ದೇಶದ ಮಹಾನ್‌ ಹಿಂದೂಸ್ಥಾನಿ ಗಾಯಕರಲ್ಲೊಬ್ಬರಾಗಿರುವ ಸೋಲಾಪೂರದ ಪಂ. ಪ್ರಭುದೇವ ಸರ್ದಾರ ಅವರ ಪೂರ್ವಜರು ಕರ್ನಾಟಕದ ಕಿತ್ತೂರಿನವರು. ಇವರ ಪೂರ್ವಜರಾದ ಗುರುಸಿದ್ಧಪ್ಪ ಸರ್ದಾರ ಅವರು ಕಿತ್ತೂರಿನ ಚನ್ನಮ್ಮರಾಣಿಯ ಸೈನ್ಯದ ಮುಖ್ಯಸ್ಥರಾಗಿದ್ದರು. ಪ್ರಭುದೇವರ ತಂದೆ ಮಡಿವಾಳೇಶ್ವರ ಶಿವಶಂಕರ ಅವರು ಬಾರ್-ಎಟ್‌-ಲಾ ಪದವಿ ಪಡೆದು ಸೋಲಾಪುರದಲ್ಲಿ (೧೯೨೪) ವಕೀಲ ವೃತ್ತಿ ಆರಂಭಿಸಿದರು. ಕೆಲವು ವರ್ಷ ಹೈಕೋರ್ಟಿನ ನ್ಯಾಯಾಧೀಶರಾಗಿ ಕೆಲಸ ಮಾಡಿದರು. ಪ್ರಭುದೇವರ ತಾಯಿ ಶ್ರೀಮತಿ ಪಂಚಾಕ್ಷರಿ ಬಾಯಿಯವರು ಸಾಮಾಜಿಕ ಕಾರ್ಯಕರ್ತರು. ತಂದೆ-ತಾಯಿಯವರ ಸಾಮಾಜಿಕ ಸೇವೆ ಪರಿಗಣಿಸಿ ಅಂದಿನ ಸರ್ಕಾರ ಅವರಿಗೆ ‘ಕೈಸರ್-ಏ-ಹಿಂದ್‌’ ಎಂಬ ಬಿರುದು ನೀಡಿತ್ತು.

ಸಮಾಜ ಸೇವೆ ಹಾಗೂ ಕಾನೂನು ಪಂಡಿತರ ಮನೆತನದಲ್ಲಿ ೧೯೨೫ರ ಸೆಪ್ಟೆಂಬರ್ ೪ ರಂದು ಸೋಲಾಪೂರದಲ್ಲಿ ಜನಿಸಿದ ಪ್ರಭುದೇವ ಸರ್ದಾರರಿಗೆ ಶಾಲಾ ಕಾಲೇಜು ದಿನಗಳಲ್ಲಿಯೇ ಸಂಗೀತ ಸೆಳೆಯಿತು. ೧೯೪೮ರಲ್ಲಿ ಬಿ.ಎ. ೧೯೫೦ರಲ್ಲಿ ಕಾನೂನು ಪದವಿ ಪಡೆದು ತಂದೆಯವರ ಮಾರ್ಗದರ್ಶನದಲ್ಲಿ ವಕೀಲ ವೃತ್ತಿಗಾರಂಭಿಸಿದರು. ನಂತರ ಪಬ್ಲಿಕ್‌ ಪ್ರಾಸಿಕ್ಯೂಟರ್ ಆಗಿ ನೇಮಕಗೊಂಡರು. ಕಾನೂನು ಸೇವಾ ವೃತ್ತಿಯೊಂದಿಗೆ ಅವರು ಸಂಗೀತ ಶಿಕ್ಷಣ ಪ್ರಪ್ರಥಮವಾಗಿ ಪಡೆದಿದ್ದು ಸೋಲಾಪೂರದ ಶ್ರೀ ದಿಗಂಬರ ಬುವಾ ಕುಲಕರ್ಣಿಯವರಲ್ಲಿ, ನಂತರ ಆಗ್ರಾ ಘರಾಣೆಯ ಪಂ. ಜಗನ್ನಾಥ ಬುವಾ ಪುರೋಹಿತರಲ್ಲಿ, ಅನಂತರ ಜೈಪುರ ಘರಾಣೆಯ ಖ್ಯಾತ ಗಾಯಕ ಪಂ. ನಿವೃತ್ತಿ ಬುವಾ ಸರನಾಯಕ ಅವರಲ್ಲಿ ಹೀಗೆ ಕಿರಾಣಾ, ಆಗ್ರಾ ಹಾಗೂ ಜೈಪುರ- ಈ ಮೂರು ಘರಾಣೆಯ ಉತ್ತಮಾಂಶಗಳನ್ನು ತಮ್ಮ ಗಾಯನದಲ್ಲಿ ಅಳವಡಿಸಿಕೊಂಡು ಅದಕ್ಕೆ ಸ್ವಂತಿಕೆಯ ಮೆರಗನ್ನು ಲೇಪಿಸಿ ಹಾಡುವ ಪಂ. ಪ್ರಭುದೇವ ಸರ್ದಾರ ಅವರ ಗಾಯನ ಕೇಳುವುದೇ ಒಂದು ಸೊಗಸು.

ಆಕಾಶವಾಣಿಯ ‘ಎ’ ಟಾಪ್‌ ಶ್ರೇಣಿಯ ಗಾಯಕರಾಗಿರುವ ಪ್ರಭುದೇವ ಸರ್ದಾರ ಅವರು ಆಕಾಶವಾಣಿ ಹಾಗೂ ದೂರದರ್ಶನ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ರೇಡಿಯೋ ಸಂಗೀತ ಸಮ್ಮೇಳನದಲ್ಲಿ ಅನೇಕ ಸಂಗೀತ ಕಛೇರಿಗಳನ್ನು ನೀಡಿದ್ದಾರೆ. ಯು.ಎಸ್‌.ಎ. ಕೆನಡಾ ಮತ್ತು ಫ್ರಾನ್ಸ್ ಗಳಲ್ಲಿ ತಮ್ಮ ಗಾಯನ ಸಾದರಪಡಿಸಿದ್ದಾರೆ. ಅನೇಕ ಗ್ರಾಮಫೋನ್‌ ಹಾಗೂ ಸಿ.ಡಿ. ತಟ್ಟೆಗಳಿಗೆ ಧ್ವನಿ ನೀಡಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಸೋಲಾಪೂರದಲ್ಲಿ ‘ಪಂಚಾಕ್ಷರ ಸಂಗೀತ ವಿದ್ಯಾಲಯ’ವೆಂಬ ಸಂಗೀತ ಸಂಸ್ಥೆ ಸ್ಥಾಪಿಸಿ ಅನೇಕ ಆಸಕ್ತರಿಗೆ ಸಂಗೀತ ವಿದ್ಯೆ ಧಾರೆಯೆರೆದು ಶಿಷ್ಯ ಸಂಪತ್ತು ಗಳಿಸಿದ್ದಾರೆ. ಗೋವಾ ಕಲಾ ಅಕಾಡೆಮಿಯ ನಿರ್ದೇಶಕರಾಗಿ (೨೦೦೦ ರಿಂದ ೨೦೦೩), ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಂದರ್ಶಕ ಸಂಗೀತ ಪ್ರಾಧ್ಯಾಪಕರಾಗಿ ಆಕಾಶವಾಣಿ ಧ್ವನಿ ಪರೀಕ್ಷಾ ಸಮಿತಿಯ ಸದಸ್ಯರಾಗಿ, ಅನೇಕ ವಿಶ್ವವಿದ್ಯಾಲಯಗಳ ಸಂಗೀತ ಪರೀಕ್ಷಾ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಅವರ ಶಿಷ್ಯ ಸಂಪತ್ತು ಅಪಾರ. ಅಂಥವರಲ್ಲಿ ಶ್ರೀಮತಿ ಜಾನಕಿ ಅಯ್ಯರ್ (ಬೆಳಗಾವಿ), ಸುಜಾನ ಸಾಲಕರ (ಮುಂಬೈ), ಶ್ಯಾಮ ಗುಂಡಾವರ, ಸುಲಭಾ ಪಿಸ್ಟೀಕರ, ಅಶ್ವಿನಿ ವಳಸಂಗಕರ, ಶ್ರೀಕೃಷ್ಣ ಖಾಡಿಲ್ಕರ, ಶಿರೀಶ್‌ ಬೋಕಿಲ (ಎಲ್ಲರೂ ಸೋಲಪೂರದವರು), ರಾಮ ಜಾಲಿಹಾಳ ಹಾಗೂ ಮಗಳು ಶ್ರೀಮತಿ ಪಾರ್ವತಿದೇವಿ ಮಾಳೇಕೊಪ್ಪ ಮಠ (ಗದಗ) ಮುಂತಾದವರು ಅವರ ಶಿಷ್ಯಂದಿರಾಗಿದ್ದಾರೆ. ಪಂ. ಪ್ರಭುದೇವ ಸರ್ದಾರ ಅವರಿಗೆ ಶ್ರೀ ವೀರೇಶ್ವರ ಪುಣ್ಯಾಶ್ರಮದ ‘ಸಂಗೀತ ಸಾಮ್ರಾಟ್‌’, ಸೋಲಾಪೂರದ ಮಹಾನಗರ ಪಾಲಿಕೆಯ ‘ಸಂಗೀತ ಶಿರೋಮಣಿ’, ಸೋಲಾಪೂರ ಬಸವ ಸೆಂಟರಿನ ‘ಬಸವ ಭೂಷಣ’, ಬೆಂಗಳೂರಿನ ಹಿಂದೂಸ್ಥಾನಿ ಕಲಾಕಾರ ಮಂಡಳಿಯ ‘ನಾದಶ್ರೀ’, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ‘ಕರ್ನಾಟಕ ಕಲಾಶ್ರೀ’ ಹಾಗೂ ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ‘ಕುಮಾರಶ್ರೀ’-ಮುಂತಾದ ಪ್ರಶಸ್ತಿ – ಪುರಸ್ಕಾರ ಅವರನ್ನರಸಿ ಬಂದಿವೆ.