ಕೀರ್ತಿನಾಥ ಕುರ್ತಕೋಟಿಯವರು ತೀರಿಕೊಂಡು ಸರಿಯಾಗಿ ಎರಡು ವರ್ಷಗಳಾದವು. ಇದೀಗ ಅವರ ಪೂರ್ಣಪ್ರಮಾಣದ ಮೊದಲ ಕವನಸಂಕಲನದ “ನಾವು ಬರಿಗೈನವರು” ಪ್ರಕಟವಾಗುತ್ತಿದೆ. ವಿಮರ್ಶಕರೆಂದೇ ಹೆಸರಾಗಿದ್ದ ಕುರ್ತಕೋಟಿಯವರ ಪ್ರತಿಭೆಗೆ ಸೃಜನಶೀಲತೆಯ ಒಂದು ಆಯಾಮವೂ ಇತ್ತು. ಹಾಗೆ ನೋಡಿದರೆ, ಅವರ ವಿಮರ್ಶೆಯೇ ಸೃಜನಶೀಲವಾದದ್ದು. ಸಾಮಾನ್ಯವಾಗಿ ವಿಮರ್ಶೆಯ ಬರವಣಿಗೆ ಎಷ್ಟು ಒಣದಾಗಿರುತ್ತದೆಂದರೆ, ಒಂದು ವಿಮರ್ಶಾ ಕೃತಿಯನ್ನು ಕುಳಿತ ಮೆಟ್ಟಿನ ಮೇಲೆ ಸಂತೋಷದಿಂದ ಓದಿ ಮುಗಿಸುವುದು ಬಹಳ ಕಷ್ಟ ಕೆಲಸ. ಆದರೆ ಕುರ್ತಕೋಟಿಯವರ ವಿಮರ್ಶೆ ಒಂದು ಕಾದಂಬರಿಯಂತೆ, ಕಾವ್ಯದಂತೆ ನಿರರ್ಗಳವಾಗಿ ಓದಿಸಿಕೊಳ್ಳುವ ಅಪರೂಪದ ಗುಣ ಪಡೆದುಕೊಂಡಿತ್ತು. ಇದಕ್ಕೆ ಮುಖ್ಯ ಕಾರಣವೆಂದರೆ ಅದರ ಹಿಂದಿದ್ದ ಸೃಜನಶೀಲತೆಯ ಮಿಡಿತ.

ಅವರ ಸೃಜನಶೀಲತೆ ವಿಮರ್ಶೆಯ ಹೊರಗೂ ಕೆಲಸ ಮಾಡಿತ್ತು. ಇದಕ್ಕೆ ಉದಾಹರಣೆಯಾಗಿ ಅವರು ಬರೆದಿರುವ “ಸ್ವಪ್ನದರ್ಶಿ”, “ಆ ಮನಿ”, “ಚಂದ್ರಗುಪ್ತ” ಮೊದಲಾದ ನಾಟಕಗಳನ್ನು ನೋಡಬಹುದು. ಒಂದೆರಡು ಸಣ್ಣಕತೆಗಳೂ ಅವರ ಹೆಸರಿನಲ್ಲಿವೆ. ಒಂದು ಕಾದಂಬರಿಯನ್ನು ಬರೆಯಲು ಅವರು ಆರಂಭಿಸಿದ್ದರು; ಆದರೆ ಅವರ ಅಕಾಲ ಮರಣದಿಂದ ಅದು ಅರ್ಧಕ್ಕೆ ನಿಂತಿತು. ಇದೆಲ್ಲದಕ್ಕಿಂತ ಮುಖ್ಯವಾಗಿ ಕುರ್ತಕೋಟಿಯವರು ಒಬ್ಬ ಕವಿಯೂ ಆಗಿದ್ದರು. ಅವರು ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಕಣೇಕಲ್ಲ ಗೋವಿಂದ, ಶಂಕರ ಮೊಕಾಶಿಯವರೊಂದಿಗೆ ಸೇರಿಕೊಂಡು ಪ್ರಕಟಿಸಿದ್ದ “ಗಾನ ಕೇಳಿ” ಎಂಬ ಸಂಕಲನದಲ್ಲಿ ಅವರ ಹತ್ತು ಕವಿತೆಗಳು ಬಂದಿದ್ದವು (೧೯೪೮). “ನಡೆದು ಬಂದ ದಾರಿ”ಯ ಮೊದಲ ಸಂಪುಟದಲ್ಲಿ ಅವರ ‘ಊರ್ಮಿಳೆ’ ಎಂಬ ಕಥನಕವನವೊಂದು ಪ್ರಕಟವಾಗಿತ್ತು (೧೯೫೯). ಜಡಭರತರ ಇಂಗ್ಲಿಷ್ ಕವನಗಳನ್ನು ಸುಂದರವಾಗಿ ಕನ್ನಡಕ್ಕೆ ಅನುವಾದಿಸಿದ “ಜೀವಫಲ”ವೂ ಬಂದಿತ್ತು (೧೯೫೭). ಆಗಾಗ ‘ಜಯ ಕರ್ನಾಟಕ’, ‘ಕರ್ಮವೀರ’, ‘ಅರುಣೋದಯ’ ಮೊದಲಾದ ಪತ್ರಿಕೆಗಳಲ್ಲಿ ಅವರ ಕೆಲವು ಬಿಡಿಗವಿತೆಗಳು ಪ್ರಕಟವಾಗಿದ್ದವು. ಇವುಗಳ ಹೊರತಾಗಿಯೂ ಅವರು ಹಲವಾರು ಕವಿತೆಗಳನ್ನು ಬರೆದಿದ್ದರೆಂದೂ, ಅವುಗಳನ್ನು ನೋಡಬೇಕೆಂಬ ಕುತೂಹಲ ಅನೇಕರಿಗಿತ್ತು. ಆ ಕುತೂಹಲ ತಣಿಯುವ ಕಾಲ ಈಗ ಕೂಡಿಬಂದಿದೆ. ಬೇರೆಬೇರೆ ಕಡೆ ಚೆದುರಿ ಹೋಗಿದ್ದ ಈ ಕವಿತೆಗಳನ್ನು ಅವರ ಕಡತಗಳಿಂದ ಹೊರತೆಗೆದು ಈಗ ಪ್ರಕಟಿಸಲಾಗುತ್ತಿದೆ.

ಅನೇಕ ಜನ ದೊಡ್ಡ ಕವಿಗಳು ವಿಮರ್ಶಕರೂ ಆಗಿರುವ ಒಂದು ಪರಂಪರೆ ಸಾಹಿತ್ಯದಲ್ಲಿ ಬಹಳ ದಿನಗಳಿಂದಲೂ ಇದೆ. ಪಾಶ್ಚಾತ್ಯ ಸಾಹಿತ್ಯದಲ್ಲಿಯಂತೆ ಆಧುನಿಕ ಕನ್ನಡ ಸಾಹಿತ್ಯದಲ್ಲಿಯೂ ಇದಕ್ಕೆ ನಿದರ್ಶನಗಳನ್ನು ಹೇರಳವಾಗಿ ಕಾಣಬಹುದು. ಸಾಮಾನ್ಯವಾಗಿ, ಇಂಥ ಸಂದರ್ಭಗಳಲ್ಲಿ, ಕವಿ ಬರೆಯುವ ವಿಮರ್ಶೆ ಪರೋಕ್ಷವಾಗಿ ತನ್ನ ಸ್ವಂತ ಕಾವ್ಯದ ಸಮರ್ಥನೆಯೇ ಆಗಿರುತ್ತದೆ. ತನ್ನ ಕಾವ್ಯದ ಸ್ವರೂಪವನ್ನು ಸಮರ್ಥಿಸುವ ತನ್ನ ಸ್ವಂತ ಕಾವ್ಯದ ಸಮರ್ಥನೆಯೇ ಆಗಿರುತ್ತದೆ. ತನ್ನ ಕಾವ್ಯದ ಸ್ವರೂಪವನ್ನು ಸಮರ್ಥಿಸುವ ಸಿದ್ಧಾಂತಗಳನ್ನು ರೂಪಿಸಿಕೊಂಡು, ಅವುಗಳನ್ನೇ ಸಾರ್ವತ್ರಿಕವೆಂಬಂತೆ ಬಿಂಬಿಸಲು ಪ್ರಯತ್ನಿಸುತ್ತದೆ. ಆ ಸಿದ್ಧಾಂತಗಳನ್ನು ಸಮರ್ಥಿಸುವ, ಉದಾಹರಿಸುವ ಕಾವ್ಯವನ್ನು ಮಾತ್ರ ಅದು ಮೆಚ್ಚಿಕೊಳ್ಳುತ್ತದೆ.

ಆದರೆ ಹಿರಿಯ ವಿಮರ್ಶಕನಾದವನು ಕಾವ್ಯರಚನೆಯನ್ನೂ ಮಾಡಿದ್ದರೆ ಅದರ ಸ್ವರೂಪ ಹೇಗಿರಬಹುದು – ಎಂಬುದು ಕುತೂಹಲದ ಪ್ರಶ್ನೆ. ಕಾವ್ಯವನ್ನು ಕುರಿತು ಅವನು ಮಂಡಿಸುವ ಸಿದ್ಧಾಂತಗಳಿಗೂ ಅವನು ಬರೆಯುವ ಕಾವ್ಯಕ್ಕೂ ಸಂಬಂಧ ಇರುತ್ತದೆಯೆ? ಅವನು ಶ್ರೇಷ್ಟವೆಂದು ಮೆಚ್ಚಿಕೊಳ್ಳುವ ಕಾವ್ಯಕ್ಕೂ ಅವನ ಸ್ವಂತದ ಕಾವ್ಯಕ್ಕೂ ಸ್ವಭಾವಸಾಮ್ಯ ಇರುತ್ತದೆಯೆ? ಕಾವ್ಯದ ಶ್ರೇಷ್ಠತೆಯನ್ನು ಗುರುತಿಸಲು ಅವನು ರೂಪಿಸಿಕೊಳ್ಳುವ ಮಾನದಂಡಗಳನ್ನು ಅವನ ಸ್ವಂತದ ಕಾವ್ಯಕ್ಕೂ ಅನ್ವಯಿಸಬಹುದೆ?

ಈ ಪ್ರಶ್ನೆಗಳನ್ನು ಯಾಕೆ ಎತ್ತಬೇಕಾಯಿತೆಂದರೆ, ಕುರ್ತಕೋಟಿಯವರು ವಿಮರ್ಶಕರಾಗಿ ಬಹುವಾಗಿ ಮೆಚ್ಚಿಕೊಂಡ ಕವಿಗಳೆಂದರೆ ಕುಮಾರವ್ಯಾಸ ಮತ್ತು ಬೇಂದ್ರೆ ಕಾವ್ಯವನ್ನು ಬೆಲೆಗಟ್ಟಲು, ಮಾನದಂಡಗಳನ್ನು ರೂಪಿಸಿಕೊಳ್ಳಲು ಅವರು ಆಧಾರವಾಗಿ ಇಟ್ಟುಕೊಂಡದ್ದು ಈ ಇಬ್ಬರ ಕಾವ್ಯವನ್ನು, ಕಾವ್ಯವನ್ನು ಕುರಿತ ಅವರ ಸಿದ್ಧಾಂತಗಳಿಗೂ ಇವರಿಬ್ಬರ ಕಾವ್ಯವೇ ಮುಖ್ಯ ಆಧಾರ, ಸಂಸ್ಕೃತ ಕವಿಗಳಲ್ಲಿ ಕಾಳಿದಾಸನ ಬಗೆಗೂ ಅವರಿಗೆ ಪ್ರೀತಿಯಿತ್ತು. ಹೀಗೆ ಒಬ್ಬಿಬ್ಬ ಕವಿಗಳನ್ನು ಆಧಾರವಾಗಿಟ್ಟುಕೊಂಡದ್ದೇ ಅವರ ವಿಮರ್ಶೆಯ ಮುಖ್ಯ ಮಿತಿಯಾಗಿತ್ತೆಂದೂ, ಈ ಕವಿಗಳಿಗಿಂತ ಭಿನ್ನವಾಗಿ ಬರೆಯುತ್ತಿದ್ದ ಕುವೆಂಪು, ಅಡಿಗರಂಥ ಕವಿಗಳನ್ನು ಮೆಚ್ಚಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲವೆಂದೂ ಒಂದು ವಾದವಿದೆ. ಇದು ಚರ್ಚಾಸ್ಪದವಾದದ್ದು. ಇರಲಿ.

ಆದರೆ ಕುರ್ತಕೋಟಿಯವರ ಕವಿತೆಗಳ ಮೇಲೆ ಕುಮಾರವ್ಯಾಸ, ಬೇಂದ್ರೆಯವರ ಕಾವ್ಯದ ಸಂವೇದನಾತ್ಮಕ ಪ್ರಭಾವ ನೇರವಾಗಿ ಆಗಿದೆಯೆಂದು ಅನಿಸುವುದಿಲ್ಲ. ಕಾವ್ಯದ ಬಗೆಗೆ ಅವರು ರೂಪಿಸಿಕೊಂಡಿದ್ದ ಸಿದ್ಧಾಂತಗಳಿಗೂ ಅವರು ಬರೆದಿರುವ ಕವಿತೆಗಳಿಗೂ ಸಂಬಂಧ ಕಲ್ಪಿಸುವುದೂ ಕಷ್ಟ. ಒಂದು ಮಾತು ಮಾತ್ರ ನಿಜ. ಅವರು ಆಧುನಿಕ ಕನ್ನಡ ಕಾವ್ಯದಲ್ಲಿ ಬಹುವಾಗಿ ಮೆಚ್ಚಿಕೊಂಡದ್ದು ನವೋದಯ ಕಾವ್ಯವನ್ನು. ಅವರ ಕವಿತೆಗಳು ನವೋದಯ ಕಾವ್ಯದ ಮುಖ್ಯ ಧಾರೆಯಲ್ಲೇ ಇವೆ. ಅವರು ೧೯೬೧ರ ವರೆಗೂ ಕವಿತೆಗಳನ್ನು ಬರೆದ ದಾಖಲೆಗಳು ಸಿಗುತ್ತವೆ. ಅಷ್ಟು ಹೊತ್ತಿಗೆ ಕನ್ನಡದಲ್ಲಿ ಆಗಲೇ ನವ್ಯಕಾವ್ಯ ಹೆಸರು ಮಾಡಿತ್ತು. ಕುರ್ತಕೋಟಿಯವರ ಕವಿತೆಗಳಲ್ಲಿ ಅವರ ಪ್ರಭಾವ ಕಾಣುವುದಿಲ್ಲ. ವಸ್ತು ಭಾಷೆ, ಲಯ, ಪ್ರತಿಮೆ, ಛಂದಸ್ಸು ಇತ್ಯಾದಿಗಳಲ್ಲಿ ಅವರು ನವೋದಯದ ಸಾಂಪ್ರದಾಯಿಕ ಮಾರ್ಗದಲ್ಲೇ ಇದ್ದಾರೆ. ನವ್ಯಕೃತಿಗಳ ಬಗ್ಗೆ ಅವರು ವಿಮರ್ಶಕರಾಗಿ ಸಾಕಷ್ಟು ಬರೆದಿದ್ದರೂ ನವ್ಯದ ಬಗ್ಗೆ ಅವರಿಗೆ ಪ್ರೀತಿ ಇರಲಿಲ್ಲ. ಇದನ್ನು ಅವರ ಕವಿತೆಗಳು ಅಪ್ರಜ್ಞಾಪೂರ್ವಕವಾಗಿ ಪ್ರಕಟಿಸುತ್ತವೆ.

ಕುರ್ತಕೋಟಿಯವರ ವಿಮರ್ಶೆಗೂ ಅವರ ಕವಿತೆಗಳಿಗೂ ಸಂಬಂಧ ಕಲ್ಪಿಸಬಹುದಾದ ಇನ್ನೊಂದ ಎಳೆ-ಸಾಹಿತ್ಯದ ಸಾಮಾಜಿಕ ಆಯಾಮಕ್ಕೆ ಸಂಬಂಧಿಸಿದ್ದು, ವಿಮರ್ಶೆಯಲ್ಲಿ ಶ್ರೇಷ್ಠತೆಯ ಮಾನದಂಡವೆಂದು ಅವರು ಸಾಮಾಜಿಕ ಪ್ರಜ್ಞೆಯನ್ನು ಬಳಸುವುದಿಲ್ಲ. ಬಹುಮಟ್ಟಿಗೆ ಅವರ ವಿಮರ್ಶೆ ಈ ಬಗ್ಗೆ ಮೌನವಾಗಿದೆ. ಅವರ ಕವಿತೆಗಳಲ್ಲೂ ಇದೇ ನಿಲುವು ಪ್ರತಿಫಲಿಸಿದೆ. ಅವರ ಯಾವ ಕವಿತೆಯಲ್ಲೂ ಸಾಮಾಜಿಕ, ಸಮಕಾಲೀನ ವಿಷಯಗಳು ವಸ್ತುವಾಗಿಲ್ಲ.

ಸಾಮಾಜಿಕ ಪ್ರಜ್ಞೆಗೆ ಬದಲಾಗಿ ಕುರ್ತಕೋಟಿಯವರು ತಮ್ಮ ವಿಮರ್ಶೆಯಲ್ಲಿ ವ್ಯಾಪಕವಾಗಿ ಚರ್ಚಿಸಿದ್ದು ಸರ್ವಕಾಲೀನವೆನ್ನಬಹುದಾದ, ಬದುಕಿನ ಬಗೆಗಿನ ತಾತ್ವಿಕ ದರ್ಶನವನ್ನು. ಅವರ ಎಲ್ಲ ಕವಿತೆಗಳೂ ಬದುಕಿನ ಅಗಮ್ಯತೆಗೆ ಅರ್ಥ ಹುಡುಕುವ ಪ್ರಯತ್ನದಲ್ಲಿ ತೊಡಗಿಕೊಂಡಿವೆ. ಕೈ ಇಟ್ಟಲ್ಲಿ ಇಂಥ ಸಾಲುಗಳನ್ನು ಕಾಣಬಹುದು:

ಸತ್ಯ ಸೂರ್ಯನ ಕಂಡ ದಿನವೆ ಸಂಕ್ರಾಂತಿ
ಇಲ್ಲದಿರೆ ಬರಿ ಎಳ್ಳುಸಕ್ಕರೆಯ ಭ್ರಾಂತಿ
             (ಸಂಕ್ರಾಂತಿ)
*
ನಮ್ಮ ಬಾಳಿನ ಗುಟ್ಟು ಯಾರ ಕೈಯೊಳಗೊ!
            (ಸೋಲು)
*
ಮೂರು ತಪ್ಪಿಗಾಗಿ ನೂರು ಯುಗದ ಕಠಿಣ ಶಿಕ್ಷೆಯೆ?
ಸಿಗದ ಮುಕ್ತಿಗಾಗಿ ಎಲ್ಲೆ ಇರದ ನಿರೀಕ್ಷೆಯೆ?
           (ತ್ರಿಶಂಕು)
*
ನಿಯಮದಪವಾದದೊಳೆ ಚಲುವು ಹುದುಗಿಹುದೇನೊ!
           (ಹಳದಿ ಹೂ)
*
ಅಮರ ಯೌವನವಿರಲು ಪ್ರಕೃತಿಗೆಲ್ಲಿಯ ದಣಿವು?
ಪುರುಷನಾಲಿಂಗನದಿ ಕಾಣುವದೆ ಎದೆತಣಿವು?
           (ಒಂದು ರಾತ್ರಿ)

ಕುರ್ತಕೋಟಿಯವರ ಈ ಕವಿತೆಗಳು ನವೋದಯದ ಮುಖ್ಯ ಧಾರೆಯಲ್ಲಿಯೇ ಇವೆ ಎಂದರೆ. ಎಲ್ಲ ಕವಿತೆಗಳೂ ರಚನೆಯಾದದ್ದು ನವೋದಯದ ಸಂದರ್ಭದಲ್ಲಿ, ನವೋದಯ ಕಾವ್ಯ ಆಗಲೇ ಜಾಡಿಗೆ ಬೀಳುತ್ತಿದ್ದ ಕಾಲಘಟ್ಟದಲ್ಲಿ. ಇಲ್ಲಿಯ ಬಹಳಷ್ಟು ಕವಿತೆಗಳು ರಚನೆಯಾಗಿರುವುದು ಕಳೆದ ಶತಮಾನದ ಐವತ್ತರ ದಶಕದ ಆರಂಭದ ವರ್ಷಗಳಲ್ಲಿ. ಕುರ್ತಕೋಟಿಯವರು ಆ ಕಾಲದ ನವೋದಯದ ಜಾಡಿಯಲ್ಲಿ ಹೆಜ್ಜೆ ತಪ್ಪದೆ ನಡೆದು ಹೋಗಿದ್ದಾರೆ. ರಚನೆಯಾದ ಹೊತ್ತಿನಲ್ಲೇ ಸಂಕಲನವಾಗಿ ಪ್ರಕಟವಾಗಿದ್ದರೆ ಈ ಕವಿತೆಗಳಿಗೆ ಬೇರೆ ರೀತಿಯ ಸ್ವಾಗತ ಸಿಗಬಹುದಾಗಿತ್ತೇನೋ! ಕಾವ್ಯದ ರುಚಿಯೇ ಬದಲಾಗಿ ಬಿಟ್ಟಿರುವ ಇಂದಿನ ದಿನಗಳಲ್ಲಿ ಈ ಕವಿತೆಗಳನ್ನು ಬೇರೆ ರೀತಿಯಲ್ಲೇ ಓದಬೇಕಾಗಿದೆ. ಅಥವಾ, ಇಂದಿನ ಕಾವ್ಯ ಕಳೆದುಕೊಂಡಿರುವ ಕೆಲವು ಅಮೂಲ್ಯ ಅನುಭವಗಳಿಗಾಗಿ ನಾವು ಮತ್ತೆ ನವೋದಯ ಕಾವ್ಯಕ್ಕೇ ಹೋಗಬೇಕೇನೊ!

ತನ್ಮಯತೆ ಅಂಥ ಅನುಭವಗಳಲ್ಲಿ ಒಂದು, ಅನುಭವವನ್ನು ಪ್ರಯೋಗಶಾಲೆಯ ಕಪ್ಪೆಯಂತೆ ನೋಡುವುದೇ ಒಂದು ಚಟವಾಗಿ, ಜೀವಸಹಜವಾದ ಸಂತೋಷ, ಉತ್ಸಾಹ, ಬೆರಗು, ತನ್ಮಯತೆಗಳೇ ನಾವು ಕಳೆದುಕೊಂಡಿದ್ದೇವೆ. ಅದರಿಂದಾಗಿಯೇ-

ಬಾನಿನೊಂದು ಉಯ್ಯಾಲೆಗೆ ಇಂದ್ರಧನುವೆ ತೋರಣ
ನೆಲಕೆ ಹಸಿರು ರತ್ನ ಸುರಿಯೆ ಕನಸುಗಣ್ಣ ಶ್ರಾವಣ
ಆನಂದದ ಹಾಲುಗಡಲು ಉಕ್ಕೇರುತ ನಲಿದಿರೆ
ವಿದ್ಯಾಧರ ಕುಣಿಯುತಿಹನು ಬಾಲ್ಯ ಒಲಿದು ಕರೆದಿರೆ
           (ವಿದ್ಯಾಧರ)

*

ಇದ ನುಡಿಸುವ ಕೈಯಾವದು, ರಸವಾವುದು ಇದಕೆ?
ಭಾವಾರ್ಥದ ಸ್ಥಿತಿ ಮುಟ್ಟಿದೆ ಸಂಸ್ಕಾರದ ಹದಕೆ,
ಧಿಮಿಧಿಮಿಧಿಮಿ ಧೀಂತೃಕತಟ ಮುದ್ದಳೆಯೀ ಸೊಲ್ಲು
ಸೃಷ್ಟಿಯ ಮೈ ಪುಲಕಿಸುತಿದೆ ಇದು ನೀಡುವ ಮುದಕೆ
            (ಮದ್ದಳೆ ಸೊಲ್ಲು)

ಇಂಥ ಸಾಲುಗಳು ಇಂದಿಗೂ ನಮಗೆ ಸಂತೋಷ ಕೊಡಬಲ್ಲವು. ಕುರ್ತಕೋಟಿಯವರ ಕವಿತೆಗಳಲ್ಲಿ ಇಂಥ ಹಲವು ಸಾಲುಗಳು ಸಿಗುತ್ತವೆ. ‘ವಿದ್ಯಾಧರ’, ‘ಮದ್ದಳೆಸೊಲ್ಲು’, ‘ಚಿತ್ರಸೃಷ್ಟಿ’ ಮೊದಲಾದ ಕವನಗಳು ತಮ್ಮ ಜೀವನೋತ್ಸಾಹದಿಂದ ಲವಲವಿಕೆಯ ಲಯದಿಂದ ಇಡಿಯಾಗಿ ಗಮನ ಸೆಳೆಯುತ್ತವೆ.

ಕುರ್ತಕೋಟಿಯವರ ಕವಿತೆಗಳಲ್ಲಿ ‘ಗೆಳೆತನ’,’ಗೆ’, ‘ಹುಟ್ಟುಹಬ್ಬ’., ‘ಅಪೇಕ್ಷೆ’, ‘ಪ್ರೀತಿ’ ಮೊದಲಾದ ನಾಲ್ಕೈದು ಕವಿತೆಗಳು ವೈಯಕ್ತಿಕ ಅನುಭವದ ಸ್ವಾಭಿವ್ಯಕ್ತಿಗಾಗಿ ಪ್ರಯತ್ನಿಸಿದ್ದರೂ ಅದು ಅವರ ಕಾವ್ಯಾಭಿವ್ಯಕ್ತಿಯ ಮುಖ್ಯ ಕಾಳಜಿ ಆಗಿಲ್ಲ ಎನಿಸುತ್ತದೆ. ಬಹುಪಾಲು ಕವಿತೆಗಳಲ್ಲಿ ಅವರು ವ್ಯಕ್ತಿನಿರಪೇಕ್ಷವೆನ್ನಬಹುದಾದ ನೆಲೆಯಿಂದ ಬದುಕಿನ ಸಾರ್ವತ್ರಿಕ ಅನುಭವಗಳನ್ನು ಕುರಿತು ಸೂಕ್ಷ್ಮವಾದ ಪ್ರಶ್ನೆಗಳನ್ನು ಕೇಳುತ್ತಾರೆ. ಆ ಅನುಭವಗಳ ಬೆಳಕಿನಲ್ಲಿ ಹೊಳೆದ ಅನಿಸಿಕೆಗಳನ್ನು ಮಂಡಿಸುತ್ತಾರೆ. ಈ ದೃಷ್ಟಿಯಿಂದ ಕುರ್ತಕೋಟಿಯವರದು ಚಿಂತನಪ್ರಧಾನವಾದ ಕಾವ್ಯ. ಒಂದು ಕವಿತೆಯಲ್ಲಿ ಆ ಅನುಭವವನ್ನು ಕುರಿತ ಚಿಂತನೆ ಏಕಪಕ್ಷೀಯ, ಪಾರ್ಶ್ವಿಕ, ಅಪೂರ್ಣ ಎನಿಸಿದರೆ ಅದೇ ವಸ್ತುವನ್ನು ಕುರಿತ ೨, ೩, ೪, ೫ ಕವಿತೆಗಳನ್ನು ಅವರು ಬರೆದಿದ್ದಾರೆ. ‘ಉಗಮ, ‘, ‘ಪಂಜು’, ‘ದೇಹ’, ‘ಕಾಲಸರ್ಪ’. ‘ಒಂದು ರಾತ್ರಿ’, ‘ಬೇಂದ್ರೆ’, ‘ಮನೋರಮೆ’ ಮೊದಲಾದವು ಇಂಥ ಕವಿತೆಗಳು. ಈ ಎಲ್ಲ ಕವಿತೆಗಳಲ್ಲಿಯ ಚಿಂತನೆ ಬಹುಮಟ್ಟಿಗೆ ರೊಮ್ಯಾಂಟಿಕ್ ಎನ್ನಬಹುದಾದ ವಿಷಾದದ (Romantic melancholy) ಕಡೆಗೇ ಒಲಿದಿರುವುದು ಒಂದು ವಿಶೇಷ ‘ದೇಹ’ ಕವಿತೆಯ ಐದು ಆವೃತ್ತಿಗಳ ಈ ಸಾಲುಗಳನ್ನು ನೋಡಿ:

 ನನಗರಿಯದ ನೋವಿಂದಲಿ ಚೀರುವೆ
ಗತಿ ಯಾರಿಗು ಬೇಡ!
*
ರಾಮಸೀತೆಯರು ನಡುಬೀದಿಗೆ ಬಂದರು
ಬಯಲಿಗೆ ಬಯಲಾಗಿತ್ತು.
*
ಹಾರುವ ಪಾತರಗಿತ್ತಿಯು ನಾನು
ನನಗೇತರ ಆಸೆ?
*
ಭಯದಲಿ ಚೀರಿದೆ ನಳರಾಜನೆ ಬಾ
ಹಾದಿಗೆ ಹಚ್ಚು
ಕಣ್ಣಿಗೆ ಪರೆ ಬಂದಿರೆ ತೂಕಡಿಸಿದೆ
ಪಾತಾಳಕ್ಕಿಳಿದೆ
*
ಹೃದಯವು ಬತ್ತಿತ್ತು, ರಸವಾರಿತು
ಸಾಕಾಯಿತು ಲೀಲೆ.

ಅದೇನಿದ್ದರೂ ಈ ಚಿಂತನಪರ ಕವಿತೆಗಳನ್ನು ನವೋದಯದ ಒಂದು ಧಾರೆಯಲ್ಲೇ ನಿಲ್ಲುತ್ತವೆ.

ತಾಂತ್ರಿಕವಾಗಿ ಈ ಕವಿತೆಗಳಲ್ಲಿ ವಿಶೇಷ ಪರಿಣತಿ ಕಾಣುತ್ತದೆಂದು ಬೇರೆ ಹೇಳಬೇಕಾಗಿಲ್ಲ. ಶೈಲಿ, ಛಂದಸ್ಸು, ಆಕೃತಿಗಳಲ್ಲಿ ಪರಿಣತಿಯ ಜೊತೆಗೆ ಪ್ರಬುದ್ಧತೆಯೂ ಕಾಣುತ್ತದೆ. ಕುರ್ತಕೋಟಿಯವರಿಗೆ ಮೂರು ಮತ್ತು ಐದು ಮಾತ್ರೆಗಳ ಛಂದಸ್ಸಿನ ಮೇಲೆ ವಿಶೇಷ ಪ್ರೀತಿ. ಅವರ ಬಹುಪಾಲು ಕವಿತೆಗಳು ಈ ನಡೆಗಳಲ್ಲಿಯೇ ಇವೆ. ಅದರಲ್ಲಿಯೇ ಅವರು ಸಾಧಿಸಿರುವ ವೈವಿಧ್ಯ ಗಮನಾರ್ಹವಾಗಿದೆ. ಕೊನೆಕೊನೆಗೆ ಅವರು ಮುಕ್ತ ಛಂದದ ಕಡೆಗೂ ಹೊರಳಿದ್ದಾರೆ.

ನವೋದಯದ ಒಳ್ಳೆಯ ದಿನಗಳನ್ನು, ನವೋದಯ ಕಾವ್ಯದ ಒಳ್ಳೆಯ ಮಾದರಿಗಳನ್ನು ನೆನಪಿಸುವ ಈ ಕವಿತೆಗಳನ್ನು ಸಂಕಲನವಾಗಿ ಪ್ರಕಟಿಸಿ ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್‌ನವರು ಒಳ್ಳೆಯ ಕೆಲಸ ಮಾಡಿದ್ದಾರೆ. ಕಾವ್ಯಾಭಿರುಚಿ ಬದಲಾಗಿರುವ ಇಂದಿನ ದಿನಗಳಲ್ಲಿ ಬೇಸಿಗೆಯ ಸಂಜೆಗಳಲ್ಲಿ ಬೀಸುವ ಧಾರವಾಡದ ತಂಗಾಳಿಯಂತೆ ಈ ಕವಿತೆಗಳು ಮುದ ನೀಡುತ್ತವೆ.

ಮುನ್ನುಡಿಗಳನ್ನು ಬೆರೆಯಲೊಲ್ಲದ ನನ್ನನ್ನು ಪ್ರೀತಿ-ವಿಶ್ವಾಸಗಳಿಂದ ಕಟ್ಟಿಹಾಕಿ ಕೀರ್ತಿನಾಥರ ಮಗ ರಾಮ ಕುರ್ತಕೋಟಿಯವರು ನನ್ನಿಂದ ಈ ಕೆಲಸ ಮಾಡಿಸಿಕೊಂಡಿದ್ದಾರೆ ಅದು ಹೇಗೋ, ತೀರಿಕೊಂಡವರಿಗೂ ನನಗೂ ಇದ್ದ ಅಂತಃಕರಣದ ಸಂಬಂಧ ಬೇರೆ ಬಗೆಯದು. ನನ್ನ “ಆ ಮುಖಾ-ಈ ಮುಖಾ” ಕಥಾ ಸಂಕಲನಕ್ಕೆ ಅವರು ಒಂದು ಸುಂದರವಾದ ಮುನ್ನುಡಿಯನ್ನು ಬರೆದುಕೊಟ್ಟಿದ್ದರು. ಲೆಕ್ಕವಿಲ್ಲದಷ್ಟು ಮುನ್ನುಡಿಗಳನ್ನು ಬರೆದಿದ್ದ ಕುರ್ತಕೋಟಿಯವರ ಮೊದಲ ಕವನಸಂಕಲನಕ್ಕೆ ಮುನ್ನುಡಿ ಬರೆಯದ ನಾನೊಂದು ಮುನ್ನುಡಿಯನ್ನು ಬರೆಯುವ ಪ್ರಸಂಗ ಒದಗಿ ಬಂದದ್ದೊಂದು ಯೋಗಾಯೋಗ.

– ೨೦೦೫

* ಕೀರ್ತಿನಾಥ ಕುರ್ತಕೋಟಿಯವರ ’ನಾವು ಬರಿಗೈಯವರು” (ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್, ಧಾರವಾಡ, ೨೦೦೫) ಕವನ ಸಂಕಲನಕ್ಕೆ ಬರೆದ ಮುನ್ನುಡಿ.