ಚರಿತ್ರೆಯೆಂದರೆ ರಾಜರ ಚರಿತ್ರೆ ಎನ್ನುವ ತಪ್ಪು ಗ್ರಹಿಕೆ ಅಥವಾ ಪೂರ್ವಗ್ರಹಿಕೆ ಮರೆಯಾಗದೆ ಸಂಸ್ಕೃತಿ ಚರಿತ್ರೆಯನ್ನು ನಿರ್ಮಿಸುವುದು ಕಷ್ಟಸಾಧ್ಯ. ಏಕೆಂದರೆ ಅದು ಪ್ರಭುತ್ವದ ಸಂಸ್ಕೃತಿ ಚರಿತ್ರೆಯಾಗಬಹುದೇ ಹೊರತು ಜನತೆಯ ಚರಿತ್ರೆಯಲ್ಲ. ಚರಿತ್ರೆಯ ಬಗೆಗಿರುವ ಸಾಮಾನ್ಯವಾದ ತಪ್ಪು ತಿಳುವಳಿಕೆಯೆಂದರೆ-ಅದು ರಾಜ್ಯವನ್ನು ಕಾಲದಿಂದ ಕಾಲಕ್ಕೆ ಆಳಿದ ರಾಜ, ಮಹಾರಾಜರ ಪಟ್ಟಿ ಎನ್ನುವುದು. ಈ ರೀತಿಯ ಚರಿತ್ರೆ ನಿರ್ಮಾಣಕ್ಕೆ ಶಾಸನಗಳು, ಕಾವ್ಯಗಳು, ಸ್ಮಾರಕಗಳು ಮುಂತಾದವುಗಳಲ್ಲಿ ಸಿಗುವ ಪ್ರಭುತ್ವದ ಅಂಶಗಳನ್ನು ಬಳಸಿ ಕೊಳ್ಳಲಾಯಿತು. ಈ ಆಕರಗಳನ್ನು ಪ್ರಭುತ್ವದ ಮಾಧ್ಯಮಗಳು ಎನ್ನುವ ಅರ್ಥದಲ್ಲಿ ಭಾವಿಸಲಾಯಿತು. ಈ ಎಲ್ಲ ಚರಿತ್ರೆಯ ಸಾಮಾಗ್ರಿಗಳಲ್ಲಿ ಜಾನಪದೀಯ ಅಂಶಗಳು ಸ್ವಲ್ಪಮಟ್ಟಿಗೆ ಕಂಡುಬಂದರೂ ಅವು ಚರಿತ್ರೆ ಸಂಶೋಧಕರಿಗೆ ಚರಿತ್ರೆಯ ಸಾಮಾಗ್ರಿಗಳಾಗಿ ಕಂಡುಬರಲಿಲ್ಲ. ಸಮಾಜದಲ್ಲಿ ಕೆಳವರ್ಗದ ಜನರು ಯಾವ ರೀತಿ ನಿರ್ಲಕ್ಷ್ಯಕ್ಕೆ ಒಳಪಟ್ಟಿರುತ್ತಾರೋ ಅದೇ ರೀತಿ ಶಾಸನ, ಕಾವ್ಯ, ಸ್ಮಾರಕಗಳಲ್ಲಿರುವ ಅವರ ಕುರಿತಾದ ವಿವರಗಳೂ ನಿರ್ಲಕ್ಷ್ಯಕ್ಕೆ ಒಳಗಾದವು. ಶಾಸನಗಳು, ಲಿಖಿತ ಕಾವ್ಯಗಳು ಮತ್ತು ಸ್ಮಾರಕಗಳಲ್ಲಿ ಪ್ರಭುತ್ವದ ವೈಭವೀಕರಣವೇ ಪ್ರಧಾನವಾಗಿರುತ್ತದೆ ಎನ್ನುವುದು ನೂರಕ್ಕೆ ಸ್ಮಾರಕಗಳಲ್ಲಿ ಸತ್ಯವಾದ ಮಾತು. ಆದರೆ ಆ ಕಾರಣಕ್ಕಾಗಿಯೇ ಸಂಸ್ಕೃತಿ ಚರಿತ್ರೆಯ ವಿಶ್ಲೇಷಣೆಯಲ್ಲಿ ಅವುಗಳನ್ನು ಹೊರಗಿಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಎರಡು ಪ್ರಮುಖ ವಿಚಾರಗಳ ದೃಷ್ಟಿಯಿಂದ ಅವುಗಳ ಅಧ್ಯಯನ ಸಂಸ್ಕೃತಿ ಚರಿತ್ರೆಯ ನಿರ್ಮಾಣ ಸಂದರ್ಭದಲ್ಲಿ ಪ್ರಾಮುಖ್ಯವೆನಿಸುತ್ತದೆ. ಅವುಗಳೆಂದರೆ,

೧. ರಾಜಪ್ರಭುತ್ವ ಮತ್ತು ಮತ-ಧಾರ್ಮಿಕ ಪ್ರಭುತ್ವಗಳು ಪ್ರಜೆಗಳನ್ನು ಯಾವ ರೀತಿಯಲ್ಲಿ ಶೋಷಣೆಗೆ ಒಳಪಡಿಸಿದವು ಎನ್ನುವುದನ್ನು ತಿಳಿದುಕೊಳ್ಳಲು ಇವುಗಳ ಅಧ್ಯಯನ ಬೇಕಾಗುತ್ತದೆ. ಅದೇ ರೀತಿ ರಾಜಪ್ರಭುತ್ವ ಮತ-ಧರ್ಮಗಳ ನಿಯಮಗಳನ್ನು ಪ್ರತಿಭಟಿಸಿದ ಕೆಲವೊಂದು ಉದಾಹರಣೆಗಳೂ ಇವುಗಳಲ್ಲಿ ಸಿಗುತ್ತವೆ.

೨. ಪ್ರಭುತ್ವದ ಹಿನ್ನೆಲೆಯಿಂದ ರಚನೆಗೊಂಡಿರುವ ಶಾಸನಗಳು, ಕಾವ್ಯಗಳು ಮತ್ತು ಸ್ಮಾರಕಗಳಲ್ಲಿ ಕೆಲವೊಂದು ಜಾನಪದೀಯ ಅಂಶಗಳೂ ಕಂಡುಬರುತ್ತವೆ. ಅವುಗಳನ್ನು ಜನಪದರ ಬದುಕಿನ ಹಿನ್ನೆಲೆಯಿಂದಲೇ ಅರ್ಥೈಸಿಕೊಳ್ಳಬೇಕಾಗುತ್ತದೆ.

ಜನತೆಯ ಜೀವನ ವಿಧಾನವನ್ನು ಚಿತ್ರಿಸುವುದು ಪ್ರಭುತ್ವದ ಈ ಮಾಧ್ಯಮಗಳ ಉದ್ದೇಶ ಆಗಿರಲಿಲ್ಲ. ಆದರೆ ಅಲ್ಲಲ್ಲಿ ಜನತೆಯ ಬಗೆಗಿನ ಉಲ್ಲೇಖಗಳು ಕಂಡುಬರುತ್ತವೆ. ಇವುಗಳ ಸಹಾಯದಿಂದ ಜನತೆಯ ಜೀವನ ಕ್ರಮದ ಬಗೆಗೆ ಊಹಿಸಲು ಸಾಧ್ಯ. ಇಲ್ಲಿ ಜನತೆ ಎನ್ನುವ ಪದವನ್ನು, ಪ್ರಭುತ್ವವನ್ನು ಪ್ರತಿನಿಧಿಸುವ ಜನರನ್ನು ಬಿಟ್ಟು ಉಳಿದ ಜನರು ಎನ್ನುವ ಅರ್ಥದಲ್ಲಿ ಬಳಸಿಕೊಳ್ಳಲಾಗಿದೆ. ಜನತೆ ಎಂದಾಗ ಆಳುವವರ್ಗವೂ ಸೇರಿಕೊಳ್ಳುತ್ತದೆ. ಜನತೆಯ ಚರಿತ್ರೆಯನ್ನು ನಿರ್ಮಿಸುವುದು ಈ ಕೃತಿಯ ಮುಖ್ಯ ಉದ್ದೇಶವಾದ್ದರಿಂದಾಗಿ ಕೃಷಿ ಕಾರ್ಮಿಕರು, ವರ್ತಕರು, ಕುಶಲಕರ್ಮಿಗಳು, ಮಹಿಳೆಯರು, ಪ್ರಜೆಗಳ ಸ್ಮಾರಕಗಳು, ಗ್ರಾಮದೇವತೆಗಳು, ಗ್ರಾಮೀಣ ಮತ್ತು ನಗರ ಪ್ರದೇಶಗಳು ಮುಂತಾದ ವಿಚಾರಗಳನ್ನು ಅಧ್ಯಯನದ ಪ್ರಮುಖ ವಸ್ತುಗಳನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ವಿಚಾರಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಶಾಸನಗಳು, ಲಿಖಿತ ಸಾಹಿತ್ಯ, ಸ್ಮಾರಕಗಳು, ನಾಣ್ಯಗಳು ಹಾಗೂ ಮೌಖಿಕ ಸಾಹಿತ್ಯದಿಂದ ಪಡೆದುಕೊಳ್ಳಲಾಗಿದೆ. ಆಳುವ ವರ್ಗದ ಜನರ ಬದುಕಿನ ಕುರಿತಾದ ಮಾಹಿತಿಗಳು ಎಲ್ಲೆಂದರಲ್ಲಿ ಲಭ್ಯವಿರುವುದರಿಂದಾಗಿ ಅವುಗಳನ್ನು ಈ ಅಧ್ಯಯನದಲ್ಲಿ ಸೇರಿಸಿಕೊಳ್ಳಲಾಗಿಲ್ಲ. ಆಳುವ ವರ್ಗದ ಜನರ ಚರಿತ್ರೆ ಯಾವುದೇ ಒಂದು ದೇಶದ ಚರಿತ್ರೆಯ ದೊಡ್ಡ ಭಾಗ ಅಥವಾ ಗಮನಾರ್ಹ ಭಾಗ ಎನ್ನುವುದೇನೋ ನಿಜ. ಅರಸುಮನೆತನಗಳ ಚರಿತ್ರೆಯ ಕುರಿತಾದ ಮಾಹಿತಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಸಿಗುವುದರಿಂದಾಗಿ ಆ ಹಿನ್ನೆಲೆಯಿಂದಲೇ ಚರಿತ್ರೆಯನ್ನು ನೋಡುವ ಕ್ರಮ ಬೆಳೆದು ಬಂತು. ಆದರೆ ಅರಸು ಮನೆತನಗಳ ಚರಿತ್ರೆಯೇ ದೇಶದ ಚರಿತ್ರೆ ಎಂಬುದಾಗಿ ವಾದಿಸುವುದು ಮೂರ್ಖತನವಾಗುತ್ತದೆ. ಒಂದು ಭೌಗೋಳಿಕ ಭೂಪ್ರದೇಶದ ವ್ಯಾಪ್ತಿಯಲ್ಲಿ ಜೀವಿಸುತ್ತಿರುವ ಜನರಲ್ಲಿ ಅರಸರು ಒಂದು ಭಾಗ ಮಾತ್ರ ಎನ್ನುವ ತೀರ್ಮಾನವನ್ನು ಚರಿತ್ರೆಕಾರ ತೆಗೆದುಕೊಳ್ಳಬೇಕಾಗುತ್ತದೆ.

ಚರಿತ್ರೆಕಾರನು ಮಾಹಿತಿಗಳನ್ನು ಸಂಗ್ರಹಿಸುವಾಗ ಮತ್ತು ಅವುಗಳನ್ನು ವಿಶ್ಲೇಷಿಸುವಾಗ ಯಾವ ಅಧ್ಯಯನ ವಿಧಾನವನ್ನು ಅನುಸರಿಸುತ್ತಾನೆ ಹಾಗೂ ಯಾವ ದೃಷ್ಟಿಕೋನವನ್ನು ಇಟ್ಟುಕೊಂಡಿರುತ್ತಾನೆ ಎನ್ನುವುದರ ಮೇಲೆ ಚರಿತ್ರೆ ನಿರ್ಮಾಣವು ನಿರ್ಧರಿಸಲ್ಪಡುತ್ತದೆ. ಪ್ರಸ್ತುತ ಅಧ್ಯಯನದಲ್ಲಿ ವಸಾಹತುಶಾಹಿ, ರಾಷ್ಟ್ರೀಯ, ಮಾರ್ಕ್ಸ್‌ವಾದಿ ಮತ್ತು ಸಬಾಲ್ಟರ್ನ್ ಚಿಂತನೆಗಳ ಹಿನ್ನೆಲೆಯಿಂದ ಬಂದಿರುವ ಅಭಿಪ್ರಾಯಗಳೆಲ್ಲವನ್ನು ಸೇರಿಸಿಕೊಳ್ಳಲಾಗಿದೆ. ಇದು ಯಾವುದೇ ಒಂದು ಅವಧಿಗೆ ಸಂಬಂಧಿಸಿದ ಚರಿತ್ರೆ ಲೇಖನ ಬೆಳೆದು ಬಂದಿರುವ ಬಗೆಯನ್ನು ಅರ್ಥೈಸಿಕೊಳ್ಳುವುದಕ್ಕೆ ಸಹಕಾರಿಯಾಗುತ್ತದೆ. ಅದೇ ರೀತಿ ಚರಿತ್ರೆ ರಚನೆಯ ಕುರಿತಾದ ಕೆಲವೊಂದು ಸ್ಪಷ್ಟ ತೀರ್ಮಾನಗಳನ್ನು ತೆಗೆದುಕೊಳ್ಳುವುದಕ್ಕೂ ನೆರವಾಗುತ್ತದೆ. ವಸಾಹತುಶಾಹಿ ಮತ್ತು ರಾಷ್ಟ್ರೀಯ ಚಿಂತನೆಗಳಿಂದ ಕೂಡಿದ ಬರವಣಿಗೆಗಳು ಪೂರ್ವಾಗ್ರಹಪೀಡಿತವಾದದ್ದು ಎನ್ನುವುದು ಸ್ಪಷ್ಟವಾಗಿ ತಿಳಿದುಬರುತ್ತದೆ. ಪೂರ್ವಗ್ರಹಿತವಾದ ಸಂರಚನೆಗಳನ್ನು ಅರ್ಥೈಸಿಕೊಳ್ಳಬೇಕಾದರೆ ಆ ರಚನೆಗಳ ಮಟ್ಟಕ್ಕೆ ಇಳಿದು ಚರ್ಚಿಸಬೇಕೇ ಹೊರತು ಮೇಲ್ನೋಟದ ಅಧ್ಯಯನದಿಂದ ಸಾಧ್ಯವಿಲ್ಲ. ಇದಕ್ಕೆ ಉದಾಹರಣೆಯಾಗಿ ಪೂರ್ವದ ಬಗೆಗಿನ ಪಶ್ಚಿಮದ ಪೂರ್ವಗ್ರಹಿಕೆಗಳನ್ನು ಹೆಸರಿಸಬಹುದಾಗಿದೆ. ಪಶ್ಚಿಮವು ತನ್ನ ಮಿಲಿಟರಿ ಮತ್ತು ಆರ್ಥಿಕ ಶಕ್ತಿಯಿಂದಷ್ಟೇ ಪೂರ್ವವನ್ನು ಹತೋಟಿಯಲ್ಲಿಟ್ಟುಕೊಳ್ಳಲಿಲ್ಲ. ಅದರೊಂದಿಗೆ ಪೂರ್ವ ದೇಶಗಳ ಚರಿತ್ರೆ ಮತ್ತು ಸಾಹಿತ್ಯಕ್ಕೆ ನೇರ ಪ್ರವೇಶ ಪಡೆದುಕೊಂಡು ಆ ಮೂಲಕ ತನ್ನ ಪ್ರಭಾವವನ್ನು ಬೀರಲು ಯತ್ನಿಸಿತು. ಇಂಥ ಅನೇಕ ಉದಾಹರಣೆಗಳು ಸಿಗುತ್ತವೆ. ಇದರಿಂದಾಗಿ ಚರಿತ್ರೆಕಾರ ದಿಢೀರನೆ ಯಾವುದೇ ತೀರ್ಮಾನಗಳಿಗೆ ಬರುವುದು ಕಷ್ಟವಾಗುತ್ತದೆ.

ಕೆಳಸ್ತರದ ಅಥವಾ ಅಲಕ್ಷಿತವರ್ಗದ ಜನರ ಚರಿತ್ರೆಯನ್ನು ರಚಿಸಲು ಹೊರಡುವ ಚರಿತ್ರೆಕಾರನಿಗೆ ಚರಿತ್ರೆಗೆ ಸಂಬಂಧಿಸಿದ ಯಾವುದೇ ಸಾಮಾಗ್ರಿಗಳೂ ದೊರೆತರೂ ಅವುಗಳು ಅಲಕ್ಷಿತ ವರ್ಗಗಳ ಹಿನ್ನೆಲೆಯಿಂದಲೇ ವ್ಯಾಖ್ಯಾನಿಸಲ್ಪಡುತ್ತವೆ. ಖಚಿತವಾದ ಸೈದ್ಧಾಂತಿಕ ನಿಲುವುಗಳಿದ್ದಾಗ ಮಾತ್ರ ಸ್ಪಷ್ಟವಾದ ತೀರ್ಮಾನಗಳು ಹೊರಬರಲು ಸಾಧ್ಯ. ಉದಾರವಾದಿ ಚಿಂತನೆಗಳಲ್ಲಿ ಸ್ಪಷ್ಟವಾದ ತೀರ್ಮಾನಗಳು ಕಂಡುಬರುವುದಿಲ್ಲ. ಅವು ಹೆಚ್ಚಾಗಿ ಮೇಲ್ವರ್ಗದ ಧೋರಣೆಗಳ ಪರವಾಗಿಯೇ ಇರುತ್ತವೆ. ರಾಷ್ಟ್ರಕೂಟರಿಂದ ಹೊಯ್ಸಳರ ಅವನತಿಯವರೆಗಿನ ಕಾಲಾವಧಿಯನ್ನು ಪರಿಶೀಲಿಸುವಾಗ ಉದಾರವಾದಿ ಚರಿತ್ರೆ ಲೇಖನ ಪ್ರಮುಖವಾಗಿ ಕಂಡು ಬರುತ್ತದೆ. ಇದು ರಾಜಕೇಂದ್ರಿತ ಎನ್ನುವುದಕ್ಕಿಂತಲೂ ಮೇಲ್ವರ್ಗದ ವ್ಯವಸ್ಥೆಯ ಪರವಾಗಿ ಹಾಗೂ ಊಳಿಗಮಾನ್ಯ ಚಿಂತನೆಗಳಿಂದ ಕೂಡಿರುತ್ತದೆ. ವಿವಿಧ ರಾಜ್ಯ ಹಾಗೂ ಭಾಷೆಗಳಿಗೆ ಸಂಬಂಧಿಸಿದ ಅರಸು ಮನೆತನಗಳು ಪರಸ್ಪರ ನಡೆಸುವ ಹೋರಾಟಗಳು, ಒಪ್ಪಂದಗಳು, ವೈವಾಹಿಕ ಸಂಬಂಧಗಳು ಇಂಥ ಚರಿತ್ರೆಕಾರರಿಗೆ ಕುತೂಹಲಕಾರಿ ಘಟನೆಗಳಾಗಿ ಕಂಡುಬರುತ್ತವೆ. ಅದೇ ರೀತಿ ತಾವು ಪ್ರತಿನಿಧಿಸುತ್ತಿರುವ ರಾಜ್ಯ, ದೇಶ ಮತ್ತು ಭಾಷೆಗಳ ಪರವಾಗಿಯೇ ಈ ಚರಿತ್ರೆಕಾರರು ವಕಾಲತು ನಡೆಸುತ್ತಿರುತ್ತಾರೆ. ಇವರಲ್ಲಿ ಮುಕ್ತ ಮನಸ್ಸಾಗಲಿ, ಚರಿತ್ರೆಯನ್ನು ನೋಡುವ ವಿಶಾಲ ದೃಷ್ಟಿಕೋನವಾಗಲಿ ಇರುವುದಿಲ್ಲ. ಇಂಥ ಸಂದರ್ಭಗಳಲ್ಲಿ ಚರಿತ್ರೆಯು ಪೂರ್ವಗ್ರಹಿತ ಕಲ್ಪನೆಗಳ ಪ್ರತಿಪಾದನೆಗೆ ವೇದಿಕೆಯಾಗಿ ಮಾರ್ಪಡುತ್ತದೆ.

ಶಾಸನಗಳು, ಲಿಖಿತಕಾವ್ಯಗಳು ಮತ್ತು ಸ್ಮಾರಕಗಳು ಅರಸ ಕೇಂದ್ರೀತ ವಿವರಗಳನ್ನಷ್ಟೇ ಹೊಂದಿರುತ್ತದೆ ಎನ್ನುವುದು ತಪ್ಪು ಅಭಿಪ್ರಾಯ. ಅರಸನ ಅಥವಾ ರಾಜಕೀಯ ಚರಿತ್ರೆಯನ್ನು ರಚಿಸುವವರಿಗೆ ಈ ಆಕರಗಳಲ್ಲಿ ರಾಜಕೀಯ ವಿವರಗಳಷ್ಟೇ ಕಂಡುಬರುತ್ತವೆ. ಇನ್ನುಳಿದ ವಿಚಾರಗಳು ಅಪ್ರಸ್ತುತವೆನಿಸುತ್ತವೆ, ಅಥವಾ ಅವುಗಳನ್ನೂ ರಾಜಕೀಯ ದೃಷ್ಟಿಯಿಂದಲೇ ನೋಡಲಾಗುತ್ತದೆ. ಖಚಿತವಾದ ಸೈದ್ಧಾಂತಿಕ ನಿಲುವುಗಳು ಇಲ್ಲದಿರುವಾಗ ಇಂಥ ತಪ್ಪುಗಳಾಗುವುದು ಸಹಜ. ಸ್ಮಾರಕಗಳನ್ನು ಅಧಯ್ಯನ ನಡೆಸುವ ಕಲಾ ಚರಿತ್ರೆಕಾರರು ಪ್ರಭುತ್ವದ ಸ್ಮಾರಕಗಳಿಗಷ್ಟೇ ತಮ್ಮ ಅಧಯ್ಯನವನ್ನು ಸೀಮಿತಗೊಳಿಸಿಕೊಂಡಿರುತ್ತಾರೆ. ಪ್ರಭುತ್ವದ ಸ್ಮಾರಕಗಳನ್ನು ಕಲೆ, ವಾಸ್ತುಶಿಲ್ಪ ಮತ್ತು ಮೂರ್ತಿಶಿಲ್ಪದ ಹಿನ್ನೆಲೆಯಿಂದಷ್ಟೇ ಅಧ್ಯಯನ ನಡೆಸಲಾಗುತ್ತದೆಯೇ ಹೊರತು ಅವುಗಳನ್ನು ಕಟ್ಟಿದವರ ಹಿನ್ನೆಲೆಯಿಂದಲ್ಲ. ಸ್ಮಾರಕಗಳನ್ನು ಕಟ್ಟಿದ ಕಲಾವಿದರು ರಾಜಪ್ರಭುತ್ವದ ಸಂದರ್ಭದಲ್ಲಿ ನಿರ್ಲಕ್ಷ್ಯಕ್ಕೆ ಒಳಪಟ್ಟಂತೆ ಚರಿತ್ರೆ ಬರವಣಿಗೆಯಲ್ಲೂ ನಿರ್ಲಕ್ಷ್ಯಕ್ಕೆ ಒಳಗಾಗಬೇಕಾಯಿತು. ಸ್ಮಾರಕಗಳಂತೆ ಶಾಸನಗಳಲ್ಲೂ ರಾಜಕೀಯೇತರ ಸಾಮಾಗ್ರಿಗಳು ದೊರಕುವುದಿಲ್ಲ ಎನ್ನುವ ವಾದವಿದೆ. ಮೇಲ್ನೋಟಕ್ಕೆ ಈ ವಾದ ನಿಜವೆನಿಸಿದರೂ ಶಾಸನಗಳನ್ನು ಸಂಸ್ಕೃತಿ ಅಧ್ಯಯನಕ್ಕೆ ಬಳಸಿಕೊಂಡಾಗ ಸಿಗುವ ಚಿತ್ರಣವೇ ಬೇರೆ. ಶಾಸನಗಳನ್ನು ರಾಜಪ್ರಭುತ್ವದ ವೈಭವೀಕರಣಕ್ಕಷ್ಟೇ ಬಳಸಿಕೊಳ್ಳಬೇಕು ಎನ್ನುವ ನಿಯಮವೇನೂ ಇಲ್ಲ. ಸಾಮಾಜಿಕ ಮತ್ತು ಆರ್ಥಿಕಚರಿತ್ರೆಯನ್ನು ನಿರ್ಮಿಸುವಷ್ಟು ಸಾಮಾಗ್ರಿಗಳನ್ನು ಶಾಸನಗಳು ಒಳಗೊಂಡಿರುತ್ತವೆ. ಅದೇ ರೀತಿ ಆಯಾ ರಾಜವಂಶಗಳ ಕಾಲದ ಜನತೆಯ ಬದುಕಿನ ಸ್ಥೂಲ ಪರಿಚಯವನ್ನೂ ಮಾಡಿಕೊಡುತ್ತವೆ. ಇದರಿಂದಾಗಿ ರಾಜಪ್ರಭುತ್ವದ ಧೋರಣೆಗಳನ್ನು ವೈಭವೀಕರಿಸುವುದಕ್ಕಷ್ಟೇ ಅಲ್ಲದೆ ಖಂಡಿಸುವುದಕ್ಕೂ ಶಾಸನಗಳನ್ನು ಮಾಧ್ಯಮವನ್ನಾಗಿ ಬಳಸಿಕೊಳ್ಳಬಹುದು. ಆದರೆ ಶಾಸನಗಳು ಮಾಹಿತಿ ಒದಗಿಸುವ ಮಾಧ್ಯಮಗಳು ಎಂದಷ್ಟೇ ಪರಿಗಣಿಸಬೇಕೇ ಹೊರತು ಅವುಗಳ ವೈಭವೀಕರಣ ನಡೆಸಬಾರದು.

ರಾಷ್ಟ್ರಕೂಟರಿಂದ ಹೊಯ್ಸಳರ ಆನತಿಯವರೆಗಿನ ಕಾಲಾವಧಿಯಲ್ಲಿ ರಚನೆಗೊಂಡ ಅಸಂಖ್ಯಾತ ಸಾಹಿತ್ಯ ಕೃತಿಗಳ ಕುರಿತು ಏಕಪಕ್ಷೀಯ ಧೋರಣೆಯನ್ನು ತಳೆಯುವುದು ಸಾಧ್ಯವಾಗುವುದಿಲ್ಲ. ಸಾಹಿತ್ಯಿಕ ಆಕರಗಳನ್ನು ಕಲ್ಪಿತ, ಉತ್ಪ್ರೇಕ್ಷಿತ ಎಂಬುದಾಗಿ ನಿರಾಕರಿಸಲು ಬರುವುದಿಲ್ಲ. ಕಲ್ಪನೆ, ಉತ್ಪ್ರೇಕ್ಷೆಗಳು ಸಾಹಿತ್ಯದಲ್ಲಿ ಸಹಜವಾಗಿಯೇ ಇರುತ್ತವಾದರೂ ಚರಿತ್ರೆಕಾರ ಅವುಗಳಲ್ಲಿರುವ ವಾಸ್ತವ ಸಂಗತಿಗಳನ್ನು ಪತ್ತೆಹಚ್ಚಬೇಕಾಗುತ್ತದೆ. ಪಂಪ, ರನ್ನ, ಪೊನ್ನ, ದುರ್ಗಸಿಂಹ, ಬ್ರಹ್ಮಶಿವ, ಮಲ್ಲಿಕಾರ್ಜುನ, ಬಿಲ್ಲಣ, ವಿಜ್ಞಾನೇಶ್ವರ ಮುಂತಾದವರ ಕೃತಿಗಳಲ್ಲಿ ಕೇವಲ ರಾಜಕೀಯ ಚರಿತ್ರೆಯಷ್ಟೇ ತುಂಬಿಕೊಂಡಿಲ್ಲ. ಈ ಕೃತಿಗಳನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಿದಾಗ ರಾಜಕೀಯಕ್ಕಿಂತ ಸಾಧ್ಯ. ವಚನ ಸಾಹಿತ್ಯವನ್ನು ಬಿಜ್ಜಳ ಮತ್ತು ಬಸವೇಶ್ವರರ ರಾಜಕೀಯ ಅಧಿಕಾರ, ವೈಮನಸ್ಸು ಮುಂತಾದವುಗಳ ಹಿನ್ನೆಲೆಯಿಂದ ನೋಡಿದಾಗ ಹಾಗೂ ಅದಕ್ಕಿಂತ ಭಿನ್ನವಾಗಿ ಆ ಕಾಲಾವಧಿಯ ಧಾರ್ಮಿಕ ಆಂದೋಲನದ ಮಾಧ್ಯಮವನ್ನಾಗಿ ನೋಡಿದಾಗ ಸಿಗುವ ಚಿತ್ರಣ ಬೇರೆ ಬೇರೆಯದ್ದೇ ಆಗಿರುತ್ತದೆ. ಸಾಹಿತ್ಯಿಕ ಕೃತಿಗಳ ರಚನೆಗೊಳ್ಳುವಾಗ ಆಯಾ ಕಾಲದಲ್ಲಿ ಪ್ರಧಾನವಾಗಿದ್ದ ವ್ಯವಸ್ಥೆಯೊಂದಿಗೆ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತವೆ ಎನ್ನುವುದು ನಿಜ. ಆದರೆ ಆ ಕಾರಣಕ್ಕಾಗಿಯೇ ಅವುಗಳನ್ನು ಸಂಸ್ಕೃತಿ ಚರಿತ್ರೆಯ ನಿರ್ಮಾಣದ ಸಂದರ್ಭದಲ್ಲಿ ನಿರ್ಲಕ್ಷಿಸಲು ಸಾಧ್ಯವಾಗುವುದಿಲ್ಲ. ಯಾವುದೇ ಒಂದು ಕೃತಿಯನ್ನು ಅದು ರಚನೆಗೊಂಡ ಕಾಲಾವಧಿಯ ಸಾಮಾಜಿಕ ಚೌಕಟ್ಟಿನೊಳಗೆ ಇಟ್ಟು ಅಧ್ಯಯನ ನಡೆಸಬೇಕಾಗುತ್ತದೆ.

ಲಿಖಿತ ಆಕರಗಳನ್ನು ಆಳುವ ವರ್ಗದ ಚರಿತ್ರೆ ರಚನೆಗೆ ಸೀಮಿತಗೊಳಿಸಿಕೊಂಡಂತೆ, ಮೌಖಿಕ ಆಕರಗಳನ್ನು ಜನಪದರ ಚರಿತ್ರೆ ರಚನೆಗೆ ಸೀಮಿತಗೊಳಿಸಿಕೊಳ್ಳಲಾಗಿದೆ. ಆದರೆ ಲಿಖಿತ ಆಕರಗಳಲ್ಲಿ ಜನಪದರ ಕುರಿತ ವಿವರಣೆಗಳಿರುತ್ತವೆ ಹಾಗೂ ಮೌಖಿಕ ಆಕರಗಳಲ್ಲಿ ಆಳುವ ವರ್ಗದ ಕುರಿತಾದ ಮಾಹಿತಿಯೂ ಇರುತ್ತದೆ. ಈ ಮಾಹಿತಿಗಳು ಆಯಾ ಆಕರಗಳಲ್ಲಿ ಪ್ರಧಾನವಾಗಿರುವುದಿಲ್ಲ ಎನ್ನುವ ಕಾರಣಕ್ಕಾಗಿ ಅವುಗಳನ್ನು ಹೊರಗಿಡುವುದು ತಪ್ಪು ವಿಧಾನ. ಈ ಕಾರಣಗಳಿಂದಾಗಿ ಸಾಹಿತ್ಯಿಕ ಆಕರಗಳನ್ನು (ಲಿಖಿತ ಅಥವಾ ಅಲಿಖಿತ) ಚರಿತ್ರೆ ರಚನೆಗೆ ಬಳಸಿಕೊಳ್ಳುವಾಗ ಚರಿತ್ರೆಕಾರ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಸಾಹಿತ್ಯವಾಗಲಿ ಅಥವಾ ಚರಿತ್ರೆಯಾಗಲಿ ಯಾವ ರೀತಿಯ ಸತ್ಯವನ್ನು, ಯಾರಿಗೆ ಅನುಕೂಲವಾಗುವ ಸತ್ಯವನ್ನು ಕಟ್ಟುತ್ತಾ ಇರುತ್ತವೆ ಎನ್ನುವ ಮೂಲಭೂತ ಪ್ರಶ್ನೆಯೊಂದಿಗೆ ಅಧ್ಯಯನಕಾರ ಅಧ್ಯಯನ ನಡೆಸಿದಾಗ ಮಾತ್ರ ಸ್ಪಷ್ಟ ತೀರ್ಮಾನಗಳು ಹೊರಬರಲು ಸಾಧ್ಯ. ಯಾವುದೋ ಒಂದು ಮಾದರಿಯನ್ನು ಇಟ್ಟುಕೊಂಡು ಸಾಹಿತ್ಯವನ್ನಾಗಲಿ ಅಥವಾ ಚರಿತ್ರೆಯನ್ನಾಗಲಿ ಅಧ್ಯಯನ ನಡೆಸಲು ಸಾಧ್ಯವಾಗುವುದಿಲ್ಲ. ಸಾಹಿತ್ಯವಾಗಲಿ ಅಥವಾ ಚರಿತ್ರೆಯನ್ನಾಗಲಿ ಅಧ್ಯಯನ ನಡೆಸಲು ಸಾಧ್ಯವಾಗುವುದಿಲ್ಲ. ಸಾಹಿತ್ಯವಾಗಲಿ ಅಥವಾ ಚರಿತ್ರೆಯಾಗಲಿ ಅನೇಕ ಬಗೆಗಳನ್ನು ಹೊಂದಿರುತ್ತವೆ ಹಾಗೂ ಅವು ಕಾಲದಿಂದ ಕಾಲಕ್ಕೆ ಭಿನ್ನ ರೀತಿಯಲ್ಲಿ ಸಂರಚನೆಗೊಳ್ಳುತ್ತಿರುತ್ತವೆ. ಈ ಸೂಕ್ಷ್ಮತೆಗಳು ಚರಿತ್ರೆಕಾರನಿಗೆ ಇದ್ದಾಗ ಮಾತ್ರ ಯಾವುದೇ ಒಂದು ಅವಧಿಯ ಚರಿತ್ರೆಯನ್ನು ಸಮರ್ಥವಾಗಿ ಮತ್ತು ಸಮಗ್ರವಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ.

ಪ್ರಸ್ತುತ ಕೃತಿಯಲ್ಲಿ ರಾಷ್ಟ್ರಕೂಟರಿಂದ ಹೊಯ್ಸಳರ ಅವನತಿಯವರೆಗಿನ ಕಾಲಾವಧಿಯಲ್ಲಿ ಅಸ್ತಿತ್ವದಲ್ಲಿದ್ದ ಕೃಷಿ ವ್ಯವಸ್ಥೆ, ಉತ್ಪದನಾ ವ್ಯವಸ್ಥೆ, ಸಮಾಜದ ರಚನೆ, ನಗರ ವ್ಯವಸ್ಥೆ, ಅರ್ಪಣಾ ಮರಣ, ಧಾರ್ಮಿಕ ಪ್ರಭುತ್ವ. ಧಾರ್ಮಿಕ ಸಿದ್ಧಾಂತಗಳು ಮತ್ತು ಸ್ಮಾರಕಗಳ ನಿರ್ಮಾಣದ ಕುರಿತಾದ ಚರ್ಚೆಯನ್ನು ಮಾಡಲಾಗಿದೆ. ಇದೊಂದು ಸಂಪೂರ್ಣವಾದ ಅಥವಾ ಸಮಗ್ರವಾದ ಅಧ್ಯಯನವಲ್ಲ. ಚರಿತ್ರೆ ಅಧ್ಯಯನವನ್ನು ಎಂದಿಗೂ ಸಂಪೂರ್ಣವಾಯಿತು ಎಂದು ಹೇಳಲು ಸಾಧ್ಯವಾಗುವುದಿಲ್ಲ. ಪ್ರಸ್ತುತ ಅಧ್ಯಯನವನ್ನು ಸ್ವಲ್ಪಮಟ್ಟಿಗೆ ಭಿನ್ನವಾದ ಅಧ್ಯಯನ ಎಂದಷ್ಟೇ ಹೇಳಬಹುದಾಗಿದೆ. ಏಕೆಂದರೆ ಈ ಅಧ್ಯಯನದಲ್ಲಿ ರಾಜರ ಚರಿತ್ರೆಯನ್ನು ಅಥವಾ ರಾಜಕೀಯ ಚರಿತ್ರೆಯನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ. ರಾಜರ ಚರಿತ್ರೆಯನ್ನೇ ನಿರ್ಮಿಸುವ ತುರ್ತು ಇಂದಿನ ಸಂದರ್ಭದಲ್ಲಿ ಇಲ್ಲ. ಚರಿತ್ರೆಯನ್ನು ವಿಭಿನ್ನ ದೃಷ್ಟಿಕೋನಗಳಿಂದ, ಸೈದ್ಧಾಂತಿಕ ಹಿನ್ನೆಲೆಗಳಿಂದ ನೋಡುತ್ತಿರುವ ಇಂದಿನ ಸಂದರ್ಭದಲ್ಲಿ ಯಾವ ಅಧ್ಯಯನ ವಿಧಾನ ಸೂಕ್ತವೋ ಅದನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ತಪ್ಪಿಲ್ಲ. ಚರಿತ್ರೆಯನ್ನು ಜನರ ಚರಿತ್ರೆಯನ್ನಾಗಿ ನೋಡುವ ವಿಧಾನವನ್ನು ಈ ಅಧ್ಯಯನದಲ್ಲಿ ಅಳವಡಿಸಿಕೊಳ್ಳಲಾಗಿದೆ. ಆದರೆ ಮೌಖಿಕ ಆಕರಗಳನ್ನು ಹೆಚ್ಚಾಗಿ ಬಳಸಿಕೊಳ್ಳದೇ ಇರುವುದು ಒಂದು ಕೊರತೆಯಾಗಿಯೂ ಕಂಡುಬರುವ ಸಾಧ್ಯತೆ ಇದೆ. ಹೆಚ್ಚಿನ ಮೌಖಿಕ ಆಕರಗಳ ಖಚಿತ ಚಾರಿತ್ರಿಕ ಹಿನ್ನೆಲೆ ಗೊತ್ತಿಲ್ಲದೇ ಇರುವುದರಿಂದ ಅವುಗಳನ್ನು ಕ್ರಿ.ಶ. ೮ ರಿಂದ ೧೪ ನೆಯ ಶತಮಾನಗಳ ನಡುವಣ ಅವಧಿಗೆ ತುರುಕಿಸಲು ಸಾಧ್ಯವಾಗುವುದಿಲ್ಲ. ಲಿಖಿತ ಆಕರಗಳು, ಶಾಸನಗಳು ಮತ್ತು ಸ್ಮಾರಕಗಳಲ್ಲಿ ಕಂಡುಬರುವ ರಾಜಕೀಯೇತರ ವಿವರಗಳನ್ನು ಪ್ರಮುಖವಾಗಿ ಆಧಾರವನ್ನಾಗಿಟ್ಟುಕೊಂಡು ಈ ಕೃತಿಯನ್ನು ರಚಿಸಲಾಗಿದೆ.

ಚರಿತ್ರೆ ಹಳೆಯದು, ಅದು ಹಳೆಯದರ ಅಧ್ಯಯನ ಎನ್ನುವ ಪ್ರಚಲಿತದಲ್ಲಿರುವ ವ್ಯಾಖ್ಯಾನವೊಂದಿದೆ. ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಚರಿತ್ರೆ ಹಳೆಯದಲ್ಲ, ಅದು ಸಮಕಾಲೀನ ಎನ್ನುವ ಅಂಶ ಸ್ಪಷ್ಟವಾಗುತ್ತದೆ. ಇಂದು ನಾವು ಹೆಸರಿಸುವ ಶಾಸನಗಳು, ಸಾಹಿತ್ಯ, ಸ್ಮಾರಕಗಳು ಮುಂತಾದವು ಆಯಾ ಚಾರಿತ್ರಿಕ ಸಂದರ್ಭದ ಸಮಕಾಲೀನ ಆಕರಗಳು. ಇಂದು ಚರಿತ್ರೆಕಾರ ಅವುಗಳ ಪುನರ್ವಿಮರ್ಶೆ ಮಾಡುವ, ಬೇರೆ ಬೇರೆ ದೃಷ್ಟಿಕೋನಗಳಿಂದ ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾನೆ. ಇದು ನಿರಂತರ ನಡೆಯುವ ಪ್ರಕ್ರಿಯೆಯಾಗಿದ್ದು ಇದಕ್ಕೆ ಭೂತ, ವರ್ತಮಾನ, ಭವಿಷ್ಯತೆ ಎನ್ನುವ ಗಡಿಗಳು ಇರುವುದಿಲ್ಲ. ಚರಿತ್ರೆ ಪ್ರತಿಯೊಂದು ಅವಧಿಯಲ್ಲಿಯೂ ನಿರ್ಮಾಣಗೊಳ್ಳುತ್ತಿರುತ್ತದೆ ಮತ್ತು ಪುನರ್ ನಿರ್ಮಾಣಗೊಳ್ಳುತ್ತಿರುತ್ತದೆ. ಚರಿತ್ರೆಯ ಪುನರ್‌ರಚನೆಯಲ್ಲಿ ಪ್ರಮುಖವಾದದ್ದು ಚಾರಿತ್ರಿಕ ಘಟನೆಗಳು ಮತ್ತು ಚರೆತ್ರೆಕಾರ. ಚರಿತ್ರೆಕಾರ ಚಾರಿತ್ರಿಕ ಘಟನೆಗಳ ಕುರಿತು ಅಧ್ಯಯನ ನಡೆಸುವಾದ ತಾನು ಜೀವಿಸುತ್ತಿರುವ ಕಾಲದ ಜನಜೀವನ ಮೌಲ್ಯಗಳಿಂದ ಪ್ರಭಾವಿತನಾಗಿರುತ್ತಾನೆ. ಇದರಿಂದ ಚರಿತ್ರೆ ವಿಶ್ಲೇಷಣೆಯಲ್ಲಿ ಕೆಲವೊಂದು ತಪ್ಪುಗಳಾಗುವುದು ಸಹಜ. ಘಟನೆಗಳು ಘಟಿಸಿದ ಅವಧಿಗೂ ಚರಿತ್ರೆಕಾರ ಅವುಗಳ ಕುರಿತು ವಿಶ್ಲೇಷಣೆ ನಡೆಸುವ ಅವಧಿಗೂ ಹಲವಾರು ಶತಮಾನಗಳ ಅಂತರವಿರುತ್ತದೆ. ಆದರೆ ಕುರಿತು ವಿಶ್ಲೇಷಣೆ ನಡೆಸುವ ಅವಧಿಗೂ ಹಲವಾರು ಶತಮಾನಗಳ ಅಂತರವಿರುತ್ತದೆ. ಆದರೆ ಮಾನವನ ಬದುಕಿನ ಸಮಸ್ಯೆಗಳು ಎಲ್ಲ ಕಾಲಕ್ಕೂ ಮುಖ್ಯವಾದ ಸಮಸ್ಯೆಗಳೇ ಆಗಿರುತ್ತವೆ. ಅಧಿಕಾರ, ಧರ್ಮ, ಸವಲತ್ತು, ಜಾತಿ, ಶೋಷಣೆ, ಯುದ್ಧ, ಸೈನ್ಯ ಇವೆಲ್ಲವೂ ಚರಿತ್ರೆ ಯುದ್ದಕ್ಕೂ ಕಂಡುಬರುವ ಸಂಗತಿಗಳಾಗಿವೆ. ಇವುಗಳನ್ನು ಯಾವುದೋ ಒಂದು ರಾಜವಂಶದ ಆಳ್ವಿಕೆಗೆ ಸಂಬಂಧಿಸಿದ್ದು ಎಂಬುದಾಗಿ ಹೇಳಲು ಸಾಧ್ಯವಾಗುವುದಿಲ್ಲ. ಏಕೆಂದರೆ ಇವು ಚರಿತ್ರೆಯ ಎಲ್ಲ ಕಾಲಾವಧಿಯಲ್ಲಿಯೂ ಕಂಡುಬರುತ್ತವೆ.

ಚರಿತ್ರೆ ಎನ್ನುವುದು ಆಗಿಹೋದ ಘಟನೆಗಳ ನಿರ್ವಿವಾದವಾದ ವರದಿ ಎನ್ನುವುದು ಚರಿತ್ರೆಯ ಏಕಸ್ವಾಮ್ಯತ್ವವನ್ನು ಸೂಚಿಸುತ್ತದೆ. ಅರಸಕೇಂದ್ರಿತ ಚರಿತ್ರೆ ಈ ಹಿನ್ನೆಲೆಯಿಂದಲೇ ರೂಪುಗೊಂಡಿರುವುದು. ಚರಿತ್ರೆಯ ಈ ಮಾದರಿಯನ್ನು ಬೆಂಬಲಿಸುವ ಚರಿತ್ರೆಕಾರರ ಪ್ರಕಾರ ಚರಿತ್ರೆ ಎನ್ನುವುದು ಪೂರ್ಣವಾಗಿ ಸಾಬೀತಾದ ಹಾಗೂ ಯಾರೂ ಪ್ರಶ್ನಿಸಲಾಗದ ಪರಮ ಸತ್ಯದ ಸಂಗತಿ. ಚರಿತ್ರೆ ಬರವಣಿಗೆಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಸಂಶೋಧನೆಗಳು ಚರಿತ್ರೆಯ ಸರಳರೇಖಾತ್ಮಕ ನಿರೂಪಣೆಯನ್ನು ಪ್ರಶ್ನಿಸುತ್ತಿವೆ. ಆಗಿಹೋಗಿದೆ ಎನ್ನಲಾದ ಘಟನೆಗಳನ್ನು ಹೊಸ ದೃಷ್ಟಿಕೋನದಿಂದ ನೋಡಿ ವಿಶ್ಲೇಷಿಸುವ ಹಾಗೂ ಆ ಮೂಲಕ ಹೊಸ ವಿಚಾರಗಳನ್ನು ಕಂಡುಕೊಳ್ಳುವ ಪ್ರಯತ್ನ ಇತ್ತೀಚಿನ ಚರಿತ್ರೆ ಸಂಶೋಧನೆಯದ್ದು. ಪ್ರತಿಯೊಂದು ಘಟನೆಯೂ ಬೇರೆ ಬೇರೆ ರೀತಿಯ ಅರ್ಥದ ಸಾಧ್ಯತೆಗಳನ್ನು ಹೊಂದಿರುತ್ತದೆ. ಅವುಗಳನ್ನು ಚರಿತ್ರೆಕಾರ ಹೇಗೆ ಸಮರ್ಪಕವಾಗಿ ಅರ್ಥಮಾಡಿಕೊಳ್ಳಬೇಕು ಹಾಗೂ ಅವುಗಳಿಂದ ಯಾವ ಸಂದೇಶಗಳನ್ನು ಪಡೆದುಕೊಳ್ಳಬಹುದು ಎನ್ನುವುದನ್ನು ಅರಿತುಕೊಳ್ಳುವ ಜವಾಬ್ದಾರಿಯನ್ನು ಚರಿತ್ರೆ ಚರಿತ್ರೆಕಾರನಿಗೆ ವಹಿಸುತ್ತದೆ. ಪ್ರಸ್ತುತ ಕೃತಿಯ ಪ್ರತಿಯೊಂದು ಅಧ್ಯಾಯದಲ್ಲೂ ಚರಿತ್ರೆಯ ಈ ಸೂಕ್ಷ್ಮಗಳನ್ನು ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡಲಾಗಿದೆ. ರಾಜಪ್ರಭುತ್ವ ಮತ್ತು ಧಾರ್ಮಿಕ ಪ್ರಭುತ್ವಗಳನ್ನು ಸಮಾಜವನ್ನು ಯಾವ ರೀತಿಯಲ್ಲಿ ಅಧೀನದಲ್ಲಿಟ್ಟು ಕೊಂಡಿದ್ದವು ಹಾಗೂ ಅಂಥ ಸಂದರ್ಭದಲ್ಲೂ ಸಮಾಜ ಯಾವ ರೀತಿಯ ಪರಿವರ್ತನೆಗಳಿಗೆ ಒಳಗಾಗುತ್ತಿತ್ತು ಎನ್ನುವ ಎರಡು ಪ್ರಮುಖ ವಿಚಾರಗಳಿಗೆ ಈ ಅಧ್ಯಯನದಲ್ಲಿ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಇದು ಚರಿತ್ರೆಯನ್ನು ಜನರ ಚರಿತ್ರೆಯನ್ನಾಗಿ ವಿಶ್ಲೇಷಿಸುವ ಪ್ರಯತ್ನವಾಗಿದೆ. ಚರಿತ್ರೆಯ ಕುರಿತ ಏಕಪಕ್ಷೀಯ ಧೋರಣೆಗಳನ್ನು ಹಾಗೂ ಅವುಗಳ ಹಿಂದಿರುವ ಸಾಂಸ್ಕೃತಿಕ ರಾಜಕೀಯವನ್ನು ಅರ್ಥೈಸಿಕೊಳ್ಳಲು ಈ ಪ್ರಯತ್ನ ಅನಿವಾರ್ಯವಾಗಿದೆ.