ಕರ್ನಾಟಕದ ಹಿರಿಯ ತಲೆಮಾರಿನ ಹಿಂದುಸ್ಥಾನಿ ಗಾಯಕರಲ್ಲೊಬ್ಬರಾಗಿರುವ ಗ್ವಾಲಿಯರ್ ಘರಾಣೆಯ ಗಾಯಕ ಶ್ರೀ ಪ್ರಭುದೇವ ಸಾಲಿಮಠ ಗವಾಯಿಗಳು ಜನಿಸಿದ್ದು ೬-೯-೧೯೨೪ ರಲ್ಲಿ. ಅವರು ಮೂಲತಃ ತಾಳೀಕೋಟೆಯ ನಾಲವಾರದವರು. ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿ ಹಾಗೂ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಡಾ. ಪುಟ್ಟರಾಜ ಗವಾಯಿಗಳಲ್ಲಿ ಇವರ ಶಿಷ್ಯವೃತ್ತಿ. ಹನ್ನೆರಡು ವರ್ಷಗಳ ಕಾಲ ಸತತ ಶಿಕ್ಷಣ, ಗಾಯನ, ಹಾರ್ಮೋನಿಯಂ ಹಾಗೂ ತಬಲಾ ವಾದನಗಳಲ್ಲಿ ಉನ್ನತ ಪರಿಶ್ರಮ.

೧೯೫೦ರಲ್ಲಿ ತಾಳಿಕೋಟೆಯಲ್ಲಿ ಶ್ರೀ ಖಾಸ್ಗತೇಶ್ವರ ಪ್ರೌಢ ಶಾಲೆ ಹಾಗೂ ಸಂಗೀತ ವಿದ್ಯಾಲಯ ಸ್ಥಾಪಿಸಿ ಬಡ ಅಂಗವಿಕಲ ಹಾಗೂ ಅಂಧ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿ ಜೀವನ ಮಾರ್ಗಕ್ಕೆ ಅವಕಾಶ ಕಲ್ಪಿಸಿದ್ದಾರೆ.

ಧಾರವಾಡ ಆಕಾಶವಾಣಿ ಕೇಂದ್ರದಿಂದ ೧೯೫೧ ರಿಂದಲೂ ಇವರ ಶಾಸ್ತ್ರೀಯ ಗಾಯನ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಉತ್ತರ ಕರ್ನಾಟಕದ ಎಲ್ಲಾ ಊರುಗಳಲ್ಲೂ ಇವರ ಗಾಯನ ಕಛೇರಿಗಳು ನಡೆದಿವೆ. ಅಖಿಲ ಭಾರತ ಗಂಧರ್ವ ಮಹಾ ವಿದ್ಯಾಲಯದ ಪರೀಕ್ಷಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಇವರ ಜೀವನದ ಗುರಿ ಎಂದರೆ ಅಂಗವಿಕಲ ಹಾಗೂ ಅಂಧ ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ಕಳಕಳಿ ಹಾಗೂ ಅವರುಗಳಿಗೆ ಜೀವನ ಮಾರ್ಗ ಕಲ್ಪಿಸುವ ಹಂಬಲ. ಈ ದಿಸೆಯಲ್ಲಿ ಯಶಸ್ಸು ಕಂಡಿದ್ದಾರೆ. ಇವರ ಅನೇಕ ವಿದ್ಯಾರ್ಥಿಗಳು ಇಂದು ಸರಕಾರಿ ಹುದ್ದೆಗಳಲ್ಲಿ, ನಾಟಕ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಶಿಷ್ಯ ಸಂಪತ್ತು ಅಪೃ. ಅಂಥವರಲ್ಲಿ ಎ. ಎಸ್‌. ವಠಾರ, ಡಿ.ಕೆ. ಯರಕ್ಯಾಳ, ಮಹಿಬೂಬ ಕುಂಬಾರ, ನಾಗಪ್ಪ, ವಡಿಗೇರ, ಭೀಮರಾವ ಹೂಗಾರ, ಮಲ್ಲಿಕಾರ್ಜುನ ಹಿರೇಮಠ, ಮಲ್ಲಿಕಾರ್ಜುನ ಭಜಂತ್ರಿ, ಮಡಿವಾಳಪ್ಪ, ಮಂದೆವಾಲಿ, ಗುರುಲಿಂಗಯ್ಯ, ಹಿತ್ತಲ ಶಿರೂರ, ಗುರುಶಾಂತಯ್ಯ ಸ್ಥಾವರಮಠ, ಬಸವರಾಜ ನರಸಲಗಿ ಮುಂತಾದವರು ಉಲ್ಲೇಖನೀಯರಾಗಿದ್ದು. ಅವರಿಗೆ ಅನೇಕ ಪುರಸ್ಕಾರ ದೊರೆತಿವೆ. ಅವುಗಳಲ್ಲಿ ‘ಸಂಗೀತ ರತ್ನ’, ‘ನಾದಬ್ರಹ್ಮ’ ‘ಸಂಗೀತ ಸಾಗರ’, ‘ಗಾನ ಗಂಧರ್ವ’, ‘ಸಂಗೀತ ಸುಧಾಕರ’, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾ ತಿಲಕ’ (೧೯೯೩-೯೪) ಮುಂತಾದವುಗಳು ಉಲ್ಲೇಖನೀಯವಾಗಿವೆ. ೬-೩-೨೦೦೪ ರಂದು ಅವರು ಲಿಂಗೈಕ್ಯರಾಗಿದ್ದಾರೆ.