ಯಾವುದೇ ಒಂದು ಪ್ರದೇಶದ, ಕಾಲದ ಚರಿತ್ರೆಯ ಅಧ್ಯಯನ ನಡೆಸಲು ಸ್ಮಾರಕಗಳು ಬಹುಮುಖ್ಯವಾದ ಆಕರಗಳಾಗಿವೆ. ಆದರೆ ಹೆಚ್ಚಿನ ಚರಿತ್ರೆ ಗ್ರಂಥಗಳಲ್ಲಿ ಸ್ಮಾರಕಗಳ ಕುರಿತಾದ ವಿವರಗಳು ಕೊನೆಯ ಎರಡು ಪುಟಗಳಿಗಷ್ಟೇ ಸೀಮಿತಗೊಂಡಿರುವುದನ್ನು ಕಾಣಬಹುದಾಗಿದೆ. ಆ ವಿವರಗಳು ಕೇವಲ ಪ್ರಭುತ್ವದ ಸ್ಮಾರಕಗಳಿಗಷ್ಟೇ ಸೀಮಿತಗೊಂಡಿರುತ್ತವೆ. ಜನರಲ್ಲಿ ಮೇಲ್ವರ್ಗದವರು ಮತ್ತು ಕೆಳವರ್ಗದವರು ಎನ್ನುವ ವಿಂಗಡಣೆ ಮಾಡಿದಂತೆ ಸ್ಮಾರಕಗಳಲ್ಲೂ ಪ್ರಭುತ್ವದ ಸ್ಮಾರಕಗಳು ಮತ್ತು ಪ್ರಜೆಗಳ ಸ್ಮಾರಕಗಳು ಎನ್ನುವ ವಿಂಗಡಣೆಯನ್ನು ಮಾಡಲಾಗಿದೆ. ಪ್ರಭುತ್ವದ ಸ್ಮಾರಕಗಳಾದ ಅರಮನೆಗಳು, ದೇವಾಲಯಗಳು, ಕೋಟೆ-ಕೊತ್ತಲಗಳು ಮುಂತಾದವುಗಳನ್ನು ವಸ್ತುಗಳನ್ನಾಗಿ ಆಯ್ಕೆ ಮಾಡಿಕೊಂಡು ಅನೇಕ ಅಧ್ಯಯನಗಳು ನಡೆದಿವೆ. ಇವುಗಳ ಕುರಿತಾದ ಶಾಸನಗಳು ಮತ್ತು ಸಾಹಿತ್ಯ ಕೃತಿಗಳು ಅಪಾರ ಸಂಖ್ಯೆಯಲ್ಲಿ ಲಭ್ಯವಿರುವುದು ಕಲಾಚರಿತ್ರೆಕಾರರಿಗೆ ಅನುಕೂಲಕರವೇ ಆಯಿತು. ಈ ರೀತಿಯ ಅಧ್ಯಯನಗಳು ಅರಸಕೇಂದ್ರಿತ ಚರಿತ್ರೆಯನ್ನು ಇನ್ನಷ್ಟು ಗಟ್ಟಿಗೊಳಿಸಿ, ರಾಜಪ್ರಭುತ್ವವನ್ನು ವೈಭವೀಕರಿಸುವ ಕೆಲಸವನ್ನು ಮಾಡಿದವು. ಪ್ರಭುತ್ವದ ಸ್ಮಾರಕಗಳನ್ನು ಕಟ್ಟಿಸಿದವರ ಹಿನ್ನೆಲೆಯಿಂದ ನೋಡಲಾಯಿತೇ ಹೊರತು ಕಟ್ಟಿದವರ ಹಿನ್ನೆಲೆಯಿಂದಲ್ಲ. ಸ್ಮಾರಕಗಳನ್ನು ಕಟ್ಟಿದ ಸಾವಿರಾರು ಕುಶಲಕರ್ಮಿಗಳು ಹಾಗೂ ಇನ್ನಿತರ ಕೂಲಿ ಕೆಲಸಗಾರರು ಅರಸಕೇಂದ್ರಿತ ಚರಿತ್ರೆಗೆ ಪ್ರವೇಶ ಪಡೆಯಲೇ ಇಲ್ಲ. ಅವರ ದುಡಿಮೆಯ ಲಾಭವನ್ನು ಪಡೆದುಕೊಂಡು ರಾಜಪ್ರಭುತ್ವ ಮತ್ತು ಧಾರ್ಮಿಕ ಪ್ರಭುತ್ವಗಳು ಪ್ರಚಾರವನ್ನು ಗಿಟ್ಟಿಸಿಕೊಂಡವು. ಕುಶಲಕರ್ಮಿಗಳು ರಾಜ ಅಥವಾ ಧರ್ಮದ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳಬೇಕಾದ ಒತ್ತಾಯಗಳಿಗೆ ಒಳಗಾಗಿದ್ದರು. ಪ್ರಜೆಗಳ ಸ್ಮಾರಕಗಳಾದ ಗ್ರಾಮದೇವತೆಗಳ ಗುಡಿಗಳು, ಮನೆಗಳು, ಮರಣ ಸ್ಮಾರಕಗಳು ಚರಿತ್ರೆ ನಿರ್ಮಾಣದ ಆಕರಗಳೇ ಅಲ್ಲ ಎನ್ನುವ ಏಕಪಕ್ಷೀಯ ಧೋರಣೆಗೆ ಒಳಗಾಗಬೇಕಾಯಿತು. ಸಮಾಜದ ಅಲಕ್ಷಿತ ವರ್ಗಗಳ ಅಧ್ಯಯನ ಕೈಗೊಳ್ಳುವಾಗ ಈ ಸ್ಮಾರಕಗಳು ಹಾಗೂ ಅವುಗಳಿಗೆ ಸಂಬಂಧಿಸಿದ ನಂಬಿಕೆ, ಆಚರಣೆಗಳು ಬಹುಮುಖ್ಯವಾದ ಆಕರಗಳಾಗಿ ಕಂಡುಬರುತ್ತವೆ. ಪ್ರಸ್ತುತ ಅಧ್ಯಯನದಲ್ಲಿ ಪ್ರಭುತ್ವದ ಸ್ಮಾರಕಗಳು, ಪ್ರಭುತ್ವದ ಸ್ಮಾರಕಗಳ ನಿರ್ಮಾಣ ಮತ್ತು ಪ್ರಜೆಗಳ ಸ್ಮಾರಕಗಳು ಎನ್ನುವ ಮೂರು ನೆಲೆಗಳಿಂದ ಸ್ಮಾರಕಗಳನ್ನು ನೋಡುವ ಪ್ರಯತ್ನವನ್ನು ಮಾಡಲಾಗಿದೆ.

.೧ ಪ್ರಭುತ್ವದ ಸ್ಮಾರಕಗಳು

ರಾಷ್ಟ್ರಕೂಟರಿಂದ ಹೊಯ್ಸಳರ ಅವನತಿಯವರೆಗಿನ ಅವಧಿಯಲ್ಲಿ ರಾಜಪ್ರಭುತ್ವವನ್ನು ಸಂಕೇತಿಸುವ ಬೃಹತ್ ಹಾಗೂ ಕಟ್ಟಡಗಳು ನಿರ್ಮಾಣಗೊಂಡವು.[1] ಇಂಥ ಕಟ್ಟಡಗಳಲ್ಲಿ ದೇವಾಲಯಗಳು, ಅರಮನೆಗಳು, ಕೋಟೆ-ಕೊತ್ತಲಗಳು ಹಾಗೂ ಆಡಳಿತಕ್ಕೆ ಸಂಬಂಧಿಸಿದ ಕಟ್ಟಡಗಳು ಪ್ರಮುಖವಾದವು. ರಾಷ್ಟ್ರಕೂಟರ ಆಳ್ವಿಕೆಯ ಅವಧಿಗೆ ಸೇರಿದ ಎಲ್ಲೋರ, ಎಲಿಫೆಂಟಾ, ಜೋಗೇಶ್ವರಿ, ಧಾರೇಶ್ವರ, ಗದಗ, ಕುಕನೂರು, ಕುಮಾರಸ್ವಾಮಿಬೆಟ್ಟ (ಸಂಡೂರು), ಕಲ್ಯಾಣಿ ಚಾಲುಕ್ಯರ ಅವಧಿಗೆ ಸೇರಿದ, ಲಕ್ಷ್ಮೇಶ್ವರ, ಹೊಯ್ಸಳರ ಆಳ್ವಿಕೆಯ ಅವಧಿಯ ಬೇಲೂರು, ಹಳೇಬೀಡು, ಸೋಮನಾಥಪುರ, ತಲಕಾಡು, ಅರಸೀಕೆರೆ, ಕಣ್ಣನೂರು, ಮೂಡಿಗೆರೆ, ನುಗ್ಗೇಹಳ್ಳಿ, ಜಾವಗಲ್, ದೊಡ್ಡಗದ್ದವಳ್ಳಿ ಮುಂತಾದ ಪ್ರದೇಶಗಳಲ್ಲಿ ಪ್ರಭುತ್ವದ ಸ್ಮಾರಕಗಳನ್ನು ಕಾಣಬಹುದಾಗಿದೆ. ಈ ಮೂರು ಪ್ರಮುಖ ಅರಸು ಮನೆತನಗಳಲ್ಲದೆ ಅವರ ಸಾಮಂತರು, ಅಧಿಕಾರಿ ವರ್ಗದವರು ಬೃಹತ್ ದೇವಾಲಯಗಳು ಹಾಗೂ ಇನ್ನಿತರ ಸ್ಮಾರಕಗಳನ್ನು ನಿರ್ಮಿಸಿದರು. ಈ ಎಲ್ಲ ಕಟ್ಟಡಗಳು ಪ್ರಜಾಪ್ರಭುತ್ವದ ಸ್ಮಾರಕಗಳಾಗಿ ಉಳಿದುಕೊಂಡು ಬಂದು ಅರಸಕೇಂದ್ರೀತ ಚರಿತ್ರೆ ನಿರ್ಮಾಣಕ್ಕೆ ಅವಶ್ಯವಾಗುವ ಪೂರಕ ಸಾಮಾಗ್ರಿಗಳನ್ನು ಒದಗಿಸಿಕೊಟ್ಟವು. ಧಾರ್ಮಿಕ ಸ್ಮಾರಕಗಳಲ್ಲಿ ದೇವಾಲಯಗಳ ಸಂಖ್ಯೆಯೇ ಹೆಚ್ಚು. ರಾಜಪ್ರಭುತ್ವವು ಆಯಾ ಕಾಲದ ಧಾರ್ಮಿಕ ಪ್ರಭುತ್ವದೊಂದಿಗೆ ಬೆಳೆದಿತ್ತು ಎನ್ನುವುದನ್ನು ಈ ಸಂದರ್ಭದಲ್ಲಿಗಮನಿಸಬೇಕಾಗುತ್ತದೆ.

ಕಲೆ ಮತ್ತು ವಾಸ್ತುಶಿಲ್ಪ ಈ ಅವಧಿಯಲ್ಲಿ ಹೆಚ್ಚಿನ ಪ್ರೋತ್ಸಾಹವನ್ನು ಪಡೆದಿತ್ತು ಎನ್ನುವುದಕ್ಕೆ ಅಪಾರ ಸಂಖ್ಯೆಯಲ್ಲಿ ಸಿಗುವ ಸ್ಮಾರಕಗಳೇ ಆಧಾರಗಳಾಗಿವೆ. ವಾಸ್ತುಶಿಲ್ಪ ರಚನೆಗಳು ಒಂದು ಅರಸು ಮನೆತನದಿಂದ ಇನ್ನೊಂದಕ್ಕೆ ಮುಂದುವರಿಯುತ್ತಿದ್ದವು ಹಾಗೂ ಅದೇ ಸಂದರ್ಭದಲ್ಲಿ ಪ್ರತಿಯೊಂದು ಅರಸುಮನೆತನವೂ ತನ್ನದೇ ಆದ ವಿಶಿಷ್ಟ ವಾಸ್ತುಶಿಲ್ಪ ಶೈಲಿಯನ್ನು ಹೊಂದಿರುತ್ತಿದ್ದವು. ರಾಷ್ಟ್ರಕೂಟರು ಬಾದಾಮಿ ಚಾಲುಕ್ಯರಂತೆ ಕಲ್ಲಿನಲ್ಲಿ ಕೊರೆದ ಗುಹಾ ದೇವಾಲಯಗಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಿದರು. ಇದಕ್ಕೆ ಎಲ್ಲೋರ, ಎಲಿಫೆಂಟಾ, ಜೋಗೇಶ್ವರಿ, ಧಾರೇಶ್ವರಿಗಳೇ ಉತ್ತಮ ಉದಾಹರಣೆಗಳಾಗಿವೆ. ಇಲ್ಲಿರುವ ದೇವಾಲಯಗಳಲ್ಲಿನ ಕಲ್ಲಿನಲ್ಲಿ ಕೊರೆದ ವಾಸ್ತು ರಚನೆಗಳು ಆಕರ್ಷಕವಾಗಿದ್ದು ಶಿಲ್ಪಿಗಳ ಕೈಚಳಕವನ್ನು ಎತ್ತಿ ತೋರಿಸುತ್ತವೆ. ರಾಷ್ಟ್ರಕೂಟರ ಸ್ಮಾರಕಗಳಲ್ಲಿಯೇ ಎಲ್ಲೋರದ ಕೈಲಾಸ ದೇವಾಲಯವು ಅತ್ಯುತ್ತಮವಾದುದು. ಅದರ ವಾಸ್ತುಶಿಲ್ಪ ಮತ್ತು ಮೂರ್ತುಶಿಲ್ಪಗಳು ಸುಂದರವಾಗಿ ಮೂಡಿ ಬಂದಿವೆ. ಕೈಲಾಸ ದೇವಾಲಯವು ವಾಸ್ತುಶಿಲ್ಪದ ಅಚ್ಚರಿ ಎಂಬುದಾಗಿ ಕರೆಯಲ್ಪಟ್ಟಿದೆ. ಈ ಅವಧಿಯಲ್ಲಿ ನಿರ್ಮಾಣಗೊಂಡ ಅಸಂಖ್ಯಾತ ದೇವಾಲಯಗಳು, ಜೈನ ಬಸದಿಗಳು, ಬಾಹುಬಲಿ ಮೂರ್ತಿಗಳು ರಾಷ್ಟ್ರಕೂಟ ವಾಸ್ತುಶಿಲ್ಪ ಶೈಲಿಯ ವಿಶಿಷ್ಟಗಳಾಗಿ ಕಂಡುಬರುತ್ತವೆ.

ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡ ಸ್ಮಾರಕಗಳು ಆರಂಭಿಕ ಹಂತದಲ್ಲಿ ರಾಷ್ಟ್ರಕೂಟ ವಾಸ್ತುಶಿಲ್ಪ ಶೈಲಿಯ ಲಕ್ಷಣಗಳನ್ನು ಪಡೆದುಕೊಂಡಿದ್ದವು. ಆದರೆ ಕ್ರಮೇಣ ಚಾಲುಕ್ಯರದೇ ಆದ ಶೈಲಿಯು ಬೆಳವಣಿಗೆ ಹೊಂದಿತು. ಚಾಲುಕ್ಯ ವಾಸ್ತುಶಿಲ್ಪ ಶೈಲಿಯಲ್ಲಿ ವಿಶೇಷವಾಗಿ ದ್ರಾವಿಡ ಹಾಗೂ ನಾಗರ ಶೈಲಿಗಳ ಮೇಳವಿಕೆ ಇದೆಯೆಂದೂ, ಇದನ್ನೇ ವೇಸರ ಎಂದೋ ಭೂಮಿಜ ಎಂದೋ ಹೆಸರಿಸಲಾಗಿದೆಯೆಂದೂ ಹಲವಾರು ಕಲಾ ಚರಿತ್ರೆಕಾರರು ಅಭಿಪ್ರಾಯಪಟ್ಟಿದ್ದಾರೆ.[2] ಕಲ್ಯಾಣಿ ಚಾಲುಕ್ಯರ ಅವಧಿಯಲ್ಲಿ ಶೈವ ಧರ್ಮವು ಪ್ರಧಾನ ಧರ್ಮವಾಗಿದ್ದರಿಂದಾಗಿ ಶಿವದೇವಲಾಯಗಳು ಹೆಚ್ಚಿನ ಸಂಖೆಯಲ್ಲಿ ನಿರ್ಮಾಣಗೊಂಡವು.[3] ಇದರ ಜೊತೆಗೆ ಬಹುಸಂಖ್ಯೆಯ ಬಸದಿಗಳು ಹಾಗೂ ಕೆಲವು ವಿಷ್ಣು ದೇವಾಲಯಗಳು ತಮ್ಮ ಅಲಂಕಾರ, ಮೂರ್ತಿಶ್ಜಿಲ್ಪದ ವೈಶಿಷ್ಟ್ಯತೆಗಳಿಗೆ ಹೆಸರುವಾಸಿಯಾಗಿದ್ದವು. ಇದಕ್ಕೆ ಇಟಗಿಯ ಮಹಾದೇವ ದೇವಾಲಯವು ಉತ್ತಮ ಉದಾಹರಣೆ. ಈ ದೇವಾಲಯವನ್ನು ದೇವಾಲಯ ಚಕ್ರವರ್ತಿ ಎಂದು ಕರೆಯಲಾಗಿದೆ.[4] ಹೊಯ್ಸಳರ ಕಲ್ಯಾಣ ಚಾಲುಕ್ಯ ವಾಸ್ತುಶಿಲ್ಪ ಶೈಲಿಯನ್ನು ಮುಂದುವರಿಸಿಕೊಂಡು ಹೋಗಿ ಅದರ ವಿಕಾಸಕ್ಕೆ ಕಾರಣರಾದರು. ಅದೇ ಸಂದರ್ಭದಲ್ಲಿ ಹೊಯ್ಸಳ ವಾಸ್ತುಶಿಲ್ಪ ಶೈಲಿಯು ರೂಪುಗೊಂಡಿತ್ತು. ಹೊಯ್ಸಳರ ಆಳ್ವಿಕೆಯಲ್ಲಿ ದೇವಾಲಯಗಳು ಮತ್ತು ಬಸದಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣಗೊಂಡವು. ಬೇಲೂರಿನ ಚೆನ್ನಕೇಶವ, ಹಳೇಬೀಡಿನ ಹೊಯ್ಸಳೇಶ್ವರ ಮತ್ತು ಸೋಮನಾಥಪುರದ ಕೇಶವ ದೇವಾಲಯಗಳು ಪ್ರಮುಖ ದೇವಾಲಯಗಳಾಗಿವೆ. ಗಂಗರ ಆಳ್ವಿಕೆಯ ಸಂದರ್ಭದಲ್ಲಿ ಜೈನ ವಾಸ್ತುಶಿಲ್ಪವು ಬೆಳೆಯಿತು. ತಲಕಾಡು, ಶ್ರವಣಬೆಳಗೊಳ, ಕದಂಬ ಹಳ್ಳಿಗಳಲ್ಲಿ ಗಂಗ ಶೈಲಿಯ ವಾಸ್ತುಶಿಲ್ಪಗಳು ಕಾಣಿಸಿಕೊಂಡವು. ಬಾಹುಬಲಿ ಮೂರ್ತಿಗಳು ಜೈನ ವಾಸ್ತುಶಿಲ್ಪವನ್ನು ಹೆಸರುವಾಸಿಯನ್ನಾಗಿಸಿದವು.

ಮೇಲೆ ಉಲ್ಲೇಖಿಸಿದ ಪ್ರಮುಖ ಮನೆತನಗಳಲ್ಲದೆ ಸಾಮಂತ ಅರಸರು, ಅಧಿಕರಿ ವರ್ಗದವರು ವಿಭಿನ್ನ ವಾಸ್ತುಶಿಲ್ಪ ಶೈಲಿಗಳನ್ನು ಅಳವಡಿಸಿಕೊಂಡು ದೇವಾಲಯ, ಬಸದಿ ಹಾಗೂ ಅರಮನೆಗಳನ್ನು ನಿರ್ಮಿಸಿದರು. ಕ್ರಿ.ಶ. ೮ ರಿಂದ ೧೪ನೆಯ ಶತಮಾನಗಳ ಅವಧಿಯ ಕಲಾ ಚರಿತ್ರೆಯ ಅಧ್ಯಯನ ನಡೆಸುವಾಗ ದೇವಾಲಯಗಳ ನಿರ್ಮಾಣವೇ ಪ್ರಮುಖವಾಗಿ ಕಂಡುಬರುತ್ತದೆ, ಶೈವ, ಶೈವದಲ್ಲೂ ಅನೇಕ ಪಂಗಡಗಳಾದ ಪಾಶುಪತ, ಕಾಳಾಮುಖ ಮತ್ತು ವೀರಶೈವ ಹಾಗೂ ವೈಷ್ಣವ ದೇವಾಲಯಗಳು ಹೆಚ್ಚಿನ ಪ್ರಮಾಣದಲ್ಲಿ ನಿರ್ಮಾಣಗೊಂಡವು. ಬೌದ್ಧ ಮತ್ತು ಜೈನ ಧರ್ಮಗಳು ಈ ನಿರ್ಮಾಣ ಕಾರ್ಯದಲ್ಲಿ ಹಿಂದೆ ಬಿದ್ದಿರಲಿಲ್ಲ. ಕಲೆ ಮತ್ತು ವಾಸ್ತುಶಿಲ್ಪ ಧರ್ಮದ ಮೂಲಕ ಗುರುತಿಸಿಕೊಂಡಿರುವುದನ್ನು ಈ ಬೆಳವಣಿಗೆಗಳು ಸೂಚಿಸುತ್ತವೆ. ರಾಜಪ್ರಭುತ್ವವು ಕೇವಲ ದೇವಾಲಯಗಳ ನಿರ್ಮಾಣಕ್ಕಷ್ಟೇ ಹೆಚ್ಚಿನ ಮಹತ್ವವನ್ನು ನೀಡಿರುವುದು ಇದರಿಂದ ಸಾಬೀತುಗೊಳ್ಳುತ್ತದೆ. ರಾಜಪ್ರಭುತ್ವ ಮತ್ತು ಧಾರ್ಮಿಕ ಪ್ರಭುತ್ವಗಳೆರಡೂ ಒಟ್ಟೊಟ್ಟಿಗೆ ಸಾಗಿರುವುದು ಹಾಗೂ ಒಂದು ಇನ್ನೊಂದನ್ನು ಅವಲಂಬಿಸಿಕೊಂಡಿದ್ದು ಹೆಚ್ಚೆಚ್ಚು ದೇವಾಲಯಗಳು ನಿರ್ಮಾಣಗೊಳ್ಳುವುದಕ್ಕೆ ಕಾರಣವಾಯಿತು. ವಾಸ್ತುಶಿಲ್ಪವೆಂದರೆ ಅದು ದೇವಾಲಯಗಳ ನಿರ್ಮಾಣ ಎಂಬ ಅರ್ಥವನ್ನು ಪಡೆದುಕೊಂಡಿತು.

ಇದರಿಂದಾಗಿ ವಾಸ್ತುಶಿಲ್ಪವು ಸಂಪೂರ್ಣವಾಗಿ ಧಾರ್ಮಿಕ ತಳಹದಿಯ ಮೇಲೆಯೇ ಬೆಳೆಯುವಂತಾಯಿತು. ಮೂರ್ತಿಶಿಲ್ಪವೂ ವಾಸ್ತುಶಿಲ್ಪಕ್ಕೆ ಪೂರಕವಾಗಿಯೇ ಬೆಳೆಯಿತು.[5] ವಾಸ್ತುಶಿಲ್ಪವು ಧಾರ್ಮಿಕ ಘಟ್ಟವನ್ನು ತಲುಪಿ ದೇವರಿಗೆ ದೇವಾಲಯಗಳನ್ನು ನಿರ್ಮಿಸಿದರೆ, ಮೂರ್ತಿಶಿಲ್ಪವು ಆ ದೇವರ ಕಲ್ಪನೆಗೆ ಸಾಂಕೇತಿಕ ಆಕಾರವನ್ನು ಕೊಡಲು ಪ್ರಯತ್ನಿಸಿತು.[6] ಈ ರೀತಿಯಾಗಿ ಪ್ರಭುತ್ವದ ಸ್ಮಾರಕಗಳು ರಾಜ-ಮಂತ್ರಿ-ಅಧಿಕಾರವರ್ಗವಿರುವ ರಾಜಪ್ರಭುತ್ವದ ಹಾಗೂ ಧರ್ಮ-ಧರ್ಮಗುರು-ಪುರೋಹಿತಶಾಹಿ ವ್ಯವಸ್ಥೆಯ ಧಾರ್ಮಿಕ ಪ್ರಭುತ್ವದ ತಳಹದಿಯ ಮೇಲೆ ನಿರ್ಮಾಣಗೊಂಡವು. ಬ್ರಾಹ್ಮಣರಿಗೆ, ದೇವಾಲಯಗಳಿಗೆ ಹಾಗೂ ಇನ್ನಿತರ ಅಧಿಕಾರಿ ವರ್ಗದವರಿಗೆ ಭೂಮಿಯನ್ನು ದಾನ ನೀಡುವ ವ್ಯವಸ್ಥೆ ಹೆಚ್ಚಿದಂತೆಲ್ಲಾ ದೇವಾಲಯ ಮತ್ತು ಬಸದಿಗಳ ನಿರ್ಮಾಣವೂ ಹೆಚ್ಚಿನ ಪ್ರಮಾಣದಲ್ಲಿ ನಡೆಯಿತು. ಅಲೌಕಿಕ ಚಿಂತನೆಗಳನ್ನು ಪ್ರಚಾರಪಡಿಸುವ ಅನೇಕ ಸಿದ್ಧಾಂತಗಳು ಹುಟ್ಟಿಕೊಂಡು ದೇವಾಲಯ ನಿರ್ಮಾಣಕ್ಕೆ ದೇವಕಾರ್ಯ ಎನ್ನುವ ಹೆಸರನ್ನು ಇಟ್ಟವು.[7]ಇದರಿಂದಾಗಿ ವಾಸ್ತುಶಿಲ್ಪ ಮತ್ತು ಮೂರ್ತಿಶಿಲ್ಪವು ಆಯಾ ಸಂದರ್ಭದಲ್ಲಿ ಪ್ರಚಾರದಲ್ಲಿದ್ದ ಧರ್ಮಕ್ಕೆ ಅನುಗುಣವಾಗಿ ಬೆಳೆದವು.

ಪ್ರಭುತ್ವದ ಸ್ಮಾರಕಗಳು ರಾಜ್ಯವನ್ನು ಪ್ರತಿನಿಧಿಸುತ್ತಿದ್ದಂತೆ ಕಂಡುಬಂದರೂ ವಾಸ್ತವವಾಗಿ ಅವು ಪ್ರತಿನಿಧಿಸುದ್ದುದು ಕೇವಲ ರಾಜರನ್ನು ಮಾತ್ರ. ಏಕೆಂದರೆ ಅರಮನೆ, ದೇವಾಲಯ, ಕೋಟೆ-ಕೊತ್ತಲಗಳು ರಾಜಪ್ರಭುತ್ವದ ಅನಿವಾರ್ಯತೆಗಳಾಗಿದ್ದವೇ ಹೊರತು ಪ್ರಜೆಗಳದ್ದಲ್ಲ. ಆದರೆ ಅವುಗಳನ್ನು ರಾಜ್ಯದ ಅನಿವಾರ್ಯತೆ ಎನ್ನುವ ರೀತಿಯಲ್ಲಿ ಚಿತ್ರಿಸಲಾಗಿತ್ತು. ಪ್ರಭುತ್ವದ ಬೃಹತ್ ಹಾಗೂ ಭವ್ಯ ಸ್ಮಾರಕಗಳು ಪ್ರಜೆಗಳ ಪಾಲಿಗೆ ಶೋಷಣೆಯ ಕೇಂದ್ರಗಳಾಗಿದ್ದವು. ರಾಜಪ್ರಭುತ್ವಕ್ಕೆ ದೇವಾಲಯ, ಕೋಟೆ, ಅದ್ದೂರಿಯ ಅರಮನೆ ಮುಂತಾದವು ಅಸ್ತಿತ್ವದ ಹಿನ್ನೆಲೆಯಿಂದ ಅನಿವಾರ್ಯವಾಗಿರುತ್ತಿದ್ದವು. ಅಸ್ತಿತ್ವದ ಪ್ರಶ್ನೆಯೊಂದಿಗೆ ಪ್ರಭುತ್ವದ ವಿಸ್ತರಣೆ, ಪ್ರಚಾರ ಹಾಗೂ ಭದ್ರತೆಯೂ ಸೇರಿಕೊಂಡಿರುತ್ತಿತ್ತು. ಇದರಿಂದಾಗಿ ಸ್ಮಾರಕಗಳ ನಿರ್ಮಾಣವನ್ನು ಜನಪರ ಕೆಲಸಗಳೆಂದು ಕರೆಯಲು ಸಾಧ್ಯವಾಗುವುದಿಲ್ಲ. ಪ್ರಜೆಗಳಿಂದ ತೆರಿಗೆಯ ರೂಪದಲ್ಲಿ ಸಂಗ್ರಹಿಸಿದ ಹಣವನ್ನು ಅಥವಾ ವಸ್ತುಗಳನ್ನು ವೈಭವದ ಕಟ್ಟಡಗಳ ನಿರ್ಮಾಣಕ್ಕೆ ವಿನಿಯೋಗಿಸಲಾಗುತ್ತಿತ್ತು. ಅದೇ ರೀತಿ ಪ್ರಜೆಗಳ ಶ್ರಮವನ್ನು ಪಡೆದುಕೊಳ್ಳಲಾಯಿತು. ರಾಜ ಪ್ರಭುತ್ವ ಮತ್ತು ಧಾರ್ಮಿಕ ಪ್ರಭುತ್ವಗಳೆರಡೂ ತಮ್ಮ ವೈಭವದ ಜೀವನವನ್ನು ಚಿತ್ರಿಸುವುದಕ್ಕಾಗಿ ಪ್ರಚಾರಪಡಿಸುವುದಕ್ಕಾಗಿ ಸ್ಮಾರಕಗಳನ್ನು ಮಾಧ್ಯಮಗಳನಾಗಿ ಬಳಸಿಕೊಂಡರು. ಈ ಕಾರಣಗಳಿಂದಾಗಿ ಸ್ಮಾರಕಗಳನ್ನು ಅರಸರ ಕಲೆ, ವಾಸ್ತುಶಿಲ್ಪ, ಮೂರ್ತಿ ಶಿಲ್ಪದ ಮೇಲಿನ ಪ್ರೋತ್ಸಾಹದ ಹಿನ್ನೆಲೆಯಿಂದಷ್ಟೇ ಅಧ್ಯಯನ ನಡೆಸದೆ ಪ್ರಭುತ್ವದ ವೈಯಕ್ತಿಕ ಹಿತಾಸಕ್ತಿಗಳ ಹಿನ್ನೆಲೆಯಿಂದಲೂ ಅಧ್ಯಯನ ನಡೆಸಬೇಕಾಗುತ್ತದೆ.

ರಾಜಪ್ರಭುತ್ವದ ಸಂದರ್ಭದಲ್ಲಿ ವಿವಿಧ ವಿನ್ಯಾಸಗಳುಳ್ಳ ಕೋಟೆಗಳು ರಚನೆಗೊಂಡವು. ಕೋಟೆಗಳ ನಿರ್ಮಾಣ ದುಡಿಯುವ ವರ್ಗಕ್ಕೆ ಒಂದು ಸವಾಲಿನ ಪ್ರಶ್ನೆಯೇ ಆಗಿರುತ್ತಿತ್ತು. ಇದೊಂದು ಬೃಹತ್ ಪ್ರಮಾಣದ ನಿರ್ಮಾಣ ಕಾರ್ಯವಾಗಿದ್ದರಿಂದಾಗಿ ದುಡಿಯುವ ವರ್ಗಗಳು ತಮ್ಮ ಬದುಕನ್ನೇ ಒತ್ತೆಯಿಡಬೇಕಾಗುತ್ತತ್ತು. ಆದರೆ ಕೋಟೆಗಳ ನಿರ್ಮಾಣ ಅರಸರಿಗೆ ಹೆಗ್ಗಳಿಕೆಯ ವಿಷಯವಾಗಿತ್ತು. ರಾಜಪ್ರಭುತ್ವ ರೂಪುಗೊಂಡು ರಾಜಕೀಯ ಹಗೆತನ ಆರಂಭಗೊಂಡಿರುವುದೇ ಕೋಟೆ-ಕೊತ್ತಲಗಳ ನಿರ್ಮಾಣಕ್ಕೆ ಮೂಲ ಕಾರಣ ಎನ್ನುವುದನ್ನು ಇಲ್ಲಿ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಕೋಟೆ-ಕೊತ್ತಲಗಳ ನಿರ್ಮಾಣ ಪ್ರಜೆಗಳ ಬದುಕಿನ ಅನಿವಾರ್ಯತೆಯಾಗಿರದೆ, ಪ್ರಭುತ್ವದ ಮಹತ್ವಾಕಾಂಕ್ಷಿ ಧೋರಣೆಯ ಪರಿಣಾಮವಾಗಿರುತ್ತಿತ್ತು. ಇದರಿಂದಾಗಿ ಪ್ರತಿಯೊಂದು ಪ್ರದೇಶದಲ್ಲಿಯೂ ಕೋಟೆ-ಕೊತ್ತಲಗಳನ್ನು ನಿರ್ಮಿಸುವುದು ಅನಿವಾರ್ಯವಾಯಿತು. ದೇವಾಲಯಗಳು, ಪೇಟೆ-ಪಟ್ಟಣಗಳು, ನಿವೇಶನಗಳು, ಮುಂತಾದವು ಕೋಟೆಗಳಿಂದ ಆವೃತವಾಗಬೇಕಾಯಿತು. ಕೋಟೆಗಳು ರಾಜಪ್ರಭುತ್ವಕ್ಕೆ ತಾತ್ಕಾಲಿಕ ಭದ್ರತೆಯನ್ನು ಒದಗಿಸಿದವೇ ಹೊರತು ಶಾಶ್ವತ ಭದ್ರತೆಯನ್ನಲ್ಲ. ಅಧಿಕಾರ ಮತ್ತು ಸವಲತ್ತುಗಳನ್ನು ನಿರ್ಮಿಸುವ ಮತ್ತು ಬೀಳಿಸುವ ಕೆಲಸವನ್ನು ಮಾಡುತ್ತಲೇ ಇದ್ದವು.

ಪ್ರಭುತ್ವದ ಸ್ಮಾರಕಗಳ ಕುರಿತು ಶಾಸನಗಳಲ್ಲಿ ಮತ್ತು ಸಾಹಿತ್ಯ ಕೃತಿಗಳಲ್ಲಿ ವಿಫುಲವಾದ ಮಾಹಿತಿಗಳು ಸಿಗುತ್ತವೆ. ಆದರೆ ಈ ಮಾಹಿತಿಗಳು ಒಬ್ಬ ರಾಜನ ಇಲ್ಲವೆ ಒಂದು ಧರ್ಮದ ಸಂಸ್ಕೃತಿ ಅಥವಾ ನಿರ್ಣಯಗಳನ್ನು ಪ್ರತಿನಿಧಿಸುತ್ತವೆಯೇ ಹೊರತು ಪ್ರಜೆಗಳ ಸಂಸ್ಕೃತಿಯನ್ನು ಪ್ರತಿನಿಧಿಸುವುದಿಲ್ಲ. ಈ ಕಾರಣಗಳಿಂದಾಗಿಯೇ ಶಾಸನಗಳು ಆಯಾ ಕಾಲದ ರಾಜರ ಹಾಗೂ ಮತ-ಧರ್ಮಗಳ ಹೊಗಳುಭಟ್ಟಂಗಿಗಳಂತೆ ಕಾಣಿಸುತ್ತವೆ. ಸ್ಮಾರಕಗಳ ನಿರ್ಮಾಣಕ್ಕಾಗಿ ದುಡಿದ ದುಡಿಯುವ ವರ್ಗಗಳ ಕುರಿತು ಶಾಸನಗಳು ಮೌನವಹಿಸುತ್ತವೆ. ಶಿಲ್ಪಿಗಳ ಮಾಹಿತಿಯನ್ನು ನೀಡುವ ಕೆಲವು ಶಾಸನಗಳಷ್ಟೆ ಸಿಗುತ್ತವೆ. ಪ್ರತಿಯೊಂದು ಸ್ಮಾರಕಕ್ಕೂ ಎರಡು ಮುಖಗಳಿರುತ್ತವೆ. ಅವುಗಳೆಂದರೆ ವೈಭವದ ಮುಖ ಹಾಗೂ ಶೋಷಣೆಯ ಮುಖ. ಶಾಸನಗಳು ವೈಭವದ ಮುಖವನ್ನಷ್ಟೇ ಪರಿಚಯಿಸುತ್ತವೆ. ಓರಿಯಂಟಾಲಿಸ್ಟರು, ಸಾಮ್ರಾಜ್ಯಶಾಹಿ ಚರಿತ್ರೆಕಾರರು ಮತ್ತು ರಾಷ್ಟ್ರೀಯವಾದಿ ಚರಿತ್ರೆಕಾರರು ಸ್ಮಾರಕಗಳ ವೈಭವದ ಮುಖವನ್ನಷ್ಟೇ ತಮ್ಮ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡರು. ಸ್ಮಾರಕಗಳನ್ನು ರಾಜಪ್ರಭುತ್ವವು ಕಲೆ ಮತ್ತು ವಾಸ್ತು ಶಿಲ್ಪಕ್ಕೆ ನೀಡಿದ ಪ್ರೋತ್ಸಾಹದ ಹಿನ್ನೆಲೆಯಿಂದಷ್ಟೇ ಅಧ್ಯಯನ ನಡೆಸಲಾಯಿತು. ಇದರಿಂದಾಗಿ ಸ್ಮಾರಕಗಳ ನಿರ್ಮಾಣ ಪ್ರಕ್ರಿಯೆಯ ವಿವರಗಳು ಪ್ರಾಮುಖ್ಯತೆಯನ್ನು ಪದೆದುಕೊಳ್ಳಲಿಲ್ಲ. ದೇವಾಲಯ, ಅರಮನೆ, ಕೋಟೆ ಮುಂತಾದ ಕಟ್ಟಡಗಳನ್ನು ನಿರ್ಮಿಸುವಾಗ ಅಲ್ಲಿ ದುಡಿಯುವ ವರ್ಗದ ಸಮಾಜವೇ ನೆರೆದಿರುತ್ತಿತ್ತು ಎನ್ನುವುದು ವಾಸ್ತವ ವಿಚಾರ. ಅದೇ ರೀತಿ ಸ್ಮಾರಕಗಳಲ್ಲಿ ಕಂಡುಬರುವ ಜಾನಪದೀಯ ಅಂಶಗಳು ಅಂದಿನ ಜನಪದರ ಬದುಕಿನ ಅಧ್ಯಯನಕ್ಕೆ ನೆರವಾಗುವುದಾದರೂ, ಉದ್ದೇಶಪೂರ್ವಕವಾಗಿಯೇ ಅವುಗಳ ಅಧ್ಯಯನ ನಡೆಯಲಿಲ್ಲ ಚರಿತ್ರೆ ಅಧ್ಯಯನದಲ್ಲಾದ ಈ ತಪ್ಪುಗಳನ್ನು ತಿದ್ದಬೇಕಾದರೆ ಈಗಾಗಲೇ ನಿರ್ಮಾಣಗೊಂಡ ಅರಸಕೇಂದ್ರಿತ ಚರಿತ್ರೆ ಪುನರ್ವಿಮರ್ಶೆಗೊಳ್ಳಬೇಕು.

.೨ ಪ್ರಭುತ್ವದ ಸ್ಮಾರಕಗಳ ನಿರ್ಮಾಣ

ಸ್ಮಾರಕಗಳ ನಿರ್ಮಾಣಕ್ಕೆ ಶ್ರೀಮಂತಿಕೆ ಅಥವಾ ಅಧಿಕಾರವಿದ್ದರೆ ಸಾಲದು, ಅವುಗಳನ್ನು ನಿರ್ಮಿಸಲು ಪರಿಣತರು ಬೇಕು. ಈ ಪರಿಣತರು ಪ್ರಸ್ತುತ ಅಧಯ್ಯನದಲ್ಲಿ ಸ್ಮಾರಕಗಳನ್ನು ಕಟ್ಟಿದವರು ಎಂಬ ಹೆಸರಿನಿಂದ ಕರೆಯಲಾಗಿದೆ. ಸ್ಮಾರಕಗಳನ್ನು ಕಟ್ಟಿಸಿದವರ ಕುರಿತು ಈಗಾಗಲೇ ಚರ್ಚಿಸಲಾಗಿದೆ. ಸಂಸ್ಕೃತಿ ಅಧ್ಯಯನ ಸಂದರ್ಭದಲ್ಲಿ ದೇವಾಲಯ, ಅರಮನೆ, ಕೋಟೆ-ಕೊತ್ತಲ, ಕೆರೆ ಮುಂತಾದವುಗಳು ನಿರ್ಮಾಣಗೊಂಡಿದ್ದರ ಬಗೆಯನ್ನು ವಿಶ್ಲೇಷಿಸುವ ಅಗತ್ಯವಿದೆ. ಆದರೆ ಈ ವಿಶ್ಲೇಷಣೆಗೆ ಸಿಗುವ ಮಾಹಿತಿಗಳು ಅತ್ಯಲ್ಪ. ಶಾಸನಗಳು, ಕಾವ್ಯಗಳು ಹಾಗೂ ಮೌಖಿಕ ಆಕರಗಳಲ್ಲಿ ಸಿಗುವ ಕೆಲವೊಂದು ಮಾಹಿತಿಗಳನ್ನಷ್ಟೇ ಇಟ್ಟುಕೊಂಡು ಸ್ಮಾರಕಗಳನ್ನು ನಿರ್ಮಿಸಿದ ಕುಶಲಕಾರ್ಮಿಕರ ಕುರಿತು ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗಿದೆ. ಕಲಾಚರಿತ್ರೆಯು ಕಲೆಯನ್ನು ಅರಳಿಸಿದ ಕಲಾವಿದನನ್ನೇ ನಿರ್ಲಕ್ಷಿಸಿ ಚರಿತ್ರೆಯನ್ನು ನಿರ್ಮಿಸಿರುವುದು ಕಂಡುಬರುತ್ತದೆ. ಕಲಾಚರಿತ್ರೆಯಲ್ಲಿ ಸ್ಮಾರಕಗಳು ರಾಜಪ್ರಭುತ್ವದ ಇಲ್ಲವೇ ಧಾರ್ಮಿಕ ಪ್ರಭುತ್ವದ ಹೆಸರಿನಲ್ಲಿ ಗುರುತಿಸಿಕೊಂಡವು. ಕಲಾವಿದರು ಅರಸನ ಅಥವಾ ದೇವರ ಹೆಸರಿನಲ್ಲಿ ಗುರುತಿಸಿಕೊಳ್ಳಬೇಕಾದ ಒತ್ತಾಯಕ್ಕೆ ಒಳಗಾಗಿದ್ದರು. ದೇವಾಲಯವನ್ನು ಕಟ್ಟಿಸಿದವರು ದೇವರೇ ಆಗಿಬಿಡುತ್ತಾರೆ. ಪರಿಚಾರಕ ವರ್ಗದವರಿಗೆ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಮುಂತಾದ ಧಾರ್ಮಿಕ ನಂಬಿಕೆಗಳು ಅಂದಿನ ಸಮಾಜದಲ್ಲಿ ಬಲವಾಗಿ ಬೇರೂರಿದ್ದವು.[8] ಇದರಿಂದಾಗಿ ದೇವಾಲಯಗಳ ನಿರ್ಮಾಣಕ್ಕೆ ರಾಜ್ಯದ ಅಪಾರ ಸಂಪತ್ತನ್ನು ವಿನಿಯೋಗಿಸಲಾಯಿತು. ಶಿಲ್ಪಿಗಳೂ ತಮ್ಮ ಕಲೆಯ ಸಾರ್ಥಕತೆಯನ್ನು ದೇವಾಲಯಗಳ ನಿರ್ಮಾಣದಲ್ಲಿ ಕಂಡುಕೊಳ್ಳುವಂತಾಯಿತು. ಈ ಪ್ರಕ್ರಿಯೆಯು ಕಲಾವಿದನನ್ನು ಸ್ವತಂತ್ರವಾಗಿ ಗುರುತಿಸಿಕೊಳ್ಳದಂತೆ ಮಾಡಿತು. ರಾಜಪ್ರಭುತ್ವದ ಇಲ್ಲವೆ ಧಾರ್ಮಿಕ ಪ್ರಭುತ್ವದ ಚೌಕಟ್ಟಿನೊಳಗೇ ಕಲಾವಿದ ತನ್ನ ಅಸ್ತಿತ್ವವನ್ನು ಕಂಡುಕೊಳ್ಳಬೇಕಾಯಿತು.[9]

ಪ್ರಭುತ್ವದ ಸ್ಮಾರಕಗಳನ್ನು ನಿರ್ಮಿಸಿದವರು ಕುಶಲಕಾರ್ಮಿಕರು ಎನ್ನುವುದಂತೂ ಸ್ಪಷ್ಟ. ಕುಶಲಕಾರ್ಮಿಕರು ಸ್ಮಾರಕಗಳ ನಿರ್ಮಾಣಕ್ಕೆ ಬೇಕಾಗುವ ಉಪಕರಣಗಳನ್ನು ಉತ್ಪಾದಿಸುವ ಕೆಲಸವನ್ನು ಮಾತ್ರವಲ್ಲದೆ ಸ್ಮಾರಕಗಳು ನಿರ್ಮಿಸುವ ಕೆಲಸವನ್ನೂ ಮಾಡುತ್ತಿದ್ದರು. ಬಡಗಿ, ಕಮ್ಮಾರ, ಅಕ್ಕಸಾಲಿ, ಕಂಚುಗಾರ, ಶಿಲ್ಪಿ ಹಾಗೂ ಅಸಂಖ್ಯಾತ ಕಾರ್ಮಿಕ ವರ್ಗದವರು ಸ್ಮಾರಕಗಳ ರೂವಾರಿಗಳು. ಪ್ರಭುತ್ವದ ಆದೇಶದ ಮೇರೆಗೆ ಹಾಗೂ ಆಸಕ್ತಿಗಳಿಗೆ ಅನುಗುಣವಾಗಿ ಇವರು ಕಟ್ಟಡಗಳನ್ನು ನಿರ್ಮಿಸುತ್ತಿದ್ದರು. ವಸ್ತುಗಳ ಉತ್ಪಾದನೆ ಹಾಗೂ ಕಟ್ಟಡಗಳ ನಿರ್ಮಾಣ ಇವರು ವೃತ್ತಿಯಾಗಿತ್ತು. ಕುಶಲಕಾರ್ಮಿಕರು ಕಟ್ಟಡಗಳನ್ನು ಕಟ್ಟಲು ಮರ, ದಾರು, ಕಲ್ಲು, ಇಟ್ಟಿಗೆ, ಕಬ್ಬಿಣ ಮುಂತಾದ ಮೂಲದ್ರವ್ಯಗಳನ್ನು ಉಪಯೋಗಿಸುತ್ತಿದ್ದರು.[10] ಕಟ್ಟಡಗಳನ್ನು ಕಟ್ಟಿಸುವ ಜನರ ಅಭಿಲಾಷೆಗೆ ಅನುಗುಣವಾಗಿ ವಿವಿಧ ರೀತಿಯಲ್ಲಿ ಕಟ್ಟಡಗಳನ್ನು ಕಟ್ಟಲಾಗುತ್ತಿತ್ತು. ಈ ಕುಶಲಕಾರ್ಮಿಕರು ಯಾರು, ಅವರ ಹೆಸರೇನು, ಅವರ ಬದುಕು ಯಾವ ರೀತಿ ಇರುತ್ತಿತ್ತು ಹಾಗೂ ಅವರ ಮೇಲೆ ಯಾವ ರೀತಿಯ ಒತ್ತಡಘಳನ್ನು ಹೇರಲಾಗುತ್ತಿತ್ತು. ಮುಂತಾದ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟದ ಕೆಲಸ. ಏಕೆಂದರೆ ಕುಶಲ ಕಾರ್ಮಿಕರ ಕುರಿತು ಖಚಿತವಾದ ಮಾಹಿತಿಗಳನ್ನು ನೀಡುವ ಆಕರಗಳ ಸಂಖ್ಯೆ ತೀರಾ ಕಡಿಮೆ. ಸ್ಮಾರಕಗಳು ಅವುಗಳನ್ನು ಕಟ್ಟಿಸಿದವರ ಹೆಸರಿನಿಂದ ಗುರುತಿಸಿಕೊಂಡಿವೆಯೇ ಹೊರತು ಕಟ್ಟಿದವರ ಹೆಸರಿನಿಂದಲ್ಲ. ಈ ಕಾರಣಗಳಿಂದಾಗಿ ಸ್ಮಾರಕಗಳ ನಿರ್ಮಾಣಕ್ಕಾಗಿ ದುಡಿದ ಶ್ರಮಿಕ ವರ್ಗಗಳ ಕುರಿತು ಯಾವುದೇ ತೃಪ್ತಿಕರವಾದ ಉತ್ತರ ಸಿಗುವುದಿಲ್ಲ.

ಕಟ್ಟಡಗಳನ್ನು ನಿರ್ಮಿಸುವುದು, ಕುಸುರಿ ಕೆಲಸಗಳನ್ನು ಮಾಡುವುದು ಹಾಗೂ ಉಪಕರಣಗಳನ್ನು ಉತ್ಪಾದಿಸುವುದು ಕುಶಲಕರ್ಮಿಗಳ ಬದುಕಿನ ಅವಿಭಾಜ್ಯ ಅಂಗ ಮಾತ್ರವಾಗಿರದೆ ಅವರ ಬದುಕಿನ ಮೂಲವೂ ಆಗಿತ್ತು. ಅರಸರು ಮತ್ತು ಅಧಿಕಾರಿ ವರ್ಗದವರು ಹೆಚ್ಚೆಚ್ಚು ಕಟ್ಟಡಗಳನ್ನು, ಕೋಟೆ-ಕೊತ್ತಲಗಳನ್ನು ಹಾಗೂ ಕೆರೆಗಳನ್ನು ನಿರ್ಮಿಸುತ್ತಿದ್ದುದು ಕುಶಲಕರ್ಮಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತಿತ್ತು. ನಿರ್ಮಾಣ ಕೆಲಸವನ್ನು ಗೊತ್ತಾದ ಅವಧಿಯಲ್ಲಿಯೇ ಮುಗಿಸಿಕೊಟ್ಟ ವಾಸ್ತುಶಿಲ್ಪಿಗಳನ್ನು ಗೌರವಿಸಲಾಗುತ್ತಿತ್ತು.[11] ಇದು ಕಟ್ಟಡಗಳ ನಿರ್ಮಾಣ ಪ್ರಕ್ರಿಯೆ ಚುರುಕುಗೊಳ್ಳುವುದಕ್ಕೆ ಹೂಡಿದ ತಂತ್ರವಾಗಿ ಕಂಡುಬರುತ್ತದೆ. ಶಿಲ್ಪಿಗಳು ಕಟ್ಟಡಗಳನ್ನು ಕಟ್ಟುವುದಕ್ಕಾಗಿ ಉಳಿ, ಬಳ್ಳಿ ಎನ್ನುವ ಹೆಸರುಗಳುಳ್ಳ ಉಪಕರಣಗಳನ್ನು ಉಪಯೋಗಿಸುತ್ತಿದ್ದರು.[12] ಕಟ್ಟಡಗಳನ್ನು ಕಟ್ಟುವ ಮೊದಲು ಅಡಿಗಲ್ಲು ಇಡುವ ಪದ್ಧತಿಯೂ ಇತ್ತು ಶಾಸನಗಳಲ್ಲಿ ಅಡಿಗಲ್ಲನ್ನು ಕೆಸರುಕಲ್ಲು ಎಂದು ಹೇಳಲಾಗಿದೆ.[13] ಕೆಸರುಕಲ್ಲನ್ನು ಹಾಕುವ ಸಂದರ್ಭದಲ್ಲಿ ಕೆಲವೊಂದು ಧಾರ್ಮಿಕ ಆಚರಣೆಗಳು ನಡೆಯುತ್ತಿದ್ದವು. ನಿರ್ಮಾಣ ಕೆಲಸವನ್ನು ಆರಂಭಿಸಲು ಮತ್ತು ಮುಗಿಸಲು ಶುಭದಿನವನ್ನು ಗೊತ್ತುಪಡಿಸಲಾಗುತ್ತಿತ್ತು. ಸಾಂಪ್ರದಾಯಿಕ ಬ್ರಾಹ್ಮಣ ಧರ್ಮದ ನಿರ್ದೇಶನದಲ್ಲಿ ಈ ಕೆಲಸಗಳು ನಡೆಯುತ್ತಿದ್ದವು. ಶಿಲ್ಪಿಗಳು ಆ ಚೌಕಟ್ಟಿನಲ್ಲಿಯೇ ಗುರುತಿಸಿಕೊಳ್ಳಬೇಕಾಗಿತ್ತು. ದೇವಾಲಯಗಳ ನಿರ್ಮಾಣವು ಕೆಸರುಕಲ್ಲನ್ನು ಇಡುವುದರಿಂದ ಕಳಸನಿಬ್ಬಾಣದವರೆಗೆ ಸಂಪೂರ್ಣವಾಗಿ ಧಾರ್ಮಿಕ ಚಟುವಟಿಕೆಯಾಗಿತ್ತು. ದೇವಾಲಯಗಳ ನಿರ್ಮಾಣ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ವಾಸ್ತುಶಿಲ್ಪಿಗಳಿಗೆ ದಾನದತ್ತಿಗಳನ್ನು ನೀಡಲಾಗುತ್ತಿತ್ತು.[14]

ಕಟ್ಟಡಗಳನ್ನು ಕಟ್ಟುವಾಗ ವಾಸ್ತು ಶಾಸ್ತ್ರವನ್ನು ಆಧಾರವನ್ನಾಗಿ ಇಟ್ಟುಕೊಳ್ಳಲಾಗುತ್ತಿತ್ತು.[15] ಶಿಲ್ಪಶಾಸ್ತ್ರ ಗ್ರಂಥಗಳಲ್ಲಿ ವಾಸ್ತುವಿನ ಬಗ್ಗೆ ಹೇಳಲಾಗಿದೆ.[16] ವಾಸ್ತುಶಾಸ್ತ್ರವನ್ನು ತಿಳಿದಿರುವ ತಜ್ಞರನ್ನು ಕರೆಯಿಸಿ ಅವರಿಂದ ಕಟ್ಟಡದ ನಕಾಶೆಯನ್ನು ಬರೆಯಿಸಲಾಗುತ್ತಿತ್ತು. ದೇವಾಲಯಗಳ ನಿರ್ಮಾಣದ ಸಂದರ್ಭದಲ್ಲಿ ವಾಸ್ತುಶಾಸ್ತ್ರಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿತ್ತು. ದೇವಾಲಯಗಳ ನಿರ್ಮಾಣಕ್ಕಾಗಿ ಆಯ್ಕೆ ಮಾಡಿದ ಪ್ರದೇಶದಲ್ಲಿ ವಾಸ್ತು ಪುರುಷನ ಸಾಂಕೇತಿಕ ಚಿತ್ರವನ್ನು ಬಿಡಿಸುತ್ತಿದ್ದು, ಅದನ್ನು ವಾಸ್ತು ಪುರುಷ ಮಂಡಲ ಎಂದು ಕರೆಯಲಾಗುತ್ತಿತ್ತು.[17] ಶಿಲ್ಪಿಗಳು ವಾಸ್ತುಶಾಸ್ತ್ರದ ಲಕ್ಷಣಗಳಿಗೆ ಅನುಸಾರವಾಗಿ ಕಟ್ಟಡಗಳನ್ನು ನಿರ್ಮಿಸುತ್ತಿದ್ದರು. ಕಟ್ಟಡಗಳನ್ನು ಶಿಲ್ಪಿಗಳು ಇತರ ಕಾರ್ಮಿಕರ ಸಹಾಯದೊಂದಿಗೆ ನಿರ್ಮಿಸುತ್ತಿದ್ದರು. ಒಬ್ಬ ಶಿಲ್ಪಿ, ಇಬ್ಬರು ಶಿಲ್ಪಿಗಳು, ಹಲವಾರು ಶಿಲ್ಪಿಗಳು ದೇವಾಲಯಗಳನ್ನು ಕಟ್ಟುತ್ತಿದ್ದ ಉಲ್ಲೇಖಗಳು ಶಾಸನಗಳಲ್ಲಿ ಸಿಗುತ್ತವೆ.[18] ಬೇರೆ ಬೇರೆ ಕುಶಲಕಾರ್ಮಿಕರು ಸೇರಿಕೊಂಡು ದೇವಾಲಯವನ್ನು ಕಟ್ಟುತ್ತಿದ್ದ ಕುರಿತು ಮಾಹಿತಿಗಳು ಸಿಗುತ್ತವೆ. ಬಡಗಿ, ಕಮ್ಮಾರ, ಕಲ್ಲುಕುಟಿಗ ಓಜುಗಳೆಲ್ಲರೂ ಸೇರಿ ತಮಗೆ ಸಂಬಂಧಿಸಿದ ಕೆಲಸವನ್ನು ಶ್ರಮವಿಭಜನೆಯ ಮೂಲಕ ಮಾಡುತ್ತಿದ್ದರು.[19] ಸ್ಮಾರಕಗಳನ್ನು ಕಟ್ಟಿದ ಕುಶಲಕಾರ್ಮಿಕರ ಹೆಸರನ್ನು ಪತ್ತೆ ಹಚ್ಚುವುದು ಕಷ್ಟದ ಕೆಲಸ.[20] ಕಟ್ಟಡಗಳಲ್ಲಿ ಹೆಸರುಗಳು ಕಂಡುಬಂದರೂ ಅವು ಕುಶಲಕಾರ್ಮಿಕರದ್ದೇ ಅಥವಾ ಕಟ್ಟಿಸಿದವರದ್ದೇ ಎನ್ನುವ ಗೊಂದಲಗಳು ಉಂಟಾಗುತ್ತವೆ. ಕಟ್ಟಡಗಳಲ್ಲಿ ಕಂಡುಬರುವ ಹೆಸರುಗಳು ಕುಶಲಕಾರ್ಮಿಕರದ್ದು ಎಂಬುದಾಗಿ ಖಚಿತವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದಿದ್ದರೂ ಅವರೆಲ್ಲರೂ ಆಯಾ ಸ್ಮಾರಕಗಲ ಕಾಲದವರು ಎಂದು ಪರಿಗಣಿಸಬಹುದಾಗಿದೆ. ಆದರೆ ಎಲ್ಲ ಕುಶಲಕಾರ್ಮಿಕರಿಗೂ ಈಮಾತು ಅನ್ವಯಿಸುವುದಿಲ್ಲ. ಕೆಲವು ಕಲಾವಿದರ ಹೆಸರುಗಳು ಶಾಸನಗಳಲ್ಲಿ ಸ್ಪಷ್ಟವಾಗಿ ಮೂಡಿ ಬಂದವೆ.[21]

ಕಟ್ಟಡಗಳನ್ನು ನಿರ್ಮಿಸುವಾಗ ಬಹುಮುಖ್ಯವಾಗಿ ಉಪಯೋಗಿಸಲಾಗುತ್ತಿದ್ದ ವಸ್ತುವೆಂದರೆ ಕಲ್ಲು. ಹೆಚ್ಚಿನ ಎಲ್ಲ ಸ್ಮಾರಕಗಳು ಕಲ್ಲಿನಿಂದಲೇ ನಿರ್ಮಾಣಗೊಂಡಿರುವುದು ತಿಳಿದು ಬರುತ್ತದೆ. ಕಲ್ಲನ್ನು ಸಾಗಿಸುವ, ಗೋಪುರಗಳನ್ನು ಕಟ್ಟಲು ಮೇಲಕ್ಕೇರಿಸುವ, ಕಂಬಗಳನ್ನು ನಿರ್ಮಿಸಲು ಕಲ್ಲುಗಳನ್ನು ಕೆತ್ತುವ ಮತು ನಿರ್ಮಿಸುವ ಕೆಲಸಗಳು ಅನೇಕ ಕುತೂಹಲಕಾರಿಯಾದ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಈ ಎಲ್ಲ ಕೆಲಸಗಳು ಕುಶಲಕಾರ್ಮಿಕರ ಶ್ರಮವನ್ನೇ ಅವಲಂಬಿಸಿಕೊಂಡಿರುತ್ತಿದ್ದವು. ಶಾಸನಗಳಲ್ಲಿ ವಾಸ್ತುಶಿಲ್ಪಿಗಳ ಹೆಸರುಗಳಷ್ಟೇ ಉಲ್ಲೇಖಿತವಾಗಿದ್ದರೂ, ವಾಸ್ತುಶಿಲ್ಪಿಗಳು ಸಾವಿರಾರು ಕೂಲಿಕಾರ್ಮಿಕರ ಸಹಾಯದಿಂದ ಕಟ್ಟಡಗಳನ್ನು ನಿರ್ಮಿಸುತ್ತಿದ್ದರು ಎನ್ನುವುದಂತೂ ಸ್ಪಷ್ಟ. ಕಲ್ಲುಗಳನ್ನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಸಕ್ಕೆ ಸಾಗಿಸಲು ಎತ್ತಿನ ಗಾಡಿಗಳನ್ನು ಉಪಯೋಗಿಸುತ್ತಿದ್ದರು ಎನ್ನುವುದು ತಿಳಿದು ಬರುತ್ತದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ವಾರಂಗಲ್ಲಿನ ಕೋಟೆಯ ನಿರ್ಮಾಣ ವಾರಂಗಲ್ಲಿನ ರಾಣಿಯಾಗಿದ್ದ ರುದ್ರಮಹಾದೇವಿಯು ಕ್ರಿ.ಶ. ೧೨೯೪ರಲ್ಲಿ ಕೋಟೆಯೊಂದನ್ನು ಕಟ್ಟಿಸುತ್ತಾಳೆ. ಈ ಕೋಟೆಯಲ್ಲಿ ಶಾಸನವೊಂದನ್ನು ಕೆತ್ತಿಸಲಾಯಿತು. ಈ ಶಾಸನದಲ್ಲಿರುವ ಚಿತ್ರವು ಕಲ್ಲನ್ನು ಹೇಗೆ ಸಾಗಿಸುತ್ತಿದ್ದರು ಎನ್ನುವ ಕುರಿತು ಮಾಹಿತಿಯನ್ನು ನೀಡುತ್ತದೆ. ಈ ಶಾಸನ ಚಿತ್ರದಲ್ಲಿ ಹೇಗೆ ಸಾಗಿಸುತ್ತಿದ್ದರು ಎನ್ನುವ ಕುರಿತು ಮಾಹಿತಿಯನ್ನು ನೀಡುತ್ತದೆ. ಈ ಶಾಸನ ಚಿತ್ರದಲ್ಲಿ ಒಂದು ಎತ್ತಿನ ಗಾಡಿಯ ಮೇಲೆ ದೊಡ್ಡ ಕಲ್ಲುಬಂಡೆಯನ್ನು ಹೇರಿರುವ, ಎತ್ತುಗಳು ಕಲ್ಲುಬಂಡೆಯನ್ನು ನಾಲಿಗೆಯನ್ನು ಚಾಚಿಕೊಂಡು ಮೈಬಗ್ಗಿಸಿ ಎಳೆಯುತ್ತಿರುವ, ಅವುಗಳ ಬಾಲ ನಿಗುರಿನಿಂತಿರುವ, ಗಾಡಿ ಹೊಡೆಯುವವನು ಬಾರುಕೋಲಿನಿಂದ ಹೊಡೆಯುತ್ತಿರುವ ಹಾಗೂ ಮತ್ತೊಬ್ಬನು ಗಾಡಿಯ ಚಕ್ರಕ್ಕೆ ಕೈಹಾಕಿ ದೂಡುತ್ತಿರುವ ಸನ್ನಿವೇಶಗಳು ಕಂಡುಬರುತ್ತದೆ.[22]

ದೇವಾಲಯ, ಗೋಪುರ ಹಾಗೂ ಕೋಟೆಗಳ ಗೋಡೆಯ ಮೇಲು ಭಾಗಕ್ಕೆ ದೊಡ್ಡ ಗಾತ್ರದ ಕಲ್ಲುಬಂಡೆಗಳನ್ನು ಹೇಗೆ ಸಾಗಿಸುತ್ತಿದ್ದರು ಎನ್ನುವುದರ ಕುರಿತು ಕೆ.ಎಸ್. ಕುಮಾರಸ್ವಾಮಿ ಅವರು ಅಕ್ಕಸಾಲಿಗರ ಚಿಕ್ಕವೀರಾಚಾರ್ ಎನ್ನುವವರನ್ನು ಸಂದರ್ಶಿಸಿ, ಅವರು ನೀಡಿದ ಮಾಹಿತಿಯನ್ನು ತಮ್ಮ ಗ್ರಂಥದಲ್ಲಿ ಈ ರೀತಿಯಾಗಿ ನೀಡಿದ್ದಾರೆ:[23]”ದೇವಸ್ಥಾನ ಅಥವಾ ಕೋಟೆಯನ್ನು ಕಟ್ಟುವಾಗ ಅದು ಮೇಲಕ್ಕೆ ಎದ್ದಂತೆಲ್ಲ ಅದರ ಹೊರಭಾಗವನ್ನು ಮಣ್ಣಿನಿಂದ ಮುಚ್ಚಿಕೊಳ್ಳುತ್ತಾರೆ. ಮಣ್ಣು ಗೋಡೆಯ ಎತ್ತರದಿಂದ ಭೂಮಿಯ ಕಡೆಗೆ ಇಳಿಜಾರಾಗಿ ಇರುತ್ತದೆ. ಈ ಇಳಿಜಾರು, ಕಲ್ಲನ್ನು ತಮಗೆ ಬೇಕಾದ ಎತ್ತರಕ್ಕೆ ಸಾಗಿಸಲು ಅನುಕೂಲವಾಗಿರುತ್ತದೆ. ಈ ಇಳಿಜಾರಾದ, ಗಟ್ಟಿಯಾದ ಮಣ್ಣಿನ ಮೇಲೆ ಕಲ್ಲನ್ನು ಮೇಲಕ್ಕೆ ಎಳೆದು ಸಾಗಿಸುತ್ತಿದ್ದರು ಹಾಗೂ ಅದರ ಮೇಲೆ ನಿಂತು ಶಿಲ್ಪಿಗಳು ಕೆಲಸ ಮಾಡುತ್ತಿದ್ದರು. ದೇವಸ್ಥಾನದ ಪೂರ್ಣ ಕೆಲಸವಾದ ಮೇಲೆ ಆ ಮಣ್ಣನ್ನು ಗುದ್ದಲಿಯಿಂದ ಎಳೆದು ಗುಡಿಯಿಂದ ಬೇರ್ಪಡಿಸುತ್ತಿದ್ದರು. ಹೀಗೆ ಮಣ್ಣು ಎಳೆಯುವಾಗ ಗುಡಿಯ ಗೋಡೆಯ ಮೇಲಿನ ವಿಗ್ರಹಗಳು ಮುಕ್ಕಾಗದಂತೆ ಎಚ್ಚರವಹಿಸುತ್ತಿದ್ದರು. ಹೀಗೆ ಪೂರ್ಣವಾದ ಮೇಲೆ ಮತ್ತೊಮ್ಮೆ ಶಿಲ್ಪಿಗಳು ಗೋಡೆಯ ಮೇಲಿನ ವಿಗ್ರಹಗಳನ್ನು ಸೂಕ್ಷ್ಮವಾದ ಕೆಲಸ ಮಾಡಿ ಚಂದಗಾಣಿಸುತ್ತಿದ್ದರು”. ದೊಡ್ಡ ಗಾತ್ರದ ಕಲ್ಲುಬಂಡೆಗಳನ್ನು ಮೇಲಕ್ಕೇರಿಸಲು ಈ ವಿಧಾನವನ್ನು ಅಂದಿನ ಕಾಲದಲ್ಲಿ ಅನುಸರಿಸಿದ್ದಿರಬೇಕೆಂದು ಊಹಿಸಬಹುದಾಗಿದೆ.

ಸ್ಮಾರಕಗಳ ನಿರ್ಮಾಣದಲ್ಲಿ ಕಲ್ಲು ಪಡೆದುಕೊಂಡಿದ್ದ ಪ್ರಾಮುಖ್ಯತೆಯನ್ನು ಅನೇಕ ಶಾಸನಗಳು ತಿಳಿಸುತ್ತವೆ. ಕಲ್ಲುಗಳನ್ನು ಸಮಾಜದ ಆಸ್ತಿ ಎಂಬುದಾಗಿ ಪರಿಗಣಿಸಲಾಗಿತ್ತು. ಭೂಮಿಯನ್ನು ದಾನ ನೀಡುವ ಸಂದರ್ಭಗಳಲ್ಲಿ ಆ ಭೂಮಿಯಲ್ಲಿರುವ ಬಂಡೆಗಳನ್ನು ಕಟ್ಟಡಗಳ ನಿರ್ಮಾಣಕ್ಕಾಗಿ ಬೇರೆ ಪ್ರದೇಶಗಳಿಗೆ ಸಾಗಿಸಲು ಅನುಮತಿ ನೀಡಲಾಗುತ್ತಿತ್ತು.[24] ಅದೇ ರೀತಿ ಮುರಿದು ಬಿದ್ದಿರುವ ಅಥವಾ ಹಳೆಯ ಕಟ್ಟಡಗಳಲ್ಲಿರುವ ಕಲ್ಲುಗಳನ್ನು ಹೊಸ ಕಟ್ಟಡಗಳ ನಿರ್ಮಾಣಕ್ಕಾಗಿ ಬಳಸಬಹುದಾಗಿತ್ತು.[25] ಕಲ್ಲುಗಳ ಕುರಿತಾಗಿಯೇ ಏರ್ಪಟ್ಟಿರುವ ಈ ವ್ಯವಸ್ಥೆ ಅಥವಾ ಒಪ್ಪಂದವು, ಅಂದಿನ ಕಾಲದಲ್ಲಿ ಕಟ್ಟದಗಳು ಯಾವ ಪ್ರಮಾಣದಲ್ಲಿ ನಿರ್ಮಾಣಗೊಳ್ಳುತ್ತಿದ್ದವು ಎನ್ನುವುದನ್ನು ಸೂಚಿಸುತ್ತದೆ. ಕಲ್ಲುಗಳಂತೆಯೇ ಮರ, ಇಟ್ಟಿಗೆ, ಸುಣ್ಣ ಮೊದಲಾದ ಸಾಮಾಗ್ರಿಗಳು ಕಟ್ಟಡಗಳ ನಿರ್ಮಾಣಕ್ಕೆ ಬಳಕೆಯಾಗುತ್ತಿದ್ದವು. ಶಾಸನಗಳಲ್ಲಿ ಈ ಕುರಿತ ಉಲ್ಲೇಖಗಳು ಸಿಗುತ್ತವೆ. ಹರನ ನಿಕೇತನವನ್ನು ಕಟ್ಟುವುದಕ್ಕೆಂದು ಮರಗಳನ್ನು ಕಡಿದಿದ್ದರಿಂದ ಕಾಡಿದ್ದ ಆ ಜಾಗದಲ್ಲಿ ಗದ್ದೆಗಳಾದವು. ಕಲ್ಲನ್ನು ಅಗೆದು ತಂದಿದ್ದರಿಂದ ಅಲ್ಲಿ ಗುಳಿಬಿದ್ದು ಅದು ಹೂವಿನ ಕೊಳವಾಯಿತು, ಗರ್ಭಗೃಹದ ಇಟ್ಟಿಗೆಗಳಿಗಾಗಿ ಮಣ್ಣನ್ನು ಅಗೆದು ತೆಗೆದ ಜಾಗದಲ್ಲಿ ತಟಾಕ ಉಂಟಾಯಿತು, ಸುಣ್ಣದ ಬಂಡಿಗಳು ವರ್ಷಗಟ್ಟಲೆ ಓಡಾಡಿದ್ದರಿಂದ ರಸ್ತೆಗಳೆಲ್ಲವೂ ಹೋದವು.[26] ಎನ್ನುವ ವಿವರಣೆ ಕಲ್ಲು, ಮರ, ಇಟ್ಟಿಗೆ ಮತ್ತು ಸುಣ್ಣ ಕಟ್ಟಡಗಳ ನಿರ್ಮಾಣಕ್ಕೆ ಬಳಕೆಯಾಗುತ್ತಿದ್ದವು ಎನ್ನುವುದನ್ನು ಸ್ಪಷ್ಟಪಡಿಸುತ್ತದೆ.

ಸ್ಮಾರಕಗಳ ನಿರ್ಮಾಣದಲ್ಲಿ ಕೆರೆಯನ್ನು ಕಟ್ಟಿಸುವುದು ಒಂದು ಪ್ರಮುಖ ಕೆಲಸವಾಗಿತ್ತು. ಕೃಷಿಪ್ರಧಾನ ಅರ್ಥ ವ್ಯವಸ್ಥೆಯಲ್ಲಿ ಕೆರೆಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದ್ದವು. ರಾಷ್ಟ್ರಕೂಟರಿಂದ ಹೊಯ್ಸಳರವರೆಗಿನ ಅವಧಿಯಲ್ಲಿ ಕೃಷಿಯ ವಿಸ್ತರಣೆ ಕಾಣಿಸಿಕೊಂಡಿದ್ದರಿಂದಾಗಿ ಹೆಚ್ಚೆಚ್ಚು ಕೆರೆಗಳು ನಿರ್ಮಾಣಗೊಂಡವು. ಕೆರೆಯ ನಿರ್ಮಾಣವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ದಾನವನ್ನು ನೀಡಲಾಗುತ್ತಿತ್ತು. ಕೆರೆಯ ನಿರ್ಮಾಣ ಕಾರ್ಯದಲ್ಲಿ ಕುಶಲಕಾರ್ಮಿಕರು ಸಲಹೆಗಳನ್ನು ನೀಡುವ, ದುರಸ್ತಿ ಮಾಡುವ ಹಾಗೂ ನೂತನ ಕೆರೆಗಳನ್ನು ನಿರ್ಮಿಸುವ ಕೆಲಸವನ್ನು ಮಾಡುತ್ತಿದ್ದರು. ಕೆರೆಗಳನ್ನು ಕಟ್ಟಿಸುವವರು ಕುಶಲಕರ್ಮಿಗಳ ಸಲಹೆಯಂತೆ ನಡೆದುಕೊಳ್ಳಬೇಕಾಗುತ್ತಿತ್ತು. ಕೆರೆಯನ್ನು ಕಟ್ಟುವುದರಲ್ಲಿ ಒಂದು ಪ್ರಮುಖ ಪಾತ್ರವಹಿಸುತ್ತಿದ್ದರು.[27] ಇವರೊಂದಿಗೆ ಬೋಯಿಗಳು, ವಡ್ಡರು ಹಾಗೂ ಇನ್ನಿತರರು ಇರುತ್ತಿದ್ದರು. ಮಣ್ಣುವಡ್ಡರು ಮಣ್ಣಿನ ಏರಿ ಮಾಡಿದರೆ, ಕಲ್ಲುವಡ್ಡರು ಏರಿಗೆ ಕಲ್ಲು ಕಟ್ಟುತ್ತಿದ್ದರು. ಕಮ್ಮಾರರು ಅಥವಾ ಓಜರು ತೂಬು ನಿಲ್ಲಿಸುತ್ತಿದ್ದರು. ಕೆಲವೊಮ್ಮೆ ಓಜರುಗಳೇ ಕೆರೆಯ ರಚನೆಯ ಪೂರ್ಣ ಜವಾಬ್ದಾರಿಯನ್ನು ನಿರ್ವಹಿಸುತಿದ್ದರು. ಇವರೆಲ್ಲರೂ ಪರಿಪೂರ್ಣ ಕುಶಲತೆಯಿಂದ ಕೆರೆಗಳನ್ನು ಕಟ್ಟುತ್ತಿದ್ದರು ಎನ್ನುವುದಕ್ಕೆ ಅವು ಇಂದಿನವರೆಗೂ ಉಳಿದುಕೊಂಡು ಬಂದಿರುವುದೇ ಸಾಕ್ಷಿಯಾಗಿದೆ. ಕೆರೆಗಳ ನಿರ್ಮಾಣ ಮತ್ತು ನಿರ್ವಹಣೆ ಕುಶಲಕರ್ಮಿಗಳಿಗೆ ಆದಾಯದ ಮೂಲವೂ ಆಗಿತ್ತು. ಕೆರೆಯ ಕೆಳಗಿನ ಗದ್ದೆಯನ್ನು ದಾನ ಕೊಡಲಾಗುತ್ತಿತ್ತು.[28] ಆದರೆ ಈ ಕುರಿತ ಉಲ್ಲೇಖಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಗುವುದಿಲ್ಲ. ಕೆರೆಗಳನ್ನು ಕಟ್ಟಿಸಿದವರ ಉಲ್ಲೇಖಗಳು ಶಾಸನಗಳಲ್ಲಿ ಮತ್ತು ಸಾಹಿತ್ಯ ಕೃತಿಗಳಲ್ಲಿ ತುಂಬಿಕೊಂಡಿವೆ. ಇದು ಎಲ್ಲ ರೀತಿಯ ನಿರ್ಮಾಣ ಕೆಲಸಗಳಿಗೂ ಸಂಬಂಧಿಸಿದ ಸಾಮಾನ್ಯ ಲಕ್ಷಣವಾಗಿದೆ. ಕಟ್ಟಡಗಳ ನಿರ್ಮಾಣವು ಒಂದು ಉದ್ದಿಮೆಯ ರೀತಿಯಲ್ಲಿ ನಡೆಯುತ್ತಿತ್ತಾದರೂ, ಅವುಗಳಲ್ಲಿ ತೊಡಗಿಸಿಕೊಂಡವರು ನಿರ್ಲಕ್ಷ್ಯಕ್ಕೆ ಒಳಗಾಗಬೇಕಾಯಿತು. ಸಮಾಜದಲ್ಲಿ ಗುರುತಿಸಿಕೊಳ್ಳಬೇಕಾದರೆ ಕುಶಲಕರ್ಮಿಗಳು ರಾಜನ ಇಲ್ಲವೆ ಧರ್ಮದ ಮೊರೆ ಹೋಗಬೇಕಾಗಿತ್ತು.

.೩ ಪ್ರಜೆಗಳ ಸ್ಮಾರಕಗಳು

ಸ್ಮಾರಕಗಳು ಚರಿತ್ರೆ ಅಧ್ಯಯನಕ್ಕೆ ಆಕರಗಳು ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ. ಆದರೆ ಕೇವಲ ಪ್ರಭುತ್ವದ ಸ್ಮಾರಕಗಳಷ್ಟೇ ಚರಿತ್ರೆ ಅಧ್ಯಯನಕ್ಕೆ ಆಕರಗಳಾಗಿರುವುದು ಅನೇಕ ರೀತಿಯ ಸಂದೇಹ, ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಪ್ರಭುತ್ವದ ಸ್ಮಾರಕಗಳು ರಾಜಪ್ರಭುತ್ವಕ್ಕೆ ಚರಿತ್ರೆ ನಿರ್ಮಾಣಕ್ಕೆ ಸಹಕಾರಿಯಾಗಬಲ್ಲುವೇ ಹೊರತು ಪ್ರಜೆಗಳ ಚರಿತ್ರೆ ನಿರ್ಮಾಣಕ್ಕಲ್ಲ. ಜನಸಾಮಾನ್ಯರ ಅವರ ಬದುಕು-ಬವಣೆಯ ಬಗೆಗೆ, ಅವರ ಜೀವನ ವಿಧಾನದ ಕುರಿತು ವಿವರವಾಗಿ ಬಿಚ್ಚಿಕೊಳ್ಳುವುದು ಅವರ ಸ್ಮಾರಕಗಳು. ಅವುಗಳ ಅಧ್ಯಯನ ಕೈಗೊಂಡಾಗ ಮಾತ್ರ ಅರಸಕೇಂದ್ರಿತ ಮತ್ತು ಧರ್ಮಕೇಂದ್ರೀತ ಸಮಾಜ ಪ್ರಜಾವರ್ಗವನ್ನು ಯಾವ ರೀತಿ ಅಧೀನದಲ್ಲಿಟ್ಟುಕೊಂಡಿತ್ತು ಎನ್ನುವುದು ತಿಳಿದುಬರಲು ಸಾಧ್ಯ. ಆದರೆ ಜನಸಾಮಾನ್ಯರಂತೆ ಅವರ ಸ್ಮಾರಕಗಳೂ ನಿರ್ಲಕ್ಷ್ಯಕ್ಕೆ ಒಳಗಾಗಿರುವುದರಿಂದಾಗಿ ಅಧ್ಯಯನವು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಪ್ರಜೆಗಳ ಸ್ಮಾರಕಗಳ ಅಧ್ಯಯನವನ್ನು ಒಂದು ಸ್ವತಂತ್ರ ಅಧ್ಯಯನವನ್ನಾಗಿ ರೂಪಿಸುವುದು ಕಷ್ಟದ ಕೆಲಸ. ಕ್ರಿ.ಶ. ೮ರಿಂದ ೧೪ನೆಯ ಶತಮಾನಗಳ ಅವಧಿಯಲ್ಲಿನ ಪ್ರಭುತ್ವದ ಸ್ಮಾರಕಗಳು ನಾಡಿನ ಎಲ್ಲೆಂದರಲ್ಲಿ ಸಿಗುತ್ತವೆಯೇ ಹೊರತು ಪ್ರಜೆಗಳ ಸ್ಮಾರಕಗಳಲ್ಲ. ಪ್ರಜೆಗಳ ಸ್ಮಾರಕಗಳಲ್ಲಿ ಮುಖ್ಯವಾದವುಗಳೆಂದರೆ ಗ್ರಾಮದೇವತೆಗಳ ಗುಡಿಗಳು, ವೀರಗಲ್ಲುಗಳನ್ನು, ಮಾಸ್ತಿಕಲ್ಲುಗಳು, ಬಲಿದಾನ ಕಲ್ಲುಗಳು, ಜನಪದರ ಮನೆಗಳು ಮುಂತಾದವು. ಇವುಗಳನ್ನು ಜನತೆಯ ಸ್ಮಾರಕಗಳು ಅಥವಾ ಜನಪದ ಸ್ಮಾರಕಗಳು ಎಂಬ ಹೆಸರಿನಿಂದಲೂ ಕರೆಯಬಹುದಾಗಿದೆ.

ಅಧ್ಯಯನದ ಈ ಅವಧಿಯಲ್ಲಿ ಗ್ರಾಮದೇವತೆಗಳ ಗುಡಿಗಳ ರಚನೆ ಯಾವ ರೀತಿ ಇತ್ತು ಎನ್ನುವುದನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಾಗುವುದಿಲ್ಲ. ಎಲ್ಲಮ್ಮ, ಬಾದುಬ್ಬೆ, ಮೈಲಾರ-ಮಾಳಚಿ ಮುಂತಾದ ದೇವತೆಗಳ ಆರಾಧನೆ ಇತ್ತು ಎನ್ನುವುದಕ್ಕೆ ಶಾಸನ ಮತ್ತು ಸಾಹಿತ್ಯಾಧಾರಗಳು ಇವೆ.[29] ಗ್ರಾಮದೇವತೆಗಳು ಶಿಷ್ಟ ದೇವತೆಗಳಾಗಿ ಪರಿವರ್ತನೆಗೊಂಡ ಬಳಿಕ ಅವು ಬೃಹತ್ ದೇವಾಲಯಗಳ ಮೂಲಕವೇ ಗುರುತಿಸಿಕೊಳ್ಳಲಾರಂಭಿಸಿದವು. ಆದರೆ ಮೂಲತಃ ಗ್ರಾಮದೇವತೆಗಳು ಯಾವ ರೀತಿ ಆರಾಧನೆಗೊಳ್ಳುತ್ತಿದ್ದವು ಹಾಗೂ ಅವುಗಳ ಗುಡಿಗಳು ಯಾವ ರೀತಿ ನಿರ್ಮಾಣಗೊಳ್ಳುತ್ತಿದ್ದವು ಎನ್ನುವುದು ಇಲ್ಲಿ ಪ್ರಾಮುಖ್ಯವೆನಿಸುತ್ತದೆ. ಗ್ರಾಮ ದೇವತೆಗಳ ಗುಡಿಗಳು ನಂತರದ ಕಟ್ಟಡಗಳ ನಿರ್ಮಾಣಕ್ಕೆ ಮಾದರಿಯಾದವು ಎನ್ನುವ ಅಭಿಪ್ರಾಯವೂ ಇದೆ.[30] ಇದು ಶಿಷ್ಟದೇವತೆಗಳ ಮೂಲ ಗ್ರಾಮದೇವತೆಗಳಲ್ಲಿದೆ ಎನ್ನುವ ವಾದಕ್ಕೆ ಧಾರ್ಮಿಕ ಹಿನ್ನೆಲೆಯಂದಷ್ಟೇ ಅರ್ಥೈಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದೊಂದು ಸಾಮಾಜಿಕ ಪರಿವರ್ತನೆಯಾಗಿದ್ದು, ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಗಳಿಂದಲೇ ಅಧ್ಯಯನ ನಡೆಸಬೇಕಾಗುತ್ತದೆ. ಪ್ರಭುತ್ವದ ಸ್ಮಾರಕಗಳ ವಾಸ್ತುಶಿಲ್ಪ ಮತ್ತು ಮೂರ್ತಿಶಿಲ್ಪಗಳನ್ನು ಮಾದರಿಯನ್ನಾಗಿಟ್ಟುಕೊಂಡು ಗ್ರಾಮದೇವತೆಗಳ ಗುಡಿಗಳ ರಚನಾಶೈಲಿಯನ್ನು ನೊಡುವುದು ತಪ್ಪು ವಿಧಾನ. ಈ ವಿಧಾನವು ರಾಜನ ಸಂಸ್ಕೃತಿಯೇ ರಾಜ್ಯದ ಸಂಸ್ಕೃತಿ ಎನ್ನುವ ಅರಸಕೇಂದ್ರಿತ ಸಿದ್ಧಾಂತವನ್ನು ಇನ್ನಷ್ಟು ಗಟ್ಟಿಗೊಳಿಸುವ ಸಾಧ್ಯತೆಯೇ ಹೆಚ್ಚು.

ಗ್ರಾಮದೇವತೆಗಳ ಬಗ್ಗೆ ನಡೆದಿರುವ ಅಧ್ಯಯನಗಳನ್ನು ಆಧಾರವನ್ನಾಗಿಟ್ಟುಕೊಂಡು, ಗ್ರಾಮದೇವತೆಗಳ ಗುಡಿಗಳ ರಚನೆಯ ಕುರಿತು ಕೆಲವೊಂದು ಮಾಹಿತಿಗಳನ್ನು ನೀಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.[31] ಗ್ರಾಮದೇವತೆಯ ಗುಡಿಯು ಆಯಾ ಗ್ರಾಮಸ್ಥರ ಆರ್ಥಿಕ ಮಟ್ಟಕ್ಕೆ ಸರಿಹೊಂದುವ ರೀತಿಯಲ್ಲಿ ನಿರ್ಮಾಣಗೊಳ್ಳುತ್ತಿತ್ತು. ಗುಡಿಗಳು ಭದ್ರವಾಗಿರಲು ಕೆಲವು ಗ್ರಾಮದೇವತೆಗಳ ಗುಡಿಗಳಲ್ಲಿ ಮೊದಲು ಕಟ್ಟೆ ಕಟ್ಟಿ ಅದರ ಮೇಲೆ ಗುಡಿಯನ್ನು ನಿರ್ಮಿಸಲಾಗುತ್ತಿತ್ತು. ಕಟ್ಟೆ ಇಲ್ಲದ ಗುಡಿಗಳು ಮನೆಕಟ್ಟುವಂತೆ ನೆಲದಾಳದಲ್ಲಿ ಪಾಯ ಹಾಕಿ ಸಮಪಾತಳಿ ಭೂಮಿಯ ಮೇಲೆ ರಚನೆಗೊಳ್ಳುತ್ತಿದ್ದವು. ಹೆಚ್ಚಾಗಿ ಗ್ರಾಮ ದೇವತೆಗಳ ಗುಡಿಗಳು ಚಚ್ಚೌಕಾಕಾರವಾಗಿರುತ್ತಿದ್ದವು. ಆದರೆ ಇದು ಎಲ್ಲ ಪ್ರದೇಶಗಳಿಗೂ ಅನ್ವಯಿಸುವುದಿಲ್ಲ. ಏಕೆಂದರೆ ಗುಡಿಗಳ ರಚನಾ ಶೈಲಿ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತಿತ್ತು. ಗ್ರಾಮದೇವತೆಗಳ ಗುಡಿಗಳ ಬಾಗಿಲುಗಳು ಕಿರಿದಾಗಿರುತ್ತಿದ್ದವು. ಎಲ್ಲಮ್ಮ, ದ್ಯಾವಮ್ಮ, ಮರಗಮ್ಮ ಮುಂತಾದ ದೇವತೆಗಳ ಪ್ರಾಚೀನ ಗುಡಿಗಳ ದ್ವಾರಗಳು ಕಿರಿದಾಗಿರುತ್ತಿದ್ದವು. ದೇವತೆಯ ದರ್ಶನ ಪಡೆಯಲು ಬರುವವರು ತಲೆಬಾಗಿ ಭಯಭಕ್ತಿಯಿಂದ ಗುಡಿಯನ್ನು ಪ್ರವೇಶಿಸಬೇಕು ಎನ್ನುವುದು ಜನಪದರು ನೀಡುವ ವ್ಯಾಖ್ಯಾನ, ಗ್ರಾಮದೇವತೆಗಳ ಗುಡಿಗಳಿಗೆ ಕಳಸವಾಗಲಿ, ಶಿಖರವಾಗಲಿ ಇರಲಿಲ್ಲ. ಇವಿ ಶಿಷ್ಟ ದೇವತೆಗಳ ದೇವಾಲಯಗಳಿಗಷ್ಟೇ ಸೀಮಿತವಾಗಿತ್ತು. ಆದರೆ ಕ್ರಮೇಣ ಜನಪದ ದೇವತೆಗಳು ವೈದಿಕ ದೇವತೆಗಳಾಗಿ ಪರಿವರ್ತನೆಗೊಂಡಾಗ ಇಲ್ಲವೆ ಎರಡೂ ಆಚರಣೆಗಳು ಸೇರಿ ಸಂಮಿಶ್ರ ಸಂಪ್ರದಾಯವೊಂದು ಹುಟ್ಟಿಕೊಂಡಾಗ ಗ್ರಾಮದೇವತೆಗಳ ಗುಡಿಗಳಲ್ಲೂ ಕಳಸ, ಶಿಖರಗಳು ಕಾಣಿಸಿಕೊಳ್ಳಲಾರಂಭಿಸಿದವು. ಗ್ರಾಮ ದೇವತೆಗಳ ಗುಡಿಗಳನ್ನು ಹೆಚ್ಚಾಗಿ ಶ್ರಮದಾನದಿಂದಲೇ ಕಟ್ಟಲಾಗುತ್ತಿತ್ತು ಎಂಬುದಾಗಿ ತಿಳಿದು ಬರುತ್ತದೆ. ಆಳುವ ವರ್ಗದ ಆಶ್ರಯ ಇಲ್ಲವೆ ಪೋಷಣೆ ಸಿಗದಾಗ ಶ್ರಮದಾನದಿಂದಲೇ ಗುಡಿಗಳನ್ನು ನಿರ್ಮಿಸುವುದು ಅನಿವಾರ್ಯವಾಗುತ್ತಿತ್ತು. ರಾಜಪ್ರಭುತ್ವದ ಆಶ್ರಯ ಸಿಗದಿದ್ದರೂ ಧಾರ್ಮಿಕ ಪ್ರಭುತ್ವವು ತನ್ನ ನಂಬಿಕೆ, ಆಚರಣೆಗಳೊಂದಿಗೆ ನೇರ ಪ್ರವೇಶ ಪಡೆಯುತ್ತಿತ್ತು. ಗ್ರಾಮದೇವತೆಗಳ ಗುಡಿಗಳನ್ನು ಹಾಗೂ ಮೂರ್ತಿಗಳನ್ನು ಕಟ್ಟಿಗೆಗಳಿಂದ, ಕಲ್ಲುಗಳಿಂದ ಹಾಗೂ ಮಣ್ಣಿನಿಂದ ರಚಿಸಲಾಗುತ್ತಿತ್ತು. ಕಟ್ಟಿಗೆಗಳಿಂದ ಮತ್ತು ಮಣ್ಣಿನಿಂದ ತಯಾರಿಸಿದ ಗುಡಿಗಳು ಹಾಗೂ ಮೂರ್ತಿಗಳು ಬಹುಕಾಲದವರೆಗೆ ಉಳಿಯುವುದು ಕಷ್ಟಸಾಧ್ಯ. ಈ ಕಾರಣದಿಂದಾಗಿ ಹಲವಾರು ಗ್ರಾಮದೇವತೆಗಳ ಗುಡಿಗಳ ನಾಶವಾಗಿರಬೇಕು. ಗ್ರಾಮದೇವತೆಗಳ ಮುಖವಾಡಗಳು, ಉಡುಪು, ಆಯುಧ, ಆಭರಣಗಳು ಮುಂತಾದವುಗಳನ್ನು ಕುಶಲಕರ್ಮಿಗಳು ತಯಾರಿಸುತ್ತಿದ್ದರು.

ಪ್ರಜೆಗಳ ಸ್ಮಾರಕಗಳಲ್ಲಿ ಮರಣ ಸ್ಮಾರಕಗಳು ಬಹುಮುಖ್ಯವಾದವು. ಇವು ಗಂಡನಿಗಾಗಿ, ಅರಸನಿಗಾಗಿ, ಭೂಮಿಗಾಗಿ, ಬಂಧುಗಳಿಗಾಗಿ, ಧರ್ಮಕ್ಕಾಗಿ ಅಥವಾ ಮೋಕ್ಷಪ್ರಾಪ್ತಿಗಾಗಿ ಮರಣವನ್ನಪ್ಪಿದವರ ನೆನಪಿಗಾಗಿ ನಿಲ್ಲಿಸಿದ ಸ್ಮಾರಕಗಳು, ಬಹುಪಾಲು ಸ್ಮಾರಕಗಳು ಕಲ್ಲುಗಳೇ ಆಗಿರುವುದನ್ನು ಗಮನಿಸಬಹುದು. ಈ ಸ್ಮಾರಕಗಳನ್ನು ಮಾಸ್ತಿಕಲ್ಲು, ವೀರಗಲ್ಲು, ಬಲಿದಾನ ಕಲ್ಲು, ನಿಷಿಧಿಗಲ್ಲು ಎಂಬ ಹೆಸರುಗಳಿಂದ ಕರೆಯಲಾಗಿದೆ.[32] ಶಿಲೆಗಳು ವಿಶೇಷ ಮಹತ್ವವನ್ನು ಪದೆದುಕೊಂಡಿರುವುದನ್ನು ಹಾಗೂ ಆರಾಧನೆಗೊಳ್ಳುತ್ತಿರುವುದನ್ನು ಆರ್.ಶೇಷಶಾಸ್ತ್ರಿ ಅವರ ಮಾತಿನಲ್ಲಿಯೇ ಹೇಳುವುದಾದರೆ, “ಭಾರತದ ಪ್ರತಿಯೊಂದು ಹಳ್ಳಿಗಳಲ್ಲಿಯೂ ಪೂಜೆಗೊಳಗಾದ ಒಂದಲ್ಲ ಒಂದು ಕಲ್ಲು ಇದ್ದೇ ಇರುತ್ತದೆ. ಆ ಕಲ್ಲನ್ನು ಆರಾಧಿಸುವ ಜನ ಅದಕ್ಕೆ ಯಾವ ಐತಿಹ್ಯಕ್ಕೆ ಕಲ್ಲು ಒಂದು ಸಂಕೇತ ಮಾತ್ರ. ಈ ತೆರನ ಸಂಕೇತಗಳು ದೇವತೆಗಳ, ಗ್ರಾಮದೇವತೆಗಳ, ಕ್ಷೇತ್ರಪಾಲಕರ ಪೂರ್ವಜರ ಅಥವಾ ಕಾಲಗರ್ಭದಲ್ಲಿ ಅಡಗಿ ಹೋದ ಅನ್ಯಾಯದ ಮೂಕ ಸಾಕ್ಷಿಯೂ ಆಗಿರಬಹುದು”.[33] ಸ್ಮಾರಕ ಶಿಲೆಗಳನ್ನು ನೆಡುವ ಪದ್ಧತಿ ಕ್ರಮೇಣ ಜನರ ನಂಬಿಕೆ, ಧರ್ಮ ಮತ್ತು ಸನ್ನಿವೇಶಗಳೊಂದಿಗೆ ಬೆಳೆದು ಬಂತು. ಜನ ಸಾಮಾನ್ಯರ ಜೀವನವನ್ನು ತಮ್ಮ ಪಾಠ ಮತ್ತು ಶಿಲ್ಪದ ಮೂಲಕ ವ್ಯಕ್ತಮಾಡುವ ಮರಣ ಸ್ಮಾರಕಗಳು ಅಥವಾ ಮರಣ ಕಲ್ಲುಗಳು ಚರಿತ್ರೆ ನಿರ್ಮಾಣ ಕಾರ್ಯದಲ್ಲಿ ಬಹುಮುಖ್ಯವಾದ ದಾಖಲೆಗಳಾಗಿವೆ. ಈ ಮರಣಸ್ಮಾರಕಗಳನ್ನು ಬಲಿದಾನದ, ದೇಶಪ್ರೇಮದ, ಗಂಡನ ಮೇಲಿನ ಹೆಂಡತಿಯ ಪ್ರೀತಿಯ, ಮೋಕ್ಷಪ್ರಾಪ್ತಿಯ ಹಿನ್ನೆಲೆಯಿಂದಷ್ಟೇ ಅಧ್ಯಯನ ನಡೆಸಿರುವುದು ತಿಳಿದುಬರುತ್ತದೆ. ಇದು ಮರಣಸ್ಮಾರಕಗಳ ಒಂದು ಮುಖ ಮಾತ್ರ. ಅವುಗಳ ಇನ್ನೊಂದು ಮುಖ ಒತ್ತಡ-ಒತ್ತಾಯಗಳ, ನೋವಿನ, ಶೋಷಣೆಯ ಹಾಗೂ ಲೌಕಿಕ-ಅಲೌಕಿಕ ಜಗತ್ತಿನ ಆಮಿಷ ಒಡ್ಡುವ ರೀತಿಯದ್ದು.

ಸಲ್ಲೇಖನ ವ್ರತ ಹಿದಿದು ಮರಣ ಹೊಂದಿದ ಜೈನರ ಹೆಸರಿನಲ್ಲಿ ನಿಲ್ಲಿಸುವ ಸ್ಮಾರಕಗಳನ್ನು ನಿಷಿಧಿ ಶಿಲೆ ಅಥವಾ ನಿಷಿಧಿಗಲ್ಲು ಎಂದು ಕರೆಯಲಾಗಿದೆ. ಸಮಾಧಿ ಮರಣ ಜೈನರಲ್ಲಿ ಪವಿತ್ರಕಾರ್ಯವಾಗಿತ್ತು. ನಿಷಿಧಿಗಲ್ಲುಗಳಿಗೆ ಪೂಜೆ ಸಲ್ಲಿಸುವುದು ಸರ್ವೇಸಾಮಾನ್ಯವಾಗಿತ್ತು ಹಾಗೂ ಅವುಗಳಿಗೆ ದಾನವನ್ನೂ ನೀಡಲಾಗುತ್ತಿತ್ತು.[34] ನಿಷಿಧಿಶಿಲೆಗಳನ್ನು ಚಿತ್ರವುಳ್ಳವು, ಬರವಣಿಗೆಯುಳ್ಳವು, ಚಿತ್ರ ಮತ್ತು ಬರವಣಿಗೆಯುಳ್ಳವು ಎಂದು ವರ್ಗೀಕರಿಸಲಾಗಿದೆ.[35] ನಿಷಿಧಿಶಿಲೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಶಿಲ್ಪವೆಂದರೆ ಬೋಧಿಸುವ ಗುರು, ಆಲಿಸುವ ಶಿಷ್ಯ ಹಾಗೂ ಇಬ್ಬರ ಮಧ್ಯ ಪುಸ್ತಕ ಹೊತ್ತ ವ್ಯಾಸಪೀಠ.[36] ಇತರ ಮರಣಸ್ಮಾರಕಗಳಿಗೆ ಹೋಲಿಸಿಕೊಂಡರೆ ನಿಷಿಧಿಶಿಲೆಗಳ ಪರಿಸ್ಥಿತಿ ಉತ್ತಮವಾಗಿಯೇ ಇದೆ. ಪತಿಗಾಗಿ ಮಾಡಿದ ಸತಿಯ ಸ್ಮಾರಕವನ್ನು ಮಾಸ್ತಿಕಲ್ಲು ಎಂದು ಹೆಸರಿಸಲಾಗಿದೆ. ಮಹಾಸತಿ ಸ್ಮಾರಕಗಳು ಶಿಲೆ, ಶಿಲ್ಪ, ಬರಹ, ಶಿಲ್ಪ-ಬರಹ, ಗುಡಿ, ಊರು ಹಾಗೂ ಅವಶೇಷ ಎನ್ನುವ ಏಳು ವಿಧಗಳಲ್ಲಿ ಸಿಗುತ್ತವೆ ಎನ್ನುವುದು ಎಂ.ಎಂ. ಕಲಬುರ್ಗಿ ಅವರ ಅಭಿಪ್ರಾಯ.[37] ಪುರುಷಪ್ರಧಾನ ಸಮಾಜದ ಶೋಷಣೆ, ದಬ್ಬಾಳಿಕೆ ನಿಯಮಗಳಿಗೆ ಬಲಿಯಾದ ಮಹಿಳೆಯ ಈ ರೀತಿಯ ಸ್ಮಾರಕಗಳು ಎಲ್ಲೆಂದರಲ್ಲಿ ಕಂಡುಬರುತ್ತವೆ. ಸಾಮಾನ್ಯವಾಗಿ ಇವು ಬಯಲುಗಳಲ್ಲಿ ಅಥವಾ ಮರಗಿಡಗಳ ಆಶ್ರಯದಲ್ಲಿ ಕಂಡುಬರುತ್ತವೆ. ಇವು ಶೋಷಿತ ವರ್ಗದ ಸ್ಮಾರಕಗಳು ಎನ್ನುವುದಕ್ಕೆ ಅವುಗಳು ಇಂದು ಇರುವ ಸ್ಥಿತಿಯೇ ಸಾಕ್ಷಿಯಾಗಿದೆ. ಆದರೆ ಕೆಲವು ಮಾಸ್ತಿಕಲ್ಲುಗಳು ಗ್ರಾಮದೇವತೆಗಳಾಗಿ ಪೂಜೆ ಸ್ವೀಕರಿಸುತ್ತಿವೆ. ಅವುಗಳಿಗೆ ಗುಡಿಗಳು ನಿರ್ಮಾಣಗೊಂಡಿರುವುದನ್ನು ಕಾಣಬಹುದಾಗಿದೆ. ಮಾಸ್ತಿ ಗುಡಿಗಳು ಭವ್ಯ ದೇವಾಲಯಗಳಂತಿರದೆ ಚಿಕ್ಕ ಗುಡಿಗಳಾಗಿವೆ. ಮಾಸ್ತಿ ಶಿಲ್ಪಗಳು ಸಾಧಾರಣಮಟ್ಟದ್ದಾಗಿ ಕಂಡುಬರುತ್ತವೆ. ಮಾಸ್ತಿಕಲ್ಲುಗಳ ನಿರ್ಮಾಣದಲ್ಲೂ ತಾರತಮ್ಯಗಳಿರುತ್ತಿದ್ದವು. ಅಧಿಕಾರಿ ವರ್ಗದ ಇಲ್ಲವೆ ಶ್ರೀಮಂತವರ್ಗದ ಮಹಿಳೆಯರ ಮಾಸ್ತಿಕಲ್ಲುಗಳು ಶ್ರೀಮಂತಿಕೆಯಿಂದ ಕೂಡಿದ್ದರೆ ಸಾಮಾನ್ಯ ಸ್ತ್ರೀಯರ ಮಾಸ್ತಿಕಲ್ಲುಗಳು ಸಾಮಾನ್ಯವಾಗಿಯೇ ಇರುತ್ತಿದ್ದವು.

ಅರಸನಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಗರುಡರು, ಲೆಂಕರು, ಲಿಂಕಿಯರು ಮುಂತಾದವರ ಸ್ಮಾರಕಗಳನ್ನು ಬಲಿದಾನ ಕಲ್ಲುಗಳೆಂದು ಕರೆಯಲಾಗಿದೆ. ಇವರು ತಮಗೆ ಆಶ್ರಯ ನೀಡಿದ ಅರಸರು, ವ್ಯಕ್ತಿಗಳು ಯಾವುದೇ ಕಾರಣಕ್ಕಾಗಿ ಸತ್ತರೂ, ಅವರೊಂದಿಗೇ ಸಾಯುತ್ತಿದ್ದರು. ಯುದ್ಧದಲ್ಲಿ ಮಡಿದವರ ಹೆಸರಿನಲ್ಲಿ ವೀರಗಲ್ಲುಗಳನ್ನು ನೆಡಲಾಗುತ್ತಿತ್ತು. ಯುದ್ಧದಲ್ಲಿ ಮಡಿದ ವ್ಯಕ್ತಿಗಳಿಗೆ ಮೂರು ರೀತಿಯ ಸ್ಮಾರಕಗಳನ್ನು ನಿಲ್ಲಿಸಲಾಗುತ್ತಿತ್ತು. ಅವುಗಳೆಂದರೆ ಗುಂಡುಕಲ್ಲುಗಳು, ವೀರಗಲ್ಲುಗಳು ಹಾಗೂ ದೇವಾಲಯಗಳು.[38] ಇವುಗಳಲ್ಲಿ ವೀರಗಲ್ಲುಗಳ ಸಂಖ್ಯೆಯೇ ಹೆಚ್ಚು. ವೀರಗಲ್ಲುಗಳಲ್ಲೂ ಅನೇಕ ಬಗೆಗಳಿರುವುದು ಕಂಡುಬರುತ್ತದೆ. ಶಾಸನಗಳುಳ್ಳ, ವಿಗ್ರಹಗಳುಳ್ಳ ಹಾಗೂ ಇವೆರಡೂ ಇರುವ ವೀರಗಲ್ಲುಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಗುತ್ತವೆ. ವೀರಗಲ್ಲುಗಳನ್ನು ಮಾಡಿದ ಶಿಲ್ಪಗಳ ಹೆಸರುಗಳು ಕೆಲವು ಶಾಸನಗಳಲ್ಲಿ ಸಿಗುತ್ತವೆ.[39] ಈ ಶಿಲ್ಪಿಗಳಿಗೆ ಭೂಮಿಯನ್ನು ದಾನವಾಗಿ ನೀಡಲಾಗುತ್ತಿತ್ತು.[40] ಶಿಲ್ಪಿಗಳು ವೀರಗಲ್ಲುಗಳ ಶಿಲ್ಪವಿನ್ಯಾಸದ ಕ್ರಮವನ್ನು ಮೂರು ಹಂತದಲ್ಲಿ ವಿಂಗಡಿಸಿಕೊಂಡಿದ್ದರು. ಆ ಮೂರು ಹಂತಗಳೆಂದರೆ ವೀರನ ಹೋರಾಟ, ಹೋರಾಟದಲ್ಲಿ ಮಡಿದ ವೀರನನ್ನು ಅಪ್ಸರೆಯರು ಸ್ವರ್ಗಕ್ಕೆ ಕೊಂಡೊಯುತ್ತಿರುವುದು ಹಾಗೂ ವೀರನು ಸ್ವರ್ಗದಲ್ಲಿರುವುದು[41] ಇದು ಸ್ವರ್ಗದ ಕಲ್ಪನೆ ಎಷ್ಟು ಬಲವಾಗಿತ್ತೆಂಬುದನ್ನು ಸೂಚಿಸುತ್ತದೆ. ಶ್ರೀಮಂತವರ್ಗದವರ ಅಥವಾ ರಾಜಕೀಯ ದೃಷ್ಟಿಯಿಂದ ಪ್ರತಿಷ್ಟಿತರಾದ ವೀರರ ವೀರಗಲ್ಲುಗಳು ಇತರರಿಗಿಂತ ಭಿನ್ನವಾಗಿರುತ್ತಿದ್ದವು. ಅವು ಹೆಚ್ಚಿನ ಶಿಲ್ಪದ ವಿವರಗಳನ್ನು ಹೊಂದಿರುತ್ತಿದ್ದವು.

ಯುದ್ಧದಲ್ಲಿ ಮಡಿದವರಿಗೆ ಗುಡಿಗಳನ್ನು ನಿರ್ಮಿಸಲಾಗುತ್ತಿತ್ತು. ಇವುಗಳನ್ನು ವೀರರ ಗುಡಿಗಳು ಎಂದೇ ಹೆಸರಿಸಲಾಗಿದೆ. ಗುಡಿಗಳು ಸರಳವಾಗಿ ನಿರ್ಮಾಣಗೊಳ್ಳುತ್ತಿದ್ದವು. ಇವು ವೈದಿಕ ದೇವರುಗಳು ದೇವಾಲಯಗಳ ಹಾಗೆ ಕಟ್ಟಡಗಳನ್ನು ಹೊಂದುತ್ತಿರಲಿಲ್ಲ. ಮೂರು ಚಪ್ಪಡಿಗಳಿಂದ ನಿರ್ಮಿಸಿದ, ಅಂತಹುದೇ ಮತ್ತೊಂದು ಚಪ್ಪಡಿಯ ಮೇಲೆ ವೀರನ ಶಿಲ್ಪವನ್ನು ಬಿಡಿಸಿರುವ ಒಂದು ಸಣ್ಣ ಹಾಗೂ ಸರಳವಾದ ಕಟ್ಟಡಗಳನ್ನು ವೀರರ ಗುಡಿ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು.[42] ವೀರಗಾರರ ಗುಡಿಗಳನ್ನು ಪೂಜಿಸುವ ಸಂಪ್ರದಾಯವೂ ಬೆಳೆಯಿತು. ಏಕೆಂದರೆ ಯುದ್ಧದಲ್ಲಿ ಸತ್ತವರನ್ನು ದೈವತ್ವಕ್ಕೇರಿಸಲಾಗುತ್ತಿತ್ತು. ಸಾಮಾನ್ಯವಾಗಿ ಇಂಥ ಗುಡಿಗಳು ಊರಿನ ಹೊರಭಾಗಗಳಲ್ಲಿಯೇ ಕಂಡುಬರುತ್ತವೆ.[43] ವೀರಗಲ್ಲುಗಳನ್ನು ನೆಡುವಾಗಲೇ ಗುಡಿಗಳನ್ನು ನಿರ್ಮಿಸುತ್ತಿದ್ದರು ಎನ್ನುವುದಕ್ಕೆ ಆಧಾರಗಳು ಸಿಗುವುದಿಲ್ಲ. ಗುಡಿಗಳು ದೇವಾಲಯಗಳಂತೆ ಇಲ್ಲದಿದ್ದರೂ ಆಯಾ ಕಾಲದಲ್ಲಿ ಪ್ರಬಲವಾಗಿದ್ದ ಧರ್ಮದಿಂದ ಪ್ರಭಾವಿತವಾಗುತ್ತಿದ್ದವು ಎನ್ನುವುದು ಅವುಗಳ ರಚನೆಯಿಂದ ತಿಳಿದುಬರುತ್ತದೆ. ಅದೇ ರೀತಿ ವೀರಗಲ್ಲುಗಳ ಶಿಲ್ಪದ ಮೇಲೆ ಶೈವ, ವೈಷ್ಣವ ಮತ್ತು ಜೈನಧರ್ಮಗಳು ಪ್ರಭಾವ ಬೀರಿರುವುದನ್ನು ಗಮನಿಸಬಹುದಾಗಿದೆ.[44] ಇದು ಚರಿತ್ರೆಯಲ್ಲಿ ನಿರಂತರವಾಗಿ ಕಂಡುಬರುವ ಒಂದು ಪ್ರಕ್ರಿಯೆ. ಇದಕ್ಕೆ ವೀರಗಲ್ಲುಗಳು ಹೊರತಾಗಿರಲು ಸಾಧ್ಯವಿಲ್ಲ. ಮರಣಸ್ಮಾರಕಗಳು ಚರಿತ್ರೆ ನಿರ್ಮಾಣಕ್ಕೆ ಅವಶ್ಯಕವಾದ ದಾಖಲೆಗಳನ್ನು ಒದಗಿಸಿಕೊಡುವುದರಿಂದಾಗಿ ಅವುಗಳನ್ನು ಸ್ವತಂತ್ರವಾಗಿ ಅಧ್ಯಯನ ನಡೆಸಬೇಕಾಗುತ್ತದೆ. ಪ್ರಜೆಗಳ ಸ್ಮಾರಕಗಳ ಕುರಿತಾದ ಚದುರಿ ಹೋಗಿರುವ ಮಾಹಿತಿಗಳನ್ನು ಒಂದು ಕಡೆ ಸೇರಿಸಿದಾಗ ಮಾತ್ರ ಅದು ಸ್ವತಂತ್ರ ಅಧ್ಯಯನವಾಗಲು ಸಾಧ್ಯ.

 

[1] ರಾಷ್ಟ್ರಕೂಟರಿಂದ ಹೊಯ್ಸಳರ ಅವನತಿಯವರೆಗಿನ ಅವಧಿಯಲ್ಲಿ ನಿರ್ಮಾಣಗೊಂಡ ಸ್ಮಾರಕಗಳ ಕುರಿತು ಅನೇಕ ಅಧ್ಯಯನಗಳು ನಡೆದಿವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ: ಸಿಂದಗಿ ರಾಜಶೇಖರ, ಕರ್ನಾಟಕದ ವಾಸ್ತುಶಿಲ್ಪ ಮತ್ತು ಚಿತ್ರಕಲೆ, ಧಾರವಾಡ, ೧೯೮೮; ಎಸ್. ಶ್ರೀಕಂಠಶಾಸ್ತ್ರಿ, ಹೊಯ್ಸಳ ವಾಸ್ತುಶಿಲ್ಪ, ಮೈಸೂರು, ೧೯೬೫; ಶಿವರಾಮ ಕಾರಂತ, ಚಾಲುಕ್ಯ ವಾಸ್ತು ಮತ್ತು ಶಿಲ್ಪ, ಬೆಂಗಳೂರು, ೧೯೬೯; ಎಸ್.ಅನಂತ ರಂಗಾಚಾರ್, ಕರ್ನಾಟಕದ ವಾಸ್ತುಶಿಲ್ಪ, ಮೈಸೂರು, ೧೯೭೨; ಎಸ್. ಶೆಟ್ಟರ್, ಹೊಯ್ಸಳ ಸ್ಟೈಲ್ ಆಫ್ ಟೆಂಪಲ್ ಆರ್ಕಿಟೆಕ್ಚರ್ ಆಂಡ್ ಸ್ಕಲ್‍ಪ್ಚರ್, ಕೇಂಬ್ರಿಡ್ಜ್, ೧೯೭೦; ಎಂ.ಚಿದಾನಂದಮೂರ್ತಿ, ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಮೈಸೂರು, ೧೯೭೯; ಎಂ.ಎಂ. ಕಲಬುರ್ಗಿ, ಸಮಾಧಿ-ಬಲಿದಾನ-ವೀರಮರಣ ಸ್ಮಾರಕಗಳು, ಬೆಂಗಳೂರು, ೧೯೮೦; ಆರ್.ಶೇಷಶಾಸ್ತ್ರಿ, ಕರ್ನಾಟಕದ ವೀರಗಲ್ಲುಗಳು, ಬೆಂಗಳೂರು, ೧೯೮೨; ಕೆ.ವಿ.ಸೌಂದರರಾಜನ್, ಅರ‍್ಲಿ ಟೆಂಪಲ್ ಆರ್ಕಿಟೆ್ಕ್ಚರ್ ಇನ್ ಕರ್ನಾಟಕ, ಧಾರವಾಡ, ೧೯೬೯; ಪರ್ಸಿ ಬ್ರೌನ್, ಇಂಡಿಯನ್ ಆರ್ಕಿಟೆಕ್ಚರ್, ಮುಂಬಯಿ, ೧೯೭೧; ಎಸ್.ಕೆ. ರಾಮಚಂದ್ರರಾವ್, ಭಾರತದ ದೇವಾಲಯ ನೆಲೆ ಹಿನ್ನೆಲೆ, ಬೆಂಗಳೂರು, ೧೯೮೦; ಟಿ.ವಿ. ಮಹಾಲಿಂಗಂ, ಸೌತ್ ಇಂಡಿಯನ್ ಟೆಂಪಲ್ ಕಾಂಪ್ಲೆಕ್ಸ್, ಧಾರವಾಡ, ೧೯೭೦; ಬಿ.ವಿ. ಶಿರೂರ, ಶ್ರವಣಬೆಳಗೊಳ, ಧಾರವಾಡ, ೧೯೭೬; ಎನ್.ಕೆ. ರಾಮಶೇಷನ್, ಕರ್ನಾಟಕದ ಕೋಟೆಕೊತ್ತಲಗಳು, ಬೆಂಗಳೂರು; ಆನಂದ ಕುಮಾರ ಸ್ವಾಮಿ, ಆನ್ ಇಂಟ್ರಡಕ್ಷನ್ ಟು ಇಂಡಿಯನ್ ಆರ್ಟ್, ಮದರಾಸು, ೧೯೨೩; ಆನಂದ ಕುಮಾರಸ್ವಾಮಿ, ದಿ ಟ್ರಾನ್ಸ್‌ಫಾರ್‌ಮೇಶನ್ ಆಫ್ ನೇಚರ್ ಇನ್ ಆರ್ಟ್, ನವದೆಹಲಿ, ೧೯೨೨; ಕೆ. ಪದ್ಮನಾಭ, ಹೊಯ್ಸಳ ಸ್ಕಲ್‌ಪ್ಚರ್ಸ್ ಎ ಕಲ್ಚರಲ್ ಸ್ಟಡಿ, ದೆಹಲಿ, ೧೯೮೯; ಕೂ.ಸ. ಅಪರ್ಣ, ದೇವಾಲಯ ವಾಸ್ತುಶಿಲ್ಪ ಪರಿಚಯ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೯; ಬಿ. ವೆಂಕೋಬರಾವ್, ಮೈಸೂರು ದೇಶದ ವಾಸ್ತು ಶಿಲ್ಪ, ಬೆಂಗಳೂರು, ೧೯೫೯; ಎಂ.ವಿ.ಕೃಷ್ಣರಾವ್ ಮತ್ತು ಎಂ. ಕೇಶವಭಟ್ಟ, ಕರ್ನಾಟಕ ಇತಿಹಾಸ ದರ್ಶನ, ಬೆಂಗಳೂರು, ೧೯೭೦, ಪು. ೧೦೧೭-೧೦೪೦; ಕರ್ನಾಟಕ ಪರಂಪರೆ, ಸಂಪುಟ ೧, ಮೈಸೂರು, ೧೯೭೦, ಪು.೩೧೪-೩೧೮, ೪೫೪-೪೬೫, ೫೬೯-೫೮೪; ಕೆಲ್ಲಿಸನ್ ಕೋಲಿಯರ್, ದಿ ಹೊಯ್ಸಳ ಆರ್ಟಿಸ್ಟ್-ದೇಯರ್ ಐಡೆಂಟಿಟಿ ಆಂಡ್ ಸ್ಟೈಲ್, ಮೈಸೂರು, ೧೯೯೦.

[2] ಬಿ.ಆರ್. ಗೋಪಾಲ್, ಕರ್ನಾಟಕದ ಇತಿಹಾಸ, ಮೈಸೂರು, ೧೯೮೬, ಪು.೨೧೬

[3] ಸಿಂದಗಿ ರಾಜಶೇಖರ, ಕಲೆ ಮತ್ತು ವಾಸ್ತುಶಿಲ್ಪ, ಕರ್ನಾಟಕ ಚರಿತ್ರೆ, ಸಂಪುಟ ೨, (ಸಂ.)ಬಿ. ಸುರೇಂದ್ರರಾವ್, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೭, ಪು.೨೫೨

[4] ಬಿ.ಆರ್. ಗೋಪಾಲ್, ಪೂರ್ವೋಕ್ತ, ಪು.೨೧೬; ಸಿಂದಗಿ ರಾಜಶೇಖರ, ಪೂರ್ವೋಕ್ತ, ಪು. ೨೫೭

[5] ಎಚ್. ತಿಪ್ಪೇರುದ್ರಸ್ವಾಮಿ, ಕರ್ನಾಟಕ ಸಂಸ್ಕೃತಿ ಸಮೀಕ್ಷೆ, ಮೈಸೂರು, ೧೯೬೮, ಪು. ೬೨೪

[6] ಅದೇ.

[7] ಎಂ. ಚಿದಾನಂದಮೂರ್ತಿ, ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಮೈಸೂರು, ೧೯೭೯, ಪು.೧೭೪

[8] ಕ.ಇ.೧, ೨೫, ಕ್ರಿ.ಶ. ೧೧೮೬

[9] ಸ್ಮಾರಕಗಳನ್ನು ಕಟ್ಟಿದ ಕುಶಲಕಾರ್ಮಿಕರ ಕುರಿತು ಮಾಹಿತಿಯನ್ನು ನೀಡುವ ಕೆಲವು ಗ್ರಂಥಗಳನ್ನು ಇಲ್ಲಿ ಹೆಸರಿಸಲಾಗಿದೆ. ಆರ್.ಎನ್.ಮಿಶ್ರ, ಏನ್‍ಷಿಯಂಟ್ ಆರ್ಟಿಸ್ಟ್ ಆಂಡ್ ಆರ್ಟ್ ಆಕ್ಟಿವಿಟಿ, ಸಿಮ್ಲಾ, ೧೯೭೫; ಟಿ.ಎ. ಗೋಪಿನಾಥರಾವ್, ಎಲಿಮೆಂಟ್ಸ್ ಆಫ್ ಹಿಂದು ಐಕನೋಗ್ರಫಿ, ಮದರಾಸು, ೧೯೧೪; ಕೆಲ್ಲಿಸಲ್ ಕೋಲಿಯರ್, ದಿ ಹೊಯ್ಸಳ ಆರ್ಟಿಸ್ಟ್: ದೇಯರ್ ಐಡೆಂಟಿಟಿ ಆಂಡ್ ಸ್ಟೈಲ್, ಮೈಸೂರು, ೧೯೯೦; ಕೆ.ಸುಂದರಂ ಆರ್ಟಿಸಾನ್ ಕಮ್ಯೂನಿಟಿ ಆಫ್ ಮೆಡೀವಲ್ ಆಂಧ್ರ, ಜರ್ನಲ್ ಆಫ್ ಇಂಡಿಯನ್ ಹಿಸ್ಟರಿ, ಸಂಪುಟ ೪೩, ೧೯೬೫; ಟಿ. ಗಣಪತಿಶಾಸ್ತ್ರ (ಸಂ.), ಶಿಲ್ಪರತ್ನ ತ್ರಿವೇಂಡ್ರಂ. ಸಂಪುಟ ೧, ೧೯೨೨; ಆನಂದ ಕುಮಾರಸ್ವಾಮಿ, ವಿಶ್ವಕರ್ಮ, ಮುಂಬಯಿ, ೧೯೧೪; ಎ,ಎಂ. ಅಣ್ಣಿಗೇರಿ, ಪಟ್ಟದಕಲ್ಲು ಗುಡಿಗಳು, ಧಾರವಾಡ, ೧೯೬೦; ಶಿಲ್ಪಿ (ಸ್ಮರಣ ಸಂಚಿಕೆ), ಮಂಗಳೂರು, ೧೯೭೨; ಕೆ.ಎಸ್. ಕುಮಾರಸ್ವಾಮಿ, ಪ್ರಾಚೀನ ಕರ್ನಾಟಕದಲ್ಲಿ ಶಿಲ್ಪಾಚಾರಿಯರು, ಬೆಂಗಳೂರು, ೧೯೯೬; ಎಂ.ಎಂ. ಕಲಬುರ್ಗಿ, ಶಾಸನ ಮೆಮೊರಿಯಲ್ ಸ್ಟೋನ್ಸ್, ಧಾರವಾಡ, ೧೯೮೨; ಎಂ.ಎಂ. ಕಲಬುರ್ಗಿ, ಶಾಸನ ವ್ಯಾಸಂಗ, ಧಾರವಾಡ, ೧೯೭೪; ಎಸ್. ಗುರುರಾಜಾಚಾರ್, ಸಮ್ ಆಸ್ಪೆಕ್ಟ್ಸ್ ಆಫ್ ಎಕನಾಮಿಕ್ ಆಂಡ್ ಸೋಶ್ಯಲ್ ಲೈಫ್ ಇನ್ ಕರ್ನಾಟಕ, ಮೈಸೂರು, ೧೯೭೪

[10] ಕೆ.ಎಸ್. ಕುಮಾರಸ್ವಾಮಿ, ಪೂರ್ವೋಕ್ತ, ಪು ೧೫೦

[11] ಎ.ಕ.೭, ಶಿಕಾರಿಪುರ ೯೬, ಕ್ರಿ.ಶ.೧೧೭೯

[12] ಎ.ಕ.೧೨, ಶಿರ ೩೮, ಕ್ರಿ.ಶ. ೧೧೨೪

[13] ಸೌ.ಇ.ಇ. ೯-೨, ೧೭೭-೧೦೩, ಕ್ರಿ.ಶ. ೧೧೨೪

[14] ಎ.ಕ.೫, ಅರಸೀಕೆರೆ ೩೪, ಕ್ರಿ.ಶ. ೧೧೨೧

[15] ಬಿ.ಆರ್. ಗೋಪಾಲ್, ವಾಸ್ತು, ಕರ್ನಾಟಕದ ಕಲೆಗಳು, ಪ್ರಧಾನ ಸಂಪಾದಕ; ಎಸ್.ಕೆ. ರಾಮಚಂದ್ರರಾವ್, ಬೆಂಗಳೂರು, ೧೯೮೬

[16] ಬಿ. ಭಟ್ಟಾಚಾರ್ಯ (ಸಂ.), ಸಮರಾಂಗಣ ಸೂತ್ರದಾರ ಸಂಪುಟ ೧, ಬರೋಡ, ೧೯೨೪; ಟಿ. ಗಣಪತಿಶಾಸ್ತ್ರಿ (ಸಂ.), ಸಮರಾಂಗಣ ಸೂತ್ರಧಾರ, ಸಂಪುಟ ೨, ಬರೋಡ, ೧೯೨೫; ಅದೇ, ಶಿಲ್ಪರತ್ನ, ಸಂಪುಟ ೧, ತ್ರಿವೇಂಡ್ರಂ, ೧೯೨೨; ಕೆ. ಸಾಂಬಶಿವಶಾಸ್ತ್ರಿ, ಶಿವರತ್ನ, ಸಂಪುಟ ೨, ಅನಂತಶಯನ, ೧೯೨೯

[17] ಕೆ.ಎಸ್. ಕುಮಾರಸ್ವಾಮಿ, ಪೂರ್ವೋಕ್ತ, ಪು.೧೫೧

[18] ಎ.ಕ.೮, ೧೪೬, ಕ್ರಿ.ಶ. ೧೦೯೪; ಎ.ಕ.೫, ಅರಸಿಕೆರೆ ೧೧೦; ಎ.ಕ.೬, ೬೬, ಕ್ರಿ.ಶ. ೧೧೧೭

[19] ಕೆ.ಎಸ್. ಕುಮಾರಸ್ವಾಮಿ, ಪೂರ್ವೋಕ್ತ, ಪು.೧೫೩

[20] ಎಂ.ಎಂ. ಕಲಬುರ್ಗಿ, ಶಾಸನ ವ್ಯಾಸಂಗ, ಧಾರವಾಡ, ೧೯೭೪, ಪು.೩೩-೩೬

[21] ಶಾಸನಗಳಲ್ಲಿ ಉಲ್ಲೇಖಿತವಾಗಿರುವ ಕೆಲವು ಕುಶಲಕಾರ್ಮಿಕರ ಹೆಸರುಗಳು ಈ ಕೆಳಗಿನಂತಿವೆ; ವಿಕ್ರಮಾದಿತ್ಯ, ಬಿಜ್ಜೋಡಿ ಓವಜ, ನರಸೊಬ್ಬ, ರೇವಡಿ ಈವಜ, ಬಮ್ಮೋಜ, ಕಾಳೋಜ, ಮಾಚೋಜ, ಇಕುಲೋಜ, ಮಲ್ಲೋಜ, ದಾಸೋಜ, ಗಂಗಾಚೂರಿ, ನಾಗೋಜ, ತಿಪ್ಪೋಜ, ಕೇದಾರೋಜ, ಮಾಬ, ಮಲ್ಲಿತಮ್ಮ, ಹೊನೋಜ, ಬೀರೋಜ, ಬೈಚೋಜ, ಮುಂತಾದವರು. ಇವರೆಲ್ಲರ ಕುರಿರ್ತು ಎಂ.ಚಿದಾನಂದಮೂರ್ತಿ, ಎ.ಎಂ. ಅಣ್ಣಿಗೇರಿ, ಬಿ. ವೆಂಕೋಬರಾವ್, ಎಸ್. ಶೆಟ್ಟರ್, ಆರ್, ಶೇಷ ಶಾಸ್ತ್ರಿ, ಎಸ್. ಶ್ರೀಕಂಠಶಾಸ್ತ್ರಿ, ಕೆಲ್ಲಿಸನ್ ಕೋಲಿಯರ್, ಬಿ.ವಿ. ಶಿರೂರ, ಎಂ.ಎಂ. ಕಲಬುರ್ಗಿ. ಕೆ.ಎಸ್.ಕುಮಾರಸ್ವಾಮಿ, ಎಂ.ಎಸ್. ನಾಗರಾಜರಾವ್, ಕೆ.ಎ.ನೀಲಕಂಠಶಾಸ್ತ್ರಿ, ಎಸ್.ಕೆ.ರಾಮಚಂದ್ರರಾವ್, ಹೆಚ್.ಆರ್. ರಘುನಾಥ ಭಟ್, ಬಿ,ಷೇಕ್ ಅಲಿ, ಎನ್. ಅನಂತರಂಗಾಚಾರ್ ಮುಂತಾದ ವಿದ್ವಾಂಸರು ತಮ್ಮ ಕೃತಿಗಳಲ್ಲಿ ಚಎರ್ಚೆ ನಡೆಸಿದ್ದಾರೆ.

[22] ಎಂ.ವೆಂಕೋಬರಾವ್, ಮೈಸೂರು ದೇಶದ ವಾಸ್ತುಶಿಲ್ಪ, ಬೆಂಗಳೂರು, ೧೯೫೯, ಪು. ೧೬೦; ಕೆ.ಎಸ್.ಕುಮಾರಸ್ವಾಮಿ, ಪೂರ್ವೋಕ್ತ, ಪು. ೧೫೫

[23] ಕೆ.ಎಸ್.ಕುಮಾರಸ್ವಾಮಿ, ಪೂರ್ವೋಕ್ತ, ಪು.೧೫೮

[24] ಎ.ಕ.೧೨, ತಿಪಟೂರು ೨, ಕ್ರಿ.ಶ. ೧೨೬೩

[25] ಎ.ಕ.೧೨. ತಿಪಟೂರು ೭೩, ಕ್ರಿ.ಶ. ೧೨೪೮

[26] ಸೌ.ಇ.ಇ. ೧೮, ಪು. ೮೬, ನಂ.೮೮, ಕ್ರಿ.ಶ. ೧೦೮೦; ಕೆ.ಎಸ್. ಕುಮಾರಸ್ವಾಮಿ, ಪೂರ್ವೋಕ್ತ. ಪು.೧೫೯

[27] ಎ.ಕ.೧೨, ತುಮಕೂರು ೨೪; ಎಂ.ಚಿದಾನಂದಮೂರ್ತಿ, ಪೂರ್ವೋಕ್ತ, ಪು. ೩೭೮

[28] ಎಂ.ಎ.ಆರ್.೧೯೧೧, ಪು.೪೭, ಪ್ಯಾರಾ ೧೦೪; ಅದೇ, ೧೯೨೮, ನಂ. ೧೯, ಪು.೩೯

[29] ಗ್ರಾಮದೇವತೆಗಳ ಕುರಿತು ಇದೇ ಅಧ್ಯಯನದ ಏಳನೆಯ ಅಧ್ಯಾಯದಲ್ಲಿ ಚರ್ಚೆ ನಡೆಸಲಾಗಿದೆ.

[30] ಎಚ್.ತಿಪ್ಪೇರುದ್ರಸ್ವಾಮಿ, ಪೂರ್ವೋಕ್ತ, ಪು.೬೨೬-೫೨೭

[31] ಗ್ರಾಮದೇವತೆಗಳ ಕುರಿತಾಗಿ ಅನೇಕ ಅಧ್ಯಯನಗಳು ನಡೆದಿದ್ದರೂ, ಅವುಗಳನ್ನು ಚಾರಿತ್ರಿಕವಾಗಿ ನೋಡಿದ ಅಧ್ಯಯನಗಳ ಸಂಖ್ಯೆ ಕಡಿಮೆ. ಅದರಲ್ಲೀ, ರಾಜಪ್ರಭುತ್ವದ ಸಂದರ್ಭದಲ್ಲಿ ಗ್ರಾಮದೇವತೆಗಳ ಗುಡಿಗಳು ಯಾವ ರೀತಿ ರಚನೆಗೊಳ್ಳುತ್ತಿದ್ದವು ಎನ್ನುವ ವಿವರಣೆಯನ್ನು ನೀಡುವ ಅಧ್ಯಯನ ನಡೆದಿಲ್ಲ ಎಂದೇ ಹೇಳಬೇಕು. ಆಧುನಿಕ ಸಂದರ್ಭದಲ್ಲಿ ಗ್ರಾಮದೇವತೆಗಳ ಗುಡಿಗಳು ಯಾವ ರೀತಿ ರಚನೆಗೊಳುತ್ತಿವೆ ಎನ್ನುವ ವಿವರಣೆಯನ್ನು ನೀಡುವ ನೂರಾರು ಗ್ರಂಥಗಳು ಲಭ್ಯವಿವೆ. ಪ್ರಸ್ತುತ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡಿರುವ ಗ್ರಂಥಗಳನ್ನು ಈ ರೀತಿ ಇವೆ : ಸಿದ್ಧಲಿಂಗಯ್ಯ, ಗ್ರಾಮದೇವತೆಗಳು, ಬೆಂಗಳೂರು, ೧೯೯೭; ಎಸ್.ಕೆ ರಾಮಚಂದ್ರರಾವ್, ಭಾರತೀಯ ದೇವಾಲಯಗಳ ಜಾನಪದ ಮೂಲ, ಬೆಂಗಳೂರು, ೧೯೮೧; ಹೆನ್ರಿ ವೈಟ್‍ಹೆಡ್, ದಿ ವಿಲೇಜ್‍ಗಾಡ್ಸ್ ಆಫ್ ಸೌತ್ ಇಂಡಿಯಾ, ದೆಹಲಿ, ೧೯೨೧; ಚೆನ್ನಣ್ಣ ವಾಲೀಕಾರ, ಹೈದ್ರಾಬಾದ ಕರ್ನಾಟಕದ ಗ್ರಾಮದೇವತೆಗಳ ಜಾನಪದೀಯ ಅಧ್ಯಯನ್, ಗುಲ್ಬರ್ಗಾ, ೧೯೯೮

[32] ಮಾಸ್ತಿಮರಣ, ಬಲಿದಾನಮರಣ, ವೀರಮರಣ ಹಾಗೂ ಸಮಾಧಿಮರಣದ ಕುರಿತು ಅಧ್ಯಾಯ ಆರರಲ್ಲಿ ಚರ್ಚಿಸಲಾಗಿದೆ. ಮರಣ ಸ್ಮಾರಕಗಳ ಕುರಿತು ಅನೇಕ ವಿದ್ವಾಂಸರು ಅಧ್ಯಯನ ನಡೆಸಿದ್ದಾರೆ. ಪ್ರಸ್ತುತ ಅಧ್ಯಯನಕ್ಕೆ ಬಳಸಿಕೊಂಡ ಪ್ರಮುಖ ಗ್ರಂಥಗಳೆಂದರೆ: ಎಂ.ಎಂ. ಕಲಬುರ್ಗಿ, ಸಮಾಧಿ-ಬಲಿದಾನ-ವೀರಮರಣ ಸ್ಮಾರಕಗಳು, ಬೆಂಗಳೂರು, ೧೯೮೦; ಎಂ.ಚಿದಾನಂದಮೂರ್ತಿ, ಪೂರ್ವೋಕ್ತ; ಅದೇ ವಿರಗಲ್ಲುಗಳು ಮತ್ತು ಮಾಸ್ತಿಕಲ್ಲುಗಳು, ಬೆಂಗಳೂರು, ೧೯೭೫; ಬಿ.ಆರ್. ಹಿರೇಮಠ, ವೀರಗಲ್ಲುಗಳು, ಧಾರವಾಡ, ೧೯೭೮; ಆರ್. ಶೇಷಶಾಸ್ತ್ರಿ, ಕರ್ನಾಟಕದ ವೀರಗಲ್ಲುಗಳು, ಬೆಂಗಳೂರು, ೧೯೮೨; ಎಸ್.ಶೆಟ್ಟರ್, (ಸಂ.), ಪೂರ್ವೋಕ್ತ

[33] ಆರ್. ಶೇಷಶಾಸ್ತ್ರಿ, ಪೂರ್ವೋಕ್ತ, ಪು. ೧೩-೧೪

[34] ಎ.ಕ.೮, ಸೊರಬ ೪೭೮, ಕ್ರಿ.ಶ. ೧೧೯೮

[35] ಎಂ.ಎಂ. ಕಲಬುರ್ಗಿ, ಪೂರ್ವೋಕ್ತ, ಪು.೧೫

[36] ಅದೇ.

[37] ಅದೇ, ಪು. ೪೧-೫೦

[38] ಅದೇ, ಪು. ೮೬

[39] ಎ.ಕ.೧೫, ಅರಸೀಕೆರೆ ೨೩೭, ಕ್ರಿ.ಶ. ೯೭೧; ಎ.ಕ. ೭, ಶಿಕಾರಿಪುರ ೩೦೭, ೩೦೮, ಕ್ರಿ.ಶ. ೧೦೧೬; ಎ.ಕ.೭, ಶಿಕಾರಿಪುರ ೬೨, ಕ್ರಿ.ಶ. ೧೦೭೦; ಎ.ಕ.೯, ಹೊಸಕೋಟೆ ೮೭, ಕ್ರಿ.ಶ. ೭೫೦ ಇತ್ಯಾದಿ

[40] ಆರ್. ಶೇಷಶಾಸ್ತ್ರಿ, ಪೂರ್ವೋಕ್ತ, ಪು.೨೭೮

[41] ಅದೇ, ಪು. ೨೮೧

[42] ಅದೇ. ಪು. ೬೩-೬೮

[43] ಎಂ. ಚಿದಾನಂದಮೂರ್ತಿ, ವೀರಗಲ್ಲುಗಳು ಮತ್ತು ಮಾಸ್ತಿಕಲ್ಲುಗಳು, ಬೆಂಗಳೂರು, ೧೯೭೫, ಪು.೨೭

[44] ಆರ್. ಶೇಷಶಾಸ್ತ್ರಿ, ಪೂರ್ವೋಕ್ತ, ಪು. ೨೯೪