ಧರ್ಮವನ್ನು ಸಾಧನವನ್ನಾಗಿ ಇಟ್ಟುಕೊಂಡು ಸಮಾಜದಲ್ಲಿ ಯಜಮಾನಿಕೆಯನ್ನು ಸ್ಥಾಪಿಸುವುದೇ ಧಾರ್ಮಿಕ ಪ್ರಭುತ್ವ. ಇದು ಸಮಾಜದಲ್ಲಿ ಶಾಸ್ವತವಾದ ಪರಿಣಾಮಗಳನ್ನು ಬೀರುತ್ತವೆ. ಧಾರ್ಮಿಕ ಪ್ರಭುತ್ವವು ರಾಜಪ್ರಭುತ್ವಕ್ಕಿಂತಲೂ ಹೆಚ್ಚು ಅಧಿಕಾರ, ಸಾಮರ್ಥ್ಯವನ್ನು ಹೊಂದಿತ್ತು. ಅರಸರುಗಳು ತಮ್ಮನ್ನು ದೇವರಿಗೆ ಸಮಾನ ಅಥವಾ ದೇವರ ಪ್ರತಿನಿಧಿಗಳು ಮುಂತಾಗಿ ಕರೆದುಕೊಂಡಿರುವುದು ಈ ಕಾರಣದಿಂದಾಗಿಯೇ. ಧಾರ್ಮಿಕ ಪ್ರಭುತ್ವವು ಲೌಕಿಕದೊಂದಿಗೆ ಅಲೌಕಿಕ ಜಗತ್ತನ್ನು ನಿರ್ಮಿಸಿಕೊಂಡು ಜನರ ಬದುಕಿನ ಮೇಲೆ ನೇರ ಪ್ರವೇಶವನ್ನು ಪಡೆಯಿತು. ಆದರೆ ಧರ್ಮದ ಸರಳ ವ್ಯಾಖ್ಯಾನದಿಂದ ಈ ಸಾಂಸ್ಕೃತಿಕ ಯಜಮಾನಿಕೆಯನ್ನು ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ಧಾರ್ಮಿಕ ಪ್ರಭುತ್ವದ ಮೇಲ್ನೋಟಕ್ಕೆ ಕೇವಲ ಧಾರ್ಮಿಕ ಆಚರಣೆಗಳಿಗಷ್ಟೇ ಸೀಮಿತಗೊಂಡ ವ್ಯವಸ್ಥೆಯಂತೆ ಕಂಡುಬರುತ್ತದೆ. ಆದರೆ ನಿಜಾರ್ಥದಲ್ಲಿ ಅದು ಬದುಕಿನ ಎಲ್ಲ ಕ್ಷೇತ್ರಗಳಿಗೂ ವಿಸ್ತರಿಸಿಕೊಂಡಿರುತ್ತದೆ. ಜಾತಿ ವ್ಯವಸ್ಥೆ ಮತ್ತು ದೇವಾಲಯಗಳು ಧಾರ್ಮಿಕ ಪ್ರಭುತ್ವವನ್ನು ನಿರಂತರವಾಗಿ ಮುಂದುವರಿಯುವಂತೆ ಮಾಡಿದವು. ಅಧ್ಯಯನದ ಈ ಅವಧಿಯಲ್ಲಿ ಧರ್ಮವು ಸಮಾಜದಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತಿತ್ತು ಎನ್ನುವುದು ಸಂಬಂಧಿಸಿದ ದಾಖಲೆಗಳಿಂದ ತಿಳಿದುಬರುತ್ತದೆ. ರಾಷ್ಟ್ರಕೂಟರಿಂದ ಹೊಯ್ಸಳರವರೆಗಿನ ಎಲ್ಲ ಅರಸು ಮನೆತನಗಳೂ ಧರ್ಮಕ್ಕೆ ಪ್ರಧಾನ ಸ್ಥಾನವನ್ನು ನೀಡಿದ್ದವು. ಪ್ರಜೆಗಳನ್ನು ನಿಯಂತ್ರಣದಲ್ಲಿಡಲು ಧರ್ಮದ ಮೊರೆಹೋಗುವುದು ಅರಸು ಮನೆತನಗಳಿಗೆ ಅನಿವಾರ್ಯವಾಗಿತ್ತು. ಈ ಕಾರಣದಿಂದಾಗಿಯೇ ಧಾರ್ಮಿಕ ಸಾಮರಸ್ಯ ಎನ್ನುವ ಸಿದ್ಧಾಂತವು ಹುಟ್ಟಿಕೊಂಡಿತ್ತು. ಪ್ರಸ್ತುತ ಈ ಅಧ್ಯಾಯದಲ್ಲಿ ಧಾರ್ಮಿಕ ಸಾಮರಸ್ಯದ ಸ್ವರೂಪದ ಕುರಿತು ಚರ್ಚಿಸಲಾಗಿದೆ. ಅದೇ ರೀತಿ ಧರ್ಮಕ್ಕೆ ಸಂಬಂಧಿಸಿದ ಪ್ರಮುಖ ವಿಚಾರಗಳಾದ ದೇವಾಲಯಗಳು, ದೇವಸೇವಕಿಯರು ಹಾಗೂ ಗ್ರಾಮದೇವತೆಗಳ ಕುರಿತೂ ಚರ್ಚೆ ನಡೆಸಲಾಗಿದೆ. ಇದೊಂದು ಧರ್ಮದ ಚಾರಿತ್ರಿಕ ಮತ್ತು ಸಾಮಾಜಿಕ ವಿಶ್ಲೇಷಣೆಯೂ ಆಗಿದೆ. ಈ ವಿಶ್ಲೇಷಣೆ ನಡೆಸದೆ ಧಾರ್ಮಿಕ ಪ್ರಭುತ್ವದ ಕುರಿತು ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಧರ್ಮವು ಧಾರ್ಮಿಕ ಚೌಕಟ್ಟಿನ ಹೊರಗೂ ವ್ಯಾಖ್ಯಾನಗೊಳ್ಳಬೇಕು. ಆಗ ಮಾತ್ರ ಧಾರ್ಮಿಕ ನಂಬಿಕೆ ಎನ್ನುವುದು ಪರಸ್ಪರ ವಿರೋಧಗಳನ್ನು ಒಳಗೊಂಡ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳಿಂದ ಹುಟ್ಟಿಕೊಳ್ಳುವ ಸಾಂಸ್ಕೃತಿಕ ಆಚರಣೆ ಎನ್ನುವುದು ಸ್ಪಷ್ಟವಾಗಲು ಸಾಧ್ಯ.

೭.೧ ಧಾರ್ಮಿಕ ಸಾಮರಸ್ಯ

ಧಾರ್ಮಿಕ ಸಾಮರಸ್ಯವು ಪ್ರತಿಯೊಂದು ಅರಸುಮನೆತನದ ಆಳ್ವಿಕೆಯ ಸಂದರ್ಭದಲ್ಲೂ ಕಂಡುಬರುವ ಸಾಮಾನ್ಯ ಸಂಗತಿಯಾಗಿದೆ. ಆದರೆ ನಿಜಾರ್ಥದಲ್ಲಿ ಧಾರ್ಮಿಕ ಸಾಮರಸ್ಯವು ರೂಪುಗೊಂಡಿತ್ತೇ ಅಥವಾ ರೂಪುಗೊಂಡಿದ್ದರೆ ಅದರ ಸ್ವರೂಪವೇನು ಮುಂತಾದ ಪ್ರಶ್ನೆಗಳೂ ಹುಟ್ಟಿಕೊಳ್ಳುತ್ತವೆ. ಈ ವಿಶ್ಲೇಷಣೆಯ ಉದ್ದೇಶ ಧಾರ್ಮಿಕ ಸಾಮರಸ್ಯ ಸಿದ್ಧಾಂತವನ್ನು ಅಲ್ಲಗಳೆಯುವುದಲ್ಲ. ಬದಲಾಗಿ ಅದರ ಹಿಂದಿನ ಉದ್ದೇಶ ಹಾಗೂ ತೀರ್ಮಾನಗಳನ್ನು ಪತ್ತೆ ಹಚ್ಚುವುದು. ಒಂದು ಧರ್ಮ ಇತರ ಪ್ರದೇಶಗಳಿಗೆ ಪ್ರವೇಶ ಪಡೆದಾಗ ಅಲ್ಲಿನ ಜನರೊಡನೆ, ಸಂಪ್ರದಾಯ-ಆಚರಣೆಗಳೊಡನೆ ಕೆಲಮಟ್ಟಿನ ಸಮಾನತೆ ಸಂಬಂಧಗಳನ್ನು ಪ್ರದರ್ಶಿಸುವುದು ಸಹಜ. ಇದು ಹೊಸ ಸಾಂಸ್ಕೃತಿಕ ವಲಯಗಳು ಉದಿಸುವುದಕ್ಕೂ ಕಾರಣವಾಗುತ್ತದೆ. ಅಂಥ ಧರ್ಮಗಳು ಆಯಾ ರಾಜ್ಯದ ಅರಸರುಗಳ ರಾಜಾಶ್ರಯವನ್ನು ಯಾಚಿಸುತ್ತವೆ. ಈ ರೀತಿಯಾಗಿ ಅರಸರುಗಳು ರಾಜಾಶ್ರಯವನ್ನು ನೀಡಿರುವ ಉಲ್ಲೇಖಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಗುತ್ತವೆ. ರಾಜ್ಯದಲ್ಲಿ ಪ್ರಜೆಗಳ ಅಸಮಾಧಾನವನ್ನು ಎದುರಿಸಲು ಹಾಗೂ ಪದೇ ಪದೇ ಸಂಭವಿಸುತ್ತಿದ್ದ ಯುದ್ಧದ ಸಂದರ್ಭದಲ್ಲಿ ಪ್ರಜೆಗಳ ಬೆಂಬಲವನ್ನು ಪಡೆಯಲು ಅರಸರಿಗೆ ಎಲ್ಲ ಧರ್ಮಗಳಿಗೂ ಆಶ್ರಯವನ್ನು ನೀಡುವುದು ಅನಿವಾರ್ಯವಾಗಿರುತ್ತಿತ್ತು. ಸಾಮಾಜಿಕ, ಧಾರ್ಮಿಕ ಆಂದೋಲನಗಳು ಕಾಣಿಸಿಕೊಂಡ ಸಂದರ್ಭದಲ್ಲಿ ವಿವಿಧ ಧರ್ಮಗಳನ್ನು ಸಮಾನವಾಗಿ ಕಾಣುವುದು ಅರಸರ ಮೇಲಿನ ಸಾಂಸ್ಕೃತಿಕ ಒತ್ತಡವಾಗಿರುತ್ತಿತ್ತು. ಅದೇ ರೀತಿ ಯುದ್ಧದಲ್ಲಿ ಗೆದ್ದ ಪ್ರದೇಶಗಳಲ್ಲಿ ಅರಸರ ಕರ್ತವ್ಯವಾಗಿರುತ್ತಿತ್ತು. ಇದರಿಂದಾಗಿ ಆಂತರಿಕ ಭದ್ರತೆ ಹಾಗೂ ರಾಜ್ಯವಿಸ್ತರಣೆಯ ಸಂದರ್ಭಗಳಲ್ಲಿ ಧಾರ್ಮಿಕ ಸಾಮರಸ್ಯದ ನೀತಿಯನ್ನು ಮುಂದಿಟ್ಟುಕೊಳ್ಳುವುದು ರಾಜಪ್ರಭುತ್ವದ ಅನಿವಾರ್ಯತೆಗಳಲ್ಲಿ ಒಂದಾಗಿತ್ತು.

ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರು, ಕಲಚೂರಿಗಳು, ಯಾದವರು, ಹೊಯ್ಸಳರು ಹಾಗೂ ಎಲ್ಲ ಸಾಮಂತ ಅರಸು ಮನೆತನಗಳು ಧಾರ್ಮಿಕ ಸಾಮರಸ್ಯ, ಸಹಬಾಳ್ವೆಯ ಸಿದ್ಧಾಂತವನ್ನು ಮಂದಿಟ್ಟುಕೊಂಡೇ ಆಳ್ವಿಕೆ ನಡೆಸಿದ್ದರ ಬಗ್ಗೆ ಸಾಕಷ್ಟು ಆಧಾರಗಳು ಲಭ್ಯವಿವೆ. ಅರಸು ಮನೆತನಗಳು ಧಾರ್ಮಿಕ ಸಾಮರಸ್ಯ ಸಿದ್ಧಾಂತವನ್ನು ತಮ್ಮ ಆಳ್ವಿಕೆಯ ಅವಧಿಗಷ್ಟೇ ಸೀಮೀತಗೊಳಿಸಿಕೊಂಡಿದ್ದರು. ಇದರಿಂದಾಗಿ ಅರಸು ಮನೆತನದ ಅವನತಿಯೊಂದಿಗೆ ಧಾರ್ಮಿಕ ಸಾಮರಸ್ಯವೂ ಕಣ್ಮರೆಯಾಗುತ್ತಿತ್ತು. ಇದರಿಂದಾಗಿ ಧಾರ್ಮಿಕ ಸಾಮರಸ್ಯ ಎನ್ನುವುದು ರಾಜ ಪ್ರಭುತ್ವದ ಅನಿವಾರ್ಯತೆಗೋಸ್ಕರ ಸೃಷ್ಟಿಗೊಂಡ ಒಂದು ತಾತ್ಕಾಲಿಕ ವ್ಯವಸ್ಥೆ ಎನ್ನುವುದು ಸ್ಪಷ್ಟವಾಗುತ್ತದೆ. ಇದು ದೀರ್ಘಕಾಲೀನ ಪರಿಣಾಮಗಳನ್ನು ಬೀರುವಲ್ಲಿ ಯಶಸ್ವಿಯಾಗಲಿಲ್ಲ. ಈ ಕಾರಣದಿಂದಾಗಿ ಧಾರ್ಮಿಕ ಸಾಮರಸ್ಯ ಮೂಡುವ ಬದಲು ಧಾರ್ಮಿಕ ಬಿಕ್ಕಟ್ಟು, ಗೊಂದಲವಷ್ಟೇ ಕಾಣಿಸಿಕೊಳ್ಳುವಂತಾಯಿತು. ವಿವಿಧ ಧರ್ಮಗಳಿಗೆ ಸೇರಿದ ಜನರು ಅಧಿಕಾರ ಮತ್ತು ಸವಲತ್ತುಗಳಿಗಾಗಿ ಪರಸ್ಪರ ಹೊಡೆದಾಡುವ ಮಟ್ಟಕ್ಕೆ ಇಳಿದರು. ವೈದಿಕ ಧರ್ಮದೊಳಗೇ ಅನೇಕ ಉಪಶಾಖೆಗಳು ಕಾಣಿಸಿಕೊಂಡವು.[1] ಜೈನ, ಬೌದ್ಧ ಧರ್ಮಗಳು ರಾಜಾಶ್ರಯಕ್ಕಾಗಿ ಹಂಬಲಿಸುವ ಜೊತೆಗೆ ಪುರೋಹಿತಶಾಹಿಯ (ವೈದಿಕ ಧರ್ಮದ) ವಿರೋಧವನ್ನು ಎದುರಿಸಬೇಕಾಯಿತು. ಶೈವಧರ್ಮದೊಳಗೆ ಪಾಶುಪತ, ಕಾಳಾಮುಖ, ಲಾಕುಲ, ಮಾಹೇಶ್ವರ, ತಾಂತ್ರಿಕ ಮುಂತಾದ ಪಂಥಗಳು ಕಾಣಿಸಿಕೊಂಡವು. ವೈಷ್ಣವ ಧರ್ಮವು ಭಾಗವತ ಪಂಥ, ಶ್ರೀವೈಷ್ಣವ ಪಂಥ ಹಾಗೂ ದ್ವೈತ ಪಂಥ ಎಂಬ ಮೂರು ಶಾಖೆಗಳಲ್ಲಿ ಕಾಣಿಸಿಕೊಂಡಿತು, ಒಟ್ಟಾರೆಯಾಗಿ ಕ್ರಿ.ಶ. ೮ ರಿಂದ ೧೪ನೆಯ ಶತಮಾನಗಳ ನಡುವಿನ ಅವಧಿ ವಿವಿಧ ಧರ್ಮಗಳ ನಡುವಿನ ಸಂಬಂಧ ಹಾಗೂ ಅರಸರುಗಳು ಹೊಂದಿರುತ್ತಿದ್ದ ಧಾರ್ಮಿಕನೀತಿಯ ಕುರಿತಾದ ಸ್ಪಷ್ಟ ಮಾಹಿತಿಗಳನ್ನು ನೀಡುತ್ತದೆ.

ಪುರೋಹಿತಶಾಹಿ ಪ್ರಾಬಲ್ಯದ ವೈದಿಕ (ಹಿಂದೂ) ಧರ್ಮವನ್ನು ಮುಖ್ಯವಾಗಿ ಶೈವ (ಶಿವನ ಆರಾಧಕರು), ವೈಷ್ಣವ (ವಿಷ್ಣು ಮತ್ತು ಅವನ ಅವತಾರಗಳ ಪೂಜಕರು), ಶಾಕ್ತ (ಮಾತೃದೇವತೆಯ ವಿವಿಧ ರೂಪಗಳ ಆರಾಧನೆ ಮಾಡುವವರು) ಮತ್ತು ಸ್ಮಾರ್ತ (ಶಿವ, ವಿಷ್ಣು, ದೇವಿ ಈ ಮೂರು ರೂಪಗಳನ್ನು ಪೂಜಿಸುವವರು) ಎಂಬುದಾಗಿ ವರ್ಗೀಕರಿಸಲಾಗಿದೆ. ಇವರಲ್ಲೂ ಸೈದ್ಧಾಂತಿಕ ಭಿನ್ನತೆಗಳು ಮತ್ತು ಆಚರಣಾ ವಿವರಗಳ ದೃಷ್ಟಿಯಿಂದ ಹಲವಾರು ಉಪವಿಭಾಗಗಳು ರೂಪುಗೊಂಡಿದ್ದವು.[2] ಆದರೆ ಪುರೋಹಿತಶಾಹಿ ಈ ಎಲ್ಲಾ ಪಂಗಡ, ಉಪಪಂಗಡಗಳಲ್ಲೂ ಪ್ರಧಾನವಾಗಿತ್ತು. ವೈದಿಕ ಧರ್ಮವು ಇತರ ಧರ್ಮಗಳು ಅಸ್ತಿತ್ವದಲ್ಲಿದ್ದರೂ, ರಾಷ್ಟ್ರಕೂಟರಿಂದ ಹೊಯ್ಸಳರವರೆಗಿನ ಅವಧಿಯಲ್ಲಿ ವಿರೋಧಿಸಿ ಹುಟ್ಟಿಕೊಂಡಿದ್ದರು ಕ್ರಮೇಣ ಅವು ಬ್ರಾಹ್ಮಣ ಸಂಪ್ರದಾಯವನ್ನೇ ಅಳವಡಿಸಿಕೊಳ್ಳಬೇಕಾಯಿತು. ಅವು ಎಷ್ಟೇ ರಾಜಾಶ್ರಯವನ್ನು ಪಡೆದಿದ್ದರೂ ಬ್ರಾಹ್ಮಣ ಪಾರಮದ್ಯ ಸಮಾಜವನ್ನು ಎದುರಿಸಿ ನಿಲ್ಲುವಲ್ಲಿ ವಿಫಲವಾದವು. ವೈದಿಕ ಸಂಸ್ಕೃತಿ ಎಂದರೇನು, ಬ್ರಾಹ್ಮಣರು ಯಾರು, ಅವರ ಗೌರವವೇನು ಮುಂತಾದ ವಿಚಾರಗಳ ಬಗ್ಗೆ ಮನುಸ್ಮೃತಿಯಲ್ಲಿ ಹೇಳಲಾದ ಮಾತುಗಳು ವೈದಿಕ ಧರ್ಮವನ್ನು ಇನ್ನಷ್ಟು ಗಟ್ಟಿಗೊಳಿಸಿತು ಹಾಗೂ ಲೌಕಿಕ ಮತ್ತು ಪಾರಮಾರ್ಥಿಕ ಅಧಿಕಾರದ ವಾರಸುದಾರರನ್ನಾಗಿಯೂ ಮಾಡಿತು.[3] ಬ್ರಾಹ್ಮಣರಿಗೆ ರಾಜ್ಯ ವ್ಯವಸ್ಥೆಯಲ್ಲಿ ಶಾಶ್ವತ ನೆಲೆ ಸಿಕ್ಕಿದುದು ಮಾತ್ರವಲ್ಲದೆ ಸಾಮಾಜಿಕ ನಿಯಂತ್ರಣದ ಅಧಿಕಾರವೂ ಪ್ರಾಪ್ತವಾಯಿತು. ಇದು ರಾಜ್ಯದಲ್ಲಿ ಎರಡು ಶಕ್ತಿಗಳ ಅಂದರೆ, ರಾಜಪ್ರಭುತ್ವ ಮತ್ತು ಧಾರ್ಮಿಕ ಪ್ರಭುತ್ವದ ಹುಟ್ಟಿಗೂ ಕಾರನವಾಯಿತು. ರಾಜ್ಯ ವ್ಯವಸ್ಥೆಯನ್ನು ನಿಯಂತ್ರಣದಲ್ಲಿಡುವ ಸಾಮರ್ಥ್ಯ ಬ್ರಾಹ್ಮಣರಿಗೆ ಇದೆ ಎನ್ನುವುದಾಗಿ ಮನುಸ್ಮೃತಿಯು ಹೇಳುತ್ತದೆ.[4] ಅದರ ಪ್ರಕಾರ, “ಬ್ರಾಹ್ಮಣನು ದೇವರಿಗೆ ಸಮಾನ; ಈ ಲೋಕಕ್ಕೆ ಪ್ರಮಾಣಭೂತನು. ಲೋಕದೇವತೆಗಳೆಲ್ಲವೂ ಬ್ರಾಹ್ಮಣರನ್ನೇ ಆಶ್ರಯಿಸಿದೆ. ಜೀವದಾಸೆ ಇರುವ ಯಾರೂ ಅವರನ್ನು ಕೆಣಕಬಾರದು. ಬ್ರಾಹ್ಮಣನು ಎಷ್ಟೇ ಮೂರ್ಖ, ದುರಾಚಾರಿ ಮತ್ತು ಅವಿದ್ಯಾವಂತನಾದರೂ ಪೂಜ್ಯನೇ ಆಗಿರುತ್ತಾನೆ.ಬ್ರಾಹ್ಮಣನು ಎಂಥ ಅಪರಾಧ ಮಾಡಿದರೂ ತನ್ನ ಮಂತ್ರಗಳಿಂದ ಮತ್ತೆ ಪೂಜ್ಯನಾಗಿ ದೇವನಾಗುವನು. ಸೊಕ್ಕಿದ ಕ್ಷತ್ರಿಯರನ್ನು ಬ್ರಾಹ್ಮಣನು ಅಂಕೆಯಲ್ಲಿ ತರಬಲ್ಲನು. ಬ್ರಹ್ಮನಿಂದ ಕ್ಷತ್ರಿಯನು ಜನಿಸಿದನು. ಬ್ರಹ್ಮನೂ ಬ್ರಾಹ್ಮಣನೂ ಸಮ. ಬ್ರಾಹ್ಮಣನಾದವನು ಎಂಥ ಘೋರ ಅಪರಾಧ ಮಾಡಿದರೂ ಅವನಿಗೆ ಮರಣ ದಂಡನೆ ಕೊಡಬಾರದು. ಬ್ರಾಹ್ಮಣರ ಪೀಡೆಯಿಂದ ಯಾವುದೇ ವೃದ್ಧಿ ಇಲ್ಲ. ಬ್ರಾಹ್ಮಣರು ಸಿಟ್ಟಾದರೆ ಲೋಕಾಂತರವನ್ನು ಸೃಷ್ಟಿಸಬಹುದು. ದೇವರು ತಮ್ಮ ದೈವತ್ವವನ್ನು ಕಳೆದುಕೊಳ್ಳಬಹುದು”. ಮನುಸ್ಮೃತಿಯ ಈ ಹೇಳಿಕೆ ಬೌದ್ಧ, ಜೈನ ಹಾಗೂ ವೀರಶೈವರಿಂದ ತೀವ್ರ ವಿರೋಧವನ್ನು ಎದುರಿಸಿದರೂ ಕೆಲವೊಂದು ಏರಿಳಿತಗಳೊಂದಿಗೆ ಉಳಿದುಕೊಂಡೇ ಬಂತು.

ರಾಷ್ಟ್ರಕೂಟರ ಆಳ್ವಿಕೆಯ ಅವಧಿಯಲ್ಲಿ ಬೌದ್ಧಧರ್ಮವು ಪ್ರೋತ್ಸಾಹವನ್ನು ಕಂಡಿತಾದರೂ ವೈದಿಕ ಮತ್ತು ಜೈನ ಧರ್ಮಗಳು ಹೆಚ್ಚಿನ ಪ್ರಾಧಾನ್ಯತೆಯನ್ನು ಪಡೆದುಕೊಂಡಿದ್ದವು. ಈ ಎರಡು ಧರ್ಮಗಳನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ನೂರಾರು ದೇವಾಲಯಗಳು, ಬಸದಿಗಳು ನಿರ್ಮಾಣಗೊಂಡವು.[5] ಜಿನಸೇನ, ಗುಣಭದ್ರ ಮುಂತಾದವರು ರಾಷ್ಟ್ರಕೂಟರ ಅವಧಿಯಲ್ಲಿ ಪ್ರಸಿದ್ಧಿಗೆ ಬಂದ ಜಿನರಾಗಿದ್ದರು. ಶೈವಧರ್ಮವು ಹೆಚ್ಚು ಪ್ರಚಾರಗೊಳ್ಳುತ್ತಿದ್ದಂತೆ ಜೈನ ಧರ್ಮವು ಪ್ರಚಾರವನ್ನು ಕಳೆದುಕೊಳ್ಳಲಾರಂಭಿಸಿತು. ಜೈನರ ಕಠೋರ ಜೀವನ ನಿಯಮಗಳು ಜನರ ಹಾಗೂ ಅರಸರ ಆಶ್ರಯ ತಪ್ಪಿಹೋಗುವುದಕ್ಕೆ ಒಂದು ಕಾರಣವಾಯಿತು. ಹನ್ನೊಂದು ಮತ್ತು ಹನ್ನೆರಡನೆಯ ಶತಮಾನಗಳಲ್ಲಿ ಅಂದರೆ, ಕಲ್ಯಾಣಿ ಚಾಲುಕ್ಯರ ಅವಧಿಯಲ್ಲಿ ಪಾಶುಪತ ಶೈವಮತದ ಕಾಳಾಮುಖ ಪಂಥವು ಪ್ರಾಧಾನ್ಯತೆಯನ್ನು ಗಳಿಸಿಕೊಂಡಿತ್ತು. ಇದು ವೀರಶೈವ ಮತದ ಅಭಿವೃದ್ಧಿಗೂ ಕಾರಣವಾಯಿತು. ಕಲಚೂರಿಗಳ ಆಳ್ವಿಕೆಯಲ್ಲಿ ಬಸವೇಶ್ವರರಿಂದ ವೀರಶೈವ ಧರ್ಮವು ಒಂದು ಆಂದೋಲನವಾಗಿ ಹುಟ್ಟಿಕೊಂಡಿತು. ಇದು ೧೨ನೆಯ ಶತಮಾನದಲ್ಲಿ ಬ್ರಾಹ್ಮಣ ಸಾಂಪ್ರದಾಯಿಕತೆಯನ್ನು ಪ್ರಶ್ನಿಸಿ ಹುಟ್ಟಿಕೊಂಡ ಧಾರ್ಮಿಕ ಆಂದೋಲನ.[6]ಹೊಯ್ಸಳರ ಆಳ್ವಿಕೆಯಲ್ಲೂ ಜೈನ, ವೈಷ್ಣವ ಮತ್ತು ಶೈವ ಧರ್ಮಗಳು ಪ್ರಾಧಾನ್ಯತೆಯನ್ನು ಗಳಿಸಿಕೊಂಡಿದ್ದವು ಎನ್ನುವುದು ತಿಳಿದುಬರುತ್ತದೆ.[7] ಅರಸರು ವೈವಾಹಿಕ ಸಂಬಂಧಗಳ ಮೂಲಕವೂ ವಿವಿಧ ಧರ್ಮಗಳೊಂದಿಗೆ ಉತ್ತಮ ಉದಾಹರಣೆಯೆಂದರೆ ಹೊಯ್ಸಳ ಅರಸ ವಿಷ್ಣುವರ್ಧನ. ವಿಷ್ಣುವರ್ಧನನು ವಿವಿಧ ಧರ್ಮಗಳಿಗೆ ಸೇರಿದ ರಾಜಕುಮಾರಿಯರನ್ನು ಮದುವೆಯಾದ ಉಲ್ಲೇಖಗಳು ಶಾಸನಗಳಲ್ಲಿ ಸಿಗುತ್ತವೆ.[8] ಈ ಉಲ್ಲೇಖಗಳು ಧಾರ್ಮಿಕ ಸಾಮರಸ್ಯ ನೀತಿಯ ಉದ್ದೇಶಗಳನ್ನು ಸ್ಪಷ್ಟಗೊಳಿಸುತ್ತವೆ. ಅರಸರು ಅನ್ಯಧರ್ಮ ಸಹಿಷ್ಣುಗಳಾಗಿದ್ದರು ಎನ್ನುವುದು ಧರ್ಮವು ಹೊಂದಿದ್ದ ಸ್ಥಾನ ಹಾಗೂ ರಾಜಪ್ರಭುತ್ವಕ್ಕೆ ಅದರ ಅನಿವಾರ್ಯತೆ ಈ ಎರಡು ಅಂಶಗಳನ್ನು ಸೂಚಿಸುತ್ತದೆ. ಇದರಿಂದಾಗಿ ಧಾರ್ಮಿಕ ಸಾಮರಸ್ಯ ನೀತಿಯು ಪ್ರಭುತ್ವದ ಅಗತ್ಯಗಳನ್ನು ಪೂರೈಸುತ್ತಿತ್ತೇ ವಿನಹ ಪ್ರಜೆಗಳದ್ದಲ್ಲ ಎನ್ನುವುದು ತಿಳಿದುಬರುತ್ತದೆ. ಧರ್ಮವು ಅತ್ಯಂತ ಸೂಕ್ಷ್ಮ ವಿಚಾರಗಳನ್ನು ಒಳಗೊಂಡಿರುವುದಾಗಿ ಧಾರ್ಮಿಕ ಸಾಮರಸ್ಯ ಎನ್ನುವ ಪ್ರಭುತ್ವದ ಹಿನ್ನೆಲೆಯ ಸರಳ ವ್ಯಾಖ್ಯಾನದಿಂದ ಅದನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆಳುವ ವರ್ಗವು ತನ್ನ ಸೈನಿಕ ಬಲದಿಂದ ಪ್ರಜೆಗಳನ್ನು ಅಧೀನದಲ್ಲಿಡಲು ವಿಫಲವಾದಾಗ ಧರ್ಮದ ಮೊರೆಹೋಗುವುದು ಸಹಜ. ಈ ಪ್ರಕ್ರಿಯೆ ಧರ್ಮವನ್ನು ಮತ್ತಷ್ಟು ಬಲಗೊಳಿಸಿ ಜನರ ಬದುಕಿನಲ್ಲಿ ಕೇಂದ್ರ ಸ್ಥಾನವನ್ನು ಪಡೆದುಕೊಳ್ಳುವಂತೆ ಮಾಡಿತು.[9]

೭.೨ ದೇವಾಲಯಗಳು

ದೇವಾಲಯಗಳ ಹುಟ್ಟು ಮತ್ತು ಬೆಳವಣಿಗೆ, ನಿರ್ಮಾಣ ಚಟುವಟಿಕೆಗಳು, ಕಾರ್ಯ ಚಟುವಟಿಕೆಗಳು ಹಾಗೂ ಅವು ಜನತೆಯ ಆರ್ಥಿಕ, ಸಾಮಾಜಿಕ ಜೀವನದ ಮೇಲೆ ಬೀರಿದ ಪರಿಣಾಮಗಳ ಅಧ್ಯಯನ ಕೈಗೊಂಡಾಗ ಕೆಲವೊಂದು ಕುತೂಹಲಕಾರಿ ಸಂಗತಿಗಳು ಗೋಚರಿಸುತ್ತವೆ.[10] ದೇವಾಲಯಗಳು ಕೇವಲ ಪೂಜಾಸ್ಥಾನಗಳು ಮಾತ್ರವಲ್ಲ ಎನ್ನುವುದು ಆಗ ಮಾತ್ರ ಸ್ಪಷ್ಟವಾಗಲು ಸಾಧ್ಯ. ಅವು ಧಾರ್ಮಿಕ ಸಂಸ್ಥೆಗಳಾಗಿರುವುದರ ಜೊತೆಗೆ ಸಾಮಾಜಿಕ ಮತ್ತು ಆರ್ಥಿಕ ಸಂಸ್ಥೆಗಳೂ ಆಗಿರುತ್ತಿದ್ದವು.[11] ರಾಜಪ್ರಭುತ್ವ ಮತ್ತು ಧಾರ್ಮಿಕ ಪ್ರಭುತ್ವವನ್ನು ಬಲಪಡಿಸುವ ಕೆಲಸವನ್ನು ದೇವಾಲಯಗಳು ವ್ಯವಸ್ಥಿತವಾಗಿ ಮಾಡಿದವು. ಜನರ ನಡವಳಿಕೆಗೆ ನೀತಿ ಸಂಹಿತೆಯನ್ನು ರೂಪಿಸುವ ಜವಾಬ್ದಾರಿಯನ್ನು ದೇವಾಲಯಗಳು ಹೊತ್ತವು. ಆ ನೀತಿ ಸಂಹಿತೆಗಳು ವೈದಿಕ ಗ್ರಂಥಗಳಲ್ಲಿ ಉಲ್ಲೇಖಿತವಾದ ವೈದಿಕ ಆದರ್ಶಗಳನ್ನು ಪ್ರತಿನಿಧಿಸುತ್ತಿದ್ದವು. ಕರ್ನಾಟಕದಲ್ಲಿ. ದೇವಾಲಯಗಳ ನಿರ್ಮಾಣಕ್ಕೆ ಪ್ರೇರಣೆ ದೊರೆತದ್ದು ಲಕುಲೀಶ ಪಾಶುಪತ ಶೈವಗುರುಗಳಿಂದ. ದೇವಾಲಯಗಳ ಜೊತೆ ಜೊತೆಗೇ ಮಠಗಳೂ ಕಾಣಿಸಿಕೊಂಡವು. ಕ್ರಿ.ಶ. ೭ನೆಯ ಶತಮಾನದಿಂದೀಚೆಗೆ ಮಠಗಳು ದೇವಾಲಯಗಳ ಅಂಗಸಂಸ್ಥೆಗಳಾಗಿ ಕಾಣಿಸಿಕೊಂಡವು. ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರು, ಕಲಚೂರಿಗಳು, ಹೊಯ್ಸಳರ ಹಾಗೂ ಸಾಮಂತ ಅರಸು ಮನೆತನಗಳು ದೇವಾಲಯಗಳ ನಿರ್ಮಾಣ ಹಾಗೂ ಅವುಗಳ ಪೋಷಣೆಗೆ ಪ್ರಥಮ ಆದ್ಯತೆಯನ್ನು ನೀಡುತ್ತಿದ್ದರು. ದೇವಾಲಯಗಳಿಗೆ ದಾನದತ್ತಿಗಳನ್ನು ನೀಡಿ ಅದನ್ನು ಒಂದು ಸಂಸ್ಥೆಯನ್ನಾಗಿ ಬೆಳೆಸಿದರು. ಮಧ್ಯಕಾಲೀನ ರಾಜ್ಯ ವ್ಯವಸ್ಥೆಯಲ್ಲಿ ರಾಜಪ್ರಭುತ್ವದಷ್ಟೇ ಪ್ರಮುಖ ಸ್ಥಾನವನ್ನು ದೇವಾಲಯಗಳು ಪಡೆದುಕೊಂಡಿದ್ದವು.

ದೇವಾಲಯಗಳು ಗ್ರಾಮಗಳ ಆಡಳಿತ ಮತ್ತು ಜಾತಿ ಕಟ್ಟಳೆಯ ಉನ್ನತ ನ್ಯಾಯಾಲಯಗಳಾಗಿದ್ದವು. ದೇವಾಲಯದ ಕೆಲಸಕಾರ್ಯಗಳಲ್ಲಿ ಭಾಗವಹಿಸುವುದು ಜಾತಿಯನ್ನು ಅವಲಂಬಿಸಿಕೊಂಡಿರುತ್ತಿತ್ತು. ಜಾತಿಯ ಆಧಾರದ ಮೇಲೆಯೇ ವಿವಿಧ ಜನವರ್ಗದವರು ದೇವಾಲಯಗಳಲ್ಲಿ ಹಕ್ಕನ್ನು ಅನುಭವಿಸಬೇಕಾಗಿತ್ತು. ಇದನ್ನು ಈ ರೀತಿ ವರ್ಗೀಕರಿಸಬಹುದಾಗಿದೆ.[12]

೧. ಬ್ರಾಹ್ಮಣರಿಗೆ ಮಾತ್ರ ಗರ್ಭಗುಡಿಯೊಳಗೆ ಪ್ರವೇಶಿಸಲು ಮತ್ತು ವಿಗ್ರಹಕ್ಕೆ ಪೂಜೆ ಮಾಡಲು ಅವಕಾಶವಿತ್ತು.

೨. ಅವರ ಕೆಳಗಿನ ಅಂತಸ್ತಿನವರು ಗರ್ಭಗುಡಿಯ ಮುಂದೆ ನಿಲ್ಲಬಹುದಿತ್ತು. ಆದರೆ ಒಳಗೆ ಹೋಗುವಂತಿರಲಿಲ್ಲ.

೩. ಮೂರನೆಯ ಅಂತಸ್ತಿನ ಜನರು ದೇವಾಲಯದ ಪ್ರಾಂಗಣದಲ್ಲಿ ಸೇರಲು ಅವಕಾಶವಿತ್ತು. ಆದರೆ ದೇವಾಲಯದ ಮುಖ್ಯಮಂದಿರದೊಳಕ್ಕೆ ಹೋಗಲು ಅವಕಾಶವಿರಲಿಲ್ಲ.

೪. ಇನ್ನೂ ಕೆಳ ಅಂತಸ್ತಿನವರು ದೇವಾಲಯದ ಪೌಳಿ ಆಚೆಯೇ ನಿಲ್ಲಬೇಕಾಗಿತ್ತು.

೫. ಅಸ್ಪೃಶ್ಯರು ದೇವಾಲಯದ ಎಷ್ಟೆಷ್ಟೋ ಅಂತರದಲ್ಲಿ ನಿಲ್ಲಬೇಕಾಗಿತ್ತು. ದೇವಾಲಯದ ಬೀದಿಗೆ ಹೋಗಲು ಕೂಡ ಅವರಿಗೆ ಸ್ವಾತಂತ್ರ್ಯ ಇರಲಿಲ್ಲ.

ಜಾತಿ ವ್ಯವಸ್ಥೆ ಮತ್ತು ದೇವಾಲಯಗಳು ಒಟ್ಟೊಟ್ಟಿಗೆ ಸಾಗುತ್ತಿದ್ದವು ಎನ್ನುವುದು ಮೇಲಿನ ವರ್ಗೀಕರಣದಿಂದ ಸ್ಪಷ್ಟವಾಗುತ್ತದೆ. ಪ್ರಜೆಗಳಲ್ಲಿ ಭಯ, ಭಕ್ತಿ ಮೂಡುವಂತೆ ಮಾಡಿ ಆ ಮೂಲಕ ಪ್ರಭುತ್ವವನ್ನು ಒಪ್ಪಿಕೊಳ್ಳುವಂತೆ ಮಾಡುವ ಕೆಲಸವನ್ನು ದೇವಾಲಯಗಳು ಮಾಡುತ್ತಿದ್ದವು. ರಾಜಪ್ರಭುತ್ವಕ್ಕೆ ದೇವಾಲಯಗಳು ಅನಿವಾರ್ಯವಾದ್ದರಿಂದಾಗಿ ಅಪರವಾದ ದಾನದತ್ತಿಗಳನ್ನು ನೀಡಲಾಗುತ್ತಿತ್ತು. ದೇವಾಲಯದ ಕೆಲಸ ಪುಣ್ಯದ, ಮೋಕ್ಷ ಲಭಿಸುವ ಕೆಲಸ ಎನ್ನುವ ಧಾರ್ಮಿಕ ಸಂದೇಶವನ್ನು ಸಾರಲಾಗಿತ್ತು. ಪ್ರಜೆಗಳು ದೇವಾಲಯಗಳನ್ನು ಶಾಸನಬದ್ಧ ಮತ್ತು ವಿಶ್ವಾಸಾರ್ಹ ಎಂಬುದಾಗಿ ನಂಬಿ ಗೌರವ, ವಿಧೇಯತೆ ತೋರಿಸುತ್ತಿದ್ದರು. ದೇವಾಲಯಗಳನ್ನು ಅಗೌರವಿಸಿದರೆ ಕಠಿಣ ಶಿಕ್ಷೆಯನ್ನು ನೀಡಲಾಗುತ್ತಿತ್ತು. ಈ ಕಾರಣದಿಂದಾಗಿ ದೇವಾಲಯಗಳು ಹರಸುವ ಮತ್ತು ಶಪಿಸುವ ಕೇಂದ್ರಗಳೂ ಆಗಿದ್ದವು.

ದೇವಾಲಯಗಳು ಅನೇಕ ಮೂಲಗಳಿಂದ ಸಂಪತ್ತನ್ನು ಸಂಗ್ರಹಿಸುತ್ತಿದ್ದವು.[13] ಆ ಮೂಲಗಳೆಂದರೆ, ಅರಸರು, ಅಧಿಕಾರಿಗಳು ನೀಡುತ್ತಿದ್ದ ದಾನದತ್ತಿಗಳು, ವ್ಯಾಪಾರಸ್ಥರು ವೈಯಕ್ತಿಕವಾಗಿ ನೀಡುತ್ತಿದ್ದ ಕೊಡುಗೆಗಳು, ವರ್ತಕ ಸಂಘಗಳ ಕೊಡುಗೆಗಳು, ಶ್ರೀಮಂತ ವರ್ಗಗಳು ನೀಡುತ್ತಿದ್ದ ದಾನಗಳು ಮುಂತಾದವು. ಕೊಡುಗೆಗಳು ಹಣ ಮತ್ತು ವಸ್ತು ರೂಪದಲ್ಲಿ ಇರುತ್ತಿದ್ದವು. ಹಳ್ಳಿಗಳು, ಹೊಲಗದ್ದೆಗಳು, ಚಿನ್ನ ಮತ್ತು ಇತರ ಆಭರಣಗಳು, ಹಣ, ಗೋವು, ದವಸಧಾನ್ಯಗಳು ಮುಂತಾದವು ದೇವಾಲಯಗಳ ಪ್ರಮುಖ ಸಂಪತ್ತುಗಳಾಗಿದ್ದವು. ದೇವಾಲಯಗಳಿಗೆ ಕೆಲವು ಕೆರೆ, ಬಾವಿಗಳನ್ನು ಸೀಮಿತವಾಗಿಡಲಾಗುತ್ತಿತ್ತು. ಅಂಥ ಕೆರೆ, ಬಾವಿಗಳನ್ನು ಬಳಸುವ ಹಕ್ಕು ಬ್ರಾಹ್ಮಣರಿಗೆ ಮಾತ್ರ ಇರುತ್ತಿತ್ತು. ಅದೇ ರೀತಿ ನೀರಾವರಿಗೆ ಸಂಬಂಧಿಸಿದ ಅಧಿಕಾರವೂ ದೇವಾಲಯಗಳಿಗಿತ್ತು. ನೀರಾವರಿಗೆ ಸಂಬಂಧಿಸಿದ ನೀರು ಮೊದಲು ದೇವಾಲಯದ ಅಧೀನದಲ್ಲಿರುವ ಭೂಮಿಗೆ ಹೋಗಿ ನಂತರ ಇತರ ಜಮೀನುಗಳಿಗೆ ಹೋಗಬೇಕಾಗಿತ್ತು.[14] ಇಂಥ ಇನ್ನೂ ಅನೇಕ ಅಧಿಕಾರ, ಸವಲತ್ತುಗಳನ್ನು ದೇವಾಲಯಗಳು ಪಡೆದುಕೊಂಡಿದ್ದವು.

ದೇವಾಲಯಗಳು ಬಹುಮುಖ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದವು ಎನ್ನುವುದು ತಿಳಿದುಬರುತ್ತದೆ. ದೇವಾಲಯಗಳಲ್ಲಿ ಹಲವಾರು ಉದ್ದೇಶಗಳಿಗೆ ನೌಕರರು ಇರುತ್ತಿದ್ದರು. ಇವರಲ್ಲಿ ಪುರೋಹಿತರು, ಸಂಗೀತಗಾರರು, ನರ್ತಕಿಯರು, ಅಡುಗೆಯವರು, ದೀಪ ಹಚ್ಚುವವರು, ಕಸ ಗುಡಿಸುವವರು, ಕಾವಲುಗಾರರು ಮುಂತಾದವರಿರುತ್ತಿದ್ದರು.[15] ದೇವಾಲಯಗಳ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಠಗಳಲ್ಲಿ (ಶೈಕ್ಷಣಿಕ ಸಂಸ್ಥೆಗಳು) ಸ್ಥಾನಚಾರ್ಯರು, ವಿದ್ಯಾರ್ಥಿಗಳು, ಅಡುಗೆಯವರು ಇರುತ್ತಿದ್ದರು. ಈ ಚಟುವಟಿಕೆಗಳಲ್ಲದೆ ದೇವಾಲಯಗಳು ಸಾಲಕೊಡುವ, ವಸ್ತುಗಳನ್ನು ಖರೀದಿಸುವ ಹಾಗೂ ವ್ಯಾಪಾರ ವಾಣಿಜ್ಯ ನಡೆಸುವ ಕೇಂದ್ರಗಳೂ ಆಗಿರುತ್ತಿದ್ದವು.[16] ದೇವಾಲಯಗಳು ಖಾಸಗಿ ಭೂಮಾಲೀಕರಂತಿದ್ದವು ಅವು ಸಾಮಾನ್ಯವಾಗಿ ಅವುಗಳ ಸುತ್ತಮುತ್ತಲ ವಿಶಾಲ ಪ್ರದೇಶಗಳಿಗೆ ಆರ್ಥಿಕ ಹಾಗೂ ಸಾಂಸ್ಕೃತಿಕ ಕೇಂದ್ರಗಳಾಗಿದ್ದವು. ದೇವಾಲಯಗಳಲ್ಲಿ ನಡೆಯುವ ಉತ್ಸವಗಳು, ಆಚರಣೆಗಳು ವ್ಯಾಪಾರಿ ವರ್ಗಕ್ಕೆ ಅನುಕೂಲಕರವೇ ಆಗಿತ್ತು. ಅಂಥ ಸಂದರ್ಭಗಳಲ್ಲಿ ಆರ್ಥಿಕ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತಿದ್ದವು. ಉತ್ಸವಗಳ ಸಂದರ್ಭಗಳಲ್ಲಿ ಸಂತೆಗಳನ್ನು ವ್ಯವಸ್ಥೆಗೊಳಿಸಲಾಗುತ್ತಿತ್ತು. ಕುಶಲಕರ್ಮಿಗಳು, ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ದೇವಾಲಯಗಳ ಸುತ್ತಮುತ್ತ ತೆರೆಯುತ್ತಿದ್ದರು. ಅದಕ್ಕಾಗಿ ತೆರೆಗೆಗಳನ್ನೂ ಪಾವತಿಸಬೇಕಾಗುತ್ತಿತ್ತು.

ದೇವಾಲಯಗಳು ವ್ಯಾಪಾರದಲ್ಲಿ ಹಾಗೂ ಹಣವನ್ನು ಸಾಲ ನೀಡುವ ವ್ಯವಹಾರದಲ್ಲಿ ತೊಡಗುತ್ತಿದ್ದವು. ಅವು ಬೃಹತ್ ಪ್ರಮಾಣದಲ್ಲಿ ವಸ್ತುಗಳನ್ನು ಖರೀದಿಸುತ್ತಿದ್ದವು. ದೇವಾಲಯಗಳಿಗೆ ಬೇಕಾಗುವ ಮೂರ್ತಿಗಳು, ಉತ್ಸವ ಮತ್ತು ಆಚರಣೆಗಳಿಗೆ ಬೇಕಾಗುವ ವಸ್ತುಗಳು, ದವಸಧಾನ್ಯಗಳು, ಪಾತ್ರೆಗಳು, ಹಾಲು, ಹೂವು, ಲ್ಯಾಂಪು, ಬಟ್ಟೆ ಮುಂತಾದವು ಪ್ರಮುಖ ವಸ್ತುಗಳು. ಅದೇ ರೀತಿ ಖಾಸಗಿ ವ್ಯಕ್ತಿಗಳಿಗೆ ಸಾಲಕೊಡುವ, ಹಣ ಸ್ವೀಕರಿಸುವ ಹಾಗೂ ಬಡ್ಡಿಯನ್ನು ನಿಗದಿಪಡಿಸುವ ಕೆಲಸವನ್ನೂ ದೇವಾಲಯಗಳು ಮಾಡುತ್ತಿದ್ದವು. ಈ ರೀತಿಯಾಗಿ ದೇವಾಲಗಳು ಸಣ್ಣ ಮತ್ತು ದೊಡ್ಡ ವ್ಯಾಪಾರಸ್ಥರಿಗೆ ವ್ಯಾಪಾರದ ದೊಡ್ಡ ಕೇಂದ್ರಗಳಾಗಿ ಕಾಣಿಸಿಕೊಂಡವು. ಇದರಿಂದಾಗಿ ದೇವಾಲಯಗಳ ಸುತ್ತಮುತ್ತ ಪೇಟೆ-ಪಟ್ಟಣಗಳು ಅಸ್ತಿತ್ವಕ್ಕೆ ಬರುವಂತಾಯಿತು.[17] ದೇವಾಲಯಗಳ ದೈನಂದಿನ ಬೇಡಿಕೆಗಳನ್ನು ಈಡೇರಿಸುವುದಕ್ಕಾಗಿಯೇ ಹಲವಾರು ಸಣ್ಣ ಕೈಗಾರಿಕೆಗಳು ಆರಂಭಗೊಂಡವು. ಕೆಲವು ಕುಶಲಕರ್ಮಿಗಳು ನೇರವಾಗಿ ದೇವಾಲಯಗಳಿಗಾಗಿಯೇ ದುಡಿಯುತ್ತಿದ್ದರು. ಪ್ರತಿಫಲವಾಗಿ ದೇವಾಲಯದಿಂದ ಭೂಮಿಯನ್ನು ಅಥವಾ ಇನ್ನಿತರ ವಸ್ತುರೂಪದ ವೇತನವನ್ನು ಪಡೆಯುತ್ತಿದ್ದರು. ಇದು ತಂದೆಯಿಂದ ಮಗನಿಗೆ ಹೋಗುತ್ತಿತ್ತು. ಮಗನೂ ತಂದೆಯಂತೆಯೇ ದೇವಾಲಯದ ಸೇವಾಕಾರ್ಯಗಳನ್ನು ಮುಂದುವರಿಸಬೇಕಿತ್ತು. ಈ ರೀತಿಯಾಗಿ ದೇವಾಲಯಗಳು ಆಧ್ಯಾತ್ಮಿಕ ಕೇಂದ್ರಗಳಾಗುವುದರ ಜೊತೆಗೆ ಸಂಪತ್ತಿನ ಕೇಂದ್ರಗಳಾಗಿಯೂ ಬೆಳೆದವು.[18] ದೇವಾಲಯಗಳು ಒಟ್ಟಿನಲ್ಲಿ ಆಳುವ ವರ್ಗದ ಅಂತಸ್ತುಗಳ ಶ್ರೇಣಿಯ ಅಂಗವಾಗಿದ್ದವು. ಕೃಷಿ ಮತ್ತು ಉದ್ದಿಮೆ ದೇವಾಲಯಗಳ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸಬೇಕಾಗಿ ಬಂತು.

ದೇವಾಲಯಗಳು ನಿರ್ವಹಿಸುತ್ತಿದ್ದ ಚಟುವಟಿಕೆಗಳಲ್ಲಿ ನ್ಯಾಯಾಂಗದ ಕೆಲಸವೂ ಒಂದು. ಅಪರಾಧಿತ್ವವನ್ನು ಅಥವಾ ನಿರಪರಾಧಿತ್ವವನ್ನು ಸಾಬೀತುಪಡಿಸುವ ಜವಾಬ್ದಾರಿಯನ್ನು ದೇವಾಲಯಗಳು ಹೊತ್ತಿದ್ದವು. ದೇವಾಲಯದ ತೀರ್ಪುಗಳು ಜಾತಿ, ಅಂತಸ್ತಿಗೆ ತಕ್ಕಂತೆ ಇರುತ್ತಿದ್ದವು. ಅಪರಾಧವನ್ನು ನಿರ್ಣಯಿಸುವ ವಿಧಾನಕ್ಕೆ ದಿವ್ಯ ಪದ್ಧತಿ ಎಂಬುದಾಗಿ ಕರೆಯಲಾಗಿದೆ.[19] ಈ ಪದ್ಧತಿಯು ಅತ್ಯಂತ ಅನುಮಾನುಷವಾಗಿದ್ದು ಮೂಢನಂಬಿಕೆಗಳಿಂದ ಕೂಡಿತ್ತು. ವೈದಿಕ ಗುರುಗಳು ಸ್ವತಃ ಇದನ್ನು ನೆರವೇರಿಸುತ್ತಿದ್ದರು. ದೇವಾಲಯಗಳಲ್ಲಿ ಅಸ್ತಿತ್ವದಲ್ಲಿದ್ದ ಇನ್ನೊಂದು ಕೆಟ್ಟ ಪದ್ಧತಿಯೆಂದರೆ ದೇವರ ಹೆಸರಿನಲ್ಲಿ ನಡೆಯುತ್ತಿದ್ದ ಮಹಿಳೆಯರ ಶೋಷಣೆ. ಇದನ್ನು ದೇವದಾಸಿ ಪದ್ಧತಿ ಎಂಬುದಾಗಿಯೂ ಕರೆಯಲಾಗಿದೆ. ದೇವದಾಸಿಯರಲ್ಲದೆ ಪಾತರದವರು, ಸೂಳೆಯರು, ಬಸವಿಯರು ದೇವಾಲಯಗಳಲ್ಲಿ ಇರುತ್ತಿದ್ದರು. ಸಂಗೀತ, ನರ್ತನದ ಹೆಸರಿನಲ್ಲಿ ಈ ಮಹಿಳೆಯರ ನಿರಂತರ ಶೋಷಣೆ ನಡೆಯುತ್ತಿತ್ತು.[20] ದೇವಾಲಯಗಳು ಈ ಎಲ್ಲಾ ಕಾರಣಗಳಿಂದಾಗಿ ಮಧ್ಯಕಾಲೀನ ಚರಿತ್ರೆಯಲ್ಲಿ ವಿಶಿಷ್ಟವಾಗಿ ಕಂದುಬರುತ್ತವೆ. ಅಂದಿನ ಶ್ರೇಣೀಕೃತ ಸಮಾಜ ವ್ಯವಸ್ಥೆಯ ಪ್ರತಿಬಿಂಬಗಳಂತೆ ಇದ್ದ ದೇವಾಲಯಗಳು ಧಾರ್ಮಿಕ ಪ್ರಭುತ್ವದ ಪ್ರತಿನಿಧಿಗಳಾಗಿದ್ದವು. ರಾಜಪ್ರಭುತ್ವಕ್ಕೆ ದೇವಾಲಯಗಳಿಂದ ಅಪಾರವಾದ ಆದಾಯ ಲಭ್ಯವಾಗುತ್ತಿತ್ತು. ಈ ಕಾರಣದಿಂದಾಗಿಯೇ ದೇವಾಲಯಗಳನ್ನು ರಾಜನ ಖಜಾನೆ ಎಂಬ ಹೆಸರಿನಿಂದಲೂ ಕರೆಯಲಾಯಿತು. ದೇವಾಲಯಗಳು ಧಾರ್ಮಿಕ ನಂಬಿಕೆ ಮತ್ತು ಕೆಲಸವನ್ನು ಸುಲಭವನ್ನಾಗಿಸಿ ರಾಜ್ಯದ ಮೇಲೆ ಹತೋಟಿಯನ್ನು ಸಾಧಿಸುವಂತೆ ಮಾಡಿತು.

೭.೩ ದೇವಸೇವಕಿಯರು

ಮಧ್ಯಕಾಲೀನ ಕರ್ನಾಟಕದ ಕೆಲವು ವಿಶಿಷ್ಟ ಅನಿಷ್ಟ ಪದ್ಧತಿಗಳಲ್ಲಿ ಹೆಣ್ಣನ್ನು ದೇವಾಲಯಗಳಿಗೆ ಬಿಡುವ ಸಂಪ್ರದಾಯವೂ ಒಂದು. ಈ ಸಂಪ್ರದಾಯದಿಂದಾಗಿ ಸಮಾಜದಲ್ಲಿ ಹೊಸ ವರ್ಗವೊಂದು ಹುಟ್ಟಿಕೊಳ್ಳುವಂತಾಯಿತು. ಆ ವರ್ಗದವರನ್ನು ದೇವದಾಸಿಯರು, ಪಾತರದವರು, ಬಸವಿಯರು ಹಾಗೂ ಸೂಳೆಯರು ಎನ್ನುವ ಹೆಸರಿನಿಂದ ಕರೆಯಲಾಯಿತು.[21] ಇವರೆಲ್ಲರನ್ನು ಅಂದಿನ ಸಮಾಜದ ಪ್ರಮುಖ ಲಕ್ಷಣಗಳಾಗಿದ್ದ ರಾಜಪ್ರಭುತ್ವ, ಧಾರ್ಮಿಕ ಪ್ರಭುತ್ವ ಹಾಗೂ ಪುರುಷಪ್ರಭುತ್ವ ತಮ್ಮ ಸ್ವಾರ್ಥ ಮತ್ತು ಲಾಸ್ಯ ಜೀವನಕ್ಕೆ ಬಳಸಿಕೊಂಡವು. ದೇವಾಲಯಗಳು ಇವರೆಲ್ಲರನ್ನೂ ಶೋಷಣೆಗೆ ಒಳಪಡಿಸಿದ್ದೇ ಅಲ್ಲದೆ ಶೋಷಣೆಯನ್ನು ಶಾಸನಬದ್ಧಗೊಳಿಸಿದವು. ದೇವದಾಸಿಯರು, ಪಾತರದವರು, ಬಸವಿಯರು ಹಾಗೂ ಸೂಳೆಯರು ಬೇರೆ ಬೇರೆ ಹಿನ್ನೆಲೆಯನ್ನು ಹೊಂದಿದವರಾಗಿದ್ದು ಅವರ ವೃತ್ತಿಗಳೂ ಬೇರೆ ಬೇರೆಯದೇ ಆಗಿರುತ್ತದ್ದವು. ಆದರೆ ಹೆಚ್ಚಿನ ಅಧ್ಯಯನಗಳು ಇವರೆಲ್ಲರನ್ನೂ ದೇವದಾಸಿಗಳೆಂದು ಕರೆದು ಆ ಚೌಕಟ್ಟಿನೊಳಗೆ ವ್ಯಾಖ್ಯಾನಿಸಿವೆ. ಈ ಕುರಿತು ಅನೇಕ ವಾದವಿವಾದಗಳು ನಡೆದಿವೆ. ಪ್ರಸ್ತುತ ಈ ಅಧ್ಯಯನದಲ್ಲಿ ಇವರೆಲ್ಲರನ್ನೂ ದೇವಸೇವಕಿಯರು ಎನ್ನುವ ಹೆಸರಿನಿಂದ ಕರೆದು ವ್ಯಾಖ್ಯಾನಿಸುವ ಪ್ರಯತ್ನವನ್ನು ಮಾಡಲಾಗಿದೆ. ಇದರರ್ಥ ಇವರೆಲ್ಲರೂ ಒಂದೇ ವೃತ್ತಿಯವರು ಎಂದಲ್ಲ. ಆದರೂ ಇವರೆಲ್ಲರೂ ಸಮಾಜ ಸೃಷ್ಟಿಸಿದ ಶ್ರೇಣೀಕೃತ ವ್ಯವಸ್ಥೆಯಲ್ಲಿ ‘ಸೇವಕಿ’ಯರಾಗಿ ಗುರುತಿಸಿಕೊಳ್ಳುವ ಒತ್ತಾಯಕ್ಕೊಳಗಾಗಿದ್ದರು. ಇದರಿಂದಾಗಿ ಪದಗಳ ಅರ್ಥವಿವರಣೆ, ವಿಶ್ಲೇಷಣೆ ಏನೇ ಇದ್ದರೂ ಇವರು ಸಮಾಜದಲ್ಲಿ ದಾಸಿಗಳಾಗಿದ್ದರು ಎನ್ನುವುದಂತೂ ಸ್ಪಷ್ಟ.

ದೇವಸೇವಕಿಯರು ಎನ್ನುವ ಪದವನ್ನು ಈ ರೀತಿ ವ್ಯಾಖ್ಯಾನಿಸಬಹುದಾಗಿದೆ. “ವೈದಿಕ ಸಂಸ್ಕೃತಿಯ ದೇವರಿಗೆ ಹಾಗೂ ದೇವರಿಗೆ ಸಮಾನನಾದ ಬ್ರಾಹ್ಮಣನಿಗೆ, ದೇವರನ್ನು ಪ್ರತಿನಿಧಿಸುವ ಅರಸನಿಗೆ, ಹೆಂಡತಿಗೆ ದೇವರು ಎಂದೆನಿಸಿಕೊಂಡ ಗಂಡ(ಪುರುಷ)ನಿಗೆ ಸೇವಕಿಯರಾಗಿರುವವರು”. ಈ ವರ್ಗಗಳು ಯಾವ ಸೇವೆಯನ್ನು ಬಯಸುತ್ತವೋ ಅದನ್ನು ದೇವ ಸೇವಕಿಯರು ಪೂರೈಸಬೇಕಾಗುತ್ತಿತ್ತು. ಇದರಲ್ಲಿ ಲೈಂಗಿಕ ಶೋಷಣೆಯೂ ಸೇರಿರುತ್ತಿತ್ತು. ಪ್ರಭುತ್ವದ ಆಸೆಗಳನ್ನು ಪೂರೈಸುವುದು ಅಪರಾಧವಲ್ಲ, ಅದು ದೇವಸೇವಕಿಯರ ವೃತ್ತಿ, ಅದನ್ನು ಮುಂದುವರೆಸಿಕೊಂಡು ಹೋಗಬೇಕು ಎನ್ನುವ ಧೋರಣೆ ಅಂದಿನ ಸಮಾಜದಲ್ಲಿತ್ತು. ಇಂಥ ಧೋರಣೆಗಳನ್ನು ಇನ್ನಷ್ಟು ಬಿಗಿಗೊಳಿಸಲು ಧರ್ಮವನ್ನು ಬಳಸಿಕೊಳ್ಳಲಾಯಿತು. ದೇವಾಲಯಗಳು ಸ್ತ್ರೀಯರ ಕುರಿತಾದ ನಿರ್ಣಯಗಳನ್ನು ತೆಗೆದುಕೊಳ್ಳುವ ಕೇಂದ್ರಗಳಾಗಿ ಬೆಳೆದವು. ಈ ಕಾರಣಕ್ಕಾಗಿಯೇ ದೇವಾಲಯಗಳಲ್ಲಿ ಸಂಗೀತ ಮತ್ತು ನೃತ್ಯ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿತು. ದೇವಸೇವಕಿಯರು ಅಂಗಭೋಗ ಮತ್ತು ರಂಗಭೋಗದ ಸೇವೆಗಳನ್ನು ದೇವಾಲಯಗಳಲ್ಲಿ ಸಲ್ಲಿಸಬೇಕಾಗಿತ್ತು. ದೇವಾಲಯಗಳಲ್ಲಿ ನಿತ್ಯ ನೃತ್ಯ ಸೇವೆ ಸಲ್ಲಿಸುವುದರ ಜೊತೆಗೆ ವಿಶೇಷ ಆಚರಣೆಗಳ ಹಾಗೂ ವಾರ್ಷಿಕ ಉತ್ಸವಗಳ ಸಂದರ್ಭದಲ್ಲೂ ಸಂಗೀತ, ನೃತ್ಯ ಸೇವೆ ಸಲ್ಲಿಸಬೇಕಾಗಿತ್ತು. ಈ ಉದ್ದೇಶಕ್ಕಾಗಿಯೇ ದೇವಾಲಯಗಳು ಅರಸರಿಂದ ವಿಶೇಷ ಸವಲತ್ತುಗಳನ್ನು ಪಡೆದುಕೊಳ್ಳುತ್ತಿದ್ದವು.

ದೇವಸೇವಕಿಯರು ದೇವಾಲಯಗಳ ಅವಶ್ಯಕ ಅಂಗ ಎನ್ನುವ ಭಾವನೆಯನ್ನು ಸಮಾಜದಲ್ಲಿ ಮೂಡಿಸಲಾಗಿತ್ತು. ಆಳುವವರ್ಗ ಈ ಪದ್ಧತಿಗೆ ಮಾನ್ಯತೆಯನ್ನು ನೀಡಿ ಇದೊಂದು ಪುಣ್ಯಕಾರ್ಯ ಎನ್ನುವ ಮೂಢನಂಬಿಕೆಯನ್ನು ಸಮಾಜದಲ್ಲಿ ಮೂಡಿಸುವ ಕೆಲಸವನ್ನು ಮಾಡಿತು. ಬಡಕುಟುಂಬಗಳು ಈ ವ್ಯವಸ್ಥೆಯಿಂದ ಹೆಚ್ಚಾಗಿ ಮೋಸಕ್ಕೊಳಗಾಗಿದ್ದವು. ಬಡಕುಟುಂಬಗಳಿಗೆ ಸೇರಿದ ಹೆಣ್ಣುಮಕ್ಕಳನ್ನು ದೇವಾಲಯಗಳಿಗೆ ಬಿಡಲಾಗುತ್ತಿತ್ತು. ಸ್ವತಃ ತಂದೆತಾಯಿಗಳೇ ಈ ಕೆಲಸವನ್ನು ಮಾಡುತ್ತಿದ್ದರು. ಬದಲಿಯಾಗಿ ಹಣವನ್ನು ಪದೆದುಕೊಳ್ಳುತ್ತಿದ್ದರು. ಕಡುಬಡತನದ ಸಂದರ್ಭದಲ್ಲಿ ಇದು ಅನಿವಾರ್ಯವೂ ಆಗಿತ್ತು. ಈ ರೀತಿ ದೇವಾಲಯಗಳಿಗೆ ಬಿಟ್ಟ ಹೆಂಗಸರನ್ನು ಮದುವೆಯಾಗಲು ಯಾರೂ ಮುಂದೆ ಬರುತ್ತಿರಲಿಲ್ಲ. ಅವರಿಗೆ ವೇಶ್ಯಾವಾಟಿಕೆ ನಡೆಸುವವರು ಎನ್ನುವ ಹೆಸರನ್ನು ನೀಡಲಾಗುತ್ತಿತ್ತು. ರಾಜಪ್ರಭುತ್ವವು ಸೂಳೆಗಾರಿಕೆಯನ್ನು ಒಂದು ವೃತ್ತಿಯನ್ನಾಗಿ ಪರಿಗಣಿಸಿ ಸೂಳೆದೆರೆ ಎನ್ನುವ ತೆರಿಗೆಯನ್ನು ಸಂಗ್ರಹಿಸಿದರೂ, ಸಮಾಜದಲ್ಲಿ ಅವರಿಗೆ ಉನ್ನತಸ್ಥಾನ ಲಭಿಸಲಿಲ್ಲ. ಕುಟುಂಬ ವ್ಯವಸ್ಥೆಯಲ್ಲಿ ಶೋಷಣೆಗೊಳಗಾಗುತ್ತಿದ್ದ ಹೆಣ್ಣು ಈ ವ್ಯವಸ್ಥೆಯಿಂದಾಗಿ ಮನೆ, ಕುಟುಂಬದ ಹೊರಗೆ ಅಂದರೆ ಸಾರ್ವಜನಿಕವಾಗಿ ಶೋಷಣೆಗೊಳಗಾಗಬೇಕಾಯಿತು. ಆದ್ದರಿಂದ ಈ ವ್ಯವಸ್ಥೆಯನ್ನು ಶೋಷಣೆಯ ವಿಸ್ತೃತ ಭಾಗ ಎಂದು ಹೇಳಬೇಕಾಗುತ್ತದೆ. ಗೃಹಿಣಿಯರಿಗೆ ಹೋಲಿಸಿದರೆ ಇವರು ಹೆಚ್ಚು ಸ್ವತಂತ್ರರಾಗಿರುತ್ತಿದ್ದರು ಎನ್ನುವ ವಾದವಿದ್ದರೂ ಅದನ್ನು ಒಪ್ಪಲು ಸಾಧ್ಯವಾಗುವುದಿಲ್ಲ. ಏಕೆಂದರೆ ಇದು ಸಮಾಜದ ರಚನೆಯ ಪ್ರಶ್ನೆಯಾಗಿದ್ದು ಆ ಹಿನ್ನೆಲೆಯಿಂದಲೇ ಅರ್ಥೈಸಿಕೊಳ್ಳಬೇಕಾಗುತ್ತದೆ. ಅಧ್ಯಯನದ ಈ ಅವಧಿಯಲ್ಲಿ ಸಾಮಾಜಿಕ ರಚನೆಯಲ್ಲಿ ಸಡಿಲಿಕೆ ಉಂಟಾಗಿರುವುದು ಕಂಡುಬರುವುದಿಲ್ಲ.

ದೇವಾಲಯಗಳಿಗೆ ಹೆಣ್ಣನ್ನು ಬಿಡುವ ಸಂಪ್ರದಾಯ ಕರ್ನಾಟಕದಲ್ಲಿ ಯಾವಾಗ ಆರಂಭಗೊಂಡಿತು ಎನ್ನುವುದರ ಸ್ಪಷ್ಟ ಚಿತ್ರಣ ಸಿಗುವುದಿಲ್ಲ. ಶಾಸನಗಳೇ ಹೆಚ್ಚಿನ ಮಟ್ಟಿಗೆ ಈ ಸಂಪ್ರದಾಯದ ಕುರಿತು ಮಾಹಿತಿಯನ್ನು ನೀಡುವ ಆಕರಗಳು. ಕರ್ನಾಟಕದಲ್ಲಿ ದೇವಾಲಯದ ನೃತ್ಯಗಾರ್ತಿಯರ ಕುರಿತ ಶಾಸನಗಳಲ್ಲಿ ಪ್ರಾಚೀನವಾದದ್ದೆಂದರೆ ಕ್ರಿ.ಶ. ೭೭೮-೭೭೯ರ ಪಟ್ಟದಕಲ್ಲು ಶಾಸನ.[22] ಈ ಶಾಸನದಲ್ಲಿ ದೇಗುಲದ ಸೂಳೆ ಎನ್ನುವ ಉಲ್ಲೇಖವಿರುವುದು ಕಂಡುಬಂದಿದೆ. ಅದೇ ರೀತಿ ದೇವದಾಸಿ, ಸೂಳೆ, ಪಾತರ ಮುಂತಾದ ಉಲ್ಲೇಖಗಳು ಅನೇಕ ಶಾಸನಗಳಲ್ಲಿ ಇವೆ.[23] ದೇವಾಲಯಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರಲ್ಲಿ ಅನೇಕ ವಿಂಗಡನೆಗಳಿದ್ದವು. ಅವುಗಳೆಂದರೆ ಅಂಗಭೋಗ, ರಂಗಭೋಗ, ಕಂಬದ, ಮಾಡದ, ಚಾಮರದ, ಪಾತ್ರದ ಹಾಗೂ ಓಲಗದ ಸೂಳೆಯರು.[24] ಅಂಗಭೋಗದವರು ದೇವರ ಅಂಗಕ್ಕೆ ಸಂಬಂಧಪಟ್ಟ ಸ್ನಾನ, ಪೂಜೆ, ನೈವೇದ್ಯ ಮುಂತಾದ ಕರ್ತವ್ಯಗಳನ್ನು ಮಾಡುತ್ತಿದ್ದರು. ರಂಗಭೋಗದವರು ದೇವಾಲಯದ ಗರ್ಭಗೃಹದ ಮುಂಭಾಗದ ನವರಂಗದಲ್ಲಿ ದೇವರ ಸೇವೆ ಮಾಡುತ್ತಿದ್ದರು. ಇವರಲ್ಲಿ ವಿವಿಧ ಬಗೆಗಳಲ್ಲಿ ಕಾರ್ಯನಿರ್ವಹಿಸುವವರಿದ್ದರು. ಅವರುಗಳೆಂದರೆ ಕಂಬದ, ಮಾಡದ, ಚಾಮರದ, ಪಾತ್ರದ ಹಾಗೂ ಓಲಗದವರು. ಕಂಬದವರು ದೇವಸ್ಥಾನದ ರಂಗ ಮಂಟಪದ ಅಲಂಕಾರಕ್ಕೋಸುಗ ಅಲ್ಲಿಯ ಕಂಬಗಳ ಹತ್ತಿರ ಪೂಜೆ ಮುಗಿಯುವವರೆಗೆ ಅಲಂಕಾರ ಮಾಡಿಕೊಂಡು ನಿಲ್ಲುವವರು. ದೇವಸ್ಥಾನದ ಗರ್ಭಗೃಹದ ಎಡಬಲ ಪಕ್ಕದಲ್ಲಿರುವ ಮಾಡಗಳ ಹತ್ತಿರ ಅಲಂಕಾರಕ್ಕಾಗಿ ನಿಂತುಕೊಳ್ಳುವವರು ಮಾಡದವರು. ದೇವರಿಗೆ ಚಾಮರದ ಸೇವೆ ಮಾಡುವವರು ಚಾಮರದವರು. ದೇವಾಲಯಗಳಲ್ಲಿ ನರ್ತನ ಮಾಡುವವರು ಪಾತರದವರು. ಅದೇ ರೀತಿ ದೇವಾಲಯಗಳಲ್ಲಿ ಸಂಗೀತ ಸೇವೆ ಸಲ್ಲಿಸುವವರು ಓಲಗದವರು. ಇಲ್ಲಿ ಬಳಸಲಾದ ಸೇವೆ, ಕರ್ತವ್ಯ ಮುಂತಾದ ಪದಗಳು ಪ್ರಭುತ್ವದ ಹಿನ್ನೆಲೆಯಿಂದ ಬಂದವು.

ದೇವಾಲಯಗಳಲ್ಲಿ ವಿವಿಧ ಸೇವೆಗಳಿಗೆ ನಿಯೋಜಿತರಾಗಿದ್ದ ಈ ಮಹಿಳೆಯರು ತಮ್ಮ ಸೇವೆಯನ್ನು ನೆರವೇರಿಸದಿದ್ದರೆ ಅವರ ಮೇಲೆ ಶುಲ್ಕ ವಿಧಿಸಲಾಗುತ್ತಿತ್ತು.[25] ವೈದಿಕ ಮೂಲದ ಕೆಲವು ಪುರಾಣಗಳು ದೇವಾಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರನ್ನು ವೇಶ್ಯೆಯರು ಎಂದು ಕರೆದುದು ಮಾತ್ರವಲ್ಲದೆ, ಅವರನ್ನು ದೇವಾಲಯಗಳು ಕೊಂಡುಕೊಳ್ಳಬೇಕು ಎಂಬುದಾಗಿಯೂ ಸೂಚಿಸುತ್ತವೆ.[26] ಪುರಾಣಗಳ ಈ ಆಶಯಗಳು ಮಹಿಳೆಯರ ದೇವರ ಹೆಸರಿನಲ್ಲಿ ಶೋಷಣೆಗೊಳಗಾಗುತ್ತಿದ್ದುದನ್ನು ಹೇಳುತ್ತವೆ. ದೇವಾಲಯಗಳಲ್ಲಿ ನಡೆಯುತ್ತಿದ್ದ ಸಂಗೀತ, ನೃತ್ಯಗಳು ದೇವರನ್ನು ಓಲೈಸುವುದಕ್ಕಾಗಿ ಅಥವಾ ದೇವರ ಪ್ರೀತ್ಯರ್ಥವಾಗಿ ಎಂಬ ವಿವರಣೆಯನ್ನು ಪಡೆದುಕೊಂಡಿತ್ತು. ಆದರೆ ನಿಜಾರ್ಥದಲ್ಲಿ ಸಂಗೀತ ಮತ್ತು ನೃತ್ಯ ದೇವಾಲಯಗಳಲ್ಲಿ ಮಹಿಳೆಯರ ಶೋಷಣೆಗೆ ಸಾಧನಗಳಾಗಿದ್ದವು.ಈ ಕಾರಣಕ್ಕಾಗಿಯೇ ಸಂಗೀತ ಮತ್ತು ನೃತ್ಯ ಅಂದಿನ ಸಮಾಜದಲ್ಲಿ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿರಬೇಕು. ದೇವಾಲಯಗಳಲ್ಲಿ ಸಂಗೀತ ಮತ್ತು ನೃತ್ಯ ಸೇವೆ ಸಲ್ಲಿಸುತ್ತಿದ್ದವರಿಗೆ ದಾನದತ್ತಿಗಳನ್ನು ನೀಡಲಾಗುತ್ತಿತ್ತು. ಇದು ಈ ವ್ಯವಸ್ಥೆಯನ್ನು ಇನ್ನಷ್ಟು ಜನಪ್ರಿಯಗೊಳಿಸುವ ಹಾಗೂ ಮುಂದುವರಿಸಿಕೊಂಡು ಹೋಗುವ ಉದ್ದೇಶವನ್ನು ಹೊಂದಿತ್ತು. ಅದೇ ರೀತಿ ದೇವಾಲಯಗಳಲ್ಲಿ ಮಹಿಳೆಯರು ಸೇವೆ ಸಲ್ಲಿಸುವ ಪದ್ಧತಿಯನ್ನು ಶಾಸ್ವತವನ್ನಾಗಿಸುವ ಹಾಗೂ ಆ ಮೂಲಕ ಧರ್ಮ, ದೇವರುಗಳ ಹೆಸರಿನಲ್ಲಿ ಶೋಷಣೆ ನಡೆಸುವ ಉದ್ದೇಶಗಳು ದಾನ ನೀಡುವುದರಲ್ಲಿ ಅಡಕವಾಗಿರುತ್ತಿದ್ದವು.

ದೇವಾಲಯಗಳಲ್ಲಿ ಸೇವೆ ಸಲ್ಲಿಸುವ ಮಹಿಳೆಯರು ವಾಸಿಸುವ ಸ್ಥಳಗಳನ್ನು ಸೂಳೆಗೇರಿಗಳೆಂದು ಕರೆಯಲಾಗುತ್ತಿತ್ತು. ಈ ವಿಚಾರವನ್ನು ತಿಳಿಸುವ ಅನೇಕ ಶಾಸನಗಳು ಲಭ್ಯವಿವೆ.[27] ಸೂಳೆಗೇರಿಗಳು ದೇವಾಲಯಗಳ ಸುತ್ತಮುತ್ತ ನಿರ್ಮಾಣಗೊಳ್ಳುತ್ತಿದ್ದವು. ಅವುಗಳಿಗೆ ದಾನವನ್ನು ನೀಡಲಾಗುತ್ತಿತ್ತು. ಸೂಳೆಗೇರಿಗಳನ್ನು ವರ್ಣಿಸಿರುವ ಶಾಸನಗಳ ಸಂಖ್ಯೆಯೇ ಹೆಚ್ಚು. ಸೂಳೆಗೇರಿಗಳಲ್ಲಿ ಚೆಲುವೆಯರು ವಾಸವಾಗಿರುತ್ತಿದ್ದರು ಎನ್ನುವ ಶಾಸನಗಳು ಆ ಚೆಲುವೆಯರು ಅನುಭವಿಸುತ್ತಿದ್ದ ಶೋಷಣೆಯ ಕುರಿತು ಏನನ್ನೂ ಹೇಳುವುದಿಲ್ಲ. ಕಲ್ಯಾಣಿ ಚಾಲುಕ್ಯರ ಆಳ್ವಿಕೆಯ ಅವಧಿಗೆ ಸಂಬಂಧಿಸಿದ ಶಾಸನವೊಂದರಲ್ಲಿ ಪುಲಿಗೆರೆಯ ಸೋಮೇಶ್ವರ ದೇವಾಲಯಕ್ಕೆ ಸೂಳೆಗೇರಿಯೊಂದನ್ನು ನಿರ್ಮಿಸಿಕೊಟ್ಟು ಅಲ್ಲಿ ವಾಸಿಸುವ ಸೂಳೆಯರಿಗೆ ಭೂಮಿಯನ್ನು ದಾನ ನೀಡಿದ ಮಾಹಿತಿ ಸಿಗುತ್ತದೆ.[28] ಕ್ರಿ.ಶ. ೮ ರಿಂದ ೧೪ನೆಯ ಶತಮಾನಗಳವರೆಗಿನ ಅವಧಿಗೆ ಸಂಬಂಧಿಸಿದ ಸುಮಾರು ೭೦ ಶಾಸನಗಳಲ್ಲಿ ದೇವಸೇವಕಿಯರ ಉಲ್ಲೇಖಗಳು ಸಿಗುತ್ತವೆ.[29] ಇವುಗಳಲ್ಲಿ ಕಲ್ಯಾಣಿ ಚಾಲುಕ್ಯರು ಮತ್ತು ಹೊಯ್ಸಳರ ಆಳ್ವಿಕೆಗೆ ಸಂಬಂಧಿಸಿದ ಶಾಸನಗಳ ಸಂಖ್ಯೆಯೇ ಹೆಚ್ಚು. ಈ ಶಾಸನಗಳು ದೇವಾಲಯಗಳಲ್ಲಿ ಮಹಿಳೆಯರು ನಿರ್ವಹಿಸುತ್ತಿದ್ದ ನಾನಾ ರೀತಿಯ ಕೆಲಸಕಾರ್ಯಗಳನ್ನು ವರ್ಣರಂಜಿತವಾಗಿ ಚಿತ್ರಿಸಿರುವುದು ಕಂಡುಬರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಸೇವಕಿಯರನ್ನು ಹೊಂದುವುದು ದೇವಾಲಯಗಳಿಗೆ ಪ್ರತಿಷ್ಠೆಯ ವಿಷಯವಾಗುತ್ತಿತ್ತು.[30] ಇದರಿಂದಾಗಿ ದೇವಾಲಯಗಳು ಧಾರ್ಮಿಕ, ವಿದ್ಯಾ, ವ್ಯಾಪಾರಕೇಂದ್ರಗಳಾಗಿದ್ದಂತೆ ಮಹಿಳೆಯರ ಶೋಷಣೆಯ ಕೇಂದ್ರಗಳೂ ಆಗಿರುತ್ತಿದ್ದವು ಎನ್ನುವುದು ಸ್ಪಷ್ಟವಾಗಿ ತಿಳಿದುಬರುತ್ತದೆ.

 

[1] ಬಿ.ಆರ್. ಗೋಪಾಲ್ (ಸಂ.), ದಿ ರಾಷ್ಟ್ರಕೂಟಾಸ್ ಆಫ್ ಮಾಲ್ಕೇಡ್: ಸ್ಟಡೀಸ್ ಇನ್ ದೇಯರ್ ಹಿಸ್ಟರಿ ಆಂಡ್ ಕಲ್ಚರ್, ಬೆಂಗಳೂರು, ೧೯೯೪, ಪು. ೧೩೮-೧೪೧

[2] ಶ್ಯಾಮಚರಣ ದುಬೆ, ಭಾರತೀಯ ಸಮಾಜ, ನವದೆಹಲಿ, ೧೯೯೪, ಪು. ೩೧, ೩೪

[3] ಸ್ವಾನಿಧರ್ಮತೀರ್ಥ, (ಅನು.ಭಗವಾನ್), ಹಿಂದೂ ಸಾಮ್ರಾಜ್ಯಶಾಹಿಯ ಇತಿಹಾಸ, ಮೈಸೂರು, ೧೯೯೦

[4] ಅದೇ

[5] ಬಿ.ಆರ್. ಗೋಪಾಲ್ (ಸಂ.), ಪೂರ್ವೋಕ್ತ

[6] ಆರ್.ಎನ್.ನಂದಿ, ಆರಿಜಿನ್ ಆಫ್ ದಿ ವೀರಶೈವ ಮೂವ್‍ಮೆಂಟ್, ಇಂಡಿಯನ್ ಹಿಸ್ಟಾರಿಕಲ್ ರಿವ್ಯೂ, ಸಂಪುಟ ೨, ೧೯೭೫, ಪು.೩೨-೪೬

[7] ವಿಲಿಯಂ ಕೊಯಿಲೋ, ದಿ ಹೊಯ್ಸಳ ವಂಶ, ಮುಂಬಯಿ, ೧೯೫೦, ಪು. ೨೯೨

[8] ಎ.ಕ.೨, ಸೊರಬ ೧೩೨, ೧೪೦; ಎ.ಕ.೨, ಸೊರಬ ೭೩, ೧೨೫

[9] ಆಂಟೋನಿಯೋ ಗ್ರಾಮ್‍ಶಿ, ಸಿಲೆಕ್ಷನ್ ಪ್ರಮ್ ದಿ ಪ್ರಿಸನ್‍ನೋಟ್ ಬುಕ್ಸ್, ಇಂಟರ್‌ನ್ಯಾಷನಲ್ ಪಬ್ಲಿಷರ್ಸ್, ೧೯೭೧, ಪು.೩೨೩-೩೨೫; ಗ್ರಾಮ್‍ಶಿಯು ಧರ್ಮವು ಮಾನವನ ಬದುಕಿನಲ್ಲಿ ಪಡೆದುಕೊಂಡಿರುವ ಕೇಂದ್ರಸ್ಥಾನದ ಕುರಿತು ಚಿಂತಿಸಿದನು. ಶೋಷಿತ ಜನ ಸಮುದಾಯದ ಸಾಂಸ್ಕೃತಿಕ ಜಗತ್ತನ್ನು ಗ್ರಾಮ್‌ಶಿ ಗಂಭೀರವಾಗಿ ತನ್ನ ಅಧ್ಯಯನಕ್ಕೆ ಅಳವಡಿಸಿಕೊಂಡನು. ಸಾಂಸ್ಕೃತಿಕ ಯಜಮಾನಿಕೆಯ ಕುರಿತಾದ ಸಾಂಸ್ಕೃತಿಕ ಮಾರ್ಕ್ಸ್‌ವಾದವನ್ನು ಮುಂದಿಟ್ಟನು. ಸಾಂಸ್ಕೃತಿಕ ಮಾರ್ಕ್ಸ್‌ವಾದವು ಮೇಲ್ವರ್ಗದ ಸಾಂಸ್ಕೃತಿಕ ಯಜಮಾನಿಕೆಯ ಸಂಕೀರ್ಣ ಕಲ್ಪನೆಗಳು ಹಾಗೂ ಅದಕ್ಕೆ ಕೆಳವರ್ಗ ತೋರಿದ ಸಾಂಸ್ಕೃತಿಕ ಪ್ರತಿಪರೋಧಗಳ ಕುರಿತಾಗಿ ಚಿಂತಿಸುತ್ತದೆ. ಧಾರ್ಮಿಕ ನಂಬಿಕೆಗಳು, ಆಚರಣೆಗಳು ಶೋಷಿತ ಜನವರ್ಗಗಳಲ್ಲಿ ಹೆಚ್ಚಾಗಿ ಇರುವುದರಿಂದಾಗಿ ಧರ್ಮವನ್ನು ನಿರ್ಲಕ್ಷಿಸಿ ಅಧ್ಯಯನ ನಡೆಸಲು ಸಾಧ್ಯವಾಗುವುದಿಲ್ಲ ಎನ್ನುವುದು ಗ್ರಾಮ್‌ಶಿಯ ಅಭಿಪ್ರಾಯ.

[10] ದೇವಾಲಯಗಳ ಕುರಿತು ಕೆಲವೊಂದು ಅಧ್ಯಯನಗಳು ನಡೆದಿವೆ. ದಕ್ಷಿಣ ಭಾರತದ ದೇವಾಲಯಗಳ ಹಾಗೂ ಕರ್ನಾಟಕದ ದೇವಾಲಯಗಳ ಬಗ್ಗೆ ನಡೆದ ಕೆಲವೊಂದು ಅಧ್ಯಯನಗಳು ಈ ಕೆಳಗಿನಂತಿವೆ; ಎಂ.ಬಿ. ರೊನಾಲ್ಡ್, ಟೆಂಪಲ್ ಆರ್ಟ್ ಆಫ್ ಕೇರಳ, ನವದೆಹಲಿ, ೧೯೮೨; ಬಿ.ಕೆ. ಪಾಂಡೇಯ, ಟೆಂಪಲ್ ಇಕಾನಮಿ ಅಂದರ್ ದಿ ಚೋಳಾಸ್, ನವದೆಹಲಿ, ೧೯೮೪; ಕೆ.ಆರ್.ಶ್ರೀನಿವಾಸನ್, ಟೆಂಪಲ್ಸ್ ಆಫ್ ಸೌತ್ ಇಂಡಿಯಾ, ನವದೆಹಲಿ, ೧೯೭೧; ಕೆ.ಆರ್. ಶ್ರೀನಿವಾಸನ್, ಟೆಂಪಲ್ಸ್; ದೇಯರ್ ರೋಲ್ ಇನ್ ಸೋಶ್ಯೋ-ಇಕನಾಮಿಕ್ ಲೈಫ್, ನವದೆಹಲಿ, ೧೯೮೪; ಎಂ.ಚಿದಾನಂದ ಮೂರ್ತಿ, ಕನ್ನಡ ಶಾಸನಗಳ ಸಾಂಸ್ಕೃತಿಕ ಅಧಯ್ಯನ, ಮೈಸೂರು, ೧೯೭೯; ಸಿಂದಗಿ ರಾಜಶೇಖರ, ಕರ್ನಾಟಕದ ವಾಸ್ತುಶಿಲ್ಪ ಮತ್ತು ಚಿತ್ರಕಲೆ; ಬರ್ಟನ್ ಸ್ಟೈನ್ (ಸಂ.), ಸೌತ್ ಇಂಡಿಯನ್ ಟೆಂಪಲ್ಸ್: ಆನ್ ಅನಾಲಿಟಿಕಲ್ ಸ್ಟಡಿ, ನವದೆಹಲಿ, ೧೯೭೮; ಬರ್ಟನ್ ಸ್ಟೈನ್, ಎಕನಾಮಿಕ್ ಪನ್‍ಕ್ಷನ್ಸ್ ಆಫ್ ಎ ಮೆಡೀವಲ್ ಸೌತ್ ಇಂಡಿಯನ್ ಟೆಂಪಲ್, ಜರ್ನಲ್ ಆಫ್ ಏಷ್ಯನ್ ಸ್ಟಡೀಸ್, ೧೯೬೦; ಕೆಲ್ಲಿಸನ್ ಕೋಲ್ಯೆರ್, ದಿ ಹೊಯ್ಸಳ ಆರ್ಟಿಸ್ಟ್ಸ್, ಮೈಸೂರು, ೧೯೯೦; ಕರ್ನಾಟಕ ದೇವಾಲಯ ಕೋಶ: ಹಾವೇರಿ ಜಿಲ್ಲೆ ಮತ್ತು ಬಳ್ಳಾರಿ ಜಿಲ್ಲೆ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೯

[11] ಬರ್ಟನ್ ಸ್ಟೈನ್, ಇಕನಾಮಿಕ್ ಪನ್‍ಕ್ಷನ್ಸ್ ಆಫ್ ಎ ಮೆಡೀವಲ್ ಸೌತ್ ಇಂಡಿಯನ್ ಟೆಂಪಲ್, ಜರ್ನಲ್ ಆಫ್ ಏಷ್ಯನ್ ಸ್ಟಡೀಸ್, ಸಂಪುಟ ೧೯, ನಂ.೨, ೧೯೬೦, ಪು.೧೬೩-೧೭೬

[12] ಸ್ವಾಮಿ ಧರ್ಮತೀರ್ಥ, ಪೂರ್ವೋಕ್ತ, ಪು.೧೭೬-೧೭೭

[13] ಎಂ.ಚಿದಾನಂದಮೂರ್ತಿ, ಪೂರ್ವೋಕ್ತ, ಪು.೨೦೨

[14] ಸೌ.ಇ.ಇ.೪, ಭಾಗ ೧, ನಂ.೧೮, ಕ್ರಿ.ಶ. ೧೨೦೦

[15] ಎಂ.ಚಿದಾನಂದಮೂರ್ತಿ, ಪೂರ್ವೋಕ್ತ, ಪು.೧೭೯-೧೮೦

[16] ಬರ್ಟನ್ ಸ್ಟೈನ್, ಪೂರ್ವೋಕ್ತ; ಬಿ.ಕೆ.ಪಾಂಡೇಯ, ಟೆಂಪಲ್ ಎಕಾನಮಿ ಅಂಡರ್ ದಿ ಚೋಳಾಸ್, ನವದೆಹಲಿ, ೧೯೮೪

[17] ಕೆ.ಎಸ್.ಶಿವಣ್ಣ, ಹೊಯ್ಸಳ ರಾಜ್ಯಾಡಳಿತ ಮತ್ತು ಆರ್ಥಿಕತೆ, ಕರ್ನಾಟಕ ಚರಿತ್ರೆ, ಸಂಪುಟ ೨, (ಸಂ.) ಬಿ. ಸುರೇಂದ್ರರಾವ್, ಹಂಪಿ, ೧೯೯೭, ಪು.೧೬೫-೧೬೯

[18] ಎಚ್.ತಿಪ್ಪೇರುದ್ರಸ್ವಾಮಿ, ಕರ್ನಾಟಕ ಸಂಸ್ಕೃತಿ ಸಮೀಕ್ಷೆ, ಮೈಸೂರು, ೧೯೬೮, ಪು.೨೦೦

[19] ಎಂ.ಚಿದಾನಂದಮೂರ್ತಿ, ಪೂರ್ವೋಕ್ತ, ಪು.೧೮೧, ೧೯೬, ೧೯೯

[20] ಅದೇ; ಚನ್ನಕ್ಕ ಎಲಿಗಾರ, ಶಾಸನಗಳಲ್ಲಿ ಸ್ತ್ರೀ ಸಮಾಜ, ಧಾರವಾಡ, ೧೯೯೦, ಪು.೫೪

[21] ಎಂ.ಚಿದಾನಂದಮೂರ್ತಿ, ಪೂರ್ವೋಕ್ತ, ಪು.೧೮೧-೧೮೩; ಚನ್ನಕ್ಕ ಎಲಿಗಾರ, ಪೂರ್ವೋಕ್ತ, ಪು.೫೪-೬೩; ಶೈಲಜಾ ಹಿರೇಮಠ, ಪಾತರದವರು, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೯, ಪು.೮, ೧೪-೨೨; ಜೋಗನ್ ಶಂಕರ್, ದೇವದಾಸಿ ಸಂಪ್ರದಾಯ, ಅಥಣಿ, ೧೯೯೩

[22] ಎ.ಎಸ್. ಆಲ್ಟೇಕರ್, ದಿ ರಾಷ್ಟ್ರಕೂಟಾಸ್ ಆಂಡ್ ದೇಯರ್ ಟೈಮ್ಸ್, ಪೂಣಾ, ೧೯೬೭, ಪು. ೨೯೫; ಎಸ್. ಗುರುರಾಜಾಚಾರ್, ಸಮ್ ಆಸ್ಪೆಕ್ಟ್ಸ್ ಆಫ್ ಇಕನಾಮಿಕ್ ಆಂಡ್ ಸೋಶ್ಯಲ್ ಲೈಫ್ ಇನ್ ಕರ್ನಾಟಕ, ಮೈಸೂರು, ೧೯೭೪, ಪು. ೨೪೫; ಇ.ಆ.೧೧, ಪು.೧೨೪, ಕ್ರಿ.ಶ. ೭೭೮-೭೭೯

[23] ಸೌ.ಇ.ಇ. ೯-೧, ೮೦, ಕ್ರಿ.ಶ. ೧೦೧೮; ಎನ್‍ಸೈಕ್ಲೋಪೀಡಿಯಾ ಆಫ್ ದಿ ಸೋಶ್ಯಲ್ ಸೈನ್‍ಸಸ್, ೧೨, ಪು.೫೩೩; ಸೌ.ಇ.ಇ.೭, ೧೮೫, ಕ್ರಿ.ಶ. ೧೨೦೪ ಇತ್ಯಾದಿ

[24] ಚನ್ನಕ್ಕ ಎಲಿಗಾರ, ಪೂರ್ವೋಕ್ತ, ಪು.೫೫-೬೩; ಈ ಕೃತಿಯಲ್ಲಿ ಪ್ರತಿಯೊಂದು ಆಧಾರದ ಗುಂಪಿನವರೂ ಪ್ರತ್ಯೇಕವಾಗಿ ಸಲ್ಲಿಸಬೇಕಾಗಿದ್ದ ಸೇವೆಗಳನ್ನು ಶಾಸನಗಳ ಆಧಾರದ ಮೂಲಕ ವಿವರಿಸಲಾಗಿದೆ.

[25] ಸೌ.ಇ.ಇ.೭, ೧೮೫, ಕ್ರಿ.ಶ.೧೨೦೪

[26] ಎಂ.ಚಿದಾನಂದಮೂರ್ತಿ, ಪೂರ್ವೋಕ್ತ, ಪು.೧೮೧

[27] ಸೌ.ಇ.ಇ.೯-೧, ೨೯೭, ಕುರುಗೋಡು, ಕ್ರಿ.ಶ. ೧೧೭೭; ಎ.ಕ೫, ತೀ.ನರಸೀಪುರ ೮೮, ಕ್ರಿ.ಶ.೧೨೬೯; ಎ.ಇ.೧೫, ಪು.೮೭, ಸೂಡಿ, ಕ್ರಿ.ಶ.೧೦೫೮

[28] ಸೌ.ಇ.ಇ. ೨೦, ೭೪, ಕ್ರಿ.ಶ. ೧೧೧೨

[29] ಚನ್ನಕ್ಕ ಎಲಿಗಾರ, ಪೂರ್ವೋಕ್ತ, ಪು.೫೪

[30] ಕಿಶೋರ್ ಪ್ರಸಾದ್, ದೇವದಾಸೀಸ್ ಇನ್ ಕರ್ನಾಟಕ, ಪಿ.ಐ.ಹೆಚ್.ಸಿ., ೧೯೮೩, ಪು.೧೪೯