ದೇವಸ್ಥಾನಗಳಲ್ಲಿ ಕೆಲಸ ಮಾಡುತ್ತಿದ್ದ ದೇವಸೇವಕಿಯರು (ಸೂಳೆ ಸಮುದಾಯ) ಸೂಳೆದೆರೆ ಎನ್ನುವ ತೆರಿಗೆಯನ್ನು ಕೊಡಬೇಕಾಗಿತ್ತು. ಈ ತೆರಿಗೆಯನ್ನು ದೇವಾಲಯಗಳಿಗೆ ಬಿಟ್ಟುಕೊಡಲಾಗುತ್ತಿತ್ತು. ಇದರಿಂದಾಗಿ ಇದೊಂದು ಆದಾಯವನ್ನು ತರುವ ವೃತ್ತಿಯಾಗಿತ್ತು ಎನ್ನುವುದು ತಿಳಿದುಬರುತ್ತದೆ. ದೇವಸೇವಕಿಯರಿಗೆ ಮನೆ, ಭೂಮಿ, ದ್ರವ್ಯಗಳನ್ನು ದಾನವಾಗಿ ನೀಡಲಾಗುತ್ತಿತ್ತು. ಅವುಗಳ ಮೇಲೆಯೇ ತೆರಿಗೆಯನ್ನು ವಿಧಿಸಲಾಗುತ್ತಿತ್ತು.

[1] ಕ್ರಿ.ಶ. ೮ ರಿಂದ ೧೪ನೆಯ ಶತಮಾನಗಳ ಅವಧಿಯಲ್ಲಿ ಈ ರೀತಿಯಾದ ವಿವಿಧ ತೆರಿಗೆಗಳ ಉಲ್ಲೇಖಗಳು ಶಾಸನಗಳಲ್ಲಿ ಮತ್ತು ಸಾಹಿತ್ಯ ಕೃತಿಗಳಲ್ಲಿ ಅಪಾರ ಸಂಖ್ಯೆಯಲ್ಲಿ ಸಿಗುತ್ತವೆ. ಈ ತೆರಿಗೆಗಳು ಸಮಾಜದ ಎಲ್ಲ ವರ್ಗಗಳ ಮೇಲೂ ಹೇರಲ್ಪಟ್ಟಿದ್ದವು. ಆದರೆ ತೆರಿಗೆಗಳ ಸ್ವರೂಪ ಮತ್ತು ಪ್ರಮಾಣದಲ್ಲಿ ವ್ಯತ್ಯಾಸಗಳಿರುತ್ತಿದ್ದವು. ಅಧ್ಯಯನದ ಈ ಅವಧಿಯಲ್ಲಿ ಪ್ರಚಲಿತವಿದ್ದ ಕೆಲವೊಂದು ತೆರಿಗೆಗಳು ಈ ಕೆಳಗಿನಂತಿವೆ.[2]
ಫಲವತ್ತಾದ ಭೂಮಿಯ ಮೇಲೆ ಹಾಕುತ್ತಿದ್ದ ತೆರಿಗೆ ಸಿದ್ಧಾಯ
ಮನೆಯ ಮೇಲೆ ಹಾಕುತ್ತಿದ್ದ ತೆರಿಗೆ ಮನೆದೆರೆ
ವ್ಯಾಪಾರ ಸಾಮಾಗ್ರಿಗಳ ಮೇಲಿನ ತೆರಿಗೆ ವಡ್ಡರಾವುಳ
ಆಮದು ವಸ್ತುಗಳ ಮೇಲಿನ ಸುಂಕ ಒಳಸುಂಕ
ರಫ್ತು ಮೇಲಿನ ಸುಂಕ ಹೊರಸುಂಕ
ವ್ಯಾಪಾರಿಗಳು ತಳವಾರನಿಗೆ ಕೊಡಬೇಕಾದ ಸುಂಕ ತಳರಸುಂಕ
ಎತ್ತಿನ ಬಂಡಿ, ಕುದುರೆ ಬಂಡಿ ಮುಂತಾದ ಬಂಡಿಗಳ ಮೇಲಿನ ತೆರಿಗೆ ಬಂಡಿದೆರೆ
ಕುಶಲಕರ್ಮಿಗಳ ಮೇಲಿನ ವೃತ್ತಿ ತೆರಿಗೆ ಪಂಚಾಳ ತೆರಿಗೆ, ಪಂಚಕಾರುಕದೆರೆ
ಬಡಗಿಗಳ ಮೇಲೆ ವಿಧಿಸುತ್ತಿದ್ದ ತೆರಿಗೆ ಬಡಗಿದೆರೆ
ಕಮ್ಮಾರರ ಮೇಲೆ ವಿಧಿಸುತ್ತಿದ್ದ ತೆರಿಗೆ ಕಮ್ಮಾರ ಸುಂಕ, ಕುಲುಮೆದೆರೆ, ಕಬ್ಬುಣದೆರೆ
ಅಕ್ಕಸಾಲಿಗರ ಮೇಲೆ ವಿಧಿಸುತ್ತಿದ್ದ ತೆರಿಗೆ ಅಕ್ಕಸಾಲಿಯಾಯ, ಸುವರ್ಣಾಯ
ಅಕ್ಕಸಾಲಿಗರು ಮತ್ತು ಕಮ್ಮಾರರು ವಸ್ತುಗಳ ಉತ್ಪಾದನೆಗೆ ಬಳಸುತ್ತಿದ್ದ ಉಪಕರಣಗಳ ಮೇಲಿನ ತೆರಿಗೆ ಅಡೆಕಲುವಣ, ಅಚ್ಚಿನಕಮ್ಮಟದೆರೆ
ಗಾಣದ ಮೇಲಿನ ತೆರಿಗೆ ಗಾಣದ ತೆರೆ
ನೇಕಾರರ ಮೇಲಿನ ತೆರೆಗೆ ಮಗ್ಗದೆರೆ
ಬೆಲ್ಲದ ಮೇಲಿನ ತೆರಿಗೆ ಆಲೆದೆರೆ
ಉಪ್ಪು ತಾಯಾರಿಕೆಯ ಮೇಲಿನ ತೆರಿಗೆ ಲವಣಾಯ
ಕಬ್ಬಿಣದ ಮೇಲಿನ ತೆರಿಗೆ ಕರ್ಬುಣ ಸುಂಕ
ಕಳ್ಳರ ಮೇಲೆ ಹಾಕುತ್ತಿದ್ದ ದಂಡ ಕಳ್ಳವಳಿಗೆ
ವೇಶ್ಯೆಯರ ಮೇಲಿನ ತೆರಿಗೆ ಸೂಳೆದೆರೆ
ಕುರುಬರ ಮೇಲೆ ಹಾಕುತ್ತಿದ್ದ ತೆರಿಗೆ ಕುರುಂಬದೆರೆ
ಚಪ್ಪಿಗರ ಮೇಲೆ ಹಾಕುತ್ತಿದ್ದ ತೆರಿಗೆ ಕತ್ತರಿವಣ
ಸೈನಿಕರ ವಸತಿಗಳ ಮೇಲಿನ ತೆರಿಗೆ ಆಳಿವಸತಾಯ
ಸಾರ್ವಜನಿಕ ಕೆಲಸಗಳ ತೆರಿಗೆ ಊರುಟ್ಟಿಗೆ
ಹಬ್ಬಕ್ಕೆಂದು ವಿಧಿಸುತ್ತಿದ್ದ ತೆರಿಗೆ ಒಸಗೆ
ಅಟ್ಟ (ಮಹಡಿ)ವನ್ನು ಹೊಂದಿದ್ದಕ್ಕೆ ತೆರಿಗೆ ಅಟ್ಟದೆರೆ
ಮಾನ್ಯ ಮಾಡಿದ ಭೂಮಿಗಳ ಮೇಲಿನ ತೆರಿಗೆ ಅರುವಣ
ತುಪ್ಪದ ಮೇಲಿನ ತೆರಿಗೆ ತುಪ್ಪದೆರೆ
ತಿಪ್ಪೆಗಳ ಮೇಲಿನ ಸುಂಕ ತಿಪ್ಪೆಸುಂಕ
ಬಣವೆಗಳ ಮೇಲಿನ ಸುಂಕ ಬಳಂಬೆಯತೆರೆ
ದೈಹಿಕ ಶ್ರಮಕ್ಕೆ ವಿಧಿಸುತ್ತಿದ್ದ ತೆರಿಗೆ ಬಿಟ್ಟಬೆಸ
ಪ್ರಾಣಿಗಳ ಮೇಲೆ ಸಾಮಾನು ಸಾಗಿಸುವುದರ ಮೇಲಿನ ತೆರಿಗೆ ಬಿಲ್ಕೊಡೆ
ಮದುವೆಗಳ ಮೇಲಿನ ತೆರಿಗೆ ಮದುವೆದೆರೆ
ಹಾಲು ಕೊಡುತ್ತಿದ್ದ ಹಸುವಿನ ಮೇಲಿನ ತೆರಿಗೆ ಹಾಲಾವು
ಹೊಲೆಯರ ಮೇಲೆ ವಿಧಿಸುತ್ತಿದ್ದ ತೆರಿಗೆ ಹೊಲೆದೆರೆ
ರಾಣಿ ಹಳ್ಳಿಗೆ ಬಂದಾಗ ವಿಧಿಸುತ್ತಿದ್ದ ತೆರಿಗೆ ದೇವಿದೆರೆ
ಯುವರಾಜನು ಊರಿಗೆ ಬಂದಾಗ ಕೊಡುವ ತೆರಿಗೆ ಕುಮಾರಗದ್ಯಾಣ
ಹಿರಿಯ ಅಧಿಕಾರಿಗಳು ಊರಿಗೆ ಬಂದಾಗ ಕೊಡುವ ತೆರಿಗೆ ಕಾಣಿಕೆ
ಭತ್ತದ ಮೇಲಿನ ತೆರಿಗೆ ಭತ್ತಾಯ
ವೀಳ್ಯದೆಲೆ ಬಳ್ಳಿಗಳ ಮೇಲಿನ ತೆರಿಗೆ ಪನ್ನೆಯ
ರಾಜರ ಆನೆಗಳ ಮೇಲಿನ ತೆರಿಗೆ ಆನೆಸೇಸೆ
ಆಡುಗಳ ಮೇಲಿನ ತೆರಿಗೆ ಆಡುದೆರೆ
ಕುರಿಗಳ ಮೇಲಿನ ತೆರಿಗೆ ಕುರಿದೆರೆ
ಹೇರುಗಳ ಮೇಲೆ ಹಾಕುತ್ತಿದ್ದ ಸುಂಕ ಪೆರ್ಜುಂಕ
ಅಧೀನರಾಜನಿಗೆ ಪೋಷಕನಾದ ತೆರಿಗೆ ಮನ್ನೆಯ
ನೀರಾವರಿ ಕೆರೆಯ ಮೇಲಿನ ತೆರಿಗೆ ಕೆರೆ
ಖಾಯಂ ಅಂಘಡಿಯ ಮೇಲಿನ ತೆರಿಗೆ ಅಂಗಡಿ ಆಯ ಅಥವಾ ಅಂಗಡಿಯದೆರೆ
ಸಂತೆಗೆ ಬರುವ ವಸ್ತುಗಳ ಮೇಲಿನ ಸುಂಕ ಸಂತೆಯ ಸುಂಕ ಅಥವಾ ಸಂತೆಯ ಆಯ
ಸಾರಿಗೆ ತೆರಿಗೆ ಕೀಳ್ವಟ್ಟೆಸುಂಕ, ಮೇಲ್ವಟ್ಟೆ ಸುಂಕ
ವರ್ತಕರ ಮೇಲಿನ ತೆರಿಗೆ ವರ್ತಕರ ಸುಂಕ, ಸೆಟ್ಟಿದೆರೆ, ಸೆಟ್ಟಿವಣ
ಕುದುರೆ ಅಥವಾ ಬೇರೆ ಪ್ರಾಣಿ ಕಟ್ಟುವ ಸ್ಥಳದ ಮೇಲಿನ ತೆರಿಗೆ ನೆಲಮೆಟ್ಟು

ಅರಸನಿಂದ ನೇಮಿಸಲ್ಪಟ್ಟ ಅಧಿಕಾರಿಗಳು ಭೂಸರ್ವೇಕ್ಷಣೆ ಮಾಡಿದ ನಂತರ ತೆರಿಗೆಯನ್ನು ನಿಗದಿಪಡಿಸುತ್ತಿದ್ದರು. ಈ ಅಧಿಕಾರಿಗಳನ್ನು ರಾಜನ ಜನರು ಎಂಬುದಾಗಿ ಉಲ್ಲೇಖಿಸಲಾಗಿದೆ.[3] ರಾಷ್ಟ್ರಕೂಟ ಅರಸರು ಭೂಮಾಲೀಕರಾಗಿದ್ದ ಕೆಲವು ಗಣ್ಯರನ್ನು ಸರಕಾರದ ನಿಯೋಗಿಗಳಾಗಿ ತೆರಿಗೆ ವಸೂಲಿ ಮುಂತಾದ ಸರಕಾರಿ ಕೆಲಸಗಳಿಗೆ ನಿಯೋಜಿಸುತ್ತಿದ್ದರು.[4] ಶ್ರೀಕರಣರು ಕಂದಾಯಾಧಿಕಾರಿಗಳಾಗಿದ್ದು, ಕೆಲವೊಮ್ಮೆ ನಾಡಗವುಂಡರಾಗಿಯೂ ಕೆಲಸ ನಿರ್ವಹಿಸುತ್ತಿದ್ದರು. ಇವರು ಭೂಸಂಬಂಧವಾದ ಅನೇಕ ಅಧಿಕಾರಗಳನ್ನು ಹೊಂದಿದ್ದರು. ರಾಷ್ಟ್ರಕೂಟ ಅರಸರು ಸ್ಥಳೀಯ ಹಂತಗಳಲ್ಲಿ ನಾಡಗವುಂಡರು, ಪೆರ್ಗಡೆಗಳು ಹಾಗೂ ಅವರಿಗಿಂತ ಸ್ವಲ್ಪ ಕೆಳಗಿನ ಗಣ್ಯರಿಗೆ ತೆರಿಗೆ ವಸೂಲಿ ಮಾಡುವ ಅಧಿಕಾರವನ್ನು ನೀಡಿದ್ದರು. ಇವರೆಲ್ಲರೂ ಜಮೀನುದಾರ ಕುಟುಂಬಕ್ಕೆ ಸೇರಿದವರಾಗಿದ್ದರು.[5] ಹೊಯ್ಸಳರ ಆಳ್ವಿಕೆಯಲ್ಲೂ ಇದೇ ರೀತಿಯ ಆಡಳಿತ ಕ್ರಮ ಅಸ್ತಿತ್ವದಲ್ಲಿತ್ತು. ಸೇನಬೋವರು ಮತ್ತು ಪ್ರಭುಗೌಂಡರು ಗ್ರಾಮೀಣ ಹಂತದಲ್ಲಿ ಕೃಷಿಕ ವರ್ಗದ ವಕ್ತಾರರಾಗಿದ್ದರು. ಈ ಅಧಿಕಾರಿಗಳು ಮತ್ತು ಗಣ್ಯರು ತೆರಿಗೆಯ ವಿವರಗಳನ್ನು ಸಂಗ್ರಹಿಸುತ್ತಿದ್ದರು. ಬ್ರಹ್ಮದೇಯ ಭೂಮಿ ಪಡೆದ ಮಹಾಜನರು ತೆರಿಗೆ ಸಂಗ್ರಹಿಸುವ ಕೆಲಸವನ್ನೂ ಮಾಡುತ್ತಿದ್ದರು.[6] ತೆರಿಗೆಗಳನ್ನು ಅರಸ ನೇರವಾಗಿ ಸಂಗ್ರಹಿಸುತ್ತಿದ್ದನೇ ಅಥವಾ ಭೂಮಾಲೀಕ ಗಣ್ಯರು ಸಂಗ್ರಹಿಸುತ್ತಿದ್ದರೇ ಮುಂತಾದ ಪ್ರಶ್ನೆಗಳು ಹುಟ್ಟಿ ಕೊಳ್ಳುವುದು ಸಹಜ. ಆದರೆ ಅಂದಿನ ಒಟ್ಟು ಬೆಳವಣಿಗೆಗಳ ನಿಯಂತ್ರಣ ವ್ಯವಸ್ಥೆ ಒಬ್ಬ ವ್ಯಕ್ತಿಯ ಅಥವಾ ಸಂಸ್ಥೆಯ ಅಧೀನದಲ್ಲಿರಲಿಲ್ಲ ಎನ್ನುವ ಚಿತ್ರಣವನ್ನು ನೀಡುತ್ತವೆ. ತೆರಿಗೆಯನ್ನು ಸಂಗ್ರಹಿಸುವವರು ಯಾರೇ ಆಗಿದ್ದರೂ, ಅವರು ತೆರಿಗೆಯನ್ನು ಪಾವತಿಸುವವರ ಸಮಸ್ಯೆಗಳಿಗೆ ಸ್ಪಂದಿಸುತ್ತಿರಲಿಲ್ಲ ಎನ್ನುವುದಂತೂ ಸ್ಪಷ್ಟ. ಈ ಕಾರಣಕ್ಕಾಗಿಯೇ ಹಲವಾರು ಸಂದರ್ಭಗಳಲ್ಲಿ ತೆರಿಗೆಗಳನ್ನು ವಿರೋಧಿಸುವ ಬೆಳವಣಿಗೆಗಳು ಕಂಡುಬರುತ್ತಿದ್ದವು. ಅರ ಸೊತ್ತಿಗೆಯ ದರ್ಪಿಷ್ಟತೆ ಹಾಗೂ ಅಧಿಕಾರಿಗಳ ಅಧಿಕಾರಶಾಹಿತ್ವ ಪ್ರವೃತ್ತಿಗಳು ತೆರಿಗೆಯನ್ನು ಜನರಲ್ಲಿ ಭಯಹುಟ್ಟಿಸುವ ಸಾಧನವನ್ನಾಗಿ ಮಾಡುತ್ತಿದ್ದವು.

ಕೃಷಿ ಕಾರ್ಮಿಕರನ್ನು ಹಾಗೂ ಕುಶಲಕರ್ಮಿಗಳನ್ನು ಸಂಬಳ ಕೊಡದೆ ದುಡಿಸುವ ಬಲಾತ್ಕಾರದ ದುಡಿಮೆ ಮಧ್ಯಕಾಲೀನ ಕರ್ನಾಟಕದಲ್ಲಿ ಇತ್ತು ಎನ್ನುವುದಕ್ಕೆ ಸಾಕಷ್ಟು ಆಧಾರಗಳು ಸಿಗುತ್ತವೆ. ಕಾರ್ಮಿಕರ ದುಡಿಮೆಯನ್ನೇ ತೆರಿಗೆಯನ್ನಾಗಿ ಪರಿಗಣಿಸಲಾಗುತ್ತಿತ್ತು. ಬೃಹತ್ ದೇವಾಲಯಗಳು, ಕೆರೆಗಳು, ಕಾಲುವೆಗಳು, ಕೋಟೆಗಳು ಮುಂತಾದವುಗಳನ್ನು ನಿರ್ಮಿಸಲು ಈ ಕಾರ್ಮಿಕರನ್ನು ಬಳಸಲಾಗುತ್ತಿತ್ತು. ರಾಷ್ಟ್ರಕೂಟರ ಅವಧಿಯಲ್ಲಿ ಬಲಾತ್ಕಾರದ ದುಡಿಮೆ ಗಣನೀಯ ಪ್ರಮಾಣದಲ್ಲಿತ್ತು ಎನ್ನುವುದನ್ನು ಅಂದಿನ ಹೆಚ್ಚಿನ ಎಲ್ಲಾ ಶಾಸನಗಳು ಉಲ್ಲೇಖಿಸುತ್ತವೆ.[7] ಕಮ್ಮಾರರು ಬಿಟ್ಟಿ ಕೆಲಸವನ್ನು ಮಾಡಬೇಕು ಎನ್ನುವ ವಿವರಣೆ ಶಾಸನವೊಂದರಲ್ಲಿ ಸಿಗುತ್ತದೆ.[8] ಅದೇ ರೀತಿ ಶೂದ್ರರು ಮತ್ತು ಕುಶಲಕರ್ಮಿಗಳು ಬಿಟ್ಟಿ ಕೆಲಸವನ್ನು ಮಾಡಬೇಕು ಎನ್ನುವ ಉಲ್ಲೇಖ ಕ್ರಿ.ಶ. ೧೨೧೩ರ ಶಾಸನವೊಂದರಲ್ಲಿ ಸಿಗುತ್ತದೆ.[9] ತೆರಿಗೆಯನ್ನು ಪಾವತಿಸುವ ಬದಲು ಬಿಟ್ಟಿ ಕೆಲಸ ಮಾಡಬೇಕೆನ್ನುವುದು ಅಂದಿದ್ದ ಶೋಷಣೆಯ ಸ್ವರೂಪವನ್ನು ಸೂಚಿಸುತ್ತದೆ. ಅರಸರು ಮತ್ತು ಇತರ ಅಧಿಕಾರಿವರ್ಗದವರು ಈ ರೀತಿಯ ಬಿಟ್ಟಿ ಕೆಲಸದ ಮೂಲಕ ತಮಗೆ ಸಂದಾಯವಾಗಬೇಕಾಗಿದ್ದ ತೆರಿಗೆಯನ್ನು ಪಡೆದುಕೊಳ್ಳುತ್ತಿದ್ದರು. ಸಂಭಾವನೆ ಇಲ್ಲದೆ ದುಡಿಯುವುದು ಶ್ರಮಿಕವರ್ಗಗಳಲ್ಲಿ ಭಯ ಹುಟ್ಟುವಂತೆ ಮಾಡುತ್ತಿತ್ತು.[10] ಆರ್.ಎಸ್. ಶರ್ಮ ಅವರ ಪ್ರಕಾರ, ಮಾನವಶಕ್ತಿಯ ಅಭಾವವು ಬಲಾತ್ಕಾರದ ದುಡಿಮೆಯ ಪೂರ್ವಕಲ್ಪಿತ ಸ್ಥಿತಿಯಾಗಿರುತ್ತದೆ.[11] ಬಲಾತ್ಕಾರದ ದುಡಿಮೆಗೆ ವೈದಿಕ ಹಿನ್ನೆಲೆಯ ಗ್ರಂಥಗಳು ಧಾರ್ಮಿಕ ಚೌಕಟ್ಟನ್ನು ನಿರ್ಮಿಸಿ ಅದನ್ನು ಒಪ್ಪಿಕೊಳ್ಳುವಂತೆ ಮಾಡುವ ಪ್ರಯತ್ನಪಟ್ಟವು.[12] ಬಲಾತ್ಕಾರದ ದುಡಿಮೆಯನ್ನು ಹೇರುವ ಹಕ್ಕು ಎಲ್ಲ ಭೂಮಾಲೀಕರಿಗೂ ಇತ್ತು. ಅದೇ ರೀತಿ ಭೂಮಿಯನ್ನು ದಾನವಾಗಿ ಪಡೆದು ಆ ಮೂಲಕ ಭೂಮಾಲೀಕರಾದ ಜನರು ಈ ದುಡಿಮೆಯನ್ನು ಹೇರುವ ಹಕ್ಕನ್ನು ದಾನದೊಂದಿಗೇ ಪಡೆದುಕೊಳ್ಳುತ್ತಿದ್ದರು. ಹಳ್ಳಿಯ ಅಧಿಕಾರಿಯಾಗಿದ್ದ ಆಯುಕ್ತ ಎನ್ನುವವನು ತನ್ನ ಅಗತ್ಯಗಳಿಗೆ ತಕ್ಕಂತೆ ರೈತಾಪಿ ಹೆಂಗಸರಿಂದ ಬಲಾತ್ಕಾರವಾಗಿ ದುಡಿಮೆಯನ್ನು ಪಡೆದುಕೊಳ್ಳಬಹುದಾಗಿತ್ತು.[13]

ರಾಷ್ಟ್ರಕೂಟರಿಂದ ಹೊಯ್ಸಳರವರೆಗೆ ತೆರಿಗೆ ನೀತಿಯಲ್ಲಿ ಅಲ್ಪಸ್ವಲ್ಪ ಬದಲಾವಣೆಗಳು ಕಾಣಿಸಿಕೊಳ್ಳುತ್ತಿದ್ದರೂ ಅದು ಜನಪರವಾಗಿರಲಿಲ್ಲ ಎನ್ನುವುದಂತೂ ಸ್ಪಷ್ಟವಾಗುತ್ತದೆ. ರೈತರು ಮತ್ತು ಕುಶಲಕರ್ಮಿಗಳ ಮೇಲೆ ವಿಧಿಸುತ್ತಿದ್ದ ತೆರಿಗೆ ಬಹಳ ಹೆಚ್ಚಾಗಿತ್ತು. ಭೂಮಿಯನ್ನು ಹೆಚ್ಚೆಚ್ಚು ದಾನ ನೀಡುವ ವ್ಯವಸ್ಥೆ ಕಾಣಿಸಿಕೊಂಡಂತೆ ರೈತನ ಮೇಲಿನ ಹೊರೆಯೂ ಹೆಚ್ಚಾಗ ತೊಡಗಿತು. ರಾಷ್ಟ್ರಕೂಟರು ರೈತರ ಮೇಲಿನ ಈ ಹೊರೆಯನ್ನು ಗಮನಿಸಿ ಅದನ್ನು ಸರಿಪಡಿಸಲು ಕೆಲವೊಂದು ಮಾರ್ಗೋಪಾಯಗಳನ್ನು ಕಂಡುಹಿಡಿದರು. ಹೊಸದಾಗಿ ಯಾರಿಗೇ ಆಗಲಿ ದಾನ ಮಾಡುವಾಗೆ ತೆರಿಗೆಯನ್ನು ಹೆಚ್ಚಿಸುವ ಇಲ್ಲವೇ ವಿಧಿಸುವ ಅವಕಾಶವಿರದಂತೆ ನೋಡಿಕೊಳ್ಳುವ ಪ್ರಯತ್ನ ಮಾಡಿದರು. ಆರ್.ಎಸ್.ಶರ್ಮ ಅವರ ಪ್ರಕಾರ, ರಾಷ್ಟ್ರಕೂಟರ ಈ ಪ್ರಯತ್ನವು ಅಂದು ರೈತನ ಮೇಲಿನ ತೆರಿಗೆಯ ಹೊರೆ ಅತಿಯಾಗಿತ್ತು ಎನ್ನುವುದನ್ನು ಸೂಚಿಸುತ್ತದೆ.[14] ಒಬ್ಬ ರೈತ ತನ್ನ ಮನೆ, ಹೊಲ, ತೋಟ, ತಿಪ್ಪೆ, ಬಣವೆ, ದನಕರು, ಮದುವೆ, ಹಬ್ಬ ಮುಂತಾದ ಆಚರಣೆಗಳಿಗೆಲ್ಲ ತೆರಿಗೆಯನ್ನು ಕೊಡುವುದಲ್ಲದೆ ತಾನು ಬೆಳೆದದ್ದನ್ನು ಮಾರಲು ಸಂಜೆಗೆ ಕೊಂಡೊಯ್ದರೆ ಅಲ್ಲಿಯೂ ತೆರಿಗೆಯನ್ನು ಕೊಡಬೇಕಾಗಿತ್ತು. ಇದು ಒಬ್ಬ ರೈತನ ಸಾಮರ್ಥ್ಯಕ್ಕೆ ಮೀರಿದ್ದಾಗಿತ್ತು. ತೆರಿಗೆ ವಿನಾಯಿತಿಯ ಲಾಭವನ್ನು ಪಡೆದುಕೊಂಡವರು ಮತ್ತೊಮ್ಮೆ ಶ್ರೀಮಂತವರ್ಗದವರು ಮಾತ್ರ. ಬ್ರಾಹ್ಮಣರಿಗೆ ಹಾಗೂ ಇನ್ನಿತರ ಮೇಲ್ವರ್ಗದ ಅಥವಾ ಅಧಿಕಾರಿವರ್ಗದ ಜನರಿಗೆ ವಿನಾಯಿತಿಯೊಂದಿಗೆ ಭೂಮಿಯನ್ನು ದಾನ ನೀಡುವ ವ್ಯವಸ್ಥೆ ಗಟ್ಟಿಯಾಗಿ ಬೆಳೆದಿತ್ತು. ಇದರಿಂದಾಗಿ ಮಹಾಜನರು ಹಾಗೂ ಇತರ ಭೂಮಾಲೀಕ ವರ್ಗದವರು ತಮಗಿಷ್ಟ ಬಂದಂತೆ ಭೂಮಿಯನ್ನು ಅನುಭವಿಸಬಹುದಾಗಿತ್ತು. ಜಿ.ಆರ್.ಕುಪ್ಪು ಸ್ವಾಮಿಯವರು, ಕೆಲವೊಂದು ಕೈಗಾರಿಕೆಗಳಿಗೆ ಅದರಲ್ಲೂ ಅವುಗಳ ಪ್ರಗತಿಯನ್ನು ನೋಡಿಕೊಂಡು ತೆರಿಗೆ ರಿಯಾಯಿತಿಯನ್ನು ನೀಡಲಾಗುತ್ತಿತ್ತು ಎನ್ನುತ್ತಾರೆ.[15]ಆದರೆ ಇದನ್ನು ಕೃಷಿ ಹಾಗೂ ಕೃಷಿ ಉತ್ಪನ್ನಗಳಿಗೆ ವಿಸ್ತರಿಸಲು ಸಾಧ್ಯವಾಗುವುದಿಲ್ಲ. ಕೃಷಿ ವ್ಯವಸ್ಥೆ ಪ್ರಧಾನವಾಗಿ ಕಾಣಿಸಿಕೊಂಡು ರಾಜ್ಯದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಲು ಆರಂಭಿಸಿದ್ದುದೇ ರೈತರ ಮೇಲಿನ ಒತ್ತಡ ಹೆಚ್ಚಾಗಲು ಮೂಲಕಾರಣ ಎನ್ನುವ ತೀರ್ಮಾನಕ್ಕೆ ಬರಬಹುದಾಗಿದೆ.

ಅತಿಯಾದ ತೆರಿಗೆಯನ್ನು ಹೇರುವುದರ ಮೂಲಕ ಹಳ್ಳಿಗಳನ್ನು ತಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳುವಲ್ಲಿ ಅಧಿಕಾರಿಗಳು ಹಾಗೂ ಗ್ರಾಮೀಣ ಗಣ್ಯರು ಯಶಸ್ವಿಯಾದರು. ತೆರಿಗೆಗಳನ್ನು ವಿರೋಧಿಸಿ ಇಲ್ಲವೇ ನಿರಾಕರಿಸಿ ನಿಲ್ಲುವಷ್ಟು ಸಾಮರ್ಥ್ಯ ಹಳ್ಳಿಗರಿಗೆ ಇರಲಿಲ್ಲ. ಆ ಕುರಿತು ಹೆಚ್ಚಿನ ದಾಖಲೆಗಳೂ ಸಿಗುವುದಿಲ್ಲ. ಭೂಮಾಲೀಕರ ವಿರುದ್ಧ ರೈತರು ಅಸಮಾಧಾನ ಹೊಂದುವುದು ಸಹಜ. ಏಕೆಂದರೆ ತೆರಿಗೆಯನ್ನು ಪಾವತಿಸಿದರೂ ಭೂಮಿಯ ಮೇಲಿನ ಸಂಪೂರ್ಣ ಹಕ್ಕು ಅವರಿಗೆ ಲಭ್ಯವಾಗಿರಲಿಲ್ಲ. ಅಧಿಕಾರಿಗಳು ಹಳ್ಳಿಗರನ್ನು ಹಿಂಸಿಸುತ್ತಿದ್ದರು ಎನ್ನುವುದಕ್ಕೆ ಕ್ರಿ.ಶ. ೯೪೨ರ ಶಾಸನವು ಉತ್ತಮ ಉದಾಹರಣೆಯಾಗಿದೆ.[16] ಈ ಶಾಸನದ ಪ್ರಕಾರ, ಮಹಾಮಾಂಡಲಿಕ ಭೂತಾರ್ಯನು ರೋಣದ ಜನರನ್ನು ಭತ್ತಾಯ (ಭತ್ತದ ತೆರಿಗೆ) ತೆರಿಗೆ ಕೊಡಬೇಕೆಂದು ಹಿಂಸಿಸಿದಾಗ ರೋಣದ ಪಂಪಯ್ಯ ಎನ್ನುವವನು ಅಂದಿನ ಮಹಾಜನರ ಅಪ್ಪಣೆಯನ್ನು ಪಡೆದು, ಒಂದು ಅಕ್ಷತೆಯನ್ನೂ ಕೊಡುವುದಿಲ್ಲವೆಂದು ನಿಶ್ಚಯಿಸಿ ಅಧಿಕಾರಿಯೊಡನೆ ಹೋರಾಡಿ ಮಡಿಯುತ್ತಾನೆ. ಇದು ಪ್ರತಿಭಟನೆಯನ್ನು ಸೂಚಿಸುತ್ತಾದರೂ ಅದಿಕಾರಿ ವರ್ಗದಲ್ಲಿ ಎಚ್ಚರಿಕೆಯನ್ನು ಮೂಡಿಸಿದಂತೆ ಕಂಡುಬರುವುದಿಲ್ಲ. ತಮಗಾದ ಅನ್ಯಾಯದ ವಿರುದ್ಧ ಅರಸನೆದರು ನೇರವಾಗಿ ಪ್ರತಿಭಟನೆ ನಡೆಸಲು ಸಾಧ್ಯವಾಗದೇ ಇದ್ದಾಗ ಶಾಸನಗಳ ಮೂಲಕ ತಮ್ಮ ಪ್ರತಿಭಟನೆಯನ್ನು ಸೂಚಿಸಿದುದರ ಉಲ್ಲೇಖಗಳು ಸಿಗುತ್ತವೆರ್.[17] ಅನೇಕ ಶಾಸನಗಳಲ್ಲಿ ಈ ಹೊಲದ ತೆರಿಗೆ ತೆಗೆದುಹಾಕಬೇಕು, ಇಂಥ ತೆರಿಗೆಗಳನ್ನು ಕೇಳಿದವರು ಚಂಡಾಲರು ಎಂಬುದಾಗಿ ಬರೆಸಲಾಗಿದೆ. ಆದರೆ ಅರಸಕೇಂದ್ರಿತ ಚರಿತ್ರೆಯಲ್ಲಿ ಕೇಳಿದವರು ಚಂಡಾಲರು ಎಂಬುದಾಗಿ ಬರೆಸಲಾಗಿದೆ. ಆದರೆ ಅರಸಕೇಂದ್ರಿತ ಚರಿತ್ರೆಯಲ್ಲಿ ಇಂಥ ವಿವರಣೆಗಳು ಮೌನವಹಿಸುವ ಸಾಧ್ಯತೆಯೇ ಹೆಚ್ಚು. ಏಕೆಂದರೆ ಪ್ರಭುತ್ವದ ಪರವಾಗಿರುವ ಶಾಸನಗಳ ವೈಭವೀಕೃತ ಅಧ್ಯಯನದ ಎದುರು ಇವು ನಿರ್ಲಕ್ಷ್ಯಕ್ಕೆ ಒಳಗಾಗುತ್ತವೆ.

.೪ ಭೂಮಾಲೀಕರು ಮತ್ತು ಕೃಷಿ ಕಾರ್ಮಿಕರು

ಕೃಷಿ ಸಮಾಜ ರೂಪುಗೊಳ್ಳುತ್ತಿದ್ದ ಸಂದರ್ಭದಲ್ಲಿ ಹಾಗೂ ಕೃಷಿ ಪ್ರಧಾನ ಅರ್ಥ ವ್ಯವಸ್ಥೆಯಲ್ಲಿ ಭೂಮಾಲೀಕರು ಮತ್ತು ಕೃಷಿ ಕಾರ್ಮಿಕರು ಪರಸ್ಪರ ಹೊಂದಿರುತ್ತಿದ್ದ ಸಂಬಂಧಗಳು ಮತ್ತು ಸ್ಥಾನಮಾನದ ಅಧ್ಯಯನ ನಡೆಸುವುದು ಅನಿವಾರ್ಯವೆನಿಸುತ್ತದೆ. ಏಕೆಂದರೆ ಇವೆರಡು ವರ್ಗಗಳ ಸಂಬಂಧಗಳು ಸೌಹಾರ್ದಯುತವಾಗಿ ಇರಲಿಲ್ಲ. ಒಂದು ದುಡಿಸುವ ವರ್ಗವಾದರೆ ಇನ್ನೊಂದು ದುಡಿಯುವ ವರ್ಗವಾಗಿತ್ತು. ರಾಷ್ಟ್ರಕೂಟರಿಂದ ಹೊಯ್ಸಳರವರೆಗೂ ಈ ಅಂತರ ಮುಂದುವರಿದುಕೊಂಡೇ ಬಂತು. ಭೂಮಾಲೀಕತ್ವ, ಭೂಮಾಲೀಕರು, ಭೂಮಾಲೀಕ ಮಧ್ಯವರ್ತಿಗಳು ಮುಂತಾದ ವಿಚಾರಗಳ ಕುರಿತು ಅಧ್ಯಾಯ ಮೂರರಲ್ಲಿ ಚರ್ಚಿಸಲಾಗಿದೆ. ಕೃಷಿ ಕಾರ್ಮಿಕರು ಕೃಷಿ ವ್ಯವಸ್ಥೆಯಲ್ಲಿ ಯಾವ ಸ್ಥಾನವನ್ನು ಹೊಂದಿದ್ದರು ಹಾಗೂ ಅವರು ಭೂಮಾಲೀಕರೊಂದಿಗೆ ಹೊಂದಿರುತ್ತಿದ್ದ ಸಂಬಂಧಗಳ ಅಧ್ಯಯನವನ್ನು ಪ್ರಸ್ತುತ ಈ ಭಾಗದಲ್ಲಿ ಮಾಡಲಾಗಿದೆ. ರೈತರು ಭೂಮಾಲೀಕರೊಂದಿಗೆ ಹೊಂದಿದ್ದ ಸಂಬಂಧಗಳ ಅಧ್ಯಯನ ರೈತ ಚರಿತ್ರೆಯ ಬಹುಮುಖ್ಯ ಅಂಶ. ಏಕೆಂದರೆ ಈ ಸಂಬಂಧಗಳು ರೈತರ ಸ್ಥಾನಮಾನ, ಬದುಕನ್ನು ಸೂಚಿಸುವ ಅಂಶಗಳೂ ಆಗಿವೆ. ಭಾರತದ ಚರಿತ್ರೆ ಅಧ್ಯಯನದಲ್ಲಿ ರೈತರ ಚರಿತ್ರೆಯನ್ನು ಮೊದಲ ಬಾರಿಗೆ ಸೇರಿಸಿದವರೆಂದರೆ ಡಿ.ಡಿ. ಕೊಸಾಂಬಿ, ಆರ್.ಎಸ್. ಶರ್ಮ ಮತ್ತು ಡೇನ್ಯಲ್ ಥೋರ್ನರ್.[18] ಇರ್ಫಾನ್ ಹಬೀಬ್ ಅವರ ಪ್ರಕಾರ ಮಾರ್ಕ್ಸ್‌ವಾದಿಗಳು ರೈತರನ್ನು ಅವರು ಜಮೀನಿನೊಂದಿಗೆ ಹೊಂದಿದ್ದ ಸಂಬಂಧಗಳ ಆಧಾರದ ಮೇಲೆ ಮೂರು ವಿಧವಾಗಿ ವಿಂಗಡಿಸಿದರು.[19] ಅವುಗಳೆಂದರೆ, ಕೃಷಿ ಕಾರ್ಮಿಕರನ್ನು ಸಂಬಳಕ್ಕೆ, ಬಲಾತ್ಕಾರದ ದುಡಿಮೆಗೆ ಉಪಯೋಗಿಸುತ್ತಿದ್ದ ಶ್ರೀಮಂತ ರೈತರು, ಕುಟುಂಬದ ಸದಸ್ಯರನ್ನೇ ಕೃಷಿಯಲ್ಲಿ ತೊಡಗಿಸುತ್ತಿದ್ದ ಮಧ್ಯಮ ರೈತರು ಹಾಗೂ ಕುಟುಂಬದ ನಿರ್ವಹಣೆಗೆ ಸಾಕಾಗುವಷ್ಟು ಭೂಮಿಯನ್ನು ಹೊಂದಿರದ ಮತ್ತು ತಾವೇ ದುಡಿಯುತ್ತಿದ್ದ ಬಡ ರೈತರು. ಇವರೊಂದಿಗೆ ಕೃಷಿ ಭೂಮಿಯನ್ನು ಹೊಂದಿರದ ಆದರೆ ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಭೂರಹಿತ ಕೃಷಿ ಕಾರ್ಮಿಕರಿರುತ್ತಿದ್ದರು. ಇವರನ್ನು ರೈತ ಚರಿತ್ರೆಯ ವ್ಯಾಪ್ತಿಯೊಳಗೆ ಇಟ್ಟುಕೊಂಡೇ ಅಧ್ಯಯನ ನಡೆಸಬೇಕಾಗುತ್ತದೆ.[20]

ಮಹಾಜನರು, ಪೆರ್ಗಡೆಗಳು, ಗವುಂಡರು, ಪ್ರಭುಗಾವುಂಡರು ಮುಂತಾದ ಭೂಮಾಲೀಕ ವರ್ಗಗಳು ಅರಸ ಮತ್ತು ರೈತನ ನಡುವೆ ಮಧ್ಯವರ್ತಿಗಳಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದೇ ಕೃಷಿಕರ ವ್ಯವಸ್ಥಿತ ಶೋಷಣೆಗೆ ಮೂಲ ಕಾರಣ. ಅರ್ಥ ವ್ಯವಸ್ಥೆ ಭೂ ಆಧಾರಿತವಾದ್ದರಿಂದಾಗಿ ಅರಸರು ಭೂಮಾಲೀಕರೊಂದಿಗೆ ನಿಕಟವಾದ ಸಂಬಂಧವನ್ನು ಹೊಂದುವುದು ಅನಿವಾರ್ಯವಾಗಿತ್ತು. ಇದು ಭೂಮಾಲೀಕ ವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸಿತು. ದಾನದ ರೂಪದಲ್ಲಿ ಭೂಮಿಯನ್ನು ಪಡೆಯುವಾಗಲೇ ರಾಜನಿಗೆ ಕೊಡಬೇಕಾದ ಪಾಲು, ತೆರಿಗೆ ಸಂಗ್ರಹಣೆ, ನೀರಾವರಿ ವಿಚಾರಗಳು, ಕಾನೂನು, ಬಲಾತ್ಕಾರದ ದುಡಿಮೆ ಮುಂತಾದವುಗಳ ಮೇಲಿನ ನಿರ್ಣಯಗಳ ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆದುಕೊಳ್ಳಲಾಗುತ್ತಿತ್ತು.[21]ಇದರಿಂದಾಗಿ ಕೃಷಿಕರು ಭೂಮಾಲೀಕರನ್ನು ಪ್ರಶ್ನಿಸುವಂತಿರಲಿಲ್ಲ. ಕೃಷಿ ಮತ್ತು ಕೃಷಿ ಭೂಮಿಗೆ ಸಿಕ್ಕಿದಷ್ಟು ಪ್ರಾಮುಖ್ಯತೆ ಕೃಷಿಕನಿಗೆ ಸಿಗಲಿಲ್ಲ. ಕೃಷಿಕ ಕೃಷಿ ಉತ್ಪಾದನೆಯಲ್ಲಿ ತೊಡಗಿ ಹೆಚ್ಚುವರಿ ಉತ್ಪಾದನೆ ಪಡೆದರೂ ಅದರ ಲಾಭ ರಾಜ್ಯಕ್ಕೆ ಹೋಗುತ್ತಿತ್ತು. ಆದರೆ ಹೊರಲಾರದಷ್ಟು ತೆರಿಗೆಗಳನ್ನು ಅವನ ಮೇಲೆ ಹೇರಲಾಗುತ್ತಿತ್ತು. ಕೃಷಿ ಉತ್ಪಾದನೆಯಲ್ಲಿ ತೊಡಗುತ್ತಿದ್ದ ಕೃಷಿಕರನ್ನು ಭೂಮಿಕಾರ, ಒಕ್ಕಲು, ಬೆಸವೊಕ್ಕಲು ಮುಂತಾದ ಹೆಸರುಗಳಿಂದ ಕರೆಯಲಾಗುತ್ತಿತ್ತು.[22] ಇವರು ಗ್ರಾಮದ ಅಧಿಕಾರಿಗಳು ಮತ್ತು ಗ್ರಾಮೀಣ ಗಣ್ಯರ ಅಧೀನದಲ್ಲಿರುತ್ತಿದ್ದರು. ಹೊಲೆಯ ಮತ್ತು ತೊಟ್ಟು ಎನ್ನುವ ಕೃಷಿ ಜೀತದಾಳುಗಳು ಇದ್ದರು ಎನ್ನುವ ಮಾಹಿತಿ ಶಾಸನಗಳಿಂದ ತಿಳಿಯುತ್ತದೆ.[23] ಜೀತದಾಳು ಎಂದರೆ ಗುಲಾಮರು ಎಂದರ್ಥ. ಇವರು ಭೂಮಿಯನ್ನು ಉತ್ತು, ಬಿತ್ತು ವ್ಯವಸಾಯ ಮಾಡುತ್ತಾ ಅಲ್ಲೇ ವಾಸವಾಗಿರುತ್ತಿದ್ದ ಮತ್ತು ಯಾವುದೇ ಸ್ವಾತಂತ್ರ್ಯವನ್ನು ಅನುಭವಿಸದ ಕೆಳವರ್ಗದ ಜನರು. ಭೂಮಾಲೀಕನ ಜಮೀನಿನಲ್ಲಿ ದುಡಿಯುವುದು ಇವರ ಕೆಲಸ. ಭೂಮಾಲೀಕನ ಅನುಮತಿ ಇಲ್ಲದೆ ಇವರು ಕೆಲಸವನ್ನು ಬಿಡುವಂತಿರಲಿಲ್ಲ.

ಅರಸರು ಮತ್ತು ಭೂಮಾಲೀಕ ವರ್ಗದವರು ಕೃಷಿ ವ್ಯವಸ್ಥೆಯಲ್ಲಿ ತೆರಿಗೆಗಳಿಗೆ ಎಷ್ಟು ಪ್ರಾಮುಖ್ಯತೆಯನ್ನು ಕೊಡುತ್ತಿದ್ದರೋ ಅದಕ್ಕಿಂತ ಹೆಚ್ಚು ಪ್ರಾಮುಖ್ಯವಾದದ್ದು ದುಡಿಯುವ ವರ್ಗ. ಆದರೆ ದುಡಿಯುವ ವರ್ಗ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ದುಡಿಯುವುದು ದುಡಿಯುವ ವರ್ಗದ ಕರ್ತವ್ಯ ಎನ್ನುವ ತೀರ್ಮಾನ ಭೂಮಾಲೀಕರದ್ದಾಗಿತ್ತು. ದುಡಿಸುವ ಮತ್ತು ದುಡಿಯುವ ವರ್ಗಗಳ ನಡುವಿನ ಸಂಬಂಧಗಳು ದಾಸ್ಯರೂಪಿ ಸಂಬಂಧಗಳಾಗಿದ್ದವು. ಕೃಷಿ ಕಾರ್ಮಿಕರನ್ನು ಕೃಷಿಯಲ್ಲಿ ಬಳಸುವ ಇತರ ಪ್ರಾಣಿಗಳಂತೆ ನೋಡಲಾಗುತ್ತಿತ್ತು. ಇವರನ್ನು ಸಂತೆಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು ಎನ್ನುವ ಉಲ್ಲೇಖಗಳು ಸಿಗುತ್ತವೆ.[24] ಕಲ್ಯಾಣಿ ಚಾಲುಕ್ಯ ದೊರೆ ಆರನೆಯ ವಿಕ್ರಮಾದಿತ್ಯನ ಮುನಿರಾಬಾದಿನ ಶಿಲಾ ಶಾಸನವೊಂದರಲ್ಲಿ, ಭೂಮಿಯನ್ನು ದಾನ ಕೊಡುವಾಗ ಅದರೊಡನೆ ಪುರುಷ ಮತ್ತು ಸ್ತ್ರೀ ಸೇವಕರನ್ನು ಕೊಟ್ಟಿರುವುದಾಗಿ ಉಲ್ಲೇಖಿಸಲಾಗಿದೆ.[25] ಇದು ಭೂಮಾಲೀಕತ್ವವು ಒಂದು ರಾಜಕೀಯ ಸಿದ್ಧಾಂತ ಎನ್ನುವುದನ್ನು ತೋರಿಸಿ ಕೊಡುತ್ತದೆ. ದುಡಿಯುವ ವರ್ಗಗಳ ಸಾಮಾಜಿಕ ಮತ್ತು ಆರ್ಥಿಕ ಅಭದ್ರತೆ ಭೂಮಾಲೀಕರಿಗೆ ಮೋಜಿನ ಹಾಗೂ ವ್ಯಾಪಾರದ ವಸ್ತುವಾಯಿತು. ಇದು ಬಡವರ್ಗಗಳು ಶ್ರೀಮಂತರಿಗೆ ತಮ್ಮನ್ನು ತಾವು ಅಡವಿಟ್ಟುಕೊಳ್ಳುವಂತೆ ಮಾಡಿತು. ಕೃಷಿಯ ವಿಸ್ತರಣೆ ಹೆಚ್ಚಿದಂತೆಲ್ಲಾ ಕೃಷಿ ಕಾರ್ಮಿಕರ ಸಮಸ್ಯೆಗಳೂ ಹೆಚ್ಚುತ್ತಾ ಹೋದವು. ಆದರೆ ಕೃಷಿಯ ವಿಸ್ತರಣೆ ಹಾಗೂ ಹೊಸ ಹಳ್ಳಿಗಳ ನಿರ್ಮಾಣ ಭೂಮಾಲೀಕ ವರ್ಗಕ್ಕೆ ತಮ್ಮ ಯಜಮಾನಿಕೆ ಯನ್ನು ಸ್ಥಾಪಿಸಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸಿತು.

ಭೂಮಾಲೀಕರು ಮತ್ತು ಕೃಷಿಕರ ಮಧ್ಯೆ ಮನಸ್ತಾಪಗಳು ಉಂಟಾಗುತ್ತಿದ್ದವು ಎನ್ನುವುದನ್ನು ಸೂಚಿಸುವ ಕೆಲವು ಶಾಸನಗಳು ಸಿಗುತ್ತವೆ. ಸಾಮಾಜಿಕ ಅಸಮಾನತೆ ಹಾಗೂ ಸಂಪತ್ತಿನ ಹಂಚಿಕೆಯಲ್ಲಾಗುತ್ತಿದ್ದ ಏರುಪೇರುಗಳು ಈ ಮನಸ್ತಾಪಗಳಿಗೆ ಕಾರಣವಾಗುತ್ತಿದ್ದವು. ಭೂಮಿಯನ್ನು ಗೇಣಿಗೆ ಪಡೆದು ಕೃಷಿ ಮಾಡುವ ರೈತರು ತಾವೇ ಕೃಷಿ ಕಾರ್ಮಿಕರಾಗಿರುತ್ತಿದ್ದರು. ಕೃಷಿಯ ಕೆಲಸಗಳನ್ನು ತಾವೇ ಸ್ವತಃ ಮಾಡುತ್ತಿದ್ದರು. ಒಂದು ಪ್ರದೇಶದಲ್ಲಿ ಗೇಣಿಗೆ ಕೃಷಿ ಮಾಡುತ್ತಿರುವ ಕೃಷಿಕರು ಇನ್ನೊಂದು ಪ್ರದೇಶಕ್ಕೆ ಹೋಗುವಂತಿರಲಿಲ್ಲ. ಆದರೆ ಭೂಮಾಲೀಕರು ತಾವಾಗಿಯೇ ಕೃಷಿಕರನ್ನು ಸ್ಥಳಾಂತರಿಸಬಹುದಿತ್ತು. ಅಗ್ರಹಾರಗಳನ್ನು ನಿರ್ಮಿಸುವ ಸಂದರ್ಭಗಳಲ್ಲಿ ಒಕ್ಕಲುಗಳನ್ನು ಒಕ್ಕಲೆಬ್ಬಿಸಲಾಗುತ್ತಿತ್ತು.[26] ಇದರಿಂದಾಗಿ ಕೃಷಿಕರು ಮತ್ತು ಕೃಷಿ ಕಾರ್ಮಿಕರು ಭೂಮಾಲೀಕರ ಕಾನೂನಿನ ಚೌಕಟ್ಟಿನೊಳಗೇ ವ್ಯವಹರಿಸಬೇಕಾಯಿತು. ಕೇಂದ್ರ ಪ್ರಭುತ್ವದ ಮಧ್ಯಪ್ರವೇಶಿಸಿದರೂ ಅದು ಭೂಮಾಲೀಕರ ಪರವಾಗಿಯೇ ತೀರ್ಮಾನಗಳನ್ನು ನೀಡುತ್ತಿತ್ತು. ಬ್ರಹ್ಮದೇಯ ಭೂಮಿಯನ್ನು ಪಡೆದು ಮಹಾಜನರಾದ ಬ್ರಾಹ್ಮಣವರ್ಗ ಕೃಷಿಕರಿಂದ ವಿರೋಧವನ್ನು ಎದುರಿಸುತ್ತಿತ್ತು. ಬ್ರಾಹ್ಮಣ ಭೂಮಾಲೀಕರ ಏಕಸ್ವಾಮ್ಯವನ್ನು ಪ್ರಶ್ನಿಸುವ ಸಾಹಸವನ್ನು ಹಳ್ಳಿಯೊಂದರ ಕೃಷಿಕರ ತಮ್ಮ ಹಳ್ಳಿಯನ್ನು ಬ್ರಾಹ್ಮಣರಿಗೆ ನೀಡುವುದನ್ನು ವಿರೋಧಿಸಿದ್ದರ ಉಲ್ಲೇಖವಿದೆ.[27] ಬ್ರಾಹ್ಮಣರು ಮತ್ತು ಬ್ರಾಹ್ಮಣೇತರ ಕೃಷಿಕ ಕುಟುಂಬದ ಮಧ್ಯೆ ಕೆರೆಯಿಂದ ಕೃಷಿಗಾಗಿ ನೀರನ್ನು ಬಳಸುವ ಸಂಬಂಧವಾಗಿ ಉಂಟಾದ ಕಲಹವನ್ನು ಹಾಸನದ ಕ್ರಿ.ಶ. ೧೦೮೦ರ ಶಾಸನವು ಹೇಳುತ್ತದೆ.[28] ಅದೇ ರೀತಿ ಕ್ರಿ.ಶ. ೧೨೧೨ರ ಶಾಸನದಲ್ಲಿ ಕೃಷಿಕರು ಮತ್ತು ಬ್ರಾಹ್ಮಣ ಭೂಮಾಲೀಕರ ಮಧ್ಯೆ ಕೆರೆಯಿಂದ ಕೃಷಿಗಾಗಿ ನೀರನ್ನು ಬಳಸುವ ಸಂಬಂಧವಾಗಿ ಉಂಟಾದ ವಿವಾದವನ್ನು ಹೇಳಲಾಗಿದೆ.[29] ಕೃಷಿಕರ ತೀವ್ರ ವಿರೋಧ ಇದ್ದಿದ್ದರಿಂದಾಗಿ ಭೂಮಾಲೀಕರು ಕೆರೆಯಿಂದ ನೀರನ್ನು ಪಡೆಯುವುದು ಸಾಧ್ಯವಾಗಲಿಲ್ಲ. ಆದರೆ ಹೊಯ್ಸಳ ಅರಸರು ಭೂಮಾಲೀಕರಿಗೆ ಇನ್ನೊಂದು ಕೆರೆಯನ್ನು ನಿರ್ಮಿಸಿಕೊಟ್ಟು ವಿವಾದವನ್ನು ಬಗೆಹರಿಸಿದರು.[30] ಇದು ಅರಸರು ಮತ್ತು ಭೂಮಾಲೀಕರ ನಡುವಿನ ಸಂಬಂಧದ ಸ್ವರೂಪವನ್ನು ತಿಳಿಸುತ್ತದೆ. ಭೂಮಾಲೀಕರ ಏಕಪಕ್ಷೀಯ ಧೋರಣೆಗಳನ್ನು ಪ್ರಶ್ನಿಸುವ, ವಿರೋಧಿಸುವ ಪ್ರವೃತ್ತಿಗಳು ಅಂದಿನ ಸಂದರ್ಭದಲ್ಲಿ ಕಾಣಿಸಿಕೊಂಡಿದ್ದವು ಎನ್ನುವುದನ್ನು ಈ ಶಾಸನಗಳು ಸಾಬೀತುಪಡಿಸುತ್ತವೆ. ಸಮಾಜದ ಕೆಳಸ್ತರದ ಅಧ್ಯಯನ ಕೈಗೊಂಡಾಗ ಮಾತ್ರ ಇಂಥ ಅನೇಕ ವಿಚಾರಗಳು ಬೆಳಕಿಗೆ ಬರಲು ಸಾಧ್ಯ.


 

[1] ಚನ್ನಕ್ಕ ಎಲಿಗಾರ, ಪೂರ್ವೋಕ್ತ. ಪು. ೨೭೪; ಎ.ಕ.೬, ದಾವಣಗೆರೆ ೧೩೩, ಕ್ರಿ.ಶ. ೧೦೬೧; ಸೌ.ಇ.ಇ. ೯-೧, ೧೨೫, ಹರಪನಹಳ್ಳಿ, ಕ್ರಿ.ಶ. ೧೦೬೧

[2] ಈ ವಿವರಗಳು ರಾಷ್ಟ್ರಕೂಟರಿಂದ ಹೊಯ್ಸಳವರೆಗಿನ ಆಳ್ವಿಕೆಯ ಸಂದರ್ಭದ ಶಾಸನಗಳಲ್ಲಿ ಸಿಗುತ್ತವೆ. ಅವು ಹಲವಾರು ಶಾಸನ ಸಂಪುಟಗಳಲ್ಲಿ ಪ್ರಕಟಗೊಂಡಿವೆ. ಉದಾಹರಣೆಗೆಮ್ ಎಪಿಗ್ರಾಫಿಯಾ ಕರ್ನಾಟಿಕ, ಎಪಿಗ್ರಾಫಿಯ ಇಂಡಿಕ, ಸೌತ್ ಇಂಡಿಯನ್ ಇನ್‍ಸ್ಕ್ರಿಪ್‍ಷನ್ಸ್, ಕರ್ನಾಟಕ ಇನ್‍ಸ್ಕ್ರಿಪ್‍ಷನ್ಸ್ ಇತ್ಯಾದಿ. ಈ ಶಾಸನಗಳನ್ನು ಬಳಸಿಕೊಂಡು ಹಲವಾರು ಕೃತಿಗಳು ರಚನೆಗೊಂಡಿದ್ದು ಅವು ವಿವಿಧ ರೀತಿಯ ತೆರಿಗೆಗಳ ಕುರಿತಾದ ಮಾಹಿತಿಯನ್ನು ನೀಡುತ್ತವೆ. ಅವುಗಳೆಂದರೆ, ಎಂ. ಚಿದಾನಂದಮೂರ್ತಿ, ಪೂರ್ವೋಕ್ತ, ಪು.೩೯೭-೪೦೩; ಎಸ್.ಜಿ.ಘಟಪಣದಿ, ಟಾಕ್ಸೇಷನ್ ಇನ್ ಏನ್‍ಶ್ಯಂಟ್ ಆಂಡ್ ಮಿಡೀವಲ್ ಕರ್ನಾಟಕ, ಧಾರವಾಡ; ಜಿ.ಆರ್.ಕುಪ್ಪಸ್ವಾಮಿ, ಪೂರ್ವೋಕ್ತ; ಎಸ್. ಗುರುರಾಜಾಚಾರ್, ಪೂರ್ವೋಕ್ತ; ಪ್ರೊ. ಬಿ.ಸುರೇಂದ್ರರಾವ್ (ಸಂ.), ಕರ್ನಾಟಕ ಚರಿತ್ರೆ (ಕ್ರಿ.ಶ. ೬೪೦-೧೩೩೬), ಸಂಪುಟ ೨, ಕನ್ನಡ ವಿಶ್ವವಿದ್ಯಾಲಯ, ೧೯೯೭; ಬರ್ಟನ್ ಸ್ಟೈನ್, ಪೆಸೆಂಟ್ ಸ್ಟೇಟ್ ಆಂಡ್ ಸೊಸೈಟಿ ಇನ್ ಮೀಡಿವಲ್ ಸೌತ್ ಇಂಡಿಯಾ, ೧೮೯೦, ಮುಂತಾದ ಕೃತಿಗಳು.

[3] ಕೇಶವನ್ ವೆಲುತೆಟ್, ದಿ ಪೊಲಿಟಿಕಲ್ ಸ್ಟ್ರಕ್ಚರ್ ಆಫ್ ಅರ‍್ಲಿ ಮಿಡೀವಲ್ ಸೌತ್ ಇಂಡಿಯಾ, ದೆಹಲಿ, ೧೯೩೩, ಪು. ೯೭-೯೮

[4] ಕೇಶವನ್ ವೆಲುತೆಟ್, ಲ್ಯಾಂಡೆಡ್ ಮ್ಯಾಗ್ನೇಟ್ಸ್ ಆಫ್ ಸ್ಟೇಟ್ ಏಜೆಂಟ್ಸ್ : ದಿ ಗೌಂಡಾಸ್ ಅಂಡರ್ ದಿ ಹೊಯ್ಸಳಾಸ್ ಇನ್ ಕರ್ನಾಟಕ, ಪಿ.ಐ.ಹೆಚ್.ಸಿ, ೧೯೮೯

[5] ವಿ.ಎಸ್. ಎಲಿಜಬೆತ್, ರಾಷ್ಟ್ರಕೂಟ ಪ್ರಾಬಲ್ಯದ ಸಮಯದಲ್ಲಿದ್ದ ಕರ್ನಾಟಕದ ರಾಜಕೀಯ ಸ್ವರೂಪ, ಕರ್ನಾಟಕ ಚರಿತ್ರೆ ಸಂಪುಟ-೨, (ಸಂ.) ಪ್ರೊ. ಬಿ.ಸುರೇಂದ್ರರಾವ್, ಕನ್ನಡ ವಿಶ್ವವಿದ್ಯಾಲಯ, ೧೯೯೭, ಪು. ೧೭-೧೮

[6] ಜಿ.ಎಸ್. ದೀಕ್ಷಿತ್. ಲೋಕಲ್ ಸೆಲ್ಫ್ ಗವರ್ನಮೆಂಟ್ ಇನ್ ಮಿಡೀವಲ್ ಕರ್ನಾಟಕ, ಧಾರವಾಡ, ೧೯೬೪, ಪು. ೫೯

[7] ವಿ.ಎಸ್. ಎಲಿಜಬೆತ್, ಪೂರ್ವೋಕ್ತ, ಪು. ೨೦

[8] ಮೈ.ಆ.ರಿ. ೧೯೩೨, ೧೬-೩೩, ಕ್ರಿ.ಶ. ೧೦೬೯

[9] ಸೌ.ಇ.ಇ. ೧೫, ಪು.೧೫೯, ಕ್ರಿ.ಸ. ೧೨೧೩; ಎಸ್. ಗುರುರಾಜಾಚಾರ್, ಪೂರ್ವೋಕ್ತ, ಪು.೧೫೮

[10] ಎಂ.ಚಿದಾನಂದಮೂರ್ತಿ, ಪೂರ್ವೋಕ್ತ, ಪು. ೪೦೬, ಅವರ ಪ್ರಕಾರ ಜನರು ಹೆಸರುತ್ತಿದ್ದುದು ಎರಡು ಕಾರಣಗಳಿಗಾಗಿ; ಒಂದು ಸೈನಿಕರು ಮತ್ತು ಬಿಟ್ಟಿ ಕೆಲಸಗಳಿಗೆ, ಇನ್ನೊಂದು, ತೆರಿಗೆಗಳಿಗಾಗಿ.

[11] ಆರ್.ಎಸ್.ಶರ್ಮ, ಇಂಡಿಯನ್ ಫ್ಯೂಡಲಿಸಂ, ಮದರಾಸು, ೧೯೯೦, ಪು.೯೯

[12] ಎ,ಎಸ್.ಆಲ್ಟೇಕರ್, ಸ್ಟೇಟ್ ಆಂಡ್ ಗವರ್ನಮೆಂಟ್ ಇನ್ ಏನ್‍ಶ್ಯಂಟ್ ಇಂಡಿಯಾ, ಬೆನಾರಸ್, ೧೯೫೫, ಪು. ೨೦೬

[13] ಆರ್.ಎಸ್.ಶರ್ಮ, ಪೂರ್ವೋಕ್ತ, ಪು. ೧೯

[14] ಆರ್.ಎಸ್.ಶರ್ಮ, ಪೂರ್ವೋಕ್ತ, ಪು. ೯೯

[15] ಜಿ.ಆರ್. ಕುಪ್ಪಸ್ವಾಮಿ, ಪೂರ್ವೋಕ್ತ, ಪು. ೧೫೩

[16] ಬಿ.ಕೆ.ಐ.೧, ೩೬, ಕ್ರಿ.ಶ. ೯೪೨; ಎಂ.ಚಿದಾನಂದಮೂರ್ತಿ, ಪೂರ್ವೋಕ್ತ, ಪು.೨೮೫

[17] ಬಸವರಾಜ ಸಬರದ, ಶಾಸನಗಳು: ಪ್ರಭುತ್ವ ಮತ್ತು ಜನತೆ, ಕನ್ನಡ ವಿಶ್ವವಿದ್ಯಾಲಯ, ೧೯೯೯, ಪು. ೨೬-೨೭

[18] ಇರ್ಫಾನ್ ಹಬೀಬ್, ಎಸ್ಸೇಸ್ ಇನ್ ಇಂಡಿಯನ್ ಹಿಸ್ಟರಿ, ತುಳಿಕ ಪಬ್ಲಿಕೇಷನ್ಸ್, ನವದೆಹಲಿ, ೧೯೯೭, ಪು. ೧೦೯

[19] ಅದೇ

[20] ಇರ್ಫಾನ್ ಹಬೀಬ್, ಪೂರ್ವೋಕ್ತ, ಪು. ೧೧೦

[21] ವಿ.ಎಸ್. ಎಲಿಜಬೆತ್, ಪೂರ್ವೋಕ್ತ, ಪು. ೧೮

[22] ಎ.ಕ.೪ (ಹೊಸ ಸರಣಿ), ಚಾಮರಾಜನಗರ ೬, ಕ್ರಿ.ಶ. ೧೧೨೫; ಎ.ಕ.೬ (ಹೊಸ ಸರಣಿ), ಕೆ.ಆರ್.ಪೇಟೆ ೯೦, ಕ್ರಿ.ಶ. ೧೨೯೯

[23] ಕೆ.ಎಸ್. ಶಿವಣ್ಣ, ಪೂರ್ವೋಕ್ತ, ಪು. ೧೫೩

[24] ಎ. ಅಪ್ಪಾದೊರೈ, ಇಕಾನಾಮಿಕ್ ಕಂಡಿಷನ್ಸ್ ಇನ್ ಸದರ್ನ್ ಇಂಡಿಯಾ, ಮದರಾಸು, ೧೯೩೬, ಸಂಪುಟ-೧, ಪು.೨೫೭-೫೮

[25] ಹೈ.ಆ.ಸೀ. ನಂ. ೫, ಪು.೧೦

[26] ಎ.ಕ.೫, ಚನ್ನರಾಯಪಟ್ಟಣ ೧೯೭; ಎಸ್. ಗುರುರಾಜಾಚಾರ್, ಪೂರ್ವೋಕ್ತ, ಪು. ೧೮೯

[27] ಎಂ.ಎ.ಆರ್. ೧೯೩೬, ನಂ.೧೯, ಪು.೮೪, ಕ್ರಿ.ಶ. ೧೨೫೧

[28] ಎ.ಕ.೫, ಹಾಸನ ೩೪, ಕ್ರಿ.ಶ. ೧೦೮೦

[29] ಎ.ಕ.೫, ಹಾಸನ ೪೨, ಕ್ರಿ.ಶ. ೧೨೧೨

[30] ಬಿ.ಉದಯ, ಬ್ರಾಹ್ಮಣ ಲ್ಯಾಂಡ್‍ಲಾರ್ಡ್ಸ್ ಆಂಡ್ ನಾನ್-ಬ್ರಾಹ್ಮಣ ಪೆಸೆಂಟ್ರಿ ಇನ್ ಅರ‍್ಲಿ ಮಿಡೀವಲ್ ಕರ್ನಾಟಕ ಅಂದತ್ ದಿ ಹೊಯ್ಸಳಾಸ್, ಇಂಡಿಕಾ-೩೩, ದಿ ಹೆರಾಸ್ ಇನ್‍ಸ್ಟಿಟ್ಯೂಟ್, ಸೈಂಟ್ ಜೇವ್ಯರ್ಸ್ ಕಾಲೇಜ್ ಮುಂಬಯಿ, ಪು.೧೧-೨೦