ಕರ್ನಾಟಕದ ಚರಿತ್ರೆಯ ಅಧ್ಯಯನ ನಡೆಸುವಾಗ ಕ್ರಿಸ್ತಶಕ ೮ ರಿಂದ ೧೪ನೆಯ ಶತಮಾನಗಳ ಅವಧಿ ವಿಶಿಷ್ಟ ರೀತಿಯದ್ದಾಗಿ ಕಂಡುಬರುತ್ತದೆ. ಏಕೆಂದರೆ ಈ ಅವಧಿಯಲ್ಲಿನ ಸಮಾಜ ಅತ್ಯಂತ ಸಂಕೀರ್ಣ ರಚನೆಯುಳ್ಳದ್ದಾಗಿತ್ತು. ಸಾಮಾಜಿಕ ವಿಕಾಸದ ಪ್ರಕ್ರಿಯೆಗಳು ಬಹುಳತ್ವದ ವಿನ್ಯಾಸಗಳೊಂದಿಗೆ ಕಂಡುಬಂದವು. ಸಮಾಜದ ವಿಭಿನ್ನ ಸ್ತರಗಳು ಸ್ಪಷ್ಟವಾಗಿ ಕಾಣಿಸಿಕೊಳ್ಳುವ, ಒಟ್ಟೊಟ್ಟಿಗೆ ಇರುವ ಹಾಗೂ ಪ್ರತ್ಯೇಕವಾಗಿ ನಿಲ್ಲುವ ಸೂಚನೆಗಳು ಕಾಣಿಸಿಕೊಂಡವು. ಇಲ್ಲಿ ಸಮಾಜದ ವಿವಿಧ ಸ್ತರಗಳೆಂದರೆ, ಬೇಟೆ, ಪಶುಸಂಗೋಪನೆ, ಕೃಷಿ ಉದ್ದಿಮೆ ಮುಂತಾದವುಗಳನ್ನು ಆಧರಿಸಿ ನಿರ್ಮಾಣಗೊಂಡ ವ್ಯವಸ್ಥೆಗಳು. ಇವುಗಳ ಅಧ್ಯಯನ ಕೈಗೊಂಡಾಗ ಅಂದಿನ ಸಮಾಜ ಏಕರೂಪದ್ದಾಗಿರಲಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಮೇಲೆ ಹೇಳಿದ ಪ್ರತಿಯೊಂದು ವ್ಯವಸ್ಥೆಯೊಳಗೂ ಆಂತರಿಕ ಭಿನ್ನತೆ, ಬಿಕ್ಕಟ್ಟುಗಳು ಕಾಣಿಸಿಕೊಂಡು ಸಾಮಾಜಿಕ ರಚನೆ ಭಿನ್ನ ಸ್ವರೂಪವನ್ನು ಪಡೆದುಕೊಳ್ಳಲಾರಂಭಿಸಿತು. ಸಾಮಾಜಿಕವಾದ ಮತ್ತು ಧಾರ್ಮಿಕ ಆಚರಣೆಗೆ ಸಂಬಂಧಿಸಿದ ಅಂಗೀಕೃತ ಅಂತರಗಳು ಏರ್ಪಟ್ಟವು. ನೂತನವಾಗಿ ಉದಯಿಸುತ್ತಿದ್ದ ಸಾಮಾಜಿಕ ವ್ಯವಸ್ಥೆ ಒಟ್ಟು ಸಮಾಜದ ಮೇಲೆ ತನ್ನ ಮುದ್ರೆಯನ್ನು ಒತ್ತಿ ಸಾಮಾಜಿಕ ಹಿಡಿತವನ್ನು ಸಾಧಿಸುವಲ್ಲಿ ಯಶಸ್ವಿಯಾಯಿತು. ಈ ರೀತಿಯಾಗಿ ರೂಪುಗೊಂಡ ಸಾಮಾಜಿಕ ರಚನೆ ಅನೇಕ ರೀತಿಯ ಪ್ರಕ್ರಿಯೆಗಳನ್ನು ಎದುರಿಸಬೇಕಾಗಿ ಬಂತು. ಆದರೆ ಈ ಪ್ರಕ್ರಿಯೆಗಳು ಶಾಸ್ವತ ಪರಿಣಾಮವನ್ನು ಬೀರುವಲ್ಲಿ ಎಡವಿ ಸಾಮಾಜಿಕ ಗೊಂದಲವನ್ನಷ್ಟೇ ಹುಟ್ಟುಹಾಕಿದವು. ಈ ಗೊಂದಲಗಳು ಶ್ರೇಣೀಕೃತ ಸಮಾಜ ವ್ಯವಸ್ಥೆಯನ್ನು ಇನ್ನಷ್ಟು ಬಿಗಿಗೊಳಿಸಿದವು. ಉತ್ಪಾದನೆ ಮತ್ತು ಹಂಚಿಕೆಯ ವಿಧಾನಗಳು ಇದಕ್ಕೆ ಪೂರಕವಾಗಿಯೆ ಇದ್ದವು. ವರ್ಣ/ಜಾತಿ, ಕುಟುಂಬ, ಶಿಕ್ಷಣ ಮತ್ತು ಆಡಳಿತ ಈ ನಾಲ್ಕು ವ್ಯವಸ್ಥೆಗಳು ಸಾಮಾಜಿಕ ರಚನೆಯ ನಿರ್ಧಾರಕ ಅಂಶಗಳಾಗಿದ್ದವು. ಇವು ಸಮಾಜದಲ್ಲಿ ವಹಿಸುತ್ತಿದ್ದ ಪಾತ್ರ ಹಾಗೂ ಅದರ ಪರಿಣಾಮಗಳನ್ನು ಪ್ರಸ್ತುತ ಅಧ್ಯಾಯದಲ್ಲಿ ಚರ್ಚಿಸಲಾಗಿದೆ.

.೧ ಜಾತಿ

ಜಾತಿ ಎನ್ನುವುದು ಬೇರೆ ಬೇರೆ ಸಾಮಾಜಿಕ ಅಂತಸ್ತುಗಳನ್ನು ಸೂಚಿಸುವ ಪದ.ಇದೊಂದು ಕ್ರೂರ ಸಂಪ್ರದಾಯವಾಗಿದ್ದು, ನಿರ್ಜೀವ ಆಚರಣೆಗಳೊಂದಿಗೆ ಬೆಳೆದು ಬಂತು. ಜನರನ್ನು ಮೂಢಾಚಾರಗಳ ಬಲೆಯಲ್ಲಿ ಸಿಲುಕಿಸಿ ಗುಲಾಮರನ್ನಾಗಿ ಮಾಡುವ ವ್ಯವಸ್ಥೆಯೇ ಜಾತಿ ಪದ್ಧತಿ. ಮಧ್ಯಕಾಲೀನ ಕರ್ನಾಟಕದ ಸಾಮಾಜಿಕ ರಚನೆಯನ್ನು ಅಭ್ಯಸಿಸುವಾಗ ಜಾತಿ ಪದ್ಧತಿ ಪ್ರಬಲ ರಚನೆಯಾಗಿ ಕಂಡುಬರುತ್ತದೆ. ಪುರೋಹಿತಶಾಹಿಯು ಈ ವ್ಯವಸ್ಥೆಯ ಸ್ಥಾಪಕನಾಗಿ ಮತ್ತು ನಿರ್ದೇಶಕನಾಗಿ ಕಾರ್ಯನಿರ್ವಹಿಸಿತು. ಧರ್ಮವನ್ನು ವ್ಯವಸ್ಥೆಗೆ ಮಾಧ್ಯಮವನ್ನಾಗಿ ಬಳಸಿಕೊಳ್ಳಲಾಯಿತು. ರಾಜಪ್ರಭುತ್ವವು ತನ್ನ ಉದ್ದೇಶಗಳ ಈಡೇರಿಕೆಗಾಗಿ ಜಾತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿತು. ಮೇಲ್ವರ್ಗಗಳ ಒಲವನ್ನು ಗಳಿಸಲು ಅರಸರಿಗೆ ಜಾತಿ ಪದ್ಧತಿಯನ್ನು ಯಥಾಪ್ರಕಾರ ಮುಂದುವರೆಸಿಕೊಂಡು ಹೋಗುವುದು ಅನಿವಾರ್ಯವಾಗಿತ್ತು. ಈ ಉದ್ದೇಶಕ್ಕೆ ಪುರೋಹಿತಶಾಹಿಯ ಸಂಪೂರ್ಣ ಬೆಂಬಲವೂ ದೊರಕಿತು. ಈ ಕಾರಣಕ್ಕಾಗಿಯೇ ಜೈನ ಧರ್ಮ ಮತ್ತು ಬೌದ್ಧಧರ್ಮಗಳು ಆರಂಭಿಕ ಹಂತದಲ್ಲಿ ವೈದಿಕ ಧರ್ಮವನ್ನು ವಿರೋಧಿಸಿದವು. ಆದರೆ ಕ್ರಮೇಣ ಜೈನ ಮತ್ತು ಬೌದ್ಧಧರ್ಮಗಳು ತಮ್ಮಲ್ಲೇ ಜಾತಿ ನಿಯಮಗಳನ್ನು ಅಳವಡಿಸಿಕೊಂಡಿರುವುದು ಚರಿತ್ರೆಯಿಂದ ತಿಳಿದು ಬರುವ ಸತ್ಯ. ಭಕ್ತಿ ಪಂಥವು ವೈದಿಕ ಪರಂಪರೆಯ ಸಂಪ್ರದಾಯಗಳನ್ನು ವಿರೋಧಿಸಿ ಪುರೋಹಿತ ಶಾಹಿಯ ವರ್ಣ ವ್ಯವಸ್ಥೆಗೆ ತಾತ್ಕಾಲಿಕವಾದ ತಡೆಯನ್ನು ನಿರ್ಮಿಸಿತು. ಹನ್ನೆರಡನೆಯ ಶತಮಾನದಲ್ಲಿ ಆರಂಭಗೊಂಡ ವೀರಶೈವ ಆಂದೋಲನವು ವೈದಿಕ ಪ್ರಭುತ್ವವನ್ನು ಮತ್ತು ಜಾತಿ ವ್ಯವಸ್ಥೆಯ ಶ್ರೇಣೀಕರಣವನ್ನು ವಿರೋಧಿಸಿತು. ಆದರೆ ಇವು ಯಾವುವೂ ಜಾತಿ ಪದ್ಧತಿಯನ್ನು ಶಾಶ್ವತವಾಗಿ ಹೋಗಲಾಡಿಸುವಲ್ಲಿ ಯಶಸ್ವಿಯಾಗಲಿಲ್ಲ.

ವೃತ್ತಿ ಆಧಾರದ ಮೇಲೆ ರೂಪುಗೊಂಡಿದ್ದ ಸಮಾಜ ಕ್ರಮೇಣ ವರ್ಣ ವ್ಯವಸ್ಥೆಗೆ ಪರಿವರ್ತನೆಗೊಂಡು ನಂತರ ಜಾತಿ ವ್ಯವಸ್ಥೆಗೆ ಪರಿವರ್ತನೆಗೊಂಡಿರುವುದು ಈಗಾಗಲೇ ಸಾಕಷ್ಟು ಚರ್ಚೆಗೆ ಒಳಪಟ್ಟಿರುವಂತದ್ದು. ವರ್ಣ ವ್ಯವಸ್ಥೆಗಿಂತ ಮೊದಲು ಜಾತಿಗಳು ಹುಟ್ಟಿಕೊಂಡಿದ್ದವು ಎನ್ನುವ ವಾದವೂ ಇದೆ. ವರ್ಣ ಮತ್ತು ಜಾತಿ ಎನ್ನುವ ಪದಗಳ ಬಗ್ಗೆ ಎಷ್ಟೇ ವ್ಯಾಖ್ಯಾನಗಳು ಬಂದರೂ ಅವುಗಳ ಸಂದರ್ಭದಲ್ಲಿನ ಗೊಂದಲವಂತೂ ನಿವಾರಣೆಯಾಗಿಲ್ಲ. ಸಮಾನ ಧಾರ್ಮಿಕ ಆಚರಣೆಗಳುಳ್ಳ ಜಾತಿಗಳನ್ನು ಒಟ್ಟುಗೂಡಿಸಿ ಅನುಕ್ರಮವಾಗಿ ಶ್ರೇಣೀಕರಿಸುವುದು ವರ್ಣ ವ್ಯವಸ್ಥೆ. ಆದರೆ ಇದು ವಾಸ್ತವ ಸಾಮಾಜಿಕ ಚಿತ್ರಣವನ್ನು ನೀಡುವುದಿಲ್ಲ. ಜಾತಿ ವ್ಯವಸ್ಥೆಯಲ್ಲಿ ಬರುವ ಅನೇಕ ಜಾತಿಗಳು ಇದರಲ್ಲಿ ತಮ್ಮ ನೆಲೆಯನ್ನು ಕಳೆದುಕೊಂಡು ಬಿಡುತ್ತವೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ, ಬುಡಕಟ್ಟುಗಳು. ಜಾತಿ ಪದವು ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಅರ್ಥವನ್ನು ಕೊಡುತ್ತಿರುತ್ತದೆ. ಇದರಲ್ಲಿ ನೀತಿ, ನಿಯಮಗಳು ಮೊದಲೇ ರೂಪುಗೊಂಡಿರುತ್ತವೆ. ವ್ಯಕ್ತಿಯ ಜೀವನದ ಪ್ರತಿಯೊಂದು ಹಂತವನ್ನೂ ಅದು ನಿರ್ಧರಿಸುತ್ತಿರುತ್ತದೆ. ಮಾನವ ಬದುಕಿದ್ದಾಗ ಮಾತ್ರವಲ್ಲದೆ ಸತ್ತ ಮೇಲೂ ಅವನಿರಬೇಕಾದ ಜಾಗವನ್ನು ಜಾತಿಯೇ ನಿರ್ಧರಿಸುತ್ತದೆ. ಈ ವ್ಯವಸ್ಥೆಯಲ್ಲಿ ಆದಿವಾಸಿ ಬುಡಕಟ್ಟುಗಳು ಹಾಗೂ ಅಲೆಮಾರಿಗಳು ಮನುಷ್ಯವರ್ಗಕ್ಕೆ ಸೇರಿದವರೇ ಅಲ್ಲ ಎನ್ನುವ ತೀರ್ಮಾನವಿದೆ. ಅವರು ಸವಲತ್ತುಗಳನ್ನು ಪಡೆಯುವುದಾಗಲಿ, ವೃತ್ತಿಗಳನ್ನು ಬದಲಾಯಿಸುವುದಾಗಲಿ ಸಾಧ್ಯವಿರಲಿಲ್ಲ. ಈ ವ್ಯವಸ್ಥೆಯಲ್ಲಿ ಮೇಲ್ವರ್ಗ ಮೇಲ್ವರ್ಗವಾಗಿಯೇ ಇತ್ತು ಹಾಗೂ ಕೆಳವರ್ಗ ಕೆಳವಎಗವಾಗಿಯೇ ಇತ್ತು. ಸಾಮಾಜಿಕ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ವೇದಗಳ ಮೂಲಕ ಕಾನೂನಿನ ಚೌಕಟ್ಟನ್ನು ನಿರ್ಮಿಸಲಾಯಿತು. ಇದಕ್ಕೆ ಮೂಲಕಾರಣವೆಂದರೆ ಬ್ರಾಹ್ಮಣ ಮತ್ತು ಕ್ಷತ್ರಿಯರು ಅಲ್ಪಸಂಖ್ಯಾತರಾಗಿರುವುದೇ ಆಗಿತ್ತು.[1] ಬಹುಸಂಖ್ಯಾತರಾಗಿದ್ದ ವೈಶ್ಯ ಹಾಗೂ ಶೂದ್ರರನ್ನು ಹತೋಟಿಯಲ್ಲಿಡಲು ಈ ಚೌಕಟ್ಟು ಅನಿವಾರ್ಯವಾಗಿತ್ತು.

ಜಾತಿಗಳಲ್ಲೆಲ್ಲ ಬ್ರಾಹ್ಮಣ ಶ್ರೇಷ್ಠ ಎಂಬುದು ಸಾರ್ವತ್ರಿಕವಾಗಿ ಒಪ್ಪಿತವಾಗಿದ್ದಿತು. ಅಂದಿನ ಸಾಹಿತ್ಯ ಕೃತಿಗಳು ಮತ್ತು ಶಾಸನಗಳು ಈ ಕುರಿತು ಹೇರಳವಾದ ಮಾಹಿತಿಗಳನ್ನು ನೀಡುತ್ತವೆ. ಅವುಗಳಲ್ಲಿ ಹದಿನೆಂಟು ಜಾತಿಗಳ ಉಲ್ಲೇಖಗಳಿದ್ದು, ಮೊದಲನೆಯದು ಬ್ರಾಹ್ಮಣ, ಕೊನೆಯದು ಅಂತ್ಯಜ ಅಥವಾ ಹೊಲೆಯ ಎನ್ನುವ ವಿವರಗಳಿವೆ. ಇದು ಅಂದಿನ ಶ್ರೇಣೀಕೃತ ಸಮಾಜ ವ್ಯವಸ್ಥೆಯ ಯಥಾವತ್ತಾದ ಚಿತ್ರಣವಾಗಿ ಕಂಡುಬರುತ್ತದೆ. ಜಾತಿಗಳು ಹದಿನೆಂಟು ಎಂಬುದು ಒಂದು ಅಂಗೀಕೃತವಾದ ಮಾತಾಗಿದ್ದಿರಬಹುದೆಂದು ತೋರುತ್ತದೆ. ಏಕೆಂದರೆ ಜಾತಿಗಳು ಹದಿನೆಂಟಕ್ಕಿಂತ ಎಷ್ಟೋ ಹೆಚ್ಚಾಗಿದ್ದವು ಎಂಬುದು ಶಾಸನಗಳಿಂದ ಮತ್ತು ಸಾಹಿತ್ಯ ಕೃತಿಗಳಿಂದ ಗೊತ್ತಾಗುತ್ತದೆ. ವಚನಕಾರರು ಹದಿನೆಂಟು ಜಾತಿಗಳ ಪಟ್ಟಿಯನ್ನು ಕೊಟ್ಟಿದ್ದಾರೆ. ಸೊಡ್ಡಳ ಬಾಚರಸ ಎನ್ನುವವನು ಮನುಷ್ಯನ ದೇಹದ ಪ್ರತಿಯೊಂದು ಅಂಗಕ್ಕೂ ಒಂದೊಂದು ಜಾತಿಯನ್ನು ಸಮೀಕರಿಸಿ, ಹದಿನೆಂಟು ಹಾತಿಗಳ ಪಟ್ಟಿಯನ್ನು ಕೊಟ್ಟಿದ್ದಾನೆ. ಅವುಗಳೆಂದರೆ; ಬ್ರಾಹ್ಮಣ (ಶಿಖಿ), ಕ್ಷತ್ರಿಯ (ನಯನ), ಬಣಜಿಗ (ನಾಸಿಕ), ಒಕ್ಕಲಿಗ (ತುಟಿ), ಗೊಲ್ಲ (ಕರ್ಣ), ಕುಂಬಾರ (ಕೊರಳು), ಪಂಚಾಳ (ಬಾಹು), ಉಪ್ಪಾರ (ಅಂಗೈ), ನಾಯಿಂದ (ಉಗುರು), ಡೊಂಬ (ಒಡಲು), ಅಗಸ (ಬೆನ್ನು), ಜೇಡ (ಚರ್ಮ), ಕಬ್ಬಿಲ (ಪೃಷ್ಠ), ಹೊಲೆಯ (ಒಳೆದೊಡೆ), ಈಳಿಗ (ಮಣಿಕಾಲು), ಸಮಗಾರ (ಕಣಗಾಲು), ಮಚ್ಚಿಗ (ಮೇಗಾಲು), ಮತ್ತು ಶುದ್ಧ ಮಾದಿಗ (ಅಂಗಾಲು). ಅಂಬಿಗರ ಚೌಡಯ್ಯನು ಇದೇ ರೀತಿ ಮನುಷ್ಯನ ದೇಹದ ಪ್ರತಿಯೊಂದು ಅಂಗಕ್ಕೂ ಒಂದೊಂದು ಜಾತಿಯನ್ನು ಸಮೀಕರಿಸಿ ಹದಿನೆಂಟು ಜಾತಿಗಳ ಉಲ್ಲೇಖ ಮಾಡಿದ್ದಾನೆ.1ಎ ಮೇಲಿನ ಉಲ್ಲೇಖಗಳು ಮನುಷ್ಯನ ದೇಹವನ್ನು ಆಧಾರವನ್ನಾಗಿಟ್ಟುಕೊಂಡು ಸಮಾಜದ ವಿಭಿನ್ನ ಸ್ತರಗಳನ್ನು ವಿವರಿಸುವ ಪ್ರಯತ್ನವಾಗಿ ಕಂಡುಬರುತ್ತವೆ. ಮನುಷ್ಯನ ದೇಹದ ಅಂಗಗಳು ಇಲ್ಲಿ ಸಾಂಕೇತಿಕವಾಗಿ ಕಂಡುಬರುತ್ತವಷ್ಟೆ. ಸಮಾಜವನ್ನು ಒಬ್ಬ ವ್ಯಕ್ತಿಯಲ್ಲಿ ಕಾಣುವ ವಚನಕಾರರ ದೃಷ್ಟಿ ಮತ್ತು ಆಶಯಗಳು ಏನೇ ಇದ್ದರೂ, ಅದು ಅಂದಿನ ಜಾತಿ ವ್ಯವಸ್ಥೆಯ ಹಾಗೂ ಸಮಾಜದ ರಚನೆಯ ಸ್ವರೂಪವನ್ನು ತಿಳಿಯಲು ಸಹಕಾರಿಯಾಗುತ್ತದೆ.

ರಾಷ್ಟ್ರಕೂಟರ ಆಳ್ವಿಕೆಯಿಂದ ಹೊಯ್ಸಳರ ಅವನತಿಯವರೆಗಿನ ಅವಧಿಯಲ್ಲಿ ವರ್ಣ ವ್ಯವಸ್ಥೆ ಅಥವಾ ವರ್ಣಾಶ್ರಮಧರ್ಮ ಸಮಾಜದ ಮೂಲ ಆಧಾರವಾಗಿತ್ತು ಎನ್ನುವುದಂತೂ ಸ್ಪಷ್ಟ. ಸಮಾಜವನ್ನು ನಾಲ್ಕು ವರ್ಗಗಳನ್ನಾಗಿ ವಿಂಗಡಿಸಲಾಗಿತ್ತು. ಅವುಗಳೆಂದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ.[2] ಕವಿರಾಜಮಾರ್ಗದಲ್ಲಿ ಈ ನಾಲ್ಕು ವರ್ಣಗಳನ್ನು ವೈಶ್ಯ, ಬ್ರಾಹ್ಮಣ, ಕ್ಷತ್ರಿಯ, ಶೂದ್ರ ಈ ಅನುಕ್ರಮದಲ್ಲಿ ಹೇಳಲಾಗಿದೆ. ಪಶುಪಾಲನೆ, ಅಧ್ಯಯನ, ರಾಜ್ಯಭಾರ, ವ್ಯವಸಾಯ ಇವು ನಾಲ್ಕು ವರ್ಣಗಳ ವೃತ್ತಿಗಳು ಎಂಬುದಾಗಿ ಹೇಳಲಾಗಿದೆ. ವರ್ಣ ವ್ಯವಸ್ಥೆಯಲ್ಲಿ ಸಾಮಾಜಿಕ ತಾರತಮ್ಯ ಸ್ಪಷ್ಟವಾಗಿ ಸ್ಥಾಪಿತವಾಗಿದ್ದಿದು ಇದರಿಂದ ತಿಳಿಯುತ್ತದೆ. ವರ್ಣ ಎನ್ನುವ ಪದವನ್ನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎನ್ನುವ ನಾಲ್ಕು ಗುಂಪುಗಳಿಗೆ ಅನ್ವಯವಾಗುವಂತೆ ವಿವರಿಸಿ ಸಾಮಾಜಿಕ ರಚನೆಯನ್ನು ಅರ್ಥೈಸಿಕೊಳ್ಳುವುದು ಸಾಂಪ್ರದಾಯಕ ಅಧ್ಯಯನ ವಿಧಾನ. ವರ್ಣ ವ್ಯವಸ್ಥೆಯ ಈ ವರ್ಗೀಕರಣ ಸರಳೀಕೃತವಾದದ್ದು. ವರ್ಣ ವ್ಯವಸ್ಥೆ ಮೇಲ್ನೋಟಕ್ಕೆ ಕಂಡಂತೆ ಇರಲಿಲ್ಲ. ಅದರೊಳಗೆ ಭಿನ್ನತೆಗಳು, ವೈರುಧ್ಯಗಳು ತುಂಬಿಕೊಂಡಿದ್ದವು. ವರ್ಣ ವ್ಯವಸ್ಥೆಯೊಳಗಿನ ಭಿನ್ನತೆ ಹಾಗೂ ವೈರುಧ್ಯಗಳ ಅಧ್ಯಯನ ನಡೆಸಿದಾಗ ಮಾತ್ರ ಆಯಾ ಸಂದರ್ಭದ ಸಮಾಜವನ್ನು ಅರ್ಥೈಸಿಕೊಳ್ಳಲು ಸಾಧ್ಯ.

ವರ್ಣ ವ್ಯವಸ್ಥೆಯಲ್ಲಿ ಬರುವ ನಾಲ್ಕು ವರ್ಣಗಳವರು ತಮ್ಮದಲ್ಲದ ವೃತ್ತಿಗಳನ್ನು ಅವಲಂಬಿಸಿರುತ್ತಿದ್ದರು ಎನ್ನುವುದು ಹಲವಾರು ಶಾಸನಗಳಿಂದ ಮತ್ತು ಕಾವ್ಯಗಳಿಂದ ತಿಳಿದುಬರುತ್ತದೆ. ಶೂದ್ರನೊಬ್ಬ ರಾಜನಾದರೆ ಅಥವಾ ವರ್ತಕನಾದರೆ ಅವನು ತನ್ನನ್ನು ಕ್ಷತ್ರಿಯನೆಂದೋ, ವೈಶ್ಯನೆಂದೋ ಕರೆದುಕೊಳ್ಳಲು ಅಂಥ ಸಾಮಾಜಿಕ ಅಡ್ಡಿಯೇನೂ ಇರಲಿಲ್ಲ. ಆದರೆ ಬ್ರಾಹ್ಮಣರು ಈ ವ್ಯವಸ್ಥೆಯಲ್ಲಿ ಮೇಲಿನ ಸ್ಥಾನವನ್ನು ಪಡೆದಿದ್ದರು ಎನ್ನುವುದಂತೂ ನಿಜ. ವೃತ್ತಿಗಳಲ್ಲಿ ಯಾವ ರೀತಿಯ ಬದಲಾವಣೆಗಳು ಕಾಣಿಸಿಕೊಳ್ಳುತ್ತಿದ್ದರೂ ಬ್ರಾಹ್ಮಣರ ಅಂತಸ್ತು, ಪ್ರಭಾವ ಉನ್ನತವಾಗಿಯೇ ಉಳಿದಿತ್ತು. ಇನ್ನುಳಿದ ಮೂರು ವರ್ಣಗಳು ಬ್ರಾಹ್ಮಣರ ಮೂಲಕ ತಮ್ಮ ಸ್ಥಾನವನ್ನು ಗುರುತಿಸಿಕೊಳ್ಳಬೇಕಾದ ಒತ್ತಾಯಕ್ಕೆ ಒಳಗಾಗಿದ್ದವು. ಬ್ರಾಹ್ಮಣರು ಸಮಾಜದ ಮಾರ್ಗದರ್ಶಕರು ಎಂಬುದಾಗಿ ವರ್ಣ ವ್ಯವಸ್ಥೆ ತೀರ್ಮಾನಿಸಿದ್ದು, ಇನ್ನುಳಿದ ವರ್ಣಗಳು ಅವರ ಸೇವಕರು ಎನ್ನುವ ಮಾತುಗಳು ಅದರಲ್ಲಿ ಬರುತ್ತವೆ. ಕ್ಷತ್ರಿಯರು, ವೈಶ್ಯರು ಮತ್ತು ಕ್ರೂರರು ತಮ್ಮೊಳಗೆ ಅನೇಕ ಗುಂಪುಗಳಾಗಿ ಒಡೆದು ಪರಸ್ಪರ ದ್ವೇಷಿಸುವ ಪ್ರವೃತ್ತಿಗಳು ಕಾಣಿಸಿಕೊಂಡದ್ದು ಬ್ರಾಹ್ಮಣರಿಗೆ ಅನುಕೂಲಕರವಾದ ವಾತಾವರಣವನ್ನು ಸೃಷ್ಟಿಸಿತು. ಬ್ರಾಹ್ಮಣರು ಜಾತಿ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಸದಾ ಜಾಗರೂಕರಾಗಿರುತ್ತಿದ್ದರು. ಈ ಪ್ರಕ್ರಿಯೆಗಳು ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಅಡ್ಡಿಯಾಗಿ ಪರಿಣಮಿಸಿದವು. ಬ್ರಾಹ್ಮಣರಲ್ಲಿಯೂ ಉನ್ನತ ದರ್ಜೆಯ ಮತ್ತು ಕೆಳದರ್ಜೆಯ ಬ್ರಾಹ್ಮಣರಿರುತ್ತಿದ್ದರು.[3] ವೇದ, ಶಾಸ್ತ್ರಗಳನ್ನು ಅಧ್ಯಯನ ಮತ್ತು ಅಧ್ಯಾಪನ ಮಾಡುವ, ಪೂಜೆ, ಆರಾಧನೆ ಮುಂತಾದ ಕೆಲಸಕಾರ್ಯಗಳನ್ನು ಮಾಡುವ ಬ್ರಾಹ್ಮಣರು ಉನ್ನತದರ್ಜೆಯವರಾಗಿದ್ದರು. ಕ್ಷತ್ರಿಯರು ಮತ್ತು ವೈಶ್ಯರು ಮಾಡುವ ಕೆಲಸಕಾರ್ಯಗಳನ್ನು ಮಾಡುವ ಮತ್ತು ಸೇನೆಗೆ ಸೇರಿದ ಬ್ರಾಹ್ಮಣರು ಎರಡನೆಯ ದರ್ಜೆಯವರಾಗಿದ್ದರು. ಇವರು ಬ್ರಾಹ್ಮಣರದಲ್ಲದ ಕೆಲಸಕಾರ್ಯಗಳನ್ನು ಮಾಡುತ್ತಿದ್ದುದರಿಂದಾಗಿ ತೆರಿಗೆಯನ್ನು ಪಾವತಿಸಬೇಕಾಗಿತ್ತು. ಹೀಗೆ ಬ್ರಾಹ್ಮಣರಲ್ಲಿ ದೇವಾಲಯದ ಪುರೋಹಿತರು, ಅಧಿಕಾರಿಗಳು, ವ್ಯಾಪಾರಸ್ಥರು ಮತ್ತು ಅಗ್ರಹಾರವನ್ನು ಪಡೆದವರು ಮುಂತಾದ ಪಂಗಡಗಳಿದ್ದವು. ಒಟ್ಟಾರೆಯಾಗಿ ಬ್ರಾಹ್ಮಣರು ಸಮಾಜದಲ್ಲಿ ಉನ್ನತಸ್ಥಾನವನ್ನು ಹೊಂದಿದ್ದರು. ಬ್ರಾಹ್ಮಣರ ಧಾರ್ಮಿಕ ಸ್ಥಾನಮಾನಕ್ಕೂ, ರಾಜಕೀಯ, ಆರ್ಥಿಕ ಸ್ಥಾನಮಾನಕ್ಕೂ ನಡುವೆ ನಿಕಟವಾದ ಸಂಬಂಧಗಳಿದ್ದವು. ರಾಜರು, ಅಧಿಕಾರಿಗಳು ಮತ್ತು ಇತರ ವರ್ಗದವರು ಬ್ರಾಹ್ಮಣರಿಗೆ ಉಡುಗೊರೆ, ಕಾಣಿಕೆ, ಭೂಮಿದಾನವನ್ನು ನೀಡುತ್ತಿದ್ದರು. ಬ್ರಾಹ್ಮಣರಿಗೆ ಕಾಣಿಕೆಯನ್ನರ್ಪಿಸಿದರೆ ಪುಣ್ಯ ಬರುತ್ತದೆ ಎನ್ನುವ ಧಾರ್ಮಿಕ ನಂಬಿಕೆಯನ್ನು ಸಮಾಜದಲ್ಲಿ ಮೂಡಿಸಲಾಗಿತ್ತು. ಬ್ರಹ್ಮದೇಯ ಭೂಮಿಯ ಮಹಾಜನರಾಗಿ ಬ್ರಾಹ್ಮಣರು ಆಡಳಿತವನ್ನೂ ನಡೆಸುತ್ತಿದ್ದರು. ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರು, ಹೊಯ್ಸಳರು ಹಾಗೂ ಅವರ ಸಾಮಂತ ಅರಸರುಗಳು ಬ್ರಾಹ್ಮಣರಿಗೆ ಭೂಮಿಯನ್ನು ದಾನ ನೀಡಿದ ವಿವರಗಳನ್ನು ನೀಡುವ ನೂರಾರು ಶಾಸನಗಳು ಲಭ್ಯವಿವೆ.

ಸಾಮಾಜಿಕ ಶ್ರೇಣಿಯಲ್ಲಿ ಬ್ರಾಹ್ಮಣರ ನಂತರದ ಸ್ಥಾನ ಕ್ಷತ್ರಿಯರದ್ದು. ರಾಜ್ಯವನ್ನು ಆಳುವುದು ಮತ್ತು ಪ್ರಜೆಗಳನ್ನು ರಕ್ಷಿಸುವುದು ಕ್ಷತ್ರಿಯರ ಮುಖ್ಯ ಕರ್ತವ್ಯವಾಗಿತ್ತು. ಬ್ರಾಹ್ಮಣರಂತೆ ಕ್ಷತ್ರಿಯರಿಗೆ ಎಲ್ಲ ಕಾಲದಲ್ಲಿಯೂ ಪ್ರಧಾನವಾದ ಸ್ಥಾನವಾಗಲಿ, ಪಾತ್ರವಾಗಲಿ ಇರಲಿಲ್ಲ. ಏಕೆಂದರೆ ಕ್ಷತ್ರಿಯರ ಸ್ಥಾನಮಾನ ರಾಜಕೀಯ ಶಕ್ತಿ ಮತ್ತು ಅಧಿಕಾರವನ್ನು ಅವಲಂಬಿಸಿಕೊಂಡಿತ್ತು. ಸೈನಿಕ ವರ್ಗ ಇದರಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತಿತ್ತು. ಸಾಮಂತ ಅರಸರುಗಳೂ ತಮ್ಮದು ಕ್ಷತ್ರಿಯ ಸ್ಥಾನಮಾನವೆಂದು ಹೇಳಿಕೊಂಡರು. ಆ ಕಾರಣಕ್ಕಾಗಿಯೇ ತಮ್ಮ ಮೂಲವನ್ನು ಸೂರ್ವವಂಶ, ಚಂದ್ರವಂಶ ಎನ್ನುವ ಪೌರಾಣಿಕ ಮೂಲಗಳಿಂದ ಗುರುತಿಸಿಕೊಳ್ಳಲು ಪ್ರಯತ್ನಪಟ್ಟರು. ಕ್ಷತ್ರಿಯರಲ್ಲೂ ಮೇಲ್‌ದರ್ಜೆಯ ಕ್ಷತ್ರಿಯರು ಮತ್ತು ಕೆಳದರ್ಜೆಯ ಕ್ಷತ್ರಿಯರಿರುತ್ತಿದ್ದರು. ಆಳ್ವಿಕೆ ನಡೆಸುವವರು ಮತ್ತು ಗಣ್ಯರು (ನೊಬಿಲಿಟಿ) ಮೇಲ್‌ದರ್ಜೆಯವರಾದರೆ ವೈಶ್ಯರು ಮತ್ತು ಶೂದ್ರರು ಮಾಡುವ ಕೆಲಸವನ್ನು ಮಾಡುವವರು ಸಾಮಾನ್ಯದರ್ಜೆಯವರಾಗಿದ್ದರು.[4] ಕ್ಷತ್ರಿಯರು ಪುರೋಹಿತವರ್ಗದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುತ್ತಿದ್ದರು. ಏಕೆಂದರೆ ಪುರೋಹಿತರು ಕ್ಷತ್ರಿಯರ ರಾಜಕೀಯ ಅಧಿಕಾರವನ್ನು ಶಾಸನಬದ್ಧಗೊಳಿಸುತ್ತಿದ್ದರು. ಕ್ಷತ್ರಿಯ ಸ್ಥಾನಮಾನವನ್ನು ಪಡೆಯಲು ಶಾಸನ ಬದ್ಧಗೊಳ್ಳುವುದು ಅವಶ್ಯಕವಾಗಿತ್ತು. ಹುಟ್ಟಿನಿಂದ ಕ್ಷತ್ರಿಯರಾಗಿಲ್ಲದ ಉನ್ನತವ್ಯಕ್ತಿಗಳನ್ನು ಅವರ ಪರಾಕ್ರಮ ಮತ್ತು ದಕ್ಷತೆಗಳನ್ನೇ ಆಧಾರವನ್ನಾಗಿ ಇಟ್ಟುಕೊಂಡು ಕ್ಷತ್ರಿಯವರ್ಗಕ್ಕೆ ಸೇರಿಸಲಾಗುತ್ತಿತ್ತು.[5]

ವ್ಯಾಪಾರ, ವಾಣಿಜ್ಯ ಮತ್ತು ಕೃಷಿಯಲ್ಲಿ ತೊಡಗಿದ್ದ ವೈಶ್ಯ ವರ್ಗ ಸಾಮಾಜಿಕ ಶ್ರೇಣಿಯಲ್ಲಿ ಮೂರನೆಯ ಸ್ಥಾನವನ್ನು ಪಡೆದಿದ್ದರೂ ರಾಜ್ಯದ ಆರ್ಥಿಕತೆಯ ದೃಷ್ಟಿಯಿಂದ ಪ್ರಮುಖ ಸ್ಥಾನವನ್ನು ಹೊಂದಿತ್ತು. ವ್ಯಾಪಾರ, ವಾಣಿಜ್ಯ ರಾಜ್ಯ ಬೊಕ್ಕಸಕ್ಕೆ ಹೆಚ್ಚಿನ ಆದಾಯವನ್ನು ತರುತ್ತಿದ್ದುದು ಅರಸರ ಪ್ರೋತ್ಸಾಹ ಪಡೆಯಲು ಕಾರಣವಾಯಿತು. ಪುರೋಹಿತ ವರ್ಗ ಮತ್ತು ಸೈನಿಕ ವರ್ಗವನ್ನು ಬಿಟ್ಟರೆ ಸಮಾಜದಲ್ಲಿ ಉನ್ನತ ಸ್ಥಾನವನ್ನು ಹೊಂದಿದ್ದವರೆಂದರೆ ವ್ಯಾಪಾರಸ್ಥರು. ವ್ಯಾಪಾರಸ್ಥರನ್ನು ಶಾಸನಗಳಲ್ಲಿ ‘ಪುರಮೂಲಸ್ತಂಭಂ’ ಎಂಬುದಾಗಿ ಕರೆಯಲಾಗಿದೆ.[6] ಹೊಯ್ಸಳ ಶಾಸನವೊಂದರಲ್ಲಿ ಶ್ರೀಮಂತ ಮತ್ತು ಪ್ರಭಾವಿ ವ್ಯಾಪಾರಸ್ಥರನ್ನು ‘ರಾಜಶ್ರೇಷ್ಠಿಗಳ್’ ಎಂದು ಹೇಳಲಾಗಿದೆ.[7] ಕ್ರಿ.ಶ. ೧೧೭೭ರ ಹೊಯ್ಸಳರ ಶಾಸನದಲ್ಲಿ ಇಬ್ಬರು ರಾಜಶ್ರೇಷ್ಠಿಗಳ ಹೆಸರನ್ನು ಉಲ್ಲೇಖಿಸಲಾಗಿದೆ.[8] ಅವರುಗಳೆಂದರೆ, ಹೊಯ್ಸಳ ಸೆಟ್ಟಿ ಮತ್ತು ನೇಮಿಸೆಟ್ಟಿ. ಇವರು ಹೊಯ್ಸಳ ಅರಸ ವಿಷ್ಣುವರ್ಧನನ ಸಮಕಾಲೀನರು. ಶ್ರೀಮಂತ ವರ್ತಕರು ಆಡಳಿತದಲ್ಲಿ ಪಾಲ್ಗೊಳ್ಳುತ್ತಿದ್ದರು. ಹೊಯ್ಸಳ ಸೆಟ್ಟಿಯು ಹೊಯ್ಸಳರ ರಾಜಧಾನಿ ದೋರಸಮುದ್ರಸ ‘ಪಟ್ಟಣಸ್ವಾಮಿ’ಯಾಗಿ ಆಡಳಿತ ನಡೆಸುತ್ತಿದ್ದ ಎನ್ನುವ ಉಲ್ಲೇಖ ಶಾಸನದಲ್ಲಿದೆ.[9] ಶ್ರೀಮಂತ ವ್ಯಾಪಾರಸ್ಥರು ಅರಸರೊಡನೆ ಆಡಳಿತಾತ್ಮಕ ಹಾಗೂ ಆರ್ಥಿಕ ಸಂಬಂಧಗಳನ್ನು ಹೊಂದಿರುತ್ತಿದ್ದರೇ ವಿನಹ ಸಣ್ಣ ವ್ಯಾಪಾರಸ್ಥರಲ್ಲ. ರಾಜ್ಯದ ಅರ್ಥ ವ್ಯವಸ್ಥೆಯಲ್ಲಿ ಕೃಷಿ ಮೊದಲ ಸ್ಥಾನವನ್ನು ಹೊಂದಿದ್ದರೂ ಶ್ರೇಣೀಕೃತ ಸಮಾಜ ವ್ಯವಸ್ಥೆಯಲ್ಲಿ ಕೃಷಿಕರು ಕೆಳಸ್ಥಾನವನ್ನು ಹೊಂದಿದ್ದರು. ಕೃಷಿಕರು ಕೃಷಿ ಮಾತ್ರವಲ್ಲದೆ ಕರಕುಶಲ ವೃತ್ತಿ ಹಾಗೂ ಪಶುಸಂಗೋಪನೆಯಲ್ಲೂ ತೊಡಗುತ್ತಿದ್ದರು. ರಾಷ್ಟ್ರಕೂಟರ ಅವಧಿಯಲ್ಲಿ ವೈಶ್ಯರು ತಮ್ಮಲ್ಲೆ ವಿಂಗಡನೆಗೊಂಡಿದ್ದರು. ವೈದಿಕ ಸಂಪ್ರದಾಯಗಳಲ್ಲಿ ನಂಬಿಕೆ ಇಟ್ಟುಕೊಂಡವರು ಉನ್ನತ ಸ್ಥಾನವನ್ನು ಹೊಂದಿದ್ದರೆ, ವೈದಿಕ ಆಚರಣೆಗಳಲ್ಲಿ ನಂಬಿಕೆ ಇಲ್ಲದವರು ಶೂದ್ರರ ಮಟ್ಟಕ್ಕೆ ಇಳಿಯಬೇಕಾಗಿತ್ತು.[10]ಈ ನಿಯಮವನ್ನು ಉಲ್ಲಂಘಿಸಿದವರು ಮೇಲ್ಜಾತಿಯವರಿಂದ ಶಿಕ್ಷೆಗೆ ಒಳಗಾಗಬೇಕಿತ್ತು.

ವರ್ಣ ವ್ಯವಸ್ಥೆಯಲ್ಲಿ ಕೊನೆಯವರಾದ ಶೂದ್ರರು ತಮ್ಮಲ್ಲೆ ಹಲವಾರು ಜಾತಿ, ಉಪಜಾತಿಗಳಾಗಿ ವಿಭಜನೆಗೊಂಡಿದ್ದರು. ಶೂದ್ರರಲ್ಲಿ ಮುಖ್ಯವಾಗಿ ವೃತ್ತಿಯ ಆಧಾರದ ಮೆಲೆ ಪಂಗಡಗಳು-ಉಪಪಂಗಡಗಳು ರಚನೆಗೊಂಡವು. ಶೂದ್ರರು ಇತರ ಜಾತಿಗಳಿಗಾಗಿ ದುಡಿಯುವ ಒತ್ತಾಯಕ್ಕೊಳಗಾಗಿದ್ದರು. ಇವರು ಕೃಷಿ, ಕೈಗಾರಿಕೆ, ವ್ಯಾಪಾರ ಹಾಗೂ ಇನ್ನಿತರ ವೃತ್ತಿಗಳಲ್ಲೂ ಪರಿಣತರಾಗಿರುತ್ತಿದ್ದರು. ಅಗಸರು (ಬಟ್ಟೆಗಳನ್ನು ಶುಭ್ರಗೊಳಿಸುತ್ತಿದ್ದವರು), ನಾವಿದರು (ಕ್ಷೌರದ ಕೆಲಸವನ್ನು ಮಾಡುತ್ತಿದ್ದವರು), ನೇಕಾರರು (ಬಟ್ಟೆಗಳನ್ನು ನೇಯುತ್ತಿದ್ದವರು), ಬಳೆಗಾರರು (ಬಳೆಗಳನ್ನು ಮಾಡಿ ಮಾರುತ್ತಿದ್ದರು), ಬೆಸ್ತರು (ಮೀನುಗಾರಿಕೆಯಲ್ಲಿ ತೊಡಗಿರುತ್ತಿದ್ದವರು), ತೆಲ್ಲಿಗರು ಅಥವಾ ತೈಲಿಗರು (ಗಾಣದಿಂದ ಎಣ್ಣೆಯನ್ನು ತೆಗೆಯುತ್ತಿದ್ದವರು), ಚಿಪ್ಪಿಗರು (ಬಟ್ಟೆಗಳನ್ನು ಕತ್ತರಿಸಿ ಹೊಲಿಯುತ್ತಿದ್ದವರು), ತಂಬುಲಿಗರು (ವೀಳೆಯದೆಲೆಗಳನ್ನು ಮಾರಾಟ ಮಾಡುತ್ತಿದ್ದವರು), ಶಿಲ್ಪಿಗಳು ಮುಂತಾದವರು ಈ ವರ್ಗದೊಳಗೆ ಸೇರುತ್ತಿದ್ದರು. ಶಿಲ್ಪಿಗಳು ವಾಸ್ತುವಿದ್ಯೆ, ಶಿಲ್ಪ, ಲೋಹವಿಗ್ರಹಗಳ ಕೆತ್ತನೆ, ಚಿತ್ರಕಲೆ ಮುಂತಾದವುಗಳಲ್ಲಿ ನಿಷ್ಣಾತರಾಗಿದ್ದರು. ಓಜ ಮತ್ತು ಆಚಾರಿ ಎನ್ನುವ ಉಪನಾಮಗಳು ಎಲ್ಲ ವಿಧವಾದ ಕೆಲಸಗಳನ್ನು ಮಾಡುವ ಕುಶಲಕರ್ಮಿಗಳ ಹೆಸರುಗಳ ಮೇಲೆ ಒಂದೇ ಸಮನಾಗಿ ವೃತ್ತಿ ಭೇದವಿಲ್ಲದೆ ಹತ್ತುತ್ತವೆ ಎನ್ನುವ ಅಂಶ ಶಾಸನಗಳಲ್ಲಿ ಉಲ್ಲೇಖಿತವಾಗಿದೆ.[11] ಶಾಸನಗಳಲ್ಲಿ ಇವರನ್ನು ಓಜಯಿತ,[12] ಓಜಕುಲ[13] ಎಂಬುದಾಗಿ ಕರೆಯಲಾಗಿದೆ. ಇದರರ್ಥ ಕಮ್ಮಾರರು, ಬಡಗಿಗಳು, ಅಕ್ಕಸಾಲಿಗರು, ಕಂಚುಕಾರರು ಮತ್ತು ಶಿಲ್ಪಿಗಳು ಒಂದೇ ಜಾತಿಯವರು ಎನ್ನುವುದೇ ಆಗಿದೆ. ಈ ಐದು ವೃತ್ತಿಗಳು ಪರಸ್ಪರ ಪೂರಕ ಹಾಗೂ ಪೋಷಕವಾಗಿದ್ದವು ಎನ್ನುವುದನ್ನು ಸೂಚಿಸುವ ಅನೇಕ ಶಾಸನಗಳು ಲಭ್ಯವಿವೆ. ಶಾಸನಗಳಲ್ಲಿ ಓಜಕುಲ ಎನ್ನುವ ಜಾತಿವಾಚಕಕ್ಕೆ ಸಿಗುವ ಸಮಾನವಾದ ಪದಗಳೆಂದರೆ ವಿಶ್ವಕರ್ಮಕುಲ, ವಿಶ್ವಕರ್ಮಕುಲಸ್ತರು, ಪಂಚಕಾರುಕದವರು ಹಾಗೂ ಪಂಚಾಳರು.[14] ಈ ಕುಶಲಕರ್ಮಿಗಳು ಪರಸ್ಪರ ವೃತ್ತಿ ವಿನಿಮಯ ಮಾಡಿಕೊಂಡಿರುವುದಕ್ಕೆ ಮತ್ತು ವೈವಾಹಿಕ ಸಂಬಂಧ ಬೆಳೆಸಿಕೊಂಡಿದ್ದರ ಬಗೆಗೂ ಶಾಸನಾಧಾರಗಳಿವೆ.[15] ಇವರೆಲ್ಲರೂ ಒಂದೇ ಜಾತಿಯವರಾದರೆ ವೃತ್ತಿ ವಿನಿಮಯ ಮಾಡಿಕೊಂಡಿದ್ದರಲ್ಲಿ ಆಶ್ಚರ್ಯವಿಲ್ಲ. ಆದರೆ ಇವರೆಲ್ಲರೂ ಒಂದೇ ಜಾತಿಯವರಾಗಲು ಸಾಧ್ಯವೇ ಎನ್ನುವ ಪ್ರಶ್ನೆಯೂ ಹುಟ್ಟಿಕೊಳ್ಳುತ್ತದೆ. ವೃತ್ತಿ ವಿನಿಮಯವನ್ನು ಜಾತಿಯ ಹಿನ್ನೆಲೆಯಿಂದ ಮತ್ತು ಜೀವನ ನಿರ್ವಹಣೆಯ ಹಿನ್ನೆಲೆಯಿಂದ ನೋಡಿದಾಗ ಸಿಗುವ ಫಲಿತಾಂಶಗಳು ಬೇರೆ ಬೇರೆಯದೇ ಆಗಿರುತ್ತವೆ.

ಗುಡ್ಡ ಬೆಟ್ಟ ಕಾಡುಗಳಲ್ಲಿ ವಾಸಿಸುತ್ತಿದ್ದ ಬುಡಕಟ್ಟು ಜನರ ಕುರಿತು ಸ್ವಲ್ಪಮಟ್ಟಿನ ಮಾಹಿತಿ ಸಿಗುತ್ತದೆ. ಅವು ಹಿಂದುಳಿದ ಜನಾಂಗಗಳಾಗಿದ್ದು ಸಮಾಜದಲ್ಲಿ ಅಲಕ್ಷಿತ ವರ್ಗವಾಗಿದ್ದವು. ಬೇಡರು, ಮಲೆಪರು ಮತ್ತು ಕುರುಬರು ಈ ವರ್ಗಕ್ಕೆ ಸೇರಿದವರು.15ಎ ಇವರನ್ನು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ತೊಂದರೆ ಕೊಡುತ್ತಿದ್ದ ಜನಾಂಗಗಳು ಎಂಬುದಾಗಿ ಶಾಸನಗಳು ಮತ್ತು ಸಾಹಿತ್ಯ ಕೃತಿಗಳು ಬಣ್ಣಿಸಿವೆ. ಇದು ಅಂದಿನ ಮೇಲ್ವರ್ಗದ ಜನತೆ ಬುಡಕಟ್ಟು ಜನರ ಬಗ್ಗೆ ಹೊಂದಿದ್ದ ಧೋರಣೆಯನ್ನು ಸೂಚಿಸುತ್ತದೆ. ಕ್ರಿ.ಶ. ೭ನೆಯ ಶತಮಾನದ ಗದ್ದೆ ಮನೆ ಶಾಸನದಲ್ಲಿ ಬೇಡರ ಉಲ್ಲೇಖವಿರುವುದು ಕಂಡುಬರುತ್ತದೆ. ಬೇಡರು ರಾಷ್ಟ್ರಕೂಟರ ಕಾಲಕ್ಕೆ ಮುಖ್ಯಸ್ಥರಾಗಿ ನಾಯಕರೆನಿಸಿಕೊಂಡಿದ್ದರು.15ಬಿ ಬೇಡರು ಮೂಲತಃ ಬೇಟೆ ಮತ್ತು ಪಶುಪಾಲನಾ ವೃತ್ತಿಗಳಿಗೆ ಸೇರಿದ್ದರು. ಯುದ್ಧಗಳಲ್ಲಿಯೂ ಬೇಡರು ಪ್ರಮುಖ ಪಾತ್ರವಹಿಸುತ್ತಿದ್ದರು. ಯುದ್ಧದಲ್ಲಿ ಜಯ ತಂದುಕೊಟ್ಟದ್ದಕ್ಕಾಗಿ ವಿವಿಧ ಅರಸು ಮನೆತನಗಳಿಂದ ದಾನದತ್ತಿಗಳನ್ನು ಪಡೆಯುತ್ತಿದ್ದರು. ಹೊಯ್ಸಳರಿಗೂ ಮತ್ತು ಸೇವುಣರಿಗೂ ನಡೆದ ಯುದ್ಧದಲ್ಲಿ ಬೇಡ ಸೈನಿಕರು ನಿರ್ಣಾಯಕ ಪಾತ್ರವಹಿಸಿದ್ದರು. ಕ್ರಿ.ಶ. ೧೧೧೭ರಲ್ಲಿ ಹೊಯ್ಸಳ ವಿಷ್ಣುವರ್ಧನ ಕಿರಾತ ಮುಖ್ಯಸ್ಥರನ್ನು ಹಾಗೂ ಶಕ್ತಿಶಾಲಿ ವೀರರನ್ನು ತನ್ನ ಸಹಾಯಕ್ಕೆ ನೇಮಿಸಿಕೊಂಡಿದ್ದ. ಬೇಡರು ಮತ್ತು ಮಲೆಪರ ಉಲ್ಲೇಖಗಳು ಕಂಡುಬರುವಷ್ಟು ಕುರುಬರ ಉಲ್ಲೇಖಗಳು ಕಂಡುಬರುವುದಿಲ್ಲ. ಬೇಡರಂತೆ ಮಲೆಪರು ತಮ್ಮದೆ ಆದ ಪಡೆಗಳನ್ನು ಹೊಂದಿದ್ದರು. ಇವರು ಅರಸು ಮನೆತನಗಳೊಂದಿಗೆ ಸ್ನೇಹಯುತ ಸಂಬಂಧವನ್ನು ಹೊಂದಿರದಿದ್ದರೂ, ಕೆಲವು ಸಂದರ್ಭದಲ್ಲಿ ರಾಜರಿಗೆ ಯುದ್ಧಗಳಲ್ಲಿ ನೆರವಾಗುತ್ತಿದ್ದರು. ಈ ಬುಡಕಟ್ಟು ಜನರನ್ನು ತಮ್ಮ ಅಧೀನದಲ್ಲಿಟ್ಟುಕೊಳ್ಳುವುದು ರಾಜರಿಗೆ ಹೆಮ್ಮೆಯ ವಿಷಯವಾಗುತ್ತಿತ್ತು. ಹೊಯ್ಸಳ ಅರಸರಲ್ಲಿ ಅನೇಕರಿಗೆ ಮಲೆಪರೊಳ್ಗಂಡ ಎಂಬ ಬಿರುದಿತ್ತು.

ಅನೇಕ ಪಂಗಡ, ಉಪಪಂಗಡಗಳು ಸಮಾಜದಲ್ಲಿ ಅಸ್ತಿತ್ವವೇ ಇಲ್ಲದ ರೀತಿಯಲ್ಲಿ ಬದುಕುತ್ತಿದ್ದವು. ಅಸ್ಪೃಶ್ಯರು ಎಂದು ಕರೆಯಿಸಿಕೊಂಡವರು ಸಮಾಜದಿಂದ ಬಹಿಷ್ಕೃತಗೊಂಡವರಂತೆ ಜೀವಿಸಬೇಕಾಗಿತ್ತು. ಅವರು ಹಳ್ಳಿಗಳ ಮತ್ತು ಪಟ್ಟಣ ಪ್ರದೇಶಗಳ ಹೊರ ವಲಯಗಳಲ್ಲಿ ಮೇಲ್ಜಾತಿಗಳಿಂದ ಪ್ರತ್ಯೇಕವಾಗಿ ವಾಸಮಾಡುವ ಒತ್ತಾಯಕ್ಕೊಳಗಾಗಿದ್ದರು. ಅಸ್ಪೃಶ್ಯರ ಮನೆಗಳು ಊರಿನಿಂದ ಹೊರಗಡೆ ಇರುತ್ತಿದ್ದವು ಎನ್ನುವ ಮಾಹಿತಿಯನ್ನು ನೀಡುವ ಕೆಲವು ಶಾಸನಗಳು ಲಭ್ಯವಿವೆ. ಕ್ರಿ.ಶ. ೧೧೨೫ರ ಶಾಸನವೊಂದರಲ್ಲಿ ‘ಪೊರೆಗೆ ಚಂಡಾಲಾಲಯಂ’, ‘ನೀರು ಸಾಗರಕ್ಕೆ ಹೋದ ಓಣಿಯಿಂ ಪೊಡುವಲು ಹೊಲೆಗೇರಿಯಂ ಪೊಡು ಮುಖವಾಗಿ; ಎನ್ನುವ ಮಾಹಿತಿಯಿದೆ.[16] ಅದೇ ರೀತಿ ೧೦ನೆಯ ಶತಮಾನದ ಶಾಸನವೊಂದರಲ್ಲಿ, ‘ಕಾಸರಗೋಡು ತಾಲೂಕಿನ ತಳಂಗೇರಿ ಎಂಬ ಊರ ಹೊರಗಡೆ ತೊರೆಯ ದಡದ ಹತ್ತಿರ ಪುತ್ತೂರಿನ ಹೊಲೆಯರ ಕೇರಿ ಇತ್ತು’ ಎನ್ನುವ ವಿವರ ಸಿಗುತ್ತದೆ.[17] ಶ್ರವಣ ಬೆಳಗೊಳ ಮತ್ತು ಜೀನನಾಥಪುರ ಪಟ್ಟಣಗಳ ಹೊರವಲಯಗಳಲ್ಲಿ ಕೆಳಜಾತಿಯವರು ವಾಸಿಸುತ್ತಿದ್ದರು ಎನ್ನುವ ವಿವರ ಶಾಸನವೊಂದರಲ್ಲಿದೆ.[18] ಇವರ ವೃತ್ತಿಗಳನ್ನು ಮೇಲ್‌ವರ್ಗಗಳೇ ನಿರ್ಧರಿಸುತ್ತಿದ್ದವು. ಊರ ಕಸವನ್ನು ಗುಡಿಸುವುದು, ಸತ್ತ ದನವನ್ನು ಹೊತ್ತು ಸಾಗಿಸುವುದು, ಸ್ಮಶಾನದಲ್ಲಿ ಗುಂಡಿ ತೋಡುವುದು, ಮರಣ ದಂಡನೆಗೆ ಒಳಗಾದವರನ್ನು ಗಲ್ಲಿಗೇರಿಸುವುದು ಮುಂತಾದವು ಅಸ್ಪೃಶ್ಯರು ಮಾಡಬೇಕಾದ ಕೆಲಸಗಳಾಗಿದ್ದವು. ಇಂಥ ಕೆಲಸಗಳನ್ನು ಮಾಡಿಸುವುದಕ್ಕಾಗಿ ಮಾನವರಲ್ಲಿಯೇ ಅಸ್ಪೃಶ್ಯರೆನ್ನುವ ವರ್ಗವೊಂದನ್ನು ಹುಟ್ಟು ಹಾಕಿ, ಅವರನ್ನು ತೀರ ನಿಕೃಷ್ಟವಾಗಿ ನೋಡಿಕೊಳ್ಳಲಾಯಿತು.

ಅಸ್ಪೃಶ್ಯರನ್ನು ಮಾರಾಟದ ವಸ್ತುಗಳಂತೆ ನೋಡಲಾಗುತ್ತಿತ್ತು. ಅವರನ್ನು ಸಂತೆಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಎಂಬುದಕ್ಕೆ ಶಾಸನಾಧಾರಗಳಿವೆ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅವರು ಕ್ಷೀಣಿಸುವಂತೆ ಮಾಡಿ ಜೀತದಾಳುಗಳಾಗಿ ಪರಿವರ್ತಿಸಲಾಯಿತು. ಇದೊಂದು ವ್ಯವಸ್ಥಿತ ತಂತ್ರವಾಗಿದ್ದು, ಮಧ್ಯಕಾಲೀನ ಕರ್ನಾಟಕದಲ್ಲಿ ಈ ಕುರಿತು ಅನೇಕ ಉದಾಹರಣೆಗಳು ಸಿಗುತ್ತವೆ. ಇವರ‍್ಯಾರೂ ಭೂಮಿಗೆ ಒಡೆಯರಾಗಿರಲಿಲ್ಲ ಹಾಗೂ ವೃತ್ತಿಯಾಗಿ ವ್ಯವಸಾಯವನ್ನು ಮಾಡುತ್ತಿರಲಿಲ್ಲ. ಏಕೆಂದರೆ ಅವರೆಡರಿಂದಲೂ ಅಸ್ಪೃಶ್ಯರನ್ನು ದೂರ ಇಡಲಾಗಿತ್ತು. ಹೊಲಗಳಲ್ಲಿ ಕೆಲಸ ಮಾಡುವ ಜೀತದಾಳುಗಳಾಗಿ, ಸಮಾಜದಲ್ಲಿ ಅಸ್ತಿತ್ವವೇ ಇಲ್ಲದ ರೀತಿಯಲ್ಲಿ ಜೀವನ ನಡೆಸುವ ಒತ್ತಾಯಕ್ಕೆ ಅವರು ಒಲಗಾಗಿದ್ದರು. ಅಸ್ಪೃಶ್ಯರು ಎನ್ನುವ ಪದದ ಸೃಷ್ಟಿ ಶೋಷಣೆ ನಡೆಸುವುದಕ್ಕಾಗಿಯೇ ಆಯಿತು ಎನ್ನುವುದನ್ನು ಇಲ್ಲಿ ಗಮನಿಸಬೇಕಾಗುತ್ತದೆ. ಭೂಮಿಯ ಒಡೆಯ ಮತ್ತು ಜೀತದಾಳುವಿನ ಸಂಬಂಧ ಶಾಸ್ವತವಾಗಿರುತ್ತಿತ್ತು. ಇದರಿಂದ ಒಡೆಯನಿಗೆ ವಿಧೇಯರಾದ ಆಳುಗಳು ದೊರಕುತ್ತಲೇ ಇರುವಂತಾಯಿತು. ಇದು ಒಡೆಯನ ಒಡೆತನವನ್ನು ಇನ್ನಷ್ಟು ಗಟ್ಟಿಗೊಳಿಸಿದರೆ, ಜೀತದಾಳುಗಳ ಜೀತವನ್ನು ಶಾಸ್ವತವನ್ನಾಗಿಸಿತು. ಜೀವನ ಪೂರ್ತಿ ಇನ್ನೊಬ್ಬರ ಒಳಿತಿಗಾಗಿ ದುಡಿಯುವ ಈ ವರ್ಗವನ್ನು ಅಸ್ಪೃಶ್ಯರನ್ನಾಗಿ ಪರಿಗಣಿಸಿದ್ದು ಆಶ್ಚರ್ಯಕರವಾಗಿ ಕಂಡುಬರುತ್ತದೆ. ರಾಜ ಪ್ರಭುತ್ವಕ್ಕೆ ಇದೊಂದು ಸಾಮಾಜಿಕ ಪಿಡುಗಾಗಿ ಕಂಡುಬರಲಿಲ್ಲ. ಧಾರ್ಮಿಕ ಪ್ರಭುತ್ವಕ್ಕೆ ಶರಣಾಗಿದ್ದ ರಾಜಪ್ರಭುತ್ವ ಆ ಕುರಿತು ಯೋಚಿಸುವಂತೆಯೂ ಇರಲಿಲ್ಲ. ಇದರಿಂದಾಗಿ ಪುರೋಹಿತಶಾಹಿ, ವ್ಯವಸ್ಥೆ ಶುದ್ಧ-ಅಶುದ್ಧ, ನಿರ್ಮಲ-ಮಲಿನ ಭಾವನೆಗಳನ್ನು ಜಾತಿಯ ಹಿನ್ನೆಲೆಯಿಂದ ಯಾವ ಅಡೆತಡೆಯೂ ಇಲ್ಲದೆ ಪ್ರತಿಪಾದಿಸತೊಡಗಿತು.

ಅಸ್ಪೃಶ್ಯತೆಯನ್ನು ವಿರೋಧಿಸಿ ಮಧ್ಯಕಾಲೀನ ಸಂದರ್ಭದಲ್ಲಿ ಅನೇಕ ಚಳವಳಿಗಳು ನಡೆದಿವೆ. ತಮಿಳುನಾಡಿನಲ್ಲಿ ನಾಯನಾರ್‌ಗಳು ಮತ್ತು ಆಳ್ವಾರ್‌ಗಳು ನಡೆಸಿದ ಭಕ್ತಿ ಚಳವಳಿಯ ಪ್ರಭಾವ ಕರ್ನಾಟಕದ ಮೇಲೆ ಸಾಕಷ್ಟು ಆಯಿತು. ಲಿಂಗಾಯತ ಚಲವಳಿಗಿಂತ ಹಿಂದೆ ವ್ಯಾಪಕವಾಗಿ ಹಬ್ಬಿದ್ದ ನಾಥ ಸಂಪ್ರದಾಯವು ಅಂದಿನ ಸಾಂಪ್ರದಾಯಕ ವೈದಿಕ ಧರ್ಮದ ಶ್ರೇಣೀಕೃತ ವ್ಯವಸ್ಥೆಯನ್ನು ಪ್ರತಿಭಟಿಸಿತು. ಶೂದ್ರರು ಅದರಲ್ಲೂ ಐದನೆಯ ವರ್ಗ ಎಂದೇ ಹೆಸರಿಸಲಾದ ಅಸ್ಪೃಶ್ಯರ ಶೋಷಣೆಯನ್ನು ವಿರೋಧಿಸುವ, ಸಮಾನತೆಯನ್ನು ಸಾರುವ ಪ್ರಯತ್ನಗಳು ವೀರಶೈವ ಚಳವಳಿಯ ಮೂಲಕ ಮತ್ತೊಮ್ಮೆ ಕಾಣಿಸಿಕೊಂಡವು. ರಾಜ-ಪ್ರಜೆ, ಮೇಲ್ಜಾತಿ-ಕೀಳ್ಜಾತಿ, ಬ್ರಾಹ್ಮಣ-ಹೊಲೆಯ, ಸಸ್ಯಾಹಾರ್-ಮಾಂಸಾಹಾರ, ಮಡಿ-ಮೈಲಿಗೆ ಮುಂತಾದವುಗಳನ್ನು ಪ್ರಮುಖ ವಿಷಯಗಳನ್ನಾಗಿಟ್ಟುಕೊಂಡಿರುವ ಅನೇಕ ವಚನಗಳು ಹುಟ್ಟಿಕೊಂಡವು. ವಚನಕಾರರು ಜಾತಿಗಳ ಮಧ್ಯದ ಅಸಮಾನತೆ ಹೋಗಬೇಕೆಂದು ತಮ್ಮ ವಚನಗಳಲ್ಲಿ ಸಾರಿದರು. ಜಾತಿಸಂಕರದ ಉಲ್ಲೇಖಗಳು ವಚನಗಳಲ್ಲಿ ಕಂಡುಬರುತ್ತವೆ. ಬಸವಣ್ಣ ಅಂತರ್‌ಜಾತೀಯ ವಿವಾಹಕ್ಕೆ ಪ್ರೋತ್ಸಾಹ ನೀಡಿ ಜಾತಿವ್ಯವಸ್ಥೆಯಲ್ಲಿ ಪರಿಣಾಮಕಾರಿ ಬದಲಾವಣೆಗಳು ಆಗುವಂತೆ ಮಾಡಿದ. ಬ್ರಾಹ್ಮಣ ಮಧುವಯ್ಯನಿಗೂ ಅಸ್ಪೃಶ್ಯ ಹರಳಯ್ಯನಿಗೂ ವಿವಾಹ ಸಂಬಂಧ ಏರ್ಪಡಿಸಿ ಜಾತಿಸಂಕರಕ್ಕೆ ಎಡೆಮಾಡಿಕೊಟ್ಟರೂ ಅದೊಂದು ತಾತ್ಕಾಲಿಕ ಪ್ರಯತ್ನವಾಗಿಯೇ ಉಳಿಯಬೇಕಾಯಿತು ಹಾಗೂ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂತು. ರಾಜಪ್ರಭುತ್ವ ಮತ್ತು ಧಾರ್ಮಿಕ ಪ್ರಭುತ್ವಗಳು ಜಾತಿಸಂಕರವನ್ನು ಬಲವಾಗಿ ವಿರೋಧಿಸಿದವು.

ಮಧ್ಯಕಾಲೀನ ಕರ್ನಾಟಕದಲ್ಲಿ ಕಾಣಿಸಿಕೊಂಡ ಈ ಎಲ್ಲಾ ಚಳುವಳಿಗಳು ಜಾತಿ ವ್ಯವಸ್ಥೆಯನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಗಲಿಲ್ಲ. ಜಾತಿವ್ಯವಸ್ಥೆಯ ಸಂಕೀರ್ಣತೆಯನ್ನು ಸರಳಗೊಳಿಸುವಲ್ಲಿಯೂ ಚಳವಳಿಗಳು ಸೋತವು. ವೈದಿಕ ಸಂಸ್ಕೃತಿಗೆ ಬದಲಿ ಸಾಮಾಜಿಕ ಮಾದರಿಯನ್ನು ಒದಗಿಸುವತ್ತ ಹೊರಟ ವೀರಶೈವ ಆಂದೋಲನ ಕ್ರಮೇಣ ತನ್ನಲ್ಲೇ ಜಾತಿ ವ್ಯವಸ್ಥೆಯೊಂದನ್ನು ಹುಟ್ಟುಹಾಕಿಕೊಂಡಿತು. ಲಿಂಗಾಯತರಲ್ಲೇ ಅನೇಕ ಒಳಪಂಗಡಗಳು ಹುಟ್ಟಿಕೊಂಡವು. ಇದರಿಂದಾಗಿ ಜಾತಿ ವ್ಯವಸ್ಥೆಯನ್ನು ಮೀರಿ ನಿಲ್ಲುವುದು ಸಾಧ್ಯವಾಗಲಿಲ್ಲ. ಈ ವ್ಯವಸ್ಥೆಯನ್ನು ಸ್ಥಾನಮಾನ ನಿರ್ಧಾರದ ಮಾನದಂಡ ಮತಾಚರಣೆಯೇ ಹೊರತು ಆರ್ಥಿಕ, ಸಾಮಾಜಿಕ ವಿಚಾರಗಳಲ್ಲ. ಅಸ್ಪೃಶ್ಯತೆಯ ವಿರುದ್ಧ ಕಾಣಿಸಿಕೊಂಡ ಈ ಆಂದೋಲನಗಳುಕೆಲವೊಂದು ಪ್ರದೇಶಗಳಿಗಷ್ಟೇ ಸೀಮಿತಗೊಂಡು ಹಾಗೂ ಕೆಲವು ವ್ಯಕ್ತಿಗಳಿಗಷ್ಟೇ ಸಂಬಂಧಿಸಿದ ವಿಚಾರವಾಗಿ ಪರಿವರ್ತನೆಗೊಂಡಿತು. ಇದರರ್ಥ ಆಂದೋಲನಗಳಲ್ಲಿ ಪ್ರಾಮಾಣಿಕ ಪ್ರಯತ್ನ ಇರಲಿಲ್ಲ ಎಂದಲ್ಲ. ಪ್ರಾಮಾಣಿಕ ಪ್ರಯತ್ನಗಳಿದ್ದರೂ ಅವು ನಿರಂತರ ಪ್ರಯತ್ನಗಳಾಗಿರಲಿಲ್ಲ. ಆಂದೋಲನಗಳನ್ನು ಮೂಲಸಿದ್ಧಾಂತಗಳೊಂದಿಗೆ ಮುಂದುವರಿಸಿಕೊಂಡು ಹೋಗುವಲ್ಲಿ ವಿಫಲವಾದುದೇ ಅಸ್ಪೃಶ್ಯತೆಯ ನಿವಾರಣೆಯ ಯತ್ನ ವಿಫಲವಾದುದಕ್ಕೆ ಒಂದು ಪ್ರಮುಖ ಕಾರಣ. ಅದೇ ರೀತಿ ಜಾತಿ ವ್ಯವಸ್ಥೆಯನ್ನು ಧಾರ್ಮಿಕ ಚೌಕಟ್ಟಿನೊಳಗಿಟ್ಟು ವ್ಯಾಖ್ಯಾನಿಸಲಾಯಿತೇ ಹೊರತು ಸಾಮಾಜಿಕ-ಆರ್ಥಿಕ ನೆಲೆಗಟ್ಟಿನಿಂದಲ್ಲ.

ಅಧ್ಯಯನದ ಈ ಕಾಲಾವಧಿಯಲ್ಲಿ ಕಂಡುಬರುವ ಇನ್ನೊಂದು ಪ್ರಮುಖ ಅಂಶವೆಂದರೆ, ಮುಸ್ಲಿಂಅರು ವ್ಯಾಪಾರಸ್ಥರಾಗಿ ಕರ್ನಾಟಕಕ್ಕೆ ಪ್ರವೇಶ ಪಡೆದದ್ದು. ರಾಷ್ಟ್ರಕೂಟರ ಅಳ್ವಿಕೆಯ ಸಂದರ್ಭದಲ್ಲಿಯೇ ಮುಸ್ಲಿಮರು ಕರ್ನಾಟಕದಲ್ಲಿ ವಾಸವಾಗಿದ್ದರು. ಅವರು ಅರಬ್‌ದೇಶಗಳಿಂದ ವ್ಯಾಪಾರದ ಉದ್ದೇಶಕ್ಕಾಗಿ ಬಂದು ಪಶ್ಚಿಮ ಕರಾವಳಿಯಲ್ಲಿ ನೆಲೆಸುತ್ತಿದ್ದರು. ಅವರ ಸಂಖ್ಯೆ ತೀರಾ ಕಡಿಮೆಯಿತ್ತು. ಅರಬ್‌ ವ್ಯಾಪಾರಸ್ಥರನ್ನು ಸ್ನೇಹಯುತವಾಗಿಯೇ ನೋಡಿಕೊಳ್ಳಲಾಗುತ್ತಿತ್ತು ಎಂಬುದಾಗಿ ತಿಳಿದುಬರುತ್ತದೆ. ಮುಸ್ಲಿಮರು ಸ್ವತಂತ್ರವಾಗಿ ತಮ್ಮ ಬದುಕನ್ನು ನಡೆಸಬಹುದಾಗಿತ್ತು.[19] ಅರಬ್‌ ಪ್ರವಾಸಿಗರಾದ ಇಬನ್ ಖರ್ದದ್‌ ಬೇ, ಸುಲೇಮಾನ್, ಅಲ್‌ಮಸೂದಿ ಮುಂತಾದವರ ಪ್ರವಾಸಿ ಕಥನಗಳು ಈ ಕುರಿತು ಮಾಹಿತಿ ನೀಡುತ್ತವೆ. ರಾಷ್ಟ್ರಕೂಟರ ನಂತರದ ಅವಧಿಗಳಲ್ಲಿ ಹೆಚ್ಚೆಚ್ಚು ಅರಬ್‌ ಮತ್ತು ಪರ್ಷುಯನ್ ವರ್ತಕರು ಪಶ್ಚಿಮ ಕರಾವಳಿಯಲ್ಲಿ ನೆಲೆಸತೊಡಗಿದರು. ಈ ಬೆಳವಣಿಗೆಗೆ ಸಂಬಂಧಿಸಿದಂತೆ ಚರಿತ್ರೆಯಲ್ಲಿ ಅನೇಕ ರೀತಿಯ ವ್ಯಾಖ್ಯಾನಗಳು ಕಾಣಿಸಿಕೊಂಡವು. ಕೋಮುವಾದಿ ಚರಿತ್ರೆ ಬರವಣಿಗೆ ಚರಿತ್ರೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳುವಂತೆ ಮಾಡಿತು. ಅದು ಇಲ್ಲಿನ ಚರಿತ್ರೆಯನ್ನು ಹಿಂದೂಗಳ ಚರಿತ್ರೆ ಎಂಬುದಾಗಿ ಕರೆದು ಇಸ್ಲಾಂ ಧರ್ಮವನ್ನು ವಿರೋಧಿ ಸ್ಥಾನದಲ್ಲಿ ನಿಲ್ಲಿಸಿತು. ತಮ್ಮ ಸಮಾಜದಲ್ಲಿನ ಅನಿಷ್ಟಗಳನ್ನು ಬಯಲಿಗೆಳೆಯದೆ ಇನ್ನೊಂದು ಧರ್ಮದತ್ತ ಕೆಟ್ಟ ದೃಷ್ಟಿ ಹಾಯಿಸುವ ಈ ವಿಧಾನ ಸಾಮಾಜಿಕ ರಚನೆಯನ್ನು ಇನ್ನಷ್ಟು ಜಟಿಲಗೊಳಿಸಿತು. ರಾಷ್ಟ್ರೀಯವಾದಿ ಚರಿತ್ರೆಕಾರಿಗೆ ಹಿಂದೂ (ವೈದಿಕ) ಧರ್ಮ, ಸಂಸ್ಕೃತಿ ವೈಭವಯುತವಾಗಿ ಕಂಡುಬಂದಿತೇ ವಿನಹ ಅದರಲ್ಲಿರುವ ಅನಿಷ್ಟ ಪದ್ಧತಿಗಳುಮ್ ಶೋಷಣೆ ಮುಂತಾದವು ಅಷ್ಟೊಂದು ಗಂಭೀರ ಸಮಸ್ಯೆಗಳಾಗಿ ಕಂಡುಬರಲೇ ಇಲ್ಲ.

 

[1] ಡಿ.ಡಿ. ಕೊಸಾಂಬಿ, ದಿ ಕಲ್ಚರ್ ಆಂಡ್ ಸಿವಿಲೈಸೇಷನ್ ಆಫ್ ಎನ್‍ಶ್ಯಂಟ್ ಇಂಡಿಯಾ ಇನ್ ಹಿಸ್ಟಾರಿಕಲ್ ಔಟ್‍ಲೈನ್, ನವದೆಹಲಿ, ೧೯೮೨

1ಎ ಎಂ ಚಿದಾನಂದಮೂರ್ತಿ, ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಅಸ್ಪೃಶ್ಯತೆ, ಧಾರವಾಡ, ೧೯೮೫, ಪು.೨೩-೨೬

[2] ಎಸ್.ವಿ.ಕೇಲ್‌ಕರ್, ಆನ್ ಎಸ್ಸೇಸ್ ಆನ್ ಹಿಂದೂಯಿಸಂ, ಪು.೨೫

[3] ಬಿ.ಆರ್. ಗೋಪಾಲ್ (ಸಂ.), ದಿ ರಾಷ್ಟ್ರಕೂಟಾಸ್ ಆಫ್ ಮಾಲ್ಕೇಡ್ ಸ್ಟಡೀಸ್ ಇನ್ ದೇಯರ್ ಹಿಸ್ಟರಿ ಆಂಡ್ ಕಲ್ಚರ್, ಬೆಂಗಳೂರು, ೧೯೯೪, ಪು. ೧೨೬-೧೨೯

[4] ಅದೇ

[5] ಬಿ.ಎ. ಸಾಲೆತೂರ್, ಸೋಶಿಯಲ್ ಆಂಡ್ ಪೊಲಿಟಿಕಲ್ ಲೈಫ್ ಇನ್ ದಿ ವಿಜಯನಗರ ಎಂಪೈರ್, ಮದರಾಸು, ೧೯೩೪, ಪು. ೩೨, ೩೪

[6] ಸೌ.ಇ.ಇ. ೯-೧, ನಂ. ೨೯೭

[7] ಎಂ.ಎ.ಆರ್. ೧೯೦೯, ಪು. ೫೧

[8] ಅದೇ

[9] ಎ.ಕ.೮, ಶಿಕಾರಿಪುರ ೨೪೭

[10] ಬಿ.ಆರ್. ಗೋಪಾಲ್ (ಸಂ.), ಪೂರ್ವೋಕ್ತ, ಪು. ೧೨೬-೧೨೯

[11] ಕೆ.ಎಸ್.ಕುಮಾರಸ್ವಾಮಿ, ಪೆಆಚೀನ ಕರ್ನಾಟಕದಲ್ಲಿ ಶಿಲ್ಪಾಚಾರಿಯರು, ಬೆಂಗಳೂರು, ೧೯೯೬, ಪು.೭, ೮೪, ೧೨೭

[12] ಎ.ಕ.೬, ಕೃಷ್ಣರಾಜಪೇಟೆ ೯೫, ಕ್ರಿ.ಶ. ೧೩೧೨

[13] ಎ.ಕ.೨, ಶ್ರವಣಬೆಳಗೊಳ ೨೮೨

[14] ಎಸ್. ಗುರುರಾಜಾಚಾರ್, ಸಮ್ ಆಸ್ಪೆಕ್ಟ್ಸ್ ಆಫ್ ಎಕನಾಮಿಕ್ ಆಂಡ್ ಸೋಷ್ಯಲ್ ಲೈಫ್ ಇನ್ ಕರ್ನಾಟಕ ಮೈಸೂರು, ೧೯೭೪, ಪು. ೮೬; ಕೆ.ಎಸ್.ಕುಮಾರಸ್ವಾಮಿ, ಪೂರ್ವೋಕ್ತ, ಪು. ೧೨೮

[15] ಎಂ. ಚಿದಾನಂದಮೂರ್ತಿ, ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಮೈಸೂರು, ೧೯೭೯, ಪು. ೪೩೯; ಸೌ.ಇ.ಇ. ೯೨, ಪು. ೧೪೬, ನಂ. ಕ್ರಿ.ಶ. ೧೦೮೨

15ಎ ಎಂ. ಚಿದಾನಂದಮೂರ್ತಿ, ಪೂರ್ವೋಕ್ತ, ಪು.೩೨೭-೩೨೯

15ಬಿ ವಿರೂಪಾಕ್ಷ ಪೂಜಾರಹಳ್ಳಿ, ಮಧ್ಯಕಾಲೀನ ಕನ್ನಡ ಕಾವ್ಯಗಳಲ್ಲಿ ನಿರೂಪಿತವಾಗಿರುವ ಬೇಟೆ ಮತ್ತು ಬೇಡರ ಸಂದರ್ಭಗಳು: ಒಂದು ಚಾರಿತ್ರಿಕ ಅಧಯ್ಯನ (ಕನ್ನಡ ವಿಶ್ವವಿದ್ಯಾಲಯಕೆ ಪಿಎಚ್.ಡಿ. ಪದವಿಗಾಗಿ ಸಲ್ಲಿಸಿದ ಪ್ರೌಢ ಪ್ರಬಂಧ ೨೦೦೦)

[16] ಬಿ.ಕೆ.ಐ. ೧-೨, ೨೦೧, ಕ್ರಿ.ಶ. ೧೧೨೫

[17] ಎ.ಇ.ಸಂ. ೨೬, ಪು.೨೦೩

[18] ಎ.ಕ.೨, ಶ್ರವಣಬೆಳಗೊಳ ೩೨೭

[19] ಎ.ಎಸ್. ಆಲ್ಟೇಕರ್, ದಿ ರಾಷ್ಟ್ರಕೂಟಾಸ್ ಆಂಡ್ ದೇಯರ್ ಟೈಮ್ಸ್, ಪೂಣಾ, ೧೯೬೭; ಎಚ್.ಎಲ್. ನಾಗೇಗೌಡ (ಸಂ.), ಪ್ರವಾಸಿ ಕಂಡ ಇಂಡಿಯಾ, ಸಂಪುಟ ೧, ಪು. ೨೯೨, ೩೦೪