ಕನ್ನಡದಲ್ಲಿ ಸಣ್ಣಕತೆ ಆರಂಭದಿಂದಲೂ ಅತ್ಯಂತ ಚೈತನ್ಯಶೀಲವಾಗಿ ಕೆಲಸ ಮಾಡುತ್ತಲೇ ಬಂದಿರುವ ಸಾಹಿತ್ಯಪ್ರಕಾರ. ನವೋದಯದ ಹಿರಿಯರು ಇನ್ನೂ ಶಕ್ತಿಯುತ ಕತೆಗಳನ್ನು ಬರೆಯುತ್ತಿದ್ದಾಗಲೇ ಆ ಕಾಲದ ತರುಣ ಪೀಳಿಗೆಯ ಕತೆಗಾರರು ಅದಕ್ಕೆ ಮಹತ್ವಪೂರ್ಣ ಹೊಸ ಪ್ರಯೋಗಗಳಿಂದ ಆಳ ವಿಸ್ತಾರಗಳನ್ನು ತುಂಬುತ್ತ ಬಂದರು. ಈ ಮಹತ್ವಪೂರ್ಣ. ಈ ಪ್ರವೃತ್ತಿ ಇಂದಿಗೂ ಮುಂದುವರಿದುಕೊಂಡು ಬಂದಿದೆ. ಈ ಕಾಲದ ತರುಣ ಕತೆಗಾರರು ಮತ್ತೆಮತ್ತೆ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಬಂದಿದ್ದಾರೆ. ಈ ಸಂದರ್ಭದಲ್ಲಿ ನಡೆದಿರುವ ಒಂದು ಹೊಸ ಬೆಳವಣಿಗೆಯೆಂದರೆ, ಐವತ್ತು- ಅರವತ್ತು ಅಂಚು ದಾಟಿರುವ ಕೆಲವರು ಹೊಸ ರೀತಿಯ ಕತೆಗಳನ್ನು ಬರೆಯಲು ಆರಂಭಿಸಿರುವುದು, ಇಲ್ಲವೆ ಹಿಂದಿನ ಜಾಡು ಬಿಟ್ಟು ಹೊಸ ಪ್ರಯೋಗಗಳನ್ನು ನಡೆಸಿರುವುದು.

ಹೀಗೆ ಹೇಳುವಾಗ ನನ್ನ ಮನಸ್ಸಿನಲ್ಲಿರುವುದು “ಮನಸುಖರಾಯನ ಮನಸು” ಕಥಾಸಂಕಲನದ ಶ್ರೀನಿವಾಸ ವೈದ್ಯ, “ಹೈಬ್ರಿಡ್ ಕತೆಗಳು” ಸಂಕಲನದ ಆರ್ಯ ಮತ್ತು ಇದೀಗ ತಮ್ಮ ಮೊದಲ ಕಥಾಸಂಕಲನವನ್ನು ಪ್ರಕಟಿಸಿರುವ “ನಾತಲೀಲೆ”ಯ ಎಸ್.ಸುರೇಂದ್ರನಾಥ, ಈ ಮೂವರೂ ಕತೆಗಾರರಲ್ಲಿ ಒಡೆದು ಕಾಣುವ ಕೆಲವು ಸಾಮ್ಯಗಳಿವೆ. ಮೂವರೂ ನವೋದಯ, ನವ್ಯ ಮಾದರಿಯ ಕತೆಗಾರಿಕೆಯನ್ನು ಒಡೆದು ಹೊಸ ಮಾದರಿಗಳ ಹುಡುಕಾಟದಲ್ಲಿದ್ದಾರೆ. ಮೂವರಲ್ಲೂ ಗಟ್ಟಿಯಾದ ಕಥಾನಕಗಳಿವೆ. ಅತಿಶಯವೆನ್ನಬಹುದಾದ ವಿವರಪ್ರಜ್ಞೆ ಇದೆ. ವಿಚಿತ್ರ ಮತ್ತು ವಿಶಿಷ್ಟವೆನ್ನಬಹುದಾದ ಶಕ್ತಿ ರಭಸ ಚೈತನ್ಯಗಳಿವೆ. ಅವರಿಗೇ ವಿಶಿಷ್ಟವಾದ ಹಾಸ್ಯಪ್ರಜ್ಞೆ ಇದೆ. ಕಥೆ ಮತ್ತು ಭಾಷೆಗಳನ್ನು ನಿರ್ವಹಿಸುವುದರಲ್ಲಿ ಸಾಂಪ್ರದಾಯಿಕವಾದ ದಿಟ್ಟತನವಿದೆ. ಒಟ್ಟಿನಲ್ಲಿ ಆಧುನಿಕೋತ್ತರ ಎನ್ನಬಹುದಾದ ಕಥನಶೈಲಿಯೊಂದನ್ನು ರೂಪಿಸಿಕೊಳ್ಳುವ ಪ್ರಯತ್ನಗಳಿವೆ.

ಶ್ರೀನಿವಾಸ ವೈದ್ಯರು ಹಾಸ್ಯ ಪ್ರಜ್ಞೆಯೊಂದಿಗೆ ಭಾವನಾತ್ಮಕತೆಯನ್ನು ಹುರಿಗೊಳಿಸಿಕೊಂಡು ನಗಿಸುತಲೇ ಗಂಟಲು ಕಟ್ಟಿಸುತ್ತಾರೆ ಮತ್ತು ಕೆಲಮಟ್ಟಿಗೆ ನವೋದಯ ಮಾದರಿಗಳ ಕಡೆಗೆ ಒಲೆಯುತ್ತಾರೆ. ಆರ್ಯರು ಪೂರ್ವ-ಪಶ್ಚಿಮಗಳ ತಾಕಲಾಟದಲ್ಲಿ ಹೊಸದೊಂದು ಸಮನ್ವಯದ, ಹೊಂದಾಣಿಕೆಯ ಸಾಧ್ಯತೆಗಳನ್ನು ಗುರುತಿಸುತ್ತಾರೆ ಮತ್ತು ವಸಾಹತ್ತೋತರ ಚಿಂತನೆಗಳ ಕಡೆಗೆ ವಾಲುತ್ತಾರೆ. ಸುರೇಂದ್ರನಾಥರು ನಗಿಸುತ್ತಲೇ ಬದುಕಿನ ಹಾಸ್ಯಾಸ್ವದ ಮತ್ತು ಆ ಮೂಲಕ ಭಯಾನಕ ದುರಂತದ ಆಯಾಮಗಳನ್ನು ಕಾಣಿಸುತ್ತಾರೆ.

ಅದರಲ್ಲೂ ಸುರೇಂದ್ರನಾಥರು ಹಿಡಿದ ಹಾದಿ ತೀರ ಹೊಸದು ಮತ್ತು ಭಿನ್ನ. ಈ ಕತೆಗಳನ್ನು ಓದುತ್ತಿದ್ದಂತೆ ಗೊರ್ಲೂರು ರಾಮಸ್ವಾಮಿ ಅಯ್ಯಂಗಾರರು ಕತೆಗಳ ನೆನಪು ಸ್ವಲ್ಪ ಮಟ್ಟಿಗಾದರೂ ಆದೀತು. ಆದರೆ ಈ ನೆನಪು ಸುರೇಂದ್ರನಾಥರ ಕತೆಗಳ ಭಿನ್ನತೆಯನ್ನೇ ಎತ್ತಿ ತೋರಿಸುತ್ತದೆ. ಗೊರೂರರ ಹಾಸ್ಯದಲ್ಲಿ ಬದುಕಿನ ಬಗೆಗಿನ ಚಿಕ್ಕಪುಟ್ಟ ಐರನಿಗಳು ಪ್ರಕಟವಾದರೆ, ಸುರೇಂದ್ರನಾಥರ ಕತೆಗಳ ಹಾಸ್ಯ ಅನಿರೀಕ್ಷಿತ ದುರಂತದಲ್ಲಿ ಎತ್ತಿ ಒಗೆದಂತೆ ದಿಗ್ಭ್ರಮೆಗೊಳಿಸುತ್ತದೆ. ‘ಗುಪ್ತ ಸಮಾಲೋಚನೆ’, ‘ಮಾತು ಮಾತಿಂದೆ ಆನೆ ಕೊಂದಿಹರು’, ‘ನಾತಲೀಲೆ’, ಯಂಥ ಕತೆಗಳು ಇದಕ್ಕೆ ಉತ್ತಮ ಉದಾಹರಣೆಗಳು. ‘ಗುಪ್ತ ಸಮಾಲೋಚನೆ’ಯಲ್ಲಿ ರೇಡಿಯೋ, ಟಿವಿಗಳಲ್ಲಿ ನಡೆಸುವ ಇಂಥ ಕಾರ್ಯಕ್ರಮಗಳ ಹಾಸ್ಯಾಸ್ವದ ಅವ್ಯವಹಾರಿಕತೆಯನ್ನು ವಿಡಂಬಿಸುತ್ತಲೇ ಅದನ್ನು ಅನುಸರಿಸುವ ಪ್ರಯತ್ನ ಮಾಡಿದ ಅನಸೂಯಗಳಿಗೊದಗಿದ ದುರ್ಗತಿಯನ್ನು ಯಾವ ಭಾವುಕತೆಯೂ ಇಲ್ಲದೆ ತೋರಿಸಿಬಿಡುತ್ತದೆ. ‘ನಾತಲೀಲೆ’ ತನ್ನ ವಿವರಗಳ ಸಮೃದ್ಧಿಯಿಂದಲೇ ಆಕರ್ಷಿಸುವ ಕತೆ. ಹುರಗಡಲಿ ಮಾಸ್ತರರು ಹೂಸು ಬಿಡುವ ಕ್ರಿಯೆಯನ್ನು ವರ್ಣಿಸುವ ವೈವಿಧ್ಯಮಯವಾದ ಉತ್ಪ್ರೇಕ್ಷೆಯ ಮಾತುಗಳೇ ಸುರೇಂದ್ರನಾಥರು ವಿವರಗಳನ್ನು ನೀಡುವ ವಿಶಿಷ್ಟ ರೀತಿಗೊಂದು ನಿದರ್ಶನ. ಒಂದೊಂದು ಸಲ ಹೂಸು ಬಿಟ್ಟಾಗಲೂ ಒಂದೊಂದು ಬೇರೆಯದೇ ವರ್ಣನೆ, ಪ್ರತಿ ಸಲಕ್ಕೂ ಒಂದೊಂದು ಹೊಸ ಹೋಲಿಕೆ. “ಮಕ್ಕಳು ಪೀಪಿಯನ್ನು ಊದುವ ಅಂದದಿಂದೊಮ್ಮೆ, ಭಾರವಾದ ಪೆಟ್ಟಿಗೆಯನ್ನು ನೆಲದ ಮೇಲೆ ಎಳೆಯುವ ಅಂದದಿಂದೊಮ್ಮೆ, ಪಿಟೀಲಿನ ತಾರಸ್ಥಾಯಿಯ ತಂತಿಯನ್ನು ಎಳೆದು ಶ್ರುತಿ ಮಾಡುವಂದದಿ ಒಮ್ಮೆ” ಹೀಗೆ ನಾತಲೀಲೆ ಅಭಿವ್ಯಕ್ತಗೊಳ್ಳುವ ಪರಿಗಳು ವೈವಿಧ್ಯಮಯವಾಗಿವೆ. ಅಷ್ಟೇ ವೈವಿಧ್ಯಮಯ ಈ ನಾತಲೀಲೆ ಸೃಷ್ಟಿಸುವ ಪರಿಣಾಮಗಳು. ಹಾಸ್ಯವೇ ಸ್ಥಾಯಿಯಾದ ಇಂಥ ಬರವಣಿಗೆಯಲ್ಲಿ ಹಿತವಾದ ಉತ್ಪ್ರೇಕ್ಷೆಗೂ ಉಚಿತ ಸ್ಥಾನವಿದೆ. ನಂತರ ಈ ಕತೆಯಲ್ಲಿ ಹಸಿರು ಬಣ್ಣದ ಪುಗ್ಗೆಯೊಂದು ಕಾಣಿಸಿಕೊಂಡ ಮೇಲೆ ಆಗುವ ಬದಲಾವಣೆಗಳೂ ಅಷ್ಟೇ ಪರಿಣಾಮಕಾರಿಯಾಗಿವೆ. ಕತೆ ಇನ್ನೇನು ಫ್ಯಾಂಟಸಿಯನ್ನು ಜಾಡಿಗೆ ಬಿದ್ದಿತೆನ್ನುವಷ್ಟರಲ್ಲಿ ವಾಸ್ತವಕ್ಕೆ ತಿರುಗಿಕೊಂಡು ಕೊನೆಯಲ್ಲಿ ದುರಂತಕ್ಕೆ ಜಾರಿಕೊಳ್ಳುತ್ತದೆ. ‘ಮಾತು ಮಾತಿಂದೆ ಅವನ ಕೊಂದಿಹರು’ ಕತೆ ಕೂಡ ಫ್ಯಾಂಟಸಿಯನ್ನು ಬಳಸಿಕೊಂಡು ದುಃಸ್ವಪ್ನಕ್ಕೆ ಜಾರಿ ದುರಂತಕ್ಕಿಳಿಯುತ್ತದೆ. ‘ಕುರುವಿನ ಗುಲಾಮ’ದಲ್ಲಿ ಪರಿಣಾಮ ಹಾಳತವಾದ ವ್ಯಂಗ್ಯದಲ್ಲಿ ಮುಕ್ತಾಯವಾಗಿ ದುರಂತದಿಂದ ತಪ್ಪಿಸಿಕೊಳ್ಳುತ್ತದೆ. ಉಬ್ಬಿ ಉಬ್ಬಿ ಮಿತಿಮೀರಿ ಹಿಗ್ಗಿದ ಬಲೂನಿಗೆ ಒಮ್ಮೆಲೆ ಸೂಜಿ ಚುಚ್ಚಿದಂತೆ ಇದರ ಪರಿಣಾಮವಿದೆ. ಆದರೆ ದೇಹದ ಗುಪ್ತಾಂಗಗಳ ಬಗೆಗಿರುವ ಸಭ್ಯತೆಯ ಮಿಥ್ಯೆಗಳನ್ನು ಒಡೆದು, ಸೀತಾರಾಮಶಾಸ್ತ್ರಿ-ರಿಂದಮ್ಮರಲ್ಲಿ ಕಾಣಿಸುವ ಹೊಸ ತಿಳುವಳಿಕೆಯಲ್ಲಿ ಕಥೆ ಬೇರೊಂದು ಅರ್ಥಕ್ಕೆ ತೆರೆದುಕೊಳ್ಳುತ್ತದೆ.

ಈ ಎಲ್ಲ ಕತೆಗಳಲ್ಲೂ ಬಳಸಿರುವ ಭಾಷೆಯ ಧಾರಾಳ ನಿಸ್ಸಂಕೋಚವು ಗಮನಾರ್ಹವಾದದ್ದು. ‘ಸೂಳೆ ಮಗನೆ’ ಎನ್ನಲೂ ನಾಚಿಕೊಂಡು ‘ಸೂ…ಮಗನೆ’ ಎಂದು ಬರೆದುಕೊಳ್ಳುತ್ತಿದ್ದ ಕನ್ನಡಕ್ಕೆ ಈಗ ಬಂದಿರುವ ಧೈರ್ಯವನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಇಂಥ ಭಾಷೆಯ ಬಳಕೆ ಕೇವಲ ಶಾಕ್ ಕೊಡುವ ಉದ್ದೇಶವಲ್ಲ ಎಂಬುದು ಮುಖ್ಯವಾದದ್ದು. ಮುಖ್ಯವಾದ ಸಂಗತಿಯೆಂದರೆ, ಕತೆಯ ದ್ರವ್ಯ, ಧಾಟಿ, ಕಾಣ್ಕೆಗಳಿಗೆ ತಕ್ಕದಾದ ಭಾಷೆಯನ್ನು ರೂಪಿಸಿಕೊಂಡಿರುವುದು. ಅದಕ್ಕಾಗಿಯೇ ಈ ಭಾಷೆ ಅಸಭ್ಯವೆನಿಸದೆ ನಗೆ ತರಿಸುತ್ತದೆ.

ಸುರೇಂದ್ರನಾಥರ ಕತೆಗಳಲ್ಲಿ ಕಾಣುವ ಕೇಂದ್ರ ವಿನ್ಯಾಸವೆಂದರೆ, ಬದುಕಿನ ಗಂಭೀರ ಅನುಭವಗಳನ್ನು ಹಾಸ್ಯದ ಮೂಲಕ ಅತಿರೇಕಕ್ಕೆ ಒಯ್ದು ನೋಡುವುದು ಮತ್ತು ಆ ಮೂಲಕ ಈವರೆಗೆ ಕಾಣದ ಹೊಸ ಅರ್ಥಗಳನ್ನು ಹೊಳೆಯಿಸುವುದು. ಈ ಪ್ರಯತ್ನದಲ್ಲಿ ಅವರು ಸಾಕಷ್ಟು ಯಶಸ್ವಿಯಾಗಿದ್ದು. ಈ ಮೂಲಕ ಕನ್ನಡ ಸಣ್ಣಕತೆಗೆ ಹೊಸ ಸಾಧ್ಯತೆಯೊಂದನ್ನು ಜೋಡಿಸಿದ್ದಾರೆ.

ತಮ್ಮ ಮೊದಲ ಸಂಕಲನದಲ್ಲೇ ಹೀಗೆ ಒಂದು ವಿಶಿಷ್ಟ ಆಕೃತಿ-ಆಶಯಗಳನ್ನು ರೂಪಿಸಿಕೊಂಡು ಬಿಡುವ ಕತೆಗಾರ ಎದುರಿಸಬೇಕಾದ ಕೆಲವು ಪ್ರಶ್ನೆಗಳೂ ಇವೆ. ಈ ಕತೆಗಳಲ್ಲಿಯೇ ಆ ಆಕೃತಿಯ ಸಾಧ್ಯತೆಗಳೆಲ್ಲ ಮುಗಿದುಹೋದರೆ ಮುಂದೇನು? ಮುಂದಿನ ಕತೆಗಳೆಲ್ಲ ಇದೇ ಆಕೃತಿಯ ಪುನರಾವರ್ತನೆಗಳಾಗಬಹುದಲ್ಲವೆ? ಹಾಗೆಂದು ಆಕೃತಿಯನ್ನು ಬದಲಿಸಿಕೊಳ್ಳಲು ಪ್ರಯತ್ನಿಸಿದರೆ ಆಶಯ ತಂತ್ರ ಶೈಲಿಗಳೂ ಬದಲಾಗಬೇಕಾಗುತ್ತದಲ್ಲವೆ? ಯಶಸ್ಸು ಒಂದು ಸೂತ್ರವಾಗಿ ಬಿಡದಂತೆ ತಪ್ಪಿಸಿಕೊಳ್ಳುವುದು ಹೇಗೆ? ತಮ್ಮ ಮುಂದಿನ ಕತೆಗಳಲ್ಲಿ ಸುರೇಂದ್ರನಾಥರು ಈ ಪ್ರಶ್ನೆಗಳನ್ನು ಹೇಗೆ ಎದುರಿಸುತ್ತಾರೆಂಬುದನ್ನು ಕುತೂಹಲದಿಂದ ನಿರೀಕ್ಷಿಸುವಷ್ಟು ಒಳ್ಳೆಯ ಕತೆಗಳು ಈ ಸಂಕಲನದಲ್ಲಿವೆ.

– ೨೦೦೬