ರಾಷ್ಟ್ರಕೂಟರ ಉಗಮದಿಂದ ಹೊಯ್ಸಳರ ಅವನತಿಯವರೆಗಿನ ಅವಧಿಯಲ್ಲಿ ಯಾವ ರೀತಿಯ ಉತ್ಪಾದನಾ ವ್ಯವಸ್ಥೆ ಅಸ್ತಿತ್ವದಲ್ಲಿತ್ತು ಎನ್ನುವುದನ್ನು ತೀರ್ಮಾನಿಸುವುದು ಕಷ್ಟದ ಕೆಲಸ. ಏಕೆಂದರೆ ಅರಸ ಮತ್ತು ಅಧಿಕಾರಿಗಳು, ಭೂಮಾಲೀಕರು ಮತ್ತು ರೈತರು ಹಾಗೂ ಉತ್ಪಾದಕ ಮತ್ತು ಅನುತ್ಪಾದಕ ವರ್ಗಗಳು ಪರಸ್ಪರ ಯಾವ ರೀತಿಯ ಸಂಬಂಧವನ್ನು ಹೊಂದಿದ್ದವು ಹಾಗೂ ಅವುಗಳ ಸಂಬಂಧಗಳಲ್ಲಿ ಯಾವ ರೀತಿಯ ಬದಲಾವಣೆಗಳಾಗುತ್ತಿದ್ದವು ಎನ್ನುವುದು ಇನ್ನೂ ಸ್ಪಷ್ಟಗೊಂಡಿಲ್ಲ. ಇದಕ್ಕೆ ಮೂಲ ಕಾರಣ ಅರಸಕೇಂದ್ರಿತ ಚರಿತ್ರೆ ನಿರ್ಮಾಣ ಹಾಗೂ ಯುರೋಪ್ ಕೇಂದ್ರಿತ ಅಧ್ಯಯನ ಕ್ರಮ. ಈ ಅಧ್ಯಯನ ವಿಧಾನದಿಂದ ಚರಿತ್ರೆಯ ವಾಸ್ತವ ಚಿತ್ರಣ ಸಿಗಲು ಸಾಧ್ಯವಿಲ್ಲ. ಉತ್ಪಾದನಾ ವಿಧಾನ, ಉತ್ಪಾದನಾ ಸಂಬಂಧಗಳು, ಉತ್ಪಾದನಾ ಉಪಕರಣಗಳು ಮುಂತಾದ ಪರಿಕಲ್ಪನೆಗಳು ಮಾರ್ಕ್ಸ್‌ವಾದಿ ಅಧ್ಯಯನ ವಿಧಾನದಿಂದಾಗಿ ಹುಟ್ಟಿಕೊಂಡವು. ಒಟ್ಟಾರೆಯಾಗಿ ಇವುಗಳನ್ನು ಚಾರಿತ್ರಿಕ ವಸ್ತುವಾದದ ವಿಧಾನ ಎಂಬುದಾಗಿ ಹೆಸರಿಸಲಾಗಿದೆ. ಈ ಅಧ್ಯಯನ ವಿಧಾನದಿಂದ ಯಾವ ರೀತಿಯ ಉತ್ಪದನಾ ವ್ಯವಸ್ಥೆ ಅಸ್ತಿತ್ವದಲ್ಲಿತ್ತು ಹಾಗೂ ಆ ವ್ಯವಸ್ಥೆಯೊಳಗೆ ಯಾವ ರೀತಿಯ ಪರಿವರ್ತನೆಗಳು ಆಗುತ್ತಿದ್ದವು ಅನ್ನುವುದರ ಅಧ್ಯಯನ ಸಾಧ್ಯ. ಪ್ರಸ್ತುತ ಅಧ್ಯಾಯನದಲ್ಲಿ ಊಳಿಗಮಾನ್ಯತೆ, ಭೂಮಾಲೀಕತ್ವ, ಮಧ್ಯವರ್ತಿಗಳು ಹಾಗೂ ದಾನ ಎಂಬ ನಾಲ್ಕು ಅಂಶಗಳನ್ನು ಇಟ್ಟುಕೊಂಡು ಕ್ರಿ.ಶ. ೮ ರಿಂದ ೧೪ನೆಯ ಶತಮಾನದವರೆಗಿನ ಅವಧಿಯಲ್ಲಿ ಯಾವ ರೀತಿಯ ಉತ್ಪಾದನಾ ವ್ಯವಸ್ಥೆ ಅಸ್ತಿತ್ವದಲ್ಲಿತ್ತು ಎನ್ನುವುದನ್ನು ಪತ್ತೆಹಚ್ಚುವ ಪ್ರಯತ್ನವನ್ನು ಮಾಡಲಾಗಿದೆ. ಕೇಂದ್ರಪ್ರಭುತ್ವವು ಸಾಮಂತರೊಂದಿಗೆ, ಭೂಮಾಲೀಕ ಮಧ್ಯವರ್ತಿಗಳೊಂದಿಗೆ ಹಾಗೂ ಇತರ ಉತ್ಪಾದಕ ವರ್ಗಗಳೊಂದಿಗೆ ಹೊಂದಿದ್ದ ಸಂಬಂಧಗಳ ಸ್ವರೂಪವನ್ನು ಈ ನಾಲ್ಕು ಅಂಶಗಳ ಅಧ್ಯಯನದಿಂದ ತಿಳಿಯಬಹುದಾಗಿದೆ. ಇಲ್ಲಿ ಬಹುಮುಖ್ಯವಾದ ವಿಚಾರವೆಂದರೆ ಉತ್ಪಾದಕ ಮತ್ತು ಅನುತ್ಪಾದಕ ವರ್ಗಗಳ ನಡುವಿನ ಸಂಬಂಧ ಹಾಗೂ ಅದು ರಾಜ್ಯ ವ್ಯವಸ್ಥೆಯ ಮೇಲೆ ಬೀರುತ್ತಿದ್ದ ಪರಿಣಾಮಗಳು. ಇದರಿಂದಾಗಿ ಉತ್ಪಾದನಾ ವ್ಯವಸ್ಥೆಯ ಅಧ್ಯಯನವು ಕೇವಲ ಆರ್ಥಿಕ ಚಟುವಟಿಕೆಗಳಿಗಷ್ಟೇ ಸೀಮಿತವಾಗಿರದೆ ಸಾಮಾಜಿಕ ಸ್ಥಿತ್ಯಂತರಗಳ ಸ್ವರೂಪವನ್ನು ಪರಿಚಯಿಸುತ್ತದೆ.

.೧ ಊಳಿಗಮಾನ್ಯತೆ

ಊಳಿಗಮಾನ್ಯತೆ ಎನ್ನುವ ವಿಷಯವು ವಿದ್ವಾಂಸರಿಗೆ ಆಸಕ್ತಿಯ ಹಾಗೂ ಚರ್ಚೆಯ ವಸ್ತುವಾಗಿದೆ. ಈ ಪರಿಕಲ್ಪನೆಯ ಕುರಿತು ವಿದ್ವಾಂಸರಲ್ಲಿ ಅನೇಕ ರೀತಿಯ ವಾದವಿವಾದಗಳಿದ್ದು ಯಾವುದೇ ಅಂತಿಮ ತೀರ್ಮಾನಕ್ಕೆ ಬರುವುದು ಸಾಧ್ಯವಾಗುವುದಿಲ್ಲ. ಭಾರತದ ಚರಿತ್ರೆಗೆ ಸಂಬಂಧಿಸಿದಂತೆ ಊಳಿಗಮಾನ್ಯ ವ್ಯವಸ್ಥೆಯ ಕುರಿತು ಅನೇಕ ವಿದ್ವಾಂಸರು ಚರ್ಚೆ ನಡೆಸಿದ್ದಾರೆ. ಅವರಲ್ಲಿ ಡಿ.ಡಿ.ಕೊಸಾಂಬಿ, ರಾಮ್ ಶರಣ್ ಶರ್ಮ, ವಿಜಯ್‍ಕುಮಾರ್ ಟಾಕೂರ್, ಹರ್ಬನ್ಸ್ ಮುಖ್ಯ, ಇರ್ಫಾನ್ ಬಬೀಬ್, ಹರ್ಮನ್ ಕುಲ್ಕೆ, ನೂರುಲ್ ಹಸನ್, ಡಿ.ಎನ್.ಝೂ, ಬಿ.ಎಸ್.ಎಸ್.ಯಾದವ, ಬರ್ಟನ್ ಸ್ಟೈನ್, ಸುಬ್ಬರಾಯಲು ಮುಂತಾದವರು ಪ್ರಮುಖರು. ಇವರು ನಡೆಸಿದ ಚರ್ಚೆಯು ಊಳಿಗಮಾನ್ಯ ವ್ಯವಸ್ಥೆಯ ಅಸ್ತಿತ್ವ, ಸ್ವರೂಪ ಹಾಗೂ ಸಮಾಜದ ಚಲನೆಯನ್ನು ಅರ್ಥೈಸಿಕೊಳ್ಳುವುದಕ್ಕೆ ಸಹಕಾರಿಯಾಗುತ್ತದೆ. ಊಳಿಗಮಾನ್ಯತೆಯ ಕುರಿತು ಚರ್ಚೆಯನ್ನು ಆರಂಭಿಸಿದವರಲ್ಲಿ ಡಿ.ಡಿ..ಕೊಸಾಂಬಿ ಅವರು ಮೊದಲಿಗರು. ಅವರ ಪ್ರಕಾರ ಈ ವ್ಯವಸ್ಥೆಯಲ್ಲಿ ಎರಡು ಪ್ರಮುಖ ಲಕ್ಷಣಗಳಿವೆ.[1] ಅವುಗಳೆಂದರೆ ಅರಸ ಪ್ರಜೆಗಳೊಂದಿಗೆ ನೇರವಾಗಿ ವ್ಯವಹರಿಸುವುದು ಮತ್ತು ಅರಸ ತೆರಿಗೆಗಳನ್ನು ಸಂಗ್ರಹಿಸುವುದು ಹಾಗೂ ಭೂಮಾಲೀಕ ಮಧ್ಯವರ್ತಿಗಳ ಹುಟ್ಟು. ಇದು ಅರಸ ಮತ್ತು ಭೂಮಾಲೀಕ ಮಧ್ಯವರ್ತಿಗಳೆಂಬ ಎರಡು ರೀತಿಯ ನಿಯಂತ್ರಣ ವ್ಯವಸ್ಥೆಗಳನ್ನು ಸೂಚಿಸುತ್ತದೆ. ಆರ್.ಎಸ್. ಶರ್ಮ ಅವರ ಪ್ರಕಾರ ಊಳಿಗಮಾನ್ಯತೆಯ ಹುಟ್ಟಿಗೆ ಪ್ರಮುಖ ಕಾರಣವೆಂದರೆ ಬ್ರಾಹ್ಮಣರು, ಧಾರ್ಮಿಕ ಸಂಘ ಸಂಸ್ಥೆಗಳು ಹಾಗೂ ಸರಕಾರಿ ಅಧಿಕಾರಿಗಳಿಗೆ ನೀಡುತ್ತಿದ್ದ ಮಿತಿಮೀರಿದ ಭೂದಾನಗಳು.[2] ಈ ವ್ಯಾಖ್ಯಾನವು ಸಾಮಾಜಿಕ ಬಿಕ್ಕಟ್ಟು, ನಗರಗಳ ಅವನತಿ, ನಾಣ್ಯಗಳ ಚಲಾವಣೆಯಲ್ಲಿನ ಇಳಿಮುಖ ಮುಂತಾದ ವಿಚಾರಗಳ ಕುರಿತಾದ ಚರ್ಚೆಗೆ ಅವಕಾಶ ಕಲ್ಪಿಸಿಕೊಟ್ಟಿತು.[3] ಅದೇ ರೀತಿ ಭೂಮಿಗೆ ಸಂಬಂಧಿಸಿದ ವಿಚಾರಗಳು, ಕೃಷಿ ಆರ್ಥಿಕತೆ, ಭೂಮಾಲೀಕರು, ಹೆಚ್ಚುವರಿ ಉತ್ಪಾದನೆ ಮುಂತಾದವು ಚರ್ಚೆಯನ್ನು ಇನ್ನಷ್ಟು ವಿಸ್ತರಿಸಿ ಅದಕ್ಕೊಂದು ತಾತ್ವಿಕ ಚೌಕಟ್ಟನ್ನು ನಿರ್ಮಿಸಿಕೊಟ್ಟವು.[4]

ರಾಷ್ಟ್ರಕೂಟರ ಹುಟ್ಟಿನಿಂದ ಹೊಯ್ಸಳರ ಅವನತಿಯವರೆಗಿನ ಅವಧಿಯ ಕರ್ನಾಟಕ ಚರಿತ್ರೆಯು ಭೂ-ಆಧಾರಿತ ಅರ್ಥವ್ಯವಸ್ಥೆಯ ಲಕ್ಷಣಗಳನ್ನು ಸೂಚಿಸುತ್ತದೆ. ಇದು ಮೇಲೆ ವಿವರಿಸಿದಂತೆ ಭೂಮಿ, ಕಂದಾಯ, ದಾನ, ಹೆಚ್ಚುವರಿ ಉತ್ಪಾದನೆ ಹಾಗೂ ಭೂಮಾಲೀಕರ ಅಧ್ಯಯನ ಕೈಗೊಂಡಾಗ ಮಾತ್ರ ಸ್ಪಷ್ಟವಾಗಲು ಸಾಧ್ಯ. ಈ ಅವಧಿಯಲ್ಲಿ ಊಳಿಗಮಾನ್ಯ ಲಕ್ಷಣಗಳನ್ನು ಸೂಚಿಸುವ ಅನೇಕ ನಿದರ್ಶನಗಳು ಸಿಗುತ್ತವೆ. ಅವುಗಳೆಂದರೆ, ಸಾಮಂತ ಅರಸರುಗಳ ಪ್ರಾಬಲ್ಯತೆ, ರಾಜಕೀಯ ಪ್ರೇರಿತ ನೂತನ ನೆಂಟಸ್ಥಿಕೆಗಳು, ಬ್ರಾಹ್ಮಣರು – ಧಾರ್ಮಿಕ ಸಂಸ್ಥೆಗಳು – ಅಧಿಕಾರಿ ವರ್ಗದವರಿಗೆ ನೀಡಲಾಗುತ್ತಿದ್ದ ಭೂದಾನಗಳು, ಭೂಮಾಲೀಕ ಮಧ್ಯವರ್ತಿಗಳ ಹುಟ್ಟು, ಮಧ್ಯವರ್ತಿಗಳ ಸ್ವತಂತ್ರ ಕಾರ್ಯನಿರ್ವಹಣೆ, ಉತ್ಪಾದಕ ವರ್ಗದ ಶೋಷಣೆ, ಬಲಾತ್ಕಾರದ ದುಡಿಮೆ ಮುಂತಾದವು, ಸಾಮಂತ ಅರಸರ ಅಸ್ತಿತ್ವವು ಪ್ರಭುತ್ವದಲ್ಲಿನ ಶ್ರೇಣೀಕೃತ ವ್ಯವಸ್ಥೆಯ ಪರಿಣಾಮ. ಮಹಾರಾಜಾಧಿರಾಜ, ರಾಜಾಧಿರಾಜ, ರಾಜ ಮುಂತಾದ ಬಿರುದುಗಳು ರಾಜಪ್ರಭುತ್ವದ ಶ್ರೇಣೀಕರಣವನ್ನು ಸೂಚಿಸುತ್ತವೆ. ಸಾಮಂತ ಎಂದರೆ ಒಬ್ಬ ಸಾಮ್ರಾಟನಿಗೆ ಅಡಿಯಾಳಾಗಿರುವ ರಾಜ, ಆತ ಸಾರ್ವಭೌಮನಲ್ಲ. ಸಾಮ್ರಾಟನಿಗೆ ನಿರ್ದಿಷ್ಟ ಕಾಲದಲ್ಲಿ ಕಪ್ಪ-ಕಾಣಿಕೆಗಳನ್ನು ಸಲ್ಲಿಸುವ, ಸೈನಿಕ ಸಹಾಯವನ್ನು ಮಾಡುವ, ಆಡಳಿತದಲ್ಲಿ ನೆರವಾಗುವ ಕೆಲಸವನ್ನು ಸಾಮಂತ ಅರಸರು ಮಾಡಬೇಕಾಗಿತ್ತು. ಸಾಮ್ರಾಟನು ಪ್ರಾದೇಶಿಕ ಆಡಳಿತದ ಜವಾಬ್ದಾರಿಯನ್ನು ಸಾಮಂತರಿಗೆ ಒಪ್ಪಿಸುತ್ತಿದ್ದ. ಇದು ಹೆಚ್ಚು ಕಡಿಮೆ ವಂಶಪಾರಂಪರ್ಯವಾದದ್ದಾಗಿತ್ತು. ಇದರಿಂದಾಗಿ ರಾಜ್ಯದಲ್ಲಿ ಎರಡು ರೀತಿಯ ಆಡಳಿತ ಪ್ರದೇಶಗಳು ನಿರ್ಮಾಣಗೊಂಡವು. ಇದು ವಿಕೇಂದ್ರೀಕೃತ ಊಳಿಗಮಾನ್ಯ ವ್ಯವಸ್ಥೆಯನ್ನು ಸೂಚಿಸುತ್ತದೆ.

ರಾಷ್ಟ್ರಕೂಟರ ಆಳ್ವಿಕೆಯ ಸಂದರ್ಭದಲ್ಲಿ ಸಾಮಂತ ಅರಸರೊಳಗೂ ಶ್ರೇಣೀಕೃತ ವ್ಯವಸ್ಥೆಯೊಂದಿತ್ತು ಎನ್ನುವುದು ತಿಳಿದುಬರುತ್ತದೆ. ಅದನ್ನು ಒಂದನೆಯ, ಎರಡನೆಯ ಹಾಗೂ ಮೂರನೆಯ ವರ್ಗದ ಸಾಮಂತರು ಎಂಬುದಾಗಿ ಹೆಸರಿಸಲಾಗಿದೆ.[5] ಸಂಪೂರ್ಣ ಅಧಿಕಾರವನ್ನು ಹೊಂದಿರುತ್ತಿದ್ದ ಸಾಮಂತರು ಒಂದನೆಯ ವರ್ಗದವರಾಗಿರುತ್ತಿದ್ದರು. ಅವರು ಕಾನೂನು. ಕಾಯಿದೆಗಳನ್ನು ಖುದ್ದಾಗಿ ತೆಗೆದುಕೊಳ್ಳುವ ಹಾಗೂ ಹಣಕಾಸಿನ ವಿಚಾರದಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಹಕ್ಕನ್ನು ಹೊಂದಿದ್ದರು. ಅದೇ ರೀತಿ ತಮ್ಮ ವ್ಯಾಪ್ತಿಯಲ್ಲಿ ಬರುವ ಯಾವುದೇ ಪ್ರದೇಶವನ್ನು ಅರಸನ ಒಪ್ಪಿಗೆ ಅಥವಾ ಅನುಮತಿ ಇಲ್ಲದೆಯೇ ಮಾರುವ ಅಥವಾ ಇತರರಿಗೆ ದಾನದ ರೂಪದಲ್ಲಿ ನೀಡುವ ಅಧಿಕಾರವನ್ನೂ ಹೊಂದಿರುತ್ತಿದ್ದರು. ಎರಡನೆಯ ವರ್ಗದ ಸಾಮಂತರು ಅಷ್ಟೊಂದು ಅಧಿಕಾರ, ಸವಲತ್ತುಗಳನ್ನು ಹೊಂದಿರಲಿಲ್ಲ. ಹಳ್ಳಿಗಳನ್ನು ಮಾರುವ ಅಥವಾ ದಾನ ನೀಡುವ ಹಕ್ಕನ್ನೂ ಹೊಂದಿರಲಿಲ್ಲ. ಆದರೆ ಅರಸರ ಅನುಮತಿಯನ್ನು ಪಡೆದು ಯಾವುದೇ ಕೆಲಸವನ್ನಾದರೂ ಮಾಡಬಹುದಾಗಿತ್ತು. ಆದರೆ ಮೂರನೆಯ ವರ್ಗದ ಸಾಮಂತರು ಸಂಪೂರ್ಣವಾಗಿ ಅರಸರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರು. ಅವರ ಅಧಿಕಾರ ಅಥವಾ ಹಕ್ಕುಗಳ ಕುರಿತು ಅರಸರು ಯಾವುದೇ ಮಹತ್ವವನ್ನಾಗಲಿ, ರಿಯಾಯಿತಿಯನ್ನಾಗಲಿ ಕೊಡುತ್ತಿರಲಿಲ್ಲ. ಸಾಮಂತರೊಳಗಿನ ಈ ಮೂರು ಹಂತಗಳು ಹಾಗೂ ಅವರು ಅರಸರೊಂದಿಗೆ ಹೊಂದಿರುತ್ತಿದ್ದ ಸಂಬಂಧಗಳು ಸದಾ ಬದಲಾವಣೆಗೊಳ್ಳುತ್ತಿದ್ದವು. ಕೇಂದ್ರಪ್ರಭುತ್ವದ ಸಾಮರ್ಥ್ಯವನ್ನು ಅವಲಂಬಿಸಿಕೊಂಡು ಸಾಮಂತರ ಅಧಿಕಾರಿಗಳು ನಿರ್ಧರಿಸಲ್ಪಡುತ್ತಿದ್ದವು. ಕೇಂದ್ರಪ್ರಭುತ್ವ ದುರ್ಬಲವಾಗಿದ್ದ ಸಂದರ್ಭದಲ್ಲಿ ಸಾಮಂತರು ಸ್ವತಂತ್ರವಾಗಿ ಅಧಿಕಾರವನ್ನು ಅನುಭವಿಸುತ್ತಿದ್ದರು. ಕೆಲವೊಂದು ಸಂದರ್ಭಗಳಲ್ಲಿ ಸಾಮಂತರು ಅರಸರನ್ನು ನೇಮಕ ಮಾಡುವ ಮತ್ತು ಕಿತ್ತು ಹಾಕುವ ಕೆಲಸವನ್ನು ಮಾಡುತ್ತಿದ್ದರು. ಆದರೂ ಸಾಮಂತರೊಂದಿಗೆ ಉತ್ತಮ ಸಂಬಂಧವನ್ನು ಹೊಂದುವುದು ಅರಸರಿಗೆ ಅನಿವಾರ್ಯವೇ ಆಗಿತ್ತು.

ಪ್ರಬಲ ಅರಸುಮನೆತನಗಳು ತಮ್ಮ ಪರಮಾಧಿಕಾರವನ್ನು ಉಳಿಸಿಕೊಳ್ಳುವುದಕ್ಕೋಸ್ಕರ ಸ್ಥಳೀಯ ನಾಯಕರೊಂದಿಗೆ ವೈವಾಹಿಕ ಸಂಬಂಧಗಳನ್ನು ಹೊಂದಿರುತ್ತಿದ್ದರು. ಈ ಸಂಬಂಧಗಳು ರಾಜಕೀಯ ಪ್ರೇರಿತವಾಗಿರುತ್ತಿದ್ದವು. ರಾಷ್ಟ್ರಕೂಟರು ಅನೇಕ ಸ್ಥಳೀಯ ನಾಯಕರೊಂದಿಗೆ ವೈವಾಹಿಕ ಸಂಬಂಧಗಳನ್ನು ಹೊಂದಿದ್ದರು.[6] ಇವು ಮೇಲ್ನೋಟಕ್ಕೆ ವ್ಯಕ್ತಿಗತ ಸಂಬಂಧಗಳಾಗಿ ಕಂಡುಬಂದರೂ ಅವುಗಳಲ್ಲಿ ರಾಜಕೀಯ ಮತ್ತು ಸೇನಾ ಸಂಬಂಧಗಳು ಬೆಸೆದುಕೊಂಡಿದ್ದವು.[7] ಗಂಗರು, ಚೇದಿಯ ಕಲಚೂರಿಗಳು, ವೆಂಗಿಯ ಚಾಲುಕ್ಯರು, ಚೋಳರು ಮತ್ತು ಶಿಲಾಹಾರರು ರಾಷ್ಟ್ರಕೂಟರೊಂದಿಗೆ ವೈವಾಹಿಕ ಸಂಬಂಧಗಳನ್ನು ಬೆಳೆಸಿಕೊಂಡಿದ್ದರು. ಈ ರೀತಿಯ ಸಂಬಂಧಗಳು ಬದಲಾಗುತ್ತಿದ್ದ ಸಾಮಾಜಿಕ ಮತ್ತು ಆರ್ಥಿಕ ಸಂದರ್ಭಗಳಲ್ಲಿ ಅನಿವಾರ್ಯವಾಗಿರುತ್ತಿತ್ತು. ಇದು ಊಳಿಗಮಾನ್ಯ ಹಂತಕ್ಕೆ ಚಲಿಸುತ್ತಿದ್ದ ಸಾಮಾಜಿಕ ರಚನೆಯ ಲಕ್ಷಣವೂ ಹೌದು. ಏಕೀಕೃತ ನಿಯಂತ್ರಣ ಸಾಧ್ಯವಿರಲಿಲ್ಲ. ಇದರಿಂದಾಗಿ ಸಾಮಂತ ವ್ಯವಸ್ಥೆ ಇನ್ನಷ್ಟು ಗಟ್ಟಿಗೊಳ್ಳುವಂತಾಯಿತು. ಹೊಯ್ಸಳರ ಆಳ್ವಿಕೆಯ ಸಂದರ್ಭದಲ್ಲಿ ಸಾಮಂತ ವ್ಯವಸ್ಥೆ ಪ್ರಬಲವಾಗಿತ್ತು ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಕೊಂಗಾಳ್ವರು, ಚೆಂಗಾಳ್ವರು ಮತ್ತು ಸಾಂತರರು ಹೊಯ್ಸಳರ ಅಧೀನರಾಗಿದ್ದರೂ ರಾಜ್ಯಾಡಳಿತದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದ್ದರು. ಅದಕ್ಕಾಗಿ ಅವರಿಗೆ ಎಲ್ಲ ರೀತಿಯ ಸ್ವಾತಂತ್ರ್ಯವನ್ನು ನೀಡಲಾಗಿತ್ತು. ಅದೇ ರೀತಿ ಹೊಯ್ಸಳ ಅರಸರಿಗೆ ನೆರವಾದ ಅಧಿಕಾರಿಗಳು ನಿರ್ದಿಷ್ಟ ಪ್ರದೇಶದ ಸಾಮಂತ ಅಥವಾ ಮಾಂಡಲೀಕ ಸ್ಥಾನಮಾನವನ್ನು ಪಡೆಯುತ್ತಿದ್ದರು. ಇದು ಊಳಿಗಮಾನ್ಯ ರಚನೆಯನ್ನು ಸೂಚಿಸುತ್ತದೆ.[8] ಈ ರಚನೆಯ ರಾಜಕೀಯ ಹತೋಟಿಯ ತಂತ್ರವಾಗಿದ್ದು ಹೊಸ ಬಗೆಯ ಸಂಬಂಧಗಳನ್ನು ಹುಟ್ಟುಹಾಕಿತು.

ಭೂಮಿಯನ್ನು ದಾನ ನೀಡುವ ಪದ್ಧತಿ ರಾಷ್ಟ್ರಕೂಟರಿಂದ ಹೊಯ್ಸಳರವರೆಗಿನ ಅವಧಿಯಲ್ಲಿ ವ್ಯಾಪಕವಾಗಿ ಹರಡಿತ್ತು ಎನ್ನುವುದು ದಾನ ಶಾಸನಗಳಿಂದ ತಿಳಿದುಬರುತ್ತದೆ. ಊಳಿಗಮಾನ್ಯ ವ್ಯವಸ್ಥೆಯ ಅಸ್ತಿತ್ವ ಮತ್ತು ಸ್ವರೂಪದ ಚರ್ಚೆಯಲ್ಲಿ ಈ ಪದ್ಧತಿ ಪ್ರಮುಖ ಸ್ಥಾನವನ್ನು ಪಡೆದುಕೊಳ್ಳುತ್ತದೆ. ರಾಜ್ಯದ ಸಾಮಾಜಿಕ-ಆರ್ಥಿಕ ಜೀವನದಲ್ಲಿ ಭೂಮಿಯನ್ನು ದಾನ ನೀಡುವ ಪದ್ಧತಿಯು ಮಹತ್ತರ ಬದಲಾವಣೆಗಳನ್ನು ತಂದಿತು. ಭೂಮಿಯನ್ನು ದಾನವಾಗಿ ಪಡೆದವರು ಕೇಂದ್ರಾಡಳಿತಕ್ಕೆ ನಿರ್ದಿಷ್ಟ ಸೇವೆಯನ್ನು ಸಲ್ಲಿಸಬೇಕಾಗಿತ್ತು. ಈ ಪದ್ಧತಿಯು ನೂತನ ಭೂಮಾಲೀಕ ಮಧ್ಯವರ್ತಿಗಳ ಹುಟ್ಟಿಗೂ ಕಾರಣವಾಯಿತು. ಬ್ರಹ್ಮದೇಯ ಭೂಮಿಯನ್ನು ಪಡೆದವರು ಹಳ್ಳಿಗಳ ಮಹಾಜನರಾಗಿ ಆಡಳಿತ ನಡೆಸಲಾರಂಭಿಸಿದರು. ಈ ರೀತಿಯಾಗಿ ಕೇಂದ್ರ ಪ್ರಭುತ್ವವು ಆಡಳಿತ ಮತ್ತು ವರಮಾನದ ಹಕ್ಕುಗಳನ್ನು ವರ್ಗಾಯಿಸಿತು. ಇದರಿಂದಾಗಿ ಆಡಳಿತದ ಅನೇಕ ಸ್ವತಂತ್ರ ಘಟಕಗಳು ಹುಟ್ಟಿಕೊಂಡುವು. ದೇವಾಲಯಗಳಂತೂ ಅಪಾರ ದಾನದತ್ತಿಗಳಿಂದಾಗಿ ಭೂಮಾಲೀಕರಂತೆ ಕಾಣಿಸಿಕೊಂಡುವು. ಹೆಚ್ಚಿಸಿದವು. ಹಳ್ಳಿಯ ಅಧಿಕಾರಿಗಳು ರೈತಾಪಿ ವರ್ಗದವರಿಂದ ಬಲಾತ್ಕಾರವಾಗಿ ದುಡಿಮೆಯನ್ನು ಪಡೆದು ಕೊಳ್ಳುತ್ತಿದ್ದರು.[9] ರೈತರು ತೆರಿಗೆಯನ್ನು ನೀಡಲು ಅಸಮರ್ಥರಾದಾಗ ಈ ರೀತಿಯ ಬಲವಂತದ ದುಡಿಮೆಗೆ ಒಳಗಾಗುತ್ತಿದ್ದರಿ.[10] ಅದೇ ರೀತಿ ಭೂಮಾಲೀಕ ವರ್ಗವು ಜೀತ ಪದ್ಧತಿಯನ್ನು ಹುಟ್ಟುಹಾಕಿತ್ತು. ಜೀತದಾಳುಗಳು ತಮ್ಮ ಬದುಕಿನುದ್ದಕ್ಕೂ ಭೂಮಾಲೀಕರಾದ ತಮ್ಮ ಒಡೆಯರ ಜಮೀನಿನಲ್ಲಿ ದುಡಿಯಬೇಕಾಗುತ್ತಿತ್ತು. ಇದೊಂದು ಶ್ರೇಣೀಕೃತ ಸಮಾಜ ವ್ಯವಸ್ಥೆಯ ಭಾಗವಾಗಿದ್ದು ದಾಸ್ಯರೂಪಿ ಸಂಬಂಧಗಳನ್ನು ಸೂಚಿಸುತ್ತದೆ.

ಯುರೋಪಿನಲ್ಲಿದ್ದ ಊಳಿಗಮಾನ್ಯ ವ್ಯವಸ್ಥೆಯ ಮಾದರಿಯನ್ನು ಇಟ್ಟುಕೊಂಡು ಅದರ ಪರ ಹಾಗೂ ವಿರೋಧ ನೆಲೆಗಳಿಂದ ಭಾರತದ ಇಲ್ಲವೇ ಕರ್ನಾಟಕದ ಸಂದರ್ಭದಲ್ಲಿ ಚರ್ಚೆ ನಡೆಸಿದ ವಿದ್ವಾಂಸರ ಸಂಖ್ಯೆಯೇ ಹೆಚ್ಚಿನದು. ಈ ರೀತಿಯ ಅಧ್ಯಯನ ಮಾದರಿ ಡಿ.ಡಿ. ಕೊಸಾಂಬಿ, ಆರ್.ಎಸ್. ಶರ್ಮ ಮುಂತಾದ ಚರಿತ್ರೆಕಾರರಿಂದಲೇ ಆರಂಭಗೊಂಡಿತು. ಅವರು ಒಟ್ಟಾರೆಯಾಗಿ ಭಾರತದಲ್ಲಿ ಊಳಿಗಮಾನ್ಯ ವ್ಯವಸ್ಥೆ ಯಾವ ರೀತಿ ಇತ್ತು, ಅದಕ್ಕೆ ಕಾರಣಗಳೇನು ಅಧ್ಯಯನ ಕ್ರಮದಿಂದ ಭಾರತದ ಚರಿತ್ರೆಯನ್ನು ನೋಡುವುದು ಹಾಗೂ ಯುರೋಪಿನಲ್ಲಿದ್ದ ಊಳಿಗಮಾನ್ಯ ವ್ಯವಸ್ಥೆಯ ಲಕ್ಷಣಗಳನ್ನು ಭಾರತದ ಸಂದರ್ಭಕ್ಕೆ ಸರಿಹೊಂದಿಸುವುದು ಮುಂತಾದ ವಿಚಾರಗಳ ಕುರಿತು ಇವರು ಹಾಗೂ ಇನ್ನೂ ಅನೇಕ ಚರಿತ್ರೆಕಾರರು ವಾದ-ಪ್ರತಿವಾದವನ್ನು ಮಂಡಿಸಿದ್ದಾರೆ.[11] ಡಿ.ಎನ್.ಝೂ ಮತ್ತು ಇರ್ಫಾನ್ ಹಬೀಬ್ ಅವರ ಪ್ರಕಾರ ಭಾರತದಲ್ಲಿ ಊಳಿಗಮಾನ್ಯ ವ್ಯವಸ್ಥೆಯ ಕುರಿತಾದ ಚರ್ಚೆ ಆರಂಭವಾದದ್ದು ಕಾರ್ಲ್‌ಮಾರ್ಕ್ಸ್‌ನ ‘ಏಶ್ಯಾಟಿಕ್ ಮೋಡ್ ಆಫ್ ಪ್ರೊಡಕ್ಷನ್’ ಪರಿಕಲ್ಪನೆ ಬಂದ ನಂತರ. ಮಾರ್ಕ್ಸ್‌ನ ಚಲನಶೀಲವಲ್ಲದ, ನಿರಂಕುಶಾಧಿಕಾರ ಸಮಾಜ ಕಲ್ಪನೆಯನ್ನು ಭಾರತದಲ್ಲಿನ ಮಾರ್ಕ್ಸ್‌ವಾದಿ ಚರಿತ್ರೆಕಾರರು ತಿರಸ್ಕರಿಸಿದರು. ಆರ್.ಎಸ್. ಶರ್ಮ ಅವರು ಕ್ರಿ.ಶ. ೩೦೦ರಿಂದ ೧೨೦೦ ರವರೆಗಿನ ಅವಧಿಯಲ್ಲಿ ಊಳಿಗಮಾನ್ಯ ವ್ಯವಸ್ಥೆ ಅಸ್ತಿತ್ವದಲ್ಲಿದ್ದ ಅವಧಿ ಎಂಬುದಾಗಿ ಪರಿಗಣಿಸಿದ್ದಾರೆ. ಅವರು ಭಾರತದಲ್ಲಿನ ಊಳಿಗಮಾನ್ಯತೆಯ ಕುರಿತು ಚರ್ಚಿಸುವಾಗ ಪಶ್ಚಿಮ ಯುರೋಪಿನಲ್ಲಿದ್ದ ಊಳಿಗಮಾನ್ಯತೆಯ ಹಲವಾರು ಲಕ್ಷಣಗಳನ್ನು ಇಲ್ಲಿಯೂ ಗುರುತಿಸುತ್ತಾರೆ. ಆದರೂ ಭಾರತದಲ್ಲಿರುವುದು ಭಾರತೀಯ ಪ್ರಕಾರದ ಫ್ಯೂಡಲ್ ವ್ಯವಸ್ಥೆ ಎನ್ನುವ ತೀರ್ಮಾನಕ್ಕೆ ಬರುತ್ತಾರೆ.[12] ಎಸ್. ನೂರುಲ್ ಹಸನ್ ಅವರು ಮಧ್ಯಕಾಲೀನ ಭಾರತವು ಊಳಿಗಮಾನ್ಯವಾಗಿತ್ತು ಎಂಬುದಾಗಿ ಹೇಳುವಾಗ ಯುರೋಪಿನ ಯಾವುದೇ ಲಕ್ಷಣವನ್ನು ಉದಾಹರಣೆಯಾಗಿ ತೆಗೆದುಕೊಳ್ಳುವುದಿಲ್ಲ.[13] ಹರ್ಬನ್ಸ್ ಮುಖ್ಯ ಅವರು ಊಳಿಗಮಾನ್ಯತೆಯು ಪ್ರಪಂಚದ ಎಲ್ಲಾ ಕಡೆಗಳಲ್ಲೂ ಏಕರೀತಿಯಲ್ಲಿ ಇರುವ ಒಂದು ವ್ಯವಸ್ಥೆಯಲ್ಲ, ಅದು ಒಂದು ಚಾರಿತ್ರಿಕ ಅವಧಿ ಹಾಗೂ ಪ್ರದೇಶಕ್ಕೆ ಸಂಬಂಧಿಸಿದಂತೆ ಇರುವ ವ್ಯವಸ್ಥೆ ಎನ್ನುವ ಅಭಿಪ್ರಾಯಕ್ಕೆ ಬರುತ್ತಾರೆ. [14]

ಊಳಿಗಮಾನ್ಯ ವ್ಯವಸ್ಥೆಯನ್ನು ಕುರಿತ ಚರ್ಚೆಗಳು, ವಾದ-ವಿವಾದಗಳು ಹಾಗೂ ಊಳಿಗಮಾನ್ಯ ಪದ್ಧತಿ ಬಂಡವಾಳಶಾಹಿಯಾಗಿ ಪರಿವರ್ತನೆಗೊಳ್ಳುವ ಪ್ರಕ್ರಿಯೆ ಈ ಮುಂತಾದ ವಿಚಾರಗಳು ರಾಡ್ನಿ ಹಿಲ್ಟನ್ ಅವರು ಸಂಪಾದಿಸಿದ ‘ದಿ ಟ್ರಾನ್ಸಿಷನ್ ಫ್ರಂ ಫ್ಯೂಡಲಿಸಂ ಟು ಕ್ಯಾಪಿಟಲಿಸಂ’ ಎನ್ನುವ ಗ್ರಂಥದಲ್ಲಿ ಗಂಭೀರವಾಗಿ ಮೂಡಿಬಂದಿದೆ.[15]ಕರ್ನಾಟಕದಲ್ಲಿ ೧೪ನೆಯ ಶತಮಾನ ಹಾಗೂ ನಂತರ ಕೃಷಿಯೇತರ ಉತ್ಪಾದನೆಯ ಚಟುವಟಿಕೆ ಬಲಗೊಂಡು ಬಂಡವಾಳಶಾಹಿ ಬೆಳವಣಿಗೆಗಳು ಕಾಣಿಸಿಕೊಂಡದ್ದನ್ನು ಅರ್ಥೈಸಿಕೊಳ್ಳಲು ರಾಡ್ನಿ ಹಿಲ್ಟನ್ ಅವರು ಸಂಪಾದಿಸಿದ ಈ ಗ್ರಂಥವು ಸಹಕಾರಿಯಾಗುತ್ತದೆ. ಅದೇ ರೀತಿ ಕೃಷಿ ಅರ್ಥವ್ಯವಸ್ಥೆ ಹಾಗೂ ಕೃಷಿಯೇತರ ಅರ್ಥವ್ಯವಸ್ಥೆಗಳ ನಡುವಿನ ವ್ಯತ್ಯಾಸ, ಸಾಮಾಜಿಕ-ಆರ್ಥಿಕ ಪರಿವರ್ತನೆ ಮುಂತಾದ ವಿಚಾರಗಳ ಅಧ್ಯಯನಕ್ಕೆ ಈ ಗ್ರಂಥವು ಸೈದ್ಧಾಂತಿಕ ಚೌಕಟ್ಟನ್ನು ಒದಗಿಸಿ ಕೊಡುತ್ತದೆ. ಇದರರ್ಥ ಸಾಮಾಜಿಕ-ಆರ್ಥಿಕ ಪರಿವರ್ತನೆ ಈ ಗ್ರಂಥದಲ್ಲಿ ಸೂಚಿಸಿದಂತೆ ಪ್ರಪಂಚಾದಾದ್ಯಂತ ನಡೆಯುತ್ತಿರುತ್ತದೆ ಎಂದಲ್ಲ. ಇದು ಚರ್ಚೆಗೆ ಒಂದು ತಳಹದಿಯನ್ನು ಹಾಕಿಕೊಡುತ್ತದೆ. ಅದೇ ರೀತಿ ಊಳಿಗಮಾನ್ಯ ವ್ಯವಸ್ಥೆ ಭಾರತದಲ್ಲಿತ್ತೇ, ಇರಲಿಲ್ಲವೇ, ಅದು ಯುರೋಪ್ ಕೇಂದ್ರಿತ ಅಧ್ಯಯನದ ಫಲಿತಾಂಶವೇ, ಯುರೋಪ್ ಮತ್ತು ಭಾರತದಲ್ಲಿ ಈ ವ್ಯವಸ್ಥೆ ಒಂದೇ ರೀತಿ ಇತ್ತೇ ಮುಂತಾದ ಪ್ರಶ್ನೆಗಳು ನಿರ್ದಿಷ್ಟವಾದ ಉತ್ತರವನ್ನು ಕೊಡುವುದಿಲ್ಲವಾದರೂ ಕೆಲವೊಂದು ತೀರ್ಮಾನಗಳನ್ನು ತೆಗೆದುಕೊಳ್ಳಲು ಸಹಕಾರಿಯಾಗುತ್ತವೆ. ಕರ್ನಾಟಕದ ಸಂದರ್ಭದಲ್ಲಿ ಈಗಾಗಲೇ ವಿವರಿಸಿದಂತೆ ರಾಜನ ಆಳ್ವಿಕೆಗೆ ಸೇರಿದ ಪ್ರದೇಶ ಸಾಮಂತರಿಗೆ ಸೇರಿದ ಪ್ರದೇಶ, ಅಧಿಕಾರದ ವಿಕೇಂದ್ರೀಕರಣ, ಕೃಷಿ ಆಧಾರಿತ ಅರ್ಥವ್ಯವಸ್ಥೆ, ಖಾಸಗಿ ಭೂಮಾಲೀಕತ್ವ, ಭೂಮಾಲೀಕ ಮಧ್ಯವರ್ತಿಗಳು, ದಾನ ನೀಡುವ ಪದ್ಧತಿ ಮುಂತಾದ ಲಕ್ಷಣಗಳು ಶ್ರೇಣೀಕೃತ ಸಾಮಾಜಿಕ-ಆರ್ಥಿಕ ವ್ಯವಸ್ಥೆಯನ್ನು ಸೂಚಿಸುವುದರ ಮೂಲಕ ಊಳಿಗಮಾನ್ಯ ವ್ಯವಸ್ಥೆಯನ್ನು ದೃಢೀಕರಿಸುತ್ತವೆ. ಈ ಅಂಶಗಳನ್ನೇ ಇಟ್ಟುಕೊಂಡು ಕ್ರಿ.ಶ. ೮ ರಿಂದ ೧೪ನೆಯ ಶತಮಾನದವರೆಗಿನ ಅವಧಿಯಲ್ಲಿ ಸಾಮಂತ ರಾಜಕಾರಣ ಅಥವಾ ಸಾಮಂತ ವ್ಯವಸ್ಥೆ[16] ಇತ್ತು ಎನ್ನುವ ಮೇಲೆ ವಿವರಿಸಿದ್ದಕ್ಕೆ ಪೂರಕವಾದ ತೀರ್ಮಾನವನ್ನು ತೆಗೆದುಕೊಳ್ಳಬಹುದಾಗಿದೆ.

ಬರ್ಟನ್ಸ್ ಸ್ಟೈನ್ ಅವರು ಮಧ್ಯಕಾಲೀನ ದಕ್ಷಿಣ ಭಾರತದಲ್ಲಿದ್ದ ಸಮಾಜವನ್ನು ‘ಸೆಗ್‌ಮೆಂಟರಿ ಸ್ಟೇಟ್’ ಎನ್ನುವ ರಾಜ್ಯ ವ್ಯವಸ್ಥೆಯ ಹೊಸ ಮಾದರಿಯೊಂದಿಗೆ ಚರ್ಚಿಸಿದ್ದಾರೆ.[17] ಅವರು ‘ಪೆಸೆಂಟ್ ಸ್ಟೇಟ್ ಆಂಡ್ ಸೊಸೈಟಿ’ ಎಂಬ ಗ್ರಂಥದಲ್ಲಿ ಚೋಳ ಅರಸು ಮನೆತನಕ್ಕೆ ಸಂಬಂಧಿಸಿದಂತೆ ಈ ಚರ್ಚೆಯನ್ನು ನಡೆಸಿದ್ದಾರೆ. ನಾಡು ಎನ್ನುವ ಸ್ಥಳೀಯ ಆಡಳಿತ ಘಟಕಗಳನ್ನು ಆಧಾರವನ್ನಾಗಿ ಇಟ್ಟುಕೊಂಡು ಅಂದಿನ ಸಮಾಜ ಪಿರಮಿಡ್ ಶೈಲಿಯದ್ದಾಗಿತ್ತು ಅಥವಾ ಸಮಾಜದಲ್ಲಿ ಹಲವಾರು ಮಜಲುಗಳು ಇದ್ದವು ಎನ್ನುವ ತೀರ್ಮಾನಕ್ಕೆ ಸ್ಟೈನ್ ಬರುತ್ತಾರೆ ಕೆ.ಎ.ನೀಲಕಂಠಶಾಸ್ತ್ರಿಯವರ ಕೇಂದ್ರಿಕೃತ ಸರಕಾರ[18] ಮಾದರಿಯನ್ನು ಬರ್ಟನ್ ಸ್ಟೈನ್ ಸೆಗ್‌ಮೆಂಟರಿ ಸ್ಟೇಟ್ ವಾದದ ಮೂಲಕ ಅಲ್ಲಗಳೆಯುತ್ತಾರೆ. ಕ್ರಿ.ಶ. ೯ ರಿಂದ ೧೩ನೆಯ ಶತಮಾನಗಳ ನಡುವಣ ಅವಧಿಯ ಸಾಮಾಜಿಕ-ಆರ್ಥಿಕ ಜೀವನದಲ್ಲಿ ಕೃಷಿ ಭೂಮಿ ಮತ್ತು ಕೃಷಿ ಉತ್ಪಾದನೆಯು ಪ್ರಮುಖವಾಗಿತ್ತು ಎನ್ನುವುದು ಸ್ಟೈನ್ ಅವರ ಅಭಿಪ್ರಾಯ.[19] ಈ ಕಾರಣದಿಂದಾಗಿ ಊಳಿಗಮಾನ್ಯ ವ್ಯವಸ್ಥೆಯ ಕುರಿತಾದ ವ್ಯಾಖ್ಯಾನಗಳನ್ನು ಸ್ಟೈನ್ ಒಪ್ಪುವುದಿಲ್ಲ. ಸೆಗ್‌ಮೆಂಟರಿ ಸ್ಟೇಟ್ ವಾದದಲ್ಲಿ ಸ್ಟೈನ್ ಅವರು ರೈತರ ಅಧಿಕಾರದ ಕುರಿತು ಹೆಚ್ಚಿನ ಚರ್ಚೆ ನಡೆಸುತ್ತಾರೆ. ರೈತ ರಾಜ್ಯ ಮತ್ತು ಸಮಾಜ ಎನ್ನುವ ಕಲ್ಪನೆಯೇ ಊಳಿಗಮಾನ್ಯ ವ್ಯವಸ್ಥೆಗೆ ವಿರುದ್ಧವಾದದ್ದು. ಏಕೆಂದರೆ ಊಳಿಗಮಾನ್ಯ ವ್ಯವಸ್ಥೆಯಲ್ಲಿ ರೈತರದ್ದು ಅತ್ಯಂತ ಕೆಳಗಿನ ಸ್ಥಾನ. ಸುಬ್ಬರಾಯಲು ಅವರು ಬರ್ಟನ್ ಸ್ಟೈನ್ ಅವರ ಅನೇಕ ವಾದಗಳನ್ನು ತಿರಸ್ಕರಿಸಿದರೂ ಒಂದು ವಿಚಾರದಲ್ಲಿ ಸಹಮತಿಯನ್ನು ವ್ಯಕ್ತಪಡಿಸುತ್ತಾರೆ. ಅದೇನೆಂದರೆ, ಸರಕಾರಿ ಅಧಿಕಾರಿಗಳಾಗಿರಲಿಲ್ಲ, ಕೇವಲ ತೆರಿಗೆಯನ್ನು ಸಂಗ್ರಹಿಸುವುದಷ್ಟೇ ಅವರ ಕೆಲಸವಾಗಿತ್ತು, ಹಳ್ಳಿಯ ನ್ಯಾಯಾಂಗ, ಧಾರ್ಮಿಕ ಕೆಲಸ ಕಾರ್ಯಗಳು ಹಳ್ಳಿಗಳಿಂದಲೇ ನಡೆಯುತ್ತಿದ್ದವು ಎನ್ನುವ ಸ್ಟೈನ್ ಅವರ ಅಭಿಪ್ರಾಯ.[20] ಅದೇ ಸಂದರ್ಭದಲ್ಲಿ ಸ್ಟೈನ್ ಅವರು ಗ್ರಾಮೀಣ ಗಣ್ಯರು ಮತ್ತು ಸರಕಾರದಿಂದ ನೇಮಿಸಲ್ಪಟ್ಟ ಅಧಿಕಾರಿಗಳನ್ನು ಬೇರೆ ಬೇರೆಯಾಗಿ ಗುರುತಿಸುವಲ್ಲಿ ಎಡವಿದ್ದಾರೆ ಎನ್ನುವ ಅಭಿಪ್ರಾಯವನ್ನು ಸುಬ್ಬರಾಯಲು ನೀಡುತ್ತಾರೆ.[21]

ಊಳಿಗಮಾನ್ಯ ವ್ಯವಸ್ಥೆಯ ಕುರಿತಾದ ಚರ್ಚೆಯ ಸಂದರ್ಭದಲ್ಲಿ ಸಾಕಿ ಅವರ ‘ಮೇಕಿಂಗ್ ಹಿಸ್ಟರಿ: ಕರ್ನಾಟಕಾಸ್ ಪೀಪಲ್ ಆಂಡ್ ದೇಯರ್ ಪಾಸ್ಟ್’ ಗ್ರಂಥವು ವಿಶಿಷ್ಟವಾದ ಸ್ಥಾನವನ್ನು ಪಡೆದುಕೊಳ್ಳುತ್ತದೆ.21ಎ ಈ ಗ್ರಂಥವು ಮಾರ್ಕ್ಸ್‌ವಾದಿ ದೃಷ್ಟಿಕೋನದ ಮೂಲಕ ಕರ್ನಾಟಕದ ಚರಿತ್ರೆಯನ್ನು ವಿಶ್ಲೇಷಿಸಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಕರ್ನಾಟಕದ ಜನತೆಯ ಚರಿತ್ರೆಯನ್ನು ನಿರ್ಮಿಸುವುದು ಸಾಕಿ ಅವರ ಮುಖ್ಯ ಉದ್ದೇಶ. ಊಳಿಗಮಾನ್ಯ ಉತ್ಪಾದನಾ ವ್ಯವಸ್ಥೆಯ ದೀರ್ಘ ಚರ್ಚೆಯನ್ನು ಈ ಗ್ರಂಥದಲ್ಲಿ ಕಾಣಬಹುದಾಗಿದೆ. ಸಾಕಿ ಅವರು ಊಳಿಗಮಾನ್ಯ ಉತ್ಪಾದನಾ ವಿಧಾನದಲ್ಲಿ ಮೂರು ನಿರ್ದಿಷ್ಟ ಘಟ್ಟಗಳನ್ನು ಗುರುತಿಸಿದ್ದಾರೆ. ಅವುಗಳೆಂದರೆ; ಆರಂಭದ ಊಳಿಗಮಾನ್ಯತೆ (ಕ್ರಿ.ಶ. ೪ರಿಂದ ಕ್ರಿ.ಶ. ೧೨), ಮಧ್ಯಕಾಲೀನ ಊಳಿಗಮಾನ್ಯತೆ (ಕ್ರಿ.ಶ. ೧೨ರಿಂದ ಕ್ರಿ.ಶ. ೧೭), ಅರ್ವಾಚೀನ ಊಳಿಗಮಾನ್ಯತೆ (ಕ್ರಿ.ಶ. ೧೭ರ ಉತ್ತರಾರ್ಧದಿಂದ ಕ್ರಿ.ಶ. ೧೮). ರಾಷ್ಟ್ರಕೂಟರು, ಕಲ್ಯಾಣ ಚಾಳುಕ್ಯರು, ಕಲಚೂರಿಗಳು ಮತ್ತು ಹೊಯ್ಸಳರು ತಮ್ಮ ಆಳ್ವಿಕೆಯುದ್ದಕ್ಕೂ ಅಗ್ರಹಾರಗಳು, ಮಠಗಳು ಮತ್ತು ಘಟಿಕಸ್ಥಾನಗಳಿಗೆ ನೀಡುತ್ತಿದ್ದ ಅತಿಯಾದ ಭೂದಾನಗಳು ಊಳಿಗಮಾನ್ಯ ಉತ್ಪಾದನಾ ವ್ಯವಸ್ಥೆಯ ಹುಟ್ಟಿಗೆ ಕಾರಣವಾಯಿತು ಎನ್ನುವುದು ಸಾಕಿ ಅವರ ಅಭಿಪ್ರಾಯ. ಭೂದಾನಗಳ ಕುರಿತು ಬಿ.ಆರ್.ಗೋಪಾಲ್, ಕೆ.ವಿ. ರಮೇಶ, ಬಿ. ಷೇಕ್‌ಅಲಿ, ಕೆ.ಎಸ್. ಶಿವಣ್ಣ, ಆರ್.ಎನ್. ನಂದಿ ಮುಂತಾದ ಅನೇಕ ವಿದ್ವಾಂಸರು ಕೂಲಂಕಷ ಚರ್ಚೆ ನಡೆಸಿದ್ದಾರೆ. ಸಾಕಿ ಅವರು ಈ ಎಲ್ಲ ವಿದ್ವಾಂಸರ ಬರವಣಿಗೆಗಳಿಂದ ಮಾಹಿತಿಯನ್ನು ಪಡೆದುಕೊಂಡು ಅವುಗಳನ್ನು ಆರ್.ಎಸ್.ಶರ್ಮ, ಡಿ.ಡಿ.ಕೊಸಾಂಬಿ, ವಿಜಯಕುಮಾರ ಟಾಕೂರ್ ಮುಂತಾದ ಮಾರ್ಕ್ಸ್‌ವಾದಿ ಚರಿತ್ರೆಕಾರರ ಅಧ್ಯಯನ ವಿಧಾನದಲ್ಲಿಟ್ಟು ನೋಡುವ ಪ್ರಯತ್ನವನ್ನು ಮಾಡಿದ್ದಾರೆ. ರಾಜ್ಯ ವ್ಯವಸ್ಥೆಯ ಕುರಿತಾದ ಇಂಥ ಹಲವಾರು ವ್ಯಾಖ್ಯಾನಗಳು, ವಾದವಿವಾದಗಳು ವಿದ್ವಾಂಸರೊಳಗೆ ನಡೆದಿವೆ. ಇವೆಲ್ಲವೂ ಊಳಿಗಮಾನ್ಯತೆಯನ್ನು ಕೇಂದ್ರೀಕರಿಸಿಕೊಂಡು ಅದಕ್ಕೆ ಪೂರಕವಾದ ಹಾಗೂ ವಿರುದ್ಧವಾದ ನೆಲೆಗಳಿಂದ ಬಂದಿವೆ. ಈಗಾಗಲೇ ವಿವರಿಸಿದ ಕೇಂದ್ರೀಕೃತ, ಊಳಿಗಮಾನ್ಯ, ಸೆಗ್‌ಮೆಂಟರಿ, ಸಾಮಂತ ಮುಂತಾದ ರಾಜ್ಯ ವ್ಯವಸ್ಥೆಯ ವಿವಿಧ ರಚನೆಗಳು ಅಥವಾ ಮಾದರಿಗಳು ಕೇಂದ್ರಪ್ರಭುತ್ವ ಮಧ್ಯವರ್ತಿಗಳೊಂದಿಗೆ, ಸ್ಥಳೀಯ ನಾಯಕರೊಂದಿಗೆ, ಸ್ಥಳೀಯ ಆಡಳಿತ ಘಟಕಗಳೊಂದಿಗೆ, ಉತ್ಪಾದನಾ ವಿಧಾನ ಮತ್ತು ಕೃಷಿ ಸಂಪನ್ಮೂಲಗಳೊಂದಿಗೆ ಹೊಂದಿದ್ದ ಸಂಬಂಧಗಳ ಸ್ವರೂಪವನ್ನು ಅರ್ಥೈಸಿಕೊಳ್ಳುವಲ್ಲಿ ಸಹಕಾರಿಯಾಗುತ್ತವೆ.

.೨ ಭೂಮಾಲೀಕತ್ವ

ರಾಷ್ಟ್ರಕೂಟರ ಉಗಮದಿಂದ ಹೊಯ್ಸಳರ ಅವನತಿಯವರೆಗಿನ ಅವಧಿಯಲ್ಲಿ ಭೂ ಆಧಾರಿತ ಅರ್ಥವ್ಯವಸ್ಥೆ ಜಾರಿಯಲ್ಲಿತ್ತು ಎನ್ನುವುದು ತಿಳಿದುಬರುತ್ತದೆ. ಇದು ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಯನ್ನು ಸೂಚಿಸುತ್ತದೆ. ಬುಡಕಟ್ಟು ಸಮಾಜ ಕೃಷಿ ವ್ಯವಸ್ಥೆಗೆ ಹಲವಾರು ಬದಲಾವಣೆಗಳೊಂದಿಗೆ ಪರಿವರ್ತನೆಗೊಂಡಿರುವುದು ರಾಜ್ಯವ್ಯವಸ್ಥೆಯ ಮೇಲೆ ಮಹತ್ತರ ಪರಿಣಾಮಗಳನ್ನು ಬೀರಿತು. ಸ್ವಂತ ಭೂಮಿಯನ್ನು ಹೊಂದುವ ಪ್ರಕ್ರಿಯೆಗಳು ಕಾಣಿಸಿಕೊಳ್ಳಲಾರಂಭಿಸಿದವು. ಭೂಮಿಯನ್ನು ಹೊಂದುವುದು ಸಮಾಜದಲ್ಲಿ ಗೌರವದ ಪ್ರಶ್ನೆಯೂ ಆಗಿತ್ತು.[22] ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಸ್ವಂತ ಭೂಮಿಯನ್ನು ಹೊಂದಲು ಆಸೆಪಡುತ್ತಿದ್ದುದು ಅಂದಿನ ಸಹಜ ಬೆಳವಣಿಗೆಯಾಗಿತ್ತು.[23]ಅಂದಿನ ಸಂದರ್ಭದಲ್ಲಿ ಯಾವ ರೀತಿಯ ಭೂಮಾಲೀಕತ್ವ ಅಸ್ತಿತ್ವದಲ್ಲಿತ್ತು ಎನ್ನುವುದನ್ನು ಅರ್ಥೈಸಿಕೊಳ್ಳುವುದು ಕಷ್ಟದ ವಿಚಾರವೇ ಆಗಿದೆ. ಆದರೂ ಲಭ್ಯವಿರುವ ಶಾಸನಗಳು ಮತ್ತು ಸಾಹಿತ್ಯ ಕೃತಿಗಳು ಹಾಗೂ ಆಧುನಿಕ ಬರವಣಿಗೆಗಳ ಸಹಾಯದಿಂದ ಕೆಲವೊಂದು ತೀರ್ಮಾನಗಳನ್ನು ತೆಗೆದುಕೊಳ್ಳಬಹುದಾಗಿದೆ. ಭೂಮಿಯ ಒಡೆತನ ಏಕರೂಪದ್ದಾಗಿರಲಿಲ್ಲ. ಹಲವಾರು ಮಾದರಿಯ ಭೂಮಾಲೀಕತ್ವಗಳು ಕಂಡುಬರುತ್ತವೆ. ಓರಿಯಂಟಾಲಿಸ್ಟ್, ರಾಷ್ಟ್ರೀಯವಾದಿ, ಮಾರ್ಕ್ಸ್‌ವಾದಿ, ಸಬಾಲ್ಟರ್ನ್ ಮುಂತಾದ ಪಂಥಗಳು ನಾನಾ ಮಾದರಿಯ ಭೂಮಾಲೀಕತ್ವದ ಕುರಿತಾಗಿ ಚರ್ಚೆ ನಡೆಸಿ. ಈ ಎಲ್ಲಾ ಚರ್ಚೆಗಳಲ್ಲಿ ಕಂಡುಬರುವ ಭೂಮಾಲೀಕತ್ವದ ಪ್ರಮುಖ ಮಾದರಿಗಳೆಂದರೆ, ರಾಜನಿಗೆ ಸೇರಿದ ಭೂಮಿ, ಖಾಸಗಿ ಭೂಮಿ, ಸಾಮುದಾಯಕ ಅಥವಾ ಜಂಟಿ ಒಡೆತನದ ಭೂಮಿ ಹಾಗೂ ದಾನದ ರೂಪದಲ್ಲಿ ಪಡೆದ ಭೂಮಿ. ಇವುಗಳ ಅಧ್ಯಯನವು ಭೂಮಿಯ ಒಡೆತನ ಯಾರ ಅಧೀನದಲ್ಲಿತ್ತು ಹಾಗೂ ಅದರ ಸ್ವರೂಪವೇನು ಎನ್ನುವ ಪ್ರಶ್ನೆಗೆ ಉತ್ತರಿಸುತ್ತದೆ.

ರಾಜ್ಯದ ಭೂಮಿಯ ಸಂಪೂರ್ಣ ಒಡೆತನ ಅರಸನಿಗೆ ಸೇರಿತ್ತು ಎನ್ನುವ ವಾದವಿದ್ದರೂ ಅದನ್ನು ಒಪ್ಪಲು ಸಾಧ್ಯವಾಗುವುದಿಲ್ಲ. ರಾಜ ಸರ್ವೋಚ್ಚ ಭೂಮಾಲೀಕನಾಗಲು ಸಾಧ್ಯವೇ ಇಲ್ಲ. ರಾಜ್ಯದ ಭೂಸಂಪತ್ತಿನಲ್ಲಿ ಒಂದು ಭಾಗವು ರಾಜ್ಯ ಭೂಮಿಯನ್ನೂ, ರಾಜನ ವೈಯಕ್ತಿಕ ಆಸ್ತಿಪಾಸ್ತಿಗಳನ್ನು ಒಳಗೊಂಡಿರುತ್ತಿತ್ತು. ರಾಜನ ಭೂಮಿಯನ್ನು ವಿಶೇಷ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದರು. ಭೂಮಿಯ ಎಲ್ಲ ಕೆಲಸಗಳನ್ನು ಕೂಲಿಯಾಳುಗಳು, ಗೇಣಿ ರೈತರು ಮಾಡುತ್ತಿದ್ದರು. ವಸಾಹತುಶಾಹಿ ಚರಿತ್ರೆಕಾರ ವಿನ್‌ಸೆಂಟ್ ಸ್ಮಿತ್ ಅವರ ಪ್ರಕಾರ ಭೂಮಿಯ ಸಂಪೂರ್ಣ ಒಡೆತನ ರಾಜ್ಯದ್ದಾಗಿತ್ತು.[24]ಇದೇ ಅಭಿಪ್ರಾಯವನ್ನು ಹೊಯ್ಸಳರ ಕುರಿತು ಜೆ.ಡಿ.ಎಂ. ಡೆರೆಟ್ ಅವರು ವ್ಯಕ್ತಪಡಿಸಿದರು.[25] ರಾಜ್ಯದ ಒಡೆತನವನ್ನು ಹೇಳುವ ಇಂಥ ಅನೇಕ ಉಲ್ಲೇಖಗಳು ಸಿಗುತ್ತವೆ. ಆದರೆ ಈ ಹೇಳಿಕೆಗಳು ವಾಸ್ತವದ ಸ್ಥಿತಿಗೆ ದೂರವಾಗಿದ್ದು ಚರಿತ್ರೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರ ಪರಿಣಾಮಗಳಾಗಿವೆ. ರಾಜ್ಯದ ಎಲ್ಲಾ ಸಂಪತ್ತು ಮೇಲ್ನೋಟಕ್ಕೆ ರಾಜನ ಅಧೀನದಲ್ಲಿದ್ದಂತೆ ಕಂಡುಬರುವುದು ಸಹಜ. ಆದರೆ ಅದು ವಾಸ್ತವ ಸ್ಥಿತಿಯಲ್ಲ. ಏಕೆಂದರೆ ಅನೇಕ ಖಾಸಗಿ ವ್ಯಕ್ತಿಗಳು ಹಾಗೂ ಸಾಮಂತ ಅರಸರು ಸ್ವಂತ ಆಸ್ತಿಯನ್ನು ಹೊಂದಿರುತ್ತಿದ್ದರು. ಅವರು ಅರಸನಿಗೆ ಗೌರವದ ಸಂಕೇತವಾಗಿ ಕಪ್ಪ ಕಾಣಿಕೆಗಳನ್ನು ಸಲ್ಲಿಸುತ್ತಿದ್ದರು. ಅರಸರು ತಮ್ಮ ಅಧೀನಕ್ಕೆ ಒಳಪಡದ ಭೂಮಿಯನ್ನು ದಾನ ಕೊಡಬೇಕಾಗಿ ಬಂದರೆ ಸಂಬಂಧಪಟ್ಟ ಭೂಮಾಲೀಕನ ಅನುಮತಿಯನ್ನು ಪಡೆದುಕೊಳ್ಳಬೇಕಾಗಿತ್ತು. ಆರನೆಯ ವಿಕ್ರಮಾದಿತ್ಯ ಮತ್ತು ಆತನ ರಾಣಿ ಮಹಾದೇವಿ ಮಹಾಜನರಿಂದ ಭೂಮಿಯನ್ನು ಖರೀದಿಸಿ ಅದನ್ನು ಒಬ್ಬ ವ್ಯಕ್ತಿಗೆ ದಾನ ನೀಡಿದರು ಎನ್ನುವ ಉಲ್ಲೇಖ ಶಾಸನವೊಂದರಲ್ಲಿದೆ.[26] ಶಾಸನಗಳಲ್ಲಿ ಅರಸರ ಕಮ್ಮಟ ಎನ್ನುವ ಪದವು ಕಂಡುಬರುತ್ತದೆ.[27] ಕಮ್ಮಟ ಎಂದರೆ ಕೃಷಿ ಭೂಮಿ ಎಂದಾಗುತ್ತದೆ. ರಾಜ್ಯದ ಕಾಡುಪ್ರದೇಶ, ಬರಡುಭೂಮಿ, ಕೃಷಿಯೋಗ್ಯವಲ್ಲದ ಎಲ್ಲಾ ಪ್ರದೇಶಗಳು ಅರಸರ ಅಧೀನದಲ್ಲಿರುತ್ತಿದ್ದವು ಎನ್ನಲಾಗಿದೆ.[28] ಈ ಎಲ್ಲಾ ವಿವರಣೆಗಳಿಂದಾಗಿ ರಾಜ್ಯದ ಭೂಮಿಯ ಒಂದು ಭಾಗ ಮಾತ್ರ ಅರಸರ ಅಧೀನದಲ್ಲಿತ್ತು ಅಥವಾ ರಾಜ್ಯದ ಅಧೀನದಲ್ಲಿತ್ತು ಎನ್ನುವುದು ಸ್ಪಷ್ಟವಾಗುತ್ತದೆ.

ಅರಸರಂತೆ ಖಾಸಗಿ ವ್ಯಕ್ತಿಗಳು ಸ್ವಂತ ಭೂಮಿಯನ್ನು ಹೊಂದಿರುತ್ತಿದ್ದರು. ಖಾಸಗಿ ಭೂಮಾಲೀಕರಲ್ಲೂ ಅನೇಕ ವರ್ಗಗಳಿದ್ದವು. ಅವುಗಳೆಂದರೆ, ಶ್ರೀಮಂತ ಭೂಮಾಲೀಕರು, ಮಧ್ಯಮ ಭೂಮಾಲೀಕರು ಹಾಗೂ ಬಡ ಭೂಮಾಲೀಕರು. ಈ ಭೂಮಾಲೀಕರು ತಮ್ಮ ಭೂಮಿಗೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಸ್ವತಂತ್ರವಾಗಿಯೇ ಮಾಡಬಹುದಾಗಿತ್ತು. ರಾಜಪ್ರಭುತ್ವಕ್ಕೆ ಖಾಸಗಿ ಭೂಮಾಲೀಕರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅವಕಾಶವಿರಲಿಲ್ಲ. ಆದರೆ ಖಾಸಗಿ ಒಡೆಯರ ಭೂಮಿಯ ಮೇಲೆ ತೆರಿಗೆ ವಿಧಿಸುವ ಹಾಗೂ ಅವರ ಹಕ್ಕುಗಳನ್ನು ಮಿತಿಗೊಳಿಸುವ ಅಧಿಕಾರವಿತ್ತು. ಭೂಮಿಯ ಮೇಲೆ ಖಾಸಗಿ ಒಡೆತನವನ್ನು ಸ್ಥಾಪಿಸಬೇಕಾದರೆ ಹಲವಾರು ಬೇಡಿಕೆಗಳನ್ನು ಪೂರೈಸಬೇಕಾಗುತ್ತಿತ್ತು. ಬೇಡಿಕೆಗಳು ಪ್ರಭುತ್ವದ ಹಾಗೂ ಮಧ್ಯಮವರ್ಗದ ರೂಪುಗೊಳ್ಳುವಿಕೆಯ ಸ್ವರೂಪದಿಂದ ಕೂಡಿರುತ್ತಿದ್ದವು. ಭೂಮಿಯನ್ನು ಮಾರಾಟ ಮಾಡುವ, ದಾನ ನೀಡುವ ಹಾಗೂ ಕಾಣಿಕೆ ರೂಪದಲ್ಲಿ ಕೊಡುವ ಹಕ್ಕು ಪ್ರಾಪ್ತವಾಗುವುದು ಒಡೆತನ ಸ್ಥಾಪಿಸಿದಾಗ ಮಾತ್ರ.[29] ಭೂಮಿಯ ಮೇಲೆ ಒಡೆತನವಿಲ್ಲದೆ ಮಾರಾಟ ಮಾಡುವುದು ಅಪರಾಧ ಹಾಗೂ ಅದು ಸಾಧ್ಯವಿರಲಿಲ್ಲ. ವಿಜ್ಞಾನೇಶ್ವರರ ಮಿತಾಕ್ಷರದಲ್ಲಿಯೂ ಇದೆ ರೀತಿಯ ಮಾಹಿತಿ ಸಿಗುತ್ತದೆ.[30] ಸ್ವಂತ ಭೂಮಿಯ ಮೇಲಿನ ಹಕ್ಕು ತಂದೆಯಿಂದ ಮಕ್ಕಳಿಗೆ ಮುಂದುವರಿಯುತ್ತಿತ್ತು. ಭೂಮಿಯನ್ನು ಮಾರಾಟ ಮಾಡಬೇಕಾದರೆ ಕುಟುಂಬದ ಎಲ್ಲ ಸದಸ್ಯರ ಒಪ್ಪಿಗೆಯೂ ಬೇಕಾಗಿರುತ್ತಿತ್ತು.[31] ಅದೇ ರೀತಿ ಅರಸರು ಖಾಸಗಿ ವ್ಯಕ್ತಿಗಳಿಂದ ಭೂಮಿಯನ್ನು ಖರೀದಿಸುತ್ತಿದ್ದರ ಬಗೆಗೂ ಮಾಹಿತಿ ಸಿಗುತ್ತದೆ.[32] ರಾಷ್ಟ್ರೀಯವಾದಿ ಚರಿತ್ರೆಕಾರ ಕೆ.ಪಿ. ಜಯಸ್ಟಾಲ್ ಅವರು ಭೂಮಿಯ ಒಡೆತನ ಖಾಸಗಿಯ ವರದ್ದಾಗಿತ್ತು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.[33] ಬರ್ಟನ್ ಸ್ಟೈನ್ ಭೂಮಿಯ ಒಡೆತನದ ಕುರಿತು ಚರ್ಚಿಸುವಾಗ ಖಾಸಗಿ ಒಡೆತನ ಇತ್ತು ಎನ್ನುವ ತೀರ್ಮಾನಕ್ಕೆ ಬರುತ್ತಾರೆ.[34]ಸ್ಟೈನ್ ನೀಲಕಂಠಶಾಸ್ತ್ರಿಯವರ ಕೇಂದ್ರೀಕೃತ ಸರಕಾರ ಕಲ್ಪನೆಗೆ ವಿರುದ್ಧವಾಗಿ ತಮ್ಮ ವಾದವನ್ನು ಮಂಡಿಸಿದರು.[35]

ಭೂಮಾಲೀಕತ್ವದ ಇನ್ನೊಂದು ಮಾದರಿ ಸಮುದಾಯದ ಒಡೆತನ ಅಥವಾ ಸಂಯುಕ್ತ ಒಡೆತನ. ಇಂಥ ಮಾದರಿಯಲ್ಲಿ ಭೂಮಿಯ ಒಡೆತನ ಸಮುದಾಯದ್ದಾಗಿರುತ್ತದೆ. ಮಧ್ಯಕಾಲೀನ ಸಂದರ್ಭದಲ್ಲಿ ಈ ರೀತಿಯ ಭೂಮಾಲೀಕತ್ವವೂ ಇತ್ತು ಎನ್ನುವುದಕ್ಕೆ ಸಾಕಷ್ಟು ಆಧಾರಗಳಿವೆ.[36] ಭೂಮಿಯನ್ನು ಒಂದು ಸಮುದಾಯದ ಜನರು ಪರಸ್ಪರ ಹಂಚಿಕೊಳ್ಳುತ್ತಿದ್ದರು. ಸಮುದಾಯವು ತನ್ನ ಸದಸ್ಯರ ನಡುವೆಯೇ ಇದ್ದ ಭೂಮಾಲೀಕರ ಹಕ್ಕುಗಳನ್ನು ರಕ್ಷಿಸುತ್ತಿತ್ತು. ಇವರೆಲ್ಲರೂ ರಾಜನಿಗೆ ತೆರಿಗೆ ನೀಡುವುದರ ಜೊತೆಗೆ ಸಂಯುಕ್ತ ತೆರಿಗೆಯೊಂದನ್ನೂ ಕೊಡಬೇಕಾಗಿತ್ತು. ಸಮುದಾಯಗಳಲ್ಲೂ ಶ್ರೇಣೀಕೃತ ವ್ಯವಸ್ಥೆಯಿದ್ದು, ಕೂಲಿಯಾಳುಗಳು, ಗುಲಾಮರು, ಗೇಣಿ ರೈತರು, ಸ್ವತಂತ್ರ ಸದಸ್ಯರು ಮುಂತಾದವರಿರುತ್ತಿದ್ದರು. ಸಮುದಾಯದ ಕೆಳಸ್ತರದಲ್ಲಿರುವ ಶೋಷಿತ ಜನರು ಯಾವುದೇ ಉತ್ಪಾದನಾ ಸಾಧನಗಳನ್ನು ಹೊಂದಿರಲಿಲ್ಲ. ಇದು ಸಮುದಾಯದ ಒಡೆತನದಲ್ಲಷ್ಟೇ ಅಲ್ಲದೆ ಭೂಮಾಲೀಕತ್ವದ ಇತರ ಮಾದರಿಗಳಲ್ಲೂ ಕಂಡುಬರುತ್ತದೆ. ಸಾಮುದಾಯಿಕ ಭೂ ಒಡೆತನವು ಖಾಸಗಿ ಒಡೆತನವಾಗಿದ್ದರೂ ಕೆಲವೊಂದು ವೈಶಿಷ್ಟ್ಯತೆಗಳಿಂದ ಕೂಡಿದ್ದಾಗಿದೆ. ರಾಯತ್‌ವಾರಿ ವ್ಯವಸ್ಥೆಯಲ್ಲಿ ರೈತರು ತಾವೇ ಸ್ವಂತ ಭೂಮಿಯನ್ನು ಹೊಂದಿರುತ್ತಿದ್ದರೆ, ಜಂಟಿ ಒಡೆತನದಲ್ಲಿ ಹಳ್ಳಿಯವರೆಲ್ಲರೂ ಒಟ್ಟಿಗೆ ಸೇರಿ ಭೂಮಿಯ ಒಡೆತನವನ್ನು ಹೊಂದಿರುತ್ತಿದ್ದರು.[37] ಜಂಟಿ ಒಡೆತನದಲ್ಲಿ ಭೂಮಿಯನ್ನು ಮಾರಾಟ ಮಾಡಬೇಕಿದ್ದರೆ ಇಲ್ಲವೇ ದಾನ ನೀಡಬೇಕಿದ್ದರೆ ಎಲ್ಲರೂ ಒಟ್ಟಾಗಿ ತೀರ್ಮಾನ ತೆಗೆದುಕೊಳ್ಳುತ್ತಿದ್ದರು. ಇದಕ್ಕೆ ಅನೇಕ ಉದಾಹರಣೆಗಳು ಶಾಸನಗಳಲ್ಲಿ ಸಿಗುತ್ತವೆ. ಅಂಥ ಒಂದು ಉದಾಹರಣೆಯನ್ನು ಇಲ್ಲಿ ಕೊಡಲಾಗಿದೆ. ಎರಡು ನೂರು ಮಹಾಜನರು ಆರನೆಯ ವಿಕ್ರಮಾದಿತ್ಯನ ಸೇವಕ ಮಹಾದೇವ ನಾಯಕ ಎನ್ನುವವನಿಂದ ಹಣ ಪಡೆದು ಭೂಮಿಯನ್ನು ನೀಡಿದರು.[38] ಈ ಮಾಹಿತಿಯು ಮಹಾಜನರೆನ್ನುವ ಹಳ್ಳಿಯ ಮುಖಂಡರು ಭೂಮಿಯ ಒಡೆತನವನ್ನು ಪರಸ್ಪರ ಹಂಚಿಕೊಳ್ಳುವಾಗ ಮನಸ್ತಾಪಗಳು ಉಂಟಾಗುತ್ತಿದ್ದರಿಂದ, ಎಲ್ಲರಿಗೂ ಸಮಾನವಾಗಿ ಭೂಮಿ ಸಿಗುವಂತೆ ನೋಡಿಕೊಳ್ಳಲು ಎಲ್ಲರೂ ಒಟ್ಟಿಗೆ ಸೇರಿ ಶಾಸ್ವತವಾಗಿ ಗಡಿಗಳನ್ನು ನಿರ್ಧರಿಸುತ್ತಿದ್ದರು.[39]

ಧಾರ್ಮಿಕ ಹಾಗೂ ಸಾರ್ವಜನಿಕ ಸೇವೆಗೆಂದು ದಾನದ ರೂಪದಲ್ಲಿ ಪಡೆದ ಭೂಮಿ ಭೂಮಾಲೀಕತ್ವವನ್ನು ಪಡೆಯುವುದಕ್ಕೆ ಕಾರಣವಾಗಿರುವುದು ಕ್ರಿ.ಶ. ೮ ರಿಂದ ೧೪ನೆಯ ಶತಮಾನದ ಚರಿತ್ರೆಯಿಂದ ತಿಳಿದುಬರುತ್ತದೆ. ಬ್ದಾನದ ರೂಪದಲ್ಲಿ ಭೂಮಿಯನ್ನು ಪಡೆದ ವ್ಯಕ್ತಿ ಅಥವಾ ಸಂಸ್ಥೆಯೇ ಆ ಭೂಮಿಯ ಮೇಲಿನ ಒಡೆತನವನ್ನು ಹೊಂದಿರುತ್ತಿದ್ದರು. ಬ್ಬ್ರಾಹ್ಮಣರಿಗೆ ನೀಡುತ್ತಿದ್ದ ದಾನ ಬ್ರಹ್ಮ ದೇಯವಾಗಿದ್ದು ಅದು ಹೊಸ ಬ್ರಾಹ್ಮಣ ಭೂ ಮಾಲೀಕ ವರ್ಗವನ್ನು ಸೃಷ್ಟಿಸಿತು.[40] ಅದೇ ರೀತಿ ದೇವಾಲಯಗಳಿಗೆ ನೀಡುತ್ತಿದ್ದ ದಾನ ಅರಸರಿಗಾಗಿ, ದೇವಾಲಯಗಳಾಗಿ, ಕೆರೆ-ಕಾಲುವೆಗಳ ನಿರ್ಮಾಣಕ್ಕಾಗಿ, ಹಳ್ಳಿಯ ಮುಖಂಡರಿಗಾಗಿ ದುಡಿದ ಜನರಿಗೆ ಅವರ ಸೇವೆಗಾಗಿ ಭೂಮಿಯನ್ನು ದಾನ ನೀಡಲಾಗುತ್ತಿತ್ತು.[41] ಈ ಪ್ರಕ್ರಿಯೆಗಳು ರಾಜ್ಯದೊಳಗೆ ಹೊಸ ಭೂಮಾಲೀಕ ವರ್ಗಗಳು ಹುಟ್ಟಿಕೊಳ್ಳುವುದಕ್ಕೆ ಕಾರಣವಾದವು. ಹೆಚ್ಚೆಚ್ಚು ಭೂಮಿಯನ್ನು ದಾನ ನೀಡುವುದರ ಮೂಲಕ ಒಟ್ಟಾರೆಯಾಗಿ ರಾಜ್ಯದ ಮೇಲೆ ಹತೋಟಿಯನ್ನು ಸಾಧಿಸುವುದು ಅರಸು ಮನೆತನಗಳಿಗೆ ಅನಿವಾರ್ಯವಾಗಿತ್ತು.[42] ರಾಜ್ಯದ ಮೇಲೆ ಪ್ರಭುತ್ವದ ಪ್ರಭಾವವನ್ನು ಬೀರಿ ಇಲ್ಲವೇ ಸೈನಿಕ ಬಲವನ್ನು ಪ್ರಯೋಗಿಸಿ ಸಂಪೂರ್ಣ ಹತೋಟಿಯನ್ನು ಸಾಧಿಸುವುದು ಸಾಧ್ಯವಿರಲಿಲ್ಲ. ಆ ಕಾರಣಕ್ಕಾಗಿಯೇ ಧರ್ಮದ ಮೊರೆಹೋಗುವುದು ಅನಿವಾರ್ಯವಾಯಿತು. ಒಟ್ಟು ಅರ್ಥವ್ಯವಸ್ಥೆ ಭೂ ಆಧಾರಿತವಾದ್ದರಿಂದಾಗಿ ಭೂಮಿಯ ಖಾಸಗಿ ಒಡೆತನ ಹೆಚ್ಚು ಪ್ರಾಮುಖ್ಯತೆಯನ್ನು ಗಳಿಸಿಕೊಂಡಿತು. ಇದು ಭೂಮಾಲೀಕ ಮಧ್ಯವರ್ತಿಗಳ ಹುಟ್ಟಿಗೂ ಕಾರಣವಾಯಿತು.

 

[1] ಡಿ.ಡಿ. ಕೊಸಾಂಬಿ, ಆನ್ ಇನ್‍ಟ್ರುಡಕ್ಷನ್ ಟು ದಿ ಸ್ಟಡಿ ಆಫ್ ಇಂಡಿಯನ್ ಹಿಸ್ಟರಿ, ೧೯೫೬, ಪು. ೨೯೪

[2] ಆರ್.ಎಸ್.ಶರ್ಮ, ಇಂಡಿಯನ್ ಪ್ಯೂಡಲಿಸಂ, ಮದರಾಸು, ೧೯೯೦, ಪು. ೧೫೯, ೧೮೫೭

[3] ಹರ್ಮನ್ ಕುಲ್ಕೆ (ಸಂ.), ದಿ ಸ್ಟೇಟ್ ಇನ್ ಇಂಡಿಯಾ-೧೦೦೦-೧೭೦೦, ದೆಹಲಿ, ೧೯೯೫, ಪು. ೪೬

[4] ಅದೇ. ಪು. ೫೦

[5] ಬಿ.ಆರ್. ಗೋಪಾಲ್ (ಸಂ.), ದಿ ರಾಷ್ಟ್ರಕುಟಾಸ್ ಆಫ್ ಮಾಲ್ಕೇಡ್ ಸ್ಟಡೀಸ್ ಇನ್ ದೇಯರ್ ಹಿಸ್ಟರಿ ಆಂಡ್ ಕಲ್ಚರ್, ಬೆಂಗಳೂರು, ೧೯೯೪, ಪು.೧೦೬-೧೧೧

[6] ವಿ.ಎಸ್. ಎಲಿಜಬೆತ್, ಪಾಲಿಟಿಕ್ಸ್ ಆಫ್ ಮ್ಯಾರೇಜ್: ದಿ ರಾಷ್ಟ್ರಕೂಟಾಸ್ ಆಂಡ್ ದಿ ಲೋಕಲ್ ಚೀಫ್ಸ್, ಪಿ.ಐ.ಹೆಚ್.ಸಿ. ೧೯೯೨

[7] ಕೇಶವನ್ ವೆಲುತೆಟ್, ದಿ ಪೊಲಿಟಿಕಲ್ ಸ್ಟ್ರಕ್ಟರಿ ಆಫ್ ಅರ‍್ಲಿ ಮೆಡೀವಲ್ ಸೌತ್ ಇಂಡಿಯಾ, ದೆಹಲಿ, ೧೯೯೩

[8] ಕೆ.ಎಸ್. ಶಿವಣ್ಣ, ಹೊಯ್ಸಳ ರಾಜ್ಯಾಡಳಿತ ಮತ್ತು ಆರ್ಥಿಕತೆ, ಕರ್ನಾಟಕ ಚರಿತ್ರೆ, ಸಂಪುಟ ೨, ಕನ್ನಡ ವಿಶ್ವವಿದ್ಯಾಲಯ, ಹಮ್ಪಿ, ೧೯೯೭, ಪು. ೧೩೯

[9] ಆರ್.ಎಸ್. ಶರ್ಮ, ಪೂರ್ವೋಕ್ತ, ಪು. ೧೯, ೯೯

[10] ಕಾರ್ಲ್‍ಮಾರ್ಕ್ಸ್, ಕ್ಯಾಪಿಟಲ್, ಸಂಪುಟ ೩, ಪ್ರೋಗ್ರೆಸ್ ಪಬ್ಲಿಷರ್ಸ್, ಮಾಸ್ಕೋ, ೧೯೭೪, ಪು. ೭೯೪

[11] ಹರ್ಮನ್ ಕುಲ್ಕೆ, ದಿ ಸ್ಟಡಿ ಆಫ್ ದಿ ಸ್ಟೇಟ್ ಇನ್ ಪ್ರಿಮಾಡರ್ನ್ ಇಂಡಿಯಾ, ದಿ ಸ್ಟೇಟ್ ಇನ್ ಇಂಡಿಯಾ, (ಸಂ.) ಹರ್ಮನ್ ಕುಲ್ಕೆ, ದೆಹಲಿ, ೧೯೯೫, ಪು. ೬-೧೮

[12] ಆರ್.ಎಸ್. ಶರ್ಮ, ಪೂರ್ವೋಕ್ತ, ಪು. ೧-೨, ೭, ೧೬, ೫೬-೭, ೬೩-೪, ೧೫೪, ೧೫೮, ೨೭೧

[13] ಎಸ್. ನೂರುಲ್ ಹಸನ್, ಥಾಟ್ಸ್ ಆನ್ ಎಗ್ರೇರಿಯನ್ ರಿಲೇಷನ್ಸ್ ಇನ್ ಮೊಘಲ್ ಇಂಡಿಯಾ, ನವದೆಹಲಿ, ೧೯೭೩, ಪು.೨

[14] ಹರ್ಬನ್ಸ್ ಮುಖ್ಯ, ಪರ್‌ಸ್ಟೆಕ್ಟಿವ್ಸ್ ಆನ್ ಮೆಡೀವಲ್ ಹಿಸ್ಟರಿ, ವಿಕಾಸ್ ಪಬ್ಲಿಷಿಂಗ್ ಹೌಸ್, ೧೯೯೪, ಪು. ೯೧೯೩

[15] ರಾಡ್ನಿ ಹಿಲ್ಟನ್ (ಸಂ.), ದಿ ಟ್ರಾನಿಷನ್ಸ್ ಫ್ರಂ ಫ್ಯೂಡಲಿಸಂ ಟು ಕ್ಯಾಪಿಟಲಿಸ್ಂ, ಲಂಡನ್, ೧೯೭೮.

[16] ಬರ್ಟನ್ ಸ್ಟೈನ್, ದಿ ಸೆಗ್‍ಮೆಂಟರಿ ಸ್ಟೇಟ್: ಇಂಟರೀಮ್ ರಿಪ್ಲೆಷನ್ಸ್, ದಿ ಸ್ಟೇಟ್ ಇನ್ ಇಂಡಿಯಾ, (ಸಂ.),ಹರ್ಮನ್ ಕುಲ್ಕೆ, ದೆಹಲಿ, ೧೯೯೫, ಪು. ೧೪೩

[17] ಅದೇ. ಪು.೧೩೪-೧೬೧

[18] ಕೆ.ಎ.ನೀಲಕಂಠಶಾಸ್ತ್ರಿ, ದಿಒ ಚೋಳಾಸ್, ಮದರಾಸು, ೧೯೫೫; ಎ ಹಿಸ್ಟರಿ ಆಫ್ ಸೌತ್ ಇಂಡಿಯಾ, ಮದರಾಸು, ೧೯೬೬

[19] ಬರ್ಟನ್ ಸ್ಟೈನ್, ಪೆಸೆಂಟ್ ಸ್ಟೇಟ್ ಆಂಡ್ ಸೊಸೈಟಿ ಇನ್ ಮೆಡೀವಲ್ ಸೌತ್ ಇಂಡಿಯಾ, ಆಕ್ಸ್‌ಫರ್ಡ್, ೧೯೮೦, ಪು.೬೧

[20] ಸುಬ್ಬರಾಯಲು, ದಿ ಸ್ಟೇಟ್ ಇನ್ ಮೆಡೀವಲ್ ಸೌತ್ ಇಂಡಿಯಾ, ಪು.೨೯೪

[21] ಅದೇ, ಪು.೨೯೯

21ಎ ಸಾಕಿ, ಮೇಕಿಂಗ್ ಹಿಸ್ಟರಿ, ಕರ್ನಾಟಕಾಸ್ ಪೀಪಲ್ ಆಂಡ್ ದೇಯರ್ ಪಾಸ್ಟ್, ವಿಮುಕ್ತಿ ಪ್ರಕಾಶನ, ಬೆಂಗಳೂರು, ೧೯೯೮

[22] ಎ. ಅಪ್ಪಾದೊರೈ, ಇಕಾನಮಿಕ್ ಕಂಡೀನಷನ್ಸ್ ಇನ್ ಸದರ್ನ್ ಇಂಡಿಯಾ, ಕ್ರಿ.ಶ. ೧೦೦೦-೧೫೦೦ ಸಂಪುಟ ೧, ಮದರಾಸು, ೧೯೩೬, ಪು. ೨೫

[23] ಕೆ.ಎ.ನೀಲಕಂಠಶಾಸ್ತ್ರಿ, ಎ ಹಿಸ್ಟರಿ ಆಫ್ ಸೌತ್ ಇಂಡಿಯಾ, ಮದರಾಸು, ೧೯೬೬, ಪು.೩೧೭

[24] ವಿನ್‍ಸೆಂಟ್ ಸ್ಮಿತ್, ಅರ‍್ಲಿ ಹಿಸ್ಟರಿ ಆಫ್ ಇಂಡಿಯಾ, ೧೯೨೫, ಪು.೧೩೭-೧೩೮

[25] ಜೆ.ಡಿ.ಎಂ.ಡೆರೆಂಟ್, ದಿ ಹೊಯ್ಸಳಾಸ್ – ಎ ಮೆಡೀವಲ್ ಇಂಡಿಯನ್ ರಾಯಲ್ ಫ್ಯಾಮಿಲಿ, ಆಕ್ಸ್‌ಫರ್ಡ್, ೧೯೫೬

[26] ಐ.ಎನ್.ಕೆ.ಕೆ.ಎಸ್. ನಂ.೩, ಕ್ರಿ.ಶ. ೧೧೧೦

[27] ಬಿ.ಕೆ.ಐ. ನಂ.೭೧, ೧೯೩೬-೩೭; ಎ.ಎ.೧೪, ಪು. ೨೭೭; ಎ.ಇ.೧೫, ಪು.೩೨೮

[28] ಎ.ಎಸ್.ಆಲ್ಟೇಕರ್, ದಿ ರಾಷ್ಟ್ರಕೂಟಸ್ ಆಂಡ್ ದೇಯರ್ ಟೈಮ್ಸ್, ಪೂಣಾ, ೧೯೬೭, ಪು.೨೪೦; ಅದೇ ಸ್ಟೇಟ್ ಆಂಡ್ ದೇಯರ್ ಟೈಮ್ಸ್, ಪೂಣಾ, ೧೯೬೭, ಪು.೨೪೦; ಅದೇ, ಸ್ಟೇಟ್ ಆಂಡ್ ಗವರ್ನ್‍ಮೆಂಟ್ ಇನ್ ಏನ್‌ಶ್ಯಂಟ್ ಇಂಡಿಯಾ, ನವದೆಹಲಿ, ೧೯೭೨, ಪು. ೨೦೨

[29] ಯು.ಎನ್.ಘೋಷಾಲ್, ದಿ ಅಗ್ರೇರಿಯನ್ ಸಿಸ್ಟಮ್, ಪು. ೮೯

[30] ವಿಜ್ಞಾನೇಶ್ವರ, ದಿ ಮಿತಾಕ್ಷರ (ಅನು), ಪು. ೯೮೨, ೯೭೯೯೯೪, ೯೭೯-೮೦

[31] ಅದೇ.

[32] ಎ.ಅಪ್ಪಾದೊರೈ, ಪೂರ್ವೋಕ್ತ, ಪು. ೧೦೭-೧೦೮, ೩೨೬-೩೧

[33] ಕೆ.ಪಿ.ಜಯಸ್ವಾಲ್, ಹಿಂದೂ ಪಾಲಿಟಿ, ೧೯೪೩, ಪು. ೩೪೯

[34] ಬರ್ಟನ್ ಸ್ಟೈನ್, ದಿ ಸೆಗ್‍ಮೆಂಟರಿ ಸ್ಟೇಟ್-ಇಂಟರೀಮ್ ರಿಪ್ಲೆಕ್ಷನ್ಸ್, ದಿ ಸ್ಟೇಟ್ ಇನ್ ಇಂಡಿಯಾ, (ಸಂ.) ಹರ್ಮನ್ ಕುಲ್ಕೆ, ದೆಹಲಿ, ೧೯೯೫, ಪು. ೧೩೪-೧೬೧

[35] ಅದೇ.

[36] ಎ. ಅಪ್ಪಾದೊರೈ, ಪೂರ್ವೋಕ್ತ, ಪು. ೧೨೩-೧೨೪

[37] ಅದೇ.

[38] ಬಿ.ಕೆ.ಐ, ೧-೨, ೧೩೬, ಕ್ರಿ.ಶ. ೧೦೯೧

[39] ಎ. ಅಪ್ಪಾದೊರೈ, ಪೂರ್ವೋಕ್ತ, ಪು. ೧೩೧-೧೩೨

[40] ಎಸ್. ಗುರಾರಾಜಾಚಾರ್, ಸಮ್ ಆಸ್ಪೆಕ್ಟ್ಸ್ ಆಫ್ ಇಕನಾಮಿಕ್ ಆಂಡ್ ಸೋಶ್ಯಲ್ ಲೈಪ್ ಇನ್ ಕರ್ನಾಟಕ, ಮೈಸೂರು, ೧೯೭೪, ಪು. ೧೮೯

[41] ಅದೇ, ಪು. ೨೯-೩೧; ಎ.ಕ.೫, ಚನ್ನರಾಯಪಟ್ಟಣ ೨೪೪, ಕ್ರಿ.ಶ. ೧೨೦೯; ಎ.ಕ.೧೨, ಚಿಕ್ಕಮಗಳೂರು-೨, ಕ್ರಿ.ಶ. ೧೨೬೧

[42] ಬರ್ಟನ್ ಸ್ಟೈನ್, ಪೆಸೆಂಟ್ ಸ್ಟೇಟ್ ಆಂಡ್ ಸೊಸೈಟಿ ಇನ್ ಮೆಡೀವಲ್ ಸೌತ್ ಇಂಡಿಯಾ, ೧೯೮೦, ಪು. ೨೭೪