.೪ ವೀರಶೈವ ಸಿದ್ಧಾಂತ

ಕ್ರಿ.ಶ. ೧೨ನೆಯ ಶತಮಾನದಲ್ಲಿ ಕಾಣಿಸಿಕೊಂಡ ವೀರಶೈವ ಪಮ್ಥವು ಬ್ರಾಹ್ಮಣ ಏಕಸ್ವಾಮ್ಯವನ್ನು ಪ್ರಶ್ನಿಸುವತ್ತ ಹೆಜ್ಜೆಹಾಕಿತು. ಇದರಿಂದಾಗಿ ಹನ್ನೆರಡನೆಯ ಶತಮಾನವು ಕರ್ನಾಟಕದ ಚರಿತ್ರೆಯಲ್ಲಿ ಹೆಚ್ಚು ಕುತೂಹಲಕಾರಿಯಾದ ವಿಷಯಗಳನ್ನು ಒಳಗೊಂಡ ಅವಧಿಯಾಗಿ ಕಂಡುಬರುತ್ತದೆ. ಯಾವುದೇ ಒಂದು ಧರ್ಮವೂ ಆರಂಭಗೊಳ್ಳುವ ಸಂದರ್ಭದಲ್ಲಿ ಚುರುಕಾಗಿದ್ದಷ್ಟು ನಂತರದ ದಿನಗಳಲ್ಲಿ ಇರುವುದಿಲ್ಲ. ಚುರುಕಾಗಿದ್ದರೂ ಅದು ಆರಂಭದಲ್ಲಿ ಎತ್ತಿದ ಪ್ರಶ್ನೆಗಳಿಗೆ ಸಂಬಂಧಿಸಿದ್ದಾಗಿರುವುದಿಲ್ಲ. ಇದಕ್ಕೆ ಬೌದ್ಧ ಮತ್ತು ಜೈನ ಧರ್ಮಗಳು ಉತ್ತಮ ಉದಾಹರಣೆಗಳಾಗಿವೆ. ವೀರಶೈವ ಧರ್ಮವೂ ಇದರಿಂದ ಹೊರತಾಗಿಲ್ಲ. ಧಾರ್ಮಿಕ ಮುಖಂಡರ ಸ್ವಾರ್ಥ ಮತ್ತು ಲಾಲಸೆಗಳು ಪ್ರತಿಯೊಂದು ಧರ್ಮದಲ್ಲಿಯೂ ಇರುತ್ತವೆ ಹಾಗೂ ಅವೇ ಅತೃಪ್ತಿ ಬೆಳೆಯುವುದಕ್ಕೂ ಕಾರಣವಾಗುತ್ತವೆ. ಜನರು ಬದಲಾವಣೆಯನ್ನು ಬಯಸುತ್ತಿರುವುದನ್ನೇ ಬಂಡವಾಳವನ್ನಾಗಿಕೊಂಡು ಧಾರ್ಮಿಕ ಮುಖಂಡರು ಹೊಸ ಧರ್ಮಗಳನ್ನು ಹುಟ್ಟುಹಾಕುತ್ತಾರೆ. ಆದರೆ ಇಂಥ ಪ್ರಕ್ರಿಯೆಗಳಲ್ಲಿ ಕಂಡುಬರುವ ಸಾಮಾಜಿಕ ಕಳಕಳಿ ಮಾತ್ರ ಪ್ರಶ್ನಾರ್ಹವಾಗಿರುತ್ತದೆ. ವೀರಶೈವ ಎನ್ನುವ ಧಾರ್ಮಿಕ ವ್ಯವಸ್ಥೆಯು ಧಾರ್ಮಿಕ ಸಂಘರ್ಷದ ಸಂಕೇತವಾಗಿ ಹನ್ನೆರಡನೆಯ ಶತಮಾನದಲ್ಲಿ ಕಾಣಿಸಿಕೊಂಡಿತು. ಇದೊಂದು ಧಾರ್ಮಿಕ ಆಂದೋಲನವಾಗಿಯೂ ಬೆಳೆಯಿತು. ಈ ಆಂದೋಲನವನ್ನು ಹುಟ್ಟುಹಾಕಿದವರು ಬಸವೇಶ್ವರರು.[1]

ಬಸವೇಶ್ವರರು ತನ್ನ ಪರಿಸರದ ಸಮಾಜದಲ್ಲಿ ಬೆಳೆದುಬಂದಿದ್ದ ಧಾರ್ಮಿಕ ಮೌಡ್ಯವನ್ನು ವಿರೋಧಿಸಿ ನಿಲ್ಲುವ ಮಾಡಿದರು. ಅಂದಿನ ಸಂದರ್ಭದಲ್ಲಿ ವೈದಿಕ ಸಂಪ್ರದಾಯ ನಿಷ್ಠವೆಂದು ಹೇಳಿಕೊಳ್ಳುವ ವರ್ಣಾಶ್ರಮ ಪ್ರಧಾನ ಧರ್ಮದಲ್ಲಿ ಸಂಕುಚಿತ ಭಾವನೆ, ಶುಷ್ಕಕರ್ಮಗಳ ಮತ್ತು ನಿರ್ಜೀವ ಆಚಾರಗಳ ಆಡಂಬರವು ಬೆಳೆದು ಧಾರ್ಮಿಕ ಜಡತ್ವವು ಆಚರಿಸಿಕೊಂಡಿತ್ತು. ಅರಸರು ಹೊಂದಿದ್ದ ಧಾರ್ಮಿಕ ಸಾಮರಸ್ಯ ನೀತಿಯು ರಾಜಪ್ರಭುತ್ವಕ್ಕೆ ಅನುಕೂಲರವಾಗಿ ಪರಿಣಮಿಸಿತೇ ವಿನಹ ಜನಸಾಮಾನ್ಯರಿಗಲ್ಲ. ಮೇಲ್ವರ್ಗದವರು ಶೈವ, ಜೈನ, ಬೌದ್ಧ ದೇವರುಗಳಿಗಾಗಿ ಭವ್ಯವಾದ ಆಲಯಗಳನ್ನು ಕಟ್ಟಿಸಿ, ದೇವರ ಹೆಸರಿನಲ್ಲಿ ವೈಭವೋಪೇತ ಉತ್ಸವ-ಆಚರಗಳನ್ನು ನಡೆಸಿ, ದೇವರ ಹೆಸರಿನಲ್ಲಿ ಜನರಲ್ಲಿ ಅಂಧಾನುಕರಣೆಯ ಪ್ರವೃತ್ತಿಯನ್ನು ಬೆಳೆಯಿಸಿ, ಅದರ ದುರ್ಲಾಭವನ್ನು ಪಡೆಯುತ್ತಿದ್ದರು. ಈ ರೀತಿಯಾಗಿ ಜನಸಾಮಾನ್ಯರಲ್ಲಿ ಮೂಢನಂಬಿಕೆಗಳು, ಸಂಪ್ರದಾಯಗಳು, ಆಚಾರಗಳು ಹುಟ್ಟುವಂತೆ ಮಾಡಿ, ಸಾಮಾಜಿಕ ಭೇದಗಳು ದೇವನಿರ್ಮಿತವೆಂಬ ವಾದವನ್ನು ಮುಂದೂಡಲಾಯಿತು.[2] ಈ ದೇವ ನಿರ್ಮಿತ ಅಥವಾ ದೇವಕೇಂದ್ರಿತ ವಾದದ ಮೂಲಕ ಸಮಾಜದಲ್ಲಿ ಮೇಲು-ಕೀಳು ಭಾವನೆಯನ್ನು ಶಾಸನಬದ್ಧಗೊಳಿಸಲಾಯಿತು. ಇವುಗಳ ವಿರುದ್ಧ ಹೋರಾಡಲು ಬಸವೇಶ್ವರರು ಕಾರ್ಯನಿರತಾದರು.

ಅದ್ವೈತ, ದ್ವೈತ ಮತ್ತು ವಿಷಿಷ್ಟಾದ್ವೈತ ಸಿದ್ಧಾಂತಗಳು ಸಮಾಜದಲ್ಲಿನ ದಾಸ್ಯ ಮನೋಭಾವನೆ, ಅಸಮಾನತೆ, ಶೋಷಣೆಗಳನ್ನು ಸಮರ್ಥಿಸುವ ರೀತಿಯಲ್ಲಿ ಕಂಡುಬಂದವು. ಈ ಸಿದ್ಧಾಂತಗಳು ಸಮಕಾಲೀನ ಸಮಾಜದ ಸಮಸ್ಯೆಗಳನ್ನು ಪ್ರತಿಬಿಂಬಿಸಿದವೇ ಹೊರತು ಪರಿಹಾರದ ಕುರಿತು ಚಿಂತಿಸಲಿಲ್ಲ. ಎಲ್ಲ ಸಮಸ್ಯೆಗಳಿಗೂ ಭಗವಂತನಿಗೆ ಶರಣಾಗತಿಯಾಗುವುದು ಪರಿಹಾರ ಕುರಿತು ಚಿಂತಿಸಲಿಲ್ಲ. ಎಲ್ಲ ಸಮಸ್ಯೆಗಳಿಗೂ ಭಗವಂತನಿಗೆ ಶರಣಾಗತಿಯಾಗುವುದು ಪರಿಹಾರ ಎನ್ನುವ ದೇವಕೇಂದ್ರಿತ ವಾದ ಸಮಾಜವನ್ನು ಇನ್ನಷ್ಟು ಸಂಕೀರ್ಣಗೊಳಿಸಿತು. ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯ ವಿಶ್ಲೇಷಣೆಗೆ ಅವುಗಳಲ್ಲಿ ಆಸ್ಪದವಿರಲಿಲ್ಲ. ಧಾರ್ಮಿಕ ನಾಯಕರ ಬುದ್ಧಿಮತ್ತೆ, ತರ್ಕ, ವರ್ಚಸ್ಸು ಇವು ಮಾತ್ರ ಪ್ರಧಾನವಾಗಿದ್ದವು. ಶಂಕರ, ರಾಮಾನುಜ ಮತ್ತು ಮಧ್ವರ ಸಿದ್ಧಾಂತಗಳನ್ನು ಈ ಹಿನ್ನೆಲೆಯಿಂದಲೇ ನೋಡಬೇಕಾಗುತ್ತದೆ. ಇವರ‍್ಯಾರೂ ಬ್ರಾಹ್ಮಣ ಏಕಸ್ವಾಮ್ಯದ ವೈದಿಕ ಧರ್ಮವನ್ನು ಅದರ ಚೌಕಟ್ಟಿನಿಂದ ಹೊರಗೆ ನಿಂತು ವಿಶ್ಲೇಷಣೆ ನಡೆಸಲಿಲ್ಲ. ಬಸವೇಶ್ವರರು ಬ್ರಾಹ್ಮಣ ಏಕಸ್ವಾಮ್ಯವನ್ನು ಒಡೆಯುವ ಮತ್ತು ಧರ್ಮವನ್ನು ಸಾರ್ವಜನಿಕಗೊಳಿಸುವ ಪ್ರಯತ್ನವನ್ನು ಮಾಡಿದರು. ಇದರರ್ಥ ವೀರ ಶೈವ ಧರ್ಮವು ವೈದಿಕ ಧರ್ಮದ ಚೌಕಟ್ಟಿನಲ್ಲಿ ಬರುವುದಿಲ್ಲ ಎಂದಲ್ಲ. ಅಲ್ಲಿದ್ದುಕೊಂಡೇ ಬ್ರಾಹ್ಮಣಶಾಹಿಯ ಅಧಿಕಾರವನ್ನು ಕುಂಠಿತಗೊಳಿಸುವ ಕೆಲಸವನ್ನು ಮಾಡಲಾಯಿತು.

ಬಸವೇಶ್ವರರು ಕುಟುಂಬದಲ್ಲಿಯೇ ಹುಟ್ಟಿದರು. ಬ್ರಾಹ್ಮಣ ಏಕಸ್ವಾಮ್ಯವನ್ನು ಕಟುವಾಗಿ ವಿರೋಧಿಸಿದರು. ಬ್ರಾಹ್ಮಣ ಆಚಾರ-ವಿಚಾರ, ಸಂಪ್ರದಾಯ-ಆಚರಣೆ ಹಾಗೂ ಧಾರ್ಮಿಕ ದರ್ಪಿಷ್ಟತೆಯನ್ನು ಪ್ರತಿಭಟಿಸಿದರು. ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವಾಗಲೂ ವೀರಶೈವ ಸಿದ್ಧಾಂತದ ಪ್ರಚಾರಕ್ಕೆ ಬಸವೇಶ್ವರರು ಪ್ರಥಮ ಆದ್ಯತೆಯನ್ನು ನೀಡಿದ್ದರು.[3] ಆದರೆ ಬ್ರಾಹ್ಮಣರ ವಿರೋಧವನ್ನು ಕಟ್ಟಿಕೊಂಡಿರುವುದು ಬಸವೇಶ್ವರರ ಅಪಪ್ರಚಾರಕ್ಕೂ ಕಾರಣವಾಯಿತು. ಅದರಲ್ಲೂ ಮುಖ್ಯವಾಗಿ ಬಿಜ್ಜಳ ಮತ್ತು ಬಸವೇಶ್ವರರ ನಡುವೆ ಭಿನ್ನಾಭಿಪ್ರಾಯಗಳು ಮೂಡುವಂತೆ ಮಾಡಲಾಯಿತು.[4] ಸ್ಥಾಪಿತ ಸಮಾಜ ವ್ಯವಸ್ಥೆಯನ್ನು ಮುರಿಯುವ ಪ್ರಯತ್ನ ರಾಜ್ಯದಲ್ಲಿ ಅಶಾಂತಿ, ಅರಾಜಕತೆಗಳಿಗೆ ಕಾರಣವಾಗಬಹುದು ಎನ್ನುವ ಭಯ ಸಹಜವಾಗಿಯೇ ಬಿಜ್ಜಳನಿಗಿತ್ತು. ಅದನ್ನು ಸಮರ್ಥಿಸುವ ಬಸವ ವಿರೋಧಿಗಳ ಸಂಖ್ಯೆಯೂ ಸಾಕಷ್ಟಿತ್ತು. ಬಿಜ್ಜಳ ಮತ್ತು ಬಸವರ ನಡುವಿನ ಭಿನ್ನಾಭಿಪ್ರಾಯ ಸಾರ್ವಜನಿಕಗೊಂಡಿರುವುದು, ಮಧುವಯ್ಯ ಎಂಬ ಒಬ್ಬ ಬ್ರಾಹ್ಮಣನ ಮಗಳಿಗೂ ಹರಳಯ್ಯ ಎಂಬ ಅಸ್ಪೃಶ್ಯನ ಮಗನಿಗೂ ಅಂತರ್ಜಾತಿಯ ಮದುವೆ ಏರ್ಪಟ್ಟಾಗ.[5] ಬಸವೇಶ್ವರರು ತಮ್ಮ ಸಿದ್ಧಾಂತದಲ್ಲಿ ಅಸ್ಪೃಶ್ಯತೆಯನ್ನು ನಿರಾಕರಿಸಿದ್ದರು. ಜಾತಿವ್ಯವಸ್ಥೆಯ ವಿರುದ್ಧ ಆಂದೋಲನವನ್ನೇ ನಡೆಸಿ ಈ ಅಂತರ್ಜಾತಿಯ ವಿವಾಹಕ್ಕೆ ಸಂಪೂರ್ಣ ಬೆಂಬಲ ಆಂದೋಲನವನ್ನೇ ನಡೆಸಿ ಈ ಅಂತರ್ಜಾತಿಯ ವಿವಾಹಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದ್ದರು. ಆದರೆ ಇದರ ಪರಿಣಾಮ ರಾಜ್ಯವ್ಯವಸ್ಥೆಯೇ ಬುಡ ಮೇಲಾಗುವಂತೆ ಆಯಿತು. ಹರಳಯ್ಯ ಮತ್ತು ಮಧುವಯ್ಯರನ್ನು ಚಿತ್ರಹಿಂಸೆ ನೀಡುವುದರ ಮೂಲಕ ಶೂಲಕ್ಕೇರಿಸಲಾಯಿತು. ರಾಜ್ಯದಲ್ಲಿ ಅರಾಜಕತೆ ಕಾಣಿಸಿಕೊಂಡು ಬಿಜ್ಜಳನ ಕೊಲೆಯಾಯಿತು. ಬಸವೇಶ್ವರರು ಕಲ್ಯಾಣವನ್ನು ತೊರೆದು ಕೂಡಲಸಂಗಮಕ್ಕೆ ಹೋಗುವಂತಾಯಿತು. ಈ ಎಲ್ಲಾ ಬೆಳವಣಿಗೆಗಳು ಒಂದು ಸ್ಥಾಪಿತ ಸಮಾಜ ಸಮಾಜ ವ್ಯವಸ್ಥೆಯನ್ನು ಪ್ರಶ್ನಿಸಿದಾಗ ಏನೆಲ್ಲಾ ಅನಾಹುತಗಳಾಗುತ್ತವೆ ಎನ್ನುವುದಕ್ಕೆ ಉತ್ತಮ ನಿದರ್ಶನವಾಗಿ ಕಂಡುಬರುತ್ತವೆ.

ಬಸವೇಶ್ವರರು ಪ್ರತಿಪಾದಿಸಿದ ಸಿದ್ಧಾಂತವು ಕ್ರಿ.ಶ. ೧೨ನೆಯ ಶತಮಾನಕ್ಕೂ ಬಹಳ ಹಿಂದೆಯೇ ಅಸ್ತಿತ್ವದಲ್ಲಿತ್ತು ಎನ್ನುವ ವಾದವೂ ಇದೆ. ಈ ವಾದಕ್ಕೆ ಸಾಕಷ್ಟು ಆಧಾರಗಳೂ ಇವೆ. ಪಾಶುಪತ, ಕಾಳಾಮುಖ, ಲಾಕುಲ ಮಹೇಶ್ವರ ಮುಂತಾದವು ಶೈವಧರ್ಮದ ಬೇರೆ ಬೇರೆ ಪಂಥಗಳು.[6] ಇವು ಶಿವನನ್ನು ಪರಮ ನಿಯಾಮಕನನ್ನಾಗಿ ಗ್ರಹಿಸುತ್ತವೆ. ಅವೈದಿಕ ದೇವತೆಯಾಗಿದ್ದ ರುದ್ರ ಶಿವನಾಗಿ ಪರಿವರ್ತನೆ ಹೊಂದಿರುವುದು ಒಂದು ಚಾರಿತ್ರಿಕ ಬದಲಾವಣೆಯನ್ನು ಸೂಚಿಸುತ್ತದೆ.[7] ಶೈವ ಸಿದ್ಧಾಂತ ರೂಪುಗೊಂಡ ಮೇಲೆ ಶಿವ ಸಂಪೂರ್ಣವಾಗಿ ವೈದಿಕ ದೇವತೆಯಾಗಿ ಕಾಣಿಸಿಕೊಳ್ಳುತ್ತಾನೆ. ಈ ಸಿದ್ಧಾಂತವನ್ನು ಪ್ರತಿಪಾದಿಸಿದವರು ಪಾಶುಪತ, ಲಕುಲೀಶ, ಕಾಪಾಲಿಕ, ಕಾಳಾಮುಖ ಹಾಗೂ ಇವುಗಳ ಉಪವಿಭಾಗಗಳು.[8] ಇವರ ಸಿದ್ಧಾಂತಗಳಿಂದಾಗಿ ಶೈವ ಆರಾಧನೆಯು ಶಾಸ್ತ್ರೀಯಗೊಂಡು, ರಾಜಾಶ್ರಯವನ್ನೂ ಪಡೆದುಕೊಂಡು, ಪ್ರಾದೇಶಿಕ ದೇವತೆಗಳನ್ನು ತನ್ನೊಳಗೆ ಸೇರಿಸಿಕೊಂಡು ಬೆಳೆಯಿತು.[9] ಕ್ರಿ.ಶ. ೧೧ ಮತ್ತು ೧೨ನೆಯ ಶತಮಾನಗಳಲ್ಲಿ ಉಚ್ಛ್ರಾಯಸ್ಥಿತಿಯಲ್ಲಿದ್ದ ಪಾಶುಮತದ ಕಾಳಾಮುಖ ಶೈವ ಪಂಥವು ವೀರಶೈವ ಮತದ ಅಭಿವೃದ್ಧಿಗೆ ಕಾರಣವಾಯಿತು.[10] ಬಸವಣ್ಣನವರು ಈ ಶೈವ ಧರ್ಮಕ್ಕೆ ಒಂದು ಸಾಂಸ್ಥಿಕ ರೂಪಕೊಟ್ಟು ಅದನ್ನು ವ್ಯವಸ್ಥಿತವಾಗಿ ಬೆಳೆಸುವ ಪ್ರಯತ್ನ ಮಾಡಿದರು. ಜಡವಾಗಿದ್ದ ಶೈವ ಧರ್ಮಕ್ಕೆ ಚಾಲನೆಯನ್ನು ಕೊಡುವ ಕೆಲಸವನ್ನು ವೀರಶೈವ ಸಿದ್ಧಾಂತವು ಮಾಡಿತು.

ವೀರಶೈವ ಧರ್ಮದ ಸಿದ್ದಾಂತಗಳು ಅಂತಿಮ ರೂಪವನ್ನು ಪಡೆದುಕೊಂಡಿರುವುದು ಅನುಭವ ಮಂಟಪದಲ್ಲಿ. ಅನುಭವ ಮಂಟಪವು ವೀರಶೈವ ಧರ್ಮದ ಕುರಿತು ಚರ್ಚಿಸುವ ಒಂದು ವೇದಿಕೆಯಾಗಿತ್ತು.[11] ಅಲ್ಲಮಪ್ರಭು, ಬಸವೇಶ್ವರ, ಚೆನ್ನಬಸವ, ಸಿದ್ಧರಾಮ, ಅಕ್ಕಮಹಾದೇವಿ, ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ ಮೊದಲಾದವರು ಅನುಭವ ಮಂಟಪದಲ್ಲಿ ಸೇರಿ ವೀರಶೈವ ಸಿದ್ಧಾಂತದ ವಿಧಿವಿಧಾನಗಳನ್ನು ರೂಪಿಸುವ ಹಾಗೂ ಅದಕ್ಕೊಂದು ಸೈದ್ಧಾಂತಿಕ ಚೌಕಟ್ಟನ್ನು ನಿರ್ಮಿಸುವ ಕೆಲಸವನ್ನು ಮಾಡಿದರು. ವೀರಶೈವ ಸಿದ್ಧಾಂತವು ಅಭಿವ್ಯಕ್ತಗೊಂಡಿರುವುದು ವಚನಗಳಲ್ಲಿ.[12] ವಚನಗಳು ಸರಳವಾದ ಭಾಷೆಯಲ್ಲಿ ರಚನೆಗೊಂಡವು. ವೀರಶೈವ ಸಿದ್ಧಾಂತದ ಪ್ರಚಾರಕ್ಕೆ ಇದು ಒಂದು ಪ್ರಮುಖ ಕಾರಣವಾಯಿತು. ವಚನಗಳು ಸರಳವಾದ ಕನ್ನಡದಲ್ಲಿ ರಚನೆಗೊಂಡು ಜನರನ್ನು ಮುಟ್ಟುವಂತಾಯಿತು. ಶಂಕರ, ರಾಮಾಜುನ, ಮಧ್ವ ಈ ಮೂವರು ಆಚಾರ್ಯರು ತಮ್ಮ ಬುದ್ಧಿಶಕ್ತಿ, ತರ್ಕವನ್ನು ಪ್ರದರ್ಶಿಸಲು ಸಂಸ್ಕೃತ ಭಾಷೆಯನ್ನು ಮಾಧ್ಯಮವನ್ನಾಗಿ ಬಳಸಿಕೊಂಡಿದ್ದರು. ಇದರಿಂದಾಗಿ ಅವರ ಉಪದೇಶಗಳು ಎಲ್ಲರನ್ನು ತಲುಪಲು ಸಾಧ್ಯವಾಗಲಿಲ್ಲ. ವಚನವೆಂದರೆ ಮಾತು ಕೊಡುವುದು ಎಂದರ್ಥ. ಅಂದರೆ ಹೊಸ ಸಮಾಜವನ್ನು ನಿರ್ಮಿಸುವ ಸಲುವಾಗಿ ಕೊಟ್ಟ ಮಾತು ಎಂದಾಗುತ್ತದೆ.[13] ಬಸವೇಶ್ವರ ಮತ್ತು ಅವರ ಸಹಚರರು ತಮ್ಮ ಕಾರ್ಯ ಚಟುವಟಿಕೆಗಳಿಂದ ವೀರಶೈವ ಧರ್ಮವನ್ನು ಶೈವ ಧರ್ಮದ ಬೆಳವಣಿಗೆಯಲ್ಲಿಯೇ ಹೆಚ್ಚು ಪರಿಪೂರ್ಣತೆಯನ್ನು ಸಾಧಿಸಿದ ಶಾಖೆಯನ್ನಾಗಿ ಮಾಡಿದರು.[14]

ಬಸವೇಶ್ವರರು ತಮ್ಮ ಚಿಂತನೆಗಳಲ್ಲಿ ಅಂದಿನ ಸಮಾಜದ ಲಕ್ಷಣಗಳಾದ ಜಾತಿವ್ಯವಸ್ಥೆ, ಅಸ್ಪೃಶ್ಯತೆ, ದಾಸ್ಯ ಮನೋಭಾವ ಮುಂತಾದವುಗಳನ್ನು ಸಮರ್ಥವಾಗಿ ಪ್ರತಿಬಿಂಬಿಸಿ ಪರಿಹಾರದ ಮಾರ್ಗಗಳನ್ನು ಸೂಚಿಸಿದರು. ಈ ಕಾರಣದಿಂದಾಗಿ ಅವರ ಸಿದ್ಧಾಂತವು ಶಕ್ತಿಯುತವಾಗಿ ಮೂಡಿ ಬರುವಂತಾಯಿತು. ವೀರ ಅಥವಾ ಪರಾಕ್ರಮಯುತ ಶೈವಧರ್ಮ ಎನ್ನುವ ಹೆಸರು ಈ ಹಿನ್ನೆಲೆಯಿಂದಲೇ ಬಂತು.[15] ಬಸವೇಶ್ವರರು ರಾಜಕಾರಣಿಯೂ ಆಗಿದ್ದರಿಂದಾಗಿ ತಮ್ಮ ವಿಚಾರಗಳನ್ನು ಸಮರ್ಥವಾಗಿ ಪ್ರತಿಪಾದಿಸಲು ಸಾಧ್ಯವಾಯಿತು ಎನ್ನುವ ಮಾತು ಇದ್ದರೂ,[16] ಅದನ್ನು ಒಪ್ಪಲು ಸಾಧ್ಯವಾಗುವುದಿಲ್ಲ. ಏಕೆಂದರೆ ರಾಜಕಾರಣವು ಎಂಬುದಾಗಿ ಬೇರೆಯೇ ರೀತಿಯಲ್ಲಿ ವ್ಯಾಖ್ಯಾನಿಸಲು ಸಾಧ್ಯವಿದೆ, ಈ ರೀತಿಯ ವ್ಯಾಖ್ಯಾನಕ್ಕೆ ಸಾಕಷ್ಟು ಚಾರಿತ್ರಿಕ ಆಧಾರಗಳೂ ಲಭ್ಯವಿವೆ. ಬಸವೇಶ್ವರರು ರಾಜಕೀಯದೊಂದಿಗೆ ಧರ್ಮವನ್ನು ಸಮೀಕರಿಸಿಕೊಂಡಿರುವುದರ ಬಗ್ಗೆ ಉಲ್ಲೇಖಗಳು ಸಿಗುವುದಿಲ್ಲ. ಇದರರ್ಥ ಅರಸರು, ಅಧಿಕಾರಿಗಳು ರಾಜಕೀಯ ಉದ್ದೇಶಗಳಿಗೆ ಧರ್ಮವನ್ನು ಬಳಸಿಕೊಂಡಿರಲಿಲ್ಲ ಎನ್ನುವುದಲ್ಲ. ರಾಜಕೀಯ ಉದ್ದೇಶಗಳಿಗೆ ಧರ್ಮವನ್ನು ಹಾಗೂ ಧರ್ಮದ ಪ್ರಚಾರಕ್ಕೆ ರಾಜಕೀಯ ಪ್ರಭಾವವನ್ನು ಬಳಸುವುದು ರಾಜಪ್ರಭುತ್ವದ ಸಂದರ್ಭದಲ್ಲಿ ನಿರಂತರವಾಗಿ ನಡೆಯುತ್ತಿದ್ದ ಒಂದು ಪ್ರಕ್ರಿಯೆ. ಒಂದು ಚರಿತ್ರೆಯ ಅಧ್ಯಯನದಿಂದ ಸ್ಪಷ್ಟವಾಗುತ್ತದೆ.

ವೀರಶೈವ ಸಿದ್ದಾಂತವು ಹೆಚ್ಚು ಪ್ರಚಾರಗೊಳ್ಳುವುದಕ್ಕೆ ಅಂದಿನ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳು ಪ್ರಮುಖವಾಗಿ ಕಾರಣವಾದವು ಎನ್ನುವ ವಾದವನ್ನು ಆರ್.ಎನ್.ನಂದಿ ಅವರು ಮಂಡಿಸಿದರು.[17] ಕ್ರಿ.ಶ. ೧೦ ರಿಂದ ೧೪ನೆಯ ಶತಮಾನಗಳ ನಡುವಣ ಅವಧಿಯಲ್ಲಾದ ಪರಿವರ್ತನೆಗಳನ್ನು ಗಮನಿಸಿದಾಗ ನಂದಿ ಅವರ ವಾದ ಸರಿ ಎಂದು ತೋರುತ್ತದೆ. ಈ ಅವಧಿಯಲ್ಲಿ ಕೃಷಿ ಮತ್ತು ಕೃಷೆಯೇತರ ಚಟುವಟಿಕೆಗಳು ಚುರುಕುಗೊಂಡು ನೂತನ ಸಂಘ ಸಂಸ್ಥೆಗಳು ಹುಟ್ಟಿಕೊಂಡವು. ವರ್ತಕರು, ಕುಶಲಕರ್ಮಿಗಳು ಸಂಘಗಳು ರಚಿಸಿಕೊಂಡು ರಾಜ್ಯದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವನ್ನು ಬೀರುವಷ್ಟು ಪ್ರಭಾವವನ್ನು ಗಳಿಸಿಕೊಂಡಿದ್ದರು. ಕೃಷಿಯ ವಿಸ್ತರಣೆ, ಹೊಸ ಪೇಟೆ-ಪಟ್ಟಣಗಳ ನಿರ್ಮಾಣ ಮುಂತಾದವು ಸಾಮಾಜಿಕ-ಆರ್ಥಿಕ ಪರಿವರ್ತನೆಯನ್ನು ಸೂಚಿಸಿದವು. ಬ್ರಾಹ್ಮಣ ವರ್ಗ ಮತ್ತು ಬ್ರಾಹ್ಮಣೇತರ ಮೇಲ್ವರ್ಗದ ಜನರು ಪರಿವರ್ತನೆಯನ್ನು ಸೂಚಿಸಿದವು. ಬ್ರಾಹ್ಮಣ ವರ್ಗ ಮತ್ತು ಬ್ರಾಹ್ಮಣೇತರ ಮೇಲ್ವರ್ಗದ ಜನರು ನಡೆಸುತ್ತಿದ್ದ ಶೋಷಣೆ ಜನರಲ್ಲಿ ಅಸಮಾಧಾನವನ್ನು ಉಂಟು ಮಾಡಿದ್ದವು. ಭೂಮಾಲೀಕರು, ಭೂಮಾಲೀಕರಂತೆ ವರ್ತಿಸುತ್ತಿದ್ದ ದೇವಾಲಯಗಳು, ಬ್ರಾಹ್ಮಣ ಏಕಸ್ವಾಮ್ಯತೆ ಇವು ವಿಶ್ವಾಸಕ್ಕೆ ಯೋಗ್ಯವಲ್ಲವಾದವು. ಬದಲಾಗುತ್ತಿದ್ದ ಸಾಮಾಜಿಕ ಸಂದರ್ಭದಲ್ಲಿ ಅದಕ್ಕೆ ಸರಿಹೊಂದುವ ಚಿಂತನೆಗಳು ಬೇಕಾಗುತ್ತಿದ್ದು, ವೀರಶೈವ ಸಿದ್ಧಾಂತವು ಆ ಅರ್ಹತೆಯನ್ನು ಅಂದಿನ ಸಂದರ್ಭದಲ್ಲಿ ಪಡೆದುಕೊಂಡಿತ್ತು. ಕೃಷಿಕರು, ವರ್ತಕರು ಮತ್ತು ಕುಶಲಕರ್ಮಿಗಳು ಬ್ರಾಹ್ಮಣ ಧರ್ಮವನ್ನು ವಿರೋಧಿಸಿದರೂ, ಧರ್ಮವನ್ನು ನಿರಾಕರಿಸುವಂತಿರಲಿಲ್ಲ. ಅವರು ವೀರಶೈವ ಸಿದ್ಧಾಂತಗಳಿಂದ ಪ್ರೇರೇಪಿತರಾದರು ಎಂದಾಗ ಧಾರ್ಮಿಕ ಚೌಕಟ್ಟಿನೊಳಗೇ ವ್ಯವಹರಿಸುತ್ತಿದ್ದರು ಎಂದಾಗುತ್ತದೆ. ಧರ್ಮವು ಅಂದಿನ ಸಂದರ್ಭದಲ್ಲಿ ಬದುಕಿನ ಅನಿವಾರ್ಯ ಅಥವಾ ಅವಿಭಾಜ್ಯ ಅಂಗ ಎನ್ನುವ ರೀತಿಯಲ್ಲಿ ವ್ಯಾಖ್ಯಾನಗೊಂಡಿತ್ತು ಎನ್ನುವುದು ಮೇಲಿನ ವಿವರಣೆಗಳಿಂದ ಸ್ಪಷ್ಟವಾಗುತ್ತದೆ.

ವೀರಶೈವ ಸಿದ್ಧಾಂತವು ವರ್ತಕರು, ಕುಶಲಕರ್ಮಿಗಳು ಹಾಗೂ ಕೃಷಿಕರಿಂದ ಆಕರ್ಷಿತವಾಗಲು ಒಂದು ಮುಖ್ಯ ಕಾರಣವೆಂದರೆ ‘ಕಾಯಕವೇ ಕೈಲಾಸ’ ಎನ್ನುವ ತತ್ವ.[18] ಕೃಷಿ ಮತ್ತು ಉದ್ದಿಮೆಗಳ ಕಾರ್ಮಿಕರನ್ನು ಪ್ರಾಣಿಗಳಂತೆ ನೋಡುತ್ತಿದ್ದ ಅಂದಿನ ಸಮಾಜದಲ್ಲಿ ಅವರ ಶ್ರಮಕ್ಕೆ ತಕ್ಕ ಪ್ರತಿಫಲವಾಗಲಿ, ಗೌರವವಾಗಲಿ ಸಿಗುತ್ತಿರಲಿಲ್ಲ. ಬಸವೇಶ್ವರರು ವ್ಯಕ್ತಿಯು ತನ್ನ ಕೆಲಸದ ಮೇಲೆ ಅಥವಾ ಪರಿಶ್ರಮದ ಮೇಲೆ ವಿಶ್ವಾಸ ಇಡುವಂತೆ ಮಾಡಿದರು. ಅವರ ಮೋಕ್ಷದ ಕಲ್ಪನೆಯೂ ಈ ಹಿನ್ನೆಲೆಯಿಂದಲೇ ಪ್ರತಿಪಾದಿಸಲ್ಪಟ್ಟಿತು. ಮಾನವನ ಬದುಕು ಪರಿಶ್ರಮಗಳಿಂದ ಕೂಡಿದೆ, ಅದರಲ್ಲಿ ಯಾತನೆ ಅನುಭವಿಸಲು ಸಂದರ್ಭ ಉಂಟಾಗುವುದಿಲ್ಲ, ಬದುಕೇ ಒಂದು ಕಾಯಕ ಎಂದು ಒಪ್ಪಿಕೊಳ್ಳುವುದೇ ಮೋಕ್ಷಕ್ಕೆ ದಾರಿ ಎನ್ನುವ ತತ್ವವನ್ನು ಬೋಧಿಸಿದರು. ಬದುಕನ್ನೂ, ಜಗತ್ತನ್ನೂ ದಿಟ್ಟತನದಿಂದ, ಪರಾಕ್ರಮದಿಂದ ಎದುರಿಸಬೇಕು. ಮಾನವ ತನ್ನ ಶಕ್ತಿ, ಸಾಮರ್ಥ್ಯದ ಮೇಲೆ ವಿಶ್ವಾಸವಿಟ್ಟು ಕೆಲಸಮಾಡಿದಾಗ ಮೋಕ್ಷ ಪ್ರಾಪ್ತಿಯಾಗುವುದು ಖಂಡಿತ ಎನ್ನುವ ತತ್ವವನ್ನು ವಚನಗಳ ಮೂಲಕ ಪ್ರಚಾರಪಡಿಸಲಾಯಿತು.[19] ಆದರೆ ಬಸವೇಶ್ವರರ ಈ ಸಿದ್ಧಾಂತ ದುಡಿಯುವ ವರ್ಗಗಳಿಗೆ ತಮ್ಮ ಬದುಕನ್ನು ವ್ಯವಸ್ಥಿತಗೊಳಿಸಲು ಎಷ್ಟರಮಟ್ಟಿಗೆ ಸಹಕಾರಿಯಾಯಿತು ಎನ್ನುವುದನ್ನೂ ಪರಿಶೀಲಿಸಬೇಕಾಗುತ್ತದೆ. ದುಡಿಯುವ ವರ್ಗಗಳ ಶ್ರಮ ಅವರ ಬದುಕಿಗಿಂತ ಹೆಚ್ಚಾಗಿ ಇತರರ ಬದುಕಿಗಾಗಿ ಮೀಸಲಾಗಿರುತ್ತದೆ. ದುಡಿಯುವ ವರ್ಗಗಳು ಹೆಚ್ಚುವರಿ ಶ್ರಮವನ್ನು ವಿನಿಯೋಗಿಸಿ ಉತ್ಪಾದಿಸುವ ಹೆಚ್ಚುವರಿ ಉತ್ಪಾದನೆಯೇ ಅವರ ಶೋಷಣೆಗೆ ಕಾರಣವಾಗುತ್ತದೆ. ಇದರಿಂದಾಗಿ ಉತ್ಪಾದನೆಯಲ್ಲಿ ಹೆಚ್ಚೆಚ್ಚು ಜನರು ತೊಡಗಿಕೊಂಡರು ಎಂದಾಗ ಅವರೆಲ್ಲರ ಜೀವನಮಟ್ಟ ಉತ್ತಮಗೊಂಡಿತು ಎಂದರ್ಥವಲ್ಲ.

ಅದು ಬೀರಿದ ಪ್ರಭಾವ-ಪರಿಣಾಮ, ಸಿಕ್ಕಿರುವ ರಾಜಾಶ್ರಯ ಹಾಗೂ ಅಂದು ಪ್ರಚಾರದಲ್ಲಿದ್ದ ಇತರ ಧಾರ್ಮಿಕ ಸಿದ್ಧಾಂತಗಳೊಂದಿಗೆ ಹೊಂದಿದ್ದ ಸಂಬಂಧ ಮುಂತಾದ ವಿಚಾರಗಳ ಕುರಿತು ಇಲ್ಲಿ ಚರ್ಚೆ ನಡೆಸಲಾಯಿತು. ಕರ್ನಾಟಕದಲ್ಲಿ ಜೈನ ಧರ್ಮವು ವಿಕಾಸಹೊಂದುವುದಕ್ಕೆ ಭದ್ರ ತಳಹದಿ ಹಾಕಿಕೊಟ್ಟವರು ಗಂಗರು.[20] ಗಂಗ ಅರಸರಾದ ಮಾರಸಿಂಹ ಮತ್ತು ಅವನ ಮಗ ರಾಚಮಲ್ಲರಿಗೆ ಮಂತ್ರಿ, ಸೇನಾಧಿಪತಿಯಾಗಿದ್ದ ಚಾಮುಂಡರಾಯನು ಶ್ರವಣಬೆಳಗೊಳದ ವಿಂಧ್ಯಗಿರಿಯ ಮೇಲೆ ಬಾಹುಬಲಿ ಮೂರ್ತಿಯನ್ನು ಸ್ಥಾಪಿಸಿದನು. ಚಾಮುಂಡರಾಯನು ‘ಚಾಮುಂಡರಾಯಪುರಾಣ’ ಎನ್ನುವ ಕೃತಿಯನ್ನು ರಚಿಸಿ ಜೈನ ಸಾಹಿತ್ಯ ಮತ್ತು ಸಂಸ್ಕೃತಿಗಳೆರಡೂ ಹೆಚ್ಚಿನ ಪ್ರೋತ್ಸಾಹ ಮತ್ತು ಪ್ರಚಾರವನ್ನು ಪಡೆಯುವಂತೆ ಮಾಡಿದನು. ರಾಷ್ಟ್ರಕೂಟರ ಆಳ್ವಿಕೆಯೂ ಕರ್ನಾಟಕದಲ್ಲಿ ಜೈನಧರ್ಮವು ಏಳಿಗೆ ಹೊಂದುವುದಕ್ಕೆ ಸಹಕಾರಿಯಾಯಿತು. ಆದಿಪುರಾಣ, ಪ್ರಶ್ನೋತ್ತರ ರತ್ನಮಾಲಿಕಾ, ಅಮೋಘವೃತ್ತಿ, ಉತ್ತರಪುರಾಣ ಮುಂತಾದ ಜೈನ ಧರ್ಮವನ್ನು ಕುರಿತ ಗ್ರಂಥಗಳು ಈ ಅವಧಿಯಲ್ಲಿ ರಚನೆಗೊಂಡವು.[21] ಜಿನಸೇನಾಚಾರ್ಯ, ಗುಣಭದ್ರಾಚಾರ್ಯ ಮುಂತಾದ ಜೈನ ಆಚಾರ್ಯರು ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಆಶ್ರಯವನ್ನು ಪಡೆದುಕೊಂಡರು.

ಕಲ್ಯಾಣಿ ಚಾಲುಕ್ಯರು, ಕಲಚೂರಿಗಳು ಮತ್ತು ಹೊಯ್ಸಳರ ಆಳ್ವಿಕೆಯಲ್ಲಿ ಜೈನ ಧರ್ಮವು ಪ್ರಾಧಾನ್ಯತೆಯನ್ನು ಗಳಿಸಿಕೊಂಡಿತು. ಅದೇ ರೀತಿ ಸಾಮಂತ ಅರಸರುಗಳಾದ ಸೌಂದತ್ತಿಯ ರಟ್ಟರು, ಕಡೂರಿನ ಸೇನವಾರರು, ಕೊಲ್ಲಾಪುರದ ಶಿಲಾಹಾರರು, ಹಾಡುಹಳ್ಳಿಯ ಸಾಳುವರು, ಹುಣಸೂರಿನ ಚೆಂಗಾಳ್ವರು, ಹಾಸನದ ಕೊಂಗಾಳ್ವರು, ತೀರ್ಥಹಳ್ಳಿಯ ಶಾಂತರಸರು ಮುಂತಾದವರು ಕರ್ನಾಟಕದ ವಿವಿಧ ಭಾಗಗಳಲ್ಲಿ ಜೈನ ಧರ್ಮವು ಪ್ರಚಾರಕ್ಕೆ ವರುವಂತೆ ಮಾಡಿದರು. ಅಜಿತಪುರಾಣ ಪುರಾಣ, ಆದಿಪುರಾಣ, ಜಾತಕ ತಿಲಕ ಮುಂತಾದ ಜೈನ ಕೃತಿಗಳು ರಚನೆಗೊಂಡಿದ್ದೇ ಅಲ್ಲದೆ ನೂರಾರು ಜೈನ ಬಸದಿಗಳು ನಿರ್ಮಾಣಗೊಂಡವು. ಹೊಯ್ಸಳರ ಆಳ್ವಿಕೆಯ ಸಂದರ್ಭದಲ್ಲಿ ರಾಮಾನುಜಾಚಾರ್ಯರು ಪ್ರಚಾರಪಡಿಸಿದ ವೈಷ್ಣವ ಮತವು ಜೈನ ಧರ್ಮದ ಪ್ರಚಾರಕ್ಕೆ ಅಡ್ಡಿಯಾಯಿತು ಎನ್ನುವ ವಾದವು ಇದೆ. ಅದೇ ರೀತಿ ಹನ್ನೆರಡನೆಯ ಶತಮಾನದಲ್ಲಿ ಕಾಣಿಸಿಕೊಂಡ ವೀರಶೈವ ಆಂದೋಲನವು ಜೈನ ಧರ್ಮವು ನಿಧಾನವಾಗಿ ತನ್ನ ನೆಲೆಯನ್ನು ಕಳೆದುಕೊಳ್ಳುವಂತೆ ಮಾಡಿತು ಎನ್ನುವ ಅಭಿಪ್ರಾಯ ಅನೇಕ ಚರಿತ್ರೆಕಾರರದ್ದು.[22] ಈ ರೀತಿಯ ಅಡೆತಡೆಗಳು ಜೈನ ಧರ್ಮ ಮಾತ್ರವಲ್ಲದೆ ಇತರ ಎಲ್ಲ ಧರ್ಮಗಳ ಅಧ್ಯಯನದ ಸಂದರ್ಭದಲ್ಲೂ ಕಾಣಬರುವ ಸಾಮಾನ್ಯ ಲಕ್ಷಣವಾಗಿದೆ. ಶೈವ, ವೈಷ್ಣವ ಮತ್ತು ವೀರಶೈವ ಧರ್ಮಗಳು ಜೈನಧರ್ಮದ ಪ್ರಬಲ ಎದುರಾಳಿಗಳಾಗಿದ್ದವು. ಯಾವುದೇ ಒಂದು ಧರ್ಮ ಚರಿತ್ರೆಯ ಎಲ್ಲ ಅವಧಿಗಳಲ್ಲೂ ಉಚ್ಛ್ರಾಯ ಸ್ಥಿತಿಯಲ್ಲಿರಲು ಸಾಧ್ಯವಿಲ್ಲ. ಇದು ಜೈನ ಧರ್ಮಕ್ಕೂ ಸಂಬಂಧಿಸಿದ ಹೇಳಿಕೆಯಾಗುತ್ತದೆ. ಆದರೆ ಕ್ರಿ.ಶ. ೮ ರಿಂದ ೧೪ನೆಯ ಶತಮಾನಗಳ ನಡುವಣ ಅವಧಿಯಲ್ಲಿ ಜೈನಧರ್ಮವು ಕೆಲವೊಂದು ಏರಿಳಿತಗಳೊಂದಿಗೆ ತನ್ನ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನೇ ಕಂಡಿತು.

ಜೈನಧರ್ಮವು ರಾಜ್ಯಾಶ್ರಯವನ್ನು ಮತ್ತು ರಾಜಾಶ್ರಯವನ್ನು ಪಡೆದುಕೊಂಡಂತೆ ತನ್ನ ಸಿದ್ಧಾಂತವನ್ನು ಹೆಚ್ಚೆಚ್ಚು ಪ್ರತಿಪಾದಿಸಲಾರಂಭಿಸಿತು. ವೈದಿಕ ಧರ್ಮದ ದರ್ಪಿಷ್ತತೆಯಿಂದ ಬೇಸತ್ತ ಜನತೆಗೆ ಜೈನ ಸಿದ್ಧಾಂತವು ಆರಂಭಿಕ ಹಂತದಲ್ಲಿ ಆಕರ್ಷಿಣೀಯವಾಗಿ ಕಂಡುಬಂತು. ಜಿನನಿಂದ ಬೋಧಿಸಲ್ಪಟ್ಟ ಧರ್ಮವೇ ಜೈನಧರ್ಮ ಎನ್ನುವ ಹೆಸರನ್ನು ಪಡೆದುಕೊಂಡಿತು. ಜಿನನನ್ನು ದೇವನೆಂದು ಪೂಜಿಸುವವರು ಜೈನರೆನಿಸಿಕೊಂಡರು. ಜಿನನೆಂದರೆ ತನ್ನ ಪೌರುಷದ ಬಲದಿಂದ ತನ್ನಲ್ಲಿರುವ ಕಾಮ ಕ್ರೋಧಾದಿ ವಿಕಾರಗಳನ್ನು ಎಂದರ್ಥ. ಪ್ರತಿಯೊಬ್ಬ ಜೀವಾತ್ಮನೂ ಪರಮಾತ್ನನಾಗಬಲ್ಲನು. ಜಿನನಾಗಬಲ್ಲನು ಎನ್ನುವುದು ಜೈನ ಸಿದ್ಧಾಂತದ ನಿಲುವು. ಜಿನನಾಗಬೇಕಾದರೆ ಅಥವಾ ಆಸೆ-ಆಕಾಂಕ್ಷೆಗಳನ್ನು ಜಯಿಸಬೇಕಾದರೆ ಸರ್ವಜ್ಞನಾಗುವುದು ಹಾಗೂ ಆ ಅವಸ್ಥೆಯಲ್ಲಿ ಉಪದೇಶಿಸಿದ ಧರ್ಮವು ಯಾವಾಗಲೂ ಪ್ರಾಮಾಣಿಕವಾಗಿರುವುದು. ಈ ನಂಬಿಕೆಗಳು ಜೈನಧರ್ಮದ ತಿರುಳುಗಳಾಗಿದ್ದವು. ಇಪ್ಪತ್ನಾಲ್ಕು ತೀರ್ಥಂಕರರನ್ನು ಜೈನರು ಜಿನರೆಂದು ಪೂಜಿಸಲಾರಂಭಿಸಿದರು. ಇವರು ಧರ್ಮ ಸ್ಥಾಪಕರು ಮತ್ತು ಮೋಕ್ಷವನ್ನು ಒದಗಿಸುವವರು ಎನ್ನುವ ನಂಬಿಕೆ ಜೈನರದ್ದು. ವೈದಿಕ ಧರ್ಮದ ರೀತಿಯಲ್ಲಿಯೇ ಜೈನಧರ್ಮವೂ ಮೋಕ್ಷದ ಕಲ್ಪನೆಯನ್ನು ಪ್ರತಿಪಾದಿಸಿತು.[23] ಆದರೆ ಮೋಕ್ಷ ಮಾರ್ಗವನ್ನು ಬೋಧಿಸುವ ವಿಧಾನದಲ್ಲಿ ವ್ಯತ್ಯಾಸಗಳಿದ್ದವು.

ಜೀವವು ಕರ್ಮದಿಂದ ಸಂಪೂರ್ಣವಾಗಿ ಬಿಡುಗಡೆ ಹೊಂದುವುದೇ ಮುಕ್ತಿ ಎನ್ನುವುದು ಜೈನರ ಮೋಕ್ಷದ ಕಲ್ಪನೆ. ಕರ್ಮಗಳಿಂದ ಕೂಡಿದ ಆತ್ಮವು ಸ್ವತಂತ್ರವಾಗಿರುತ್ತದೆ ಎಂಬ ಮಾತನ್ನು ಅದು ಪ್ರತಿಪಾದಿಸಿತು. ರಾಗ-ದ್ವೇಷಗಳಿಂದ ಕೂಡಿದ ಆತ್ಮವು ಸ್ವತಂತ್ರವಾಗಿರುವುದಿಲ್ಲ, ಅದು ಹಿಂಸೆಗೆ ಪ್ರೇರಕವಾಗಿರುತ್ತದೆ ಎಂದು ಹೇಳಲಾಯಿತು. ಸಂಪೂರ್ಣವಾಗಿ ಹಿಂಸೆಯಿಂದ ನಿವೃತ್ತವಾಗುವುದನ್ನು ಅಹಿಂಸೆ ಎಂಬುದಾಗಿ ಕರೆಯಲಾಯಿತು. ಇದು ಜೈನ ಸಿದ್ಧಾಂತದ ಪ್ರಮುಖ ಪ್ರತಿಪಾದನೆ. ಪ್ರತಿಯೊಂದು ಆತ್ಮವೂ ತಾತ್ವಿಕ ದೃಷ್ಟಿಯಿಂದ ಸಮಾನವಾಗಿದೆ ಎನ್ನುವುದು ಜೈನ ಆತ್ಮವಿದ್ಯೆಯ ಸಾರ. ಈ ಆತ್ಮಸಮಭಾವವನ್ನು ನಿತ್ಯ ಜೀವನದಲ್ಲಿ ಆಚರಣೆಗೆ ತರಲಿಕ್ಕೆ ಯತ್ನಿಸುವುದೇ ಅಹಿಂಸೆ. ಆಗಮಗಳು ಆತ್ಮ ಸಮಾನತೆಯ ತತ್ವ ಅಹಿಂಸೆಯ ವಿಚಾರವನ್ನು ಸಮರ್ಥಿಸುವುದನ್ನು ಹೇಳುತ್ತವೆ. ಜೈನರ ತತ್ತಶಾಸ್ತ್ರ, ನೀತಿಶಾಸ್ತ್ರ ಮತ್ತು ಅಹಿಂಸೆಯ ಕಲ್ಪನೆಗಳಲ್ಲಿ ಅನೇಕಾಂತ ದೃಷ್ಟಿಯು ಹಾಸುಹೊಕ್ಕಾಗಿದೆ. ಸತ್ಯವು ಅನಂತ ಮುಖಗಳಿಂದ ಕೂಡಿದ್ದು, ಅದನ್ನು ತಿಳಿಯಬಹುದಾದ ದೃಷ್ಟಿಕೋನದಲ್ಲಿಯೂ ಅನೇಕತ್ವವಿರುತ್ತದೆ ಎನ್ನುವುದು ಜೈನರ ವಾದ. ಜೈನಧರ್ಮವು ತನ್ನ ಆಚಾರ, ವಿಚಾರಗಳಲ್ಲಿ ಸಾಮ್ಯ, ಸಮಭಾವಗಳಿಗೆ ಹೆಚ್ಚಿನ ಮಹತ್ವಕೊಡುತ್ತದೆ. ಇದನ್ನೇ ಜೈನ ಧರ್ಮದ ಸ್ಯಾದ್ವಾದ ಎಂಬುದಾಗಿ ಕರೆಯಲಾಗಿದೆ. ಕೇವಲ ತನ್ನ ವಿಚಾರ, ತನ್ನ ದೃಷ್ಟಿಗಳೇ ಅಂತಿಮ ಸತ್ಯವೆಂದು ನಂಬುವುದು, ಹಟ ಹಿಡಿಯುವುದು ಸಾಮ್ಯಭಾವನೆಗೆ ಘಾತುಕವಾಗಿದೆ. ಅದರಿಂದ ಅನ್ಯರ ದರ್ಶನಗಳನ್ನು ಆದರದಿಂದ ಕಾಣಲು ಸಾಧ್ಯವಿಲ್ಲ ಎನ್ನುವುದನ್ನು ಜೈನಧರ್ಮವು ಬೋಧಿಸುತ್ತದೆ. ಈ ವಾದವು ಅನೇಕಾಂತವಾದದ ಮೂಲಭೂಮಿಕೆಯೂ ಆಗಿದೆ.

ಜೈನ ತತ್ವಶಾಸ್ತ್ರದಲ್ಲಿ ದ್ರವ್ಯಸಿದ್ಧಾಂತವು ಪ್ರಮುಖವಾದದ್ದು.[24] ಯಾವುದು ತನ್ನ ಆಯಾಯ ಪರ್ಯಾಯಗಳನ್ನು ಪಡೆಯುತ್ತದೆಯೋ ಅದಕ್ಕೆ ದ್ರವ್ಯವೆನ್ನಲಾಗಿದೆ. ದ್ರವ್ಯವು ನಿತ್ಯ ಅನಾದಿ ಮತ್ತು ಅನಂತವುಳ್ಳದ್ದು. ಆದರೆ ಅದರ ಪರ್ಯಾಯಗಳು ಉತ್ಪನ್ನವಾಗುತ್ತವೆ ಮತ್ತು ನಾಶವಾಗುತ್ತವೆ. ದ್ರವ್ಯಸಿದ್ಧಾಂತದ ತಾತ್ಪರ್ಯವೆಂದರೆ, ಪ್ರತಿಯೊಂದು ವಸ್ತುವು ಪರಿವರ್ತನ ಶೀಲವಾಗಿದೆ ಹಾಗೂ ಈ ಪರಿವರ್ತನೆಯು ಪ್ರತಿಕ್ಷಣದಲ್ಲಿಯೂ ಆಗುತ್ತಾ ಇರುತ್ತದೆ. ಪೂರ್ವ ಪರ್ಯಾಯದ ನಾಶ ಮತ್ತು ಉತ್ತರಪರ್ಯಾಯದ ಉತ್ಪತ್ತಿಯಾಗುತ್ತಿದ್ದರೂ ಮೂಲದ್ರವ್ಯವು ಸ್ಥಿರವಾಗಿಯೇ ಉಳಿಯುವುದು. ಒಟ್ಟಿನಲ್ಲಿ ವಸ್ತುವು ಪ್ರತಿಕ್ಷಣದಲ್ಲಿಯೂ ಉತ್ಪತ್ತಿ, ನಾಶ ಮತ್ತು ದ್ರವ್ಯಾತ್ಮಕವಾಗಿರುತ್ತದೆ. ದ್ರವ್ಯದಲ್ಲಿ ಗುಣಗಳು ಸ್ಥಿರವಾಗಿರುತ್ತವೆ ಮತ್ತು ಪರ್ಯಾಯಗಳು ವಿನಾಶಶೀಲ ಹಾಗೂ ಉತ್ಪನ್ನ ಶೀಲವಾಗಿರುತ್ತವೆ. ಆರು ವಿಧದ ದ್ರವ್ಯಗಳ ಕುರಿತು ಜೈನ ದರ್ಶನವು ಹೇಳುತ್ತದೆ. ಅವುಗಳೆಂದರೆ, ಜೀವದ್ರವ್ಯ, ಪುದ್ಗಲ, ಧರ್ಮ, ಅಧರ್ಮ ಆಕಾಶ ಮತ್ತು ಕಾಲದ್ರವ್ಯಗಳು,[25] ಜೈನ ಧರ್ಮವು ವೈದಿಕ ಧರ್ಮಕ್ಕಿಂತ ಭಿನ್ನವಾದ ರೀತಿಯಲ್ಲಿ ಈ ಸಿದ್ಧಾಂತಗಳನ್ನು ಮಂಡಿಸಿತು. ಜೈನ ಸಿದ್ಧಾಂತಗಳನ್ನು ಹೊಂದಿರುವ ಗ್ರಂಥಗಳ ಸಮೂಹಕ್ಕೆ ಆಗಮಗಳೆಂದು ಹೆಸರು. ಬ್ರಾಹ್ಮಣರು ವೇದಗಳಿಗೆ, ಬೌದ್ಧರು ತ್ರಿಪಿಟಕಗಳಿಗೆ ಮಹತ್ವ ಕೊಡುವಂತೆ ಜೈನರು ಆಗಮಗಳಿಗೆ ಮಹತ್ವ ಕೊಟ್ಟರು.

ಜೈನಧರ್ಮದಲ್ಲಿ ದಿಗಂಬರ, ಶ್ವೇತಾಂಬರ ಹಾಗೂ ಯಾಪನೀಯ ಎಂಬ ಮೂರು ಸಂಪ್ರದಾಯಗಳು ಇದ್ದವು.[26] ಜೈನ ಸಾಧುಗಳ ವಸ್ತ್ರಪರಿಧಾನವೇ ಈ ಸಂಪ್ರದಾಯಗಳ ಹುಟ್ಟಿಗೆ ಹಾಗೂ ಜೈನ ಸಂಘಗಳು ವಿಭಾಗಗೊಳ್ಳುವುದಕ್ಕೆ ಮೂಲಕಾರಣವಾಯಿತು. ಜೈನ ಧರ್ಮದ ವಿಭಿನ್ನ ಸಂಪ್ರದಾಯಗಳಲ್ಲಿ ತಾತ್ವಿಕ ದೃಷ್ಟಿಯಿಂದ ಭೇದಗಳಿರಲಿಲ್ಲ. ಎಲ್ಲ ಪಂಥಗಳೂ ಕರ್ಮಸಿದ್ಧಾಂತ, ಅಹಿಂಸೆ, ಅನೇಕಾಂತವಾದ, ಆತ್ಮ, ಪರಮಾತ್ಮ ಮೊದಲಾದ ತತ್ವಗಳ ಅನುಯಾಯಿಗಳೇ ಆಗಿದ್ದವು.[27] ಆದರೆ ವ್ಯಾವಹಾರಿಕ ದೃಷ್ಟಿಯಿಂದ ಅನೇಕ ಭೇದಗಳು ಇರುತ್ತಿದ್ದವು. ಜೈನಧರ್ಮದ ಈ ಎಲ್ಲ ಸಂಪ್ರದಾಯಗಳು ಕರ್ನಾಟಕದಲ್ಲಿ ಇದ್ದವು ಎನ್ನುವುದಕ್ಕೆ ಅಪಾರ ಸಂಖ್ಯೆಯ ಬಸದಿಗಳು, ಜೈನ ಸಿದ್ಧಾಂತದ ಕುರಿತು ಚರ್ಚಿಸುವಾಗ ಅದರೊಳಗಿನ ಶಾಖೆಗಳಿಗಿಂತಲೂ ಇತರ ಧರ್ಮಗಳ ಜೊತೆ ಯಾವ ರೀತಿಯ ಸಂಬಂಧವನ್ನು ಇಟ್ಟುಕೊಂಡಿತ್ತು ಅಥವಾ ಪರಸ್ಪರ ಪ್ರಭಾವಗಳು ಯಾವ ರೀತಿ ಆಗುತ್ತಿದ್ದವು ಎನ್ನುವುದು ಪ್ರಾಮುಖ್ಯವೆನಿಸುತ್ತದೆ. ವೈದಿಕ ಧರ್ಮವು ಅನ್ಯ ಧರ್ಮಗಳ ಅನೇಕ ವಿಚಾರಗಳನ್ನು ತನ್ನೊಳಗೆ ಸೇರಿಸಿಕೊಳ್ಳುವ ಹಾಗೂ ಅವುಗಳಿಗೆ ವೈದಿಕ ಮೂಲದ ಪರಂಪರೆಯನ್ನು ಸೃಷ್ಟಿಸುವ ಚಾಕಚಕ್ಯತೆಯನ್ನು ಹೊಂದಿತ್ತು. ಈ ವಿಚಾರವು ಜೈನಧರ್ಮದ ಸಂದರ್ಭದಲ್ಲೂ ಕಂಡುಬರುತ್ತದೆ.

ಜೈನಧರ್ಮವು ವೈದಿಕ ಧರ್ಮದ ಸಂಪ್ರದಾಯಗಲನ್ನು ವಿರೋಧಿಸಿ ತನ್ನ ಸಿದ್ಧಾಂತವನ್ನು ಪ್ರತಿಪಾದಿಸಿತು. ಯಜ್ಞ ಯಾಗಾದಿಗಳನ್ನು ನಡೆಸುವ, ಅವುಗಳ ಮೂಲಕ ಮೋಕ್ಷದ ಕಲ್ಪನೆಯನ್ನು ಪ್ರತಿಪಾದಿಸುವ ಹಾಗೂ ಕೆಳಸ್ತರದ ಜನರನ್ನು ಅವುಗಳಿಂದ ಹೊರಗಿಡುವ ಬ್ರಾಹ್ಮಣ ಧರ್ಮದ ಸಾಂಸ್ಕೃತಿಕ ರಾಜಕೀಯವನ್ನು ಜೈನಧರ್ಮವು ಬಲವಾಗಿ ಖಂಡಿಸಿತು. ಜೈನರು ವೇದ, ಸ್ಮೃತಿ, ಉಪನಿಷತ್ತುಗಳೇ ಮೊದಲ ವೈದಿಕ ಧರ್ಮಗ್ರಂಥಗಳನ್ನು ಮತ್ತು ವೈದಿಕ ಮೂಲಕ ಸೃಷ್ಟಿಕರ್ತ ದೇವರನ್ನು ತಮ್ಮ ವಾದಗಳ ಮೂಲಕ ಖಂಡಿಸಿದರು. ಜೈನ ಧರ್ಮದಲ್ಲಿ ಈಶ್ವರನು ಒಬ್ಬನಲ್ಲ, ಅನೇಕರು. ಈಶ್ವರವಾದಕ್ಕೆ ವಿರೋಧವಾಗಿ ದೇವರ ಕಲ್ಪನೆಯಲ್ಲಿ ಜೈನರು ಅನೇಕತ್ವವನ್ನು ಪ್ರತಿಪಾದಿಸಿದರು. ಅಲೌಕಿಕ ದೇವರ ಬದಲಾಗಿ ಲೌಕಿಕ ಜೀವನಕ್ಕೆ ಸಂಬಂಧಿಸಿದ ತೀರ್ಥಂಕರರನ್ನು ಪೂಜಿಸುವ ಹೊಸ ಸಂಪ್ರದಾಯವನ್ನು ಜೈನರು ಹುಟ್ಟು ಹಾಕಿದರು. ತೀರ್ಥಂಕರರನ್ನು ಪೂಜಿಸುವುದು ಅವರು ದೇವರು ಎನ್ನುವ ಕಾರಣಕ್ಕಾಗಿ ಅಲ್ಲ, ಅವರು ಮಾನವತ್ವದಿಂದ ದೇವತ್ವವನ್ನು ಪಡೆದ ಪರಿಪೂರ್ಣ ಶುದ್ಧ ಆತ್ಮಗಳು ಎನ್ನುವ ಕಾರಣಕ್ಕಾಗಿ ಎನ್ನುವುದು ಜೈನ ಸಿದ್ಧಾಂತದ ನಿಲುವು. ಆದರೆ ದೇವರು ಎನ್ನುವ ಕಲ್ಪನೆ ಜೈನ ಧರ್ಮದಲ್ಲಿ ಹಾಸುಹೊಕ್ಕಾಗಿರುವುದು ಅದು ವೈದಿಕ ಧರ್ಮದ ಚೌಕಟ್ಟಿನಿಂದ ಸಂಪೂರ್ಣವಾಗಿ ಹೊರಬಂದಿಲ್ಲ ಎನ್ನುವುದನ್ನು ಸೂಚಿಸುತ್ತದೆ. ಇಲ್ಲದಿದ್ದರೆ ತೀರ್ಥಂಕರರನ್ನು ದೇವರ ಮಟ್ಟಕ್ಕೆ ಏರಿಸುವ ಅನಿವಾರ್ಯತೆ ಜೈನಧರ್ಮಕ್ಕೆ ಬರುತ್ತಿರಲಿಲ್ಲ. ಜೈನ ಸಿದ್ಧಾಂತದ ಪ್ರಕಾರ ಜೈನರ ವ್ಯವಹಾರ ಇರಲಿಲ್ಲ. ಎನ್ನುವುದು ಅನೇಕ ವಿಚಾರಗಳಿಂದ ತಿಳದುಬರುತ್ತದೆ.

ಜೈನರನ್ನು ಅವರ ಸಿದ್ಧಾಂತದ ತಾತ್ವಿಕ ಹಿನ್ನೆಲೆಯಿಂದ ನೋಡಿದಾಗ ಮತ್ತು ವ್ಯವಹಾರದ ಹಿನ್ನೆಲೆಯಿಂದ ನೋಡಿದಾಗ ಸಿಗುವ ಚಿತ್ರಣ ಬೇರೆ ಬೇರೆಯದೇ ಆಗಿರುತ್ತದೆ. ಈ ವ್ಯತ್ಯಾಸಗಲಿಗೆ ಆಯಾ ಕಾಲದ ಒತ್ತಡ, ಒತ್ತಾಯಗಳು ಕಾರಣವಾಗಿರಬೇಕು. ವೈದಿಕ ಧರ್ಮದ ಹಲವಾರು ವಿಚಾರಗಳನ್ನು ಜೈನಧರ್ಮವು ತನ್ನೊಳಗೆ ಸೇರಿಕೊಂಡಿದ್ದನ್ನು ಕಾಣಬಹುದಾಗಿದೆ. ಜೈನ ಧರ್ಮವು ವೈದಿಕ ದೇವರು ಮತ್ತು ಅವುಅಳ ವಿವಿಧ ಶಾಖೆಗಳನ್ನು ತನ್ನ ತಾತ್ವಿಕ ಚೌಕಟ್ಟಿನಲ್ಲಿ ವಿರೋಧಿಸಿದರೂ, ಆಚರಣೆಯಲ್ಲಿ ಯಕ್ಷ ಯಕ್ಷಿಣಿಯರನ್ನು ಪೂಜಿಸುವುದು ಕಂಡುಬರುತ್ತದೆ. ಯಕ್ಷಯಕ್ಷಿಣಿಗಳಾದ ಪದ್ಮಾವತಿಯಮ್ಮ ಮತ್ತು ಜ್ವಾಲಾಮಾಲಿನಿಗಳ ಪೂಜೆ ಜೈನರಲ್ಲಿ ನಡೆಯುತ್ತಿತ್ತು. ಅದೇ ರೀತಿ ಮಂತ್ರ-ತಂತ್ರಗಳ ರೂಢಿಯೂ ಇತ್ತು.[28] ಜಾತಿ ವ್ಯವಸ್ಥೆಯ ಹಿಡಿತದಿಂದ ತಪ್ಪಿಸಿಕೊಳ್ಳುವಲ್ಲಿಯೂ ಜೈನಧರ್ಮ ಯಶಸ್ವಿಯಾಗಲಿಲ್ಲ. ಇವೆಲ್ಲವೂ ಆಯಾ ಕಾಲದ ಸಾಮಾಜಿಕ ಮತ್ತು ಧಾರ್ಮಿಕ ಒತ್ತಡಗಳ ಪರಿಣಾಮವಾಗಿ ಕಂಡುಬರುತ್ತದೆ. ವೈದಿಕ ಧರ್ಮದಂತೆ ಬೌದ್ಧ ಧರ್ಮದಿಂದಲೂ ಅನೇಕ ರೀತಿಯ ವಿಚಾರಗಳನ್ನು ಜೈನ ಧರ್ಮವು ಪಡೆದುಕೊಂಡಿತು. ಹೆಚ್ಚಿನ ಪ್ರಭಾವಗಳು ಕೊಡು-ಕೊಳ್ಳುವ ರೀತಿಯದ್ದಾಗಿದ್ದವು. ಬೌದ್ಧದರ್ಮವು ಕರ್ನಾಟಕದಲ್ಲಿ ವೈದಿಕ ಮತ್ತು ಜೈನ ಧರ್ಮಗಳಷ್ಟು ಪ್ರಚಾರವನ್ನು ಪದೆದುಕೊಳ್ಳಲಿಲ್ಲ. ಜೈನಧರ್ಮವು ರಾಜಾಶ್ರಯವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದುದೇ ಅದರ ಪ್ರಭಾವ ಹೆಚ್ಚುವುದಕ್ಕೆ ಮೂಲ ಕಾರಣ. ಆದರೆ ಜೈನಧರ್ಮವು ಸ್ವತಂತ್ರ ಧರ್ಮವಾಗಿ ಉಳಿದುಕೊಂಡು ಬರುವಲ್ಲಿ ವಿಫಲವಾಯಿತು.

ಜೈನಧರ್ಮವು ತನ್ನ ಮೂಲ ಉದ್ದೇಶಗಳನ್ನು ಬಿಟ್ಟು ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಹೋದದ್ದು ಅದರ ಅವನತಿಯನ್ನು ಸೂಚಿಸಿತು. ಬೌದ್ಧರು ಮತ್ತು ಜೈನರು ತಮ್ಮ ತತ್ವಗಳೇನ್ನು ಬ್ರಾಹ್ಮಣ ಪರಿಭಾಷೆಯಲ್ಲಿ ವ್ಯಕ್ತಪಡಿಸಲು ತೊಡಗಿದರು. ಕ್ರಿ.ಶ. ೮ರಿಂದ ೧೪ನೆಯ ಶತಮಾನಗಳ ಅವಧಿಯಲ್ಲಿ ಇತರ ಯಾವುದೇ ಧರ್ಮಗಳು ಪ್ರಚಾರಕ್ಕೆ ಬಂದರೂ ಬ್ರಾಹ್ಮಣ ಪ್ರಾಬಲ್ಯದ ವೈದಿಕ ಧರ್ಮ ತನ್ನ ವರ್ಚಸ್ಸನ್ನೂ ಉಳಿಸಿಕೊಂಡಿತ್ತು. ಜೈನರು ತಮ್ಮ ಗ್ರಂಥಗಳ ತತ್ವಸಾರ ಮಂಡನೆಗೆ ಪ್ರಾಕೃತ ಭಾಷೆಯ ಬದಲಾಗಿ ಸಂಸ್ಕೃತ ಭಾಷೆಯನ್ನೇ ಬಳಸಿಕೊಳ್ಳಬೇಕಾಯಿತು.[29]ಇದು ಜೈನಧರ್ಮದ ಮೇಲೆ ಬ್ರಾಹ್ಮಣ ಸಂಪ್ರದಾಯದ ಪ್ರಭಾವವನ್ನು ಸೂಚಿಸುತ್ತದೆ. ಇದನ್ನು ಕೇವಲ ಭಾಷಾಪಲ್ಲಟ ಎಂದಷ್ಟೇ ಗುರುತಿಸಲು ಸಾಧ್ಯವಾಗುವುದಿಲ್ಲ. ಶೈವ ಧರ್ಮವು ಪ್ರಚಾರವನ್ನು ಪಡೆದಂತೆಲ್ಲಾ ಜೈನಧರ್ಮದ ಪ್ರಚಾರ ಇಳಿಮುಖವಾಗ ತೊಡಗಿತು. ಜೈನಧರ್ಮದ ಹುಟ್ಟು, ಬೆಳವಣಿಗೆ ಮತ್ತು ಅವನತಿಗೆ ರಾಜಕೀಯ ಘಟನೆಗಳು ಹಾಗೂ ಸಾಮಾಜಿಕ-ಆರ್ಥಿಕ ಸ್ಥಿತ್ಯಂತರಗಳು ಮೂಲಕಾರಣಗಳಾಗಿ ಪರಿಣಮಿಸಿದವು. ಇವು ಪ್ರೋತ್ಸಾಹವನ್ನು ನೀಡುವ ಹಾಗೂ ಬಾಹ್ಯ ಮತ್ತು ಆಂತರಿಕ ವೈರುಧ್ಯಗಳನ್ನು ಹುಟ್ಟುಹಾಕುವ ಎರಡೂ ಕೆಲಸಗಳನ್ನು ಮಾಡಿದವು. ಈ ವೈರುಧ್ಯಗಳನ್ನು ಕೇವಲ ರಾಜಾಶ್ರಯದ ಹಿನ್ನೆಲೆಯಿಂದಷ್ಟೇ ಅರ್ಥೈಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಜೈನ ಧರ್ಮ ಮತ್ತು ಅದರ ಸಿದ್ಧಾಂತಗಳನ್ನು ಸಾಂಸ್ಕೃತಿಕ ನೆಲೆಗಳಲ್ಲಿ ಗ್ರಹಿಸಿದಾಗ ಮಾತ್ರ ಹೊಸ ಬಗೆಯ ವಿಶ್ಲೇಷಣೆಯನ್ನು ನೀಡಲು ಸಾಧ್ಯ. ಧಾರ್ಮಿಕ ಸಿದ್ಧಾಂತಗಳನ್ನು ಅವು ಪ್ರತಿನಿಧಿಸುತ್ತಿರುವ ಧರ್ಮದ ಚೌಕಟ್ಟಿನೊಳಗೇ ವ್ಯಾಖ್ಯಾನಿಸುವುದಕ್ಕೂ, ಧರ್ಮದ ಚೌಕಟ್ಟಿನ ಹೊರಗೆ ವ್ಯಾಖ್ಯಾನಿಸುವುದಕ್ಕೂ ವ್ಯತ್ಯಾಸಗಳಿರುತ್ತವೆ. ಯಾವುದೇ ಒಂದು ಧರ್ಮವೂ ತನ್ನ ಸಿದ್ಧಾಂತಕ್ಕೆ ಬದ್ಧವಾಗಿದ್ದರೂ, ಅನೇಕ ಸಂದರ್ಭಗಳಲ್ಲಿ ತನ್ನ ಸಿದ್ಧಾಂತಕ್ಕೆ ಸಂಬಂಧಿಸದ ವಿಚಾರಗಳಿಂದಲೂ ಪ್ರಭಾವಿತವಾಗ ಬೇಕಾಗುತ್ತದೆ. ಆಯಾ ಸಂದರ್ಭದ ಉತ್ಪಾದನಾ ವ್ಯವಸ್ಥೆಯನ್ನು ಅವಲಂಬಿಸಿಕೊಂಡಿರುತ್ತದೆ.

 

[1] ಪಿ.ಬಿ.ದೇಸಾಯಿ, ಬಸವೇಶ್ವರ ಆಂಡ್ ಹಿಸ್ ಟೈಮ್ಸ್, ಧಾರವಾಡ, ೧೯೬೮; ಎಸ್. ಶ್ರೀಕಂಠಶಾಸ್ತ್ರಿ, ಸಂಶೋಧನ ಲೇಖನಗಳು, ಮೈಸೂರು, ೧೯೭೫, ಪು೧೨೮-೧೩೨

[2] ಬಾ.ರಾ. ಗೋಪಾಲ, ಪೂರ್ವೋಕ್ತ, ಪು.೨೦೫

[3] ಆರ್.ಎನ್.ಸಾಲೆತ್ತೂರ್, ಎನ್‍ಸೈಕ್ಲೋಪೀಡಿಯಾ ಆಫ್ ಇಂಡಿಯನ್ ಕಲ್ಚರ್, ನವದೆಹಲಿ, ೧೯೮೯, ಸಂಪುಟ ೨, ಪು.೬೩೭-೬೩೮

[4] ಪಿ.ಬಿ.ದೇಸಾಯಿ, ಬಸವೇಶ್ವರ ಆಂಡ್ ಹಿಸ್ ಟೈಮ್ಸ್, ಧಾರವಾಡ, ೧೯೬೮, ಪು.೧೯೪-೧೯೫

[5] ಬಿ.ಸುರೇಂದ್ರರಾವ್, ಪೂರ್ವೋಕ್ತ, ಪು. ೨೩೩

[6] ಎಂ.ವಿ. ಕೃಷ್ಣರಾವ್ ಮತ್ತು ಎಂ.ಕೇಶವಭಟ್ಟ, ಪೂರ್ವೋಕ್ತ, ಪು. ೭೦೩-೮೬೯

[7] ಆರ್.ಜಿ.ಭಂಡಾರ್‌ಕರ್, ವೈಷ್ಣವಿಸಂ. ಶೈವಿಸಂ ಆಂಡ್ ಮೈನರ್ ರಿಲೀಜಿಯನ್ ಸಿಸ್ಟಂಸ್, ಏಶಿಯನ್ ಎಜುಕೇಷನಲ್ ಸರ್ವೀಸ್, ೧೯೮೨, ಪು. ೧೪೫-೧೫೧

[8] ಎಸ್.ಕೆ. ರಾಮಚಂದ್ರರಾವ್, ಆಗಮಕೋಶ, ಕಲ್ಪತರು ರಿಸರ್ಚ್ ಅಕಾಡೆಮಿ, ಬೆಂಗಳೂರು, ೧೯೮೯, ಸಂಪುಟ ೨, ಪು. ೩೭

[9] ರಾಜಾರಾಮ ಹೆಗ್ಡೆ, ಭಾರತೀಯ ಮೂರ್ತಿಶಾಸ್ತ್ರ-ಧರ್ಮ, ದೇವತಾರಾಧನೆ ಹಾಗೂ ಸಾಂಸ್ಕೃತಿಕ ರಾಜಕೀಯದ ಐತಿಹಾಸಿಕ ವಿಶ್ಲೇಷಣೆ – ಭಾಗ ೨, ಅರಿವು ಬರಹ ೪, ಕೊಣಾಜೆ, ೧೯೯೩, ಪು.೧೧೩

[10] ಆರ್.ಎನ್.ನಂದಿ, ಅರಿಜಿನ್ ಆಂಡ್ ನೇಚರ್ ಆಫ್ ಶೈವೈಟ್ ಮೊನಾಸ್ಟಿಸಿಸಂ, ಇಂಡಿಯನ್ ಸೊಸೈಟಿ, ಹಿಸ್ಟಾರಿಕಲ್ ಪ್ರೋಬಿಂಗ್, (ಸಂ.), ಆರ್.ಎಸ್.ಶರ್ಮ, ನವದೆಹಲಿ, ೧೯೮೪, ಪು. ೧೯೦-೨೦೨; ಎಂ.ಎಂ. ಕಲಬುರ್ಗಿ, ಅಭಿನವ ಪಾಶುಪತ ಮತ್ತು ವೀರಶೈವ, ಮಾರ್ಗ ಸಂಪುಟ ೧, ಪು.೧೯೩

[11] ಆರ್.ಎಸ್. ಮುಗಳಿ, ದಿ ಹೆರಿಟೇಜ್ ಆಫ್ ಕರ್ನಾಟಕ, ಮೈಸೂರು, ೧೯೯೦ (ಎರಡನೆಯ ಪರಿಷ್ಕೃತ ಆವೃತಿ), ಪು.೯೯-೧೦೦; ಬಸವರಾಜ ಸಬರದ, ವಚನ ಚಳವಳಿ, ಗುಲ್ಬರ್ಗಾ, ೧೯೯೨, ಪು.೧೨-೨೧

[12] ಎಂ.ಎಂ. ಕಲಬುರ್ಗಿ, ನಕುಲೀಶ ಪಾಶುಪತರು ಮತ್ತು ವಚನ ಸಾಹಿತ್ಯ, ಮಾರ್ಗ, ಸಂಪುಟ ೧, ಪು.೧೯೮; ಪಿ.ವಿ. ನಾರಾಯಣ, ವಚನ ಸಾಹಿತ್ಯ : ಒಂದು ಸಾಂಸ್ಕೃತಿಕ ಅಧ್ಯಯನ, ಗದಗ, ೧೯೮೩; ಬಸವರಾಜ ಸಬರದ, ವಚನ ಚಳವಳಿ, ಗುಲ್ಬರ್ಗಾ, ೧೯೯೨, ಪು.೩-೧೨

[13] ಎಂ.ಚಿದಾನಂದಮೂರ್ತಿ, ವಚನ ಸಾಹಿತ್ಯ, ಬೆಂಗಳೂರು, ೧೯೭೫, ಪು.೪೭

[14] ಎಚ್.ತಿಪ್ಪೇರುದ್ರಸ್ವಾಮಿ, ವಚನಗಳಲ್ಲಿ ವೀರಶೈವ ಧರ್ಮ, ಧಾರವಾಡ, ೧೯೬೯, ಪು.೬೫

[15] ಅದೇ.; ಬಿ.ಸುರೇಂದ್ರರಾವ್, ಪೂರ್ವೋಕ್ತ, ಪು.೨೩೪

[16] ಆರ್.ಜಿ.ಭಂಡಾರ್‌ಕರ್, ಪೂರ್ವೋಕ್ತ, ಪು. ೮೦-೮೧

[17] ಆರ್.ಎನ್.ನಂದಿ, ಆರಿಜಿನ್ ಆಫ್ ದಿ ವೀರಶೈವ ಮೂವ್‌ಮೆಂಟ್ಸ್, ಇಂಡಿಯನ್ ಹಿಸ್ಟಾರಿಕಲ್ ರಿವ್ಯೂ, ಸಂಪುಟ ೨, ಸಂಚಿಕೆ ೧, ೧೯೭೫, ಪು.೩೨-೪೬; ಬಿ.ಸುರೇಂದ್ರರಾವ್, ಪೂರ್ವೋಕ್ತ, ಪು.೨೩೨-೨೩೩

[18] ಪಿ.ಬಿ. ದೇಸಾಯಿ, ಪೂರ್ವೋಕ್ತ, ಪು.೨೦೭-೨೦೮

[19] ಅದೇ, ಪು.೨೦೩-೨೦೫

[20] ಮಿರ್ಜಿ ಅಣ್ಣಾರಾಯ, ಜೈನಧರ್ಮ, ಶಾಂತಿ ಸೇವಾ ಸದನ, ಸೇಡಬಾಳ, ಬೆಳಗಾಂ, ೧೯೯೭ (ಮೂರನೆಯ ಮುದ್ರಣ), ಪು.೧೦೩

[21] ಅದೇ, ಪು.೧೧೧-೧೧೨

[22] ಟಿ.ಜಿ.ಕಲಘಟಗಿ, ಕರ್ನಾಟಕದಲ್ಲಿ ಜೈನಧರ್ಮ-ಒಂದು ಅಧ್ಯಯನ, ಮೈಸೂರು, ೧೯೭೯, ಪು.೧೦-೧೧

[23] ಕರ್ನಾಟಕ ಮತ್ತು ಜೈನ ಸಂಸ್ಕ್ರುತಿ, ಧಾರವಾಡ, ೧೯೭೫, ಪು.೨೩

[24] ಅದೇ. ಪು. ೩೨-೩೮

[25] ಕೈಲಾಶಚಂದ್ರಶಾಸ್ತ್ರಿ, ಜೈಮಧರ್ಮ, ಸೊಲ್ಲಾಪುರ, ೧೯೮೧, ಪು. ೯೭-೧೨೫

[26] ಎಂ. ಚಿದಾನಂದಮೂರ್ತಿ, ಕನ್ನದ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಮೈಸೂರು, ೧೯೭೯, ಪು.೭೬-೭೯

[27] ಕೈಲಾಶಚಂದ್ರಶಾಸ್ತ್ರಿ, ಪೂರ್ವೋಕ್ತ, ಪು.೩೫೨

[28] ಪಿ.ಬಿ. ದೇಸಾಯಿ, ಜೈನಿಸಂ ಇನ್ ಸೌತ್ ಇಂಡಿಯಾ, ಜೈನ ಸಂಸ್ಕೃತಿ ಸಂರಕ್ಷಣಾ ಸಂಘ, ಸೋಲಾಪುರ, ೧೯೫೭, ಪು. ೭೪

[29] ಎಂ.ವಿ.ಕೃಷ್ಣರಾವ್ ಮತ್ತು ಎಂ.ಕೇಶವಭಟ್ಟ, ಪೂರ್ವೋಕ್ತ, ಪು. ೭೨೬