.೨ ಕುಟುಂಬ

ಸಾಮಾಜಿಕ ರಚನೆಯಲ್ಲಿ ಕುಟುಂಬ ಒಂದು ಪ್ರಮುಖ ಘಟಕ. ಕುಟುಂಬದ ರಚನೆ ಅಪಾರ ವೈವಿಧ್ಯವನ್ನು ಹೊಂದಿದ್ದು ಯಾವುದೇ ಸರಳೀಕೃತ ವ್ಯಾಖ್ಯಾನದಿಂದ ಅರ್ಥೈಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಕುಟುಂಬದ ವ್ಯಾಪ್ತಿಯೊಳಗೆ ಬರುವ ಪ್ರಮುಖ ವಿಚಾರಗಳೆಂದರೆ ಕುಟುಂಬದ ಗಾತ್ರ, ಕುಟುಂಬದ ಯಜಮಾನಿಕೆ, ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳು, ಮಹಿಳೆಯರ ಸ್ಥಾನ, ವಿವಾಹ ಪದ್ಧತಿ ಮುಂತಾದವು. ಸಾಮಾನ್ಯಾರ್ಥದಲ್ಲಿ ಕುಟುಂಬವನ್ನು ಈ ರೀತಿ ಅರ್ಥೈಸಿಕೊಳ್ಳಬಹುದಾಗಿದೆ, “ಅದು ಸಾರ್ವತ್ರಿಕವಾದ, ಖಾಯಂ ಆದ, ವ್ಯಾಪಕವಾದ ವ್ಯಾಸ್ಥೆ; ಸಾಮಾಜಿಕವಾಗಿ ಅಂಗೀಕೃತವಾದ ಲೈಂಗಿಕ ಸಂಪರ್ಕ, ಸಂತಾನಕ್ರಿಯೆ, ಸಮಾನ ವಸತಿ ಕೌಟುಂಬಿಕ ಕಾರ್ಯಗಳು, ಆರ್ಥಿಕ ಸಹಕಾರ ಈ ಮುಂತಾದ ಲಕ್ಷಣಗಳನ್ನು ಒಳಗೊಂಡಿರುತ್ತದೆ”.[1] ಅಧ್ಯಯನದ ಈ ಕಾಲಾವಧಿಯಲ್ಲಿ ಕುಟುಂಬ ವ್ಯವಸ್ಥೆ ಬಹುಮಟ್ಟಿಗೆ ಸಾಂಪ್ರದಾಯಕ ವಿಧಿಗಳನ್ನು ಆಧರಿಸಿತ್ತು ಎನ್ನುವುದು ಶಾಸನಗಳಿಂದ ತಿಳಿದುಬರುತ್ತದೆ. ಪಿತೃಪ್ರಧಾನ ವ್ಯವಸ್ಥೆ, ಬಹುಪತ್ನಿತ್ವ, ಸತಿಪದ್ಧತಿ ಮುಂತಾದವು ಸಮಾಜದ ಪ್ರಧಾನ ಲಕ್ಷಣಗಳಾಗಿದ್ದವು.

ಬಹುಪತ್ನಿತ್ವವು ಕ್ರಿ.ಶ. ೮ರಿಂದ ೧೪ನೆಯ ಶತಮಾನದವರೆಗೆ ಯಾವ ಅಡೆತಡೆಯೂ ಇಲ್ಲದೆ ಮುಂದುವರಿದುಕೊಂಡು ಬಂದಿರುವುದಂತೂ ಸ್ಪಷ್ಟ. ಪ್ರತಿಯೊಂದು ಅರಸುಮನೆತನಕ್ಕೆ ಸಂಬಂಧಿಸಿದ ಶಾಸನಗಳಲ್ಲಿ ಈ ವಿವರಗಳು ಸಿಗುತ್ತವೆ. ಅಂದಿನ ಸಮಾಜ ಬಹುಪತ್ನಿತ್ವವನ್ನು ಒಪ್ಪಿಕೊಂಡಿತ್ತು. ಇದರರ್ಥ ಸಮಾಜದ ಎಲ್ಲ ವರ್ಗಗಳಲ್ಲಿಯೂ ಈ ವ್ಯವಸ್ಥೆ ಸಮಾನವಾಗಿತ್ತು ಎಂದಲ್ಲ. ಬಹುಪತ್ನಿತ್ವವನ್ನು ರಾಜಪ್ರಭುತ್ವದ ಒಂದು ಲಕ್ಷಣ ಎಂಬುದಾಗಿ ಪರಿಗಣಿಸಲಾಗಿತ್ತು. ಸಾಮಾನ್ಯ ಜನಸಮುದಾಯದಲ್ಲಿ ಈ ಪದ್ಧತಿ ಪ್ರಚಾರದಲ್ಲಿತ್ತು ಎನ್ನುವುದಕ್ಕೆ ಸಾಕಷ್ಟು ಆಧಾರಗಳು ಸಿಗುವುದಿಲ್ಲ. ಮನುಸ್ಮೃತಿಯಲ್ಲಿ ಈ ವ್ಯವಸ್ಥೆಯ ಕುರಿತು ಹೇಳಲಾಗಿದೆ.[2] ಬ್ರಾಹ್ಮಣರು ನಾಲ್ಕು ಜನರನ್ನು, ಕ್ಷತ್ರಿಯ ಮೂರು ಜನರನ್ನು, ವೈಶ್ಯ ಇಬ್ಬರನ್ನು, ಶೂದ್ರ ಒಬ್ಬಳನ್ನು ಮದುವೆಯಾಗಬಹುದೆಂದು ಹೇಳಲಾಗಿದೆ.[3] ಇದು ಬಹು ಪತ್ನಿತ್ವ ವ್ಯವಸ್ಥೆ ವೈದಿಕ ಹಿನ್ನೆಲೆಯ ಚಾತುವರ್ಣ ಪದ್ಧತಿಯನ್ನು ಸಂಪೂರ್ಣವಾಗಿ ಅವಲಂಬಿಸಿ ಕೊಂಡಿರುವುದನ್ನು ಸೂಚಿಸುತ್ತದೆ. ಚಕ್ರವರ್ತಿಗಳು ಮತ್ತು ಇತರ ಸಾಮಂತ ಅರಸರು ಅನೇಕ ಮಂದಿ ರಾಣಿಯರನ್ನು ಹೊಂದಿರುತ್ತಿದ್ದರು. ಅದೊಂದು ಪ್ರತಿಷ್ಠೆಯ ವಿಷಯವೂ ಆಗಿತ್ತು.

ಕಲ್ಯಾಣಿ ಚಾಲುಕ್ಯರ ಸೋಮೇಶ್ವರ, ಆರನೆಯ ವಿಕ್ರಮಾದಿತ್ಯ, ಹೊಯ್ಸಳ ವಿಷ್ಣುವರ್ಧನ, ಬಲ್ಲಾಳ ಮುಂತಾದ ಅನೇಕ ಅರಸರು ಬಹುಪತ್ನಿಯರನ್ನು ಹೊಂದಿದ್ದರು. ಅರಸರಿಗೆ ಪಟ್ಟದ ರಾಣಿ ಒಬ್ಬಳೇ ಇರುತ್ತಿದ್ದು ಕಿರಿಯ ರಾಣಿಯರು ಅನೇಕರಿರುತ್ತಿದ್ದರು. ರಾಣಿಯರು ಪರಸ್ಪರ ಸವತಿಮತ್ಸರದ ಕುರಿತಾಗಿಯೂ ಶಾಸನಗಳಲ್ಲಿ ಉಲ್ಲೇಖಗಳಿವೆ. ಹಿರಿಯ ರಾಣಿಯರು ಕಿರಿಯ ರಾಣಿಯರನ್ನು ತಮ್ಮ ಹತೋಟಿಯಲ್ಲಿಡಲು ಪ್ರಯತ್ನಿಸುತ್ತಿದ್ದರು. ಇದಕ್ಕೆ ಉತ್ತಮ ಉದಾಹರಣೆಗಳೆಂದರೆ ಶಾಸನಗಳಲ್ಲಿ ಉಲ್ಲೇಖಿತವಾಗಿರುವ, ‘ಸವತಿಮದಭಂಜನೆ’, ‘ದುಷ್ಟದರ್ಪಿಷ್ಟ ಸವತಿಶಿರೋವಜ್ರಮುಷ್ಟಿ’, ‘ಸವತಿಗಂಧಹಸ್ತಿ’, ‘ಸವತಿಗಜಕೇಸರಿ’ ಮುಂತಾದ ಪದನಾಮಗಳು.[4] ರಾಜನ ಹಿರಿಯ ಪತ್ನಿಯನ್ನು ಅಗ್ರಮಹಿಷಿ, ಪಿರಿಯರಸಿ, ಪಟ್ಟಮಹಾದೇವಿ ಮುಂತಾದ ಹೆಸರುಗಳಿಂದ ಕರೆಯಲಾಗುತ್ತಿತ್ತು. ರಾಜ ಮನೆತನದ ಸ್ತ್ರೀಯರಲ್ಲಿ ಕೆಲವರು ರಾಜತಂತ್ರದಲ್ಲಿ ನಿಪುಣರಾಗಿದ್ದು ಆಡಳಿತಾತ್ಮಕ ವಿಷಯದಲ್ಲಿ ಸಲಹೆ ಸೂಚನೆಗಳನ್ನು ನೀಡುವ, ರಾಜ್ಯದ ವಿವಿಧ ಪ್ರದೇಶಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವ ಕೆಲಸವನ್ನು ಮಾಡುತ್ತಿದ್ದರು. ಬಹುಪತ್ನಿತ್ವಕ್ಕೆ ಸಾಮಾಜಿಕ ಮನ್ನಣೆ ದೊರಕಿಸಿಕೊಂಡಿರುವುದು ರಾಜಪ್ರಭುತ್ವ ಮತ್ತು ಧಾರ್ಮಿಕ ಪ್ರಭುತ್ವದ ಜಂಟಿ ಪ್ರಯತ್ನವಾಗಿ ಕಂಡುಬರುತ್ತದೆ. ಈ ವ್ಯವಸ್ಥೆಯನ್ನು ಸಮಾಜದಲ್ಲಿ ಒಪ್ಪಿತವಾಗಿಸಲು ಬೇಕಾದ ಎಲ್ಲಾ ಮಿಥ್ಯೆಗಳನ್ನು ಈ ಎರಡು ವರ್ಗಗಳು ಸೃಷ್ಟಿಸಿಕೊಂಡವು.

ಸಮಾಜದಲ್ಲಿ ಸ್ತ್ರೀಯ ಸ್ಥಾನಮಾನ ಅಧೀನ ಸ್ವರೂಪದ್ದಾಗಿತ್ತು. ವೈದಿಕ ಮೂಲದ ಧರ್ಮಗ್ರಂಥಗಳು ಹೆಣ್ಣಿಗೆ ಸ್ವಾತಂತ್ರ್ಯ ನೀಡುವುದನ್ನು ವಿರೋಧಿಸಿದವು. ಸಮಾಜ ಪುರುಷ ಪ್ರಧಾನವಾಗಿದ್ದು ಅದಕ್ಕೆ ಪೂರಕವಾದ ಕಾನೂನು, ಕಾಯಿದೆಗಳು ರಚನೆಗೊಂಡಿದ್ದವು. ಹೆಣ್ಣಿಗೆ ಸ್ವಾತಂತ್ರ್ಯ ಇರಲಿಲ್ಲ ಎನ್ನುವುದಕ್ಕೆ ಬಾಲ್ಯವಿವಾಹ, ಬಹುಪತ್ನಿತ್ವ, ಸತಿಪದ್ಧತಿ, ದೇವದಾಸಿ ಪದ್ಧತಿಗಳಂಥ ಅನಿಷ್ಟ ಪದ್ಧತಿಗಳೇ ಜ್ವಲಂತ ಸಾಕ್ಷಿಗಳಾಗಿವೆ. ಪುರುಷನಿಗೆ ಸರಿಸಮನಾಗಿ ನಿಂತು ಆಡಳಿತ ನಡೆಸಿ ಸಮಾಜದಲ್ಲಿ ಉನ್ನತಸ್ಥಾನವನ್ನು ಹೊಂದಿದ ಮಹಿಳೆಯರ ಸಂಖ್ಯೆ ತೀರಾ ಕಡಿಮೆ. ಅರಸುಮನೆತನಗಳಿಗೆ ಸಂಬಂಧಿಸಿದ ಮಹಿಳೆಯರಷ್ಟೇ ಆಡಳಿತದಲ್ಲಿ ಪಾಲ್ಗೊಳ್ಳುತ್ತಿದ್ದರು. ಅರಸ, ಮಹಾಮಂಡಳೇಶ್ವರ, ಸಾಮಂತ ಮತ್ತು ದಂಡನಾಯಕರುಗಳ ಮಡದಿಯರು ತಮ್ಮ ಪತಿಯೊಂದಿಗೆ ಆಡಳಿತದಲ್ಲಿ ಭಾಗವಹಿಸುತ್ತಿದ್ದರು. ಅದೇ ರೀತಿ ಕೆರೆ, ಬಾವಿ ನಿರ್ಮಾಣ, ದಾನದತ್ತಿಗಳನ್ನು ನೀಡುವಲ್ಲಿಯೂ ಸ್ವಂತ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೆ ಶಾಸನ ಅಧ್ಯಯನಕಾರರು ಈ ವಿವರಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಟ್ಟಂತೆ ಕಂಡುಬರುವುದಿಲ್ಲ. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ಈ ವಿವರಗಳನ್ನಷ್ಟೇ ಇಟ್ಟುಕೊಂಡು ಅಂದಿನ ಸ್ತ್ರೀ ಸಮಾಜದ ಕುರಿತು ಯಾವುದೇ ತೀರ್ಮಾನಗಳನ್ನೂ ತೆಗೆದುಕೊಳ್ಳಲು ಸಾಧ್ಯವಿಲ್ಲ ಎನ್ನುವುದು. ಏಕೆಂದರೆ ಮಹಿಳೆಯರ ಸ್ಥಾನ ಎಂದಾಗ ಅದು ಕೇವಲ ರಾಣಿಯರು ಹೊಂದಿದ್ದ ಸ್ಥಾನಮಾನ ಎಂದಾಗುವುದಿಲ್ಲ. ಮಹಿಳೆಯರ ಚರಿತ್ರೆಯ ಅಧ್ಯಯನ ನಡೆಸುವಾಗ ರಾಣಿಯರ ಚರಿತ್ರೆ ಒಂದು ಭಾಗ ಮಾತ್ರ. ಅರಸಕೇಂದ್ರಿತ ಚರಿತ್ರೆಯಂತೆಯೇ ರಾಣಿಕೇಂದ್ರಿತ ಚರಿತ್ರೆ ಒಟ್ಟು ಮಹಿಳಾ ಸಮಾಜವನ್ನು ವ್ಯಾಪಿಸಿ ಬಿಡುವ ಸಾಧ್ಯತೆಯೂ ಇದೆ. ಮಧ್ಯಮವರ್ಗ ಮತ್ತು ಕೆಳವರ್ಗದ ಮಹಿಳೆಯರು ಅಂದಿನ ಸಮಾಜದಲ್ಲಿ ಹೊಂದಿದ್ದ ಸ್ಥಾನಮಾನದ ಕುರಿತು ಹೆಚ್ಚಿನ ಮಾಹಿತಿಗಳು ಸಿಗುವುದಿಲ್ಲ.

ಸತಿಪದ್ಧತಿ ಕರ್ನಾಟಕದಲ್ಲಿ ಬಹಳ ಹಿಂದಿನಿಂದಲೂ ಅಸ್ತಿತ್ವದಲ್ಲಿತ್ತು ಎತ್ತುವುದಕ್ಕೆ ಸಾಕಷ್ಟು ಆಧಾರಗಳು ಲಭ್ಯವಿವೆ. ಇದು ಪುರುಷಪ್ರಧಾನ ವ್ಯವಸ್ಥೆಯನ್ನು ಸೂಚಿಸುವ ಒಂದು ಪದ್ಧತಿಯಾಗಿದೆ. ಪತಿ ಸತ್ತಾಗ ಆತನ ಪತ್ನಿ ಸತಿ ಹೋಗುವುದರ ಹಿಂದಿನ ಉದ್ದೇಶಗಳ ಅಧ್ಯಯನ ನಡೆಸಿದಾಗ ಪುರುಷಪ್ರಧಾನ ವ್ಯವಸ್ಥೆ ಎಷ್ಟು ಗಟ್ಟಿಯಾಗಿತ್ತೆಂಬುದು ತಿಳಿದುಬರುತ್ತದೆ. ಸತಿ ಪದ್ಧತಿಯನ್ನು ಅಧಿಕೃತಗೊಳಿಸುವ ಉದ್ದೇಶದಿಂದ, ವೈದಿಕ ಮೂಲದ ಕಥೆ, ಪುರಾಣಗಳು ಹುಟ್ಟಿಕೊಂಡವು. ಮಹಾಸತಿ ಎನ್ನುವ ಕಲ್ಪನೆಯೂ ಈ ಹಿನ್ನೆಲೆಯಿಂದಲೇ ಬಂತು. ಈ ಪದ್ಧತಿಗೊಂದು ಧಾರ್ಮಿಕ ಚೌಕಟ್ಟನ್ನು ನಿರ್ಮಿಸಿ ವೈಭವೀಕರಿಸುವ ಕೆಲಸವನ್ನು ಮಾಡಲಾಯಿತು. ಇದೊಂದು ನಂಬಿಕೆಯ, ಆಚರಣೆಯ ವಸ್ತುವಾಗಿಯೂ ಪರಿವರ್ತನೆಗೊಂಡಿತು.[5] ಮಹಾಸತಿ ಆಚರಣೆ ಬಹುಪಾಲು ಕೆಳವರ್ಗದ ಜನರ ಆಚರಣೆಯಾಗಿಯೇ ಗುರುತಿಸಿಕೊಂಡಿದೆ. ಹೆಣ್ಣಿಗೆ ಪಾವಿತ್ರ್ಯತೆಯ ಪಟ್ಟಕಟ್ಟಿ ಕತ್ತಲೆಕೋಣೆಯಲ್ಲಿ ಉಳಿಯುವಂತೆ ಮಾಡಿದ ಸಮಾಜ ಅವಳು ಸತ್ತ ಬಳಿಕ (ಸಹಗಮನ, ಅನುಗಮನ ಮುಂತಾದ ಸಂದರ್ಭಗಳಲ್ಲಿ) ಪೂಜಿಸುವ, ದೈವತ್ವಕ್ಕೇರಿಸುವ ಕೆಲಸವನ್ನು ಮಾಡಿತು.

ಅಂದಿನ ಸಮಾಜದಲ್ಲಿ ಹೆಣ್ಣಿನ ಶೋಷಣೆ ಎಷ್ಟು ತೀವ್ರವಾಗಿತ್ತು ಎನ್ನುವುದಕ್ಕೆ ಶಾಸನ ಮತ್ತು ಸಾಹಿತ್ಯ ಕೃತಿಗಳಲ್ಲಿ ಸಿಗುವ ದೇವದಾಸಿ, ಪಾತರ, ಬಸವಿ, ಸೂಳೆ ಮುಂತಾದ ಪದಗಳು ಸಾಕ್ಷಿಯಾಗಿವೆ.[6] ಇವರೆಲ್ಲರೂ ಸಮಾಜದಲ್ಲಿ ದಾಸಿಗಳಾಗಿದ್ದರು ಎನ್ನುವುದಂತೂ ಸ್ಪಷ್ಟ. ಸ್ತ್ರೀಯರನ್ನು ದೇವಾಲಯಗಳ ಸೇವೆಗಾಗಿ ಬಿಡಲಾಗುತ್ತಿತ್ತು. ಈ ಉದ್ದೇಶಕ್ಕಾಗಿಯೇ ದೇವಾಲಯಗಳಲ್ಲಿ ಅಂಗಭೋಗ-ರಂಗಭೋಗಗಳ ಸೇವೆಯನ್ನು ಹೆಚ್ಚಿಸಲಾಯಿತು. ವೇಶ್ಯಾಗಾರಿಕೆಯನ್ನು ಒಂದು ವೃತ್ತಿಯನ್ನಾಗಿ ಪರಿಗಣಿಸಿ ತೆರಿಗೆಯನ್ನು ವಿಧಿಸಲಾಗಿತ್ತು.[7] ಹೆಣ್ಣಿನ ಲೈಂಗಿಕ ಶೋಷಣೆಯನ್ನು ಅಪರಾಧ ಎಂಬುದಾಗಿ ಪರಿಗಣಿಸಿರಲಿಲ್ಲ. ಈ ರೀತಿ ಶೋಷಣೆಗೊಳಪಟ್ಟವರಲ್ಲಿ ಕೆಳವರ್ಗದ ಮಹಿಳೆಯರಷ್ಟೆ ಅಲ್ಲದೆ ಮೇಲುವರ್ಗದ ಮಹಿಳೆಯರು ಇರುತ್ತಿದ್ದರು. ಇವರು ನರ್ತನ-ಗಾಯನಗಳಲ್ಲಿ, ಸಂಗೀತವಾದ್ಯಗಳಲ್ಲಿ ಮತ್ತು ಪಗಡೆ, ಚದುರಂಗ ಆಟಗಳಲ್ಲಿ ಪರಿಣತರಾಗಿರಬೇಕಾಗಿತ್ತು. ಪುರುಷಪ್ರಧಾನ ಸಮಾಜವನ್ನು ತಮ್ಮ ಗಾನ ನರ್ತನಗಳಿಂದ ರಂಜಿಸುವ ಒತ್ತಾಯವೂ ಇವರ ಮೇಲಿತ್ತು. ಒಟ್ಟಾರೆಯಾಗಿ ಹೆಣ್ಣು ತನ್ನ ಬದುಕಿನ ಬಗ್ಗೆ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಹುಟ್ಟಿನಿಂದ ಸಾವಿನವರೆಗೆ ಇತರರ ನಿರ್ದೇಶನದಂತೆ ಜೀವನ ನಡೆಸಬೇಕಾಗಿತ್ತು. ಹನ್ನೆರಡನೆಯ ಶತಮಾನದಲ್ಲಿ ಕಾಣಿಸಿಕೊಂಡ ವೀರಶೈವ ಆಂದೋಲನವು ಸಂಪ್ರದಾಯಬದ್ಧ ಸಮಾಜ ಹೆಣ್ಣನ್ನು ಕಾಣುತ್ತಿದ್ದ ನೀತಿಯನ್ನು ವಿರೋಧಿಸಿತು. ಜಾತಿ ಪದ್ಧತಿಯನ್ನು ಸಡಿಲೀಕರಿಸಿ ಅಂತರ್ಜಾತೀಯ ವಿವಾಹಕ್ಕೆ ಪ್ರೋತ್ಸಾಹ ನೀಡಿತು. ಆದರೆ ಇದಕ್ಕೆ ಸಮಾಜದ ಎಲ್ಲ ವರ್ಗಗಳ ಸಹಕಾರ ಸಿಗಲಿಲ್ಲ. ಏಕೆಂದರೆ ಸಂಪ್ರದಾಯಬದ್ಧ ಸಮಾಜವು ಕುಟುಂಬದ ರಚನೆಯನ್ನು ಜಾತಿ ಆಧಾರಿತ ಸಮಾಜ ವ್ಯವಸ್ಥೆಯ ರೀತಿಯಲ್ಲಿಯೇ ಮುಂದುವರಿಸಿಕೊಂಡು ಹೋಗುವ ಉದ್ದೇಶವನ್ನು ಹೊಂದಿತ್ತು.

.೩ ಶಿಕ್ಷಣ

ಅಧ್ಯಯನದ ಈ ಕಾಲಾವಧಿಯಲ್ಲಿ ಶಿಕ್ಷಣವು ವೈದಿಕ ಹಿನ್ನೆಲೆಯಿಂದಷ್ಟೇ ವ್ಯಾಖ್ಯಾನಗೊಂಡಿತ್ತು ಎನ್ನುವುದು ತಿಳಿದುಬರುತ್ತದೆ. ಶಿಕ್ಷಣವನ್ನು ಸೀಮಿತಾರ್ಥದಲ್ಲಿ ಇಲ್ಲವೇ ಸಂಕುಚಿತಾರ್ಥದಲ್ಲಿ ಪರಿಭಾವಿಸಲಾಗಿತ್ತು. ಗುರು ಮತ್ತು ಶಿಷ್ಯ ಇವರಿಬ್ಬರೂ ಸೀಮಿತ ವರ್ಗಕ್ಕೆ ಸೇರಿದವರಾಗಿರುತ್ತಿದ್ದರು. ಶಿಕ್ಷಣವು ಎಲ್ಲ ಜನವರ್ಗಗಳ ಸೊತ್ತು ಎಂದು ಭಾವಿಸುವ ಬದಲು ಕೆಲವೇ ವರ್ಗಗಳ ಸ್ವಂತ ಆಸ್ತಿ ಎಂಬುದಾಗಿ ತೀರ್ಮಾನಿಸಲಾಗಿತ್ತು. ಶ್ರೇಣೀಕೃತ ಸಮಾಜ ವ್ಯವಸ್ಥೆಯಲ್ಲಿ ಪ್ರತಿಯೊಂದು ಜಾತಿಗೂ ಒಂದೊಂದು ವೃತ್ತಿಯನ್ನು ನಿಗದಿಪಡಿಸಲಾಗುತ್ತಿತ್ತು. ಶಿಕ್ಷಣ ಬ್ರಾಹ್ಮಣರ ವೃತ್ತಿಯಾಗಿತ್ತು. ಅಧ್ಯಯನ ಮತ್ತು ಅಧ್ಯಾಪನ ಮಾಡುವವರು ಬ್ರಾಹ್ಮಣರು ಎನ್ನುವುದಕ್ಕೆ ಸಾಮಾಜಿಕ ಅಂಗೀಕಾರ ಲಭಿಸಿತ್ತು. ಪ್ರಾಚೀನ ಕಾಲದಿಂದಲೂ ಶಿಕ್ಷಣ ಖಾಸಗಿಯಾಗಿತ್ತೇ ವಿನಹ ಸಾರ್ವಜನಿಕವಾಗಿರಲಿಲ್ಲ.[8] ರಾಷ್ಟ್ರಕೂಟರಿಂದ ಹೊಯ್ಸಳರವರೆಗಿನ ಅವಧಿಯಲ್ಲಿ ಶಿಕ್ಷಣವು ಧರ್ಮದೊಂದಿಗೆ ಸಂಪೂರ್ಣವಾಗಿ ಬೆಸೆದುಕೊಂಡಿತ್ತು. ಬ್ರಾಹ್ಮಣರು ಧಾರ್ಮಿಕ ಆಚರಣೆಗಳನ್ನು ನಡೆಸುವವರಾಗಿದ್ದರಿಂದ ಶಿಕ್ಷಣ ಅವರಿಗೆ ಮಾತ್ರ ಅನಿವಾರ್ಯ ಎನ್ನುವ ನಂಬಿಕೆ ಸಮಾಜದಲ್ಲಿತ್ತು. ಶಿಕ್ಷಣವು ಪ್ರತಿಯೊಬ್ಬ ಮನುಷ್ಯನ ಬದುಕಿಗೆ ಅವಿಭಾಜ್ಯ ಎನ್ನುವ ನಂಬಿಕೆ ಸಮಾಜದಲ್ಲಿತ್ತು. ಶಿಕ್ಷಣವು ಪ್ರತಿಯೊಬ್ಬ ಮನುಷ್ಯನ ಬದುಕಿಗೆ ಅವಿಭಾಜ್ಯ ಅಂಗ ಎನ್ನುವ ವಾಸ್ತವಾಂಶವನ್ನು ಉದ್ದೇಶಪೂರ್ವಕವಾಗಿಯೇ ಸಮಾಜದಲ್ಲಿ ಮರೆಮಾಚಲಾಗಿತ್ತು ಎನ್ನುವುದಂತೂ ಸ್ಪಷ್ಟ. ರಾಷ್ಟ್ರಕೂಟರಿಂದ ಹೊಯ್ಸಳರವರೆಗಿನ ಅವಧಿಯಲ್ಲಿ ಶಿಕ್ಷಣವನ್ನು ನೀಡುತ್ತಿದ್ದ ಕೇಂದ್ರಗಳೆಂದರೆ, ಅಗ್ರಹಾರಗಳು, ಬ್ರಹ್ಮಪುರಿಗಳು, ಘಟಿಕಸ್ತಾನಗಳು, ಮಠಗಳು ಮತ್ತು ದೇವಾಲಯಗಳು.[9]

ಬ್ರಾಹ್ಮಣರ ಜನವಸತಿ ಇರುವ ಪ್ರದೇಶಗಳನ್ನು ಅಗ್ರಹಾರಗಳು ಎಂಬುದಾಗಿ ಕರೆಯಲಾಗುತ್ತಿತ್ತು. ಬ್ರಾಹ್ಮಣರಿಗೆ ವಾಸಿಸಲು ದಾನದ ರೂಪದಲ್ಲಿ ಆ ಪ್ರದೇಶಗಳನ್ನು ನೀಡಲಾಗುತ್ತಿತ್ತು. ಅಂಥ ಗ್ರಾಮಗಳನ್ನು ಬ್ರಾಹ್ಮಣರೇ ನೋಡಿಕೊಳ್ಳುತ್ತಿದ್ದರು. ಈ ವ್ಯವಸ್ಥೆಯನ್ನು ಬ್ರಹ್ಮದೇಯ ಎಂಬುದಾಗಿ ಕರೆಯಲಾಗಿದೆ.[10] ಬ್ರಾಹ್ಮಣರು ಬ್ರಹ್ಮದೇಯ ಭೂಮಿಯ ಮಹಾಜನರಾಗಿರುತ್ತಿದ್ದರು. ಅವರು ವಿದ್ಯಾವಂತರಾಗಿರುವುದೇ ಈ ಎಲ್ಲ ಸೌಕರ್ಯಗಳಿಗೆ ಅರ್ಹತೆಯಾಗಿತ್ತು. ಅಧ್ಯಾಪನ ಎನ್ನುವುದು ಬ್ರಾಹ್ಮಣರ ಒಂದು ಧಾರ್ಮಿಕ ಕರ್ತವ್ಯವಾಗಿತ್ತು. ಅವರು ಬೌದ್ಧಿಕ ಮತ್ತು ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ನಿರತರಾಗಿರುತ್ತಿದ್ದರು.[11]ಅಗ್ರಹಾರಗಳ ಕುರಿತಾದ ಅನೇಕ ಶಾಸನಗಳು ಲಭ್ಯವಿವೆ. ರಾಷ್ಟ್ರಕೂಟ ಅರಸನಾದ ಮೂರನೆಯ ಇಂದ್ರ ಮತ್ತು ನಾಲ್ಕನೆಯ ಗೋವಿಂದನ ಶಾಸನಗಳಲ್ಲಿ ಅಗ್ರಹಾರಗಳ ಕುರಿತಾದ ಅನೇಕ, ಮಾಹಿತಿಗಳು ಸಿಗುತ್ತವೆ.[12] ಕಲ್ಯಾಣಿ ಚಾಲುಕ್ಯರ ಆರನೆಯ ವಿಕ್ರಮಾದಿತ್ಯನು ವೇದ, ವೇದಾಂಗ, ಶಾಸ್ತ್ರ ಮುಂತಾದವುಗಳಲ್ಲಿ ಪರಿಣತರಾಗಿದ್ದ ಹಲವಾರು ಬ್ರಾಹ್ಮಣರನ್ನು ತಮಿಳುನಾಡಿನಿಂದ ಕರೆಯಿಸಿಕೊಂಡು ಅವರಿಗೆ ಅಗ್ರಹಾರವೊಂದನ್ನು ನಿರ್ಮಿಸಿಕೊಟ್ಟ ವಿವರ ಶಾಸನವೊಂದರಲ್ಲಿ.[13] ಹೊಯ್ಸಳ ಅರಸ ವಿಷ್ಣುವರ್ಧನನು ದೆವಲಿಗೆನಾಡು ಎನ್ನುವಲ್ಲಿ ಅಗ್ರಹಾರವೊಂದನ್ನು ನಿರ್ಮಿಸಿದನು.[14] ಹೊಯ್ಸಳ ದಂಡನಾಯಕ ಬಿಟ್ಟಿಯಣ್ಣ ಎನ್ನುವವನು ಧರ್ಮಪುರ ಎನ್ನುವ ಅಗ್ರಹಾರವನ್ನು ನಿರ್ಮಿಸಿದನು.[15] ಅಗ್ರಹಾರಗಳಲ್ಲಿ ಶಿಕ್ಷಣವನ್ನು ಸುಧಾರಿಸುವ ಮತ್ತು ಪ್ರೋತ್ಸಾಹಿಸುವ ದೃಷ್ಟಿಯಿಂದ ಅರಸರು ಮತ್ತು ಖಾಸಗಿ ವ್ಯಕ್ತಿಗಳು ಅಗ್ರಹಾರಗಳಿಗೆ ದಾನಗಳನ್ನು ನೀಡುತ್ತಿದ್ದರು. ಕೇಶವ ದಂಡನಾಯಕ ಎನ್ನುವವನು ತಾಳಗುಂದ ಅಗ್ರಹಾರಕ್ಕೆ ವಿವಿಧ ವಿಷಯಗಳನ್ನು ಕಲಿಸುವುದಕ್ಕಾಗಿ ಭೂಮಿಯನ್ನು ದಾನವಾಗಿ ನೀಡಿದ.[16] ಅಗ್ರಹಾರಗಳಿಗೆ ಭೂಮಿಯನ್ನು ದಾನ ನೀಡಿದ ವಿವರಗಳುಳ್ಳ ಇಂಥ ಅನೇಕ ಶಾಸನಗಳು ಸಿಗುತ್ತವೆ.[17]

ಪೇಟೆ-ಪಟ್ಟಣಗಳಲ್ಲಿರುವ ಶಿಕ್ಷಣಕೇಂದ್ರಗಳನ್ನು ಬ್ರಹ್ಮಪುರಿಗಳೆಂದು ಹೆಸರಿಸಲಾಗಿದೆ.[18] ಬ್ರಾಹ್ಮಣರು ಇವುಗಳಲ್ಲಿ ವಾಸವಾಗಿರುತ್ತಿದ್ದರು. ಪೇಟೆ-ಪಟ್ಟಣಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಿಲ್ಲವಾದ್ದರಿಂದಾಗಿ ಅಗ್ರಹಾರಗಳ ಸಂಖ್ಯೆಯೇ ಹೆಚ್ಚು ಇತ್ತು. ಕೆಲವು ಶಾಸನಗಳಲ್ಲಿ ಅಗ್ರಹಾರಗಳನ್ನು ಬ್ರಹ್ಮಪುರಿಗಳೆಂದೇ ಹೆಸರಿಸಲಾಗಿದೆ. ಕ್ರಿ.ಶ. ೧೦೨೮ರ ಮುಳುಗುಂದ ಶಾಸನವು ಮುಳುಗುಂದವನ್ನು ಬ್ರಹ್ಮಪುರಿ ಎಂಬುದಾಗಿ ಹೆಸರಿಸಿದೆ.[19] ನಾಗಸ್ವಾಮಿ ಎನ್ನುವವನು ಈ ಬ್ರಹ್ಮಪುರಿಯ ಮುಖ್ಯಸ್ಥನಾಗಿದ್ದು ಭೂಮಿ ಹಾಗೂ ಇತರ ವಸ್ತುಗಳನ್ನು ದಾನ ನೀಡಿದ ವಿವರ ಶಾಸನದಲ್ಲಿದೆ. ಆದರೆ ಮುಳುಗುಂದವು ಅಗ್ರಹಾರವಾಗಿತ್ತು ಎಂಬುದಾಗಿ ತಿಳಿದು ಬರುತ್ತದೆ. ಕೇಶಿರಾಜ ದಂಡಾಧಿಪ ಎನ್ನುವವನು ಕೇಶವ ದೇವಸ್ಥಾನವನ್ನು ನಿರ್ಮಿಸಿ ಅದರ ಎದುರುಗಡೆ ವೀರಕೇಶವಪುರ ಎಂಬ ಪಟ್ಟಣವನ್ನು ನಿರ್ಮಿಸಿದ, ಆ ಪಟ್ಟಣವನ್ನು ಶಾಸನದಲ್ಲಿ ಬ್ರಹ್ಮಪುರಿ ಎಂದು ಕರೆಯಲಾಗಿದೆ.[20] ಕ್ರಿ.ಶ. ೧೧೬೫ರ ಸೊರಬ ಶಾಸನವು ಮೂರು ಬ್ರಹ್ಮಪುರಿಗಳನ್ನು ಉಲ್ಲೇಖಿಸಿದರೆ,[21] ಕ್ರಿ.ಶ. ೧೧೯೨ರ ಕಡ್ಲೆವೇಡು ಶಾಸನವು ಎಂಟು ಬ್ರಹ್ಮಪುರಿಗಳ ಕುರಿತು ಮಾಹಿತಿ ನೀಡುತ್ತದೆ.[22] ಬ್ರಹ್ಮಪುರಿಗಳ ಅಧ್ಯಯನ ನಡೆಸುವಾಗ ಅವು ಅಗ್ರಹಾರಗಳಿಂದ ಭಿನ್ನವಾಗಿ ಗೋಚರಿಸುವುದಿಲ್ಲ. ಅವುಗಳ ಕೆಲಸಕಾರ್ಯಗಳಲ್ಲೂ ಭಿನ್ನತೆಗಳು ಕಂಡುಬರುವುದಿಲ್ಲ. ಇರುವ ಒಂದು ಭಿನ್ನತೆಯೆಂದರೆ ಅಗ್ರಹಾರಗಳು ಹಳ್ಳಿಗಳಲ್ಲಿದ್ದು, ಬ್ರಹ್ಮಪುರಿಗಳು ಪೇಟೆ-ಪಟ್ಟಣಗಳಲ್ಲಿ ಇರುವುದು. ಎರಡೂ ಕೇಂದ್ರಗಳು ಅರಸ ಮತ್ತು ಖಾಸಗಿ ವ್ಯಕ್ತಿಗಳಿಂದ ದಾನದತ್ತಿಗಳನ್ನು ಪಡೆಯುತ್ತಿದ್ದವು. ಕಲಿಸುವ ವಿಷಯಾಳು ಒಂದೇ ರೀತಿ ಇರುತ್ತಿದ್ದವು.

ಘಟಿಕಸ್ತಾನಗಳು ಶಿಕ್ಷಣದ ಇನ್ನೊಂದು ಕೇಂದ್ರಗಳು. ಅವು ಉನ್ನತ ಶಿಕ್ಷಣದ ಕೇಂದ್ರಗಳಾಗಿದ್ದವು. ರಾಷ್ಟ್ರಕೂಟರ ನಾಲ್ಕನೆಯ ಗೋವಿಂದನ ಕ್ರಿ.ಶ. ೪೫೧ರ ಕೆಲಸ ಶಾಸನ ಹಾಗೂ ಗದಗಿನ ವೀರನಾರಾಯಣ ದೇವಾಲಯದಲ್ಲಿನ ಕ್ರಿ.ಶ. ೯೧೮ರ ಶಾಸನಗಳು ಈ ಕುರಿತು ಕೆಲವೊಂದು ಮಾಹಿತಿಯನ್ನು ನೀಡುತ್ತವೆ.[23] ಕ್ರಿ.ಶ. ೧೦೫೮ರ ನಾಗಾಯಿ ಶಾಸನದಲ್ಲಿ ಘಟಿಕಸ್ತಾನಗಳು ಉನ್ನತ ಶಿಕ್ಷಣದ ಕೇಂದ್ರಗಳು ಎನ್ನುವ ವಿವರಣೆ ಸಿಗುತ್ತದೆ.[24] ಧಾರವಾಡ ಜಿಲ್ಲೆಯ ಪೊಟ್ಟಿಯೂರು ಘಟಿಕಸ್ತಾಬವಾಗಿತ್ತು ಎನ್ನುವುದಾಗಿ ಕ್ರಿ.ಶ. ೧೦೬೭ರ ಹೊಟ್ಟೂರು ಶಾಸನ ತಿಳಿಸುತ್ತದೆ.[25] ಕ್ರಿ.ಶ. ೧೧೮೩ರ ಶಿಕಾರಿಪುರ ಶಾಸನವು ಕುಂತಳದಲ್ಲಿ ಅನೇಕ ಘಟಿಕಸ್ತಾನಗಳಿದ್ದವು ಎನ್ನುವ ಮಾಹಿತಿ ನೀಡುತ್ತದೆ.[26] ಘಟಿಕಸ್ತಾನ ಎನ್ನುವ ಪದದ ಕುರಿತು ಒಮ್ಮತದ ಅಭಿಪ್ರಾಯಗಳಿದ್ದಂತೆ ಕಂಡುಬರುವುದಿಲ್ಲ. ಅವು ವಿದ್ಯಾಕೇಂದ್ರಗಳಾಗಿದ್ದವೇ ಎನ್ನುವ ಕುರಿತು ಚರಿತ್ರೆಕಾರರಲ್ಲಿ ಚರ್ಚೆಯಿದೆ. ಘಟಕಸ್ತಾನಗಳು ಬ್ರಾಹ್ಮಣರ ವಸತಿ ಪ್ರದೇಶಗಳಾಗಿದ್ದವು, ಅವು ಧಾರ್ಮಿಕ ಕೇಂದ್ರಗಳಾಗಿದ್ದವು,[27] ಧರ್ಮಕ್ಕೆ ಸಂಬಂಧಿಸಿದ ತಾತ್ವಿಕ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುವ ಕೇಂದ್ರಗಳು, ಬ್ರಾಹ್ಮಣರು ಸಭೆ ಸೇರುವ ಸ್ಥಳ, ಅಧ್ಯಯನ ಅಧ್ಯಾಪನ ನಡೆಸುವ ಕೇಂದ್ರಗಳು ಮುಂತಾದ ವಿವರಗಳು ಸಿಗುತ್ತವೆ.[28]

ಮಠಗಳು ಧಾರ್ಮಿಕತೆಯೊಂದಿಗೆ ಶೈಕ್ಷಣಿಕ ಕೇಂದ್ರಗಳಾಗಿಯೂ ಕೆಲಸ ಮಾಡುತ್ತಿದ್ದವು. ಮಠಗಳು ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತಿರುವುದನ್ನು ಇಂದಿನ ಸಂದರ್ಭದಲ್ಲಿಯೂ ನೋಡಬಹುದಾಗಿದೆ. ಕ್ರಿ.ಶ. ೮ ರಿಂದ ೧೪ನೆಯ ಶತಮಾನಗಳ ಅವಧಿಯಲ್ಲಿ ಮಠಗಳು ಧಾರ್ಮಿಕ ಆಚರಣೆಗಳಿಗೆ ಹೆಚ್ಚಿನ ಒತ್ತನ್ನು ನೀಡಿ ಆ ಹಿನ್ನೆಲೆಯಲ್ಲಿ ಶಿಕ್ಷಣವನ್ನು ಒದಗಿಸುತ್ತಿದ್ದವು. ಮಠಗಳು ಹುಟ್ಟಿಕೊಂಡ ಬಗೆಗೆ ಅನೇಕ ಅಭಿಪ್ರಾಯಗಳು ಇವೆ. ಅವುಗಳಲ್ಲಿ ಎರಡನ್ನು ಮಾತ್ರ ಇಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದೆ.

೧. ಯಾವುದೇ ಸ್ವಂತ ಆಸ್ತಿ ಇಲ್ಲದ, ಊರಿಂದ ಊರಿಗೆ ಅಲೆದಾಡುವ ಸನ್ಯಾಸಿಗಳನ್ನು ಒಂದೇ ಕಡೆ ನೆಲೆಸುವಂತೆ ಮಾಡಲು ಜನರು ಕಟ್ಟಿಸಿಕೊಟ್ಟ ಆಶ್ರಯತಾಣಗಳೇ ಮಠಗಳು. ಕ್ರಮೇಣ ಅವು ಧಾರ್ಮಿಕ ವಿಚಾರಗಳನ್ನು ಬೋಧಿಸುವ ಕೇಂದ್ರಗಳಾದವು.[29]

೨. ಶೈವಧರ್ಮ ಮತ್ತು ವೈಷ್ಣವಧರ್ಮ ಹೆಚ್ಚೆಚ್ಚು ಪ್ರಚಾರಕ್ಕೆ ಬಂದಂತೆ ಅದರ ಅನುಯಾಯಿಗಳ ಸಂಖ್ಯೆಯೂ ಹೆಚ್ಚಾಯಿತು. ಅವು ಜೈನಧರ್ಮವನ್ನು ಹೊರದಬ್ಬುವ ಕೆಲಸವನ್ನು ಮಾಡುತ್ತಿದ್ದವು. ಆದರೆ ಅನೇಕ ಧರ್ಮಪ್ರತಿಪಾದಕರು ತಮ್ಮ ಧರ್ಮಪ್ರತಿಪಾದನೆಗೆ ವ್ಯವಸ್ಥಿತ ಸ್ಥಳವೊಂದನ್ನು ಆಯ್ಕೆಮಾಡಿಕೊಂಡಿರಲಿಲ್ಲ. ಅವರ ಸಂಖ್ಯೆ ಹೆಚ್ಚಾದಂತೆ ಸಂಸ್ಥೆಯೊಂದರ ಅನಿರ್ವಾಯತೆ ಉಂಟಾಯಿತು. ಆ ಸಂಸ್ಥೆಗಳೇ ಮಠಗಳಾಗಿ ಬೆಳೆದವು. ಧರ್ಮ ಪ್ರತಿಪಾದನೆ ಅದರ ಮುಖ್ಯ ಕೆಲಸವಾಯಿತು. ಅದನ್ನು ಶಿಕ್ಷಣ ಎನ್ನುವ ಹೆಸರಿನಲ್ಲಿ ನೀಡಲಾಯಿತು.[30]

ಚಾಲುಕ್ಯ ದೊರೆ ತ್ರೈಲೋಕ್ಯಮಲ್ಲದೇವನ ಆಳ್ವಿಕೆಗೆ ಸೇರಿದ ಶಾಸನವೊಂದರಲ್ಲಿ ಮಠಕ್ಕೆ ಎಂಟು ಮತ್ತರು ಭೂಮಿಯನ್ನು ದಾನ ನೀಡಿದ ಉಲ್ಲೇಖವಿದೆ.[31] ಇಂಥ ಅನೇಕ ಉಲ್ಲೇಖಗಳು ಶಾಸನಗಳಲ್ಲಿ ಸಿಗುತ್ತವೆ. ಮಠಗಳು ಹೆಚ್ಚು ಪ್ರಚಾರಕ್ಕೆ ಬಂದಿರುವುದು ಆಚಾರ್ಯತ್ರಯರಾದ ಶಂಕರಾಚಾರ್ಯ, ರಾಮಾನುಜ ಮತ್ತು ಮಧ್ವರ ಜೀವಿತದ ಅವಧಿಗಳಲ್ಲಿ. ಶಂಕರಾಚಾರ್ಯರ ಪುರಿ, ಶೃಂಗೇರಿ, ದ್ವಾರಕ ಮತ್ತು ಬದರಿ ಮಠಗಳು ಅದ್ವೈತ ಸಿದ್ಧಾಂತದ ಪ್ರಚಾರ ಕೇಂದ್ರಗಳಾಗಿದ್ದವು. ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವೆಯಲ್ಲಿ ಶಿವ, ವಿಷ್ಣು, ಬ್ರಹ್ಮ, ಜೈನ ಹಾಗೂ ಬೌದ್ಧ ಇವರುಗಳಿಗೆ ಸಂಬಂಧಿಸಿದ ಐದು ಮಠಗಳಿದ್ದವು ಎನ್ನುವುದು ಶಾಸನದಿಂದ ತಿಳಿದುಬರುತ್ತದೆ.[32]

ಮಠಗಳಂತೆ ದೇವಾಲಯಗಳೂ ವಿದ್ಯಾಕೇಂದ್ರಗಳಾಗಿದ್ದವು. ದೇವಸ್ಥಾನ ಮತ್ತು ಮಠಗಳು ಪರಸ್ಪರ ಹೊಂದಿಕೊಂಡಿರುತ್ತಿದ್ದವು.[33] ಸುಗ್ಗಲದೇವಿ ಎನ್ನುವವಳು ದೇವಾಪುರ ಎಂಬಲ್ಲಿನ ದೇವಾಲಯಕ್ಕೆ ದೇವಾಲಯದ ಕಾರ್ಯನಿರ್ವಹಣೆ ಮತ್ತು ವಿದ್ಯಾರ್ಥಿಗಳ ಯೋಗಕ್ಷೇಮ ನೋಡಿಕೊಳ್ಳುವುದಕ್ಕಾಗಿ ದಾನ ನೀಡಿದಳು.[34] ಹತ್ತನೆಯ ಶತಮಾನದಿಂದ ಹನ್ನೆರಡನೆಯ ಶತಮಾನದವರೆಗಿನ ಕರ್ನಾಟಕದಲ್ಲಿ ಹೆಚ್ಚು ಪ್ರಚಾರದಲ್ಲಿದ್ದ ದೇವಾಲಯ ಕಾಲೇಜು ಬಿಜಾಪುರ ಜಿಲ್ಲೆಯ ಸಾಲೊಟಗಿಯಲ್ಲಿತ್ತು.[35]ಅಲ್ಲಿಗೆ ಬೇರೆ ಬೇರೆ ಪ್ರದೇಶಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದು, ವಿದ್ಯಾರ್ಥಿಗಳು ವಾಸಮಾಡುವ ೨೭ ಮನೆಗಳಿದ್ದವು.[36] ಚಾಲುಕ್ಯ ಅರಸ ಜಯಸಿಂಹನು ಸಿದ್ಧೇಶ್ವರ ದೇವಸ್ಥಾನಕ್ಕೆ ದೇವಾಲಯದ ನಿರ್ವಹಣೆಗೆ ಹಾಗೂ ವಿದ್ಯಾರ್ಥಿಗಳ ಆಹಾರ ಮತ್ತು ಬಟ್ಟೆಗಾಗಿ ದಾನ ನೀಡಿದ ವಿವರ ಶಿಕಾರಿಪುರ ಶಾಸನದಲ್ಲಿದೆ.[37][ದೇವಾಲಯಗಳ ಕಾರ್ಯಸ್ವರೂಪ ಹಾಗೂ ಅವು ಶಿಕ್ಷಣಕೇಂದ್ರಗಳಾಗಿ ನಿರ್ವಹಿಸುತ್ತಿದ್ದ ಕೆಲಸಕಾರ್ಯಗಳ ಬಗ್ಗೆ ಅಧ್ಯಾಯ ೭ರಲ್ಲಿ ಚರ್ಚಿಸಲಾಗಿದೆ.] ಅಗ್ರಹಾರಗಳು ಮತ್ತು ಬ್ರಹ್ಮಪುರಿಗಳು ವಿದ್ಯಾ ಕೇಂದ್ರಗಳಲ್ಲ, ಅವು ಬ್ರಾಹ್ಮಣರ ವಾಸಸ್ಥಾನಗಳು ಎನ್ನುವ ವಾದವೂ ಇದೆ.[38] ವಾಸ್ತವವಾಗಿ ಶಿಕ್ಷಣವನ್ನು ನೀಡಿರುವ ಕೇಂದ್ರಗಳೆಂದರೆ ಮಠಗಳು ಮತ್ತು ದೇವಾಲಯಗಳು ಎನ್ನುವ ವಾದವನ್ನು ಒಪ್ಪಿಕೊಳ್ಳುವ ವಿದ್ವಾಂಸರ ಸಂಖ್ಯೆಯೇ ಹೆಚ್ಚು.

ವಿದ್ಯಾಭ್ಯಾಸದ ಪ್ರಮುಖ ಪಠ್ಯ ವಿಷಯಗಳೆಂದರೆ ವೇದ, ವೇದಾಂಗ ಧರ್ಮಶಾಸ್ತ್ರ, ಪುರಾಣ, ವ್ಯಾಕರಣ, ತರ್ಕ, ಅಲಂಕಾರ, ನಾಟಕ, ಸಾಹಿತ್ಯ, ಗಾಂಧಾರ ವಿದ್ಯೆ, ಇತಿಹಾಸ, ವಾಸ್ತು, ಇಂದ್ರಜಾಲ, ನೀತಿಶಾಸ್ತ್ರ ಮುಂತಾದವು.[39] ವೇದಗಳನ್ನು ವಿವಿಧ ಭಾಗಗಳನ್ನಾಗಿ ಮಾಡಿ ಅಧ್ಯಯನ ಮಾಡುವುದನ್ನು ವೇದಖಂಡಿಕವೆಂದೂ, ಅವನ್ನು ಕಲಿಸಿಕೊಡುವ ಉಪಾಧ್ಯಾಯವನ್ನು ಖಂಡಿಕೊಪಾಧ್ಯಾಯನೆಂದೂ, ವಿದ್ಯಾರ್ಥಿಯನ್ನು ಖಂಡಿಕ ವಿದ್ಯಾರ್ಥಿಯೆಂದೂ ಕರೆಯಲಾಗುತ್ತಿತ್ತು.[40] ಇಂಥ ಅನೇಕ ಉಲ್ಲೇಖಗಳು ಅಂದಿನ ಶಾಸನಗಳಲ್ಲಿ ಸಿಗುತ್ತವೆ. ಆದರೆ ಇಲ್ಲಿರುವ ಪ್ರಮುಖ ಪ್ರಶ್ನೆಯೆಂದರೆ ಶಿಕ್ಷಣ ವ್ಯವಸ್ಥೆ ಯಾರ ಅಧೀನದಲ್ಲಿತ್ತು ಎನ್ನುವುದಾಗಿದೆ. ಇದರ ಅಧ್ಯಯನ ಕೈಗೊಂಡಾಗ ನಾಲ್ಕು ಉಪಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಅವುಗಳೆಂದರೆ, ಶಿಕ್ಷಣವನ್ನು ನೀಡುತ್ತಿದ್ದವರು ಯಾರು?, ಶಿಕ್ಷಣವನ್ನು ಯಾರಿಗೆ ನೀಡಲಾಗುತ್ತಿತ್ತು?, ಶಿಕ್ಷಣವನ್ನು ದಾನ-ದತ್ತಿ ನೀಡುವುದರ ಮೂಲಕ ಪ್ರೋತ್ಸಾಹಿಸುತ್ತಿದ್ದವರು ಯಾರು? ಹಾಗೂ ಶಿಕ್ಷಣದ ಪಠ್ಯ ವಿಷಯಗಳು ಯಾವುವು?. ಈ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಹಿಡಿಯುವಾಗ ಮುಖ್ಯವಾಗಿ ಮೂರು ಪ್ರಭುತ್ವಗಳು ಶಿಕ್ಷಣ ವ್ಯವಸ್ಥೆಯನ್ನು ನಿಯಂತ್ರಿಸುತ್ತಿದ್ದುದು ಕಂಡುಬರುತ್ತದೆ. ಅವುಗಳೆಂದರೆ, ರಾಜಪ್ರಭುತ್ವ, ಧಾರ್ಮಿಕ ಪ್ರಭುತ್ವ ಹಗೂ ಕುಲೀನಪ್ರಭುತ್ವ. ಇವುಗಳನ್ನು ಮೀರಿ ನಿಲ್ಲುವ ಸಾಮಾಜಿಕ ವ್ಯವಸ್ಥೆ ರೂಪುಗೊಂಡಿರಲಿಲ್ಲ. ಅದರ ಸಾಧ್ಯತೆಯೂ ಅಂದಿನ ಸಂದರ್ಭದಲ್ಲಿ ಇರಲಿಲ್ಲವೆಂದೇ ಹೇಳಬೇಕು.

ಮಹಿಳೆಯರ ಶಿಕ್ಷಣದ ಬಗ್ಗೆ ಶಾಸನ ಮತ್ತು ಸಾಹಿತ್ಯ ಕೃತಿಗಳಲ್ಲಿ ಹೆಚ್ಚಿನ ಮಾಹಿತಿ ಸಿಗುವುದಿಲ್ಲ. ಪುರೋಹಿತಶಾಹಿಯ ಕಟ್ಟುಕಟ್ಟಳೆಗಳಿಂದಾಗಿ ಮಹಿಳೆಯರು ಶಿಕ್ಷಣದಿಂದ ಚಂಚಿತರಾಗಬೇಕಾಯಿತು. ವಿದ್ಯಾಭ್ಯಾಸಕ್ಕೆ ಬಿಟ್ಟಿರುವ ದಾನ-ದತ್ತಿಗಳು ಪುರುಷರ ಶಿಕ್ಷಣಕ್ಕೇ ಮೀಸಲಾಗಿದ್ದವು[41] ಪ್ರಭುವರ್ಗದ ಮಹಿಳೆಯರು ಶಿಕ್ಷಣವನ್ನು ಹೊಂದಿರುತ್ತಿದ್ದರೂ ಅದು ಹೆಚ್ಚಾಗಿ ಸಂಗೀತ, ನೃತ್ಯಗಳಿಗೆ ಸೀಮಿತವಾಗಿರುತ್ತಿತ್ತು. ಸಂಗೀತದ ಕುರಿತಾಗಿ ಸಂಗೀತಶಾಸ್ತ್ರ ಎನ್ನುವ ಶಿಸ್ತೊಂದು ಹುಟ್ಟಿಕೊಂಡಿತ್ತು. ಅದೇ ರೀತಿ ಸಂಗೀತವನ್ನು ದೇವತಾರಾಧನೆಗೆ ಮೀಸಲಾದ ಕಲೆಯನ್ನಾಗಿ ಪರಿವರ್ತಿಸಲಾಯಿತು. ವೈದಿಕ ಧರ್ಮಗ್ರಂಥಗಳು ಸಂಗೀತಕ್ಕೆ ಅಧಿಕೃತೆಯನ್ನು ನೀಡುವ ಕೆಲಸವನ್ನು ಮಾಡಿದವು. ರಾಜಮನೆತನಗಳಿಗೆ ಸೇರಿದ ಸ್ತ್ರೀಯರು ಗಾಯನ, ವಾದನ ಮತ್ತು ನರ್ತನಗಳಲ್ಲಿ ತರಬೇತಿ ಹೊಂದಿರುತ್ತಿದ್ದರು. ಇದಕ್ಕೆ ಶಾಸನಗಳಲ್ಲಿ ಉಲ್ಲೇಖಿತವಾಗಿರುವ ರಾಣಿಯರ ಬಿರುದುಗಳೇ ಉದಾಹರಣೆಗಳಾಗಿವೆ. ಅವುಗಳಲ್ಲಿ ಕೆಲವು ಈ ರೀತಿ ಇದೆ. ಚಾಲುಕ್ಯ ಸೋಮೇಶ್ವರನ ಮಡದಿ ಮೈಳಲದೇವಿ ‘ವಿಳಾಸ ವಿದ್ಯಾಧರಿ’, ಆರನೆಯ ವಿಕ್ರಮಾದಿತ್ಯನ ಮಡದಿ ಜಾಕಲದೇವಿ ‘ಅಭಿನಯ ಸರಸ್ವತಿ’, ಹೊಯ್ಸಳ ವಿಷ್ಣುವರ್ಧನನ ಮಡದಿ ಶಾಂತಲೆ ‘ಸಂಗೀತ ಸಂಗೀತಸರಸ್ವತಿ’, ಸಂಗೀತ ವಿಸ್ಯಾಸರಸ್ವತಿ’, ಚಾಲುಕ್ಯ ಉದಯಾದಿತ್ಯನ ಮಡದಿ ಲಚ್ಚಲದೇವಿ ‘ಸಂಗೀತಕ ಪ್ರಸಂಗ ವಿವೇಕ ಚೂಡಾಮಣಿ’ ಎಂಬ ಬಿರುದುಗಳನ್ನು ಹೊಂದಿದ್ದರು.[42] ಅರಸುಮನೆತನಗಳಿಗೆ ಸಂಬಂಧಿಸಿದ ಮಹಿಳೆಯರನ್ನು ಹೊರತುಪಡಿಸಿದರೆ ಈ ಶಿಕ್ಷಣದಲ್ಲಿ ತರಬೇತಿ ಹೊಂದಿರುತ್ತಿದ್ದವರೆಂದರೆ ದೇವಸಾಸಿಯರು, ಪಾತರದವರು, ಸೂಳೆಯರು ಮುಂತಾದವರು.[43] ಇವರು ಪುರುಷಪ್ರಭುತ್ವದ ಲಾಸ್ಯ ಬದುಕಿಗಾಗಿ ಸೃಷ್ಟಿಗೊಂಡ ಒಂದು ಶೋಷಿತ ವರ್ಗ. ಸಂಗೀತ ಮತ್ತು ನೃತ್ಯದಲ್ಲಿನ ಪರಿಣತಿ ಇವರಿಗೆ ಹೊಸ ಬದುಕನ್ನು ನೀಡುವ ಬದಲು ಲೈಂಗಿಕ ಶೋಷಣೆಗೆ ದಾರಿಮಾಡಿಕೊಟ್ಟಿತು. ಹನ್ನೆರಡನೆಯ ಶತಮಾನದಲ್ಲಿ ಶಿಕ್ಷಣವನ್ನು ಹೊಂದಿದ್ದ ಕೆಲವು ವಚನಗಾರ್ತಿಯರ ಉಲ್ಲೇಖಗಳು ಸಿಗುತ್ತವೆ. ಅಕ್ಕಮಹಾದೇವಿ, ಮಹಾದೇವಿ, ಬಿಜ್ಜಳದೇವಿ, ನೀಲಮ್ಮ, ಲಿಂಗಮ್ಮ, ಕಾಳವ್ವೆ ಮುಂತಾದವರು ಬರಹಗಾರ್ತಿಯರಾಗಿದ್ದರು.[44] ಅಕ್ಕಮಹಾದೇವಿ ಇವರೆಲ್ಲರಿಗೂ ಮುಖ್ಯಸ್ಥೆಯಾಗಿದ್ದಳು. ಇವರಿಗಿಂತ ಹಿಂದಿನ ಉಲ್ಲೇಖವೆಂದರೆ ಜೈನ ಕವಯಿತ್ರಿ ಕಂತಿಯದ್ದು. ಒಟ್ಟಾರೆಯಾಗಿ ಹೇಳುವುದಾದರೆ, ಮಹಿಳೆಯರು ಶಿಕ್ಷಣವನ್ನು ಪಡೆಯಬೇಕೆನ್ನುವ ಧೋರಣೆ ಅಂದಿನ ಸಮಾಜದಲ್ಲಿ ಕಂಡುಬರುತ್ತಿರಲಿಲ್ಲ.

ವಿವಿಧ ವೃತ್ತಿಗಳಲ್ಲಿ ತೊಡಗಿರುತಿದ್ದ ಶ್ರಮಿಕ ವರ್ಗವಾದ ಕುಶಲಕರ್ಮಿಗಳು ಶಿಕ್ಷಣವನ್ನು ಹೊಂದಿರುತ್ತಿದ್ದರು ಎನ್ನುವುದಾಗಿ ಖಚಿತವಾಗಿ ಹೇಳಲು ಸಾಧ್ಯವಾಗುವುದಿಲ್ಲ. ಆದರೆ ಅವರಿಂದ ಉತ್ಪಾದನೆಗೊಳ್ಳುತ್ತಿದ್ದ ವಸ್ತುಗಳು, ಕಲಾಕೃತಿಗಳನ್ನು ನೋಡಿದಾಅ ಅಕ್ಷರಸ್ಥರಿದ್ದಿರಬೇಕು ಎಂದೆನಿಸುತ್ತದೆ. ಅದೇ ಸಂದರ್ಭದಲ್ಲಿ ಕಾಡುವ ಪ್ರಶ್ನೆಯೆಂದರೆ ಅಕ್ಷರಸ್ಥ ಜನವರ್ಗದ ಆದೇಶದಂತೆ, ಅವರು ವಿವರಿಸಿದ ಹಾಗೆ ಕುಶಲಕರ್ಮಿಗಳು ಕೆಲಸ ಮಾಡಿರಬೇಕು ಎನ್ನುವುದು. ಅನುಕರಣೆ ಅಥವಾ ಇನ್ನೊಬ್ಬರ ಮಾರ್ಗದರ್ಶನದ ಮೂಲಕವೂ ಕೆಲಸವನ್ನು ಮಾಡಬಹುದು. ಇದರರ್ಥ ಅಂದಿನ ಕುಶಲಕರ್ಮಿಗಳು ಶಿಕ್ಷಣವನ್ನು ಹೊಂದಿರಲಿಲ್ಲ ಎನ್ನುವುದಲ್ಲ. ಇಲ್ಲಿ ಸಾಧ್ಯತೆಗಳ ಬಗ್ಗೆ ಚರ್ಚಿಸಲಾಗಿದೆ. ಈ ಕುರಿತಾದ ಒಂದು ಚರ್ಚೆಯನ್ನು ಇಲ್ಲಿ ಗಮನಿಸಬಹುದಾಗಿದೆ. ಪ್ರೊ. ಎಸ್.ಶೆಟ್ಟರ್ ಅವರು ಶಾಸನಗಳಲ್ಲಿ ಕೆತ್ತುವ ಕಂಡರೆಕಾರರ ಕುರಿತು ಈ ರೀತಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು, “ಬಹುಪಾಲು ಕಂಡರಣೆಕಾರರು ಅನಕ್ಷರಸ್ಥರಾಗಿದ್ದರು. ಹಂಬಲದ ಪರಿಸ್ಥಿತಿಗಳಿಂದ ಬಂದ ಇವರಿಗೆ ವಿದ್ಯಾಭ್ಯಾಸವಿರಲಿಲ್ಲ. ಆದ್ದರಿಂದ ರಚನೆಯಾದ ಶಾಸನ ಪಾಠವನ್ನು ಕಲ್ಲಿನ ಹಲಗೆಯ ಮೇಲೆ ಬರೆಯಲು ಕೂದ ಇವರಿಗೆ ಬರುತ್ತಿರಲಿಲ್ಲ. ಆದ್ದರಿಂದ ಲಿಪಿಕಾರನು ಮಧ್ಯವರ್ತಿಯಾಗಿ ಶಾಸನಪಾಠವನ್ನು ಬರೆದುಕೊಡಲು ಬರಬೇಕಾಗುತ್ತಿತ್ತು”.[45] ಈ ಅಭಿಪ್ರಾಯಕ್ಕೆ ಡಾ. ಕೆ.ಎಸ್.ಕುಮಾರಸ್ವಾಮಿ ಅವರು ಸಂಪೂರ್ಣವಾಗಿ ತಿರಸ್ಕರಿಸದೆ ಅದೇ ರೀತಿ ಸಂಪೂರ್ಣವಾಗಿ ಒಪ್ಪಿಕೊಳ್ಳದೆ ಇರುವ ರೀತಿಯಲ್ಲಿ ಪ್ರತಿವಾದವನ್ನು ಮಂಡಿಸಿದರು. ಅವರ ಪ್ರಕಾರ, “ಓಜರುಗಳು ಶಾಸನಗಳಲ್ಲಿ ತಾವೇ ಬರೆದುಕೊಂಡು ತಾವೇ ಉಳಿಯಿಂದ ಕೆತ್ತಿದ ವಿವರಣೆಗಳು ಅನೇಕ ಶಾಸನಗಳಲ್ಲಿ ಸಿಗುತ್ತವೆ. ಲಿಪಿಕಾರನ ಉಲ್ಲೇಖವಿರುವುದು ಅವನೂ ಒಬ್ಬ ಸಾಕ್ಷಿ ಇರಲಿ ಎನ್ನುವ ಕಾರಣಕ್ಕಾಗಿ. ಇದು ಒಂದು ಪದ್ಧತಿಯಾಗಿ ಬೆಳೆದು ಬಂದಿರಬೇಕು. ಆದ್ದರಿಂದ ಲಿಪಿಕಾರನ ಉಲ್ಲೇಖವಿದೆ ಎಂದ ಮಾತ್ರಕ್ಕೆ ಕಂಡರಣೆಕಾರನು ಅನಕ್ಷರಸ್ಥನಾಗಿದ್ದನೆಂದು ಡಾ. ಶೆಟ್ಟರ್ ಅವರಂತೆ ಯೋಚಿಸುವುದು ಸೂಕ್ತವಾಗಲಾರದು. ಕಂಡರೆಣೆಕಾರನು ಅಕ್ಷರಬಲ್ಲವನಾಗಿದ್ದರೂ ಕೂಡ ಪದ್ಧತಿಯ ಪ್ರಕಾರ ಲಿಪಿಕಾರನು ಪ್ರವೇಶಿಸುತ್ತಿದ್ದ. ಆದ್ದರಿಂದ ಕಂಡರಣೆಕಾರರನ್ನು ಅನಕ್ಷರಸ್ಥರೆಂದು ಕೂಡಲೇ ತೀರ್ಮಾನಿಸುವುದು ಅವಸರದ ಹೇಳಿಕೆಯಾದೀತು”.[46]

ಶಿಲ್ಪಶಾಸ್ತ್ರದ ಶಿಕ್ಷಣವನ್ನು ವೃತ್ತಿಪರ ಶಿಕ್ಷಣ ಎಂಬುದಾಗಿಯೂ ಕರೆಯಲಾಗಿದೆ.[47] ಶಿಲ್ಪಿಗಳ ಮಕ್ಕಳು ಶಿಷ್ಯವೃತ್ತಿ ಮಾಡಿ ಕಲಿಯುತ್ತಿದ್ದರು. ಅದೇ ರೀತಿ ಶಿಲ್ಪಶಾಸ್ತ್ರ ವಿದ್ಯೆಯು ಅನುವಂಶಿಕವಾಗಿ ಮುಂದುವರಿಯುತ್ತಾ ಹೋಗುತ್ತಿದ್ದುದಕ್ಕೂ ಶಾಸನಾಧಾರಗಳಿವೆ. ಕ್ರಿ.ಶ. ೧೧೧೭ರ ಹೊಯ್ಸಳರ ಶಾಸನದಲ್ಲಿ[48] ಹೊಯ್ಸಳಾಚಾರಿ ಎನ್ನುವ ಶಿಲಿಪ್ಯ ಉಲ್ಲೇಖವಿದ್ದು, ಅವನಿಂದ ಅವನ ಕುಟುಂಬವೇ ಶಿಲ್ಪಶಾಸ್ತ್ರ ಹಾಗೂ ಇನ್ನಿತರ ಕಲಾವಿದ್ಯೆಗಳಲ್ಲಿ ಪರಿಣತಿ ಹೊಂದಿರುವುದು ತಿಳಿದುಬರುತ್ತದೆ. ಇದರಿಂದ ಇತರ ವೃತ್ತಿಗಳು ವಂಶಪಾರಂಪರ್ಯವಾಗಿ ಮುಂದುವರಿದುಕೊಂಡು ಹೋಗಿರಬೇಕೆಂದು ತೀರ್ಮಾನಿಸಬಹುದಾಗಿದೆ. ಅಂದಿನ ಸಮಾಜದಲ್ಲಿ ವೃತ್ತಿಗಳನ್ನು ಬದಲಾಯಿಸುವಂತಿರಲಿಲ್ಲ. ಇದರಿಂದಾಗಿ ಕುಶಲಕರ್ಮಿಗಳು ಸ್ವಾಭಾವಿಕವಾಗಿಯೇ ಶಿಕ್ಷಣ ಪದ್ಧತಿ ಎಂದು ಕರೆಯಬಹುದಾಗಿದೆ. ಆದರೆ ಈ ಪದ್ಧತಿಯಿಂದ ಕುಶಲಕರ್ಮಿಗಳಲ್ಲಿ ಹೊಸ ಬದಲಾವಣೆಗಳಾಗಲು ಸಾಧ್ಯವಿರಲಿಲ್ಲ. ತಲೆಮಾರಿನಿಂದ ತಲೆಮಾರಿಗೆ ವಸ್ತುಗಳ ಉತ್ಪಾದನೆಯಲ್ಲಿ ಬದಲಾವಣೆಗಳು ಆಗುತ್ತಿರಲಿಲ್ಲ. ಬದಲಾವಣೆಗಳಿಲ್ಲದೆ ಆರ್ಥಿಕ ಸ್ಥಿತಿಯ ಸುಧಾರಣೆಯೂ ಸಾಧ್ಯವಿಲ್ಲ. ಕುಶಲಕರ್ಮಿಗಳು ಶಿಕ್ಷಣವನ್ನು ಹೊಂದಿರುತ್ತಿದ್ದರೂ ಅದು ವೈದಿಕ ಮೂಲಕ ಶಿಕ್ಷಣ ಎನ್ನುವುದರಲ್ಲಿ ಅನುಮಾನವಿಲ್ಲ. ಏಕೆಂದರೆ ದೇವಾಲಯ ನಿರ್ಮಾಣ, ಅದರಲ್ಲಿನ ಕೆತ್ತನೆಗಳು, ಶೈಲಿ ಮುಂತಾದವು ವೈದಿಕ ಮೂಲಕ ಗ್ರಂಥಗಳಲ್ಲಿನ ಪಾಠಗಳ ಮಾದರಿಯಲ್ಲಿಯೇ ಇರುತ್ತಿದ್ದವು. ಈ ಕಾಲಾವಧಿಯ ಶಿಕ್ಷಣ ವ್ಯವಸ್ಥೆ ಕೇವಲ ಒಂದು ತತ್ವಕ್ಕಷ್ಟೇ ಅಂಟಿಕೊಂಡಿತ್ತು ಎನ್ನುವುದಂತೂ ಇದರಿಂದ ಸ್ಪಷ್ಟವಾಗುತ್ತದೆ.

.೪ ಆಡಳಿತ

ಸಾಮಾಜಿಕ ರಚನೆಯಲ್ಲಿ ಆಡಳಿತದ ಪಾತ್ರ ಮಹತ್ವದ್ದು. ಇದೊಂದು ರಾಜ್ಯದ ಬೆಳವಣಿಗೆಯ ನಿರ್ಧಾರಕ ಅಂಶವೂ ಹೌದು. ರಾಜ್ಯಭಾರ ವ್ಯವಸ್ಥೆಯನ್ನು ರೂಪಿಸುವವರು ಆಳುವ ವರ್ಗದವರು. ಇದರಿಂದಾಗಿ ಆಡಳಿತ ವಿಧಾನ ಸಾಮಾಜಿಕ ರಚನೆಗೆ ಅನುಗುಣವಾಗಿಯೇ ಇರುತ್ತಿತ್ತು. ಆಡಳಿತ ವ್ಯವಸ್ಥೆಯು ಅರಸ ಹಾಗೂ ಅರಸನಿಂದ ನೇಮಿಸಲ್ಪಟ್ಟ ಅಧಿಕಾರಿವರ್ಗಗಳ ನಡುವಿನ ರಾಜಕೀಯ ಒಪ್ಪಂದವಾಗಿಯೂ ಕಂಡುಬರುತ್ತದೆ. ಕೇಂದ್ರಾಡಳಿತ, ಪ್ರಾಂತೀಯ ಆಡಳಿತ, ಗ್ರಾಮದ ಆಡಳಿತ ಇವೆಲ್ಲವೂ ಪರಸ್ಪರ ಸಂಬಂಧವನ್ನು ಹೊಂದಿರುತ್ತಿದ್ದವು. ಆಡಳಿತದ ಸ್ವರೂಪದಲ್ಲಿಯೂ ಬದಲಾವಣೆಗಳನ್ನು ಕಾಣುವುದು ಸಾಧ್ಯವಿರಲಿಲ್ಲ. ಕೇಂದ್ರಾಡಳಿತದಲ್ಲಿ ಚಕ್ರವರ್ತಿಗಳು, ಪ್ರಾಂತೀಯ ಆಡಳಿತದಲ್ಲಿ ಮಹಾಮಂಡಳೇಶ್ವರರು, ಮಹಾಸಾಮಂತರು, ಸ್ಥಳೀಯ ಆಡಳಿತ ವ್ಯವಸ್ಥೆಯಲ್ಲಿ ವರ್ತಕ ಶ್ರೇಣಿಗಳು, ಮಹಾಜನರು, ಪ್ರಭುಗಾವುಂಡರು, ಗಾವುಂಡರು ಮುಂತಾದವರು ಆಡಳಿತ ನಡೆಸುತ್ತಿದ್ದರು. ಇವರೆಲ್ಲರೂ ಪರಸ್ಪರ ಒಬ್ಬರಿಗೊಬ್ಬರು ಅಧೀನರಾಗಿರುತ್ತಿದ್ದರು. ಶ್ರೇಣೀಕೃತ ಸಮಾಜ ವ್ಯವಸ್ಥೆಯ ಮಾದರಿಯಲ್ಲಿಯೇ ಅಧಿಕಾರಿಗಳ ವಿವಿಧ ಶ್ರೇಣಿಗಳಿರುತ್ತಿದ್ದವು.

ರಾಷ್ಟ್ರಕೂಟರ ಆಡಳಿತದಲ್ಲಿ ಪಿರಮಿಡ್ ವಿನ್ಯಾಸ ಇತ್ತು ಎನ್ನುವುದು ಅಧ್ಯಯನದಿಂದ ತಿಳಿದುಬರುತ್ತದೆ.[49] ರಾಜ್ಯಾಡಳಿತದ ತುತ್ತತುದಿಯಲ್ಲಿ ಅರಸನಿದ್ದು, ಅವನ ಕೆಳಗೆ ಭೂ ಮಾಲೀಕರಾದ ಮಧ್ಯವರ್ತಿಗಳಿರುತ್ತಿದ್ದರು. ಅವರು ಬೇರೆ ಬೇರೆ ಸ್ತರಗಳಾಗಿ ಸ್ಥಾನ ಪಡೆದಿದ್ದರು. ಅವರಿಗಿಂತ ಕೆಳಗೆ ಕಡಿಮೆ ಬಲದ ಗಣ್ಯರು ಮತ್ತು ಇತರ ಸಂಸ್ಥೆಗಳು ಇರುತ್ತಿದ್ದವು. ಇವರ ಸಂಬಂಧಗಳು ಮೊದಲೇ ನಿರ್ಧರಿಸಲ್ಪಡುತ್ತಿದ್ದವು. ಈ ವ್ಯವಸ್ಥೆಯ ಮಧ್ಯದಿಂದಲೇ ಶ್ರೀಮಂತ ಮಧ್ಯವರ್ತಿಗಳ ಹೊಸತೊಂದು ವ್ಯವಸ್ಥೆ ರೂಪುಗೊಂಡಿರುವುದು ಪರಿಣಾಮಕಾರಿಯಾದ ಸಂಬಂಧವನ್ನು ಹೊಂದಿದ್ದರು. ತಮ್ಮ ಪರಮಾಧಿಕಾರವನ್ನು ಕಾಪಾಡಿಕೊಳ್ಳಲು, ರಾಜ್ಯದ ಆಡಳಿತ ವ್ಯವಸ್ಥಿತವಾಗಿ ನಡೆಯಲು ರಾಷ್ಟ್ರಕೂಟರು ಅನೇಕ ಅರಸು ಮನೆತನಗಳ ಜೊತೆಗೆ ವೈವಾಹಿಕ ಸಂಬಂಧಗಳನ್ನು ಇಟ್ಟುಕೊಂಡಿದ್ದರು.[50] ಈ ವೈವಾಹಿಕ ಸಂಬಂಧಗಳಲ್ಲಿ ರಾಜಕೀಯ ಸಂಬಂಧಗಳು ಹಾಗೂ ಸೇನಾ ಸಂಬಂಧಗಳು ಸೇರಿ ಕೊಂಡಿರುತ್ತಿದ್ದವು. ಈ ಸಂಬಂಧಗಳು ರಾಜ್ಯದ ಆಂತರಿಕ ಆಡಳಿತದ ದೃಷ್ಟಿಯಿಂದ ಮತ್ತು ಹೊರ ರಾಜ್ಯಗಳೊಂದಿಗಿನ ಸಂಬಂಧಗಳ ದೃಷ್ಟಿಯಿಂದ ರಾಜಪ್ರಭುತ್ವಕ್ಕೆ ಅನಿವಾರ್ಯವಾಗಿತ್ತು.

ರಾಷ್ಟ್ರಕೂಟರ ಆಡಳಿತ ವ್ಯವಸ್ಥೆಯಲ್ಲಿ ಮುಖ್ಯವಾಗಿ ಮೂರು ಹಂತಗಳಿದ್ದವು. ಅವುಗಳೆಂದರೆ ಕೇಂದ್ರ ಪ್ರಭುತ್ವ, ಮಾಂಡಲಿಕ (ಪ್ರಾಂತೀಯ) ಪ್ರಭುತ್ವ ಹಾಗೂ ಸ್ಥಳೀಯವಾದ ಆಡಳಿತ. ಆಡಳಿತದ ಸಮರ್ಥ ನಿರ್ವಹಣೆಗಾಗಿ ಅಧಿಕಾರವನ್ನು ವಿಕೇಂದ್ರೀಕರಣಗೊಳಿಸುವುದು ಅನಿವಾರ್ಯವಾಗಿತ್ತು. ಅರಸನ ಕಾರ್ಯಭಾರ ನಿರ್ವಹಣೆಯು ಅಮಾತ್ಯ ಪರಿಷತ್ತಿನ ನೆರವಿನಿಂದ ನಡೆಯುತ್ತಿದ್ದಿತ್ತು.[51] ಅರಸನ ನಿರಂಕುಶಕಾರಕ್ಕೆ ಅಮಾತ್ಯ ಪರಿಷತ್ತು ತಡೆಗೋಡೆಯಾಗಿತ್ತು. ಕೆಲವರಿಗೆ ಅಮಾತ್ಯ ಪದವಿ ವಂಶಾನುಗತವಾಗಿತ್ತು. ಅಮಾತ್ಯ ಪರಿಷತ್ತಿನ ಮುಖ್ಯನಾಗಿ ಪ್ರಧಾನಾಮಾತ್ಯನಿರುತ್ತಿದ್ದನು. ಪ್ರಧಾನಾಮಾತ್ಯನ ಜತೆಗೆ ಸಂಧಿವಿಗ್ರಹಿ, ಧರ್ಮಾಧಿಪತಿ, ಸೇನಾಧಿಪತಿ, ಕೋಶಾಧಿಪತಿ ಮೊದಲರಾದವರು ಇರುತ್ತಿದ್ದರು. ಶಾಸನಗಳಲ್ಲಿ ಈ ಎಲ್ಲಾ ಅಧಿಕಾರಿಗಳ ಉಲ್ಲೇಖವಿದೆ. ಮಾಂಡಲಿಕರು ಕೇಂದ್ರಪ್ರಭುತ್ವದ ಪ್ರತ್ಯಕ್ಷ ನಿಯಂತ್ರಣಕ್ಕೊಳಪಟ್ಟು ಆಡಳಿತ ನಡೆಸುತ್ತಿದ್ದರು. ಆಯಾ ಪ್ರದೇಶದ ಹಣಕಾಸಿನ ನಿರ್ವಹಣೆ, ಪೌರ ರಕ್ಷಣೆ, ಸೈನಿಕ ಕಾರ್ಯಾಚರಣೆಗಳನ್ನು ನೋಡಿಕೊಳ್ಳುವುದು ಅವರ ಜವಾಬ್ದಾರಿಯಾಗಿತ್ತು. ಮಾಂಡಲಿಕರು ಕೇಂದ್ರ ಪ್ರಭುತ್ವದ ಅಜ್ಞಾನುಸಾರವಾಗಿ ತೆರಿಗೆಗಳನ್ನು ವಿಧಿಸಿ ಸಂಗ್ರಹಿಸುತ್ತಿದ್ದರು. ಅವರು ತಮ್ಮದೇ ಸೈನ್ಯವನ್ನು ಇಟ್ಟುಕೊಳ್ಳುತ್ತಿದ್ದರು. ಅದೇ ರೀತಿ ದಾನ ನೀಡುವುದು, ದೇವಾಲಯ ನಿರ್ಮಾಣ ಮುಂತಾದ ಕೆಲಸವನ್ನೂ ಮಾಡುತ್ತಿದ್ದರು.[52] ಸ್ಥಳೀಯ ಆಡಳಿತ ವ್ಯವಸ್ಥೆಯಲ್ಲಿ ಗ್ರಾಮಸಭೆಯ ಸ್ಥಾನವು ಮಹತ್ವದ್ದಾಗಿತ್ತು. ಗ್ರಾಮಕೂಟ ಇಲ್ಲವೇ ಗಾಮುಂಡ ಗ್ರಾಮದ ಅಧಿಕಾರಿಯಾಗಿರುತ್ತಿದ್ದ.[53] ಗ್ರಾಮಕೂಟನಿಗಿಂತ ನಂತರದವರು ಸೇನಭೋವ ಇಲ್ಲವೆ ಗ್ರಾಮ ಶ್ಯಾನಭೋಗ. ಊರೊಡೆಯ ಗ್ರಾಮಸಭೆಯ ಚುನಾಯಿತ ಅಧ್ಯಕ್ಷನಾಗಿರುತ್ತಿದ್ದ. ಗ್ರಾಮಗಳ ಆಡಳಿತವು ಗ್ರಾಮದ ಹಿರಿಯರ ಸಭೆಯಲ್ಲಿ ನಿರ್ಧಾರವಾಗುತ್ತಿತ್ತು. ಸಭೆಯ ಸದಸ್ಯರು ಸಾಮಾನ್ಯವಾಗಿ ಮಹಾಜನರೆಂದು ಹೆಸರು ಪಡೆಯುತ್ತಿದ್ದರು.[54] ಕ್ರಮೇಣ ಮಹಾಜನ ಪದವು ಅಗ್ರಹಾರ ಗ್ರಾಮಗಳ ಸಭಾಸದಸ್ಯರನ್ನು ಮಾತ್ರವೇ ಸೂಚಿಸುವಂತಾಯಿತು. ಗ್ರಾಮ ಸಭೆಯು ತೆರಿಗೆ ಸಂಗ್ರಹಿಸುವ, ಶಿಕ್ಷಣ, ದೇವಾಲಯ ಹಾಗೂ ಇನ್ನಿತರ ಧಾರ್ಮಿಕ ಕೇಂದ್ರಗಳನ್ನು ಪೋಷಿಸುವ, ಕೆರೆಕಟ್ಟೆ, ರಸ್ತೆಗಳನ್ನು ಸುಸ್ಥಿತಿಯಲ್ಲಿಡುವ, ಗ್ರಾಮಗಳಲ್ಲಿನ ವಿವಾದಗಳನ್ನು ಬಗೆಹರಿಸುವ ಕೆಲಸಗಳನ್ನು ಮಾಡುತ್ತಿತ್ತು. ಗ್ರಾಮಸಭೆ ಮತ್ತು ಕೇಂದ್ರ ಪ್ರಭುತ್ವದ ನಡುವೆ ಮಧ್ಯವರ್ತಿ ವರ್ಗಗಳಿದ್ದವು.[55] ಅವುಗಳೆಂದರೆ ಮಹತ್ತರರು, ಮಹಾ ಜನರು, ಪೆರ್ಗಡೆಗಳು, ನಾಡಗವುಂಡರು, ಗವುಂಡರು ಮೊದಲಾದವರು. ಈ ಮಧ್ಯವರ್ತಿ ವರ್ಗದ ಸೃಷ್ಟಿಯು ಕೇಂದ್ರಪ್ರಭುತ್ವದ ಶಕ್ತಿಯು ಕ್ಷೀಣಿಸುವುದಕ್ಕೆ ಕಾರಣವಾಯಿತು. ಅದೇ ರೀತಿ ಇದು ಉತ್ಪಾದಕನ ಹಾಗೂ ಉತ್ಪಾದನೆಯ ಮೇಲೆ ಹಿಡಿತವನ್ನು ಇರಿಸಿಕೊಂಡಿತು.[56]

ಕಲ್ಯಾಣಿ ಸಾಲುಕ್ಯರ ಆಳ್ವಿಕೆಯ ಸಂದರ್ಭದಲ್ಲಿ ಆಡಳಿತವನ್ನು ನಡೆಸುತ್ತಿದ್ದವರೆಂದರೆ ಚಕ್ರವರ್ತಿಗಳು, ಮಹಾಮಂಡಲೇಶ್ವರರು, ಮಹಾಸಾಮಂತರು, ಪ್ರಭುಗಾವುಂಡರು ಮತ್ತು ಗಾವುಂಡರು.[57] ಇವರು ಕೇಂದ್ರ, ಪ್ರಾಂತೀಯ ಹಾಗೂ ಗ್ರಾಮದ ಆಡಳಿತವನ್ನು ನಡೆಸುತ್ತಿದ್ದರು. ಸ್ಥಳೀಯ ಆಡಳಿತ ವ್ಯವಸ್ಥೆ ನಾನಾ ಶಾಖೆಗಳಾಗಿ ವಿಂಗಡಣೆ ಹೊಂದಿದ್ದಿತು. ಕೆಲವು ಸ್ಥಳೀಯ ವಿಭಾಗಗಳಿಗೆ ಕಂಪಣಗಳೆಂಬ ಹೆಸರಿತ್ತು. ಆಡಳಿತದ ಸೌಕರ್ಯಕ್ಕೋಸ್ಕರ ನಗರಗಳನ್ನು ಸಮುದಾಯಗಳನ್ನಾಗಿಯೂ ವಿಂಗಡಿಸಲಾಗುತ್ತಿತ್ತು. ಪ್ರಭುಗಳು, ನಾಳ್ಗಾವುಂಡರು ಹಾಗೂ ದಂಡನಾಯಕರು ಆಡಳಿತಕ್ಕೆ ನಿಯುಕ್ತರಾಗಿದ್ದರು. ಅಧಿಕಾರಿಗಳಲ್ಲಿ ಗ್ರಾಮಮಹತ್ತರರು, ರಾಷ್ಟ್ರಮಹತ್ತರರು ಎಂಬ ಎರಡು ವರ್ಗಗಳಿದ್ದವು. ಇವರು ನಗರಶ್ರೇಣಿಗಳಿಗೆ ಇಲ್ಲವೆ ನಿಗಮ ಸಭೆಗಳಿಗೆ ಸಲಹೆಗಾರರಾಗಿದ್ದರು. ನಿಗಮಸಭೆಗಳಿಗೆ ಪಟ್ಟಣಶೆಟ್ಟಿಯು ಅಧ್ಯಕ್ಷನಾಗಿದ್ದನು. ಗಾವುಂಡರು ಮತ್ತು ಪೆರ್ಗಡೆಗಳು ನಾಡು ಅಥವಾ ಗ್ರಾಮದ ಮುಖ್ಯಸ್ಥರಾಗಿದ್ದರು.[58] ಗ್ರಾಮದ ಹಿರಿಯರು ಬ್ರಾಹ್ಮಣರಾಗಿದ್ದರೆ ಅವರಿಗೆ ಮಹಾಜನರೆಂದೂ, ವೈಶ್ಯರಾಗಿದ್ದರೆ ನಖರರೆಂದೂ ಹೆಸರಿತ್ತು. ಗ್ರಾಮದ ಗಡಿ ವಿವಾದಗಳು, ಆಸ್ತಿ ಸ್ವಾಮ್ಯ ಮುಂತಾದ ವಿಚಾರಗಳು ಮಹಾಜನರ ಮತ್ತು ಗ್ರಾಮ ಮುಖ್ಯಸ್ಥರ ತೀರ್ಮಾನದಂತೆ ಬಗೆಹರಿಯುತ್ತಿದ್ದವು. ಕಲ್ಯಾಣಿ ಚಾಲುಕ್ಯರ ಆಡಳಿತ ವಿಭಾಗಗಳಿಗೆ ಶಾಸನಗಳಲ್ಲಿ ಮಂಡಲ, ವಿಷಯ, ದೇಶ, ನಾಡು, ಕಂಪಣ ಎಂಬ ಪದಗಳನ್ನು ಬಳಸಲಾಗಿದೆ. ಅದೇ ರೀತಿ ಕಲಚೂರಿಗಳ ರಾಜ್ಯದ ಆಡಳಿತ ವಿಭಾಗಗಳನ್ನು ಮಂಡಲ, ಕೊಟ್ಟಂ, ನಾಡು, ಕುರ್ರಮ್ ಎಂಬ ಹೆಸರುಗಳಿಂದ ಕರೆಯಲಾಗಿದೆ. ಈ ವಿಭಾಗಗಳ ಆಡಳಿತಾಧಿಕಾರಿಗಳ ಹೆಸರುಗಳು ಬೇರೆ ಬೇರೆಯಾಗಿದ್ದರೂ ಆಡಳಿತದ ಸ್ವರೂಪದಲ್ಲಿ ಹೆಚ್ಚಿನ ಬದಲಾವಣೆಗಳು ಇರುತ್ತಿರಲಿಲ್ಲ. ಕಲಚೂರಿಗಳ ಆಡಳಿತದಲ್ಲಿ ಒಂದು ವಿಶೇಷವೆಂದರೆ ಅವರು ಕರಣಂ ಎಂಬ ಅಧಿಕಾರಿಗಳನ್ನು ಗೂಢಾಚಾರರನ್ನಾಗಿ ನೇಮಿಸಿರುವುದು.[59] ಈ ಅಧಿಕಾರಿಗಳು ಸಾಮಂತರಾಜರು, ಇತರ ಅಧಿಕಾರಿಗಳು ಹಾಗೂ ಪ್ರಜೆಗಳ ಮೇಲೆ ಕಣ್ಣಿಟ್ಟು ಕಾಯುತ್ತಿದ್ದರು. ಈ ವ್ಯವಸ್ಥೆಯು ಕೇಂದ್ರ ಪ್ರಭುತ್ವ ತನ್ನ ಬಲವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಸಹಾಯಕವಾಯಿತು.

ಹೊಯ್ಸಳರ ರಾಜ್ಯಾಡಳಿತ ವ್ಯವಸ್ಥೆಯು ತಮ್ಮ ರಾಜಕೀಯ ಪ್ರಭಾವವನ್ನು ವಿಸ್ತರಿಸಲು ಅನುಕೂಲಕರವಾಗುವ, ಅದೇ ರೀತಿ ದುರ್ಬಲ ಅರಸರನ್ನು ಅಧೀನಪಡಿಸಿಕೊಳ್ಳುವ ರೀತಿಯಲ್ಲಿ ಇತ್ತು ಎಂಬುದಾಗಿ ತಿಳಿದು ಬರುತ್ತದೆ. ಆಡಳಿತವನ್ನು ವಿಕೇಂದ್ರೀಕರಣಗೊಳಿಸಲಾಗಿತ್ತು. ಏಕೆಂದರೆ ಏಕೀಕೃತ ನಿಯಂತ್ರಣ ಸಾಧ್ಯವಿರಲಿಲ್ಲ. ಮಂತ್ರಿ ಪರಿಷತ್ತಿಗೆ ಪಂಚ ಪ್ರಧಾನ ಪರಿಷತ್ತು ಎಂಬ ಹೆಸರಿತ್ತು. ಹೊಯ್ಸಳರ ಐವರು ಪ್ರಧಾನರೆಂದರೆ, ಸಂಧಿ ವಿಗ್ರಹಿ, ಶ್ರೀಕರಣಾಧಿಕಾರಿ, ಹಿರಿಯ ಭಂಡಾರಿ, ಸೇನಾಧಿಪತಿ ಹಾಗೂ ಮಹಾ ಪಸಾಯಕ. ನೇರ ಹತೋಟಿಯಲ್ಲಿದ್ದ ಆಡಳಿತ ಪ್ರದೇಶಗಳನ್ನು ರಾಜಮನೆತನದ ಸದಸ್ಯರು ಅಥವಾ ದಂಡನಾಯಕರು ಆಳುತ್ತಿದ್ದರು. ರಾಜ್ಯವನ್ನು ನಾನಾ ಪ್ರಾಂತಗಳನ್ನಾಗಿ ವಿಭಾಗಿಸಲಾಗಿತ್ತು. ಅವುಗಳಲ್ಲಿ ತಲಕಾಡು, ಗಂಗವಾಡಿ, ಕಂಗನಾಡು, ನೊಳಂಬವಾಡಿ, ಪುನ್ನಾಡು, ಮಾಂಗಲಿ ಮುಂತಾದವು ಮುಖ್ಯವಾಗಿದ್ದವು.[60] ಈ ಎಲ್ಲಾ ಪ್ರಾಂತಗಳೂ ಮಾಂಡಲಿಕರ ಅಧೀನದಲ್ಲಿದ್ದವು. ಮಾಂಡಲಿಕರಲ್ಲಿ ಕೆಲವರು ಪರಂಪರಾಗತ ಮಾಂಡಲಿಕರಾದರೆ, ಇನ್ನು ಕೆಲವರು ರಾಜನಿಂದ ನಿಯುಕ್ತರಾದ ಸಾಮಂತ ಮಾಂಡಲಿಕರಾಗಿದ್ದರು. ಈ ಮಾಂಡಲಿಕರು ತಮ್ಮ ಆಡಳಿತ ವ್ಯಾಪ್ತಿಯೊಳಗೆ ಸ್ವತಂತ್ರ ಅಧಿಕಾರವನ್ನು ಪಡೆದಿದ್ದರು. ಇದು ಆಡಳಿತದಲ್ಲಿನ ಶ್ರೇಣೀಕೃತ ವ್ಯವಸ್ಥೆಯನ್ನು ಸೂಚಿಸುತ್ತದೆ. ಪ್ರಾಂತಗಳು ನಾಡುಗಳಾಗಿ ವಿಭಾಗಿಸಲ್ಪಟ್ಟಿದ್ದವು. ನಾಡುಗಳ ಆಡಳಿತಾಧಿಕಾರಿಗಳನ್ನು ಹೆಗ್ಗಡೆಗಳು ಎಂಬುದಾಗಿ ಕರೆಯಲಾಗುತ್ತಿತ್ತು. ಅವರೊಡನೆ ಶ್ರೀಕರಣ ಹೆಗ್ಗಡೆ, ಸುಂಕವೆಗ್ಗಡೆ, ಮನೆವೆಗ್ಗಡೆ, ಖನವೆಗ್ಗಡೆ, ಧಾಂಡಯವೆಗ್ಗಡೆಗಳೆನ್ನುವ ಅಧಿಕಾರಿಗಳು ಇರುತ್ತಿದ್ದರು. ನಾಡು ಹಂತದ ಗ್ರಾಮೀಣ ಗಣ್ಯರನ್ನು ಪ್ರಭುಗೌಡರು ಎಂಬುದಾಗಿ ಶಾಸನಗಳಲ್ಲಿ ಹೆಸರಿಸಲಾಗಿದೆ.[61] ನಾಡುಗಳ ಅಧಿಕಾರಿಗಳು ಮತ್ತು ಪ್ರಭುಗೌಡರು ಆಡಳಿತದ ಉದ್ದೇಶಗಳಿಗಾಗಿ ನಾಡಸಭೆಗಳನ್ನು ಕರೆಯುತ್ತಿದ್ದರು.[62] ಶಾಸನಗಳಲ್ಲಿ ಉಲ್ಲೇಖಿತವಾಗಿರುವ ಸೇವಭೋವ ಅಥವಾ ಶ್ಯಾನಭೋಗ ಎನ್ನುವ ಪದಗಳು ಗ್ರಾಮದ ಅಧಿಕಾರಿಗಳನ್ನು ಸೂಚಿಸುತ್ತದೆ. ಒಟ್ಟಾರೆಯಾಗಿ ಹೊಯ್ಸಳರ ಆಡಳಿತವು ಶ್ರೇಣೀಕೃತ ಸಮಾಜ ವ್ಯವಸ್ಥೆಗೆ ಅನುಗುಣವಾಗಿಯೇ ಇತ್ತು. ಆಡಳಿತದ ವಿವಿಧ ಹಂತಗಳು, ಅಲ್ಲಿನ ಅಧಿಕಾರಿವರ್ಗಗಳು, ಅವರ ಸಂಬಂಧಗಳು ಇವೆಲ್ಲವೂ ಶ್ರೇಣೀಕೃತ ಮಾದರಿಯಲ್ಲಿಯೇ ಇರುತ್ತಿದ್ದವು.

ಆಡಳಿತ ವ್ಯವಸ್ಥೆಯಲ್ಲಿ ಪುರುಷರ ಭಾಗವಹಿಸುವಿಕೆಯನ್ನು ಹೇಳುವ ಶಾಸನಗಳು, ಸಾಹಿತ್ಯಕೃತಿಗಳ ಸಂಖ್ಯೆಯೇ ಹೆಚ್ಚು. ಮಹಿಳೆಯರು ಆಡಳಿತ ನಿರ್ವಹಿಸಿದ್ದನ್ನು ಸೂಚಿಸುವ ಶಾಸನಗಳಿದ್ದರೂ ಶಾಸನ ಅಧ್ಯಯನಕಾರರಿಗೆ ಅವು ಪ್ರಾಮುಖ್ಯವಾಗಿ ಕಾಣಲಿಲ್ಲವೆಂದೇ ಹೇಳಬೇಕು. ಮಹಿಳೆಯರು ಆಡಳಿತದಲ್ಲಿ ಭಾಗವಹಿಸಿದ್ದರೂ ಅವರು ಪುರುಷರ ಅಧೀನ ರಾಗಿಯೇ ಆಡಳಿತ ನಡೆಸಿರಬೇಕು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುವ ಚರಿತ್ರೆಕಾರರ ಸಂಖ್ಯೆಯೇ ಹೆಚ್ಚು. ಏನೇ ಇದ್ದರೂ ಮಹಿಳೆಯರಂತೂ ಆಡಳಿತದಲ್ಲಿ ಭಾಗವಹಿಸುತ್ತಿದ್ದರೆಂಬುದು ಸ್ಪಷ್ಟ. ಆದರೆ ಹೆಚ್ಚಾಗಿ ಅರಸು ಮನೆತನಗಳಿಗೆ ಸಂಬಂಧಿಸಿದ ಮಹಿಳೆಯರು ಆಡಳಿತದಲ್ಲಿ ಪಾಲ್ಗೊಳ್ಳುತ್ತಿದ್ದರು. ಇದಕ್ಕೆ ಕೆಲವು ಉದಾಹರಣೆಗಳನ್ನು ಇಲ್ಲಿ ನೀಡಲಾಗಿದೆ. ಕಲ್ಯಾಣ ಚಾಲುಕ್ಯ ಆರನೆಯ ವಿಕ್ರಮಾದಿತ್ಯನ ಮಡದಿ ಜಾಕಲದೇವಿ, ಹೊಯ್ಸಳ ವಿಷ್ಣುವರ್ಧನನ ಮಡದಿ ಶಾಂತಲದೇವಿ, ಚಾಲುಕ್ಯ ವಿಕ್ರಮಾದಿತ್ಯನ ಮಗಳು ಮೈಳಲದೇವಿ ಮುಂತಾದವರು ತಮ್ಮ ಗಂಡ ಅಥವಾ ತಂದೆಯೊಂದಿಗೆ ಆಡಳಿತದಲ್ಲಿ ಭಾಗವಹಿಸಿರುವ ಉಲ್ಲೇಖಗಳು ಶಾಸನಗಳಲ್ಲಿ ಸಿಗುತ್ತವೆ.[63] ಇವರ‍್ಯಾರೂ ಸ್ವತಂತ್ರ ಆಡಳಿತಗಾರರಾಗಿರಲಿಲ್ಲ. ಆದರೆ ಅಕ್ಕದೇವಿ ಎನ್ನುವವಳು ಕಿಸುಕಾಡು ಎನ್ನುವ ಪ್ರದೇಶವನ್ನು ಸ್ವತಂತ್ರವಾಗಿ ಆಳುತ್ತಿದ್ದಳು ಎನ್ನುವ ಮಾಹಿತಿಯೂ ಸಿಗುತ್ತದೆ.[64]

ಅರಸು ಮನೆತನಗಳಿಗೆ ಸಂಬಂಧಿಸಿದ ಕೆಲವು ಮಹಿಳೆಯರು ಆಡಳಿತದಲ್ಲಿ ಪಾಲ್ಗೊಂಡಿದ್ದು ಶಾಸನಗಳಿಂದ ತಿಳಿಯುತ್ತದೆ. ಶಾಸನಗಳಲ್ಲಿ ಜಕ್ಕಿಯಬ್ಬೆ, ನಗಿಯಕ್ಕ, ಬಿಜ್ಜಯವ್ವೆ ಮುಂತಾದ ಮಹಿಳೆಯರು ನಾಳ್ಗಾವುಂಡ, ಗಾವುಂಡರಾಗಿ ಆಡಳಿತ ನಿರ್ವಹಿಸದ ವಿವರಣೆ ಸಿಗುತ್ತದೆ.[65] ಆದರೆ ಇವುಗಳನ್ನೇ ಆಧಾರವನ್ನಾಗಿಟ್ಟುಕೊಂಡು ಅಂದಿನ ಸ್ತ್ರೀಸಮಾಜದ ಬದುಕಿನ ಕುರಿತಾಗಿ ಖಚಿತ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಒಟ್ಟಾರೆಯಾಗಿ ಆಡಳಿತ ವ್ಯವಸ್ಥೆಯು ಮೊದಲೇ ತಿಳಿಸಿದಂತೆ ಒಂದು ರಾಜಕೀಯ ಒಪ್ಪಂದವಾಗಿದ್ದು ನಿಯಂತ್ರಣ ವ್ಯವಸ್ಥೆಯನ್ನು ಬಿಗಿಗೊಳಿಸುವುದರತ್ತಲೇ ಕೇಂದ್ರೀಕೃತವಾಗಿತ್ತು. ರಾಜ್ಯದ ವಿಂಗಡನೆ, ಅಧಿಕಾರಿಗಳ ನೇಮಕ ಇವೆಲ್ಲವೂ ಮೇಲ್‌ವರ್ಗಗಳ ಏಕಪಕ್ಷೀಯ ತೀರ್ಮಾನವಾಗಿತ್ತು. ಅರಸರು, ಸಾಮಂತರು ಹಾಗೂ ಇನ್ನಿತರ ಅಧಿಕಾರಿಗಳು ಪರಸ್ಪರ ಒಬ್ಬರಿಗೊಬ್ಬರು ಅಧೀನ ರಾಗಿದ್ದರೂ, ಸಾಮಾನ್ಯ ಜನ ಸಮುದಾಯದ ದೃಷ್ಟಿಯಿಂದ ಅವರೆಲ್ಲರೂ ಪ್ರಭುತ್ವದ ಸಂಕೇತಗಳೇ ಆಗಿದ್ದರು. ಉತ್ಪಾದಕನ ಉತ್ಪಾದನೆಯು ಆಡಳಿತ ವಿವಿಧ ವಿಭಾಗಗಳ ಮೂಲಕ ರಾಜ್ಯ ಬೊಕ್ಕಸಕ್ಕೆ ಸೇರುತ್ತಿತ್ತು. ಇದರಲ್ಲಿ ಉತ್ಪಾದಕನ ಪಾತ್ರವೇ ಹೆಚ್ಚಿನದು. ಈ ಕಾರಣಕ್ಕಾಗಿ ಆಳುವವರು ಮತ್ತು ಆಳಲ್ಪಡುವವರ ನಡುವಿನ ಸಂಬಂಧವು ಆಡಳಿತದ ಪರಸ್ಪರ ಸಂಬಂಧಗಳ ಸ್ವರೂಪವನ್ನು ನಿರ್ಧರಿಸುವ ಅಂಶವೂ ಆಗಿ ಕಂಡುಬರುತ್ತದೆ.[66] ಒಂದು ಪ್ರದೇಶದ ಆಡಳಿತ ವ್ಯವಸ್ಥೆಯ ಸಂಪೂರ್ಣ ಚಿತ್ರಣ ಸಿಗಬೇಕಾದರೆ ಆಡಳಿತ ನಡೆಸುವವರು ಹಾಗೂ ಅದಕ್ಕೆ ಒಳಗಾಗುವವರ ಕುರಿತಾದ ಅಧ್ಯಯನ ನಡೆಯಬೇಕು. ಆದರೆ ಅರಸಕೇಂದ್ರೀತ ಚರಿತ್ರೆ ಆಡಳಿತ ನಡೆಸುವವರ ಪರವಾಗಿ ಇರುತ್ತದೆಯೇ ಹೊರತು ಆಡಳಿತಕ್ಕೆ ಒಳಗಾಗುವವರ ಪರವಾಗಿಯಲ್ಲ. ಆಡಳಿತಕ್ಕೆ ಒಳಗಾಗುವವರು ಪ್ರಜೆಗಳು. ಅದರಲ್ಲೂ ಸಮಾಜದ ಕೆಳವರ್ಗದ ಜನತೆಯ ಮೆಲೆ ಸರಕಾರ ಮತ್ತು ಅದರ ಆಡಳಿತ ವ್ಯವಸ್ಥೆ ಬೀರಿದ ಪರಿಣಾಮಗಳ ಕುರಿತಾದ ಮಾಹಿತಿ ಸಿಗುವುದಿಲ್ಲ. ಇದರಿಂದಾಗಿ ಅಂದಿನ ಆಡಳಿತ ವಿಧಾನವು ಜನಜೀವನದ ಎಲ್ಲ ಅಂಶಗಳನ್ನು ಮುಟ್ಟುವಷ್ಟು ಚುರುಕಾಗಿತ್ತು ಎನ್ನುವ ತೀರ್ಮಾನವನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ.

 

[1] ಶ್ಯಾಮಚರಣ ದುಬೆ, ಭಾರತೀಯ ಸಮಾಜ, ನವದೆಹಲಿ, ೧೯೯೦, ಪು. ೬೭

[2] ದಿ ಆರ್ಡಿನೆನ್‌ಸಸ್ ಆಫ್ ಮನು, ಅನು.ಬರ್ನೆಲ್, ೧೧೧, ಪು. ೧೨, ೧೩

[3] ಎಚ್.ಎಲ್. ನಾಗೇಗೌಡ, ಪ್ರವಾಸಿ ಕಂಡ ಇಂಡಿಯಾ, ಸಂ-೧, ಪು. ೩೮

[4] ಎಂ. ಚಿದಾನಂದಮೂರ್ತಿ, ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ್, ಮೈಸೂರು, ೧೯೭೯, ಪು. ೪೧೭-೧೮

[5] ಬಸವರಾಜ ಕಲ್ಗುಡಿ, ಮಹಾಸತಿ ಆಚರಣೆ ಒಂದು ಅಧ್ಯಯನ, ಬೆಂಗಳೂರು, ೧೯೮೫, ಪು. ೨೦೯

[6] ಚನ್ನಕ್ಕ ಎಲಿಗಾರ, ಶಾಸನಗಳಲ್ಲಿ ಸ್ತ್ರೀ ಸಮಾಜ, ಧಾರವಾಡ, ೧೯೯೦, ಪು. ೫೪, ೫೫-೬೩

[7] ಎಂ. ಚಿದಾನಂದಮೂರ್ತಿ, ಪುರ್ವೋಕ್ತ, ಪು. ೪೩೦

[8] ಎ.ಎಸ್. ಆಲ್ಟೇಕರ್, ಎಜುಕೇಶನ್ ಇನ್ ಏನ್‌ಶ್ಯಂಟ್ ಇಂಡಿಯಾ, ವಾರಣಾಸಿ, ೧೯೬೫, ಪು. ೨೪೫-೨೪೬

[9] ಎಸ್. ಗುರುರಾಜಾಚಾರ್, ಪೂರ್ವೋಕ್ತ, ಪು. ೧೮೧-೨೨೦

[10] ಅದೇ, ಪು. ೧೮೯

[11] ಎಂ.ಎ.ಆರ್. ೧೯೨೩, ನಂ.೧, ಕ್ರಿ.ಶ. ೧೧೯೪-೯೫

[12] ಬಿ.ಆರ್. ಗೋಪಾಲ್ (ಸಂ.), ಪೂರ್ವೋಕ್ತ, ಪು. ೧೩೦-೧೩೭

[13] ಎ.ಇ.೧೨, ಪು. ೧೫೪, ಕ್ರಿ.ಶ. ೧೦೮೭

[14] ಎ.ಕ.೬, ಚಿಕ್ಕಮಗಳೂರು ೧೩೭, ಕ್ರಿ.ಶ. ೧೧೩೦

[15] ಎ.ಕ.೪, ಹಾಸನ ೧೩೭, ಕ್ರಿ.ಶ. ೧೧೬೨

[16] ಎ.ಕ.೭, ಶಿಕಾರಿಪುರ, ೧೮೫, ಕ್ರಿ.ಶ. ೧೧೫೮

[17] ಇ.ಆ.೧೩, ಪು.೯೪, ಕ್ರಿ.ಶ. ೧೦೮೪-೮೫; ಬಿ.ಕೆ.ಐ.೧-೨, ೧೫೯, ಕ್ರಿ.ಶ. ೧೧೧೧ ಇತ್ಯಾದಿ

[18] ಎಂ.ಚಿದಾನಂದಮೂರ್ತಿ, ಪೂರ್ವೋಕ್ತ, ಪು.೨೧೬

[19] ಬಿ.ಕೆ.ಐ. ೧-೧, ೬೪, ಕ್ರಿ.ಶ. ೧೦೨೮

[20] ಎ.ಕ.೭, ಶಿಕಾರಿಪುರ ೧೨೩, ಕ್ರಿ.ಶ. ೧೧೫೯

[21] ಎ.ಕ.೮, ಸೊರಬ ೨೭೭, ಕ್ರಿ.ಶ. ೧೧೬೫

[22] ಸೌ.ಇ.ಇ. ೨೦, ೧೮೦, ಕ್ರಿ.ಶ. ೧೧೯೨

[23] ಬಿ.ಆರ್. ಗೋಪಾಲ್ (ಸಂ.), ಪೂರ್ವೋಕ್ತ, ಪು.೧೩೦-೧೩೭

[24] ಹೈ.ಆ.ಸೀ.ನಂ.೮, ಶಾಸನ ಬಿ, ಕ್ರಿ.ಶ. ೧೦೫೮

[25] ಎ.ಇ.೧೬, ಪು. ೮೭, ಕ್ರಿ.ಶ.೧೦೬೭

[26] ಎ.ಕ.೭, ಶಿಕಾರಿಪುರ ೧೯೭, ಕ್ರಿ.ಶ. ೧೧೮೩

[27] ಬಿ.ಎಲ್. ರೈಸ್, ಮೈಸೂರು ಆಂಡ್ ಕೂರ್ಗ್ ಫ್ರಮ್ ದಿ ಇನ್ಸ್‌ಕ್ರಿಫ್ಷನ್ಸ್, ಲಂಡನ್, ೧೯೦೯, ಪು.೭೭, ೨೧೦

[28] ಆರ್.ಸಿ. ಮಜುಂದಾರ್ (ಸಂ.), ದಿ ಕ್ಸಾಸಿಕಲ್ ಏಚ್, ಪು.೨೧

[29] ಪಿ.ವಿ.ಕಾಣೆ, ಹಿಸ್ಟರಿ ಆಫ್ ಧರ್ಮಶಾಸ್ತ್ರ, ಪೂಣಾ, ೧೯೬೨, ಸಂ.೨, ಪು. ೯೦೭

[30] ಎಸ್.ವಿ.ವೆಂಕಟೇಶ್ವರ, ಇಂಡಿಯನ್ ಕಲ್ಚರ್ ಥ್ರೂ ದಿ ಏಜಸ್, ಮೈಸೂರು, ೧೯೨೮, ಸಂ.೧, ಪು.೧೭೯

[31] ಕ.ವಿ.ಶಾ.ಸಂ.೧, ಬಳ್ಳಾರಿ, ಪು.೭೯, ಕ್ರಿ.ಶ. ೧೦೪೪; ಸೌ.ಇ.ಇ.೯, ನಂ.೯೮

[32] ಎ.ಕ.೭, ಶಿಕಾರಿಪುರ ೧೧೮, ಕ್ರಿ.ಶ. ೧೦೫೪

[33] ಪಿ.ವಿ. ಕಾಣೆ, ಪೂರ್ವೋಕ್ತ, ಪು. ೯೦೯

[34] ಸೌ.ಇ.ಇ. ೨೦, ೨೩, ಕ್ರಿ.ಶ. ೧೦೨೯

[35] ಎ.ಎಸ್.ಆಲ್ಟೇಕರ್, ದಿ ರಾಷ್ಟ್ರಕೂಟಾಸ್ ಆಂಡ್ ದೇಯರ್ ಟೈಮ್ಸ್, ಪೂಣಾ, ೧೯೬೭, ಪು. ೪೦೩

[36] ಎಸ್. ಗುರುರಾಜಾಚಾರ್, ಪೂರ್ವೋಕ್ತ, ಪು.೨೦೧

[37] ಎ.ಕ.೮, ಶಿಕಾರಿಪುರ ೧೫೩, ಕ್ರಿ.ಶ. ೧೦೮೩

[38] ಚನ್ನಬಸವಯ್ಯ ಹಿರೆಮಠ, ಕುರುಗೋಡು ಸಿಂಧರು: ಒಂದು ಅಧ್ಯಯನ, ಕೊಪ್ಪಳ, ೧೯೯೫, ಪು. ೧೯೭-೧೯೮; ಎಸ್.ಕೆ.ಕೊಪ್ಪಾ, ತರ್ದವಾಡಿ ನಾಡು: ಒಂದು ಅಧ್ಯಯನ, ಇಂಡಿ, ೧೯೯೦, ಪು. ೧೭೮

[39] ಸೌ.ಇ.ಇ. ೫, ನಂ. ೮೪೯, ಕ್ರಿ.ಶ. ೧೦೪೪; ಸೌ.ಇ.ಇ. ೯-೧, ೨೩೫, ಕ್ರಿ.ಶ. ೧೧೪೮

[40] ಎಂ. ಚಿದಾನಂದಮೂರ್ತಿ, ಪೂರ್ವೋಕ್ತ, ಪು. ೨೩೨

[41] ಅದೇ, ಪು. ೨೪೦

[42] ಚನ್ನಕ್ಕ ಎಲಿಗಾರ, ಪೂರ್ವೋಕ್ತ.

[43] ಅದೇ, ಪು.೫೪

[44] ಎಂ.ಚಿದಾನಂದಮೂರ್ತಿ, ಪೂರ್ವೋಕ್ತ, ಪು. ೪೧೨; ಎಸ್. ಗುರುರಾಜಾಚಾರ್, ಪೂರ್ವೋಕ್ತ, ಪು. ೨೪೧

[45] ಎಸ್.ಶೆಟ್ಟರ್, ಆರ್ಟಿಸ್ಟ್ ಆಫ್ ಮೆಮೋರಿಯಲ್ ಸ್ಟೋನ್ಸ್, ೧೯೮೨, ಪು. ೧೨, ೧೩

[46] ಕೆ.ಎಸ್. ಕುಮಾರಸ್ವಾಮಿ, ಪೂರ್ವೋಕ್ತ, ಪು. ೧೨೪-೧೨೬

[47] ಎಸ್. ಗುರುರಾಜಾಚಾರ್, ಪೂರ್ವೋಕ್ತ. ಪು. ೨೧೬-೨೧೮

[48] ಎ.ಕ.೬ (ಹೊಸ ಸರಣಿ), ಕೃಷ್ಣರಾಜಪೇಟೆ ೬೬, ಕ್ರಿ.ಶ. ೧೧೧೭

[49] ಕೇಶವನ್ ಮೆಲುತೆಟ್, ದಿ ಪೊಲಿಟಿಕಲ್ ಸ್ಟ್ರಕ್ಚ್‌ರ್ ಆಫ್ ಅರ‍್ಲಿ ಮೆಡೀವಲ್ ಸೌತ್ ಇಂಡಿಯಾ, ದೆಹಲಿ, ೧೯೯೩, ಪು. ೧೩೦

[50] ವಿ.ಎಸ್. ಎಲಿಜಬೆತ್, ಪಾಲಿಟಿಕ್ಸ್ ಆಫ್ ಮ್ಯಾರೇಜ್: ದಿ ರಾಷ್ಟ್ರಕೂಟಾಸ್ ಆಂಡ್ ದಿ ಲೋಕಲ್ ಚೀಫ್ಸ್, ಪಿ.ಐ.ಎಚ್.ಸಿ. ೧೯೯೨

[51] ಎ.ಎಸ್.ಆಲ್ಟೇಕರ್, ದಿ ರಾಷ್ಟ್ರಕೂಟಾಸ್ ಆಂಡ್ ದೇಯರ್ ಟೈಮ್ಸ್, ಪೂರ್ವೋಕ್ತ, ಪು. ೧೫೦

[52] ಅದೇ. ಪು. ೧೯೬-೧೯೭

[53] ಅದೇ, ಆಲ್ಟೇಕರ್ ಅವರ ಪ್ರಕಾರ ಗ್ರಾಮಕೂಟರು ಮತ್ತು ಗ್ರಾಮಮಹತ್ತರರ ನಡುವೆ ನಿಯುಕ್ತ, ಆಯುಕ್ತ ಎಂಬ ಅಧಿಕಾರಿಗಳಿದ್ದರು. ಅವರು ಹಳ್ಳಿಗಳ ಆಡಳಿತಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು; ಆರ್.ಎಸ್. ಶರ್ಮ, ಇಂಡಿಯನ್ ಫ್ಯೂಡಲಿಸಂ, ಮದರಾಸು, ೧೯೯೦, ಪು.೧೯

[54] ಜಿ.ಎಸ್. ದೀಕ್ಷಿತ್, ಲೋಕಲ್ ಸೆಲ್ಫ್ ಗೌರ್ನ್‌ಮೆಂಟ್ ಇನ್ ಮೆಡೀವಲ್ ಕರ್ನಾಟಕ, ಧಾರವಾಡ, ೧೯೬೪, ಪು. ೫೯

[55] ಎಂ.ಟಿ.ಎಸ್. ನಾರಾಯಣರಾವ್, ರಿ ಇಂಟರ್‌ಪ್ರಿಟೇಷನ್ಸ್ ಇನ್ ಸೌತ್ ಇಂಡಿಯನ್ ಹಿಸ್ಟರಿ, ತ್ರಿವೇಂಡ್ರಂ, ೧೯೭೭ ಪು.೧೯

[56] ವಿ.ಎಸ್. ಎಲಿಜಬೆತ್, ರಾಷ್ಟ್ರಕೂಟ ಪ್ರಾಬಲ್ಯದ ಸಮಯದಲ್ಲಿದ್ದ ಕರ್ನಾಟಕದ ರಾಜಕೀಯ ಸ್ವರೂಪ, ಕರ್ನಾಟಕ ಚರಿತ್ರೆ, ಸಂಪುಟ ೨, (ಸಂ.) ಬಿ. ಸುರೇಂದ್ರರಾವ್, ಹಂಪಿ, ೧೯೯೭, ಪು. ೩೨

[57] ಜೆ.ಎಂ. ನಾಗಯ್ಯ, ಆರನೆಯ ವಿಕ್ರಮಾದಿತ್ಯನ ಶಾಸನಗಳು : ಒಂದು ಅಧ್ಯಯನ, ಬೆಳಗಾವಿ, ೧೯೯೨, ಪು. ೭೭

[58] ಜೆ.ಎಸ್. ದೀಕ್ಷಿತ್, ಪೂರ್ವೋಕ್ತ, ಪು. ೩೭

[59] ಕೆ.ಜಿ.ವಸಂತಮಾಧವ, ಕರ್ನಾಟಕದಲ್ಲಿ ಕಲಚೂರಿಗಳು, ಕರ್ನಾಟಕ ಚರಿತ್ರೆ, ಸಂಪುಟ ೨, (ಸಂ.) ಬಿ. ಸುರೇಂದ್ರರಾವ್, ಹಂಪಿ, ೧೯೯೭, ಪು. ೭೨

[60] ಆರ್.ಆರ್. ದಿವಾಕರ್ (ಸಂ.), ಕರ್ನಾಟಕ ಥ್ರೂ ದಿ ಏಜಸ್, ಬೆಂಗಳೂರು, ೧೯೬೮, ಪು. ೫೨೧

[61] ಎ.ಕ.೪ (ಹೊಸ ಸರಣಿ), ನಂಜನಗೂಡು ೩೭೯, ಕ್ರಿ.ಶ. ೧೨೯೨

[62] ಎ.ಕ.೫ (ಹೊಸ ಸರಣಿ), ಮೈಸೂರು ೨೧೫, ಕ್ರಿ.ಶ. ೧೧೭೫

[63] ಎ.ಕ.೨, ಶ್ರವಣಬೆಳಗೊಳ ೧೬೨, ಕ್ರಿ.ಶ. ೧೧೨೩; ಚನ್ನಕ್ಕ ಎಲಿಗಾರ, ಪೂರ್ವೋಕ್ತ.

[64] ಎ.ಇ.೧೫, ನಂ. ೬, ಸೂಡಿ, ಕ್ರಿ.ಶ. ೧೦೧೦

[65] ಚನ್ನಕ್ಕ ಎಲಿಗಾರ, ಪೂರ್ವೋಕ್ತ್.

[66] ವಿ.ಎಸ್. ಎಲಿಜಬೆತ್, ರಾಷ್ಟ್ರಕೂಟ ಪ್ರಾಬಲ್ಯದ ಸಮಯದಲ್ಲಿದ್ದ ಕರ್ನಾಟಕದ ರಾಜಕೀಯ ಸ್ವರೂಪ, ಪೂರ್ವೋಕ್ತ, ಪು.೧೬