.೬ ಬೌದ್ಧ ಸಿದ್ಧಾಂತ

ಕರ್ನಾಟಕದಲ್ಲಿ ಬೌದ್ಧಧರ್ಮದ ಕುರಿತು ಕ್ರಿ.ಪೂ. ಸುಮಾರು ೩೫೦ ರಿಂದ ಕ್ರಿ.ಶ. ೧೬ನೆಯ ಶತಮಾನದವರೆಗೆ ದಾಖಲೆಗಳು ಸಿಗುತ್ತವೆ. ಇವುಗಳಲ್ಲಿ ಶಾಸನಗಳು, ಪುರಾತತ್ವ ಶೋಧಗಳು, ಸ್ಥಳ ನಾಮಗಳು, ವಿದೇಶಿ ಪ್ರವಾಸಿಗರ ವರದಿಗಳು, ಸಾಹಿತ್ಮಿಕ ಆಧಾರಗಳು, ಸ್ಮಾರಕಗಳು ಹಾಗೂ ಮೌಖಿಕ ಆಕರಗಳು ಮುಖ್ಯವಾದವು. ಕ್ರಿ.ಶ. ೮ರಿಂದ ೧೪ನೆಯ ಶತಮಾನಗಳ ನಡುವಣ ಅವಧಿಯಲ್ಲಿ ಬೌದ್ಧ ಧರ್ಮವು ಕರ್ನಾಟಕದಲ್ಲಿ ಹೆಚ್ಚಿನ ಪ್ರೋತ್ಸಾಹ, ಪ್ರಚಾರವನ್ನು ಪಡೆದಿರಲಿಲ್ಲ. ರಾಷ್ಟ್ರಕೂಟರ ಅವಧಿಯಲ್ಲಿ ಸ್ವಲ್ಪಮಟ್ಟಿನ ಬೌದ್ಧಸಹಿಷ್ಣುತೆ ಹಾಗೂ ಪ್ರೋತ್ಸಾಹ ಇದ್ದಂತೆ ಕಂಡುಬರುತ್ತದೆ. ಕಲ್ಯಾಣಿ ಚಾಲುಕ್ಯರು ಹಾಗೂ ಹೊಯ್ಸಳರ ಆಳ್ವಿಕೆಯ ಸಂದರ್ಭದಲ್ಲಿ ತಾಂತ್ರಿಕ ಬೌದ್ಧಧರ್ಮವು ಹೆಚ್ಚಿನ ಪ್ರಚಾರವನ್ನು ಪಡೆದುಕೊಂಡಿತ್ತು ಎನ್ನುವುದು ಶಾಸನಗಳಿಂದ ತಿಳಿದುಬರುತ್ತದೆ.[1] ಆದರೆ ಕ್ರಿ.ಶ. ೧೧ರಿಂದ ೧೩ನೆಯ ಶತಮಾನಗಳ ಅವಧಿಯಲ್ಲಿ ಬೌದ್ಧ ಧರ್ಮವು ಅನೇಕ ರೀತಿಯ ವಿರೋಧಗಳನ್ನು ಎದುರಿಸಬೇಕಾಗಿ ಬಂತು. ಈ ವಿರೋಧಗಳೇ ಬೌದ್ಧಧರ್ಮದ ಅವನತಿಗೂ ಕಾರಣಗಳಾದವು.

ಬಾದಾಮಿ ಚಾಲುಕ್ಯರ ಅವಧಿಗೆ ಸೇರಿದ ಅನೇಕ ವಾಸ್ತುಗಳು ಮತ್ತು ಶಿಲ್ಪಗಳು ಅಂದಿನ ಸಂದರ್ಭದಲ್ಲಿ ಬೌದ್ಧಧರ್ಮವು ಪ್ರಚಾರದಲ್ಲಿ ಇದ್ದುದನ್ನು ತೋರಿಸುತ್ತವೆ. ಅದೇ ರೀತಿ ಚೀನ ಪ್ರವಾಸಿಗ ಹೂಯೆನ್‍ತ್ಸಾಂಗನ ವರದಿಗಳಲ್ಲಿ ಬಾದಾಮಿಯಲ್ಲಿ ಹೀನಯಾನರು ಮತ್ತು ಮಹಾಯಾನರು ಇದ್ದುದು ತಿಳಿದುಬರುತ್ತದೆ. ತಾಂತ್ರಿಕ ಬೌದ್ಧ, ಧರ್ಮವು ಕರ್ನಾಟಕದಲ್ಲಿ ದಾಖಲೆಗಳಾಗಿವೆ.[2] ಇವು ಕ್ರಿ.ಶ. ೧೦೬೪ ಮತ್ತು ೧೦೬೭ಕ್ಕೆ ಸೇರಿದ ಶಾಸನಗಳಾಗಿವೆ. ಇವೆರಡೂ ಕಲ್ಯಾಣಿ ಚಾಲುಕ್ಯರ ಅವಧಿಗೆ ಸೇರಿದ್ದು, ಭೂಮಿಯನ್ನು ದಾನ ನೀಡಿದ ವಿವರಗಳನ್ನು ನೀಡುತ್ತವೆ. ಈ ಶಾಸನಗಳಲ್ಲಿ ತಾರಾಭಗವತಿ, ಕೇಶವ, ಲೋಕೇಶ್ವರ ಹಾಗೂ ಬೌದ್ಧ ದೇವರ ಉಲ್ಲೇಖಗಳು ಕಂಡುಬರುತ್ತವೆ. ಕ್ರಿ.ಶ. ೧೦೯೫-೬ ಕ್ಕೆ ಸೇರಿದ ಡಂಬಳದ ಶಾಸನವು ಬೌದ್ಧ ವಿಹಾರಕ್ಕೆ ಹಾಗೂ ಅಲ್ಲಿನ ಪೂಜಾರಿಗಳಿಗೆ ನೀಡಿದ ದಾನದ ಕುರಿತು ಮಾಹಿತಿ ನೀಡುತ್ತದೆ. ಇದೇ ರೀತಿಯ ಮಾಹಿತಿಗಳನ್ನು ಕ್ರಿ.ಶ. ೧೦೯೮ ಮತ್ತು ೧೨೮೩ರ ಶಾಸನಗಳು ನೀಡುತ್ತವೆ.[3] ತಾಳ್ತಜೆ ವಸಂತಕುಮಾರ ಅವರು ತಮ್ಮ ಗ್ರಂಥದಲ್ಲಿ ತಾಂತ್ರಿಕ ಬೌದ್ಧಧರ್ಮದ ಉಲ್ಲೇಖಗಳಿರುವ ಕೆಲವು ಸಾಹಿತ್ಯಿಕ ಆಧಾರಗಳನ್ನು ನೀಡಿದ್ದಾರೆ.[4] ಅವುಗಳೆಂದರೆ ಸೋಮದೇವನ ಯಶಸ್ತಿಲಕ ಚಂಪು, ಶಾಂತಿನಾಥನ ಸುಕುಮಾರ ಚರಿತೆ, ಬ್ರಹ್ಮ ಶಿವನ ಸಮಯಪರೀಕ್ಷೆ, ನಯಸೇನನ ಧರ್ಮಾಮೃತ.

ಬೌದ್ಧಧರ್ಮವು ಕರ್ನಾಟಕದಲ್ಲಿ ವೈದಿಕ ಧರ್ಮ ಹಾಗೂ ಜೈನ ಧರ್ಮಗಳು ಪಡೆದು ಕೊಂಡಷ್ಟು ಪ್ರೋತ್ಸಾಹ ಮತ್ತು ಪ್ರಚಾರವನ್ನು ಪಡೆದುಕೊಳ್ಳುವಲ್ಲಿ ವಿಫಲವಾಯಿತು. ಬೌದ್ಧ ಧರ್ಮದ ಈ ವಿಫಲತೆಗೆ ಅನೇಕ ಕಾರಣಗಳಿವೆ. ತಾಳ್ತಜೆ ವಸಂತಕುಮಾರ ಅವರ ಪ್ರಕಾರ, ‘ಕನ್ನಡ ಶಾಸನಗಳಲ್ಲಿ, ಕಾವ್ಯಗಳಲ್ಲಿ ಬೌದ್ಧನಿಂದನೆ ಕಾಣಿಸಿಕೊಂಡಿದೆ. ಇವೆಲ್ಲ ಬೌದ್ಧ ಅವನತಿಯನ್ನು ಪರೋಕ್ಷವಾಗಿ ಸೂಚಿಸುತ್ತವೆ. ಈ ವಿಚಾರಕ್ಕೆ ಪ್ರತಿಭಟನೆಯೂ ಕಾಣಿಸದಿರುವುದು ಅದರ ದುರ್ಬಲತೆಗೆ ನಿದರ್ಶನವಾಗಿದೆ’.[5] ಯಾವುದೇ ಒಂದು ಧರ್ಮ ಪ್ರಚಾರವನ್ನು ಪಡೆದು ಕೊಳ್ಳಬೇಕಾದರೆ ಅದಕ್ಕೆ ರಾಜಾಶ್ರಯದ ಅನಿವಾರ್ಯತೆ ಇರುತ್ತದೆ. ಇತರ ಧರ್ಮಗಳಿಗೆ ಹೋಲಿಸಿದರೆ ಬೌದ್ಧಧರ್ಮವು ರಾಜಾಶ್ರಯವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲವೆಂದೇ ಹೇಳಬೇಕು. ಕಲ್ಯಾಣಿ ಚಾಲುಕ್ಯರ ಕಾಲಾವಧಿಯಲ್ಲಿ ಬೌದ್ಧಧರ್ಮವು ಸ್ವಲ್ಪಮಟ್ಟಿನ ಪ್ರೋತ್ಸಾಹವನ್ನು ಕಂಡಿತಾದರೂ ಚೋಳರ ಪ್ರಾಬಲ್ಯದಿಂದಾಗಿ ಅದು ಅಷ್ಟಕ್ಕೇ ಸೀಮಿತಗೊಳ್ಳಬೇಕಾಯಿತು. ಶೈವರಾಗಿದ್ದ ಚೋಳರು ಬೌದ್ಧ ಧರ್ಮದ ಪ್ರಚಾರವನ್ನು ಸಹಿಸುವವರಾಗಿರಲಿಲ್ಲ. ಅದೇ ರೀತಿ ಕಲ್ಯಾಣಿ ಚಾಲುಕ್ಯರ ನಂತರ ಬಂದ ಕಲಚೂರಿಗಳು ಬೌದ್ಧ ಧರ್ಮದ ಪ್ರೋತ್ಸಾಹಕರಾಗಿರಲಿಲ್ಲ. ಕಲಚೂರಿಗಳ ಆಳ್ವಿಕೆಯ ಅವಧಿಯಲ್ಲಿ ವೀರಶೈವ ಧರ್ಮವು ಉತ್ತುಂಗಕ್ಕೇರಿತ್ತು. ಇದಕ್ಕೆ ಬಸವೇಶ್ವರರ ಚಿಂತನೆಗಳು ಕಾರಣವಾದವು. ಶೈವ ಪ್ರಾಧಾನ್ಯದ ಅಂದಿನ ಸಮಾಜದಲ್ಲಿ ಬೌದ್ಧ ಸಿದ್ಧಾಂತ, ಚಿಂತನೆಗಳು ಅರಸರಿಂದ ಹಿಡಿದು ಪ್ರಜೆಗಳವರೆಗೂ ಆಕರ್ಷಕವಾಗದೇ ಹೋದವು. ಬದಲಾಗುತ್ತಿದ್ದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಗಳಿಗೆ ಹೊಂದಿಕೊಳ್ಳುವಲ್ಲಿಯೂ ಬೌದ್ಧ ಧರ್ಮವು ವಿಫಲವಾಯಿತು.

ಬೌದ್ಧ ಸಿದ್ಧಾಂತವು ಬ್ರಾಹ್ಮಣರಿಂದ ಹಾಗೂ ಜೈನರಿಂದ ತೀವ್ರ ವಿರೋಧವನ್ನು ಎದುರಿಸಿತು. ವೈದಿಕ ಧರ್ಮ ಹಾಗೂ ಜೈನ ಧರ್ಮಗಳು ರಾಜಾಶ್ರಯ-ಜನಾಶ್ರಯಗಳನ್ನು ಪಡೆದು ಕೊಂಡಿರುವುದು ಇದಕ್ಕೆ ಕಾರಣ. ಬೌದ್ಧ ದರ್ಮ ಮತ್ತು ಜೈನಧರ್ಮಗಳು ಬ್ರಾಹ್ಮಣ ಪ್ರಾಬಲ್ಯದ ವೈದಿಕ ಧರ್ಮದ ಯಜಮಾನಿಕೆಯನ್ನು ವಿರೋಧಿಸಿ ಹುಟ್ಟಿಕೊಂಡವಾದರೂ ತಮ್ಮಲ್ಲೆ ಅನೇಕ ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಂಡಿದ್ದವು. ರಾಷ್ಟ್ರಕೂಟರ ಅವಧಿಗೆ ಸೇರುವ ಅಕಲಂಕನೆಂಬ ಜೈನಾಚಾರ್ಯ ಬೌದ್ಧರ ವಿರುದ್ಧ ಸಮರವನ್ನೆ ಸಾರಿ ಸಿದ್ದಾಂತ ನಿಂದನೆ ಗೊಳಗಾಗುವಂತೆ ಮಾಡಿದ. ಅಕಲಂಕನ ಬಗೆಗೆ ಸಿಗುವ ಅಕಲಂಕಾಷ್ಟಕ ಕೃತಿಯಲ್ಲಿ ಆತ ಬೌದ್ಧರನ್ನು ಜಯಿಸಿದ ವಿಚಾರಗಳು ಸಿಗುತ್ತವೆ. ಜೈನಧರ್ಮವನ್ನು ಬೆಳೆಸುವುದರ ಜೊತೆಗೆ ಬೌದ್ಧಧರ್ಮವನ್ನು ಹತ್ತಿಕ್ಕಿದವರಲ್ಲಿ ಅಕಲಂಕ, ಪಂಪ, ಅತ್ತಿಮಬ್ಬೆ, ಸೋಮದೇವಸೂರಿ, ವಾದಿರಾಜ, ವಾದೀಭಸಿಂಹ, ಪರವಾದಿಮಲ್ಲ ಮುಂತಾದವರು ಪ್ರಮುಖರು.[6] ಜೈನಧರ್ಮದಂತೆಯೇ ಶೈವ ಹಾಗೂ ವೈಷ್ಣವ ಧರ್ಮಗಳೂ ಬೌದ್ಧ ಧರ್ಮಕ್ಕೆ ವಿರೋಧಿಗಳಾಗಿ ಬೆಳೆದವು. ಅವುಗಳಿಗೆ ಸಾಕಷ್ಟು ರಾಜಾಶ್ರಯವೂ ಲಭಿಸಿತು. ಶೈವ ಧರ್ಮದ ಪ್ರಮುಖ ಶಾಖೆಯಾದ ಕಾಳಾಮುಖ ಶೈವ ಅಥವಾ ಲಕುಲೀಶ ಪಂಥ ತುಂಬ ಜನಪ್ರಿಯವಾಗಿ ಬೆಳೆಯಿತು. ಹೊಯ್ಸಳರ ಅವಧಿಯಲ್ಲಿ ವೈಷ್ಣವಧರ್ಮ ಹೆಚ್ಚಿನ ಪೋಷಣೆಯನ್ನು ಕಂಡಿತು. ಕಲಚೂರಿಗಳ ಆಳ್ವಿಕೆಯಲ್ಲಿ ಕಾಣಿಸಿಕೊಂಡ ವೀರಶೈವ ಆಂದೋಲನ ಬೌದ್ಧಧರ್ಮದ ಪ್ರಚಾರಕ್ಕೆ ಸವಾಲಾಗಿ ಪರಿಣಮಿಸಿತು. ಈ ಆಂದೋಲನದ ಸಂದರ್ಭದಲ್ಲಿ ಬೌದ್ಧಧರ್ಮವು ನಾಮ ಮಾತ್ರಕ್ಕೆ ಉಳಿದುಕೊಂಡಿತ್ತು.

ಬೌದ್ಧಧರ್ಮವು ವೈದಿಕಧರ್ಮವನ್ನು ವಿರೋದಿಸಿ ಹುಟ್ಟಿಕೊಂಡಿತಾದರೂ, ವೈದಿಕ ಧರ್ಮದ ಹಿಡಿತದಿಂದ ಪಾರಾಗುವಲ್ಲಿ ಯಶಸ್ವಿಯಾಗಲಿಲ್ಲ. ಬುದ್ಧನನ್ನು ದೇವರಾಗಿ ಕಂಡು ಪೂಜಿಸುವ ಸಂಪ್ರದಾಯ ಬೆಳೆದು ಬಂತು. ವರ್ಣ. ಜಾತಿವ್ಯವಸ್ಥೆ ಯಥಾ ಪ್ರಕಾರ ಬೌದ್ಧ ಧರ್ಮದಲ್ಲೂ ಮುಂದುವರಿಯಿತು. ವೈಷ್ಣವ ಮತ್ತು ಶೈವರೊಡನೆ ಬೌದ್ಧಧರ್ಮವನ್ನು ಸಮೀಕರಿಸುವ ಪ್ರಯತ್ನಗಳೂ ನಡೆದವು. ವಿಷ್ಣುವಿನ ದಶಾವತಾರಗಳ ಮಾಲಿಕೆಯಲ್ಲಿ ಬುದ್ಧನನ್ನೂ ಸೇರಿಸಿರುವುದು ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಹೊಯ್ಸಳರ ಕಾಲದ ಅನೇಕ ದೇವಾಲಯಗಳಲ್ಲಿ ವಿಷ್ಣುವಿನ ದಶಾವತಾರದ ಕೆತ್ತನೆಗಳಿದ್ದು, ಅವುಗಾಲ್ಲಿ ಬುದ್ಧನ ಮೂರ್ತಿಯನ್ನು ಕೆತ್ತಲಾಗಿದೆ. ಇಲ್ಲಿ ಬುದ್ಧನನ್ನು ವಿಷ್ಣುವಿನ ಒಂದು ಅವತಾರ ಎಂಬುದಾಗಿಯೇ ಚಿತ್ರಿಸಲಾಗಿದೆ. ದಶಾವತಾರದ ವರ್ಣನೆಗಳಿರುವ ಸಾಹಿತ್ಯ ಕೃತಿಗಳಲ್ಲು ಬುದ್ಧಾವತಾರದ ಸೂಚನೆಗಳು ಸಿಗುತ್ತವೆ. ವೈಷ್ಣವ ಅಥವಾ ಭಾಗವತ ಸಂಪ್ರದಾಯದಲ್ಲಿ ಬುದ್ಧ ಸೇರ್ಪಡೆಗೊಂಡ ಮೇಲೆ ಬೌದ್ಧಧರ್ಮ ತನ್ನ ಸ್ವತಂತ್ರ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡ ಬೇಕಾಯಿತು. ವೈಷ್ಣವಧರ್ಮ ಮಾತ್ರವಲ್ಲದೆ ಶೈವಧರ್ಮದ ಪ್ರಭಾವಕ್ಕೂ ಬೌದ್ಧಧರ್ಮ ಒಳಗಾಗಬೇಕಾಯಿತು. ಶಿವ ಸಂಬಂಧವಾದ ಆರಾಧನಾಂಶಗಳು ಬೌದ್ಧಧರ್ಮದಲ್ಲಿ ಕಾಣಿಸಿಕೊಂಡವು. ಶಿವ-ಪಾರ್ವತಿಯರಿಗೆ ಸಂವಾದಿಯಾಗಿ ಬೌದ್ಧಧರ್ಮದಲ್ಲಿ ಅವಲೋಕಿತೇಶ್ವರ-ತಾರಾ ದೇವತೆಗಳು ಕಾಣಿಸಿಕೊಂಡವು.

ದಕ್ಷಿಣ ಕನ್ನಡ ಜಿಲ್ಲೆಯ ಕದ್ರಿ ಬೌದ್ಧ-ಶೈವ ಸಂಬಂಧಗಳಿಗೆ ಉತ್ತಮ ಉದಾಹರಣೆಯಾಗಿದೆ. ಕದ್ರಿ ಅಥವ ಕದರಿಯ ಮೊದಲ ಉಲ್ಲೇಖ ಸಿಗುವುದು ಕ್ರಿ.ಶ. ೧೨೭೭-೧೨೯೨ರ ಶಾಸನದಲ್ಲಿ. ಈ ಶಾಸನದಲ್ಲಿ ‘ಮಂಜುನಾಥ’ ಎಂಬ ಉಲ್ಲೇಖ ಸಿಗುತ್ತದೆ.[7] ಕದ್ರಿ ಮಂಜುನಾಥ ದೇವಾಲಯದ ಗರ್ಭಗುಡಿಯಿಂದ ಹೊರಗಣ ಅಂತಃಪ್ರಾಕಾರದಲ್ಲಿ ಬಲಗಡೆಗೆ ಲೋಕೇಶ್ವರನ ಕಂಚಿನ ವಿಗ್ರಹವಿದೆ. ಈ ವಿಗ್ರಹವು ಬೌದ್ಧ ವಿಗ್ರಹವಾಗಿದ್ದು ಕದ್ರಿಯು ಮೂಲತಃ ಒಂದು ಬೌದ್ಧ ಕೇಂದ್ರ ಎನ್ನುವ ಅಭಿಪ್ರಾಯ ಅನೇಕ ವಿದ್ವಾಂಸರು.[8] ಕದ್ರಿಯ ಕುರಿತಾದ ಗೋವಿಂದ ಪೈ ಅವರ ಅಭಿಪ್ರಾಯ ಈ ರೀತಿ ಇದೆ, ‘ಕದರಿಯ ಬೌದ್ಧ ವಿಹಾರವು ನಾಥಪಂಥೀಯರ ಪ್ರಭಾವಕ್ಕೊಳಗಾಗಿ ನಾಥಪಂಥದ ಮತವಾಗಿ ಪರಿವರ್ತಿತವಾಯಿತು ಅಂತೆಯೇ ಮಂಜುಶ್ರೀ ಬೋಧಿಸತ್ವನ ಹೆಸರು ಪರಿವರ್ತಿತವಾಗಿ ಮಂಜುನಾಥ ಆಯಿತು’.[9] ತಾಳ್ತಜೆ ವಸಂತಕುಮಾರ ಅವರ ಪ್ರಕಾರ, ‘ಕದರಿಯು ಬೋಧಿಸತ್ವ ಮಂಜುಶ್ರೀಯ ಬೌದ್ಧಧರ್ಮ ಇಲ್ಲಿ ಪ್ರಚಾರದಲ್ಲಿ ಇದ್ದಿರಬೇಕು’.[10] ತಾಳ್ತಜೆ ಅವರು, ಕೆದರಿಯಲ್ಲಿ ದೊರೆತ ಮಂಜು ಘೋಷನ ವಿಗ್ರಹ ಹಾಗೂ ಮೂಡಬಿದಿರೆಯಲ್ಲಿ ದೊರೆತ ಅಕ್ಷೋಭ್ಯ ಬೋಧಿಸತ್ವ ವಿಗ್ರಹಗಳನ್ನು ಆಧಾರವನ್ನಾಗಿಟ್ಟುಕೊಂಡು ಮೇಲಿನ ಅಭಿಪ್ರಾಯವನ್ನು ನೀಡಿದರು.

ಕದ್ರಿಯು ಸುಮಾರು ಕ್ರಿ.ಶ. ೧೦ನೆಯ ಶತಮಾನದವರೆಗೂ ಬೌದ್ಧಾಲಯವಾಗಿಯೇ ಇದ್ದು, ಆ ಬಳಿಕ ಅಂದರೆ ಕ್ರಿ.ಶ. ೧೨-೧೩ನೆಯ ಶತಮಾನಗಳಲ್ಲಿ ಶಿವಾಲಯವಾಗಿ ಪರಿವರ್ತನೆಗೊಂಡಿರಬೇಕು ಎಂಬುದಾಗಿ ಊಹಿಸಲಾಗಿದೆ. ಬೌದ್ಧಧರ್ಮದ ಅವಲೋಕಿತೇಶ್ವರ ಮತ್ತು ಮಂಜುಶ್ರೀ ದೇವತೆಗಳು ಶೈವಧರ್ಮದಲ್ಲಿ ತ್ರಿಲೋಕೇಶ್ವರ ಹಾಗೂ ಮಂಜುನಾಥ ಎಂಬ ಹೆಸರನ್ನು ಪಡೆದುಕೊಂಡವು. ಇದು ಬೌದ್ಧ ಮತ್ತು ಶೈವ ಧರ್ಮಗಳು ಪರಸ್ಪರ ಪ್ರಭಾವಕ್ಕೆ ಒಳಗಾಗಿರುವುದನ್ನು ಸೂಚಿಸುತ್ತದೆ. ಶೈವಧರ್ಮದಂತೆಯೇ ನಾಥಪಂಥದಲ್ಲೂ ಹಲವಾರು ಬೌದ್ಧ ವಿಚಾರಗಳು ಕಂಡುಬರುತ್ತವೆ. ನಾಥಪಂಥವು ಬೌದ್ಧ ಸಿದ್ಧ ಪರಂಪರೆಯ ಅಥವಾ ವಜ್ರಯಾನ ಶಾಖೆಯ ಶೈವ ರೂಪಾಂತರ ಎನ್ನುವುದು ಮ.ಸ.ಕೃಷ್ಣಮೂರ್ತಿ ಅವರ ಅಭಿಪ್ರಾಯ.[11] ಇದೇ ಅಭಿಪ್ರಾಯವನ್ನು ಗೋವಿಂದ ಪೈ ಅವರು ವ್ಯಕ್ತಪಡಿಸಿದ್ದಾರೆ.[12] ನಾಥಪಂಥವು ತಾಂತ್ರಿಕ ಶೈವಮಾರ್ಗವಾಗಿ ಪರಿಣಮಿಸುವ ಮುಂಚೆ ಬೌದ್ಧ ಮಾರ್ಗದ ಪ್ರಕಾರವಾಗಿದ್ದ ಕಾರಣ, ಅದಕ್ಕೆ ಬೌದ್ಧ ಮತ್ತು ಬ್ರಾಹ್ಮಣ ಈ ಎರಡೂ ಧರ್ಮಗಳ ತಂತ್ರಗಳು ಹೊಂದಿಕೆಯಾದವು. ನಾಥ ಪಂಥದ ಮತ್ಸ್ಯೇಂದ್ರನಾಥ ಮತ್ತು ಗೋರಕ್ಷ ಇವರು ವಜ್ರಮಾನ ಬೌದ್ಧರಲ್ಲೂ ಕಂಡುಬರುತ್ತಾರೆ. ಮತ್ಸ್ಯೇಂದ್ರನಾಥ ಮತ್ತು ಗೋರಕ್ಷ ಅಥವಾ ಗೋರಖನಾಥರ ಕಾಲ ಸುಮಾರು ಕ್ರಿ.ಶ. ೧೦-೧೨ನೇ ಶತಮಾನವಾಗಿರಬೇಕೆಂದು ತಾಳ್ತಜೆ ವಸಂತಕುಮಾರ ಅವರು ಅಭಿಪ್ರಾಯಪಡುತ್ತಾರೆ.[13] ಈ ರೀತಿಯಾಗಿ ಬೌದ್ಧಧರ್ಮವು ವಿವಿಧ ರೀತಿಯ ಬದಲಾವಣೆಗಳಿಗೆ ಒಳಗಾಗುವ ಒತ್ತಾಯಕ್ಕೆ ಸಿಲುಕಿದ್ದು ಸ್ಪಷ್ಟವಾಗಿ ತಿಳಿದುಬರುತ್ತದೆ.

ಪುರೋಹಿತಶಾಹಿ ಆಚರಣೆಗಳನ್ನು ಬಲವಾಗಿ ಖಂಡಿಸಿ ಸ್ವತಂತ್ರವಾಗಿ ಒಡಮೂಡಿದ ವಿಚಾರಧಾರೆಯೇ ಬೌದ್ಧ ಸಿದ್ಧಾಂತ. ಆದರೆ ಈ ಸಿದ್ಧಾಂತ ಬುದ್ಧನ ಕಾಲಕೃಷ್ಟೇ ಸೀಮಿತಗೊಂಡಿರುವುದು ಬೌದ್ಧಧರ್ಮದ ದೌರ್ಬಲ್ಯವನ್ನು ಸೂಚಿಸುತ್ತದೆ. ಈ ಮಾತನ್ನು ಕರ್ನಾಟಕಕ್ಕೆ ಸಂಬಂಧಿಸಿದಂತೆ ಇಲ್ಲಿ ಹೇಳಲಾಗಿದೆ. ಬುದ್ಧನ ಕಾಲಾನಂತರ ಬೌದ್ಧಧರ್ಮವು ಶಾಖೆ-ಉಪಶಾಖೆಗಳಾಗಿ, ಪುರೋಹಿತಶಾಹಿ ಲಕ್ಷಣಗಳನ್ನು ಒಳಗೊಂಡು ಬೆಳೆಯತೊಡಗಿತು. ಆದರೂ ಕರ್ನಾಟಕ ಸಂಸ್ಕೃತಿ ಚರ್ಚೆಯ ಸಂದರ್ಭದಲ್ಲಿ ಬೌದ್ಧ ಸಿದ್ಧಾಂತವನ್ನು ನಿರ್ಲಕ್ಷಿಸಲು ಸಾಧ್ಯವಾಗುವುದಿಲ್ಲ. ಮಧ್ಯಕಾಲೀನ ಕರ್ನಾಟಕದಲ್ಲಿ ತಾಂತ್ರಿಕ ಬೌದ್ಧಧರ್ಮವು ವಿಶಿಷ್ಟವಾದ ಪಾತ್ರವನ್ನು ವಹಿಸಿತ್ತು ಎನ್ನುವುದಂತೂ ನಿಜ. ಪ್ರತಿಯೊಂದು ಧರ್ಮವೂ ತಾಂತ್ರಿಕ, ಯಂತ್ರ ವಿಧಾನ, ತಾಂತ್ರಿಕ ಮಂತ್ರ ಸಾಧನೆ, ತಾಂತ್ರಿಕ ಆಚಾರ ವಿಧಾನ ಮೊದಲಾದವುಗಳಿಗೆ ಆಶ್ರಯ ನೀಡಿದ್ದರಿಂದಲೇ ಕ್ರಿ.ಶ. ೬೦೦ರಿಂದ ೧೨೦೦ರವರೆಗಿನ ಕಾಲಘಟ್ಟವನ್ನು ತಾಂತ್ರಿಕಕಾಲ ಎಂದು ಕರೆಯಲಾಯಿತು.[14] ತಾಂತ್ರಿಕ ಬೌದ್ಧಧರ್ಮ ಈ ಅವಧಿಯಲ್ಲಿ ಹೆಚ್ಚು ಪ್ರಚಾರವನ್ನು ಪಡೆದುಕೊಂಡಿತು. ಬೌದ್ಧಧರ್ಮವು ಸ್ವತಂತ್ರವಾಗಿ ಪ್ರಭಾವವನ್ನು ಬೀರುವ ಸಾಮರ್ಥ್ಯವನ್ನು ಕಳೆದು ಕೊಂಡಿದ್ದರೂ ಇತರ ಧರ್ಮಗಳಲ್ಲಿ ಬೌದ್ಧಧರ್ಮದ ಲಕ್ಷಣಗಳು ಹೇರಳವಾಗಿ ಕಂಡು ಬರುತ್ತಿದ್ದವು. ಹಲವಾರು ಧರ್ಮಗಳು ಏಕಕಾಲಕ್ಕೆ ಅಸ್ತಿತ್ವದಲ್ಲಿರುವ ಸಂದರ್ಭದಲ್ಲಿ ಒಂದು ಇನ್ನೊಂದರಿಂದ ಪ್ರಭಾವಿತಗೊಂಡರೆ ಇಲ್ಲವೇ ತನ್ನದಲ್ಲದ ಲಕ್ಷಣಗಳನ್ನು ಮೈಗೂಡಿಸಿಕೊಂಡರೆ ಅದೊಂದು ಸಹಜ ಬೆಳವಣಿಗೆಯೇ ಆಗಿರುತ್ತದೆ. ಆದರೆ ಈ ಬೆಳವಣಿಗೆಯಲ್ಲಿ ರಾಜಾಶ್ರಯವನ್ನು ಮತ್ತು ಜನರ ಬೆಂಬಲವನ್ನು ಪಡೆದ ಧರ್ಮವಷ್ಟೇ ಶಾಸ್ವತವಾಗಿ ಉಳಿಯಲು ಸಾಧ್ಯ. ಇಲ್ಲಿ ಜನರ ಬೆಂಬಲವನ್ನು ಪಡೆದ ಧರ್ಮ ಎನ್ನುವುದಕ್ಕಿಂತಲೂ ಧರ್ಮದ ಹೆಸರಿನಲ್ಲಿ ಜನರನ್ನು ನಿಯಂತ್ರಿಸಲು ಸಾಧ್ಯವಾಗುವ ಧರ್ಮ ಎಂದು ಹೇಳಬೇಕಾಗುತ್ತದೆ.

ಕ್ರಿ.ಶ. ೮ ರಿಂದ ೧೪ನೆಯ ಶತಮಾನಗಳ ನಡುವಣ ಅವಧಿಯಲ್ಲಿ ಹೆಚ್ಚು ಕಡಿಮೆ ತಾಂತ್ರಿಕ ಬೌದ್ಧಧರ್ಮವೇ ಹೆಚ್ಚು ಪ್ರಚಾರದಲ್ಲಿ ಇದ್ದುದರಿಂದ, ತಾಂತ್ರಿಕ ಬೌದ್ಧ ಸಿದ್ಧಾಂತದ ಕುರಿತು ಚರ್ಚಿಸುವುದು ಇಲ್ಲಿ ಪ್ರಸ್ತುತವೆನಿಸುತ್ತದೆ. ತಾಂತ್ರಿಕ ಬೌದ್ಧಧರ್ಮ ಕಾಣಿಸಿಕೊಂಡಿರುವುದು ಬುದ್ಧನ ಕಾಲಾನಂತರ.[15] ಬೌದ್ಧ ಧರ್ಮ ತನ್ನ ಮೂಲ ಸಿದ್ಧಾಂತವನ್ನು ಬದಿಗೊತ್ತಿ ತಂತ್ರ, ಮಂತ್ರ, ಮೊದಲಾದ ಸಾಧನೆಗಳಲ್ಲಿ ತೊಡಗಿ ತಾಂತ್ರಿಕ ಬೌದ್ಧ ಸಿದ್ಧಾಂತವನ್ನು ಹುಟ್ಟುಹಾಕಿತು. ಬೌದ್ಧಧರ್ಮವು ತನ್ನ ಪ್ರಭಾವ ಇಳಿಮುಖವಾಗುತ್ತಿರುವುದನ್ನು ಮನಗಂಡು ಜನರನ್ನು ತನ್ನತ್ತ ಆಕರ್ಷಿಸಲು ತಂತ್ರ, ಮಂತ್ರಗಳ ಮೊರೆಹೋಯಿತು. ಅದೇ ರೀತಿ ತಾನು ವಿರೋಧಿಸುತ್ತಿದ್ದ ವೈದಿಕ ಧರ್ಮದೊಡನೆಯೇ ಹೊಂದಾಣಿಕೆ ಮಾಡಿಕೊಂಡಿತು. ಎಲ್ಲ ಧರ್ಮಗಳೂ ಜನರನ್ನು ಆಕರ್ಷಿಸುವುದರಲ್ಲಿ ಪೈಪೋಟಿ ನಡೆಸುತ್ತಿದ್ದುದರಿಂದಾಗಿ ತಂತ್ರ, ಚಮತ್ಕಾರ, ಪವಾಡಗಳು ಹೆಚ್ಚೆಚ್ಚು ಪ್ರಚಾರಗೊಳ್ಳಲಾರಂಭಿಸಿದವು. ಕ್ರಿ.ಶ. ೮ನೆಯ ಶತಮಾನದ ಸುಮಾರಿಗೆ ಈ ನೂತನ ಸಿದ್ಧಾಂತ ವಜ್ರಯಾನ ಎಂಬ ಹೆಸರನ್ನು ಪಡೆದುಕೊಂಡಿತು. ಈ ಸಿದ್ಧಾಂತದಲ್ಲಿ ಐವರು ಧ್ಯಾನೀಬುದ್ಧರು ಮತ್ತು ಅವರ ಶಕ್ತಿಗಳ ಜೊತೆಗೆ ಅನೇಕ ಬೋಧಿಸತ್ವರ ಕಲ್ಪನೆ ಕೂಡ ಹುಟ್ಟಿಕೊಂಡಿತು. ವಜ್ರಯಾನ ಬೌದ್ಧಧರ್ಮಕ್ಕೆ ಯಕ್ಷ ಪರಂಪರೆಯ ಹಿನ್ನೆಲೆಯನ್ನೂ ನೀಡಲಾಗಿದೆ. ಅದರ ಪ್ರಕಾರ, ಯಕ್ಷದೇವತೆಯ ಹೆಸರು ವಜ್ರಪಾಣಿ. ವಜ್ರಯಾನ ಎಂಬ ಹೆಸರು ಯಕ್ಷದೇವತೆ ವಜ್ರಪಾಣಿಯಿಂದ ಬಂದಿರಬೇಕು ಎನ್ನುವ ನಂಬಿಕೆಯೂ ಇದೆ.

ವಜ್ರಯಾನಿಗಳು ಪ್ರಾಚೀನತ್ರಿಕಾಯ ಸಿದ್ಧಾಂತವನ್ನು ಬೆಳೆಸಿದರು. ಅವರ ಪ್ರಕಾರ ವಜ್ರ ಸತ್ವದ ವಾಸ್ತವಿಕ ಕಾಯ, ಆನಂದಕಾಯ, ಸುಖಕಾಯ ಅಥವಾ ಮಹಾಸುಖ ಕಾಯ. ಇವುಗಳ ಜೊತೆಗೆ ಅವರು ನಾಲ್ಕನೆಯ ಕಾಯವೊಂದನ್ನು ಕಲ್ಪಿಸಿದರು. ಅದೇ ವಜ್ರಕಾಯ. ವಜ್ರಯಾನಿಗಳ ಪ್ರಕಾರ ಪವಿತ್ರ ವ್ಯಕ್ತಿಗೆ ಎಲ್ಲವೂ ಪವಿತ್ರ. ಆದ್ದರಿಂದ ಜನರ ಆಚರಣೆಯಲ್ಲಿ ಭಕ್ಷ್ಯಾಭಕ್ಷ್ಯ, ಶುಚಿ-ಅಶುಚಿ, ಮಡಿ-ಮೈಲಿಗೆ ಯಾವ ನಿಷೇಧವೂ ಇಲ್ಲ. ಆದ್ದರಿಂದಜಗತ್ತಿನ ಪದಾರ್ಥಗಳನ್ನು ಭೋಗಿಸುವುದರಲ್ಲಿ ಯಾವ ಅಡ್ಡಿಯೂ ಇಲ್ಲ. ಆದ್ದರಿಂದ ಜಗತ್ತಿನ ದೃಢತೆ ಹಾಗೂ ಅಮರತ್ವದ ಸಾಧನೆ. ಅದರ ಪ್ರಕಾರ, ಮನುಷ್ಯನ ಸಾಂಸಾರಿಕ ಜೀವನದಲ್ಲಿ ಅವನ ಏಳುಬೀಳುಗಳ ಮೂರು ಬಿಂದುಗಳು ಅವನ ಶರೀರದಲ್ಲೇ ಇವೆ. ಉಪಾಸನಾ ಕ್ಷೇತ್ರದಲ್ಲಿ ಇವುಗಳನ್ನು ಮನ, ವಚನ ಹಾಗೂ ಕರ್ಮವೆನ್ನಲಾಗಿದೆ. ಬೌದ್ಧ ಸಾಧನೆಯಲ್ಲಿ ಇವುಗಳನ್ನು ಕಾಯ, ವಾಕ್ಕೂ ಮತ್ತು ಚಿತ್ತ ಎಂದು ಕರೆಯಲಾಗಿದೆ. ಈ ಮೂರೂ ವಜ್ರ ಸ್ವಭಾವವನ್ನು ಹೊಂದುವುದೇ ವಜ್ರಯಾನದ ಸಾಧನೆ. ವಜ್ರಯಾನಿಗಳು ಚಿತ್ತಕ್ಕೆ ಶುದ್ಧ ತಾಂತ್ರಿಕ ಹಾಗೂ ಸಾಧನಾತ್ಮಕ ರೂಪವನ್ನು ನೀಡಿದರು.

ತಾಂತ್ರಿಕ ಬೌದ್ಧಧರ್ಮದಲ್ಲಿ ನಿರ್ವಾಣವನ್ನು ಮಹಾಸುಖ ಎಂಬ ಅರ್ಥದಲ್ಲಿಯೇ ಗ್ರಹಿಸಲಾಗಿದೆ. ತಂತ್ರಗ್ರಂಥಗಳಲ್ಲಿ ನಿರ್ವಾಣವನ್ನು ಸತತ ಸುಖಮಯ ಎಂದು ಹೇಳಲಾಗಿದೆ. ಈ ಮಹಾಸುಖವನ್ನು ಚೆನ್ನಾಗಿ ಅರಿಯದೆ ಸಾಧನೆ ಸಾಗದು ಎನ್ನುವುದು ತಾಂತ್ರಿಕರ ಅಭಿಪ್ರಾಯ. ಬೌದ್ಧಧರ್ಮವು ತಾಂತ್ರಿಕ ಪ್ರಭಾವಕ್ಕೆ ಸಿಕ್ಕಿದ ಮೇಲೆ ಅದರಲ್ಲಿ ವ್ಯಾವಹಾರಿಕತೆ ಹಾಗೂ ಕ್ರಿಯೆಗೆ ಮಹತ್ವ ದೊರೆಯಿತು. ತಾಂತ್ರಿಕ ಬೌದ್ಧಧರ್ಮವು ಕ್ರಿಯಾ ಪ್ರಧಾನವಾದದ್ದು. ಕ್ರಿಯಾ ಸಂಪಾದನೆಗೆ ಯೋಗ್ಯ ಗುರುವಿನ ಅಗತ್ಯವಿದೆ ಎನ್ನುವ ಸತ್ಯವನ್ನು ತಾಂತ್ರಿಕರು ಪ್ರತಿಪಾದಿಸಿದರು. ತಾಂತ್ರಿಕರು ಮಾನವ ಶರೀರ ಎಲ್ಲ ಸತ್ಯಗಳಿಗೂ ಆಶ್ರಯ ಎಂದು ನಂಬಿದರು. ಅವರ ಪ್ರಕಾರ, ಇಡೀ ವಿಶ್ವದ ಸತ್ಯ ಮಾನವ ಶರೀರದಲ್ಲಿ ನೆಲೆಸಿರುತ್ತದೆ. ನದಿ, ಪರ್ವತ, ಸಮುದ್ರ ಮೊದಲಾದವು ಶರೀರದ ವಿವಿಧ ಭಾಗಗಳು. ಇದರಿಂದಾಗಿ ಶರೀರ ಒಂದು ಮಹತ್ವಪೂರ್ಣ ಯಂತ್ರ. ಈ ನಂಬಿಕೆಯಂತೆ ತಾಂತ್ರಿಕ ಬೌದ್ಧರು ಕಮಲಗಳು, ಚಕ್ರಗಳು ಹಾಗೂ ನಾಡಿಗಳನ್ನು ಕಲ್ಪಿಸಿದರು. ಈ ವಿಚಾರಗಳು ವೈದಿಕ ಧರ್ಮದಲ್ಲಿಯೂ ಕಂಡುಬರುತ್ತವೆ. ಈ ಕಾರಣದಿಂದಾಗಿಯೇ ತಾಂತ್ರಿಕ ಬೌದ್ಧಧರ್ಮವನ್ನು ಬೌದ್ಧ ವೇಷದ ವೈದಿಕ ಧರ್ಮ ಅಥವಾ ಶೈವ ಧರ್ಮ ಎಂದೂ ಕರೆಯಲಾಗಿದೆ.

ತಂತ್ರಯುಗವನ್ನು ವೈವಿಧ್ಯಮಯ ಸಂಪ್ರದಾಯಗಳ ಗೊಂಡಾರಣ್ಯವೆಂದು ಕರೆಯಲಾಗಿದೆ. ವೈವಿಧ್ಯಗಳ ನಡುವೆಯೂ ಇದ್ದ ಏಕಸೂತ್ರತೆಯೆಂದರೆ ಅವುಗಳಲ್ಲಿ ತತ್ವ ಚಿಂತನಕ್ಕಿಂತ ಸಾಧನಾ ಪದ್ಧತಿ ಪ್ರಧಾನವಾಗಿದ್ದುದು. ಈ ಸಾಧನಾ ಪದ್ಧತಿಯಲ್ಲಿ ಅನೇಕ ವಿಚಾರಗಳು ಸೇರಿಕೊಂಡಿದ್ದವು. ಅವುಗಳೆಂದರೆ, ಯಾವುದೋ ದೇವತೆ ಇಲ್ಲವೆ ಶಕ್ತಿ ಸೃಷ್ಟಿಯ ಮೂಲ ತತ್ವವೆಂದು ತಿಳಿದು ಅದರ ಉಪಾಸನೆ ಮಾಡುವುದು, ಅದರ ವಿಸ್ತೃತ ವ್ಯಾಖ್ಯಾನ, ಮಂತ್ರಗಳ ಮಹತ್ವ, ದೇವತೆಗಳ ಪ್ರತೀಕಗಳಾದ ಬೀಜಾಕ್ಷರಗಳು, ವರ್ಣಗಳ ವಿಧಾನ, ಭೂತಸಿದ್ಧಿ, ರಹಸ್ಯ ಸಾಧನೆಗಳು, ಗುಹ್ಯ ವಾಮಾಚಾರ, ದೀಕ್ಷೆ, ಗುರುಮಹತ್ವ ಮುಂತಾದವು. ತಾಂತ್ರಿಕರು ಲೋಕ ಜೀವನದಲ್ಲಿ ಪ್ರಚಲಿತವಾಗಿದ್ದ ಸಾಧನೆಗಳನ್ನು ಸ್ವೀಕರಿಸಿ ಅವುಗಳಿಗೆ ಬೌದ್ಧ ಶಬ್ದಾವಳಿಯನ್ನು ನೀಡಿದರು. ಆ ಸಾಧನೆಗಳನ್ನು ಜೀರ್ಣಿಸಿಕೊಳ್ಳಲು, ಅವುಗಳ ಔಚಿತ್ಯವನ್ನು ಸಿದ್ಧಪಡಿಸಲು ತಾಂತ್ರಿಕರು ತ್ರಿಕಾಯ, ಬೋಧಿಚಿತ್ತ, ಕರುಣೆ, ಶೂನ್ಯ ಮೊದಲಾದ ಶಬ್ದಗಳಿಗೆ ತಾಂತ್ರಿಕ ಅರ್ಥ ನೀಡಿದರು. ಧರ್ಮ ಸಾಧನೆಯಲ್ಲಿ ಹೊಸದಾಗಿ ಹುಟ್ಟಿಕೊಂಡ ಪೂಜೆಗಳು, ಮಂತ್ರ ಪದ್ಧತಿಗಳು, ದೇವತೆಗಳು, ಅನುಷ್ಠಾನಗಳು, ಯಂತ್ರಗಳು ಮತ್ತು ಯೋಗಸಾಧನೆಗಳು ಇವುಗಳನ್ನು ಒಂದು ಚಿಂತನಪದ್ಧತಿಯೊಳಗೆ ಸೇರಿಸಿ ನಿಯಮವೊಂದನ್ನು ರೂಪಿಸಲಾಯಿತು.

ತಾಂತ್ರಿಕ ಯುಗದಲ್ಲಿ ವೈದಿಕೇತರ ಚಿಂತನೆಗಳು, ಸಂಪ್ರದಾಯಗಳು ಹೆಚ್ಚಿನ ಮಾನ್ಯತೆಯನ್ನು ಪಡೆದುಕೊಂಡವು. ಜನಪದರ ಕುಲದೇವತೆಗಳು, ಮನೆದೇವರುಗಳು ಹಾಗೂ ಗ್ರಾಮದೇವತೆಗಳ ಪೂಜೆ, ಆಚರಣೆಗೂ ತಾಂತ್ರಿಕ ಪರಂಪರೆಗೂ ನಿಕಟವಾದ ಸಂಬಂಧವಿದೆ. ಜನಪದರು ತಮ್ಮ ದೇವತೆಗಳನ್ನು ಸಂತುಷ್ಟಿಗೊಳಿಸಲು ಮಾಟ, ಮಂತ್ರ, ಮದ್ದು, ಬಲಿ ಮುಂತಾದವುಗಳನ್ನು ಬಳಸುತ್ತಿದ್ದರು. ಇವುಗಳ ಪರಿಣತ ರೂಪವೇ ತಂತ್ರವಾಗಿದೆ. ತಾಂತ್ರಿಕ ಯುಗದಲ್ಲಿ ಈ ಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಳ್ಳಲಾರಂಭಿಸಿದವು. ಇವುಗಳಲ್ಲಿ ಸಾಧನೆ ಪ್ರಧಾನವಾಗಿತ್ತು. ಆ ಸಾಧನೆಗೆ ಅನುರೂಪವಾಗಿ ಅವರು ತಮ್ಮ ದೇವತೆಗಳ ಸ್ವರೂಪ, ಪಾರಸ್ಪರಿಕ ಸಂಬಂಧ ಮೊದಲಾದವುಗಳನ್ನು ಕಲ್ಪಿಸಿಕೊಂಡರು. ವೇದಪಾರಮ್ಯದ ಚಿಂತನೆಗಳು ಇವುಗಳಿಂದಾಗಿ ಹಿನ್ನಡೆಯನ್ನು ಕಾಣಬೇಕಾಯಿತು. ಆದರೂ ವಿವಿಧ ಧರ್ಮಗಳು ತಮ್ಮ ಸಂಪ್ರದಾಯದೊಳಗೆ ತಾಂತ್ರಿಕ ಲಕ್ಷಣಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿದವು. ಈ ಪ್ರಯತ್ನಗಳ ಫಲಿತಾಂಶವೇ ತಾಂತ್ರಿಕ ಲಕ್ಷಣಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿದವು. ಈ ಪ್ರಯತ್ನಗಳ ಫಲಿತಾಂಶವೇ ತಾಂತ್ರಿಕ ಯುಗದ ಹುಟ್ಟು. ವೈಷ್ಣವ, ಶೈವ, ಜೈನ ಮತ್ತು ಬೌದ್ಧಧರ್ಮಗಳು ತಾಂತ್ರಿಕ ಆಚಾರ ವಿಚಾರಗಳಿಗೆ ಆಶ್ರಯ ನೀಡಲಾರಂಭಿಸಿದವು. ತಾಂತ್ರಿಕ ಸಂಪ್ರದಾಯಗಳು ಸಮಾಜದ ಕೆಳವರ್ಗದ ಜನರ ಬದುಕನ್ನು ಪ್ರತಿನಿಧಿಸುವತ್ತ ಹೊರಟವು. ಶುದ್ಧ ವೈದಿಕ ದೃಷ್ಟಿಯಿಂದ ಹೊರಗಿನ ವಿಚಾರಗಳು ತಾಂತ್ರಿಕ ಸಂಪ್ರದಾಯಗಳಲ್ಲಿ ಸೇರಿಕೊಂಡವು. ತಾಂತ್ರಿಕ ಆಚಾರ್ಯರು ಬ್ರಾಹ್ಮಣ ಪಾರಮ್ಯದ ವೇದ ಪುರಾಣಗಳನ್ನೆಲ್ಲ ಹೀಗಳೆದರು. ಜಾನಪದ ದೇವತೆಗಳು ವೈದಿಕ ದೇವತೆಗಳಿಗಿಂತ ಹಿರಿಯರು ಎನ್ನುವುದನ್ನು ಸಾಬೀತುಪಡಿಸಲು ತಾಂತ್ರಿಕ ಸಂಪ್ರದಾಯಗಳು ಪ್ರಯತ್ನಿಸಿದವು.

ತಾಂತ್ರಿಕ ಸಂಪ್ರದಾಯಗಳ ಸಾಮಾನ್ಯ ಪ್ರವೃತ್ತಿಗಳನ್ನು ಧರ್ಮವೀರ ಭಾರತಿ ಅವರು ಈ ರೀತಿ ಗುರುತಿಸಿದ್ದಾರೆ:[16]

೧. ಪ್ರತಿಯೊಂದು ಸಂಪ್ರದಾಯದ ದೇವತೆಗಳು, ಮಂತ್ರ ಹಾಗೂ ತತ್ವದರ್ಶನದ ಶಬ್ದಾವಳಿ ಬೇರೆಯಿದ್ದರೂ ಸಾಧನಾಪದ್ಧತಿ ಸಮಾನವಾಗಿತ್ತು. ಹೊಸ ಸಾಧನಾಪದ್ಧತಿಗಳನ್ನು ಒಂದು ಮತ್ತೊಂದರಿಂದ ಮುಕ್ತ ಹೃದಯದಿಂದ ಸ್ವೀಕರಿಸುತ್ತಿತ್ತು.

೨. ತತ್ವದರ್ಶನ ಗೌಣವಾಗಿತ್ತು. ಸಾಧನೆ, ಕ್ರಿಯೆ ಮತ್ತು ಚರ್ಯೆಗಳು ಪ್ರಮುಖವಾಗಿದ್ದವು. ಸಾಧನೆಯಲ್ಲಿ ಗುರುವಿಗೆ ಅತ್ಯಂತ ಮಹತ್ವವಿತ್ತು ಮತ್ತು ಈ ಸಾಧನೆ ಶಿವಶಕ್ತಿ, ಅಂಗ-ಲಿಂಗ, ರಸ-ಅಭ್ರಕ, ಪ್ರಜ್ಞೆ ಮತ್ತು ಉಪಾಯ ಮೊದಲಾದ ಯಾವುದೇ ಎರಡು ಪುರುಷ ಹಾಗೂ ಸ್ತ್ರೀ ಪ್ರತೀಕಗಳ ಅದ್ವಯ ಸಾಧನೆಯಾಗಿತ್ತು.

೩. ಸಾಧಾರಣವಾಗಿ ಎಲ್ಲ ಸಂಪ್ರದಾಯಗಳಲ್ಲೂ ಈ ಸಾಧನೆಯ ಮಿಥುನ ಪರವಾದ ವ್ಯಾಖ್ಯಾನ ದೊರೆಯುತ್ತದೆ. ಅದರ ಜೊತೆಗೆ ಗುಹ್ಯಾಚಾರಗಳ ವಿಧಾನವೂ ಕಂಡುಬರುತ್ತದೆ.

೪. ಈ ಸಾಧನೆಯಲ್ಲಿ ಜಾತಿ-ಪಂಥ, ವರ್ಣಭೇದಗಳಿರಲಿಲ್ಲ.

೫. ಈ ಸಾಧನೆಯಲ್ಲಿ ಶಕ್ತಿ ಪ್ರಧಾನವಾದುದರಿಂದ ಸ್ತ್ರೀಗೆ ವಿಶೇಷ ಮಹತ್ವವಿತ್ತು.

೬. ಬ್ರಹ್ಮಾಂಡದಲ್ಲಿರುವ ಶಿವ ಶಕ್ತಿಗಳು ಕುಂಡಿಲಿನೀ ಮತ್ತು ಸಹಸ್ರಾರ ಅಥವಾ ಕಮಲ ಕುಲಿಶದ ರೂಪದಲ್ಲಿದ್ದವು. ಆದ್ದರಿಂದ ಯೋಗ ಸಾಧನೆಯ ವಿಧಾನವೂ ಇತ್ತು. ದೇಹ ಅತ್ಯಂತ ಮಹತ್ವಪೂರ್ಣವೆಂದು ಭಾವಿಸಲಾಗಿತ್ತು.

೭. ಮಿಥುನ ಸಾಧನೆ ಹಾಗೂ ಯೋಗದಿಂದಾಗಿ ನಿರೂಪಣಾ ಶೈಲಿ ಪ್ರತೀಕಾತ್ಮಕವಾಗಿದೆ.

೮. ಜಾನಪದ ದೇವತೆಗಳ ಮತ್ತು ಅವರ ಪೂಜೆಯ ಅಸಂಸ್ಕೃತ ವಿಧಾನಗಳ ಬಗೆಗೆ ಗೌರವ ಮತ್ತು ಅವರು ವೈದಿಕ ದೇವತೆಗಳಿಗಿಂತಲೂ ಹಿರಿಯರೆಂದು ಸಿದ್ಧಪಡಿಸಲು ಪ್ರಯತ್ನ ನಡೆಯುತ್ತಿತ್ತು.

೯. ವೇದಗಳ ಬಗೆಗೆ ಅಗೌರವ ಇಲ್ಲವೆ ಅವುಅಳಿಗೆ ತಮ್ಮ ಸಾಹಿತ್ಯದ ಸರಿಸಮಾನತೆಯನ್ನು ಸ್ಥಾಪಿಸುವ ಪ್ರಯತ್ನ ಮತ್ತು ಬ್ರಾಹ್ಮಣರ ಉಪೇಕ್ಷೆ.

೧೦. ಮರಣಾನಂತರ ದೊರೆಯುವ ಮುಕ್ತಿ ಅಥವಾ ನಿರ್ವಾಣಕ್ಕಿಂತ ಸಾಧನೆಯಿಂದ ಬದುಕಿರುವಾಗಲೇ ವಿವಿಧ ರೀತಿಯ ಸಿದ್ಧಿಗಳನ್ನು ಪಡೆದು ಸಿದ್ಧನಾಗುವುದು ಇವರ ಕಾಮ್ಯ, ರಸೇಶ್ವರ, ಕಾಪಾಲಿಕ, ಶಾಕ್ತ ಮತ್ತು ವಜ್ರಯಾನವೇ ಮೊದಲಾದವುಗಳಲ್ಲಿ ಸಿದ್ಧರಿಗೆ ಮನ್ನಣೆ.

ಬೌದ್ಧಧರ್ಮವು ಯಾವ ಸ್ವರೂಪದಲ್ಲಿ ಕಾಣಿಸಿಕೊಂಡರೂ ಕರ್ನಾಟಕದಲ್ಲಿ ಸ್ಥಿರವಾಗಿ ನೆಲೆಯೂರುವಲ್ಲಿ ಯಶಸ್ವಿಯಾಗಲಿಲ್ಲ. ಹೀನಯಾನ, ಮಹಾಯಾನ, ಮಂತ್ರಯಾನ, ವಜ್ರಯಾನ, ಕಾಲಚಕ್ರಯಾನ ಮೊದಲಾದ ಸ್ವರೂಪಗಳು ವಿವಿಧ ರೀತಿಗಳಲ್ಲಿ, ವಿವಿಧ ಸಂದರ್ಭಗಳಲ್ಲಿ ಕಾಣಿಸಿಕೊಂಡರೂ ಶೈವ, ವೈಷ್ಣವ ಹಾಗೂ ಜೈನ ಧರ್ಮಗಳಷ್ಟು ಪ್ರಚಾರವನ್ನು ಪಡೆದುಕೊಳ್ಳಲಿಲ್ಲ. ಬೌದ್ಧಧರ್ಮವು ಕರ್ನಾಟಕದಲ್ಲಿ ಆರಂಭದಿಂದಲೇ ಅನೇಕ ರೀತಿಯ ವಿರೋಧಗಳನ್ನು ಎದುರಿಸಿಕೊಂಡೇ ಬೆಳೆಯಬೇಕಾಯಿತು. ಅದು ತನ್ನ ಛಾಪನ್ನು ಮೂಡಿಸುವ ಬದಲು ಅಸ್ತಿತ್ವಕ್ಕಾಗಿ ಹೋರಾಡುತ್ತ ಬದುಕುವ ಅನಿವಾರ್ಯತೆಗೆ ಒಳಗಾಗಿತ್ತು. ಶೈವ ಮತ್ತು ವೈಷ್ಣವ ಧರ್ಮಗಳು ಬೌದ್ಧಧರ್ಮವನ್ನು ತಮ್ಮ ಚೌಕಟ್ಟಿನೊಳಗೆ ಸೇರಿಸಿಕೊಂಡು ತಮ್ಮದನ್ನಾಗಿಸುವ ಕೆಲಸವನ್ನು ಮಾಡಿದವು. ಇದು ಬೌದ್ಧಧರ್ಮಕ್ಕೆ ಸ್ವತಂತ್ರವಾಗಿ ಗುರುತಿಸಿಕೊಳ್ಳುವುದಕ್ಕೆ ಅಡ್ಡಿಯಾಯಿತು. ಬೌದ್ಧಧರ್ಮವು ಪ್ರತಿಪಾದಿಸಿದ ಅನಾತ್ಮವಾದ ಮತ್ತು ನಿರೀಶ್ವರವಾದಗಳು ಸಹಜವಾಗಿಯೇ ಜನರಿಂದ ಆಕರ್ಷಿತವಾಗಲಿಲ್ಲ. ಅದೇ ರೀತಿ ಬೌದ್ಧ ಧರ್ಮವು ತನ್ನ ಆಂತರಿಕ ದೋಷಗಳಾದ ಅತಿವಿರಕ್ತಿ, ಸಮಾಜ ವಿಮುಖತೆ, ಶಾಖೋಪ ಶಾಖೆಗಳಾಗಿ ವಿಭಜನೆ ಮುಂತಾದವುಗಳಿಂದಲೂ ಕುಸಿಯಿತು. ತಾಂತ್ರಿಕ ಆಚರಣೆಗಳಲ್ಲಿ ಸ್ವಲ್ಪಮಟ್ಟಿಗೆ ಕಾಣಿಸಿಕೊಂಡರೂ, ಕ್ರಮೇಣ ತಾಂತ್ರಿಕ ಆಚರಣಾವಿಧಿಗಳ ಪರಿಣಾಮವಾಗಿ ಬೆಳೆದುಬಂದ ವಿಷಯಲಂಪಟತೆ ಹಾಗೂ ಸ್ವೈರಾಚಾರಗಳಿಂದಾಗಿ ಮತ್ತೊಮ್ಮೆ ಅವನತಿಯ ಹಾದಿಯನ್ನು ತುಳಿಯಬೇಕಾಯಿತು. ಬೌದ್ಧಧರ್ಮ ಮರೆಯಾದರೂ, ಕರ್ನಾಟಕ ಸಂಸ್ಕೃತಿ ಚರಿತ್ರೆಯ ಅಧ್ಯಯನ ಸಂದರ್ಭದಲ್ಲಿ ಬೌದ್ಧಧರ್ಮವನ್ನು ಮರೆಯಲು ಸಾಧ್ಯವಾಗುವುದಿಲ್ಲ. ಬೌದ್ಧ ಶಾಸನಗಳು, ಬೌದ್ಧ ಸಾಹಿತ್ಯ, ಬೌದ್ಧ ವಾಸ್ತುಗಳು ಬೌದ್ಧ ಧರ್ಮದ ಪ್ರತಿನಿಧಿಗಳಾಗಿ ಉಳಿದುಕೊಂಡಿವೆ. ಅವುಗಳ ಸಹಾಯದಿಂದ ಬೌದ್ಧ ಸಂಸ್ಕೃತಿಯ ವಿವಿಧ ಮಗ್ಗಲುಗಳನ್ನು ಶೋಧಿಸುವ ಪ್ರಯತ್ನವನ್ನು ಮಾಡಬಹುದಾಗಿದೆ. ಆದರೆ ಯಾವುದೇ ಸ್ಪಷ್ಟವಾದ ತೀರ್ಮಾನಕ್ಕೆ ಬರುವುದು ಕಷ್ಟಸಾಧ್ಯವಾದ ವಿಚಾರವಾಗಿದೆ.

 

[1] ಎ.ಕ.೭. ಶಿಕಾರಿಪುರ ೧೭೦, ಕ್ರಿ.ಶ. ೧೦೬೪; ಅದೇ, ೧೬೯, ಕ್ರಿ.ಶ. ೧೦೬೭; ಈ ಎರಡು ಶಾಸನಗಳಲ್ಲದೆ ಇನ್ನು ಅನೇಕ ಶಾಸನಗಳು ತಾಂತ್ರಿಕ ಬೌದ್ಧಧರ್ಮದ ಕುರಿತು ವಿವರಗಳನ್ನು ನೀಡುತ್ತವೆ. ಈ ಶಾಸನಗಳನ್ನು ಆಧಾರವನ್ನಾಗಿಟ್ಟುಕೊಂಡು ತಾಂತ್ರಿಕ ಬೌದ್ಧಧರ್ಮದ ಕುರಿತು ಅನೇಕ ಅಧ್ಯಯನಗಳು ನಡೆದಿವೆ. ಅವುಗಳಲ್ಲಿ ತಾಳ್ತಜೆ ವಸಂತಕುಮಾರ ಅವರ ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ, ವಿನಯ ಪ್ರಕಾಶನ, ಬೆಂಗಳೂರು, ೧೯೮೮ ಪ್ರಮುಖವಾದದ್ದು.

[2] ಎ.ಕ.೭. ಶಿಕಾರಿಪುರ ೧೭೦, ಕ್ರಿ.ಶ. ೧೦೬೪; ಅದೇ, ೧೬೯, ಕ್ರಿ.ಶ. ೧೦೬೭

[3] ಮುಂಬಯಿ ರಾಜ್ಯ ಗೆಜೆಟಿಯರ್, ಧಾರವಾಡ ಜಿಲ್ಲೆ, ೧೯೫೯, ಪು. ೭೭೨

[4] ತಾಳ್ತಜೆ ವಸಂತಕುಮಾರ, ಪೂರ್ವೋಕ್ತ, ಪು.೯೧-೯೨

[5] ತಾಳ್ತಜೆ ವಸಂತಕುಮಾರಮ್ ಪೂರ್ವೋಕ್ತ, ಪು. ೧೧೪

[6] ಅದೇ, ಪು.೧೨೭

[7] ಪಿ. ಗುರುರಾಜಭಟ್, ಸ್ಟಡೀಸ್ ಇನ್ ಗಣಪತಿರಾವ್ ಐಗಳ್, ಪಿ.ಗುರುರಾಜಭಟ್, ಕೆ.ವಿ. ರಮೇಶ್, ತಾಳ್ತಜೆ ವಸಂತಕುಮಾರ, ಎ.ಸುಬ್ಬಣ್ಣ ರೈ ಮೊದಲಾದವರು ಚರ್ಚೆ ನಡೆಸಿದ್ದಾರೆ.

[8]

[9] ಕೃಷ್ಣಭಟ್ಟ ಹೆರಂಜೆ ಮತ್ತು ಮುರುಳೀಧರ ಉಪಾಧ್ಯ ಹಿರಿಯಡಕ (ಸಂ.), ಗೋಬಿಂದ ಪೈ ಸಂಶೋಧನ ಸಂಪುಟ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ, ೧೯೯೫, ಪು. ೬೫೯

[10] ತಾಳ್ತಜೆ ವಸಂತಕುಮಾರ, ಪೂರ್ವೋಕ್ತ, ಪು.೧೫೪; ವಜ್ರಯಾನಿ ಬೌದ್ಧಧರ್ಮವು ತಾಂತ್ರಿಕ ಬೌದ್ಧಧರ್ಮದ ಒಂದು ಶಾಖೆ.

[11] ಮ.ಸು.ಕೃಷ್ಣಮೂರ್ತಿ, ಸಿದ್ಧಸಾಹಿತ್ಯ, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೮೨, ಮುನ್ನುಡಿ.

[12] ಕೃಷ್ಣಭಟ್ಟ ಹೆರಂಜೆ ಮತ್ತು ಮುರುಳೀಧರ ಉಪಾಧ್ಯ ಹಿರಿಯಡಕ (ಸಂ.) ಪೂರ್ವೋಕ್ತ, ಪು. ೬೬೭, ೬೭೦

[13] ತಾಳ್ತಜೆ ವಸಂತಕುಮಾರ, ಪೂರ್ವೋಕ್ತ, ಪು.೧೬೪

[14] ಮ.ಸು. ಕೃಷ್ಣಮೂರ್ತಿ, ಪೂರ್ವೋಕ್ತ, ಪು.೮೫-೮೬

[15] ತಾಂತ್ರಿಕ ಬೌದ್ಧ ಸಿದ್ಧಾಂತದ ಕುರಿತು ಸಂಶೋಧನೆ ನಡೆಸಿದವರಲ್ಲಿ ಮ.ಸು. ಕೃಷ್ಣಮೂರ್ತಿ ಅವರು ಪ್ರಮುಖರು. ಅವರು ತಮ್ಮ ಕೃತಿ ಸಿದ್ಧಸಾಹಿತ್ಯ (ಪೂರ್ವೋಕ್ತ)ದಲ್ಲಿ ತಾಂತ್ರಿಕ ಬೌದ್ಧಧರ್ಮದ ಉಗಮ, ಬೆಳವಣಿಗೆ ಹಾಗೂ ಅವನತಿಯ ಕೂಲಂಕಷ ಚರ್ಚೆ ನಡೆಸಿದ್ದಾರೆ.

[16] ಧರ್ಮವೀರ ಭಾರತಿ, ಸಿದ್ಧಸಾಹಿತ್ಯ, ಕಿತಾಬ್ ಮಹಲ್, ಅಲಹಾಬಾದ್, ೧೯೫೮, ಪು.೧೩೨-೧೩೩