ಚರಿತ್ರೆ ಎಂದರೇನು ಎನ್ನುವ ಪ್ರಶ್ನೆಗೆ ಉತ್ತರವಾಗಿ ವಿಭಿನ್ನ ನೆಲೆಗಳಿಂದ ಕೂಡಿದ ನೂರಾರು ವ್ಯಾಖ್ಯಾನಗಳು ಹುಟ್ಟಿಕೊಂಡವು. ಆದರೆ ಸಾಮಾನ್ಯವಾಗಿ ಚರಿತ್ರೆಯನ್ನು ಅರಸು ಮನೆತನಗಳಿಗಷ್ಟೇ ಸೀಮಿತಗೊಳಿಸಿ ಅದೊಂದು ನಡೆದು ಹೋದ ಘಟನೆ ಎನ್ನುವ ತೀರ್ಮಾನವನ್ನು ಕೊಡುವ ಅಧ್ಯಯನಗಳ ಸಂಖ್ಯೆಯೇ ಹೆಚ್ಚಿನದು. ರಾಜ್ಯವನ್ನು ರಾಜಮನೆತನದ ಖಾಸಗಿ ಚಟುವಟಿಕೆ ಎಂಬರ್ಥದಲ್ಲಿ ನೋಡಲಾಯಿತೇ ಹೊರತು ಸಾಮಾಜಿಕ ಪ್ರಕ್ರಿಯೆಯ ಸಾವಯವ ಅಂಗವನ್ನಾಗಿ ನೋಡಲಿಲ್ಲ. ರಾಜಕೀಯ ಎಂಬುದನ್ನು ಸಾಮಾಜಿಕ ಅಧಿಕಾರ ಹಂಚಿಕೆಯ ಹಾಗೂ ಗಳಿಕೆಯ ವ್ಯವಸ್ಥೆ ಎಂಬುದಾಗಿ ತಿಳಿಯದೆ ಕೇವಲ ಸೈನ್ಯ, ಯುದ್ಧ, ರಾಜವಂಶಗಳ ಸಂಬಂಧ ಎಂಬರ್ಥದಲ್ಲಿ ಭಾವಿಸಲಾಯಿತು. ಹೀಗಾಗಿ ಚರಿತ್ರೆಯೆಂಬುದು ರಾಜರ ಚರಿತ್ರೆ ಅಥವಾ ರಾಜಕೀಯ ಚರಿತ್ರೆ ಎನ್ನುವ ಸೀಮಿತ ಅರ್ಥವನ್ನು ಪಡೆದುಕೊಂಡಿತು. ರಾಜ್ಯ ಮತ್ತು ರಾಜ ಇವೆರಡನ್ನೂ ಒಂದೇ ಎನ್ನುವ ಅರ್ಥದಲ್ಲಿ ವ್ಯಾಖ್ಯಾನಿಸಿರುವುದು ಈ ತಪ್ಪುಗಳಿಗೆ ಮೂಲ ಕಾರಣ. ರಾಜ್ಯ ಎನ್ನುವುದು ಒಂದು ನಿರ್ದಿಷ್ಟ ಭೌಗೋಳಿಕ ಸೀಮೆಗೆ ಸಂಬಂಧಿಸಿದ್ದಾಗಿದೆ. ಅದೊಂದು ಆಳ್ವಿಕೆಯ ವ್ಯವಸ್ಥೆಯೂ ಹೌದು. ಅದರಲ್ಲಿ ಅರಸ, ಮಂತ್ರಿ, ಅಧಿಕಾರಿಗಳು, ಪ್ರಜೆಗಳು ಎಲ್ಲರೂ ಇರುತ್ತಾರೆ. ಅವರ ಸಂಬಂಧಗಳು ಪರಸ್ಪರ ಪೂರಕವಾದದ್ದೇ ಆಗಿದೆ. ಅವರೆಲ್ಲರಿಗೂ ಜವಾಬ್ದಾರಿಗಳಿರುತ್ತವೆ. ಅರಸ ಅಥವಾ ಅರಸು ಮನೆತನಗಳ ಚರಿತ್ರೆ ಚರಿತ್ರೆಯ ಒಂದು ಭಾಗ ಮಾತ್ರ. ಅದೇ ಚರಿತ್ರೆಯಾಗಲು ಸಾಧ್ಯವಿಲ್ಲ. ಆದರೆ ಸಾಮಾನ್ಯವಾಗಿ ಚರಿತ್ರೆ ಎಂದಾಗ ರಾಜನೆಂಬ ವ್ಯಕ್ತಿಕೇಂದ್ರಿತ ಹಾಗೂ ಅವನ ಯುದ್ಧ, ದಿಗ್ವಿಜಯ, ವಂಶಾವಳಿ ಮುಂತಾದ ಬರವಣಿಗೆಗಳು ಪ್ರಧಾನವಾಗಿರುವ ಚಿತ್ರಣವೇ ಕಂಡುಬರುತ್ತದೆ.

ರಾಷ್ಟ್ರಕೂಟರ ಹುಟ್ಟಿನಿಂದ ಹೊಯ್ಸಳರ ಅನವತಿಯವರೆಗಿನ ಕರ್ನಾಟಕ ಚರಿತ್ರೆಯು ಮೇಲಿನ ವಿವರಣೆಗಳಿಗಿಂತ ಹೊರತಾಗಿ ಅಥವಾ ಭಿನ್ನವಾಗಿ ಕಂಡುಬರುವುದಿಲ್ಲ. ಏಕೆಂದರೆ ಈ ಅವಧಿಗೆ ಸಂಬಂಧಿಸಿದಂತೆ ನಿರ್ಮಾಣಗೊಂಡ ಚರಿತ್ರೆಯು ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು ಹಾಗೂ ಹೊಯ್ಸಳರು ಎನ್ನುವ ಮೂರು ಪ್ರಮುಖ ಅರಸು ಮನೆತನಗಳ ಚರಿತ್ರೆಗಷ್ಟೇ ಸೀಮಿತಗೊಂಡಿತು. ಸಾಮಂತ ಅರಸರನ್ನು, ಅಧಿಕರಿ ವರ್ಗದವರನ್ನು ಹಾಗೂ ಪ್ರಜಾವರ್ಗವನ್ನು ಈ ಮೂರು ಅರಸು ಮನೆತನಗಳ ದೃಷ್ಟಿಯಿಂದ ನೋಡಲಾಯಿತು. ಜನಸಾಮಾನ್ಯರ ಬದುಕಿನ ಮೇಲೆ ಹಿರಿಯ ಅರಸು ಮನೆತನಗಳಿಗಿಂತ ಕಿರಿಯ (ಸ್ಥಳೀಯ) ಅರಸು ಮನೆತನಗಳ ರಾಜಕೀಯ ಬದಲಾವಣೆಗಳು ಹೆಚ್ಚಿನ ಪರಿಣಾಮವನ್ನುಂಟು ಮಾಡುತ್ತಿದ್ದವು. ಆದರೆ ಅವುಗಳ ಕುರಿತಾದ ಆಳ ಸಂಶೋಧನೆ ನಡೆದಿಲ್ಲ. ಕರ್ನಾಟಕ ಚರಿತ್ರೆಯಲ್ಲಿ ಅವುಗಳಿಗೆ ನಿರ್ದಿಷ್ಟವಾದ ಚೌಕಟ್ಟನ್ನು ನಿರ್ಮಿಸಿಕೊಡುವ ಪ್ರಯತ್ನಗಳು ಅಷ್ಟಾಗಿ ನಡೆದಿಲ್ಲ. ರಾಜಪ್ರಭುತ್ವದ ವ್ಯವಸ್ಥೆಯಲ್ಲಿ ಕೆಳಸ್ತರದಲ್ಲಿ ಬರುವ ಸ್ಥಾನಿಕ ಪ್ರಭುಗಳು ಪ್ರಜೆಗಳೊಂದಿಗೆ ನೇರ ಮುಖಾಮುಖಿಯಾದಂತವು. ಪ್ರಭುತ್ವದ ದರ್ಪಿಷ್ಟತೆ ಅವುಗಳಿಗೂ ಇತ್ತು. ಆದರೆ ಅಷ್ಟಕ್ಕೇ ಅವುಗಳನ್ನು ಬೃಹತ್ ಅರಸು ಮನೆತನಗಳ ದೃಷ್ಟಿಯಿಂದ ನೋಡಲು ಸಾಧ್ಯವಾಗುವುದಿಲ್ಲ. ಮಹಾಮಂಡಲೇಶ್ವರ, ಮಾಂಡಲಿಕ, ಸಾಮಂತ, ನಾಯಕ ಮುಂತಾದ ಸ್ಥಾನಗಳನ್ನು ಹೊಂದಿದ್ದ ಚಿಕ್ಕ-ಪುಟ್ಟ ಅರಸುಮನೆತನಗಳಿಗೆ ನಿರ್ದಿಷ್ಟವಾದ ಪ್ರದೇಶದ ಆಳ್ವಿಕೆಯ ಜವಾಬ್ದಾರಿಯಿತ್ತು. ಒಟ್ಟಾರೆಯಾಗಿ ರಾಜ್ಯದ ಆಡಳಿತ ಮತ್ತು ಅಭಿವೃದ್ಧಿಯಲ್ಲಿ ಅವು ನಿರ್ಣಾಯಕ ಪಾತ್ರವಹಿಸುತ್ತಿದ್ದವು. ಆದರೆ ಹೆಚ್ಚಿನ ಪ್ರಾದೇಶಿಕ ರಾಜಕೀಯ ಮತ್ತು೮ ಸಾಂಸ್ಕೃತಿಕ ಅಧ್ಯಯನಗಳು ಸ್ಥಾನಿಕ ರಾಜರನ್ನು ವೈಭವೀಕರಿಸಿರುವುದು ಕಂಡುಬರುತ್ತದೆ. ಪ್ರಾದೇಶಿಕ ಚರಿತ್ರೆ ಇಂಥ ಪೂರ್ವಾಗ್ರಹಗಳಿಂದ ತಪ್ಪಿಸಿಕೊಳ್ಳುವುದು ಅತ್ಯಗತ್ಯವಾಗಿದೆ.

ಬೃಹತ್ ಅರಸುಮನೆತನಗಳ ಅಥವಾ ಸಾಮ್ರಾಜ್ಯಗಳ ಚರಿತ್ರೆ ನಿರ್ಮಾಣವೂ ಕೇವಲ ರಾಜಕೀಯ ಚರಿತ್ರೆಗಷ್ಟೇ ಸೀಮಿತಗೊಂಡಿತು. ಅರಸು ಮನೆತನಗಳ ಚರಿತ್ರೆ ಕೇವಲ ರಾಜಕೀಯ ವಿವರಗಳಷ್ಟೇ ಆಗಿರದೆ ಅದು ರಾಜ್ಯ ವ್ಯವಸ್ಥೆಯನ್ನು ಪ್ರತಿನಿಧಿಸುವ ಸಾಂಸ್ಕೃತಿಕ ಅಂಶ. ಹೀಗಾಗಿ ರಾಜ್ಯ ಎನ್ನುವುದು ರಾಜಕೀಯ ವ್ಯವಸ್ಥೆಗಷ್ಟೇ ಆಗಿರದೆ ಸಾಂಸ್ಕೃತಿಕ ನಿರ್ಮಾಣವೂ ಆಗಿತ್ತು. ಇಂಥ ಅಂಶಗಳಿಗೆ ಹೆಚ್ಚಿನ ಒತ್ತನ್ನು ಕೊಟ್ಟು ಅಧ್ಯಯನ ನಡೆಸಿದಾಗ ಮಾತ್ರ ರಾಜ್ಯ, ರಾಜ, ರಾಜಕೀಯ ಎನ್ನುವುದರ ವಿಶಾಲಾರ್ಥ ತಿಳಿದುಬರಲು ಸಾಧ್ಯ. ಹೆಚ್ಚಿನ ಚರಿತ್ರೆ ಗ್ರಂಥಗಳಲ್ಲಿ ಶೇಕಡಾ ಎಪ್ಪತ್ತೈದರಷ್ಟು ಭಾಗ ರಾಜಕೀಯ ಚರಿತ್ರೆಯಿದ್ದು ಇನ್ನುಳಿದ ಭಾಗ ಸಾಮಾಜಿಕ, ಆರ್ಥಿಕ, ಧಾರ್ಮಿಕ ಮುಂತಾದ ವಿವರಗಳಿಗೆ ಮೀಸಲಾಗಿರುತ್ತದೆ. ಇಂಥ ಗ್ರಂಥಗಳಲ್ಲಿ ಸಿಗುವ ಸಾಮಾಜಿಕ, ಆರ್ಥಿಕ, ಧಾರ್ಮಿಕ, ಕಲೆ ಮಾತು ವಾಸ್ತುಶಿಲ್ಪ ಮುಂತಾದ ವಿಚಾರಗಳು ಅರಸಕೇಂದ್ರಿತವಾಗಿರುತ್ತವೆಯೋ ಹೊರತು ಪ್ರಜಾ ಕೇಂದ್ರಿತವಾಗಿರುವುದಿಲ್ಲ. ಈ ಅಂತರಗಳು ಏರ್ಪಡುವುದಕ್ಕೆ ಮೂಲ ಕಾರಣ ಚರಿತ್ರೆಯನ್ನು ಸಂಸ್ಕೃತಿ ಅಧ್ಯಯನವನ್ನಾಗಿ ನೋಡದಿರುವುದು. ಅರಸರ ಚರಿತ್ರೆ ಅಥವಾ ರಾಜಕೀಯ ಚರಿತ್ರೆಯು ಸಂಸ್ಕೃತಿ ಚರಿತ್ರೆಯ ಭಾಗವಾಗಿದ್ದರೂ, ಅವೆರಡೂ ಬೇರೆ ಬೇರೆ ಎಂಬರ್ಥದಲ್ಲಿ ವ್ಯಾಖ್ಯಾನಿಸಲಾಯಿತು. ಚರಿತ್ರೆಯಂತೆ ಸಂಸ್ಕೃತಿಯನ್ನೂ ಸೀಮಿತಾರ್ಥದಲ್ಲಿ ಅರ್ಥೈಸಿಕೊಂಡಿರುವುದು ಈ ತಪ್ಪುಗಳಿಗೆ ಕಾರಣವಾಗಿ ಕಂಡುಬರುತ್ತದೆ.

ಸಂಸ್ಕೃತಿ ಪದ ಈಗಾಗಲೇ ಚರಿತ್ರೆ ಬರವಣಿಗೆಯಲ್ಲಿ ಸಾಕಷ್ಟು ಚರ್ಚೆಗೆ ಒಳಪಟ್ಟಿದೆ. ಅದು ಯಜಮಾನಿಕೆಯ ಸಂಕೇತವಾಗಿ ಬಳಕೆಗೊಂಡಿರುವಂತದ್ದು. ಸಂಸ್ಕೃತ, ಸಂಸ್ಕೃತಿ, ಸುಸಂಸ್ಕೃತ ಮುಂತಾದ ಪದಗಳು ಶ್ರೇಣೀಕೃತ ಸಮಾಜದ ಮೇಲ್‍ಸ್ತರದಲ್ಲಿರುವವರಿಗಷ್ಟೇ ಸಂಬಂಧ ಪಟ್ಟಂತವು ಎನ್ನುವ ನಂಬಿಕೆ ಈಗಲೂ ಇದೆ. ಪ್ರಸ್ತುತ ಅಧ್ಯಯನದಲ್ಲಿ ಸಂಸ್ಕೃತಿ ಪದವನ್ನು ಎಚ್ಚರಿಕೆಯಿಂದ ಬಳಸಲಾಗಿದೆ. ಸಂಸ್ಕೃತಿ ಪದ ವಿಶ್ಲೇಷಣೆಯನ್ನು ಸಾಮಾಜಿಕ ಹಾಗೂ ಆರ್ಥಿಕ ಹಿನ್ನೆಲೆಯಲ್ಲಿ ಮಾಡಲಾಗಿದೆ. ಸಮಾಜದಲ್ಲಿ ವ್ಯಕ್ತಿ, ಸಮುದಾಯಗಳ ಬದುಕು, ಬದುಕಿಗೆ ಅನಿವಾರ್ಯವಾದ ವಿಷಯಗಳೊಂದಿಗಿನ ವ್ಯವಹಾರ, ನಡೆಸಿದ ಹೋರಾಟ ಮುಂತಾದವು ಇಲ್ಲಿ ಚರ್ಚೆಗೊಳಗಾಗುವ ಮುಖ್ಯ ವಸ್ತುಗಳು. ಹೀಗಾಗಿ ಸಂಸ್ಕೃತಿ ಪದವನ್ನು ಯಾವುದೇ ಒಂದು ಸೀಮಿತ ಉದ್ದೇಶಕ್ಕೆ (ಚರಿತ್ರೆಯ ವೈಭವೀಕರಣಕ್ಕೆ ಇಲ್ಲವೇ ಪ್ರತಿಷ್ಠೆಯ ಸಂಕೇತವಾಗಿ) ಇಲ್ಲಿ ಬಳಸಿಕೊಂಡಿಲ್ಲ. ಸಂಸ್ಕೃತಿಯ ಏಕಪಕ್ಷೀಯ ಹಾಗೂ ಸರಳೀಕೃತ ವ್ಯಾಖ್ಯಾನಗಳು ಅಚಾರಿತ್ರಿಕ ವಾದಗಳನ್ನಷ್ಟೇ ಮಂಡಿಸಲು ಸಾಧ್ಯ. ಇದರಿಂದ ಯಾವುದೇ ಪ್ರದೇಶದ ಚರಿತ್ರೆಯ ಸಮಗ್ರ ಅಧ್ಯಯನ ಸಾಧ್ಯವಿಲ್ಲ. ಸಂಸ್ಕೃತಿ ಪದ ಹುಟ್ಟಿಕೊಂಡ ಸಂದರ್ಭ, ಅದು ಬಳಕೆಗೊಂಡ ರೀತಿ, ಸಂಸ್ಕೃತಿ ವ್ಯಾಖ್ಯಾನದೊಳಗೆ ಸೇರಿಕೊಂಡ ವಿಚಾರಗಳು ಚರ್ಚೆಗೆ ಒಳಪಟ್ಟಾಗ ಮಾತ್ರ ಸಂಸ್ಕೃತಿ ಚರಿತ್ರೆಯ ವ್ಯಾಖ್ಯಾನ ಸಾಧ್ಯ.

ಚರಿತ್ರೆ ಬರವಣಿಗೆಯಲ್ಲಿ ಹೆಚ್ಚಾಗಿ ಕಂಡುಬರುವ ಅರಸ ಸಂಸ್ಕೃತಿ, ವೈದಿಕ ಸಂಸ್ಕೃತಿ ಹಾಗೂ ವಸಾಹತು ಸಂಸ್ಕೃತಿ ಎನ್ನುವ ಪದಗಳು ಸೀಮಿತಾರ್ಥವನ್ನು ಪಡೆದುಕೊಳ್ಳುವಂತೆ ಹಾಗೂ ಏಕಮುಖವಾಗಿ ಬೆಳೆಯುವಂತೆ ಒತ್ತಡಗಳನ್ನು ಹೇರಿದವು. ಈ ಪ್ರಕ್ರಿಯೆಯನ್ನು ಅಧಿಕೃತಗೊಳಿಸುವ ಅಥವಾ ಶಾಸನಬದ್ಧಗೊಳಿಸುವ ರೀತಿಯಲ್ಲಿ ಕೃತಿಗಳು ರಚನೆಗೊಂಡವು. ಇಂಥ ಕೃತಿಗಳಲ್ಲಿ ಸ್ಥಳೀಯ ಚರಿತ್ರೆ ಮತ್ತು ಮೌಖಿಕ ಚರಿತ್ರೆ ಸ್ಥಾನವನ್ನು ಪಡೆದುಕೊಳ್ಳಲಿಲ್ಲ. ಚರಿತ್ರೆಯ ಈ ಏಕಮುಖ ಬೆಳವಣಿಗೆಗೆ ಜನಕೇಂದ್ರಿತ ಅಧ್ಯಯನದಿಂದ ಮಾತ್ರ ಕಡಿವಾಣ ಹಾಕಲು ಸಾಧ್ಯ. ಈ ಅಧ್ಯಯನ ಕ್ರಮಕ್ಕೆ ಮೌಖಿಕ ಸಾಹಿತ್ಯ ಹೆಚ್ಚಿನ ಮಟ್ಟಿಗೆ ಸಹಕಾರಿಯಾಗುತ್ತದೆ. ಜನಪದ ಕಥನಗಳನ್ನು ಚಾರಿತ್ರಿಕ ನೆಲೆಯಿಂದ ಪರಿಭಾವಿಸಿಕೊಂಡಾಗ ಮಾತ್ರ ಚರಿತ್ರೆಯನ್ನು ನೋಡುವ ದೃಷ್ಟಿ ಬದಲಾಗಲು ಸಾಧ್ಯ. ರಾಜಪ್ರಭುತ್ವದ ಮಾಧ್ಯಮಗಳಂತಿರುವ ಶಾಸನಗಳು, ಸ್ಮಾರಕಗಳು ಹಾಗೂ ಅನೇಕ ಕಾವ್ಯಗಳಲ್ಲಿ ಜಾನಪದೀಯ ಅಂಶಗಳು ಕಂಡುಬರುತ್ತವಾದರೂ ಅವು ಅರಸ ಕೇಂದ್ರಿತ ಚರಿತ್ರೆಗೆ ಪ್ರವೇಶ ಪಡೆದಿಲ್ಲ. ಮೌಖಿಕ ಆಕರಗಳಂತೆ ಅವು ನಿರ್ಲಕ್ಷ್ಯಕ್ಕೆ ಒಳಪಟ್ಟವು. ಈ ರೀತಿಯಾಗಿ ಅಲಕ್ಷಿತವಾದ ಆಕರಗಳನ್ನು ಒಂದುಗೂಡಿಸಿ ಚರಿತ್ರೆ ನಿರ್ಮಾಣಕ್ಕೆ ಬಳಸಿಕೊಂಡಾಗ ಮಾತ್ರ ಅದೊಂದು ಸಂಸ್ಕೃತಿ ಅಧ್ಯಯನವಾಗಿ ಮಾರ್ಪಡಲು ಸಾಧ್ಯ. ಪ್ರಸ್ತುತ ಅಧ್ಯಯನದಲ್ಲಿ ಶಾಸನಗಳಲ್ಲಿ, ಸ್ಮಾರಕಗಳಲ್ಲಿ, ಕಾವ್ಯಗಳಲ್ಲಿ ಉಲ್ಲೇಖಿತವಾಗಿರುವ ಆದರೆ ಚರಿತ್ರೆ ಬರವಣಿಗೆಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕುಶಲಕರ್ಮಿಗಳು, ಮಹಿಳೆಯರು, ಗ್ರಾಮದೇವತೆಗಳು ಮುಂತಾದ ವಿಚಾರಗಳಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ.

ಚರಿತ್ರೆ ಬರವಣಿಗೆ ಮತ್ತು ವಿಶ್ಲೇಷಣೆಗೆ ಸಂಬಂಧಪಟ್ಟಂತೆ ಅನೇಕ ಪಂಥಗಳು ಹುಟ್ಟಿಕೊಂಡವು. ಅವುಗಳಲ್ಲಿ ಮುಖ್ಯವಾದವುಗಳೆಂದರೆ ವಸಾಹತುಶಾಹಿ ಪಂಥ, ರಾಷ್ಟ್ರೀಯವಾದಿ ಪಂಥ, ಮಾರ್ಕ್ಸ್‌ವಾದಿ ಪಂಥ ಹಾಗೂ ಸಬಾಲ್ಟರ್ನ್ ಪಂಥ. ಸಂಸ್ಕೃತಿ ಚರಿತ್ರೆಯ ಅಧ್ಯಯನದ ಸಂದರ್ಭದಲ್ಲಿ ಈ ಪಂಥಗಳ ಹುಟ್ಟು ಹಾಗೂ ಸೈದ್ಧಾಂತಿಕ ನೆಲೆಗಳ ಕುರಿತ ಚರ್ಚೆ ಅಗತ್ಯವೆನಿಸುತ್ತದೆ. ಈ ಪಂಥಗಳ ಸಿದ್ಧಾಂತಗಳು ಮೇಲ್ನೋಟಕ್ಕೆ ಭಾರತದ ಚರಿತ್ರೆಗೆ ಸಂಬಂಧಿಸಿದಂತೆ ಕಂಡುಬಂದರೂ ಕರ್ನಾಟಕ ಚರಿತ್ರೆ ಇವುಗಳಿಂದ ನೇರವಾಗಿ ಪ್ರಭಾವಿತಗೊಂಡಿದೆ. ಅದರಲ್ಲೂ ಓರಿಯಂಟಲ್ ಮತ್ತು ರಾಷ್ಟ್ರೀಯವಾದಿ ಚಿಂತನೆಗಳ ಹಿನ್ನೆಲೆಯಿಂದ ರಚನೆಗೊಂಡ ಕೃತಿಗಳ ಸಂಖ್ಯೆಯೇ ಹೆಚ್ಚು. ಹದಿನೆಂಟನೆಯ ಶತಮಾನದ ಉತ್ತರಾರ್ಧದಲ್ಲಿ ಚರಿತ್ರೆಯನ್ನು ಕುರಿತ ಆಧುನಿಕ ರೀತಿಯ ಸಂಶೋಧನೆ ಆರಂಭಗೊಂಡಿತು. ಈ ಸಂಶೋಧನೆಯು ಪ್ರಾಚೀನ ಚರಿತ್ರೆಯನ್ನು ವಸ್ತುವನ್ನಾಗಿ ಆಯ್ಕೆ ಮಾಡಿಕೊಂಡಿತು. ಸರ್. ವಿಲಿಯಂ ಜೋನ್ಸ್, ಎಫ್. ಮ್ಯಾಕ್ಸ್‌ಮುಲ್ಲರ್, ಅಲೆಗ್ಸಾಂಡರ್ ಕನ್ನಿಂಗ್‌ಹಾಮ್ ಮುಂತಾದವರು ಈ ಸಂಶೋಧನೆಯ ಪ್ರಮುಖರು. ಇವರು ಪ್ರತಿನಿಧಿಸುವ ಪಂಥವನ್ನು ಓರಿಯಂಟಾಲಿಸ್ಟ್ ಅಥವಾ ಪೌರ್ವಾತ್ಯವಾದ ವಿದ್ವಾಂಸರಿಗೆ ಪೂರ್ವವು ಅಧ್ಯಯನ ಯೋಗ್ಯವಾಗಿ ಕಂಡು ಬಂತು. ಪೌರ್ವಾತ್ಯ ವಾದಿಗಳು ಭಾರತವನ್ನು ಆಧ್ಯಾತ್ಮಿಕ, ಅಲೌಕಿಕ ಚಿಂತನೆಗಳಿಂದ ಕೂಡಿದ ದೇಶ ಎಂಬುದಾಗಿ ಕರೆದುದ್ದಲ್ಲದೆ, ಭಾರತೀಯರಿಗೆ ಚಾರಿತ್ರಿಕ ಪ್ರಜ್ಞೆಯಿಲ್ಲ, ಅವರ ಬದುಕು ಚಲನಶೀಲವಲ್ಲದ್ದು ಎನ್ನುವ ತೀರ್ಮಾನವನ್ನೂ ತೆಗೆದುಕೊಂಡರು. ಇದು ಚರಿತ್ರೆ ನಿರ್ಮಾಣ ಕುರಿತ ಸರಳೀಕೃತ ಹಾಗೂ ಸಾಮಾನ್ಯಿಕೃತ ಸೂತ್ರಗಳಾಗಿ ಕಂಡುಬರುತ್ತದೆ.

ಮಿನ್‍ಸೆಂಟ್ ಸ್ಮಿತ್, ಜೇಮ್ಸ್ ಮಿಲ್, ಲೇನ್‍ಪೂಲ್, ಮಾರ್ಕ್ ವಿಲ್ಕ್ಸ್ ಮುಂತಾದ ಸಾಮ್ರಾಜ್ಯಶಾಹಿ ಚರಿತ್ರೆಕಾರರು ಭಾರತೀಯರು ಸ್ವಯಂಮಾಡಳಿತ ಅನುಭವವಿಲ್ಲದವರು, ಸ್ವಾತಂತ್ರ್ಯಕ್ಕೆ ಅನರ್ಹರು ಎಂಬುದಾಗಿ ಹೇಳಿ, ಬ್ರಿಟಿಷ್ ಆಡಳಿತವನ್ನು ಎತ್ತಿಹಿಡಿಯುವ ಅಥವಾ ಬಲಪಡಿಸುವ ಕೆಲಸವನ್ನು ಮಾಡಿದರು. ಈ ಹಿನ್ನೆಲೆಯನ್ನು ಇಟ್ಟುಕೊಂಡು ನೂರಾರು ಕೃತಿಗಳು ರಚನೆಗೊಂಡವು. ಭಾರತದ ಚರಿತ್ರೆಯನ್ನು ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಎಂಬುದಾಗಿ ವಿಂಗಡನೆ ಮಾಡಿ ಕೋಮುವಾದಿ ಭಾವನೆಗಳು ಮೂಡುವ ಕೆಲಸವನ್ನು ಸಾಮ್ರಾಜ್ಯಶಾಹಿ ಚರಿತ್ರೆಕಾರರು ವ್ಯವಸ್ಥಿತವಾಗಿ ಮಾಡಿದರು. ವಸಾಹತುಶಾಹಿ ಆಳ್ವಿಕೆಗೆ ಈ ರೀತಿಯ ಚರಿತ್ರೆಯ ನಿರ್ಮಾಣದ ಅವಶ್ಯಕತೆ ಇತ್ತು. ಪಶ್ಚಿಮವು ಕೇವಲ ತನ್ನ ಮಿಲಿಟರಿ ಮತ್ತು ಆರ್ಥಿಕ ಶಕ್ತಿಯಿಂದ ಪೂರ್ವವನ್ನು ಹತೋಟಿಯಲ್ಲಿಟ್ಟುಕೊಂಡಿರಲಿಲ್ಲ. ಅದು ಪೂರ್ವದ ಚರಿತ್ರೆ ನಿರ್ಮಾಣವನ್ನು ಒಂದು ಅಸ್ತ್ರವನ್ನಾಗಿ ಬಳಸಿಕೊಂಡಿತು. ಸರ್. ವಿಲಿಯಂ ಜೋನ್ಸ್‌ನು ಶಾಕುಂತಲವನ್ನು ಬಳಸಿಕೊಂಡಾಗ, ಜೇಮ್ಸ್‌ ಮಿಲ್ ಭಾರತದ ಚರಿತ್ರೆಯನ್ನು ಬರೆಯುವಾಗ, ಯಾವನೋ ಅಧಿಕಾರ ಕ್ಷೇತ್ರಕಾರ್ಯ ಮಾಡಿ ವರದಿಯೊಂದನ್ನು ಸಿದ್ಧಪಡಿಸುವಾಗ ಯಾವ ಪೂರ್ವಗ್ರಹಿಕೆಯನ್ನು ಹೊಂದಿರುತ್ತಿದ್ದರು ಎನ್ನುವುದು ಇಲ್ಲಿ ಪ್ರಮುಖ ಪ್ರಶ್ನೆಯಾಗುತ್ತದೆ. ಪೂರ್ವವನ್ನು ಕುರಿತ ಪಶ್ಚಿಮದ ಪೂರ್ವಗ್ರಹಿಕೆ ಅಥವಾ ಪೂರ್ವಾಗ್ರಹ ಪೀಡಿತ ಚಿಂತನೆಯೇ ಈ ಎಲ್ಲ ಅಧ್ಯಯನಗಳ ಸಂದರ್ಭದಲ್ಲೂ ಸಮಾನವಾಗಿ ಕಂಡುಬರುತ್ತದೆ. ಪೌರ್ವಾತ್ಯ ವಾದಿಗಳು ಮತ್ತು ಸಾಮ್ರಾಜಶಾಹಿ ಚರಿತ್ರೆಕಾರರು ತಮ್ಮ ಪೂರ್ವಾಗ್ರಹಿತ ಚಿಂತನೆಗಳನ್ನು ಅನುಷ್ಠಾನಕ್ಕೆ ತರಲು ಪೂರ್ವದ ಚರಿತ್ರೆಯನ್ನು ಮಾಧ್ಯಮವನ್ನಾಗಿ ಬಳಸಿಕೊಂಡರು.

ವಸಾಹತುಶಾಹಿ ಹಿನ್ನೆಲೆಯಿಂದ ರಚನೆಗೊಂಡ ಕೃತಿಗಳು ಹಾಗೂ ಮೂಡಿ ಬಂದ ಭಾವನೆಗಳನ್ನು ಸಮರ್ಥವಾಗಿ ಎದುರಿಸಲು ರಾಷ್ಟ್ರೀಯವಾದಿ ಚರಿತ್ರೆಕಾರರ ಗುಂಪೊಂದು ಸಿದ್ಧವಾಯಿತು. ಆದರೆ ರಾಷ್ಟ್ರೀಯವಾದಿ ಪಂಥವು ಓರಿಯಂಟಾಲಿಸ್ಟ್ ಮತ್ತು ಸಾಮ್ರಾಜ್ಯಶಾಹಿ ಚರಿತ್ರೆಕಾರರನ್ನು ವಿರೋಧಿಸುವ ನೆಪದಲ್ಲಿ ಅವರ ಹಲವಾರು ಅಭಿಪ್ರಾಯಗಳನ್ನು ತನ್ನ ಸಿದ್ಧಾಂತದೊಳಗೆ ಸೇರಿಸಿಕೊಂಡಿತು. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎನ್ನುವ ವರ್ಗೀಕರಣವನ್ನು ರಾಷ್ಟ್ರೀಯವಾದಿ ಚರಿತ್ರೆಕಾರರು ಒಪ್ಪಿಕೊಂಡು ಚರಿತ್ರೆ ನಿರ್ಮಿಸಿದರು. ಪ್ರಭುತ್ವದ ಹಿನ್ನೆಲೆಯಿಂದ ಚರಿತ್ರೆಯನ್ನು ನೋಡುವ ಅಧ್ಯಯನ ವಿಧಾನವನ್ನು ಈ ಪಂಥವು ಅಳವಡಿಸಿಕೊಂಡಿತು. ಇಲ್ಲಿ ಪ್ರಭುತ್ವ ಎಂದಾಗ ಅರಸ-ಮಂತ್ರಿ-ಅಧಿಕಾರಿಗಳ ರಾಜಪ್ರಭುತ್ವ ಹಾಗೂ ದೇವರು-ಬ್ರಾಹ್ಮಣ-ದೇವಾಲಯಗಳ ಧಾರ್ಮಿಕ ಪ್ರಭುತ್ವ ಎನ್ನುವ ಅರ್ಥವನ್ನು ಪಡೆದುಕೊಳ್ಳುತ್ತದೆ. ಈ ಎರಡೂ ಪ್ರಭುತ್ವಗಳ ವೈಭವೀಕರಣ ರಾಷ್ಟ್ರೀಯವಾದಿ ಚರಿತ್ರೆಕಾರರ ಬರವಣಿಗೆಗಳಲ್ಲಿ ಕಂಡುಬರುತ್ತದೆ. ವೈದಿಕ ಧರ್ಮಗ್ರಂಥಗಳನ್ನು ಆಧಾರವನ್ನಾಗಿಟ್ಟುಕೊಂಡು ಚರಿತ್ರೆ ನಿರ್ಮಿಸುವ ಪ್ರಯತ್ನವು ಸಾಂಪ್ರದಾಯಿಕ ಬ್ರಾಹ್ಮಣ ಧರ್ಮವನ್ನು ಇನ್ನಷ್ಟು ಗಟ್ಟಿಗೊಳಿಸಿ ಅದು ಚರಿತ್ರೆ ಬರವಣಿಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವಂತೆ ಮಾಡಿತು.

ಆರ್.ಜಿ. ಮಜುಂದಾರ್, ಹೇಮಚಂದ್ರರಾಯ್ ಚೌಧುರಿ, ಆರ್.ಜಿ.ಭಂಡಾರ್‌ಕರ್, ಕೆ.ಪಿ. ಜಯಸ್ಟಾಲ್, ಕೆ.ಎ.ನೀಲಕಂಠಶಾಸ್ತ್ರಿ, ಎ.ಎಸ್. ಆಲೇಕ್ಟರ್ ಮುಂತಾದ ಚರಿತ್ರೆಕಾರರು ಭಾರತದ ಚರಿತ್ರೆಯನ್ನು ಹೊಸದಾಗಿ ನಿರ್ಮಿಸುವ ಕೆಲಸವನ್ನು ಮಾಡಿದರು. ಕೆ.ಎ. ನೀಲಕಂಠ ಶಾಸ್ತ್ರಿ ಮತ್ತು ಎ.ಎಸ್.ಆಲ್ಟೇಕರ್ ಅವರು ದಕ್ಷಿಣ ಭಾರತದ ಚರಿತ್ರೆ ರಚನೆಯಲ್ಲಿ ತೊಡಗಿದರು. ಇವರೆಲ್ಲರೂ ಹೆಚ್ಚಾಗಿ ಅರಸಕೇಂದ್ರಿತ ಮತ್ತು ಧರ್ಮಕೇಂದ್ರಿತ ಚಿಂತನೆಗಳಿಗೆ ಮಹತ್ವವನ್ನು ಕೊಟ್ಟರು. ಆದರೂ ಪ್ರಾಚೀನ ಮತ್ತು ಮಧ್ಯಕಾಲೀನ ಚರಿತ್ರೆಯ ಅಧ್ಯಯನದ ಸಂದರ್ಭದಲ್ಲಿ ಇವರೆಲ್ಲರ ಬರಹಗಳು ಪರಿಶೀಲನ ಯೋಗ್ಯವಾಗಿ ಕಂಡುಬರುತ್ತವೆ. ಕೆ.ಪಿ.ಜಯಸ್ವಾಲ್ ಅವರು ತಮ್ಮ ‘ಹಿಂದೂ ಪಾಲಿಟಿ’ ಎನ್ನುವ ಗ್ರಂಥದಲ್ಲಿ ಮಂಡಿಸಿದ ಗಣರಾಜ್ಯಗಳ ಕುರಿತಾದ ವಾದ ಗಂಭೀರ ಚರ್ಚೆಗಳಿಗೆ ಅವಕಾಶ ಮಾಡಿಕೊಟ್ಟಿತು. ವಸಾಹತುಶಾಹಿ ಚರಿತ್ರೆಕಾರರು ವಾದಿಸಿದ ನಿರಂಕುಶಪ್ರಭುತ್ವ ಮಾದರಿಯ ಸರಕಾರಕ್ಕೆ ವಿರುದ್ಧವಾಗಿ ಜಯಸ್ಟಾಲ್ ಅವರು ಗಣರಾಜ್ಯಗಳ ಹಾಗೂ ಸ್ವಯಂಮಾಡಳಿತ ಮಾದರಿಯ ಆಡಳಿತ ವ್ಯವಸ್ಥೆಯ ಕುರಿತು ಚರ್ಚೆ ನಡೆಸಿದರು. ಈ ರೀತಿಯ ಬರವಣಿಗೆಗಳು ವಾದ-ಪ್ರತಿವಾದದಿಂದ ಕೂಡಿರುತ್ತಿದ್ದವು. ಇದರ ಪರಿಣಾಮವಾಗಿ ಸ್ಥಳೀಯ ರಾಜವಂಶಗಳ ಅಧ್ಯಯನ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುವಂತಾಯಿತು. ವಸಾಹತುಶಾಹಿ ಚರಿತ್ರೆಕಾರರಿಗೆ ಸ್ಪರ್ಧೆಯನ್ನು ನೀಡುವ ಭರದಲ್ಲಿ ರಾಷ್ಟ್ರೀಯವಾದಿ ಚರಿತ್ರೆಕಾರರು ಚರಿತ್ರೆಯನ್ನು ಅರಸು ಮನೆತನಗಳಿಗಷ್ಟೇ ಸೀಮಿತಗೊಳಿಸಿಕೊಂಡರು. ಹೆಚ್ಚೆಂದರೆ, ಅರಸು ಮನೆತನಗಳೊಂದಿಗೆ ಆಯಾ ಕಾಲದಲ್ಲಿ ಪ್ರಚಾರದಲ್ಲಿದ್ದ ಧರ್ಮಗಳ ಅಧ್ಯಯನವನ್ನು ನಡೆಸಿದರು. ಇವರ ಮುಖ್ಯ ದೌರ್ಬಲ್ಯವೆಂದರೆ, ಭಾರತೀಯ ಸಮಾಜದೊಳಗಿನ ಅಸಂಖ್ಯಾತ ಜಾತಿ / ವರ್ಗಗಳ ಬದುಕನ್ನು ಪರಿಗಣನೆಗೆ ತೆಗೆದುಕೊಳ್ಳದೆ ಇರುವುದು. ಅರಸರು ಮತ್ತು ಧರ್ಮಗಳ ಅಧ್ಯಯನವನ್ನು ನಡೆಸಿದರು. ಇವರ ಮುಖ್ಯ ದೌರ್ಬಲ್ಯವೆಂದರೆ, ಭಾರತೀಯ ಸಮಾಜದೊಳಗಿನ ಅಸಂಖ್ಯಾತ ಜಾತಿ/ವರ್ಗಗಳ ಬದುಕನ್ನು ಪರಿಗಣನೆಗೆ ತೆಗೆದುಕೊಳ್ಳದೆ ಇರುವುದು. ಅರಸರು ಮತ್ತು ಧರ್ಮಗಳ ಕುರಿತಾಗಿ ಸುಲಭವಾಗಿ ಸಿಗುವ ಮಾಹಿತಿಗಳನ್ನಷ್ಟೇ ಇಟ್ಟುಕೊಂಡು ಭವ್ಯ ಸಂಸ್ಕೃತಿಯೊಂದನ್ನು ಚಿತ್ರಿಸುವ ಪ್ರಯತ್ನವನ್ನು ಈ ಪಂಥವು ಮಾಡಿತು. ಈ ರೀತಿಯ ಅಧ್ಯಯನ ವಿಧಾನದಿಂದಾಗಿ ಆದಿವಾಸಿ ಕುಟುಂಬಗಳು, ಬುಡಕಟ್ಟುಗಳು, ಬೇಟೆ ಸಮಾಜ, ಅಲೆಮಾರಿ ಜನಾಂಗಗಳು, ಗ್ರಾಮೀಣ ಜನತೆ ಚರಿತ್ರೆಗೆ ಪ್ರವೇಶ ಪಡೆಯದಂತಾಯಿತು. ಇದರಿಂದಾಗಿ ಜನಪದರ ಬದುಕು, ಸಾಹಿತ್ಯ, ಸಂಪ್ರದಾಯಗಳು ನಿರ್ಲಕ್ಷ್ಯಕ್ಕೆ ಒಳಗಾಗಬೇಕಾಯಿತು.

ಮಾರ್ಕ್ಸ್‌ವಾದಿ ಪಂಥವು ಚರಿತ್ರೆಯನ್ನು ಭಿನ್ನ ರೀತಿಯಲ್ಲಿ ವ್ಯಾಖ್ಯಾನಿಸಿತು. ಚರಿತ್ರೆಯಲ್ಲಾದ ಬದಲಾವಣೆಗಳಿಗೆ ಆಯಾ ಸಂದರ್ಭದ ಉತ್ಪಾದನಾ ವಿಧಾನವೇ ಕಾರಣ ಎಂಬ ವಾದವನ್ನು ಮಾರ್ಕ್ಸ್‌ವಾದಿ ಚರಿತ್ರೆಕಾರರು ಮುಂದಿಟ್ಟರು. ಸಮಾಜ, ಅರ್ಥವ್ಯವಸ್ಥೆ ಹಾಗೂ ಸಂಸ್ಕೃತಿಗಳು ಉತ್ಪಾದನಾ ವ್ಯವಸ್ಥೆಯಲ್ಲಿ ಈಡಾಗಿದ್ದ ವಿವಿಧ ಶಕ್ತಿಗಳು ಮತ್ತು ಅವುಗಳ ನಡುವಣ ಸಂಬಂಧಗಳಲ್ಲಿ ಆಗುತ್ತ ಬಂದಂಥ ಮಾರ್ಪಾಡುಗಳ ಅವಿಭಾಜ್ಯ ಅಂಗಗಳು ಎನ್ನುವುದು ಮಾರ್ಕ್ಸ್‌ವಾದಿ ಚರಿತ್ರೆಕಾರರ ನಿಲುವು. ಕಾರ್ಲ್‍ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಗೆಲ್ಸ್ ಅವರು ಪ್ರತಿಪಾದಿಸಿದ ಚಾರಿತ್ರಿಕ ವಸ್ತುವಾದ ಸಿದ್ಧಾಂತವು ಚರಿತ್ರೆ ಬರವಣಿಗೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದವು. ಭೌತಿಕ ವಸ್ತುಗಳ ಉತ್ಪಾದನೆ ಕಾರಣವಾದರೆ, ಚರಿತ್ರೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವವರು ಆ ಭೌತಿಕ ವಸ್ತುಗಳನ್ನು ಉತ್ಪಾದಿಸುವ ದುಡಿಯುವ ವರ್ಗಗಳು ಎನ್ನುವುದು ಮಾರ್ಕ್ಸ್‌ವಾದಿ ಪಂಥದ ಅಭಿಪ್ರಾಯ. ಚಾರಿತ್ರಿಕ ವಸ್ತುವಾದವು ಚರಿತ್ರೆಯನ್ನು ಈ ರೀತಿಯಾಗಿ ವ್ಯಾಖ್ಯಾನಿಸಿತು, “ಸಾಮಾಜಿಕ ಬೆಳವಣಿಗೆಯ ಚರಿತ್ರೆಯು ಎಲ್ಲಕ್ಕಿಂತ ಮಿಗಿಲಾಗಿ ಉತ್ಪಾದನೆಯ ಬೆಳವಣಿಗೆಯ ಚರಿತ್ರೆಯಾಗಿದೆ, ನೂರಾರು ವರ್ಷಗಳಿಂದ ಒಂದರ ಹಿಂದೆ ಇನ್ನೊಂದರಂತೆ ಅಸ್ತಿತ್ವಕ್ಕೆ ಬಂದ ಉತ್ಪದನಾ ಚರಿತ್ರೆ, ಉತ್ಪಾದಕ ಶಕ್ತಿಗಳ ಹಾಗೂ ಜನತೆಯ ಉತ್ಪಾದನಾ ಸಂಬಂಧಗಳ ಚರಿತ್ರೆಯಾಗಿದೆ. ಆದುದರಿಂದ ಚರಿತ್ರೆಯು ಒಂದು ಯಥಾರ್ಥವಾದ ವಿಜ್ಞಾನವಾಗಬೇಕಾದರೆ ಸಾಮಾಜಿಕ ವಿಕಾಸದ ಚರಿತ್ರೆಯನ್ನು ರಾಜಮಹಾರಾಜರ, ಸೇನಾಧಿಪತಿಗಳ, ಆಕ್ರಮಣಕಾರರ ಹಾಗೂ ದಮನಕಾರಿಗಳ ಪರಾಕ್ರಮಗಳ ಮಿತಿಯೊಳಗೆ ಅದುಮಿ ಹಿಡಿಯಲು ಸಾಧ್ಯವಿಲ್ಲ”.

ಮಾನವನ ಚರಿತ್ರೆಯನ್ನು ಗಮನಿಸಿದಾಗ ಆಹಾರ ವಸ್ತುಗಳ ಉತ್ಪಾದನೆ ಒಂದು ಪ್ರಮುಖ ಘಟ್ಟವಾಗಿ ಕಂಡುಬರುತ್ತದೆ. ಆಹಾರ ವಸ್ತುಗಳನ್ನು ಉತ್ಪಾದಿಸಲು ಆರಂಭಿಸುವುದರೊಂದಿಗೆ ಮಾನವನ ಜೀವನ ಪದ್ಧತಿಯೇ ಬದಲಾಯಿತು. ಆಹಾರ ವಸ್ತುಗಳ ಉತ್ಪಾದನೆಗಾಗಿ ಉಪಯೋಗಿಸುವ ಉಪಕರಣಗಳನ್ನು, ಅವುಗಳನ್ನು ಉಪಯೋಗಿಸಿ ನಡೆಸುವ ಉತ್ಪಾದನೆಯ ಕ್ರಮವನ್ನು ಹೆಚ್ಚು, ಹೆಚ್ಚಾಗಿ ಸುಧಾರಿಸುವ ಮತ್ತು ಅದರೊಂದಿಗೆ ಆಹಾರೇತರ ಜೀವನಾವಶ್ಯಕ ವಸ್ತುಗಳನ್ನು ನಿರ್ಮಿಸುವ ಸಾಮರ್ಥ್ಯವನ್ನು ಮಾನವ ಗಳಿಸಿಕೊಂಡನು. ಈ ಪ್ರಯತ್ನಗಳು ವಿವಿಧ ಸಾಮಾಜಿಕ ಸಂಬಂಧಗಳನ್ನು ನಿರ್ಮಿಸಿದವು. ಉತ್ಪಾದನಾ ಸಂಬಂಧಗಳಲ್ಲಿ ಆಗುವ ಬದಲಾವಣೆಗಳು ವಿವಿಧ ರಾಜಕೀಯ ಸಂಘಟನೆಗಳಿಗೆ, ಯುದ್ಧಗಳಿಗೆ ಕಾರಣವಾದವು. ಈ ರೀತಿಯಾಗಿ ಉತ್ಪಾದನಾ ಸಲಕರಣೆಗಳು, ಉತ್ಪಾದನಾ ಕ್ರಮ ಹಾಗೂ ಉತ್ಪಾದನಾ ಸಂಬಂಧಗಳ ಅಧ್ಯಯನದಿಂದ ಒಂದು ಪ್ರದೇಶದ ಚರಿತ್ರೆಯನ್ನು ನಿರ್ಮಿಸಲು ಸಾಧ್ಯ ಎನ್ನುವುದೇ ಚಾರಿತ್ರಿಕ ವಸ್ತುವಾದ. ಮಾರ್ಕ್ಸ್‌ವಾದಿ ಚಿಂತನೆಗಳನ್ನು ಒಪ್ಪದ ಅನೇಕ ವಿದ್ಯಾಂಸರು ಕೂಡ ಮಾನವನ ಬೆಳವಣಿಗೆ ಉಪಕರಣಗಳ ಬೆಳವಣಿಗೆಯನ್ನು ಆಧರಿಸಿ ನಡೆದಿದೆ ಎನ್ನುವುದನ್ನು ಒಪ್ಪಿಕೊಳ್ಳುತ್ತಾರೆ. ಪುರಾತತ್ವಜ್ಞರು ಉಪಕರಣಗಳನ್ನು ಆಧರಿಸಿ ಮಾನವನ ಚರಿತ್ರೆಯನ್ನು ಅಧ್ಯಯನ ನಡೆಸಿದರು. ಆದರೆ ಉಪಕರಣಗಳ ಬಳಕೆಯಿಂದಾಗಿ ಆದ ಬದಲಾವಣೆಗಳ ಅಧ್ಯಯನವನ್ನು ನಡೆಸಿಲ್ಲ. ಚರಿತ್ರೆಯ ನಿರೂಪಣೆಯಲ್ಲಿ ಹೆಚ್ಚಿನ ಪುರಾತತ್ವಜ್ಞರು, ಚರಿತ್ರೆಕಾರರು ದುರ್ಬಲರಾಗಿರುವುದೇ ಇದಕ್ಕೆ ಕಾರಣ. ಇದರಿಂದಾಗಿ ಅರಸಕೇಂದ್ರಿತ ಚರಿತ್ರೆ ನಿರ್ಮಾಣಗೊಂಡಿತೇ ಹೊರತು ಜನಕೇಂದ್ರಿತ ಚರಿತ್ರೆಯಲ್ಲ.

‘ಜನರು’ ಎಂದರೆ ಯಾರು ಹಾಗೂ ‘ಜನರ ಚರಿತ್ರೆ’ ಎಂದರೇನು ಎನ್ನುವ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರವನ್ನು ಕಂಡುಹಿಡಿಯದೆ ಜನಕೇಂದ್ರಿತ ಚರಿತ್ರೆಯನ್ನು ನಿರ್ಮಿಸಲು ಸಾಧ್ಯವಿಲ್ಲ. ಪ್ರತಿಯೊಂದು ಪಂಥವೂ ತನ್ನದೇ ನೆಲೆಯಿಂದ ಅಥವಾ ಚೌಕಟ್ಟಿನೊಳಗೆ ಜನರನ್ನು ವ್ಯಾಖ್ಯಾನಿಸುವ ಪ್ರಯತ್ನವನ್ನು ಮಾಡಿದರು. ಅರಸ, ಮಂತ್ರಿ, ಅಧಿಕಾರಿ, ಪ್ರಜೆ ಇವರೆಲ್ಲರೂ ಮೊದಲು ಜನರು, ಆಮೇಲೆ ಶ್ರೇಣಿಕೃತ ಸಮಾಜ ವ್ಯವಸ್ಥೆಯ ಪ್ರಕಾರ ವಿವಿಧ ಸ್ತರಗಳಲ್ಲಿ ಕಾಣಿಸಿಕೊಳ್ಳುವವರು. ಇವರಲ್ಲಿ ಯಾವ ಜನರ ಕುರಿತು ಅಧ್ಯಯನ ನಡೆಸಲಾಗುತ್ತದೆಯೋ ಅದು ಚರಿತ್ರೆಯಾಗಿ ನಿರ್ಮಾಣಗೊಳ್ಳುತ್ತದೆ. ಆದರೆ ಅದೇ ಚರಿತ್ರೆಯಾಗಲು ಸಾಧ್ಯವಿಲ್ಲ. ಏಕೆಂದರೆ ಅದು ಚರಿತ್ರೆಯ ಒಂದು ಭಾಗ ಮಾತ್ರ. ಒಂದು ದೇಶದ ನಿಜವಾದ ಚರಿತ್ರೆಯೆಂದರೆ ಅದು ಜನರ ಚರಿತ್ರೆ. ಆ ಚರಿತ್ರೆಯಲ್ಲಿ ಜನತೆ ಬದುಕಿದ ರೀತಿ, ಅನುಸರಿಸಿದ ಧರ್ಮ, ಕಟ್ಟಿದ ಕಲೆ, ಜೀವನ ಸಮಸ್ಯೆಗಳು, ಜೀವನ ಮೌಲ್ಯಗಳು ಮುಂತಾದ ವಿವರಣೆಗಳಿರುತ್ತವೆ. ಇಂಥ ಜನರ ಚರಿತ್ರೆಯಲ್ಲಿ ರಾಜರ ಚರಿತ್ರೆಯೂ ಸೇರಿಕೊಂಡಿರುತ್ತದೆ. ಏಕೆಂದರೆ ರಾಜರು ಒಂದು ರಾಜ್ಯದಲ್ಲಿ ಬದುಕಿದ ಜನಸಮೂಹದ ಒಂದು ಭಾಗ. ಆದರೆ ಶ್ರೇಣೀಕೃತ ಸಮಾಜ ವ್ಯವಸ್ಥೆಯಲ್ಲಿ ಮೇಲ್ತುದಿಯಲ್ಲಿ ಕಾಣಿಸಿಕೊಳ್ಳುವ ಜನರ ಚರಿತ್ರೆಯೇ ಆಯಾ ರಾಜ್ಯದ ಚರಿತ್ರೆಯಾಗಿ ಹೆಚ್ಚಾಗಿ ಕಾಣಿಸಿಕೊಳ್ಳಲಾರಂಭಿಸಿತು. ಜನರನ್ನು ಮೇಲ್ವರ್ಗದ ಜನರು, ಮಧ್ಯವರ್ಗದ ಜನರು ಹಾಗೂ ಕೆಳವರ್ಗದ ಜನರು ಎಂಬುದಾಗಿ ವರ್ಣ/ಜಾತಿ/ವರ್ಗ ಹಿನ್ನೆಲೆಯಿಂದ ವರ್ಗೀಕರಿಸಲಾಯಿತು. ಈ ವರ್ಗೀಕರಣವೇ ಜನರು ಎನ್ನುವ ಪದ ಅಸ್ಪಷ್ಟಗೊಳ್ಳುವಂತೆ ಹಾಗೂ ಚರಿತ್ರೆಯಲ್ಲಿ ತಪ್ಪಾಗಿ ದಾಖಲುಗೊಳ್ಳುವಂತೆ ಮಾಡಿತು. ಜನರ ಕುರಿತು ಅಧ್ಯಯನ ನಡೆಸುವಾಗ ವಿವಿಧ ಪಂಥಗಳು ಯಾವ ಯಾವ ರೀತಿಯ ಜನರ ಅಧ್ಯಯನ ನಡೆಸಿವೆ ಎನ್ನುವುದನ್ನು ತಿಳಿಯುವುದು ಅನಿವಾರ್ಯವಾಗುತ್ತದೆ. ವಸಾಹತುಶಾಹಿ ಚರಿತ್ರೆಕಾರರು ಬಿಳಿ ಜನರ ದೃಷ್ಟಿಯಿಂದ ಭಾರತದ ಜನರ ಅಧ್ಯಯನ ನಡೆಸಿದರು; ರಾಷ್ಟ್ರೀಯವಾದಿ ಚರಿತ್ರೆಕಾರರು ಮೇಲ್ವರ್ಣದ, ಮೇಲ್ವರ್ಗದ ಜನರ ದೃಷ್ಟಿಯಿಂದ ಚರಿತ್ರೆಯನ್ನು ನೋಡಿದರು; ಮಾರ್ಕ್ಸ್‌ವಾದಿಗಳು ಶೋಷಿತ ವರ್ಗದ ಚರಿತ್ರೆ ನಿರ್ಮಿಸಿದರು; ಸಬಾಲ್ಟರ್ನ್ ಚರಿತ್ರೆಕಾರರು ಸಮಾಜದ ಕೇಳಸ್ತರದ, ಅಲಕ್ಷಿತ ವರ್ಗದ ಜನರ ಚರಿತ್ರೆಯನ್ನು ಬರೆದರು. ಇದು ಜನರ ಚರಿತ್ರೆ ವಿವಿಧ ರೀತಿಗಳಲ್ಲಿ ರಚನೆಗೊಂಡಿರು ವುದನ್ನು ಸೂಚಿಸುತ್ತದೆ.

ರಾಜಪ್ರಭುತ್ವ ಮತ್ತು ಧಾರ್ಮಿಕ ಪ್ರಭುತ್ವದ ಬಿಗಿಹಿಡಿತದಲ್ಲಿ ಸಿಕ್ಕಿಹಾಕಿಕೊಂಡ ಹಾಗೂ ಆ ಮೂಲಕ ಚರಿತ್ರೆಯ ಪ್ರತಿಯೊಂದು ಕಾಲಾವಧಿಯಲ್ಲಿಯೂ ಶೋಷಣೆಗೆ ಒಳಪಟ್ಟ ಜನರನ್ನು ಪ್ರಸ್ತುತ ಅಧ್ಯಯನದಲ್ಲಿ ‘ಜನರು’ ಎನ್ನುವ ವ್ಯಾಖ್ಯಾನದೊಳಗೆ ಸೇರಿಸಿಕೊಳ್ಳಲಾಗಿದೆ. ಹಲವಾರು ಒತ್ತಡ, ಇತ್ತಾಯಗಳಿಗೆ ಸಿಲುಕಿ ಇಂಥ ಜನರ ಒಟ್ಟಾರೆ ಅಭಿವೃದ್ಧಿ ಒಂದು ಹಂತಕ್ಕೆ ನಿಲ್ಲಬೇಕಾಗಿ ಬಂತು. ತಮ್ಮ ಇಷ್ಟಕ್ಕೆ ವಿರುದ್ಧವಾಗಿ ಜೀವಿಸಬೇಕಾದ ಒತ್ತಾಯಕ್ಕೂ ಒಳಗಾಗಬೇಕಾಯಿತು. ಇವರಿಗೆ ವ್ಯವಸ್ಥೆಯ ಬೆಂಬಲವಿರಲಿಲ್ಲ ಹಾಗೂ ಆಡಳಿತದಿಂದ ದೂರವೇ ಉಳಿಯಬೇಕಾಗಿತ್ತು. ಆದರೂ ತಮ್ಮ ಇರುವಿಕೆಯನ್ನು ಸ್ಥಾಪಿಸುವಲ್ಲಿ, ಸಂಪ್ರದಾಯ ಮತ್ತು ಆಚರಣೆಗಳನ್ನು ಮುಂದುವರಿಸಿಕೊಂಡು ಬರುವಲ್ಲಿ ಈ ಜನರು ವಿಫಲರಾಗಲಿಲ್ಲ. ರಾಜ್ಯ ನಿರ್ಮಾಣ ಪ್ರಕ್ರಿಯೆಯಲ್ಲಿ ಈ ರೀತಿ ಅಲಕ್ಷಿತ ವರ್ಗಕ್ಕೆ ಸೇರಲ್ಪಟ್ಟ ಜನರ ಪಾತ್ರವೇ ಹಿರಿದಾದದ್ದು.

ಏಕಮುಖವಾಗಿ ಅಥವಾ ಏಕಪಕ್ಷೀಯವಾಗಿ ಸಾಗುತ್ತಿದ್ದ ಭಾರತದ ಚರಿತ್ರೆ ಬರವಣಿಗೆಯ ದಿಕ್ಕನ್ನು ಬದಲಾಯಿಸಿದವರಲ್ಲಿ ಡಿ.ಡಿ.ಕೊಸಾಂಬಿ, ಆರ್.ಎಸ್.ಶರ್ಮಾ, ರೋಮಿಲಾ ಥಾಪರ್, ಡಿ.ಎನ್.ಝಾ, ಇರ್ಫಾನ್ ಹಬೀಬ್, ಬಿಪನ್ ಚಂದ್ರ, ಸುಮಿತ್ ಸರ್ಕಾರ್ ಮುಂತಾದವರು ಪ್ರಮುಖರು. ಇವರು ರಾಜಕೀಯದಿಂದ ದೂರವಾದ ಚರಿತ್ರೆಯತ್ತ ಒಲವನ್ನು ತೋರಿಸಿದರು. ಜನರ ಅಧ್ಯಯನ ನಿಜವಾದ ಅರ್ಥದಲ್ಲಿ ಆರಂಭಗೊಂಡಿರುವುದು ಇವರ ಬರವಣಿಗೆಗಳಿಂದ. ರಾಜ್ಯದ ಚರಿತ್ರೆಯೆಂದರೆ ಅದು ಅರಸರ ಚರಿತ್ರೆ, ಮೇಲ್ವರ್ಗದ ಜನರ ಚರಿತ್ರೆ ಎನ್ನುವ ಪೂರ್ವಾಗ್ರಹಪೀಡಿತ ಸಿದ್ಧಾಂತಗಳನ್ನು ಒಡೆಯುವುದರಲ್ಲಿ ಇವರ ಬರವಣಿಗೆಗಳು ಯಶಸ್ವಿಯಾದವು. ಚರಿತ್ರೆಯನ್ನು ಸಾಮಾಜಿಕ ಮತ್ತು ಆರ್ಥಿಕ ನೆಲೆಗಟ್ಟಿನಿಂದ ನಿರ್ಮಿಸುವ ಪ್ರಯತ್ನವು ಅಲಕ್ಷಿತ ವರ್ಗದ ಜನರಿಗೆ ನ್ಯಾಯವನ್ನು ಒದಗಿಸುವತ್ತ ಸಾಗಿತು. ಮಾರ್ಕ್ಸ್‌ವಾದಿ ಮತ್ತು ಸಬಾಲ್ಟರ್ನ್ ಪಂಥಗಳು ಈ ರೀತಿಯ ಕೆಲಸವನ್ನು ಮಾಡಿದವು. ಕರ್ನಾಟಕದ ಚರಿತ್ರೆಯನ್ನು ಈ ಸಿದ್ಧಾಂತಗಳ ಹಿನ್ನೆಲೆಯಿಂದ ಅಧ್ಯಯನ ನಡೆಸಿದ ಚರಿತ್ರೆಕಾರರ ಸಂಖ್ಯೆ ಕಡಿಮೆಯೆಂದೇ ಹೇಳಬೇಕು. ಆದರೂ ಸ್ವಲ್ಪಮಟ್ಟಿನ ಕೆಲಸ ನಡೆದಿದೆ. ಈ ಹಿನ್ನೆಲೆಯಲ್ಲಿ ಹೆಸರಿಸಬಹುದಾದ ಕೆಲವು ಚರಿತ್ರೆಕಾರರೆಂದರೆ ಎಸ್. ಶೆಟ್ಟರ್, ಕೇಶವನ್ ವೆಲುತೆಟ್, ಬಿ. ಸುರೇಂದ್ರರಾವ್, ಎಸ್. ಚಂದ್ರಶೇಖರ್, ಸೆಬಾಸ್ಟಿಯನ್ ಜೋಸೆಫ್, ಆರ್.ಎನ್.ನಂದಿ, ಎಸ್.ಎ. ಬಾರಿ, ರಾಜಾ ರಾಮ ಹೆಗ್ಡೆ, ಅಶೋಕ ಶೆಟ್ಟರ್ ಮುಂತಾದವರು. ಸಾಕಿ ಅವರು ಮಾರ್ಕ್ಸ್‌ರ ಬರಹಗಳಿಂದ ಪ್ರಭಾವಿತರಾಗಿ ಬರೆದ ‘ಮೇಕಿಂಗ್ ಹಿಸ್ಟರಿ’ ಗ್ರಂಥವು ಚಾರಿತ್ರಿಕ ವಸ್ತುವಾದ ವ್ಯಾಖ್ಯಾನ ಮಾರ್ಗವನ್ನು ಅನುಸರಿಸಿದೆ. ಕರ್ನಾಟಕ ಚರಿತ್ರೆಯ ಅಧ್ಯಯನ ಸಂದರ್ಭದಲ್ಲಿ ಇದೊಂದು ಉತ್ತಮ ಪ್ರಯತ್ನವಾಗಿ ಕಂಡುಬರುತ್ತದೆ. ಆದರೆ ಈ ಕೃತಿಯಲ್ಲಿ ಕರ್ನಾಟಕ ಚರಿತ್ರೆಯ ವಿವರಗಳಿಗಿಂತ ಹೆಚ್ಚಾಗಿ ಭಾರತದ ಚ್ಚರಿತ್ರೆಯ ಬಗೆಗಿನ ಮಾರ್ಕ್ಸ್‌ವಾದಿ ಚಿಂತಕರ ಅಭಿಪ್ರಾಯಗಳು ಹಾಗೂ ಮಾರ್ಕ್ಸ್‌ ಮತ್ತು ಏಂಗೆಲ್ಸ್‌ರ ಚಿಂತನೆಗಳು ತುಂಬಿಕೊಂಡಿವೆ. ಮಾರ್ಕ್ಸ್‌ವಾದಿ ಪಂಥವು ಕರ್ನಾಟಕದ ಚರಿತ್ರೆ ನಿರ್ಮಾಣದಲ್ಲಿ ಸ್ವಲ್ಪಮಟ್ಟಿಗೆ ಕಾಣಿಸಿಕೊಂಡರೆ, ಸಬಾಲ್ಟರ್ನ್ ಪಂಥ ಇನ್ನೂ ಗಟ್ಟಿಯಾಗಿ ತನ್ನ ನೆಲೆಯನ್ನು ಕಂಡುಕೊಂಡಿಲ್ಲ. ಆದರೂ ಅಲಕ್ಷಿತ ವರ್ಗಗಳ ಕುರಿತು ಅಧ್ಯಯನ ಅಲ್ಲೊಂದು ಇಲ್ಲೊಂದು ಕಾಣಸಿಗುತ್ತದೆ.

ಸಬಾಲ್ಟರ್ನ್ ಪಂಥವು ಇದುವರೆಗಿನ ಚರಿತ್ರೆಯ ಅಧ್ಯಯನವನ್ನು ನಿಜವಾದ ಚರಿತ್ರೆಯ ಕೇವಲ ಒಂದು ಭಾಗವಾಗಿದೆಯೆಂದು ಪರಿಗಣಿಸುತ್ತದೆ. ಸಮಾಜದ ಕೆಳವರ್ಗದ ಬಹು ಸಂಖ್ಯಾತ ಜನರ ಚರಿತ್ರೆಯು ನಿಜವಾದ ಚರಿತ್ರೆಯಾಗಿದ್ದು, ಅದು ಶೋಷಣೆಗೊಳಗಾಗಿದೆ ಎನ್ನುವುದು ಈ ಪಂಥಕ್ಕೆ ಸೈದ್ಧಾಂತಿಕ ಚೌಕಟ್ಟೊಂದನ್ನು ಹಾಕಿಕೊಟ್ಟ ಅಂಟೋನಿಯೋ ಗ್ರಾಮ್‌ಶಿ ಅವರ ಅಭಿಪ್ರಾಯ. ರಣಜಿತ್ ಗುಹಾ, ಪಾರ್ಥ ಚಟರ್ಜಿ, ಗ್ಯಾನೇಂದ್ರ ಪಾಂಡೆ, ಡೇವಿಡ್ ಅರ್ನಾಲ್ಡ್, ಡೇವಿಡ್ ಹರ್ಡಿಮನ್, ದೀಪೇಶ್ ಚಕ್ರವರ್ತಿ ಮುಂತಾದವರು ಸಬಾಲ್ಟರ್ನ್ ಪಂಥವು ಭಾರತದಲ್ಲಿ ಹೆಚ್ಚು ಪ್ರಚಾರವನ್ನು ಪಡೆಯುವಂತೆ ಮಾಡಿದರು. ಇದರಿಂದಾಗಿ ಕೆಳಸ್ತರದ ಚರಿತ್ರೆಯು ಸ್ವತಂತ್ರವಾಗಿ ರಚನೆಗೊಳ್ಳುವಂತಾಯಿತು. ಕೆಳಸ್ತರದ ಜನರ ಚರಿತ್ರೆ ನಿರ್ಲಕ್ಷ್ಯಕ್ಕೆ ಒಳಗಾಗುವುದಕ್ಕೆ ಮೇಲ್ವರ್ಗವು ಸ್ಥಾಪಿಸಿದ ಯಜಮಾನಿಕೆ ಮೂಲಕಾರಣ ಎನ್ನುವುದು ಗ್ರಾಮ್‌ಶಿ ಅವರ ವಾದ. ಗ್ರಾಮ್‌ಶಿ ಅವರು ಯಜಮಾನಿಕೆಯನ್ನು ಒಂದು ಸಂದರ್ಭ ಸಾಧಿತ ಸಾಂಸ್ಕೃತಿಕ ರಾಜಕೀಯ ಬೆಳವಣಿಗೆ ಎಂದಿದ್ದಾರೆ. ಚರಿತ್ರೆಯ ಯಾವುದೇ ಘಟ್ಟದಲ್ಲಿ, ಒಂದು ಸಂಸ್ಕೃತಿಯನ್ನು ಅದರ ವರ್ತಮಾನದ ವ್ಯಾಪಾರಗಳಲ್ಲಿ ಗಮನಿಸಿದಾಗ ಅದು ಜಾತಿ, ವರ್ಗ, ಸ್ಥಳೀಯತೆ, ಭಾಷೆ ಮುಂತಾದ ಹಲವು ರಚನೆಗಳನ್ನು ಒಳಗೊಂಡಿರುತ್ತದೆ. ಆದರೆ ಇಂಥ ರಚನೆಗಳು ಸಮಾನ ರಚನೆಗಳಾಗಿರುವುದಿಲ್ಲ. ಯಾವುದಾದರೂ ಒಂದು ರಚನೆ ಪ್ರಮುಖ ಪ್ರಬಲವಾಗಿ ಹೊಮ್ಮುವುದಲ್ಲದೆ ಉಳಿದ ರಚನೆಗಳ ಮೇಲೆ ತನ್ನ ಯಜಮಾನಿಕೆಯನ್ನು ಸ್ಥಾಪಿಸುತ್ತದೆ.

ಬಲಪ್ರಯೋಗವೊಂದರಿಂದಲೇ ಯಜಮಾನಿಕೆಯನ್ನು ಸ್ಥಾಪಿಸಲು ಸಾಧ್ಯವಿಲ್ಲ. ಗ್ರಾಮ್‌ಶಿಯ ಪ್ರಕಾರ, ಒಂದು ರಚನೆ ವ್ಯವಸ್ಥೆಯಲ್ಲಿ ಯಜಮಾನಿಕೆಯನ್ನು ಸ್ಥಾಪಿಸುವಾಗ ಬಲಪ್ರಯೋಗದೊಂದಿಗೆ ಮನವೊಲಿಕೆಯ ತಂತ್ರವನ್ನೂ ಅನುಸರಿಸುತ್ತದೆ. ಅದೇ ರೀತಿ ಇತರ ರಚನೆಗಳಿಗೆ ಒಂದು ಬಗೆಯ ನೈತಿಕ ಮುಂದಾಳತ್ವ ಅಥವಾ ಮಾರ್ಗದರ್ಶನವನ್ನು ಕೊಡುತ್ತದೆ. ಆದರೆ ಯಜಮಾನಿಕೆ ವಹಿಸುವ ರಚನೆಯು ನೀಡುವ ಮಾರ್ಗದರ್ಶನದಲ್ಲಿ ಯಾವಗಲೂ ಅದರ ಹಿತಸಾಧನೆಯೇ ಮುಖ್ಯವಾಗಿರುತ್ತದೆ ಎನ್ನುವುದನ್ನು ಗಮನಿಸಬೇಕಾಗುತ್ತದೆ. ಯಜಮಾನಿಕೆಯನ್ನು ಸ್ಥಾಪಿಸುವ ಶಕ್ತಿಗಳು ಯಾವಗಲೂ ಒಂದು ವ್ಯವಸ್ಥೆಯಾಗಿ ಕಾಣಿಸಿಕೊಳ್ಳುತ್ತವೆಯೇ ಹೊರತು ವ್ಯಕ್ತಿಯಾಗಿಯಲ್ಲ. ಈ ಬೆಳವಣಿಗೆಯನ್ನು ಗ್ರಾಮ್‌ಶಿ ಅವರು ಚಾರಿತ್ರಿಕ ಕೂತ ಎನ್ನುವ ಹೆಸರಿನಿಂದ ಕರೆದರು. ಈ ರೀತಿಯ ಕೂಟಗಳು ಚರಿತ್ರೆಯ ಎಲ್ಲ ಅವಧಿಗಳಲ್ಲೂ ಕಂಡುಬರುತ್ತವೆ. ಕ್ರಿ.ಶ. ೮ ರಿಂದ ೧೪ನೆಯ ಶತಮಾನಗಳು ಕರ್ನಾಟಕದ ಚರಿತ್ರೆಯನ್ನು ನೋಡಿದಾಗ ರಾಜಪ್ರಭುತ್ವ ಮತ್ತು ಧಾರ್ಮಿಕ ಪ್ರಭುತ್ವಗಳು ಈ ರೀತಿಯ ಕೂಟಗಳಾಗಿಯೇ ಕಂಡುಬರುತ್ತವೆ. ಅರಸರು ರಾಜಪ್ರಭುತ್ವದ ಮೂಲಕ ಗುರುತಿಸಿಕೊಂಡರೆ, ಧಾರ್ಮಿಕ ಮುಖಂಡರು ಧರ್ಮದ ಮೂಲಕ ಗುರುತಿಸಿಕೊಂಡರು. ಈ ಎರಡು ರಚನೆಗಳು ಯಜಮಾನಿಕೆಯನ್ನು ಸ್ಥಾಪಿಸುವ ವೇದಿಕೆಗಳಾದವು. ಅಧ್ಯಯನದ ಈ ಅವಧಿಯಲ್ಲಿನ ಸಾಮಾಜಿಕ ರಚನೆಯಲ್ಲಿ ಕಂಡುಬರುವ ಪ್ರಬಲ ಅಧೀನ ರಚನೆಗಳನ್ನು ಈ ಹಿನ್ನೆಲೆಯಿಂದಲೇ ಅರ್ಥೈಸಿಕೊಳ್ಳುವುದು ಹೆಚ್ಚು ಸೂಕ್ತ ಎಂದೆನಿಸುತ್ತದೆ.

ಪ್ರಸ್ತುತ ಅಧ್ಯಯನವು ಕ್ರಿ.ಶ. ೮ ರಿಂದ ೧೪ ನೆಯ ಶತಮಾನಗಳವರೆಗಿನ ಕರ್ನಾಟಕ ಯಾವ ರೀತಿಯಲ್ಲಿ ಪರಿವರ್ತನೆಗಳಿಗೆ ಒಲಗಾಗುತ್ತಿತ್ತು ಎನ್ನುವುದನ್ನು ಪತ್ತೆ ಹಚ್ಚುವ ಹಾಗೂ ವಿಶ್ಲೇಷಿಸುವ ಉದ್ದೇಶವನ್ನು ಹೊಂದಿದೆ. ಈ ಅಧ್ಯಯನವು ಒಳಗೊಂಡ ಕಾಲಾವಧಿಯಲ್ಲಿ ಸಮಾಜದ ವಿವಿಧ ಸ್ತರಗಳಾದ ಬೇಟೆ, ಪಶುಸಂಗೋಪನೆ, ಕೃಷಿ, ಉದ್ದಿಮೆ ಮುಂತಾದವು ಸ್ಪಷ್ಟವಾಗಿ ಕಾಣಿಸಿಕೊಳ್ಳುವ, ಒಟ್ಟೊಟ್ಟಿಗೆ ಇರುವ ಹಾಗೂ ಪ್ರತ್ಯೇಕವಾಗಿ ನಿಲ್ಲುವ ಸೂಚನೆಗಳು ಕಾಣಿಸಿಕೊಂಡವು. ಇವುಗಳ ಅಧ್ಯಯನ ಕೈಗೊಂಡಾಗ ಅಂದಿನ ಸಮಾಜ ಏಕರೂಪದ್ದಾಗಿರಲಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಸಾಮಾಜಿಕ ವಿಕಾಸದ ಪ್ರಕ್ರಿಯೆಗಳು ಬಹುಳತ್ವದ ವಿನ್ಯಾಸಗಳೊಂದಿಗೆ ಕಂಡುಬಂದವು. ಇವು ಗೊಂದಲಗಳನ್ನು ಹುಟ್ಟು ಹಾಕಿ ಶ್ರೇಣಿಕೃತ ಸಮಾಜ ವ್ಯವಸ್ಥೆ ಇನ್ನಷ್ಟು ಬಿಗಿಗೊಳ್ಳುವಂತೆ ಮಾಡಿದವು. ಇದಕ್ಕೆ ಜಾತಿ, ಕುಟುಂಬ, ಶಿಕ್ಷಣ ಹಾಗೂ ಆಡಳಿತ ವ್ಯವಸ್ಥೆಗಳು ಪೂರಕವಾಗಿಯೇ ಪರಿಣಮಿಸಿದವು. ಈ ಅವಧಿಯಲ್ಲಿ ಭೂ ಆಧಾರಿತ ಅರ್ಥವ್ಯವಸ್ಥೆ ಅಸ್ತಿತ್ವದಲ್ಲಿತ್ತು ಎನ್ನುವುದು ತಿಳಿದುಬರುತ್ತದೆ. ಇದು ಊಳಿಗಮಾನ್ಯತೆ, ಭೂಮಾಲೀಕತ್ವ, ಮಧ್ಯವರ್ತಿಗಳು, ದಾನ ಮುಂತಾದ ವಿಚಾರಗಳ ಕುರಿತ ಚರ್ಚೆಗೆ ಅವಕಾಶ ಮಾಡಿಕೊಡುತ್ತದೆ. ಇದು ಉತ್ಪಾದನಾ ವ್ಯವಸ್ಥೆಯ ಕುರಿತಾದ ಚರ್ಚೆಯಾಗಿದ್ದು, ಪ್ರಭುತ್ವ ಮತ್ತು ಜನತೆ ಪರಸ್ಪರ ಹೊಂದಿದ್ದ ಸಂಬಂಧಗಳ ಸ್ವರೂಪವನ್ನು ತಿಳಿಸುತ್ತದೆ. ಪ್ರಭುತ್ವವು ಪ್ರಜೆಗಳನ್ನು ಯಾವ ರೀತಿಯಲ್ಲಿ ಅಧೀನದಲ್ಲಿಟ್ಟುಕೊಂಡಿತ್ತು ಎನ್ನುವುದಕ್ಕೆ ಅಂದಿನ ವಿವಿಧ ಬಗೆಯ ಮರಣ ಪದ್ಧತಿಗಳೂ ಉದಾಹರಣೆಗಳಾಗಿ ಕಂಡುಬರುತ್ತವೆ. ಮಾಸ್ತಿಮರಣ, ಬಲಿದಾನ ಮರಣ, ವೀರಮರಣ ಹಾಗೂ ಸಮಾಧಿ ಮರಣಗಳು ಅರಸ ಪ್ರಧಾನ, ಧರ್ಮ ಪ್ರಧಾನ ಹಾಗೂ ಪುರುಷ ಪ್ರಧಾನ ವ್ಯವಸ್ಥೆಯ ಫಲಿತಾಂಶಗಳಾಗಿವೆ. ಇವು ಯಾವುವೂ ಸಹಜ ಮರಣಗಳಾಗಿರದೆ ಲೌಕಿಕ ಮತ್ತು ಅಲೌಕಿಕ ಆಮಿಷಗಳಿಂದ ಕೂಡಿದ ಮರಣಗಳಾಗಿವೆ.

ಕೃಷಿ ವ್ಯವಸ್ಥೆ ಮತ್ತು ನಗರ ವ್ಯವಸ್ಥೆಗಳು ರೂಪುಗೊಂಡ ಬಳಿಕ ಸಮಾಜದ ರಚನೆಯಲ್ಲಿ ಸ್ವಲ್ಪಮಟ್ಟಿನ ಬದಲಾವಣೆಗಳು ಕಾಣಿಸಿಕೊಳ್ಳಲಾರಂಭಿಸಿದವು. ಕೃಷಿಯ ವಿಸ್ತರಣೆ ಮತ್ತು ಉಳುಮೆಯ ವಿಧಾನದಲ್ಲಾದ ಬದಲಾವಣೆಗಳು ಹೆಚ್ಚುವರಿ ಉತ್ಪಾದನೆಗೆ ಅವಕಾಶ ಮಾಡಿಕೊಟ್ಟು ಪೇಟೆ-ಪಟ್ಟಣಗಳು ಅಸ್ತಿತ್ವಕ್ಕೆ ಬರುವಂತೆ ಮಾಡಿದವು. ಕೃಷಿ ವ್ಯವಸ್ಥೆ ರೂಪುಗೊಂಡು ಮಾನವನ ಬದುಕು ವ್ಯವಸ್ಥಿತವಾಗಿ ಬೆಳೆದುದ್ದನ್ನು ಅರ್ಥೈಸಿಕೊಳ್ಳಬೇಕಾದರೆ ಮಾರ್ಕ್ಸ್‌ವಾದದ ಚಾರಿತ್ರಿಕ ವಸ್ತುವಾದ ವಿಧಾನವನ್ನು ಅನುಸರಿಸುವುದು ಅನಿವಾರ್ಯವಾಗುತ್ತದೆ. ಕೃಷಿ ವ್ಯವಸ್ಥೆಯು ರಾಜ್ಯದ ಆರ್ಥಿಕತೆಯ ಸುಧಾರಣೆಗೆ ಕಾರಣವಾದರೂ, ಕೃಷಿ ಕಾರ್ಮಿಕರು ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಪಟ್ಟೇ ಜೀವಿಸಬೇಕಾಗಿತ್ತು. ಭೂಮಾಲೀಕರ ಗುಲಾಮರಾಗಿ, ಜೀತದಾಳುಗಳಾಗಿ ದುಡಿಯುವ ಒತ್ತಾಯಕ್ಕೆ ಕೃಷಿ ಕಾರ್ಮಿಕರು ಒಳಗಾಗಿದ್ದರು. ಅತಿಯಾದ ತೆರಿಗೆಯನ್ನು ಹೇರುವುದರ ಮೂಲಕವೂ ಕೃಷಿಕರು ಮತ್ತು ಕುಶಲಕರ್ಮಿಗಳನ್ನು ಅಧಿಕಾರಿಗಳು ಮತ್ತು ಗ್ರಾಮೀಣ ಗಣ್ಯರು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತಿದ್ದರು. ಪೇಟೆ-ಪಟ್ಟಣಗಳಲ್ಲಿ ವ್ಯಾಪಾರ-ವಾಣಿಜ್ಯ ನಡೆಸುವ ವರ್ತಕರೂ ಈ ರೀತಿಯ ಶೋಷಣೆಗಳಿಗೆ ಒಳಗಾಗುತ್ತಿದ್ದರು. ಈ ಕಾರಣಗಳಿಂದಾಗಿ ವರ್ತಕರು ಹಾಗೂ ಉತ್ಪಾದನೆ ಮತ್ತು ವ್ಯಾಪಾರವನ್ನು ನಡೆಸುವ ಕುಶಲಕರ್ಮಿಗಳು ಸಂಘಗಳನ್ನು ರಚಿಸಿಕೊಂಡರು. ಆದರೆ ವರ್ತಕ ಸಂಘಗಳು ಕ್ರಮೇಣ ಜಾತಿಯ ಪರ್ಯಾಯ ಪದಗಳಂತೆ ಬಳಕೆಯಾಗತೊಡಗಿದವು. ಜಾತಿ ವ್ಯವಸ್ಥೆಯೇ ಪ್ರಧಾನವಾಗಿದ್ದ ಅಂದಿನ ಸಮಾಜದಲ್ಲಿ ವರ್ತಕ ಸಂಘಗಳು ಅವುಗಳಿಗೆ ಒಳಗಾಗಿರುವುದರಲ್ಲಿ ಅಚ್ಚರಿಯಿಲ್ಲ. ಆದರೂ ವರ್ತಕ ಸಂಘಗಳು ಹೆಚ್ಚು ಪ್ರಭಾವಶಾಲಿಯಾಗಿ ಮತ್ತು ವಿಸ್ತಾರವಾಗಿ ಬೆಳೆದು ವ್ಯಾಪಾರ-ವಾಣಿಜ್ಯಗಳು ಚುರುಕುಗೊಳ್ಳುವಂತೆ ಮಾಡಿದವು. ಅದೇ ರೀತಿ ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನು ಹಲವಾರು ವಿಚಾರಗಳಲ್ಲಿ ಪರಸ್ಪರ ಒಂದುಗೂಡಿಸುವ ಕೆಲಸವನ್ನೂ ಮಾಡಿದವು.

ಅಧ್ಯಯನದ ಈ ಅವಧಿಯಲ್ಲಿ ಕಂಡುಬರುವ ಇನ್ನೊಂದು ಪ್ರಮುಖ ವಿಚಾರವೆಂದರೆ, ಧರ್ಮವನ್ನು ಸಾಧನವನ್ನಾಗಿ ಬಳಸಿಕೊಂಡು ಸಮಾಜದಲ್ಲಿ ಯಜಮಾನಿಕೆಯನ್ನು ಸ್ಥಾಪಿಸುವ ಪ್ರಯತ್ನ ನಡೆದಿರುವುದು. ಧರ್ಮದ ಮೂಲಕ ಸ್ಥಾಪನೆಗೊಳ್ಳುವ ಯಜಮಾನಿಕೆಯು ಸಮಾಜದಲ್ಲಿ ಅತ್ಯಂತ ಪ್ರಭಾವಶಾಲಿಯಾದ ಹಾಗೂ ಶಾಶ್ವತವಾದ ಪರಿಣಾಮಗಳನ್ನು ಬೀರುತ್ತಿತ್ತು. ಆದರೆ ಧರ್ಮದ ಸರಳ ವ್ಯಾಖ್ಯಾನದಿಂದ ಈ ಸಾಂಸ್ಕೃತಿಕ ಪರಿಣಾಮಗಳನ್ನು ಬೀರುತ್ತಿತ್ತು. ಆದರೆ ಧರ್ಮದ ಸರಳ ವ್ಯಾಖ್ಯಾನದಿಂದ ಈ ಸಾಂಸ್ಕೃತಿಕ ಯಜಮಾನಿಕೆಯನ್ನು ಅರ್ಥೈಸಿಕೊಳ್ಳುವುದು ಸಾಧ್ಯವಿಲ್ಲ. ರಾಷ್ಟ್ರಕೂಟ ಅರಸರಿಂದ ಹೊಯ್ಸಳ ಅರಸರವರೆಗಿನ ಪ್ರತಿಯೊಬ್ಬ ಅರಸನೂ ಧರ್ಮಕ್ಕೆ ಪ್ರಧಾನ ಸ್ಥಾನವನ್ನು ನೀಡಿರುವುದು ಸಂಬಂಧಿಸಿದ ದಾಖಲೆಗಳಿಂದ ತಿಳಿದುಬರುತ್ತದೆ. ಪ್ರಜೆಗಳನ್ನು ನಿಯಂತ್ರಣದಲ್ಲಿಡಲು ಧರ್ಮದ ಮೊರೆ ಹೋಗುವುದು ಅರಸುಮನೆತನಗಳಿಗೆ ಅನಿರ್ವಾಯವಾಗಿತ್ತು. ಧಾರ್ಮಿಕ ಸಾಮರಸ್ಯ ಎನ್ನುವ ಸಿದ್ಧಾಂತ ಈ ಕಾರಣದಿಂದಾಗಿಯೇ ಹುಟ್ಟಿಕೊಂಡಿತು. ದೇವಾಲಯಗಳು ಗ್ರಾಮಗಳ ಆಡಳಿತ ಮತ್ತು ಜಾತಿ ಕಟ್ಟಳೆಯ ಉನ್ನತ ನ್ಯಾಯಾಲಯಗಳಂತೆ ವರ್ತಿಸುತ್ತಿದ್ದವು. ದೇವಾಲಯಗಳು ಜಮೀನುದಾರರಂತೆ ಕಾರ್ಯನಿರ್ವಹಿಸುತ್ತಿದ್ದುದು ಮಾತ್ರವಲ್ಲದೆ ಸಂಗೀತ ಮತ್ತು ನರ್ತನದ ಹೆಸರಿನಲ್ಲಿ ಮಹಿಳೆಯರನ್ನು ಶೋಷಿಸುವ ಕೇಂದ್ರಗಳು ಆಗಿದ್ದವು. ಗ್ರಾಮಗಳನ್ನು ಪ್ರತಿನಿಧಿಸುವ ಗ್ರಾಮದೇವತೆಗಳನ್ನು ವೈದಿಕ ದೇವತಾಲೋಕದೊಳಗೆ ಸೇರಿಸಿಕೊಳ್ಳುವ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತಿದ್ದವು. ದೇವತೆಗಳಲ್ಲೇ ಪ್ರಬಲ ಮತ್ತು ಅಧೀನ ಅಥವಾ ಮೇಲ್ವರ್ಗದ ಮತ್ತು ಕೆಳವರ್ಗದ ದೇವತೆಗಳೆನ್ನುವ ವರ್ಗೀಕರಣವನ್ನು ಮಾಡಲಾಯಿತು. ಈ ಎಲ್ಲ ಬೆಳವಣಿಗೆಗಳಿಗೆ ಸಾಂಪ್ರದಾಯಿಕ ಬ್ರಾಹ್ಮಣಧರ್ಮವೇ ಮೂಲಕಾರಣವಾಗಿತ್ತು. ಈ ಧರ್ಮಕ್ಕೆ ಪೂರಕವಾಗಿ ಹಾಗೂ ವಿರುದ್ಧವಾಗಿ ಅನೇಕ ಧಾರ್ಮಿಕ ಸಿದ್ಧಾಂತಗಳು ಹುಟ್ಟಿಕೊಂಡವು.

ಅದ್ವೈತ, ವಿಶಿಷ್ಟಾದ್ವೈತ, ದ್ವೈತ ಮತ್ತು ವೀರಶೈವ ಸಿದ್ಧಾಂತಗಳು ಧಾರ್ಮಿಕ ವಿಚಾರಗಳ ಕುರಿತಾದ ಹೊಸ ಹೊಸ ವಾದಗಳನ್ನು ಮಂಡಿಸಿದವು. ಆದರೆ ಅದ್ವೈತ, ವಿಶಿಷ್ಟದ್ವೈತ ಮತ್ತು ದ್ವೈತ ಸಿದ್ಧಾಂತಗಳು ಬ್ರಾಹ್ಮಣ ಏಕಸ್ವಾಮ್ಯದ ಮೇಲೆ ರಚನೆಗೊಂಡ ಸಮಾಜ ವ್ಯವಸ್ಥೆಯನ್ನು ಪ್ರಶ್ನಿಸುವ ಹಂತಕ್ಕೆ ಹೋಗಲಿಲ್ಲ. ಇವು ಧರ್ಮದ ಕುರಿತಾದ ತಾತ್ವಿಕ ಚರ್ಚೆಯನ್ನು ತೀಕ್ಷ್ಣವಾಗಿ ಮಾಡಿ, ವೈದಿಕ ಧರ್ಮ ವಿಮರ್ಶೆಗೊಳ್ಳುವ ಮೂಲಕ ಪ್ರಚಾರವನ್ನು ಪಡೆಯುವಂತೆ ಮಾಡಿದವು. ಆದರೆ ಹನ್ನೆರಡನೆಯ ಶತಮಾನದಲ್ಲಿ ಕಾಣಿಸಿಕೊಂಡ ವೀರಶೈವ ಅಥವಾ ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತವು ಬ್ರಾಹ್ಮಣಶಾಹಿಯ ಧಾರ್ಮಿಕ ಕಟ್ಟುಪಾಡುಗಳನ್ನು ತಿರಸ್ಕರಿಸಿ, ನಿಜವಾದ ಅರ್ಥದಲ್ಲಿ ಧಾರ್ಮಿಕ ಅಂದೋಲನವೊಂದನ್ನು ಹುಟ್ಟುಹಾಕಿತು. ವಿರಶೈವ ಸಿದ್ಧಾಂತವು ಬ್ರಾಹ್ಮಣ ನೇತೃತ್ವದ ಧಾರ್ಮಿಕ ಯಜಮಾನಿಕೆಯನ್ನು ಖಂಡಿಸಿತೇ ಹೊರತು ಧಾರ್ಮಿಕ ನಂಬಿಕೆ, ಆಚರಣೆಗಳನ್ನು ನಿರಾಕರಿಸಲಿಲ್ಲ. ಅದು ಲಿಂಗಪೂಜೆಯನ್ನು ಪ್ರತಿಪಾದಿಸಿತು. ಬ್ರಾಹ್ಮಣ ಏಕಸ್ವಾಮ್ಯವನ್ನು ಪ್ರಶ್ನಿಸಿ ಹುಟ್ಟಿಕೊಂಡ ಪ್ರತಿಯೊಂದು ಸಿದ್ಧಾಂತವೂ ಕ್ರಮೇಣ ಧರ್ಮವಾಗಿ ರೂಪುಗೊಂಡಿತು. ಇದರಿಂದಾಗಿ ಆರಂಭಿಕ ಆಶಯಗಳು ಮತ್ತು ಬೋಧನೆಗಳು ಮೂಲೆಗುಂಪಾಗಿ ಸಾಂಪ್ರದಾಯಿಕತೆಯೇ ಮೊದಲ ಸ್ಥಾನವನ್ನು ಪಡೆದುಕೊಳ್ಳುವಂತಾಯಿತು. ಇದಕ್ಕೆ ಬೌದ್ಧ ಮತ್ತು ಜೈನ ಧರ್ಮಗಳು ಉತ್ತಮ ಸ್ಥಾನವನ್ನು ಪಡೆದುಕೊಳ್ಳುವಂತಾಯಿತು. ಇದಕ್ಕೆ ಬೌದ್ಧ ಮತ್ತು ಜೈನ ಧರ್ಮಗಳು ಉತ್ತಮ ಉದಾಹರಣೆಗಳಾಗಿವೆ. ಈ ಎರಡೂ ಧರ್ಮಗಳಿಗೆ ತಮ್ಮ ಮೂಲ ಆಶಯಗಳೊಂದಿಗೆ ಬೆಳೆಯಲು ಸಾಧ್ಯವಾಗಲಿಲ್ಲ.

ಸಮಾಜದ ರಚನೆಯಲ್ಲಿನ ಅಸಮಾನತೆಗಳು ಕಟ್ಟಡಗಳ ನಿರ್ಮಾಣದಲ್ಲೂ ಕಂಡು ಬರುತ್ತಿದ್ದವು. ಪ್ರಭುತ್ವದ ಕಟ್ಟಡಗಳಾದ ಅರಮನೆಗಳು, ದೇವಾಲಯಗಳು, ಕೋಟೆ-ಕೊತ್ತಲಗಳು ಬೃಹತ್ ಹಾಗೂ ಭವ್ಯ ವಾಸ್ತು ರಚನೆಗಳನ್ನು ಹೊಂದಿರುತ್ತಿದ್ದವು. ಇವು ಅರಸಕೇಂದ್ರಿತ ಚರಿತ್ರೆಯ ನಿರ್ಮಾಣಕ್ಕೆ ಆಕರಗಳಾದವು. ಸ್ಮಾರಕಗಳನ್ನು ರಾಜಪ್ರಭುತ್ವದ ಅಥವಾ ಕಟ್ಟಿಸಿದವರ ಹಿನ್ನೆಲೆಯಿಂದಷ್ಟೇ ಅಧ್ಯಯನ ನಡೆಸಿರುವುದು ಕಂಡುಬರುತ್ತದೆ. ಸ್ಮಾರಕಗಳನ್ನು ಕಟ್ಟಿದ ಸಾವಿರಾರು ಕುಶಲಕರ್ಮಿಗಳು ಹಾಗೂ ಕೆಲಸಗಾರರು ಅರಸಕೇಂದ್ರಿತ ಚರಿತ್ರೆಗೆ ಪ್ರವೇಶ ಪಡೆಯಲೇ ಇಲ್ಲ. ಸ್ಮಾರಕಗಳನ್ನು ಒಳಗಾಗಿದ್ದರು. ಪ್ರಜೆಗಳ ಸ್ಮಾರಕಗಳು ಅರಸಕೇಂದ್ರಿತ ಚರಿತ್ರೆಯಲ್ಲಿ ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಗಾದವು. ಕೆಳವರ್ಗದ ಜನರ ಮನೆಗಳು, ಗ್ರಾಮದೇವತೆಗಳ ಗುಡಿಗಳು, ಮರಣ ಸ್ಮಾರಕಗಳು ಯಾವ ರೀತಿ ನಿರ್ಮಾಣಗೊಳ್ಳುತ್ತಿದ್ದವು ಎನ್ನುವುದರ ವಿವರಣೆ ಹೆಚ್ಚಿನ ಪ್ರಮಾಣದಲ್ಲಿ ಸಿಗುವುದಿಲ್ಲ. ಆದರೆ ಸಮಾಜದ ಅಲಕ್ಷಿತ ವರ್ಗಗಳ ಅಧ್ಯಯನ ಕೈಗೊಳ್ಳುವಾಗ ಈ ಸ್ಮಾರಕಗಳು ಹಾಗೂ ಅವುಗಳಿಗೆ ಸಂಬಂಧಿಸಿದ ನಂಬಿಕೆ, ಆಚರಣೆಗಳು ಬಹುಮುಖ್ಯವಾದ ಆಕರಗಳಾಗಿ ಕಂಡುಬರುತ್ತವೆ. ಪ್ರಭುತ್ವದ ಸ್ಮಾರಕಗಳಲ್ಲೂ, ಹಲವಾರು ಜಾನಪದೀಯ ಅಂಶಗಳು ಕಂಡುಬರುತ್ತವಾದರೂ ಅವು ಕಲಾಚರಿತ್ರೆಕಾರರಿಗೆ ಚರಿತ್ರೆಯ ಆಕರಗಳಾಗಿ ಕಂಡುಬರಲಿಲ್ಲ. ಸ್ಮಾರಕಗಳನ್ನು ರಾಜಾಶ್ರಯ, ಧರ್ಮ, ಕಲೆ, ವಾಸ್ತುಶಿಲ್ಪ ಮತ್ತು ಮೂರ್ತಿಶಿಲ್ಪದ ಹಿನ್ನೆಲೆಯಿಂದಷ್ಟೇ ಅಧ್ಯಯನ ನಡೆಸಲಾಯಿತು. ಆದರೆ ಸಂಸ್ಕೃತಿ ಅಧ್ಯಯನದ ಸಂದರ್ಭದಲ್ಲಿ ಸ್ಮಾರಕಗಳ ನಿರ್ಮಾಣದ ಹಿಂದಿರುವ ಧೋರಣೆಗಳು, ಆಶಯಗಳು, ಸಾಮಾಜಿಕ ಮತ್ತು ಆರ್ಥಿಕ ಪ್ರಶ್ನೆಗಳು ಅಧ್ಯಯನದ ಪ್ರಮುಖ ವಸ್ತುಗಳಾಗಿ ಕಂಡುಬರುತ್ತವೆ. ಈ ಅಧ್ಯಯನ ವಿಧಾನವು ಸಂಸ್ಕೃತಿ ಚರ್ಚೆಯನ್ನು ಯಾವ ರೀತಿಯಲ್ಲಿ ನಡೆಸಲಾಗುತ್ತದೆ ಎನ್ನುವುದನ್ನು ಅವಲಂಬಿಸಿಕೊಂಡಿರುತ್ತದೆ.

ಪ್ರಸ್ತುತ ಅಧ್ಯಯನದಲ್ಲಿ ಸಾಹಿತ್ಯ ಮತ್ತು ಕಲೆಗೆ ಸಂಬಂಧಿಸಿದ ವಿಚಾರಗಳ ಕುರಿತು ಹೆಚ್ಚಿನ ಚರ್ಚೆ ನಡೆಸಿಲ್ಲ. ಇದರರ್ಥ ಸಾಹಿತ್ಯ ಮತ್ತು ಕಲೆಗೆ ಸಂಸ್ಕೃತಿಯ ಭಾಗಗಳಲ್ಲ ಎಂದಲ್ಲ. ಅವುಗಳ ಬಗೆಗೆ ಗಂಭೀರವಾದ ಚರ್ಚೆ ನಡೆಸುವ ಅವಶ್ಯಕತೆ ಇದೆ. ಚರಿತ್ರೆಯ ವಿವಿಧ ಕಾಲಘಟ್ಟಗಳಲ್ಲಿ ಸಾಹಿತ್ಯ ಮತ್ತು ಕಲೆ ಅನೇಕ ಪರಿವರ್ತನೆಗಳಿಗೆ ಒಳಗಾಗಿರುವುದು ಚರಿತ್ರೆ ಅಧ್ಯಯನದಿಂದ ತಿಳಿದುಬರುವ ಸತ್ಯ. ಅರಸರನ್ನು ಹೊಗಳಿ ಬರೆಯುವ ಸಾಹಿತ್ಯ ಪ್ರಕಾರ ಒಂದಾದರೆ, ಭಕ್ತಿ ಚಳುವಳಿಯ ಸಂದರ್ಭದಲ್ಲಿ ಹುಟ್ಟಿಕೊಂಡ ಸಾಹಿತ್ಯ ಪ್ರಕಾರವೇ ಬೇರೆ. ಅದೇ ರೀತಿ ವಚನ ಸಾಹಿತ್ಯದ ಆಶಯಗಳು ಭಿನ್ನವಾದಂತದ್ದು. ಇದೇ ರೀತಿಯ ಬೆಳವಣಿಗೆಗಳು ಕಲೆಯ ಸಂದರ್ಭದಲ್ಲೂ ಕಂಡುಬರುತ್ತವೆ. ವಿವಿಧ ಅರಸುಮನೆತನಗಳ ಆಳ್ವಿಕೆಯ ಅವಧಿಗಳಲ್ಲಿ ಬೇರೆ ಬೇರೆಯದೇ ಆದ ಶೈಲಿಗಳು ಹುಟ್ಟಿಕೊಂಡವು. ಉದಾಹರಣೆಗೆ, ಚಾಲುಕ್ಯ ಶೈಲಿ, ಹೊಯ್ಸಳ ಶೈಲಿ ಇತ್ಯಾದಿ. ಇದರರ್ಥ ಶೈಲಿಗಳನ್ನು ಅರಸುಮನೆತನಗಳು ಸಂಪೂರ್ಣವಾಗಿ ನಿರ್ಧರಿಸುತ್ತಿದ್ದವು ಎಂದಲ್ಲ. ಈ ವಿಚಾರಗಳನ್ನು ಅಂದಿನ ಸಾಮಾಜಿಕ ಹಾಗೂ ಆರ್ಥಿಕ ಹಿನ್ನೆಲೆಯಿಂದಲೇ ಅಧ್ಯಯನ ನಡೆಸಬೇಕಾಗುತ್ತದೆ.

ಅರಸ ಸಂಸ್ಕೃತಿ ಎನ್ನುವ ಏಕ ಸಂಸ್ಕೃತಿ ಕಲ್ಪನೆಯ ಬದಲಿಗೆ ಹಲವು ಸಂಸ್ಕೃತಿಗಳನ್ನು ಕುರಿತು ಅಧ್ಯಯನ ನಡೆಸುವ ವಿವಿಧ ಪಂಥಗಳ ಬಗ್ಗೆ ಈಗಾಗಲೆ ಚರ್ಚೆ ನಡೆಸಲಾಗಿದೆ. ಮಾರ್ಕ್ಸ್‌ವಾದಿ ಮತ್ತು ಸಬಾಲ್ಟರ್ನ್ ಪಂಥಗಳು ಶೋಷಿತ ಮತ್ತು ಅಲಕ್ಷಿತ ವರ್ಗದ ಜನರ ಸಂಸ್ಕೃತಿಯ ಕುರಿತು ಗಂಭೀರ ಚರ್ಚೆ ನಡೆಸಿವೆ. ಈ ಪಂಥಗಳು ಸಂಸ್ಕೃತಿಯನ್ನು ಕೇವಲ ಮಾನವನ ಜೀವನ ವಿಧಾನ ಎಂಬ ಸರಳೀಕೃತ ವ್ಯಾಖ್ಯಾನಕ್ಕಷ್ಟೇ ಸೀಮಿತಗೊಳಿಸದೆ ಅಲ್ಲಿರುವ ಯಜಮಾನಿಕೆಯ ಸಂಕೇತಗಳಾದ ರಾಜಕೀಯ ಮತ್ತು ಅಧಿಕಾರದ ಪ್ರಶ್ನೆಗಳನ್ನು ಎತ್ತಿಕೊಂಡವು. ಚರಿತ್ರೆ ಅಧ್ಯಯನವು ಜನಕೇಂದ್ರಿತವಾದಾಗ ಮಾತ್ರ ಈ ಪ್ರಶ್ನೆಗಳು ಕಾಣಿಸಿಕೊಳ್ಳಲು ಸಾಧ್ಯ. ಯಾವುದೇ ಒಂದು ಪ್ರದೇಶದ ಸಂಸ್ಕೃತಿ ಚರಿತ್ರೆಯ ಕುರಿತು ಚರ್ಚೆ ನಡೆಸುವಾಗ ಲಿಖಿತ ಆಕರಗಳಂತೆ ಅಲ್ಲಿನ ಮೌಖಿಕ ಆಕರಗಳಲ್ಲಿ ಕಂಡುಬರುವ ಚಾರಿತ್ರಿಕ ವಿವರಗಳು ಅಲಕ್ಷಿತವಾಗಿರುವ ಹಲವಾರು ಸಾಂಸ್ಕೃತಿಕ ಜಗತ್ತುಗಳನ್ನು ತಿಳಿದುಕೊಳ್ಳಲು ಚರಿತ್ರೆಕಾರರಿಗೆ ಸಹಕಾರಿಯಾಗುತ್ತವೆ. ಜನಪದ ಕಲೆ, ಸಾಹಿತ್ಯಗಳಲ್ಲಿ ಪ್ರಜೆಗಳಿರುತ್ತಾರೆಯೇ ಹೊರತು ರಾಜರಲ್ಲ. ಇವು ಸ್ಥಾಪಿತ ಏಕಮುಖೀ ಚಿಂತನೆಯನ್ನು ವಿರೋಧಿಸುವ, ಛಿದ್ರಗೊಳಿಸುವಷ್ಟು ಸಾಮರ್ಥ್ಯವನ್ನು ಹೊಂದಿರುವುದು ಇತ್ತೀಚಿನ ಅಧ್ಯಯನಗಳಿಂದ ಸಾಬೀತುಗೊಂಡಿದೆ. ಜನರ ಬದುಕಿನೊಂದಿಗೇ ಹುಟ್ಟಿಕೊಳ್ಳುವ ಸಾಹಿತ್ಯದಲ್ಲಿ ವಾಸ್ತವಾಂಶಗಳು ಇರಲು ಸಾಧ್ಯವೇ ಹೊರತು ಅಲೌಕಿಕ, ಆಧ್ಯಾತ್ಮಿಕ ಚಿಂತನೆಗಳಿಂದ ಕೂಡಿದ ಸಾಹಿತ್ಯದಲ್ಲಿ ಅಲ್ಲ. ಈ ಕಾರಣದಿಂದಾಗಿ ಬುಡಕಟ್ಟಿನ ಪರಂಪರೆಯಲ್ಲಿ ಸೃಷ್ಟಿಯಾಗಿರುವ ಕಾವ್ಯಗಳು, ಕಥಾನಕಗಳು ಸಂಸ್ಕೃತಿ ಅಧ್ಯಯನಕ್ಕೆ ಮುಖ್ಯವಾಗಬೇಕಾಗಿದೆ. ಇವು ನಿಜವಾದ ಅರ್ಥದಲ್ಲಿ ಚರಿತ್ರೆಯನ್ನು ನಿರೂಪಿಸಬಲ್ಲ, ನಿರ್ಮಿಸಬಲ್ಲ ಆಕರಗಳು.

ಮೌಖಿಕ ಆಕರಗಳ ಅಧ್ಯಯನದ ಸಂದರ್ಭದಲ್ಲೂ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಮೌಖಿಕ ಸಾಹಿತ್ಯ ದಾಖಲೆಗೊಂಡು ಚರಿತ್ರೆಗೆ ಆಕರವಾಗಿ ಪರಿವರ್ತನೆಗೊಳ್ಳುವ ಪ್ರಕ್ರಿಯೆಯೇ ಈ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ. ಚರಿತ್ರೆಗೆ ದಾಖಲಾಗದೆ ಇರುವ ಸಂದರ್ಭದಲ್ಲಿ ಮೌಖಿಕ ಆಕರಗಳು ಯಾವ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಿದ್ದವು ಮತ್ತು ಚರಿತ್ರೆಗೆ ದಾಖಲೆಗೊಂಡ ನಂತರ ಅವುಗಳಲ್ಲಿ ಕಾಣಿಸಿಕೊಳ್ಳುವ ಬದಲಾವಣೆಗಳೇನು ಎನ್ನುವುದು ಸಂಶೋಧನೆಗೊಳ್ಳಬೇಕಾಗುತ್ತದೆ. ಇಲ್ಲಿರುವ ಪ್ರಮುಖ ಪ್ರಶ್ನೆಯೆಂದರೆ, ಮೌಖಿಕ ಸಾಹಿತ್ಯ ಪರಂಪರೆ ಪರಿವರ್ತನೆಯ ಹಾದಿಯಲ್ಲಿ ತನ್ನ ಮೂಲ ಉದ್ದೇಶ, ಆಶಯವನ್ನು ಎಷ್ಟರಮಟ್ಟಿಗೆ ಕಾಪಾಡಿಕೊಂಡು ಬರುತ್ತದೆ ಎನ್ನುವುದೇ ಆಗಿದೆ. ಮೌಖಿಕ ಹಾಡುಗಳನ್ನು ಹಾಡುವವರಿಗೂ ಆ ಹಾಡುಗಳ ಖಚಿತ ಚಾರಿತ್ರಿಕ ಹಿನ್ನೆಲೆ ಗೊತ್ತಿಲ್ಲದಿರುವ ಸಾಧ್ಯತೆಯೇ ಹೆಚ್ಚಾಗಿರುವುದರಿಂದ ಕೆಲವೊಮ್ಮೆ ಅವು ಸಂದಿಗ್ಧ ದಾಖಲೆಗಳಾಗಿಯೂ ಕಂಡುಬರುತ್ತವೆ. ಮೌಖಿಕ ಆಕರಗಳನ್ನು ಬಳಸಿಕೊಂಡು ಚರಿತ್ರೆ ನಿರ್ಮಿಸುವ ಚರಿತ್ರೆಕಾರರು ಯಾವ ಚರಿತ್ರೆ ಅಧ್ಯಯನ ಪಂಥಕ್ಕೆ ಸೇರಿದವರು ಎನ್ನುವುದು ಈ ಸಂದರ್ಭದಲ್ಲಿ ಪ್ರಾಮುಖ್ಯವೆನಿಸುತ್ತದೆ. ಯಾವ ಆಕರವೂ ಅದು ಇದ್ದ ಹಾಗೆ ಚರಿತ್ರೆಗೆ ದಾಖಲಾಗುವುದಿಲ್ಲ. ಚರಿತ್ರೆಕಾರನ ಸಿದ್ಧಾಂತ, ಅಭಿಪ್ರಾಯ ಹಾಗೂ ಸ್ವಾರ್ಥಗಳು ಅವುಗಳಲ್ಲಿ ಸೇರಿಕೊಂಡಿರುತ್ತವೆ. ಇದರಿಂದಾಗಿ ಚರಿತ್ರೆಯೊಂದಿಗೆ ಚರಿತ್ರೆಕಾರನ ಅಧ್ಯಯನವೂ ನಡೆಯಬೇಕಾಗುತ್ತದೆ. ಚರಿತ್ರೆಕಾರ ಇ.ಹೆಚ್.ಕಾರ್ ಅವರ ಪ್ರಕಾರ, ಚರಿತ್ರೆಕಾರನು ಯಾವುದೇ ಒಂದು ವಸ್ತುವನ್ನೂ ಚರಿತ್ರೆಯ ವಸ್ತುವನ್ನಾಗಿ ಪರಿವರ್ತಿಸಬಲ್ಲ. ರೋಮಿಲಾ ಥಾಪರ್ ಅವರ ಪ್ರಕಾರ, ಚರಿತ್ರೆಕಾರ ಯಾವುದೇ ಒಂದು ಸಮಾಜದ ಚಿತ್ರವನ್ನು ಮೂಡಿಸುವಾಗ ಎರಡು ರೀತಿಯ ಪ್ರಭಾವಗಳಿಗೆ ಒಳಗಾಗಿರುತ್ತಾನೆ. ಅವುಗಳೆಂದರೆ, ಪ್ರಸ್ತುತ ಅವಶ್ಯಕತೆಗಳನ್ನು ಗತಕಾಲದಲ್ಲಿ ನೋಡಲು ಯತ್ನಿಸುವುದು ಮತ್ತು ಗತಕಾಲದ ಚಿತ್ರವನ್ನು ಪ್ರಸಕ್ತ ಕಾಲದ ಮೇಲೆ ಹೇರಲು ಪ್ರಯತ್ನಿಸುವುದು.

ಜನಪದ ಕಾವ್ಯ ಕಥನಗಳನ್ನು ಆಧಾರವನ್ನಾಗಿಟ್ಟುಕೊಂಡು ಒಂದು ಪ್ರದೇಶದ ಚರಿತ್ರೆಯನ್ನು ನಿರ್ಮಿಸುವಾಗ ಮೂರು ಮುಖ್ಯ ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಅವುಗಳೆಂದರೆ, ಮೇಲೆ ವಿವರಿಸಿದಂತೆ ಆಕರಗಳು ಹುಟ್ಟಿಕೊಂಡ ಸಂದರ್ಭ, ಪರಿವರ್ತನೆಯ ಹಾದಿಯಲ್ಲಿ ಆಗಿರುವ ಬದಲಾವಣೆಗಳು ಹಾಗೂ ಚರಿತ್ರೆಕಾರನ ಉದ್ದೇಶಗಳು. ಆಕರಗಳು ಚರಿತ್ರೆಯಲ್ಲಿ ದಾಖಲುಗೊಂಡ ನಂತರ ಅಧಿಕೃತವಾದರೂ ಅವುಗಳ ಮೂಲ ಆಶಯಗಳು ಚರಿತ್ರೆಕಾರ ಕಟ್ಟುವ ಚರಿತ್ರೆಗೆ ಭಿನ್ನವಾಗಿರುವ ಸಾಧ್ಯತೆಗಳೇ ಹೆಚ್ಚಾಗಿರುತ್ತದೆ. ಇಂಥ ಸಂದರ್ಭಗಳಲ್ಲಿ ಯಜಮಾನಿಕೆಯ ಸಂಸ್ಕೃತಿಯೇ ಚರಿತ್ರೆಯ ನೈಜ ಚಿತ್ರಣವಾಗಿ ರೂಪುಗೊಳ್ಳುತ್ತದೆ. ಯುರೋಪ್ ಕೇಂದ್ರಿತ ಮತ್ತು ಪುರೋಹಿತಶಾಹಿ ಹಿನ್ನೆಲೆಯಿಂದ ಬಂದ ಅಧ್ಯಯನ ಕ್ರಮಗಳು ಈ ರೀತಿಯ ತಪ್ಪುಗಳನ್ನು ಸಮರ್ಥಿಸಿಕೊಂಡೇ ಚರಿತ್ರೆ ನಿರ್ಮಿಸಿದವು. ಈ ತಪ್ಪುಗಳನ್ನು ಪ್ರಶ್ನಿಸುವ ಮತ್ತು ಸವಾಲಾಗಿ ಸ್ವೀಕರಿಸುವ ಉದ್ದೇಶವನ್ನು ಇಟ್ಟುಕೊಂಡು ದೇಶಿ ಅಧ್ಯಯಾ ಕ್ರಮ ಅಥವಾ ದೇಶೀವಾದ ಹುಟ್ಟಿಕೊಂಡಿತು. ಪ್ರತಿಯೊಂದು ಸಮುದಾಯವೂ ತನ್ನದೇ ಆದ ವಿಶಿಷ್ಟ ಜೀವನ ಕ್ರಮವನ್ನು ಹೊಂದಿದ್ದು ಅದನ್ನು ಅವುಗಳದ್ದೇ ಆದ ದೃಷ್ಟಿಯಿಂದ ಅಥವಾ ಅಧ್ಯಯನ ಮಾದರಿಗಳಿಂದ ನೋಡಬೇಕು ಎನ್ನುವುದೇ ದೇಶೀವಾದ. ಆದರೆ ಈಗಾಗಲೇ ಒಪ್ಪಿದ ಚರಿತ್ರೆ ವ್ಯಾಖ್ಯಾನಗಳ ವರ್ತುಲದಿಂದ ದೇಶೀವಾದ ಹೊರ ಬಂದಿದೆಯೇ ಎನ್ನುವುದು ಚರ್ಚಾಸ್ಪದವಾಗಿದೆ.

ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಗಮನದಲ್ಲಿಟ್ಟುಕೊಂಡು ಶಿಷ್ಯ ಸಂಸ್ಕೃತಿಯ ದೇಶೀವಾದ ಹುಟ್ಟಿಕೊಂಡರೆ, ಶಿಷ್ಯ ಸಂಸ್ಕೃತಿಯನ್ನು ಗಮನದಲ್ಲಿಟ್ಟುಕೊಂಡು ಜಾನಪದ ಸಂಸ್ಕೃತಿಯ ದೇಶೀವಾದ ಹುಟ್ಟಿಕೊಂಡಿತು. ವೈದಿಕ ಧರ್ಮ ಪ್ರತಿಪಾದಿಸುವ ದೇಶೀವಾದವು ವೇದ, ಪುರಾಣ, ಉಪನಿಷತ್ತುಗಳಿಂದ ಆರಂಭಗೊಂಡು ಹುಟ್ಟುಹಾಕಿ ದೇಶೀವಾದ ದ್ವಂದ್ವದಲ್ಲಿ ಸಿಲುಕುವಂತೆ ಮಾಡಿತು. ಜನಪದರ ಬದುಕಿನ ಹಿನ್ನೆಲೆಯಿಂದ ಆರಂಭಗೊಳ್ಳುವ ದೇಶೀವಾದವು ಅಲಕ್ಷ್ತ ವರ್ಗದ ಚರಿತ್ರೆಯ ನಿರ್ಮಣದ ಹಾಗೂ ಮೇಲ್ವರ್ಗದಿಂದ ನಿರೂಪಿಸಲ್ಪಟ್ಟ ಜನಪದರ ಬದುಕಿನ ನಿರಾಕರಣೆಯ ಉದ್ದೇಶಗಳನ್ನು ಹೊಂದಿದೆ. ಈ ಎಲ್ಲಾ ಅಧ್ಯಯನ ವಿಧಾನಗಳು ಚರಿತ್ರೆಯನ್ನು ಬರೆಯುವ ಕ್ರಮ ಕಾಲದಿಂದ ಕಾಲಕ್ಕೆ ಬದಲಾಗುತ್ತಿರುವುದನ್ನು ಸೂಚಿಸುತ್ತವೆ. ಅದೇ ರೀತಿ ಚರಿತ್ರೆಯೆಂಬುದು ಒಂದಲ್ಲ ಎನ್ನುವುದನ್ನು ಸಾಬೀತುಗೊಳಿಸುತ್ತವೆ. ಚರಿತ್ರೆಯಲ್ಲಿ ಅನೇಕ ಬಗೆಗಳಿರುತ್ತವೆ ಮತ್ತು ಅವು ಕಾಲದಿಂದ ಕಾಲಕ್ಕೆ ಬದಲಾಗುತ್ತ ಇರುತ್ತವೆ ಎನ್ನುವುದಕ್ಕೆ ಈಗಾಗಲೇ ಚರ್ಚಿಸಿದೆ ಚರಿತ್ರೆ ಅಧ್ಯಯನದ ವಿವಿಧ ಪಂಥಗಳು ಉದಾಹರಣೆಗಳಾಗಿವೆ. ಚರಿತ್ರೆಯು ಆಯಾ ಪಂಥಗಳ ಸಿದ್ಧಾಂತಗಳಿಗನುಣುವಾಗಿ ಸಂರಚನೆಗೊಳ್ಳುತ್ತಾ ಹೋಯಿತು. ಪ್ರಸ್ತುತ ಕೃತಿಯು ಒಳಗೊಂಡ ಕಾಲಾವಧಿಗೆ ಸಂಬಂಧಿಸಿದಂತೆ ಅನೇಕ ಅಧ್ಯಯನಗಳು ನಡೆದಿವೆ. ಕೆ.ಎ. ನೀಲಕಂಠಶಾಸ್ತ್ರಿ, ಎ.ಎಸ್. ಆಲ್ಟೇಕರ್, ಬಿ.ಎ. ಸಾಲೆತ್ತೂರ್, ಬಿ.ಆರ್. ಗೋಪಾಲ್, ಜಿ.ಎಸ್. ದೀಕ್ಷಿತ್, ಎಸ್. ಗುರುರಾಜಾಚಾರ್, ಪಿ.ಬಿ. ದೇಸಾಯಿ, ಕೆ.ವಿ. ರಮೇಶ, ಎಂ. ಚಿದಾನಂದಮೂರ್ತಿ, ಎಂ.ಎಂ. ಕಲಬುರ್ಗಿ, ಎಸ್. ಶೆಟ್ಟರ್, ಜಿ.ಆರ್. ಕುಪ್ಪುಸ್ವಾಮಿ, ಕೆ.ಎಸ್. ಶಿವಣ್ಣ, ಬರ್ಟನ್ ಸ್ಟೈನ್, ಜೆ.ಡಿ.ಎಂ. ಡೆರೆಟ್, ವಿಲಿಯಂ ಕೊಯಿಲೋ, ಬಿ. ಷೇಕ್ ಅಲಿ, ಶ್ರೀನಿವಾಸ ರಿತ್ತಿ, ಎಚ್.ವಿ. ಶ್ರೀನಿವಾಸಮೂರ್ತಿ, ಆರ್.ಎನ್. ನಂದಿ, ಸಿಂದಗಿ ರಾಜಶೇಖರ, ಸಾಕಿ, ಕೇಶವನ್ ವೆಲುತೆಟ್, ಬಿ. ಸುರೇಂದ್ರರಾವ್, ಎಂ.ಎಸ್. ನಾಗರಾಜರಾವ್ ಮೊದಲಾದ ವಿದ್ವಾಂಸರು ಈ ಅವಧಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿದ್ದಾರೆ. ಅದೇ ರೀತಿ ಹಲವಾರು ಪಿಎಚ್.ಡಿ ಮತ್ತು ಎಂ.ಫಿಲ್ ಅಧ್ಯಯನಗಳು ನಡೆದಿವೆ. ಮೇಲೆ ಉಲ್ಲೇಖಿಸಿದ ವಿದ್ವಾಂಸರೆಲ್ಲರೂ ಬೇರೆ ಬೇರೆ ಅಧ್ಯಯನ ವಿಧಾನಗಳಿಂದ ಚರಿತ್ರೆಯನ್ನು ನಿರ್ಮಿಸುವ ಪ್ರಯತ್ನ ಮಾಡಿರುವುದು ಅವರ ಕೃತಿಗಳಿಂದ ತಿಳಿದುಬರುತ್ತದೆ. ಕೆಲವು ಕೃತಿಗಳು ವಿವರಣಾತ್ಮಕವಾಗಿದ್ದರೆ ಇನ್ನು ಕೆಲವು ವಿವರಣಾತ್ಮಕವೂ, ವಿಶ್ಲೇಷಣಾತ್ಮಕವೂ ಆಗಿವೆ. ಕರ್ನಾಟಕದ ಚರಿತ್ರೆ ಲೇಖನ ಪ್ರಧಾನವಾಗಿ ರಾಷ್ಟ್ರೀಯವಾದಿ ಚಿಂತನೆಗಳಿಂದಲೇ ಕೂಡಿದ್ದಾಗಿ ಕಂಡುಬರುತ್ತದೆ. ವರಿತ್ರೆಯ ವಿಶ್ಲೇಷಣೆಯಲ್ಲಿ ಮಾರ್ಕ್ಸ್‌ವಾದಿ ಮತ್ತು ಸಬಾಲ್ಟರ್ನ್ ಪರಿಕಲ್ಪನೆಗಳನ್ನು ಬಳಸಿಕೊಂಡ ವಿದ್ವಾಂಸರ ಸಂಖ್ಯೆ ಕಡಿಮೆಯೆಂದೇ ಹೇಳಬೇಕು.

ಪ್ರಸ್ತುತ ಕಾಲಾವಧಿಯ ಚರಿತ್ರೆ ಲೇಖನವನ್ನು ಕುರಿತ ವಿಸ್ತಾರವಾದ ಚರ್ಚೆಯನ್ನಾಗಲಿ, ಮೌಲ್ಯಮಾಪನವನ್ನಾಗಲಿ ಈ ಅಧ್ಯಯನದಲ್ಲಿ ಮಾಡಿಲ್ಲ. ಈ ಅವಧಿಯ ಚರಿತ್ರೆ ಲೇಖನದ ಪ್ರಮಾಣ ಅಧಿಕವಾಗಿದ್ದು, ವ್ಯಾಖ್ಯಾನದಲ್ಲಿ ವೈವಿಧ್ಯಮಯವಾದ ಚಿತ್ರವನ್ನು ಒದಗಿಸುತ್ತದೆ. ಚರಿತ್ರೆ ವಿಶ್ಲೇಷಣೆಯ ಕುರಿತಾದ ವಿವಿಧ ಪರಿಕಲ್ಪನೆಗಳನ್ನು ಮಾತ್ರ ವಿಸ್ತಾರವಾಗಿ ಇಲ್ಲಿ ಚರ್ಚಿಸಲಾಗಿದೆ. ಈ ಕೃತಿಯನ್ನು ರಚಿಸುವಲ್ಲಿ ಮೇಲೆ ಹೆಸರಿಸಿದ ಪ್ರತಿಯೊಬ್ಬ ಚರಿತ್ರೆಕಾರನ ಶ್ರಮವೂ ನೆರವಿಗೆ ಬಂದಿದೆ. ಇದರರ್ಥ ಚರಿತ್ರೆಕಾರರ ಎಲ್ಲ ಅಭಿಪ್ರಾಯಗಳನ್ನೂ ಒಪ್ಪಿಕೊಳ್ಳಲಾಗಿದೆ ಎಂದಲ್ಲ. ಅರಸಕೇಂದ್ರಿತ ಚರಿತ್ರೆ ನಿರೂಪಣೆಯ ಮಾರ್ಗದಲ್ಲೇ ಸಾಗಿದ ಸಾಂಪ್ರಾದಾಯಿಕ ಚರಿತ್ರೆಕಾರರನ್ನು ವಿಮರ್ಶೆಗೆ ಒಳಪಡಿಸುವ ಪ್ರಯತ್ನವನ್ನು ಪ್ರಸ್ತುತ ಅಧ್ಯಯನದಲ್ಲಿ ಮಾಡಲಾಗಿದೆ. ಸಮಾಜದ ವಿವಿಧ ರಚನೆಗಳಿಗೆ ಸಂಬಂಧಿಸಿದಂತೆ ಚರಿತ್ರೆಕಾರರಲ್ಲಿ ನಡೆದ ವಾದ-ಪ್ರತಿವಾದಗಳನ್ನು ಇಲ್ಲಿ ದಾಖಲಿಸಿಕೊಳ್ಳಲಾಗಿದೆ. ರಾಜರ, ರಾಜ ಸಂತತಿಗಳ, ವಂಶಾವಳಿಗಳ, ಯುದ್ಧದ, ತಾರೀಕುಗಳ ಪಟ್ಟಿಯನ್ನಷ್ಟೇ ನೀಡುವ ಗ್ರಂಥಗಳನ್ನು ಪರಿಗಣಿಸಲಾಗಿಲ್ಲ. ಏಕೆಂದರೆ ಸಂಸ್ಕೃತಿ ಚರಿತ್ರೆಯ ನಿರ್ಮಾಣಕ್ಕೆ ಇವು ಯಾವ ರೀತಿಯಲ್ಲೂ ಸಹಾಯಕ್ಕೆ ಬರುವುದಿಲ್ಲ. ಇಂಥ ಗ್ರಂಥಗಳಲ್ಲಿ ರಾಜಪ್ರಭುತ್ವ ಮತ್ತು ಧಾರ್ಮಿಕ ಪ್ರಭುತ್ವಗಳನ್ನು ವೈಭವೀಕರಿಸುವ ಶಾಸನಗಳು, ಸಾಹಿತ್ಯ ಕೃತಿಗಳು, ಸ್ಮಾರಕಗಳು ಮುಂತಾದವುಗಳ ಕುರಿತಾದ ವಿವರಣೆ ವಿಪುಲವಾಗಿ ಸಿಗುತ್ತದೆಯೇ ಹೊರತು ಪ್ರಜೆಗಳ ಕುರಿತಾದ ಅದರಲ್ಲೂ ಸಮಾಜದ ಕೆಳಸ್ತರದ ಜನರ ಬದುಕಿನ ಕುರಿತಾದ ಯಾವ ಮಾಹಿತಿಯೂ ಸಿಗುವುದಿಲ್ಲ. ಚರಿತ್ರೆ ಅಧ್ಯಯನವು ಎಂದೂ ಪರಿಪೂರ್ಣವಲ್ಲ. ಇದು ಪ್ರಸ್ತುತ ಕೃತಿಗೂ ಅನ್ವಯಿಸುವ ಮಾತು. ಚರಿತ್ರೆ ವಿಶ್ಲೇಷಣೆಗೆ ಸಂಬಂಧಿಸಿದ ಪರಿಕಲ್ಪನೆಗಳು, ಸಿದ್ಧಾಂತಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಇದೊಂದು ನಿರಂತರ ಪ್ರಕ್ರಿಯೆ. ಜನತೆಯ ಚರಿತ್ರೆ ಅಥವಾ ಸಂಸ್ಕೃತಿ ಚರಿತ್ರೆಕಾರನಿಗೆ ಸವಾಲಿನ ಕೆಲಸವೇ ಆಗಿದೆ. ಚರಿತ್ರೆಯನ್ನು ಜನತೆಯ ಚರಿತ್ರೆ ಅಥವಾ ಸಂಸ್ಕೃತಿ ಚರಿತ್ರೆಯನ್ನಾಗಿ ಅರ್ಥೈಸಿಕೊಂಡಾಗ ಮಾತ್ರ ತಪ್ಪಾಗಿ ವ್ಯಾಖ್ಯಾನಗೊಂಡ ಚರಿತ್ರೆ ಪರಿಕಲ್ಪನೆ ಪುನರ್ವಿಮರ್ಶೆಗೊಳ್ಳಲು ಸಾಧ್ಯ.