ಕರ್ನಾಟಕದ ಧಾರ್ಮಿಕ ಚರಿತ್ರೆಯಲ್ಲಿ ಕ್ರಿ.ಶ. ೮ ರಿಂದ ೧೪ನೆಯ ಶತಮಾನಗಳ ನಡುವಣ ಅವಧಿಯು ಬಹು ಮಹತ್ವದ್ದಾಗಿದೆ. ಈ ಅವಧಿಯಲ್ಲಿ ಅನೇಕ ಹೊಸ ಧಾರ್ಮಿಕ ಸಿದ್ಧಾಂತಗಳು ಹುಟ್ಟಿಕೊಂಡವು. ಮೇಲ್ನೋಟಕ್ಕೆ ಈ ಸಿದ್ಧಾಂತಗಳು ಧರ್ಮಕ್ಕೆ ಸಂಬಂಧಿಸಿದಂತೆ ಕಂಡುಬಂದರೂ ಸಾಮಾಜಿಕ ಮತ್ತು ಆರ್ಥಿಕ ವಿಚಾರಗಳು ಅವುಗಳಲ್ಲಿ ಸೇರಿಕೊಂಡಿದ್ದವು. ರಾಜ ಪ್ರಭುತ್ವದ ಸಂದರ್ಭದಲ್ಲಿ ಧರ್ಮವು ಜನರ ಬದುಕಿನ ಮಹತ್ವವೂ ಹಾಗೂ ನಿರ್ಣಾಯಕವೂ ಆದ ಅಂಶವಾಗಿತ್ತು. ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅಂಶಗಳ ಮೇಲೆ ಹಿಡಿತವನ್ನು ಸಾಧಿಸುವಷ್ಟು ಸಾಮರ್ಥ್ಯವನ್ನು ಧರ್ಮವು ಪಡೆದುಕೊಂಡಿತ್ತು. ಈ ಕಾರಣದಿಂದಾಗಿಯೇ ಧಾರ್ಮಿಕ ಸಾಮರಸ್ಯ ಎನ್ನುವ ಧಾರ್ಮಿಕ ನೀತಿಯೊಂದು ಹುಟ್ಟಿಕೊಂಡಿತ್ತು. ಈ ನೀತಿಯಿಂದಾಗಿ ಬೌದ್ಧ, ಜೈನ, ಶೈವ, ವೈಷ್ಣವ, ವೀರಶೈವ ಮುಂತಾದ ಧಾರ್ಮಿಕ ಪಂಥಗಳು ಹೆಚ್ಚೆಚ್ಚು ಪ್ರಭಾವಶಾಲಿಯಾಗಿ ಬೆಳೆಯುವಂತೆ ಮತ್ತು ರಾಜಾಶ್ರಯವನ್ನು ಪಡೆದುಕೊಳ್ಳುವಂತೆ ಆಯಿತು. ಇದರರ್ಥ ಎಲ್ಲ ಧರ್ಮಗಳು ಪರಸ್ಪರ ಸಾಮರಸ್ಯವನ್ನು ಬೆಳೆಸಿಕೊಂಡಿದ್ದವು ಎಂದಲ್ಲ. ಸಾಮರಸ್ಯ ನೀತಿಯು ರಾಜಪ್ರಭುತ್ವಕ್ಕಷ್ಟೇ ಅನಿವಾರ್ಯವಾಗಿತ್ತು. ವಿವಿಧ ಧರ್ಮಗಳೊಳಗೆ ಹಾಗೂ ಒಂದೇ ಧರ್ಮದೊಳಗೆ ವಿರೋಧಿಸುವ ಪ್ರವೃತ್ತಿಗಳು ಕಾಣಿಸಿಕೊಳ್ಳುತ್ತಿದ್ದವು. ಈ ವಿರೋಧಿಸುವ ನೆಲೆಗಳಿಂದಲೇ ಅನೇಕ ಸಿದ್ಧಾಂತಗಳು ಹುಟ್ಟಿಕೊಂಡವು. ಆದರೆ ಹೆಚ್ಚಿನ ಸಿದ್ಧಾಂತಗಳು ಧರ್ಮವನ್ನು ನಿರಾಕರಿಸುವ ಬದಲು ಧಾರ್ಮಿಕ ನಂಬಿಕೆ, ಆಚರಣೆಗಳನ್ನು ಸುಲಭವನ್ನಾಗಿಸುವ ಕೆಲಸವನ್ನು ಮಾಡಿದವು. ಇದನ್ನು ಶಂಕರರ ಅದ್ವೈತ ಸಿದ್ಧಾಂತ, ರಾಮಾನುಜರ ವಿಶಿಷ್ಟಾದ್ವೈತ ಸಿದ್ಧಾಂತ ಹಾಗೂ ಮಧ್ವರ ದ್ವೈತ ಸಿದ್ಧಾಂತಗಳಲ್ಲಿ ಕಾಣಬಹುದಾಗಿದೆ. ಈ ಸಿದ್ಧಾಂತಗಳು ಧಾರ್ಮಿಕ ವಿಚಾರಗಳ ಅರಿವು ಮೂಡಿಸುವ ಕೆಲಸವನ್ನು ಮಾಡಿದವಾದರೂ ಬ್ರಾಹ್ಮಣ ಪಾರಮ್ಯದ ಮೇಲೆ ಆಧಾರಗೊಂಡ ಸಮಾಜ ವ್ಯವಸ್ಥೆಯನ್ನು ಪ್ರಶ್ನಿಸುವ ಹಂತಕ್ಕೆ ಹೋಗಲಿಲ್ಲ. ೧೨ನೆಯ ಶತಮಾನದಲ್ಲಿ ಕಾಣಿಸಿಕೊಂಡ ಬಸವೇಶ್ವರರ ವೀರಶೈವ ಸಿದ್ಧಾಂತವು ಬ್ರಾಹ್ಮಣ ಶಾಹಿಯ ಧಾರ್ಮಿಕ ಕಟ್ಟುಪಾಡುಗಳನ್ನು ತಿರಸ್ಕರಿಸಿ ಧಾರ್ಮಿಕ ಆಂದೋಲನವನ್ನು ಹುಟ್ಟು ಹಾಕಿತು. ಈ ಆಂದೋಲನವು ಧಾರ್ಮಿಕನಂಬಿಕೆ, ಆಚರಣೆಗಳನ್ನು ನಿರಾಕರಿಸಲಿಲ್ಲ; ಬದಲಾಗಿ ಬ್ರಾಹ್ಮಣ ನೇತೃತ್ವದ ಧಾರ್ಮಿಕ ಪ್ರಭುತ್ವವನ್ನು ಖಂಡಿಸಿತು. ಧಾರ್ಮಿಕ ಸಿದ್ಧಾಂತಗಳ ಕುರಿತಾದ ಈ ಎಲ್ಲ ವಿಚಾರಗಳನ್ನು ಈ ಅಧ್ಯಾಯದಲ್ಲಿ ಚರ್ಚಿಸಲಾಗಿದೆ.

.೧ ಅದ್ವೈತ ಸಿದ್ಧಾಂತ

ಶಂಕರರು ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು. ಈ ಸಿದ್ಧಾಂತದ ಪ್ರಕಾರ ಬ್ರಹ್ಮವೇ ಸತ್ಯ, ಈ ಬ್ರಹ್ಮನನ್ನು ಬಿಟ್ಟು ಜಗತ್ತಿಗೆ ಪ್ರತ್ಯೇಕ ಅಸ್ತಿತ್ವವಿಲ್ಲ.[1] ಶಂಕರಾಚಾರ್ಯರು ಹೇಳುವ ಬ್ರಹ್ಮಕ್ಕಿಂತ ಬೇರೆಯಾಗಿ ಅಥವಾ ಸ್ವತಂತ್ರವಾಗಿ ಜಗತ್ತಿಗೆ ಅಸ್ತಿತ್ವವಿಲ್ಲ ಎನ್ನುವ ಮಾತು ಅನೇಕ ರೀತಿಯ ವಾದವಿವಾದಗಳಿಗೆ ಆಸ್ಪದಮಾಡಿಕೊಡುತ್ತದೆ. ಅಸ್ತಿತ್ವದಲ್ಲಿರುವುದೆಲ್ಲಾ ಬ್ರಹ್ಮವೇ, ಅದಲ್ಲದೆ ಬೇರೊಂದು ಇಲ್ಲವೇ ಇಲ್ಲ ಎನ್ನುವ ಮಾತು ಒಂದು ವರ್ಗದ ಸತ್ಯವನ್ನಷ್ಟೇ ಹೇಳುತ್ತದೆ. ಇದರ ಪ್ರಕಾರ ಲೌಕಿಕ ಜಗತ್ತು ಪ್ರಾಮುಖ್ಯವಲ್ಲ, ಅಲೌಕಿಕ ಚಿಂತನೆಗಳಿಂದ ಕೂಡಿದ ಜಗತ್ತು ಮಾತ್ರ ಸತ್ಯವನ್ನು ಹೇಳಲು ಸಾಧ್ಯ. ಸ್ವತಂತ್ರವಾಗಿ ಜಗತ್ತಿಗೆ ಅಸ್ತಿತ್ವವಿಲ್ಲ ಎನ್ನುವ ಮಾತನ್ನು ಸಮಾಜದ ಕೆಳವರ್ಗದ ಜನರಿಗೆ ಸ್ವತಂತ್ರವಾಗಿ ಅಸ್ತಿತ್ವವಿಲ್ಲ ಎನ್ನುವ ರೀತಿಯಲ್ಲಿಯೂ ವ್ಯಾಖ್ಯಾನಿಸಬಹುದಾಗಿದೆ. ಕೆಳವರ್ಗದ ಜನರು ಅಸ್ತಿತ್ವವನ್ನು ಕಂಡುಕೊಳ್ಳಬೇಕಾದರೆ ಅದು ಮೇಲ್ವರ್ಗಗಳನ್ನು ಅವಲಂಬಿಸಿಕೊಂಡರೆ ಮಾತ್ರ ಸಾಧ್ಯ ಎನ್ನುವ ಶ್ರೇಣೀಕೃತ ಸಮಾಜ ವ್ಯವಸ್ಥೆಯ ಧೋರಣೆಯೂ ಇದರಲ್ಲಿ ಕಂಡುಬರುತ್ತದೆ. ಬ್ರಹ್ಮವು ಪರಿಪೂರ್ಣ, ಪರಿವರ್ತನಹಿತ, ಅಖಂಡವಾದದ್ದು ಮತ್ತು ಇತರರಿಗೆ ವಹಿಸಲಾಗದ್ದು ಮುಂತಾದ ಹೇಳಿಕೆಗಳು ವಿರೋಧಿಸುವ ಮತ್ತು ಪ್ರಶ್ನಿಸುವ ಹಕ್ಕನ್ನು ಕಿತ್ತುಕೊಳ್ಳುತ್ತವೆ.

ಶಂಕರರ ಅದ್ವೈತ ಸಿದ್ಧಾಂತವು ಲೌಕಿಕ ಜಗತ್ತಿನ ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆಗಳ ಕುರಿತು ಏನನ್ನೂ ಹೇಳುವುದಿಲ್ಲ. ಆದರೆ ಒಂದು ವರ್ಗದ ಯಜಮಾನಿಕೆಯನ್ನು ಸೂಚಿಸುತ್ತದೆ. ಈ ಸಿದ್ಧಾಂತವು ವೈದಿಕ ಸಿದ್ಧಾಂತಗಳಿಂದ ಭಿನ್ನವಾಗಿ ಕಂಡುಬರುವುದಿಲ್ಲ.[2] ಶಂಕರರು ದೇಶಾದ್ಯಂತ ಸಂಚರಿಸಿ ಅದ್ವೈತ ಸಿದ್ಧಾಂತವನ್ನು ಪ್ರಚಾರಪಡಿಸಲು ಧರ್ಮಪೀಠಗಳನ್ನು ಸ್ಥಾಪಿಸಿದರು. ಅದರೊಂದಿಗೆ ತಮ್ಮ ಅನುಯಾಯಿಗಳ ಪಡೆಯೊಂದನ್ನೇ ಸೃಷ್ಟಿಸಿದರು. ಈ ಬೆಳವಣಿಗೆಗಳು ಪರೋಕ್ಷವಾಗಿ ಬ್ರಾಹ್ಮಣ ಹಿಡಿತದ ವೈದಿಕ ಧರ್ಮವು ಸ್ವಚ್ಛಂದವಾಗಿ ವಿಹರಿಸುವಂತೆ ಮಾಡಿದವು. ಜೈನ ಮತ್ತು ಬೌದ್ಧ ಧರ್ಮಗಳ ಪ್ರಭಾವದಿಂದಾಗಿ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದ್ದ ವೈದಿಕ ಧರ್ಮಕ್ಕೆ ಶಂಕರರ ಚಿಂತನೆಗಳು ಅನುಕೂಲಕರವಾಗಿಯೇ ಪರಿಣಮಿಸಿದವು.[3] ಏಕೆಂದರೆ ಶಂಕರರ ಚಿಂತನೆಗಳು ವೈದಿಕ ಚೌಕಟ್ಟಿನೊಳಗೇ ವ್ಯವಹರಿಸುತ್ತಿದ್ದವು. ವೈದಿಕ ಚೌಕಟ್ಟನ್ನು ಒಡೆಯುವ ಕೆಲಸವನ್ನು ಅವು ಮಾಡಲಿಲ್ಲ. ಶಂಕರರು ತಮ್ಮ ತೀಕ್ಷ್ಣ ಹಾಗೂ ಅಪಾರ ಮೇಧಾವಿತನವನ್ನು ಸಮಾಜದ ಪಿಡುಗುಗಳನ್ನು ನಿವಾರಿಸಲು ಉಪಯೋಗಿಸಿಕೊಳ್ಳಲಿಲ್ಲ. ಜೀವನೂ ಬ್ರಹ್ಮನೂ ಪ್ರತ್ಯೇಕರಲ್ಲ; ಆದರೆ ಪ್ರತೀ ಜೀವಾತ್ಮನು ತಾನೇ ಬ್ರಹ್ಮನೆಂಬ ಸಂಗತಿಯನ್ನು ಸಾಧನೆಯಿಂದ ಅನವರಿಕೆ ಮಾಡಿಕೊಳ್ಳಬೇಕು; ಆತ್ಮಜ್ಞಾನ ಅಥವಾ ಬ್ರಹ್ಮಜ್ಞಾನವನ್ನು ಪಡೆಯಲು ಭಕ್ತಿ ಅಥವಾ ಜ್ಞಾನಮಾರ್ಗಗಳನ್ನು ಅನುಸರಿಸಬಹುದು ಎಂಬ ಶಂಕರರ ಚಿಂತನೆ ಜನಸಾಮಾನ್ಯರಿಂದ ದೂರವೇ ಉಳಿಯಬೇಕಾಯಿತು. ಏಕೆಂದರೆ ಇದು ಜನಸಾಮಾನ್ಯರನ್ನು ದ್ವಂದ್ವದಲ್ಲಿ ಸಿಲುಕಿಸಿದವೇ ಹೊರತು ಅವರ ಬದುಕಿಗೆ ಯಾವ ರೀತಿಯಲ್ಲಿಯೂ ಸಹಕಾರಿಯಾಗಲಿಲ್ಲ.

ಮಾನವ ತನ್ನ ಬದುಕಿನ ಬಗ್ಗೆ ತಾನು ವಿಶ್ವಾಸವಿಡದಂತೆ ಮಾಡುವಲ್ಲಿ ಶಂಕರರ ಚಿಂತನೆಗಳು ಯಶಸ್ವಿಯಾದವು. ಇಲ್ಲಿ ಮಾನವ ಎನ್ನುವ ಪದವನ್ನು ಎಚ್ಚರಿಕೆಯಿಂದ ಬಳಸಬೇಕಾಗುತ್ತದೆ. ಏಕೆಂದರೆ ಮಾನವರೆಲ್ಲರೂ ಒಂದೇ ರೀತಿಯ ಬದುಕನ್ನು ನಡೆಸಲು ಸಾಧ್ಯವಿಲ್ಲ. ಅದೇ ರೀತಿ ಪರಸ್ಪರ ಹೊಂದಾಣಿಕೆಯ ಬದುಕು ಸಾಧ್ಯವಿಲ್ಲ. ಇಲ್ಲಿ ಸಾಧ್ಯವಿಲ್ಲ ಎನ್ನುವುದನ್ನು ಧರ್ಮವೇ ಸಾಬೀತುಪಡಿಸಿರುವುದು ವಾಸ್ತವ ಸಂಗತಿ. ಮಾನವನನ್ನು ಜಾತಿ/ವರ್ಗದ ಆಧಾರದ ಮೇಲೆ ವಿಂಗಡಿಸಿದ ಸಮಾಜ ಅದಕ್ಕೆ ಸರಿಹೊಂದುವ ನೀತಿ ನಿಯಮಗಳನ್ನು ರೂಪಿಸಿತು. ಅಲೌಕಿಕ ಚಿಂತನೆಗಳನ್ನು ಸೃಷ್ಟಿಸಿ ಲೌಕಿಕ ಬದುಕನ್ನು ಮರೆಯುವಂತೆ ಧಾರ್ಮಿಕ ಚಿಂತನೆಗಳು ಮಾಡಿದವು. ಶಂಕರರು ಪರಸ್ಪರ ವಿಭಿನ್ನವಾಗಿರುವ ಅಥವ ಪರಸ್ಪರ ವಿರುದ್ಧವಾಗಿರುವ ಅಥವ ಪರಸ್ಪರ ವಿರುದ್ಧವಾಗಿರುವ ಸಂಪ್ರದಾಯಗಳನ್ನು ಒಂದುಗೂಡಿಸುವ, ಹೊಂದಾಣಿಕೆಗೆ ಅಳವಡಿಸುವ ಸಮನ್ವಯ ಸಿದ್ಧಾಂತವನ್ನು ಸಾರಿದರು. ಆದರೆ ಈ ಸಿದ್ಧಾಂತದಿಂದ ಮೋಸಹೋಗುವವರು ಸಮಾಜದ ಕೆಳಸ್ತರದ ಅಥವಾ ಅಲಕ್ಷಿತ ವರ್ಗದ ಜನರು. ಈ ಅಲಕ್ಷಿತ ವರ್ಗದ ಜನರೊಂದಿಗೆ ಅವರ ಗ್ರಾಮ ದೇವತೆಗಳು, ಅದಕ್ಕೆ ಸಂಬಂಧಿಸಿದ ಆಚರಣೆಗಳು, ಹಾಡುಗಳು, ಕುಣಿತಗಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತವೆ. ಸಮನ್ವಯ ಸಿದ್ಧಾಂತದ ಪ್ರಕಾರ ಎಲ್ಲವನ್ನೂ ಒಟ್ಟುಸೇರಿಸಿ ಒಂದು ಚೌಕ್ಕಟ್ಟಿನೊಳಗೆ ತರುವುದು. ಈ ಸಿದ್ಧಾಂತವನ್ನು ವೈದಿಕ ದೇವರುಗಳ ತೆಕ್ಕೆಯೊಳಗೆ ಗ್ರಾಮದೇವತೆಗಳು ಸೇರಿಕೊಳ್ಳಬೇಕೆನ್ನುವ ಧೋರಣೆಯ ಹಿನ್ನೆಲೆಯಿಂದಲೂ ನೋಡಬಹುದಾಗಿದೆ. ಶಂಕರರು ಶಿವ, ವಿಷ್ಣು, ಸೂರ್ಯ, ಗಣೇಶ, ಕುಮಾರ, ಶಕ್ತಿ ಈ ಆರು ದೇವತೆಗಳ ಸಾಮೂಹಿಕ ಆರಾಧನೆಗೆ ಮಹತ್ವ ನೀಡಿದರು.[4] ಇದರಿಂದ ಸಾಮಾಜಿಕ ಐಕ್ಯ ಸಾಧ್ಯ ಎನ್ನುವ ನಂಬಿಕೆಯನ್ನು ಶಂಕರರು ಹೊಂದಿದ್ದರು.

ದೇವತೆಗಳ ಸಾಮೂಹಿಕ ಆರಾಧನೆಯೊಂದಿಗೆ ಸಾಮಾಜಿಕ ಐಕ್ಯವನ್ನು ಸಾಧಿಸುವ ಶಂಕರರ ಪ್ರಮೇಯ ಕೆಲವೊಂದು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಗ್ರಾಮದೇವತೆಯಾಗಿದ್ದ ದೇವತೆಯೊಂದು ವೈದಿಕ ದೇವತೆಯಾಗಿ ಪರಿವರ್ತನೆಗೊಳ್ಳುವುದು ಒಂದು ದೀರ್ಘ ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ಅನೇಕ ಬದಲಾವಣೆಗಳು ಸಂಭವಿಸುತ್ತಿರುತ್ತವೆ. ಪ್ರಬಲ ಸಂಪ್ರದಾಯಗಳು ವೈವಿಧ್ಯತೆ ಇದ್ದಾಗಲೂ ತಮ್ಮದೇ ಏಕತೆಯನ್ನು ಸಾಧಿಸಲು ಪ್ರಯತ್ನಿಸುತ್ತಿರುತ್ತವೆ. ಗ್ರಾಮ ದೇವತೆಗಳನ್ನು ವೈದಿಕ ದೇವತೆಗಳ ರೂಪದಲ್ಲಿ ಕಾಣುವ ಹಾಗೂ ಅದಕ್ಕೆ ಸಂಬಂಧಿಸಿದ ಮಿಥ್‍ಗಳನ್ನು ಸೃಷ್ಟಿಸುವ ಕೆಲಸಗಳೂ ನಡೆಯುತ್ತಿರುತ್ತವೆ. ಗುಡ್ಡಗಾಡಿನ ಹಿನ್ನೆಲೆಯನ್ನು ಹೊಂದಿರುವ ರುದ್ರ-ಶಿವ ವೈದಿಕ ದೇವತೆಯಾಗಿ ಪರಿವರ್ತನೆ ಹೊಂದಿರುವುದು ಇದಕ್ಕೆ ಒಂದು ಉದಾಹರಣೆ. ಶಂಕರರು ತಮ್ಮ ಸಾಮೂಹಿಕ ಆರಾಧನೆ ಚಿಂತನೆಯಲ್ಲಿ ಈ ಪರಿವರ್ತನೆಗಳನ್ನು ಗುರುತಿಸಿಕೊಂಡಂತೆ ಕಂಡುಬರುವುದಿಲ್ಲ. ವಿಭಿನ್ನ ಸಾಂಸ್ಕೃತಿಕ ಸ್ತರಗಳಿರುವ ಸಮಾಜದಲ್ಲಿ ಸಾಮೂಹಿಕ ಆರಾಧನೆ ಸಿದ್ಧಾಂತವು ಸಾಮಾಜಿಕ ಐಕ್ಯ ಅಥವಾ ಏಕತೆಯನ್ನು ತರಲು ಸಾಧ್ಯವಿಲ್ಲ. ಏಕೆಂದರೆ ಅಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳು ಬದಲಾವಣೆಗೊಂಡಿರುವುದಿಲ್ಲ. ಈ ಕಾರಣಗಳಿಂದಾಗಿ ಶಂಕರರ ಸಾಮೂಹಿಕ ಆರಾಧನೆ ಕಲ್ಪನೆಯು ಮಾನವನ ಬದುಕನ್ನು ಇನ್ನಷ್ಟು ಸಂಕೀರ್ಣಗೊಳಿಸಬಹುದೇ ವಿನಹ ಸರಳೀಕರಿಸಲು ಸಾಧ್ಯವಿಲ್ಲ.

ಶಂಕರಾಚಾರ್ಯರು ತಮ್ಮ ‘ಬ್ರಹ್ಮಸೂತ್ರ ಶಂಕರಭಾಷ್ಯ’ ಗ್ರಂಥದಲ್ಲಿ ಸಮಾಜದ ಕೆಳವರ್ಗದ ಜನರ ಬಗೆಗಿನ ತಮ್ಮ ಅಭಿಪ್ರಾಯವನ್ನು ಈ ರೀತಿಯಾಗಿ ವ್ಯಕ್ತಪಡಿಸಿದ್ದಾರೆ.[5]‘ಶೂದ್ರನಿಗೆ ವಿದ್ಯಾರ್ಜನೆಯ ಅಧಿಕಾರವಿಲ್ಲ. ಬ್ರಹ್ಮ ಜ್ಞಾನಕ್ಕೆ ಅಧಿಕಾರವಿಲ್ಲ. ವೇದಗಳನ್ನು ಕೇಳುವುದಕ್ಕೂ, ವೇದಗಳನ್ನು ಅಧಯ್ಯನ ಮಾಡುವುದಕ್ಕೂ ಸ್ಮೃತಿಯಿಂದ ಅವನಿಗೆ ಬಹಿಷ್ಕಾರವಿದೆ. ಆದ್ದರಿಂದ ಶೂದ್ರನಾದವನು ವೇದಗಳ ಮಾತುಗಳನ್ನು ಕೇಳಿದರೆ ಅವನ ಕಿವಿಗಳಲ್ಲಿ ಕಾಸಿದ ಸೀಸ ಹಾಕಬೇಕು. ವೇದಗಳನ್ನು ಅಧ್ಯಯನ ಮಾಡಿದರೆ ಅವನ ನಾಲಿಗೆಯನ್ನು ಕತ್ತರಿಸಬೇಕು, ವೇದಗಳನ್ನು ಧಾರಣ ಮಾಡಿದರೆ ಅವನನ್ನು ಕೊಂದುಹಾಕಬೇಕು’. ಸಮಾಜದ ಕೆಳವರ್ಗದ ಜನರ ಬಗೆಗೆ ಮನುಸ್ಮೃತಿಯೂ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತದೆ. ಇದರಿಂದಾಗಿ ಶಂಕರರು ಅಸಮಾನ ಸಾಮಾಜಿಕ ವ್ಯವಸ್ಥೆಯನ್ನು ಪ್ರಶ್ನಿಸುವ ಬದಲು ಸಮರ್ಥಿಸುವ ಕೆಲಸವನ್ನು ಮಾಡಿದಂತೆ ಕಂಡುಬರುತ್ತದೆ. ಇದರಿಂದಾಗಿ ಪುರೋಹಿತ ಶಾಹಿಯ ಪ್ರಭುತ್ವ ಪುನರ್‌ ಸ್ಥಾಪನೆಗೊಳ್ಳುವಂತಾಯಿತು. ಶಂಕರರು ತಮ್ಮ ಸಿದ್ಧಾಂತವನ್ನು ಪ್ರತಿಪಾದಿಸಿರುವುದು ಸಂಸ್ಕೃತ ಭಾಷೆಯ ಮೂಲಕ. ಸಂಸ್ಕೃತ ಭಾಷೆಯನ್ನು ದೇವರ ಭಾಷೆ ಎಂಬುದಾಗಿ ಪರಿಗಣಿಸಲಾಗಿತ್ತು. ಅದು ಜನಸಾಮಾನ್ಯರಿಗೆ ಎಟುಕುವಂತಿರಲಿಲ್ಲ.[6] ಈ ಕಾರಣಗಳಿಂದಾಗಿ ಶಂಕರರು ಸಮಾಜದ ಕೆಳವರ್ಗಗಳಿಗಿಂತ ದೂರವೇ ಉಳಿದಿದ್ದರು ಎನ್ನುವುದು ತಿಳಿಯುತ್ತದೆ. ಅವರು ನಡೆಸಿದ ಅಧ್ಯಯನ, ಪ್ರತಿಪಾದಿಸಿದ ತತ್ವಗಳು, ಬರೆದ ಪುಸ್ತಕಗಳು ಧರ್ಮಕೇಂದ್ರಿತವಾಗಿದ್ದವು. ಧರ್ಮದ ತಾತ್ವಿಕ ಚರ್ಚೆಯನ್ನು ತೀಕ್ಷ್ಣವಾಗಿ ಮಾಡಿ ವೈದಿಕ ಧರ್ಮ ವಿಮರ್ಶೆಗೊಳ್ಳುವ ಮೂಲಕ ಪ್ರಚಾರವನ್ನು ಪಡೆಯುವಂತೆ ಶಂಕರರ ಅದ್ವೈತ ಸಿದ್ಧಾಂತವು ಮಾಡಿತು.

.೨ ವಿಶಿಷ್ಟಾದ್ವೈತ ಸಿದ್ಧಾಂತ

ರಾಮಾನುಜರು ಅದ್ವೈತವಾದದ ವಿರುದ್ಧವಾಗಿ ವಿಶಿಷ್ಟಾದ್ವೈತ ಎಂಬ ಸಿದ್ಧಾಂತವನ್ನು ಮಂಡಿಸಿದರು. ಸುಭದ್ರ ತಾತ್ವಿಕ ಆಧಾರವೊಂದರ ಮೇಲೆ ಧರ್ಮ ಸ್ಥಾಪನೆ ಮಾಡುವುದೇ ರಾಮಾನುಜರ, ಮಹಾಕಾರ್ಯವಾಗಿತ್ತು. ಈ ಸಿದ್ಧಾಂತವನ್ನು ಮೊದಲು ಮಂಡಿಸಿದವರು ಯಮುನಾಚಾರ್ಯರು.[7] ರಾಮಾನುಜರ ಈ ಸಿದ್ಧಾಂತವು ಉಪನಿಷತ್ತುಗಳನ್ನು, ಬ್ರಹ್ಮ ಸೂತ್ರವನ್ನು ಆಧರಿಸಿತ್ತು. ವ್ಯಕ್ತಿಯ ಆತ್ಮವನ್ನು ಪರಮಾತ್ಮನ ಉಪಾಧಿಯಾಗಿ, ಆದರೆ ಅದರಿಂದ ಭಿನ್ನವಾಗಿ ಈ ಸಿದ್ಧಾಂತ ನಿರೂಪಿಸುತ್ತದೆ. ಮೋಕ್ಷದ ಲಕ್ಷಣವನ್ನು ವಿವರಿಸುವಲ್ಲಿ ರಾಮಾನುಜರು ಭಗವದ್ಗೀತೆಯ ತತ್ವಗಳನ್ನೇ ನಿಕಟವಾಗಿ ಅನುಸರಿಸಿರುವುದು ಕಂಡುಬರುತ್ತದೆ. ತತ್ವಶಾಸ್ತ್ರ ಹಾಗೂ ಸಾಮಾನ್ಯ ಆಚರಣೆಗಳೆರಡರಲ್ಲಿಯೂ ರಾಮಾನುಜರು ಬ್ರಾಹ್ಮಣ ಸಾಂಪ್ರದಾಯಿಕತೆಯನ್ನೇ ಅನುಸರಿಸಿದರು.[8] ಅವರ ಪ್ರಕಾರ ಮೋಕ್ಷವೆಂದರೆ ಭಗವಂತನೊಡನೆ ಪಡೆದ ಸಖ್ಯವೇ ಹೊರತು ಜೀವಾತ್ಮನು ಪರಮಾತ್ಮನಲ್ಲಿ ಐಕ್ಯನಾಗುವುದಲ್ಲ.[9] ಅನೇಕ ಜನ್ಮ ಪರ್ಯಟನಾ ನಂತರಗಳ ಮೇಲೆ ಈಶ್ವರ ಅಥವಾ ಭಗವಂತನ ಪ್ರಾಪ್ತಿಗಾಗಿ ಪ್ರತಿಯೊಬ್ಬ ಜೀವಿಯಲ್ಲಿಯೂ ಅಂತರ್ಗತವಾದ ಒಂದು ಹಾತೊರೆಯುಂಟಾಗುತ್ತದೆ. ಇಂಥ ಬಯಕೆಯೇ ಜೀವನನ್ನು ಸಂಸಾರದ ಬಂಧನಗಳಿಂದ ವಿಮೋಚನೆ ಹೊಂದಲು ಅಪೇಕ್ಷಿಸುವಂತೆ ಮಾಡುತ್ತದೆ. ರಾಮಾನುಜರ ಮೋಕ್ಷದ ಕುರಿತ ಈ ಹೇಳಿಕೆಗಳು ಲೌಕಿಕ ಜಗತ್ತಿಗೆ ಯಾವ ರೀತಿಯಲ್ಲಿಯೂ ಸಂಬಂಧಿಸದ ರೀತಿಯಲ್ಲಿ ಕಂಡುಬರುತ್ತವೆ. ಸಂಸಾರವನ್ನು ಬಂಧನ ಎಂಬುದಾಗಿ ಕರೆದಿರುವುದು ಹಾಗೂ ಸಂಸಾರದಿಂದ ಬಿಡುಗಡೆಯ ಮಾರ್ಗವನ್ನು ಸೂಚಿಸುವವನು ಪರಮಾತ್ಮ ಎಂದಿರುವುದು ಕೇವಲ ಧಾರ್ಮಿಕ ಜಗತ್ತಿಗೆ ಸಂಬಂಧಿಸಿದ ವ್ಯಾಖ್ಯಾನಗಳೇ ಹೊರತು ಮಾನವನ ದೈನಂದಿನ ಬದುಕಿಗೆ ಸಂಬಂಧಿಸಿದ್ದಲ್ಲ. ರಾಮಾನುಜರು ದೇವಕೇಂದ್ರೀತ ಪ್ರಪಂಚವೊಂದನ್ನು ಸೃಷ್ಟಿಸಿದರು. ಇದು ಉಳಿದ ಆಚಾರ್ಯರಿಗೆ ಸಂಬಂಧಿಸಿದಂತೆ ಹೇಳುವ ಮಾತೂ ಆಗಿದೆ.

ರಾಮಾನುಜರ ಪ್ರಕಾರ ಸಂಸಾರ ಬಂಧನದಿಂದ ವಿಮಕ್ತರಾದ ಋಷಿಗಳು, ಭಕ್ತರು ಮತ್ತು ಶರಣರು ಭಗವಂತನ ದೂತರು. ಭಗವಂತ ಇವರ ಮೂಲಕ ಅಪ್ರತ್ಯಕ್ಷವಾಗಿ ಕಾಣಿಸಿಕೊಳ್ಳುತ್ತಾನೆ. ಇವರು ದೇವ-ಮಾನವನ ನಡುವಿನ ಮಧ್ಯವರ್ತಿಗಳಂತೆ. ಮಾನವನ ಸಂಪೂರ್ಣ ಶರಣಾಗತಿ ಈ ಧಾರ್ಮಿಕ ಮಧ್ಯವರ್ತಿಗಳ ಮೂಲಕ ನಡೆಯುತ್ತದೆ. ಇದನ್ನು ವಿಶಿಷ್ಟಾದ್ವೈತ ಸಿದ್ಧಾಂತವು ಭಕಿಮಾರ್ಗ ಎಂಬ ಹೆಸರಿನಿಂದ ಕರೆಯಿತು. ಈ ಪರಿಪೂರ್ಣ ಶರಣಾಗತಿಯಲ್ಲಿ ಉಚ್ಛ-ನೀಚ, ಪಂಡಿತ-ಪಾಮರ, ಗಂಡು-ಹೆಣ್ಣು ಎಂಬ ಯಾವ ಭೇದವೂ ಇರುವುದಿಲ್ಲ ಎನ್ನುವುದು ರಾಮಾನುಜರ ಅಭಿಪ್ರಾಯ. ಈ ಅಭಿಪ್ರಾಯವನ್ನು ಅನೇಕ ವೇದಾಂತ ಹಾಗೂ ಮತಗ್ರಂಥಗಳನ್ನು ಅವರು ಪ್ರತಿಪಾದಿಸಿದರು.[10] ಭಕ್ತಿಮಾರ್ಗದ ಮೂಲಕ ಸಂಸಾರದಿಂದ ಬಿಡುಗಡೆ ಹೊಂದಿ, ಜೀನವದ ಅಂತಿಮ ಗುರಿಯಾದ ಮೋಕ್ಷವನ್ನು ಪಡೆಯಲು ಸಾಧ್ಯ ಎಂಬುದಾಗಿ ರಾಮಾನುಜರು ಭಗವದ್ಗೀತೆಗೆ ಬರೆದ ಗೀತಾಭಾಷ್ಯದಲ್ಲಿ ತಿಳಿಸಿದರು. ಬ್ರಾಹ್ಮಣ ಸಾಂಪ್ರದಾಯಿಕತೆಯಿಂದಾಗಿ ಸಮಾಜದ ಕೆಳಮಟ್ಟಕ್ಕೆ ನೂಕಲ್ಪಟ್ಟ ಜನರಿಗೆ ರಾಮಾನುಜರ ಚಿಂತನೆಗಳು ಪರಿಹಾರದ ರೂಪದಲ್ಲಿ ಕಾಣಿಸಿಕೊಳ್ಳುವ ಬದಲು ತಮ್ಮ ಬದುಕಿನಲ್ಲಿ ತಾವೇ ವಿಶ್ವಾಸವಿಡದಂತೆ ಮಾಡಿದವು. ಅವರು ಮೋಕ್ಷಕ್ಕಾಗಿ ಮತ್ತೊಮ್ಮೆ ಧಾರ್ಮಿಕತೆಯ ಚೌಕಟ್ಟಿನೊಳಗೆ ಸೇರಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಈ ಧಾರ್ಮಿಕ ಸಂಕೀರ್ಣತೆಯು ಅಂದಿನ ಸಾಮಾಜಿಕ ರಚನೆಯ ಅಧಯ್ಯನದಿಂದ ಸ್ಪಷ್ಟವಾಗುತ್ತದೆ. ರಾಜಪ್ರಭುತ್ವ ಇಂಥ ಧಾರ್ಮಿಕ ಸಿದ್ಧಾಂತಗಳಿಗೆ ಆಶ್ರಯ ಕೊಡುವ ಒತ್ತಾಯಕ್ಕೆ ಒಳಗಾಗಿತ್ತು.

ಸಮಾಜದ ಕೆಳವರ್ಗದ ಜನರು ಮೋಕ್ಷಕ್ಕೆ ಅರ್ಹರು ಎನ್ನುವುದು ವಿಶಿಷ್ಟಾದ್ವೈತ ಸಿದ್ಧಾಂತದಲ್ಲಿ ಕಂಡು ಬರುವ ಪ್ರಮುಖ ವಿಚಾರವಾಗಿದೆ. ನೀಚ ಜಾತಿಯಲ್ಲಿ ಜನಿಸಿದವನೆಂಬ ಒಂದೇ ಕಾರಣದಿಂದ ಶಾಸ್ತ್ರಾಧ್ಯಯನಕ್ಕೆ ಅವಕಾಶವಿಲ್ಲದೆ ತೊಳಲಾಡುತ್ತಿದ್ದ ಅಸಂಖ್ಯ ದೀನ ಜನ ಕೋಟಿಯನ್ನು ಉದ್ಧರಿಸಿ, ಅವರಿಗೂ ಐಹಿಕ ಸುಖ ಸಾಧನೆಗೆ ಅಧಿಕಾರವುಂಟು, ಅವರಿಗೂ ಮೋಕ್ಷ ಪ್ರಾಪ್ತಿಗೆ ಅವಕಾಶವುಂಟು, ಅವರಿಗೂ ಮೋಕ್ಷ ಪ್ರಾಪ್ತಿಗೆ ಅವಕಾಶವುಂಟು ಎಂಬ ಉದಾತ್ತ ತತ್ವವನ್ನು ವೈಷ್ಣವ ಧರ್ಮ ಅನುಷ್ಠಾನಕ್ಕೆ ತಂದಿತು ಎನ್ನುವುದು ಹೆಚ್ಚು ಪ್ರಚಾರದಲ್ಲಿರುವ ವಾದ.[11] ಕೆಳಜಾತಿಯ ಜನರು ಭಗವಂತನ ಸೃಷ್ಟಿಯೇ ಆಗಿರುವುದರಿಂದ ಅವರು ದೈವ ಕೃಪೆಯಿಂದ ವಂಚಿತರಾಗಬಾರದು, ಅವರಿಗೂ ಧರ್ಮಾಮೃತದ ಪಾನ ಮಾಡಿಸಿ ದಿವ್ಯಾನಂದ, ದಿವ್ಯಾನುಭವಗಳು ಲಭಿಸುವಂತೆ ಮಾಡಬೇಕು ಎಂಬುದಾಗಿ ರಾಮಾನುಜನರು ತಮ್ಮ ಚಿಂತನೆಗಳಲ್ಲಿ ತಿಳಿಹೇಳಿದರು.[12] ತಮ್ಮ ಗುರು ಉಪ ದೇಶಿಸಿದ ಪವಿತ್ರ ಮಂತ್ರದ ರಹಸ್ಯವನ್ನು ಸಾರ್ವಜನಿಕವಾಗಿ ಘೋಷಿಸಿ ಅದರ ಲಾಭವನ್ನು ಸಾಮಾನ್ಯ ಜನರೂ ಪಡೆಯುವಂತೆ ಮಾಡಿದರು ಎನ್ನುವ ಕಥೆಯೂ ಇದೆ.[13] ಅದೇ ರೀತಿ ದೇವಾಲಯಗಳಿಗೆ ಪಂಚಮರು ಎಂದು ಕರೆಯಿಸಿಕೊಂಡವರು ಪ್ರವೇಶಿಸಬಹುದು ಎನ್ನುವ ನಿಲುವನ್ನು ವ್ಯಕ್ತಪಡಿಸಿದರು. ಆದರೆ ಇದು ವರ್ಷದಲ್ಲಿ ಒಂದು ದಿನಕ್ಕೆ ಮಾತ್ರ ಸೀಮಿತವಾಗಿತ್ತು. ರಾಮಾನುಜರ ಈ ಎಲ್ಲ ಚಿಂತನೆಗಳು ಮತ್ತು ಧೋರಣೆಗಳು ಕೆಳಜಾತಿಯ ಜನರು ಬ್ರಾಹ್ಮಣರನ್ನು ಹೆಚ್ಚೆಚ್ಚು ಅವಲಂಬಿಸುವಂತೆ ಮಾಡಿದವು. ಈ ಅವಲಂಬನೆಗೆ ಧರ್ಮ ಹಾಗೂ ಅದಕ್ಕೆ ಸಂಬಂಧಿಸಿದ ನಂಬಿಕೆ, ಆಚರಣೆಗಳು ಮೂಲ ಕಾರಣವಾದವು. ರಾಮಾನುಜರು ತಮ್ಮ ಚಿಂತನೆಗಳಲ್ಲಿ ಅಂದಿನ ಜಾತಿ ಆಧಾರಿತ ಸಮಾಜವನ್ನು ಪ್ರಶ್ನಿಸುವ ಬದಲು ಧರ್ಮದ ಮೂಲಕ ಸಮಾಜವನ್ನು ನೋಡುವ, ಅಲೌಕಿಕ ಪ್ರಪಂಚವೊಂದನ್ನು ನಿರ್ಮಿಸುವ ಕೆಲಸವನ್ನಷ್ಟೆ ಮಾಡಿದರು.

ರಾಮಾನುಜರು ವಿಶಿಷ್ಟಾದ್ವೈತ ಸಿದ್ಧಾಂತವನ್ನು ಹುಟ್ಟು ಹಾಕುವುದರ ಮೂಲಕ ಮತಪ್ರಚಾರವನ್ನು ಆರಂಭಿಸಿದರು. ಶ್ರೀವೈಷ್ಣವ ಮತದ ಪ್ರಚಾರಕ್ಕೆ ತೊಡಗಿದಾಗ ಜೈನ ಮತ್ತು ಶೈವ ಮತಗಳೇ ಮುಂತಾದ ಅನ್ಯಮತ ಧರ್ಮಾಚರಣೆಗಳಿಗೆ ಸೇರಿದವರಿಂದ ವಿರೋಧಗಳನ್ನು ಎದುರಿಸಬೇಕಾಯಿತು. ಈ ಕಾರಣದಿಂದಾಗಿ ರಾಮಾನುಜರು ‘ಶ್ರೀವೈಷ್ಣವ ಪಂಚ ಸಂಸ್ಕಾರ’ ಎಂಬ ಮತದೀಕ್ಷೆಯನ್ನು ಅನ್ಯಮತಸ್ಥರಿಗೆ ಉಪದೇಶಿಸಿದರು.[14] ಈ ಪಂಚ ಸಂಸ್ಕಾರಗಳು ವಿಷ್ಣುವಿನ ಸಂಕೇತಗಳಾಗಿದ್ದವು. ವೈಷ್ಣವ ಸಂಪ್ರದಾಯವನ್ನು ದಕ್ಷಿಣ ಭಾರತದಲ್ಲಿ ಪ್ರಚಾರಕ್ಕೆ ತರಲು ತಮಿಳುನಾಡಿನ ಆಳ್ವಾರುಗಳು ಮೊದಲೇ ಸಾಕಷ್ಟು ಕೆಲಸವನ್ನು ಮಾಡಿದ್ದರು. ವಿಶಿಷ್ಟಾದ್ವೈತದ ಬೆಳವಣಿಗೆಗೆ ಆಳ್ವಾರುಗಳು ಚಿಂತನೆಗಳು ಬಹುಮಟ್ಟಿಗೆ ಕಾರಣವಾಗಿದ್ದವು. ರಾಮಾನುಜರ ಸಿದ್ಧಾಂತದಲ್ಲಿ ವಿಷ್ಣುವಿನೊಂದಿಗೆ ಶ್ರೀ ಅಥವಾ ಲಕ್ಷ್ಮಿಯೂ ಸೇರಿಕೊಂಡಿರುವುದರಿಂದಾಗಿ ಅದು ಶ್ರೀ ವೈಷ್ಣವ ಮತ ಎಂಬ ಹೆಸರನ್ನು ಪಡೆದುಕೊಂಡಿತು.[15] ಈ ಮತದ ಮೇಲೆ ಹೆಚ್ಚಿನ ನಂಬಿಕೆ ಬರುವ ರೀತಿಯಲ್ಲಿ ಉಪದೇಶಗಳನ್ನು ನೀಡಲಾಯಿತು. ಕೆಳಜಾತಿಯ ಜನರನ್ನೂ ಈ ಮತಕ್ಕೆ ಸೇರಿಸಿಕೊಳ್ಳುವ ಉದ್ದೇಶದಿಂದ ಅವರಿಗೆ ಮೋಕ್ಷದ ಕಲ್ಪನೆಯನ್ನು ಬೋಧಿಸಲಾಯಿತು. ಅದೇ ರೀತಿ ವಿಷ್ಣುವಿನ ಭಕ್ತರಾಗುವಂತೆ ಮಾಡಲಾಯಿತು. ಈ ಎಲ್ಲ ಪ್ರಯತ್ನಗಳ ಹಿಂದಿನ ಉದ್ದೇಶ ಶ್ರೀವೈಷ್ಣವ ಮತದ ಪ್ರಚಾರ ಮತ್ತು ಅನುಯಾಯಿಗಳ ಸಂಖ್ಯೆಯನ್ನು ಹೆಚ್ಚಿಸುವುದೇ ಆಗಿತ್ತು. ರಾಮಾನುಜರು ವಿವಿಧ ಧರ್ಮಗಳವರಿಂದ ವಿರೋಧವನ್ನು ಎದುರಿಸುತ್ತಿದ್ದುದರಿಂದಾಗಿ ಮತಪ್ರಚಾರಕ್ಕೆ ಹೆಚ್ಚಿನ ಮಹತ್ವವನ್ನು ನೀಡುವುದು ಅನಿವಾರ್ಯವಾಯಿತು. ಇದೇ ರೀತಿಯ ಪ್ರಯತ್ನವನ್ನು ಇನ್ನಿತರ ಧರ್ಮಪ್ರಚಾರಕರು ಮಾಡುತ್ತಿದ್ದರು.

ಶೈವರು ಮತ್ತು ವೈಷ್ಣವರ ನಡುವಿನ ಮನಸ್ತಾಪವು ರಾಮಾನುಜರು ತಮಿಳುನಾಡನ್ನು ಬಿಟ್ಟು ಕರ್ನಾಟಕಕ್ಕೆ ಬರುವಂತೆ ಮಾಡಿತು. ತಮ್ಮ ಶಿಷ್ಯವೃಂದದೊಂದಿಗೆ ಕರ್ನಾಟಕಕ್ಕೆ ಬಂದ ರಾಮಾನುಜರು ಸುಮಾರು ಎರಡು ದಶಕಗಳ ಕಾಲ ಇದ್ದು ಶ್ರೀವೈಷ್ಣವ ಧರ್ಮವು ಪ್ರಚಾರವಾಗುವಂತೆ ಮಾಡಿದರು. ಕರ್ನಾಟಕದಲ್ಲಿ ವೈಷ್ಣವ ಧರ್ಮವು ಮೊದಲೇ ಅಸ್ತಿತ್ವದಲ್ಲಿತ್ತು. ಕ್ರಿ.ಶ. ನಾಲ್ಕನೆಯ ಶತಮಾನದ ವೇಳೆಗಾಗಲೇ ಕರ್ನಾಟಕದಲ್ಲಿ ವೈಷ್ಣವಧರ್ಮ ಜನಪ್ರಿಯವಾಗಿದ್ದಿತೆಂದು ತಿಳಿಯುತ್ತದೆ.[16] ವೈಷ್ಣವ ಧರ್ಮದ ಬೆಳವಣಿಗೆಯನ್ನು ಭಾಗವತ ಪಂಥ, ಶ್ರೀವೈಷ್ಣವ ಪಂಥ ಹಾಗೂ ದ್ವೈತ ಪಂಥ ಎಂಬ ಮೂರು ಶಾಖೆಗಳಲ್ಲಿ ಗುರುತಿಸಲಾಗಿದೆ. ವೈಷ್ಣವ ಧರ್ಮದ ಬ್ರಾಹ್ಮಣರು ಅಗ್ರಹಾರದ ಮಹಾಜನರೆನಿಸಿ ಅಲ್ಲಿನ ಆಡಳಿತ ನೋಡಿ ಕೊಳ್ಳುವುದರೊಂದಿಗೆ ಅಧ್ಯಯನ, ಅಧ್ಯಾಪನ, ದಾನ ಮುಂತಾದ ಕೆಲಸಗಳನ್ನೂ ಮಾಡುತ್ತಿದ್ದರು.[17] ಕರ್ನಾಟಕದಲ್ಲಿ ಹಲವಾರು ವೈಷ್ಣವ ಕೇಂದ್ರಗಳೂ ಇದ್ದುವು.[18] ವೈಷ್ಣವ ದೇವಾಲಯಗಳಿಗೆ ದಾನ ನೀಡಿದ ಉಲ್ಲೇಖಗಳು ಅನೇಕ ಶಾಸನಗಳಲ್ಲಿ ಸಿಗುತ್ತವೆ.[19] ಈ ಎಲ್ಲ ಬೆಳವಣಿಗೆಗಳು ರಾಮಾನುಜರಿಗೆ ಅನುಕೂಲಕರವಾಗಿಯೇ ಪರಿಣಮಿಸಿದವು. ರಾಮಾನುಜರು ಚೋಳರೊಂದಿಗೆ ಹೊಂದಿದ್ದ ಸಂಬಂಧಗಳು ಅಸ್ಪಷ್ಟಗೊಂಡು ವೈಷ್ಣವ ಧರ್ಮಕ್ಕೆ ಭದ್ರ ಬುನಾದಿ ಇಲ್ಲದೆ ಹೋದಾಗ ರಾಜಾಶ್ರಯವನ್ನು ಪಡೆಯುವುದು ಅನಿವಾರ್ಯವಾಗಿ ಕಂಡಿತು.[20] ಕರ್ನಾಟಕದಲ್ಲಿ ರಾಮಾನುಜರಿಗೆ ಹೊಯ್ಸಳರ ಆಶ್ರಯವು ಲಭಿಸಿತು.[21] ಹೊಯ್ಸಳ ಅರಸ ವಿಷ್ಣುವರ್ಧನನು ರಾಮಾನುಜರ ಶಿಷ್ಯನಾಗಿ ಶ್ರೀವೈಷ್ಣವ ಧರ್ಮವನ್ನು ಸ್ವೀಕರಿಸಿದನು.[22] ಈ ರೀತಿಯಾಗಿ ಹೊಯ್ಸಳರ ಆಶ್ರಯ ಸಿಗುವುದರೊಂದಿಗೆ ಶ್ರೀವೈಷ್ಣವ ಧರ್ಮವು ಕರ್ನಾಟಕದಲ್ಲಿ ವಿಸ್ತಾರವಾಗಿ ಬೆಳೆಯತೊಡಗಿತು.[23] ರಾಮಾನುಜರ ಮತಪ್ರಚಾರವು ಇದರಿಂದಾಗಿ ಚುರುಕುಗೊಳ್ಳುವಂತಾಯಿತು. ಬೇಲೂರು, ಮೇಲುಕೋಟೆ ಮುಂತಾದ ಪ್ರದೇಶಗಳಲ್ಲಿ ಅನೇಕ ವೈಷ್ಣವ ದೇವಾಲಯಗಳು ನಿರ್ಮಾಣಗೊಂಡವು. ರಾಮಾನುಜರ ಪ್ರವೇಶವು ಧಾರ್ಮಿಕ ಸಾಮರಸ್ಯದ ಬದಲು ಧಾರ್ಮಿಕ ಸಂಕೀರ್ಣತೆಯನ್ನಷ್ಟೇ ಹುಟ್ಟುಹಾಕಿತು. ಶ್ರೀವೈಷ್ಣವ ಧರ್ಮವು ವಿಷ್ಣುವಿನ ಆರಾಧನೆಯನ್ನು ಪ್ರಚಾರಗೊಳಿಸಿತೇ ವಿನಹ ಧಾರ್ಮಿಕ ಸಾಂಪ್ರದಾಯಿಕತೆಯನ್ನು ಪ್ರಶ್ನಿಸುವ ಇಲ್ಲವೇ ವಿರೋಧಿಸುವ ಕೆಲಸವನ್ನು ಮಾಡಲಿಲ್ಲ.

ವಿಶಿಷ್ಟಾದ್ವೈತವು ಭಗವಂತ ಮತ್ತು ಭಕ್ತನ ನಡುವಿನ ಸಂಬಂಧದ ಕುರಿತಾಗಿಯೇ ತನ್ನ ಎಲ್ಲ ಸಿದ್ಧಾಂತಗಳನ್ನು ಮಂಡಿಸಿತು. ಇದು ಸಂಪೂರ್ಣವಾಗಿ ಧಾರ್ಮಿಕ ಚೌಕಟ್ಟಿನೊಳಗೇ ವ್ಯವಹರಿಸುತ್ತಿತ್ತು. ಜನಸಾಮಾನ್ಯರ ಆಲೋಚನೆಗೆ ನಿಲುಕದ ರೀತಿಯಲ್ಲಿ ಈ ಸಿದ್ಧಾಂತಗಳು ರೂಪುಗೊಂಡಿದ್ದವು. ಭಗವಂತನನ್ನು ಪ್ರಧಾನ ಎಂದೂ, ಭಕ್ತನನ್ನು ಅಧೀನ ಎಂದೂ ಕರೆದು ಅವೆರಡೂ ಒಂದುಗೂಡಿರುವ ವಿಶಿಷ್ಟವನ್ನು ವಿಶಿಷ್ಟಾದ್ವೈತ ಎಂದು ಕರೆಯಲಾಯಿತು. ವಿಶಿಷ್ಟತೆಗಳಿಂದ ಕೂಡಿರುವ ಮಾನವನ ಬದುಕು ಸ್ವತಂತ್ರವಲ್ಲ, ಅದು ಭಾವಂತನ ಪ್ರಕಾರ ಅಥವಾ ಅಧೀನದಲ್ಲಿರುವುದು ಎನ್ನುವ ಉಪದೇಶವನ್ನು ನೀಡಲಾಯಿತು. ಈ ರೀತಿಯ ಚಿಂತನೆಗಳು ಜನಸಾಮಾನ್ಯರನ್ನು ಗೊಂದಲದಲ್ಲಿ ಸಿಲುಕಿಸಿದ್ದೇ ಅಲ್ಲದೆ ವಿಶಿಷ್ಟಾದ್ವೈತದಲ್ಲಿಯೇ ವಿಭಜನೆ ಕಾಣಿಸಿಕೊಳ್ಳುವಂತೆ ಮಾಡಿದ್ದವು. ಈ ಸಿದ್ಧಾಂತದೊಳಗೆ ಎರಡು ವಾದಗಳು ಹುಟ್ಟಿಕೊಂಡವು. ಅವುಗಳೆಂದರೆ ಭಗವಂತನು ಪ್ರತಿಯೊಬ್ಬ ಮನುಷ್ಯನನ್ನೂ ರಕ್ಷಿಸುತ್ತಾನೆ ಹಾಗೂ ಮನುಷ್ಯನು ತನ್ನದೇ ಪ್ರಯತ್ನದಿಂದ ಭಗವಂತನನ್ನು ಒಲಿಸಿಕೊಳ್ಳಬೇಕು ಎನ್ನುವುದು.[24] ಈ ಎರಡು ವಾದಗಳು ಮೇಲ್ನೋಟಕ್ಕೆ ಭಗವಂತ ಮತ್ತು ಭಕ್ತನ ನಡುವಿನ ಸಂಬಂಧದ ಕುರಿತಾಗಿರುವಂತೆ ಕಂಡುಬಂದರೂ ವೈಯಕ್ತಿಕ ಪ್ರತಿಷ್ಠೆ, ಮನಸ್ತಾಪಗಳು ಇಲ್ಲಿ ಪ್ರಮುಖವಾಗಿರುತ್ತಿದ್ದವು ಎನ್ನುವುದು ಮನವರಿಕೆಯಾಗುತ್ತದೆ. ರಾಮಾನುಜರು ಉಪದೇಶಿಸಿದ ಸಂಪೂರ್ಣ ಶರಣಾಗತಿ, ಸ್ವರ್ಗ ಮತ್ತು ನರಕದ ಕಲ್ಪನೆಗಳು ಹಾಗೂ ಅನುಸರಿಸಿದ ಮತ ಪ್ರಚಾರ ನೀತಿ ಅಂದಿನ ಧಾರ್ಮಿಕ ವೈರುಧ್ಯಗಳನ್ನು ಸೂಚಿಸುತ್ತದೆಯೇ ಹೊರತು ಅಸಮಾನ ಸಾಮಾಜಿಕ ವ್ಯವಸ್ಥೆಯನ್ನು ಪ್ರಶ್ನಿಸಿದಂತೆ ಕಂಡುಬರುವುದಿಲ್ಲ. ಬ್ರಾಹ್ಮಣ ಸಾಂಪ್ರದಾಯಿ ಕತೆಯು ರಾಮಾನುಜರ ಚಿಂತನೆಗಳಿಂದ ವಿಚಲಿತಗೊಳ್ಳಲಿಲ್ಲ. ಅದು ಇನ್ನಷ್ಟು ಗಟ್ಟಿಯಾಗಿ ಬೆಳೆಯತೊಡಗಿತು. ರಾಮಾನುಜರು ಜಾತಿವ್ಯವಸ್ಥೆಯನ್ನು ಪ್ರಶ್ನಿಸಿದರಾದರೂ ಅದು ಧಾರ್ಮಿಕ ಹಿನ್ನೆಲೆಯಿಂದ ಕೂಡಿತ್ತೇ ವಿನಹ ಶ್ರೇಣೀಕೃತ ಸಮಾಜ ವ್ಯವಸ್ಥೆಯ ಹಿನ್ನೆಲೆಯಿಂದಲ್ಲ. ಲೌಕಿಕ ಜೀವನದ ಸಮಸ್ಯೆಗಳಿಗೆ ಅಲೌಕಿಕತೆಯಲ್ಲಿ ಉತ್ತರವನ್ನು ಕಂಡುಹಿಡಿಯುವ ಅಥವಾ ಜೀನವದಲ್ಲಿ ಹೊಂದಾಣಿಕೆಯಾಗದಿದ್ದರೆ ಪ್ರಾಪಂಚಿಕ ಜೀವನವನ್ನು ತೊರೆದು ಸನ್ಯಾಸಿಯಾಗುವ ಧೋರಣೆಗಳು ಸಮಸ್ಯೆಗೂ ಪರಿಹಾರವನ್ನು ಒದಗಿಸಿ ಕೊಡುವುದಿಲ್ಲ.

.೩ ದ್ವೈತ ಸಿದ್ಧಾಂತ

ಮಧ್ವರು ದ್ವೈತ ಸಿದ್ಧಾಂತದ ಸ್ಥಾಪಕರು. ಈ ಸಿದ್ಧಾಂತವು ವಿಶಿಷ್ಟದ್ವೈತದಂತೆ ವೇದಾಂತ ದರ್ಶನವನ್ನೇ ಅವಲಂಬಿಸಿಕೊಂಡು ಬೆಳೆಯಿತು. ಶಂಕರ, ರಾಮಾನುಜ, ಮಾಧ್ವ ಈ ಮೂರು ಆಚಾರ್ಯರು ವೇದಾಂತದೊಳಗೇ ತಮ್ಮ ಸಿದ್ಧಾಂತಗಳನ್ನು ಮಂಡಿಸಿದರು. ಬ್ರಹ್ಮ ಜಿಜ್ಞಾಸೆಯೇ ಇವರ ಮೂಲ ಉದ್ದೇಶ. ಅದೇ ರೀತಿ ಮುಕ್ತಿಯನ್ನು ಹೊಂದುವುದು ಒಟ್ಟು ಸಿದ್ಧಾಂತದ ತಾತ್ಪರ್ಯ. ಆದರೆ ಈ ಉದ್ದೇಶಗಳಿಗೆ ಬಳಸಿದ ಪಥಗಳು ಮಾತ್ರ ಬೇರೆ ಬೇರೆ.[25] ಆಚಾರ್ಯರು ಉಪದೇಶಿಸಿದ ತತ್ವಗಳು ಅವರ ಕಾಲಕ್ಕೆ ಮೊದಲೇ ಅಸ್ತಿತ್ವದಲ್ಲಿದ್ದವು. ಅವುಗಳನ್ನು ತಮ್ಮ ಪ್ರತಿಭಾಶಕ್ತಿಗೆ ತಕ್ಕಂತೆ ಪ್ರತಿಪಾದಿಸಿ, ಬೆಳೆಸುವ ಕೆಲಸವನ್ನು ಮಾಡಿದರು. ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ ದರ್ಶನಗಳಲ್ಲಿ ಅಡಕವಾಗಿದ್ದ ದ್ವೈತ ತತ್ವಗಳನ್ನು ಮಧ್ವರು ಪ್ರಚಾರಪಡಿಸಿದರು.[26] ಮಧ್ವ ಮತದ ಪ್ರಕಾರ ಬ್ರಹ್ಮ ಮೀಮಾಂಸೆಯ ಸಾಧನೆಯೇ, ಅಂದರೆ ಬ್ರಹ್ಮ ಜಿಜ್ಞಾಸೆಯೇ ಮನುಷ್ಯ ಜೀವನದ ಪರಮ ಪುರುಷಾರ್ಥ. ಜಿಜ್ಞಾಸೆಯನ್ನು ಮಧ್ವರು ಆಧ್ಯಾತ್ಮಿಕ ಸಾಧನೆ ಅಥವಾ ತಪಸ್ಸು ಎಂಬುದಾಗಿ ಅಂಗೀಕರಿಸುತ್ತಾರೆ.[27] ಜ್ಞಾನದ ಪ್ರತಿ ಹಂತದಲ್ಲೂ ನಾವು ತಾಳುವ ನಿಲುವು ಮುಂದಿನ ಜಿಜ್ಞಾಸೆಗೆ ಪ್ರಚೋದಕವಾದಾಗ ಮಾತ್ರ ಅದು ನಿರ್ದಿಷ್ಟವಾಗುತ್ತದೆ, ಆದ್ದರಿಂದ ಜಿಜ್ಞಾಸೆಯು ಸದಾ ಸಾಗುತ್ತಿರಬೇಕೆಂದು ಮಧ್ವರು ತಮ್ಮ ಸಿದ್ಧಾಂತದಲ್ಲಿ ವಿವರಿಸುತ್ತಾರೆ. ಅವರ ಈ ಸಿದ್ಧಾಂತವು ವೇದಗಳನ್ನು ಅವಲಂಬಿಸಿಕೊಂಡಿತ್ತು. ವೇದಗಳ ಅರ್ಥನಿರ್ಣಯ ಕ್ರಮಕ್ಕೇ ಬ್ರಹ್ಮ ಜಿಜ್ಞಾಸೆ ಅಥವಾ ಮೀಮಾಂಸಾ ಎನ್ನುವ ಹೆಸರನ್ನು ನೀಡಲಾಯಿತು.

ಮಧ್ವರು ತಮ್ಮ ಚಿಂತನೆಗಳಲ್ಲಿ ಶಂಕರರ ಅದ್ವೈತ ಸಿದ್ಧಾಂತವನ್ನು ಕಟುವಾಗಿ ವಿರೋಧಿಸಿದರು. ಈ ವಿಶ್ವವು ಕೇವಲ ಮಾಯೆ ಎನ್ನುವ ಶಂಕರರ ತೀರ್ಮಾನವನ್ನು ಅಲ್ಲಗಳೆದು, ವಿಶ್ವದಲ್ಲಿ ಮಾಯೆ ಎಂಬುದೇ ಇಲ್ಲ, ಈ ಜಗತ್ತು ಸತ್ಯ ಎಂಬ ವಾದವನ್ನು ಮಂಡಿಸಿದರು.[28] ವಿಶ್ವದ ಸಕಲ ವಸ್ತುಗಳೂ ವಿವಿಧವಾಗಿದೆ, ವಿವಿಧ ಲಕ್ಷಣಗಳುಳ್ಳವಾಗಿವೆ ಎನ್ನುವ ಹೇಳಿಕೆಯೇ ಅವರ ದ್ವೈತ ಸಿದ್ಧಾಂತದ ಸ್ಪಷ್ಟವಾದ ನಿಲುವು. ಇದು ಅವರು ಅನೇಕತಾವಾದಿಯಾಗಿದ್ದರೆಂಬುದನ್ನು ಸ್ಪಷ್ಟಪಡಿಸುತ್ತದೆ. ಮಧ್ವರು ಅದ್ವೈತಿಗಳನ್ನು ವಂಚಕ ರಾಕ್ಷಸರು ಎಂದು ಟೀಕಿಸಿದರು.[29] ಶಂಕರರು ಬ್ರಹ್ಮನನ್ನು ನಿರ್ಗುಣ ನಿರವಯವನೆಂದು ಹೇಳಿರುವುದನ್ನು ಮಧ್ವರು ಖಂಡಿಸಿದರು. ಅದೇ ರೀತಿ ಶಂಕರರು ಬೌದ್ಧಧರ್ಮದ ಶೂನ್ಯವಾದವನ್ನು ಹರದಿದರು ಎಂದು ಅಪಾದಿಸಿದರು. ದ್ವೈತ ಮತದ ಪ್ರಕಾರ ಪ್ರಪಂಚದಲ್ಲಿ ಭೇದಗಳು ಅಸಂಖ್ಯವಾಗಿವೆ. ಅವು ಜಿವೇಶ್ವರ ಬೇದ, ಜಡೇಶ್ವರ ಭೇದ, ಪರಸ್ಪರ ಜೀವಭೇದ, ಜಡಭೇದ ಮತ್ತುಜಡಜೀವ ಭೇದ. ಈ ಭೇದಗಳಿಗೆ ಮದ್ವರು ಭೇದ ಪಂಚಕವೆಂದು ಹೆಸರಿಸಿದರು.[30] ಈ ಭೇದಗಳು ನಿತ್ಯವೆಂದು ಪ್ರತಿಪಾದಿಸಲಾಯಿತು. ದ್ವೈತ ಸಿದ್ಧಾಂತ ಪ್ರಕಾರ ಈ ಭೇದಗಳ ಅರ್ಥ ಅವು ಸ್ವತಂತ್ರ ಘಟಕಗಳು ಎಂದಲ್ಲ, ಭಗವಂತ ಮತ್ತು ಜಗತ್ತು ಪರಸ್ಪರ ಒಂದು ಇನ್ನೊಂದರೊಂದಿಗೆ ಸಂಬಂಧ ಇಟ್ಟುಕೊಂಡಿರುತ್ತವೆ. ಜಗತ್ತು ವೈವಿಧ್ಯಮಯವಾಗಿ, ವಿವಿಧವಾಗಿ ಕಂಡುಬಂದರೂ ಭಗವಂತ ಅದರೊಳಗೆ ಅಂತರ್ಗತನಾಗಿರುತ್ತಾನೆ ಎನ್ನುವ ಸೂಕ್ಷ್ಮವನ್ನು ಈ ಸಿದ್ಧಾಂತವು ಹೇಳಿತು.

ಮಧ್ವರು ರಾಮಾನುಜರ ಸಿದ್ಧಾಂತವನ್ನು ಅನೇಕ ರೀತಿಯಲ್ಲಿ ವಿರೋಧಿಸಿದರು. ರಾಮಾನುಜರು ವಿಷ್ಣುವನ್ನು ಪರಬ್ರಹ್ಮನೆಂದು ಒಪ್ಪಿಕೊಂಡು ಶಿವನನ್ನು ಕಡೆಗಣಿಸಿದರು. ಆದರೆ ಮಧ್ವರು ವಿಷ್ಣುವನ್ನು ಪರಬ್ರಹ್ಮನೆಂದು ಒಪ್ಪಿಕೊಂಡ ಮೇಲೆಯೂ ಶಿವನನ್ನು ಕಡೆಗಣಿಸುವುದಿಲ್ಲ. ಬ್ರಹ್ಮನು ಅಪೂರ್ಣ ಎನ್ನುವ ರಾಮಾನುಜರ ಅಭಿಪ್ರಾಯವನ್ನು ಮಧ್ವರು ನಿರಾಕರಿಸುತ್ತಾರೆ. ಬ್ರಹ್ಮನು ಅಪೂರ್ಣನಾದರೆ ಅವನಿಗೆ ಕಾರಣನಾದ ಪೂರ್ಣನು ಇನ್ನೊಬ್ಬನಿರಬೇಕಾಗುತ್ತದೆ ಎಂಬುದಾಗಿ ಆಕ್ಷೇಪಿಸುತ್ತಾರೆ.[31] ಅಪೂರ್ಣದ ಮೂಲ ಪೂರ್ಣದಲ್ಲಿಯೂ ಅಭಾವದ ಮೂಲ ಭಾವದಲ್ಲಿಯೂ ಇರುವುದು ಎಂದು ಮಧ್ವರು ಅಭಿಪ್ರಾಯಪಡುತ್ತಾರೆ. ಜೀವಾತ್ಮ ಮತ್ತು ಪರಮಾತ್ಮರ ನಡುವಿನ ಸಂಬಂಧವು ಪರಸ್ಪರ ಅವಲಂಬನ ರೀತಿಯಲ್ಲಿರುತ್ತದೆ ಎನ್ನುವ ರಾಮಾನುಜರ ಅಭಿಪ್ರಾಯವನ್ನು ಮಧ್ವರು ಒಪ್ಪುವುದಿಲ್ಲ. ಜೀವಾತ್ಮರು ಪರಮಾತ್ಮನಿಗಿಂತ ಭಿನ್ನರು ಎನ್ನುವುದು ಮಧ್ವರ ಸಿದ್ಧಾಂತ. ಈ ಕಾರಣಕ್ಕಾಗಿಯೇ ಜೀವರು ನಿತ್ಯರು ಎನ್ನುವ ತತ್ವವನ್ನು ಮಧ್ವರು ಬೋಧಿಸಿದರು. ಭಗವಂತನ ಜೊತೆಗೆ ಅನೇಕ ಅವಲಂಬಿತ ಸತ್ಯಗಳು ಅಸ್ತಿತ್ವದಲ್ಲಿರುತ್ತವೆ, ಅವು ಭಗವಂತನಿಗಿಂತ ಭಿನ್ನವಾಗಿರುತ್ತವೆ. ಜೀವಾತ್ಮರು ನಿತ್ಯರಾಗಿದ್ದರೆ ಭಗವಂತನು ನಿತ್ಯರಲ್ಲಿ ನಿತ್ಯನಾಗಿರುತ್ತಾನೆ ಎನ್ನುವುದು ದ್ವೈತ ಸಿದ್ಧಾಂತದ ತರ್ಕ.[32] ಇಂಥ ಅನೇಕ ಭಿನ್ನಾಭಿಪ್ರಾಯಗಳನ್ನು ವಿಶಿಷ್ಟಾದ್ವೈತ ಮತ್ತು ದ್ವೈತ ಸಿದ್ಧಾಂತಗಳಲ್ಲಿ ಗುರುತಿಸಬಹುದಾಗಿದೆ.

ದ್ವೈತ ಸಿದ್ಧಾಂತವು ಮೂರು ರೀತಿಯ ಜೀವಿಗಳ ಕುರಿತು ವಿವರಗಳನ್ನು ನೀಡುತ್ತದೆ. ಮೂರು ವಿಧದ ಜೀವಿಗಳೆಂದರೆ, ಮುಕ್ತರು, ಬದ್ಧಜೀವಿಗಳು ಮತ್ತು ನಿತ್ಯನಾರಕಿಗಳು.[33] ಮುಕ್ತರು ಸಾಧನೆಯ ಸಂಪತ್ತಿನಿಂದ ಭಗವಂತನ ಅನುಗ್ರಹವನ್ನು ಗಳಿಸಿಕೊಂಡು ಸಂಸಾರದಿಂದ ಮುಕ್ತರಾದವರು. ಇವರು ಸ್ವಾರ್ಥತ್ಯಾಗಿಗಳು, ಪರಹಿತಾಕಾಂಕ್ಷಿಗಳು, ಬೌದ್ಧಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳಲ್ಲಿ ಆಸಕ್ತರು. ಬದ್ಧಜೀವಿಗಳನ್ನು ನಿತ್ಯಸಂಸಾರಿಗಳೆಂದು ಹೇಳಲಾಗಿದೆ. ಇವರು ಐಹಿಕ ಸುಖಾಸಕ್ತರು ಮತ್ತು ವೈರಾಗ್ಯವಿಲ್ಲದ ಚಂಚಲಚಿತ್ತರು. ಆದರೆ ಸಾಧನೆಯ ಮೂಲಕ ಕೆಲವರಾದರೂ ಮುಕ್ತರಾಗಬಲ್ಲರು. ನಿತ್ಯನಾರಕಿಗಳು ತಮೋಗುಣಭರಿತರು, ದುರಾಲೋಚನೆ, ದುರ್ನಡತೆ ಇವರ ಗುಣ. ಇವರು ಅಸಂತೋಷಿಗಳು, ಸೋಮಾರಿಗಳು. ಇದು ಮೂರು ವಿಧದ ಜೀವಿಗಳ ಬಗ್ಗೆ ದ್ವೈತ ಸಿದ್ಧಾಂತವು ನೀಡಿದ ವಿವರಣೆ. ಜೀವಿಗಳು ಪರಸ್ಪರ ಭಿನ್ನರು ಮತ್ತು ಉಚ್ಚನೀಚವೆಂಬ ತಾರತಮ್ಯ ಉಳ್ಳವರು ಎನ್ನುವುದನ್ನು ಮೇಲಿನ ವರ್ಗೀಕರಣದಿಂದ ಸಾಬೀತುಪಡಿಸಲು ಮಧ್ವರು ಪ್ರಯತ್ನಿಸಿದರು. ಅದೇ ರೀತಿ ಉತ್ತಮ ಭಕ್ತಿಯಿಂದ ಎಲ್ಲರೂ ಮುಕ್ತಿಯನ್ನು ಹೊಂದಲು ಸಾಧ್ಯ ಎನ್ನುವ ಸಂದೇಶವನ್ನು ನೀಡಿದರು. ಇದು ದ್ವೈತ ಮತದ ತಿರುಳು. ಜಗತ್ತು ಮಾಯೆಯಲ್ಲ ಅದು ಪಾರಮಾರ್ಥಿಕ ಸತ್ಯ ಹಾಗೂ ಜೀವಿಗಳನ್ನು ಮೋಕ್ಷದ ಗುರಿಗೆ ತಯಾರುಮಾಡುವ ಕ್ಷೇತ್ರ.[34] ಜಗತ್ತಿನ ಅಸ್ತಿತ್ವ ಮತ್ತು ಬೆಳವಣಿಗೆಗಳಿಗೆ ಭಗವಂತನೇ ಕಾರಣ ಮುಂತಾದ ವಿಚಾರಗಳನ್ನು ದ್ವೈತ ಮತವು ಪ್ರಚಾರಪಡಿಸಿತು. ಮಧ್ವರು ಮನುಷ್ಯರನ್ನು ಆಧ್ಯಾತ್ಮಿಕ ದಿಕ್ಕಿನತ್ತ ಬೆಳೆಸಲು ನೋಡಿದರೇ ವಿನಹ ಅವರ ಲೌಕಿಕ ಸಮಸ್ಯೆಗಳನ್ನು ಪರಿಹರಿಸುವತ್ತವಲ್ಲ. ಅವರ ಪ್ರಕಾರ ಲೌಕಿಕ ಸಮಸ್ಯೆಗಳು ಭಗವಂತನಿಗೆ ಶರಣಾಗುವುದರೊಂದಿಗೆ ಪರಿಹಾರವಾಗುತ್ತವೆ. ಆದರೆ ಈ ಸಿದ್ಧಾಂತವು ವಾಸ್ತವಕ್ಕೆ ಹತ್ತಿರವಾಗಿ ಕಂಡುಬರುವುದಿಲ್ಲ.

ಮಧ್ವರ ಮೋಕ್ಷದ ಕಲ್ಪನೆಯು ಶಂಕರ ಮತ್ತು ರಾಮಾನುಜರಿಂದ ಭಿನ್ನವಾಗಿ ಕಂಡುಬರುವುದಿಲ್ಲ. ಮಧ್ವರ ಪ್ರಕಾರ ಮೋಕ್ಷವೆಂದರೆ ಸಂಸಾರದ ಯಾತನೆಗಳಿಂದ ಬಿಡುಗಡೆ ಹೊಂದುವುದು. ಆದರೆ ಈ ಬಿಡುಗಡೆ ಭಗವಂತನ ಕೃಪೆಯಿಂದ ಮಾತ್ರ ಸಾಧ್ಯ ಎನ್ನುವ ಮಾರ್ಗೋಪಾಯವನ್ನು ಸೂಚಿಸಿದರು. ಭಗವಂತನ ಕೃಪೆ ಸಿಗಬೇಕಾದರೆ ಅದು ಭಕ್ತಿಮಾರ್ಗದಿಂದ ಮಾತ್ರ ಸಾಧ್ಯ ಎನ್ನುವ ಎಚ್ಚರಿಕೆಯನ್ನೂ ನೀಡಿದರು. ಮಧ್ವರ ಮೋಕ್ಷದ ಈ ಕಲ್ಪನೆಯು ಮನುಷ್ಯರ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿ ಭಗವಂತನನ್ನು ಅವಲಂಬಿಸುವಂತೆ ಮಾಡಿತು. ಇದು ಧಾರ್ಮಿಕ ಪ್ರಭುತ್ವವನ್ನು ಇನ್ನಷ್ಟು ಗಟ್ಟಿಗೊಳಿಸಬಹುದೇ ವಿನಹ ಮಾನವನನ್ನು ವಿವಿಧ ದಾಸ್ಯಗಳಿಂದ ಬಿಡುಗಡೆಗೊಳಿಸಲು ಸಾಧ್ಯವಿಲ್ಲ. ಮಧ್ವರ ಧಾರ್ಮಿಕ ಚಿಂತನೆಗಳು ಬ್ರಾಹ್ಮಣ ಅಥವಾ ಪುರೋಹಿತವರ್ಗದ ನೆಲೆಯಲ್ಲಿಯೇ ರೂಪುಗೊಂಡಿರುವುದು ಇದರಿಂದ ಸ್ಪಷ್ಟವಾಗುತ್ತದೆ. ವಿಷ್ಣುವನ್ನು ಸರ್ವೋತ್ತಮನೆಂದು ಪ್ರಕಟಿಸುವುದು ಮಧ್ವರ ಉದ್ದೇಶವಾಗಿತ್ತು. ಈ ಉದ್ದೇಶವು ಮಧ್ಯಕಾಲೀನ ವೈಷ್ಣವ ಪರಿಕಲ್ಪನೆಗಳಲ್ಲಿ ಬಹುದೊಡ್ಡ ಪ್ರಭಾವ ಬೀರಿದ್ದು ಕಂಡುಬರುತ್ತದೆ.[35] ವಿಷ್ಣು ಹಾಗೂ ಆತನ ವಿವಿಧ ಅವತಾರಗಳು ಹೆಚ್ಚೆಚ್ಚು ಆರಾಧನೆಗೊಳ್ಳುವಂತಾಯಿತು.[36] ಮಧ್ವರ ಸಿದ್ಧಾಂತಗಳು ಅವರ ಸಾವಿನ ಸಾವಿನ ಬಳಿಕ ಇನ್ನಷ್ಟು ಹೆಚ್ಚು ಪ್ರಚಾರಗೊಂಡವು. ನರಹರಿತೀರ್ಥ, ವಿಜಯೇಂದ್ರ, ವಾದಿರಾಜ, ಶ್ರೀಪಾದ, ವ್ಯಾಸತೀರ್ಥ, ಪುರಂದರದಾಸ ಮುಂತಾದವರು ಮಧ್ವರ ಧಾರ್ಮಿಕ ಪರಂಪರೆಯನ್ನು ಮುಂದುವರಿಸಿದರು. ಉಡುಪಿಯ ಅಷ್ಟಮಠಗಳು, ಸೊಸಲೆ ಮಠ ಮುಂತಾದವು ಮಧ್ವ ಸಂಪ್ರದಾಯದ ಕೇಂದ್ರಗಳಾಗಿ ಬೆಳೆದವು. ಈ ಕೇಂದ್ರಗಳು ಲೌಕಿಕ ಜಗತ್ತಿನ ದಾಸ್ಯ ಮನೋಧರ್ಮವನ್ನು ಅಲೌಕಿಕತೆಯ ಹೆಸರಿನಲ್ಲಿ ಮುಂದುವರೆಸಿಕೊಂಡು ಹೋದವು.

 

[1] ಹರಿದಾಸ ಭಟ್ಟಾಚಾರ್ಯ (ಸಂ.), ಯಾಗಯಾತ್ರೀ ಭಾರತೀಯ ಸಂಸ್ಕೃತಿ, ಸಂಪುಟ ೩, ಮೈಸೂರು, ೧೯೭೫, ಪು.೧೬೬-೧೬೭

[2] ಅದೇ, ಪು.೧೭೫

[3] ಎಸ್. ಸಿ. ನಂದೀಮಠ, ಕನ್ನಡ ನಾಡಿನ ಚರಿತ್ರೆ, ಭಾಗ ಎರಡು ಕರ್ನಾಟಕದ ಧರ್ಮಗಳು, ಬೆಂಗಳೂರು, ೧೯೪೪, ಪು.೨೮೦

[4] ಅದೇ, ಪು.೨೮೧; ಭೈರವ, ಮಲ್ಲಾರಿ, ಕಾಳಿ ಮೊದಲಾದ ದೇವತೆಗಳ ಹೆಸರಿನಿಂದ ನಡೆಯುತ್ತಿದ್ದ ಆಚರಣೆಗಳನ್ನು ಶಂಕರರು ಅಸಹ್ಯವಾದ ಕ್ರಿಯೆಗಳೆಂದು ಕರೆದರು. ಜನರಲ್ಲಿ ಶುದ್ಧ ಭಕ್ತಿ ಬೆಳೆಯಬೇಕಾದರೆ ಅವರು ಶಿಷ್ಯ, ವಿಷ್ಣು, ಶಕ್ತಿ, ಸೂರ್ಯ ಮೊದಲಾದ ದೇವತೆಗಳನ್ನು ಪೂಜಿಸಬೇಕೆಂದು ಸೂಚಿಸಿದರು. ಶಂಕರರ ಈ ಅಭಿಪ್ರಾಯಗಳು ಅವರು ಸಮಾಜದ ಕೆಳವರ್ಗದ ಜನರ ನಂಬಿಕೆ, ಆಚರಣೆಗಳನ್ನು ಗೌರವಿಸುತ್ತಿರಲಿಲ್ಲ ಎನ್ನುವುದನ್ನು ಸೂಚಿಸುತ್ತದೆ.

[5] ಭಗವಾನ್, ಶಂಕರಾಚಾರ್ಯ ಮತ್ತು ಪ್ರತಿಗಾಮಿತನ, ಮೈಸೂರು, ಎಂಟನೆಯ ಮುದ್ರಣ, ೧೯೯೪, ಪು. ೨೪

[6] ಬಿ.ಸುರೇಂದ್ರರಾವ್, ಸಾಮಾಜಿಕ ಪ್ರಕ್ರಿಯೆಗಳು ಮತ್ತು ಧಾರ್ಮಿಕ ಆಂದೋಲನಗಳು, ಕರ್ನಾಟಕ ಚರಿತ್ರೆ, (ಸಂ.), ಬಿ. ಸುರೇಂದ್ರರಾವ್, ಸಂಪುಟ ೨, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೭, ಪು. ೨೧೬

[7] ಹರಿದಾಸ ಭಟ್ಟಾಚಾರ್ಯ (ಸಂ.) , ಪೂರ್ವೋಕ್ತ, ಸಂಪುಟ ೪, ಪು. ೪೨

[8] ಅದೇ.

[9] ಕರ್ನಾಟಕ ಪರಂಪರೆ, ಸಂಪುಟ ೧, ಮೈಸೂರು ರಾಜ್ಯ ಸರಕಾರ, ಬೆಂಗಳೂರು, ೧೯೭೦, ಪು. ೫೦೪-೫೦೫

[10] ಅದೇ.

[11] ಎಂ.ವಿ. ಕೃಷ್ಣರಾವ್ ಮತ್ತು ಎಂ. ಕೇಶವಭಟ್ಟ, ಕರ್ನಾಟಕ ಇತಿಹಾಸ ದರ್ಶನ, ಬೆಂಗಳೂರು, ೧೯೭೦, ಪು.೨೪೩-೨೪೪

[12] ಅದೇ, ಪು.೭೪೪

[13] ಬಿ.ಸುರೇಂದ್ರರಾವ್, ಪುರ್ವೋಕ್ತ, ಪು.೨೨೭

[14] ಕರ್ನಾಟಕ ಪರಂಪರೆ, ಪೂರ್ವೋಕ್ತ, ಪು.೫೦೦

[15] ಅದೇ, ಪು.೪೯೭

[16] ಎಂ.ಚಿದಾನಂದಮೂರ್ತಿ, ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಮೈಸೂರು, ೧೯೭೯, ಪು.೨೫೮

[17] ಸೌ.ಇ.ಇ.೯-೧, ೧೬೪, ಕುಡುತಿನಿ, ಬಳ್ಳಾರಿ, ಕ್ರಿ.ಶ. ೧೦೯೮

[18] ಎಂ.ವಿ. ಕೃಷ್ಣರಾವ್, ಎ ಬ್ರೀಫ್ ಸರ್ವೆ ಆಫ್ ಮಿಸ್ಟಿಕ್ ಟ್ರಡಿಷನ್ ಇನ್ ರಿಲಿಜನ್ ಆಂಡ್ ಆರ್ಟ್ ಇನ್ ಕರ್ನಾಖತ, ಮದರಾಸು, ೧೯೫೯, ಪು.೧೭

[19] ಸೌ.ಇ.ಇ.೯-೧, ೯೮ ಸಿರಿವಾರ, ಬಳ್ಳಾರಿ, ಕ್ರಿ.ಶ. ೧೦೪೪; ಎ.ಇ.೨೧, ೪೦, ಕೊಳಗಲ್ಲು, ಕ್ರಿ.ಶ. ೯೬೭

[20] ಕೆ.ಎ. ನೀಲಕಂಠಶಾಸ್ತ್ರಿ, ದಿ ಚೋಳಾಸ್, ಮದರಾಸು, ೧೯೫೫, ಸಂಪುತ ೨, ಪು. ೪೭೪-೪೭೫

[21] ಕೆ.ಟಿ. ರಾಮಸ್ವಾಮಿ, ಶ್ರೀವೈಷ್ಣವಿಸಂ ಇನ್ ಹೊಯ್ಸಳ ಪಿರೆಡ್, ದಿ ಹೊಯ್ಸಳ ಡೈನಾಸ್ಟಿ, (ಸಂ.), ಬಿ.ಷೇಕ್ ಅಲಿ, ಮೈಸೂರು, ೧೯೭೨, ಪು. ೩೦೪-೩೨೫

[22] ಅದೇ; ಎಂ.ಚಿದಾನಂದಮೂರ್ತಿ, ಪೂರ್ವೋಕ್ತ, ಪು.೧೬೪

[23] ಜೆ.ಡಿ.ಎಂ.ಡೆರೆಟ್, ದಿ ಹೊಯ್ಸಳಾಸ್-ಎ ಮೆಡೀವಲ್ ಇಂಡಿಯನ್ ರಾಯಲ್ ಫ್ಯಾಮಿಲಿ, ಲಂಡನ್, ೧೯೫೬, ಪು.೨೨೨

[24] ಬಿ.ಸುರೇಂದ್ರರಾವ್, ಪೂರ್ವೋಕ್ತ, ಪು.೨೨೭

[25] ಎಂ.ವಿ. ಕೃಷ್ಣರಾವ್ ಮತ್ತು ಎಂ.ಕೇಶವಭಟ್ಟ, ಪೂರ್ವೋಕ್ತ, ಪು.೭೬೩

[26] ಅದೇ, ಪು.೭೬೫

[27] ಹರಿದಾಸ ಭಟ್ಟಾಚಾರ್ಯ (ಸಂ.), ಪೂರ್ವೋಕ್ತ, ಸಂಪುಟ ೩. ಪು.೨೨೧

[28] ಎಂ.ವಿ. ಕೃಷ್ಣರಾವ್ ಮತ್ತು ಕೇಶವಭಟ್ಟ, ಪೂರ್ವೋಕ್ತ, ಪು.೨೬೬

[29] ಬಿ.ಸುರೇಂದ್ರರಾವ್, ಪೂರ್ವೋಕ್ತ, ಪು.೨೨೮

[30] ಎಂ.ವಿ. ಕೃಷ್ಣರಾವ್ ಮತ್ತು ಎಂ. ಕೇಶವಭಟ್ಟ, ಪೂರ್ವೋಕ್ತ, ಪು ೭೬೫; ಬಿ. ಸುರೇಂದ್ರರಾವ್, ಪೂರ್ವೋಕ್ತ, ಪು.೨೨೮; ಕರ್ನಾಟಕ ಪರಂಪರೆ, ಪೂರ್ವೋಕ್ತ, ಪು.೫೨೧-೫೨೨

[31] ಹರಿದಾಸ ಭಟ್ಟಾಚಾರ್ಯ (ಸಂ.), ಪೂರ್ವೋಕ್ತ, ಪು.೨೨೦

[32] ಪಿ. ನಾಗರಾಜರಾವ್, ಇಂಟ್ರಡಕ್ಷನ್ ಟು ವೇದಾಂತ, ಮುಂಬಯಿ, ೧೯೬೬, ಪು. ೧೯೦

[33] ಬಾ.ರಾ. ಗೋಪಾಲ, ಕರ್ನಾಟಕ ಇತಿಹಾಸ, ಮೈಸೂರು, ೧೯೮೬, ಪು.೨೬೮

[34] ಅದೇ.

[35] ಪಿ.ವಿ.ಕಾಣೆ, ಹಿಸ್ಟರಿ ಆಫ್ ಧರ್ಮಶಾಸ್ತ್ರಾಸ್, ಸಂಪುಟ ೫, ಭಾಗ ೨, ೧೯೬೫, ಪು.೮೭೯

[36] ಜೆ.ಎನ್.ಬ್ಯಾನರ್ಜಿ, ಡೆವಲಪ್‍ಮೆಂಟ್ ಆಫ್ ಹಿಂದೂ ಐಕನೋಗ್ರಫಿ, ನವದೆಹಲಿ, ೧೯೭೪, ಪು.೩೮೯, ೩೯೧