.೩ ಕೈಗಾರಿಕೆ ಮತ್ತು ಕುಶಲಕರ್ಮಿಗಳು

ರಾಷ್ಟ್ರಕೂಟರಿಂದ ಹೊಯ್ಸಳರ ಅವನತಿಯವರೆಗಿನ ಅವಧಿಯಲ್ಲಿ ನಗರ ವ್ಯವಸ್ಥೆಯೊಂದು ರೂಪುಗೊಳ್ಳುವುದಕ್ಕೆ ಮತ್ತು ಅವುಗಳಲ್ಲಿ ತೊಡಗಿಕೊಂಡಿದ್ದ ಕುಶಲಕರ್ಮಿಗಳು ಹೆಚ್ಚಿನ ಮಟ್ಟಿಗೆ ಕಾರಣವಾಗಿ ಕಂಡುಬರುತ್ತದೆ. ಹೆಚ್ಚಿನ ಉದ್ದಿಮೆಗಳು ಕೃಷಿ ಆಧಾರಿತವಾಗಿದ್ದವು. ಎಣ್ಣೆ ತಯಾರಿಕೆ, ಬೆಲ್ಲ ಮತ್ತು ಸಕ್ಕರೆ ಉತ್ಪಾದನೆ, ಬಟ್ಟೆಗಳ ನೇಯುವಿಕೆ ಮುಂತಾದವು ಕೃಷಿ ಆಧಾರಿತ ಉದ್ದಿಮೆಗಳಾಗಿದ್ದವು. ಇವುಗಳಲ್ಲದೆ ಮರದ ಕೆಲಸ, ಮಡಕೆ ತಾಯಾರಿಕೆ, ಆಭರಣಗಳ ತಯಾರಿಕೆ, ಗಣಿಗಾರಿಕೆ, ಯುದ್ಧೋಪಕರಣಗಳ ತಯಾರಿಕೆ, ಮನೆ ಬಳಕೆ ಸಾಮಾಗ್ರಿಗಳ ತಯಾರಿಕೆ ಮುಂತಾದ ಕೈಗಾರಿಕೆಗಳೂ ಉತ್ಪಾದನೆಯಲ್ಲಿ ತೊಡಗಿದ್ದವು. ಎಣ್ಣೆಯ ಉತ್ಪಾದನೆ ಅಂದಿನ ಪ್ರಮುಖ ಉದ್ದಿಮೆಯಾಗಿತ್ತು. ಎಣ್ಣೆ ಉತ್ಪಾದಿಸುವವರನ್ನು ತೈಲಿಕ, ತೆಲ್ಲಿಗಾರ, ಗಾಣಿಗ ಎಂಬ ಹೆಸರುಗಳಿಂದ ಕರೆಯಲಾಗುತ್ತಿತ್ತು.[1] ಎಣ್ಣೆಯ ಉತ್ಪಾದನೆ ಮತ್ತು ಮಾರಾಟಗಳೆರಡೂ ಒಂದೇ ಕಡೆ ನಡೆಯುತ್ತಿತ್ತು. ಎತ್ತುಗಾಣ, ಕೈಗಾಣ, ಮೆಟ್ಟುಗಾಣಗಳಲ್ಲಿ ಎಣ್ಣೆ ಬೀಜಗಳನ್ನು ಹಾಕಿ ಎಣ್ಣೆ ಉತ್ಪಾದಿಸುತ್ತಿದ್ದರು.[2] ಗಾಣಗಳ ಮೇಲೆ ವಿಧಿಸುತ್ತಿದ್ದ ತೆರಿಗೆಯನ್ನು ಗಾಣದೆರೆ, ಗಾಣಾಯ, ಗಾಣದ ಸುಂಕ ಮುಂತಾದ ಹೆಸರುಗಳಿಂದ ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ.[3] ಬೆಲ್ಲ ಮತ್ತು ಸಕ್ಕರೆಯ ಉತ್ಪಾದನೆಯು ಹೆಚ್ಚು ಪ್ರಚಲಿತವಿದ್ದ ಉದ್ದಿಮೆಯಾಗಿತ್ತು. ಕಬ್ಬು ವಾಣಿಜ್ಯ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದ ಬೆಳೆಯಾಗಿತ್ತು. ಈ ಉತ್ಪಾದನೆಯ ಮೇಲಿನ ತೆರಿಗೆಯನ್ನು ಆಲೆದರೆ ಎಂದು ಕರೆಯಲಾಗಿದೆ.[4]….[5] ಬಟ್ಟೆಗಳನ್ನು ತಯಾರಿಸಲು ಬೇಕಾದ ಕಚ್ಚಾವಸ್ತುಗಳನ್ನು ಉತ್ಪಾದಿಸುವ, ನೇಯುವ, ಮಾರಾಟ ಮಾಡುವ ಕೆಲಸ ಒಂದು ಬೃಹತ್ ಉದ್ದಿಮೆಯಂತೆಯೇ ಇತ್ತು. ಬಟ್ಟೆ ನೇಯುವ ಕಾರ್ಖಾನೆಗೆ ಅರಸರ ಮತ್ತು ಅಧಿಕಾರ ವರ್ಗಗಳ ಪ್ರೋತ್ಸಾಹವೂ ದೊರಕುತ್ತಿತ್ತು. ನೇಕಾರರ ಮೇಲೆ ವಿಧಿಸುತ್ತಿದ್ದ ತೆರಿಗೆಯನ್ನು ನೂಲುದೆರೆ, ಮಗ್ಗದೆರೆ ಮುಂತಾದ ಹೆಸರುಗಳಿಂದ ಕರೆಯಲಾಗಿದೆ. ದಿನನಿತ್ಯದ ಬಳಕೆಗೆ ಬೇಕಾದ ಮಣ್ಣಿನ ಮಡಕೆಗಳನ್ನು ತಯಾರಿಸುವವರನ್ನು ಕುಂಬಾರರು ಎನ್ನುವ ಮಡಕೆ ತಯಾರಿಕೆಗೆ ಬಳಸುತ್ತಿದ್ದ ಚಕ್ರ, ಮಣ್ಣು, ಮುಂತಾದ ವಿಚಾರಗಳ ಕುರಿತು ಶಾಸನಗಳು ವಿವರವಾಗಿ ತಿಳಿಸುತ್ತವೆ. ಕುಂಬಾರರ ಮೇಲಿನ ತೆರಿಗೆಯನ್ನು ಕುಂಬಾರದೆರೆ ಎಂದು ಹೆಸರಿಸಲಾಗಿದೆ.[6]

ಗಣಿಕಾರಿಕೆಯು ಅಂದಿನ ಸಂದರ್ಭದಲ್ಲಿ ಒಂದು ಉದ್ದಿಮೆಯಾಗಿ ರೂಪುಗೊಳ್ಳಲಾರಂಭಿಸಿತ್ತು. ಆದರೆ ಈ ಕುರಿತು ಹೆಚ್ಚಿನ ಮಾಹಿತಿಗಳು ಸಿಗುವುದಿಲ್ಲ. ಕೆಲವು ಶಾಸನಗಳಲ್ಲಿ ಚಿನ್ನದ ಗಣಿ, ಕಬ್ಬಿಣದ ಗಣಿ, ತಾಮ್ರದ ಗಣಿ ಎಂಬ ಉಲ್ಲೇಖಗಳು ಸಿಗುತ್ತವೆ.[7] ಗಣಿಯ ಸಂಪೂರ್ಣ ಹಕ್ಕು ರಾಜ್ಯದ್ದಾಗಿರಲಿಲ್ಲ. ಸ್ವತಂತ್ರ ಉದ್ಯಮಿಗಳು ಗಣಿಗಳನ್ನು ನಡೆಸಬಹುದಾಗಿತ್ತು.[8]ಗುಬ್ಬಿ, ಚಿಕ್ಕನಾಯಕನಹಳ್ಳಿ, ಮಾಗಡಿ, ಚನ್ನಪಟ್ಟಣ, ಬಳ್ಳಾರಿ, ಬಿಜಾಪುರ, ಧಾರವಾಡಗಳು ಗಣಿಗಾರಿಕೆ ನಡೆಯುತ್ತಿದ್ದ ಪ್ರಮುಖ ಸ್ಥಳಗಳಾಗಿದ್ದವು.[9] ಕಬ್ಬಿಣದ ಕೈಗಾರಿಕೆ ಕೈಗಾರಿಕೋದ್ಯಮದಲ್ಲೇ ಮೊದಲ ಸ್ಥಾನವನ್ನು ಪಡೆದುಕೊಂಡಿತ್ತು ಎನ್ನುವುದು ತಿಳಿದು ಬರುತ್ತದೆ. ಕೃಷಿ ಮತ್ತು ಕೃಷಿಯೇತರ ಕೆಲಸಗಳಿಗೆ ಕಬ್ಬಿಣದಿಂದ ತಯಾರಿಸಿದ ಉಪಕರಣಗಳು ಬೇಕಾಗುತ್ತಿತ್ತು. ಈ ಉಪಕರಣಗಳನ್ನು ಉತ್ಪಾದಿಸುವವರನ್ನು ಕಮ್ಮಾರರು ಎಂಬ ಹೆಸರಿನಿಂದ ಕರೆಯಲಾಗಿದೆ. ಹಾರೆ, ಗುದ್ದಲಿ, ಕುಡುಗೋಲು ಮೊದಲಾದ ಕೃಷಿಗೆ ಬಳಸುವ ಉಪಕರಣಗಳು ಅತ್ಯಂತ ಹೆಚ್ಚಿನ ಬೇಡಿಕೆಯನ್ನು ಹೊಂದಿರುತ್ತಿದ್ದವು. ಇದರೊಂದಿಗೆ ಯುದ್ಧೋಪಕರಣಗಳೂ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದವು. ರಾಜಪ್ರಭುತ್ವಕ್ಕೆ ಯುದ್ಧಗಳು ಅನಿವಾರ್ಯವಾಗಿದ್ದರಿಂದಾಗಿ ಯುದ್ಧಕ್ಕೆ ಬಳಸುವ ಖಡ್ಗ, ಕವಚ, ಈಟಿ, ಶೂಲ, ಸಬಳ, ಕೊಂತ, ಶಲ್ಯ, ಭಲ್ಯ, ಕರ್ಕಡೆ, ಸುರಿಗೆ, ಮುಸಲ, ಭಿಂಡಿವಾಳ, ಮುಸುಂಡಿ ಮೊದಲಾದ ಆಯುಧಗಳು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಗೊಳ್ಳುತ್ತಿದ್ದವು.[10] ಈ ಎಲ್ಲಾ ವಿಧವಿಧವಾದ ಆಯುಧಗಳನ್ನು ಉತ್ಪಾದಿಸಲು ನುರಿತ ಕಮ್ಮಾರರು, ಲೋಹಕಾರರು ಇದ್ದಿರಬೇಕೆಂದು ತಿಳಿಯುತ್ತದೆ. ಹೊಯ್ಸಳ ಆಳಿಕೆಯ ಸಂದರ್ಭದಲ್ಲಿ ನಿರ್ಮಾಣಗೊಂದ ಕೇದಾರೇಶ್ವರ ಗುಡಿಯ ಮೇಲಿನ ಶಿಲ್ಪದಲ್ಲಿ ಉಕ್ಕಿನ ಹುರುಪೆಗಳಿಂದ ಕೂಡಿದ ಕಬ್ಬಿಣದ ಕವಚವು ಯುದ್ಧದ ಕುದುರೆಯ ದೇಹವನ್ನು ಆವರಿಸುವುದನ್ನೂ, ಸವಾರನು ಕೂಡ ತನ್ನ ಕಾಲಿನವರೆಗೂ ಮುಚ್ಚಿರುವ ಲೋಹದ ಕವಚ ತೊಟ್ಟಿರುವುದನ್ನೂ, ತಲೆಗೆ ಶಿರಸ್ತ್ರಾಣ ಹಾಕಿರುವುದನ್ನೂ ಕಾಣಬಹುದಾಗಿದೆ.[11] ಇದು ಕಬ್ಬಿಣದ ಬಳಕೆ ಎಷ್ಟರಮಟ್ಟಿಗೆ ಇತ್ತು ಎನ್ನುವುದನ್ನು ಸೂಚಿಸುತ್ತದೆ.

ತಾಮ್ರ, ಹಿತ್ತಾಳೆ ಮತ್ತು ಕಂಚು ಈ ಮೂರು ಲೋಹಗಳಿಂದಲೂ ವಿವಿಧ ವಸ್ತುಗಳನ್ನು ಉತ್ಪಾದಿಸಲಾಗುತ್ತಿತ್ತು ಎನ್ನುವುದಕ್ಕೆ ಶಾಸನಾಧಾರಗಳಿವೆ. ಕಂಚುಕಾರರು ದಿನನಿತ್ಯದ ಬಳಕೆಯ ಪಾತ್ರೆಗಳನ್ನಷ್ಟೇ ಅಲ್ಲದೆ ಲೋಹದ ಮೂರ್ತಿಗಳನ್ನು ತಯಾರಿಸುತ್ತಿದ್ದರು.[12] ಕ್ರಿ.ಶ. ೧೧೧೬ ರ ಮೈಸೂರಿನ ಶಾಸನವೊಂದು ಕಂಚುಗಾರರು ಬಂಗಾರ, ಕಬ್ಬಿಣ, ತಾಮ್ರ ಮೊದಲಾದ ಲೋಹ ಕರ್ಮಗಳಲ್ಲಿಯೂ, ವಜ್ರ ಮತ್ತು ರತ್ನ ಮೊದಲಾದ ರತ್ನಕರ್ಮಗಳಲ್ಲಿಯೂ ಪರಿಣತರಾಗಿದ್ದುದೇ ಅಲ್ಲದೆ ತೀರ್ಥಂಕರ, ವಿಷ್ಣು ಮೊದಲಾದ ದೇವತೆಗಳ ಮೂರ್ತಿಗಳನ್ನು ಕೂಡ ಎರಕ ಹೊಯ್ದು ತಯಾರಿಸುತ್ತಿದ್ದರೆಂದು ಹೇಳುತ್ತದೆ.[13] ಕಂಚಿನ ಕೈಗಾರಿಕೆಯಲ್ಲಿ ತೊಡಗಿದ್ದ ಕೆಲವು ಕುಶಲಕರ್ಮಿಗಳ ಹೆಸರುಗಳು ಶಾಸನಗಳಲ್ಲಿ ಸಿಗುತ್ತವೆ. ಕೆ.ಎಸ್. ಕುಮಾರಸ್ವಾಮಿ ಅವರು ತಮ್ಮ ಕೃತಿಯಲ್ಲಿ ನಾಚೋಜ, ಕಾಳೋಜ ಮತ್ತು ಅವಕೋಜ ಎನ್ನುವ ಕಂಚುಗಾರರನ್ನು ಶಾಸನಗಳನ್ನು ಆಧರಿಸಿ ಉಲ್ಲೇಖಿಸಿದ್ದಾರೆ.[14] ಮರದಿಂದ ವಿವಿಧ ರೀತಿಯ ವಸ್ತುಗಳನ್ನು ತಯಾರಿಸುವವರನ್ನು ಬಡಗಿಗಳು ಎಂದು ಹೆಸರಿಸಲಾಗಿದೆ. ಇವರು ಜನರು ವಾಸಿಸುವ ಮನೆಗಳನ್ನು ಹಾಗೂ ಬಳಸುವ ಪೀಠೋಪಕರಣಗಳನ್ನು, ವಸ್ತುಗಳನ್ನು ಸಾಗಿಸಲು ಗಾಡಿ, ಬಂಡಿಗಳನ್ನು, ಮರದಲ್ಲಿ ಕೆತ್ತನೆ ಕೆಲಸಗಳನ್ನು, ರಥಗಳನ್ನು ನಿರ್ಮಿಸುತ್ತಿದ್ದರು. ಜನ ಸಾಮಾನ್ಯರು ಉಪಯೋಗಿಸುವ ಪೀಠೋಪಕರಣಗಳು, ಗಾಡಿಗಳು, ನೇಗಿಲು ಮುಂತಾದವುಗಳನ್ನು ಮಾಡುವವರನ್ನು ಅರೆಕುಶಲ ಬಡಗಿಗಳೆಂದೂ; ಮೇಲ್ವರ್ಗದ ಜನರ ಅಭಿರುಚಿಗಳಿಗನುಗುಣವಾಗಿ ಸೂಕ್ಷ್ಮ ಕೆತ್ತನೆ ಕೆಲಸಗಳನ್ನು, ವಿಶಿಷ್ಟವಾದ ಪೀಠೋಪಕರಣಗಳನ್ನು, ದೇವಾಲಯಗಳಲ್ಲಿ ಕೆತ್ತನೆ ಕೆಲಸಗಳನ್ನು, ರಥಗಳನ್ನು ನಿರ್ಮಾಣ ಮಾಡುವವರನ್ನು ಕುಶಲ ಬಡಗಿಗಳು ಎಂಬುದಾಗಿಯೂ ಕರೆಯಲಾಗಿದೆ.[15]ಬಡಗಿಗಳು ಹಡಗುಗಳನ್ನು ನಿರ್ಮಿಸುತ್ತಿದ್ದರು ಎನ್ನುವ ಮಾಹಿತಿ ಶಾಸನಗಳು ಮತ್ತು ಜನಪದಸಾಹಿತ್ಯಗಳಲ್ಲಿ ಸಿಗುತ್ತದೆ.[16] ಹೊಯ್ಸಳ ಎರಡನೆಯ ಬಲ್ಲಾಳನ ಆಳ್ವಿಕೆಯ ಅವಧಿಯಲ್ಲಿದ್ದ ಕಮ್ಮಟಸೆಟ್ಟಿ ಮತ್ತು ದಾಸೆಯಸೆಟ್ಟಿ ಎನ್ನುವವರು ಹಡಗಿನ ಮೂಲಕ ಹೊರನಾಡಿನೊಡನೆ ವ್ಯಾಪಾರ ಸಂಪರ್ಕವನ್ನು ಇಟ್ಟು ಕೊಂಡಿದ್ದರು ಎಂಬುದಾಗಿ ಎಸ್. ಗುರುರಾಜಾಚಾರ್ ಅವರು ಅಭಿಪ್ರಾಯಪಟ್ಟಿದ್ದಾರೆ.[17] ಬಡಗಿಗಳು ಮರದ ಆಯುಧಗಳನ್ನು ತಯಾರಿಸುತ್ತಿದ್ದರು ಎನ್ನುವ ಉಲ್ಲೇಖಗಳು ಜನಪದ ಸಾಹಿತ್ಯಗಳಲ್ಲಿ ಸಿಗುತ್ತವೆ.[18] ಬಡಗಿಗಳಿಗೆ ಭೂಮಿಯನ್ನು ದಾನ ನೀಡಲಾಗುತ್ತಿತ್ತು ಎನ್ನುವ ಉಲ್ಲೇಖಗಳು ಶಾಸನಗಳಲ್ಲಿ ಸಿಗುತ್ತವೆ. ಚಂಪೋಜ ಎನ್ನುವ ಹೆಸರಿನ ಬಡಗಿಗೆ ಅವನ ಸೇವೆಯನ್ನು ಪರಿಗಣಿಸಿ ಭೂಮಿಯನ್ನು ದಾನ ನೀಡಲಾಗಿತ್ತು.[19]

ಅರಸರು ವಿವಿಧ ಸಂದರ್ಭಗಳಲ್ಲಿ ವಿವಿಧ ಮಾದರಿಯ ನಾಣ್ಯಗಳನ್ನು ಹೊರಡಿಸಿದ್ದರ ಉಲ್ಲೇಖಗಳು ಶಾಸನಗಳಲ್ಲಿ ಮತ್ತು ಸಾಹಿತ್ಯ ಕೃತಿಗಳಲ್ಲಿಬ್ ಸಿಗುತ್ತವೆ. ಅದರೆ ಆ ನಾಣ್ಯಗಳನ್ನು ಮುದ್ರಿಸುವ ಕಾರ್ಮಿಕರ ಕುರಿತು ಹೆಚ್ಚಿನ ಮಾಹಿತಿಗಳು ಸಿಗುವುದಿಲ್ಲ. ಇದು ಅರಸಕೇಂದ್ರಿತ ಚರಿತ್ರೆಯ ಮಿತಿಯಾಗಿ ಕಂಡುಬರುತ್ತದೆ. ನಾಣ್ಯಗಳನ್ನು ಟಂಕಿಸುತ್ತಿದ್ದ ಕಾರ್ಯಗಾರಗಳನ್ನು ಕಮ್ಮಟಗಳೆಂದು ಅಥವಾ ಅಚ್ಚಿನ ಟಂಕಸಾಲೆಗಳೆಂದು ಕರೆಯಲಾಗುತ್ತಿತ್ತು. ಸರಕಾರ ಕಮ್ಮಟಗಳ ಮೇಲೆ ಹತೋಟಿಯನ್ನು ಇಟ್ಟುಕೊಂಡಿತ್ತು. ಖಾಸಗಿ ವ್ಯಕ್ತಿಗಳು, ಸಂಸ್ಥೆಗಳು ಸರಕಾರದ ಪರವಾನಿಗೆಯನ್ನು ಪಡೆದುಕೊಂಡು ಕಮ್ಮಟಗಳನ್ನು ಹೊಂದಬೇಕಿತ್ತು. ಚಿನ್ನ, ಬೆಳ್ಳಿ, ತಾಮ್ರದ ನಾಣ್ಯಗಳನ್ನು ಕಮ್ಮಟಗಳಲ್ಲಿ ಟಂಕಿಸಲಾಗುತ್ತಿತ್ತು. ನಾಣ್ಯವನ್ನು ಟಂಕಿಸುವ ವ್ಯಕ್ತಿಗಳ ಮತ್ತು ಅದರ ಒಟ್ಟು ಜವಾಬ್ದಾರಿಯನ್ನು ಹೊತ್ತಿಸುವ ಅಧಿಕಾರಿಗಳ ಕುರಿತು ಶಾಸನಗಳಲ್ಲಿ ಮಾಹಿತಿ ಸಿಗುತ್ತದೆ.[20] ಸೆಟ್ಟಿಗಳು ಮತ್ತು ಅಕ್ಕಸಾಲಿಗರು ಪರಸ್ಪರ ಒಪ್ಪಂದ ಮಾಡಿಕೊಂಡು ಕಮ್ಮಟದ ಒಡೆಯರಾಗುತ್ತಿದ್ದರು. ಕಮ್ಮಟವು ಚೆನ್ನಾಗಿ ಬೆಳೆದ ಒಂದು ಸಂಸ್ಥೆಯಾಗಿದ್ದಿತು. ಪ್ರತಿಯೊಂದು ಕಮ್ಮಟಕ್ಕೂ ಒಬ್ಬ ಮುಖ್ಯಸ್ಥನಿರುತ್ತಿದ್ದನು. ಅವನ ಜತೆಯಲ್ಲಿ ಓಜುಗಳು ಅಥವಾ ಆಚಾರಿಗಳು ಸಾಂಸ್ಥಿಕವಾಗಿ ದುಡಿಯುತ್ತಿದ್ದರು. ಅಕ್ಕಸಾಲಿಗರು ಅಥವಾ ಕಮ್ಮಟದ ಓಜುಗಳು ತಾವೇ ಪ್ರತ್ಯೇಕವಾದ ಶ್ರೇಣಿಗಳನ್ನು ಸ್ಥಾಪಿಸಿಕೊಳ್ಳುತ್ತಿದ್ದರು. ವಿಶ್ವಕರ್ಮರೆಂದು ಕರೆದುಕೊಳ್ಳುವ ಅಕ್ಕಸಾಲಿಗಳನ್ನು ರಾಜನು ಕಮ್ಮಟಗಳಲ್ಲಿ ನೇಮಿಸಿಕೊಳ್ಳುತ್ತಿದ್ದನು.[21]

ಜಿ.ಆರ್.ಕುಪ್ಪುಸ್ವಾಮಿ ಅವರ ಪ್ರಕಾರ ಕಮ್ಮಟಗಳಲ್ಲಿ ಮೂರು ರೀತಿಯ ಕೆಲಸಗಾರರು ಕೆಲಸ ಮಾಡುತ್ತಿದ್ದರು.[22] ಅವರುಗಳೆಂದರೆ, ಚಿನ್ನಕ್ಕೆ ಗೊತ್ತಾದ ಆಕಾರವನ್ನು ಕೊಡುವ ಬಿಡಿಗಮ್ಮಟ, ನಾಣ್ಯದ ಮೇಲೆ ಮುದ್ರೆಯನ್ನು ಒತ್ತುವ ಉಂಡಿಗೆಯ ಕಮ್ಮಟ ಹಾಗೂ ನಾಣ್ಯಗಳ ಅಂಚನ್ನು ಕತ್ತರಿಸಿ ಅರದಿಂದ ಉಜ್ಜಿ ಸಮನಾದ ಆಕಾರವನ್ನು ನೀಡುವ ಸುಕಟ್ಟುಕಾರರು. ಕಮ್ಮಟಗಳ ಒಡೆಯರಾಗಿದ್ದ ಕೆಲವು ವ್ಯಕ್ತಿಗಳ ಹೆಸರುಗಳು ಶಾಸನಗಳಲ್ಲಿ ಉಲ್ಲೇಖಿತವಾಗಿವೆ. ಸಾವಿಮೋಜ, ಚಿಕ್ಕಮಾದೋಜ, ದಾಮೋಜ, ಕೇತೋಜ, ರುದ್ಧೋಜ, ರಾಮೋಜ, ಉತ್ತಮೋಜ ಇವರು ಕಮ್ಮಟಗಳ ಒಡೆಯರು ಅಥವಾ ಹಿರಿಯರಾಗಿದ್ದರು.[23] ಇವರು ದಾನ ನೀಡುವ ಅಧಿಕಾರವನ್ನು ಹೊಂದಿದ್ದರು. ಆಭರಣಗಳನ್ನು ತಯಾರಿಸುವ ಕುಶಲ ಕಾರ್ಮಿಕರನ್ನು ಅಕ್ಕಸಾಲಿಗರೆಂದು ಕರೆಯಲಾಗುತ್ತಿತ್ತು. ಆಭರಣ ತಯಾರಿಕೆಯು ಅತ್ಯಂತ ಎನ್ನುವುದನ್ನು ಸೂಚಿಸುತ್ತದೆ. ಹೊಯ್ಸಳ ಅರಸ ನಸಸಿಂಹನು ಅಕ್ಕಸಾಲಿ ಕಾಳಜಿ ಎನ್ನುವವನಿಗೆ ಬಂಗಾರದ ಕೆಲಸ ಮಾಡಿದ್ದಕ್ಕೆ ಭೂಮಿಯನ್ನು ದಾನ ನೀಡಿದ ವಿವರ ಶಾಸನದಲ್ಲಿದೆ.[24] ಆಭರಣಗಳನ್ನು ತಯಾರಿಸುತ್ತಿದ್ದ ಬಳೆಗಾರ ಮಾರಸೆಟ್ಟಿ, ಬಳೆ ವ್ಯಾಪಾರಿ ಮಲ್ಲಿಸೆಟ್ಟಿ ಮುಂತಾದ ಅಕ್ಕಸಾಲಿಗರ ಹೆಸರುಗಳು ಶಾಸನಗಳಲ್ಲಿ ಕಂಡುಬರುತ್ತವೆ.[25]

ಕುಶಲಕರ್ಮಿಗಳು ಸಣ್ಣ ಹಾಗೂ ಸರಳಯಂತ್ರಗಳನ್ನು ನಿರ್ಮಿಸುತ್ತಿದ್ದರು. ಎಣ್ಣೆಯನ್ನು ಹಿಂಡಿ ತೆಗೆಯಲು ಗಾಣಗಳನ್ನು, ಅಡುಗೆ ಮಾಡಲು ಹಾಗೂ ಮದ್ದುಗುಂಡುಗಳನ್ನು ಅರೆದು ತಯಾರಿಸಲು ಒರಳನ್ನು, ಕೋಟೆಗೆ ಸಂಬಂಧಿಸಿದ ಯಂತ್ರವಾದ ಕೋಟೆಯ ಯಂತ್ರವನ್ನು ಹಾಗೂ ಇನ್ನೂ ಅನೇಕ ಸರಳ ಯಂತ್ರಗಳನ್ನು ಓಜರು, ಆಚಾರಿಗಳು ನಿರ್ಮಿಸುತ್ತಿದ್ದರು.[26] ಈ ರೀತಿಯಾಗಿ ಕಮ್ಮಾರ, ಬಡಗಿ, ಅಕ್ಕಸಾಲಿ, ಕಂಚುಗಾರ, ಶಿಲ್ಪಿ ಮೊದಲಾದ ಕುಶಲ ಕಾರ್ಮಿಕರು ಕೈಗಾರಿಕೆ ಚಾಲನೆಯನ್ನು ಒದಗಿಸಿದರು. ಇವರು ಉತ್ಪಾದನೆ ಮಾತ್ರವಲ್ಲದೆ ಅವುಗಳ ವ್ಯಾಪಾರವನ್ನು ನಡೆಸುತ್ತಿದ್ದರು. ತಾವು ವಾಸಿಸುತ್ತಿರುವ ಪ್ರದೇಶದ ಸುತ್ತಮುತ್ತಲಿನಲ್ಲಿ ಸಿಗುವ ಪ್ರಕೃತಿದತ್ತವಾದ ಕಚ್ಚಾವಸ್ತುಗಳನ್ನೇ ಹೆಚ್ಚಾಗಿ ಬಳಸಿಕೊಂಡು ಕೈಗಾರಿಕೆಗಳನ್ನು ನಡೆಸುತ್ತಿದ್ದರು. ತಾವೇ ಸ್ವತಃ ಮಾರುಕಟ್ಟೆಗಳನ್ನು ಇಲ್ಲವೆ ಸಂತೆಗಳನ್ನು ಏರ್ಪಡಿಸುತ್ತಿದ್ದರು. ಅದೇ ರೀತಿ ತಮ್ಮ ಹಿತರಕ್ಷಣೆಗೋಸ್ಕರ ವೃತ್ತಿಸಂಘಗಳನ್ನು ರಚಿಸಿಕೊಂಡಿದ್ದರು. ಕುಶಲ ಕಾರ್ಮಿಕರಿಗೆ ವೇತನವನ್ನು ನೀಡಲಾಗುತ್ತಿತ್ತು. ವೇತನವನ್ನು ಮೊದಲೇ ಗೊತ್ತುಪಡಿಸಲಾಗುತ್ತಿತ್ತು. ವೇತನದ ಪ್ರಮಾಣ ಕೆಲಸವನ್ನು ನೋಡಿಕೊಂಡು ಬೇರೆಬೇರೆಯೇ ಆಗಿರುತ್ತಿತ್ತು. ಕುಶಲಕಾರ್ಮಿಕರ ಜೀವನೋಪಾಯಕ್ಕೆ ಗದ್ದೆ, ಗದ್ಯಾಣ, ಪಣ, ಕೂಲಿ ಮುಂತಾದವುಗಳನ್ನು ನೀಡಲಾಗುತ್ತಿತ್ತು.[27] ಅರಮನೆ, ಬಸದಿ, ದೇವಸ್ಥಾನ, ಕಮ್ಮಟ ಮೊದಲಾದ ಸಂಸ್ಥೆಗಳಲ್ಲಿ ಕುಶಲಕರ್ಮಿಗಳು ದುಡಿಯುತ್ತಿದ್ದರು. ಕುಶಲಕರ್ಮಿಗಳನ್ನು ಆಯಗಾರರು ಎಂಬುದಾಗಿ ಪರಿಗಣಿಸಲಾಗಿತ್ತು.[28] ಇವರು ಕೆಲವೊಂದು ಸಂದರ್ಭಗಳಲ್ಲಿ ತಮ್ಮ ವೃತ್ತಿಯನ್ನು ಬದಲಾಯಿಸುತ್ತಿದ್ದರು ಎನ್ನುವ ವಿವರಣೆಯೂ ಸಿಗುತ್ತದೆ.[29] ಗ್ರಾಮಗಳಲ್ಲಿ ಚಿನ್ನ, ಬೆಳ್ಳಿಯ ತಯಾರಿಕೆಗೆ ಹೆಚ್ಚು ಪ್ರಾಮುಖ್ಯತೆ ಇಲ್ಲದಿರುವ ಸಂದರ್ಭಗಳಲ್ಲಿ ಅಕ್ಕಸಾಲಿಗರು ಕುಶಲಕರ್ಮಿಗಳ ಸಾಮಾಜಿಕ ಸ್ಥಾನಮಾನ, ಆದಾಯ ಮತ್ತು ವೇತನ ಅವರು ಉತ್ಪಾದಿಸುವ ವಸ್ತು ಮತ್ತು ಅದರ ಮಾರಾಟವನ್ನು ಅವಲಂಬಿಸಿಕೊಂಡಿರುತ್ತಿತ್ತು.

೫.೪. ವರ್ತಕ ಸಂಘಗಳು

ಮಧ್ಯಕಾಲೀನ ಕರ್ನಾಟಕದ ಆರ್ಥಿಕ ಚಟುವಟಿಕೆಗಳಲ್ಲಿ ವರ್ತಕ ಸಂಘಗಳು ಬಹು ಮುಖ್ಯವಾದ ಪಾತ್ರವನ್ನು ವಹಿಸುತ್ತಿದ್ದವು. ಇವುಗಳನ್ನು ಶ್ರೇಣಿಗಳು ಅಥವಾ ವ್ಯಾಪಾರಸ್ಥರ ಸಂಘಗಳು ಎನ್ನುವ ಹೆಸರಿನಿಂದಲೂ ಕರೆಯಲಾಗಿದೆ. ಈ ಶ್ರೇಣಿಗಳಲ್ಲಿ ವರ್ತಕರು ಮಾತ್ರವಲ್ಲದೆ ವಸ್ತುಗಳನ್ನು ಉತ್ಪಾದಿಸುವ ಮತ್ತು ಮಾರಾಟಮಾಡುವ ವಿವಿಧ ವೃತ್ತಿಯವರು ಸೇರಿಕೊಂಡಿರುತ್ತಿದ್ದರು. ಶ್ರೇಣಿಗಳನ್ನು ವರ್ತಕ ಸಂಘ, ವೃತ್ತಿ ಸಂಘ, ವಾಣಿಜ್ಯ ಸಂಘ, ಉತ್ಪಾದಕ ಸಂಘ, ವಿನಿಮಯ ಸಂಘ, ಉತ್ಪಾದಕ – ವಿನಿಮಯ ಸಂಘ ಮುಂತಾದ ಹೆಸರುಗಳಿಂದಲೂ ಕರೆಯಲಾಗಿದೆ. ವ್ಯಾಪಾರವನ್ನೇ ವೃತ್ತಿಯಾಗಿಸಿಕೊಂಡಿರುವ ವರ್ತಕರು ರಚಿಸಿಕೊಂಡ ಸಂಘಗಳನ್ನು ವರ್ತಕ ಸಂಘ, ವೃತ್ತಿ ಸಂಘ, ವಿನಿಮಯ ಸಂಘ ಎಂಬ ಹೆಸರಿನಿಂದಲೂ; ಉತ್ಪಾದನೆ-ಮಾರಾಟ ಈ ಎರಡೂ ಕೆಲಸಗಳನ್ನು ಮಾಡುತ್ತಿದ್ದ ಜನವರ್ಗ ರಚಿಸಿಕೊಂಡ ಸಂಘಗಳನ್ನು ವೃತ್ತಿ ಸಂಘ, ಉತ್ಪಾದಕ ಸಂಘ, ಉತ್ಪಾದಕ-ವಿನಿಮಯ ಸಂಘ ಎಂಬ ಹೆಸರಿನಿಂದಲೂ ಕರೆಯಲಾಗಿದೆ.[30] ಪ್ರಸ್ತುತ ಅಧ್ಯಯನದಲ್ಲಿ ವ್ಯಾಪಾರವನ್ನು ನಡೆಸುತ್ತಿದ್ದ ವರ್ತಕರು ಹಾಗೂ ಉತ್ಪಾದನೆ ಮತ್ತು ವ್ಯಾಪಾರವನ್ನು ನಡೆಸುತ್ತಿದ್ದ ಕುಶಲಕರ್ಮಿಗಳು ರಚಿಸಿಕೊಂಡಿದ್ದ ಶ್ರೇಣಿಗಳ ಕುರಿತು ಅಧ್ಯಯನ ನಡೆಸಲಾಗಿದೆ. ಮಧ್ಯಕಾಲೀನ ಯುರೋಪಿನ ಚರಿತ್ರೆಯಲ್ಲಿ ವೃತ್ತಿ ಸಂಘಗಳು ಕಾಣಿಸಿಕೊಂಡಿದ್ದರ ಕುರಿತು ಅನೇಕ ಚರ್ಚೆಗಳು ನಡೆದಿವೆ. ಮಧ್ಯಕಾಲೀನ ದಕ್ಷಿಣ ಭಾರತದ ಶ್ರೇಣಿಗಳನ್ನು ಯುರೋಪಿನಲ್ಲಿದ್ದ ಶ್ರೇಣ್ಭಿಗಳಿಗೆ ಹೋಲಿಸಿಯೂ ಅಧ್ಯಯನಗಳು ನಡೆದಿವೆ. ಆದರೆ ಈ ರೀತಿಯ ಅಧ್ಯಯನದಿಂದ ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುವುದು ಎಂ.ಅಬ್ರಹಾಂ ಅವರ ಅಭಿಪ್ರಾಯ.[31] ಮಧ್ಯಕಾಲೀನ ಕರ್ನಾಟಕದ ಇಂಥ ಸಂಘಗಳ ಅಧ್ಯಯನ ನಡೆಸಬೇಕಾದರೆ ಪ್ರಮುಖವಾಗಿ ಸಿಗುವ ಆಕರಗಳೆಂದರೆ ಶಾಸನಗಳು ಮತ್ತು ಸಾಹಿತ್ಯ ಕೃತಿಗಳು. ಈ ಕುರಿತು ಮೌಖಿಕ ಆಕರಗಳು ಅಷ್ಟಾಗಿ ಲಭ್ಯವಿಲ್ಲ.

ಸಂಘಗಳು ರಚನೆಗೊಳ್ಳಬೇಕಾದರೆ ವೃತ್ತಿಗಳು ಮೊದಲೆ ರೂಪುಗೊಂಡಿರಬೇಕು. ಎಲ್ಲ ವೃತ್ತಿಗಳಿಗೂ ಸಂಘಗಳನ್ನು ರಚಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಕೆಲವೊಂದು ಪ್ರಮುಖ ವೃತ್ತಿಯವರು ಮಾತ್ರ ಸಂಘಗಳನ್ನು ರಚಿಸಿಕೊಳ್ಳುತ್ತಿದ್ದರು. ಹೀಗೆ ಸಮಾನ ವೃತ್ತಿಯವರು ತಮ್ಮ ಸಮಾಜದ ಅಥವಾ ಸಮುದಾಯದ ಜನರೊಂದಿಗೆ ಸೇರಿಕೊಂಡು ಕಟ್ಟಿದ ಶ್ರೇಣಿಗಳೇ ಸಂಘಗಳು. ಈ ಸಂಘಗಳ ರಚನಾ ಸ್ವರೂಪ, ಕಾರ್ಯನಿರ್ವಹಣೆ, ವಾಣಿಜ್ಯ ಲಾಭ, ಸಾಮಾಜಿಕ ಗೌರವ, ಪ್ರಭಾವ ಇತ್ಯಾದಿ ಅಂಶಗಳು ನಗರಕೇಂದ್ರಗಳ ಅಳಿವು-ಉಳಿವುಗಳಲ್ಲಿ ಬಹು ಮುಖ್ಯವಾದ ಪಾತ್ರವನ್ನು ವಹಿಸುತ್ತಿದ್ದವು. ಈ ಸಂಘಗಳು ರೂಪುಗೊಳ್ಳುವುದಕ್ಕೆ ಆರಂಭಿಕ ಹಂತದಲ್ಲಿ ಸಮುದಾಯ ಜೀವನ ಮತ್ತು ಸಹಕಾರ ತತ್ವಗಳು ಸಮಾಜ ವ್ಯವಸ್ಥೆಯಲ್ಲಿ ಸೇರಿಕೊಂಡಿರುವುದು ಮುಖ್ಯ ಕಾರಣವಾಗಿರಬೇಕೆಂದು ತಿಳಿಯುತ್ತದೆ. ಸಂಘಗಳು ವಿಸ್ತಾರಗೊಂಡಂತೆ ವೈವಿಧ್ಯಮಯವಾಗಿ ಬೆಳೆಯುತ್ತಾ ಹೋದವು. ಈ ಹಂತದಲ್ಲಿ ರಕ್ಷಣೆ, ವೃತ್ತಿ ಸೌಕರ್ಯ, ಸಾಮಾಜಿಕ ಸ್ಥಾನಮಾನ ಮುಂತಾದವು ಸಂಘಗಳ ರಚನೆಗೆ ಮುಖ್ಯ ಕಾರಣವಾದವು. ಅವುಗಳ ಕೇಂದ್ರ ಸಭೆಯಿರುತ್ತಿತ್ತು. ಶ್ರೇಣಿಗಳನ್ನು ನಿಗಮಸಭೆಗಳೆಂದೂ ಕರೆಯಲಾಗುತ್ತಿತ್ತು. ವ್ಯಾಪಾರಸ್ಥರು ಮತ್ತು ವಸ್ತುಗಳ ಉತ್ಪಾದಕರನ್ನು ಸೇರಿಸಿಕೊಂಡು ನಿಗಮಸಭೆಗಳನ್ನು ರಚಿಸಲಾಗುತ್ತಿತ್ತು. ವೇತನ, ಆಸ್ತಿಯ ಉತ್ತರಾಧಿಕಾರ ಮುಂತಾದ ವಿಚಾರಗಳಲ್ಲಿ ಅನುಸರಿಸಬೇಕಾದ ನಿಯಮಾವಳಿಗಳನ್ನು ಈ ಸಭೆಯು ರೂಪಿಸುತ್ತಿತ್ತು.

ಉದ್ಯಮಿಗಳು ಪ್ರತ್ಯೇಕವಾಗಿ ಸಂಘಗಳನ್ನು ರಚಿಸಿಕೊಳ್ಳುತ್ತಿದ್ದರು. ಗಾಣಿಗರು, ಕುಂಬಾರರು, ಕಮ್ಮಾರರು, ಬಡಗಿಗಳು, ಶಿಲ್ಪಿಗಳು, ಸಿಂಪಿಗರು ಮೊದಲಾದವರು ಪ್ರತ್ಯೇಕ ವೃತ್ತಿ ಶ್ರೇಣಿಗಳನ್ನು ರಚಿಸಿ, ವೃತ್ತಿ ತೆರಿಗೆಯನ್ನು ನೀಡುತ್ತಿದ್ದರು. ಉದ್ಯಮ ವರ್ಗಗಳಂತೆ ಗಾವರರು, ಸೆಟ್ಟಿಗಳು, ವೀರಬಣಜಿಗಳು, ಮಣಿಗಾರರು, ನಾನಾದೇಶಿಗಳು, ದೇಶಕಾರರು ಮೊದಲಾದ ವಣಿಜ ವೃತ್ತಿಕರೂ ಶ್ರೇಣಿಗಳಾಗಿ ವಿಂಗಡಣೆ ಹೊಂದಿದ್ದರು.[32] ಈ ಶ್ರೇಣಿಗಳು ಕಳ್ಳಕಾಕರ ಉಪಟಳದಿಂದ ತಮ್ಮನ್ನು ರಕ್ಷಿಸಿಕೊಂಡು, ಶ್ರೇಣಿ ನಿಯಮಾವಳಿಗಳನ್ನು ಉಲ್ಲಂಘಿಸಿದವರಿಗೆ ಕಠಿಣ ದಂಡನೆಗಳನ್ನು ವಿಧಿಸುತ್ತಿದ್ದವು. ಶ್ರೇಣಿಗಳು ಸಾಲವನ್ನು ನೀಡುವ, ಠೇವಣಿಗಳನ್ನು ಸ್ವೀಕರಿಸುವ ಕೆಲಸವನ್ನೂ ಮಾಡುತ್ತಿದ್ದವು. ಶ್ರೇಣಿಗಳಿಗೆ ವ್ಯಾಪಾರೋದ್ಯಮಗಳ ನಿಯಂತ್ರಣಾಧಿಕಾರ ಮಾತ್ರವಲ್ಲದೆ ದೇವಾಲಯ ಮತ್ತು ಬ್ರಾಹ್ಮಣರಿಗೆ ನೀಡಿದ ದಾನದತ್ತಿಗಳ ರಕ್ಷಣಾಧಿಕಾರವೂ ಇದ್ದಿತು. ಶ್ರೇಣಿಗಳು ತಮ್ಮದೇ ಆದ ಧ್ವಜ, ಲಾಂಛನಗಳನ್ನು ಹೊಂದಿರುತ್ತಿದ್ದವು. ವ್ಯಾಪಾರಸ್ಥರು ವ್ಯಾಪಾರಕ್ಕಾಗಿ ಸರಕುಗಳನ್ನು ಸ್ಥಳದಿಂದ ಸ್ಥಳಕ್ಕೆ ಒಯ್ಯಬೇಕಾದ ಸಂದರ್ಭಗಳಲ್ಲಿ ಶ್ರೇಣಿಗಳು ಸಹಕಾರ ನೀಡುತ್ತಿದ್ದವು. ಈ ಉದ್ದೇಶಕ್ಕಾಗಿಯೇ ಶ್ರೇಣಿಗಳು ಸ್ವಂತ ಸೈನ್ಯವನ್ನು ಇಟ್ಟುಕೊಂಡಿರುತ್ತಿದ್ದವು.

ಕ್ರಿ.ಶ. ೮ರಿಂದ ೧೪ನೆಯ ಶತಮಾನಗಳ ಅವಧಿಯಲ್ಲಿನ ವರ್ತಕರ ಚರಿತ್ರೆಯನ್ನು ಅವಲೋಕಿಸಿದಾಗ ವರ್ತಕರು ಹೆಚ್ಚು ಅಧಿಕಾರ ಮತ್ತು ಸವಲತ್ತುಗಳನ್ನು ಹೊಂದಿದ್ದರು ಎನ್ನುವುದು ತಿಳಿದುಬರುತ್ತದೆ. ವರ್ತಕ ಸಂಘಗಳ ಕಾರ್ಯವೈಖರಿಯು ನಗರದಿಂದ ನಗರಕ್ಕೆ ಒಂದು ಆಳ್ವಿಕೆಯಿಂದ ಇನ್ನೊಂದಕ್ಕೆ ಭಿನ್ನವಾಗಿರುತ್ತಿತ್ತು. ಕೆಲವು ನಗರಗಳು ವರ್ತಕ ಸಂಘಗಳ ನೇರ ಹತೋಟಿಯಲ್ಲಿದ್ದರೆ, ಇನ್ನು ಕೆಲವು ನಗರಗಳಲ್ಲಿ ವರ್ತಕ ಸಂಘಗಳು ಇತರ ಆಡಳಿತ ವರ್ಗಗಳೊಡನೆ ಸೇರಿಕೊಂಡು ಆಡಳಿತ ನಡೆಸುತ್ತಿದ್ದವು. ಹೆಚ್ಚು ಸಂಖ್ಯೆಯಲ್ಲಿ ವರ್ತಕ ಆಡಳಿತ ವರ್ಗಗಳೊಡನೆ ಸೇರಿಕೊಂಡು ಆಡಳಿತ ನಡೆಸುತ್ತಿದ್ದವು. ಹೆಚ್ಚು ಸಂಖ್ಯೆಯಲ್ಲಿ ವರ್ತಕ ಸಂಘಗಳ ನೇರ ಹತೋಟಿಯಲ್ಲಿದ್ದರೆ, ಇನ್ನು ಕೆಲವು ನಗರಗಳಲ್ಲಿ ವರ್ತಕ ಸಂಘಗಳು ಇತರ ಆಡಳಿತ ವರ್ಗಗಳೊಡನೆ ಸೇರಿಕೊಂಡು ಆಡಳಿತ ನಡೆಸುತ್ತಿದ್ದವು. ಹೆಚ್ಚು ಸಂಖೆಯಲ್ಲಿ ವರ್ತಕ ಸಂಘಗಳು ಪಟ್ಟಣ ಮತ್ತು ಮಾರುಕಟ್ಟೆ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಅದು ವ್ಯಾಪಾರ ಚಟುವಟಿಕೆ ಮತ್ತು ನಗರಕೇಂದ್ರಗಳ ಬೆಳವಣಿಗೆಯ ಸಾಂದರ್ಭಿಕ ಸಂಬಂಧವನ್ನು ತಿಳಿಸುವ ಅಂಶವಾಗಿ ಕಂಡುಬರುತ್ತವೆ. ವರ್ತಕ ಸಂಘಗಳು ವ್ಯಾಪಾರಸ್ಥರ ಹಿತಾಸಕ್ತಿಗಳನ್ನು ಕಾಪಾಡುವುದರೊಂದಿಗೆ ಪಟ್ಟನಗಳಲ್ಲಿ ನ್ಯಾಯಾಂಗ, ಶೈಕ್ಷಣಿಕ, ಕಂದಾಯ, ಸಾರ್ವಜನಿಕ ಸೇವೆ ಮುಂತಾದ ಕೆಲಸಕಾರ್ಯಗಳನ್ನೂ ಮಾಡುತ್ತಿದ್ದವು. ಈ ಶ್ರೇಣಿಗಳು ಮೊದಮೊದಲು ಯಾವುದೇ ವರ್ಣದ ಕಸುಬುದಾರರ ಅಥವಾ ಸಣ್ಣ ವ್ಯಾಪಾರಿಗಳ ಸಂಘಟನೆಯನ್ನು ಸೂಚಿಸುತ್ತಿತ್ತು. ಆದರೆ ನಂತರ ಶ್ರೇಣಿಗಳು ಜಾತಿಯ ಪರ್ಯಾಯ ಪದಗಳಂತೆ ಬಳಕೆಯಾಗತೊಡಗಿದವು.[33] ಈ ಕಾರಣಗಳಿಂದಾಗಿ ವರ್ತಕ ಸಂಘಗಳನ್ನು ಜನಾಂಗ ನಿಷ್ಠ ಮತ್ತು ಪ್ರದೇಶ ನಿಷ್ಠ ಎಂಬುದಾಗಿಯೂ ವಿಂಗಡಿಸಬಹುದಾಗಿದೆ. ಜಾತಿ ವ್ಯವಸ್ಥೆಯೇ ಪ್ರಧಾನವಾಗಿದ್ದ ಅಂದಿನ ಸಮಾಜದಲ್ಲಿ ವರ್ತಕ ಸಂಘಗಳು ಅವುಗಳಿಗೆ ಒಳಗಾಗಿರುವುದರಲ್ಲಿ ಅಚ್ಚರಿಯಿಲ್ಲ.

ರಾಷ್ಟ್ರಕೂಟರ ಆಳ್ವಿಕೆಯ ಅವಧಿಯಲ್ಲಿ ಬಾದಾಮಿ ಚಾಲುಕ್ಯರ ಕಾಲದಿಂದಲೇ ಬೆಳೆದು ಬಂದಿದ್ದ ಶ್ರೇಣಿಗಳು ಇನ್ನಷ್ಟು ಅಭಿವೃದ್ಧಿಯನ್ನು ಹೊಂದಿದವು. ಪ್ರತಿಯೊಂದು ಶ್ರೇಣಿಗೂ ಒಂದು ಕಾರ್ಯಸಮಿತಿಯಿರುತ್ತಿತ್ತು. ಈ ಕಾರ್ಯಸಮಿತಿಯ ಸದಸ್ಯ ಬಲ ಒಟ್ಟು ಸದಸ್ಯರ ಸಂಖ್ಯೆ ಹಾಗೂ ಅದರ ಕಾರ್ಯಯೋಜನೆಗಳಿಗೆ ಅನುಗುಣವಾಗಿರುತ್ತಿತ್ತು.[34] ಈ ಶ್ರೇಣಿಗಳಿಗೆ ಸ್ವಂತ ಸೇನೆ, ಧ್ವಜ, ಛತ್ರ-ಚಾಮರಗಳಿದ್ದವೆಂದು ತಿಳಿದುಬರುತ್ತದೆ.[35] ಶ್ರೇಣಿಯ ಬ್ಯಾಂಕುಗಳು ರಾಷ್ಟ್ರಕೂಟ ಕಾಲದ ಅತಿಭದ್ರ ಬ್ಯಾಂಕುಗಳಾಗಿದ್ದವು. ಇಂಥ ಒಂದು ಬ್ಯಾಂಕಿನ ಬಡ್ಡಿ ಪ್ರಮಾಣವು ವಾರ್ಷಿಕವಾಗಿ ೧೭% ರಷ್ಟು ಇದ್ದಿತೆಂದು ಎ.ಎಸ್. ಆಲ್ಟೇಕರ್ ಅಭಿಪ್ರಾಯ ಪಡುತ್ತಾರೆ.[36] ಕಲ್ಯಾಣಿ ಚಾಲುಕ್ಯರು, ಕಲಚೂರಿಗಳು ಮತ್ತು ಹೊಯ್ಸಳರ ಆಳ್ವಿಕೆಯ ಸಂದರ್ಭಗಳಲ್ಲಿ ವರ್ತಕ ಸಂಘಗಳು ಹೆಚ್ಚು ಪ್ರಭಾವಶಾಲಿಯಾಗಿ ಹಾಗೂ ವಿಸ್ತಾರವಾಗಿ ಬೆಳೆದವು. ಅರಸರಿಗೆ ವರ್ತಕ ಸಂಘಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದುವುದು ಅನಿವಾರ್ಯವಾಗಿತ್ತು. ಈ ಕಾರಣದಿಂದಾಗಿಯೇ ವಿವಿಧ ಶ್ರೇಣಿಗಳ ಧುರೀಣರು ರಾಜ್ಯಾಲಯದಲ್ಲಿ ತಮ್ಮ ಹಿಡಿತವನ್ನು ಸಾಧಿಸಿಕೊಂಡಿದ್ದರು. ಶ್ರೇಣಿಗಳು ತಮ್ಮ ಅಗತ್ಯಗಳನ್ನು ಅರಸರಿಗೆ ಒತ್ತಡ ಹೇರುವ ಮೂಲಕ ಹಾಗೂ ಜನಾಭಿಪ್ರಾಯವನ್ನು ಮೂಡಿಸುವ ಮೂಲಕ ಪೂರೈಸಿಕೊಳ್ಳುತ್ತಿದ್ದವು.[37]

ಅಧ್ಯಯನದ ಈ ಅವಧಿಯಲ್ಲಿ ಕಂಡುಬರುವ ಪ್ರಮುಖ ವರ್ತಕ ಸಂಘವೆಂದರೆ ಅಯ್ಯಾವೊಳೆ ಐನೂರ್ವರು. ಈ ಸಂಘವು ಐಹೊಳೆಯಲ್ಲಿತ್ತು.[38] ಐಹೊಳೆಯ ಐದುನೂರು ಮಹಾಜನರು (ಸ್ವಾಮಿಗಳು) ಒಟ್ಟಿಗೆ ಸೇರಿ ತೆಗೆದುಕೊಂಡ ತೀರ್ಮಾನದ ಫಲವೇ ಐಹೊಳೆ ಐದುನೂರು ಸಂಘ ಎನ್ನುವುದು ಆರ್.ಚಂಪಕಲಕ್ಷ್ಮಿ ಅವರ ಅಭಿಪ್ರಾಯ.[39] ಇದೇ ಅಭಿಪ್ರಾಯವನ್ನು ಅನೇಕ ವಿದ್ವಾಂಸರು ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಮಹಾಜನರನ್ನು ವರ್ತಕ ಸಂಘದ ಸಂಸ್ಥಾಪಕರನ್ನಾಗಿಸಿದ್ದು ತಪ್ಪು ನಿರ್ಣಯ ಎನ್ನುವ ವಾದವೂ ಇದೆ.[40] ಐದುನೂರು ವರ್ತಕರು ಮತ್ತು ಐದುನೂರು ಮಹಾಜನರು ಪ್ರತ್ಯೆಕವಾಗಿಯೇ ಶಾಸನಗಳಲ್ಲಿ ಉಲ್ಲೇಖಿತರಾಗಿದ್ದಾರೆ, ಇದರಿಂದಾಗಿ ಇವೆರಡೂ ಭಿನ್ನ ಎನ್ನುವುದು ಮೇಲಿನ ವಾದದ ಸಾರಾಂಶ. ಬಾದಾಮಿ ಚಾಲುಕ್ಯರ ಕಾಲದಲ್ಲಿ ಈ ಸಂಘವು ಐಹೊಳೆಯಲ್ಲಿ ಅಸ್ತಿತ್ವದಲ್ಲಿತ್ತು. ಇದು ೫೦೦ ಜನ ಸದಸ್ಯರ ಈ ವರ್ತಕ ಸಂಘ ನಾಶವಾಗಿ, ಬೇರೆ ಬೇರೆ ಪ್ರದೇಶಗಳಲ್ಲಿ ವ್ಯಾಪಾರ ಮಾಡುವವರು ಈ ಹೆಸರಿನಿಂದಲೇ ತಮ್ಮನ್ನು ಗುರುತಿಸಿಕೊಂಡರು. ಅವರಲ್ಲಿ ಸೆಟ್ಟಿ-ಬಣಂಜಿಗ, ಸೆಟ್ಟಿಗುತ್ತ, ನಕರ, ಮುಂಮುರಿದಂಡ, ವಡ್ಡ ವ್ಯವಹಾರಿ, ಗವರೆ, ಗಾತ್ರಿಗ, ನಾನಾದೇಶಿ ಮೊದಲಾದವರು ಪ್ರಮುಖರು. ಇವರೆಲ್ಲರೂ ಅಯ್ಯಾವೊಳೆ ಐನೂರ್ವರು ವರ್ತಕ ಸಂಘವು ಮಾದರಿಯಾಗಿತ್ತು ಎನ್ನುವುದು ಇದರಿಂದ ತಿಳಿದುಬರುತ್ತದೆ. ಕ್ರಿ.ಶ. ೧೨ ಮತ್ತು ೧೩ ನೆಯ ಶತಮಾನಗಳಲ್ಲಿ ಈ ವರ್ತಕ ಸಂಘದ ಕುರಿತು ಹೆಚ್ಚಿನ ಮಾಹಿತಿಗಳು ಸಿಗುತ್ತವೆ.

ಐಹೊಳೆಯಲ್ಲಿದ್ದ ೫೦೦ ಸದಸ್ಯರ ವರ್ತಕ ಸಂಘವು ಬೇರೆ ಬೇರೆ ಜಾತಿ, ಧರ್ಮ ಮತ್ತು ಪ್ರದೇಶಕ್ಕೆ ಸೇರಿದ ಜನರನ್ನು ಸದಸ್ಯರನ್ನಾಗಿ ಹೊಂದಿತ್ತು ಎನ್ನುವುದು ಎಂ. ಅಬ್ರಹಾಂ ಅವರ ಅಭಿಪ್ರಾಯ.[41] ಐಹೊಳೆಯಲ್ಲಿ ೫೦೦ ಮಹಾಜನರ ಅಗ್ರಹಾರವೂ ಇತ್ತು ಎನ್ನುವುದು ಶಾಸನಗಳಿಂದ ತಿಳಿದುಬರುತ್ತದೆ. ಈ ಮಹಾಜನರು ವರ್ತಕ ಸಂಘದ ಪ್ರಭಾವ ಕುಂಠಿತವಾಗುವುದಕ್ಕೆ ಕಾರಣರಾದರು ಎನ್ನುವ ಅಭಿಪ್ರಾಯವೂ ಇದೆ.[42] ವಿವಿಧ ಜಾತಿ, ಧರ್ಮಕ್ಕೆ ಸೇರಿದವರು ಈ ಸಂಘದ ಸದಸ್ಯರಾಗಿದ್ದುದೇ ಮಹಾಜನರ ವಿರೋಧಕ್ಕೆ ಕಾರಣವಾಗಿರಬೇಕೆಂದು ಹೇಳಬಹುದಾಗಿದೆ. ಐಹೊಳೆಯಲ್ಲಿ ಈ ವರ್ತಕ ಸಂಘ ಕ್ಷೀಣಿಸಿದರೂ ವಿವಿಧ ಪ್ರದೇಶಗಳಲ್ಲಿ ವರ್ತಕರು ಈ ಸಂಘದ ಹೆಸರಿನಿಂದಲೇ ಹೆಸರುವಾಸಿಯಾದರು. ಉದಾಹರಣೆಗೆ, ಗವರೆಗಳಯ್ನೂರ್ವರು, ನಗರವಯ್ನೂರ್ವರು, ಬಣಂಜಿಗರೈನೂರ್ವರು, ವಣಿಜ ಸ್ವಾಮಿಗಳಯ್ನೂರ್ವರು ಮೊದಲಾದವರು.[43] ಐಹೊಳೆ ಐದುನೂರು ಸಂಘದ ರೀತಿಯಲ್ಲಿಯೇ ಅಸ್ತಿತ್ವದಲ್ಲಿದ್ದ ಇನ್ನೊಂದು ವರ್ತಕ ಸಂಘವೆಂದು ತಂಬುಲಿಗಸಾಸಿರ್ವರು. ಇದು ವೀಳ್ಯದೆಲೆ ವ್ಯಾಪಾರ ಮಾಡುತ್ತಿದ್ದ ವರ್ತಕರು ರಚಿಸಿಕೊಂಡ ಸಂಘವಾಗಿತ್ತು.[44] ಇಂಥ ವರ್ತಕ ಸಂಘಗಳು ಮತ್ತು ವರ್ತಕರಿಗೆ ವರ್ತಕ ಸಂಹಿತೆಯೊಂದನ್ನು ರೂಪಿಸಲಾಗಿತ್ತು. ಇದನ್ನು ವೀರಬಣಜುಧರ್ಮ ಎಂಬುದಾಗಿಯೂ ಹೆಸರಿಸಲಾಗಿದೆ.[45]

ಉತ್ಪಾದನೆ ಮತ್ತು ಮಾರಾಟ (ವ್ಯಾಪಾರ) ವೃತ್ತಿಯವರು ಅನೇಕ ಸಂಘಗಳನ್ನು ರಚಿಸಿಕೊಂಡಿದ್ದರು. ಇವರಲ್ಲಿ ಬಡಗಿ, ಕಮ್ಮಾರ, ಕಂಚುಗಾರ, ಅಕ್ಕಸಾಲಿ, ಶಿಲ್ಪಿ, ಗಾಣಿಗ, ತಂಬುಲಿಗ, ಮಾಲೆಗಾರ, ನೇಕಾರ ಮುಂತಾದವರು ಪ್ರಮುಖರು. ಕುಶಲಕರ್ಮಿಗಳ ವೃತ್ತಿಸಂಘಗಳು ಅಥವಾ ಶ್ರೇಣಿಗಳ ಕುರಿತಾಗಿ ವಿದ್ವಾಂಸರಲ್ಲಿ ಒಮ್ಮತದ ಅಭಿಪ್ರಾಯ ಇಲ್ಲದಿರುವುದು ಕಂಡುಬರುತ್ತದೆ. ಬಿ.ಕೆ. ಗುರುರಾಜರಾವ್ ಅವರು ಸವಾರ್ಥಸಿದ್ಧಿ ಆಚಾರಿ ಎಂಬುದಾಗಿಯೂ,[46]ಎಂ.ಚಿದಾನಂದಮೂರ್ತಿ ಅವರು ಕೊತ್ತಳಿ ಹಾಗೂ ಕುಲಾನ್ವಯಕೊತ್ತಳಿ ಎಂಬುದಾಗಿಯೂ,[47] ಎಸ್. ಗುರುರಾಜಾಚಾರ್ ಅವರು ಸರಸ್ವತಿಗಣ ಎಂಬುದಾಗಿಯೂ,[48] ಜೆ.ಆರ್.ಕುಪ್ಪುಸ್ವಾಮಿ ಅವರು ಪಂಚಾಳರು ಹಾಗೂ ವೀರಪಂಚಾಳರು ಎಂಬುದಾಗಿಯೂ,[49] ಕುಶಲಕರ್ಮಿಗಳ ವೃತ್ತಿಸಂಘಗಳನ್ನು ಶಾಸನಗಳ ಆಧಾರದ ಮೇಲೆ ಗುರುತಿಸಿದ್ದಾರೆ. ಕೆ.ಎಸ್.ಕುಮಾರಸ್ವಾಮಿ ಅವರ ಪ್ರಕಾರ ಈ ಎಲ್ಲ ಪರಿಭಾಷೆಗಳು ಚರಿತ್ರೆಯ ವಿವಿಧ ಅವಧಿಗಳಲ್ಲಿ ಅಸ್ತಿತ್ವದಲ್ಲಿದ್ದವು.[50] ಅವರು ಈ ಪರಿಭಾಷೆಗಳು ಅಸ್ತಿತ್ವದಲ್ಲಿದ್ದ ಚರಿತ್ರೆಯ ವಿವಿಧ ಅವಧಿಗಳನ್ನು ತಮ್ಮ ಗ್ರಂಥದಲ್ಲಿ ನೀಡಿದ್ದಾರೆ. ಸರ್ವಾರ್ಥಸಿದ್ಧಿ ಆಚಾರಿ ಸಂಘವು ಕ್ರಿ.ಶ. ೮ನೆಯ ಶತಮಾನದಲ್ಲಿ, ಕೊತ್ತಳಿ ಸಂಘವು ಕ್ರಿ.ಶ. ೮ ರಿಂದ ೧೩ನೆಯ ಶತಮಾನಗಳವರೆಗೆ, ಸರಸ್ವತಿಗಣ ಸಂಘವು ಕ್ರಿ.ಶ. ೧೨ನೆಯ ಶತಮಾನದಿಂದ ೧೩ನೆಯ ಶತಮಾನದವರೆಗೆ ಹಾಗೂ ಪಂಚಾಳರು ಅಥವಾ ವೀರಪಂಚಾಳರು ಸಂಘವು ಕ್ರಿ.ಶ. ೧೪ನೆಯ ಶತಮಾನದಿಂದ ೧೬ನೆಯ ಶತಮಾನದವರೆಗೆ ಅಸ್ತಿತ್ವದಲ್ಲಿತ್ತು. ಈ ವೃತ್ತಿಸಂಘಗಳ ಕಾರ್ಯ ವೈಖರಿ, ಸ್ವರೂಪದ ಸ್ಪಷ್ಟ ಚಿತ್ರಣ ಲಭ್ಯವಿಲ್ಲದಿದ್ದರೂ ಅವು ಅಸ್ತಿತ್ವದಲ್ಲಿದ್ದವು ಎನ್ನುವುದಂತೂ ಸ್ಪಷ್ಟವಾಗುತ್ತದೆ.

ಪ್ರತಿಯೊಂದು ವೃತ್ತಿಯವರೂ ತಮ್ಮದೆ ಆದ ಸಂಘಗಳನ್ನು ರಚಿಸಿಕೊಳ್ಳುತ್ತಿದ್ದರು. ಉತ್ಪಾದನೆ ಮತ್ತು ವ್ಯಾಪಾರ ವೃತ್ತಿಯವರಲ್ಲಿ ಗಾಣಿಗರು, ಮಾಲೆಗಾರರು, ತೋಟಿಗರು, ನೇಕಾರರು, ಕಂಚುಗಾರರು, ಚಿಪ್ಪಿಗರು, ಶಿಲ್ಪಿಗಳು, ಕಮ್ಮಾರರು ಮುಂತಾದವರು ಪ್ರಮುಖರಾಗಿದ್ದು ಅವರು ರಚಿಸಿಕೊಂಡಿದ್ದ ಸಂಘಗಳ ಕುರಿತು ಶಾಸನಗಳಲ್ಲಿ ಉಲ್ಲೇಖಗಳು ಸಿಗುತ್ತವೆ.[51] ಗಾಣಿಗರು ಅಥವಾ ತೆಲ್ಲಿಗರು ರಚಿಸಿಕೊಂಡಿದ್ದ ಸಂಘವನ್ನು ಗಾಣಿಗರೊಕ್ಕಲು, ತೆಲ್ಲಿಗರೈವತ್ತೊಕ್ಕಲು, ತೆಲ್ಲಿಗರ ಕೊತ್ತಳಿ ಮುಂತಾದ ಹೆಸರಿನಿಂದ ಕರೆಯಲಾಗುತ್ತಿತ್ತು. ಹೂವನ್ನು ಬೆಳೆಸಿ, ಮಾಲೆಗಳನ್ನು ತಯಾರಿಸಿ ಸಂತೆ-ಪೇಟೆಗಳನ್ನು ಮಾರುವ ಮಾಲೆಗಾರರು ಮಾಲೆಗಾರ ನಾಲ್ವತ್ತೊಕ್ಕಳು ಎಂಬ ಸಂಘವನ್ನು ರಚಿಸಿಕೊಂಡಿದ್ದರು. ತೋಟದಲ್ಲಿ ತರಕಾರಿ, ಹೂ, ಹಣ್ಣುಗಳನ್ನು ಬೆಳೆದು ಅವುಗಳನ್ನು ಮಾರಾಟಮಾಡುತ್ತಿದ್ದ ತೋಟಿಗರು ರಚಿಸಿಕೊಂಡಿದ್ದ ಸಂಘವನ್ನು ತೋಂಟಿಗರೈನೂರ್ವರು ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಬಟ್ಟೆ ನೇಯುವ ವೃತ್ತಿಯ ನೇಕಾರರ ಸಂಘದ ಹೆಸರು ಸಾಲೆಸಾಸಿರ್ವರು ಅಥವಾ ಸಮಯಸಾಸಿರ್ವರು. ತಾಮ್ರ, ಹಿತ್ತಾಳೆ ಮತ್ತು ಕಂಚು ಈ ಮೂರು ಲೋಹಗಳಿಂದ ವಿವಿಧ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಕಂಚುಗಾರರು ಕಂಚುಗಾರಗೊತ್ತಳಿ ಎನ್ನುವ ಹೆಸರಿನ ಸಂಘವನ್ನು ರಚಿಸಿಕೊಂಡಿದ್ದರು. ಅದೆ ರೀತಿ ಶಿಲ್ಪಿಗಳು ಸರಸ್ವತಿಗಣ ಎನ್ನುವ ಸಂಘವನ್ನು ರಚಿಸಿಕೊಂಡರೆ, ಕಮ್ಮಾರರು ಕಮ್ಮಾರ್‌ಕೊಳ್ತಿಲೆ ಅಥವಾ ಕುಲಾನ್ವಯ ಕೊತ್ತಳಿ ಎಂಬ ಸಂಘವನ್ನೂ, ಚಿಪ್ಪಿಗರು ಚಿಪ್ಪಿಗಗೊತ್ತಳಿ ಎಂಬ ಸಂಘವನ್ನೂ ರಚಿಸಿಕೊಂಡಿದ್ದರು. ಈ ಎಲ್ಲಾ ಉತ್ಪಾದನೆ-ವ್ಯಾಪಾರ ವೃತ್ತಿಯವರಿಗೆ ಸಂಘಗಳನ್ನು ರಚಿಸಿಕೊಳ್ಳುವುದು ಅನಿವಾರ್ಯವಾಗಿರುತ್ತಿತ್ತು.[52] ಸಂಘಗಳು ವಿವಿಧ ವೃತ್ತಿಯವರಿಗೆ ಭದ್ರತೆಯನ್ನು ಒದಗಿಸಿದ್ದೇ ಅಲ್ಲದೆ ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನು ಹಲವಾರು ವಿಚಾರಗಳಲ್ಲಿ ಪರಸ್ಪರ ಒಂದುಗೂಡಿಸುವ ಕೆಲಸವನ್ನೂ ಮಾಡಿದವು. ಈ ಒಂದುಗೂಡಿಸುವಿಕೆಯು ಹಲವಾರು ನಗರಕೇಂದ್ರಗಳು ಉದಿಸಲು ಅವಕಾಶ ಮಾಡಿಕೊಟ್ಟಿತು.

 

[1] ಬಿ.ಆರ್. ಹಿರೇಮಠ, ಪೂರ್ವೋಕ್ತ, ಪು.೧೦೩; ಎಸ್. ಗುರುರಾಜಾಚಾರ್, ಪೂರ್ವೋಕ್ತ.

[2] ಬಿ.ಆರ್. ಹಿರೇಮಠ, ಪೂರ್ವೋಕ್ತ, ಪು. ೧೦೫

[3] ಅದೇ, ಪು. ೧೦೬

[4] ಕೆ.ಎಸ್. ಶಿವಣ್ಣ, ಪೂರ್ವೋಕ್ತ, ಪು. ೧೫೨

[5] ???? ಎಂ.ಎ.ಆರ್. ೧೯೧೦, ಪು. ೩೬, ಪ್ಯಾರಾ.೮೬; ಎ.ಕ.೯, ಚನ್ನರಾಯಪಟ್ಟಣ ೬೬, ಕ್ರಿ.ಶ. ೧೨೮೮; ಬಿ.ಎ. ಸಾಲೆತ್ತೂರ್, ಏನ್‌ಶ್ಯ್ಂಟ್ ಕರ್ನಾಟಕ, ಸಂಪುತ ೧, ಪೂಣಾ, ೧೯೩೬, ಪು. ೪೦೫

[6] ಎಸ್. ಗುರುರಾಜಾಚಾರ್, ಪೂರ್ವೋಕ್ತ, ಪು. ೭೯

[7] ಎ.ಎಸ್. ಆಲ್ಟೇಕರ್, ಪೂರ್ವೋಕ್ತ, ಪು. ೩೫೫; ಸೌ.ಇ.ಇ. ೯-೧, ೨೪೯, ಕ್ರಿ.ಶ. ೧೧೪೭

[8] ಎಂ.ಚಿದಾನಂದಮೂರ್ತಿ, ಪೂರ್ವೋಕ್ತ, ಪು.೩೭೪

[9] ಎಂ.ಚಿದಾನಂದಮೂರ್ತಿ, ಪೂರ್ವೋಕ್ತ, ಪು.೮೫; ಎ.ಎಸ್.ಆಲ್ಟೇಕರ್, ಪೂರ್ವೋಕ್ತ, ಪು.೩೫೫-೩೫೬

[10] ಎಂ.ಚಿದಾನಂದಮೂರ್ತಿ, ಪೂರ್ವೋಕ್ತ, ಪು.೨೫೭

[11] ವಿಲಿಯಂ ಕೊಯಲೋ, ದಿ ಹೊಯ್ಸಳ ವಂಶ, ಮುಂಬಯಿ, ೧೯೫೦, ಪು. ೨೫೪

[12] ಎಸ್. ಗುರುರಾಜಾಚಾರ್, ಪೂರ್ವೋಕ್ತ, ಪು. ೮೬

[13] ಅದೇ

[14] ಕೆ.ಎಸ್. ಕುಮಾರಸ್ವಾಮಿ, ಪ್ರಾಚೀನ ಕರ್ನಾಟಕದಲ್ಲಿ ಶಿಲ್ಪಾಚಾರಿಯರು, ಬೆಂಗಳೂರು, ೧೯೯೬, ಪು.೭೨

[15] ಎಸ್. ಗುರುರಾಜಾಚಾರ್, ಪೂರ್ವೋಕ್ತ, ಪು.೭೭

[16] ಅದೇ, ಪು.೭೭-೭೮; ಬಿ.ಎ.ವಿವೇಕ ರೈ, ತುಳು ಜನಪದ ಸಾಹಿತ್ಯ, ಬೆಂಗಳೂರು, ೧೯೮೫, ಪು. ೨೧೨

[17] ಎಸ್. ಗುರುರಾಜಾಚಾರ್, ಪೂರ್ವೋಕ್ತ, ಪು.೭೮

[18] ಲಕ್ಷ್ಮಣ್ ತೆಲಗಾವಿ (ಸಂ.), ಸಂಶೋಧನೆ, ಬೆಂಗಳೂರು, ೧೯೯೧, ಪು. ೬೦೮

[19] ಎ.ಕ.೫, ಚನ್ನರಾಯಪಟ್ಟಣ ೨೪೪, ಕ್ರಿ.ಶ. ೧೨೧೦

[20] ಸೌ.ಇ.ಇ. ೧೫, ಪು.೮೭, ನಂ.೬೨, ಕ್ರಿ.ಶ. ೧೧೮೪

[21] ಎಂ. ಚಿದಾನಂದಮೂರ್ತಿ, ಪೂರ್ವೋಕ್ತ, ಪು. ೩೮೯

[22] ಜಿ.ಆರ್. ಕುಪ್ಪಸ್ವಾಮಿ, ಪೂರ್ವೋಕ್ತ, ಪು. ೧೦೯

[23] ಪಿ.ಶ್ರೀನಿವಾಸಾಚಾರ್ ಮತ್ತು ಪಿ.ಬಿ.ದೇಸಾಯಿ, ಕನ್ನಡ ಇನ್‍ಸ್ಕ್ರಿಪ್ಷನ್ಸ್ ಆಫ್ ಆಂಧ್ರ ಪ್ರದೆಶ್, ೭೭-೧೨, ೭೮; ಎ.ವಿ.ನರಸಿಂಹಮೂರ್ತಿ, ದಿ ಕಾಯಿನ್ಸ್ ಆಫ್ ಕರ್ನಾಟಕ, ಮೈಸೂರು, ೧೯೭೫, ಪು.೭೮-೯೦

[24] ಎ.ಕ.೭, ಮಳವಳ್ಳಿ ೬೪ (ಪರಿಷ್ಕೃತ), ಕ್ರಿ.ಶ. ೧೨೫೯-೬೦

[25] ಎ.ಕ.೫, ಬೇಲೂರು ೮೬, ಕ್ರಿ.ಶ. ೧೧೭೭; ಎಂ.ಎ.ಆರ್. ೧೯೧೨, ಪು.೪೪, ಪ್ಯಾರಾ. ೯೦, ಕ್ರಿ.ಶ. ೧೨೫೧

[26] ಎ.ಕ.೫, ಮೈಸೂರು ೧೩೨, ಕ್ರಿ.ಶ. ೧೨೧೦; ಎ.ಕ.೯, ಕನಕಪುರ ೧೧೧; ಸೌ.ಇ.ಇ. ೮, ಪು. ೧೯೮, ನಂ.೩೭೦

[27] ಜಿ.ಆರ್. ಕುಪ್ಪಸ್ವಾಮಿ, ಪೂರ್ವೋಕ್ತ, ಪು. ೧-೨

[28] ಜಿ.ಎಸ್.ದೀಕ್ಷಿತ್, ಪೂರ್ವೋಕ್ತ, ಪು.೧೦೭; ಇಲ್ಲಿ ಆಯಗಾರರು ಎಂದರೆ ವೇತನವನ್ನು ಪಡೆಯುವವರು ಎಂದರ್ಥ.

[29] ಎಂ.ಚಿದಾನಂದಮೂರ್ತಿ, ಪೂರ್ವೋಕ್ತ, ಪು. ೪೪೦

[30] ಬಿ.ಆರ್. ಹಿರೇಮಠ, ಪೂರ್ವೋಕ್ತ, ಪು. ೭೨

[31] ಎಂ.ಅಬ್ರಹಾಂ, ಎ ಮೆಡಿವಲ್ ಮರ್ಚೆಂಟ್ ಗಿಲ್ಡ್ ಆಫ್ ಸೌತ್ ಇಂಡಿಯಾ, ಸ್ಟಡೀಸ್ ಇನ್ ಹಿಸ್ಟರಿ, ೪, ನಂ.೧, ಪು.೧, ೧೯೮೨

[32] ಆರ್. ಚಂಪಕಲಕ್ಷ್ಮಿ, ದಿ ಮೆಡೀವಲ್ ಸೌತ್ ಇಂದಿಯನ್ ಗಿಲ್ಡ್ಸ್: ದೇಯರ್ ರೋಲ್ ಇನ್ ಟ್ರೇಡ್ ಆಂಡ್ ಅರ್ವನೈಸೇಷನ್, ಸೊಸೈಟಿ ಆಂಡ್ ಐಡಿಯಾಲಜಿ ಇನ್ ಇಂಡಿಯಾ, (ಸಂ.) ಡಿ.ಎನ್.ಝಾ, ನವದೆಹಲಿ, ೧೯೯೬, ಪು. ೮೧-೯೧; ಎ.ಕ.೭, ಶಿಕಾರಿಪುರ ೧೧೮, ಕ್ರಿ.ಶ. ೧೦೫೪; ಕ.ಇ.೧, ೨೫, ಕ್ರಿ.ಶ. ೧೧೮೬

[33] ಆರ್.ಎಸ್. ಶರ್ಮ, ಇಂಡಿಯನ್ ಫ್ಯೂಡಲಿಸಂ ರಿಟಚ್ಚ್‌ಡ್, ದಿ ಇಂಡಿಯನ್ ಹಿಸ್ಟಾರಿಕಲ್ ರಿವ್ಯೂ, ೧೯೭೪, ಸಂಪುಟ ೧, ನಂ.೨, ಪು. ೩೨೬

[34] ಎ.ಎಸ್. ಆಲ್ಟೇಕರ್, ಪೂರ್ವೋಕ್ತ, ಪು.೩೬೯

[35] ಅದೇ, ಪು.೩೭೦

[36] ಅದೇ, ಪು. ೩೭೧-೩೭೨

[37] ಬಿ.ಎ.ಸಾಲೆತ್ತೂರ್, ಸೋಶ್ಯಲ್ ಆಂಡ್ ಪೊಲಿಟಿಕಲ್ ಲೈಫ್ ಇನ್ ದಿ ವಿಜನಗರ ಎಂಪೈರ್, ಸಂಪುಟ ೨, ಪು.೧೦೮

[38] ಅಯ್ಯಾವೊಳೆ ಐನೂರ್ವರು ವರ್ತಕ ಸಂಘದ ಹುಟ್ಟು, ಬೆಳವಣಿಗೆ ಮತ್ತು ಕಾರ್ಯ ಸ್ವರೂಪದ ಕುರಿತು ಅನೇಕ ಅಧಯ್ಯನಗಳು ನಡೆದಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಹೆಸರಿಸಲಾಗಿದೆ; ಎಂ.ಅಬ್ರಹಾಂ, ಪೂರ್ವೋಕ್ತ; ಆರ್.ಚಂಪಕಲಕ್ಷ್ಮಿ, ಪುರ್ವೋಕ್ತ; ಬಿ.ಆರ್.ಹಿರೇಮಠ, ಪೂರ್ವೋಕ್ತ; ಎ.ಅಪ್ಪಾದೊರೈ, ಪೂರ್ವೋಕ್ತ; ಜಿ.ಆರ್.ಕುಪ್ಪುಸ್ವಾಮಿ, ಪೂರ್ವೋಕ್ತ, ಮುಂತಾದವು, ಈ ಎಲ್ಲ ಗ್ರಂಥಗಳು ಶಾಸನಗಳನ್ನೇ ಪ್ರಮುಖವಾಗಿ ಆಧರಿಸಿವೆ.

[39] ಆರ್.ಚಂಪಕಲಕ್ಷ್ಮಿ, ಪೂರ್ವೋಕ್ತ, ಪು.೮೨

[40] ಬಿ.ಆರ್. ಹಿರೇಮಠ, ಪೂರ್ವೋಕ್ತ, ಪು.೫೬-೭೫

[41] ಎಂ.ಅಬ್ರಹಾಂ, ದಿ ಐಹೊಲೆ ಗಿಲ್ಡ್ ಆಫ್ ಮೆಡೀವಲ್ ಔತ್ ಇಂಡಿಯಾ, ಅಧ್ಯಾಯ ೫, ನವದೆಹಲಿ, ೧೯೭೮

[42] ಬಿ.ಆರ್. ಹಿರೇಮಠ, ಪೂರ್ವೋಕ್ತ, ಪು.೭೬

[43] ಅದೇ, ಪು.೯೮

[44] ಅದೇ, ಪು. ೯೯-೧೦೨

[45] ಎ. ಅಪ್ಪಾದೊರೈ, ಪೂರ್ವೋಕ್ತ, ಪು. ೩೯೧; ಬಿ.ಆರ್.ಹಿರೇಮಠ, ಪೂರ್ವೋಕ್ತ, ಪು.೮೪; ಸೌ.ಇ.ಇ. ೯-೧, ೨೯೭, ಕ್ರಿ.ಶ ೧೧೧೭; ವರ್ತಕ ಸಂಹಿತೆಯನ್ನು ಗುಡ್ಡಶಾಸ್ತ್ರ ಎನ್ನುವ ಹೆಸರಿನಿಂದ ಉಲ್ಲೇಖಿಸಲಾಗಿದೆ. ಗುಡ್ಡ ಶಾಸ್ತ್ರವೆಂದರೆ ಕೈಲಾಸಪರ್ವತ (ಧ್ವಜ) ದವರ ಶಾಸ್ತ್ರವೆಂದು ಹೇಳಲಾಗಿದೆ. ಐಹೊಳೆ ಐದುನೂರು ಸಂಘವು ಕೈಲಾಸಪರ್ವತವನ್ನು ಧ್ವಜವನ್ನಾಗಿ ಹೊಂದಿತ್ತು ಎನ್ನುವ ಅಭಿಪ್ರಾಯವೂ ಇದೆ; ಎಂ. ಚಿದಾನಂದಮೂರ್ತಿ, ಪೂರ್ವೋಕ್ತ, ಪು. ೩೮೧

[46] ಬಿ.ಕೆ.ಗುರುರಾಜರಾವ್, ಇಂಪಾಕ್ಟ್ ಆಫ್ ಚಾಲುಕ್ಯಾಸ್ ರೂಲ್ ಇನ್‍ಸೀಕ್ವೆಂಟ್ ಹಿಸ್ಟರಿ ಆಫ್ ಡೆಕ್ಕನ್, ಪು. ೨೨೭

[47] ಎಂ.ಚಿದಾನಂದಮೂರ್ತಿ, ಪೂರ್ವೋಕ್ತ, ಪು.೪೩೮, ೩೪೫

[48] ಎಸ್. ಗುರುರಾಜಾಚಾರ್, ಪೂರ್ವೋಕ್ತ, ಪು. ೧೦೧

[49] ಜಿ.ಆರ್.ಕುಪ್ಪುಸ್ವಾಮಿ, ಪೂರ್ವೋಕ್ತ, ಪು. ೧೦೧

[50] ಕೆ.ಎಸ್. ಕುಮಾರಸ್ವಾಮಿ, ಪೂರ್ವೋಕ್ತ, ಪು. ೮೪-೯೨

[51] ಬಿ.ಆರ್. ಹಿರೇಮಠ, ಪೂರ್ವೋಕ್ತ, ಪು.೧೦೩-೧೧೩; ಆರ್.ಚಂಪಕಲಕ್ಷ್ಮಿ, ಪೂರ್ವೋಕ್ತ, ಪು. ೮೧-೯೧

[52] ಕೆ.ಎ.ನೀಲಕಂಠಶಾಸ್ತ್ರಿ, ಎ ಹಿಸ್ಟರಿ ಆಫ್ ಸೌತ್ ಇಂಡಿಯಾ, ಮದರಾಸು, ೧೯೬೬, ಪು.೩೩೦