ನಾಲ್ವತ್ತು ವಯಸ್ಸಿನ ಒಳಹೊರಗಿನ ಸಣ್ಣಕತೆಗಾರರ ಒಂದು ಗುಂಪು ಇಂದು ಕನ್ನಡದಲ್ಲಿ ಅತ್ಯಂತ ಕ್ರಿಯಾಶೀಲರಾಗಿ ಬರವಣಿಗೆಯಲ್ಲಿ ತೊಡಗಿಕೊಂಡಿದೆ. ಇವರು ನವೋದಯ ಮುಗಿದ ನಂತರ ವಯಸ್ಸಿಗೆ ಬಂದವರು; ನವ್ಯದ ಕೊನೆಗಾಲದಲ್ಲಿ ಅದರ ಪ್ರಭಾವದಲ್ಲೇ ಬರವಣಿಗೆ ಆರಂಭಿಸಿದವರು; ಬಂಡಾಯದ ಬಿರುಗಾಳಿಯನ್ನು ಸ್ವಲ್ಪ ದೂರ ನಿಂತುಕೊಂಡೇ ಆತಂಕದಿಂದ ನೋಡಿ, ಪಕ್ಕದಲ್ಲಿ ಹಾಯ್ದು ಹೋಗಲು ಬಿಟ್ಟವರು. ಈಗ ಈ ಮೂರು ಮಾರ್ಗಗಳಿಗಿಂತ ಭಿನ್ನವಾದ ರೀತಿಯಲ್ಲಿ ತಮ್ಮ ಬರವಣಿಗೆಯನ್ನು ರೂಪಿಸಿಕೊಳ್ಳತೊಡಗಿದ್ದಾರೆ. ಒಂದು ರೀತಿಯಲ್ಲಿ ಇವರನ್ನು ಆಧುನಿಕೋತ್ತರ – Post modernist – ಎಂದು ಕರೆಯಬಹುದೇನೊ! ಆದರೆ ಕನ್ನಡದಲ್ಲಿ ‘ಆಧುನಿಕೋತ್ತರ’ ಎಂಬ ಒಂದು ವಿಶಿಷ್ಟ ಮಾರ್ಗವಿನ್ನೂ ಸ್ಪಷ್ಟವಾಗಿ ಹುಟ್ಟಿಕೊಂಡಿಲ್ಲ. ಅನೇಕರು ತಮ್ಮದೇ ರೀತಿಯಲ್ಲಿ ಆದರೆ ಬೇರೆ ಬೇರೆ ನೆಲೆಗಳು ಹುಡುಕಾಟದಲ್ಲಿ ನಿರತರಾಗಿದ್ದಾರೆ. ರಾಘವೇಂದ್ರ ಪಾಟೀಲ, ಜಯಂತ ಕಾಯ್ಕಿಣಿ, ವಿವೇಕ ಶಾನಬಾಗ, ಕೆ.ಸತ್ಯನಾರಾಯಣ, ಎಂ.ಎಸ್. ಶ್ರೀರಾಮ್, ಮೊಗಳ್ಳಿ ಗಣೇಶ್ ಈ ಬಗೆಯ ಲೇಖಕರು.

ಸ್ಥೂಲವಾಗಿ ಈ ಮಾರ್ಗಕ್ಕೆ ಸೇರುವ ಜಯಂತ ಕಾಯ್ಕಿಣಿ ತಮ್ಮ ಬರವಣಿಗೆಯನ್ನು ಆರಂಭಿಸಿದ್ದು ನವ್ಯದ ರೀತಿಯಲ್ಲಿ ಅವರ “ತೆರೆದ ಬಾಗಿಲು” ಸಂಕಲನದ ಕಥೆಗಳು ಈ ಮಾರ್ಗದಲ್ಲಿ ಬರೆದವುಗಳಾಗಿವೆ. ಕೇಂದ್ರಪಾತ್ರವೊಂದರ ಪ್ರಜ್ಞೆಯಲ್ಲಾಗುವ ಸಂಚನಗಳನ್ನು ಅನ್ವೇಷಿಸುವ ನವ್ಯದ ಮಾದರಿ ಇಲ್ಲಿ ಒಡೆದು ಕಾಣುತ್ತದೆ. ಹೆಚ್ಚಿನ ಕಥೆಗಳಲ್ಲಿ ಉತ್ತಮ ಪುರುಷ ನಿರೂಪಣೆ ಇದೆ. ಅದರಿಂದಾಗಿ ಒಂದು ಪಾತ್ರದ ಪ್ರಜ್ಞೆಗೆ ಮಾತ್ರ ನಿರೂಪಣೆಯ ದೃಷ್ಟಿಕೋನ ಸೀಮಿತವಾಗಿದೆ. ಮಾನವ ಸಂಬಂಧಗಳ ಸೂಕ್ಷ್ಮಗಳನ್ನು ಹಿಡಿಯುವ ಪ್ರಯತ್ನ ಈ ಕಥೆಗಳಲ್ಲಿದೆ.

“ಅಮೃತಬಳ್ಳಿಯ ಕಷಾಯ”ದ ಹೊತ್ತಿಗೆ ಈ ನಿರೂಪಣೆಯ ದೃಷ್ಟಿಕೋನದಲ್ಲಿ ಬದಲಾವಣೆಯಾಗಿದೆ. ಸ್ವಲ್ಪಮಟ್ಟಿಗೆ ಬಂಡಾಯದ ಆಕರ್ಷಣೆಗೆ ಒಳಗಾದ ಕುರುಹುಗಳು ಇಲ್ಲಿ ಕಾಣಿಸಿಕೊಂಡಿವೆ. ಆದರೆ ಬಂಡಾಯದ ಧ್ವನಿರಹಿತ ವಾಸ್ತವವಾದದ ಬದಲು ಇನ್ನೂ ನವ್ಯದ ಕಾವ್ಯಪರಿಕರಗಳು ಉಳಿದುಕೊಂಡಿವೆ. “ದಗಡೂ ಪರಬನ ಅಶ್ವಮೇಧ” ಮತ್ತು “ಬಣ್ಣದ ಕಾಲು” ಸಂಗ್ರಹಗಳ ಕೆಲವು ಕಥೆಗಳಲ್ಲಿ ಜಯಂತ್ ಹೊಸ ಜಿಗಿತಗಳಿಗೆ ಪ್ರಯತ್ನಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಹನೆಹಳ್ಳಿಯಿಂದ ಬಂದು ಮುಂಬಯಿಯಲ್ಲಿ ವಾಸವಾಗಿರುವ ಯಶವಂತ ಚಿತ್ತಾಲರು ಹನೆಹಳ್ಳಿ-ಮುಂಬಯಿಗಳೆರಡನ್ನೂ ತಮ್ಮ ಸೃಜನಶೀಲತೆಯ ಮುಖ್ಯ ನೆಲೆಗಳನ್ನಾಗಿ ಮಾಡಿಕೊಂಡಿದ್ದಾರೆ. ಅವರ ಬರವಣಿಗೆಯಲ್ಲಿ ಅವೆರಡೂ ಪ್ರಜ್ಞೆ ಕಾಲಗಳ ಎರಡು ನೆಲೆಗಳನ್ನು ಸೂಚಿಸುತ್ತವೆ. ಸುಪ್ತ ಮತ್ತು ಜಾಗರಗಳಾಗಿ, ಭೂತ ಮತ್ತು ವರ್ತಮಾನಗಳಾಗಿ, ಸಂಪ್ರದಾಯ ಮತ್ತು ಆಧುನಿಕತೆಗಾಗಿ ಕೆಲಸ ಮಾಡುತ್ತವೆ. ಜಯಂತರೂ ಅದೇ ಪರಿಸರದ ಗೋಕರ್ಣದಿಂದ ಬಂದು ಬಹುಕಾಲ ಮುಂಬಯಿಯಲ್ಲಿ ನೆಲೆಸಿದ್ದವರು. ಚಿತ್ತಾಲರ ಪ್ರಭಾವದಿಂದಾಗಿಯೂ ಇರಬಹುದು,-ಇವೆರಡೂ ಜಯಂತರ ಸೃಜನಶೀಲತೆಯಲ್ಲೂ ಎರಡು ಮುಖ್ಯ ನೆಲೆಗಳಾಗಿ ಕೆಲಸ ಮಾಡುತ್ತವೆ. ಆದರೆ ಚಿತ್ತಾಲರಲ್ಲಿಗಿಂತ ಈ ನೆಲೆಗಳ ಸ್ವರೂಪ ಭಿನ್ನವಾಗಿದೆ. ಗೋಕರ್ಣ ಮತ್ತು ಮುಂಬಯಿಗಳು ಜಯಂತರ ಕಥೆಗಳಿಗೆ ಗಟ್ಟಿಯಾದ ವಿವರಗಳನ್ನು ಒದಗಿಸುವ ಗಣಿಗಳಾಗಿವೆ. ದೂರದ ಆಕರ್ಷಣೆಯಾಗಿ ಮುಂಬಯಿ ಗೋಕರ್ಣದಿಂದ ಸೆಳೆಯುತ್ತದೆ. ಗೋಕರ್ಣದ ಪರಿಸರದ ಬಗ್ಗೆ ಜಯಂತರಲ್ಲಿ Nostalgia ಎನ್ನಲಿಕ್ಕಾಗದಿದ್ದರೂ ಹೆಚ್ಚಿನ ಸೆಳೆತ, ಆತ್ಮೀಯತೆ, ಪ್ರೀತಿಗಳಿವೆ. ಮುಂಬಯಿ ತನ್ನೊಳಗೆ ಅನೇಕ ಅಮಾನವೀಯ ರಹಸ್ಯಗಳನ್ನು ಬಚ್ಚಿಟ್ಟುಕೊಂಡಿದೆ. ಅದೊಂದು ಆಕರ್ಷಕ ಹಣ್ಣುಬಿಟ್ಟಿರುವ ಸೇಬು ಹಣ್ಣಿನ ಈಡನ್ ತೋಟದಂತಿದೆ.

‘ಬಣ್ಣದ ಕಾಲು’ ಕಥೆಯಲ್ಲೂ ಎರಡು ಪರಿಸರಗಳಿವೆ. ಒಂದು, ಗೋಕರ್ಣದ ಬದಲು ಅದರಂಥವೇ ನೆರೆಯ ಗೋವಾದ ಫರ್ಮಾ ಎಂಬ ಹಳ್ಳಿ; ಇನ್ನೊಂದು ಮುಂಬಯಿ, ಅನೇಕ ಕಥೆಗಳಲ್ಲಿ ಈ ನೆಲೆಗಳು ಇದು ಇಲ್ಲವೆ ಅದು ಎಂಬಂತೆ ಚಿತ್ರಿತವಾಗಿದ್ದರೆ, ಈ ಕಥೆಯಲ್ಲಿ ಎರಡೂ ನೆಲೆಗಳು ಒಟ್ಟಿಗೆ ಕಾಣಿಸಿಕೊಳ್ಳುತ್ತವೆ ಮತ್ತು ಪರಸ್ಪರ ಹೋಲಿಕೆ, ಮೌಲ್ಯಮಾಪನಗಳಿಗೆ ಒಳಗಾಗುತ್ತವೆ.

ಇದು ಪ್ರಥಮ ಪುರುಷ ನಿರೂಪಣೆಯಲ್ಲಿರುವ ಕಥೆ ಎಂದರೆ ಕೇಂದ್ರ ಪಾತ್ರದ ಪ್ರಜ್ಞೆಗೆ ಸೀಮಿತವಾಗಿರುವ ನವ್ಯದ ಹಾದಿಯನ್ನು ಬಿಟ್ಟು ಸರ್ವಸಾಕ್ಷಿತ್ವದ ನಿರೂಪಣೆಗೆ ಬಂದಿದೆ. ಇದರಲ್ಲಿ ಎರಡು ಮುಖ್ಯ ಪಾತ್ರಗಳಿದ್ದು, ನಿರೂಪಣೆಯ ದೃಷ್ಟಿಕೋನ ಆಗಾಗ ಉಚಿತವಾದ ಪಾತ್ರದ ಪ್ರಜ್ಞೆಯ ಒಳಗೆ ಹೋಗುತ್ತ, ಹೊರಗೆ ಬರುತ್ತ ಸರಿದಾಡುತ್ತದೆ. ಎರಡು ಮುಖ್ಯ ಪಾತ್ರಗಳಲ್ಲಿ ಇದು ಯಾವುದೇ ಒಂದು ಪಾತ್ರದ ಕಥೆಯೂ ಅಲ್ಲ. ಆ ಎರಡೂ ಪಾತ್ರಗಳು ಎದುರಿಸುವ ಅನುಭವ ಪರಸ್ಪರ ಪೂರಕವಾಗಿ ಒಟ್ಟಿನಲ್ಲಿ ಒಂದು ಹೊಸ ಅರಿವು ಮೂಡಿತೆಂದೂ ಹೇಳುವಂತಿಲ್ಲ. ಇಂಥ ಕತೆಯಲ್ಲಿ ನಾಯಕ ಯಾರೆಂದು ಹೇಳುವುದೇ ಕಷ್ಟ. ಎರಡು ಪಾತ್ರಗಳೂ ಕಾಣುವ ಅರಿವು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ನಿಲ್ಲುವುದೇ ಈ ಕಥೆಯ ವೈಶಿಷ್ಟ್ಯವಾಗಿದೆ.

ಕಥೆ ಆರಂಭವಾಗುವುದು ಮುಂಬಯಿಗೆ ಹೋಗುವ ಕನಸು ಕಾಣುವ ಚಂದೂ ಎಂಬ ಆರೇಳು ವರ್ಷದ ಹುಡುಗನ ಸಂಭ್ರಮ ಮತ್ತು ಅವನ ತಂದೆ-ತಾಯಿಗಳ ಆತಂಕದ ಸೂಚನೆಯೊಂದಿಗೆ. ಈ ಸಂಭ್ರಮ ಮತ್ತು ಆತಂಕಗಳ ಹಿಂದಿರುವ ಕಾರ‍ಣಗಳನ್ನು ಕಥೆ ಅಷ್ಟಿಷ್ಟೇ ಬಿಚ್ಚುತ್ತ ಹೋಗುತ್ತದೆ.

ಊರಲ್ಲೆಲ್ಲ ಕಿಡಿಗೇಡಿ, ಉಡಾಳ ಎಂದು ಪ್ರಸಿದ್ಧಿ ಪಡೆದಿರುವ ಚಂದೂನ ಪ್ರತಾಪಗಳನ್ನು ಕಥೆ ಕಣ್ಣಿಗೆ ಕಟ್ಟುವ ಹಲವಾರು ವಿವರಗಳಲ್ಲಿ ಹೇಳುತ್ತದೆ. “ಹೊಸ ದಿನ ತೆರೆದರೆ ಸಾಕು ಪುಂಡಾಟದ ಹೊಸ ಹೊಸ ಎತ್ತರಗಳಿಗೆ ಚಂದೂ ಜಿಗಿಯುತ್ತಿದ್ದ,” ಹಳ್ಳಿಯ ಜನ ಅವನಿಗೆ ಗಬ್ಬರ್‌ಸಿಂಗ್ ಎಂದು ಹೆಸರಿಟ್ಟಿದ್ದಾರೆ.

ಒಮ್ಮೆಮ್ಮೆಯಂತೂ ಹಠಾತ್ತನೆ ಹಪ್ಪಳ ಲಟ್ಟಿಸುವವರ ನಡುವೆ ಅಥವಾ ಅಕ್ಕಿ ಆರಿಸುವವರ ನಡುವೆ ಅಥವಾ ತೆಂಗಿನ ಗರಿಗಳ ಮಾಡಲು ಹೆಣೆಯುವವರ ನಡುವೆ ಹುಯ್ಯೆಂದು ಬಿಟ್ಟ ಬಾಣದಂತೆ ಚಂದು ಓಡಿ ಹಾಯುತ್ತಿದ್ದ. ಮತ್ತು ಹಿಂದೆಯೇ ಅವನನ್ನು ಅಟ್ಟಿಸಿಕೊಂಡು ಬಂದವರು. ಶರವೇಗದಲ್ಲಿ ಹಾಯುವಾಗಲೂ ಅವನು ಕಾಲಿನಿಂದ ಅಕ್ಕಿಯ ರಾಶಿಯನ್ನು, ಹಪ್ಪಳದ ಹಿಟ್ಟನ್ನು ಒದೆಯಲು ಅಥವಾ ಕೂತವರ ಬೋಳಿನ ಮೇಲೆ ಪಟ್ ಎಂದು ಹೊಡೆಯಲು ಅಥವಾ ಕಣ್ಣಲ್ಲಿ ಬೆರಳು ತೂರಿಸಲು ಮರೆಯುತ್ತಿರಲಿಲ್ಲ.

ಇಂಥ ಅನೇಕ ವಿವರಗಳನ್ನು ಕಥೆ ಸ್ವಾರಸ್ಯಕರವಾಗಿ ನಿರೂಪಿಸುತ್ತದೆ. ‘ಸ್ವಾರಸ್ಯಕರವಾಗಿ’ ಎಂದು ಹೇಳಲು ಕಾರಣವೆಂದರೆ, ಈ ಸಂಗತಿಗಳು ಹಡೆದವರ ಆತಂಕವನ್ನು ಹೆಚ್ಚಿಸಿದರೂ ಓದುಗರಾಗಿ ನಮ್ಮಲ್ಲಿ ನಗೆ ತರಿಸುತ್ತದೆ. ಈ ಕಿಡಿಗೇಡಿತನದ ನಿರೂಪಣೆ ಸಂಕ್ಷಿಪ್ತ ವಾಕ್ಯಗಳಲ್ಲಿ ಬಂದಿದ್ದರೂ ಅದರ ಹಿಂದಿನ ಶಕ್ತಿ ಮತ್ತು ನಾಟಕೀಯ ಗುಣ ಆಶ್ಚರ್ಯಕರವಾಗಿದೆ. ವಿವರಗಳ ಮೇಲೆ ಜಯಂತ್ ಸಾಧಿಸಿರುವ ಹಿಡಿತ, ಮಾಂತ್ರಿಕತೆ ಮೆಚ್ಚುವಂಥದು. ಇವೆಲ್ಲಕ್ಕೂ ಕಳಸವಿಡುವಂತೆ ಕೇಸರಕರ ಮನೆಯಲ್ಲಿ ನಡೆದ ಘಟನೆ ಬರುತ್ತದೆ:

ಕೇಸರಕರ ಮನೆಯ ಮುಂದೆ ಮಂಟಪದಲ್ಲಿ ಊಟದ ಪಂಕ್ತಿಗಳು ನಡೆದಾಗ ಅಡಿಗೆ ಮನೆಯಲ್ಲಿ ದೊಡ್ಡ ರಂಪ ಎದ್ದಿತ್ತು. ನೋಡಿದರೆ ಚಂದು ಸಾರಿನ ಭಾಂಡಲೆಯಲ್ಲಿ ಉಚ್ಚೇ ಹೊಯ್ದು ಸೌಟಿನಿಂದ ಹೊಡೆಸಿಕೊಳ್ಳುತ್ತ ಪಚಪಚ ಎಲೆಗಳನ್ನು ತುಳಿಯುತ್ತ ಪಂಕ್ತಿಯ ನಡುವಿನಿಂದ ಓಡಿಹೋದ.

ಈ ಘಟನೆಯನ್ನು ನೋಡಿ ಮದುವೆಗೆ ಬಂದಿದ್ದ ತಂದೆ-ತಾಯಿ (ನರಸಿಂಹ ಮತ್ತು ಮೀರಾ) ಅವಮಾನದಿಂದ ಊಟ ಬಿಟ್ಟು ಮನೆಗೆ ಮರಳುತ್ತಾರೆ. ಅವನಲ್ಲಿ ಕಲಿ ಹೊಕ್ಕಿದೆ, ಅವನೊಬ್ಬ ರಾಕ್ಷಸ ಎಂದು ಜನ ಹೆದರಿಸುತ್ತಾರೆ.

ಚಂದೂನನ್ನು ಸುಧಾರಿಸುವ ಯತ್ನಗಳು ಫಲ ಕೊಡುವುದಿಲ್ಲ. ಅವರಿಗೆ ಚಂದೂನ ಪುಂಡಾಟಿಕೆಯಿಂದ ಆತಂಕವಾದರೂ ಅವನ ಮೇಲೆ ಪ್ರೀತಿ ಇದ್ದೇ ಇದೆ. “ಎಷ್ಟು ಹೊಡೆದು ಬಡಿದರೂ ರಾತ್ರಿ ಮಲಗಿದ ನಂತರ ಸಪೂರ ಕೈಕಾಲುಗಳ ಸಣ್ಣ ಜೀವದ ಮೇಲೆ ಮುದ್ದು ಉಕ್ಕಿ ಬರುತ್ತಿತ್ತು.” ‘ಯಾಕೆ ಪೋರಾ ಈ ದುರ್ಬುದ್ಧಿ, ಯಾಕೆ ರಾಕ್ಷಸನಂತೆ ಮಾಡ್ತೀ, ಮುದ್ದುಮರಿ, ಚಿನ್ನು’ ಎಂದು ತಾಯಿ ಕೇಳಿದರೆ ಅವನು ಬಿಕ್ಕಿ ಬಿಕ್ಕಿ ಮಡಿಲಲ್ಲಿ ಸೇರಿಕೊಳ್ಳುತ್ತಾನೆ. ತಾನೇಕೆ ಹೀಗೆಲ್ಲಾ ಮಾಡುತ್ತೇನೆಂದು ಅವನಿಗೂ ಗೊತ್ತಿಲ್ಲ.

ಚಂದೂನನ್ನು ಸುಧಾರಿಸುವ ಕೊನೆಯ ಯತ್ನವಾಗಿ ಅವನನ್ನು ಮುಂಬಯಿಗೆ ಕರೆದುಕೊಂಡು ಹೋಗಿ, ರಿಮಾಂಡ್ ಹೋಮಿನಲ್ಲಿ ಇಟ್ಟುಬರಲು ತಂದೆ-ತಾಯಿ ನಿರ್ಧರಿಸುತ್ತಾರೆ. ಮುಂಬಯಿ ಎಂಥ ಊರೋ, ರಿಮಾಂಡ್ ಹೋಂ ಎಂಥದೋ ಎಂಬ ಆತಂಕ ತಂದೆ-ತಾಯಿಗಳಿಗೆ.

ಆದರೆ ಚಂದೂನ ಜಗತ್ತೇ ಬೇರೆಯಾಗಿದೆ. ಈ ಪುಂಡಾಟಿಕೆಯ ನಡುವೆಯೂ ಅವನದೇ ಆದ ಗೆಳೆತನದ ಜಗತ್ತೊಂದಿದೆ. ಅಲ್ಲಿ ಕುಂಟ ಮಂಗೇಶ ನಾಯಕನಾಗಿದ್ದಾನೆ. ಆ ಜಗತ್ತಿನಲ್ಲಿ ಚಂದೂನ ಕಿಡಿಗೇಡಿತನಗಳು ಆತಂಕ ಹುಟ್ಟಿಸುವುದಿಲ್ಲ. ಮಂಗೇಶ ಮುಂಬಯಿಯ ಬಗ್ಗೆ ಚಂದೂನಲ್ಲಿ ವರ್ಣರಂಜಿತ ಕನಸುಗಳನ್ನು ತುಂಬುತ್ತಾನೆ. ಅದರಿಂದಾಗಿಯೇ, ಮುಂಬಯಿಗೆ ಹೋಗುವ ಸುಳಿವು ಸಿಕ್ಕಿದ್ದೇ ಚಂದೂ ‘ಯಾಕೆ ಏನು’ ಎಂಬುದರ ಗೋಜಿಗೇ ಹೋಗದೆ ಖುಷಿಯಿಂದ ನೆಗೆದಾಡಿದ್ದು.

ಮುಂಬಯಿಗೆ ಹೊರಡುವ ದಿನ ತಾಯಿ ಆತಂಕದಿಂದ ಮಗನನ್ನು ಬೀಳ್ಕೊಟ್ಟರೆ ಅವನ ಗೆಳೆಯರು ಸಂಭ್ರಮದಿಂದ ಬೀಳ್ಕೊಡುತ್ತಾರೆ. ಕುಂಟ ಮಂಗೇಶ ‘ಮುಂಬೈಯಲ್ಲಿ ಚಲೋ ಚಲೋ ಕಾಲು ಸಿಕ್ಕುತ್ತವೆ, ನನಗೊಂದು ಜೋಡಿ ತಕೊಂಡು ಬಾ, ಬಣ್ಣದ್ದು ಸಿಕ್ಕರೆ ಬಣ್ಣದ್ದೇ ತಾ’ ಎಂದು ಚಂದೂನಲ್ಲಿ ಬಣ್ಣದ ಕಾಲಿನ ಕನಸು ತುಂಬುತ್ತಾನೆ.

ಮುಂಬಯಿಗೆ ಬಂದ ಮೇಲೆ ನಡೆಯುವ ಒಂದೊಂದು ಸಂಗತಿಯೂ ತಂದೆ ನರಸಿಂಹನ ಆತಂಕವನ್ನು ಹೆಚ್ಚಿಸುತ್ತಲೇ ಹೋದರೆ, ಅವೇ ಸಂಗತಿಗಳೂ ಚಂದೂನ ಸಂಭ್ರಮವನ್ನು ಹೆಚ್ಚಿಸುತ್ತ ಹೋಗುತ್ತವೆ.

ಕಾಕಾ ಕಾಟಕರನ ಮನೆಗೆ ಬರುತ್ತ ದಾರಿಯಲ್ಲಿ ಅವರು ಮುಂಬಯಿಯ ಅತಿ ಹಳೆಯ ಭಾಗದಲ್ಲಿ ಹಾದು ಬರುತ್ತಾರೆ. “ಮುದಿ ಕಟ್ಟಡಗಳು, ದಿವಾಳಿ ಎದ್ದು ಹೋದ ಬಟ್ಟೆಯ ಗಿರಣಿಗಳು ಹಳೆಯ ಕೋಟೆ ಕೊತ್ತಳಗಳಂತೆ ಹಾಳು ಸುರಿಯುತ್ತಿದ್ದವು. ಕಪ್ಪುಗಟ್ಟಿ ತಣ್ಣಗಾದ ಚಿಮಣಿಗಳು ಕೈಯೆತ್ತಿ ಆಕಾಶದೆಡೆ ರೋದಿಸುತ್ತಿರುವಂತೆ ಕಾಣುತ್ತಿದ್ದವು.” ಮುಂಬಯಿಯನ್ನು ಕುರಿತ ಇಂಥ ವಿವರಗಳೆಲ್ಲ ನಕಾರಾತ್ಮಕವಾಗಿಯೇ ಇವೆ. ಅವು ನರಸಿಂಹನ ಆತಂಕವನ್ನು ಹೆಚ್ಚಿಸುತ್ತ ಹೋಗುವುದರ ಜೊತೆಗೆ ಲೇಖಕ/ನಿರೂಪಕ ಮುಂಬಯಿಯ ಬಗ್ಗೆ ತಳೆಯುವ ಧೋರಣೆಯನ್ನೂ, ಸೂಚಿಸುತ್ತವೆ. ಕಾಕಾ ಕಾಟಕರ ಇವರನ್ನು ಹಚ್ಚಿಕೊಳ್ಳುವುದೇ ಇಲ್ಲ. ರಿಮಾಂಡ್ ಹೋಮನ್ನು ಪ್ರತ್ಯಕ್ಷ ನೋಡಿದ ಮೇಲೆ ನರಸಿಂಹನ ಧೈರ್ಯವೇ ಉಡುಗುತ್ತದೆ. ಅದು “ಜಂಗು ಹಿಡಿದ ಜೈಲಿನಂಥ ಕಟ್ಟಡ” “ಬಾಯಾರಿದ ಕಣ್ಣಿನ ಎದುರಿನ ಕಟ್ಟಡ ಸ್ಮಶಾನದಂತೆ ಕಾಣತೊಡಗಿತು… ಆ ಒಂದು ಕ್ಷಣದಲ್ಲಿ ಚಂದುವಿನಿಂದ ತಾನು ಬಲು ದೂರ ಬಂದಂತೆ ಅನ್ನಿಸಿ ಬೆಚ್ಚಿಬಿದ್ದ,” ರಿಮಾಂಡ್ ಹೋಮಿನಲ್ಲಿ ತಂಟೆಕೋರ ಮಕ್ಕಳನ್ನು ಸದೆಬಡಿದು ಮೆದುಮಾಡುತ್ತಾರೆಂದು ಮೊದಲೇ ಯೋಚಿಸಿದ್ದ ನರಸಿಂಹನಿಗೆ ರಿಮಾಂಡ್‌ ಹೋಮಿನ ಈ ದೃಶ್ಯ ಇನ್ನಷ್ಟು ಭಯ ತರಿಸುತ್ತದೆ. ಚಂದುವಿನ ಆಶೆಯಂತೆ ರೈಲು ನೋಡಲು ಹೋದರೆ, “ಪ್ರತೀ ರೈಲು ಯಾವುದೋ ರಣಭೂಮಿಯಿಂದ ಕೈಕಾಲು ರುಂಡ ಮುಂಡಗಳನ್ನು ಹೇರಿಕೊಂಡು ಬಂದಂತೆ ಕಾಣುತ್ತಿತ್ತು. ಸ್ಟೇಶನ್ನಿನಲ್ಲಿ ಕೆಲ ಮುಂಡಗಳನ್ನು ಹಾಕಿ ರೈಲುಗಳು ಮುಂದೆ ಹೋಗುತ್ತಿದ್ದವು.” ರೇಲ್ವೆ ಸೇತುವೆಯ ಮೇಲೆ ಎಚ್ಚರ ತಪ್ಪಿ ಬಿದ್ದ ಮನುಷ್ಯನ ಬಗ್ಗೆ ನರಸಿಂಹ ಕನಿಕರಿಸಿ ಸಹಾಯ ಮಾಡಿದರೆ ಉಳಿದವರು ಇದೊಂದು ಮಾಮೂಲು ಸಂಗತಿ ಎಂಬಂತೆ ನಡೆದುಕೊಳ್ಳುತ್ತಾರೆ. ರಾತ್ರಿ ಪಕ್ಕದ ಖೋಲಿಯಿಂದ ರಾತ್ರಿಯನ್ನೇ ಕಂಗೆಡಿಸುವಂಥ ಪ್ರಾಣಿಗಳ ವಿಚಿತ್ರ ಚೀರಾಟ ನರಸಿಂಹನಿಗೆ ದುಃಸ್ವಪ್ನದ ಅನುಭವ ತರುತ್ತದೆ. ಆದರೆ ಉಳಿದವರನ್ನು ಅದು ಬಾಧಿಸಿದಂತೆ ತೋರುವುದಿಲ್ಲ. ಈ ಎಲ್ಲ ವಿವರಗಳು ನರಸಿಂಹನಿಗೆ ಚಂದುವಿನ ಬಗೆಗಿನ ಕಾಳಜಿ, ಆತಂಕ, ಪ್ರೀತಿಗಳನ್ನು ಹೆಚ್ಚಿಸುತ್ತವೆ. ಮಾನವೀಯ ಸಂಬಂಧಗಳಿಗೆ ಅರ್ಥವೇ ಇಲ್ಲದ ಇಂಥ ವಾತಾವರಣದಲ್ಲಿ ಮಗನನ್ನು ಬಿಟ್ಟುಹೋಗುವುದಕ್ಕೆ ಅವನ ಮನಸ್ಸು ಒಪ್ಪುವುದಿಲ್ಲ.

ಆದರೆ ಚಂದುವಿನ ಅನುಭವವೇ ಬೇರೆ. ಈ ವಿವರಗಳ ಹಿಂದಿನ ಭಯಾನಕತೆ ಅವನನ್ನು ಅಷ್ಟಾಗಿ ತಟ್ಟುವುದಿಲ್ಲ. ಅವನಿಗೆ ಮುಂಬಯಿ ಒಂದು ದೊಡ್ಡ ವಿಸ್ಮಯವಾಗಿ ಕಾಣುತ್ತದೆ. ಪ್ರತಿಯೊಂದು ಸಂಗತಿಯನ್ನು ಮೈಮರೆತು ನೋಡುತ್ತಾನೆ. ಅವನನ್ನು ಮುಂಬಯಿಯಲ್ಲಿ ವಿಶೇಷವಾಗಿ ಆಕರ್ಷಿಸುವುದು ಅಲ್ಲಿಯ ಮಕ್ಕಳ ಚಟುವಟಿಕೆ. ಬೆಳಿಗ್ಗೆ ಪತ್ರಿಕೆ ಹಂಚುವ ಹುಡುಗರ ಓಡಾಟವನ್ನು ಅವನ ತನ್ಮಯವಾಗಿ ನೋಡುತ್ತಾನೆ. “ಬೆಳಗಿನಂತೆ ಚಂದುಗೆ ಮಕ್ಕಳೇ ಕಾಣತೊಡಗಿದರು. ಬೂಟ್‌ಪಾಲಿಷ್ ಮಾಡುವವರು, ಕಾರಿನ ಗಾಜು ಹಳದಿ ವಸ್ತುದಿಂದ ಉಜ್ಜುವವರು, ಇಲ್ಲಿ ಪಾಷಾಣ ಮಾರುವವರು, ಪೋಸ್ಟರ್ ಹಚ್ಚುವವನ ಏಣಿ ಹಿಡಿದವರು, ಕೊತ್ತಂಬರಿಯ ಕಟ್ಟು ಮುಂದೆ ಹಿಡಿಯುವವರು, ಭೆಲಪುರಿ ಆಮ್ಲೆಟ್ ಗಾಡಿಗಳಿಗೆ ಕೂಗಿ ಕರೆಯುವವರು ಎಲ್ಲರೂ ತನ್ನಂಥವರೇ. ವಾಹ್ ಎಂಥ ಧೀರರು… ಚಂದು ತುಂಬ ಅಭಿಮಾನದಿಂದ ಅವರನ್ನು ನೋಡುತ್ತಿದ್ದ. “ಹೋಟಲಿನಲ್ಲಿ ಪ್ಲೇಟು ಎತ್ತುವ ಮಾಣಿಯೊಂದಿಗೆ ಸ್ನೇಹ ಮಾಡುವ ಬಯಕೆ ಅವನದು. ಚಹ ಹಂಚುವ ಪೋಪಟ್‌ನಂತೂ ಅವನ ಮೇಲೆ ಸಮ್ಮೋಹಿನಿಯನ್ನೇ ಹಾಕುತ್ತಾನೆ. ಅವನನ್ನು ತನ್ನ ದೋಸ್ತ್ ಎಂದು ಭಾವಿಸಿಕೊಳ್ಳುತ್ತಾನೆ. ಈ ಹುಡುಗರ ಕೆಲಸದ ಹಿಂದಿನ ನೋವು ಅವನಿಗೆ ಅರ್ಥವಾಗುವುದಿಲ್ಲ.

ರಾತ್ರಿಯಲ್ಲಿಯ ಬೆಕ್ಕುಗಳ ಚೀರಾಟ ಮಾತ್ರ ನರಸಿಂಹನಂತೆ ಚಂದುವನ್ನು ಹೆದರಿಸುತ್ತದೆ. ಓಣಿಗಳಲ್ಲಿ ಸ್ವಚ್ಛಂದವಾಗಿ ಓಡಾಡಿಕೊಂಡಿದ್ದ ಬೆಕ್ಕುಗಳನ್ನು ಹಿಡಿದು ತಂದು ಬಲೆಗಳಲ್ಲಿ ಹಿಡಿದಿಟ್ಟು, ಔಷಧಿಗಳ ಪ್ರಯೋಗಕ್ಕೆ ಒಡ್ಡಲು ಮಾರುವ ಕಥೆ ಊರಿನಲ್ಲಿ ಪುಂಡಾಟ ಮಾಡಿಕೊಂಡಿದ್ದ ಚಂದೂನನ್ನು ರಿಮಾಂಡ್ ಹೋಮಿಗೆ ಸೇರಿಸುವ ಪ್ರಯತ್ನಕ್ಕೆ ಸಂವಾದಿಯೆಂಬಂತೆ ಬಂದಿದೆ. ಅದು ನರಸಿಂಹನಿಗೆ ಒಳಗೆಲ್ಲೋ ಹೊಳೆದಂತಿದ್ದರೆ, ಚಂದೂನಿಗೆ ಈ ತಿಳುವಳಿಕೆ ಇಲ್ಲದಿದ್ದರೂ ಆ ಸಂಗತಿ ಅವನನ್ನು ಹೆದರಿಸುತ್ತದೆ.

ಇಲ್ಲಿಯವರೆಗೆ ಕಥೆ ಆರಂಭದಲ್ಲಿಯೇ ಮುಂಬಯಿಯ ಬಗ್ಗೆ ನರಸಿಂಹನಿಗೆ ಇದ್ದ ಆತಂಕವನ್ನೂ, ಚಂದೂನಲ್ಲಿ ಇದ್ದ ಆಕರ್ಷಣೆಯನ್ನೂ ಹೆಚ್ಚಿಸುತ್ತಲೇ ಹೋಗುವ ಅನೇಕ ಚಿತ್ತವತ್ತಾದ ವಿವರಗಳನ್ನು ಕಟ್ಟಿಕೊಡುವುದರಲ್ಲಿ ಮಗ್ನವಾಗಿದೆ. ಕಥೆಗೆ ಸೂಕ್ಷ್ಮವಾದ ಹೊಸ ತಿರುವು ಸಿಗುವುದು ನರಸಿಂಹನಿಗೆ ತನ್ನ ಮಗನ ಬಗ್ಗೆ ಇದ್ದ ಭಾವನೆಗಳಲ್ಲಿ ಆಗುವ ಬದಲಾವಣೆಯಲ್ಲಿ. “ಫರ್ಮಾ ಗುಡಿಯ ಗದ್ದೆ, ಬೆಟ್ಟ, ಓಣಿ, ಚಂದ್ರಶಾಲೆಗಳಲ್ಲಿ ಹುಯಿಲೆಬ್ಬಿಸುವ ಪುಟ್ಟ ಗಬ್ಬರ್‌ಸಿಂಗ್ ಚಂದೂನ ಪುಂಡಾಟಗಳು ಬಾಲಕೃಷ್ಣನ ಲೀಲೆಗಳಂತೆ ಕಾಣತೊಡಗಿದವು ನರಸಿಂಹನಿಗೆ. “ಮಗನನ್ನು ಅವನ ಪುಂಡಾಟಗಳ ಜೊತೆಗೇ ಪ್ರೀತಿಸುವ ಹೊಸ ಅರಿವು ಅವನಲ್ಲಿ ಮೂಡುತ್ತದೆ. ಮಗನ ಯಾವ ಪುಂಡಾಟಗಳಿಂದ ಅವನಿಗೆ ಫರ್ಮಾ ಗುಡಿಯಲ್ಲಿ ಆತಂಕವಾಗಿತ್ತೋ ಈಗ ಅದೆ ಪುಂಡಾಟಗಳು ಕೃಷ್ಣನ ಬಾಲಲೀಲೆಗಳಂತೆ ಪ್ರಿಯವಾಗುವುದು ಅವನಲ್ಲಿಯ ಹೊಸ ಬೆಳವಣಿಗೆ. ಇದು ಮುಂಬಯಿ ಮೂಡಿಸಿದ ಅರಿವು. ಕೃಷ್ಣನ ಬಾಲಲೀಲೆಗಳ ಹೋಲಿಕೆಯಲ್ಲಿ ಮಗನ ಮೇಲಿನ ಪ್ರೀತಿಗೆ ದೈವಿಕತೆಯ ಸ್ವರ್ಶವೂ ಕೂಡಿದಂತಿದೆ.

ಚಂದೂನ ಮನಃಸ್ಥಿತಿಯಲ್ಲಿ ಮಾತ್ರ ಒಂದಿಷ್ಟು ವಿರುದ್ಧ ದಿಕ್ಕಿನ ಸೆಳೆತ ಉಳಿದಂತಿದೆ. ಮುಂಬಯಿಯಲ್ಲಿ ಅವನ ಪುಂಡಾಟಗಳು ತಣ್ಣಗಾಗುತ್ತವೆ. ಟೇಬಲ್ಲಿನ ಮೇಲೆ ಚಾದರದಲ್ಲಿ ಗಂಟು ಹಾಕಿಟ್ಟಿದ್ದ ವಸ್ತುವನ್ನು ನೋಡಬೇಕೆಂಬ ಅಮಾಯಕ ಕುತೂಹಲವನ್ನು ಬಿಟ್ಟರೆ ಅಲ್ಲಿ ಅವನು ಯಾವ ಕಿಡಿಗೇಡಿತನವನ್ನ ಮಾಡುವುದಿಲ್ಲ. ರೈಲು ಸೇತುವೆಯ ಮೇಲೆ ಮೂರ್ಛೆ ಹೋಗಿದ್ದ ವ್ಯಕ್ತಿಯ ಕೈಯಲ್ಲಿದ್ದ ಹರಕು ಕಾಗದದ ಚಿತ್ರವನ್ನು ಅರ್ಥಮಾಡಿಕೊಳ್ಳಲು ದೊಡ್ಡವರು ಸೋತಾಗ ಅದು ಚಪ್ಪಲಿಯ ಅಳತೆಗಾಗಿ ತೆಗೆದ ಚಿತ್ರವೆಂದು ಚಂದೂನಿಗೆ ಹೊಳೆಯುತ್ತದೆ. ಬಹುಶ: ಮುಂಬಯಿ ಅವನ ಕಲ್ಪನಾ ಶಕ್ತಿಯನ್ನು ವಿಶೇಷವಾಗಿ ಉದ್ದೀಪಿಸಿದಂತಿದೆ. ಕೊನೆಯಲ್ಲಿ ಮಾತ್ರ ಫರ್ಮಾ ಗುಡಿಯ ಕುಂಟ ಮಂಗೇಶ ಮತ್ತು ಮುಂಬಯಿಯ ಚಾ ಪೋಪಟ್-ಎಬ್ಬರೂ ಅವನನ್ನು ಎರಡು ದಿಕ್ಕುಗಳಿಗೆ ಎಳೆಯುತ್ತಿದ್ದಾರೆ.

ಕಥೆಯಲ್ಲಿ ಬರುವ ಹಲವಾರು ವಿವರಗಳು ಎಷ್ಟು ವಾಸ್ತವಿಕವಾಗಿವೆಯೆಂದರೆ, ಅವುಗಳಿಗೆ ಸಾಂಕೇತಿಕ ಅರ್ಥ ಹಚ್ಚಲು ಹಿಂಜರಿಕೆಯಾಗುತ್ತದೆ. ಆದರೂ ಅವುಗಳ ಅರ್ಥವಂತಿಕೆ, ಧ್ವನಿ ಗಮನ ಸೆಳೆಯದೇ ಹೋಗುವುದಿಲ್ಲ. ಜಯಂತರ ಕಥೆಗಳಲ್ಲಿ ಅನುಭವ ತನ್ನ ಅರ್ಥವಂತಿಕೆಯೊಂದಿಗೆ ನಿಜವಾಗುವುದು ಹೀಗೆ.

ಮಕ್ಕಳನ್ನು ನಾಯಕರನ್ನಾಗಿ ಉಳ್ಳ ಕಥೆಗಳು ಸಾಮಾನ್ಯವಾಗಿ ದೀಕ್ಷಾಕಥೆ (story of the initiation) ಗಳಾಗಿರುತ್ತವೆ. ಶಾಂತಿನಾಥ ದೇಸಾಯರ ‘ಚಂದೂ’, ಅನಂತಮೂರ್ತಿಯವರ ‘ಘಟಶ್ರಾದ್ಧ’, ಕೆ. ಸದಾಶಿವರ ‘ರಾಮನ ಸವಾರಿ ಸಂತೆಗೆ ಹೋದದ್ದು’, ಕೃಷ್ಣ ಆಲನಹಳ್ಳಿಯವರ “ಕಾಡು” ಇಂಥ ಕಥೆಗಳು. ಕ್ಲಿಯಾಂತ್ ಬ್ರೂಕ್ಸ್ ಹೇಳುವಂತೆ, ಈ ಕಥೆಗಳು Discovery evilನಲ್ಲಿ, ಮಕ್ಕಳೂ ಮುಗ್ಧತೆಯನ್ನು ಕಳೆದುಕೊಳ್ಳುವುದರಲ್ಲಿ ಮುಕ್ತಾಯವಾಗುತ್ತವೆ. ಇಲ್ಲಿ ಮಗುವಿನ ಪ್ರಜ್ಞೆಯೇ ನಿರೂಪಣೆಯ ಕೇಂದ್ರವಾಗಿರುತ್ತದೆ. ‘ಬಣ್ಣದ ಕಾಲು’ ಇಂಥ ಕಥೆಗಳಿಗಿಂತ ಭಿನ್ನವಾಗಿದೆ. ಒಂದು ರೀತಿಯಲ್ಲಿ ಇದು ದೀಕ್ಷಾಕಥೆಯ ರೀತಿಗೆ ಬೆನ್ನು ತಿರುಗಿಸಿ ನಿಲ್ಲುತ್ತದೆ. ಮೊದಲನೆಯದಾಗಿ, ಇಲ್ಲಿ ನಿರೂಪಣೆಯ ದೃಷ್ಟಿಕೋನ ಮಗುವಿನ ಪ್ರಜ್ಞೆಗೆ ಸೀಮಿತವಾಗಿಲ್ಲ.; ಅವನ ತಂದೆಯ ಪ್ರಜ್ಞೆಯನ್ನೂ ಒಳಗೊಳ್ಳುತ್ತದೆ. ಎರಡನೆಯದಾಗಿ, ಇಲ್ಲಿ ಚಂದೂ ತಿರುಗಿ ಫರ್ಮಾ ಗುಡಿಗೆ ಹೋಗಲು ಒಪ್ಪುತ್ತನಾದರೂ ಅವನು ಕೊನೆಗೂ ಮುಗ್ಧತೆಯನ್ನು ಕಳೆದುಕೊಂಡ ಎನ್ನುವಂತಿಲ್ಲ. ಅನೇಕ ವಿವರಗಳಲ್ಲಿ ಮುಂಬಯಿ ಕಥೆಯಲ್ಲಿ evilನ ಪ್ರತಿರೂಪವಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಚಂದೂನಿಗೆ ಆರಂಭದಲ್ಲಿದ್ದ ಮುಂಬಯಿಯ ಬಗೆಗಿನ ಬೆರಗು ಮೋಹ ಕೊನೆಗೂ ಕಡಿಮೆಯಾಗುವುದಿಲ್ಲ. ಮೂರನೆಯದಾಗಿ, ಈ ಕಥೆಯಲ್ಲಿ ಮುಂಬಯಿಯನ್ನು ಕೆಡುಕಿನ ಸಂಕೇತವಾಗಿ ಅರ್ಥಮಾಡಿಕೊಳ್ಳುವವನು ಚಂದೂ ಅಲ್ಲ. ಅವನ ತಂದೆ ನರಸಿಂಹ. Discovery of evil ಆಗುವುದು ಅವನಲ್ಲಿಯ ಮುಂಬಯಿ ಅವನ ದುಃಸ್ವಪ್ನದಂಥ ಅನುಭವವೇ ಅವನಲ್ಲಿ ಮಗನ ಮೇಲಿನ ಪ್ರೀತಿಗೆ ಹೊಸ ಅರ್ಥ ತರುತ್ತದೆ. ಮಗನ ಪುಂಡಾಟಿಕೆಯ ಬದಲು ಮುಂಬಯಿಯೇ ದೊಡ್ಡ evil ಆಗಿ ಕಾಣುತ್ತದೆ. ಅದರಿಂದ ಮಗನನ್ನು ಪಾರು ಮಾಡಬೇಕೆಂದು ಅವನು ನಿರ್ಧರಿಸುತ್ತಾನೆ.

ಹೀಗೆ ಎರಡೂ ಪಾತ್ರಗಳ ವಿಭಿನ್ನ ಅನುಭವಗಳನ್ನು ಗುರುತಿಸಲು ಸಾಧ್ಯವಾಗಿರುವುದು ಸರಿದಾಡುವ ನಿರೂಪಣೆಯ ದೃಷ್ಟಿಕೋನದಿಂದ.

ಈ ಕಾರಣಗಳಿಂದಾಗಿ ‘ಬಣ್ಣದ ಕಾಲು’ ಒಂದು ವಿಶಿಷ್ಟ ಕಥೆಯಾಗಿದೆ. ಜಯಂತ ಅವರು ಪರಿಚಿತ ಮಾದರಿಗಳನ್ನು ಬಿಟ್ಟು ಹೊಸ ಹಾದಿಗಳನ್ನು ಹುಡುಕುತ್ತಿರುವುದಕ್ಕೆ ಇದೊಂದು ಒಳ್ಳೆಯ ನಿದರ್ಶನವಾಗಿದೆ.

– ೨೦೦೩