ಕನ್ನಡದಲ್ಲಿ ಮಹಿಳೆಯರು ಇನ್ನೂ ದೊಡ್ಡ ಸಂಖ್ಯೆಯಲ್ಲಿ ಬರವಣಿಗೆಯಲ್ಲಿ ತೊಡಗಿಸಿಕೊಳ್ಳದಿದ್ದ ಕಾಲದಲ್ಲಿಯೇ ಶ್ರೀಮತಿ ಶಾಂತಾದೇವಿ ಕಣವಿಯವರು ಸಣ್ಣಕತೆಗಳನ್ನು ಬರೆಯಲು ಆರಂಭಿಸಿದರು. ಅವರ ಮೊದಲ ಸಣ್ಣಕತೆ ‘ಸ್ವರೂಪದರ್ಶನ’ (“ಸಂಜೆಮಲ್ಲಿಗೆ”) ರಚನೆಯಾದದ್ದು ೧೯೫೮ರಲ್ಲಿ. ಈವರೆಗೆ ಅವರ “ಸಂಜೆಮಲ್ಲಿಗೆ” (೧೯೬೭), “ಬಯಲು ಆಲಯ” (೧೯೭೩), “ಕಳಚಿ ಬಿದ್ದ ಪೈಜಣ” (೧೯೭೩), “ಮರುವಿಚಾರ” (೧೯೮೭), “ಜಾತ್ರೆ ಮುಗಿದಿತ್ತು” (೧೯೮೧), “ಕಳಚಿ ಬಿಚ್ಚ ಪೈಜಣ: (೧೯೮೭), “ನೀಲಿಮಾ ತೀರ” (೧೯೯೨) ಮತ್ತು “ಗಾಂಧೀ ಮಗಳು” (೧೯೯೭) ಎಂಬ ಏಳು ಕಥಾಸಂಕಲನಗಳು ಪ್ರಕಟವಾಗಿವೆ. ಈಚಿನ ಹೊಸ ಕತೆಗಳನ್ನೂ ಸೇರಿಸಿದರೆ ಅವರು ಬರೆದಿರುವ ಒಟ್ಟು ಕತೆಗಳ ಸಂಖ್ಯೆ ೧೧೦ನ್ನು ದಾಟುತ್ತದೆ. ಕಿರೀಟ ೧/೮ ಆಕಾರದ ೧೧೫೦ ಪುಟಗಳಷ್ಟು ಅವರ ಬರವಣಿಗೆಯ ವ್ಯಾಪ್ತಿ ಇದೆ. ಅವರ ಕತೆಗಳ ಸರಾಸರಿ ಪುಟಸಂಖ್ಯೆ ೧೦.

ಈ ಸಂಗತಿಗಳು ಅವರ ಬರವಣಿಗೆಯ ಬಗ್ಗೆ ಕೆಲವು ಮುಖ್ಯ ವಿಷಯಗಳನ್ನು ಸೂಚಿಸುತ್ತವೆ. ಮೊದಲನೆಯದಾಗಿ, ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಅವರು ಕತೆಗಳನ್ನು ಬರೆದಿದ್ದಕ್ಕೆ ಮುಖ್ಯ ಕಾರಣ, ಅವರು ಸಣ್ಣ ಕತೆಯನ್ನು ತಮ್ಮ ಅಭಿವ್ಯಕ್ತಿಯ ಮುಖ್ಯ ಮಾಧ್ಯಮವನ್ನಾಗಿ ಆಯ್ದುಕೊಂಡದ್ದು. ಎರಡನೆಯದು, ಅವರ ಬರವಣಿಗೆಯ ಸ್ಥಿರತೆ; ಸತತವಾಗಿ ಅವರು ತಮ್ಮ ಬರವಣಿಗೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಮೂರನೆಯದು, ಅವರ ಸಣ್ಣಕತೆಗಳ ಹ್ರಸ್ವತೆ; ಅವರ ಕತೆಗಳ ಕಿರು ಗಾತ್ರ ಅವುಗಳ ತೀವ್ರತೆಗೆ ಕಾರ‍ಣವಾಗಿರುವಂತೆ ಸ್ವಲ್ಪ ಮಟ್ಟಿನ ಸರಳತೆಗೂ ಕಾರಣವಾಗಿದೆ.

ಹೀಗೆ ೪೫ ವರ್ಷಗಳಿಂದ ಅವರು ಕತೆಗಳನ್ನು ಬರೆಯುತ್ತಿದ್ದರೂ ಅವರ ಕಥಾಸಂಕಲನಗಳಿಗೆ ಆಗಾಗ ಬರೆದಿರುವ ಬಸವರಾಜ ಕಟ್ಟೀಮನಿ (“ಸಂಜಮಲ್ಲಿಗೆ”), ಶಂಕರ ಮೊಕಾಶಿ-ಪುಣೇಕರ (“ಬಯಲು-ಆಲಯ”), ಎಲ್.ಎಸ್. ಶೇಷಗಿರಿರಾವ್ (“ಕಳಚಿ ಬಿದ್ದ ಪೈಜಣ”), ಕ.ವೆಂ. ರಾಜಗೋಪಾಲ (“ನೀಲಿಮಾ ತೀರ”) ಅವರ ಮುನ್ನುಡಿಗಳನ್ನು ಮತ್ತು ಜಿ.ಎಸ್.ಆಮೂರ ಅವರು ಬರೆದಿರುವ ಬೆನ್ನುಡಿ (“ನೀಲಿಮಾ ತೀರ”) ಯನ್ನು, ಪತ್ರಿಕೆಗಳಲ್ಲಿ ಬಂದಿರುವ ಸಂಕ್ಷಿಪ್ತ ವಿಮರ್ಶೆಯನ್ನು ಮತ್ತು ಕೆಲವು ಸಮೀಕ್ಷೆಗಳಲ್ಲಿ ಬಂದಿರುವ ಪ್ರಸ್ತಾಪಗಳನ್ನು ಬಿಟ್ಟರೆ, (ಉದಾ: ಮಲ್ಲಿಕಾ ಘಂಟಿಯವರ “ಕನ್ನಡದಲ್ಲಿ ಮಹಿಳಾ ಕಥಾಸಾಹಿತ್ಯ”-೧೯೯೪) ಶಾಂತಾದೇವಿಯವರ ಸಣ್ಣಕತೆಗಳನ್ನು ಕುರಿತು ಗಂಭೀರ ವಿಮರ್ಶೆ ಬಂದಂತೆ ಕಾಣುವುದಿಲ್ಲ. ವೀಣಾ ಶಾಂತೇಶ್ವರ ಅವರು ಸಂಪಾದಿಸಿರುವ “ಸಣ್ಣ ಕತೆಗಳ ಸಂಕಲನ” (೨೦೦೧) ವನ್ನು ಬಿಟ್ಟರೆ, ಅವರ ಕತೆಗಳು ಯಾವ ಪ್ರಾತಿನಿಧಿಕ ಸಾಮಾನ್ಯ ಸಂಕಲನಗಳಲ್ಲೂ ಸ್ಥಾನ ಪಡೆದಿಲ್ಲ. ಮಹಿಳಾ ಸಾಹಿತ್ಯವನ್ನು ಕುರಿತು ಕನ್ನಡ ವಿಮರ್ಶೆ ಈವರೆಗೆ ತಳೆದಿದ್ದ ಔದಾಸೀನ್ಯವೂ ಇದಕ್ಕೆ ಒಂದು ಕಾರಣವಾಗಿರಬಹುದು. ಈ ಔದಾಸೀನ್ಯಕ್ಕೆ ಸಾಹಿತ್ಮಿಕವಾಗಿ ಏನೇ ಸಮರ್ಥನೆಗಳಿದ್ದರೂ, ಕೇವಲ ಸಾಹಿತ್ಯಿಕ ಶ್ರೇಷ್ಠತೆಯ ಮಾನದಂಡಗಳಿಂದ ಸಾಹಿತ್ಯವನ್ನು ಅಳೆಯುವ ಪ್ರವೃತ್ತಿ ಈಚೆಗೆ ಬದಲಾಗಿ, ಸಾಂಸ್ಕೃತಿಕ ಆಸಕ್ತಿಗಳೂ ವಿಮರ್ಶೆಯಲ್ಲಿ ಸೇರಿಕೊಳ್ಳುತ್ತಿರುವುದರಿಂದಾಗಿ ಜನಪ್ರಿಯ ಸಾಹಿತ್ಯದಿಂದ ಮೊದಲುಗೊಂಡು ಎಲ್ಲ ಸಾಹಿತ್ಯವನ್ನೂ ಗಂಭೀರವಾಗಿ ಅಭ್ಯಸಿಸುವ ಕ್ರಮಗಳು ಆರಂಭವಾಗಿವೆ. ಅದರಲ್ಲೂ ಸ್ತ್ರೀವಾದಿ ಅಧ್ಯಯನಗಳು ಆರಂಭವಾದ ಮೇಲೆ, ಈವರೆಗೆ ಹಿನ್ನೆಲೆಗೆ ಸರಿದಿದ್ದ ಅನೇಕ ಲೀಖಕಿಯರನ್ನು ಕುರಿತು ಹೊಸ ದೃಷ್ಟಿಕೋನ ತೆರೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಶಾಂತಾದೇವಿ ಕಣವಿಯವರ ಸಣ್ಣಕತೆಗಳನ್ನು ನೋಡಬಹುದಾಗಿದೆ.

ಶಾಂತಾದೇವಿಯವರು ಸಣ್ಣಕತೆಗಳನ್ನು ಬರೆಯಲು ಆರಂಭಿಸಿದಾಗ ಆಗಲೇ ಕನ್ನಡದಲ್ಲಿ ನವ್ಯತೆ ಆರಂಭವಾಗಿತ್ತಾದರೂ, ಅವರಿಗೆ ಆದರ್ಶ ಮಾದರಿಯಾಗಿ ಕಂಡದ್ದು ಮಾಸ್ತಿ ಸಂಪ್ರದಾಯ. ಉದಾರ ಮಾನವತಾವಾದಿ ದರ್ಶನದಲ್ಲಿ ಬದುಕನ್ನು ಎಲ್ಲ ವಿವರಗಳಲ್ಲಿ ನಿರೀಕ್ಷಿಸಿ ದಾಖಲಿಸುವ ರೀತಿಯಲ್ಲಿ, ವಾಸ್ತವವಾದಿ ಚಿತ್ರಣದಲ್ಲಿ ಮಾಸ್ತಿಯವರ ಪ್ರಭಾವ ಶಾಂತಾದೇವಿಯವರ ಕತೆಗಳ ಮೇಲೆ ದಟ್ಟವಾಗಿ ಹರಡಿರುವುದು ಕಾಣುತ್ತದೆ. ಅಲ್ಪ-ಸ್ವಲ್ಪ ಬದಲಾವಣೆಗಳೊಂದಿಗೆ ಅದು ಅವರ ಈಚಿನ ಕತೆಗಳಲ್ಲೂ ಮುಂದುವರಿದುಕೊಂಡು ಬಂದಿದೆ. ಬದುಕಿನಲ್ಲಿ ನೋವು ಇದ್ದರೂ, ಸಹನೆಯ ಮೂಲಕ, ಹೊಂದಾಣಿಕೆಯಿಂದ, ತಿಳುವಳಿಕೆಯಿಂದ, ಪ್ರೀತಿಯಿಂದ, ತ್ಯಾಗದಿಂದ ಅದನ್ನು ಸರಿಪಡಿಸಿಕೊಳ್ಳಬಹುದೆಂಬ ಮಾಸ್ತಿಯವರ ನಿಲುವು ಶಾಂತಾದೇವಿಯವರ ಕತೆಗಳಲ್ಲೂ ಕಾಣುತ್ತದೆ. ಅಂತೆಯೇ ಅವರ ಎಲ್ಲ ಮಹತ್ವದ ಕತೆಗಳಲ್ಲಿ ಸಮಸ್ಯೆ ದೀರ್ಘಕ್ಕೆ ಹೋಗಿ ಹರಿಯುವುದಿಲ್ಲ. ನವ್ಯಕಥೆಗಳಲ್ಲಿಯಂತೆ ಸಂದಿಗ್ಧದಲ್ಲೂ ನಿಲ್ಲುವುದಿಲ್ಲ. ಬದಲಾಗಿ ಸಮಾಧಾನಕರವಾದ ಮರುಹೊಂದಾಣಿಕೆಯಲ್ಲಿ ಅಥವಾ ನಿಶ್ಚಿತ ಪರಿಹಾರದಲ್ಲಿ ಸಮಸ್ಯೆ ಬಗೆಹರಿಯುತ್ತದೆ. ಇದಕ್ಕೆ ಅಪವಾದವಾಗಿ ಒಂದೆರಡು ಕತೆಗಳು ಕಾಣುತ್ತವಾದರೂ ಅವರ ಮುಖ್ಯ ಕಾಳಜಿ ಇರುವುದು ಹೊಂದಾಣಿಕೆಯಲ್ಲಿ.

ಅವರ ಎಲ್ಲ ಸಣ್ಣಕತೆಗಳಲ್ಲೂ ಎದ್ದು ಕಾಣುವ ಒಂದು ಮುಖ್ಯ ಅಂಶವೆಂದರೆ ಕಥೆ ಹೇಳಬೇಕೆನ್ನುವ ತವಕ. ವೈಚಾರಿಕತೆಯನ್ನು ಅದರ ಪಾಡಿಗೆ ಬಿಟ್ಟು, ಸ್ವಾರಸ್ಯವಾಗಿ ಕಥೆ ಹೇಳುವುದರಲ್ಲಿಯೇ ಅವರು ತಮ್ಮ ಗಮನವನ್ನು ಕೇಂದ್ರಿಕರಿಸುತ್ತಾರೆ. ಘಟನೆಗಳ ನಿರೂಪಣೆಗಾಗಿಯೇ ಅವರ ಕಲೆಗಾರಿಕೆಯ ಎಲ್ಲ ಸಾಧನಗಳೂ ದುಡಿಯುತ್ತವೆ. ದೀರ್ಘ ವರ್ಣನೆಗಳಾಗಲಿ, ವೈಚಾರಿಕ ಗೊಂದಲಗಳ ವಿಶ್ಲೇಷಣೆಗಳಾಗಲಿ ಅವರ ಕತೆಗಳಲ್ಲಿ ಇಲ್ಲ. ನೇರವಾಗಿ ಕಥೆಯ ನಿರೂಪಣೆಯೇ ಇದೆ. ಅವರ ಕತೆಗಳು ಚಿಕ್ಕವಾಗಿರುವುದಕ್ಕೆ ಇದೂ ಒಂದು ಕಾರಣ. ಈಚಿನ ಕೆಲವು ಕತೆಗಳಲ್ಲಿ-ನವ್ಯದ ಪ್ರಭಾವದಿಂದಲೋ ಏನೊ-ಪಾತ್ರಗಳ ಮನೋವಿಶ್ಲೇಷಣೆಯನ್ನೂ ಅವರು ಅಳವಡಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ ಇದು ನವ್ಯಕಥೆಗಳಲ್ಲಿ ಬರುವ ವರ್ತಮಾನದ ಆ ಕ್ಷಣದ ಮಾನಸಿಕ ತೊಳಲಾಟ, ಸಾಂಕೇತಿಕತೆ, ಸಂದಿಗ್ಧತೆ, ಹೊಯ್ದಾಟಗಳ ಮಾದರಿಯ ಪ್ರಜ್ಞಾಪ್ರವಾಹ ತಂತ್ರವಲ್ಲ. ಅದು ಅವರ ಕತೆಗಾರಿಕೆಯ ಸಹಜ ಸ್ವಭಾವಕ್ಕೆ ಒಗ್ಗುವುದಿಲ್ಲ. ಪಾತ್ರಗಳ ಒಳಮನಸ್ಸಿನ ಕಡೆಗೆ ತಿರುಗಿದ ಕೂಡಲೇ ಅವು ಸ್ವಗತವಾಗಿ- ಆತ್ಮವಿಶ್ಲೇಷಣೆಗಳಲ್ಲ – ಆತ್ಮಕಥೆಗೆ ತಿರುಗಿಕೊಳ್ಳುತ್ತವೆ. ಈ ಆತ್ಮಕಥೆಗಳಲ್ಲಿ ‘ಪ್ಲ್ಯಾಷ್ ಬ್ಯಾಕಿ’ನ ರೀತಿಯಲ್ಲಿ ಹಿಂದೆ ನಡೆದ ಘಟನೆಗಳೇ ನಿರೂಪಿತವಾಗಿ ಕಥೆಯನ್ನು ಬೆಳೆಸುತ್ತವೆ. ಉದಾಹರಣೆಯೆಂದು ‘ಬಯಲು- ಆಲಯ’ ಕತೆಯ ಜಾನಕ್ಕನ ನೆನಪು- ಹಳವಂಡ – ಆತಂಕಗಳನ್ನು ನೋಡಬಹುದು. ಅವೆಲ್ಲ ಗಂಡನೊಂದಿಗೆ ಹಿಂದೆ ನಡೆದಿದ್ದ ಜಗಳದ ಕಥೆಯನ್ನು ನಿರೂಪಿಸುತ್ತವೆ. ಎಷ್ಟೋ ಸಲ ಸಂಭಾಷಣೆಗಳೂ ಸಹ ಘಟನೆಗಳನ್ನು ನಿರೂಪಿಸುತ್ತವೆ. ಇದಕ್ಕೆ ಉದಾಹರಣೆಗಳನ್ನು ಮುಂದೆ ಕೊಡಲಿದ್ದೇನೆ.

ಕಥೆ ಹೇಳಬೇಕೆನ್ನುವ ಈ ತವಕ ಅಥವಾ ಗುಂಗು, ಕಥೆಗಾಗಿ ರೋಚಕ ಸನ್ನಿವೇಶಗಳನ್ನು ಹುಡುಕಿಕೊಂಡು ಹೋಗುವ ಹವ್ಯಾಸ ‘ಮುಖಾಮುಖಿ’ (“ಕಳಚಿ ಬಿದ್ದ ಪೈಜಣ”), ‘ಆಜನ್ಮ ಶಿಕ್ಷೆ’ (“ಜಾತೆ ಮುಗಿದಿತ್ತು”) ಮೊದಲಾದ ಕೆಲವು ಕತೆಗಳಲ್ಲಿ ಆಕಸ್ಮಿಕಗಳಿಗೆ ಮೊರೆಹೋಗಿ ‘ಮೆಲೊಡ್ರಮ್ಯಾಟಿಕ್’ ಆದದ್ದೂ ಇದೆ. ‘ನೀಲಿಮಾ ತೀರ’ದಲ್ಲಿಯಂತೆ ಅತಿ ಭಾವುಕವಾದದ್ದೂ ಅಲ್ಲ. ತಮ್ಮ ಯಶಸ್ವಿ ಕತೆಗಳಲ್ಲಿ ವಾಸ್ತವವಾದದ ಮೇಲಿನ ಹಿಡಿತದಿಂದ ಈ ದೋಷಗಳನ್ನು ಅವರು ಸಹಜವಾಗಿ ಪರಿಹರಿಸಿಕೊಂಡಿದ್ದಾರೆ.

ಶಾಂತಾದೇವಿಯವರ ಬಹಳಷ್ಟು ಕತೆಗಳಲ್ಲಿ ಚಿತ್ರವಾಗಿರುವ ಮುಖ್ಯ ವಸ್ತು ಕೌಟುಂಬಿಕ ಬಿಕ್ಕಟ್ಟು, ಭಾರತದ ವಿಶಿಷ್ಟ ಕುಟುಂಬ ವ್ಯವಸ್ಥೆಯಲ್ಲಿ ಹೆಣ್ಣು ಎದುರಿಸಬೇಕಾದ ಸಮಸ್ಯೆಗಳು. ಈ ವಸ್ತುವನ್ನು ಅವರು ಮೂರು ನೆಲೆಗಳಲ್ಲಿ ನಿರ್ವಹಿಸಿದ್ದಾರೆ. ಒಂದು, ಗ್ರಾಮೀಣ ಕೌಟುಂಬಿಕ ವ್ಯವಸ್ಥೆಯ ನೆಲೆ. ಇಂಥ ಕತೆಗಳು ಕೆಲವೇ ಇದ್ದರೂ, ಅವುಗಳ ಸ್ವರೂಪ-ಪರಿಹಾರ ಭಿನ್ನವಾಗಿವೆ. ಇನ್ನೊಂದು, ಸುಶಿಕ್ಷಿತ ಮಧ್ಯಮ ವರ್ಗದ ನೆಲೆ. ಈ ಹಿನ್ನೆಲೆಯ ಕತೆಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. ಬಹುಶಃ ಇದು ಶಾಂತಾದೇವಿಯವರಿಗೆ ಹೆಚ್ಚು ಪರಿಚಿತವಾದ ಲೋಕವಾಗಿರುವುದೇ ಇದಕ್ಕೆ ಕಾರಣವಾಗಿದೆ. ಇಲ್ಲಿಯ ಸಮಸ್ಯೆಗಳಲ್ಲಿ ಮತ್ತು ಸನ್ನಿವೇಶಗಳಲ್ಲಿ ಸಾಕಷ್ಟು ವೈವಿಧ್ಯವಿದೆ. ಮೂರನೆಯದು, ಕೆಳವರ್ಗದ ನೆಲೆ. ಈ ನೆಲೆಯಲ್ಲಿ ನೇರ ನಿರೂಪಣೆಯ ಸ್ವತಂತ್ರ ಕತೆಗಳಿಲ್ಲ. ಮಧ್ಯಮ ವರ್ಗದ ಬದುಕಿನ ಕತೆಗಳಲ್ಲೇ ಇವು ಸಮಾಂತರವಾಗಿ ವೈದೃಶ್ಯವಾಗಿ ಬಂದು ಒಂದು ಇನ್ನೊಂದರ ಮೇಲೆ ಬೆಳಕು ಚೆಲ್ಲುತ್ತವೆ. ಇಲ್ಲೆಲ್ಲ ಮಧ್ಯಮ ವರ್ಗದ ಹೆಣ್ಣಿನ ದೃಷ್ಟಿಕೋನವೇ ಕಥೆಯನ್ನು ನಿಯಂತ್ರಿಸುತ್ತದೆ. ಬಹುಶಃ ಈ ಬದುಕಿನ ನಿಕಟ ಪರಿಚಯ ಇಲ್ಲದಿರುವುದರಿಂದಲೇ ಏನೊ, ಇಂಥ ಕಥೆಗಳು ಹೊರಗಿನಿಂದ ನಿರೂಪಿತವಾಗಿವೆ.

ಈ ಎಲ್ಲ ನೆಲೆಗಳ ಚಿತ್ರಣದಲ್ಲೂ ಸಾಮಾನ್ಯವಾಗಿರುವ ಅಂಶವೆಂದರೆ, ಪುರುಷ ಪ್ರಧಾನವಾದ ಕೌಟುಂಬಿಕ ವ್ಯವಸ್ಥೆಯಲ್ಲಿ ಹೆಣ್ಣು ಅನುಭವಿಸುವ ಇಕ್ಕಟ್ಟುಗಳು, ಅಸುರಕ್ಷತೆ, ದೈಹಿಕ/ಮಾನಸಿಕ ಹಿಂಸೆ, ವೈಯಕ್ತಿಕ ಆಶೆ-ಆಕಾಂಕ್ಷೆಗಳ ದಮನ, ಅವಮಾನ, ಬಹಳಷ್ಟು ಕತೆಗಳಲ್ಲಿ ಪುರುಷಾಹಂಕಾರವೇ ಹೆಣ್ಣಿನ ಎಲ್ಲ ದುಃಖಕ್ಕೆ ಕಾರಣವಾಗಿದೆ. ಕೆಲವು ಸಲ ಅತ್ತೆ, ಮಾವ, ನಿದಿನಿ, ಮೈದುನ, ಭಾವ ಮೊದಲಾದವರೂ ಸೇರುತ್ತಾರೆ. ಒಂದೆರಡು ಅಪವಾದಗಳನ್ನು ಬಿಟ್ಟರೆ, ಎಲ್ಲ ಕತೆಗಳಲ್ಲೂ ಹೆಣ್ಣು-ಅದರಲ್ಲೂ ದಮನಕ್ಕೆ ಒಳಗಾದ ಹೆಣ್ಣು- ನಿರೂಪಕಿಯಾಗಿರುವುದರಿಂದ ಮತ್ತು ಅವಳ ದೃಷ್ಟಿಕೋನದಿಂದ ಸಮಸ್ಯೆಯನ್ನು ನೋಡಿರುವುದರಿಂದ ಗಂಡಿನ ದೌರ್ಜನ್ಯದ ಮೇಲೆ ಏಕಮುಖಿಯಾದ ಒತ್ತು ಬಿದ್ದಿದೆ. ಅಂತೆಯೇ ಪರಿಣಾಮ ಸಾಕಷ್ಟು ಕಟುವಾಗಿದೆ. ಇದರಿಂದ ಉಂಟಾಗಿರುವ ಒಂದು ಮಿತಿ ಎಂದರೆ, ಇಲ್ಲಿಯ ಪುರುಷ ಪಾತ್ರಗಳಿಗೆ ತಮ್ಮನ್ನು ಸಮರ್ಥಿಸಿಕೊಳ್ಳಲು ಸರಿಯಾದ ಅವಕಾಶವೇ ಸಿಗುವುದಿಲ್ಲ. ಸಿಕ್ಕರೂ ವಿಶೇಷ ಪ್ರಯೋಜನವಾಗುವುದಿಲ್ಲ. ಗಂಡಿನ ಬಗೆಗಿನ ಪೂರ್ವಾಗ್ರಹವೆಂಬಂತೆ ಕತೆಗಳಲ್ಲಿ ಈ ರಚನೆ ಮತ್ತೆಮತ್ತೆ ಕಾಣಿಸಿಕೊಳ್ಳುತ್ತದೆ. ನವ್ಯ ಕತೆಗಳಲ್ಲಿ ಹೆಣ್ಣು ಅಂಚಿಗೆ ಸರಿಸಲ್ಪಟ್ಟಿದ್ದಾಳೆ- ಎಂಬ ಆಪಾದನೆ ಇದ್ದರೆ, ಇದಕ್ಕೆ ಪ್ರತಿಯಾಗಿ ಇಲ್ಲಿ ಗಂಡು ಅಂಚಿಗೆ ಸರಿಸಲ್ಪಟ್ಟಿದ್ದಾನೆ. ವಾಸ್ತವ ಸಂಗತಿ ಏನೆಂದರೆ, ಗಂಡಿಗೆ ಸಿಕ್ಕಿರುವ ಈ ಅಂಚು ಕೂಡ ಸುರಕ್ಷಿತವಾಗಿಲ್ಲ. ಇದು ಸಮಸ್ಯೆಯನ್ನು ಸ್ವಲ್ಪಮಟ್ಟಿಗೆ ಸರಳಗೊಳಿಸುತ್ತದೆ. ನಮ್ಮ ಕುಟುಂಬ ವ್ಯವಸ್ಥೆಯಲ್ಲಿ ಹೆಣ್ಣು ಅನುಭವಿಸುತ್ತಿರುವ ಇಕ್ಕಟ್ಟಿನಲ್ಲಿ ಗಂಡಿನ ಪಾತ್ರವನ್ನು ಒಪ್ಪಿಕೊಂಡೂ ಈ ಮಾತು ಹೇಳಬೇಕಾಗುತ್ತದೆ.

‘ಕಿತ್ತು ಹಚ್ಚಿದ ಗಿಡಾ’ (“ಸಂಜೆ ಮಲ್ಲಿಗೆ”) ಎಂಬುದು ಶಾಂತಾದೇವಿಯವರ ಒಂದು ಕತೆಯ ಹೆಸರು. ಇದು, ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ಹೆಣ್ಣು ಅನುಭವಿಸಬೇಕಾದ ಒಂದು ಅನಿವಾರ್ಯ ಅವಸ್ಥೆಗೆ ಅತ್ಯಂತ ಸಮರ್ಪಕವಾದ ರೂಪಕ. ಸಾಮಾನ್ಯವಾಗಿ ಶಾಂತಾದೇವಿಯವರದು ರೂಪಕಾತ್ಮಕ ಶೈಲಿಯಲ್ಲವಾದರೂ, ತಮ್ಮ ವಾಸ್ತವ ಮಾರ್ಗದ ಶೈಲಿಯಲ್ಲೇ ಅವರು ಕ್ವಚಿತ್ತಾಗಿ ಇಂಥ ರೂಪಕಗಳನ್ನು ಬಳಸುತ್ತಾರೆ. ವಿಶಿಷ್ಟ ಗುಣದ ಮಣ್ಣು-ನೀರು-ಹವಾಮಾನಗಳಲ್ಲಿ ಸಹಜವಾಗಿ ಬೆಳೆದ ಗಿಡವನ್ನು ಕಿತ್ತು ಬೇರೆ ಗುಣದ ಮಣ್ಣು-ನೀರು-ಹವಾಮಾನಗಳಿರುವ ಮತ್ತೊಂದು ಜಗೆಯಲ್ಲಿ ಹಚ್ಚಿದಾಗ ಅದು ಅನುಭವಿಸುವಂಥ ಸಂಕಟವನ್ನು ಪ್ರತಿಯೊಬ್ಬ ಹೆಣ್ಣು ಅನುಭವಿಸಬೇಕಾಗುತ್ತದೆ. ತವರು ಮನೆಯಿಂದ ಗಂಡನ ಮನೆಗೆ ಬಂದು ಹೊಸ ವಾತಾವರಣಕ್ಕೆ ಹೊಂದಿಕೊಳ್ಳಬೇಕಾದ ಹೆಣ್ಣಿನ ಕಷ್ಟವನ್ನು ಈ ರೂಪಕ ಸಮರ್ಥವಾಗಿ ಸಂಕೇತಿಸುತ್ತದೆ. ಕುಟುಂಬ ಜೀವನದ ಇಕ್ಕಟ್ಟಿನಲ್ಲಿ ಹೆಣ್ಣು ಅನುಭವಿಸುವ ಎಲ್ಲ ಕಷ್ಟಗಳಿಗೂ ಇದೇ ಮೂಲ. ಇದರ ಜೊತೆಗಿನ ಗಂಡ-ಹೆಂಡತಿಯರ ಮನೋಧರ್ಮಗಳಲ್ಲಿ ಹೊಂದಾಣಿಕೆಯಿರದಿದ್ದರೆ, ಅದು ಇಬ್ಬರ ಕಷ್ಟಕ್ಕೂ ಕಾರಣವಾಗುತ್ತದೆ; ಮತ್ತು ಇಂಥ ಸಂದರ್ಭದಲ್ಲಿ ಯಾರು ಯಾರನ್ನು ಅನುಸರಿಸಿಕೊಂಡು ಹೋಗಬೇಕೆನ್ನುವುದು ಸಮಸ್ಯೆಯಾಗುತ್ತದೆ.

ಈ ಮಾತುಗಳ ಹಿನ್ನೆಲೆಯಲ್ಲಿ ಶಾಂತಾದೇವಿಯವರ ಮೂರು ಪ್ರಾತಿನಿಧಿಕ ಸಣ್ಣಕತೆಗಳನ್ನು ಪರಿಶೀಲಿಸಬಹುದು.

ಮೊದಲಿಗೆ, ಅವರ ಕತೆಗಾರಿಕೆಯ ಒಂದು ನೆಲೆಯಾದ ಗ್ರಾಮೀಣ ಹಿನ್ನೆಲೆಯ ಪ್ರಾತಿನಿಧಿಕ ಕಥೆ ಎನ್ನಬಹುದಾದ ‘ಬಾರುಕೋಲು’ (“ಕಳಚಿ ಬಿದ್ದ ಪೈಜಣ”) ಎಂಬ ಕತೆಯನ್ನು ನೋಡೋಣ. ಇಲ್ಲಿಯೂ ಕೂಡ ಕೌಟುಂಬಿಕ ಜೀವನದ ಇಕ್ಕಟ್ಟಿನದೇ ಒಂದು ಚಿತ್ರವಿದೆ. ಆದರೆ ಇಲ್ಲಿ ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಕಾರಣವಾಗಿರುವುದು ಗಂಡಲ್ಲ. ಹೆಣ್ಣು, ಮಾದವ್ವ ತನ್ನ ಅತ್ತೆ ಸಂಕ್ರವ್ವನ ಕೈಯಲ್ಲಿ ತರತರದಿಂದ ನೋವು ಅನುಭವಿಸಿದವಳು. ಒಮ್ಮೆ ಆಕೆಯ ಕೈಯಿಂದ ಮಣ್ಣಿನ ಹರವಿ ಜಾರಿ ಬಿದ್ದು ಒಡೆದದ್ದೇ ನೆಪವಾಗಿ ಸಂಕ್ರವ್ವ ಸೊಸೆಯನ್ನು “ನೆಲಕ್ಕೆ ಕೆಡಾವಿ, ಬೆನ್ನು ಹತ್ತಿ ಕೂತು, ಕೂದಲು ಜಗ್ಗಿ ಹೊಡೆಯುತ್ತಿದ್ದುದನ್ನು ನೋಡಿದ ಮಾವ ಕನಿಕರಪಟ್ಟು ಬಿಡಿಸಲು ಬಂದ. ಆಗ ಹೆಂಡತಿಯ ಬಾಯಿಂದ ಹೊರಹೊಮ್ಮಿದ ಅಶ್ಲೀಲ ಬೈಗುಳಗಳನ್ನು ಕೇಳಿದ ಮಾವ ಕಿವಿ ಮುಚ್ಚಿಕೊಂಡು ಹೊರಗೆ ಓಡಿಹೋದದ್ದನ್ನು ಮೊದಲಿಗಿಂತ ಇಮ್ಮಡಿ ಸಿಟ್ಟಿನಿಂದ ಸಂಕ್ರವ್ವ ಸೊಸೆಯನ್ನು ಚಚ್ಚಿದ್ದನ್ನು” ಕತೆ ವಿವರವಾಗಿ ಚಿತ್ರಿಸುತ್ತದೆ. ಚುಟುಕಾ ಕಾಯಿಸಿ ಸೊಸೆಯ ಮೈತುಂಬಾ ಕೊಟ್ಟಾ ಬರೆಗಳು ಅವಳ ಕಪ್ಪು ಮೈಯಲ್ಲಿ ಕಾಣುವುದಿಲ್ಲ. ಅಷ್ಟೆ ಮಕ್ಕಳನ್ನು ಹಡೆಯದ ಸೊಸೆಯನ್ನು ತರತರದಿಂದ ಉರಿಸಿಕೊಂಡು ಮನೆ ಬಿಟ್ಟು ಓಡಿಸಬೇಕೆಂದು ಅವಳ ಸಂಚು. “ಆದರೆ ಮಾದವ್ವ ಮೊಂಡ ಹೆಣ್ಣು; ಉಣ್ಣಲು ಉಡಲು ಕಡಿಮೆಯಿಲ್ಲದ ಅತ್ತೆಯ ಮನೆ ಬಿಟ್ಟು, ಕೂಳಿಗೆ ದಿಕ್ಕಿಲ್ಲದ; ಅವ್ವ-ಅಪ್ಪನೂ ಇಲ್ಲದ ತವರಿಗೆ ಅವಳೇಕೆ ಹೋದಾಳು? ನೆಲ ಕಚ್ಚಿ ನಿಂತಳು. “ಗ್ರಾಮೀಣ ಕುಟುಂಬಗಳಲ್ಲಿ ಸಾಮಾನ್ಯವೆಂಬಂಥ ಇಂಥ ದೌರ್ಜನ್ಯಕ್ಕೆ ಮಕ್ಕಳಾಗದ್ದು ಒಂದು ಕಾರ‍ಣವಾದರೆ, ಹೆಣ್ಣಿನ ಆರ್ಥಿಕ ಅಸಹಾಯಕತೆ ಇನ್ನೊಂದು ಕಾರಣ ಗಂಡನ ಮನೆಯನ್ನು ಬಿಟ್ಟರೆ ಬೇರೆ ಆಶ್ರಯವೇ ಇಲ್ಲ. ಇಂಥ ಸ್ಥಿತಿಯಲ್ಲಿ ದೌರ್ಜನ್ಯವನ್ನು ಅನಿವಾರ್ಯವಾಗಿ, ಮೌನವಾಗಿ ಅನುಭವಿಸುತ್ತ ನೆಲೆ ಕಚ್ಚಿ ನಿಲ್ಲಬೇಕಾದ ಹೆಣ್ಣಿನ ಅಸಹಾಯಕ ಚಿತ್ರ ಎದೆ ನಡುಗಿಸುವಂಥದು.

ಒಮ್ಮೆ ಹೀಗೇ, ಸೊಸೆಯನ್ನು ಬೆನ್ನಟ್ಟಿ ಹೊಡೆಯಲು ಹೋದ ಸಂಕ್ರವ್ವ ಸಿಟ್ಟಿನಲ್ಲಿ ಜೋಲಿ ತಪ್ಪಿ ಪಡಸಾಲೆಯ ಕಟ್ಟೆಯ ಮೇಲಿಂದ ಬಿದ್ದು ನಡ ಮುರಿದುಕೊಳ್ಳುತ್ತಾಳೆ. ಈಗ ಸೇಡು ತೀರಿಸಿಕೊಳ್ಳುವುದು ಮಾದವ್ವನ ಸರದಿ. ಆಕೆ ಅತ್ತೆಗೆ ಯಾವ ಉಪಚಾರವನ್ನೂ ಮಾಡದೆ ಕೆಟ್ಟದಾಗಿ ನಡೆಸಿಕೊಳ್ಳುತ್ತಾಳೆ. ಅವಳು ಸತ್ತ ಮೇಲೆ ತನ್ನ ತಂಗಿಯ ಮಗ ನಿಂಗಣ್ಣನನ್ನು ತಂದು ಮನೆಯಲ್ಲಿಟ್ಟುಕೊಂಡು ಅವನಿಗೆ ಮದುವೆ ಮಾಡುತ್ತಾಳೆ. ಆಕೆಯನ್ನು ಕಂಡರೆ ನಿಂಗನಿಗಷ್ಟೇ ಅಲ್ಲ. ಅವಳ ಗಂಡನಿಗೂ ಭಯ.

ತನ್ನ ಅತ್ತೆಯ ಕೈಯಲ್ಲಿ ಅಷ್ಟೆಲ್ಲ ಕಷ್ಟ ಸೋಸಿದ ಮಾದವ್ವ ತನ್ನ ಅತ್ತೆಯ ಮೇಲೆ ಸೇಡು ತೀರಿಸಿಕೊಂಡದ್ದು ಸಾಲಲಿಲ್ಲವೆಂಬಂತೆ ತನ್ನ ಸೊಸೆ ಚಿನ್ನವ್ವನನ್ನೂ ಕಾಡಿಸತೊಡಗುತ್ತಾಳೆ. ಗಂಡನೇನೋ ಚಿನ್ನವ್ವನನ್ನು ಪ್ರೀತಿಸುತ್ತಾನೆ. ಆದರೆ ಅವನ ಪ್ರೀತಿ ರಾತ್ರಿಯ ಏಕಾಂತಕ್ಕೆ ಮಾತ್ರ ಸೀಮಿತವಾದದ್ದು. (ಭಾರತೀಯ ಕುಟುಂಬಗಳಲ್ಲಿ ಇದೂ ಒಂದು ಸಾಮಾನ್ಯ ಸಂಗತಿ). ಅತ್ತೆ ತನ್ನ ಸೊಸೆಗೆ ಉಣ್ಣಲು, ಉಡಲು, ತೊಡಲು ಕಡಿಮೆ ಮಾಡುವುದಿಲ್ಲ. ಒಂದು ಸಲ, ಇದ್ದೂರಲ್ಲೇ ಇದ್ದ ತವರುಮನೆಗೆ ಸೊಸೆ ಚಿನ್ನವ್ವ ಹೋದಾಗ ಮಾದವ್ವ ಸೊಸೆಯ ಮೈಮೇಲೆ ಹಾಕಿದ್ದ ವಸ್ತ್ರ -ವಡವೆ ಸಹಿತ ಮನೆ ಕಳುವಾದದ್ದೇ ಕಾರಣವಾಗಿ, ಆಮೇಲೆ ಸೊಸೆಯನ್ನು ತಮರುಮನೆಗೆ ಕಳಿಸಲು ಒಪ್ಪುವುದಿಲ್ಲ. ಅವರ ಎಲ್ಲ ಸಂಬಂಧ ಹರಿದುಕೊಂಡು ಸೊಸೆಗೂ ನಿರ್ಬಂಧ ಹೇರುತ್ತಾಳೆ. ಕಳೆದುಹೋದ ವಸ್ತ್ರ-ವಡವೆ ತಿರುಗಿ ತಂದು ಕೊಡಬೇಕೆಂದು ಅವಳ ಹಟ. ಜೀವ ತಡೆಯದೆ ಚಿನ್ನವ್ವ ಅತ್ತೆಗೆ ಎದುರಾಡಿದ್ದೇ ನೆಪವಾಗಿ ಮಾದವ್ವ, ತನಗೆ ತನ್ನ ಅತ್ತೆ ಮಾಡಿದಂತೆ, ಚುಟುಕಾ ಕಾಯಿಸಿ ಸೊಸೆಯ ಬೆನ್ನಿನ ಮೇಲೆ ಬರೆ ಎಳೆಯುತ್ತಾಳೆ. ಇದು ತಲೆಮಾರಿನಿಂದ ತಲೆಮಾರಿಗೆ ಸಾಗಿ ಬಂದಿರುವ ದೌರ್ಜನ್ಯವೆಂಬಂತೆ ಕತೆ ಚಿತ್ರಿಸುತ್ತದೆ. ಇದರಲ್ಲಿ ಯಾರಿಗೆ ಏನನ್ನಬೇಕೋ ತಿಳಿಯದ ಸ್ಥಿತಿಯಿದೆ. ಮೊದಲಿಗೆ ಮಾದವ್ವನ ಬಗೆಗೆ ಹುಟ್ಟುವ ಅನುಕಂಪ ಬದಲಾಗಿ ಅವಳ ಮೇಲೆ ಸಿಟ್ಟು ಬರುತ್ತದೆ. ಈಗ ಅನುಕಂಪ ಚಿನ್ನವ್ವನತ್ತ ವಾಲುತ್ತದೆ.

ಮಗಳ ಮೇಲೆ ನಡೆದ ದೌರ್ಜನ್ಯದ ಸುದ್ಧಿ ಕೇಳಿದ ಚಿನ್ನವ್ವನ ಅಪ್ಪ ಗುರಪ್ಪ ಕೆಂಡಾಮಂಡಲವಾಗಿ ಮನೆಗೆ ಬಂದು ಹಕ್ಕೆಯಲ್ಲಿ ತೂಗುಬಿದ್ದಿದ್ದ ಬಾರುಕೋಲು ಎಳೆದುಕೊಂಡು ಮಾದವ್ವನ ಮೇಲೆ ಮನಬಂದಂತೆ ಬೀಸುತ್ತಾನೆ. ಅವಳ ರಂಬಾಟವನ್ನು ನಿಂತು ನೋಡುವ ಯಾರೂ ಬಿಡಿಸಿಕೊಳ್ಳಲು ಬರುವುದಿಲ್ಲ. ಅಲ್ಲಿಗೆ ಮಾದವ್ವ ತಣ್ಣಗಾಗುತ್ತಾಳೆ. ಇಲ್ಲಿಗೆ ಕಥೆ ಮುಗಿಯಿತೆ? ಮೋಜಿನ ಸಂಗತಿ ಎಂದರೆ-

ಕತೆ ಇಲ್ಲಿಗೇ ಮುಗಿಯಲಿಲ್ಲ. ಚಿನ್ನವ್ವ ತವರುಮನೆಯಲ್ಲಿ ನಾಗರ ಪಂಚಮಿ ಹಬ್ಬ ಮಾಡಿ ಅತ್ತೆ ಮನೆಗೆ ಬಂದಳೂ. ಅವಳೀಗ ಆರು ಮಕ್ಕಳ ತಾಯಿ. ಗುರಪ್ಪ ಆಗಾಗ ಮಗಳ ಮನೆಗೆ ಹೋಗಿ ಮೊಮ್ಮಕ್ಕಳನ್ನು ಆಡಿಸಿ, ನಕ್ಕು ನಲಿದು ಮಾದವ್ವನೊಡನೆ ಹರಟೆ ಹೊಡೆದು ಬರುತ್ತಾನೆ.

ಈ ಕತೆಯಲ್ಲಿಯಂತೆ, ಕೌಟುಂಬಿಕ ಬಿಕ್ಕಟ್ಟು ಬಗೆಹರಿದು, ಕಥೆ ಸುಖಾಂತವಾಗಬೇಕೆಂಬ ತುಡಿತ ಶಾಂತಾದೇವಿಯರ ಬಹುತೇಕ ಕತೆಗಳ ಹಿಂದಿರುವ ಒತ್ತಾಸೆಯಾಗಿದೆ. ಹಾಗೆಯೇ, ಇದು ಜನಪ್ರಿಯ ಕತೆಗಾರಿಕೆಯ ಒಂದು ಮುಖ್ಯ ಲಕ್ಷಣವೂ ಹೌದು; ದುಷ್ಟರಿಗೆ ತಕ್ಕ ಶಿಕ್ಷೆಯಾಗಿ ಒಳ್ಳೆಯವರಿಗೆ ಸುಖವಾಗಬೇಕು; ಇದು ಓದುಗರಿಗೆ ಒಂದು ಬಗೆಯ ಮಾನಸಿಕ ಸಮಾಧಾನವನ್ನು ಕೊಡುತ್ತದೆ. ಕತೆಗಾರಿಕೆಯ ದೃಷ್ಟಿಯಿಂದ ಸಮಾಧಾನ ಕೊಡುವ ಅಂಶವೆಂದರೆ, ಕಥೆಗೆ ಸಿಗುವ ಖಚಿತ ಮುಕ್ತಾಯ; ಇಲ್ಲದಿದ್ದರೆ ಓದುಗ ಗಲಿಬಿಲಿಗೊಳ್ಳುತ್ತಾನೆ ಮತ್ತು ಗಲಿಬಿಲಿಗೊಳ್ಳಲು ಸಾಮಾನ್ಯ ಓದುಗರು ಇಷ್ಟಪಡುವುದಿಲ್ಲ.

ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ, ಗ್ರಾಮೀಣ ಬದುಕಿನ ಬಗ್ಗೆ ಕತೆಗಾರ್ತಿಗಿರುವ ಆಪ್ತ ತಿಳುವಳಿಕೆ. ಹಳ್ಳಿಯ ಪರಿಸರದ ಚಿತ್ರಣ, ಅದರಲ್ಲೂ ವಿಶೇಷವಾಗಿ ಒಕ್ಕಲುತನಕ್ಕೆ ಸಂಬಂಧಿಸಿದ ವಿವರಗಳು ಅತ್ಯಂತ ನೈಜವಾಗಿವೆ. ಈ ಕತೆಯಲ್ಲಿ ಗುರಪ್ಪನ ಒಕ್ಕಲುತನಕ್ಕೆ ಸಂಬಂಧಿಸಿದ ವಿವರಗಳು ಅತ್ಯಂತ ನೈಜವಾಗಿವೆ. ಈ ಕತೆಯಲ್ಲಿ ಗುರಪ್ಪನ ಬಣಿವೆ ಒಟ್ಟುವ ಕೌಶಲ್ಯವ ಕುರಿತ ವಿವರಗಳನ್ನು ಈ ದೃಷ್ಟಿಯಿಂದ ನೋಡಬೇಕು. ಇಂಥ ಚಿತ್ರಣಗಳಲ್ಲಿ ಶಾಂತಾದೇವಿಯವರ ಭಾಷೆಗೆ ಹೊಸದೊಂದು ಆಯಾಮ ಕೂಡಿಕೊಳ್ಳುತ್ತದೆ. ಗ್ರಾಮೀಣ- ಅದರಲ್ಲೂ ಒಕ್ಕಲುತನದ – ಹಿನ್ನೆಲೆಯ ಅವರ ಎಲ್ಲ ಕತೆಗಳಿಗೂ ಈ ಮಾತು ಅನ್ವಯಿಸುತ್ತದೆ. ಇದು ನಮ್ಮ ಹೆಣ್ಣುಮಕ್ಕಳ ಬರವಣಿಗೆಯಲ್ಲಿ ಬಹಳ ಅಪರೂಪವಾದ ಸಂಗತಿ.

ಶಾಂತಾದೇವಿಯವರ ಗ್ರಾಮೀಣ ಕತೆಗಳೇ ಹೀಗೆ ಸುಖಾಂತವಾಗಿಯೇ ಮುಗಿಯುತ್ತವೆಂದೇನಿಲ್ಲ. ‘ಬಾರುಕೋಲು’ ಕತೆಯ ಚಿನ್ನವನಂತೆ, ಜಾತ್ರೆಗೆಂದು ತವರು ಮನೆಗೆ ಹೋಗಿಬರಬೇಕೆಂದು ಹಂಬಲಿಸುವ ‘ಜಾತ್ರೆ ಮುಗಿದಿತ್ತು’ (“ಜಾತ್ರೆ ಮುಗಿದಿತ್ತು”) ಕತೆಯ ಮಲ್ಲವ್ವನ ಆಶೆ – ತಪ್ಪು ತಿಳುವಳಿಕೆಯಿಂದಾಗಿ- ಭೀಕರ ದುರಂತದಲ್ಲಿ ಮುಗಿಯುತ್ತದೆ. ಆದರೂ ಹೆಣ್ಣಿನ ಸ್ಥಿತಿಯಲ್ಲೇನೂ ವ್ಯತ್ಯಾಸವಿಲ್ಲ.

ಶಾಂತಾದೇವಿಯವರ ಎರಡನೆಯ ನೆಲೆಯಾದ ಮಧ್ಯಮ ವರ್ಗದ ಬದುಕಿನಲ್ಲಿ ಕೂಡ ಇದೇ ಕೌಟುಂಬಿಕ ಬಿಕ್ಕಟ್ಟು-ಇಕ್ಕಟ್ಟುಗಳು ಮುಂದುವರಿಯುತ್ತವೆ. ಒಂದು ವಿಶೇಷ ವ್ಯತ್ಯಾಸವೆಂದರೆ, ಗ್ರಾಮೀಣ ಬದುಕಿನಲ್ಲಿ ಹೆಣ್ಣು ದೈಹಿಕ ಮತ್ತು ಮಾನಸಿಕ ಹಿಂಸೆಗಳೆರಡನ್ನೂ ಅನುಭವಿಸುತ್ತಿದ್ದರೆ, ಇಲ್ಲಿ ಅದೇ ಹೆಚ್ಚಾಗಿ ಸೂಕ್ಷ್ಮ ಮಾನಸಿಕ ಹಿಂಸೆಯಾಗಿ ಕಾಣಿಸಿಕೊಳ್ಳುತ್ತದೆ.

ಈ ಮಾತಿಗೆ ನಿದರ್ಶನವಾಗಿ ‘ಮರುವಿಚಾರ’ (“ಮರು ವಿಚಾರ”) ಎಂಬ ಕತೆಯನ್ನು ಪರಿಶೀಲಿಸಬಹುದು. ಎಲ್ಲ ದೃಷ್ಟಿಯಿಂದ ಇದು ಶಾಂತಾದೇವಿಯವರ ಪ್ರಾತಿನಿಧಿಕ ಕತೆ. ಅವರ ಕತೆಗಾರಿಕೆಯ ವೈಶಿಷ್ಟ್ಯ, ಶಕ್ತಿ, ಮಿತಿಗಳನ್ನೆಲ್ಲ ಎತ್ತಿ ತೋರಿಸುವಂಥದು.

ಇದು ಸರೋಜಳ ಕಥೆ. ಹಾಗೆಯೇ ಅವಳ ತಾಯಿ ಗಂಗಮ್ಮನ ಕಥೆಯೂ ಹೌದು. ಗಂಡನ ಸ್ವಾರ್ಥ, ದೌರ್ಜನ್ಯಗಳಿಂದ ಬೇಸತ್ತು ಸರೋಜ ತವರಿಗೆ ಬಂದಿದ್ದಾಳೆ. ಮಗು-ಸೊಸೆ – ಮೊಮ್ಮಗನೊಂದಿಗೆ ಇರುವ ತಾಯಿ ಗಂಗಮ್ಮನಿಗೆ ಮಗಳು ಮನೆಗೆ ಬಂದು ಹಲವು ದಿನಗಳಾದರೂ ಗಂಡನಿಗೆ ಪತ್ರ ಬರೆಯದಿರುವುದು, ತಿರುಗಿ ಗಂಡನ ಮನೆಗೆ ಹೋಗುವ ವಿಷಯವನ್ನೇ ಎತ್ತದಿರುವುದು ಆತಂಕಕ್ಕೆ ಕಾರ‍ಣವಾಗುತ್ತದೆ. ಒತ್ತಿ ಕೇಳಿದಾಗ, ಸರೋಜ ಗಂಡ ತನ್ನನ್ನು ನಡೆಸಿಕೊಳ್ಳುವ ರೀತಿಯ ಬಗ್ಗೆ ಬೇಸರದ ಮಾತಾಡುತ್ತಾಳೆ. ಅವನು ತನ್ನ ವೈಯಕ್ತಿಕ ಆಶೆ-ಅಭಿರುಚಿಗಳಿಗೆ ಬೆಲೆಯನ್ನೇ ಕೊಡುವುದಿಲ್ಲವೆಂದು ದೂರುತ್ತಾಳೆ. ಒಂದು ಸಲ ತನ್ನನ್ನು ಹೊಡೆದೇ ಬಿಟ್ಟುದಾಗಿ ಹೇಳಿಕೊಳ್ಳುತ್ತಾಳೆ. ಬಿ.ಎ. ಮಾಡಿರುವ ತಾನು ನೌಕರಿ ಹಿಡಿದು ಸ್ವತಂತ್ರ ಜೀವನ ಸಾಗಿಸಬೇಕು, ಸೊಸೆಯ ಕಿರಿಕಿರಿಯಿಂದ ಗಂಗಮ್ಮನನ್ನು ಬಿಡುಗಡೆ ಮಾಡಿ ತನ್ನೊಂದಿಗೆ ಕರೆದುಕೊಂಡು ಹೋಗಬೇಕು – ಎಂದು ಅವಳ ಯೋಚನೆ. ಅವಳ ತಕರಾರುಗಳಿಗೆಲ್ಲ ಗಂಗಮ್ಮನಲ್ಲಿ ಸಮಾಧಾನದ ಉತ್ತರಗಳಿವೆ.

“ಇಂಥ ಪಲ್ಲೆ, ಇಂಥ ಅಡಿಗಿ, ತಿಂಡಿ ತಿನಿಸು ಏನಿದ್ದರೂ ಅವರು ಹೇಳಿದಾಂಗ ಮಾಡಬೇಕು ನಾನು. ನನಗೆ ಸೇರಿದ್ದು ಏನೂ ಮಾಡೂ ಹಾಂಗಿಲ್ಲ” ಎಂದು ಸರೋಜ ದೂರಿದರೆ, “ಬರೇ ಊಟಾ ತಿನಿಸಿನ ಬಗ್ಗೆ ಜಗಳ ಬಂದರ ನೀ ಅಪ್ಪ ಯಾಕ ಸಿಟ್ಟಿಗೇಳಬೇಕು? ನಾಲಿಗೀ ರುಚೀನ ಮುಖ್ಯ ಅಲ್ಲಲ್ಲ. ಅವರಿಗೇನೂ ಬೇಕು ಮಾಡಿ ಹಾಕಿದರಾತು” ಎಂದು ಗಂಗಮ್ಮನಿಗೆ ಇದು ದೊಡ್ಡ ಪ್ರಶ್ನೆ ಎನಿಸುವುದೇ ಇಲ್ಲ. ತನಗೆ ಬೇಕಾದ ಬಣ್ಣದ ಪತ್ತಲ ಉಡುವುದಕ್ಕೂ ತನಗೆ ಸ್ವಾತಂತ್ರ್ಯವಿಲ್ಲ ಎಂದು ಸರೋಜ ಸಿಟ್ಟುಮಾಡಿಕೊಂಡರೆ, “ಹೆಣ್ಣುಮಕ್ಕಳಿಗೆ ಸಹನ ಗುಣಾ ಇದ್ದಾಂಗ ಗಂಡಸರಿಗೆ ಇರೂದಿಲ್ಲವಾ. ಅವರಿಗೆ ಸಿಟ್ಟು ಜಾಸ್ತಿ…. ನೀ ಹೆರಳು ಹಾಕಿಕೊಳ್ಳೂದು, ಶೃಂಗಾರ ಮಾಡಿಕೊಳ್ಳೂದು, ಸೀರಿ ಉಡೂದು ಎಲ್ಲಾ ಅವರಿಗೆ ಛಂದ ಕಾಣಲಿ ಅಂತ ಹೌದಲ್ಲೊ? ಅಂದ ಮ್ಯಾಲೆ ‘ನೀವ ಹೇಳಿದಂತ ಆಗಲಿ, ಬರ್ರಿ ನನ್ನ ಜೋಡಿ ಪ್ಯಾಟಿಗೆ. ನೀವs ಸೀರಿ ಆರಿಸಿರಿ. ನಾನು ಅದನ್ನು ಉಡತೇನಿ’ ಅಂತ ಹೇಳಬೇಕು” ಎಂದು ಗಂಗಮ್ಮಳ ಸರಳ ಪರಿಹಾರ. ಮಗಳ ನೆವದಿಂದ ಗಂಡ ಸೆಟಗೊಂಡು ಚಹಾ ಕುಡಿಯದೆ ಹೋದರು ಎಂದು ಸರೋಜ ಹೇಳಿದರೆ, “ಅಲ್ಲೂ ಸರೂ, ಗಂಡ ಚಹಾ ಕುಡೀದ ಹೋದರ ನೀನರ ಹೇಳಬೇಕು ‘ತಪ್ಪಾತು ಚಹಾ ಕುಡದು ಹೋಗರಿ’ ಅಂತಾ” ಎಂದು ಗಂಗಮ್ಮ ಮಗಳ ನಡತೆಯ ಬಗ್ಗೆ ಆಕ್ಷೇಪಿಸುತ್ತಾಳೆ. ತಾನೂ ನೌಕರಿ ಮಾಡಿ ಗಳಿಸಬೇಕೆಂದರೆ ಅದಕ್ಕೆ ಗಂಡ ಬೇಡವೆನ್ನುತ್ತಾನೆಂದು ಸರೋಜ ಗಂಡನ ಬಗ್ಗೆ ತಕರಾರು ಹೇಳಿದರೆ, “ಹೆಣ್ಣುಮಕ್ಕಳು ಮನೀ ಬಿಟ್ಟು ಹೊರಗ ದುಡೀಲಿಕ್ಕೆ ಹೋದರ ನಾಲ್ಕು ಮಂದಿಯೊಳಗೆ ಅಡ್ಡಾಡಬೇಕಾಗುತ್ತದ. ಕೆಟ್ಟವರು ಯಾರು, ಛಲೋರು ಯಾರು ಗೊತ್ತಾಗುವುದಿಲ್ಲ. ಹೆಂಡತಿ ತಮ್ಮ ಖಾಸಗಿ ಸ್ವಂತ ವಸ್ತು ಅಂತ ಅಭಿಮಾನ ಇದ್ದವರು ಅವಳು ಗೌರವಸ್ಥಳಾಗಿ ಮನಿಯೊಳಗs ಇರಬೇಕು ಅಂತಾ ಇಚ್ಛಾ ಮಾಡತಾರ. ತಪ್ಪೇನಲ್ಲ ಅದು” ಎಂದು ಗಂಗಮ್ಮ ಅಳಿಯನನ್ನೇ ಮೇಲುಗಟ್ಟಿ ಮಾತಾಡುತ್ತಾಳೆ.

ಇಲ್ಲಿಯ ಸಂಭಾಷಣೆ ಸಮಸ್ಯೆಯನ್ನು ಕುರಿತು ತಾಯಿ-ಮಗಳ ನಡುವಿನ ಕೇವಲ ಚರ್ಚೆಯಲ್ಲ. ವಿಶೇಷವಾಗಿ ಸರೋಜಳ ಮಾತುಗಳಲ್ಲಿ ಅವಳಿಗೆ ಗಂಡನ ಬಗ್ಗೆ ಬೇಸರವಾಗುವುದಕ್ಕೆ ಕಾರಣವಾದ ಅನೇಕ ಘಟನೆಗಳು ಬಿಚ್ಚಿಕೊಳ್ಳುತ್ತವೆ. ಅವುಗಳಿಂದ ಕಥೆಯ ಮೈ ತುಂಬಿಕೊಳ್ಳುತ್ತವೆ. ಇದು ಶಾಂತಾದೇವಿಯವರಿಗೆ ಬಹಳ ಪ್ರಿಯವಾದ ತಂತ್ರ. ಒಂದು ರೀತಿಯಲ್ಲಿ ಇದು ‘ಫ್ಲ್ಯಾಷ್ ಬ್ಯಾಕಿ’ಗೆ ಅವರು ಕೊಟ್ಟ ಹೊಸ ರೂಪ.

ಇತ್ತೀಚಿನ ಸ್ತ್ರೀವಾದಿ ಆಲೋಚನೆಗಳ ಹಿನ್ನೆಲೆಯಲ್ಲಿ ನೋಡಿದಾಗ, ಸರೋಜಳ ನಿಲುವು ಆಧುನಿಕ ಮಹಿಳೆಯದಾಗಿಯೂ, ಗಂಗಮ್ಮನದು ಕುಟುಂಬ ವ್ಯವಸ್ಥೆಯಲ್ಲಿ ಗಂಡಿನ ಪರಮಾಧಿಕಾರವನ್ನು ಒಪ್ಪಿಕೊಂಡ ಸಾಂಪ್ರದಾಯಿಕ ನಿಲುವೆಂದೂ ಸರಳವಾಗಿ ಕಂಡೀತು. ಆದರೆ ಗಂಗಮ್ಮ ಬದುಕನ್ನು ಕಂಡವಳು; ವ್ಯಾವಹಾರಿಕ ತಿಳುವಳಿಕೆಯುಳ್ಳವಳೂ; ಹೆಣ್ಣಿನ ಸ್ಥಿತಿಯನ್ನು ಅರ್ಥ ಮಾಡಿಕೊಂಡವಳು. ಒಂದು ಕಾಲಕ್ಕೆ ಅವಳೂ ಗಂಡ-ಅತ್ತೆಯರ ದೌರ್ಜನ್ಯಕ್ಕೆ ಬೇಸತ್ತು ತವರು ಮನೆಗೆ ಹೋಗಿದ್ದವಳು. ಅವಳ ತಾಯಿ ಇನ್ನೂ ಹೆಚ್ಚು ಸಾಂಪ್ರದಾಯಿಕ ರೀತಿಯಲ್ಲಿ ‘ನೀನು ಅಲ್ಲೇ ಇರಬೇಕು ಗಂಗೂ. ಸತ್ತರೂ ಅಲ್ಲೇ ಸಾಯಬೇಕು. ನಿನ್ನ ಮಕ್ಕಳ ಮರೀ ನೋಡಿಕೊಂಡಾದರೂ ಅಲ್ಲೇ ಇರು. ತಾಳಿಕೋ. ಮಂದೀಯೊಳಗ ನಮ್ಮ ಮಾನಾ ಕಳೀಬ್ಯಾಡಾ. ಗಂಡ ಬಿಟ್ಟ ಗಯ್ಯಾಳಿ ಅಂತ ಅನಿಸಿಕೋಬ್ಯಾಡಾ. ಅವನ ಬಿಟ್ಟು ಬರೂದರಿಂದ ನಿನಗs ಹಾನಿ ಅದ. ಅವನಿಗೇನು, ಮತ್ತೊಂದು ಲಗ್ನಾ ಮಾಡಿಕೋತಾನ. ಮಕ್ಕಳ್ನೂ ಕೊಡದ ನಿನ್ನ ಒದ್ದು ಹೊರಗ ಹಾಕಿದರೆ ನೀ ಹ್ಯಾಂಗ ಜೀವ ಹಿಡಕೊಂಡು ಇರತಿ?’ ಎಂದು ಹೇಳಿ ತಿರುಗಿ ಕಳಿಸಿದ್ದಳು. ಗಂಗಮ್ಮ ನೆನಪಿಸಿಕೊಂಡು ಹೇಳುವ ಈ ಮಾತುಗಳು ಪರೋಕ್ಷವಾಗಿ ಆಕೆ ಮಗಳಿಗೆ ಕೊಡುವ ಎಚ್ಚರಿಕೆಯ ಮಾತುಗಳೇ ಆಗಿವೆ. ಕಾಲ ಬದಲಾಗಿರಬಹುದು; ತಾಯಂದಿರು ತಮ್ಮ ಹೆಣ್ಣುಮಕ್ಕಳಿಗೆ ಕೊಡುವ ಉಪದೇಶದಲ್ಲಿಯ ಶಬ್ದಗಳು ಬದಲಾಗಿರಬಹುದು. ಆದರೆ ಹೆಣ್ಣಿನ ಅತಂತ್ರ ಸ್ಥಿತಿ ಮಾತ್ರ ಬದಲಾಗಿಲ್ಲ; ತಲೆಮಾರಿನಿಂದ ತಲೆಮಾರಿಗೆ ಅದು ಮುಂದುವರಿದುಕೊಂಡೇ ಬಂದಿದೆ ಎಂದು ಕತೆ ಸೂಚಿಸುತ್ತದೆ.

ಗಂಗಮ್ಮ ಮತ್ತು ಸರೋಜರ ನಡುವಿನ ಸಂಭಾಷಣೆ ಇನ್ನೊಂದು ಹಂತದಲ್ಲಿ ಮುಂದುವರಿಯುತ್ತದೆ. ಸರೋಜ ಗಂಗಮ್ಮನ ಸೊಸೆ ಮೀರಾಳ ‘ಮಾತಿನ ಬರಿ’ಯ ಬಗ್ಗೆ ಪ್ರಸ್ತಾಪಿಸಿದಾಗ ಗಂಗಮ್ಮ “ಇದೆಂಥಾ ಬರಿ ಸರೋಜ. ಇದು ಬರೇ ಮಾತಿನ ಬರಿ. ಖರೆಖರೇನ ಬೆಂಕಿಯಿಂದ ಬರಿ ಕೂಡಿಸಿಕೊಂಡಾಕಿಗೆ ಇದೆಂಥಾ ಬರಿ?” ಎಂದು ತನ್ನ ಗಂಡ ತನ್ನ ತೊಡೆಯ ಮೇಲೆ ಕಾಸಿದ ಕಡಚಿಯಿಂದ ಕೊಟ್ಟ ನಿಜವಾದ ಬರಿಯನ್ನು ಮಗಳಿಗೆ ತೋರಿಸುತ್ತಾಳೆ. ಬಸರಿಯಾಗಿದ್ದ ಗಂಗಮ್ಮನನ್ನು ಒದ್ದು, ತನ್ನ ಹೆಂಗಸಿಗೆ ಕೊಡಲು ಕೊರಳಲ್ಲಿಯ ಪುತಳೀ ಸರವನ್ನು ಗಂಡ ಕಸಿದುಕೊಂಡು ಹೋದ ಪ್ರಸಂಗ ಇನ್ನೊಂದು ಸಂದರ್ಭದಲ್ಲಿ ಬರುತ್ತದೆ. ಇನ್ನೂ ಆಗಾಗ ಕಾಣಿಸಿಕೊಳ್ಳುವ ಆ ನೋವನ್ನು ಗಂಗಮ್ಮ ಮಗಳಿಗೆ ತೋರಿಸುತ್ತಾಳೆ. ಮೊದಲಿನ ಸಂಭಾಷಣೆ ಸರೋಜಳ ಬದುಕಿನ ಘಟನೆಗಳನ್ನು ಬಿಚ್ಚಿದರೆ. ಇಲ್ಲಿಯದು ಗಂಗಮ್ಮನ ಬದುಕಿನಲ್ಲಿ ನಡೆದುಹೋದ ಘಟನೆಗಳನ್ನು ನಿರೂಪಿಸುತ್ತದೆ. ಈ ತಂತ್ರದಿಂದ ಶಾಂತಾದೇವಿಯವರು ಸಾಧಿಸಿರುವ ಮಿತವ್ಯಯವನ್ನು ಗಮನಿಸಬೇಕು: ಹಾಗೆಯೇ, ಯಾವ ಘಟನೆಯೂ ಎಳೆದು ತಂದದ್ದು ಎನಿಸದ ಸಹಜತೆಯನ್ನೂ.

ಇಲ್ಲಿ ಸರೋಜ ಅನುಭವಿಸಿದ ನೋವು ಗಂಗಮ್ಮ ಅನುಭವಿಸಿದ ನೋವಿನೊಂದಿಗೆ ತುಲನೆಯಾಗುತ್ತದೆ. ಬಹುಶಃ ಕೆಳಮಧ್ಯಮ ವರ್ಗಕ್ಕೆ ಸೇರಿದ ಗಂಗಮ್ಮನ ಕಾಲದ ದೈಹಿಕ ಹಿಂಸೆ ಸುಶಿಕ್ಷಿತ ಮಧ್ಯಮ ವರ್ಗಕ್ಕೆ ಸೇರಿದ ಸರೋಜಳ ಕಾಲದಲ್ಲಿ ಸ್ವಲ್ಪ ಕಡಿಮೆಯಾದಂತಿದೆ. ತನ್ನ ತಂದೆ ಹೆಂಡತಿಯ ಆಜ್ಞಾಧಾರಾಕನಾಗಿದ್ದುದರಿಂದ ತಾಯಿ ಸುಖವಾಗಿಯೇ ಇದ್ದಳೆಂದು ಭಾವಿಸಿದ್ದ ಸರೋಜಳಿಗೆ ನಿಜ ಸಂಗತಿ ತಿಳಿದು ಆಘಾತವಾಗುತ್ತದೆ. ಆಕೆ ಅನುಭವಿಸಿದ ನೋವಿನ ಮುಂದೆ ತನ್ನದು ಏನೂ ಅಲ್ಲ ಎನಿಸುತ್ತದೆ. ಈ ಹೊಸ ತಿಳುವಳಿಕೆಯಲ್ಲಿ, ಗಂಡನಿಂದ ಬಂದ ಪತ್ರ ಮತ್ತು ಅಣ್ಣ-ಅತ್ತಿಗೆಯರ ನಡುವಿನ ಸಣ್ಣ ಜಗಳ ಮತ್ತು ಪ್ರೀತಿಯ ಮರುಹೊಂದಾಣಿಕೆಯ ಮಾತುಕತೆ ಅವಳ ಮೊದಲಿನ ನಿರ್ಧಾರವನ್ನು ಬದಲಿಸುತ್ತವೆ. ಆಕೆ ಮತ್ತೆ ಗಂಡನ ಮನೆಗೆ ತಿರುಗಿ ಹೋಗುತ್ತಾಳೆ.

ಸರೋಜಳ ಗಂಡ ಕತೆಯಲ್ಲಿ ಪ್ರತ್ಯಕ್ಷವಾಗಿ ಕಾಣಿಸಿಕೊಳ್ಳುವುದು ಕತೆಯ ಕಡೆಯ ಪ್ಯಾರಾದಲ್ಲಿ ಮಾತ್ರ. ಹೆಂಡತಿಯ ಆಗಮನದಿಂದ ಅವನಿಗೆ ಸಂತೋಷವಾಗಿದೆ. ಆದರೆ ಇದು ಅವನಿಗೆ ಹೆಂಡತಿಯ ಬಗ್ಗೆ ಇರುವ ನಿಜವಾದ ಪ್ರೀತಿಯ ಸೂಚನೆಯೋ, ಅಥವಾ ಕೇವಲ ದೈಹಿಕ ಬಯಕೆಯ ಈಡೇರಿಕೆಯ ನಿರೀಕ್ಷೆಯಿಂದ ಹುಟ್ಟಿದ ಸಂತೋಷವೋ ಗೊತ್ತಾಗುವುದಿಲ್ಲ. ಮುಖ್ಯವಾದ ಸಂಗತಿಯೆಂದರೆ, ಅವನಿಗೆ ಹೆಂಡತಿಯೊಂದಿಗಿನ ತನ್ನ ನಡತೆಯ ಬಗ್ಗೆ ಏನು ಹೇಳಿಕೊಳ್ಳುವುದಕ್ಕೂ ಅವಕಾಶ ಸಿಕ್ಕುವುದಿಲ್ಲ. ಅಥವಾ ಸರೋಜಳ ದೃಷ್ಟಿಕೋಶವನ್ನು ಮಾತ್ರ ಅನುಸರಿಸಿಕೊಂಡು ಹೋಗುವ ಕತೆಯ ನಿರೂಪಣ ತಂತ್ರವೇ ಅವನಿಗೆ ಈ ಅವಕಾಶವನ್ನು ಕೊಡುವುದಿಲ್ಲ. ಇದು ಶಾಂತಾದೇವಿಯವರ ಇಂಥ ಅನೇಕ ಕತೆಗಳ ಪ್ರಾತಿನಿಧಿಕ ಮಿತಿಯೂ ಹೌದು.

ಈ ಕತೆಯಲ್ಲಿ ಬರುವ ಕೆಲವು ವಿವರಗಳನ್ನು ವಿಶೇಷವಾಗಿ ಎತ್ತಿ ತೋರಿಸಬೇಕು. ಒಂದು, ಸೊಸೆ ಮತ್ತು ಸರೋಜಳ ಚಿಕ್ಕಮಕ್ಕಳಾದ ವಿನಯ-ಅನು ನಡುವೆ ನಡೆಯುವ ಜಗಳ. ಅನುವಿನ ಕೈಯಲ್ಲಿದ್ದ ಆಟಿಗೆ ತನಗೆ ಬೇಕೆಂದ ವಿನಯ ಅವಳ ಬೆನ್ನುಹತ್ತಿ ಓಡಿ ಬಂದು, ಅವಳನ್ನು ಹೊಡೆದು ಕೆಡವಿ ಆಟಿಗೆಯನ್ನು ಕಸಿದುಕೊಳ್ಳುತ್ತಾನೆ. ಇದನ್ನೂ ನೋಡಿದ ಸೊಸೆ ಮೀರಾ ಅವನನ್ನು ಹೊಡೆದು, ರಮಿಸಿ, ಆಟಿಗೆಯನ್ನು ಅನುವಿಗೆ ತಿರುಗಿಕೊಡಲು ಬೆಲ್ಲದ ಆಶೆ ತೋರಿಸುತ್ತಾಳೆ. ಬೆಲ್ಲದ ಆಶೆಯ ಮುಂದೆ ಆಟಿಗೆಯಲ್ಲಿ ಆಸಕ್ತಿ ಕಳೆದುಕೊಂಡ ವಿನಯ ಅದನ್ನು ಅನುವಿನ ಕಡೆಗೆ ಒಗೆದು ತಾಯಿಯ ಹಿಂದೆ ಹೊರಡುತ್ತಾನೆ. ವಿನಯನಿಗೆ ಆಸಕ್ತಿಯಿಲ್ಲದ ಆಟಿಗೆಯಲ್ಲಿ ಅನುವಿಗಾದರೂ ಹೇಗೆ ಆಸಕ್ತಿ ಉಳಿದೀತು? ಅವಳೂ ಬೆಲ್ಲ ಕೇಳಿ ಅವನನ್ನೂ ಹಿಂಬಾಲಿಸುತ್ತಾಳೆ. ಇನ್ನೊಂದು, ಲಟ್ಟಿಸಿ ಹೊರಗೆ ಒಣಹಾಕಿದ ಹಪ್ಪಳ ಮಳೆ ಬಂದು ತೊಯ್ದು ಮತ್ತೆ ಮುದ್ದೆಯಾಗುವ ಪ್ರಸಂಗ. ಮತ್ತೊಂದು, ಗಂಗಮ್ಮ ಜಳಕ ಮಾಡುವಾಗ ಸರೋಜ ಅವಳ ಮೈತಿಕ್ಕುವುದು ಇಂಥ ವಿವರಗಳನ್ನು ಬಹುಶಃ ಮಹಿಳೆ ಮಾತ್ರ ಗಮನಿಸಬಲ್ಲಳು. ಆದರೆ ಇಂಥ ವಿವರಗಳ ಅಪೂರ್ವತೆಗಿಂತ ಅವು ಕಥೆಯಲ್ಲಿ ನಿರ್ವಹಿಸುವ ಪಾತ್ರ ಮಹತ್ವದಾಗಿದೆ. ಮೊದಲನೆಯ ಪ್ರಸಂಗ, “ಅನು ಊರಿಂದ ಬಂದಾಳ, ಇನ್ನೊಂದು ನಾಕ ದಿನಕ್ಕ ಮತ್ತ ಹೋಗತಾಳ. ಆಮ್ಯಾಲೆ ಬಾ ಅಂದರೂ ಬರೂದಿಲ್ಲ. ಇದೆಲ್ಲ ನಿಂದs ಅದ. ಮನೀ ನಿಂದು. ಆಟಿಗಿ ನಿಂದು” ಎಂಬ ಮೀರಾನ ಮಾತಿಗೆ ಕಾರ‍ಣವಾಗಿ ಇಲ್ಲಿಯೇ ಇರಬೇಕೆಂದು ಬಂದಿರುವ ಸರೋಜಳಿಗೆ ಇಲ್ಲಿ ತನಗೆ ಜಾಗವಿಲ್ಲ ಎಂದು ಸೂಚ್ಯವಾಗಿ ಎಚ್ಚರಿಸುತ್ತದೆ. ಹಪ್ಪಳದ ಪ್ರಸಂಗದಲ್ಲಿ ಸೊಸೆ ಗಂಗಮ್ಮನ ಬಗ್ಗೆ ತೋರಿಸುವ ಕಿರಿಕಿರಿ ಸರೋಜಳನ್ನು ಕೆರಳಿಸುತ್ತದೆ. ಗಂಗಮ್ಮನ ಜಳಕದ ಪ್ರಸಂಗ ಅವಳ ಗಂಡ ಬಸರಿಯನ್ನು ಒದ್ದು ಹೋದ ಘಟನೆಯನ್ನು ಹೊರಗೆ ತರುತ್ತದೆ. ಗಂಗಮ್ಮ ಯಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳದಂತೆ, ಎಲ್ಲವನ್ನೂ ಒಳಗೇ ನುಂಗಿಕೊಂಡು ಪರಿಸ್ಥಿತಿಗೆ ಒಗ್ಗಿಹೋಗಿರುವುದನ್ನೂ ಈ ವಿವರಗಳು ಸೂಚಿಸುತ್ತವೆ. ಹೀಗೆ ಕತೆಯ ಸಣ್ಣ-ಪುಟ್ಟ ವಿವರಗಳನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳುವುದರಲ್ಲಿ ಶಾಂತದೇವಿ ಯಶಸ್ವಿಯಾಗಿದ್ದಾರೆ.

ಶಾಂತಾದೇವಿಯವರ ಕಥಾಲೋಕದ ಮೂರನೆಯ ನೆಲೆ ಕೆಳವರ್ಗದ ಪಾತ್ರಗಳಿಗೆ ಸಂಬಂಧಿಸಿದ್ದು. ಅವರ ಒಟ್ಟು ಕತೆಗಳಲ್ಲಿ ನಾಲ್ಕೈದು ಮಾತ್ರ ಈ ಜಗತ್ತಿಗೆ ಸೇರಿವೆ. ಅವೂ ಕೂಡ-ಹಿಂದೆ ಹೇಳಿದಂತೆ-ಸ್ವತಂತ್ರವಾಗಿ ನಿರೂಪಿಸಿದ ಕತೆಗಳಲ್ಲ. ಮಧ್ಯಮ ವರ್ಗದ ಹೆಣ್ಣುಮಕ್ಕಳ ದೃಷ್ಟಿಕೋನದಿಂದ ಚಿತ್ರಿಸಿದುವು. ಈ ಕೆಳ ವರ್ಗದ ಪಾತ್ರಗಳು ಹಳ್ಳಿಗಳಿಂದ ಬಂದು ನಗರದಲ್ಲಿ ನೆಲೆಸಿದವರು. ಕೂಲಿ ಇಲ್ಲವೆ ಮನೆಗೆಲಸ ಮಾಡಿ ಬದುಕು ಸಾಗಿಸುವವರು. ಇಲ್ಲಿಯೂ ಕೌಟುಂಬಿಕ ಬಿಕ್ಕಟ್ಟೇ ಕೇಂದ್ರ ವಸ್ತು. ಆದರೆ ಈ ಬಿಕ್ಕಟ್ಟಿನ ಸ್ವರೂಪ ಗ್ರಾಮೀಣ ಹಿನ್ನೆಲೆಯ ಕತೆಗಳಲ್ಲಿಯ ಬಿಕ್ಕಟ್ಟಿಗಿಂತ ಭಿನ್ನವಾಗಿದೆ. ಇಲ್ಲಿ ಅತ್ತೆ-ಮಾವ-ನಾದಿನಿಯರಿಲ್ಲ. ಹೆಂಡತಿಯನ್ನು ಶೋಷಿಸುತ್ತಾನೆ; ದೌರ್ಜನ್ಯದಿಂದ ನಡೆಸಿಕೊಳ್ಳುತ್ತಾನೆ; ಪುರುಷಾಹಂಕಾರವನ್ನು ಹಕ್ಕಿನಿಂದ ಪ್ರದರ್ಶಿಸುತ್ತಾನೆ. ಜಗಳ, ಹೊಡೆತ-ಬಡಿತ ದೊಡ್ಡ ವಿಷಯವೇ ಅಲ್ಲ. ಈ ಬಿಕ್ಕಟ್ಟು ಮಧ್ಯಮ ವರ್ಗದ ಕತೆಗಳಲ್ಲಿಯ ಬಿಕ್ಕಟ್ಟಿಗಿಂತಲೂ ಭಿನ್ನವಾಗಿದೆ. ಮಧ್ಯಮವರ್ಗದಲ್ಲಿಯಂತೆ ಮರ್ಯಾದೆಗೆ ಅಂಜಿ ಮುಚ್ಚಿಟ್ಟುಕೊಳ್ಳುವಂಥದು ಇಲ್ಲಿ ಏನೂ ಇಲ್ಲ. ಎಲ್ಲವೂ ಬಟಾಬಯಲು. ಆದರೂ, ಇಲ್ಲಿಯೂ ಕೂಡಾ, ಕುಟುಂಬ ವ್ಯವಸ್ಥೆಯಲ್ಲೇ ಹೊಂದಿಕೊಂಡು, ಎಲ್ಲವನ್ನೂ ಸಹಿಸಿಕೊಂಡು ಬದುಕಬೇಕೆಂದು ಇಲ್ಲಿಯ ಸ್ತ್ರೀಪಾತ್ರಗಳು ಯತ್ನಿಸುತ್ತವೆ. ಎಷ್ಟೇ ಜಗಳಾಡಿದರೂ, ಪಾಲಿಗೆ ಬಂದದ್ದೇ ಪಂಚಾಮೃತ ಎಂದುಕೊಂಡು ಅನುಭವಿಸುತ್ತವೆ. ಮದುವೆಯೇ ಇಲ್ಲದೆ, ಕೆಂಚಪ್ಪನೊಂದಿಗೆ ‘ಕೂಡಿಕೊಂಡು’ ಬದುಕುತ್ತಿರುವ ‘ಇದಕ್ಕೇನನ್ನಬೇಕು’ (“ಬಯಲು ಆಲಯ”) ಕತೆಯ ಕೆಂಚವ್ವನಿಗೆ ಕೂಡಾ ತನ್ನ ‘ಗಂಡ’ನ ಕುಟುಂಬದ ಬಗ್ಗೆ ಕಾಳಜಿ ಇದೆ.

ಈ ದೃಷ್ಟಿಯಿಂದ ‘ಒಂದು ಮೂಗುತಿಯ ಕಥೆ’ (“ನಿಲಿಮಾ ತೀರ”) ಯನ್ನು ಸ್ವಲ್ಪ ವಿವರವಾಗಿ ನೋಡಬಹುದು.

ಈ ಕತೆ ಚಿತ್ರಿತವಾಗಿರುವುದು ಸುಶಿಕ್ಷಿತ ಮಧ್ಯಮ ವರ್ಗದ ಗೃಹಿಣಿ ಸುನಂದಾನ ದೃಷ್ಟಿಕೋನದಿಂದ ಸುನಂದಾ ಮತ್ತು ಅವಳ ಗಂಡ ವಿಶ್ವನಾಥರ ಸಂಬಂಧವೇನೂ ಹಾರ್ದಿಕವಾದದ್ದಲ್ಲ. ಸುನಂದಾ ಅರ್ಥಮಾಡಿಕೊಂಡಿರುವಂತೆ ವಿಶ್ವನಾಥ ಸ್ವಾರ್ಥಿ, ತನ್ನ ಹಿತದೃಷ್ಟಿಯಿಂದ ಮಾತ್ರ ಯೋಚಿಸುವವನು. ಒಂದು ಸಲ ಅವನ ನಡತೆಯ ಬಗ್ಗೆ ಸಂದೇಹ ಬಂದಾಗ ಸುನಂದಾ ಸೂಕ್ಷ್ಮವಾಗಿ ತಕರಾರು ಮಾಡಿದ್ದಳು. ಅಷ್ಟಕ್ಕೆ ವಿಶ್ವನಾಥ ‘ನಾನೇನು ಮಾಡಿದರೂ ಪ್ರಶ್ನಿಸಲು ನೀನಾರು?’ ಎಂಬ ಧ್ವನಿಯಲ್ಲಿ ದನಿ ಏರಿಸಿ ಮಾತಾಡಿದ್ದ. ಇವಳೂ ಕೂಗಾಡಿ ಮಾತು ಬಿಟ್ಟು ತವರು ಮನಗೆ ಹೊರಟು ಹೋಗಿದ್ದಳು. “ಆದರೆ ಮುಂದೆ ಆದದ್ದೇನು? ಮಗಳು ಹುಟ್ಟಿದ ಮೇಲೆ ಕರೆಯಲು ಬಂದ ಗಂಡನೊಡನೆ ಸುಮ್ಮನೆ ಬಂದುಬಿಟ್ಟಿದ್ದಳು.” ಶಾಂತಾದೇವಿಯವರ ಅನೇಕ ಜನ ನಾಯಕಿಯರಂತೆ ಸುನಂದೆಯೂ ಗಂಡನೊಂದಿಗಿನ ಅಸಮಾಧಾನವನ್ನೆಲ್ಲ ಹತ್ತಿಕ್ಕಿಕೊಂಡು ಪುರುಷಪ್ರಧಾನ ಕುಟುಂಬ ವ್ಯವಸ್ಥೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾಳೆ.

ಇಂಥ ಸುನಂದೆಯ ದೃಷ್ಟಿಕೋನದಿಂದ, ಅವರ ಮನೆಯ ಹಿಂದಿನ ಕೋಣೆಗಳಲ್ಲಿ ವಾಸವಾಗಿರುವ ಮಾನವ್ವ-ನಿಂಗಪ್ಪರ ಕಥೆ ನಿರೂಪಿತವಾಗಿದೆ. ವಿಶ್ವನಾಥ ದುಡಿದು ಗಳಿಸಿ ಹೆಂಡತಿಯ ಮೇಲೆ ಯಜಮಾನಿಕೆ ನಡೆಸಿದರೆ, ನಿಂಗಪ್ಪ ಏನೂ ಕೆಲಸ ಮಾಡದೆ, ಹೆಂಡತಿಯ ದುಡಿಮೆಯ ಮೇಲೆಯೇ ಬದುಕಿದ್ದೂ ಗಂಡನ ಅಧಿಕಾರ ನಡೆಸುವವನು. ಇಬ್ಬರ ನಡುವೆ ನಿತ್ಯ ಜಗಳ. ಈ ಜಗಳವನ್ನು ಕೇಳಿ ವಿಶ್ವನಾಥ, ಮಾನವ್ವನೇಕೆ ಗಂಡನಿಗೆ ಸೋಡಚೀಟಿ ಕೊಟ್ಟು ಸ್ವತಂತ್ರವಾಗಿ ಬದುಕಬಾರ‍ದು- ಎಂದು ಸರಳವಾಗಿ ಕೇಳುತ್ತಾನೆ. ಆದರೆ ಇದೇ ಸ್ಥಿತಿಯಲ್ಲಿ ಗಂಡ-ಮಾವರ ತ್ರಾಸು ಸಹಿಸಿಕೊಂಡು ಬದುಕಿರುವ ತನ್ನ ದೊಡ್ಡಮ್ಮನ ಮಗಳು ಕುಮುದಿಗೆ ಅವನು ಇಂಥ ಸಲಹೆ ಕೊಡಲಾರ. ಈ ಬಗ್ಗೆ ಸರೋಜ ಪ್ರಶ್ನಿಸಿದರೆ, “ಕುಮುದಿನಿ ಯಾರು, ಮಾನವ್ವ ಯಾರು?” ಎಂದು ಅಸಹನೆಯಿಂದ ತಿರುಗಿ ಪ್ರಶ್ನಿಸುತ್ತಾನೆ. ತನ್ನ ಸ್ವಂತ ಸ್ಥಿತಿಯ ಅರಿವಿರುವ ಸುನಂದಾಳಿಗೆ ಮಾನವ್ವನ ಕಷ್ಟವೇನೆಂದು ಅರ್ಥವಾಗುತ್ತದೆ. ಆಕೆ ಮಾನವ್ವನ ಸಮಸ್ಯೆಯನ್ನು ಸಹಾನುಭೂತಿಯಿಂದ ನೋಡಬಲ್ಲವಳಾಗಿದ್ದಾಳೆ.

ನಿಂಗಪ್ಪ ತನ್ನ ಹೆಂಡತಿಯನ್ನಲ್ಲದೆ ಮಲ್ಲವ್ವನೆಂಬ ಇನ್ನೊಬ್ಬ ಹೆಂಗಸಿನೊಂದಿಗೆ ಸಂಬಂಧ ಬೆಳೆಸುತ್ತಾನೆ. (ವಿಶ್ವನಾಥನ ವಿಷಯದಲ್ಲೂ ಇಂಥದೊಂದು ಸೂಚನೆ ಇದೆ ಎಂಬುದನ್ನು ಗಮನಿಸಬೇಕು.) ಮಾನವ್ವ, ತನ್ನ ಅವ್ವ ಕೊಟ್ಟಿದ್ದ, ತಾನು ತನ್ನ ಮಗಳಿಗೆ ಕೊಡಬೇಕೆಂದು ಜತನದಿಂದ ಕಾಯ್ದುಕೊಂಡು ಬಂದಿದ್ದ ಮೂಗುತಿಯನ್ನು ನಿಂಗಪ್ಪ ಕದ್ದು ಒಯ್ದು ತನ್ನ ಹೆಂಗಸಿಗೆ ಕೊಡುತ್ತಾನೆ. (ಇಂಥದೇ ಪ್ರಸಂಗ ‘ಮರುವಿಚಾರ‍’ ಕತೆಯಲ್ಲೂ ಇದೆ. ಆದರೆ ಇಲ್ಲಿ ಅದರ ಪರಿಣಾಮ ಬೇರೆಯಾಗಿದೆ.) ಇದರ ಸುಳಿವು ಹಿಡಿದ ಮಾನವ್ವ ಮಲ್ಲವ್ವನನ್ನು ಹುಡುಕಿಕೊಂಡು ಹೋಗಿ, ಅವಳೊಡನೆ ಮಾರಾಮಾರಿ ನಡೆಸಿ ರಣರಂಪ ಮಾಡುತ್ತಾಳೆ (‘ಮರುವಿಚಾರ’ದ ಗಂಗಮ್ಮ ಹೀಗೆ ಮಾಡಲಾರಳು.) ಆದರೂ ಅವಳ ಮೂಗುತಿ ಸಿಗುವುದಿಲ್ಲ. ನಿಂಗಪ್ಪ ಅವಳ ಬ್ಯಾಂಕಿನ ಉಳಿತಾಯದಲ್ಲೂ ಮೋಸ ಮಾಡುತ್ತಾನೆ.

ಗಂಡನ ಮೇಲೆ ಇಷ್ಟೆಲ್ಲ ಸಿಟ್ಟು, ತಿರಸ್ಕಾರ ಇದ್ದರೂ ಮಾನವ್ವ ಅವನಿಂದ ಬೇರೆಯಾಗಲಾರಳು. ಅಷ್ಟೇ ಅಲ್ಲ, ಮಲ್ಲವ್ವ ಗಂಡು ಮಗುವನ್ನು ಹಡೆದು ಸತ್ತಾಗ ಆ ಮಗುವನ್ನು ತಂದು ಜೋಪಾನ ಮಾಡಲು ನಿರ್ಧರಿಸುತ್ತಾಳೆ. ಕೊನೆಗೂ ಕುಟುಂಬ ವ್ಯವಸ್ಥೆಯೇ ಗೆಲ್ಲುತ್ತದೆ.

ಹೀಗೆ, ಇಲ್ಲಿ ಸುನಂದಾ ಮತ್ತು ಮಾನವ್ವರ ಕೌಟುಂಬಿಕ ಸ್ಥಿತಿ ಮತ್ತು ಹೊಂದಾಣಿಕೆಗಳು ಹೋಲಿಕೆಗೊಳಗಾಗುತ್ತವೆ. ಜೊತೆಗೆ ಕುಮುದಿನಿಯ ಹೋಲಿಕೆಯೂ ಪ್ರಾಸಂಗಿಕವಾಗಿ ಸೇರಿಕೊಳ್ಳುತ್ತದೆ. ಇಷ್ಟೆ, ಸುನಂದಾ ತನ್ನ ಕಥೆಯನ್ನು ಯಾರ ಮುಂದೂ ಹೇಳಿಕೊಳ್ಳಲಾರಳು. ಅದು ಅವಳ ಗಂಡನ ಮತ್ತು ಕುಟುಂಬದ ಮರ್ಯಾದೆಯ ಪ್ರಶ್ನೆ. ಮಾನವ್ವನಿಗೆ ಈ ಮರ್ಯಾದೆಯ ಸಮಸ್ಯೆ ಇಲ್ಲ. ಇಂಥ ಹಲವು ಸ್ತರಗಳಲ್ಲಿ ಹೋಲಿಕೆಗಳಿಂದಾಗಿ ಕತೆಯ ವಸ್ತು ಸಂಕೀರ್ಣತೆ ಪಡೆದುಕೊಳ್ಳುತ್ತದೆ ಮತ್ತು ಹೆಣ್ಣಿನ ಸ್ಥಿತಿಗೆ ಸಾರ್ವತ್ರಿಕತೆ ಒದಗುತ್ತದೆ.

ಹೀಗೆ, ಶಾಂತಾದೇವಿಯವರ ಬಹುತೇಕ ಸಣ್ಣಕತೆಗಳು ಕೌಟುಂಬಿಕ ವ್ಯವಸ್ಥೆಯ ಇಕ್ಕಟ್ಟು-ಬಿಕ್ಕಟ್ಟುಗಳನ್ನು ಚಿತ್ರಿಸುತ್ತವೆ ಮತ್ತು ಈ ವ್ಯವಸ್ಥೆಯಲ್ಲಿ ಹೆಣ್ಣು ಮಾಡಿಕೊಳ್ಳಬೇಕಾದ ಹೊಂದಾಣಿಕೆಯ ಬಗ್ಗೆ ಮತ್ತೆ ಮತ್ತೆ ಹೇಳುತ್ತವೆ. ಈ ಸಮಸ್ಯೆಯನ್ನು ಅವರು ಬೇರೆಬೇರೆ ಸಂದರ್ಭಗಳಲ್ಲಿ ಇಟ್ಟು ನೋಡಿದ್ದಾರೆ. ಆದರೂ ವಸ್ತು ಒಂದೇ ಆಗಿರುವುದರಿಂದ ಕತೆಗಳಲ್ಲಿ ಒಂದು ಬಗೆಯ ಏಕತಾನತೆ ಕಾಣುತ್ತದೆ.

ಹೊಂದಾಣಿಕೆಯ ಗಂಡು-ಹೆಣ್ಣು ಪರಸ್ಪರ ಮಾಡಿಕೊಳ್ಳಬೇಕಾದದ್ದು. ಆದರೆ ಶಾಂತಾದೇವಿಯವರ ಕತೆಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವವರು ಹೆಚ್ಚಾಗಿ ಹೆಣ್ಣುಮಕ್ಕಳೇ ಆಗಿದ್ದಾರೆ. ‘ಮರುವಿಚಾರ’ ಕತೆಯ ಗಂಗಮ್ಮ, ಸರೋಜ ಇಬ್ಬರೂ ಹೀಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ‘ಕಿತ್ತು ಹಚ್ಚಿದ ಗಿಡ’ದ ಬಂಗಾರೆಮ್ಮ, ‘ಬಯಲು-ಆಲಯ’ದ ಜಾನಕ್ಕ, ‘ದಿಗಂತ’ದ ರತ್ನಮ್ಮ, ‘ಮಮತೆ’ಯ ಗಿರಿಜೆ, ‘ಬೀಗದ ಕೈ’ಯ ಸುಮಿತ್ರಾ, ‘ಗುಟ್ಟು’ದ ಗೌರಿ, ‘ಆಸರ’ದ ಮಾಂತವ್ವ, ‘ಅರ್ಧಾಂಗಿ’ಯ ಸುನೀತಾ, ‘ಯಾರ ಮುಂದೂ ಹೇಳಬಾರದು’ದ ವಾಸಂತಿ, ‘ನಿರುತ್ತರೆ’ಯ ಗೌರಕ್ಕ. ‘ಕಥೆಯಾದಳು ಹುಡುಗಿ’ಯ ಪಾರ್ವತಿ, ‘ಇದಕ್ಕೇನನ್ನಬೇಕು?’ದ ಕೆಂಚವ್ವ, ‘ಒಂದು ಮೂಗುತಿಯ ಕಥೆ’ಯ ಮಾನವ್ವ…. ಶಾಂತಾದೇವಿಯವರ ಎಷ್ಟೊಂದು ಪಾತ್ರಗಳು ಹೀಗೆ ಗಂಡಿನ ಅಧಿಕಾರವನ್ನು ಒಪ್ಪಿಕೊಂಡು, ದೌರ್ಜನ್ಯವನ್ನು ಸಹಿಸಿಕೊಂಡು, ಕೌಟುಂಬಿಕ ವ್ಯವಸ್ಥೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬದುಕುತ್ತವೆ ಎಂದು ನೋಡಿದರೆ ಆಶ್ಚರ್ಯವಾಗುತ್ತದೆ. ಕೆಲವು ಸಂದರ್ಭಗಳಲ್ಲಿ ‘ಕಳಚಿ ಬಿದ್ದ ಪೈಜಣ’ ದ ಸುಮಿತ್ರೆ, ‘ಮೇಣಬತ್ತಿ’ (“ಗಾಂಧೀ ಮಗಳು”) ಉಮಾರಂಥವರು ತಮ್ಮ ಮೈಯ ಮಾರಿಕೊಂಡಾದರೂ ತಮ್ಮ ರೋಗಿಸ್ಥ ಗಂಡಂದಿರ ಯೋಗಕ್ಷೇಮ ನೋಡಿಕೊಳ್ಳಲು ಮುಂದಾಗುತ್ತಾರೆ; ಇದಕ್ಕೆ ಪ್ರೀತಿ ಕಾರಣವೆಂದೂ ಹೇಳುವಂತಿಲ್ಲ, ಎಂದರೆ ಕುಟುಂಬ ವ್ಯವಸ್ಥೆಯ ಮರ್ಯಾದೆ ಕಾಪಾಡಲು ಇವರು ಯಾವ ತ್ಯಾಗಕ್ಕೂ ಸಿದ್ಧವಿದ್ದಾರೆ. ‘ಪ್ರಮೇಯ’ (“ಜಾತ್ರೆ ಮುಗಿದಿತ್ತು”) ದ ನಾಗವ್ವ, ತನ್ನ ಅಕ್ಕನ ಗಂಡನೇ ತನ್ನ ಬಸಿರಿಗೆ ಕಾರಣವಾಗಿದ್ದರೂ, ಗುಟ್ಟು ಬಿಟ್ಟುಕೊಡದೆ, ತನ್ನನ್ನು ತಾಯಿಯಂತೆ ನೋಡಿಕೊಂಡಿದ್ದ ಅಕ್ಕನ ಸಂಸಾರವನ್ನು ಉಳಿಸುವುದಕ್ಕಾಗಿ ತನ್ನ ಬಾಳನ್ನೇ ಹಾಳುಮಾಡಿಕೊಳ್ಳುವ ಉದಾಹರಣೆಯೂ ಇದೆ.

ಇವರೆಲ್ಲ ಪ್ರತಿಭಟನೆಯ ಶಕ್ತಿ ಕಳೆದುಕೊಂಡವರು, ಆಗಾಗ ಸಿಡಿಮಿಡಿ ಮಾಡಿದ್ದರೂ, ಕುಟುಂಬ ವ್ಯವಸ್ಥೆಯಿಂದ ಸಿಡಿದು ಹೊರಗೆ ಬರಲಾರಳು. ಅಪರೂಪಕ್ಕೆ ‘ಮತ್ತದೇ ರಾಗ’ (“ನೀಲಿಮಾ ತೀರ”)ದ ಇಂದಿರಾ, ‘ಜನರೇನು ಬಲ್ಲರು ಒಳಗಾಗೊ ಕೃತ್ಯವ’ (“ಗಾಂಧೀ ಮಗಳು”)ದ ಉಮಾರಂಥ ನಾಲ್ಕಾರು ಜನ ಗಂಡನಿಂದ ಸಿಡಿದು ಬಂದು ಸ್ವತಂತ್ರ ಜೀವನ ನಡೆಸಿದವರಿದ್ದಾರೆ. ಆದರೆ ಇವರ್ಯಾರೂ ಸುಖಿಗಳಲ್ಲ. ಗಂಡನ ದೌರ್ಜನ್ಯದಿಂದ ತಪ್ಪಿಸಿಕೊಳ್ಳಬೇಕೆಂಬುದೊಂದೇ ಅವರ ಉದ್ದೇಶ. ತಮ್ಮ ಅಸ್ಮಿತೆಯನ್ನು ಸಾಧಿಸಿಕೊಳ್ಳಬೇಕೆನ್ನುವ, ತಮ್ಮ ವೈಯಕ್ತಿಕ ಅಭಿರುಚಿ ಮಹತ್ವಾಕಾಂಕ್ಷೆಗಳನ್ನು ಈಡೇರಿಸಿಕೊಳ್ಳಬೇಕೆನ್ನುವ, ಒಂದು ಬಗೆಯ ಆಧ್ಯಾತ್ಮಿಕವೆನ್ನಬಹುದಾದ ತುಡಿತ ಇವರಲ್ಲಿ ಕಾಣುವುದಿಲ್ಲ. ಬಹಳಷ್ಟು ಜನ ವ್ಯಾವಹಾರಿಕವೆನ್ನಬಹುದಾದ ಸರಳ ಹೊಂದಾಣಿಕೆಗೇ ತಿರುಗಿ ಬರುತ್ತಾರೆ.

ಶಾಂತಾದೇವಿಯವರ ಕತೆಗಳಲ್ಲಿ ಹೆಣ್ಣು ಹೀಗೆ ಮತ್ತೆಮತ್ತೆ ಹೊಂದಾಣಿಕೆ ಮಾಡಿಕೊಳ್ಳುವುದರ ಅರ್ಥವೆನು? ಪುರುಷಪ್ರಧಾನ ಸಮಾಜವ್ಯವಸ್ಥೆಯಲ್ಲಿ ಹೆಣ್ಣಿಗೆ ಇದು ಅನಿವಾರ್ಯವೆಂದೆ? ಗಂಡು ಹೇಗಾದರೂ ಇರಲಿ, ಹೆಣ್ಣು ಮಾತ್ರ ಅವನನ್ನು ಅನುಸರಿಸಿಕೊಂಡು, ತನ್ನ ತಾಳ್ಮೆ – ತ್ಯಾಗಗಳಿಂದ ಕುಟುಂಬ ವ್ಯವಸ್ಥೆಯನ್ನು ಕಾಪಾಡಬೇಕೆಂದೆ? ಈ ವ್ಯವಸ್ಥೆಯಲ್ಲಿ ಹೆಣ್ಣಿನ ಪ್ರತಿಭಟನೆಯಿಂದ ಸುಖವಿಲ್ಲವೆಂದೆ, ಅಥವಾ ಅದು ವ್ಯರ್ಥವೆಂದೆ?

ಶಾಂತಾದೇವಿಯವರಿಗೆ ಕುಟುಂಬ ವ್ಯವಸ್ಥೆಯಲ್ಲಿ ಶ್ರದ್ಧೆ ಎನ್ನುವಷ್ಟರ ಮಟ್ಟಿನ ವಿಶ್ವಾಸವಿರುವಂತಿದೆ. ಅದರ ಗೌರವವನ್ನು ಉಳಿಸಿಕೊಳ್ಳುವತ್ತ ಅವರ ಒಲವು ಇರುವಂತಿದೆ. ದೌರ್ಜನ್ಯವನ್ನು ಸಹಿಸಿಕೊಂಡು, ಸಮಸ್ಯೆಗಳನ್ನು ಎದುರಿಸಿ, ಕುಟುಂಬವನ್ನು ರಕ್ಷಿಸಿಕೊಳ್ಳುವ ಪಾತ್ರಗಳ ಬಗ್ಗೆ ಅವರಿಗೆ ಸಹಾನುಭೂತಿ ಇರುವುದಂತೂ ಸ್ಪಷ್ಟವಾಗಿಯೇ ಕಾಣುತ್ತದೆ. ಅದರಿಂದ ಸಿಡಿದು ಹೊರಬಂದ ಕೆಲವು ಪಾತ್ರಗಳೂ ಕೂಡ ಕುಟುಂಬದ ಮೇಲಿನ ಆಶೆಯನ್ನು ಇನ್ನೂ ಉಳಿಸಿಕೊಂಡೇ ಇವೆ.

ಗಂಡಿನ ಅಧಿಕಾರ-ದೌರ್ಜನ್ಯಗಳ ವಿರುದ್ಧ ಹೆಣ್ಣು ಪ್ರತಿಭಟಿಸಬೇಕು, ಆದರೆ ಅದು ಕುಟುಂಬ ವ್ಯವಸ್ಥೆಯನ್ನೇ ಮುರಿದುಬಿಡುವಷ್ಟು ದೀರ್ಘಕ್ಕೆ ಹೋಗಬಾರದು. ಇದು ನಮ್ಮ ಸುಶಿಕ್ಷಿತ ಮಧ್ಯಮ ವರ್ಗದ ಮಹಿಳೆಯರ ವಿಶಿಷ್ಟ ಸಂರಕ್ಷಣಾತ್ಮಕ ಮನೋಧರ್ಮವೇ ಆಗಿದೆಯೆನ್ನಬಹುದು. ಇದಕ್ಕೆ ಶಾಂತಾದೇವಿಯವರು ಅಪವಾದವಲ್ಲ. ತನ್ನ ಹಿತಕ್ಕಾಗಿ, ಮಕ್ಕಳ ಹಿತಕ್ಕಾಗಿ, ಒಟ್ಟಿನಲ್ಲಿ ಕುಟುಂಬದ ಹಿತಕ್ಕಾಗಿ ಹೆಣ್ಣು ತಾಳಿಕೊಳ್ಳುವುದು, ಇಂದಿನ ಪರಿಸ್ಥಿತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯ, ಅಪೇಕ್ಷಣೀಯ ಎಂಬಂತೆ ಈ ಕತೆಗಳು ನಿರೂಪಿತವಾಗಿವೆ.

ಆದರೆ ಈ ಹೊಣೆ ಹೆಣ್ಣು ಒಬ್ಬಳದು ಮಾತ್ರವೇ ಏಕಾಗಬೇಕು? ಗಂಡಿನ ದೌರ್ಜನ್ಯವನ್ನು ಸಹಜವೆಂದು ಕ್ಷಮಿಸಿಬಿಡಬೇಕೆ? ಇಂಥ ಪ್ರಶ್ನೆಗಳನ್ನು ಶಾಂತಾದೇವಿಯವರ ಕತೆಗಳು ಎದುರಿಸುವುದಿಲ್ಲ. ಗಂಡು ಕೂಡ ಇಂಥ ಬಿಕ್ಕಟ್ಟುಗಳನ್ನು ಎದುರಿಸುವುದಿಲ್ಲವೆ? ಅವನು ಹೊಂದಾಣಿಕೆ ಮಾಡಿಕೊಳ್ಳಲಾರನೆ? ‘ತೆತ್ತ ಬೆಲೆ’ (“ಬಯಲು-ಆಲಯ”)ಯಂಥ ಸಮಸ್ಯೆಗಳು ಕತೆಗಳಲ್ಲಿ ಪೂರ್ಣಪ್ರಮಾಣದ ಅಭಿವ್ಯಕ್ತಿ ಪಡೆದಿಲ್ಲ. ಅದೇನೇ ಇದ್ದರೂ, ಗಂಡಿನ ಕ್ರೌರ್ಯ, ದಬ್ಬಾಳಿಕೆಗಳ ವಿರುದ್ಧ ಪ್ರತಿಭಟಿಸಬೇಕೆನ್ನುವ ಈಚಿನ ಉಗ್ರ ಸ್ತ್ರೀವಾದಿ ದೃಷ್ಟಿಕೋನಕ್ಕೆ ಶಾಂತಾದೇವಿಯವರ ನಿಲುವು ಅತ್ಯಂತ ಸೌಮ್ಯವಾಗಿ, ಸಾಂಪ್ರದಾಯಿಕವಾಗಿ ಕಂಡರೆ ಆಶ್ಚರ್ಯವಿಲ್ಲ.

ಶಾಂತಾದೇವಿಯವರ ಸಣ್ಣಕತೆಗಳಲ್ಲಿ ಪ್ರತಿಭಟನೆ ಇಲ್ಲವೆಂದೇನೂ ಅಲ್ಲ. ಆದರೆ ಅದರ ಗುರಿ ಬೇರೆಯಾಗಿದೆ. ‘ಹರಕೆ’ (“ನೀಲಿಮಾ ತೀರ”) ಅಂಥ ಯಶಸ್ವಿ ಕತೆಯಲ್ಲವಾದರೂ, ಬಸವಿ ಬಿಡುವ ಮೂಢ ಸಂಪ್ರದಾಯದ ವಿರುದ್ಧ, ಅರ್ಥಾತ್ ಅದಕ್ಕೆ ಒತ್ತಾಯಿಸುತ್ತಿರುವ ತನ್ನ ತಾಯಿಯ ವಿರುದ್ಧ (ಗಂಡಿನ ವಿರುದ್ಧ ಅಲ್ಲ) ಕಮಲೆ ಉಗ್ರ ಪ್ರತಿಭಟನೆ ಮಾಡಿ ಯಶಸ್ವಿಯಾಗುತ್ತಾಳೆ. ಯಶಸ್ವಿಯಾದ ಒಂದು ಕತೆ ‘ದೇವಿ’ (“ನೀಲಿಮಾ ತೀರ”). ಮೂಢನಂಬಿಕೆಯೊಂದಕ್ಕೆ ತಾನೇ ಶರಣಾಗಿ, ಅದರಿಂದ ಸಾಧ್ಯವಾದ ಲಾಭ ಮಾಡಿಕೊಂಡು, ಕೊನೆಗೆ ಅದರಿಂದ ಬಿಡುಗಡೆ ಪಡೆದುಕೊಳ್ಳುವ ಪಾರಕ್ಕನ ಕತೆ ಬಂಡಾಯ ಸಾಹಿತ್ಯದ ಹಿನ್ನೆಲೆಯಲ್ಲಿ ಗಂಭೀರವಾಗಿ ಪರಿಗಣಿಸಬೇಕಾದದ್ದು. ಆದರೆ ಇವು ಅವರ ವಿಶಿಷ್ಟ ಕತೆಗಳೆಂದು ಹೇಳಲು ಬರುವುದಿಲ್ಲ.

ನವೋದಯದ ದಟ್ಟ ಹಿನ್ನೆಲೆಯಲ್ಲಿ ಬರವಣಿಗೆಯನ್ನು ಆರಂಭಿಸಿದ ಶಾಂತಾದೇವಿಯವರು ನವ್ಯ ಮತ್ತು ಬಂಡಾಯ ಚಳುವಳಿಗಳನ್ನು ಹಗುರಾಗಿ ಹಾದು ಬಂದಿದ್ದರೂ, ತಮ್ಮ ಮೂಲದ್ರವ್ಯವನ್ನು ಕಳೆದುಕೊಂಡಿಲ್ಲ. ಹೃದಯವಂತ ಗೃಹಿಣಿಯಾಗಿ ಅವರು ಬದುಕನ್ನು ಕಂಡಿದ್ದಾರೆ, ಮತ್ತು ಅದೇ ದೃಷ್ಟಿಯಿಂದ ತಮ್ಮ ಕತೆಗಳನ್ನು ಹೇಳಿದ್ದಾರೆ. ಈ ನಿಟ್ಟಿನಲ್ಲಿ, ಕಲಾತ್ಮಕವಾಗಿ ಯಶಸ್ವಿಯಾದ ಮತ್ತು ಹೆಣ್ಣಿನ ಸ್ಥಿತಿಯ ಬಗ್ಗೆ ಯೋಚಿಸಹಚ್ಚುವ ಕೆಲವು ಕತೆಗಳನ್ನು ಕೊಟ್ಟಿದ್ದಾರೆ.

– ೨೦೦೩

* ಶಾಂತಾದೇವಿ ಕಣವಿಯವರ ಸಮಗ್ರ ಕತೆಗಳ ಸಂಪುಟಗಳಾದ ’ಕಥಾಮಂಜರಿ’ (೨೦೦೩) ಮತ್ತು ಇನ್ನೊಂದು ಸಂಪುಟ’ (೨೦೦೫) (ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು) ಗಳಿಗೆ ಬರೆದ ಪ್ರಾಸ್ತಾವಿಕ ಲೇಖನ.