‘ಪ್ರಮಾಣು’ ನನ್ನ ಹನ್ನೆರಡನೆಯ ವಿಮರ್ಶಾ ಕೃತಿ. ೨೦೦೧ರಲ್ಲಿ ಪ್ರಕಟವಾದ ನನ್ನ ಎರಡು ಸಮಗ್ರ ಸಂಪುಟಗಳಲ್ಲಿ ನಾನು ಅವರಿಗೆ ಬರೆದಿದ್ದ ಎಲ್ಲ ಪ್ರಕಟಿತ ಮತ್ತು ಅಪ್ರಕಟಿತ ವಿಮರ್ಶಾಕೃತಿಗಳೂ ಲೇಖನಗಳೂ ಸೇರಿದ್ದವು. ಅಲ್ಲಿಂದ ಈವರೆಗೆ ಬರೆದ ಲೇಖನಗಳೆಲ್ಲ ಪ್ರಸ್ತುತ ಸಂಕಲನದಲ್ಲಿ ಸೇರಿವೆ.

ಇವುಗಳಲ್ಲಿ ಹೆಚ್ಚಿನ ಲೇಖನಗಳು ಬೇರೆ ಬೇರೆ ವಿಚಾರ ಸಂಕಿರಣಗಳಲ್ಲಿ ನೀಡಿದ ವಿಶೇಷ ಉಪನ್ಯಾಸಗಳು, ಆಶಯಭಾಷಣಗಳು, ಸಮಾರೋಪ ಭಾಷಣಗಳು, ಇಲ್ಲವೆ ಮಂಡಿಸಿದ ಪ್ರಬಂಧಗಳು, ಮತ್ತೆ ಕೆಲವು ಲೇಖನಗಳು ಬೇರೆ ಬೇರೆ ಕೃತಿಗಳಿಗೆ ಬರೆದ ಸಂಪಾದಕೀಯಗಳು, ಪ್ರಸ್ತಾವನೆಗಳು, ಇಲ್ಲವೆ ಮುನ್ನುಡಿಗಳು, ಬರವಣಿಗೆಯ ವಿಷಯದಲ್ಲಿ ವಿಪರೀತ ಸೋಮಾರಿಯಾದ ನನ್ನನ್ನು ಒತ್ತಾಯಿಸಿ ಈ ಲೇಖನಗಳನ್ನು ಬರೆಸಿಕೊಂಡ ಎಲ್ಲ ಮಹನೀಯರಿಗೂ ಕೃತಜ್ಞನಾಗಿದ್ದೇನೆ. ಹಾಗೆಯೇ ಇವುಗಳನ್ನು ಈ ಮೊದಲು ಪ್ರಕಟಿಸಿರುವ ಸಂಪಾದಕರಿಗೂ ನನ್ನ ಕೃತಜ್ಞತೆಗಳು.

ಇವು ಬೇರೆ ಬೇರೆ ಸಂದರ್ಭಗಳಿಗಾಗಿ ಬರೆದ ಲೇಖನಗಳಾಗಿದ್ದರಿಂದ ಕೆಲವು ಲೇಖನಗಳಲ್ಲಿ ಕೆಲವೊಂದು ವಿಚಾರಗಳು, ವಿಷಯಗಳು ಪುನರಾವರ್ತನೆಯಾಗಿವೆ. ಆಯಾ ಲೇಖನಗಳ ಸ್ವಯಂಪೂರ್ಣತೆಯ ದೃಷ್ಟಿಯಿಂದ ಆ ಮಾತುಗಳು ಅಲ್ಲಿ ಅಗತ್ಯವೆನಿಸಿದ್ದರಿಂದ ಅವುಗಳನ್ನು ಹಾಗೇ ಉಳಿಸಿದ್ದೇನೆ.

ನನ್ನ ಈಚಿನ ಬರವಣಿಗೆಯಲ್ಲಿ ನಮ್ಮ ಸಾಹಿತ್ಯ, ಸಂಸ್ಕೃತಿ, ಸಮಾಜ, ಜೀವನಗಳು ಎದುರಿಸುತ್ತಿರುವ ವಸಾಹತೀಕರಣ ಮತ್ತು ಜಾಗತೀಕರಣಗಳ ಅನುಭವದ ಆತಂಕ ಹಾಗೂ ನಮ್ಮ ಸಾಹಿತ್ಯ ಕಾಲಕಾಲಕ್ಕೆ ಇಂಥ ಸಂದರ್ಭಗಳನ್ನು ಎದುರಿಸಲು ರೂಪಿಸಿಕೊಂಡ ಉಪಾಯಗಳನ್ನು ಕುರಿತು ಯೋಚಿಸುತ್ತ ಬಂದಿದ್ದೇನೆ. ಅದು ಈ ಸಂಕಲನದ ಲೇಖನಗಳಲ್ಲಿಯೂ ಮುಂದುವರಿದಿದೆ. ಜೊತೆಗೆ ಆಧುನಿಕೋತ್ತರ ಎನ್ನಬಹುದಾದ ಅಂಶಗಳೂ ಇಲ್ಲಿ ಸೇರಿಕೊಂಡಿವೆ.

ವಿಭಿನ್ನ ವಿಷಯಗಳನ್ನು ಕುರಿತು ಬರೆದ ಇಂಥದೊಂದು ಲೇಖನಗಳ ಸಂಕಲನವನ್ನು ಸುವರ್ಣ ಕರ್ನಾಟಕ ಹೊನ್ನಾರು ಮಾಲೆಯಲ್ಲಿ ಪ್ರಕಟಿಸಲು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ|| ಬಿ.ಎ. ವಿವೇಕ ರೈ ಅವರು ಆಸಕ್ತಿ ತೋರಿಸಿದರು. ಪ್ರಸಾರಾಂಗದ ನಿರ್ದೇಶಕರಾದ ಗೆಳೆಯ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಆ ಆಸಕ್ತಿಯನ್ನು ಮುಂದುವರಿಸಿ ಆದಷ್ಟು ಬೇಗ ಇದು ಪ್ರಕಟವಾಗುವಂತೆ ನೋಡಿಕೊಂಡರು ಸುವರ್ಣ ಕರ್ನಾಟಕ ವರ್ಷದ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯದಿಂದ ನನ್ನ ಕೃತಿಯೊಂದು ಪ್ರಕಟವಾಗುತ್ತಿರುವುದು ನನಗೆ ಸಂತೋಷವನ್ನುಂಟು ಮಾಡಿದೆ. ಇಬ್ಬರಿಗೂ ನಾನು ಋಣಿಯಾಗಿದ್ದೇನೆ.

ಈ ಲೇಖನಗಳನ್ನು ಬರೆಯುವಾಗ ಡಾ. ಜಿ.ಎಸ್. ಆಮೂರ ಅವರೊಂದಿಗೆ ಅನೇಕ ವಿಷಯಗಳನ್ನು ಕುರಿತು ನಡೆಸಿದ ಚರ್ಚೆಗಳಿಂದ ನಾನು ಸಾಕಷ್ಟು ಲಾಭ ಪಡೆದಿದ್ದೇನೆ. ಅವರ ಉಪಕಾರವನ್ನು ವಿಶೇಷವಾಗಿ ಸ್ಮರಿಸಬೇಕು.

ಗೆಳೆಯ ಪ್ರೊ. ಮಲ್ಲಿಕಾರ್ಜುನ ಹಿರೇಮಠ ಅವರು ಕರಡು ತಿದ್ದುವ ಕೆಲಸದಲ್ಲಿ ನೆರವಾಗಿದ್ದಾರೆ. ಅವರ ವಿಶ್ವಾಸವನ್ನು ಪ್ರೀತಿಯಿಂದ ನೆನೆಯುತ್ತೇನೆ.

ನನ್ನ ಬರವಣಿಗೆಯನ್ನು ಮೊದಲಿನಿಂದಲೂ ಪ್ರೀತಿಯಿಂದ ಓದಿ ಪ್ರೋತ್ಸಾಹಿಸುತ್ತ ಬಂದಿರುವ ಓದುಗರನ್ನಂತೂ ಮರೆಯುವದು ಸಾಧ್ಯವೇ ಇಲ್ಲ. ಈ ಕೃತಿಯೂ ಅವರಿಗೆ ಪ್ರಿಯವಾಗಲಿ ಎಂದು ಹಾರೈಸುತ್ತೇನೆ.

ಗಿರಡ್ಡಿ ಗೋವಿಂದರಾಜ
ಧಾರ‍ವಾಡ
೨೫-೩-೨೦೦೭