗಲು ಆಸೆ. ತಂದೆ ಒಪ್ಪಿದ್ದರೂ ತಾಯಿ ಒಪ್ಪಿರಲಿಲ್ಲ. ಮಗಳು ಎಲ್ಲರ ಹಾಗೆ ಸಂಸಾರ ಮಾಡಿಕೊಂಡಿರಬೇಕು, ಮಕ್ಕಳನ್ನು ಪಡೆಯಬೇಕು ಅಂತ ತಾಯಿಗೆ ಆಸೆ. ದೇಶಸೇವೆ ಆಶ್ರಮ ಇದೆಲ್ಲ ಆಕೆಗೆ ಅರ್ಥವಾಗದು. ಅತ್ತೆ ಮಾವಂದಿರೂ ಒಪ್ಪಿರಲಿಲ್ಲ. ಈ ಪರಿಸ್ಥಿತಿಯನ್ನು ವಿವರಿಸಿ ಗಾಂಧೀಜಿಗೆ ಪತ್ರ ಬರೆದಳು ಪ್ರಭಾ. ಅದಕ್ಕೆ ಗಾಂಧೀಜಿ ಉತ್ತರ ಬರೆದರು.‘‘ತಂದೆ ತಾಯಿ ಅತ್ತೆ ಮಾವ ಗಂಡ ಎಲ್ಲರ ಸೇವೆ ಮಾಡು. ಅವರು ಒಪ್ಪದೆ ನೀನು ಬರುವುದು ಸರಿಯಲ್ಲ. ಒಪ್ಪಿಗೆ ಪಡೆದು ಬಾ’’. ಅವರು ಬ್ರಜಕಿಶೋರರಿಗೂ ಬರೆದರು, ಜಯಪ್ರಕಾಶರ ತಂದೆಯವರಿಗೂ ಬರೆದರು. ಅಮೆರಿಕಾದಿಂದ ಜಯಪ್ರಕಾಶರೂ ‘‘ನೀನು ಆಶ್ರಮಕ್ಕೆ ಹೋಗು’’ ಅಂತ ಬರೆದರು. ಅದನ್ನು ಪ್ರಭಾ ಅತ್ತೆ ಮಾವಂದಿರಿಗೆ ಹೇಳಿದಳು. ಅವಳ ತಾಳ್ಮೆ, ಸೇವೆ ಎಲ್ಲರನ್ನು ಮೆಚ್ಚಿಸಿತ್ತು. ಅತ್ತೆ ಮಾವ ಒಪ್ಪಿದರು. ತಾಯಿ ಮನಸ್ಸಿಲ್ಲದೆ ಇದ್ದರೂ ಕೊನೆಗೆ ಹೂಂ ಎಂದರು. ಪ್ರಭಾ ಬಾಪೂಜಿಯ ಸಬರಮತಿ ಆಶ್ರಮ ಸೇರಿದಳು. ಬಾಪೂನೇ ತಂದೆ, ಕಸ್ತೂರಬಾನೇ ತಾಯಿ, ಆಶ್ರಮವೇ ಮನೆ ಆಯಿತು.

ಗಾಂಧೀ ಆಶ್ರಮದಲ್ಲಿ ಕಟ್ಟುನಿಟ್ಟು. ಮುಂಜಾನೆ ಬೇಗ ಏಳಬೇಕು. ಪ್ರಾರ್ಥನೆ, ನೂಲು ತೆಗೆಯುವುದು, ಅಡುಗೆ ಕೆಲಸ, ಬಟ್ಟೆ ಒಗೆಯುವುದು, ಮನೆಗೆಲಸ, ರೋಗಿಗಳ ಸೇವೆ, ಬಾಪೂ ಅವರ ಸೇವೆ, ಮಧ್ಯಾಹ್ನ ಹಿಂದಿ ಗುಜರಾತಿ ಸೇವೆ, ಬಾಪೂ ಅವರ ಸೇವೆ, ಮಧ್ಯಾಹ್ನ ಹಿಂದಿ ಗುಜರಾತಿ ಪಾಠಗಳು, ಭಗವದ್ಗೀತೆ ತುಲಸೀರಾಮಾಯಣ ಪಾಠಗಳು, ಎಲ್ಲವೂ ಕಾಲಕ್ಕೆ ಸರಿಯಾಗಿ ನಡೆಯಬೇಕು. ಚಾಚು ತಪ್ಪಬಾರದು. ಒಂದು ಚೂರು ಪದಾರ್ಥವೂ ಪೋಲಾಗಬಾರದು. ಒಂದು ನಿಮಿಷವೂ ವ್ಯರ್ಥವಾಗಬಾರದು. ದಿನವೂ ರಾತ್ರಿ ದಿನಚರಿ ಬರೆದಿಡಬೇಕು. ಬಾಪೂರ ಕಾಗದ ಪತ್ರ, ಬಟ್ಟೆಬರೆ, ಊಟ ಉಪಚಾರ, ಸ್ನಾನ ಎಲ್ಲ ಅಚ್ಚುಕಟ್ಟಾಗಿರಬೇಕು. ತುಂಬ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಪ್ರಭಾವತಿ ಎಲ್ಲವನ್ನೂ ಆಸಕ್ತಿಯಿಂದ ಶ್ರದ್ಧೆಯಿಂದ ಭಕ್ತಿಯಿಂದ ಮಾಡುತ್ತಿದ್ದರು.

ಗಾಂಧೀಜಿಯ ಶಿಷ್ಯೆ

ಗಾಂಧೀಜಿಯೆ ಪ್ರಭಾಗೆ ಗುರು. ಆಕೆಗೆ ಪಾಠ ಹೇಳುವರು, ಆಕೆ ಬರೆದ ಅಭ್ಯಾಸಗಳನ್ನು ತಿದ್ದುವರು. ಲೆಕ್ಕ , ಗೀತೆ, ಆರೋಗ್ಯಶಾಸ್ತ್ರ,ಆಹಾರದ ವಿಷಯ, ರೋಗಿಗಳ ಉಪಚಾರ ಎಲ್ಲವನ್ನು ಹೇಳಿಕೊಡುವರು. ಪ್ರತಿದಿನ ಬೆಳಿಗ್ಗೆ ಏಳು ಗಂಟೆಗೆ ಆಶ್ರಮದ ಹೆಣ್ಣುಮಕ್ಕಳಿಗೆ ತರಗತಿ ಗಾಂಧೀಜಿಯವರ ಪಾಠ. ಕಸ್ತೂರಬಾ ಮೊದಲುಗೊಂಡು ಆಶ್ರಮದ ಎಲ್ಲ ಹೆಂಗಸರೂ ಈ ತರಗತಿಗೆ ಬರುತ್ತಿದ್ದರು. ಇವತ್ತು ಬಾಪೂಜಿ ಭಗವದ್ಗೀತೆಯ ಶ್ಲೋಕಗಳನ್ನೂ ಇಲ್ಲವೇ ತುಲಸೀ ರಾಮಾಯಣದ ಪದ್ಯಗಳನ್ನೂ ಹೇಳಿಕೊಟ್ಟು ಅರ್ಥ ವಿವರಿಸುವರು. ನಾಳೆ ವಿದ್ಯಾರ್ಥಿನಿಯರು ಅದನ್ನೆಲ್ಲ ಬರೆದು ತೋರಿಸಬೇಕು. ಹಾಗೆ ಬರೆದುದನ್ನೆಲ್ಲ ಗಾಂಧೀಜಿಯೇ ತಿದ್ದುವರು. ಪಾಠಗಳಿಗೆ ಬರುವುದರಲ್ಲಿ, ಬರೆದು ತೋರಿಸುವುದರಲ್ಲಿ ಪ್ರಭಾವತಿಯೆ ಮುಂದು. ಕಲಿಯುವ ಕಾರ್ಯಕ್ರಮದಲ್ಲಿ ಅವರಿಗೆ ತುಂಬ ಉತ್ಸಾಹ, ಆಸಕ್ತಿ, ಇಂಗ್ಲಿಷ್ ಕಲಿಯಬೇಕು ಎಂದೂ ಆಕೆಗೆ ಆಸೆಯಿತ್ತು.

ಜಯಪ್ರಕಾಶರೂ ‘‘ನೀನು ಇಂಗ್ಲಿಷ್ ಕಲಿತುಕೊ’’  ಅಂತ ಪತ್ರ ಬರೆಯುತ್ತಿದ್ದರು. ಪ್ರಭಾ ಅದನ್ನೂ ಪ್ರಯತ್ನಿಸಿದರು. ಮೊದಲು ಬಾಪೂನೇ ಹೇಳಿಕೊಡುತ್ತಿದ್ದರು. ಅಮೇಲೆ ಮಹದೇವ ದೇಸಾಯಿ ಮೊದಲಾದವರಿಂದಲೂ ಹೇಳಿಸಿ ಕೊಂಡರು. ಆದರೆ ಸ್ವಲ್ಪ ಓದು ಬರಹ ಬಂತಷ್ಟೆ, ಹೆಚ್ಚಿಗೆ ಬರಲಿಲ್ಲ.

ಪ್ರಭಾಗೆ ಗಾಂಧೀಜಿಯೆ ಮೇಲುಪಂಕ್ತಿ. ಅದೇ ಸರಳವಾದ ಬದುಕು. ದೇವರಲ್ಲಿ ಭಕ್ತಿ, ಸೇವೆಯಲ್ಲಿ ಆಸಕ್ತಿ, ಹಣಕಾಸಿನಲ್ಲಿ ಲೆಕ್ಕಾಚಾರ, ಕಾಲದಲ್ಲಿ ಕ್ಲುಪ್ತತೆ! ಆಶ್ರಮದಲ್ಲಿ ಇದ್ದಾಗ ಹೇಗೋ ಹೊರಗೆ ಪ್ರವಾಸ ಮಾಡುವಾಗಲೂ ಇದೇ ಲೆಕ್ಕಾಚಾರ ಕಟ್ಟುನಿಟ್ಟು. ಗಾಂಧೀಜಿ ಜೊತೆ ಹೋದ ಕಡೆಯಲ್ಲೆಲ್ಲ, ಖಾದಿಬಟ್ಟೆ ಮಾರಾಟ, ಅದರ ಲೆಕ್ಕ, ಬಾಪೂಜಿಯ ಯೋಗಕ್ಷೇಮ ಎಲ್ಲದರ ಕೆಲಸವೂ ಪ್ರಭಾವತಿಯದೇ. ಗಾಂಧೀಜಿ ಜೊತೆ ಹೋಗದೆ ಇದ್ದರೆ ಪ್ರಭಾವತಿ ತಾನು ಮಾಡಿದ ಅಭ್ಯಾಸಗಳನ್ನು ಅವರಿಗೆ ಅಂಚೆಯಲ್ಲಿ ಕಳಿಸುವರು. ಬಾಪು ತಿದ್ದಿ ಕಳಿಸುವರು. ಮುಂದಿನ ಪಾಠ ತಿಳಿಸುವರು. ಹೀಗೆ ಪ್ರಭಾವತಿಗೆ ತರಬೇತು ಕೊಟ್ಟರು. ಬಾಪೂ ಒಂದು ಸಲ ಹೇಳಿದರು-‘‘ಪ್ರಭಾ, ನೀನು ಇಂಗ್ಲಿಷ್ ಕಲಿಯಲಿಲ್ಲ ಅಂತ ಪೇಚಾಡುವುದು ಏಕೆ? ಜೀವನಕ್ಕೆ ಬೇಕಾದ ಜ್ಞಾನ ಪಡೆದಿದ್ದೀಯಲ್ಲ. ಒಳ್ಳೆಯ ಸೇವೆ ಮಾಡಲು ನೀನು ಸಿದ್ಧಳಾಗಿದ್ದೀಯೆ. ಯಾವ ಕೆಲಸಕ್ಕೂ ನೀನೂ ತಯಾರು. ಯಾವುದರಲ್ಲೂ ತಪ್ಪು ಮಾಡುವುದಿಲ್ಲ. ನನಗೆ ನಂಬಿಕೆ ಇದೆ. ಇದಕ್ಕಿಂತ ಇನ್ನೇನು ಬೇಕು?’’ ಹೀಗೆ ಪ್ರಭಾರನ್ನು ಉತ್ತಮ ಸೇವೆಗೆ ಸಿದ್ಧಗೊಳಿಸಿದರು ಗಾಂಧೀಜಿ.

ಗಂಡ ಹೆಂಡತಿಯರ ದೃಷ್ಟಿಗಳು

ಏಳು ವರ್ಷದ ನಂತರ ಜಯಪ್ರಕಾಶ್ ಭಾರತಕ್ಕೆ ಬಂದರು. ಮೊದಲು ತಮ್ಮ ಊರಿಗೆ ಹೋದರು. ಪ್ರಭಾ ಅಲ್ಲಿಗೆ ಬಂದಿದ್ದರು. ಆ ವೇಳೆಗೆ ಆಕೆ ಪೂರಾ ಆಶ್ರಮದ ಸೇವಕಿ ಆಗಿಹೋಗಿದ್ದರು. ಹಳ್ಳಿಯ ಹೆಂಗಸಿನ ಹಾಗೆ ಸರಳ. ಸ್ವಲ್ಪ ದಿನ ಕಳೆದು ಪ್ರಭಾ ಆಶ್ರಮಕ್ಕೆ ಹೊರಟರು. ಆಕೆಗೆ ಆಶ್ರಮದ್ದೇ ಗೀಳು. ತನ್ನ ಜೊತೆಯಲ್ಲೆ ಜಯಪ್ರಕಾಶರೂ ಬಂದು ಆಶ್ರಮದಲ್ಲಿ ಇರಲಿ ಅಂತ ಆಕೆಯ ಆಸೆ. ಜಯಪ್ರಕಾಶರಿಗೆ ಅದು ಇಷ್ಟವಿಲ್ಲ. ಪ್ರಭಾ ತನ್ನ ಜೊತೆ ಇರಲಿ ಅಂತ ಅವರ ಮನಸ್ಸು. ಆ ವೇಳೆಗೆ ಅವರು ಮಾರ್ಕ್ಸ್ ಎಂಬುವನ ತತ್ವಗಳನ್ನು ನಂಬಿದ್ದರು. ನಾವೂ ಇತರ ದೇಶಗಳ ಹಾಗೆಯೆ ಸಿರಿವಂತರಾಗಬೇಕು, ವಿಜ್ಞಾನದ ಸಹಾಯದಿಂದ ದೊಡ್ಡ ದೊಡ್ಡ ಕಾರ್ಖಾನೆಗಳನ್ನು ಕಟ್ಟಬೇಕು. ಬಡವ ಬಲ್ಲಿದರ ನಡುವೆ ಹೋರಾಟ ಆಗಬೇಕು. ಬಲ್ಲಿದರನ್ನು ನಾಶಮಾಡಿ ಬಡವರು ಮುಂದೆ ಬರಬೇಕು. ಮೊದಲು ನಾವು ಸ್ವಾತಂತ್ರ್ಯ ಪಡೆಯಬೇಕು. ಅದಕ್ಕಾಗಿ ಹಿಂಸೆ ಮಾಡಿದರೂ ಸರಿಯೆ. ದೇವರು, ಧರ್ಮ, ಪ್ರಾರ್ಥನೆ, ಸರಳತೆ, ಆಶ್ರಮ, ನೂಲುವುದು ಇವೆಲ್ಲ ಕೆಲಸಕ್ಕೆ ಬಾರದವು-ಹೀಗೆಲ್ಲ ಅವರ ಮನಸ್ಸಿನಲ್ಲಿ ತುಂಬಿತ್ತು.

ಪ್ರಭಾ ಇದಕ್ಕೆಲ್ಲ ವಿರುದ್ಧ. ಆಕೆಗೆ ಸೇವೆಯೆ ಮುಖ್ಯ. ಬಾಪೂನೇ ಗುರು. ದೇವರಲ್ಲಿ ಭಕ್ತಿ, ಸರಳ ಜೀವನ, ದಿನವೂ ನೂಲಬೇಕು, ಆಶ್ರಮವೇ ಆಕೆಗೆ ಹಿತ. ಅಲ್ಲದೆ ಬ್ರಹ್ಮಚರ‍್ಯವನ್ನು ಪಾಲಿಸಿ ಬಾಪೂಜಿಯ ಸೇವೆ ಮಾಡುತ್ತೇನೆ ಅಂತ ವ್ರತ ಕೈಗೊಂಡಿದ್ದರು. ಇದೆಲ್ಲ ಜಯಪ್ರಕಾಶರಿಗೆ ಹಿಡಿಸಲಿಲ್ಲ.

ಇಬ್ಬರೂ ದೇಶಕ್ಕೆ ಮೀಸಲು

ಹೀಗಾಗಿ ಇಬ್ಬರಿಗೂ ಹೊಂದಾಣಿಕೆ ಆಗಲಿಲ್ಲ. ಎಷ್ಟೋ ಸಲ ಪ್ರಭಾ ಸಂಕಟಪಟ್ಟುಕೊಳ್ಳುತ್ತಿದ್ದರು. ಬಾಪೂನೇ ಇಬ್ಬರಿಗೂ ಸಮಾಧಾನ ಹೇಳುತ್ತಿದ್ದರು. ಕೊನೆಗೆ ಅವರು ಜಯಪ್ರಕಾಶರಿಗೆ ಹೇಳಿದರು, ‘‘ಪ್ರಭಾ ತನ್ನ ದಾರಿ ಬಿಡುವುದಿಲ್ಲ. ಅವಳ ವಿಚಾರ ನಿನಗೆ ಸರಿತೋರದೆ ಹೋದರೆ, ಬೇಕಾದರೆ ನೀನು ಬೇರೆ ಮದುವೆ ಮಾಡಿಕೊ’’ ಎಂದು. ಈ ಮಾತು ಕೇಳಿ ಜಯಪ್ರಕಾಶ್ ನೊಂದು ಕೊಂಡರು. ‘‘ನನ್ನಿಂದ ಪ್ರಭಾವತಿಯ ಮನಸ್ಸಿಗೆ ನೋವು ಆಗಬಾರದು, ಅವಳ ದಾರಿ ಅವಳು ಅನುಸರಿಸಲಿ, ನನ್ನದು ನನಗೆ. ಈ ವಿಚಾರದಲ್ಲಿ ವಿವಾದ ಬೇಡ’’ ಅಂತ ತೀರ್ಮಾನಿಸಿದರು. ಅಷ್ಟೆ ಅಲ್ಲ. ಪ್ರಭಾವತಿಯ ಹಾಗೆಯೆ ತಾವೂ ಬ್ರಹ್ಮಚರ‍್ಯವ್ರತವನ್ನೇ ಹಿಡಿದರು. ಪ್ರಭಾ ಸಹ ತನ್ನ ಗಂಡನ ವಿಚಾರ ತನಗೆ ಹಿಡಿಸದಿದ್ದರೂ, ಗೌರವದಿಂದ ಪ್ರೀತಿಯಿಂದ ಪತಿಸೇವೆಯನ್ನೂ ಕೈಗೊಂಡರು. ಇಬ್ಬರ ಜೀವನವೂ ದೇಶಸೇವೆಗೆ ಮೀಸಲಾಯಿತು.

ಆಶ್ರಮದಲ್ಲಿ ಬಾಪೂಸೇವೆ. ಊರಿಗೆ ಹೋದರೆ ಅತ್ತೆ ಮಾವಂದಿರ ಸೇವೆ, ತೌರುಮನೆಯಲ್ಲಿ ತಂದೆ ತಾಯಿಯರ ಸೇವೆ. ಗಂಡನ ಜೊತೆ ಇರುವಾಗ ಆತನ ಸೇವೆ. ಇದೇ ಕೆಲಸ ಇದೇ ಬದುಕು ಪ್ರಭಾವತಿಗೆ.

ಚಳುವಳಿಯಲ್ಲಿ

ಈ ನಡುವೆ ಜವಹರಲಾಲ ನೆಹರೂ ಕುಟುಂಬದ ಪರಿಚಯ ಆಯಿತು. ನೆಹರು ಕಾಂಗ್ರೆಸ್ ಕೆಲಸಕ್ಕೆ ಜಯಪ್ರಕಾಶರನ್ನು ಕರೆಸಿಕೊಂಡರು. ಇಬ್ಬರೂ ಅಣ್ಣ-ತಮ್ಮ ಆದರು. ಅದೇ ರೀತಿ ನೆಹರೂಜಿಯ ಪತ್ನಿ ಕಮಲಾಗೂ ಪ್ರಭಾಗೂ ಗೆಳೆತನ ಬೆಳೆದು ಇಬ್ಬರೂ ಅಕ್ಕ ತಂಗಿ ಆದರು. ಇಬ್ಬರೂ ಒಟ್ಟಿಗೆ ಸ್ವಾತಂತ್ರ್ಯ ಚಳುವಳಿಯನ್ನು ನಡೆಸಿದರು. ಒಂದು ದಿನ ಅವರು ಮೆರವಣಿಗೆ ಮುಗಿಸಿಕೊಂಡು ಮನೆಗೆ ಬಂದಾಗ ಮಧ್ಯಾಹ್ನ ಎರಡು ಗಂಟೆ. ಉರಿಬಿಸಿಲು. ಕಮಲಾ ನೆಹರು ಅವರ ಮಾವ ಮೋತೀಲಾಲರು ಹೆಣ್ಣುಮಕ್ಕಳು ಇನ್ನೂ ಬರಲಿಲ್ಲವಲ್ಲ ಅಂತ ಕೋಪಿಸಿಕೊಂಡಿದ್ದರು. ಇವರು ಮನೆಗೆ ಕಾಲಿಟ್ಟ ಕೂಡಲೇ ‘‘ಯಾಕೆ ತಡವಾಯಿತು?’’ ಅಂತ ತರಾಟೆಗೆ ತೆಗೆದುಕೊಂಡರು. ‘‘ಹೋಗಿ, ಊಟಮಾಡಿ, ಮಲಗಿಕೊಳ್ಳಿ, ತಿರುಗಿ ಹೋಗಬೇಡಿ ಇವತ್ತು’’  ಅಂತ ಹೇಳಿದರು. ಕಾರನ್ನು ಷೆಡ್ಡಿನಲ್ಲಿ ಇಟ್ಟು ಬೀಗ ಹಾಕಲು ಆಳಿಗೆ ಹೇಳಿ ತಾವು ಮಲಗಲು ಹೋದರು. ಕಮಲಾ, ಪ್ರಭಾ ಊಟ ಮಾಡಿದರು. ವಿಶ್ರಾಂತಿ ತೆಗೆದುಕೊಳ್ಳುವವರ ಹಾಗೆ ಸ್ವಲ್ಪ ಹೊತ್ತು ಸುಮ್ಮನೆ ಇದ್ದರು. ಮೋತೀಲಾಲರು ಮಲಗಿದರೊ ಇಲ್ಲವೊ, ಮೆಲ್ಲಗೆ ಎದ್ದು ಹಿತ್ತಲ ಬಾಗಿಲಿನಿಂದ ಆಚೆಗೆ ಹೊರಟರು. ಬಿಸಿಲಿನಲ್ಲೇ ನಡೆದುಕೊಂಡೇ ಹೋಗಿ ಮೆರವಣಿಗೆಯನ್ನು ಸೇರಿಕೊಂಡರು.

ಸೆರೆಮನೆವಾಸ

೧೯೩೨ ರ ಫೆಬ್ರವರಿ, ಚಳುವಳಿ ಜೋರಾಗಿತ್ತು. ಪ್ರಭಾವತಿಯನ್ನು ಸೆರೆ ಹಿಡಿದರು.ಕೋರ್ಟಿನಲ್ಲಿ ವಿಚಾರಣೆ ಆಯಿತು. ಕಠಿಣ ಸಜಾ ವಿಧಿಸಿ ಲಖನೌ ಜೈಲಿನಲ್ಲಿ ಇಟ್ಟರು. ಪ್ರಭಾಗೆ ಜೈಲಿನಲ್ಲೂ ಆಶ್ರಮದ ದಿನಚರಿ ಕ್ರಮವೇ. ಪ್ರಾರ್ಥನೆ, ನೂಲುವುದು, ಗೀತಾಪಠನ, ರಾಮಾಯಣ ಪಾರಾಯಣ, ಓದುಬರಹ, ನಡು ನಡುವೆ ಮನೆಯ ಯೋಚನೆ, ಬಾಪೂ ನೆನಪು. ನಿಂತಲ್ಲಿ ನಿಲ್ಲದೆ ಓಡಾಡುತ್ತಿದ್ದ ಗಂಡನ ಯೋಚನೆ ಬರುವುದು. ಅವರಿಗೂ ಜೈಲಾಯಿತು ಅಂತ ತಿಳಿಯಿತು. ಎಲ್ಲದರಿಂದ ಪ್ರಭಾಗೆ ತುಂಬ ಚಿಂತೆ. ಜೊತೆಗೆ ಜೈಲಿನ ಕಷ್ಟ, ಬೇಸರ. ಎಷ್ಟೋ ಸಲ ಕಾಯಿಲೆ ಬರುತ್ತಿತ್ತು. ಆಗಾಗ್ಗೆ ಬಾಪೂಗೆ ಕಾಗದ ಬರೆದು ತನ್ನ ಪರಿಸ್ಥಿತಿಯನ್ನು ಹೇಳಿಕೊಳ್ಳುವರು. ಬಾಪೂ ಸಮಾಧಾನ ಹೇಳಿ ಪತ್ರ ಬರೆಯುವರು. ‘‘ಚಿಂತೆ ಮಾಡಬೇಡ. ದೇವರಲ್ಲಿ ನಂಬಿಕೆ ಇಟ್ಟವರಿಗೆ ಚಿಂತೆ ಕಾಯಿಲೆ ಏನೂ ಇರುವುದಿಲ್ಲ, ಇರಕೂಡದು’’ ಹೀಗೆ ಬಾಪೂ ಧೈರ‍್ಯ ಹೇಳುತ್ತಿದ್ದರು.

ಹದಿನಾರು ತಿಂಗಳ ಜೈಲುವಾಸದ ನಂತರ ಬಿಡುಗಡೆ ಆಯಿತು. ಸ್ವಲ್ಪ ದಿನದಲ್ಲೆ ಜಯಪ್ರಕಾಶರಿಗೂ ಬಿಡುಗಡೆ ಆಯಿತು. ಮನೆಯಲ್ಲಿ ತುಂಬ ಕಷ್ಟ, ಹಣಕಾಸಿನ ತೊಂದರೆ, ತಾಯಿಯ ಸಾವು.ತಮ್ಮಂದಿರ ಮಕ್ಕಳ ವಿದ್ಯಾಭ್ಯಾಸದ ತೊಂದರೆ. ಎಲ್ಲದರಿಂದ ಜಯಪ್ರಕಾಶರಿಗೂ ತುಂಬ ಚಿಂತೆ. ಆದರೂ ಜಯಪ್ರಕಾಶರ ಓಡಾಟ ನಡೆದೇ ಇತ್ತು. ಪ್ರಭಾ ಅವರ ಆರೋಗ್ಯವೂ ಸರಿಯಿರಲಿಲ್ಲ. ಆಗ ಬಾಪೂನೇ ಆಕೆಗೆ ಉಪಚಾರ ಮಾಡುತ್ತಿದ್ದರು.

ಕೊನೆಗೆ ಜಯಪ್ರಕಾಶರು ಪಾಟ್ನಾದಲ್ಲಿ ಮನೆ ಮಾಡಿದರು. ಪ್ರಭಾರನ್ನೂ ಕರೆಸಿಕೊಂಡರು. ನೆಪಕ್ಕೆ ಮನೆ ಅಷ್ಟೆ. ದಿನವೂ ಓಡಾಟವೇ. ಪ್ರಭಾವತಿ ಆಗಾಗ ಆಶ್ರಮಕ್ಕೆ ಹೋಗಿಬರುವರು. ಊರಿಗೆ ಹೋಗಿ ಹಿರಿಯರನ್ನು ನೋಡಿಕೊಳ್ಳುವರು. ಅವರ ಸೇವೆಯನ್ನು ನಿಷ್ಠೆಯನ್ನು ಕಂಡು ಹಿರಿಯರಿಗೆಲ್ಲ ಪ್ರಭಾವತಿ ಆಶ್ರಮಕ್ಕೆ ಹೋದುದಕ್ಕೆ ಆಗಿದ್ದ ಅಸಮಾಧಾನ ಮಾಯವಾಯಿತು. ತಮ್ಮ ನಡತೆಯಿಂದಲೇ ಪ್ರಭಾ ಎಲ್ಲರ ಮನಸ್ಸನ್ನು ಒಲಿಸಿಕೊಂಡಿದ್ದರು.

ನಾಯಕಿಯಾಗಿ

೧೯೪೦ ರಲ್ಲಿ ಬಿಹಾರಿನ ರಾಮಗಢದಲ್ಲಿ ಕಾಂಗ್ರೆಸ್ ಮಹಾಸಭೆ. ಆಗ ಮಹಿಳೆಯರ ಸ್ವಯಂಸೇವಕಿಯರ ತಂಡಕ್ಕೆ ಮುಖಂಡರಾಗಲು ಪ್ರಭಾವತಿಗೆ ಕರೆ ಬಂತು. ಪ್ರಭಾ ಒಪ್ಪಲಿಲ್ಲ. ಮುಖಂಡಳಾಗಿ ಮುಂದೆ ನಿಲ್ಲುವುದು ಆಕೆಗೆ ಹಿಡಿಸದು. ಏನಿದ್ದರೂ ಮೌನವಾಗಿ ಸೇವೆ ಮಾಡುವುದೇ ಇಷ್ಟ. ಆದರೆ ಜನ ಬಿಡಲಿಲ್ಲ. ಬಾಪೂ ಹಾಗೂ ರಾಜೇಂದ್ರಬಾಬು ಸಹ ಒತ್ತಾಯ ಮಾಡಿದರು. ಪ್ರಭಾವತಿ ಒಪ್ಪಬೇಕಾಯಿತು. ಕಾಂಗ್ರೆಸ್ ಸೇವೆಗೆ ಹೆಂಗಸರನ್ನು ಸ್ವಯಂಸೇವಕಿಯರಾಗಿ ಸೇರಿಸಿಕೊಂಡು ಅವರಿಗೆ ತರಬೇತು ಕೊಟ್ಟು ಕೆಲಸ ಮಾಡಿಸುವುದು ಕಷ್ಟದ ಕೆಲಸವಾಗಿತ್ತು. ಆಗ ಹೆಣ್ಣು ಮಕ್ಕಳು ಹೊರಕ್ಕೇ ಬರುತ್ತಿರಲಿಲ್ಲ. ಯಾವಾಗಲೂ ಮನೆಯೆ ಅವರಿಗೆ. ತುಂಬ ಹೆದರಿಕೆ, ನಾಚಿಕೆ, ಬಡತನ. ನಾಲ್ಕು ಜನರ ನಡುವೆ ನಿಲ್ಲುವ ಹಾಗಿಲ್ಲ. ಮರೆಯಲ್ಲೆ, ಇರಬೇಕು. ಎಲ್ಲದರಲ್ಲೂ ಅವರು ಕೀಳು ಅನ್ನುವ ಭಾವನೆ. ಇದನ್ನೆಲ್ಲ ನೋಡಿ, ನಮ್ಮ ಹೆಂಗಸರನ್ನು ಹೇಗಾದರೂ ಮುಂದಕ್ಕೆ ತರಬೇಕು ಅನ್ನುವುದನ್ನೇ ಪ್ರಭಾವತಿ ಯೋಚಿಸುತ್ತಿದ್ದರು. ಯೋಚನೆ ಅಷ್ಟೆ ಅಲ್ಲ. ಕೆಲಸವನ್ನೂ ಆರಂಭಿಸಿಬಿಟ್ಟರು. ಪಾಟ್ನಾದಲ್ಲಿ ಮಹಿಳಾ ಚರಖಾ ತರಗತಿಯನ್ನು ಪ್ರಾರಂಭಿಸಿದರು. ಮುಂದೆ ಅದೇ ಮಹಿಳಾ ಚರಖಾ ಸಮಿತಿ ಆಯಿತು. ಮಹಿಳೆಯರಿಗೆ ಕೈ ಕಸಬು, ವಿದ್ಯೆ ಕಲಿಸುವುದು, ಅವರನ್ನು ದೇಶಸೇವೆಗೆ ಸಿದ್ಧಗೊಳಿಸುವುದು, ಬಡ ಹೆಂಗಸರಿಗೆ ಆಸರೆ ಒದಗಿಸುವುದು, ಮಕ್ಕಳಿಗೆ ಶಿಶುವಿಹಾರ, ಶಾಲೆ ನಡೆಸುವುದು, ಪುಸ್ತಕ ಪ್ರಕಟಿಸುವುದು, ಕಾರ‍್ಯಕರ್ತರಿಗೆ ಶಿಕ್ಷಣ ಇವೆಲ್ಲ ಸಮಿತಿಯ ಕೆಲಸ. ಎಲ್ಲಕ್ಕೂ ಪ್ರಭಾವತಿಯವರದೇ ಸ್ಫೂರ್ತಿ, ಓಡಾಟ. ನೂರಾರು ಹೆಂಗಸರಿಗೆ ಹೀಗೆ ದಾರಿ ತೋರಿಸಿದರು. ಇವತ್ತೂ ಆ ಸಮಿತಿ, ದೊಡ್ಡದಾಗಿ ಬೆಳೆದು ಸೇವೆ ಮಾಡುತ್ತಿದೆ. ಅಲ್ಲಿನ ಎಷ್ಟೋ ಹೆಣ್ಣು ಮಕ್ಕಳು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು. ಭೂದಾನದ ಕೆಲಸವನ್ನೂ ಮಾಡಿದರು.

ಜಯಪ್ರಕಾಶರು ಸೆರೆಮನೆಯಲ್ಲಿ

ಜಯಪ್ರಕಾಶರು ಮತ್ತೆ ಸೆರೆಯಾಗಿ ದೇವಲಿ ಜೈಲಿನಲ್ಲಿದ್ದರು. ಒಂದು ಸಲ ಅವರನ್ನು ನೋಡಲು ಪ್ರಭಾ ಹೋದರು. ಅವರ ಚಪ್ಪಲಿಯ ಅಳತೆ ತೆಗೆದುಕೊಳ್ಳಲು ಪ್ರಭಾವತಿ ಕೆಳಕ್ಕೆ ಬಾಗಿದರು. ಆಗ ಜಯಪ್ರಕಾಶ್ ಸರ್ರನೆ ಒಂದು ಕಾಗದದ ಕಟ್ಟನ್ನು ಅವರ ಕೈಗೆ ತುರುಕಿದರು. ಅದೇನು ಅಂತ ನೋಡುವುದಕ್ಕೆ ಮೊದಲೇ ಪೊಲೀಸು ಗೂಢಚರ ಮುಂದೆ ನುಗ್ಗಿ ಆ ಕಟ್ಟನ್ನು ಕಿತ್ತುಕೊಂಡ. ಸರ್ಕಾರದ ವಿರುದ್ಧ ಜಯಪ್ರಕಾಶ್ ದಂಗೆ ಎಬ್ಬಿಸುತ್ತಿದ್ದಾರೆ, ಅದಕ್ಕಾಗಿ ಕಾಗದ ಪತ್ರಗಳನ್ನು ಹೆಂಡತಿಯ ಮೂಲಕ ಸಾಗಿಸುತ್ತಿದ್ದಾರೆ ಅಂತ ಸರ್ಕಾರ ಪ್ರಚಾರ ಮಾಡಿತು. ಪ್ರಭಾಗೆ ಏನೂ ಗೊತ್ತಾಗಲಿಲ್ಲ, ತಬ್ಬಿಬ್ಬಾಯಿತು. ಸುಮ್ಮನೆ ಬಂದುಬಿಟ್ಟರು. ಜಯಪ್ರಕಾಶ್ ಅಪಾಯದ ಆಸಾಮಿ ಅಂತ ಅವರನ್ನು ಜೈಲಿನಲ್ಲಿ ಒಂಟಿಯಾಗಿ ಕೂಡಿ ಹಾಕಲಾಯಿತು. ಮೂರು ತಿಂಗಳಾದ ಮೇಲೆ ಅವರನ್ನು ಹಜಾರಿಬಾಗ್ ಜೈಲಿಗೆ ರವಾನಿಸಲಾಯಿತು.

೧೯೪೨ ರ ಮಹಾ ಹೋರಾಟದಲ್ಲಿ

೧೯೪೨ ರಲ್ಲಿ ಬಾಪೂಜಿ ‘‘ಬ್ರಿಟಿಷರೇ ಭಾರತವನ್ನು ಬಿಟ್ಟು ತೊಲಗಿ’’ ಅಂತ ಘೋಷಣೆ ಮಾಡಿದರಲ್ಲವೇ? ಆಗ ದೊಡ್ಡ ಸ್ವಾತಂತ್ರ್ಯ ಹೋರಾಟ ಆರಂಭವಾಯಿತು. ನಾಯಕರಿಗೆಲ್ಲ ಸೆರೆಮನೆ, ಲಕ್ಷಾಂತರ ಜನರಿಗೆ ಜೈಲು, ಲಾಠಿ ಏಟು, ಗುಂಡಿನೇಟು! ದೇಶದಲ್ಲೆಲ್ಲ ಅಲ್ಲೋಲ ಕಲ್ಲೋಲ! ಪಾಟ್ನಾದಲ್ಲಿ ಪ್ರಭಾವತಿ ಹೆಂಗಸರನ್ನು ಕೂಡಿಸಿಕೊಂಡು ಚಳುವಳಿ ನಡೆಸಿದರು.

ಆಗಸ್ಟ್ ಹದಿನಾರರಂದು ಸಾವಿರಾರು ಹೆಂಗಸರ ದೊಡ್ಡ ಮೆರವಣಿಗೆ. ‘‘ವಂದೇ ಮಾತರಂ’’ ‘‘ಭಾರತ್ ಮಾತಾ ಕೀ ಜೈ’’ ಅನ್ನುವ ಕೂಗು ಆಕಾಶಕ್ಕೆ ಮುಟ್ಟುತ್ತಿತ್ತು. ಇದನ್ನು ನೋಡಿ, ಸರ್ಕಾರಕ್ಕೆ ಗಾಬರಿ ಆಯಿತು. ದೊಡ್ಡ ಸೈನ್ಯವನ್ನೇ ಕಳಿಸಿದರು. ಸೈನಿಕರು ಮೆರವಣಿಗೆಯನ್ನು ಸುತ್ತುಗಟ್ಟಿ ನುಗ್ಗಿದರು. ಚರಖಾ ಸಮಿತಿಯ ಮನೆಗೆ ನುಗ್ಗಿದರು. ಎಲ್ಲರನ್ನು ಹಿಡಿದು ಜೈಲಿಗೆ ಸಾಗಿಸಿದರು. ಪ್ರಭಾವತಿಯವರನ್ನು ಭಾಗಲಪುರ ಜೈಲಿನಲ್ಲಿ ಇಟ್ಟರು. ಜೈಲಿನಲ್ಲಿ ಅವರು ಹಿಂದಿದ್ದ ಹಾಗೆಯೆ ಆಶ್ರಮದ ರೀತಿಯ ಜೀವನವನ್ನೇ ನಡೆಸುತ್ತಿದ್ದರು. ಪಾರಾಯಣ, ಪೂಜೆ, ನೂಲುವುದು, ಜೊತೆಯವರ ಸೇವೆ ಎಲ್ಲವೂ ನಡೆದಿತ್ತು. ಯಾರು ಹೊಸಬರು ಜೈಲಿಗೆ ಬಂದರೂ ಅವರಿಂದ ಹೊರಗೆ ಚಳುವಳಿ ಹೇಗೆ ನಡೆದಿದೆ ಎನ್ನುವುದನ್ನು ಕೇಳಿ ತಿಳಿದುಕೊಳ್ಳುತ್ತಿದ್ದರು. ಪ್ರಭಾವತಿಯವರಿಗೆ ಜೈಲಿನ ಕಷ್ಟದ ವಿಷಯವಾಗಿಯಾಗಲಿ, ತಮ್ಮ ಸಂಸಾರದ ವಿಷಯದಲ್ಲಿ ಆಗಲಿ ಇಲ್ಲವೇ ತಮ್ಮ ಆರೋಗ್ಯದ ಮೇಲಾಗಲಿ ಚಿಂತೆ ಇರಲಿಲ್ಲ. ಅವರಿಗೆ ಸದಾ ದೇಶದ ಚಿಂತೆ. ಸ್ವರಾಜ್ಯ ಎಂದು ಬರುತ್ತದೆ ಎಂದೇ ಚಿಂತೆ. ಆಗಾಗ ಬಳಗದವರು, ಸ್ನೇಹಿತರು ಯೋಗಕ್ಷೇಮ ವಿಚಾರಿಸಲು ಬರುತ್ತಿದ್ದರು. ಅವರ ಜೊತೆಗೆ ಪ್ರಭಾವತಿ ಚಳುವಳಿಯ ವಿಷಯವನ್ನೇ ಮಾತಾಡುತ್ತಿದ್ದರು. ಚಳುವಳಿಯನ್ನು ಹೆಚ್ಚು ಮಾಡಲು ಸಲಹೆಗಳನ್ನು ಕೊಡುತ್ತಿದ್ದರು. ಅದರಂತೆಯೆ ಅವರೆಲ್ಲ ಹೊರಗೆ ಸತ್ಯಾಗ್ರಹವನ್ನು ಹೆಚ್ಚಿನ ಉತ್ಸಾಹದಿಂದ ನಡೆಸುತ್ತಿದ್ದರು.

ಸಾಹಸಿ ಜೆ.ಪಿ.

ಈ ಕಡೆ ಬಾಪೂ ಬಾ ಎಲ್ಲರನ್ನೂ ಪೂನಾದ ಆಗಾಖಾನ್ ಅರಮನೆಯಲ್ಲಿ ಸೆರೆಯಲ್ಲಿ ಇಡಲಾಗಿತ್ತು. ಆ ಕಡೆ ಜಯಪ್ರಕಾಶ ನಾರಾಯಣರು ಜೈಲಿನಲ್ಲೆ ಈ ಪರಿಸ್ಥಿತಿಯನ್ನೆಲ್ಲ ಕೇಳಿ ರೋಷಗೊಂಡಿದ್ದರು. ಹೇಗಾದರೂ ಕ್ರಾಂತಿಮಾಡಿ ಬ್ರಿಟಿಷರನ್ನು ಓಡಿಸಬೇಕು ಅನ್ನುವ ಯೋಚನೆ ಅವರಿಗೆ. ನೇತಾಜಿ ಸುಭಾಷ್‌ಚಂದ್ರ ಬೋಸರು ಭಾರತದಿಂದ ತಪ್ಪಿಸಿಕೊಂಡು ವಿದೇಶಗಳಿಗೆ ಹೋಗಿ ಅಲ್ಲಿ ಸೈನ್ಯವನ್ನು ಕಟ್ಟಿ ಭಾರತದ ಬಿಡುಗಡೆಗಾಗಿ ಯುದ್ಧಕ್ಕೆ ಬರುತ್ತಿದ್ದರು. ಹಾಗೆಯೆ ದೇಶದೊಳಗೂ ಗುಟ್ಟಾಗಿ ಒಂದು ದಂಡು ಕಟ್ಟಿ ಚಳುವಳಿ ನಡೆಸಿ ಸರ್ಕಾರವನ್ನು ಉರುಳಿಸಬೇಕು ಅಂತ ಜಯಪ್ರಕಾಶ್ ಯೋಚಿಸಿದರು. ಕೊನೆಗೆ ೧೯೪೨ ರ ನವೆಂಬರ್‌ನಲ್ಲಿ ಒಂದು ರಾತ್ರಿ ಅವರು ನಾಲ್ಕೆ ದು ಜನ ಗೆಳೆಯರ ಜೊತೆಗೆ ಜೈಲಿನ ಗೋಡೆ ಹಾರಿ ತಪ್ಪಿಸಿಕೊಂಡು ಓಡಿದರು. ಹತ್ತು ತಿಂಗಳು ಯಾರಿಗೂ ಪತ್ತೆ ಆಗದ ಹಾಗೆ ಅನೇಕ ಕಡೆ ಓಡಾಡಿದರು. ಸ್ವಾತಂತ್ರ್ಯ ಹೋರಾಟಗಾರರನ್ನು ಕೂಡಿಸಿ ಚಳುವಳಿಯನ್ನು ಬಲಪಡಿಸಲು ಪ್ರಯತ್ನಿಸಿದರು. ಆದರೆ ಅಷ್ಟರಲ್ಲೆ ಮತ್ತೆ ಸಿಕ್ಕಿಬಿದ್ದರು. ಆಗ್ರಾ ಜೈಲಿನಲ್ಲಿ ಸೆರೆ ಆದರು.

ಕಸ್ತೂರ ಬಾ ಇನ್ನಿಲ್ಲ

ಆಗಾ ಖಾನ್ ಅರಮನೆಯ ಸೆರೆಯಲ್ಲಿದ್ದ ಕಸ್ತೂರಬಾ ಅವರಿಗೆ ಕಾಯಿಲೆ ಆಯಿತು. ಅವರಿಗೆ ಒಂದೇ ಹಂಬಲ ‘‘ನನ್ನ ಮಗಳು ಪ್ರಭಾಳನ್ನು ನೋಡಬೇಕು’’ ಅಂತ. ‘‘ನಾವು ಸೆರೆಯಾಳುಗಳು, ನಮಗೆ ಬೇಕಾದುದನ್ನೇ ಪಡೆಯುವುದು ಸಾಧ್ಯವೇ?’’ ಅಂತ ಗಾಂಧೀಜಿ ಒಪ್ಪಲಿಲ್ಲ. ಆದರೆ ಬಾ ಅವರ ಹಂಬಲ ಹೆಚ್ಚಿತು. ಪ್ರಭಾರನ್ನು ಕರೆಸಿಕೊಡಿ ಅಂತ ಗಾಂಧೀಜಿ ಸರ್ಕಾರವನ್ನು ಕೇಳಿದರು. ಪೊಲೀಸು ಪಹರೆಯಲ್ಲೆ ಭಾಗಲಪುರದಿಂದ ಪ್ರಭಾ ಬಂದರು. ತಮ್ಮ ಪ್ರೀತಿಯ ಬಾಗೆ ಕೊನೆಯ ಉಪಚಾರಮಾಡಿದರು. ಶಿವರಾತ್ರಿಯ ದಿನ ಬಾ ಕಣ್ಣುಮುಚ್ಚಿಕೊಂಡರು. ಪ್ರಭಾ ತಾಯಿಯನ್ನು ಕಳೆದುಕೊಂಡ ಮಗುವಿನ ಹಾಗೆ ಗೋಳಾಡಿದರು.

ಕೆಲವು ದಿನದಲ್ಲೆ ಪ್ರಭಾರನ್ನು ಮತ್ತೆ ಭಾಗಲಪುರ ಜೈಲಿಗೆ ಕಳಿಸಲಾಯಿತು. ಮೂರು ವರ್ಷ ಜೈಲುವಾಸ ಆದಮೇಲೆ ಬಿಡುಗಡೆ. ಬಾಪೂ ಸಹ ಹೊರಕ್ಕೆ ಬಂದಿದ್ದರು. ಸ್ವಲ್ಪ ದಿನದಲ್ಲೆ ಜಯಪ್ರಕಾಶರಿಗೂ ಬಿಡುಗಡೆ ಆಯಿತು.

ಬಾಪೂ ಇನ್ನಿಲ್ಲ

೧೯೪೭ ಆಗಸ್ಟ್ ಹದಿನೈದು ಭಾರತಕ್ಕೆ ಸ್ವಾತಂತ್ರ್ಯ ಬಂತು. ‘‘ಇನ್ನು ಹಿಂಸೆ ಬೇಕಿಲ್ಲ. ಪ್ರಜಾಪ್ರಭುತ್ವವನ್ನು ಶಾಂತಿಯಿಂದಲೇ ಬೆಳೆಸೋಣ’’ ಅಂತ ಜಯಪ್ರಕಾಶ್ ಹೇಳಿದರು. ಇದನ್ನು ಕೇಳಿ ಪ್ರಭಾಗೆ ಸಂತೋಷ. ಜಯ ಪ್ರಕಾಶರು ಈಗಲಾದರೂ ಬಾಪೂ ವಿಚಾರವನ್ನು ಒಪ್ಪುವ ಹಾಗೆ ಆಗಲಿ ಅಂತ ಪ್ರಾರ್ಥಿಸುತ್ತಿದ್ದರು ದಿನವೂ.

ಸ್ವಾತಂತ್ರ್ಯವೇನೊ ಬಂತು. ಆದರೆ ದೇಶದಲ್ಲೆಲ್ಲ ಗಲಭೆ, ಜಗಳ ಹೆಚ್ಚಾಯಿತು. ಎಲ್ಲಲ್ಲೂ ಹಿಂಸೆ. ಬಾಪೂ ಇದನ್ನು ನೋಡಿ ತುಂಬ ಸಂಕಟಪಟ್ಟರು. ಶಾಂತಿಯನ್ನು ಉಂಟುಮಾಡಲು ಬಂಗಾಳ ಬಿಹಾರ ದೆಹಲಿಗಳಲ್ಲೆಲ್ಲ ತಮ್ಮ ಜೀವವನ್ನು ಲೆಕ್ಕಿಸದೆ ಓಡಾಡಿದರು. ಕೊನೆಗೆ ೧೯೪೮ರ ಜನವರಿಯಲ್ಲಿ ಉಪವಾಸವನ್ನೇ ಹಿಡಿದರು. ಪ್ರಭಾ ಬಾಪೂ ಜೊತೆಯಲ್ಲೇ ಇದ್ದು ಸೇವೆ ಮಾಡಿದರು. ಅದೇ ಕೊನೆಯ ಸೇವೆ. ಉಪವಾಸ ಮುಗಿಯಿತು. ‘‘ಇನ್ನು ನೀನು ಜಯಪ್ರಕಾಶನ ಸೇವೆಮಾಡಲು ಅವನ ಜೊತೆಗೆ ಇರು, ಹೋಗು’’ ಅಂತ ಬಾಪೂ ಪ್ರಭಾರನ್ನು ಕಳಿಸಿದರು. ಪ್ರಭಾ ಪಾಟ್ನಾಗೆ ಬಂದರು. ಮಾರನೆಯ ದಿನವೇ ಸುದ್ದಿ ಬಂತು, ಬಾಪೂಜಿ ಗುಂಡಿನ ಏಟಿಗೆ ಬಲಿ ಆದರು ಎಂದು. ಪ್ರಭಾಗೆ ಸಿಡಿಲು ಬಡಿದ ಹಾಗಾಯಿತು. ಕೂಡಲೇ ದೆಹಲಿಗೆ ಹೊರಟರು, ಆದರೆ ವಿಮಾನದ್ಲಲಿ ಸ್ಥಳ ಸಿಗಲಿಲ್ಲ, ರೈಲಿನಲ್ಲಿ ಹೊರಟರು. ದೆಹಲಿ ತಲಪುವ ವೇಳೆಗೆ ಬಾಪೂ ಇರಲಿಲ್ಲ. ಅವರ ಚಿತೆಯ ದರ್ಶನ ಮಾತ್ರ ಲಭಿಸಿತು.

ಬಾಪೂ ಇಲ್ಲ, ಇನ್ನು ಯಾರು ದಿಕ್ಕು ಅಂತ ಪ್ರಭಾಗೆ ಸಂಕಟವಾಯಿತು. ಆದರೆ ಬಾಪೂ ಹೇಳುತ್ತಿದ್ದ ಮಾತನ್ನು ನಡೆಸಬೇಕಲ್ಲ, ಅವರ ತತ್ವವನ್ನು ಪಾಲಿಸಬೇಕಲ್ಲ. ಜಯಪ್ರಕಾಶರ ಜೊತೆಗೆ ಹೊರಟರು ಪ್ರಭಾ.

ಜಯಪ್ರಕಾಶರೊಡನೆ-ದೇಶ ಸೇವೆಯಲ್ಲಿ

ಜಯಪ್ರಕಾಶರಿಗೆ ರಾಜಕೀಯದ ಓಡಾಟ, ಕಾರ್ಮಿಕ ಸಭೆಗಳು, ಭಾಷಣಗಳು, ಪ್ರಭಾಗೆ ಅವರ ಯೋಗ ಕ್ಷೇಮವೇ  ಕೆಲಸ. ಅವರಿಗೆ ಏನೇನು ಸೌಕರ‍್ಯ ಬೇಕೊ ಅದನ್ನು ಒದಗಿಸುವುದು. ಕಾಯಿಲೆ ಬಂದರೆ ಉಪಚಾರ, ಕಾಲಕಾಲಕ್ಕೆ ಕಾರ‍್ಯಕ್ರಮ ನಡೆಯುವಂತೆ ನೋಡಿಕೊಳ್ಳುವುದು, ಸಾಮಾನು  ಸರಂಜಾಮುಗಳ ಉಸ್ತುವಾರಿ, ಪ್ರಯಾಣದ ಸಿದ್ಧತೆ ಏರ್ಪಾಡು, ಊಟ ತಿಂಡಿ ಬಟ್ಟೆ ಬರೆ ಔಷಧಿ ಎಲ್ಲದರ ಹೊಣೆಯೂ ಪ್ರಭಾತಾಯಿಯದೇ. ಮಗುವನ್ನು ನೋಡಿಕೊಳ್ಳುವ ಹಾಗೆ ನೋಡಿಕೊಳ್ಳುತ್ತಿದ್ದರು. ಜೊತೆಗೆ ಹಿಂದಿನ ಕಾರ‍್ಯಕ್ರಮಗಳು-ನೂಲುವುದು ಪ್ರಾರ್ಥನೆ, ಪಾರಾಯಣ, ಮಹಿಳೆಯರ ಸೇವೆ, ಖಾದಿ ಕೆಲಸ ಇವೆಲ್ಲ.

ಪ್ರಭಾವತಿಯ ಸೇವೆ ಶ್ರದ್ಧೆಗಳು ಜಯಪ್ರಕಾಶರಿಗೆ ತುಂಬ ಹಿಡಿಸಿದವು. ಮೆಲ್ಲಮೆಲ್ಲನೆ ಅವರು ಆಕೆಯ ವಿಚಾರಗಳಿಗೆ ಗೌರವ ತೋರಿಸುವುದು ಆರಂಭವಾಗಿತ್ತು. ಆಕೆಯ ಪಾರಾಯಣದಲ್ಲಿ ಇವರೂ ಸೇರಿಕೊಳ್ಳುವರು. ಗಾಂಧೀಜಿಯ ವಿಚಾರವನ್ನು ಕೇಳಿ ತಿಳಿದುಕೊಳ್ಳುವರು. ಆಗಾಗ ನೂಲು ತೆಗೆಯುವರು.

ಸರ್ವೋದಯದ ಹಾದಿ

ಈ ನಡುವೆ ಆಚಾರ‍್ಯ ವಿನೋಬಾಜಿ ಭೂದಾನ ಚಳುವಳಿ ಆರಂಭಿಸಿದ್ದರು. ಹೆಚ್ಚು ಜಮೀನು ಇರುವವರು ಏನೂ ಇಲ್ಲದವರಿಗೆ ದಾನಮಾಡಬೇಕು, ಗ್ರಾಮವನ್ನು ಒಂದು ಕುಟುಂಬ ಅಂತ ತಿಳಿದುಕೊಂಡು ಎಲ್ಲರ ಯೋಗಕ್ಷೇಮ ವನ್ನೂ ನೋಡಿಕೊಳ್ಳಬೇಕು. ಎಲ್ಲರಲ್ಲೂ ಪ್ರೀತಿ ಇರಲಿ. ಬಡವರೂ ನಿಮ್ಮವರೇ ಎಂದು ತಿಳಿಯಿರಿ. ಬಡವರ ಉದ್ಧಾರಕ್ಕೆ ಹೀಗೆ ಪ್ರೀತಿ ಅಹಿಂಸೆಗಳೇ ಮಾರ್ಗ ಅಂತ ಬೋಧಿಸುತ್ತ ವಿನೋಬಾ ಭಾರತವನ್ನೆಲ್ಲ ತಿರುಗಿದರು. ಜಯಪ್ರಕಾಶರು ಈ ವಿಚಾರವನ್ನೂ ಈ ಕಾರ‍್ಯವನ್ನೂ ಚೆನ್ನಾಗಿ ಗಮನಿಸಿ ನೋಡಿದರು.ಇದು ಸರಿ ಅನ್ನಿಸಿತು. ಬಡವರ ಉದ್ಧಾರಕ್ಕೆ ಬಲ್ಲಿದರ ಜೊತೆಗೆ ಹೋರಾಟ ಬೇಕಿಲ್ಲ, ಅಹಿಂಸೆಯೇ ಉತ್ತಮವಾದ ದಾರಿ. ಗಾಂಧೀಜಿ ತೋರಿಸಿದ ದಾರಿ, ಸರ್ವೋದಯದ ದಾರಿಯೇ ಸರಿಯಾದುದು ಅನ್ನುವುದು ಜಯಪ್ರಕಾಶರಿಗೆ ಗೊತ್ತಾಯಿತು.

ಒಂದು ಸಲ ಅವರು ಇಪ್ಪತ್ತೊಂದು ದಿನ ಉಪವಾಸ ಮಾಡಿದರು. ಪೂನಾ ನಗರದಲ್ಲಿ ಇದ್ದರು. ತಮ್ಮ ಆತ್ಮವನ್ನೂ, ಮನಸ್ಸನ್ನೂ ಶುದ್ಧಿಮಾಡಿಕೊಳ್ಳಬೇಕು ಅನ್ನುವುದೇ ಉಪವಾಸದ ಗುರಿ. ಆಗ ಪ್ರಭಾ ಅಲ್ಲಿದ್ದು ಜಯಪ್ರಕಾಶರನ್ನು ಎಚ್ಚರಿಕೆಯಿಂದ ನೋಡಿಕೊಳ್ಳುತ್ತಿದ್ದರು. ಉಪವಾಸದ ಸಂದರ್ಭದಲ್ಲಿ ಜಯಪ್ರಕಾಶರಿಗೆ ಮೆಲ್ಲಮೆಲ್ಲನೆ ವಿಶೇಷವಾದ ಬೆಳಕು ಮನಸ್ಸಿಗೆ ತೋರಿದಂತೆ ಅನ್ನಿಸುತ್ತಿತ್ತು. ದೇವರಲ್ಲಿ ನಂಬಿಕೆ ಬರುತ್ತಿತ್ತು. ಗಾಂಧೀಜಿಯ ತತ್ವಗಳಲ್ಲಿ ಶ್ರದ್ಧೆ ಉಂಟಾಗುತ್ತಿತ್ತು. ಮನುಷ್ಯ ದೇವರ ಸೃಷ್ಟಿ. ನಾವು ಸಮಸ್ಯೆಗಳನ್ನು ಶಾಂತಿ ಅಹಿಂಸೆಗಳಿಂದ ಬಿಡಿಸಿಕೊಳ್ಳಬೇಕು. ನಮ್ಮ ಗುರಿಯನ್ನು ಒಳ್ಳೆಯ ಮಾರ್ಗದಿಂದಲೇ ಸಾಧಿಸಬೇಕು ಅನ್ನುವ ವಿಚಾರ ಒಪ್ಪಿಗೆಯಾಯಿತು. ಇದೇ ವಿಚಾರ ವಿನೋಬಾಜಿಯ ಭೂದಾನ ಯಜ್ಞದಿಂದ ಇನ್ನೂ ದೃಢವಾಯಿತು. ಈಗ ಜಯಪ್ರಕಾಶ್ ಬೇರೆ ಮನುಷ್ಯರೆ ಆಗಿ ಹೋದರು.

ಬೋಧಗಯಾ ಅನ್ನುವ ಕಡೆ ೧೯೪೫ ರಲ್ಲಿ ಸರ್ವೋದಯ ಸಮ್ಮೇಳನ. ಜಯಪ್ರಕಾಶ್ ಎದ್ದು  ನಿಂತು ‘‘ಸರ್ವೋದಯ ಸಮಾಜವನ್ನು ಕಟ್ಟುವುದಕ್ಕಾಗಿ ನನ್ನ ಜೀವನವನ್ನೇ ದಾನಮಾಡುತ್ತೇನೆ’’ ಅಂತ ಹೇಳಿದರು. ಇದನ್ನು ಕೇಳಿ ಎಲ್ಲರಿಗೂ ಆನಂದವಾಯಿತು. ಪ್ರಭಾವತಿಗಂತೂ ಕೊನೆಗೂ ಜಯಪ್ರಕಾಶರು ಗಾಂಧೀ ಮಾರ್ಗಕ್ಕೆ ಬಂದರಲ್ಲ ಅಂತ ಆನಂದ ಉಕ್ಕಿತು. ಬಾಪೂಜಿಯ ನೆನಪೂ ಬಂತು. ಆ ದಿನ ಸಂಜೆ ವಿನೋಬಾಜಿಗೆ ಹೇಳಿದರು. ‘‘ಬಾಬಾ, ದೇವರ ಕೃಪೆ ಎಷ್ಟು ದೊಡ್ಡದು! ಇಂಥ ಒಳ್ಳೆಯ ದಿನವನ್ನು ಕರುಣಿಸಿದನಲ್ಲ! ಬಾಪೂ ಇದ್ದಾಗಲೇ ಹೀಗೆ ಆಗಿದ್ದರೆ, ಅವರಿಗೆ ಎಷ್ಟು ಸಂತೋಷ, ಎಷ್ಟು ಶಾಂತಿ ಸಿಗುತ್ತಿತ್ತು!’’ ಹೀಗೆ ಹೇಳುತ್ತಿದ್ದಾಗ ಪ್ರಭಾರ ಕಣ್ಣಿನಿಂದ ನೀರು ಹರಿಯುತ್ತಿತ್ತು. ವಿನೋಬಾಜಿ ‘‘ಪ್ರಭಾ, ಬಾಪೂ ಇಲ್ಲವೇ ಈಗ! ಎಲ್ಲ ಕಡೆ ಇದ್ದಾರೆ. ಇದೆಲ್ಲ ಆದದ್ದೂ ಅವರ ಕೃಪೆಯೆ’’ ಅಂದರು. ಪ್ರಭಾವತಿಯ ಸೇವೆ, ತಪಸ್ಸು, ಸಾಧನೆ ಎಲ್ಲಕ್ಕೂ ಫಲ ದೊರೆತಿತ್ತು.

ದೀದಿ

ಇನ್ನು ಜಯಪ್ರಕಾಶರಿಗೆ, ಪ್ರಭಾವತಿಗೆ ಭೂದಾನ ಯಾತ್ರೆಯ ಕೆಲಸ. ಹಳ್ಳಿಯಿಂದ ಹಳ್ಳಿಗೆ ಓಡಾಟ. ಇಬ್ಬರನ್ನೂ ಒಟ್ಟಿಗೆ ನೋಡಿದ ಜನರಿಗೆ ಆನಂದವೋ ಆನಂದ. ಮಿಥಿಲೆಯಲ್ಲಿ ಹಿಂದೆ ಶ್ರೀರಾಮ ಸೀತೆಯರು ನಡೆದಾಡು ತ್ತಿದ್ದರಲ್ಲ, ಹಾಗೆ ಜಯಪ್ರಕಾಶ್ ಪ್ರಭಾವತಿ ಓಡಾಡುತ್ತಿದ್ದಾರೆ ಅಂತ ಎಲ್ಲ ಕಡೆ ಗೌರವಿಸುತ್ತಿದ್ದರು. ಸಾವಿರಾರು ಎಕರೆ ಜಮೀನು ಬಡವರಿಗಾಗಿ ದಾನ ಬಂತು. ಸರ್ವೋದಯದ ಕೆಲಸ ಹೆಚ್ಚಿಸುವುದಕ್ಕೆ, ಕೆಲಸಗಾರರಿಗೆ ಶಿಕ್ಷಣ ಕೊಡುವುದಕ್ಕೆ ಜಯಪ್ರಕಾಶರು ಸೋಖೋದೇವರಾ ಅನ್ನುವ ಕಡೆ ಒಂದು ಆಶ್ರಮ ಕಟ್ಟಿದರು. ಕಾಡಿನ ಒಳಗೆ ಸಣ್ಣ ಹಳ್ಳಿ. ಅಲ್ಲಿಗೆ ಹೋಗುವುದೇ ಕಷ್ಟ. ಹಳ್ಳಿ ರಸ್ತೆಯಲ್ಲಿ ಗಾಡಿಯಲ್ಲಿ ಹೋಗಬೇಕು. ಸ್ವಲ್ಪ ದೂರ ನಡೆಯಬೇಕು. ಮಳೆಗಾಲದಲ್ಲಂತೂ ಎಲ್ಲೆಲ್ಲೂ ನೀರು. ಗಾಡಿಯೂ ಹೋಗುವುದಿಲ್ಲ. ಆನೆಯ ಮೇಲೆ ಕುಳಿತು ಹೋಗಬೇಕು. ಬಾಪೂ ಆಶ್ರಮದ ಹಾಗೆಯೇ ಇಲ್ಲೂ ಶಿಸ್ತು, ಸರಳತೆ, ಕಟ್ಟುನಿಟ್ಟು. ಎಲ್ಲ ಕೆಲಸವನ್ನೂ ತಾವೇ ಮಾಡಬೇಕು. ಆಳುಕಾಳು ಇಲ್ಲ. ಯಾರಿಗಾದರೂ ಕಾಯಿಲೆ ಆದರೆ ಕೂಡಲೆ ಪ್ರಭಾವತಿ ಅಲ್ಲಿಗೆ ಹೋಗಿ, ಅವರಿಗೆ ಉಪಚಾರ ಮಾಡುವರು. ಯಾರಿಗಾದರೂ ಮದುವೆ ಗೊತ್ತಾದರೆ ತಾವೇ ಓಡಾಡಿ ಮದುವೆ ಮಾಡಿಸುವರು. ಯಾರಿಗಾದರೂ ಮಗು ಹುಟ್ಟಿದರೆ, ಸಂತೋಷದಿಂದ ಓಡಾಡಿ ಉಪಚಾರ ಮಾಡುವರು. ಆ ಮಗುವಿಗೆ ಏನಾದರೂ ಕಾಯಿಲೆ ಆದರೆ, ಪ್ರಭಾವತಿಯವರಿಗೇ ಚಿಂತೆ. ಮಗುವಿನ ಪಕ್ಕದಲ್ಲೆ ಕೂತು ಉಪಚರಿಸುವರು. ಅದರ ತಂದೆ ತಾಯಿಯರಿಗೆ ಸಮಾಧಾನ ಹೇಳುವರು. ಎಲ್ಲರ ಕಷ್ಟ ಸುಖವೂ ತನ್ನದೇ ಅನ್ನುವ ಹಾಗೆ ತಿಳಿದುಕೊಂಡು ಸೇವೆ ಶುಶ್ರೂಷೆ ಮಾಡುತ್ತಿದ್ದರು. ಯಾವಾಗಲಾದರೂ ಬೇರೆ ಕಡೆಗೆ ಹೋಗಿದ್ದರೆ ಅಲ್ಲಿಂದಲೇ ಆಶ್ರಮದ ಎಲ್ಲರ ಯೋಗಕ್ಷೇಮವನ್ನು ವಿಚಾರಿಸಿ ತಿಳಿದುಕೊಳ್ಳುತ್ತಿದ್ದರು. ಆಶ್ರಮಕ್ಕೆ ವಾಪಸು ಬಂದಕೂಡಲೇ ಪ್ರತಿಯೊಂದು ಕೋಣೆಗೂ ಹೋಗಿ ಎಲ್ಲರನ್ನೂ ಮಾತಾಡಿಸಿ ವಿಚಾರಿಸುತ್ತಿದ್ದರು. ಹೀಗೆ ಆಶ್ರಮದಲ್ಲಿ ಪ್ರಭಾವತಿ ಎಲ್ಲರಿಗೂ ‘ದೀದಿ’ (ಚಿಕ್ಕಮ್ಮ) ಆಗಿದ್ದರು.

ನಡುನಡುವೆ ಪ್ರಭಾವತಿ ವಿನೋಬಾಜಿಯನ್ನು ಕಾಣುವರು, ಇಲ್ಲವೇ ಪತ್ರ ಬರೆಯುವರು. ಸತ್ಯ ಧರ್ಮ ಪ್ರಾರ್ಥನೆ ವಿಚಾರಗಳನ್ನೆಲ್ಲ ಕೇಳಿ ತಿಳಿದುಕೊಳ್ಳುವರು.

ಹೊರದೇಶಗಳಲ್ಲಿ

ಭಾರತದಲ್ಲಿ ಮಾತ್ರವಲ್ಲ ಜಯಪ್ರಕಾಶರ ಓಡಾಟ. ಹೊರದೇಶಗಳಿಗೂ ಹೋಗಿಬರಬೇಕಾಗಿತ್ತು. ಜೊತೆಯಲ್ಲಿ ಪ್ರಭಾ ಇರುತ್ತಿದ್ದರು. ಮೊದಲು ಬರ್ಮಾಗೆ ಹೋದರು. ಆಗ ಶಿವರಾತ್ರಿ ಬಂತು. ಪ್ರಭಾಗೆ ಶಿವನಲ್ಲಿ ತುಂಬ ಭಕ್ತಿ. ರಂಗೂನಿನಲ್ಲಿ ಇದ್ದ ದೇವಾಲಯಕ್ಕೆ ಹೋಗಿ ಪೂಜೆ ಮಾಡಿ ಬಂದರು. ಮುಂದಿನ ಪ್ರವಾಸ ಯೂರೋಪಿನಲ್ಲಿ, ಆಮೇಲೆ ಜಪಾನು, ಅಮೆರಿಕಾ, ಆಸ್ಟ್ರೇಲಿಯಾದಲ್ಲಿ.ಎಲ್ಲ ಕಡೆಯಲ್ಲೂ ಜಯಪ್ರಕಾಶರು ಸರ್ವೋದಯ ತತ್ತ್ವವನ್ನು ವಿವರಿಸುತ್ತಿದ್ದರು. ಅಮೆರಿಕಾದಲ್ಲಿ ಹಿಂದೆ ಜಯಪ್ರಕಾಶರು ಓದುವಾಗ ಇದ್ದ ಸ್ಥಳಗಳನ್ನೆಲ್ಲ ನೋಡಿದರು. ಎಲ್ಲ ಕಡೆ ತಾವು ಕಂಡುದನ್ನೆಲ್ಲ ದಿನಚರಿಯಲ್ಲಿ ಬರೆದಿಡುತ್ತಿದ್ದರು ಪ್ರಭಾವತಿ. ಜಯಪ್ರಕಾಶರು ಗಾಂಧೀ ವಿಚಾರವನ್ನು ತಿಳಿಸುತ್ತಿದ್ದರು. ಪ್ರಭಾವತಿ ತಮ್ಮ ಪ್ರಾರ್ಥನೆ, ನೂಲುವುದು, ಸರಳ ಜೀವನ, ಸೇವೆ ಇವುಗಳಿಂದ ಆ ವಿಚಾರವನ್ನು ಆಚರಿಸಿ ತೋರಿಸುತ್ತಿದ್ದರು. ಇದರಿಂದ ಗಾಂಧೀ ವಿಚಾರವೂ ತಿಳಿಯುತ್ತಿತ್ತು. ಅದರ ಆಚರಣೆಯ ಉದಾಹರಣೆಯೂ ಕಾಣಿಸುತ್ತಿತ್ತು.

ಅಪಾಯದ ಅಂಗಳದಲ್ಲಿ

ಭಾರತದ ಈಶಾನ್ಯದ ಮೂಲೆಯಾದ ನಾಗಾಲ್ಯಾಂಡ್ ನಲ್ಲಿ ದಂಗೆಕೋರರ ಸಮಸ್ಯೆ ಇತ್ತು. ಅಲ್ಲಿ ಶಾಂತಿ ಏರ್ಪಡಿಸೋಣ ಅಂತ ಜಯಪ್ರಕಾಶರು ಹೋದರು. ಭಯಂಕರ ಕಾಡುಗಳಲ್ಲಿ ಓಡಾಟ, ದಂಗೆಕೋರರ ಜೊತೆ ಮಾತುಕತೆ. ಪ್ರಭಾವತಿ ಸಹ ಹೆದರಿಕೆಯಿಲ್ಲದೆ ಜೊತೆಗೇ ಹೋಗುತ್ತಿದ್ದರು. ಅವರ ಸಂಸಾರದ ಕಷ್ಟಸುಖ ವಿಚಾರಿಸುತ್ತಿದ್ದರು. ದಂಗೆಕೋರರ ಮನೆಗಳಿಗೇ ಹೋಗುತ್ತಿದ್ದರು.  ಅವರಿಗೂ ಚಿಕ್ಕಮ್ಮನೇ ಆಗಿಹೋದರು.

ಮಧ್ಯಪ್ರದೇಶದ ಚಂಬಲ್ ನದಿಯ ಕಣಿವೆ ಕಾಡುಗಳ ಪ್ರದೇಶ ‘‘ಡಕಾಯಿತರ ನಾಡು’’ ಅನ್ನಿಸಿತ್ತು. ನೂರಾರು ವರ್ಷದಿಂದ ಅಲ್ಲಿ ಡಕಾಯಿತರ ಹಾವಳಿ. ಲೂಟಿ, ಕೊಲೆ, ದರೋಡೆಗಳೇ. ಹಗಲೂ ಹೊರಗೆ ಹೋಗಲು ಭಯ. ವಿನೋಬಾಜಿ ಭೂದಾನ ಯಾತ್ರೆಯಲ್ಲಿ ಅಲ್ಲಿಗೂ ಬಂದರು ೧೯೬೦ರಲ್ಲಿ. ಅವರು ‘‘ಈ ಹಿಂಸೆಯ ಬದುಕುಬೇಡ. ಎಲ್ಲರ ಹಾಗೆಯೆ ನೆಮ್ಮದಿಯಾಗಿ ದುಡಿದು ಜೀವನಮಾಡಿ’’ ಅಂತ ತಿಳಿಯ ಹೇಳಿದರು. ಕೆಲವರು ಡಕಾಯಿತರು ಅದಕ್ಕೆ ಒಪ್ಪಿದರು. ತಮ್ಮ ಬಂದೂಕುಗಳನ್ನು ಒಪ್ಪಿಸಿ ಶರಣಾಗತರಾದರು. ಅದಾಗಿ ಹನ್ನೆರಡು ವರ್ಷದ ಮೇಲೆ ಒಂದು ದಿನ ಮಾಧೋಸಿಂಗ್ ಅನ್ನುವ ಒಬ್ಬ ಡಕಾಯಿತ ವೇಷ ಮರೆಸಿಕೊಂಡು ಬಂದು ಜಯಪ್ರಕಾಶರನ್ನು ಕಂಡ. ‘‘ಈಗ ಬನ್ನಿ ಬಾಬು. ನಾವೆಲ್ಲ ನಿಮಗೆ ಶರಣಾಗುತ್ತೇವೆ’’ ಅಂದ. ಜಯಪ್ರಕಾಶರಿಗೆ ಕೈತುಂಬ ಕೆಲಸ. ಆರೋಗ್ಯವೂ ಸರಿಯಿರಲಿಲ್ಲ. ಆದರೆ ಮಧೋಸಿಂಗ್ ಬಿಡಲಿಲ್ಲ. ಆತ ಡಕಾಯಿತರ ದೊರೆ. ಆತನನ್ನು ಹಿಡಿದುಕೊಟ್ಟರೆ ಒಂದೂವರೆ ಲಕ್ಷರೂಪಾಯಿ ಬಹುಮಾನ ಕೊಡುವುದಾಗಿ ಸರ್ಕಾರ ಹೇಳಿತ್ತು. ಈಗ ಈತ ಶರಣಾಗತನಾಗಲು ಬಂದಿದ್ದ. ಆತನ ಕತೆಯನ್ನೆಲ್ಲ ಕೇಳಿದ ಮೇಲೆ ಜಯಪ್ರಕಾಶರು ಒಪ್ಪಿದರು.

ಅವರು ಪ್ರಭಾವತಿಯ ಜೊತೆಯಲ್ಲಿ ಮಧ್ಯಪ್ರದೇಶದ ಚಂಬಲ್ ಕಣಿವೆಯ ಪಗಾರಾ ಅನ್ನುವ ಹಳ್ಳಿಗೆ ಹೋದರು. ಅಲ್ಲಿ ಮಾತುಕತೆ ನಡೆಯಿತು. ನಾನೂರ ಐವತ್ತು ಜನ ಡಕಾಯಿತರು ತಮ್ಮ ಹಿಂಸೆಯ ಜೀವನವನ್ನು ಬಿಟ್ಟು ಶಾಂತಿಯ ಮಾರ್ಗಕ್ಕೆ ಬರುವುದಾಗಿ  ಒಪ್ಪಿ ಸಾಲಾಗಿ ಬಂದು ನಿಂತರು. ಪ್ರತಿಯೊಬ್ಬರೂ ಪ್ರಭಾವತಿಯ ಕಾಲಿಗೆ ನಮಸ್ಕರಿಸಿದರು. ಪ್ರಭಾ ಅವರ ಹಣೆಗೆ ತಿಲಕ ಇಟ್ಟರು, ತಲೆಯ ಮೇಲೆ ಅಕ್ಷತೆ ಹಾಕಿದರು. ಗೀತೆ, ತುಲಸೀರಾಮಾ ಯಣ ಪುಸ್ತಕಗಳನ್ನು ಕೊಟ್ಟರು. ತಮ್ಮ ಬಂದೂಕುಗಳನ್ನು ತೆಗೆದು ಅವರ ಪಾದಗಳ ಬಳಿ ಇಟ್ಟು ಶರಣಾಗತರಾದರು. ಸಾವಿರಾರು ಜನ ಇದನ್ನು ನೋಡಿ ಆಶ್ಚರ‍್ಯಪಟ್ಟರು. ಜಯಪ್ರಕಾಶರನ್ನು ಪ್ರಭಾರನ್ನು ತಂದೆ ತಾಯಿ ಅಂತಲೇ ಭಾವಿಸಿದರು. ಮುಂದೆ ಪ್ರಭಾವತಿ ಮರಣ ಹೊಂದಿದಾಗ, ಅವರೆಲ್ಲ ಜೈಲಿನಲ್ಲಿದ್ದರು. ಸುದ್ದಿ ಕೇಳಿ ದುಃಖದಿಂದ ದಿನವೆಲ್ಲ ಪ್ರಾರ್ಥನೆ ಉಪವಾಸ ಮಾಡಿದರು.

ಕಾಯಿಲೆಯಲ್ಲೂ ಇತರರ ಬೆಳಕಾಗಿ

ಬಿಹಾರಿನ ಕ್ಷಾಮ, ಬಂಗ್ಲಾ ದೇಶದ ಸಮಸ್ಯೆ, ಇತರ ಸಮಸ್ಯೆಗಳು ಎಲ್ಲದರಿಂದ ಜಯಪ್ರಕಾಶರಿಗೆ ತುಂಬಾ ಓಡಾಟ, ಶ್ರಮ. ಆರೋಗ್ಯ ಕೆಟ್ಟಿತು. ಆ ವೇಳೆಗೇ ಪ್ರಭಾವತಿಗೂ ಹೊಟ್ಟೆನೋವು ಆರಂಭವಾಗಿತ್ತು. ಆದರೆ ಅವರು ಯಾರಿಗೂ ತೋರ್ಪಡಿಸಿಕೊಳ್ಳದೆ, ನಗು ನಗುತ್ತಲೆ ಜಯಪ್ರಕಾಶರ ಸೇವೆ ಮಾಡುತ್ತಿದ್ದರು. ಎಚ್ಚರಿಕೆಯಿಂದ ನೋಡಿಕೊಳ್ಳುತ್ತಿದ್ದರು. ಯಾರಾದರೂ ಕೇಳಿದರೆ ‘‘ನನಗೇನೂ ಆಗಿಲ್ಲ, ಚೆನ್ನಾಗಿದ್ದೇನಲ್ಲ’’ ಎಂದು ನಕ್ಕುಬಿಡುತ್ತಿದ್ದರು. ತಾನು  ನರಳುವುದು ಜಯಪ್ರಕಾಶರಿಗೆ ತಿಳಿಯಕೂಡದು ಅಂತ ಕಷ್ಟಪಟ್ಟು ತಾಳಿಕೊಳ್ಳುತ್ತಿದ್ದರು.

ಈ ನಡುವೆ ಮುಸಹರಿ ಎನ್ನುವ ಕಡೆ ಸರ್ವೋದಯ ಕೆಲಸಗಾರರನ್ನು ಕೊಲೆಮಾಡುತ್ತೇವೆ ಅಂತ ಕೆಲವರು ಬೆದರಿಕೆ ಹಾಕಿದ ಸುದ್ದಿ ಬಂತು. ಕೂಡಲೇ ಜಯಪ್ರಕಾಶರೂ ಪ್ರಭಾವತಿಯೂ ಅಲ್ಲಿಗೆ ಹೋದರು. ಒಂದು ಸಣ್ಣ ಹಳ್ಳಿಯ ಮುರುಕು ಶಾಲೆಯಲ್ಲಿ ತಂಗಿದರು. ಎಲ್ಲರನ್ನೂ ಕರೆಸಿ ಮಾತಾಡಿದರು. ಆರು ತಿಂಗಳು ಅಲ್ಲೆಲ್ಲ ಓಡಾಡಿದರು. ಬೆದರಿಕೆ ಹಾಕಿದವರನ್ನೆಲ್ಲ ಕಂಡರು. ಅವರ ತಪ್ಪನ್ನು ತೋರಿಸಿಕೊಟ್ಟರು. ಆ ಜನರೆಲ್ಲ ಜಯಪ್ರಕಾಶರ ಮಾತನ್ನು ಒಪ್ಪಿಕೊಂಡರು. ಭಯ ಮಾಯವಾಯಿತು. ಅಲ್ಲೂ ಪ್ರಭಾ ಎಲ್ಲರ ಜೊತೆಗೆ ಹೊಂದಿಕೊಂಡಿದ್ದರು. ವಿರೋಧಿಗಳ ಮನೆಗಳಿಗೂ  ಹೋಗಿ ಅವರ ಸಂಸಾರದ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದರು. ಪೊಲೀಸರು ಹಿಡಿಯುತ್ತಾರೆ ಅಂತ ತಲೆತಪ್ಪಿಸಿಕೊಂಡು ತಿರುಗುತ್ತಿದ್ದ ಜನರ ಮನೆಗಳಿಗೆ ಹೋಗಿ ಅವರ ಮಕ್ಕಳು ಮರಿಗಳ ಆರೋಗ್ಯ, ಬಟ್ಟೆಬರೆ, ವಿದ್ಯಾಭ್ಯಾಸಕ್ಕೆಲ್ಲ ಅನುಕೂಲ ಏರ್ಪಡಿಸಿದರು. ಎಷ್ಟೋ ವೇಳೆ ರಾತ್ರಿ, ಜೀಪ್ ಡೆವರ್ ಜಾಲೇಶ್ವರನನ್ನು ಎಬ್ಬಿಸಿ, ‘‘ನಡಿ, ಹೋಗೋಣ’’ ಎಂದು ಹೊರಡಿಸುತ್ತಿದ್ದರು. ಆ ಕ್ರಾಂತಿಕಾರಿಗಳ ಮನೆಗೆ ಹೋಗಿ ಅವರ ಸಂಸಾರದವರಿಗೆ ಬಟ್ಟೆಬರೆ, ಕಂಬಳಿ, ಔಷಧ, ತಿಂಡಿ ಮೊದಲಾದವನ್ನೆಲ್ಲ ಕೊಡುತ್ತಿದ್ದರು. ಆ ಮನೆಗಳ ಮಕ್ಕಳೆಲ್ಲ ಪ್ರಭಾವತಿಯವರನ್ನು ಕಾಣುತ್ತಲೇ ಸಂತೋಷದಿಂದ ‘‘ದೀದಿ ಬಂದರು’’ ಅನ್ನುತ್ತ ಓಡಿಬಂದು ಇವರ ಕಾಲುಗಳನ್ನು ಹಿಡಿದುಕೊಂಡು ಕುಣಿದಾಡುತ್ತಿದ್ದರು. ಮನೆಯವರಿಗೆಲ್ಲ, ಯಾರೂ ಗತಿ ಇಲ್ಲದ ತಮಗೆ ಈಕೆ ತಾಯಿಯ ಹಾಗೆ ಬಂದರಲ್ಲ, ಇಷ್ಟು ಪ್ರೀತಿ ತೋರಿಸುವರಲ್ಲ ಅಂತ ಆಶ್ಚರ್ಯ ಆಗುತ್ತಿತ್ತು. ಆನಂದವಾಗುತ್ತಿತ್ತು. ಪ್ರಭಾವತಿ ಬಗ್ಗೆ ಅವರಿಗೆಲ್ಲ ತುಂಬ ಪ್ರೀತಿ ಗೌರವ ಉಂಟಾಗಿತ್ತು. ಆ ಕ್ರಾಂತಿಕಾರಿಗಳ ಕ್ರೂರ ಮನಸ್ಸು ಕರಗಿ ಮೃದುವಾಗುವುದಕ್ಕೆ ಪ್ರಭಾವತಿಯವರ ಈ ಪ್ರೀತಿಯ ಸೇವೆಯೂ ಕಾರಣವಾಯಿತು.

ಈಶ್ವರನ ಇಚ್ಛೆ

ಈ ವೇಳೆಗೆ ಪ್ರಭಾತಾಯಿಯ ಕಾಯಿಲೆ ಹೆಚ್ಚಾಗಿತ್ತು. ‘‘ನನಗೇನೂ ಆಗಿಲ್ಲ’’ ಅಂತ ಅವರು ಹೇಳುತ್ತಿದ್ದರೂ ಒಳಗೆ ರೋಗ ಕೊರೆಯುತ್ತಿತ್ತು. ಪರೀಕ್ಷೆ ಮಾಡಿಸಿದಾಗ ಹೊಟ್ಟೆಯಲ್ಲಿ ಗೆಡ್ಡೆ ಬೆಳೆದಿದೆ, ಕ್ಯಾನ್ಸರ್ ಆಗಿದೆ ಎಂದು ತಿಳಿಯಿತು. ಕ್ಯಾನ್ಸರ್ ಭಯಂಕರ ರೋಗ. ಎಲ್ಲರಿಗೂ ಗಾಬರಿ! ಜಯಪ್ರಕಾಶರಿಗಂತೂ ತುಂಬ ಸಂಕಟ. ಮುಂಬಯಿಯಲ್ಲಿ ಚಿಕಿತ್ಸೆ ಆಯಿತು. ಗೆಡ್ಡೆಯನ್ನು ತೆಗೆದು ಹಾಕಲಾಯಿತು. ಇನ್ನು ಪರವಾಗಿಲ್ಲ ಅನ್ನಿಸಿತು. ಆದರೆ ರೋಗ ಹೋಗಿರಲಿಲ್ಲ. ಹೀಗೆ ಉಗ್ರವಾದ ಕಾಯಿಲೆ ಬಂದು ಪ್ರಭಾವತಿಯವರ ದೇಹ ತುಂಬ ಸೊರಗಿ ಹೋಗಿತ್ತು. ನೋಡಿದವರಿಗೆಲ್ಲ ಗಾಬರಿಯಾಗುತ್ತಿತ್ತು, ಸಂಕಟವಾಗುತ್ತಿತ್ತು. ಆದರೆ ಪ್ರಭಾವತಿಯವರ ಮನಸ್ಸು ಮಾತ್ರ ದೃಢವಾಗಿಯೆ ಇರುತ್ತಿತ್ತು. ತಮ್ಮ ಕಾಯಿಲೆ ವಿಚಾರದಲ್ಲಿ ಅವರು ಗಾಬರಿ ಪಟ್ಟುಕೊಳ್ಳುತ್ತಲೇ ಇರಲಿಲ್ಲ. ಈ ವಿಷಯದಲ್ಲಿ ಒಂದು ಸಲ ದಿನಚರಿಯಲ್ಲಿ ಬರೆದರು ‘‘ಈ ಸಂಕಟ ಈ ನೋವು ಸಹ ಈಶ್ವರನ ಇಚ್ಛೆ, ಇದಕ್ಕೆ ಚಿಂತೆ ಏಕೆ? ಈಶ್ವರನ ದಯೆಯಿಂದ, ಬಾಬಾರ (ವಿನೋಬಾಜಿಯವರ) ಆಶೀರ್ವಾದದಿಂದ ನನಗೆ ಹುಷಾರಾದೀತು. ಒಂದು ವೇಳೆ ಆಗದೆ ಹೋದರೆ ನಷ್ಟವೇನು? ಹೇಗೂ ನನಗೆ ವಯಸ್ಸಾಗಿದೆ. ಯಾವತ್ತಾದರೂ ಒಂದು ದಿನ ಹೋಗಲೇಬೇಕಲ್ಲ. ಹೋಗಬೇಕಾದಾಗ ಧೈರ‍್ಯದಿಂದ, ಸಂತೋಷದಿಂದ ಹೋಗಬೇಕು, ಅಲ್ಲವೇ?’’

ದೆಹಲಿಯಲ್ಲಿ ಹಳೆಯ ಸ್ನೇಹಿತರನ್ನೆಲ್ಲ ಕಂಡು ಪಾಟ್ನಾಗೆ ಬಂದರು. ಜಯಪ್ರಕಾಶರ ತಮ್ಮನ ಮಗನ ಮದುವೆ ಗೊತ್ತಾಗಿತ್ತು. ಪ್ರಭಾವತಿ ಕಾಯಿಲೆಯನ್ನು ಮರೆತು ಮದುವೆ ಕೆಲಸಕ್ಕೆ ತೊಡಗಿದರು. ಮಲಗಿದ್ದ ಕಡೆಯಿಂದಲೇ ಎಲ್ಲ ವ್ಯವಸ್ಥೆಯನ್ನು ಮಾಡಿಸಿದರು. ನೋವು ಹೆಚ್ಚುತ್ತಿತ್ತು. ಮನೆಯ ಆಳಿಗೆ ಜಯಪ್ರಕಾಶರು ಔಷಧಿ ಉಪಚಾರವನ್ನೆಲ್ಲ ತಿಳಿಸಿಕೊಟ್ಟರು. ಒಬ್ಬರೇ ಇರುವಾಗ ನೋವಿನಿಂದ ನರಳುತ್ತಿದ್ದರು. ಜಯಪ್ರಕಾಶರು ಬಂದರೆ ಎಲ್ಲವನ್ನೂ ಮರೆತು ನಗುತ್ತ ಮಾತನಾಡಿಸುವರು. ಜಯಪ್ರಕಾಶರು ‘‘ಪ್ರಭಾ, ನೀನು ಮಾಡುತ್ತಿದ್ದ ಪಾರಾಯಣ ಪೂಜೆ ವ್ರತ ಎಲ್ಲವನ್ನೂ ನಾನು ನಿಲ್ಲಿಸದೆ ನಡೆಸುತ್ತೇನೆ’’ ಅಂತ ಮಾತುಕೊಟ್ಟರು. ಪ್ರಭಾಗೆ ಸಂತೋಷವಾಯಿತು.

ಎಂದೆಂದೂ ಬೆಳಕು

ಮದುವೆ ತರಾತುರಿಯಲ್ಲಿ ನಡೆಯಿತು. ಅಂದು ೧೯೭೩ ಏಪ್ರಿಲ್ ೧೫. ಪ್ರಭಾವತಿ ಈ ಪ್ರಪಂಚವನ್ನೇ ಬಿಟ್ಟು ಹೋದರು. ಜಯಪ್ರಕಾಶರಿಗೆ ತಮ್ಮ ಬದುಕಿನ ಬೆಳಕೇ ಆರಿಹೋದಂತೆ ಆಗಿತ್ತು.

ಪ್ರಭಾವತಿಯ ಬದುಕು ಸರಳತೆ ಶ್ರದ್ಧೆ ಸೇವೆ ತ್ಯಾಗಗಳಿಂದ ತುಂಬಿದ್ದು, ಅವರು ಗುರುಹಿರಿಯರು, ಪತಿ ಹಾಗೂ ದೇಶ ಎಲ್ಲರ ಸೇವೆಯನ್ನು ಮಾಡಿದರು. ಸೀತೆ ಸಾವಿತ್ರಿಯಂಥವರನ್ನು ನೆನೆಸಿಕೊಳ್ಳುವುದು ಪುಣ್ಯಕರ ಅನ್ನುತ್ತಾರೆ ಅಲ್ಲವೇ? ಹಾಗೆಯೆ ಪ್ರಭಾವತಿಯ ಸ್ಮರಣೆಯೂ ಪುಣ್ಯಕರವೇ. ಅಷ್ಟೇ ಸಾಲದು. ಬಾಪೂನ ಪಾಠವನ್ನು ಆಕೆ ಅನುಸರಿಸಿದರಲ್ಲ, ಹಾಗೆಯೇ ನಾವೆಲ್ಲ ಪ್ರಭಾವತಿಯ ಗುಣಗಳನ್ನು ಅರಿತು ಅನುಸರಿಸಬೇಕು.