ಕನ್ನಡನಾಡು ಏಕೀಕರಣಗೊಂಡು ಐವತ್ತು ವರ್ಷ ತುಂಬಿದ ಚಿನ್ನದ ಹಬ್ಬದ ಹರ್ಷದ ಈ ಸಂದರ್ಭದಲ್ಲಿ  ಕನ್ನಡ ವಿಶ್ವವಿದ್ಯಾಲಯವು ಕನ್ನಡವನ್ನು ಕಟ್ಟಿದ ಹಿರಿಯರ ಸಾಹಿತ್ಯ ಕೃತಿಗಳನ್ನು ಪ್ರಕಟಿಸುವ ಕನಸಿನ ಹೊನ್ನಾರು ಮಾಲೆ ಇಲ್ಲಿ ರೂಪು ತಾಳಿದೆ. ಕೃಷಿ ಸಂಸ್ಕೃತಿಯನ್ನು ನೆಲದ ಸಂಸ್ಕೃತಿಯನ್ನಾಗಿ ಭಾವಿಸಿ ಪರಿಭಾವಿಸಿ ಕಟ್ಟಿ ಬೆಳೆಸಿದ ಕನ್ನಡನಾಡಿನಲ್ಲಿ ಕನ್ನಡ ಸಾಹಿತ್ಯ ಸಂಸ್ಕೃತಿಯ ಬೀಜವನ್ನು ಬಿತ್ತಿ ಚಿನ್ನದ ಬೆಳೆಗಳನ್ನು ಬೆಳೆದ ಹಿರಿಯ ಬೇಸಾಯಗಾರರ ಒಂದೊಂದು ಹೊಸ ಬೆಳೆಯನ್ನು ನಾಡಿಗೆ ಒಪ್ಪಿಸುವ ಧನ್ಯತಾ ಭಾವ ನಮ್ಮದು. ಹೀಗೆ ಹೊನ್ನಾರು ಚಿನ್ನದ ಬೆಳೆಯೂ ಹೌದು, ಕನ್ನಡದ ಚಿಣ್ಣರಿಗೆ ಹೊಸಬೆಳೆ ಬೆಳೆಯಲು ಪ್ರೇರಣೆಯೂ ಹೌದು.

ಕಳೆದ ಐವತ್ತು ವರ್ಷಗಳಿಂದ ಕನ್ನಡ ಸಾಹಿತ್ಯ ಸಂಸ್ಕೃತಿಯ ಮಣ್ಣಿನಲ್ಲಿ ತಮ್ಮ ಅನುಭವ ಮತ್ತು ಅಧ್ಯಯನದ ಮೂಲಕ ಉತ್ಸಾಹ ಪ್ರೀತಿ ಮತ್ತು ಪರಿಶ್ರಮಗಳಿಂದ ನಿರಂತರವಾಗಿ ಕನ್ನಡದ ಬಹುಬೆಳೆಗಳನ್ನು ಬೆಳೆಸಿಕೊಂಡು ಬಂದ ಹಿರಿಯರ ಹೊಸಬೆಳೆಯ ಹೊನ್ನಾರುಮಾಲೆಯಲ್ಲಿ ಅನನ್ಯ ಫಲಗಳನ್ನು ಪಡೆಯಲಾಗಿದೆ. ಸಾಹಿತ್ಯ, ಬದುಕು, ಸಂಸ್ಕೃತಿ ಇವುಗಳ ಬಗ್ಗೆ ಐವತ್ತು ವರ್ಷಗಳ ಹಿಂದೆ ಇದ್ದ ಪರಿಕಲ್ಪನೆಗಳು ಇಂದು ಬದಲಾವಣೆಗೊಂಡಿವೆ. ಯಾವುದು ಸಾಹಿತ್ಯ, ಯಾವುದು ಸಾಹಿತ್ಯ ಅಲ್ಲ ಎನ್ನುವ ಚರ್ಚೆ ಕಾಲಕಾಲಕ್ಕೆ ನಡೆದು ಬೇರೆ ಬೇರೆ ಅರ್ಥಗಳನ್ನು ಶೋಧಿಸುತ್ತ ಈ ಹಂತವನ್ನು ತಲುಪಿದೆ. ಸಾಹಿತ್ಯ ಮತ್ತು ಸಂಸ್ಕೃತಿ, ಸಾಹಿತ್ಯ ಮತ್ತು ಬದುಕು ಎನ್ನುವ ಭಿನ್ನತೆಗಳು ಕಣ್ಮರೆಯಾಗಿ ಸಂಕೀರ್ಣ ಹಾಗೂ ವೈವಿಧ್ಯದ ವಿನ್ಯಾಸಗಳು ಕಾಣಿಸಿಕೊಂಡಿವೆ. ಸೃಜನಶೀಲ ಮತ್ತು ಸೃಜನೇತರ ಎನ್ನುವ ಪ್ರಭೇದಗಳು ಸಾಹಿತ್ಯ ಚರ್ಚೆಗಳಲ್ಲಿ ಹಿಂದಕ್ಕೆ ಸರಿದಿವೆ. ಸಾಹಿತ್ಯದ ಪಠ್ಯ ಮತ್ತು ಪರಿಸರ ಎನ್ನುವ ವರ್ಗೀಕರಣ ಅಪ್ರಸ್ತುತವಾಗಿದೆ. ಸಾಹಿತ್ಯಕ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ರಾಜಕೀಯ ಎನ್ನುವ ಪರಿಭಾಷೆಗಳು ಈಗ ಪ್ರತ್ಯೇಕ ಅಸ್ತಿತ್ವಗಳನ್ನು ಕಳೆದುಕೊಂಡು ಒಂದು ಇನ್ನೊಂದರೊಡನೆ ಮಿಳಿತವಾಗಿ ‘ಸಾಹಿತ್ಯ’ ಎನ್ನುವುದು ಸರ್ವವ್ಯಾಪ್ತಿಯಾಗಿದೆ ಮತ್ತು ಸರ್ವರಿಗೂ ಸಲ್ಲುವಂಥದ್ದಾಗಿದೆ.

ಕನ್ನಡ ವಿಶ್ವವಿದ್ಯಾಲಯವು ಕಳೆದ ಹದಿನೈದು ವರ್ಷಗಳಿಂದ ‘ಸಾಹಿತ್ಯ’ ದ ಪ್ರಕ್ರಿಯೆಯನ್ನು ಕುರಿತು ಚರ್ಚೆ ಹಾಗೂ ‘ಸಾಹಿತ್ಯ’ ಪರಿಕಲ್ಪನೆಯ ನಿರಂತರ ಕಟ್ಟುವಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಕನ್ನಡ ಭಾಷೆ, ಸಾಹಿತ್ಯ, ಭಾಷಾಂತರ, ಹಸ್ತಪ್ರತಿ, ದ್ರಾವಿಡ ಸಂಸ್ಕೃತಿ, ಮಹಿಳಾ ಅಧ್ಯಯನ, ಚರಿತ್ರೆ, ಪುರಾತತ್ವ, ಶಾಸನಶಾಸ್ತ್ರ, ಜಾನಪದ, ಬುಡಕಟ್ಟು, ಅಭಿವೃದ್ಧಿ, ಸಂಗೀತ, ಚಿತ್ರ, ಶಿಲ್ಪ; ಹೀಗೆ ಬಹುಬಗೆಗಳಲ್ಲಿ ಬಹು ಅಧ್ಯಯನ ಶಿಸ್ತುಗಳಲ್ಲಿ ಕನ್ನಡ ವಿಶ್ವವಿದ್ಯಾಲಯವು ಕನ್ನಡ ಸಂಸ್ಕೃತಿ ಮತ್ತು ಕನ್ನಡನಾಡನ್ನು ಹೊಸತಾಗಿ ಶೋಧಿಸುತ್ತಾ ವಿವರಿಸುತ್ತಾ ರೂಪಿಸುತ್ತಾ ಬಂದಿದೆ. ಐವತ್ತು ವರ್ಷಗಳ ಏಕೀಕೃತ ಕನ್ನಡನಾಡಿನ ಶರೀರದಲ್ಲಿ ಹದಿನೈದು ವರ್ಷಗಳ ಕನ್ನಡ ವಿಶ್ವವಿದ್ಯಾಲಯದ ಭಾವಬುದ್ಧಿಗಳು ಜೀವಧಾತುಗಳಾಗಿವೆ.

ಕರ್ನಾಟಕ ಸರಕಾರವು ಸುವರ್ಣಕರ್ನಾಟಕ ಆಚರಣೆಯ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯದ ಹೊನ್ನರುಮಾಲೆಯ ಪ್ರಕಟಣೆಯ ಯೋಜನೆಯನ್ನು ಸಂತೋಷದಿಂದ ಒಪ್ಪಿಕೊಂಡು ಕನ್ನಡ ಸಂಸ್ಕೃತಿಯ ಮಹತ್ವದ ಸಾಧನೆಯೊಂದನ್ನು ಮಾಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೂ ಸಾಹಿತ್ಯ ಸಂಸ್ಕೃತಿ ಪ್ರಿಯರೂ ಆಗಿರುವ ಶ್ರೀ ಐ.ಎಂ. ವಿಠ್ಠಲಮೂರ್ತಿ ಅವರು ಹೊನ್ನಾರುಮಾಲೆಯ ಯೋಜನೆಯನ್ನು ಮೆಚ್ಚಿಕೊಂಡು ಸರಕಾರದ ಅಂಗೀಕಾರವನ್ನು ದೊರಕಿಸಿಕೊಟ್ಟು ಚಿನ್ನದ ಕನಸನ್ನು ನನಸನ್ನಾಗಿಸಿದ್ದಾರೆ. ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಎಚ್.ಡಿ. ಕುಮಾರಸ್ವಾಮಿ ಅವರು ಈ ವಿಶಿಷ್ಟ ಯೋಜನೆಯನ್ನು ಅಂಗೀಕರಿಸಿ ತಮ್ಮ ಕನ್ನಡ ಸಾಹಿತ್ಯ ಸಂಸ್ಕೃತಿಯ ಕಾಳಜಿಯನ್ನು ಪ್ರಕಟಿಸಿದ್ದಾರೆ. ಕರ್ನಾಟಕ ಸರಕಾರದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಈ ಸಾಂಸ್ಕೃತಿಕ ಪ್ರೀತಿಯನ್ನು ಕನ್ನಡ ವಿಶ್ವವಿದ್ಯಾಲಯ ಅಕ್ಕರೆಯಿಂದ ಸ್ಮರಿಸುತ್ತದೆ.

ಡಾ. ಗಿರಡ್ಡಿ ಗೋವಿಂದರಾಜ ಅವರು ಕನ್ನಡ ಸಾಹಿತ್ಯ ವಿಮರ್ಶೆಯ ಕ್ಷೇತ್ರದಲ್ಲಿ ನಿರಂತರ ಶೋಧನೆಗಳನ್ನು ನಡೆಸುತ್ತ ಬಂದವರು. ಪರಂಪರೆ ಮತ್ತು ಆಧುನಿಕತೆಗಳ ಚಿಂತನೆಗಳನ್ನು ಬೆಸೆದು ಪ್ರಾಚೀನ ಮತ್ತು ಆಧುನಿಕ ಕನ್ನಡ ಸಾಹಿತ್ಯ ಅಧ್ಯಯನದಲ್ಲಿ ಸಮಾನ ಪ್ರವೇಶ ಮತ್ತು ಆಸಕ್ತಿಯುಳ್ಳ ಡಾ. ಗಿರಡ್ಡಿ ಅವರು ಆಧುನಿಕ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳ ಸಂಗ್ರಹ ‘ಪ್ರಮಾಣು’ ವನ್ನು ಇಲ್ಲಿ ವಿಮರ್ಶಾ ವಲಯಕ್ಕೆ ಒಪ್ಪಿಸಿದ್ದಾರೆ. ನವೋದಯ ಕಾವ್ಯ, ಇಂಗ್ಲಿಷ್ ಕಾವ್ಯದ ಪ್ರೇರಣೆ, ಆಧುನಿಕ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳ ಸಂಗ್ರಹ ‘ಪ್ರಮಾಣು’ ವನ್ನು ಇಲ್ಲಿ ವಿಮರ್ಶಾ ವಲಯಕ್ಕೆ ಒಪ್ಪಿಸಿದ್ದಾರೆ. ನವೋದಯ ಕಾವ್ಯ, ಇಂಗ್ಲಿಷ್ ಕಾವ್ಯದ ಪ್ರೇರಣೆ, ಆಧುನಿಕ ಕಾದಂಬರಿ, ಸಣ್ಣಕತೆಗಳು, ನಾಟಕಗಳು, ವಿಮರ್ಶೆ – ಹೀಗೆ ಆಧುನಿಕ ಕನ್ನಡ ಸಾಹಿತ್ಯದ ಓದಿನ ಮೂಲಕವೇ ಕನ್ನಡ ವಿಮರ್ಶೆಯ ಸ್ವರೂಪವನ್ನು ಕಟ್ಟುವ ಕೆಲಸವನ್ನು ಮಾಡಿದ್ದಾರೆ. ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯದ ವ್ಯಾಪಕ ಓದಿನ ಹಿನ್ನೆಲೆಯುಳ್ಳ ಡಾ. ಗಿರಡ್ಡಿ ಅವರ ವಿಮರ್ಶೆಯ ಬರಹಗಳಲ್ಲಿ ಸಮಪ್ರಮಾಣದ ಚಿಂತನೆ ಮತ್ತು ನಿಖರ ಅಭಿವ್ಯಕ್ತಿ ಕಾಣಸಿಗುತ್ತದೆ. ನವ್ಯ ವಿಮರ್ಶೆಯ ಸೂಕ್ಷ್ಮ ಅವಲೋಕನ ಶಕ್ತಿ, ಸಾಂಸ್ಕೃತಿಕ ವಿಮರ್ಶೆಯ ಆಯಾಮ ಮತ್ತು ಕೃತಿಕಾರ – ಕೃತಿ ಸಂಬಂಧಗಳ ಅನ್ವೇಷಣೆಗಳ ಜೊತೆಗೆ ಕನ್ನಡ ಸಂಸ್ಕೃತಿಯ ವಿಶಿಷ್ಟತೆಗಳನ್ನು ಗುರುತಿಸುವ ವಿಶೇಷ ಅಧ್ಯಯನ ಮಾದರಿಯೊಂದು ಡಾ. ಗಿರಡ್ಡಿ ಅವರ ವಿಮರ್ಶೆಯ ಬರಹಗಳಲ್ಲಿ ದೊರೆಯುತ್ತದೆ. ಆಧುನಿಕ ಕನ್ನಡ ವಿಮರ್ಶೆಯ ಪ್ರಮಾಣ ಕೃತಿಗಳಲ್ಲಿ ಒಂದಾಗಿರುವ ‘ಪ್ರಮಾಣು’ ವಿಮರ್ಶಾ ಸಂಕಲನವನ್ನು ಪ್ರಕಟಿಸಲು ಅವಕಾಶ ಕಲ್ಪಿಸಿರುವುದಕ್ಕಾಗಿ ಡಾ. ಗಿರಡ್ಡಿ ಗೋವಿಂದರಾಜ ಅವರಿಗೆ ಪ್ರೀತಿ ಅಭಿಮಾನದ ವಂದನೆಗಳನ್ನು ಸಲ್ಲಿಸುತ್ತೇನೆ.

ಹೊನ್ನಾರು ಮಾಲೆಯ ಪ್ರಕಟಣೆಗಳ ಕನಸಿನ ಬೀಜದಿಂದ ತೊಡಗಿ ನನಸಿನ ಫಲದವರೆಗೆ ನನ್ನೊಡನೆ ಸಹಕರಿಸಿದ ನಮ್ಮ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರನ್ನು ವಿಶೇಷವಾಗಿ ಸ್ಮರಿಸುತ್ತೇನೆ. ಸಹಾಯಕ ನಿರ್ದೇಶಕರಾದ ಶ್ರೀ ಸುಜ್ಞಾನಮೂರ್ತಿ ಅವರ ನೆರವಿಗಾಗಿ ವಂದನೆಗಳು.

ಬಿ.. ವಿವೇಕ ರೈ
ಕುಲಪತಿ