ನಗರ ವ್ಯವಸ್ಥೆಯ ರೂಪುಗೊಳ್ಳುವಿಕೆಯನ್ನು ಸಮಾಜದ ಪರಿವರ್ತನೆಯ ಒಂದು ಹಂತ ಎಂಬುದಾಗಿ ಪರಿಗಣಿಸಿ ಅಧ್ಯಯನ ಆರಂಭಗೊಂಡಿರುವುದು ಹತ್ತೊಂಬತ್ತನೆಯ ಶತಮಾನದ ದ್ವಿತೀಯಾರ್ಧದಿಂದೀಚೆಗೆ. ಅಲ್ಲಿಂದ ಪ್ರಪಂಚದ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲಿಯೂ ನಗರ ಚರಿತ್ರೆಯ ಅಧ್ಯಯನ ಎನ್ನುವ ಹೊಸ ಅಧ್ಯಯನ ವಿಧಾನವೊಂದು ಕಾಣಿಸಿಕೊಂಡಿತು. ಈ ಅಧ್ಯಯನ ವಿಧಾನವನ್ನು ಹುಟ್ಟುಹಾಕಿದವರು ಸಮಾಜ ವಿಜ್ಞಾನಿಗಳು. ಸಮಾಜ ವಿಜ್ಞಾನಿಗಳ ಚಿಂತನೆಗಳು ನಗರ ಪ್ರದೇಶಗಳನ್ನು ಒಂದು ವಿಶೇಷವಾದ ಸಮಾಜ ಎಂಬುದಾಗಿ ಗುರುತಿಸಿತು. ಅದೇ ರೀತಿ ನಗರ ವ್ಯವಸ್ಥೆಯು ವಿಭಿನ್ನ ಸ್ವರೂಪದ ಮಾನವ ಬದುಕಿನ ಮತ್ತು ದುಡಿಮೆಯ ತಾಣ ಹಾಗೂ ನಿರಂತರತೆಯನ್ನೊಳಗೊಂಡ ಒಂದು ಸಂಘಟಿತ ಸಮಾಜ ಎನ್ನುವ ತೀರ್ಮಾನವನ್ನು ನೀಡಿತು. ನಗರ ಜೀವನದ ಸಂಕೀರ್ಣತೆ ಹಾಗೂ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿವೆ ಎನ್ನುವುದು ತಿಳಿದುಬರುತ್ತದೆ. ಒಂದು ಹಳ್ಳಿ ಪ್ರದೇಶ ಪಟ್ಟಣವಾಗಿ ಪರಿವರ್ತನೆಗೊಳ್ಳುವ ಪ್ರಕ್ರಿಯೆಯೇ ಈ ಎಲ್ಲಾ ಅಂಶಗಳನ್ನು ಒಳಗೊಂಡಿರುತ್ತದೆ. ಪರಿವರ್ತನೆಯ ಈ ಪ್ರಕ್ರಿಯೆಯಲ್ಲಿ ಹೆಚ್ಚುವರಿ ಉತ್ಪಾದನೆ, ಜನಸಂಖ್ಯೆಯ ಹೆಚ್ಚಳ, ಕುಶಲಕರ್ಮಿಗಳು, ವ್ಯಾಪಾರ-ವಣಿಜ್ಯ, ವರ್ತಕ ಸಂಘಗಳು, ಧರ್ಮ, ಶಿಕ್ಷಣ, ಆಡಳಿತ, ಜಮೀನ್ದಾರರು, ಭೌಗೋಳಿಕ ಸನ್ನಿವೇಶ ಮುಂತಾದವು ಪ್ರಮುಖ ಪಾತ್ರ ವಹಿಸುತ್ತಿರುತ್ತವೆ. ಈ ಅಧ್ಯಾಯನದಲ್ಲಿ ಕ್ರಿ.ಶ. ೮ರಿಂದ ೧೪ನೆಯ ಶತಮಾನಗಳ ನಡುವಣ ಅವಧಿಯ ಕರ್ನಾಟಕದಲ್ಲಿ ನಗರ ವ್ಯವಸ್ಥೆ ಯಾವ ರೀತಿ ಇತ್ತು ಎನ್ನುವುದನ್ನು ನಗರ ಕೇಂದ್ರಗಳ ಹುಟ್ಟು-ಬೆಳವಣಿಗೆ-ಅವನತಿ, ವರ್ತಕರು ಮತ್ತು ವ್ಯಾಪಾರ, ಕೈಗಾರಿಕೆ ಮತ್ತು ಕುಶಲಕರ್ಮಿಗಳು ಹಾಗೂ ವರ್ತಕ ಸಂಘಗಳು ಎನ್ನುವ ನಾಲ್ಕು ಅಂಶಗಳನ್ನು ಇಟ್ಟುಕೊಂಡು ನೋಡುವ ಪ್ರಯತ್ನವನ್ನು ಮಾಡಲಾಗಿದೆ. ಅಧ್ಯಯನದ ಈ ಅವಧಿಯಲ್ಲಿ ಕೃಷಿ ವ್ಯವಸ್ಥೆ ಹೆಚ್ಚು ಪ್ರಚಾರದಲ್ಲಿ ಇದ್ದಿತಾದರೂ ಕೃಷಿಯೇತರ ಚಟುವಟಿಕೆಗಳೂ ಅವುಗಳ ಅನಿವಾರ್ಯತೆಯಿಂದಾಗಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದವು.

.೧ ನಗರ ಕೇಂದ್ರಗಳ ಹುಟ್ಟು – ಬೆಳವಣಿಗೆ – ಅವನತಿ

ಕ್ರಿ.ಶ. ೮ ರಿಂದ ೧೪ನೆಯ ಶತಮಾನಗಳ ಅವಧಿಯಲ್ಲಿ ಅನೇಕ ಪೇಟೆ-ಪಟ್ಟಣಗಳು ಅಸ್ತಿತ್ವಕ್ಕೆ ಬಂದಿದ್ದವು. ಅವುಗಳಲ್ಲಿ ಕೆಲವು ಹೊಸದಾಗಿ ಹುಟ್ಟಿಕೊಂಡರೆ ಇನ್ನು ಕೆಲವು ಹಿಂದೆಯೇ ಅಸ್ತಿತ್ವದಲ್ಲಿದ್ದವು. ಶಾಸನಗಳು ಮತ್ತು ಸಾಹಿತ್ಯಕ ಕೃತಿಗಳು ಈ ಅಧ್ಯಯನಕ್ಕೆ ಪ್ರಮುಖ ಆಧಾರಗಳಾಗಿವೆ. ಕ್ರಿ.ಶ. ೭ ರಿಂದ ೧೦ನೆಯ ಶತಮಾನಗಳವರೆಗಿನ ಹೆಚ್ಚಿನ ಶಾಸನಗಳಲ್ಲಿ ಪುರ ಎನ್ನುವ ಪದದ ಉಲ್ಲೇಖವಿದ್ದರೆ, ಕ್ರಿ.ಶ. ೧೧ ರಿಂದ ೧೩ ನೆಯ ಶತಮಾನಗಳವರೆಗಿನ ಶಾಸನಗಳಲ್ಲಿ ನಗರ, ಮಹಾನಗರ, ಪಟ್ಟನ ಎನ್ನುವ ಉಲ್ಲೇಖಗಳಿರುವುದು ಕಂಡುಬರುತ್ತದೆ. ಅದೇ ರೀತಿ ಆಡಳಿತ ಪಟ್ಟಣಗಳು, ಧಾರ್ಮಿಕ ಪಟ್ಟಣಗಳು, ವಾಣಿಜ್ಯ ಪಟ್ಟಣಗಳು, ಶೈಕ್ಷಣಿಕ ಪಟ್ಟಣಗಳು ಮುಂತಾದ ವಿವಿಧ ಸ್ವರೂಪದ ನಗರಕೇಂದ್ರಗಳ ಉಲ್ಲೇಖಗಳು ಸಿಗುತ್ತವೆ.[1] ಓ.ಪಿ. ಪ್ರಸಾದ್ ಅವರು ಕ್ರಿ.ಶ. ೮ ರಿಂದ ೧೨ನೆಯ ಶತಮಾನಗಳ ಅವಧಿಯಲ್ಲಿದ್ದ ಕೆಲವು ಪ್ರಮುಖ ಪೇಟೆ-ಪಟ್ಟಣಗಳ ಪಟ್ಟಿಯನ್ನು ನೀಡಿದ್ದಾರೆ.[2] ಅವುಗಳೆಂದರೆ, ಬನವಾಸಿ, ಬಾದಾಮಿ, ತಲಕಾಡು, ಶ್ರವಣಬೆಳಗೊಳ, ಪೊಂಬುಚ್ಚ, ಮುಳುಗುಂದ, ಪುಲಿಗೆರೆ, ಬಂಕಾಪುರ, ಮಾನ್ಯಖೇಟ, ಅಣ್ಣಿಗೆರೆ, ಕಲ್ಯಾಣಿ, ಮಂಗಳೂರು, ಗುತ್ತಿ, ಉಚ್ಚಂಗಿ, ಐಹೊಳೆ, ಲಕ್ಕುಂಡಿ, ದೋರಸಮುದ್ರ, ಬಳ್ಳಿಗಾವೆ, ಕುಡಿತಿನಿ, ಸೂಡಿ, ಸೊಸೆವೂರು, ಕೋಲಾರ, ಅರಸಿಕೆರೆ , ಬೆಳಗಾಂ, ರೋಣ, ಭಟ್ಕಳ, ಬಾರಕೂರು, ಬಸ್ರೂರು, ಕೊಪ್ಪಳ, ಕುರುಗೋಡು, ಹಾನ್‌ಗಲ್, ಕುರುವತ್ತಿ, ಹೊನ್ನಾವರ, ಗದಗ ಮುಂತಾದವು. ಇವುಗಳಲ್ಲಿ ಅನೇಕ ನಗರ ಕೇಂದ್ರಗಳು ೧೩ ಮತ್ತು ೧೪ನೆಯ ಶತಮಾನಗಳಲ್ಲೂ ಅಸ್ತಿತ್ವದಲ್ಲಿದ್ದವು. ಅದೇ ರೀತಿ ಇನ್ನೂ ಅನೇಕ ಹೊಸ ನಗರ ಕೇಂದ್ರಗಳು ಹುಟ್ಟಿಕೊಂಡವನು. ಅವುಗಳೆಂದರೆ, ಐಹೊಳೆ, ಬೇಲೂರು, ಹಳೇಬೀಡು, ಬಳ್ಳಿಗಾವೆ, ಮಂಗಳೂರು, ಉಪೇಂದ್ರಪುರ, ಸೋಮನಾಥಪುರ, ತಲಕಾಡು, ತೊಣ್ಣೂರು ಮುಂತಾದವು.[3]

ಮೇಲೆ ಹೆಸರಿಸಿದ ಪೇಟೆ-ಪಟ್ಟಣಗಳು ಬೇರೆ ಬೇರೆ ಹಿನ್ನೆಲೆಗಳಿಂದ ಹುಟ್ಟಿಕೊಂಡು ಕ್ರಮೇಣ ತಮ್ಮ ಸ್ವರೂಪದಲ್ಲಿ ಬದಲಾವಣೆಗಳನ್ನು ಕಂಡುಕೊಂಡವು. ಪೇಟೆ-ಪಟ್ಟಣಗಳು ಶತಮಾನಗಳು ಕಳೆದಂತೆ ಬೆಳವಣಿಗೆಯನ್ನು ಹೊಂದಿರುವುದಕ್ಕೆ ಹಾಗೂ ಸ್ವರೂಪದಲ್ಲಿ ಬದಲಾಗಿರುವುದಕ್ಕೆ ಶಾಸನಗಳಲ್ಲಿ ಅನೇಕ ಉದಾಹರಣೆಗಳು ಸಿಗುತ್ತವೆ. ಅಂಥ ಎರಡು ಉದಾಹರಣೆಗಳನ್ನು ಇಲ್ಲಿ ತೆಗೆದುಕೊಳ್ಳಲಾಗಿದೆ. ಪುಲಿಗೆರೆಯನ್ನು[4] ಕ್ರಿ.ಶ. ೬೮೬ರ ಶಾಸನವು ಸೈನಿಕ ಕ್ಯಾಂಪ್ ಎಂದು ಕರೆದರೆ, ಕ್ರಿ.ಶ. ೯೬೮ರ ಶಾಸನವು ನಗರ ಎಂಬುದಾಗಿ ಕರೆದಿದೆ. ಅದೇ ರೀತಿ ಕ್ರಿ.ಶ. ೧೧೧೨ ಮತ್ತು ೧೧೩೮ರ ಶಾಸನಗಳು ರಾಜಧಾನಿ ಪಟ್ಟಣ ಎಂಬುದಾಗಿ ಕರೆದಿವೆ. ಇದು ಪುಲಿಗೆರೆಯು ಒಂದು ಸಾಮಾನ್ಯ ಸೈನಿಕ ಕ್ಯಾಂಪಿನಿಂದ ರಾಜಧಾನಿ ಪಟ್ಟಣವಾಗಿ ಬೆಳೆದಿರುವ ಬಗೆಯನ್ನು ಅಥವಾ ಅಲ್ಲಿನ ನಗರೀಕರಣ[5] ಪ್ರಕ್ರಿಯೆಯನ್ನು ಸೂಚಿಸುತ್ತದೆ. ಶ್ರವಣ ಬೆಳಗೊಳವನ್ನು ಕ್ರಿ.ಶ. ೭ರಿಂದ ೧೦ನೆಯ ಶತಮಾನಗಳವರೆಗಿನ ಶಾಸನಗಳು ತೀರ್ಥ ಅಥವಾ ತೀರ್ಥಯಾತ್ರೆಯ ಕ್ಷೇತ್ರ ಎಂಬುದಾಗಿ ಕರೆದರೆ,[6] ಕ್ರಿ.ಶ. ೧೨ನೆಯ ಶತಮಾನದ ಶಾಸನಗಳು ನಗರ ಎಂಬುದಾಗಿ ಕರೆದಿವೆ. ಶಾಸನಗಳಲ್ಲಿ ಉಲ್ಲೇಖಿಸಲಾದ ಪುರ, ದುರ್ಗ, ಪಟ್ಟಣ, ನಗರ, ಮಹಾನಗರ, ಮಹಾಪಟ್ಟಣ, ರಾಜಧಾನಿಪಟ್ಟಣ, ಬಣಜುಪಟ್ಟಣ ಮುಂತಾದ ಪದಗಳು ಅಂದಿನ ಸಂದರ್ಭದಲ್ಲಿನ ನಗರೀಕರಣ ಪ್ರಕ್ರಿಯೆಯನ್ನು ಸೂಚಿಸುತ್ತವೆ.[7] ಇವು ರಾಜಧಾನಿ, ವಾಣಿಜ್ಯ, ಧಾರ್ಮಿಕ, ಶೈಕ್ಷಣಿಕ, ಬಂದರು ಪಟ್ಟಣಗಳು ಅಸ್ತಿತ್ವದಲ್ಲಿ ಇದ್ದುದ್ದನ್ನು ಸೂಚಿಸುತ್ತವೆ.

ಕ್ರಿ.ಶ. ೮ನೆಯ ಶತಮಾನದಿಂದ ೧೦ನೆಯ ಶತಮಾನಗಳವರೆಗಿನ ಅವಧಿಯಲ್ಲಿ ಆಡಳಿತ ಮತ್ತು ಧಾರ್ಮಿಕ ಕೇಂದ್ರಗಳು ಸಾಧಾರಣವಾಗಿ ಬೆಳೆಯತೊದಗಿದವು ಎನ್ನುವುದು ಶಾಸನಗಳಿಂದ ತಿಳಿದುಬರುತ್ತದೆ. ಈ ಅವಧಿಯಲ್ಲಿ ವಾಣಿಜ್ಯ ಪಟ್ಟಣಗಳ ಸಂಖ್ಯೆ ತೀರಾ ಕಡಿಮೆ ಇತ್ತು. ಆದರೆ ಕ್ರಿ.ಶ. ೧೧ ರಿಂದ ೧೩ನೆಯ ಶತಮಾನಗಳ ಅವಧಿಯಲ್ಲಿ ಪೇಟೆ-ಪಟ್ಟಣಗಳ ಸಂಖ್ಯೆ ಗಣನೀಯವಾಗಿ ಏರಿತು. ಶ್ರವಣಬೆಳಗೊಳ, ಲಕ್ಕುಂಡಿ, ಅರಸಿಕೆರೆ, ಮಂಗಳೂರು, ಸೂಡಿ, ಕುರುಗೋಡು, ಬಾಣಾವರ ಮುಂತಾದವು ಪ್ರಮುಖ ವಾಣಿಜ್ಯ ಕೇಂದ್ರಗಳಾಗಿದ್ದವು. ಅನೇಕ ಧಾರ್ಮಿಕ ಮತ್ತು ಆಡಳಿತ ಕೇಂದ್ರಗಳು ವಾಣಿಜ್ಯ ಕೇಂದ್ರಗಳಾಗಿ ಪರಿವರ್ತನೆಗೊಂಡಿರುವುದೂ ಉಂಟು. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಶ್ರವಣಬೆಳಗೊಳ, ಲಕ್ಕುಂಡಿ, ಮಂಗಳೂರು ಮುಂತಾದವು. ಕರ್ನಾಟಕದಲ್ಲಿ ಆಡಳಿತ ಕೇಂದ್ರಗಳು ಹೆಚ್ಚಾಗಿ ಕಂಡುಬರುತ್ತಿದ್ದುದು ಕ್ರಿ.ಶ. ೫ರಿಂದ ೧೦ನೆಯ ಶತಮಾನಗಳ ಅವಧಿಯಲ್ಲಿ. ಇವು ರಾಜಧಾನಿ ಪಟ್ಟಣಗಳೂ ಆಗಿರುತ್ತಿದ್ದವು. ಬಾದಾಮಿ, ಪಟ್ಟದಕಲ್ಲು, ಕಲ್ಯಾಣಿ, ಮಾನ್ಯಖೇಟ, ತಲಕಾಡು, ಬನವಾಸಿ, ಉಚ್ಚಂಗಿ, ಬೇಲೂರು, ದೋರಸಮುದ್ರ ಮುಂತಾದವು ಪ್ರಮುಖ ರಾಜಧಾನಿ- ಆಡಳಿತ ಕೇಂದ್ರಗಳಾಗಿದ್ದವು. ಧಾರ್ಮಿಕ ಹಿನ್ನೆಲೆಯಿಂದ ಅನೇಕ ನಗರಕೇಂದ್ರಗಳು ಹುಟ್ಟಿಕೊಂಡವು. ದೇವಾಲಯಗಳು, ಮಠಗಳು ಹೆಚ್ಚೆಚ್ಚು ನಿರ್ಮಾಣಗೊಳ್ಳುತ್ತಿದ್ದಂತೆ ಅವುಗಳ ಸುತ್ತಮುತ್ತ ಪೇಟೆ-ಪಟ್ಟಣಗಳು ಹುಟ್ಟಿಕೊಳ್ಳುತ್ತಿದ್ದವು.[8]ಲಕ್ಕುಂಡಿ, ಹೀರೆಕುರವತ್ತಿ, ಶ್ರವಣಬೆಳಗೊಳ, ಬಾದಾಮಿ, ಬನವಾಸಿ, ಮುಳುಗುಂದ, ಬೇಲೂರು, ಸೋಮನಾಥಪುರ, ತಲಕಾಡು ಮುಂತಾದವು ಪ್ರಮುಖ ಧಾರ್ಮಿಕ ಕೇಂದ್ರಗಳು. ಇವುಗಳಲ್ಲಿ ಧಾರ್ಮಿಕೇತರ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದ್ದದು ಪೇಟೆ-ಪಟ್ಟಣಗಳು ಅಸ್ತಿತ್ವಕ್ಕೆ ಬರುವುದಕ್ಕೆ ಕಾರಣವಾಯಿತು. ನಗರ ಪ್ರದೇಶಗಳಲ್ಲಿ ಒಂದು ನಗರಸಭೆ ಹಾಗೂ ಸ್ವಾಮಿಗಳು ಇರುತ್ತಿದ್ದರು.[9] ಪಟ್ಟಣಸ್ವಾಮಿಯು ಸಾಮಾನ್ಯವಾಗಿ ಒಬ್ಬ ಪ್ರಮುಖ ವ್ಯಾಪಾರಸ್ಥನೇ ಆಗಿರುತ್ತಿದ್ದನು. ರಾಷ್ಟ್ರಕೂಟರ ಆಳ್ವಿಕೆಯ ಅವಧಿಯಲ್ಲಿ ಮಹಾನಗರಗಳ ಆಡಳಿತಗಳು ಸಮಿತಿಗಳ ಸಹಾಯದಿಂದ ಪುರಪತಿ ಅಥವಾ ನಗರಪತಿಗಳಿಂದ ನಡೆಸಲ್ಪಡುತ್ತಿದ್ದವು.[10] ಪುರಪತಿಗಳು ಸರಕಾರದ ಅಧಿಕಾರಿಗಳಾಗಿರುತ್ತಿದ್ದರು.[11] ಮಹಾನಗರಗಳಿಗೂ ಪೌರಾಸಭಾ ಸದಸ್ಯ ಪ್ರಮಾಣಕ್ಕನುಗುಣವಾಗಿಯೇ ಪ್ರತಿನಿಧಿಗಳಿರುತ್ತಿದ್ದರು.[12] ಸುಮಾರು ೧೨ನೆಯ ಶತಮಾನದ ವೇಳೆಗೆ ನಗರವಾಸಿಗಳೆಲ್ಲಾ ಒಟ್ಟಿಗೆ ಸೇರಿ ನಗರ ಸಮಾಜವನ್ನು ಹುಟ್ಟುಹಾಕಿದರು ಎನ್ನುವುದು ಬಿ.ಎ. ಸಾಲೆತ್ತೂರ್ ಅವರ ಅಭಿಪ್ರಾಯ.[13]

ಕ್ರಿ.ಶ. ೮ರಿಂದ ೧೪ನೆಯ ಶತಮಾನಗಳ ಅವಧಿಯಲ್ಲಿ ಪೇಟೆ-ಪಟ್ಟಣಗಳ ಕುರಿತು ಹೆಚ್ಚಿನ ಮಾಹಿತಿ ಸಿಗುವುದು ೧೧ನೆಯ ಶತಮಾನದ ನಂತರದ ಅವಧಿಗಳಲ್ಲಿ. ಈ ಅವಧಿಗಳಲ್ಲಿ ಕಲ್ಯಾಣಿ ಚಾಲುಕ್ಯರು ಮತ್ತು ಹೊಯ್ಸಳರು ಪ್ರಮುಖ ಅರಸು ಮನೆತನಗಳಾಗಿ ಆಳ್ವಿಕೆ ನಡೆಸುತ್ತಿದ್ದರು. ಹೊಯ್ಸಳರ ಆಳ್ವಿಕೆ ೧೪ನೆಯ ಶತಮಾನದ ಪ್ರಥಮಾರ್ಧದವರೆಗೂ ಮುಂದುವರಿಯಿತು. ಭೂ ಆಧಾರಿತ ಅರ್ಥ ವ್ಯವಸ್ಥೆ ಹೆಚ್ಚುವರಿ ಉತ್ಪಾದನೆಗೆ ಎಡೆಮಾಡಿ ಕೊಟ್ಟಿರುವುದು ಪೇಟೆ-ಪಟ್ಟಣಗಳು ಕಾಣಿಸಿಕೊಳ್ಳಲು ಪ್ರಮುಖ ಕಾರಣ. ಈ ಹೆಚ್ಚುವರಿ ಉತ್ಪಾದನೆಯು ವ್ಯಾಪಾರ-ವಾಣಿಜ್ಯ, ಮಾರುಕಟ್ಟೆ, ವರ್ತಕ ಸಂಘಗಳು, ಸಾರಿಗೆ ಮುಂತಾದವುಗಳು ಹುಟ್ಟಿಕೊಳ್ಳುವುದಕ್ಕೆ ಕಾರಣವಾಯಿತು.[14] ಈ ಅಂಶಗಳನ್ನು ಕ್ರಿ.ಶ. ೧೧ರಿಂದ ೧೪ನೆಯ ಶತಮಾನಗಳ ಅವಧಿಯಲ್ಲಿ ಗುರುತಿಸಬಹುದಾಗಿದೆ. ಈ ಅವಧಿಯಲ್ಲಿ ಪೇಟೆ-ಪಟ್ಟಣಗಳ ಹುಟ್ಟಿಗೆ ಅನುಕೂಲಕರವಾಗಿ ಕಂಡು ಬಂದ ಪ್ರಮುಖ ಲಕ್ಷಣಗಳೆಂದರೆ, ಅನುಕೂಲಕರವಾದ ಭೌಗೋಳಿಕ ಸನ್ನಿವೇಶ, ಕೃಷಿ ಮತ್ತು ಕೃಷಿಯೇತರ ಕ್ಷೇತ್ರಗಳಲ್ಲಿ ಮುಂದುವರಿದ ತಂತ್ರಜ್ಞಾನ, ಸಂಕೀರ್ಣ ಸಾಮಾಜಿಕ ಸಂಘಸಂಸ್ಥೆಗಳು ಹಾಗೂ ವ್ಯವಸ್ಥಿತ ಸಾಮಾಜಿಕ ರಚನೆ. ಹೊಯ್ಸಳರ ಆಳ್ವಿಕೆಯ ಅವಧಿಯಲ್ಲಿ ಪಟ್ಟಣಗಳು ರೂಪುಗೊಂಡ ಬಗೆಗೆ ಶಾಸನಗಳಲ್ಲಿ ಅನೇಕ ಮಾಹಿತಿಗಳು ಸಿಗುತ್ತವೆ. ಹೊಯ್ಸಳರ ಆಳ್ವಿಕೆಯಲ್ಲಿ ಅನೇಕ ಹಳ್ಳಿಪ್ರದೇಶಗಳು ಪಟ್ಟಣಪ್ರದೇಶಗಳಾಗಿ ಪರಿವರ್ತನೆಗೊಂಡವು. ಇದಕ್ಕೆ ಯಮ್ಮದುರಹಳ್ಳಿ, ಉಪೇಂದ್ರಪುರ, ಮೂಗೂರು, ಚಂದಿಮಾದಿಹಳ್ಳಿ, ಮುಗುಲುನಹಳ್ಳಿ ಮುಂತಾದವು ಉತ್ತಮ ಉದಾಹರಣೆಗಳಾಗಿವೆ.[15]

ಹಳ್ಳಿಯನ್ನು ಪಟ್ಟಣವನ್ನಾಗಿ ಪರಿವರ್ತಿಸುವ ಪ್ರಕ್ರಿಯೆಯಲ್ಲಿ ಬೇರೆ ಬೇರೆ ಹಿತಾಸಕ್ತಿಗಳು ಸೇರಿಕೊಂಡಿರುತ್ತಿದ್ದವು.[16] ಹೊಯ್ಸಳರ ಸಂದರ್ಭದಲ್ಲಿ ನೋಡಿದಾಗ ಪ್ರಭುತ್ವವನ್ನು ಪ್ರತಿನಿಧಿಸುವ ನಾಡಿನ ಅಧಿಕಾರಿಗಳು, ಕೃಷಿಕರ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ನಾಡ ಮುಖಂಡರು, ವ್ಯಾಪಾರಿ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ವರ್ತಕ ಸಂಘಗಳು ಕಂಡುಬರುತ್ತವೆ.[17] ಇವರೆಲ್ಲರೂ ಸಭೆ ಸೇರಿ ಒಮ್ಮತದ ತೀರ್ಮಾನಕ್ಕೆ ಬಂದು ಪಟ್ಟಣಗಳ ಹುಟ್ಟಿಗೆ ಕಾರಣರಾಗುತ್ತಿದ್ದರು. ಪಟ್ಟಣಗಳು ವ್ಯವಸ್ಥಿತವಾಗಿ ಬೆಳೆಯಬೇಕೆನ್ನುವ ಉದ್ದೇಶದಿಂದ ಅಧಿಕಾರಿಗಳನ್ನು ನೇಮಿಸಲಾಗುತ್ತಿತ್ತು. ನಾಡ ಮುಖಂಡರು ಹೆಚ್ಚುವರಿ ಉತ್ಪಾದನೆಯ ಹಾಗೂ ಅದರ ಮಾರಾಟದ ವಿಷಯದಲ್ಲಿ ಸ್ವಯಂ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಸೆಟ್ಟಿಗಳಿಗೆ ತೆರಿಗೆ ವಿನಾಯಿತಿಯನ್ನು ಇವರು ಪ್ರಕಟಿಸುತ್ತಿದ್ದರು. ಏಕೆಂದರೆ ಹಳ್ಳಿಯ ಹೆಚ್ಚುವರಿ ಉತ್ಪಾದನೆಯನ್ನು ಮಾರಾಟ ಮಾಡಬೇಕಾದರೆ ಸೆಟ್ಟಿಗಳ ಸಹಾಯಬೇಕಾಗುತ್ತಿತ್ತು. ಇದರಲ್ಲಿ ವೈಯ್ಯಕ್ತಿಕ ಹಿತಾಸಕ್ತಿಗಳೇ ಹೆಚ್ಚಾಗಿ ಕಂಡುಬರುತ್ತಿದ್ದವು. ವ್ಯಾಪಾರಸ್ಥರು ಮತ್ತು ಕುಶಲಕರ್ಮಿಗಳು ತಮ್ಮ ಹಿತಾಸಕ್ತಿಗಳನ್ನು ಕಾಪಾಡುವುದಕ್ಕೋಸ್ಕರ ವರ್ತಕ ಸಂಘಗಳನ್ನು ಹುಟ್ಟು ಹಾಕಿದರು. ಈ ವರ್ತಕ ಸಂಘಗಳು ನಗರ ಪ್ರದೇಶಗಳ ಹಲವಾರು ಕೆಲಸಕಾರ್ಯಗಳನ್ನು ಮಾಡುತ್ತಿದ್ದವು.

ನಗರಕೇಂದ್ರಗಳ ಹುಟ್ಟು ಮತ್ತು ಬೆಳವಣಿಗೆಯಂತೆಯೇ ಅವುಗಳ ಅವನತಿಯ ಕುರಿತೂ ಚರ್ಚಿಸಬೇಕಾಗುತ್ತದೆ.[18] ಅವನತಿ ಎನ್ನುವುದು ಎಲ್ಲ ನಗರಕೇಂದ್ರಗಳಿಗೂ ಸಮಾನವಾಗಿ ಅನ್ವಯಿಸುವುದಿಲ್ಲ. ಹೆಚ್ಚಾಗಿ ರಾಜಧಾನಿ ಪಟ್ಟಣಗಳು ಅಥವಾ ಆಡಳಿತ ಕೇಂದ್ರಗಳು ಅವನತಿಯನ್ನು ಹೊಂದಿರುವುದು ತಿಳಿದುಬರುತ್ತದೆ. ರಾಜಕೀಯ ಮತ್ತು ಆಡಳಿತ ಕೇಂದ್ರಗಳು ಹೆಚ್ಚಾಗಿ ರಾಜಕೀಯ ಅವಶ್ಯಕತೆಗಳನ್ನು ಪೂರೈಸುವ ಕೇಂದ್ರಗಳಾಗಿರುತ್ತಿದ್ದವು. ಒಂದು ಅರಸು ಮನೆತನದ ಆಳ್ವಿಕೆ ಕೊನೆಗೊಂಡಾಗ ಅದರ ರಾಜಧಾನಿಯೂ ಅವನತಿಯನ್ನು ಹೊಂದುತ್ತಿತ್ತು ಅಥವಾ ಬೇರೆ ಪ್ರದೇಶಗಳಿಗೆ ವರ್ಗಾವಣೆಗೊಳ್ಳುತ್ತಿತ್ತು. ಅರಸು ಮನೆತನಗಳೊಳಗಿನ ಆಂತರಿಕ ಕಲಹಗಳು, ಹೊರರಾಜ್ಯಗಳ ಆಕ್ರಮಣ, ವಿವಿಧ ಧರ್ಮಗಳ ನಡುವಿನ ಮನಸ್ತಾಪಗಳು ಮುಂತಾದವು ನಗರಗಳ ಅವನತಿಗೆ ಕಾರಣವಾಗುತ್ತಿದ್ದವು. ಅರಸು ಮನೆತನಗಳು ತಮ್ಮ ರಾಜಧಾನಿಯನ್ನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಬದಲಾಯಿಸುತ್ತಿದ್ದುದಕ್ಕೆ ಹೊಯ್ಸಳರೇ ಉತ್ತಮ ಉದಾಹರಣೆ. ಹೊಯ್ಸಳರ ರಾಜಧಾನಿಯು ಸೊಸೆವೂರು, ಬೇಲೂರು ಮತ್ತು ದೋರಸಮುದ್ರ ಎನ್ನುವ ಮೂರು ಪ್ರದೇಶಗಳಿಗೆ ಬದಲಾವಣೆಗೊಂಡಿತ್ತು.[19] ನಗರಗಳ ಅವನತಿಯು ಯಾವ ಕಾರಣದಿಂದ ಆದರೂ ಅದು ಸಮಾಜದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುತ್ತಿತ್ತು. ಈ ರೀತಿಯಾಗಿ ನಗರ ಕೇಂದ್ರಗಳ ಹುಟ್ಟು, ಬೆಳವಣಿಗೆ ಮತ್ತು ಅವನತಿ ಸಮಾಜದ ಮೇಲೆ ಸ್ಪಷ್ಟವಾದ ಪರಿಣಾಮಗಳನ್ನು ಬೀರಿತು. ಮಧ್ಯಕಾಲೀನ ಸಂದರ್ಭದಲ್ಲಿ ನಗರ ವ್ಯವಸ್ಥೆ ರಾಜ್ಯದ ಆರ್ಥಿಕತೆಯ ಹಿಂದಿನ ಚಾಲಕ ಶಕ್ತಿಯಾಗಿ ಬೆಳೆದಿರದಿದ್ದರೂ ಉತ್ಪಾದನಾ ವ್ಯವಸ್ಥೆಯಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಯಿತು.

.೨ ವರ್ತಕರು ಮತ್ತು ವ್ಯಾಪಾರ

ವ್ಯಾಪಾರವನ್ನು ವೃತ್ತಿಯಾಗಿಸಿಕೊಂಡವರನ್ನು ವರ್ತಕರು ಎಂಬ ಹೆಸರಿನಿಂದ ಕರೆಯಲಾಗಿದೆ. ವರ್ತಕರಲ್ಲಿ ಎರಡು ರೀತಿಯ ಪ್ರಕಾರಗಳು ಕಂಡುಬರುತ್ತವೆ. ಅವರುಗಳೆಂದರೆ, ವಿನಿಮಯ ವರ್ತಕರು ಮತ್ತು ಉತ್ಪಾದಕ-ವಿನಿಮಯ ವರ್ತಕರು.[20] ಸೆಟ್ಟಿ-ಬಣಂಜಿಗ, ಸೆಟ್ಟಿಗುತ್ತ, ನಕರ, ಮುಂಮುರಿದಂಡ, ವಡ್ಡ ವ್ಯವಹಾರಿ, ಗಾತ್ರಿಗ, ಸೆಟ್ಟಿಕಾರ, ಹಲರು, ಎಳಮೆ, ಸಾಲಿಕೆ ಬಲ್ಲಾಳುಗಳು, ನಾನಾದೇಶಿ, ಉಭಯನಾನಾದೇಶಿಗಳು ಮುಂತಾದವರು ವ್ಯಾಪಾರವನ್ನೇ ವೃತ್ತಿಯನ್ನಾಗಿಸಿಕೊಂಡ ವಿನಿಮಯ ವರ್ತಕರು. ಇವರೆಲ್ಲರೂ ಮಧ್ಯಾಕಾಲೀನ ಕರ್ನಾಟಕದಲ್ಲಿ ನಗರ ವ್ಯವಸ್ಥೆಯೊಂದು ಕಾಣಿಸಿಕೊಳ್ಳುವುದಕ್ಕೆ ಕಾರಣರಾದರು. ವ್ಯಾಪಾರಸ್ಥರು ಆಂತರಿಕ ವ್ಯಾಪಾರ ಮಾತ್ರವಲ್ಲದೆ ವಿದೇಶಿ ವ್ಯಾಪಾರವನ್ನೂ ನಡೆಸುತ್ತಿದ್ದರು. ಕ್ರಿ.ಶ. ೧೦೫೪ರ ಶಾಸನವೊಂದು ವ್ಯಾಪಾರಸ್ಥರು ಭೂ ಮತ್ತು ಜಲಮಾರ್ಗದ ಮೂಲಕ ಹೊರರಾಜ್ಯಗಳೊಡನೆ ವ್ಯಾಪಾರ ನಡೆಸುತ್ತಿದ್ದ ಮಾಹಿತಿ ನೀಡುತ್ತದೆ.[21] ಸಮುದ್ರ ವ್ಯಾಪಾರವು ಮುಖ್ಯವಾಗಿ ಹೊನ್ನಾವರ, ಭಟ್ಕಳ, ಮಂಗಳೂರು ಮುಂತಾದ ಬಂದರುಗಳ ಮೂಲಕ ನಡೆಯುತ್ತಿತ್ತು ಎನ್ನುವ ವಿಚಾರ ಅರಬ್ ಪ್ರವಾಸಿಗರ ಬರಹಗಳಿಂದ ತಿಳಿದುಬರುತ್ತದೆ.[22] ದೋರಸಮುದ್ರ, ಬೇಲೂರು, ವಿಷ್ಣು ಸಮುದ್ರ, ಶ್ರವಣಬೆಳಗೊಳದ ವ್ಯಾಪಾರಸ್ಥರು ಸಮುದ್ರ ವ್ಯಾಪಾರದಲ್ಲಿ ಹೆಚ್ಚು ಭಾಗವಹಿಸುತ್ತಿದ್ದರು ಎನ್ನುವುದು ಶಾಸನಗಳಿಂದ ತಿಳಿದುಬರುತ್ತದೆ.[23] ಚೀಣಾ, ಮಲಯಾ, ಜಾವ, ಸಿಲೋನ್, ಮಲಾಕ್ಕ, ಫಾರ್ಮೋಸಾ, ಮುಂತಾದ ದೇಶಗಳೊಂದಿಗೆ ವ್ಯಾಪಾರ ಸಂಪರ್ಕವನ್ನು ಇಟ್ಟುಕೊಳ್ಳಲಾಗಿತ್ತು.[24] ಕರ್ನಾಟಕದ ಕರಾವಳಿ ಪ್ರದೇಶಗಳನ್ನು ವಿದೇಶಿ ವ್ಯಾಪಾರಕ್ಕಾಗಿ ಬಳಸಿಕೊಳ್ಳಲಾಯಿತು. ವಿದೇಶಿ ವ್ಯಾಪಾರಿ ಹಡಗುಗಳು ಹೊನ್ನಾವರ, ಭಟ್ಕಳ, ಮಂಗಳೂರು ಮುಂತಾದ ಬಂದರುಗಳಿಗೆ ಬರುತ್ತಿದ್ದವು.[25]

ರಫ್ತು ಮತ್ತು ಆಮದು ವ್ಯಾಪಾರದ ಬಗೆಗೂ ಮಾಹಿತಿಗಳು ಸಿಗುತ್ತವೆ. ಬಾರಕೂರು ಮತ್ತು ಮಂಗಳೂರಿನಿಂದ ಕರಿಮೆಣಸು ವಿದೇಶಗಳಿಗೆ ರಫ್ತಾಗುತ್ತಿತ್ತು ಎನ್ನುವ ಮಾಹಿತಿ ಇಬಾನ್ ಬತೂತಾ, ಯಾಕುತ್, ಬಾರ್ಬೊಸಾ ಮುಂತಾದ ಪ್ರವಾಸಿಗಳ ವರದಿಗಳಿಂದ ತಿಳಿದುಬರುತ್ತದೆ. ಸುಗಂಧ ದ್ರವ್ಯಗಳು, ಚರ್ಮ, ಹತ್ತಿ, ತೆಂಗಿನಕಾಯಿ, ಸಕ್ಕರೆ ಮುಂತಾದ ವಸ್ತುಗಳು ಹೊರ ದೇಶಗಳಿಗೆ ಹೆಚ್ಚಾಗಿ ರಫ್ತಾಗುತ್ತಿದ್ದವು.[26] ಚಿನ್ನ, ಬೆಳ್ಳಿ, ತಾಮ್ರ, ಇತರ ಲೋಹಗಳು, ಸಿಲ್ಕ್, ಆನೆಗಳು, ಕುದುರೆಗಳು ಮುಂತಾದವುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಆನೆ ಮತ್ತು ಕುದುರೆಗಳ ಆಮದು ರಾಜಪ್ರಭುತ್ವಕ್ಕೆ ಸೈನಿಕ ದೃಷ್ಟಿಯಿಂದ ಅತ್ಯಂತ ಅನಿವಾರ್ಯದ್ದಾಗಿತ್ತು. ಆದರೆ ರಾಜ್ಯದ ಆರ್ಥಿಕ ದೃಷ್ಟಿಯಿಂದ ಇದು ಹೊರೆಯಾಗಿತ್ತು.[27] ಕುದುರೆ ವ್ಯಾಪಾರವು ಮಧ್ಯಕಾಲೀನ ಕರ್ನಾಟಕದ ವಿದೇಶಿ ವ್ಯಾಪಾರದಲ್ಲಿ ಮಹತ್ವದ ಸ್ಥಾನವನ್ನು ಪಡೆದುಕೊಂಡಿತ್ತು. ಅರಬ್ ಮತ್ತು ಪರ್ಷಿಯನ್ ವ್ಯಾಪಾರಸ್ಥರು ಕುದುರೆ ವ್ಯಾಪಾರದಲ್ಲಿ ಅಪಾರವಾದ ಲಾಭವನ್ನು ಪಡೆಯುತ್ತಿದ್ದರು.[28] ಕ್ರಿ.ಶ. ೧೨ ಮತ್ತು ೧೩ನೆಯ ಶತಮಾನಗಳಲ್ಲಿ ಅರೇಬಿಯಾ, ಟರ್ಕಿ ಮತ್ತು ಪರ್ಷಿಯ ದೇಶಗಳೊಂದಿಗೆ ಕುದುರೆ ವ್ಯಾಪಾರ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿತ್ತು. ಆನೆಗಳನ್ನು ಹೆಚ್ಚಾಗಿ ಸಿಲೋನ್ ಮತ್ತು ಪೆಗು ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಐಹೊಳೆ ಐದುನೂರು ವ್ಯಾಪಾರಸ್ಥರು ಆನೆಗಳ ವ್ಯಾಪಾರವನ್ನು ಹೆಚ್ಚಾಗಿ ಮಾಡುತ್ತಿದ್ದರು.[29]

ರಾಜ್ಯದ ಆರ್ಥಿಕತೆಯಲ್ಲಿ ಆಂತರಿಕ ವ್ಯಾಪಾರದ ಪಾತ್ರ ಮಹತ್ವದ್ದಾಗಿತ್ತು. ಆಂತರಿಕ ವ್ಯಾಪಾರದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡೂ ಪರಸ್ಪರ ಒಂದು ಗೂಡಿ ಕೆಲಸ ನಿರ್ವಹಿಸುತ್ತಿದ್ದವು. ಆಂತರಿಕ ವ್ಯಾಪಾರದ ಕಾರಣದಿಂದಾಗಿಯೇ ಅನೇಕ ಗ್ರಾಮೀಣ ಪ್ರದೇಶಗಳು ಪೇಟೆ-ಪಟ್ಟಣಗಳಾಗಿಯೂ ಪರಿವರ್ತನೆಗೊಂಡವು. ಈ ಕಾರಣದಿಂದಾಗಿ ಆಂತರಿಕ ವ್ಯಾಪಾರವು ಆರ್ಥಿಕ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದೇ ಅಲ್ಲದೆ ಸಾಮಾಜಿಕ ಪರಿವರ್ತನೆಗೂ ಕಾರಣವಾಯಿತು. ಆಂತರಿಕ ವ್ಯಾಪಾರವು ಅನೇಕ ಪ್ರದೇಶಗಳಲ್ಲಿ ನಡೆಯುತ್ತಿತ್ತು. ಅಂಥ ವ್ಯಾಪಾರದ ಪ್ರದೇಶಗಳನ್ನು ಸಂತೆ, ಅಂಗಡಿ, ಪೇಟೆ, ಪಟ್ಟಣ ಎಂಬ ಹೆಸರುಗಳಿಂದ ಕರೆಯಲಾಗುತ್ತಿತ್ತು. ವಾರಕ್ಕೊಮ್ಮೆ ಒಂದು ಕಡೆ ಸೇರಿ ವ್ಯಾಪಾರ ನಡೆಸುವ ವ್ಯವಸ್ಥೆಯನ್ನು ಸಂತೆ ಎನ್ನುವ ಹೆಸರಿನಿಂದ ಕರೆಯಲಾಗಿದೆ.[30] ಸಂತೆಗೆ ವ್ಯಾಪಾರ ನಡೆಸುವ ಸಾಮಾಗ್ರಿಗಳನ್ನು ತರಲಾಗುತ್ತಿತ್ತು. ಅದು ಒಂದು ದಿನಕ್ಕಷ್ಟೇ ಸೀಮಿತವಾದ ವ್ಯಾಪಾರವಾಗಿತ್ತು. ಈ ರೀತಿ ವ್ಯಾಪಾರ ನಡೆಯುವ ಸ್ಥಳವನ್ನು ಸಂತೆ ಪ್ರದೇಶ ಎಂಬ ಹೆಸರಿನಿಂದಲೇ ಕರೆಯಲಾಗುತ್ತಿತ್ತು. ಹೊಸದಾಗಿ ಆರಂಭಿಸಿದ ಸಂತೆಗೆ ವರ್ತಕರನ್ನು ಆಕರ್ಷಿಸಲು ಸರಕುಗಳಿಗೆ ಸುಂಕ ರಿಯಾಯಿತಿಯನ್ನು ನೀಡಲಾಗುತ್ತಿತ್ತು.[31] ಸಂತೆಗಳಲ್ಲಿ ಸ್ಥಳೀಯ ವ್ಯಾಪಾರಸ್ಥರಷ್ಟೇ ಅಲ್ಲದೆ ಹೊರಗಿನ ವ್ಯಾಪಾರಸ್ಥರು ವ್ಯಾಪಾರ ನಡೆಸುತ್ತಿದ್ದರು. ಸಂತೆಗಳು ದಿನನಿತ್ಯ ಬಳಕೆಯ ವಸ್ತುಗಳ ವ್ಯಾಪಾರ ಮಾತ್ರ ನಡೆಸುವುದಲ್ಲದೆ ವಸ್ತುಗಳನ್ನು ಖರೀದಿಸಿ ಅವುಗಳನ್ನು ರಫ್ತು ಮಾಡುವ ಹಾಗೂ ಆಮದು ಮಾಡಿಕೊಂಡ ವಸ್ತುಗಳನ್ನು ಪೇಟೆ-ಪಟ್ಟಣಗಳಿಗೆ ವಿತರಿಸುವ ಕೆಲಸವನ್ನೂ ಮಾಡುತ್ತಿದ್ದವು.[32]

ಗ್ರಾಮೀಣ ಪ್ರದೇಶಗಳ ಮಧ್ಯಭಾಗಗಳಲ್ಲಿಯೇ ಸಂತೆಗಳು ಏರ್ಪಟ್ಟು ಅಲ್ಲಿ ಗ್ರಾಮೀಣ ಛಾಯೆ ಕಡಿಮೆಯಾಗಿ ಪಟ್ಟಣದ ಲಕ್ಷಣಗಳು ಕಾಣಿಸಲಾರಂಭಿಸುತ್ತಿದ್ದವು.[33] ಇದು ನಗರೀಕರಣ ಪ್ರಕ್ರಿಯೆಯನ್ನು ಸೂಚಿಸುತ್ತವೆ. ಟಿ. ನರಸೀಪುರ ತಾಲೂಕಿನ ಮೂಗೂರು ಎಂಬ ಪಟ್ಟಣವು ಈ ಹಿನ್ನೆಲೆಯಿಂದಲೇ ನಿರ್ಮಾಣಗೊಂಡಿತು.[34] ಅದೇ ರೀತಿ ಮುಗುಳನ ಹಳ್ಳಿಯು ನಾನಾ ದೇಶಿ ಪಟ್ಟಣವಾಗಿ ಪರಿವರ್ತನೆಗೊಂಡಿತು.[35] ಇಂಥ ಅನೇಕ ಉಲ್ಲೇಖಗಳು ಶಾಸನಗಳಲ್ಲಿ ಸಿಗುತ್ತವೆ. ಈ ಪ್ರಕ್ರಿಯೆಗಳಿಗೆ ಅರಸರು, ಸಾಮಂತರು ಹಾಗೂ ಸ್ಥಳೀಯ ಮುಖಂಡರು ಪ್ರೋತ್ಸಾಹ ನೀಡುತ್ತಿದ್ದರು. ವಾರದ ಎಲ್ಲಾ ದಿನಗಳಲ್ಲೂ ರಾಜ್ಯದ ವಿವಿಧ ಭಾಗಗಳಲ್ಲಿ ಸಂತೆಗಳು ಏರ್ಪಡುತ್ತಿದ್ದವು ಎನ್ನುವುದಕ್ಕೆ ಮಂಗಳವಾರ ಸಂತೆ, ಬುಧವಾರ ಸಂತೆ, ಶುಕ್ರವಾರ ಸಂತೆ, ಭಾನುವಾರ ಸಂತೆ ಮುಂತಾದ ಶಾಸನಗಳಲ್ಲಿ ಸಿಗುವ ಉಲ್ಲೇಖಗಳೇ ಉದಾಹರಣೆಗಳಾಗಿವೆ.[36] ಸಾಮಾನ್ಯ ಸಂತೆಗಳಲ್ಲದೆ ಧರ್ಮಸಂತೆಗಳು ಅಸ್ತಿತ್ವದಲ್ಲಿದ್ದವೆಂದು ಶಾಸನಗಳಿಂದ ತಿಳಿಯುತ್ತದೆ.[37] ಸಂತೆ ಕಟ್ಟಿಸುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುವ ಧಾರ್ಮಿಕ ನಂಬಿಕೆಯನ್ನು ಜನರಲ್ಲಿ ಮೂಡಿಸಲಾಗಿತ್ತು. ಧರ್ಮಸಂತೆಯಲ್ಲಿ ಸರಕುಗಳ ಮೇಲೆ ಸಂತೆಸುಂಕ, ಮಾರಾಟ ತೆರಿಗೆ ವಿಧಿಸುತ್ತಿರಲಿಲ್ಲ. ಆದರೆ ಉಳಿದ ಸಂತೆಗಳ ಮೇಲೆ ಸಂತೆಯ ಆಯ ಎನ್ನುವ ತೆರಿಗೆಯನ್ನು ವಿಧಿಸಲಾಗುತ್ತಿತ್ತು.[38] ಈ ರೀತಿಯಾಗಿ ಸಂತೆಗಳನ್ನು ಏರ್ಪಡಿಸುವುದು ರಾಜ್ಯದ ಬೊಕ್ಕಸಕ್ಕೆ ಅನೇಕ ರೀತಿಯಲ್ಲಿ ಲಾಭದಾಯಕವಾಗಿರುತ್ತಿತ್ತು. ಸಂತೆಗಳು ಆಂತರಿಕ ವ್ಯಾಪಾರದ ವೃದ್ಧಿಗೂ ಕಾರಣವಾಗುತ್ತಿದ್ದವು.

ವ್ಯಾಪಾರ ನಡೆಯುತ್ತಿದ್ದ ಇನ್ನೊಂದು ಪ್ರಮುಖ ಕೇಂದ್ರವೆಂದರೆ ಅಂಗಡಿ. ವ್ಯಾಪಾರದ ವಿವಿಧ ಮಳಿಗೆಗಳ ಅಂಗಡಿ ಕುರಿತು ಶಾಸನಗಳಲ್ಲಿ ಉಲ್ಲೇಖಗಳು ಸಿಗುತ್ತವೆ. ಸಂತೆಯಲ್ಲಿ ಬಯಲು ಅಂಗಡಿ, ಕಟ್ಟಿದ ಅಂಗಡಿಗಳಿದ್ದು ಸಂತೆಯ ದಿನ ಮಾತ್ರ ತೆರೆದಿರುತ್ತಿದ್ದರೆ, ಪೇಟೆ-ಪಟ್ಟಣಗಳಲ್ಲಿಯ ಕಟ್ಟಿದ ಮಳಿಗೆಗಳು ಪ್ರತಿನಿತ್ಯ ಕಾರ‍್ಯನಿರ್ವಹಿಸುತ್ತಿದ್ದವು.[39] ಪೇಟೆಯಲ್ಲಿ ಅಂಗಡಿ ಸಾಲುಗಳಿರುತ್ತಿದ್ದರೆ, ಪಟ್ಟಣದ ಒಳಭಾಗದಲ್ಲಿ ಬಿಡಿಬಿಡಿಯಾದ ಅಂಗಡಿಗಳಿರುತ್ತಿದ್ದವು. ಸಂತೆಗಳಲ್ಲಿ ಧರ್ಮಸಂತೆಗಳು ಇರುತ್ತಿದ್ದಂತೆ ಅಂಗಡಿಗಳಲ್ಲೂ ಧರ್ಮದ ಅಂಗಡಿ, ದೇವರ ಅಂಗಡಿ, ಮಾನ್ಯದ ಅಂಗಡಿಗಳು ಇರುತ್ತಿದ್ದವು.[40] ಅಂಗಡಿಗಳನ್ನು ಕಟ್ಟಿಸಿ ಅವುಗಳನ್ನು ಜಿನಾಲಯ ಅಥವಾ ದೇವಾಲಯಗಳಿಗೆ ದಾನವಾಗಿ ನೀಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುವ ಧಾರ್ಮಿಕ ನಂಬಿಕೆಯನ್ನು ವರ್ತಕರ ಹಾಗೂ ಅಧಿಕಾರಿಗಳ ಮೇಲೆ ಹೇರಲಾಗಿತ್ತು. ಅಂಗಡಿಗಳನ್ನು ನೋಡಿಕೊಳ್ಳಲು ಮತ್ತು ವ್ಯಾಪಾರದ ರೀತಿ-ನೀತಿಗಳನ್ನು ಪಾಲಿಸುವಂತೆ ಮಾಡಲು ಬೆಲೆಯನ್ನು ನಿಗದಿಪಡಿಸಲು ಅಧಿಕಾರಿಗಳು ಇರುತ್ತಿದ್ದರು. ಅವರನ್ನು ಶಾಸನಗಳಲ್ಲಿ ಅಂಗಡಿ ಅಧಿಕಾರಿಗಳೆಂದು ಕರೆಯಲಾಗಿದೆ.[41] ಬಟ್ಟೆ ಅಂಗಡಿ, ಅಕ್ಕಸಾಲಿಗರ ಅಂಗಡಿ ಮುಂತಾದ ವಿವಿಧ ಅಂಗಡಿಗಳು ಇರುತ್ತಿದ್ದವು.[42] ಈ ಎಲ್ಲಾ ಮಳಿಗೆಯವರು ತೆರಿಗೆಯನ್ನು ಕೊಡಬೇಕಾಗಿತ್ತು. ಶಾಸನಗಳಲ್ಲಿ ಈ ತೆರಿಗೆಗಳನ್ನು ಅಂಗಡಿದೆರೆ ಎಂಬುದಾಗಿ ಹೆಸರಿಸಲಾಗಿದೆ.[43] ಅಂಗಡಿಗಳಿಗೆ ಹೆಸರುಗಳಿರುತ್ತಿದ್ದವು. ಅಂಗಡಿಗಳನ್ನು ಕಟ್ಟಿಸಿದ, ಅವುಗಳ ಒಡೆತನ ಪಡೆದ ಇಲ್ಲವೆ ಅವುಗಳನ್ನು ದಾನವಾಗಿ ನೀಡಿದ ವ್ಯಕ್ತಿಗಳ ಹೆಸರುಗಳನ್ನೇ ಅಂಗಡಿಗಳಿಗೆ ನೀಡಲಾಗುತ್ತಿತ್ತು. ಬೊಮ್ಮಲದೇವಿಯರ ಅಂಗಡಿ, ಕೇತಲದೇವಿಯರ ಅಂಗಡಿ, ಬೊಪ್ಪದೇವನ ಬಸದಿಯಂಗಡಿ, ಗುಮ್ಮೇಶ್ವರದ ಅಂಗಡಿ, ಬೆಲಹೂರ ಅಂಗಡಿ ಮುಂತಾದವು ಕೆಲವು ಉದಾಹರಣೆಗಳಾಗಿವೆ.[44]

ಪೇಟೆ-ಪಟ್ಟಣಗಳನ್ನು ಕಟ್ಟಿಸಿ ಅವುಗಳ ಮೂಲಕ ವ್ಯಾಪಾರವನ್ನು ಚುರುಕುಗೊಳಿಸುವ ಕೆಲಸವನ್ನು ಮಾಡಲಾಗುತ್ತಿತ್ತು. ಪೇಟೆಗಳಲ್ಲಿ ವರ್ತಕರು ಖಾಯಂ ಆಗಿ ವಾಸಿಸಬಹುದಾಗಿತ್ತು. ವರ್ತಕರನ್ನು ಆಕರ್ಷಿಸುವ ಸಲುವಾಗಿ ತೆರಿಗೆ ರಿಯಾಯಿತಿ, ಇನ್ನಿತರ ಸೌಲಭ್ಯಗಳನ್ನು ಒದಗಿಸಲಾಗುತ್ತಿತ್ತು. ಪೇಟೆಗಳಲ್ಲಿ ಎರಡು ರೀತಿಯಲ್ಲಿ ವ್ಯಾಪಾರ ನಡೆಯುತ್ತಿತ್ತು. ವಾರದಲ್ಲೊಂದು ದಿನ ಸಂತೆ ನೆರೆದಾಗ ಹೊರಪೇಟೆಯಲ್ಲಿ ಅಥವಾ ಪೇಟೆಗಳ ಹೊರವಲಯದಲ್ಲಿ ವ್ಯಾಪಾರ ನಡೆಯುತ್ತಿತ್ತು, ಉಳಿದ ದಿನಗಳಲ್ಲಿ ಒಳಪೇಟೆಯಲ್ಲೇ ವ್ಯಾಪಾರವನ್ನು ನಡೆಸುತ್ತಿದ್ದರು. ವ್ಯಾಪಾರದ ವಸ್ತುಗಳನ್ನು ಸಂಗ್ರಹಿಸಲು ಉಗ್ರಾಣಗಳು ಇರುತ್ತಿದ್ದವು. ಪಟ್ಟಣಗಳಲ್ಲಿಯೂ ಇದೇ ರೀತಿಯ ಕೆಲಸಕಾರ್ಯಗಳು ನಡೆಯುತ್ತಿದ್ದವು. ಪಟ್ಟಣಗಳಲ್ಲಿ ಸಂತೆಗಳು ಜರುಗುತ್ತಿದ್ದವು. ಸಂತೆ ಕಟ್ಟಿಸಿ ಗ್ರಾಮವನ್ನೇ ಪಟ್ಟಣವನ್ನಾಗಿ ಪರಿವರ್ತಿಸುವ ಪ್ರಕ್ರಿಯೆಗಳೂ ನಡೆಯುತ್ತಿದ್ದವು. ಹೊಸದಾಗಿ ನಿರ್ಮಾಣಗೊಳ್ಳುವ ಪಟ್ಟಣಗಳು ಮೂಲಗ್ರಾಮದಿಂದ ಪ್ರತ್ಯೇಕವಾಗಿರುತ್ತಿದ್ದವು.[45] ವರ್ತಕರನ್ನು ಒಂದು ಕಡೆ ನೆಲೆಗೊಳಿಸುವುದೇ ಪಟ್ಟಣಗಳ ನಿರ್ಮಾಣದ ಮೂಲ ಉದ್ದೇಶವಾಗಿತ್ತು. ಪೇಟೆಗಳಲ್ಲಿ ಇದ್ದಂತೆ ಪಟ್ಟಣಗಳಲ್ಲಿಯೂ ವರ್ತಕರಿಗೆ ವಿಶೇಷ ಸೌಲಭ್ಯ, ವಸಲತ್ತುಗಳನ್ನು ನೀಡಲಾಗುತ್ತಿತ್ತು. ಪಟ್ಟಣ ನಿರ್ಮಾಣ ಕಾರ್ಯದಲ್ಲಿ ಗ್ರಾಮದ ಹಿರಿಯರು ಹಾಗೂ ಆಡಳಿತಾಧಿಕಾರಿಗಳು ವಿಶೇಷ ಆಸಕ್ತಿ ತೋರಿಸುತ್ತಿದ್ದರು. ಪೇಟೆ-ಪಟ್ಟಣಗಳಲ್ಲಿ ಮಾತ್ರವಲ್ಲದೆ ಬೇರೆ ಬೇರೆ ಸ್ಥಳಗಳಿಗೆ ಹೋಗಿ ವ್ಯಾಪಾರವನ್ನು ನಡೆಸುವ ವರ್ತಕರೂ ಇದ್ದರು. ಇವರು ವ್ಯಾಪಾರದ ವಸ್ತುಗಳನ್ನು ಪ್ರಾಣಿಗಳ (ಎತ್ತು, ಕತ್ತೆ, ಕುದುರೆ) ಮೂಲಕ, ಬಂಡಿಗಳ ಮೂಲಕ, ಅಥವಾ ತಾವೇ ಸ್ವತಹ ಹೊತ್ತುಕೊಂಡು ಕೊಂಡುಹೋಗುತ್ತಿದ್ದರು.[46] ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವಾಗ ಹಲವಾರು ದಿನ ಹಿಡಿಯುತ್ತಿದ್ದವು. ಆಗ ಮಧ್ಯಮಧ್ಯ ಆಯಾ ಊರುಗಳಲ್ಲಿ ತಂಗುವುದು ಅನಿವಾರ್ಯವಾಗುತ್ತಿತ್ತು. ಇಂಥ ಸಂದರ್ಭಗಳಲ್ಲಿ ವರ್ತಕರನ್ನು ಕಳ್ಳರು ಲೂಟಿ ಮಾಡುತ್ತಿದ್ದರು. ಕಳ್ಳರೊಡನೆ ಹೋರಾಡಿದ, ಹೋರಾಡಿ ಮಡಿದ ವರ್ತಕರನ್ನು ಉಲ್ಲೇಖಿಸುವ ಅನೇಕ ಶಾಸನಗಳು ಸಿಗುತ್ತವೆ.[47]

ವ್ಯಾಪಾರದ ಮೂಲಕ ಆರ್ಥಿಕ ಚಟುವಟಿಕೆಗಳು ಚುರುಕುಗೊಳ್ಳುವ ಕೆಲಸವನ್ನು ಪಟ್ಟಣಸ್ವಾಮಿ, ಮಂಡಲಸ್ವಾಮಿ ಮತ್ತು ನಾಡಸ್ವಾಮಿಗಳು ಮಾಡುತ್ತಿದ್ದರು.[48] ಪಟ್ಟಣ ಸ್ವಾಮಿಗಳು ಪಟ್ಟಣಗಳ ರಚನೆ, ಸಂತೆಯ ನಿರ್ಮಾಣ ಮತ್ತು ಸಂತೆಯ ಸಂಯೋಜನೆ ಕಾರ್ಯಗಳನ್ನು ಮಾಡುತ್ತಿದ್ದರು. ಪಟ್ಟಣಸ್ವಾಮಿ ಎನ್ನುವುದು ಒಂದು ಹುದ್ದೆ. ಈ ಹುದ್ದೆಯನ್ನು ಸಾಮಂತರು, ಗೌಡ, ಪ್ರಭುಗಳು ವರ್ತಕರಿಗೆ ನೀಡುತ್ತಿದ್ದರು. ಈ ಹುದ್ದೆಯನ್ನು ನೀಡುವುದರೊಂದಿಗೆ ಹಲವಾರು ರಿಯಾಯಿತಿ ಹಾಗೂ ಸೌಲಭ್ಯಗಳನ್ನೂ ನೀಡಲಾಗುತ್ತಿತ್ತು. ಸಾಮಾನ್ಯವಾಗಿ ಒಂದು ಪಟ್ಟಣಕ್ಕೆ ಒಬ್ಬನೇ ಪಟ್ಟಣಸ್ವಾಮಿ ಇರುತ್ತಿದ್ದನು. ಆದರೆ ಪಟ್ಟಣವು ದೊಡ್ಡದಾಗಿದ್ದರ ಒಬ್ಬನಿಗಿಂತ ಹೆಚ್ಚು ಪಟ್ಟಣಸ್ವಾಮಿಗಳಿರುತ್ತಿದ್ದರು. ಪಟ್ಟಣಸ್ವಾಮಿ ಸ್ಥಾನವು ಹೆಚ್ಚಾಗಿ ಆನುವಂಶಿಕವಾದದ್ದಾಗಿರುತ್ತಿತ್ತು. ಶಾಸನಗಳಲ್ಲಿ ನೂರಾರು ಪಟ್ಟಣಸ್ವಾಮಿಗಳ ಉಲ್ಲೇಖಗಳು ಕಂಡುಬರುತ್ತವೆ.[49] ಹೊಯ್ಸಳರ ಆಡಳಿತಾವಧಿಯಲ್ಲಿ ಹೆಚ್ಚಿನ ಸಂಖ್ಯೆಯ ಉಲ್ಲೇಖಗಳು ಸಿಗುತ್ತವೆ. ಮಂಡಲಸ್ವಾಮಿಗಳ ಹುದ್ದೆ ಪಟ್ಟಣಸ್ವಾಮಿಗಳಿಗಿಂತ ಉನ್ನತವಾಗಿದ್ದಿರಬೇಕೆಂದು ತೋರುತ್ತದೆ. ಪಟ್ಟಣಸ್ವಾಮಿಗಳ ಕಾರ್ಯಕ್ಷೇತ್ರ ಕೇವಲ ಗ್ರಾಮಕ್ಕೆ ಇಲ್ಲವೆ ಪಟ್ಟಣಕ್ಕೆ ಸೀಮಿತವಾಗಿದ್ದರೆ ಮಂಡಲಸ್ವಾಮಿಯರದ್ದು ಮಂಡಲಕ್ಕೆ ವ್ಯಾಪಿಸಿತ್ತು. ಮಂಡಲವು ನಾಡಿನ ಒಂದು ಭಾಗವಾಗಿತ್ತು. ಮಂಡಲದಲ್ಲಿ ಪಟ್ಟಣ ಕಟ್ಟಿಸುವ, ಸಂತೆ ಮಾಡಿಸುವ ಕೆಲಸವನ್ನು ಮಂಡಲಸ್ವಾಮಿಗಳು ಮಾಡುತ್ತಿದ್ದರು. ಆದರೆ ಸಮಸ್ತ ನಾಡಿನಲ್ಲಿ ಪಟ್ಟಣ ಕಟ್ಟಿಸುವ ಹಾಗೂ ಸಂತೆ ಕೂಡಿಸುವ ಕೆಲಸವನ್ನು ನಾಡಸ್ವಾಮಿಗಲು ಮಾಡುತ್ತಿದ್ದರು. ಈ ರೀತಿಯಾಗಿ ಪಟ್ಟಣ, ಮಂಡಲ ಮತ್ತು ನಾಡುಗಳಲ್ಲಿ ವ್ಯಾಪಾರ ಚಟುವಟಿಕೆಗಳು ನಡೆಯುತ್ತಿದ್ದವು. ಇದು ಅಧಿಕಾರದ ವಿಕೇಂದ್ರೀಕರಣವನ್ನು ಸೂಚಿಸುತ್ತದೆ. ಈ ಅಧಿಕಾರಿಗಳು ಅಧಿಕಾರ ಚಲಾಯಿಸುವವರಾಗಿರದೆ ವ್ಯಾಪಾರವನ್ನು ನಡೆಸುವವರಾಗಿದ್ದರು. ಇವರು ಅರಸ, ಪ್ರಜೆ ಮತ್ತು ವರ್ತಕರ ನಡುವಿನ ಬಹುಮುಖ್ಯವಾದ ಕೊಂಡಿಯಾಗಿದ್ದು, ಕೃಷಿಯೊಂದಿಗೆ ಕೃಷಿಯೇತರ ಚಟುವಟಿಕೆಗಳೂ ಚುರುಕುಗೊಳ್ಳುವಂತೆ ಮಾಡಿದರು.

 

[1] ವಿವಿಧ ಸ್ವರೂಪದ ನಗರಕೇಂದ್ರಗಳ ಕುರಿತು ಭಾರತದಲ್ಲಿ ಅನೇಕ ವಿದ್ವಾಂಸರು ಚರ್ಚೆ ನಡೆಸಿದ್ದಾರೆ. ಅವರಲ್ಲಿ ಎ. ಘೋಷ್, ವಿಜಯಕುಮಾರ್ ಟಾಕೂರ್, ಇಂದು ಬಂಗಾ ಮುಂತಾದವರನ್ನು ಪ್ರಮುಖವಾಗಿ ಹೆಸರಿಸಬಹುದಾಗಿದೆ. ಎ.ಘೋಷ್, ದಿ ಸಿಟಿ ಇನ್ ಅರ‍್ಲಿ ಹಿಸ್ಟಾರಿಕಲ್ ಇಂಡಿಯಾ, ಸಿಮ್ಲಾ, ೧೯೭೩; ವಿಜಯಕುಮಾರ್ ಟಾಕೂರ್, ಅರ್ಬನೈಸೇಷನ್ ಇನ್ ಏನ್‍ಶ್ಯಂಟ್ ಇಂಡಿಯಾ, ಡೆಲ್ಲಿ, ೧೯೮೧; ಇಂದು ಬಂಗಾ, ಸ್ಟಡೀಸ್ ಇನ್ ಅರ್ಬನ್ ಹಿಸ್ಟರಿ, ನವದೆಹಲಿ, ೧೯೯೧; ಓ.ಪಿ.ಪ್ರಸಾದ್ ಅವರ ಡಿಕೇ ಆಂಡ್ ರಿವೈವಲ್ ಆಫ್ ಅರ್ಬನ್ ಸೆಂಟರ್ಸ್ ಇನ್ ಮೆಡೀವಲ್ ಸೌತ್ ಇಂಡಿಯಾ- ಕ್ರಿ.ಶ. ೬೦೦-೧೨೦೦, ಪಾಟ್ನಾ, ೧೯೮೯, ಗ್ರಂಥವು ದಕ್ಷಿಣ ಭಾರತದ ಅದರಲ್ಲೂ ಕರ್ನಾಟಕದ ನಗರ ವ್ಯವಸ್ಥೆಯ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ.

[2] ಓ.ಪಿ. ಪ್ರಸಾದ್, ಪೂರ್ವೋಕ್ತ, ಪು. ೩೫-೫೯

[3] ಕೆ.ಎಸ್. ಶಿವಣ್ಣ, ಹೊಯ್ಸಳ ಯುಗದಲ್ಲಿ ನಗರ ಕೇಂದ್ರಗಳ ಹುಟ್ಟು-ಬೆಳವಣಿಗೆಗಳ ಹಿಂದಿನ ಶಕ್ತಿಗಳಾಗಿ ವಾಣಿಜ್ಯ, ಸಂಸ್ಕೃತಿ ಮತ್ತು ರಾಜ್ಯತಂತ್ರ, ಕರ್ನಾಟಕ ಚರಿತ್ರೆ, ಸಂಪುಟ ೨, (ಸಂ.)ಬಿ ಸುರೇಂದ್ರರಾವ್, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪು. ೨೦೦-೨೧೧

[4] ಓ.ಪಿ. ಪ್ರಸಾದ್, ಪೂರ್ವೋಕ್ತ, ಪು. ೭೪; ಜಿ. ಯಾಜ್ದಾನಿ (ಸಂ.) ದಿ ಅರ‍್ಲಿ ಹಿಸ್ಟರಿ ಆಫ್ ಡೆಕ್ಕಾನ್, ಲಂಡನ್, ೧೯೬೦, ಪು. ೪೦೧

[5] ನಗರೀಕರಣ ಪದವನ್ನು ಚರಿತ್ರೆಕಾರರು ಅನೇಕ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ‘ಗ್ರಾಮೀಣಪ್ರದೇಶ ಪಟ್ಟಣವಾಗಿ ಪರಿವರ್ತನೆಗೊಳ್ಳುವ ಪ್ರಕ್ರಿಯೆಯೇ ನಗರೀಕರಣ. ಇದು ನಿರಂತರ ಪ್ರಕ್ರಿಯೆಯಾಗಿದ್ದು ನಗರ ಬೆಳವಣಿಗೆಯ ಹೊರ ನೋಟದ ಮುಖಗಳನ್ನು ಸಂಕೇತಿಸುತ್ತದೆ. ನಗರ ಜೀವನ ಕ್ರಮವೇ ನಗರತ್ವ. ಇದು ನಗರ ಜೀವನ ಮಾದರಿಯನ್ನು ಸಂಕೇತಿಸುತ್ತದೆ. ನಗರತ್ವವು ನಗರ ಬೆಳವಣಿಗೆಯ ಒಳನೋಟ. ನಗರೀಕರಣ ಮತ್ತು ನಗರತ್ವ ಪರಸ್ಪರ ಪೂರಕವಾಗಿದ್ದು ನಗರ ವ್ಯವಸ್ಥೆ ರೂಪುಗೊಳ್ಳುವಂತೆ ಮಾಡುತ್ತವೆ, ಈ ವಿವರಣೆಯನ್ನು ವಿಜಯಕುಮಾರ್ ಟಾಕೂರ್ ಅವರ ಕೃತಿಯಲ್ಲಿ (ಪೂರ್ವೋಕ್ತ) ಕಾಣಬಹುದಾಗಿದೆ.

[6] ಎ.ಕ.೨, ಶ್ರವಣಬೆಳಗೊಳ ೨೪೪-೫, ೨೪೭, ಕ್ರಿ.ಶ. ೧೧೭೫; ಅದೇ, ೨೩೫-೬, ೨೫೨, ಕ್ರಿ.ಶ. ೧೧೮೫

[7] ನಗರೀಕರಣ ಪ್ರಕ್ರಿಯೆಯನ್ನು ಸೂಚಿಸುವ ಈ ಪದಗಳ ಉಲ್ಲೇಖ ಶಾಸನಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಅದೇ ರೀತಿ ಶಾಸನಗಳನ್ನು ಆಧರಿಸಿ ರಚನೆಗೊಂಡ ಕೃತಿಗಳಲ್ಲೂ ಇವುಗಳ ಕುರಿತಾದ ವಿವರವಾದ ಚರ್ಚೆ ಕಂಡುಬರುತ್ತದೆ. ಎ. ಅಪ್ಪಾದೊರೈ, ಎಕನಾಮಿಕ್ ಕಂಡೀಷನ್ಸ್ ಇನ್ ಸದರ್ನ್ ಇಂಡಿಯಾ, ಮದರಾಸು, ೧೯೩೬; ಜಿ.ಆರ್.ಕುಪ್ಪಸ್ವಾಮಿ, ಎಕನಾಮಿಕ್ ಕಂಡೀಷನ್ಸ್ ಇನ್ ಕರ್ನಾಟಕ, ಧಾರವಾಡ, ೧೯೭೫; ಜಿ.ಎಸ್. ದೀಕ್ಷಿತ್, ಲೋಕಲ್ ಸೆಲ್ಫ್ ಗೌರ್ನ್‍ಮೆಂಟ್ ಇನ್ ಮೆಡೀವಲ್ ಕರ್ನಾಟಕ, ಧಾರವಾಡ, ೧೯೬೪; ಎಸ್.ಗುರುರಾಜಾಚಾರ್, ಸಮ್ ಆಸ್ಪೆಕ್ಟ್ಸ್ ಆಫ್ ಎಕನಾಮಿಕ್ ಅಂಡ್ ಸೋಶ್ಯಲ್ ಲೈಫ್ ಇನ್ ಕರ್ನಾಟಕ, ಮೈಸೂರು, ೧೯೭೪; ಎಂ. ಚಿದಾನಂದಮೂರ್ತಿ, ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಮೈಸೂರು, ೧೯೭೯; ಬಿ.ಆರ್. ಹಿರೇಮಠ, ಶಾಸನಗಳಲ್ಲಿ ಕರ್ನಾಟಕದ ವರ್ತಕರು, ಧಾರವಾಡ, ೧೯೮೬

[8] ಬಿ.ಕೆ.ಪಾಂಡೇಯ, ಟೆಂಪಲ್ ಎಕಾನಮಿ ಅಂಡರ್ ದಿ ಚೋಳಾಸ್, ನವದೆಹಲಿ, ೧೯೮೪ಲ್ ಎ.ಇ.೧೯, ನಂ.೩೭, ನಂ.೨೨೧; ಎ.ಕ.೭, ಶಿಕಾರಿಪುರ್ತ ೧೩೬; ಎ.ಕ.೨, ಶ್ರವಣಬೆಳಗೊಳ ೩೫೫-೬, ೪೮೧-೨

[9] ಜಿ.ಎಂ. ಮೊರೇಸ್, ದಿ ಕದಂಬ ಕುಲ, ಮುಂಬಯಿ, ೧೯೩೧, ಪು. ೨೭೪; ಬಿ.ಎಲ್.ರೈಸ್, ಮೈಸೂರು ಆಂಡ್ ಕೂರ್ಗ್‍ ಫ್ರಮ್ ದಿ ಇನ್‍ಸ್ಕ್ರಿಪ್ಷನ್ಸ್, ಲಂಡನ್, ೧೯೦೯, ಪು.೧೮೧; ಎ.ಕ.೭, ಶಿಕಾರಿಪುರ ೧೨೩; ಎಂ.ಎ.ಆರ್. ೧೯೨೦, ಪು.೩೫

[10] ಎ.ಎಸ್.ಆಲ್ಟೇಕರ್, ದಿ ರಾಷ್ಟ್ರಕೂಟಾಸ್ ಆಂಡ್ ದೇಯರ್ ಟೈಮ್ಸ್, ಪೂಣಾ, ೧೯೬೭, ಪು. ೧೮೨

[11] ಅದೇ, ಪು. ೧೮೩

[12] ಬಿ.ಎ. ಸಾಲೆತ್ತೂರ್, ಏನ್‍ಶ್ಯಂಟ್ ಕರ್ನಾಟಕ, ಸಂಪುಟ. ೧, ಹಿಸ್ಟರಿ ಆಫ್ ತುಳುವ ಪೂಣಾ, ೧೯೩೬, ಪು. ೧೭೮

[13] ಅದೇ, ಪು. ೧೭೭

[14] ನಗರ ಪ್ರದೇಶಗಳ ಹುಟ್ಟಿಗೆ ಕಾರಣವಾದ ಅಂಶಗಳ ಕುರಿತು ಅನೇಕ ವಿಸ್ವಾಂಸರು ಅಧಯ್ಯನ ನಡೆಸಿದ್ದಾರೆ. ಅವರಲ್ಲಿ ಕೆಲವು ವಿದ್ವಾಂಸರನ್ನು ಇಲ್ಲಿ ಹೆಸರಿಸಲಾಗಿದೆ: ಬ್ರೂಸ್ ಟಿಗರ್, ಡಿಟರ್ಮಿನೆಂಟ್ಸ್ ಆಫ್ ಅರ್ಬನ್ ಗ್ರೋಥ್ ಇನ್ ಪ್ರಿ ಇಂಡಸ್ಟ್ರಿಯಲ್ ಸೊಸೈಟಿ, ಲಂಡನ್, ೧೯೭೩; ಗಿಡ್ಯಾನ್ ಸ್ಜೋಬರ್ಗ್, ದಿ ಪ್ರಿ ಇಂಡಸ್ಟ್ರೀಯಲ್ ಸಿಟಿ: ಪಾಸ್ಟ್ ಆಂಡ್ ಪ್ರೆಸೆಂಟ್, ನ್ಯೂಯಾರ್ಕ್, ೧೯೬೦; ಎ.ಘೋಷ್, ಪೂರ್ವೋಕ್ತ; ವಿಜಯಕುಮಾರ್ ಟಾಕೂರ್, ಪೂರ್ವೋಕ್ತ; ಆರ್.ಎಸ್. ಶರ್ಮ, ಅರ್ಬನ್ ಡಿಕೇ. ಡೆಲ್ಲಿ, ೧೯೮೭

[15] ಕೆ.ಎಸ್. ಶಿವಣ್ಣ, ಪೂರ್ವೋಕ್ತ, ಪು. ೨೦೫-೨೦೬ ಎ.ಕ.೭, (ಹೊಸ ಸರಣಿ), ಮಂಡ್ಯ ೭೧, ಕ್ರಿ.ಶ. ೧೨೫೧; ಎ.ಕ.೪, ಯಳಂದೂರು ೩೯, ಕ್ರಿ.ಶ. ೧೩೨೮; ಎ.ಕ. ೭, ಟಿ ನರಸೀಪುರ ೨೬೧, ಕ್ರಿ.ಶ. ೧೨೭೭; ಎ.ಕ೯, ಚನ್ನಪಟ್ಟಣ ೧೨, ಕ್ರಿ.ಶ. ೧೨೧೯; ಎ.ಕ.೯, ಚನ್ನಪಟ್ಟಣ ೭೩, ಕ್ರಿ.ಶ. ೧೩೧೮

[16] ವಿ. ಗೋರ್ಡನ್ ಚೈಲ್ಡ್, ದಿ ಅರ್ಬನ್ ರೆವಲ್ಯೂಷನ್ಮ್, ದಿ ಟೌನ್ ಪ್ಲಾನಿಂಗ್ ಜರ್ನಲ್, ಲಿವರ್‌ಪೂಲ್, ೨೧, ಏಪ್ರಿಲ್ ೧, ೧೯೫೦; ಮ್ಯಾನುಲ್, ಕಾಸ್ಟೆಲ್ಸ್, ಸಿಟಿ, ಕ್ಲಾಸ್ ಆಂಡ್ ಪವರ್, ನ್ಯೂಯಾರ್ಕ್, ೧೯೭೮; ಇಂದು ಬಂಗಾ, ಸ್ಟಡೀಸ್ ಇನ್ ಅರ್ಬನ್ ಹಿಸ್ಟರಿ, ನವದೆಹಲಿ, ೧೯೮೧

[17] ಕೆ.ಎಸ್. ಶಿವಣ್ಣ ಪೂರ್ವೋಕ್ತ, ಪು. ೨೦೬

[18] ನಗರಗಳ ಅವನತಿಯ ಕುರಿತು ಕೆಲವು ವಿದ್ವಾಂಸರು ಚರ್ಚೆ ನಡೆಸಿದ್ದಾರೆ. ವಿಜಯಕುಮಾರ್ ಟಾಕೂರ್ (ಪೂರ್ವೋಕ್ತ) ಅವರ ಪ್ರಕಾರ ನಗರಗಳ ಅನವನತಿಗೆ ಪ್ರಮುಖ ಕಾರಣಗಳೆಂದರೆ; ಸ್ವಾಭಾವಿಕ ಮತ್ತು ಭೌಗೋಳಿಕ, ರಾಜಕೀಯ, ವಿದೇಶಿ ಆಕ್ರಮಣ, ಊಳಿಗಪದ್ಧತಿ ಮತ್ತು ಧಾರ್ಮಿಕ ನೀತಿ, ಆರ್.ಎಸ್. ಶರ್ಮ ಅವರ (ಪೂರ್ವೋಕ್ತ) ಪ್ರಕಾರ ನಗರ ಪ್ರದೇಶಗಳ ಹುಟ್ಟಿಗೆ ಕಾರಣವಾದ ಅಂಶಗಳು ಕಣ್ಮರೆಯಾದಾಗ ಇಲ್ಲವೇ ದುರ್ಬಲಗೊಂಡಾಗ ಸಹಜವಾಗಿಯೇ ನಗರಗಳು ಅವನತಿ ಹೊಂದುತ್ತವೆ. ಈ ಅವನತಿಯು ಉತ್ಪದನಾ ವ್ಯವಸ್ಥೆಯ ಮೇಲೆ ಬದಲಾವಣೆಗಳನ್ನು ತಂದು ಸಮಾಜದಲ್ಲಿ ಸಂಕೀರ್ಣತೆ ಮತ್ತು ವಿರೋಧಾಬಾಸಗಳು ಕಾಣಿಸಿಕೊಳ್ಳುವುದಕ್ಕೆ ಕಾರಣವಾಗುತ್ತದೆ. ಓ.ಪಿ. ಪ್ರಸಾದ್ (ಪೂರ್ವೋಕ್ತ) ಅವರ ಪ್ರಕಾರ ವ್ಯಾಪಾರ-ವಾಣಿಜ್ಯ ಮತ್ತು ಕೈಗಾರಿಕೆಗಳ ಇಳಿಮುಖವೇ ನಗರಕೇಂದ್ರಗಳ ಅವನತಿಗೆ ಮೂಲಕಾರಣ.

[19] ಜೆ.ಡಿ.ಎಂ. ಡೆರೆಟ್, ದಿ ಹೊಯ್ಸಳಾಸ್, ಆಕ್ಸ್‌ಫರ್ಡ್, ೧೯೫೬, ಪು.೨೦

[20] ಬಿ.ಆರ್.ಹಿರೇಮಠ, ಶಾಸನಗಳಲ್ಲಿ ಕರ್ನಾಟಕದ ವರ್ತಕರು, ಧಾರವಾಡ, ೧೯೮೬, ಪು.೧೧; ಈ ಗ್ರಂಥವು ಶಾಸನಗಳಲ್ಲಿ ಮತ್ತು ಕಾವ್ಯಗಳನ್ನು ಆಧಾರವನ್ನಾಗಿಟ್ಟುಕೊಂಡು ರಚಿತವಾಗಿದೆ. ಇದರಲ್ಲಿ ವರ್ತಕರು, ವರ್ತಕ ಪ್ರಕಾರಗಳು, ವರ್ತಕ ಸಂಘಗಳು, ವರ್ತಕರ ವ್ಯಾಪಾರ ಸ್ವರೂಪ ಮತ್ತು ಅಧಿಕಾರ ಸ್ವರೂಪ, ವರ್ತಕರ ಸಾಮಾಜಿಕ, ಧಾರ್ಮಿಕ ಜೀವನ ಮುಂತಾದ ವಿಷಯಗಳ ಕುರಿತ ವಿವರವಾದ ಚರ್ಚೆ ಕಂಡುಬರುತ್ತದೆ.

[21] ಎ.ಕ.೭, ಶಿಕಾರಿಪುರ ೧೧೮, ಕ್ರಿ.ಶ. ೧೦೫೪

[22] ಕೆ.ಎ.ನೀಲಕಂಠಶಾಸ್ತ್ರಿ, ಫಾರೈನ್ ನೋಟೀಸಸ್ ಆಫ್ ಸೌತ್ ಇಂಡಿಯಾ, ಮದರಾಸು, ೧೯೩೯, ಪು.೧೩೯, ೧೪೩

[23] ಎ.ಕ.೨, ೩೩೫, ಕ್ರಿ.ಶ. ೧೧೯೫; ಎ.ಕ.೫, ಬೇಲೂರು ೧೧೭, ಕ್ರಿ.ಶ. ೧೧೩೬

[24] ಎಸ್. ಗುರುರಾಜಾಚಾರ್, ಪೂರ್ವೋಕ್ತ, ಪು. ೧೦೩-೧೧೦

[25] ಕೆ.ಎ.ನೀಲಕಂಠಶಾಸ್ತ್ರಿ, ಪೂರ್ವೋಕ್ತ, ಪು.೨೩; ಎ.ಅಪ್ಪಾದೊರೈ, ಪೂರ್ವೋಕ್ತ, ಸಂಪುಟ ೨, ಪು. ೫೬೬

[26] ಎಸ್. ಮಹಮ್ಮದ್ ಹುಸೈನ್ ನೈನಾರ್, ಅರಬ್ ಜಿಯೋಗ್ರಾಫರ್ಸ್ ನಾಲೇಜ್ ಆಫ್ ಸೌತ್ ಇಂಡಿಯಾ, ಮದರಾಸು, ೧೯೪೨, ಪು.೩೪, ೭೧, ೧೮೪-೧೮೫

[27] ಆರ್.ಸಿ. ಮಜುಂದಾರ್ (ಸಂ.), ಸ ಸ್ಟ್ರಗಲ್ ಫಾರ್ ಎಂಪಯರ್, ಮುಂಬಯಿ, ೧೯೫೭, ಪು. ೩೨೩

[28] ಅದೇ

[29] ಎ. ಅಪ್ಪಾದೊರೈ, ಪೂರ್ವೋಕ್ತ. ಪು. ೫೫೦-೫೫೧

[30] ಅದೆ, ಸಂಪುಟ ೧, ಪು.೪೧೭

[31] ಬಿ.ಆರ್. ಹಿರೇಮಠ, ಪೂರ್ವೋಕ್ತ, ಪು. ೧೧೪-೧೧೬

[32] ಎಸ್. ಗುರುರಾಜಾಚಾರ್, ಪೂರ್ವೋಕ್ತ, ಪು. ೧೧೨

[33] ಜಿ.ಎಸ್. ದೀಕ್ಷಿತ್, ಪೂರ್ವೋಕ್ತ, ಪು. ೧೪೦

[34] ಎಂ.ಎ.ಆರ್. ೧೯೧೨, ಪು. ೪೫, ಪ್ಯಾರಾ, ೯೧

[35] ಎ.ಕ.೯, ಚನ್ನರಾಯಪಟ್ಟಣ ೭೩, ಕ್ರಿ.ಶ. ೧೩೧೮

[36] ಎಸ್. ಗುರುರಾಜಾಚಾರ್, ಪೂರ್ವೋಕ್ತ, ಪು.೧೧೨

[37] ಸೌ.ಇ.ಇ. ೨೦, ೧೭೫, ಹಿರೇಬೇವಿನೂರ, ಕ್ರಿ.ಶ. ೧೧೯೦

[38] ಎ.ಕ. ೧೫, ಪು. ೯೮, ಕ್ರಿ.ಶ. ೧೦೭೫

[39] ಬಿ.ಆರ್.ಹಿರೇಮಠ, ಪೂರ್ವೋಕ್ತ, ಪು.೧೧೬

[40] ಅದೇ

[41] ತುಳುನಾಡಿನ ಶಾಸನಗಳು, ನಂ. ೩೬, ಮಂಗಳೂರು, ಕ್ರಿ.ಶ. ೧೨೦೪

[42] ಎ.ಕ.೧೩, ಪು.೨೬, ಕ್ರಿ.ಶ. ೧೨೦೪

[43] ಎ.ಕ೭, ಶಿವಮೊಗ್ಗ ೧೦, ಕ್ರಿ.ಶ. ೧೦೮೫.

[44] ಎಸ್. ಗುರುರಾಜಾಚಾರ್, ಪೂರ್ವೋಕ್ತ. ಪು.೧೧೧; ಬಿ.ಆರ್.ಹಿರೇಮಠ, ಪೂರ್ವೋಕ್ತ, ಪು.೧೧೭

[45] ಎ.ಕ.೯, ಚೆನ್ನಪಟ್ಟಣ ೭೧, ಕ್ರಿ.ಶ. ೧೩೩೧

[46] ಎಸ್. ಗುರುರಾಜಾಚಾರ್, ಪೂರ್ವೋಕ್ತ, ಪು. ೧೨೮-೧೨೯; ಕೆ.ಎ. ನೀಲಕಂಠಶಾಸ್ತ್ರಿ, ದಿ ಚೋಳಾಸ್, ಮದರಾಸು, ೧೯೫೫, ಪು.೫೯೪-೫೯೫

[47] ಎ.ಇ.೧೬, ಹೊಟ್ಟೂರ, ಕ್ರಿ.ಶ. ೧೦೦೭-೦೮; ಕ.ಇ.೪, ಎಮ್ಮಿಗನೂರ ೧೮, ಕ್ರಿ.ಶ. ೧೧೭೬; ಎ.ಕ.೭, ಹೊನ್ನಾಳಿ ೮೫, ಕ್ರಿ.ಶ. ೧೧೮೯; ವಡ್ಡಾರಾಧನೆಯ ಭದ್ರಬಾಹು ಭಟಾರರ ಕಥೆಯಲ್ಲಿ (ಪು.೭೬) ಮತ್ತು ನಯಸೇನನ ಧರ್ಮಾಮೃತದಲ್ಲಿ (ಪು.೨-೩೩) ಈ ಕುರಿತ ಉಲ್ಲೇಖಗಳು ಸಿಗುತ್ತವೆ.

[48] ಬಿ.ಆರ್. ಹಿರೇಮಠ, ಪೂರ್ವೋಕ್ತ, ಪು. ೧೩೨-೧೩೯

[49] ಬಿ.ಆರ್.ಹಿರೇಮಠ, (ಪೂರ್ವೋಕ್ತ) ಅವರ ಗ್ರಂಥದಲ್ಲಿ ಕಲ್ಯಾಣಿ ಚಾಲುಕ್ಯರು ಮತ್ತು ಹೊಯ್ಸಳರ ಅವಧಿಯಲ್ಲಿದ್ದ ಪಟ್ಟಣಸ್ವಾಮಿಗಳ ಅನೇಕ ಉಲ್ಲೇಖಗಳು ಕಂಡು ಬರುತ್ತವೆ. ಈ ಉಲ್ಲೇಖಗಳು ಎಫಿಗ್ರಾಫಿಯ ಕರ್ನಾಟಕ ಮತ್ತು ಸೌತ್ ಇಂಡಿಯನ್ ಇನ್‌ಸ್ಕ್ರಿಪ್ಷನ್ಸ್ ಸಂಪುಟಗಳನ್ನುನ್ ಆಧರಿಸಿವೆ. ಅವುಗಳಲ್ಲಿ ಕಂಡುಬರುವ ಪಟ್ಟಣ ಸ್ವಾಮಿಗಳಲ್ಲಿ ಕೆಲವರ ಹೆಸರೆಉಗಳು ಈ ಕೆಳಗಿನಂತಿವೆ; ನೊಕ್ಕಯ್ಯ, ನಾಗದೇವ, ಮಲ್ಲಿಸೆಟ್ಟಿ, ಮಾದಿಸೆಟ್ಟಿ, ನಾಗಿಸೆಟ್ಟಿ, ಸೆಟ್ಟಿಯಣ್ಣ, ನಂಜಸೆಟ್ಟಿ, ಕೀರ್ತಿಸೆರ್ಟ್ಟಿ, ಹೊಯ್ಸಳ ಸೆಟ್ಟಿ, ಮಾಚಿಸೆಟ್ಟಿ, ಮಹದೇವಸೆಟ್ಟಿ, ಸೀರೆಯಪದ್ಮಣ್ಣ, ಕಲಿಸೆಟ್ಟಿ ಮುಂತಾದವರು.