.೩ ಮಧ್ಯವರ್ತಿಗಳು

ಶ್ರೇಣೀಕೃತ ಸಮಾಜ ವ್ಯವಸ್ಥೆಯಲ್ಲಿ ಮಧ್ಯವರ್ತಿಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತಿದ್ದರು. ಇವರು ಅರಸ ಮತ್ತು ರೈತರ ನಡುವೆ ಕೊಂಡಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಭೂಮಿಯನ್ನು ಹೊಂದಿರುತ್ತಿದ್ದ ಭೂಮಾಲೀಕ ಮಧ್ಯವರ್ತಿಗಳು ಕೃಷಿಕರು ಹಾಗೂ ಇತರ ಉತ್ಪಾದಕ ವರ್ಗಗಳ ಮೇಲೆ ಹಿಡಿತವನ್ನು ಹೊಂದಿದ್ದಷ್ಟೇ ಅಲ್ಲದೆ ಕೇಂದ್ರ ಪ್ರಭುತ್ವದ ನೇರ ಸಂಬಂಧಗಳನ್ನು ಮೊಟಕುಗೊಳಿಸಿದರು. ಇದು ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯನ್ನು ಹುಟ್ಟುಹಾಕಿತು. ಮಧ್ಯವರ್ತಿಗಳು ವೇಳೆಗೆ ಮತ್ತು ನಂತರ ಕೃಷಿ ಕ್ಷೇತ್ರದಲ್ಲಾದ ಬದಲಾವಣೆಗಳು ಭೂಮಾಲೀಕರು ಮತ್ತು ಭೂಮಿಯಿದ್ದ ಮಧ್ಯವರ್ತಿಗಳು ಹೆಚ್ಚು ಪ್ರಭಾವಶಾಲಿಗಳಾಗಿ ಬೆಳೆಯುವಂತೆ ಮಾಡಿದವು.[1] ಮಧ್ಯವರ್ತಿಗಳು ಸರಕಾರದ ವಿವಿಧ ಹುದ್ದೆಗಳಲ್ಲೂ ಇರುತ್ತಿದ್ದರು. ಇವರು ಭೂಮಾಲೀಕತ್ವ ಪಡೆದ ಮಂಡಳಿಗಳ ಜೊತೆಗೆ ಇರುತ್ತಿದ್ದರು. ಭೂಮಾಲೀಕತ್ವ ಪಡೆದ ಮಂಡಳಿಗಳ ರೈತಾಪಿ ಜನರ ಗುಂಪುಗಳು ಹಾಗೂ ದಾನ ಧರ್ಮವನ್ನು ಅವಲಂಬಿಸಿದ ಗುಂಪುಗಳು ಇರುತ್ತಿದ್ದವು.[2] ದಾನಧರ್ಮದ ಮೂಲಕ ಜಮೀನು ಮತ್ತು ಅಧಿಕಾರವನ್ನು ಪಡೆದ ಮೇಲು ವರ್ಗದವರು ಅದೇ ಅಧಿಕಾರವನ್ನು ಸಿದ್ಧಾಂತಗಳನ್ನು ಒಪ್ಪಿಕೊಂಡರೆ ಅದು ಮೇಲ್‌ವರ್ಗದ ಸಿದ್ಧಾಂತಗಳನ್ನು ಒಪ್ಪಿಕೊಂಡಂತೆ ಎಂದರ್ಥ. ಈ ಸಿದ್ಧಾಂತಗಳು ಬ್ರಾಹ್ಮಣ ತತ್ವ ಸಿದ್ಧಾಂತಗಳ ಅಧೀನದಲ್ಲಿರುತ್ತಿದ್ದವು. ಜಮೀನು ಹಾಗೂ ಅಧಿಕಾರವನ್ನು ಪಡೆಯುವಲ್ಲಿ ಬ್ರಾಹ್ಮನ ತತ್ವ ಸಿದ್ಧಾಂತಗಳು ಹೆಚ್ಚು ಸ್ವೀಕೃತ ವಾಗಿದ್ದವು. ಈ ಸಿದ್ಧಾಂತಗಳಿಂದ ಕೂಡಿದ ಉತ್ಪಾದನಾ ವ್ಯವಸ್ಥೆ ರೂಪುಗೊಳ್ಳಲಾರಂಭಿಸಿತು. ಇದರಿಂದಾಗಿ ಸಮಾಜದಲ್ಲಿ ವಿವಿಧ ಸ್ತರಗಳು ಕಾಣಿಸಿಕೊಂಡು ಪರಸ್ಪರ ಸಂಬಂಧಗಳು ಅಸ್ಪಷ್ಟಗೊಳ್ಳಲಾರಂಭಿಸಿದವು.

ಕ್ರಿ.ಶ. ೮ ಮತ್ತು ೧೪ನೆಯ ಶತಮಾನಗಳ ನಡುವಣ ಅವಧಿಯಲ್ಲಿ ಎರಡು ಮಧ್ಯವರ್ತಿ ವರ್ಗಗಳು ಅಸ್ತಿತ್ವದಲ್ಲಿದ್ದವು. ಅವುಗಳೆಂದರೆ ಭೂಮಿಯನ್ನು ದಾನದ ರೂಪದಲ್ಲಿ ಪಡೆದುಕೊಂಡು ಆ ಮೂಲಕ ಸೃಷ್ಟಿಗೊಂಡ ಮಧ್ಯವರ್ತಿಗಳು ಹಾಗೂ ಭೂಮಿಯನ್ನು ಮೊದಲೇ ಹೊಂದಿದ್ದ ಭೂಮಾಲೀಕ ಪಂಗಡಗಳು.[3] ದಾನದ ರೂಪದಲ್ಲಿ ಭೂಮಿಯನ್ನು ಪಡೆದು ಭೂಮಾಲೀಕರು.[4] ದಾನವಾಗಿ ಸಿಕ್ಕಿದ ಭೂಮಿಯ ವ್ಯವಹಾರಗಳನ್ನು ಮಹಾಜನರು ನೋಡಿಕೊಳ್ಳುತ್ತಿದ್ದರು. ತೆರಿಗೆಗಳನ್ನು ಸಂಗ್ರಹಿಸುವುದು, ಭೂಮಿಯನ್ನು ದತ್ತಿ ನೀಡುವುದು, ಕೆರೆಗಳನ್ನು ನಿರ್ಮಿಸುವುದು, ಧಾರ್ಮಿಕ ಮತ್ತು ಶೈಕ್ಷಣಿಕ ಕೆಲಸ ಕಾರ್ಯಗಳನ್ನು ಮಾಡುವುದು ಮುಂತಾದ ಕೆಲಸಗಳನ್ನು ಮಹಾಜನರು ಮಾಡುತ್ತಿದ್ದರು. ಇವರು ಸರಕಾರದ ಮಧ್ಯವರ್ತಿಗಳಾಗಿದ್ದರು. ಬ್ರಹ್ಮದೇಯ ಭೂಮಿಯ ನಿರ್ಮಾಣ ಹಾಗೂ ನೂತನ ಭೂಮಾಲೀಕ ವರ್ಗದ ಹುಟ್ಟು ಒಟ್ಟು ಆರ್ಥಿಕ ಮತ್ತು ಸಾಮಾಜಿಕ ರಚನೆಯನ್ನು ಬದಲಾಯಿಸಿತು. ಇದರಿಂದಾಗಿ ಅನುತ್ಪಾದಕ ವರ್ಗದ ಜನರು ಉತ್ಪಾದನೆಯ ಮೇಲೆ ನೇರ ಹತೋಟಿಯನ್ನು ಸಾಧಿಸುವಂತಾಯಿತು. ಬ್ರಹ್ಮದೇಯ ಹಳ್ಳಿಗಳ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಜೀವನ ಬ್ರಾಹ್ಮಣ ಭೂಮಾಲೀಕರ ಅಧೀನಕ್ಕೆ ಬರುವಂತಾಯಿತು. ಈ ವ್ಯವಸ್ಥೆಯಲ್ಲಿ ಕೃಷಿಕರು ಪ್ರಾತಿನಿಧ್ಯವನ್ನು ಕಳೆದುಕೊಳ್ಳಬೇಕಾಯಿತು. ಏಕೆಂದರೆ ಮಹಾಜನರು ಹಳ್ಳಿಗಳ ಪ್ರತಿನಿಧಿಗಳಾಗಿ ಆಯ್ಕೆಗೊಂಡು ಕೇಂದ್ರಪ್ರಭುತ್ವ ಮತ್ತು ರೈತರ ನಡುವಿನ ಮಧ್ಯವರ್ತಿಗಳಾಗಿ ಅಧಿಕಾರ ಚಲಾಯಿಸುತ್ತಿದ್ದರು. ಈ ಮಧ್ಯವರ್ತಿ ವರ್ಗ ಶ್ರೇಣೀಕೃತ ಸಮಾಜ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿತ್ತು. ಮಹಾಜನರು ಮೇಲ್ನೋಟಕ್ಕೆ ಹಳ್ಳಿಗಳ ಪ್ರತಿನಿಧಿಗಳಾಗಿ ಕಂಡುಬಂದರೂ, ನಿಜಾರ್ಥದಲ್ಲಿ ಅವರು ತಮ್ಮ ಸ್ವಂತ ಸಮಸ್ಯೆಗಳ ಕಡೆಗೇ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದರು.

ಇನ್ನೊಂದು ವರ್ಗದ ಮಧ್ಯವರ್ತಿಗಳೆಂದರೆ, ಪೆರ್ಗಡೆಗಳು, ಗವುಂಡರು ಮತ್ತು ನಾಡಗವುಂಡರು. ಇವರು ಮಹಾಜನರಂತೆ ಕಾರ್ಯನಿರ್ವಹಿಸುತ್ತಿದ್ದರು. ಸ್ಥಳೀಯ ಹಂತದ ಆಡಳಿತವನ್ನು ನಿರ್ವಹಿಸುತ್ತಿದ್ದರು. ಕೇಂದ್ರಪ್ರಭುತ್ವದ ಅಳಿವು-ಉಳಿವುಗಳಲ್ಲಿ ಸ್ಥಳೀಯ ಹಂತದ ಆಡಳಿತಾಧಿಕಾರಿಗಳದ್ದು ನಿರ್ಣಾಯಕ ಪಾತ್ರವಾಗಿತ್ತು. ಇದು ರಾಷ್ಟ್ರಕೂಟರ ಆಳ್ವಿಕೆಯ ಸಂದರ್ಭದಲ್ಲಿ ಕಂಡುಬರುವ ಚಿತ್ರ. ಹೊಯ್ಸಳರ ಅವಧಿಯಲ್ಲಿ ಹಳ್ಳಿಗಳ ಮುಖ್ಯಸ್ಥರನ್ನು ಪ್ರಭುಗಾವುಂಡರೆಂದು ಕರೆಯಲಾಗುತ್ತಿತ್ತು. ಪ್ರಭುಗಾವುಂಡರು ಹಳ್ಳಿಗಳ ಗಣ್ಯರಾಗಿದ್ದು ಅಲ್ಲಿನ ಅಧಿಕಾರಿ ಗಣ್ಯರೊಂದಿಗೆ ಸೇರಿಕೊಂಡು ಆಳ್ವಿಕೆ ನಡೆಸುತ್ತಿದ್ದರು. ಪ್ರಭುಗಾವುಂಡರು ಹೊಯ್ಸಳ ರಾಜ್ಯಾಡಳಿತಕ್ಕೆ ಮಧ್ಯವರ್ತಿ ಕೊಂಡಿಯಾಗಿದ್ದರು. ಆದ್ದರಿಂದಲೇ ಹೊಯ್ಸಳ ಅರಸರು ಮತ್ತು ಅಧಿಕಾರಿಗಳು ಗ್ರಾಮಗಣ್ಯರಿಗೆ ವಿಶೇಷವಾದ ಗೌರವವನ್ನು ನೀಡುತ್ತಿದ್ದರು. ಈ ರೀತಿಯಾಗಿ ಕೇಂದ್ರ ಪ್ರಭುತ್ವ ಭೂಮಾಲೀಕರೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸುತ್ತಿತ್ತು. ಮಧ್ಯವರ್ತಿಗಳ ಅಧಿಕಾರ, ಸವಲತ್ತು ಹಾಗೂ ವರ್ಚಸ್ಸು ಹೆಚ್ಚಿದಂತೆಲ್ಲಾ ಕೇಂದ್ರಪ್ರಭುತ್ವದ ಅಧಿಕಾರ, ಸವಲತ್ತುಗಳು ಸವೆಯತೊಡಗಿದವು. ಇದು ಉತ್ಪಾದನಾ ವ್ಯವಸ್ಥೆ ಮತ್ತು ಸಂಬಂಧಗಳ ಮೇಲೆ ಮಹತ್ತರ ಪರಿಣಾಮಗಳನ್ನು ಬೀರಿತು.

ಭೂ ಆಧಾರಿತ ಅರ್ಥ ವ್ಯವಸ್ಥೆಯ ತಳಹದಿಯ ಮೇಲೆ ನಿಂತಿದ್ದ ಅಂದಿನ ರಾಜ್ಯ ವ್ಯವಸ್ಥೆ ಭೂಮಾಲೀಕ ಮಧ್ಯವರ್ತಿಗಳ ಸುತ್ತ ಹೆಣೆದುಕೊಂಡಿತ್ತು. ಇದು ರಾಜಕಾರಣ ಮತ್ತು ಭೂ ಒಡೆತನದ ನಡುವೆ ನಿಕಟವಾದ ಸಂಬಂಧ, ಸಂಪರ್ಕ ಏರ್ಪಡುವಂತೆ ಮಾಡಿತು.[5] ಈ ಒಡಂಬಡಿಕೆಯಲ್ಲಿ ಕೃಷಿಕರು, ಕುಶಲಕರ್ಮಿಗಳು ಯಾವುದೇ ಪ್ರಾಮುಖ್ಯತೆಯನ್ನು ಪಡೆದುಕೊಳ್ಳಲಿಲ್ಲ. ಮಧ್ಯವರ್ತಿಗಳು ಕೃಷಿಕರ ಪಾಲಿಗೆ ಅರಸರಂತೆಯೇ ಕಾಣಿಸಿಕೊಂಡಿದ್ದರು. ಈ ವ್ಯವಸ್ಥೆಯ ಊಳಿಗಮಾನ್ಯ ಉತ್ಪಾದನಾ ವ್ಯವಸ್ಥೆಯ ಎಲ್ಲಾ ಲಕ್ಷಣಗಳನ್ನು ಹೊಂದಿದ್ದು, ಉತ್ಪಾದಕಾ ವರ್ಗಗಳನ್ನು ಯಾಂತ್ರಿಕ ಜೀವಿಗಳನ್ನಾಗಿಸಿತು. ಕೃಷಿಕರು ಮತ್ತು ಇತರ ಉತ್ಪಾದಕ ವರ್ಗದವರು ಸಮಾಜದ ಕೆಳಸ್ತರಕ್ಕೆ ದೂಡಲ್ಪಟ್ಟರು. ಮಧ್ಯವರ್ತಿಗಳು ಉತ್ಪಾದಕರ ಮೇಲೆ ನೇರ ಹತೋಟಿಯನ್ನು ಇರಿಸಿಕೊಂಡು ರಾಜ್ಯದ ಬೊಕ್ಕಸಕ್ಕೆ ಸಂದಾಯವಾಗುತ್ತಿದ್ದ ವರಮಾನದ ಹೆಚ್ಚಿನ ಪಾಲನ್ನು ತಮ್ಮದಾಗಿಸಿಕೊಂಡರು. ಇದರಿಂದಾಗಿ ಪ್ರಭುತ್ವದ ಶಕ್ತಿ ಕ್ಷೀಣಿಸಿ ಮಧ್ಯವರ್ತಿ ಭೂಮಾಲೀಕ ವರ್ಗಗಳು ಸಾಮಾಜಿಕ ರಚನೆಯಲ್ಲಿ ಕೇಂದ್ರ ಬಿಂದುಗಳಾದರು. ಇದರಿಂದಾಗಿ ಕ್ರಿ.ಶ. ೮ರಿಂದ ೧೪ರವರೆಗಿನ ಅವಧಿಯಲ್ಲಿ ಭೂಮಿಯನ್ನು ಕೊಳ್ಳುವ ಹಾಗೂ ಆ ಮೂಲಕ ಭೂಮಾಲೀಕರಾಗುವ, ಭೂಮಾಲೀಕ ಮಧ್ಯವರ್ತಿಗಳಾಗುವ ಪ್ರಕ್ರಿಯೆಗಳು ಬಿರುಸಿನಿಂದ ನಡೆದವು ಎನ್ನುವ ತೀರ್ಮಾನಕ್ಕೆ ಬರಬಹುದಾಗಿದೆ. ಈ ಪ್ರಕ್ರಿಯೆಗಳು ಕೇಂದ್ರಪ್ರಭುತ್ವದ ಅಧಿಕಾರವನ್ನು ಕ್ಷೀಣಿಸಿದ ರೀತಿಯಲ್ಲಿಯೇ ಬೆಂಬಲ ಮತ್ತು ಪೋಷಣೆಯನ್ನು ನೀಡುವ ಕೆಲಸವನ್ನು ಮಾಡಿದವು. ಇದು ಅರಸರು ಮತ್ತು ಭೂಮಾಲೀಕರ ನಡುವಿನ ಸಂಬಂಧಗಳನ್ನು ಅವಲಂಬಿಸಿಕೊಂಡಿರುತ್ತಿತ್ತು. ಇಲ್ಲಿ ಹೆಚ್ಚು ಚರ್ಚೆಗೀಡಾಗುವ ವಿಚಾರವೆಂದರೆ ಭೂಮಿಯನ್ನು ದಾನ ನೀಡುವುದರ ಮೂಲಕ ಹುಟ್ಟಿಕೊಂಡ ಭೂಮಾಲೀಕ ಮಧ್ಯವರ್ತಿಗಳದ್ದು. ಈ ಮಧ್ಯವರ್ತಿಗಳು ಒಂದು ಸಂಕೀರ್ಣ ಸಮಾಜ ಮತ್ತು ರಾಜಕಾರಣವನ್ನು ಹುಟ್ಟು ಹಾಕಿದರು.[6] ಈ ಸಂಕೀರ್ಣತೆಯನ್ನು ದಾನ ನೀಡುವುದರ ಹಿಂದಿದ್ದ ಭಾವನೆಗಳ ಮೂಲಕವೇ ಅರ್ಥೈಸಿಕೊಳ್ಳಬೇಕಾಗುತ್ತದೆ.

.೪ ದಾನ ಮತ್ತು ದಾಸೋಹ – ಹಿಂದಿರುವ ತಾತ್ಪಿಕ ಭಾವನೆಗಳು

ಪ್ರಭುತ್ವದ ಸಂದರ್ಭದಲ್ಲಿನ ದಾನ ಪರಿಕಲ್ಪನೆ ವ್ಯಾಪಕಾರ್ಥವನ್ನು ಉಳ್ಳದ್ದಾಗಿದೆ. ಸಂಸ್ಕೃತಿ ಅಧ್ಯಯನದಲ್ಲಿ ಈ ಪರಿಕಲ್ಪನೆಯನ್ನು ವಿಶಾಲಾರ್ಥದಲ್ಲಿ ಅರ್ಥೈಸಿಕೊಳ್ಳಬೇಕಾಗುತ್ತದೆ. ಇದು ಕೇವಲ ಆರ್ಥಿಕ ಚಟುವಟಿಕೆಗಳಿಗಷ್ಟೇ ಸೀಮಿತವಾಗಿರದೆ ಸಾಮಾಜಿಕ ಸ್ಥಿತ್ಯಂತರಗಳ ಸ್ವರೂಪವನ್ನು ಪರಿಚಯಿಸುವ ಅಂಶವೂ ಆಗಿದೆ. ದಾನ ಕೊಡುವ ಪದ್ಧತಿ ಯಾಕಾಗಿ ಆರಂಭಗೊಂಡಿತು, ದಾನವನ್ನು ಯಾರು ಯಾರಿಗೆ ಕೊಡುತ್ತಿದ್ದರು, ದಾನ ಕೊಡುವುದರ ಹಿಂದಿರುವ ತಾತ್ವಿಕ ಭಾವನೆಗಳೇನು ಮುಂತಾದ ಪ್ರಶ್ನೆಗಳು ಅಧ್ಯಯನದ ಸಂದರ್ಭದಲ್ಲಿ ಸಹಜವಾಗಿಯೇ ಹುಟ್ಟಿಕೊಳ್ಳುತ್ತವೆ. ಈ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರವನ್ನು ಸಂದರ್ಭದಲ್ಲಿ ಸಾಧ್ಯವಾಗುವುದಿಲ್ಲ. ಏಕೆಂದರೆ ದಾನ ನೀಡುವವರ ಮನಸ್ಸುಗಳು ಸಂಕೀರ್ಣ ಸ್ವರೂಪದ್ದಾಗಿದ್ದು ಮೇಲ್ನೋಟಕ್ಕೆ ಕಂಡಂತೆ ಇರುವುದಿಲ್ಲ. ಕ್ರಿ.ಶ. ೮ರಿಂದ ೧೪ನೆಯ ಶತಮಾನದವರೆಗಿನ ಅವಧಿಯಲ್ಲಿ ದಾನ ನೀಡುವ ಪದ್ಧತಿ ಯಾವ ರೀತಿ ಇತ್ತು ಎನ್ನುವುದನ್ನು ಸೂಚಿಸುವ ಉಲ್ಲೇಖಗಳು ಶಾಸನಗಳಲ್ಲಿ ಮತ್ತು ಸಾಹಿತ್ಯ ಕೃತಿಗಳಲ್ಲಿ ಸಿಗುತ್ತವೆ. ಅವುಗಳಲ್ಲಿ ಕಂಡುಬರುವ ವಿಶೇಷತೆಯೆಂದರೆ ದಾನವನ್ನು ಜಾತಿ / ವರ್ಗ ಹಿನ್ನೆಲೆಯಿಂದ ನಿರ್ಧರಿಸುತ್ತಿದ್ದುದು. ಕ್ರೋಢಿಕರಿಸಲ್ಪಟ್ಟ ಸಂಪತ್ತು ಸಮಾನವಾಗಿ ಹಂಚಿಕೆಯಾಗುತ್ತಿತ್ತು ಎನ್ನುವುದು ವೈಭವೀಕೃತ ಚರಿತ್ರೆಯ ವಿವರಣೆಯಷ್ಟೇ ಆಗಿದೆ. ವಾಸ್ತವ ಸ್ಥಿತಿ ಅದಾಗಿರಲಿಲ್ಲ. ಸಮಾಜದಲ್ಲಿ ಅಧಿಕಾರ, ಗೌರವ, ಸವಲತ್ತುಗಳನ್ನು ಹೊಂದಿದ್ದ ಜನವರ್ಗಕ್ಕೇ ದಾನದ ರೂಪದಲ್ಲಿ ಇನ್ನಷ್ಟು ಸಂಪತ್ತು ದೊರಕುತ್ತಿತ್ತು. ರಾಜಪ್ರಭುತ್ವವು ಸಮಾಜವನ್ನು ತನಗೆ ಬೇಕಾದಂಥ ರೀತಿಯಲ್ಲಿ ರಚಿಸುವ ಚಾಕಚಕ್ಯತೆಯನ್ನು ಹೊಂದಿತ್ತು. ದಾನ ಎನ್ನುವುದು ಯೋಜನೆಗೆ ಪೂರಕವಾಗಿಯೇ ಹುಟ್ಟಿಕೊಂಡಿತು.

ದಾನ ಕೊಡುವದರ ಹಿಂದಿದ್ದಿರಬಹುದಾದ ಭಾವನೆಗಳು, ಉದ್ದೇಶಗಳು ಯಾವತ್ತೂ ಮೇಲ್ನೋಟಕ್ಕೆ ಕಂಡುಬರುವುದಿಲ್ಲ. ಈ ಕಾರಣದಿಂದಾಗಿಯೇ ಅನೇಕ ಚರಿತ್ರೆಕಾರರು ದಾನ ಕೊಡುವ ವ್ಯವಸ್ಥೆಯನ್ನು ತಪ್ಪಾಗಿ ಅರ್ಥೈಸಿಕೊಂಡು ತಪ್ಪು ಚರಿತ್ರೆಯನ್ನು ನಿರ್ಮಿಸಿದರು. ನಮಗೆ ಇಂದು ದೊರಕುವ ಶಾಸನಗಳಲ್ಲಿ ದಾನ ಶಾಸನಗಳ ಸಂಖ್ಯೆಯೇ ಹೆಚ್ಚು. ಅರಸರು ಹೆಚ್ಚೆಚ್ಚು ದಾನಗಳನ್ನು ಯಾಕಾಗಿ ಕೊಡುತ್ತಿದ್ದರು ಎನ್ನುವ ಪ್ರಶ್ನೆಯಲ್ಲಿಯೇ ಉತ್ತರವೂ ಅಡಕವಾಗಿದೆ. ದಾನದ ಕಲ್ಪನೆ ಅಂದಿನ ಸಂದರ್ಭದಲ್ಲಿ ಮಹತ್ವಪೂರ್ಣವೂ, ಸಾಮಾಜಿಕ-ಧಾರ್ಮಿಕ ಶಕ್ತಿಯೂ ಆಗಿತ್ತು. ಧರ್ಮದ ಭದ್ರ ತಳಹದಿಗೆ ದಾನ ಸಹಾಯಕವಾಗಿರುತ್ತಿತ್ತು. ಆಯಾ ಸಂದರ್ಭಗಳಲ್ಲಿ ಪ್ರಚಾರದಲ್ಲಿದ್ದ ಧರ್ಮಗಳಿಗೆ ಸಂಬಂಧಿಸಿದ ದೇವಾಲಯ, ಬಸದಿಗಳನ್ನು ನಿರ್ಮಿಸಿ, ಅವುಗಳಿಗೆ ದಾನ ದತ್ತಿಗಳನ್ನು ನೀಡಿ, ರಾಜಾಶ್ರಾಯ ನೀಡಿ ಅವು ಪ್ರಚಾರದಲ್ಲಿರುವಂತೆ ನೋಡಿಕೊಳ್ಳುವ ಕೆಲಸವನ್ನು ದಾನ ನೀಡುವ ವ್ಯವಸ್ಥೆ ಮಾಡುತ್ತಿತ್ತು. ದಾನದ ರೂಪದಲ್ಲಿ ಯಾವುದನ್ನು ಕೊಡಲಾಗುತ್ತಿತ್ತು ಎನ್ನುವುದನ್ನು ನಿರ್ಧರಿಸುವುದು ಕಷ್ಟದ ಕೆಲಸವಲ್ಲ. ಉತ್ಪಾದಕ ಕೃಷಿ, ಭೂಮಿ, ಹಣ, ಚಿನ್ನ, ಬೆಳ್ಳಿ ಹಾಗೂ ದೈನಂದಿನ ಉಪಯೋಗದ ವಸ್ತುಗಳನ್ನು ದಾನದ ರೂಪದಲ್ಲಿ ಕೊಡಲಾಗುತ್ತಿತ್ತು ಎನ್ನುವುದು ಆಕರಗಳಿಂದ ತಿಳಿದುಬರುತ್ತದೆ. ಹೆಚ್ಚುವರಿ ಉತ್ಪಾದನೆಯನ್ನೇ ಹೆಚ್ಚಾಗಿ ದಾನದ ಇಲ್ಲವೇ ಕಾಣಿಕೆಯ ರೂಪದಲ್ಲಿ ಕೊಡಲಾಗುತ್ತಿತ್ತು. ಹೆಚ್ಚುವರಿ ಉತ್ಪಾದನೆಯು ಅರಸ ಹಾಗೂ ಸಮಾಜದ ಪ್ರತಿಷ್ಠಿತ ವರ್ಗಗಳಲ್ಲಿ ಮಾತ್ರ ಕ್ರೋಢಿಕೃತವಾಗಿರುತ್ತಿತ್ತು. ಯಾರೂ ತಮ್ಮ ಸ್ವಂತದ ಇಲ್ಲವೇ ವಸ್ತುಗಳನ್ನು ದಾನದ ರೂಪದಲ್ಲಿ ಕೊಡಲು ಮುಂದೆ ಬರುತ್ತಿರಲಿಲ್ಲ. ಆದರೆ ಮೇಲ್ನೋಟಕ್ಕೆ ಆ ರೀತಿಯ ಭಾವನೆ ಮೂಡುವುದು ಸಹಜ.

ಅರಸುಮನೆತನಗಳು ಉಚ್ಛ್ರಾಯಸ್ಥಿತಿಯಲ್ಲಿರುವ ಸಂದರ್ಭಗಳಲ್ಲಿ ದಾನಗಳ ಸಂಖ್ಯೆ ಏರುಮುಖವಾಗಿದ್ದರೆ, ಅವನತಿಯತ್ತ ಸಾಗುತ್ತಿರುವ ಸಂದರ್ಭದಲ್ಲಿ ದಾನದ ಸಂಖ್ಯೆಯೂ ಇಳಿಮುಖವಾಗಿರುವುದು ಕಂಡುಬರುತ್ತದೆ. ಧಾರ್ಮಿಕ ಕ್ಷೇತ್ರದಲ್ಲಿ ದಾನದ ಮಹತ್ವವನ್ನು ಅರಿತುಕೊಂಡ ಅರಸರು ಮತ್ತು ಅಧಿಕಾರಿ ವರ್ಗದವರು ಹೆಚ್ಚೆಚ್ಚು ದಾನವನ್ನು ದೇವಾಲಯ ಮತ್ತು ಬ್ರಾಹ್ಮಣರಿಗೆ ನೀಡಲು ಮುಂದಾದರು. ಧಾರ್ಮಿಕ ಪ್ರಭುತ್ವವನ್ನು ರಾಜಪ್ರಭುತ್ವದ ಅಸ್ತಿತ್ವಕ್ಕೋಸ್ಕರ ಬಳಸಿಕೊಳ್ಳುವುದು ಅಂದಿನ ಅನಿವಾರ್ಯವಾಗಿತ್ತು. ಪರೋಕ್ಷವಾಗಿ ಈ ವ್ಯವಸ್ಥೆ ಧಾರ್ಮಿಕ ಪ್ರಭುತ್ವವನ್ನು ಇನ್ನಷ್ಟು ಗಟ್ಟಿಗೊಳಿಸುವ ಅಪಾಯವಿದ್ದರೂ ರಾಜ ಪ್ರಭುತ್ವಕ್ಕೆ ತಾತ್ಕಾಲಿಕ ಭದ್ರತೆಯೇ ಪ್ರಮುಖವಾಗಿರುತ್ತಿತ್ತು. ವಿವಿಧ ಅಧಿಕಾರಿ ವರ್ಗದವರನ್ನು ವಿವಿಧ ಧಾರ್ಮಿಕ ಪಂಗಡದವರನ್ನು ಅಧೀನದಲ್ಲಿಟ್ಟುಕೊಳ್ಳಲು ದಾನ ನೀಡುವುದು ಅನಿವಾರ್ಯವೂ ಆಗಿತ್ತು. ಸಮಾಜದ ಕೆಳವರ್ಗದ ಜನರಿಗೆ ದಾನ ನೀಡಿರುವ ಉಲ್ಲೇಖಗಳು ಹೆಚ್ಚಾಗಿ ಸಿಗುವುದಿಲ್ಲ. ದಾನ ನೀಡುವುದರಲ್ಲಿಯೂ ವೈದಿಕ ಹಿನ್ನೆಲೆಯಿಂದ ಬಂದ ವರ್ಣಾಶ್ರಮ ನಿಯಮಗಳನ್ನು ಪಾಲಿಸಲಾಗುತ್ತಿತ್ತು. ಇದರಿಂದಾಗಿ ದಾನ ನೀಡುವುದು ಇದ್ದ ವ್ಯವಸ್ಥೆಯನ್ನು ಯಥಾಪ್ರಕಾರ ಕಾಯ್ದುಕೊಂಡು ಹೋಗಲು ನೀಡಿದ ಲಂಚದ ರೀತಿಯಲ್ಲಿ ಕಂಡುಬರುತ್ತದೆ.

ಸಮಾಜದ ಕೆಳಸ್ತರದ ಜನರು ತಾವು ಉತ್ಪಾದಿಸಿದ ಸಂಪತ್ತಿನ ಒಂದು ಭಾಗವನ್ನು ಮಾತ್ರ ತೆಗೆದುಕೊಳ್ಳಬೇಕೆಂಬ ನಿಯಮವನ್ನು ರೂಪಿಸಲಾಗಿತ್ತು. ಪ್ರಭುತ್ವದ ದೃಷ್ಟಿಯಿಂದ ಅದು ಹೆಚ್ಚುವರಿ ಉತ್ಪಾದನೆಯಾಗಿದ್ದು ದಾನದ ರೂಪದಲ್ಲಿ ಉತ್ಪಾದಿಸಿದವನೇ ಪಡೆದುಕೊಳ್ಳುವುದು. ಈ ವ್ಯವಸ್ಥೆಯಲ್ಲಿ ದುಡಿಯುವ ವರ್ಗದ ಶ್ರಮಕ್ಕೆ ಬೆಲೆಯಿರುತ್ತಿರಲಿಲ್ಲ. ವಿವಿಧ ಉತ್ಪಾದಕ ವರ್ಗಗಳು ತಾವು ದುಡಿದ ಸಂಪತ್ತನ್ನು ಮಧ್ಯವರ್ತಿಗಳ ಮೂಲಕ ಅರಸನಿಗೆ ನೀಡಬೇಕಾಗಿತ್ತು. ಈ ರೀತಿ ಕ್ರೋಢೀಕರಿಸಲ್ಪಟ್ಟ ಸಂಪತ್ತನ್ನು ದೇವಾಲಯಗಳಿಗೆ, ಬ್ರಾಹ್ಮಣರಿಗೆ ಹಾಗೂ ಇನ್ನಿತರ ಅಧಿಕಾರಿ ವರ್ಗದವರಿಗೆ ನೀಡಲಾಗುತ್ತಿತ್ತು. ಈ ವ್ಯವಸ್ಥೆಯಿಂದಾಗಿ ಅನುತ್ಪಾದಕ ವರ್ಗಗಳು ಉತ್ಪಾದಕ ವರ್ಗಗಳ ಉತ್ಪಾದನೆಯ ಲಾಭವನ್ನು ಪಡೆದುಕೊಳ್ಳುವಂತಾಯಿತು. ದೇವಾಲಯಗಳು ಮತ್ತು ಬ್ರಾಹ್ಮಣರಿಗೆ ದಾನವನ್ನು ಕೊಡುವ ಸಂದರ್ಭದಲ್ಲಿ ದಾನಕ್ಕೆ ಧಾರ್ಮಿಕ ಮಹತ್ವವನ್ನು ನೀಡಲಾಯಿತು. ಅದೊಂದು ಆರ್ಥಿಕ ಚಟುವಟಿಕೆಯಾಗಿದ್ದರೂ ಧಾರ್ಮಿಕ ಆಚರಣೆಯಾಗಿ ಪರಿವರ್ತನೆಗೊಂಡಿತು. ಬ್ರಾಹ್ಮಣರಿಗೆ ದಾನವಾಗಿ ನೀಡುವ ಭೂಮಿಯನ್ನು ಬ್ರಹ್ಮದೇಯ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಧಾರ್ಮಿಕ ಚಟುವಟಿಕೆಗಳ ಮೂಲಕ ಬ್ರಾಹ್ಮಣ ವರ್ಗ ಅತ್ಯಂತ ಪ್ರಭಾವಿ ವರ್ಗವಾಗಿ ರೂಪುಗೊಂಡಿತ್ತು. ದೇವಾಲಯ, ಮಠಗಳ ನಿರ್ಮಾಣ ಬಿರುಸಿನಿಂದ ನಡೆದವು. ದಾನವಾಗಿ ಸಿಕ್ಕಿದ ಭೂಮಿಯ ಆಡಳಿತವೂ ಬ್ರಾಹ್ಮಣರಿಗೇ ಸೇರಿತ್ತು. ದೇವಾಲಯಗಳು ಆಡಳಿತ ಕೇಂದ್ರಗಳಂತೆ ಕಾರ್ಯ ನಿರ್ವಹಿಸುತ್ತಿದ್ದವು.

ಬ್ರಾಹ್ಮಣರಿಗೆ ಭೂಮಿಯನ್ನು ದಾನವಾಗಿ ನೀಡಿರುವುದು ಹೊಸ ಭೂಮಾಲೀಕ ಮಧ್ಯವರ್ತಿಗಳ ಹುಟ್ಟಿಗೂ ಕಾರಣವಾಯಿತು. ಬ್ರಾಹ್ಮಣರು ಮಹಾಜನರಾಗಿ ನಿರ್ವಹಿಸುತ್ತಿದ್ದ ಕೆಲಸ ಕಾರ್ಯಗಳ ಕುರಿತು ಈಗಾಗಲೇ ಚರ್ಚಿಸಲಾಗಿದೆ. ರಾಷ್ಟ್ರಕೂಟರಿಂದ ಹೊಯ್ಸಳರವರೆಗಿನ ಅವಧಿಯಲ್ಲಿ ಬ್ರಾಹ್ಮಣರಿಗೆ, ಬ್ರಾಹ್ಮಣರಿಗೆ, ಬ್ರಾಹ್ಮಣೇತರ ವರ್ಗದವರಿಗೆ ಹಾಗೂ ಸ್ಮಾರಕಗಳಿಗೆ ನೀಡಿದ ದಾನಗಳ ಕೆಲವು ಉದಾಹರಣೆಗಳನ್ನು ಇಲ್ಲಿ ನೀಡಲಾಗಿದೆ. ರಾಷ್ಟ್ರಕೂಟರ ಅನೇಕ ದಾನಶಾಸನಗಳು ಲಭ್ಯವಿವೆ. ಕ್ರಿ.ಶ. ೮ನೆಯ ಶತಮಾನದ ಶಾಸನವೊಂದರಲ್ಲಿ ಜೈನ ಯತಿಗೆ ದಾನವನ್ನು ನೀಡಿದ ಉಲ್ಲೇಖವಿದೆ.[7] ರಾಷ್ಟ್ರಕೂಟ ದೊರೆಗಳಾದ ದಂತಿದುರ್ಗ, ಇಂದ್ರ, ನಾಲ್ಕನೆಯ ಗೋವಿಂದ ಮುಂತಾದವರು ದಾನಶೀಲರಾಗಿದ್ದರು ಹಾಗೂ ಇವರೆಲ್ಲರೂ ದಾನಧರ್ಮಗಳ ಸಲುವಾಗಿ ದೇವಾಲಯಗಳಿಗೆ ಮೀಸಲಾಗಿಡುತ್ತಿದ್ದ ಸಂಪತ್ತಿನ ಒಂದು ಭಾಗವನ್ನು ದಾರಿದ್ರ್ಯ ನಿರ್ಮೂಲನಕ್ಕಾಗಿ ವಿನಿಯೋಗಿಸುತ್ತಿದ್ದರು ಎನ್ನುವ ವಿವರಣೆಯನ್ನು ಆಲ್ಟೇಕರ್ ನೀಡುತ್ತಾರೆ.[8] ಕ್ರಿ.ಶ. ೮೦೦ಕ್ಕೆ ಸೇರಿದ ಮಹಾಶಿವಗುಪ್ತ ಎನ್ನುವವನ ಶಿವಪುರದ ಶಾಸನವು ಬಡಗಿ, ಕಮ್ಮಾರ, ಕುಂಬಾರ ಮೊದಲಾದ ಗ್ರಾಮಪಾಂಚಾಳರಿಗೆ ಅವರ ವೃತ್ತಿ ಸೇವೆಗಾಗಿ ನಿರ್ದಿಷ್ಟ ಧಾನ್ಯ ಭಾಗವನ್ನು ಹಂಚಿಕೊಡಲಾಗುತ್ತಿತ್ತೆಂದು ಹೇಳುತ್ತದೆ.[9] ರಾಷ್ಟ್ರಕೂಟರು ನೀಡಿರುವ ದಾನಗಳಲ್ಲಿ ಧಾರ್ಮಿಕ ಸ್ವರೂಪದ ದಾನಗಳ ಸಂಖ್ಯೆಯೇ ಹೆಚ್ಚಿನದು. ಅವರ ಮೂವತ್ತು ಭೂದಾನಗಳಲ್ಲಿ ಇಪ್ಪತ್ತನಾಲ್ಕು ಬ್ರಾಹ್ಮಣರಿಗೆ ಮತ್ತು ದೇವಾಲಯಗಳಿಗೆ ನೀಡಿದವು.[10] ಕಲ್ಯಾಣದ ಚಾಲುಕ್ಯರ ದಾನಶಾಸನಗಳಲ್ಲಿ ಮೂರು ತಲೆಮಾರುಗಳು ಅನುಭವಿಸುವ ದಾನ, ಅಧಿಕಾರ ಪಡೆದ ವ್ಯಕ್ತಿಯು ಜೀವಂತವಾಗಿರುವವರೆಗೆ ಅನುಭವಿಸುವ ದಾನ ಮುಂತಾದ ಉಲ್ಲೇಖಗಳು ಸಿಗುತ್ತವೆ.[11] ಆರನೆಯ ವಿಕ್ರಮಾದಿತ್ಯನು ಪಟ್ಟಕ್ಕೆ ಬಂದ ಮೊದಲ ವರ್ಷದಲ್ಲಿಯೇ ಮಹಾದಾನಗಳನ್ನು ನೀಡಿದ ಉಲ್ಲೇಖಗಳು ಸಿಗುತ್ತವೆ.[12] ಕಲ್ಯಾಣದ ಚಾಲುಕ್ಯರ ಮಹಾಮಂಡಳೇಶ್ವರನಾದ ಚಿದ್ದಣಚೋಳ ಎನ್ನುವವನು ಅಗ್ರಹಾರವೊಂದರ ಮಹಾಜನರಿಗೆ ದಾನವನ್ನು ಬಿಡುತ್ತಾನೆ. ಈ ದಾನವನ್ನು ಪುನರ್‌ದತ್ತಿ ಎಂಬುದಾಗಿಯೂ ಹೆಸರಿಸಲಾಗಿದೆ.[13]

ಹೊಯ್ಸಳರ ಶಾಸನಗಳ ಬಹುಭಾಗವು ದಾನಶಾಸನಗಳಾಗಿವೆ. ಅವು ಹೊಯ್ಸಳ ಅರಸರನ್ನು ದಾನ ಶೂರರೆಂದು ವರ್ಣಿಸಿವೆ.[14] ಹೊಯ್ಸಳರ ಆಳ್ವಿಕೆಯಲ್ಲೂ ಬ್ರಾಹ್ಮಣರಿಗೆ ಜೀವನೋಪಾಯಕ್ಕಾಗಿ ಬ್ರಹ್ಮದೇಯ ಭೂಮಿಯನ್ನು ನೀಡಲಾಯಿತು.[15] ಹೊಯ್ಸಳ ದೊರೆ ನರಸಿಂಹನ ಅನುಮತಿ ಪಡೆದು ನಕ ಎನ್ನುವ ಹೆಸರಿನ ಮಂತ್ರಿಯು ಬ್ರಹ್ಮ ಸಮುದ್ರ ಎನ್ನುವ ಅಗ್ರಹಾರವನ್ನು ನಿರ್ಮಿಸಿ, ಅದನ್ನು ಹನ್ನೆರಡು ಮಂದಿ ಬ್ರಾಹ್ಮಣರಿಗೆ ನೀಡಿದನು.[16] ಹೊಯ್ಸಳ ವಿಷ್ಣುವರ್ಧನನು ದೆವಲಿಗೆನಾಡು ಎನ್ನುವಲ್ಲಿ ಅಗ್ರಹಾರವೊಂದನ್ನು ನಿರ್ಮಿಸಿ ಬ್ರಾಹ್ಮಣರಿಗೆ ನೀಡಿದನು.[17] ಬಲ್ಲಾಳದೇವನು ಬಾಣಾವರನನ್ನು ಅಗ್ರಹಾರವನ್ನಾಗಿ ಪರಿವರ್ತಿಸಿ ೭೪ ಬ್ರಾಹ್ಮಣರಿಗೆ ನೀಡಿದನು.[18] ಇಂಥ ಅನೇಕ ದಾನಶಾಸನಗಳು ಸಿಗುತ್ತವೆ. ಕ್ರಿ.ಶ. ೧೨ ಮತ್ತು ೧೩ನೆಯ ಶತಮಾನಗಳಿಗೆ ಸೇರಿದ ಇಂಥ ಅನೇಕ ದಾನಶಾಸನಗಳು ಸಿಗುತ್ತವೆ. ಇದಕ್ಕೆ ಪ್ರಮುಖ ಕಾರಣವೆಂದರೆ ಧಾರ್ಮಿಕ ಸಂಪ್ರದಾಯಗಳು. ವೈದಿಕಧರ್ಮ ದಾನದ ಕಲ್ಪನೆಯನ್ನು ಸಂಪೂರ್ಣವಾಗಿ ಅಂಗೀಕರಿಸಿತ್ತು. ಸಮಾಜವನ್ನು ಧರ್ಮದ ಹತೋಟಿಯಲ್ಲಿಡಲು ದಾನ ನೀಡುವ ವ್ಯವಸ್ಥೆ ಮಾಧ್ಯಮವಾಗಿ ಕಾಣಿಸಿಕೊಂಡಿತು. ಇದಕ್ಕೆ ಪ್ರಭುವರ್ಗದ ನಿರಂತರ ಬೆಂಬಲವೂ ಇದ್ದಿತು.

ದಾನ ನೀಡುವ ಪದ್ದತಿ ಅರಸರಿಗಷ್ಟೆ ಸೀಮಿತವಾಗಿರಲಿಲ್ಲ. ಪ್ರಭುವರ್ಗ ಮತ್ತು ಪ್ರಜಾವರ್ಗಗಳೆರಡೂ ದಾನದತ್ತಿಗಳನ್ನು ನೀಡುತ್ತಿದ್ದವು. ಅರಸರು, ರಾಣಿಯರು, ಮಹಾಮಂಡಳೇಶ್ವರರು, ಸಾಮಂತರು, ಅಧಿಕಾರಿವರ್ಗದವರು ಮುಂತಾದವರು ವಿವಿಧ ಕೆಲಸ ಕಾರ್ಯಗಳಿಗೆ ದಾನ ನೀಡುತ್ತಿದ್ದರು. ಅಧಿಕಾರವನ್ನು ಮುಂದುವರಿಸಲು, ಸಂಬಂಧಗಳನ್ನು ಬೆಸೆಯಲು ಹಾಗೂ ಸಮಾಜದಲ್ಲಿನ ಶ್ರೇಣೀಕೃತ ವ್ಯವಸ್ಥೆಯನ್ನು ಕಾಯ್ದುಕೊಂಡು ಬರಲು ದಾನ ನೀಡುವ ಪದ್ಧತಿ ಒಂದು ಸಾಧನವಾಗಿತ್ತು. ಅದೇ ರೀತಿ ಭೂಮಿಯನ್ನು ದಾನ ನೀಡುವ ಪದ್ಧತಿ ಅರಸರಿಗೆ ಹಲವಾರು ಸಂದರ್ಭಗಳಲ್ಲಿ ಮಾರಕವಾಗಿಯೂ ಪರಿಣಮಿಸಿದುಂಟು. ಹಳ್ಳಿಗಳನ್ನು ಬ್ರಾಹ್ಮಣರಿಗೆ ಹಾಗೂ ಇನ್ನಿತರ ವರ್ಗದವರಿಗೆ ದಾನ ನೀಡುವಾಗ ತೆರಿಗೆಯಿಂದ ವಿನಾಯಿತಿಗೊಳಿಸಲಾಗುತ್ತಿತ್ತು. ಇದರಿಂದಾಗಿ ಹಳ್ಳಿಗಳಿಂದ ಅರಸನ ಬೊಕ್ಕಸಕ್ಕೆ ಸಂದಾಯವಾಗುತ್ತಿದ್ದ ಕಂದಾಯ ಹಳ್ಳಿಗರಲ್ಲಿಯೇ ಉಳಿಯುವಂತಾಯಿತು. ಇಲ್ಲಿ ಹಳ್ಳಿಗರೆಂದರೆ ಭೂಮಿಯನ್ನು ದಾನವಾಗಿ ಪಡೆದವರು ಎಂದರ್ಥ. ಹಳ್ಳಿಗಳಿಂದ ಬರುವ ಕಂದಾಯ ಮಾತ್ರವಲ್ಲದೆ ಅಲ್ಲಿನ ಆಡಳಿತವೂ ಕೇಂದ್ರಪ್ರಭುತ್ವದ ಕೈಯಿಂದ ತಪ್ಪಿಹೋಯಿತು. ಈ ಬದಲಾವಣೆಗಳಿಂದಾಗಿ ರಾಜ್ಯದ ಅನೇಕ ಪ್ರದೇಶಗಳು ರಾಜನ ಹತೋಟಿಗೆ ಒಳಪಡದೆ ಇರುವಂತಾಯಿತು. ಇನ್ನೊಂದು ಪ್ರಮುಖ ಬದಲಾವಣೆಯೆಂದರೆ ಭೂಮಾಲೀಕ ಮಧ್ಯವರ್ತಿಗಳ ಹುಟ್ಟು. ಈ ಭೂಮಾಲೀಕರು ಸ್ಥಳೀಯ ಸ್ವಯಂಮಾಧಿಕಾರವನ್ನು ಹೊಂದಿದ್ದರು. ಅರಸರು ಮಧ್ಯ ಪ್ರವೇಶಿಸುವಂತಿರಲಿಲ್ಲ. ಅರಸರು ಮತ್ತು ರೈತರ ನಡುವೆ ಈ ವರ್ಗ ಕಾಣಿಸಿಕೊಂಡು ಸಮಾಜದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಲಾರಂಭಿಸಿತು. ರಾಜ್ಯ ವ್ಯವಸ್ಥೆಯಲ್ಲಿ ಇಷ್ಟೆಲ್ಲ ಬದಲಾವಣೆಗಳು ಕಾಣಿಸಿಕೊಂಡರೂ ಭೂಮಿಯನ್ನು ದಾನವಾಗಿ ಪಡೆದವರು ಪ್ರಭುತ್ವದ ಪರವಾಗಿಯೇ ಇರುತ್ತಿದ್ದರು. ಸಮಾಜದ ಕೆಳಸ್ತರದ ಅಧ್ಯಯನ ಕೈಗೊಂಡಾಗ ದಾನ ನೀಡುವ ವ್ಯವಸ್ಥೆಯೂ ಶ್ರೇಣೀಕೃತ ಸಮಾಜ ವ್ಯವಸ್ಥೆಗೆ ಪೂರಕವಾಗಿಯೇ ಇತ್ತು ಎನ್ನುವುದು ಸ್ಪಷ್ಟವಾಗುತ್ತದೆ.

ಹನ್ನೆರಡನೆಯ ಶತಮಾನದಲ್ಲಿ ಕಾಣಿಸಿಕೊಂಡ ವೀರಶೈವ ಆಂದೋಲನವು ದಾನದ ಸ್ವರೂಪವನ್ನು ಕೆಲವೊಂದು ಬದಲಾವಣೆಗಳನ್ನು ತಂದಿತು. ಅದು ಸಮಾಜದಲ್ಲಿನ ಬ್ರಾಹ್ಮಣ ಏಕಸ್ವಾಮ್ಯವನ್ನು ಖಂಡಿಸಿತು.[19] ವೀರಶೈವರು ದಾನಕ್ಕೆ ಪ್ರತಿಯಾಗಿ ದಾಸೋಹ ಮತ್ತು ಕಾಯಕ ವಿಚಾರಗಳನ್ನು ಸಮಾಜದ ಮುಂದಿಟ್ಟು ಬೆಳೆಸಿದರು. ದಾಸೋಹವು ದಾನದ ಚೌಕಟ್ಟಿನಲ್ಲಿಯೆ ಬರುತ್ತದೆಯಾದರೂ ವೈದಿಕ ಧರ್ಮದ ಹಾಗೂ ರಾಜಪ್ರಭುತ್ವದ ದಾನ ಕಲ್ಪನೆಗಿಂತ ಭಿನ್ನವಾದದ್ದಾಗಿದೆ. ದಾನ ವ್ಯವಸ್ಥೆಯನ್ನು ಸದೆಬಡಿಯಲು ದಾಸೋಹ ತತ್ವವನ್ನು ಶರಣರು ಅನುಷ್ಠಾನಕ್ಕೆ ತಂದರು ಎನ್ನುವುದು ಎಂ.ಎಂ. ಕಲಬುರ್ಗಿ ಅವರ ಅಭಿಪ್ರಾಯ.[20] ಈ ಅಭಿಪ್ರಾಯವನ್ನು ಒಪ್ಪಿಕೊಳ್ಳಬಹುದಾಗಿದೆ. ಏಕೆಂದರೆ, ದಾನವು ಶೋಷಣೆಯ ರೂಪದ ಆರ್ಥಿಕ ಚಟುವಟಿಕೆಯಾಗಿತ್ತು. ಸಮಾಜದಲ್ಲಿ ಆರ್ಥಿಕ ಅಸಮಾನತೆಯನ್ನು ನಿರ್ಮಿಸುವ ಪ್ರಬಲ ಮಾಧ್ಯಮವಾಗಿಯೂ ದಾನವು ಬೆಳೆದಿದ್ದಿತು. ಎಂ.ಎಂ.ಕಲಬುರ್ಗಿ ಅವರ ಮಾತಿನಲ್ಲಿಯೇ ಹೇಳುವುದಾದರೆ, “ದಾನ ಕ್ರಿಯೆಯೆಂಬುದು ಒಂದು ವಸ್ತುವಿನ ಮೇಲಿನ ತನ್ನ ಹಕ್ಕನ್ನು ಇನ್ನೊಬ್ಬರಿಗೆ ಬಿಟ್ಟುಕೊಡುವುದಾಗಿದೆ. ಅಲ್ಲಿ ಆ ವಸ್ತು ಒಬ್ಬನ ಹಕ್ಕನ್ನೇ ಹೊರತಾಗಿ ಇನ್ನೊಬ್ಬನ ಹಕ್ಕಿಗೆ ಒಳಗಾಗುತ್ತದೆ. ಈಗ ನನ್ನ ಹಕ್ಕನ್ನು ಬಿಟ್ಟುಕೊಟ್ಟೆನೆಂಬ ಅಹಂಭಾವ ದಾತೃವಿಗೆ, ನನಗೆ ಹಕ್ಕು ಬಿಟ್ಟುಕೊಟ್ಟನೆಂಬ ದೈನ್ಯಭಾವ ಯಾಚಕನಿಗೆ ಉಂಟಾಗುವುದು ಸಹಜ. ಈ ಉಭಯಭಾವ ಸೂತಕಗಳಿಲ್ಲದೆ ಜರುಗುವ ವಿನಿಮಯ ಕ್ರಿಯೆಯೇ ದಾಸೋಹ. ಇಲ್ಲಿ ವಸ್ತುವಿನ ಮೇಲೆ ನನ್ನ ಹಕ್ಕೂ ಇಲ್ಲ, ನಿನ್ನ ಹಕ್ಕೂ ಇಲ್ಲ; ಶಿವನ ಹಕ್ಕು ಇದೆಯೆಂಬ ಭಾವದಿಂದ ಕೊಡುಕೊಳ್ಳುವಿಕೆ ನದೆಯುತ್ತದೆ. ಅಂದರೆ ಶಿವ ನಮಗೆ ನೀಡಿದುದು ದಾನ, ನಾವು ಪರಸ್ಪರ ವಿನಿಯೋಗಿಸುವುದು ದಾಸೋಹ.”[21] ಸಂಪತ್ತಿನ ವಿನಿಮಯದ ವಿಷಯದಲ್ಲಿ ಹಕ್ಕು ಪ್ರಶ್ನೆಯನ್ನೇ ಮುಖ್ಯವಾಗಿಟ್ಟುಕೊಂಡು, ಅದರ ನಿರಾಕರಣೆಯ ಮೂಲಕ ಅರ್ಥ ಸಮಸ್ಯೆಯನ್ನು ಬಿಡಿಸುವುದೇ ದಾಸೋಹದ ಮೂಲತತ್ವ. ಈ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನದಲ್ಲಿ ದಾಸೋಹ ತತ್ವವು ಯಶಸ್ವಿಯಾಯಿತೇ ಎನ್ನುವ ಪ್ರಶ್ನೆ ಈ ಸಂದರ್ಭದಲ್ಲಿ ಹುಟ್ಟಿಕೊಳ್ಳುತ್ತದೆ. ದಾಸೋಹವು ಸಂಪೂರ್ಣವಾಗಿ ಧಾರ್ಮಿಕ ಚೌಕಟ್ಟಿನೊಳಗೇ ವ್ಯವಹರಿಸುತ್ತಿದ್ದುದು ಕಂಡುಬರುತ್ತದೆ. ದೇವರನ್ನು ತೃಪ್ತಿಪಡಿಸುವುದು ದಾಸೋಹದ ಮೂಲ ಉದ್ದೇಶಗಳಲ್ಲಿ ಒಂದು. ಲಿಂಗವನ್ನು ಸಾಕ್ಷಾತ್ಕರಿಸಿಕೊಳ್ಳುವುದಕ್ಕೆ ದಾಸೋಹವು ಮಾಧ್ಯಮ ಎನ್ನುವ ಬಸವಣ್ಣನವರ ಮಾತು ಇದನ್ನೇ ಸೂಚಿಸುತ್ತದೆ. ಆದರೂ ಅಂದು ಪ್ರಚಲಿತದಲ್ಲಿದ್ದ ದಾನ ಕ್ರಿಯೆಗೆ ಎದುರಾಗಿ ದಾಸೋಹ ತತ್ವವು ಹುಟ್ಟಿಕೊಂಡಿರುವುದು ದಾನದ ಕುರಿತು ಭಿನ್ನವಾಗಿ ಆಲೋಚಿಸುವಂತೆ ಮಾಡುತ್ತದೆ.

 

[1] ಬಿ.ಸುರೆಂದ್ರರಾವ್, ಸಾಮಾಜಿಕ ಪ್ರಕ್ರಿಯೆಗಳು ಮತ್ತು ಧಾರ್ಮಿಕ ಆಂದೋಲನಗಳು, ಕರ್ನಾಟಕ ಚರಿತ್ರೆ, ಸಂಪುಟ ೨, (ಸಂ.) ಬಿ. ಸುರೇಂದ್ರರಾವ್, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೭, ಪು.೨೧೩-೨೧೪

[2] ಅದೇ, ಪು. ೨೧೪

[3] ವಿ.ಎಸ್. ಎಲಿಜಬೆತ್, ರಾಷ್ಟ್ರಕೂಟ ಪ್ರಾಬಲ್ಯದ ಸಮಯದಲ್ಲಿದ್ದ ಕರ್ನಾಟಕದ ರಾಜಕೀಯ ಸ್ವರೂಪ, ಕರ್ನಾಟಕ ಚರಿತ್ರೆ, ಸಂಪುಟ ೨, (ಸಂ.) ಪ್ರೊ. ಬಿ. ಸುರೇಂಂದ್ರರಾವ್, ಕನ್ನಡ ವಿಶ್ವವಿದ್ಯಾಲಯ, ಹಂಪಿ ೧೯೯೭, ಪು.೨೯-೩೨

[4] ಜಿ.ಎಸ್. ದೀಕ್ಷಿತ್, ಲೋಕಲ್ ಸೆಲ್ಫ್-ಗೌರ್ನ್‍ಮೆಂಟ್ ಇನ್ ಮೆಡೀವಲ್ ಕರ್ನಾಟಕ, ಧಾರವಾಡ, ೧೯೬೪, ಪು. ೨೬, ೫೯

[5] ಎಂ.ಟಿ.ಎಸ್. ನಾರಾಯಣರಾವ್, ರಿ ಇಂಟರ್‌ಪ್ರಿಟೇಷನ್ಸ್ ಇನ್ ಸೌತ್ ಇಂಡಿಯನ್ ಹಿಸ್ಟರಿ, ತ್ರಿವೇಂಡ್ರಂ, ೧೯೭೭, ಪು. ೧೯

[6] ಆರ್.ಎಸ್. ಶರ್ಮ, ಪೂರ್ವೋಕ್ತ, ಪು. ೧೫೯; ಶರ್ಮ ಅವರ ಪ್ರಕಾರ ಬ್ರಾಹ್ಮಣರಿಗೆ, ಧಾರ್ಮಿಕ ಸಂಸ್ಥೆಗಳಿಗೆ ಹಾಗೂ ಇನ್ನಿತರ ಅಧಿಕಾರಿ ವರ್ಗದವರಿಗೆ ದಾನ ನೀಡುತ್ತಿದ್ದುದು ರಾಜ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತಿತ್ತು. ಇದು ಸಾಮಂತ ರಾಜಕಾರಣಕ್ಕೂ ಕಾರಣವಾಯಿತು. ಇದರ ಪರಿಣಾಮವಾಗಿ ವ್ಯಾಪಾರ-ವಾಣಿಜ್ಯ ಹಾಗೂ ನಗರ ಕೇಂದ್ರಗಳುಯ್ ಅವನತಿಯತ್ತ ಸಾಗಿದವು.

[7] ಎ.ಕ.೨, ಶ್ರವಣಬೆಳಗೊಳ ೩೮, ಪು. ೧೪, ಕ್ರಿ.ಶ. ೮ನೆಯ ಅಹತಮಾನ

[8] ಎ,ಎಸ್. ಆಲ್ಟೇಕರ್, ರಾಷ್ಟ್ರಕೂಟಾಸ್ ಆಂಡ್ ದೇಯರ್ ಟೈಮ್ಸ್, ಪೂಣಾ, ೧೯೬೭, ಪು. ೩೦೭

[9] ಎ,ಕ. ೧೧, ಪು. ೯೨, ಕ್ರಿ.ಶ. ೮೦೦

[10] ವಿ.ಎಸ್. ಎಲಿಜಬೆತ್, ಪೂರ್ವೋಕ್ತ, ಪು. ೧೨

[11] ಎಂ. ಚಿದಾನಂದಮೂರ್ತಿ, ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಮೈಸೂರು, ೧೯೭೯, ಪು. ೩೯

[12] ಜೆ.ಎಂ. ನಾಗಯ್ಯ, ಆರನೆಯ ವಿಕ್ರಮಾದಿತ್ಯನ ಶಾನ್ಸನಗಳು- ಒಂದು ಅಧ್ಯಯನ, ಬೆಳಗಾವಿ, ೧೯೯೨, ಪು. ೮೦

[13] ಅದೇ, ಇಲ್ಲಿ ಪುನರ್‌ದತ್ತಿ ಎನ್ನುವ ಪದವನ್ನು ಕಳೆದುಹೋದ ದತ್ತಿಯನ್ನು ಮತ್ತೊಮ್ಮೆ ಪಡೆಯುವುದು ಎಂಬರ್ಥದಲ್ಲಿ ಹೇಳಲಾಗಿದೆ; ಸೌ.ಇ.ಇ. ೯-೧, ೨೦೭, ಕ್ರಿ.ಶ. ೧೧೨೪

[14] ಎ.ಕ.೫, ತಿ.ನರಸೀಪುರ ೮೮, ಕ್ರಿ.ಶ. ೧೨೭೬; ಶಾಸನಗಳು ಅರಸರ ಮುಖವಾಣಿಗಳಾಗಿದ್ದವು. ಹೆಚ್ಚಿನ ಶಾಸನಗಳು ರಾಜಾಜ್ಞೆಗಳೇ ಆಗಿದ್ದರಿಂದ ಅವು ರಾಜಪ್ರಭುತ್ವದ ಪ್ರಮುಖ ಮಾಧ್ಯಮಗಳೂ ಆಗಿರುತ್ತಿದ್ದವು.

[15] ಎಸ್. ಗುರುರಾಜಾಚಾರ್, ಪೂರ್ವೋಕ್ತ, ಪು. ೧೮೯

[16] ಎ.ಕ.೫, ಕಡೂರು ೫೨

[17] ಎ.ಕ.೬, ಚಿಕ್ಕಮಗಳೂರು ೧೩೭, ಕ್ರಿ.ಶ. ೧೧೩೦

[18] ಎ.ಕ.೬, ಕಡೂರು ೪೯, ಕ್ರಿ.ಶ. ೧೨೯೧

[19] ಬಿ. ಸುರೇಂದ್ರರಾವ್, ಪೂರ್ವೋಕ್ತ, ಪು. ೨೩೯

[20] ಎಂ.ಎಂ.ಕಲಬುರ್ಗಿ, ಮಾರ್ಗ-೧, ಬೆಂಗಳೂರು, ೧೯೯೫, ಪು.೨೭೬-೨೭೯

[21] ಅದೇ, ಪು.೨೭೭