ಚರಿತ್ರೆಯ ಬೆಳವಣಿಗೆ ನಿಶ್ಚಿತರೂಪದಲ್ಲಿ ಆರಂಭಗೊಂಡಿರುವುದೇ ಮಾನವ ಉತ್ಪಾದನೆಯಲ್ಲಿ ಪಾಲ್ಗೊಂಡಾಗ ಅಥವಾ ಉತ್ಪಾದನೆಯನ್ನು ಬುಡಕಟ್ಟು ವ್ಯವಸ್ಥೆ ಕೃಷಿ ವ್ಯವಸ್ಥೆಯಾಗಿ ಪರಿವರ್ತನೆಗೊಂಡಿರುವುದು ಚರಿತ್ರೆಯ ಬೆಳವಣಿಗೆಯ ಮೊದಲನೆಯ ಘಟ್ಟ. ಈ ಪರಿವರ್ತನೆ ಅನೇಕ ಬದಲಾವಣೆಗಳಿಗೆ ದಾರಿ ಮಾಡಿಕೊಟ್ಟಿತು. ವಸ್ತುಗಳನ್ನು ಸಂಗ್ರಹಿಸುತ್ತಾ ಅಲೆಮಾರಿ ಜೀವನ ನಡೆಸುತ್ತಿದ್ದ ಮಾನವ ಒಂದೇ ಕಡೆ ನೆಲೆ ನಿಂತು ತನಗೆ ಬೇಕಾದ ವಸ್ತುಗಳನ್ನು ತಾನೇ ಉತ್ಪಾದನೆ ಮಾಡಿಕೊಳ್ಳಲು ಆರಂಭಿಸಿರುವುದು ಆತನ ಭೌತಿಕ ಅವಶ್ಯಕತೆಗಳ ಈಡೇರಿಕೆಗೆ ಸಹಕಾರಿಯಾಯಿತು. ಅನ್ನ, ಬಟ್ಟೆ, ವಸತಿ ಮುಂತಾದವುಗಳನ್ನು ತಾನೇ ನಿರ್ವಹಿಸಿಕೊಂಡು ಅದೇ ಚರಿತ್ರೆಗೆ ತಳಹದಿಯಾಗುವಂತೆ ಮಾಡಿದ. ವಸ್ತುಗಳ ಉತ್ಪಾದನೆಯು ಮಾನವನ ಬದುಕಿಗೆ ತಳಹದಿ ಮಾತ್ರವಲ್ಲದೆ ಆತನ ಸಂಬಂಧಗಳನ್ನು ನಿರ್ಣಯಿಸುವ ಅಂಶವೂ ಆಗಿದೆ. ಈ ವಿವರಣೆಗಳನ್ನು ಮಾರ್ಕ್ಸ್‌ವಾದಿ ಸಿದ್ಧಾಂತ ಚಾರಿತ್ರಿಕ ವಸ್ತುವಾದವು ನೀಡುತ್ತದೆ. ಕೃಷಿ ವ್ಯವಸ್ಥೆ ರೂಪುಗೊಂಡು ಮಾನವನ ಬದುಕು ವ್ಯವಸ್ಥಿತವಾಗಿ ಬೆಳೆದುದ್ದನ್ನು ನೀಡುತ್ತದೆ. ಕೃಷಿ ವ್ಯವಸ್ಥೆ ರೂಪುಗೊಂಡು ಮಾನವನ ಬದುಕು ವ್ಯವಸ್ಥಿತವಾಗಿ ಬೆಳೆದುದ್ದನ್ನು ಅರ್ಥೈಸಿಕೊಳ್ಳಬೇಕಾದರೆ ಚಾರಿತ್ರಿಕ ವಸ್ತುವಾದದ ವಿಧಾನವನ್ನು ಅನುಸರಿಸುವುದು ಅನಿವಾರ್ಯವಾಗುತ್ತದೆ. ಆದರೆ ಅರಸಕೇಂದ್ರಿತ ಚರಿತ್ರೆಯಲ್ಲಿ ಕೃಷಿ ವ್ಯವಸ್ಥೆ ತಂದ ಪರಿವರ್ತನೆಯಾಗಲಿ, ದುಡಿಯುವ ವರ್ಗವಾಗಲಿ ಪ್ರಾಮುಖ್ಯತೆಯನ್ನು ಅವಲಂಬಿಸಿರುತ್ತಿತ್ತು. ಆದರೆ ಕೃಷಿ ಕಾರ್ಮಿಕರು ಸಮಾಜದ ಅತ್ಯಂತ ಕೆಳಸ್ತರದ ಅಥವಾ ಅಲಕ್ಷಿತವರ್ಗಕ್ಕೆ ಸೇರಿದ್ದರು. ರಾಜ್ಯದ ಅರ್ಥ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದ ಹಾಗೂ ಆ ಮೂಲಕ ಚರಿತ್ರೆಯ ನಿರ್ಮಾಣಕ್ಕೆ ಕಾರಣನಾದ ಕೃಷಿಕನನ್ನು ಚರಿತ್ರೆಹೀನನನ್ನಾಗಿ ಮಾಡುವ ಪ್ರಕ್ರಿಯೆಗಳು ಅರಸಕೇಂದ್ರಿತ ಚರಿತ್ರೆಯಲ್ಲಿ ಕಾಣಿಸಿಕೊಂಡವು. ಇದು ವರ್ಣ/ಜಾತಿ ಆಧಾರಿತ ಸಮಾಜದ ತೀರ್ಮಾನವೂ ಆಗಿದೆ. ಕ್ರಿ.ಶ.೮ನೆಯ ಶತಮಾನದ ವೇಳೆಗೆ ಕರ್ನಾಟಕದಲ್ಲಿ ಕೃಷಿ ವ್ಯವಸ್ಥೆ ರೂಪುಗೊಳ್ಳಲಾರಂಭಿಸಿತ್ತು ಮತ್ತು ಅದಕ್ಕೆ ಹೊಸ ಚಾಲನೆ ದೊರಕ್ಕಿತ್ತು ಎನ್ನುವ ಅಂಶವನ್ನು ದೃಢೀಕರಿಸುವ ಅನೇಕ, ಆಕರಗಳು ಸಿಗುತ್ತವೆ. ಈ ಅಧ್ಯಾಯದಲ್ಲಿ ಕೃಷಿಯ ವಿಸ್ತರಣೆ ಮತ್ತು ಉಳುಮೆಯ ವಿಧಾನ, ನೀರಾವರಿ, ಕಂದಾಯ ಹಾಗೂ ಭೂಮಾಲೀಕರು ಮತ್ತು ಕೃಷಿ ಕಾರ್ಮಿಕರು ಎನ್ನುವ ಕೃಷಿ ವ್ಯವಸ್ಥೆಗೆ ಸಂಬಂಧಿಸಿದ ನಾಲ್ಕು ಅಂಶಗಳ ಕುರಿತಾಗಿ ವಿಶ್ಲೇಷಣೆ ನಡೆಸಲಾಗಿದೆ.

೨.೧ ಕೃಷಿಯ ವಿಸ್ತರಣೆ ಮತ್ತು ಉಳುಮೆಯ ವಿಧಾನ

ಕೃಷಿಯೇತರ ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸುವ ಪ್ರಕ್ರಿಯೆ ಕ್ರಿ.ಶ. ೮ರಿಂದ ೧೪ನೆಯ ಶತಮಾನಗಳ ನಡುವಣ ಅವಧಿಯಲ್ಲಿ ಇತ್ತು ಎನ್ನುವುದಕ್ಕೆ ಸಾಕಷ್ಟು ಆಧಾರಗಳಿವೆ. ಈ ಪರಿವರ್ತನಾ ಪ್ರಕ್ರಿಯೆಯ ಮೂಲ ಉದ್ದೇಶ ಕೃಷಿ ಉತ್ಪಾದನೆಯನ್ನು ಹೆಚ್ಚಿಸುವುದು. ಕೃಷಿ ಭೂಮಿಯ ವಿಸ್ತರಣೆ ಮುಖ್ಯವಾಗಿ ಎರಡು ಉದ್ದೇಶಗಳನ್ನು ಈಡೇರಿಸುತ್ತಿತ್ತು. ಅವುಗಳೆಂದರೆ,

೧. ರಾಜ್ಯದ ಆದಾಯವನ್ನು ಹೆಚ್ಚಿಸುವುದು ಈ ವಿಸ್ತರಣೆಯ ಮೊದಲನೆಯ ಉದ್ದೇಶ. ಕೃಷಿ ಯೋಗ್ಯವಲ್ಲದ ಪ್ರದೇಶಗಳನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಿ ಅದರಿಂದ ರಾಜ್ಯದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ಬರುವಂತೆ ಮಾಡಲಾಯಿತು.

೨. ಜನಸಂಖ್ಯೆಯ ಒತ್ತಡವನ್ನು ಕಡಿಮೆಗೊಳಿಸುವುದು ಇನ್ನೊಂದು ಉದ್ದೇಶ. ಹೊಸದಾಗಿ ನಿರ್ಮಾಣಗೊಳ್ಳುವ ಕೃಷಿಯೋಗ್ಯ ಭೂಮಿಯಲ್ಲಿ ಜನರು ವಾಸಮಾಡತೊಡಗುವುದು ಸಹಜ. ಇದು ಹೊಸ ಜನವಸತಿ ನಿರ್ಮಾಣಗೊಳ್ಳುವುದಕ್ಕೆ ಕಾರಣವಾಯಿತು. ಅದೇ ರೀತಿ ಇದರಿಂದ ಜನಸಂಖ್ಯೆಯ ಒತ್ತಡ ಕಡಿಮೆಯಾಗತೊಡಗಿತು.

ಕೃಷಿಭೂಮಿಯ ವಿಸ್ತರಣೆಯಿಂದಾಗಿ ನಿರ್ಮಾಣಗೊಂಡ ಹೊಸ ಜನವಸತಿಗಳಲ್ಲಿ ಕೆರೆ ಮತ್ತು ದೇವಾಲಯಗಳನ್ನು ನಿರ್ಮಿಸಲಾಗುತ್ತಿತ್ತು ಎನ್ನುವ ಮಾಹಿತಿ ಅನೇಕ ಶಾಸನಗಳಲ್ಲಿ ಸಿಗುತ್ತದೆ. ನೀರಾವರಿ ಉದ್ದೇಶಕ್ಕಾಗಿ ಕೆರೆಯ ನಿರ್ಮಾಣ ಅಲ್ಲಿನ ಅವಶ್ಯಕತೆಯಾಗಿತ್ತು. ದೇವಾಲಯಗಳ ನಿರ್ಮಾಣವು ಅಂದಿನ ಧಾರ್ಮಿಕ ಮನೋಭಾವ ಹಾಗೂ ಕೃಷಿ ವ್ಯವಸ್ಥೆಯಲ್ಲಿ ದೇವಾಲಯಗಳು ನಿರ್ಮಾಣವು ಅಂದಿನ ಧಾರ್ಮಿಕ ಮನೋಭಾವ ಹಾಗೂ ಕೃಷಿ ವ್ಯವಸ್ಥೆಯಲ್ಲಿ ದೇವಾಲಯಗಳು ಹೊಂದಿರುತ್ತಿದ್ದ ಸ್ಥಾನದ ಕುರಿತು ತಿಳಿಸುತ್ತದೆ. ಕೆ.ಎ. ನೀಲಕಂಠಶಾಸ್ತ್ರಿ ಅವರು ತಮ್ಮ ‘ದಿ ಚೋಳಾಸ್’ ಕೃತಿಯಲ್ಲಿ ದಕ್ಷಿಣ ಭಾರತದಲ್ಲಿ ಕೃಷಿ ಭೂಮಿಯ ವಿಸ್ತರಣೆ ಯಾವ ರೀತಿ ಆಗುತ್ತಿತ್ತು ಎನ್ನುವುದರ ವಿವರಣೆಯ ನೀಡಿದ್ದಾರೆ.[1]ಜಿ.ಯಾಜ್‍ದಾನಿ ಅವರು ಸಂಪಾದಿಸಿದ ‘ದ ಅರ‍್ಲೀ ಹಿಸ್ಟರಿ ಆಫ್ ದಿ ಡೆಕ್ಕಾನ್’ ಗ್ರಂಥದಲ್ಲಿ ಕಾಕತೀಯ ಅರಸ ಪ್ರತಾಪರುದ್ರ ಕೃಷಿಯೇತರ ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಿದುದರ ಕುರಿತ ಚರ್ಚೆ ಸಿಗುತ್ತದೆ.[2] ಹೊಯ್ಸಳರ ಆಳ್ವಿಕೆಯ ಸಂದರ್ಭದಲ್ಲಿ ಅನೇಕ ಗೌಡರು[3] ಸೇರಿ ಬಂಕಿಹಳ್ಳಿ ಎನ್ನುವ ಹಳ್ಳಿಯನ್ನು ಸ್ಥಾಪಿಸಿ ಅಲ್ಲಿ ಒಂದು ಕೆರೆ ಮತ್ತು ದೇವಾಲಯವನ್ನು ನಿರ್ಮಿಸಿದರು.[4] ಕೊಂಡಳ್ಳಿ ಅಗ್ರಹಾರದ ಮಹಾಜನರ ಕೋರಿಕೆಯ ಮೇರೆಗೆ ಒಬ್ಬ ಗಾವುಂಡ ತನ್ನ ಸಹೋದರರ ಸಹಾಯದಿಂದ ಕಾಡನ್ನು ಕಡಿದು ಒಂದು ಹೊಸ ಹಳ್ಳಿಯನ್ನು ನಿರ್ಮಿಸಿ ಅಲ್ಲಿ ಎರಡು ಕೆರೆಗಳನ್ನು ಕಟ್ಟಿಸಿದ.[5] ಅದೇ ರೀತಿ ವೀರದಂಡನಾಯಕ ಎನ್ನುವ ಹೆಸರಿನ ಮಂತ್ರಿಯೊಬ್ಬನು ವೀರಬಲ್ಲಾಳಪುರ ಎನ್ನುವ ನೂತನ ಹಳ್ಳಿಯನ್ನು ನಿರ್ಮಿಸಿ ಹಲವಾರು ಕೆರೆಗಳನ್ನು ಕಟ್ಟಿಸಿದ.[6]

ಕೃಷಿಯ ವಿಸ್ತರಣೆ ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ. ಕಾಡುಗಳನ್ನು ಕಡಿದು, ಭೂಮಿಯನ್ನು ಸಮತಟ್ಟುಗೊಳಿಸಿ ಕೃಷಿಯೋಗ್ಯ ಭೂಮಿಯನ್ನಾಗಿ ಮಾಡಬೇಕಾಗಿತ್ತು. ಈ ಕಾರಣಕ್ಕಾಗಿಯೇ ಕೃಷಿ ಭೂಮಿಯನ್ನು ವಿಸ್ತರಿಸುವ ಜನರಿಗೆ ರಾಜ್ಯವು ಸಹಾಯ-ಸಹಕಾರಗಳನ್ನು ನೀಡುತ್ತಿತ್ತು. ಅಂಥ ವ್ಯಕ್ತಿಗಳಿಗೆ ಅಥವಾ ಸಮುದಾಯಗಳಿಗೆ ಭೂಮಿಯನ್ನು ದಾನ ನೀಡಲಾಗುತ್ತಿತ್ತು ಹಾಗೂ ತೆರಿಗೆ ವಿನಾಯಿತಿಯನ್ನೂ ನೀಡಲಾಗುತ್ತಿತ್ತು.[7] ಹೊಸದಾಗಿ ನಿರ್ಮಾಣಗೊಳ್ಳುವ ಹಳ್ಳಿಗಳು ರೈತರ ಅಧೀನಕ್ಕೆ ಒಳಪಟ್ಟಿರಲಿಲ್ಲ. ಅವು ಮಹಾಜನರ ಇಲ್ಲವೇ ಗ್ರಾಮಗಳ ಅಧಿಕಾರಿಗಳ ಅಧೀನದಲ್ಲಿರುತ್ತಿದ್ದವು. ಅದೇ ರೀತಿ ಭೂಮಾಲೀಕರು ಹಳ್ಳಿಗಳ ಮೇಲೆ ಹಿಡಿತವನ್ನು ಹೊಂದಿದ್ದರು. ಈ ಕಾರಣದಿಂದಾಗಿ ಕೃಷಿಯ ವಿಸ್ತರಣೆ ಅರಸರಿಗೆ ಮತ್ತು ಭೂಮಾಲೀಕರಿಗೆ ಹೆಚ್ಚು ಲಾಭದಾಯಕವಾಗಿರುತ್ತಿತ್ತು. ರೈತರು ಹೆಚ್ಚು ಕಡಿಮೆ ಕೂಲಿಯಾಳುಗಳಾಗಿ ಕೆಲಸ ಮಾಡಬೇಕಾಗುತ್ತಿತ್ತು. ಈ ಬೆಳವಣಿಗೆಗಳು ಕ್ರಿ.ಶ. ೧೧ ರಿಂದ ೧೩ನೆಯ ಶತಮಾನಗಳ ಅವಧಿಯಲ್ಲಿ ಹೆಚ್ಚಾಗಿ ಕಂಡು ಬಂತು.[8] ಕೃಷಿಯ ವಿಸ್ತರಣೆಯ ಕುರಿತು ಚರ್ಚಿಸುವಾಗ ಕೃಷಿ ಭೂಮಿಯಲ್ಲಿನ ಅನೇಕ ರೀತಿಯ ವಿಧಗಳ ಕುರಿತು ಉಲ್ಲೇಖಿಸುವುದು ಅನಿವಾರ್ಯವಾಗುತ್ತದೆ. ಅವುಗಳೆಂದರೆ, ಬೈಲು, ಮಜಲು ಹಾಗೂ ಬೆಟ್ಟ ಪ್ರದೇಶಗಳು.[9] ಬೈಲು ಎಂದರೆ ಸಂಪೂರ್ಣವಾಗಿ ನೀರಾವರಿ ವ್ಯವಸ್ಥೆ ಇರುವ, ಮೂರು ಬೆಳೆ ತೆಗೆಯಬಹುದಾದ ಪ್ರದೇಶ. ಮಜಲುಗದ್ದೆ ಬೈಲುಗಿಂತ ಸ್ವಲ್ಪ ಎತ್ತರದಲ್ಲಿ ಇದ್ದು ಒಂದು ಬೆಳೆಯಷ್ಟೇ ತೆಗೆಯಬಹುದಾಗಿತ್ತು. ನೀರಿನ ಸರಿಯಾದ ವ್ಯವಸ್ಥೆ ಇದ್ದರೆ ಮಾತ್ರ ಎರಡು ಬೆಳೆ ತೆಗೆಯಬಹುದಿತ್ತು. ಬೆಟ್ಟವು ಎತ್ತರ ಪ್ರದೇಶದಲ್ಲಿರುವ ಕೃಷಿ ಭೂಮಿ. ಆದರೆ ಅಲ್ಲಿ ಬೆಳೆಗಳನ್ನು ಬೆಳೆಯುವುದು ಮಳೆಯನ್ನು ಅವಲಂಬಿಸಿರುತ್ತಿತ್ತು. ಬೆಟ್ಟಗುಡ್ಡಗಳಲ್ಲಿ ಕುಮೇರ್ (ಕುಮೇರಿ) ಎನ್ನುವ ಇನ್ನೊಂದು ರೀತಿಯ ಕೃಷಿ ಪ್ರದೇಶಗಳಿರುತ್ತಿದ್ದವು.[10] ಇದನ್ನು ಕುಮೇರ್ ಕೃಷಿ ಎಂದೇ ಕರೆಯಲಾಗಿದೆ. ಈ ಕೃಷಿಯನ್ನು ವರ್ಷಕ್ಕೊಂದು ಸಲ ಅಥವಾ ಎರಡು ವರ್ಷಕೊಮ್ಮೆ ಮಾಡಲಾಗುತ್ತಿತ್ತು. ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಬುಡಕಟ್ಟು ಜನರು ಈ ಕೃಷಿ ಪದ್ಧತಿಯನ್ನು ಅನುಸರಿಸುತ್ತಿದ್ದರು. ಕಾಡನ್ನು ಕಡಿದು ಭೂಮಿಯನ್ನು ಕೃಷಿಯೋಗ್ಯವನ್ನಾಗಿ ಮಾಡಿ ಬಿತ್ತನೆ ಕೆಲಸವನ್ನು ಮಾಡಲಾಗುತ್ತಿತ್ತು.

ಕ್ರಿ.ಶ. ೮-೧೪ನೆಯ ಶತಮಾನಗಳಲ್ಲಿ ಯಾವ ಬೆಳೆಗಳನ್ನು ಬೆಳೆಯಲಾಗುತ್ತಿತ್ತು ಎನ್ನುವುದನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಾಗುವುದಿಲ್ಲ. ಆದರೂ ವ್ಯಾಪಾರ-ವಾಣಿಜ್ಯ, ತೆರಿಗೆ, ಕುಶಲಕರ್ಮಿಗಳು ಮುಂತಾದ ವಿಷಯಗಳ ಅಧ್ಯಯನ ನಡೆಸುವಾಗ ಬೆಳೆಗಳ ಕುರಿತೂ ಮಾಹಿತಿ ಸಿಗುತ್ತದೆ. ಕೆಲವೊಂದು ಶಾಸನಗಳು ಮತ್ತು ಸಾಹಿತ್ಯ ಕೃತಿಗಳಲ್ಲೂ ಬೆಳೆಗಳ ಕುರಿತಾದ ಉಲ್ಲೇಖಗಳಿವೆ. ಭತ್ತ ಪ್ರಮುಖ ಬೆಳೆಯಾಗಿದ್ದು ಫಲವತ್ತಾದ ಭೂಮಿ ಹಾಗೂ ನೀರು ಪೂರೈಕೆ ಇರುವ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿತ್ತು. ವಿವಿಧ ರೀತಿಯ ಭತ್ತವನ್ನು ಬೆಳೆಯಲಾಗುತ್ತಿದ್ದು, ಉತ್ತಮ ಭತ್ತವನ್ನು ಶ್ರೀಮಂತವರ್ಗದವರು ಬಳಸಿಕೊಳ್ಳುತ್ತಿದ್ದರು.[11] ಶಾಸನವೊಂದರಲ್ಲಿ ಕಾಡಕ್ಕಿ ಎನ್ನುವ ಪದದ ಉಲ್ಲೇಖವಿದ್ದು, ಅದು ಕಾಡು ಪ್ರದೇಶಗಳಲ್ಲಿ ಬೆಳೆಯುತ್ತಿದ್ದ ಭತ್ತವಾಗಿರಬೇಕು.[12] ಇತರ ಪ್ರಮುಖ ಬೆಳೆಗಳೆಂದರೆ ಜೋಳ, ರಾಗಿ, ಗೋಧಿ, ತೊಗರಿ, ಹೆಸರು, ಉದ್ದು ಇತ್ಯಾದಿ. ಇದರೊಂದಿಗೆ ಸಾಂಬಾರು ಪದಾರ್ಥಗಳು, ಹಣ್ಣುಹಂಪಲು, ತರಕಾರಿ, ಉತ್ತಮ ಜಾತಿಯ ಮರಗಳು ಮುಂತಾದವುಗಳನ್ನು ಬೆಳೆಯಲಾಗುತ್ತಿತ್ತು.[13] ಕೃಷಿಯ ಉತ್ಪಾದನೆ ಮತ್ತು ಹೆಚ್ಚುವರಿ ಉತ್ಪಾದನೆ ಕೃಷಿಯೇತರ ಚಟುವಟಿಕೆಗಳ ಹುಟ್ಟಿಗೂ ಕಾರಣವಾಯಿತು. ಕೃಷಿಯ ಬೆಳವಣಿಗೆಯೆಂದರೆ ಅದು ರಾಜ್ಯದ ಬೆಳವಣಿಗೆ ಎಂಬರ್ಥವನ್ನು ಪಡೆದು ಕೊಂಡಿತು. ಕೃಷಿಯ ಪ್ರಾಮುಖ್ಯತೆಯನ್ನು ಅರಿತುಕೊಂಡ ಅರಸರು ಹಾಗೂ ಇತರ ಅಧಿಕಾರಿಗಳು ಕೃಷಿಯನ್ನು ಸುಧಾರಿಸುವ ಪ್ರಯತ್ನವನ್ನು ಮಾಡಿದರು. ಇದು ಕೃಷಿಯ ವಿಸ್ತರಣೆಗೆ ಕಾರಣವಾಗಿ ಉಳುಮೆಯ ವಿಧಾನದಲ್ಲೂ ಪ್ರಯತ್ನವನ್ನು ಬದಲಾವಣೆಗಳು ಕಾಣಿಸಿಕೊಂಡವು. ಕೃಷಿಗೆ ಬಳಸುವ ಉಪಕರಣಗಳಲ್ಲಿ ಬದಲಾವಣೆಗಳಾಗಿ ಅದು ಕೃಷಿ ಉತ್ಪಾದನೆಯ ಮೇಲೆ ಮಹತ್ತರ ಪರಿಣಾಮಗಳನ್ನು ಬೀರಿತು. ಸಾಮಾಜಿಕ ಸಂಬಂಧಗಳು ಇದರಿಂದಾಗಿ ಹೊಸ ರೂಪವನ್ನು ಪಡೆದುಕೊಳ್ಳುವಂತಾಯಿತು.

ಭೂಮಿಯನ್ನು ಉಳುವುದು ಪ್ರಾಚೀನ ಕಾಲದಿಂದಲೂ ಬೆಳೆದುಬಂದ ಕೃಷಿ ವಿಧಾನ. ಆದರೆ ಉಳುಮೆಯ ವಿಧಾನದಲ್ಲಿ ಚರಿತ್ರೆಯ ಪ್ರತಿಯೊಂದು ಹಂತದಲ್ಲಿಯೂ ಬದಲಾವಣೆಗಳಾಗಿರುವುದು ಕಂಡುಬರುತ್ತದೆ. ಇದು ಬಳಸುವ ಉಪಕರಣಗಳಲ್ಲಾದ ಬದಲಾವಣೆಯಿಂದಾಗಿ ಸಾಧ್ಯವಾಯಿತು. ಮಧ್ಯಕಾಲೀನ ಸಂದರ್ಭದಲ್ಲಿ ಕೃಷಿ ಭೂಮಿಯನ್ನು ವಿಸ್ತಾರಗೊಳಿಸಿರುವುದು, ಹೆಚ್ಚೆಚ್ಚು ಜನರನ್ನು ಕೃಷಿಯಲ್ಲಿ ತೊಡಗಿಸಿರುವುದು, ಗೊಬ್ಬರಗಳ ಬಳಕೆ, ಉತ್ತಮ ಬೀಜಗಳ ಆಯ್ಕೆ, ಕೆರೆಗಳ ನಿರ್ಮಾಣ ಮುಂತಾದ ವಿಚಾರಗಳ ಕುರಿತು ಮಾಹಿತಿ ಸಿಗುತ್ತದೆ. ಇವುಗಳ ಆಧಾರದ ಮೇಲೆ ಕೃಷಿ ಕ್ಷೇತ್ರದಲ್ಲಾದ ಬದಲಾವಣೆಗಳನ್ನು ಗುರುತಿಸಲು ಸಾಧ್ಯ.[14]ಆದರೆ ವಸ್ತುಗಳ ಉತ್ಪಾದನೆಗಾಗಿ ಉಪಯೋಗಿಸುವ ಉಪಕರಣಗಳು, ಅವುಗಳನ್ನು ಉಪಯೋಗಿಸಿ ನಡೆಸುವ ಉತ್ಪಾದನಾ ಕ್ರಮ ಹಾಗೂ ಅವುಗಳಿಂದಾಗುವ ಸಾಮಾಜಿಕ ಸಂಬಂಧಗಳ ಮೇಲಣ ಬದಲಾವಣೆ ಈ ಕುರಿತು ಮಧ್ಯಕಾಲೀನ ಕರ್ನಾಟಕಕ್ಕೆ ಸಂಬಂಧಿಸಿದಂತೆ ಅಧ್ಯಯನಗಳು ಆಗಿರುವುದು ಕಂಡುಬರುವುದಿಲ್ಲ. ಈ ಅಧ್ಯಯನ ವಿಧಾನವನ್ನು ಹುಟ್ಟುಹಾಕಿದವರು ಕಾರ್ಲ್‌ಮಾರ್ಕ್ಸ್‌ ಮತ್ತು ಏಂಗೆಲ್ಸ್. ಇದನ್ನು ಚಾರಿತ್ರಿಕ ವಸ್ತುವಾದ ಎಂಬುದಾಗಿ ಕರೆಯಲಾಗಿದೆ. ಈ ಸಿದ್ಧಾಂತವು ವಸ್ತುಗಳನ್ನು ಉತ್ಪಾದಿಸಲು ಮಾನವ ಯಾವ ವಿಧಾನವನ್ನು ಅನುಸರಿಸುತ್ತಿದ್ದ ಹಾಗೂ ಅವನ ಉತ್ಪಾದನಾ ಸಲಕರಣೆಗಳು ಯಾವುವು ಎನ್ನುವುದನ್ನು ವಿಶ್ಲೇಷಿಸುತ್ತದೆ.[15] ಉಪಕರಣ ಮತ್ತು ಅದರಿಂದ ಉತ್ಪಾದಿಸಿದ ವಸ್ತು ಇವೆರಡನ್ನೂ ಆಧಾರವಾಗಿಟ್ಟುಕೊಂಡು ಆಯಾ ಕಾಲದ ಜನರ ಬದುಕನ್ನು ಅರ್ಥೈಸಿಕೊಳ್ಳಬಹುದು. ಇದನ್ನೇ ವಸ್ತುವಾದಿ ವಿಶ್ಲೇಷಣೆ ಎಂಬುದಾಗಿ ಕರೆಯಲಾಗಿದೆ.[16]

ಅಧ್ಯಯನದ ಈ ಅವಧಿಯಲ್ಲಿ ಸಾಂಪ್ರದಾಯಿಕ ಉಳುಮೆ ಪದ್ಧತಿಯೇ ಇತ್ತು ಎಂಬುದಾಗಿ ತಿಳಿದುಬರುತ್ತದೆ. ವ್ಯವಸಾಯ ಕ್ರಮದ ಕುರಿತಂತೆ ಸ್ಪಷ್ಟವಾದ ಚಿತ್ರವನ್ನು ನೀಡುವ ಶಾಸನಗಳು ವಿರಳ. ಭೂಮಿಯನ್ನು ಸಾಗುವಳಿ (ಉಳುಮೆ) ಮಾಡಲು ಉಪಯೋಗಿಸುತ್ತಿದ್ದ ಉಪಕರಣ ಗಳೆಂದರೆ ಎರಡು ಎತ್ತುಗಳು, ನೇಗಿಲು ಮತ್ತು ನೊಗ. ಇಲ್ಲಿ ಎತ್ತುಗಳು ಪ್ರಾಣಿಗಳಾಗಿದ್ದರೂ ಅವುಗಳನ್ನು ಉಪಕರಣಗಳ ಸಾಲಿಗೆ ಸೇರಿಸಲಾಗಿದೆ. ಈ ಕಾರಣಕ್ಕಾಗಿಯೇ ಕೃಷಿ ವ್ಯವಸ್ಥೆಯಲ್ಲಿ ಪಶುಸಂಗೋಪನೆ ಪ್ರಮುಖ ಸ್ಥಾನವನ್ನು ಪಡೆದಿತ್ತು. ಪ್ರಾಣಿಗಳನ್ನು ಕೃಷಿಯಲ್ಲಿ ಮಾತ್ರವಲ್ಲದೆ ಸಾರಿಗೆ, ಯುದ್ಧದ ಸಂದರ್ಭಗಳಲ್ಲೂ ಬಳಸಲಾಗುತ್ತಿತ್ತು. ಸಾಂಪ್ರದಾಯಕ ಕೃಷಿಯಲ್ಲಿ ಕೃಷಿ ಕಾರ್ಮಿಕರನ್ನು ಇತರ ಕೃಷಿ ಉಪಕರಣಗಳ ರೀತಿಯಲ್ಲಿಯೇ ನೋಡಲಾಗುತ್ತಿತ್ತು. ಎರಡು ಎತ್ತುಗಳಿಗೆ ನೊಗ ಮತ್ತು ನೇಗಿಲು ಕಟ್ಟಿ ಅವುಗಳ ಸಹಾಯದಿಂದ ಒಬ್ಬ ವ್ಯಕ್ತಿ (ರೈತ) ಭೂಮಿಯನ್ನು ಉಳುವುದು ಅಂದಿನ ವಿಧಾನವಾಗಿತ್ತು. ಈ ವಿಧಾನ ಇಂದಿನವರೆಗೂ ಮುಂದುವರಿದುಕೊಂಡು ಬಂದಿರುವುದನ್ನು ಕಾಣಬಹುದಾಗಿದೆ. ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿದ ನಂತರ ಬೀಜಗಳನ್ನು ಬಿತ್ತಲಾಗುತ್ತಿತ್ತು. ಗೊಬ್ಬರವನ್ನು ನೀಡುವ ವ್ಯವಸ್ಥೆ ಇತ್ತು. ಭೂಮಿಯ ಉಳುಮೆ, ಬಿತ್ತನೆಯ ಬೀಜ, ನೀಡಬೇಕಾದ ಗೊಬ್ಬರ, ನೀರು ಪೂರೈಕೆ ಮುಂತಾದವುಗಳಿಗೆ ಕೃಷಿಕರು ಪ್ರಥಮ ಆದ್ಯತೆಯನ್ನು ನೀಡುತ್ತಿದ್ದರು. ಕಬ್ಬಿಣದ ಬಳಕೆ ಕೃಷಿಯಲ್ಲಿ ಪ್ರಗತಿಯನ್ನು ಸಾಧಿಸುವಂತೆ ಮಾಡಿತು. ಕೃಷಿಯಲ್ಲಿ ಹೊಸ ತಾಂತ್ರಿಕತೆಯ ಅಳವಡಿಕೆ ಹೆಚ್ಚುವರಿ ಉತ್ಪಾದನೆಗೆ ಕಾರಣವಾಯಿತು.

೨.೨ ನೀರಾವರಿ

ಕೃಷಿ ವ್ಯವಸ್ಥೆ ಜೀವಂತವಾಗಿರಬೇಕಾದರೆ ಅದರ ಜೊತೆಗೆ ನೀರಾವರಿ ವ್ಯವಸ್ಥೆಯೂ ಇರಬೇಕು. ಕೃಷಿ ಸಂಪೂರ್ಣವಾಗಿ ಮಳೆಯನ್ನೇ ಅವಲಂಬಿಸಿರಲು ಸಾಧ್ಯವಿಲ್ಲ. ಆದ್ದರಿಂದ ಕೃಷಿಗೆ ಕೃತಕ ನೀರಿನ ವ್ಯವಸ್ಥೆ ಅನಿವಾರ್ಯ.[17] ರಾಜ್ಯದ ಆರ್ಥಿಕತೆಯಲ್ಲಿ ಕೃಷಿ ಪ್ರಧಾನವಾಗಿದ್ದರಿಂದಾಗಿ ಎಲ್ಲಾ ಅರಸುಮನೆತನಗಳು ನೀರಾವರಿಗೆ ಹೆಚ್ಚಿನ ಗಮನವನ್ನು ಕೊಡುವುದು ಅವಶ್ಯಕವಾಗಿತ್ತು. ಈ ಕಾರಣದಿಂದಾಗಿಯೇ ಕೃಷಿಯೋಗ್ಯ ಭೂಮಿಯನ್ನು ಎರಡು ರೀತಿಯಾಗಿ ವಿಂಗಡಿಸಲಾಗಿತ್ತು. ಅವುಗಳೆಂದರೆ,

೧. ಸಂಪೂರ್ಣವಾದ ಮಳೆಯನ್ನೇ ಅವಲಂಬಿಸಿರುವ ಕೃಷಿ ಭೂಮಿ

೨. ನದಿ, ಕೆರೆ, ಬಾವಿಗಳನ್ನು ಅವಲಂಬಿಸಿರುವ ಕೃಷಿ ಭೂಮಿ

ಮಳೆಯನ್ನು ಅವಲಂಬಿಸದೆ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ನೀರಾವರಿ ಸಂಪನ್ಮೂಲಗಳು ಅತ್ಯವಶ್ಯ. ಈ ನಿಟ್ಟಿನಲ್ಲಿ ಅರಸರು ಕೈಗೊಂಡ ಮಾದರಿಯನ್ನೇ ಸಾಮಂತರು ಮತ್ತು ಅಧಿಕಾರಿಗಳು ಅನುಸರಿಸಿದರು. ಅಂದಿನ ಸಂದರ್ಭದಲ್ಲಿ ನೀರಾವರಿ ವ್ಯವಸ್ಥೆಯನ್ನು ಧಾರ್ಮಿಕ ಹಿನ್ನೆಲೆಯಿಂದಲೂ ನೋಡಲಾಗಿತ್ತು. ಕೆರೆ, ಕಾಲುವೆ, ಬಾವಿಗಳ ನಿರ್ಮಾಣವನ್ನು ಶ್ರೇಷ್ಠವಾದ ಧರ್ಮಕಾರ್ಯಾವೆಂದು ತಿಳಿಯಲಾಗಿತ್ತು.[18] ಇದು ಪುರೋಹಿತಶಾಹಿ ವ್ಯವಸ್ಥೆಯ ಪ್ರಭಾವ ಕೃಷಿಯ ಮೇಲೆ ಎಷ್ಟರಮಟ್ಟಿಗೆ ಆಗಿತ್ತು ಎನ್ನುವುದನ್ನು ಸೂಚಿಸುತ್ತದೆ. ನೀರಾವರಿ ಎಷ್ಟು ಮಹತ್ವದ್ದು ಎನ್ನುವುದನ್ನು ವಿಜ್ಞಾನಶ್ವೇರರು ತಮ್ಮ ಮಿತಾಕ್ಷರದಲ್ಲಿ ಈ ರೀತಿ ಹೇಳಿದ್ದಾರೆ, ‘ನೀರಾವರಿ ಕೆಲಸಕಾರ್ಯಗಳು ರಾಜ್ಯದ ಮೊದಲ ಕೆಲಸವಾಗಿದೆ. ಅಣೆಕಟ್ಟುಗಳನ್ನು ನಿರ್ಮಿಸುವುದರಿಂದ ಕೆಲವರಿಗೆ ಅನ್ಯಾಯವಾದರೂ ಹಲವಾರು ಜನರಿಗೆ ನ್ಯಾಯ ಸಿಗುತ್ತದೆ, ಅನುಕೂಲವಾಗುತ್ತದೆ. ಈ ಕಾರಣದಿಂದಾಗಿ ಅಣೆಕಟ್ಟು ನಿರ್ಮಾಣವನ್ನು ಯಾರೂ ವಿರೋಧಿಸಬಾರದು’.[19] ಕ್ರಿ.ಶ. ೮ರಿಂದ ೧೪ನೆಯ ಶತಮಾನಗಳ ನಡುವಣ ಅವಧಿಯಲ್ಲಿ ಕೃಷಿಗೆ ನೀರುಣಿಸಿದ ಪ್ರಮುಖ ನದಿಗಳೆಂದರೆ, ಕಾವೇರಿ, ಕಪಿಲಾ, ನೇತ್ರಾವತಿ, ತುಂಗಭದ್ರಾ, ವರದ, ಭೀಮ, ಗೋದಾವರಿ, ಕೃಷ್ಣ, ಯಗಚಿ ಮುಂತಾದವು. ಈ ನದಿ ಕಣಿವೆಗಳಲ್ಲಿ ಮತ್ತು ಮುಖಜ ಭೂಮಿಗಳಲ್ಲಿ ಕೃಷಿ ಭೂಮಿಗೆ ಆ ನದಿಗಳಿಂದ ತೋಡಿದ ಕಾಲುವೆ ಅಥವಾ ನಾಲೆಗಳ ಮೂಲಕ ನೀರು ಒದಗುತ್ತಿತ್ತು.[20] ನಾಲೆ ಬೇಸಾಯದ ನಿದರ್ಶನಗಳು ಅನೇಕ ಶಾಸನಗಳಲ್ಲಿ ಸಿಗುತ್ತವೆ. ಬೆಟ್ಟದಿಂದ ಹರಿಯುವ ಒಂದು ತೊರೆಯ ನೀರಿನಿಂದ ಬೇಸಾಯ ಮಾಡಿ ಭತ್ತ ಮತ್ತು ಕಬ್ಬು ಬೆಳೆಯಲಾಗುತ್ತಿತ್ತು ಎನ್ನುವ ವಿವರಣೆ ಶಾಸನವೊಂದರಲ್ಲಿ ಸಿಗುತ್ತದೆ.[21] ಯಗಚಿ ನದಿಯ ನೀರನ್ನು ಕಾಲುವೆಗಳ ಮೂಲಕ ದೋರಸಮುದ್ರಕ್ಕೆ ತರಲಾಗುತ್ತಿತ್ತು ಎನ್ನುವ ದಾಖಲೆಯೂ ಲಭ್ಯವಿದೆ.[22] ಆದಿತ್ಯ ಭಟ್ಟ ಎನ್ನುವವನು ತುಂಗಭದ್ರ ನದಿಗೆ ಕಾಲುವೆಯನ್ನು ನಿರ್ಮಿಸಿದ ವಿಚಾರವೂ ಉಲ್ಲೇಖಿತ ವಾಗಿದೆ.[23]

ನದಿಗಳು ಹರಿಯದೆ ಇರುವ ಪ್ರದೇಶಗಳಲ್ಲಿನ ಕೃಷಿಕರು ಕೆರೆ ಮತ್ತು ಬಾವಿಗಳನ್ನು ನೀರಾವರಿಗಾಗಿ ಅವಲಂಬಿಸಬೇಕಾಗಿತ್ತು. ಕೆರೆಗಳನ್ನು ಮಳೆಯ ನೀರನ್ನು ಸಂಗ್ರಹಿಸಲಾಗುತ್ತಿತ್ತು. ಕೆರೆಗಳನ್ನು ಅರಸರು ಹಾಗೂ ಇತರ ಖಾಸಗಿ ವ್ಯಕ್ತಿಗಳು ಕಟ್ಟಿಸುತ್ತಿದ್ದರು. ಪ್ರತಿಯೊಂದು ಹಳ್ಳಿಯಲ್ಲಿಯೂ ಅಲ್ಲಿನ ಬೇಸಾಯದ ಭೂಮಿಯ ವಿಸ್ತಾರ ಹಾಗೂ ಬೆಳೆಯುವ ಬೆಳೆ ಇವುಗಳನ್ನು ಅವಲಂಬಿಸಿಕೊಂಡು ಕೆರೆಗಳಿರುತ್ತಿದ್ದವು. ಪ್ರತಿಯೊಂದು ಕೆರೆಗೂ ಹೆಸರುಗಳಿರುತ್ತಿದ್ದವು. ಕೆರೆಗಳನ್ನು ಕಟ್ಟಿಸಿದವರ ಹೆಸರು ಅಥವಾ ಯಾರ ಗೌರವಾರ್ಥವಾಗಿ ಕಟ್ಟಿಸಲಾಗಿದೆಯೋ ಅವರ ಹೆಸರನ್ನು ಆಯಾ ಕೆರೆಗಳಿಗೆ ಇಡುವುದು ರೂಢಿಯಲ್ಲಿತ್ತು. ಇದಕ್ಕೆ ಉತ್ತಮ ಉದಾಹರಣೆಯೆಂದರೆ, ಪ್ರಧಾನ ವೀರದಂದನಾಯಕನು ಕಟ್ಟಿಸಿದ ನಾಲ್ಕು ಕೆರೆಗಳು. ವೀರದಂಡನಾಯಕನು ತನ್ನ ತಂದೆ, ತಾಯಿ, ಸಹೋದರ ಹಾಗೂ ತನ್ನದೇ ಹೆಸರಿನಲ್ಲಿ ರುದ್ರ ಸಮುದ್ರ, ಗಂಗ ಸಮುದ್ರ, ಅಚ್ಯುತ ಸಮುದ್ರ ಹಾಗೂ ವೀರ ಸಮುದ್ರ ಎನ್ನುವ ಕೆರೆಗಳನ್ನು ನಿರ್ಮಿಸಿದನು.[24] ಮಾಚಗಾವುಂಡ ಎನ್ನುವವನು ರಾಮಪುರದಲ್ಲಿ ಒಂದು ಕೆರೆ ಮತ್ತು ತೂಬು ನಿರ್ಮಿಸಿದ ಉಲ್ಲೇಖ ಶಾಸನದಲ್ಲಿದೆ.[25] ಒಡೆದುಹೋದ ಇಲ್ಲವೇ ಬಿರುಕುಬಿಟ್ಟ ಕೆರೆಗಳನ್ನು, ತೂಬುಗಳನ್ನು ಸರಿಪಡಿಸುತ್ತಿದ್ದರ ಉಲ್ಲೇಖಗಳು ಶಾಸನಗಳಲ್ಲಿ ಸಿಗುತ್ತವೆ. ಇದಕ್ಕೆ ಒಂದು ಉದಾಹರಣೆಯೆಂದರೆ, ಅರಸೀಕೆರೆ ಕೆರೆಯ ತೂಬನ್ನು ಹೊಯ್ಸಳರ ಎರಡನೆಯ ವೀರನರಸಿಂಹನ ಅನುಮತಿಯಂತೆ ಮಹಾಪ್ರಧಾನ ದಂಡನಾಯಕನು ದುರಸ್ತಿ ಮಾಡಿದುದು.[26] ಕೆರೆಗಳಲ್ಲಿ ಕೆಸರು ತುಂಬಿಕೊಂಡು ನೀರು ನಿಲ್ಲುವ ಪ್ರಮಾಣ ಕಡಿಮೆಯಾದಾಗ ಕೆಸರನ್ನು ಕೆರೆಗಳಿಂದ ಹೊರತೆಗೆಯುವ ಕಾರ್ಯವೂ ನಡೆಯುತ್ತಿತ್ತು. ಕೆರೆಯಿಂದ ಹೂಳನ್ನು ತೆಗೆಯುವ ಕೆಲಸಕ್ಕಾಗಿ ಬಂಡಿಯನ್ನು ದಾನ ನೀಡಿರುವ, ಬಂಡಿಗಳ ಚಾಲಕರ ನಿರ್ವಹಣೆಗಾಗಿ ಭೂಮಿಯನ್ನು ದಾನ ನೀಡಿರುವ ಉಲ್ಲೇಖಗಳು ಶಾಸನಗಳಲ್ಲಿ ಸಿಗುತ್ತವೆ.[27]

ಕೆರೆ, ಕಾಲುವೆಗಳನ್ನು ಪುರುಷರಷ್ಟೇ ಅಲ್ಲದೆ ಮಹಿಳೆಯರೂ ನಿರ್ಮಿಸುತ್ತಿದ್ದರು ಎನ್ನುವುದು ಶಾಸನಗಳಿಂದ ತಿಳಿದುಬರುತ್ತದೆ. ದೀವಳಾಂಬಿಕೆ, ಶಾಂತಲದೇವಿ, ಮೇಚಲದೇವಿ, ಚಿಕ್ಕಬ್ಬೆ ಮುಂತಾದ ರಾಣಿಯರು ಕೆರೆಗಳನ್ನು ನಿರ್ಮಿಸಿದ ಉಲ್ಲೇಖಗಳು ಶಾಸನಗಳಲ್ಲಿ ಸಿಗುತ್ತವೆ.[28] ಹೆಚ್ಚೆಚ್ಚು ಕೆರೆಗಳು ನಿರ್ಮಾಣಗೊಳ್ಳಬೇಕೆನ್ನುವ ಉದ್ದೇಶದಿಂದ ಕೆರೆಗಳನ್ನು ನಿರ್ಮಿಸುವವರಿಗೆ ಭೂದಾನಗಳು ಹಾಗೂ ತೆರಿಗೆಯಿಂದ ಪೂರ್ತಿ ಅಥವಾ ಭಾಗಶಃ ವಿನಾಯಿತಿ ನೀಡಲಾಗುತ್ತಿತ್ತು. ಕೆರೆಗಳ ನಿರ್ವಹಣೆಯ ವೆಚ್ಚವನ್ನು ಅರಸನಲ್ಲದೆ ಇತರ ವರ್ಗದವರೂ ಭರಿಸುತ್ತಿದ್ದರು. ದೇವಾಲಯಗಳು, ಮಠಗಳು, ವರ್ತಕ ಸಂಘಗಳು, ಗ್ರಾಮಸಭೆ ಮುಂತಾದವು ಈ ನಿರ್ಮಾಣ ಕಾರ್ಯದಲ್ಲಿ ಭಾಗವಹಿಸುತ್ತಿದ್ದವು.[29] ಕೆರೆ, ಕಾಲುವೆಗಳನ್ನು ಸುವ್ಯವಸ್ಥಿತ ರೀತಿಯಲ್ಲಿ ಕಾಪಾಡಿಕೊಂಡು ಬರಬೇಕು ಎನ್ನುವ ಕಾರಣಕ್ಕಾಗಿ ಕೆಲವೊಂದು ಎಚ್ಚರಿಕೆಯನ್ನು ತೆಗೆದುಕೊಳ್ಳಲಾಗಿತ್ತು. ಇದಕ್ಕೆ ಕ್ರಿ.ಶ. ೧೧೨೫ರ ಮುಗುದ ಗ್ರಾಮದ ಶಾಸನವು ಉತ್ತ್ಮ ಉದಾಹರಣೆಯಾಗಿದೆ.[30] ಈ ಶಾಸನದ ಪ್ರಕಾರ ಕೆರೆಗಳನ್ನು ಹಾಗೂ ಅವುಗಳ ದಾನದತ್ತಿಗಳನ್ನು ಯೋಗ್ಯರೀತಿಯಲ್ಲಿ ಕಾಪಾಡಿಕೊಂಡು ಬರಬೇಕು, ಅವುಗಳನ್ನು ನಾಶಪಡಿಸಿದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ಬಾವಿ ನೀರಾವರಿಯು ಮಧ್ಯಕಾಲೀನ ಸಂದರ್ಭದಲ್ಲಿ ಇತ್ತು ಎನ್ನುವುದಕ್ಕೆ ಸಾಕಷ್ಟು ಆಧಾರಗಳು ಲಭ್ಯವಿವೆ. ತೋಟ, ಗದ್ದೆಗಳಲ್ಲಿ ಬಾವಿಗಳಿರುತ್ತಿದ್ದವು. ಏತಗಳಿಂದ ಮತ್ತು ಘಟಿ ಯಂತ್ರಗಳಿಂದ ತೋಟಕ್ಕೆ ನೀರು ಹಾಯಿಸಲಾಗುತ್ತಿತ್ತು.[31] ಏತದ ಮೂಲಕ ಬಾವಿಯಿಂದ ನೀರನ್ನು ಮೇಲೆತ್ತುವ ವಿಧಾನವನ್ನು ಏತ ನೀರಾವರಿ ಎಂಬುದಾಗಿ ಕರೆಯಲಾಗಿದೆ.[32] ಎತ್ತುಗಳ ಸಹಾಯದಿಂದ ಇಲ್ಲವೇ ಮಾನವನ ದೈಹಿಕ ಶ್ರಮದಿಂದ ಬಾವಿಯಿಂದ ನೀರನ್ನು ಮೇಲಕ್ಕೆತ್ತಲಾಗುತ್ತಿತ್ತು.[33] ಒಟ್ಟಾರೆಯಾಗಿ ಕೃಷಿ ಚಟುವಟಿಕೆಗಳು ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿದ್ದ ಅಂದಿನ ಸಂದರ್ಭದಲ್ಲಿ ನೀರು ಪೂರೈಕೆ ಕೆಲಸ ಕಾರ್ಯಗಳು ಚುರುಕುಗೊಳ್ಳಲಾರಂಭಿಸಿದವು. ರಾಜರು ಮತ್ತು ಅಧಿಕಾರಿಗಳು ನೀರಾವರಿ ಕಾರ್ಯವನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಅನುಷ್ಠಾನಗೊಳಿಸಲು ಪ್ರಯತ್ನಪಟ್ಟರು. ಕೆರೆ, ಕಾಲುವೆ, ಬಾವಿಗಳನ್ನು ನಿರ್ಮಿಸುವುದು ಪುಣ್ಯದ ಕೆಲಸ ಎನ್ನುವ ಧಾರ್ಮಿಕ ಕಟ್ಟುಕಟ್ಟಳೆಗಳನ್ನು ಜಾರಿಗೆ ತರಲಾಯಿತು. ಅದೇ ರೀತಿ ನೀರಾವರಿ ಕೆಲಸಕಾರ್ಯಗಳು ಆಕರ್ಷಕವಾಗುವ ರೀತಿಯಲ್ಲಿ ಯೋಜನೆಗಳನ್ನು ಹಮ್ಮಿಕೊಂಡರು. ಈ ಕಾರ್ಯದಲ್ಲಿ ಹಣ ವಿನಿಯೋಗಿಸುವವರಿಗೆ ಹಾಗೂ ದುಡಿಯುವವರಿಗೆ ಹಮ್ಮಿಕೊಂಡರು. ಈ ಕಾರ್ಯದಲ್ಲಿ ಹಣ ವಿನಿಯೋಗಿಸುವವರಿಗೆ ಹಾಗೂ ದುಡಿಯುವವರಿಗೆ ಭೂಮಿಯನ್ನು ದಾನ ನೀಡುವ ತೀರ್ಮಾನವನ್ನು ಕೇಂದ್ರಾಡಳಿತವು ತೆಗೆದುಕೊಂಡಿತ್ತು. ಕೃಷಿಯ ವಿಸ್ತರಣೆಯ ಸಂದರ್ಭದಲ್ಲಿಯೂ ಹೊಸ ಭೂಪ್ರದೇಶಗಳನ್ನು ಸಾಗುವಳಿಗೆ ಒಳಪಡಿಸುವಷ್ಟೇ ಪ್ರಾಮುಖ್ಯತೆಯನ್ನು ನೀರು ಪೂರೈಕೆಗೂ ನೀಡಲಾಗುತ್ತಿತ್ತು. ರಾಜ್ಯದ ಒಟ್ಟು ಆರ್ಥಿಕ ವ್ಯವಸ್ಥೆ ಕೃಷಿಯನ್ನು ಅವಲಂಬಿಸಿರುವುದೇ ನೀರಾವರಿ ಹೆಚ್ಚಿನ ಪ್ರೋತ್ಸಾಹವನ್ನು ಪಡೆಯುದಕ್ಕೆ ಕಾರಣವಾಯಿತು. ಕೃಷಿಯ ವಿಸ್ತರಣೆ ಮತ್ತು ಸೂಕ್ತ ನೀರಾವರಿ ವ್ಯವಸ್ಥೆಯಿಂದಾಗಿ ಹೆಚ್ಚುವರಿ ಉತ್ಪಾದನೆ ಸಾಧ್ಯವಾದರೂ ಅದು ಸಮಾನವಾಗಿ ಹಂಚಿಕೆಯಾಗುತ್ತಿರಲಿಲ್ಲ. ಸಂಪನ್ಮೂಲಗಳ ಹಂಚಿಕೆಯ ಸಂದರ್ಭಗಳಲ್ಲಿ ಶ್ರೇಣಿಕೃತ ಸಮಾಜ ವ್ಯವಸ್ಥೆಯೇ ಮಾನದಂಡವಾಗಿರುತ್ತಿತ್ತು.

೨.೩ ತೆರಿಗೆ

ರಾಜ್ಯದ ಆದಾಯದ ಮೂಲಗಳಲ್ಲಿ ತೆರಿಗೆಯದ್ದು ಮೊದಲ ಸ್ಥಾನ. ತೆರಿಗೆಯನ್ನು ಅನೇಕ ಮೂಲಗಳಿಂದ ಸಂಗ್ರಹಿಸಲಾಗುತ್ತಿತ್ತು. ಅವುಗಳೆಂದರೆ, ಭೂಮಿಯ ಮೇಲಿನ ತೆರಿಗೆ, ಮನೆ ಮತ್ತು ಇತರ ವಸ್ತುಗಳ ಮೇಲಿನ ತೆರಿಗೆ, ಉದ್ಯೋಗ ತೆರಿಗೆ, ವಾಣಿಜ್ಯ ತೆರಿಗೆ, ಉದ್ದಿಮೆಗಳ ಮೇಲಿನ ತೆರಿಗೆ, ಮದುವೆ ಮುಂತಾದ ಆಚರಣೆಗಳ ಮೇಲಿನ ತೆರಿಗೆ, ಆದಾಯ ತೆರಿಗೆ, ವ್ಯಾಪಾರಿಗಳ ಲಾಭದ ಮೇಲಿನ ತೆರಿಗೆ, ಕಾರ್ಮಿಕರ ತೆರಿಗೆ ಮುಂತಾದವು. ಇದಲ್ಲದೆ ರಾಜ್ಯಕ್ಕೆ ಹಣ ಸಂದಾಯವಾಗುತ್ತಿದ್ದ ಇತರ ಮೂಲಗಳೆಂದರೆ ಕಾಣಿಕೆಗಳು, ತಪ್ಪಿಸ್ಥರ ಮೇಲಿನ ಶುಲ್ಕಗಳು ಇತ್ಯಾದಿ. ಕಾಣಿಕೆಗಳು ತೆರಿಗೆ ರೂಪದಲ್ಲಿಯೇ ಇರುತ್ತಿದ್ದವು. ರಾಜ್ಯದ ಅರ್ಥವ್ಯವಸ್ಥೆಯಲ್ಲಿ ಭೂಮಿ ಪ್ರಮುಖ ಪಾತ್ರ ವಹಿಸುತ್ತಿದ್ದರಿಂದಾಗಿ ರಾಜ್ಯಾದಾಯದಲ್ಲಿ ಭೂಕಂದಾಯದ ಮೊತ್ತ ದೊಡ್ಡದಾಗಿರುತ್ತಿತ್ತು. ಕೃಷಿ ಪ್ರಧಾನವಾದ ಪ್ರದೇಶಗಳೆಲ್ಲಕ್ಕೂ ಇದು ಅನಿವಾರ್ಯವೂ ಆಗಿತ್ತು. ತೆರಿಗೆಯನ್ನು ವಿಧಿಸುವ ಮೊದಲು ಭೂಮಿಯನ್ನು ಅಳತೆ ಮಾಡುವ, ಉತ್ಪಾದನೆಗನುಗುಣವಾಗಿ ಭೂಮಿಯನ್ನು ವಿಂಗಡಿಸುವ, ನಿರ್ದಿಷ್ಟ ಬೆಳೆಗಳನ್ನು ಬೆಳೆಯಲು ಭೂಮಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಗಳು ನಡೆಯುತ್ತಿದ್ದವು.[34] ಭೂಮಿಯ ಫಲವತ್ತತೆ ಮತ್ತು ಬೆಳೆಗಳ ಆಧಾರದ ಮೇಲೆ ಭೂ ತೆರಿಗೆಯನ್ನು ವಿಧಿಸಲಾಗುತ್ತಿತ್ತು.[35] ಭೂಮಿಯನ್ನು ಅಳತೆ ಮಾಡಿದ ಬಳಿಕ ಅವುಗಳಿಗೆ ನಿರ್ದಿಷ್ಟ ಸಂಖ್ಯೆಯನ್ನು ಕೊಡುವ ಪದ್ಧತಿಯೂ ಇತ್ತು೮.[36] ಕೃಷಿಕರು ಕೊಡಬೇಕಾಗಿದ್ದ ತೆರಿಗೆ ಭೂಮಿಯ ಫಲವತ್ತತೆಗೆ ಅನುಗುಣವಾಗಿ ಬದಲಾಗುತ್ತಿತ್ತು. ಅದೇ ರೀತಿ ಅದು ವಿವಿಧ ಅರಸುಮನೆತನಗಳ ಆಳ್ವಿಕೆಯ ಸಂದರ್ಭದಲ್ಲೂ ಬೇರೆ ಬೇರೆಯೇ ಆಗಿರುತ್ತಿತ್ತು. ಭೂ ತೆರಿಗೆಯನ್ನು ೧/೩, ೧/೫, ೧/೬, ೧/೮, ೧/೧೨ ಮುಂತಾಗಿ ನಿಗದಿಪಡಿಸಲಾಗುತ್ತಿತ್ತು.[37] ಭೂ ತೆರಿಗೆಯನ್ನು ಹಣ ಅಥವಾ ವಸ್ತುರೂಪದಲ್ಲಿ ಸಂಗ್ರಹಿಸಲಾಗುತ್ತಿತ್ತು. ಬರಡು ಅಥವಾ ಬಂಜರು ಭೂಮಿಗಳನ್ನು ಹಾಗೂ ಗುಡ್ಡಗಾಡು, ಅರಣ್ಯ ಪ್ರದೇಶಗಳನ್ನು ಕೃಷಿ ಯೋಗ್ಯ ಭೂಮಿಯನ್ನಾಗಿ ಪರಿವರ್ತಿಸಿ ಕೃಷಿಕರಿಗೆ ಕೆಲವು ವರ್ಷಗಳವರೆಗೆ ತೆರಿಗೆ ವಿನಾಯಿತಿಯೊಂದಿಗೆ ನೀಡಲಾಗುತ್ತಿತ್ತು.[38] ಈ ಕೃಷಿ ಭೂಮಿಗಳು ಹೆಚ್ಚು ಮಾನವ ಶ್ರಮವನ್ನು ಅವಲಂಬಿಸುತ್ತಿದ್ದವು. ಕೃಷಿಕರಿಗೆ ಇಂಥ ಭೂಮಿಗಳಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚಿನದಾಗಿತ್ತು. ಆದರೆ ರಾಜ್ಯದ ಬೊಕ್ಕಸಕ್ಕೆ ಇದು ಲಾಭದಾಯಕವಾಗಿತ್ತು.

ಕುಶಲಕರ್ಮಿಗಳ ಮೇಲಿನ ತೆರಿಗೆಯೂ ರಾಜ್ಯದ ಬೊಕ್ಕಸಕ್ಕೆ ಹೆಚ್ಚಿನ ಆದಾಯವನ್ನು ತರುತ್ತಿತ್ತು. ಕುಶಲಕಾರ್ಮಿಕರ ಮೇಲೆ ವಿಧಿಸುತ್ತಿದ್ದ ವಿವಿಧ ತೆರಿಗೆಗಳ ಕುರಿತು ಅನೇಕ ಶಾಸನಗಳಲ್ಲಿ ಉಲ್ಲೇಖನಗಳು ಸಿಗುತ್ತವೆ. ಬಡಗಿ, ಕಮ್ಮಾರ, ಅಕ್ಕಸಾಲಿ, ಕಂಚುಕಾರ ಮತ್ತು ಶಿಲ್ಪಿ ಎಂಬ ಐದು ವಿಧವಾದ ಕೆಲಸಗಾರರನ್ನು ಒಟ್ಟಿಗೆ ಸೇರಿಸಿ ಪಂಚಾಳರು, ಪಂಚಕಾರುಕರು, ವಿಶ್ವಕರ್ಮರು, ಓಜರು ಮುಂತಾಗಿ ಹೆಸರಿಸಲಾಗಿದೆ.[39] ಇವರೆಲ್ಲರಿಗೂ ಸಮಾನವಾಗಿ ಸೇರಿಸಿ ವಿಧಿಸುತ್ತಿದ್ದ ವೃತ್ತಿ ತೆರಿಗೆಯನ್ನು ಪಂಚಾಳ ತೆರಿಗೆ, ಪಂಚಕಾರುಕದೆರೆ, ವೋಜದೆರೆ, ಪಂಚಕಾರುಕ ವೆಡಿಕೆ ಮುಂತಾದ ಹೆಸರಿನಿಂದ ಕರೆಯಲಾಗಿದೆ.[40] ದೇವಸ್ಥಾನಗಳಲ್ಲಿ ಗುತ್ತಿಗೆ ಕೆಲಸಗಾರರಾಗಿ ಕೆಲಸ ಮಾಡುತ್ತಿದ್ದ ಪಂಚಕಾಯಕದವರಿಂದ ಗುತ್ತಿಗೆ ಹಣವನ್ನು ಮತ್ತು ಸಂಬಳವನ್ನು ಇಡಿಯಾಗಿ ದೇವರಿಗಾಗಿ ವಸೂಲು ಮಾಡಿಕೊಡಬೇಕು ಎನ್ನುವ ತೀರ್ಮಾನವು ಇತ್ತು.[41] ಪಂಚಕಾರು ಮತ್ತು ಕಾರುಕದೆರೆ ಎಂಬ ತೆರಿಗೆಗಳನ್ನು ಬಡಗಿಗಳು ಮತ್ತು ಲೋಹಕಾರರುಗಳೇ ಮೊದಲಾದ ಕಿರುಕಲಾಕಾರರ ಮೇಲೆ ಹಾಕಲಾಗುತ್ತಿತ್ತು ಹಾಗೂ ಕಲಾಕಾರರ ಮೇಲೆ ವಿಧಿಸುತ್ತಿದ್ದ ತೆರಿಗೆಯನ್ನು ಕಾರುಕದೆರೆ ಅಥವಾ ಕಾರುಕಸೇವೆ ಎಂಬುದಾಗಿ ಕರೆಯಲಾಗುತ್ತಿತ್ತು.[42] ಕುಶಲಕರ್ಮಿಗಳಿಗೆ ಅವರು ವಸ್ತುಗಳನ್ನು ಉತ್ಪಾದಿಸಲು ಬಳಸುತ್ತಿದ್ದ ಉತ್ಪಾದನಾ ಸಾಧನದಳ ಮೇಲೂ ತೆರಿಗೆಯನ್ನು ವಿಧಿಸಲಾಗುತ್ತಿತ್ತು. ಹೆಚ್ಚು ಉತ್ಪಾದನಾ ಉಪಕರಣಗಳನ್ನು ಹೊಂದಿರುತ್ತಿದ್ದವರನ್ನು ಶ್ರೀಮಂತರು ಎಂಬುದಾಗಿ ಪರಿಗಣಿಸಲಾಗುತ್ತಿತ್ತು. ಇವರು ಬಡ ರೈತರಿಗೆ ಇಲ್ಲವೇ ಸಣ್ಣ ಕೈಗಾರಿಕಾ ಕಾರ್ಮಿಕರಿಗೆ ಉತ್ಪಾದನಾ ಸಾಮಾಗ್ರಿಗಳನ್ನು ಬಾಡಿಗೆಯ ಆಧಾರದ ಮೇಲೆ ಕೊಡುರ್ರಿದ್ದರು. ಇಂಥ ಸಂದರ್ಭದಲ್ಲಿ ರೈತರು ಇಲ್ಲವೇ ಕೈಗಾರಿಕಾ ಕಾರ್ಮಿಕರು ಉಪಕರಣಗಳ ತೆರಿಗೆಯನ್ನು ತಾವು ಯಾರಿಂದ ಬಾಡಿಗೆಗೆ ಪಡೆದುಕೊಂಡಿರುತ್ತರೋ ಅವರಿಗೆ ಕೂಡ ಬೇಕಾಗುತ್ತಿತ್ತು.

 

[1] ಕೆ.ಎ. ನೀಲಕಂಠಶಾಸ್ತ್ರಿ, ದಿ ಚೋಳಾಸ್, ಮದರಾಸು, ೧೯೫೫, ಪು. ೫೮೪

[2] ಜಿ. ಯಾಜ್ದಾನಿ (ಸಂ.), ದಿ, ಅರ‍್ಲಿ ಹಿಸ್ಟರಿ ಆಫ್ ದಿ ಡೆಕ್ಕಾನ್, ಎರಡು ಸಂಪುಟಗಳು, ಮುಂಬಯಿ, ೧೯೬೦, ಪು. ೬೮೧

[3] ಇಲ್ಲಿ ಗೌಡರು ಎನ್ನುವ ಪದವನ್ನು ಹಳ್ಳಿಯ ಗಣ್ಯರು ಎನ್ನುವ ಅರ್ಥದಲ್ಲಿ ಬಳಸಲಾಗಿದೆ.

[4] ಎಂ.ಎ.ಆರ್. ೧೯೪೧, ನಂ. ೨೬, ಪು. ೧೭೭

[5] ಎ.ಕ.೫, ಬೇಲೂರು ೧೩೭, ಕ್ರಿ.ಶ. ೧೧೮೩

[6] ಅದೇ, ೧೭೫, ಕ್ರಿ.ಶ. ೧೧೮೬

[7] ಅದೇ.

[8] ಎಸ್. ಗುರುರಾಜಾಚಾರ್, ಸಮ್‍ ಆಸ್ಟೆಕ್ಟ್ಸ್ ಆಫ್ ಇಕನಾಮಿಕ್ ಅಂಡ್ ಸೋಶ್ಯಲ್ ಲ್ಯಪ್ ಇನ್ ಕರ್ನಾಟಕ, ಮೈಸೂರು, ೧೯೭೪, ಪು. ೪೨-೫೦

[9] ಬಿ.ಎ. ಸಾಲೆತ್ತೂರ್, ಏನ್‍ಶ್ಯಂಟ್ ಕರ್ನಾಟಕ, ಸಂ.೧, ಪೂಣಾ, ೧೯೩೬, ಪು. ೪೭೧

[10] ಬೇಡನ್-ಪಾವೆಲ್, ಮ್ಯಾನ್ವಲ್ ಆಫ್ ಲ್ಯಾಂಡ್ ರೆವೆನ್ಯೂ ಆಂಡ್ ಲ್ಯಾಂಡ್ ಟೆನ್ಯೂರ್ ಆಫ್ ಬ್ರಿಟಿಷ್ ಇಂಡಿಯಾ, ಪು. ೨೧೩-೧೪

[11] ಬಿ.ಪಿ. ಮಜುಂದಾರ್, ದಿ ಸೋಶ್ಯೋ-ಎಕನಾಮಿಕ್ ಹಿಸ್ಟರಿ ಆಫ್ ನಾರ್ದರ್ನ್ ಇಂಡಿಯಾ (೧೧ ಮತ್ತು ೧೨ನೆಯ ಶತಮಾನಗಳು), ಕಲ್ಕತ್ತಾ, ೧೯೬೦, ಪು. ೧೭೯

[12] ಎ.ಕ.೪, ಮೈಸೂರು ೭೮, ಕ್ರಿ.ಶ. ೧೧೩೦

[13] ಎಂ.ಎ.ಆರ್. ೧೯೨೩, ನಂ.೧, ಪು.೩೩; ಎ.ಕ.೫, ಹಾಸನ ೫೩, ಕ್ರಿ.ಶ. ೧೧೭೦; ಸೌ.ಇ.ಇ. ೯-೨, ೨೨೬, ಕ್ರಿ.ಶ. ೧೧೩೨; ಎಸ್. ಮಹಮ್ಮದ್ ಹುಸೈನ್ ನೈನಾರ್, ಅರಬ್ ಜಿಯೋಗ್ರಫರ್ಸ್ ನಾಲೇಜ್ ಆಫ್ ಸೌತ್ ಇಂಡಿಯಾ, ಮದರಾಸು, ೧೯೪೨, ಪು. ೪೩

[14] ಎಸ್. ಗುರುರಾಜಾಚಾರ್, ಪೂರ್ವೋಕ್ತ, ಪು. ೪೨-೫೦

[15] ಬಿ.ಎಂ. ಬುಗುಸ್ಲಾವ್‌ಸ್ಕಿ ಮತ್ತು ಇತರರು, ದ್ವಂದ್ವಮಾನ ಮತ್ತು ಚಾರಿತ್ರಿಕ ಭೌತವಾದದ ಮೂಲ ಪಾಠಗಳು, ನವಕರ್ನಾಟಕ, ಬೆಂಗಳೂರು, ೧೯೮೬, ಪು.೩೦೦-೩೧೮

[16] ಸಾಲಿ, ಮೇಕಿಂಗ್ ಹಿಸ್ಟರಿ : ಕರ್ನಾಟಕಾಸ್ ಪೀಪಲ್ ಆಂಡ್ ದೇಯರ್ ಪಾಸ್ಟ್, ವಿಮುಕ್ತಿ ಪ್ರಕಾಶನ, ಬೆಂಗಳೂರು, ೧೯೯೮

[17] ಡಬ್ಲ್ಯು.ಎಂ.ಇಲೀಸ್, ಇರಿಗೇಷನ್, ಮದ್ರಾಸ್, ೧೯೫೫, ಪು.೧-೩

[18] ಎ.ಇ.೪, ಪು.೨೬೨, ಕ್ರಿ.ಶ. ೧೦೫೩; ಎ.ಕ.೫, ಕ್ರಿ.ಶ. ೧೨೦೩

[19] ವಿಜ್ಞಾನೇಶ್ವರ, ದಿ ಮಿತಾಕ್ಷರ, ೨, ೧೨೬ (ಅನು.) ಪು. ೧೧೬೫

[20] ಎಸ್. ಗುರುರಾಜಾಚಾರ್, ಪೂರ್ವೋಕ್ತ, ಪು.೫೩; ಕೆ.ಎಸ್.ಶಿವಣ್ಣ, ಹೊಯ್ಸಳ ರಾಜ್ಯಾಡಳಿತ ಮತ್ತು ಆರ್ಥಿಕತೆ, ಕರ್ನಾಟಕ ಚರಿತ್ರೆ ಸಂಪುಟ ೨, ಸಂ.ಪ್ರೊ. ಬಿ.ಸುರೇಂದ್ರರಾವ್, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೭, ಪು. ೧೫೭

[21] ಸೌ.ಇ.ಇ. ೯-೧, ೨೨೬, ಕ್ರಿ.ಶ. ೧೧೩೨

[22] ಎಂ.ಎ.ಆರ್. ೧೯೧೧, ಪು.೫೧; ಈ ದಾಖಲೆಯನ್ನು ನೀಡಿದವನು ಮೆಕೆಂಜೀ; ಕೆ.ಎಸ್.ಶಿವಣ್ಣ, ಪೂರ್ವೋಕ್ತ, ಪು.೧೫೮

[23] ಎಂ.ಚಿದಾನಂದಮೂರ್ತಿ, ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಮೈಸೂರು, ೧೯೭೯, ಪು.೩೬೭

[24] ಎ.ಕ.೫, ಬೇಲೂರು ೧೭೫, ಕ್ರಿ.ಶ. ೧೧೮೬

[25] ಎಂ.ಎ.ಆರ್.೧೯೦೮, ಪು.೮, ಕ್ರಿ.ಶ.೧೦೦೪

[26] ಎಂ.ಎ.ಆರ್. ೧೯೧೧, ಪು.೪೭, ಕ್ರಿ.ಶ. ೧೨೨೩

[27] ಎ.ಕ.೫, ಅರಸೀಕೆರೆ ೧೧೬, ಕ್ರಿ.ಶ. ೧೨೩೪; ಎ.ಕ.೪, ನಾಗಮಂಗಲ ೩೯, ಕ್ರಿ.ಶ. ೧೨೩೭

[28] ಚನ್ನಕ್ಕ ಎಲಿಗಾರ, ಶಾಸನಗಳಲ್ಲಿ ಸ್ತ್ರೀ ಸಮಾಜ, ಧಾರವಾಡ, ೧೯೯೦, ಪು. ೨೭೫-೨೮೧

[29] ಎ.ಕ.೧೧, ದಾವಣಗೆರೆ ೭೦, ಕ್ರಿ.ಶ. ೧೨೭೫

[30] ಬಿ.ಕೆ.ಐ.೧-೨, ೧೭೭, ಮುಗದ (ತಾ) ಧಾರವಾಡ, ಕ್ರಿ.ಶ. ೧೧೨೫

[31]ಎಂ.ಚಿದಾನಂದಮೂರ್ತಿ, ಪೂರ್ವೋಕ್ತ, ಪು. ೩೬೬

[32] ಕ.ಇ.೧, ೨೭, ಕ್ರಿ.ಶ. ೧೧೬೭

[33] ಎ.ಕ.೫, ಹಾಸನ ೧೩೦, ಕ್ರಿ.ಶ. ೧೧೪೭

[34] ಟಿ.ವಿ. ಮಹಾಲಿಂಗಂ, ಸೌತ್ ಇಂಡಿಯನ್ ಪಾಲಿಟಿ, ಮದರಾಸು, ೧೯೫೫, ಪು. ೧೫೫

[35] ಅದೇ.

[36] ಎ.ಕ.೩, ಮಂಡ್ಯ ೩, ಕ್ರಿ.ಶ. ೧೦೦೦

[37] ಟಿ.ವಿ. ಮಹಾಲಿಂಗಂ, ಪೂರ್ವೋಕ್ತ, ಪು. ೧೬೦

[38] ಎ.ಕ.೫, ಬೇಲೂರು ೧೭೫, ಕ್ರಿ.ಶ. ೧೧೮೬; ಎ.ಕ.೩ ಮೈಸೂರು ೧೪೮, ಸುಮಾರು ಹತ್ತನೆಯ ಶತಮಾನ

[39] ಕೆ.ಎಸ್.ಕುಮಾರಸ್ವಾಮಿ, ಪ್ರಾಚೀನ ಕರ್ನಾಟಕದಲ್ಲಿ ಶಿಲ್ಪಾಚಾರಿಗಳು, ಬೆಂಗಳೂರು, ೧೯೯೬, ಪು.೧೨೭-೧೨೮

[40] ಅದೇ. ಪು. ೧೨೮

[41] ಜಿ.ಆರ್. ಕುಪ್ಪಸ್ವಾಮಿ, ಇಕಾನಾಮಿಕ್ ಕಂಡೀಷನ್ಸ್ ಇನ್ ಕರ್ನಾಟಕ, ಕ್ರಿ.ಶ. ೯೭೩-೧೩೩೬, ಧಾರವಾದ, ೧೯೭೫, ಪು. ೧೫೫

[42] ಎಸ್. ಗುರುರಾಜಾಚಾರ್, ಪೂರ್ವೋಕ್ತ, ಪು.೮೮