ಜಿ.ಬಿ. ಜೋಶಿಯವರ ಸಮಗ್ರ ಕೃತಿಗಳ ಎರಡನೆಯ ಸಂಪುಟದಲ್ಲಿ ಅವರ ನಾಟಕಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲ ಬರವಣಿಗೆಯೂ ಸೇರಿಕೊಂಡಿದೆ. ಆದರೆ ಇಲ್ಲಿಯ ರಚನೆಗಳು ವಿಷಯದ ದೃಷ್ಟಿಯಿಂದ ಮತ್ತು ಕಾಲಕ್ರಮದ ವೃಷ್ಟಿಯಿಂದ ಅವರ ನಾಟಕಗಳಿಗಿಂತ ಮೊದಲು ಬಂದಿದ್ದರಿಂದ ಈ ಸಂಪುಟದ ವಿವೇಚನೆಯನ್ನು ಮೊದಲಿಗೆ ತೆಗೆದುಕೊಳ್ಳಲಾಗಿದೆ. “ಜಡಭರತನ ಕನಸುಗಳು”, “ಜೀವಫಲ” ಮತ್ತು “ಧರ್ಮಸೆರೆ” ಈಗಾಗಲೇ ಪ್ರತ್ಯೇಕ ಪುಸ್ತಕಗಳಾಗಿ ಪ್ರಕಟವಾಗಿದ್ದವು. ಕೆಲವು ಕಥೆ, ಹರಟೆ, ಬಿಡಿಲೇಖನಗಳು ಅಲ್ಲಲ್ಲಿ ಚೆದುರಿದಂತೆ ಬೇರೆಬೇರೆ ಕಡೆ ಅಚ್ಚಾಗಿದ್ದವು. ಆದರೆ ಇಲ್ಲಿಯ ಬಹುಪಾಲು ಬರವಣಿಗೆ ಪ್ರಕಟಣೆಯ ಬೆಳಕು ಕಾಣುತ್ತಿರುವುದು ಇದೇ ಮೊದಲು. ಇಂಥ ಬರಹಗಳಲ್ಲಿ ಅಪ್ರಕಟಿತ ಕನಸುಗಳು, ಇಂಗ್ಲಿಷ್ ಕವಿತೆಗಳು, ಕತೆಗಳು, ಹರಟೆಗಳು, ವೈಚಾರಿಕ ಬರಹಗಳು, ವ್ಯಕ್ತಿಚಿತ್ರಗಳು, ಭಾಷಣಗಳು, ದಿನಚರಿಯ ಪುಟಗಳು ಸೇರಿವೆ.

ಇವುಗಳ ಒಂದು ಮುಖ್ಯ ವೈಶಿಷ್ಟ್ಯವೆಂದರೆ, ಕೆಲವು ಬಿಡಿ ಲೇಖನಗಳನ್ನು ಬಿಟ್ಟರೆ, ಉಳಿದ ಬರವಣಿಗೆಯೆಲ್ಲಾ ೧೯೨೬ ರಿಂದ ೧೯೩೩ರ ನಡುವಿನ ಏಳೆಂಟು ವರ್ಷಗಳಲ್ಲಿ ರಚನೆಯಾದದ್ದು. ಈ ಅವಧಿ ಜೋಶಿಯವರ ಸಾಹಿತ್ಯಿಕ ಜೀವನದ ಮೊದಲ ಹಂತಕ್ಕೆ ಸೇರಿದ್ದಾಗಿದೆ. ಇದು ಅವರಿಗೆ ಕನಸುಗಳು ಬೀಳುತ್ತಿದ್ದ ಕಾಲ. ಈ ಕಾಲಾವಧಿಯಲ್ಲಿ ಒಂದಲ್ಲ ಒಂದು ರೀತಿಯಿಂದ ಕನಸುಗಳು ಅವರನ್ನು ಗುಂಗಾಗಿ ಕಾಡಿದಂತೆ ಕಾಣುತ್ತದೆ. ಬರೆದದ್ದೆಲ್ಲ ಕನಸುಗಳ ಗುಂಗಿಗೆ ಒಳಗಾದಂತೆ ಕಾಣುತ್ತದೆ. ಅಂತೆಯೇ ಅವರ ಕನಸುಗಳನ್ನು ಮತ್ತು ಕನಸುಗಾರಿಕೆಯನ್ನು ಈ ಕಾಲದ ಬರವಣಿಗೆಯ ಮೂಲ ದ್ರವ್ಯ ಎಂದು ಪರಿಗಣಿಸುವುದು ಸೂಕ್ತವಾಗಿ ಕಾಣುತ್ತದೆ.

ನಮ್ಮ ನವೋದಯ ಸಾಹಿತ್ಯದಲ್ಲಿ ಅತ್ಯಂತ ವ್ಯಾಪಕವಾಗಿ ಮತ್ತು ಪ್ರಖರವಾಗಿ ಕಾಣಿಸಿಕೊಂಡ ಕಾರಣರೂಪಕಗಳಲ್ಲಿ ‘ಕನಸು’ ಕೂಡ ಒಂದು. ಕನಸುಗಾರಿಕೆ ಆ ಕಾಲದ ವಾತಾವರಣದಲ್ಲಿ ದಟ್ಟವಾಗಿ ಸುಳಿದಾಡುತ್ತಿತ್ತು. ಎಲ್ಲರೂ ಭವ್ಯ ವಿಶ್ವದ, ಭವ್ಯ ಭಾರತದ, ಭವ್ಯ ಕರ್ನಾಟಕದ, ಭವ್ಯ ಸಮಾಜದ ಬಣ್ಣಬಣ್ಣದ ಕನಸು ಕಂಡವರೇ. ಅದರ ಜೊತೆಗೆ ಭವ್ಯ ವ್ಯಕ್ತಿತ್ವದ ಕನಸೂ ಸೇರಿಕೊಂಡಿತ್ತು. ಅದು ಆತ್ಮೋದ್ಧಾರವನ್ನು ಒಳಗೊಂಡು ವಿಶಾಲ ಕನಸು. ಎಚ್ಚರದಲ್ಲಿ ಕಂಡ ಈ ಕನಸುಗಳು ಸುಪ್ತಾವಸ್ಥೆಯಲ್ಲೂ ಸೇರಿಕೊಂಡು ಸಾಹಿತ್ಯದಲ್ಲಿ- ಅದರಲ್ಲೂ ಮುಖ್ಯವಾಗಿ ಕಾವ್ಯದಲ್ಲಿ- ವಿವಿಧ ಬಗೆಯ ಸೃಜನಶೀಲ ಅಭಿವ್ಯಕ್ತಿ ಪಡೆದವು. ಎಚ್ಚರದಲ್ಲಿ ಕಂಡ ಕನಸುಗಳಿಗೆ ತಾರ್ಕಿಕ ಚೌಕಟ್ಟು, ಕಾರ್ಯ- ಕಾರಣ ಸಂಬಂಧಗಳಿರುತ್ತವೆ. ಆದರೆ ಸುಪ್ತಾವಸ್ಥೆಯಲ್ಲಿ ಕಾಣುವ ಕನಸುಗಳು ತಾರ್ಕಿಕತೆಯ ಹಂಗಿಲ್ಲದೆ ಸರ್ರಿಯಲಿಸ್ಟಿಕ್ (Surrealistic) ಮಾದರಿಯ ರೂಪಕಗಳಾಗಿ, ಸಂಕೇತಗಳಾಗಿ ಗೊಂದಲಗೆಡಿಸುತ್ತವೆ. ಅವುಗಳಿಗೆ ಅರ್ಥ ಹಚ್ಚಲು ಯತ್ನಿಸುವುದು ಒಂದು ದೊಡ್ಡ ಸಾಹಸವೇ. ಪಾಶ್ಚಾತ್ಯರಲ್ಲಿ ಫ್ರಾಯಿಡ್ ಮತ್ತು ಯೂಂಗ್ ಕನಸುಗಳಿಗೆ ಅರ್ಥ ಸಾಕಷ್ಟು ಹಚ್ಚಲು ಪ್ರಯತ್ನಿಸಿದ್ದಾರಾದರೂ ಅವುಗಳ ಅಗಮ್ಯತೆ ಇನ್ನೂ ಹಾಗೆಯೇ ಉಳಿದಿದೆ. ಒಂದು ರೀತಿಯಿಂದ ನೋಡಿದರೆ, ಅಗಮ್ಯತೆಯಲ್ಲಿಯೇ ಕನಸುಗಳ ಆಕರ್ಷಣೆ ಇದೆ ಎನ್ನಬಹುದು.

ಬೇಂದ್ರೆಯವರ ನಾಯಕತ್ವದಲ್ಲಿ ಧಾರವಾಡದಲ್ಲಿ ‘ಗೆಳೆಯರ ಗುಂಪು’ ಎಚ್ಚರದಲ್ಲಿ ರೂಪಿಸಿಕೊಂಡು ಒಂದು ಕನಸಾಗಿತ್ತು. ಗುಂಪಿನ ಗೆಳೆಯರೆಲ್ಲ ಒಟ್ಟಾಗಿ ಒಂದು ಕನಸು ಕಂಡರೆ, ವ್ಯಕ್ತಿಗಳಾಗಿ ಒಬ್ಬೊಬ್ಬರಿಗೂ ಅವರವರ ಪ್ರತ್ಯೇಕ ಕನಸುಗಳೂ ಇದ್ದವು; ಆದರೆ ಈ ವೈಯಕ್ತಿಕ ಕನಸುಗಳೆಲ್ಲ ಗುಂಪಿನ ಒಟ್ಟು ಕನಸಿಗೆ ಪೂರಕವಾಗಿದ್ದವು. ಯಾವಾಗ ಈ ವೈಯಕ್ತಿಕ ಕನಸುಗಳು ಮುಖ್ಯವಾಗುತ್ತ ನಡೆದವೋ, ಆವಾಗ ಗುಂಪಿನ ಸಂರಚನೆ ಸಡಿಲವಾಗುತ್ತ ಹೋಯಿತು.

ಗುಂಪಿನ ಅನೇಕ ಗೆಳೆಯರಿಗೆ ‘ಆದರ್ಶ’ ಎನ್ನುವ ಅರ್ಥದ ಕನಸುಗಳೊಂದಿಗೆ ನಮ್ಮ ನಿಮ್ಮೆಲ್ಲರಿಗೆ ಬೀಳುವಂಥ ಕನಸುಗಳೂ ಬೀಳುತ್ತಿದ್ದವು. ನಮ್ಮ ಕನಸುಗಳು ನಿದ್ದೆಯಿಂದ ಎದ್ದಕೂಡಲೇ ತಮ್ಮೆಲ್ಲ ವಿವರಗಳೊಂದಿಗೆ ಅಳಿಸಿಹೋಗುತ್ತವೆ. ಅವುಗಳನ್ನು ಮತ್ತೆ ನೆನಪಿಸಿಕೊಳ್ಳಲು ಆಗುವುದಿಲ್ಲ. ಇಂಥ ಹೆಚ್ಚಿನ ಕನಸುಗಳಲ್ಲಿ ನಾವು ಎಚ್ಚರದಲ್ಲಿ ಉತ್ಕಟವಾಗಿ ಯೋಚಿಸಿಕೊಂಡ ಬಯಕೆ, ಆಶೆ, ಹಂಬಲಗಳೇ ವಿವಿಧ ಮುಖವಾಡ ಧರಿಸಿ ಕಾಣಿಸಿಕೊಳ್ಳುವುದುಂಟು. ಅನೇಕ ಸಲ ನಮ್ಮ ಸುಪ್ತ ಚಿತ್ತದಲ್ಲಿ ಹುದುಗಿಟ್ಟುಕೊಂಡ ಬಯಕೆಗಳೇ ಕನಸುಗಳಲ್ಲಿ ಪ್ರಕಟವಾಗಿ ಬೆಚ್ಚಿಬೀಳಿಸುವುದುಂಟು. ಅವುಗಳಿಗೆ ಸೃಜನಶೀಲತೆಯ ಸಾಧ್ಯತೆಗಳಿರುವುದು ಬಹಳ ಅಪರೂಪ.

ಬೇಂದ್ರೆಯವರಿಗೆ ‘ಕನಸು’ ಅನುಭವದ ಒಂದು ಮುಖ್ಯ ಸೆಲೆಯಾಗಿತ್ತು. ಅವರ ಅನೇಕ ಕವಿತೆಗಳ ವಸ್ತು ಕನಸುಗಳಲ್ಲಿ ಸೂಚಿಸಲ್ಪಡುತ್ತಿದ್ದವಂತೆ. ‘ಏಳು ಕನ್ನಿಕೆಯರು’, ‘ಕನಸಿನ ಕಥೆ’ ಹೀಗೆ ಕನಸಿನಿಂದ ಮೂಡಿಬಂದ ಕವಿತೆಗಳಾಗಿವೆ. ಕೆಲವು ಕವಿತೆಗಳ ಒಂದೆರಡು ಸಾಲುಗಳು ಅವರಿಗೆ ಕನಸಿನಲ್ಲಿ ದತ್ತವಾಗಿ ದೊರೆಯುತ್ತಿದ್ದವಂತೆ. ಆ ಸಾಲುಗಳನ್ನು ಹಿಂಬಾಲಿಸಿಕೊಂಡು ಹೋಗಿ ಸ್ವತಂತ್ರ ಕವಿತೆಗಳನ್ನು ಅವರು ಬರೆದಿದ್ದಾರೆ. ‘ಕಲ್ಪವೃಕ್ಷ ವೃಂದಾವನಂಗಳಲಿ’, ‘ಜೋಗಿ’, ‘ನೃತ್ಯಯಜ್ಞ’ ಮೊದಲಾದ ಅನೇಕ ಕವಿತೆಗಳು ಕನಸಿನ ವಾತಾವರಣದಿಂದ ನಿರ್ಭರವಾಗಿದ್ದು, ಕನಸುಗಳಂತೆಯೇ ದುರೂಹ್ಯವಾಗಿವೆ. ಅಂತೆಯೇ ಅವುಗಳಿಗೆ ಅರ್ಥ ಹಚ್ಚಲು ವಿಮರ್ಶಕರು ಇನ್ನೂ ಹೆಣಗಾಡುತ್ತಿದ್ದಾರೆ.

ಜಡಭರತರ ಸೃಜನಶೀಲತೆಯ ಮುಖ್ಯ ಸೆಲೆಯೂ ಕನಸುಗಳಲ್ಲೇ ಇದೆ. ೧೯೨೬ ರಿಂದ ೩೩ರ ನಡುವಿನ ಏಳೆಂಟು ವರ್ಷಗಳ ಅವಧಿಯಲ್ಲಿ ಅವರಿಗೆ ಅನೇಕ ಕನಸುಗಳು ಬಿದ್ದಿವೆ. ನಮಗೆ ಬೀಳುವ ಕನಸುಗಳು ಮರೆತುಹೋಗುವಂಥವಾದರೆ ಭಡಭರತರ ಕನಸುಗಳು ಹಾಗಿಲ್ಲ. ಅವನ್ನೆಲ್ಲ ವಿವರವಾಗಿ ನೆನಪಿಸಿಕೊಂಡು ಅವರು ಬರೆದಿಟ್ಟಿದ್ದಾರೆ. ಈ ಕನಸುಗಳನ್ನು ಬೇರೆ ಯಾರಿಗೂ ಹೇಳಬಾರದೆಂದು ಒಂದು ಕರಾರು ಇತ್ತಂತೆ. ಆ ಕರಾರನ್ನು ಮುರಿದು ಅವರು ಬೇಂದ್ರೆ, ಮುಗಳಿ ಮೊದಲಾದವರಿಗೆ ತೋರಿಸಿದಂತೆಯೂ ಕಾಣುತ್ತದೆ. ಅದರಿಂದಾಗಿಯೋ ಏನೋ, ೧೯೩೩ರ ನಂತರ ಅವರಿಗೆ ಈ ಬಗೆಯ ಕನಸುಗಳು ಬೀಳುವುದು ನಿಂತಂತೆ ಕಾಣುತ್ತದೆ. ಆದರೆ ಈ ನಡುವಿನ ಅವಧಿಯಲ್ಲಿ ಅವರು ಸಂಪೂರ್ಣವಾಗಿ ಕನಸುಗಳು ಗುಂಗಿನಲ್ಲಿಯೇ ಇದ್ದರೆಂಬುದು ಮಾತ್ರ ನಿಜ.

ಜಡಭರತರು ಬರೆದಿಟ್ಟಿರುವ ಕನಸುಗಳು ಒಂದು ಕೇಂದ್ರವಸ್ತುವನ್ನು ಆಧಾರವಾಗಿ ಇಟ್ಟುಕೊಂಡು ಕ್ರಮವಾಗಿ, ಧಾರಾವಾಹಿಯಾಗಿ ಬಿದ್ದುವೇನೂ ಅಲ್ಲ. ಹಾಗೆ ಬಿದ್ದ ಕನಸುಗಳಲ್ಲಿ ಒಂದು ಕೇಂದ್ರವನ್ನು ತಾವೇ ಗುರುತಿಸಿಕೊಂಡು, ಅದಕ್ಕೆ ಸಂಬಂಧವಿಲ್ಲದಂತೆ ಕಂಡವುಗಳನ್ನು ಕೈಬಿಟ್ಟು, ಸಂಬಂಧವಿರುವಂತೆ ಕಂಡವುಗಳನ್ನು ಹಿಂದೆ-ಮುಂದೆ ಮಾಡಿ ಹೊಂದಿಸಿದ್ದಾರೆ. ಅಷ್ಟಾಗಿಯೂ, ಕೆಲವು ಕನಸುಗಳನ್ನು ಮತ್ತು ಕೆಲವು ವಿವರಗಳನ್ನು ತರ್ಕಬದ್ಧವಾಗಿ ಕೇಂದ್ರವಸ್ತುವಿಗೆ ಸಂಬಂಧಿಸಿ ವಿವರಿಸಿ ಆಗುವುದಿಲ್ಲ. ಕನಸುಗಳ ಸ್ವರೂಪವೇ ಅತಾರ್ಕಿಕವಾಗಿರುವುದರಿಂದ ಅದು ಸಹಜವೇ ಆಗಿದೆ. ಎಂದರೆ, ತಾರ್ಕಾತೀತವಾದ ಕನಸುಗಳನ್ನು ಒಂದು ತರ್ಕಬದ್ಧವಾದ ಸಂಕಥನವಾಗಿ ಸಾದರಪಡಿಸುವ ಕೆಲಸ ಇಲ್ಲಿ ನಡೆದಿದೆ. ಅದಕ್ಕಾಗಿಯೇ, ಒಂದು ಕನಸಿಗೂ ಇನ್ನೊಂದಕ್ಕೂ ಸಂಬಂಧವನ್ನು ಜೋಡಿಸಲು ಅವರು ಅಲ್ಲಲ್ಲಿ ಕೆಲವು ಭಾಗಗಳನ್ನು ಬರೆದು ಸೇರಿಸಿದಂತೆ ಕಾಣುತ್ತದೆ. ‘ಮುದುಕಪ್ಪರಾಜ’, ‘ಬಿಡುಗಡೆ’, ‘ಛಾಯಾಪುರುಷ’ ಮೊದಲಾದ ಕನಸುಗಳ ಕೊನೆಯ ಪ್ಯಾರಾಗಳಲ್ಲಿ ಇಂಥ ಉದಾಹರಣೆಗಳನ್ನು ನೋಡಬಹುದು. “ಜಿ.ಬಿ. ಜೋಶಿಕ್ಯವರು ಕಟ್ಟಕಡೆಗೊಮ್ಮೆ ಜಡಭರತರ ಕನಸುಗಳ ಒಂದು ಕಟ್ಟನ್ನು ಅಚ್ಚುಕಟ್ಟಾದ ಒಂದು ಕಥಾರೂಪಕ್ಕೆ ಇಳಿಸಿದರು” ಎಂದು ಈ ಕನಸುಗಳಿಗೆ ಮುನ್ನುಡಿ ಬರೆದಿರುವ ಬೇಂದ್ರೆಯವರು ಹೇಳಿದ ಮಾತನ್ನು (೧೯೫೯ : ೧೫) ಇಲ್ಲಿ ನೆನೆಯಬಹುದು. ಇವುಗಳ ನಿಜವಾದ ದ್ರವ್ಯ ಕನಸಿನದು, ಪಾಕ ಸಾಹಿತ್ಯದ್ದು” ಎಂದು ಬೇಂದ್ರೆಯವರು ಹೇಳಿರುವ ಇನ್ನೊಂದು ಮಾತು (೧೯೪೯ :೧೫) ಕೂಡ ಮಹತ್ವದ್ದಾಗಿದೆ. ಎಂದರೆ, ಈ ಕನಸುಗಳು ಒಮ್ಮೆಲೆ ಕನಸು ಮತ್ತು ಸಾಹಿತ್ಯ ಈ ಎರಡು ಶಿಸ್ತುಗಳಿಗೆ ಹೊಂದಿಕೊಳ್ಳಲು ಪ್ರಯತ್ನಿಸಿವೆ. ಅದರಿಂದಾಗಿಯೇ ಏನೋ, ಆ ಎರಡೂ ಶಿಸ್ತುಗಳ ವಿಶಿಷ್ಟ ನಿಯಮಗಳಿಗೆ ಅವು ಸಂಪೂರ್ಣವಾಗಿ ಹೊಂದಿಕೊಂಡಂತೆ ಅನಿಸುವುದಿಲ್ಲ.

ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಷಯವೆಂದರೆ, ಕನಸುಗಳು ಭಾಷೆಯ ಹಂಗಿಲ್ಲದ ದೃಶ್ಯರೂಪಕಗಳು. ಅಂಥ ಅನೇಕ ದೃಶ್ಯರೂಪಕಗಳಿಗೆ ಭಾಷೆಯಲ್ಲಿ ಹೆಸರೇ ಇರುವುದಿಲ್ಲ. ಅವುಗಳನ್ನು ಬರೆದಿಡುವಾಗ ಅನಿವಾರ್ಯವಾಗಿ ದೃಶ್ಯ ವಸ್ತುಗಳಿಗೆ ಹೆಸರು ಕೊಡಬೇಕಾಗುತ್ತದೆ. ಮತ್ತು ಭಾಷೆಯಲ್ಲಿ ಕ್ರಮವಾಗಿ ವಿವರಿಸಬೇಕಾಗುತ್ತದೆ. ಉದಾಹರಣೆಗಾಗಿ, “ಜಡಭರತನ ಕನಸುಗಳು” ಗ್ರಂಥಕ್ಕೆ ಕೊಟ್ಟಿರುವ ‘ದಿವ್ಯಾಗ್ನಿಯನ್ನು ತರಹೊರಟ ಜೀವದ ಆತ್ಮ ನಿವೇದನೆ’ ಎಂಬ ಉಪಶೀರ್ಷಿಕೆಯಲ್ಲಿಯ ‘ದಿವ್ಯಾಗ್ನಿ’ಗೆ ಏನು ಹೆಸರಿತೋ ಏನೋ! ೧೯೩೩ರಲ್ಲಿ ಪ್ರಕಟವಾದ ರಂ.ಶ್ರೀ. ಮುಗಳಿಯವರ “ಪಾವನ ಪಾವಕ” (೧೯೩೭) ಎಂಬ ಸ್ವಪ್ನ ನಾಟಕಗಳ ಸಂಕಲನದಲ್ಲಿ ಅನುಬಂಧವಾಗಿ ಸೇರಿರುವ ಜಡಭರತರ ಮೊದಲ ಕನಸಿನಲ್ಲಿ ‘ದಿವ್ಯಾಗ್ನಿ’ ಎಂಬ ಶಬ್ದವೇ ಇಲ್ಲ. ಬರಿ ‘ಅಗ್ನಿ’ ಎಂದಿದೆ. ಇದೇ ಕನಸಿನ ಇನ್ನೊಂದು ಅವತಾರದಲ್ಲಿ ಅದು ‘ಪಾವನ ಪಾವಕ’ವಾಗಿದೆ. ಲಭ್ಯವಿರುವ ಒಂದು ಇಂಗ್ಲೀಷ್ ಆವೃತ್ತಿಯಲ್ಲಿ ಅದನ್ನು ‘Sacred fire’ ಎಂದು ಕರೆಯಲಾಗಿದೆ “ಜಡಭರತನ ಕನಸುಗಳ” ದಿವ್ಯ ಸಂದೇಶ’ ಎಂಬ ಕನಸಿನಲ್ಲಿ ಮಾತ್ರ ಅದಕ್ಕೆ ‘ದಿವ್ಯಾಗ್ನಿ’ ಎಂಬ ಪಟ್ಟ ಸಿಕ್ಕಿದೆ. ಮೂಲದಲ್ಲಿ ಈ ಎಲ್ಲ ಕನಸುಗಳು ಒಂದೇ ಆಗಿವೆ ಎಂಬುದಕ್ಕೆ ಅವುಗಳು ಬಿದ್ದ ದಿನಾಂಕ ಒಂದೇ ಆಗಿರುವುದೇ (೭-೨-೧೯೨೯) ಮುಖ್ಯ ಪುರಾವೆಯಾಗಿದೆ. ಹೆಚ್ಚಿನ ಕನಸುಗಳು ಮೂಲದಲ್ಲಿ ಕನ್ನಡದಲ್ಲಿಯೇ ಇದ್ದರೂ ಮರುಬರವಣಿಗೆಗೆ ಒಳಗಾಗಿ ಅನೇಕ ಸಲ ರೂಪ ಬದಲಿಸಿಕೊಂಡಿವೆ. ‘ಕನಸು’ ಎಂಬ ತಲೆಬರಹದ ಒಂದು ಕನಸು ಕನ್ನಡದಲ್ಲು ಆರಂಭವಾಗಿ, ಇಂಗ್ಲೀಷಿಗೆ ತಿರುಗಿಕೊಂಡು, ನಂತರ ‘ದೊಡ್ಡವರ ತೂಗುಕಲ್ಲು’ ಎಂದು ಕನ್ನಡಕ್ಕೆ ಅನುವಾದವಾಗಿದೆ. “The Cult of Ahimsa” ಮತ್ತು ‘The Sacred Fire’ ಎಂಬ ಎರಡು ಕನಸುಗಳು ಮೂಲದಲ್ಲಿ ಇಂಗ್ಲೀಷಿನಲ್ಲೋ ಎಂಬ ಸಂದೇಹ ಕೂಡ ಏಳುತ್ತದೆ. ಈ ಕನಸುಗಳು ಈಗ “ಜಡಭರತನ ಕನಸುಗಳು” ಕೃತಿಯಲ್ಲಿ ಕಾಣಿಸಿಕೊಂಡಿರುವ ಅನುಕ್ರಮದಲ್ಲಿ ಬಿದ್ದುವೂ ಅಲ್ಲ. ಬಿದ್ದಂತೆ ಯಥಾವತ್ತಾಗಿ ಮೂಡಿದವೂಗಳೂ ಅಲ್ಲ. (ಹಾಗೆ ಮೂಡಿಸುವುದು ಸಾಧ್ಯವೂ ಅಲ್ಲ) ಜಡಭರತರು ತಮಗೆ ಬಿದ್ದ ಕನಸುಗಳನ್ನು ಆಧಾರವಾಗಿಟ್ಟುಕೊಂಡು, ಒಂದು ಕೇಂದ್ರವಸ್ತುವನ್ನು ಊಹಿಸಿ ಗಮನದಲ್ಲಿರಿಸಿಕೊಂಡು, ಅವುಗಳನ್ನು ತಿದ್ದಿ-ತೀಡಿ ಮತ್ತೆಮತ್ತೆ ಬರೆದಿದ್ದಾರೆ. ಕ್ರಮವನ್ನು ಹಿಂದೆ-ಮುಂದೆ ಮಾಡಿ ಹೊಂದಿಸಿದ್ದಾರೆ; ಪುನರಾವೃತ್ತವಾದ ವಿವರಗಳನ್ನು ಕೈಬಿಟ್ಟಿದ್ದಾರೆ; ಸಂಬಂಧವಿಲ್ಲದುವನ್ನು ತೆಗೆದುಹಾಕಿದ್ದಾರೆ; ಕೆಲವನ್ನು ಬದಲಾಯಿಸಿದ್ದಾರೆ; ಕೆಲವನ್ನು ಅನುವಾದಿಸಿದ್ದಾರೆ; ಒಂದು ಕನಸಿಗೂ ಇನ್ನೊಂದಕ್ಕೂ ಸಂಬಂಧ ಕಲ್ಪಿಸುವ ಸಲುವಾಗಿ ಕೆಲವು ಭಾಗಗಳನ್ನು ಹೊಸದಾಗಿ ಬರೆದು ಸೇರಿಸಿದ್ದಾರೆ. ಒಟ್ಟಿನಲ್ಲಿ ಬಿಡಿಬಿಡಿಯಾಗಿ ಬಿದ್ದ ಕನಸುಗಳನ್ನು ಒಂದು ಸೂತ್ರದಲ್ಲಿ ಪೋಣಿಸಿ ಸುಸಂಬದ್ಧವಾದ ಸಾಹಿತ್ಯಕೃತಿಯೊಂದನ್ನು ರೂಪಿಸುವ ಮತ್ತು ಅವುಗಳಿಗೆ ಸುಸಂಬದ್ಧ ಅರ್ಥ ಕಲ್ಪಿಸುವ ಉದ್ದೇಶಪೂರ್ವಕವಾದ ಪ್ರಯತ್ನ ಇಲ್ಲಿ ನಡೆದಿದೆ.

‘ಕನಸು’ ಎಂಬ ಶಬ್ದಕ್ಕೆ ‘ಆದರ್ಶ’, ‘ಕಾಣ್ಕೆ’, ‘ದರ್ಶನ’, ‘ಮಹಾತ್ವಾಕಾಂಕ್ಷೆ’, ‘Vision’, ಮುಂತಾದ ಅರ್ಥಗಳೂ ಇವೆಯಷ್ಟೆ? ನಮ್ಮ ನವೋದಯದ ಕಾಲವೇ ಹಲವು ಬಗೆಯ ಕನಸುಗಳ ಕಾಲವಾಗಿತ್ತು. ಜಡಭರತರ ಕನಸುಗಳು ಆ ಕಾಲದ ಮುಖ್ಯ ಆಶಯವೊಂದನ್ನು ಅಭಿವ್ಯಕ್ತಿಸುತ್ತವೆ. “ಮಾನವ ಕುಲದ ಕಲ್ಯಾಣಕ್ಕಾಗಿ”, “ಜೀವರಸದಲ್ಲಿಯ ಪಾಪದ ಕಸರನ್ನು ಸುಡುವುದಕ್ಕಾಗಿ”, “ಜೀವ-ಜೀವಕ್ಕೂ ಬೆಸುಗೆ ಹಾಕುವುದಕ್ಕಾಗಿ” ದಿವ್ಯಾಗ್ನಿಯನ್ನು ಸಂಪಾದಿಸಿ ತರುವುದು ಅಂಥ ಒಂದು ಆಶಯವಾಗಿದೆ. ಅದನ್ನು ಸಾಧಿಸಲು ಯಾವ ತ್ಯಾಗಕ್ಕೂ ಸಿದ್ಧವಾಗುವ, ಯಾವ ಕಷ್ಟವನ್ನೂ ಎದುರಿಸಲು ಹಿಂಜರಿಯದ ಧೀರೋದಾತ್ತತೆಯೂ ಆ ಆಶಯದ ಭಾಗವಾಗಿದೆ. ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟವೂ ಒಂದು ದಿವ್ಯಾಗ್ನಿಯ ಶೋಧವೇ ಆಗಿತ್ತು. ಹೀಗೆ ಈ ಕನಸುಗಳಿಗೆ ನವೋದಯದ ಆಶೋತ್ತರಗಳನ್ನು ಧ್ವನಿಸುವ ಮಹತ್ವಾಕಾಂಕ್ಷೆಯೂ ಇದೆ. ಈ ಕಾರ‍ಣಕ್ಕಾಗಿ ಇವು ನವೋದಯ ಸೃಷ್ಟಿಸಿದ ಕನಸುಗಳಾಗಿವೆ.

ಮಾನವ ಕುಲದ ಕಲ್ಯಾಣಕ್ಕಾಗಿ ಅಮೂಲ್ಯವಾದ ವಸ್ತುವೊಂದನ್ನು ಹುಡುಕಿಕೊಂಡು ಹೋಗುವ ಆಶಯದ ಕತೆಗಳದೊಂದು ಪರಂಪರೆಯೇ ಜಾಗತಿಕ ಸಾಹಿತ್ಯದಲ್ಲಿದೆ. ಬೇಂದ್ರೆಯವರು “ಜಡಭರತನ ಕನಸುಗಳಿ”ಗೆ ಬರೆದ ಮುನ್ನುಡಿಯಲ್ಲಿ ಸೂಚಿಸಿರುವ, ಪ್ರಜಾಪತಿಯು ಪ್ರತಿ ಜೀವಸ್ಥಂಡಿಲದಲ್ಲಿ ಜೀವದ ಅಗ್ನಿಯನ್ನು ಸ್ಥಾಪಿಸಿ ಯಜ್ಞವನ್ನು ಪ್ರಾರಂಭಿಸಿದ ಕತೆ ಇಂಥದೊಂದು (೧೯೪೯ :೧೬). ಕುರ್ತಕೋಟಿಯವರು ಪ್ರಸ್ತಾಪಿಸಿರುವ ಛಾಂದೋಗ್ಯೋಪನಿಷತ್ತಿನ ಇಂದ್ರ-ವಿರೋಚನರ ಕಥೆ ಇನ್ನೊಂದು (೧೯೯೨: ೧೧೫). ಮಾನವ ಕುಲದ ಕಲ್ಯಾಣಕ್ಕಾಗಿ ನಿಷಿದ್ಧವಾದ ಬೆಂಕಿಯನ್ನು ತಂದುಕೊಟ್ಟು ದೇವತೆಗಳ ಶಾಪಕ್ಕೆ ಈಡಾಗುವ ಗ್ರೀಕ್ ಪುರಾಣಗಳಲ್ಲಿಯ ಪ್ರೊಮಿಥಿಯಸ್‌ನ ಕಥೆ ಮತ್ತೊಂದು.

ಜಾಗತಿಕ ಜಾನಪದ ಕಥೆಗಳಲ್ಲಿ ‘ಶೋಧ’ (Quest)ದ ಆಶಯವನ್ನುಳ್ಳ ಕಥೆಗಳ ಒಂದು ಪ್ರಕಾರವೇ ಇದೆ. ಅವುಗಳಲ್ಲಿ ಜೆಸಿ ವೆಸ್ಟನ್ ಸಂಗ್ರಹಿಸಿ ವಿಶ್ಲೇಷಿಸಿರುವ ಹೋಲಿ ಗ್ರೇಲ್‌ನ ಕಥೆ ಪ್ರಸಿದ್ಧವಾದುದು. ಜಾನಪದ ಕಥೆಗಳಲ್ಲಿಯೂ, ನಿಗೂಢವಾದ ಸ್ಥಳದಲ್ಲಿ ಅಡಗಿಸಿಟ್ಟ ರಾಕ್ಷಸನ ಪ್ರಾಣವನ್ನು ಅನೇಕ ಅಪಾಯಕಾರಿ ಸಾಹಸಗಳನ್ನೆಸಗಿ ಹುದುಕಿ, ಕೊಂದು, ರಾಜಕುಮಾರಿಯ ಸೆರೆ ಬಿಡಿಸಿ ತರುವ ರಾಜಕುಮಾರರ ಪ್ರಸಂಗಗಳಿವೆ. ಇಂಥ ಶೋಧದ ಕಥೆಗಳಲ್ಲಿ (Qyest myths) ಕೆಲವು ಆಶಯಗಳು (Motifs) ಮತ್ತೆಮತ್ತೆ ಕಾಣಿಸಿಕೊಳ್ಳುವುದುಂಟು. ಅಂಥವುಗಳಲ್ಲಿ ರಾಜಕುಮಾರನನ್ನು ಅವನ ಗುರಿಯಿಂದ ದಾರಿತಪ್ಪಿಸುವವರು (Detractors), ರಹಸ್ಯವನ್ನು ಒಡೆದು ಸಹಾಯ ಮಾಡುವ ಮುದುಕ-ಮುದುಕಿಯರು (Wise old men and women), ರಹಸ್ಯವನ್ನು ಸೂಚಿಸಿಯೂ ಸೂಚಿಸಿದಂತೆ ಒಗಟುಗಳನ್ನು ಹೇಳುವವರು. ರಹಸ್ಯ ಸಿಕ್ಕರೂ ಅರಿವಿಗೆ ಬಾರದಿರುವುದು, ನಿಗೂಢ ಪ್ರಶ್ನೆಗಳಿಗೆ ಉತ್ತರ ಹೇಳಬೇಕಾದುದು, ವೇಷಾಂತರ, ಪರೀಕ್ಷೆಗಳು, ದಿಗಿಲುಗೊಳಿಸುವ ಅಡೆತಡೆಗಳು ಸಾಮಾನ್ಯವಾದವು. ಇಂಥ ಕಥೆಗಳ ಹಿನ್ನೆಲೆಯಲ್ಲಿಟ್ಟು ನೋಡಿದಾಗ ಜಡಭರತರ ಕನಸುಗಳಿಗೂ ಅವುಗಳಿಗೂ ಅನೇಕ ಸಾಮ್ಯಗಳಿರುವುದು ಸ್ಪಷ್ಟವಾಗುತ್ತದೆ. ಶಿಷ್ಟ ಸಾಹಿತ್ಯದ ಪರಂಪರೆಯಲ್ಲೂ ಇಂಥ ಕಥಾನಕಗಳಿವೆ. ಬೇಂದ್ರೆಯವರು ಬನ್ಯನ್ನನ “ಪಿಲ್ಗ್ರಿಮ್ಸ್‌ಪ್ರೊಗ್ರೆಸ್”ನಲ್ಲಿ (೧೯೪೯:೧೬), ಆಮೂರರು ಡಾಂಟೆಯ “ಡಿವೈನ್ ಕಾಮಿಡಿ” (೨೦೦೪:೧೫೩)ಯಲ್ಲಿ, ಕುರ್ತಕೋಟಿಯವರು ಛಾಂದೋಗ್ಯೋಪನಿಷತ್ತಿನ ಪ್ರಜಾಪತಿ-ಇಂದ್ರ-ವಿರೋಚನರ ಪ್ರಸಂಗದಲ್ಲಿ (೧೯೯೨:೧೧೫) ಇಂಥ ಕೆಲವು ಸಮಾಂತರ ಉದಾಹರಣೆಗಳನ್ನು ಗುರುತಿಸಿದ್ದಾರೆ.

ಆದರೆ “ಜಡಭರತನ ಕನಸುಗಳ” ದಿವ್ಯಾಗ್ನಿಶೋಧದ ಅಂತಿಮ ಪರಿಣಾಮದ ವಿಷಯದಲ್ಲಿ ಒಂದು ವ್ಯತ್ಯಾಸವಿದೆ. ಈ ಕನಸುಗಳ ನಾಯಕನಿಗೆ ಕೊನೆಗೆ ದಿವ್ಯಾಗ್ನಿ ಏಕೆ ಬೇಕೆಂಬುದರ ಕಾರಣವೇ ಮರೆತುಹೋಗುತ್ತದೆ. ಕೊನೆಗೂ ಅವನಿಗೆ ದಿವ್ಯಾಗ್ನಿ ಕಾಣುವುದು ಅವನ ಎದೆಯಲ್ಲಿ, ಮೊದಲ ಕನಸಿನಲ್ಲಿ (‘ದಿವ್ಯ ಸಂದೇಶ’) ಕೇಳುವ ‘ಮಾನವಕುಲ ಕಲ್ಯಾಣಕ್ಕಾಗಿ ದಿವ್ಯಾಗ್ನಿಯನ್ನು ಹುಡುಕಿ ತಾ’ ಎಂಬ ಸಂದೇಶದ ನಿಜವಾದ ಉದ್ದೇಶ ಸಫಲವಾಗುವುದಿಲ್ಲ. ಆ ದಿವ್ಯಾಗ್ನಿಯಿಂದ ನಾಯಕನ ಆತ್ಮಕಲ್ಯಾಣವಾದರೂ ಸಾಧಿಸಿತೇ- ಎಂದರೆ ಅದಕ್ಕೂ ಆಧಾರವಿಲ್ಲ. ಅದರ ಬೆಳಕಿನಲ್ಲಿ ಅವನು ಕಂಡುಕೊಂಡ ದಿವ್ಯದರ್ಶನವಾದರೂ ಏನೂ ಎಂದು ಕೇಳಿದರೆ ಅದಕ್ಕೆ ಉತ್ತರವಿಲ್ಲ. ದಿವ್ಯಾಗ್ನಿಯೊಂದಿಗೆ ಅವನು ತಿರುಗಿ ತನ್ನ ರಾಜ್ಯಕ್ಕೆ ಬಂದಾಗ ಯಾರೂ ಅವನನ್ನು ಗುರುತಿಸುವುದಿಲ್ಲ. ಅಲ್ಲಿಂದ ಹೊರಟುಬಂದ ಅವನಿಗೆ ಆಮೇಲೂ ಕೆಲವು ಕನಸುಗಳು ಬಿದ್ದಿವೆ. ಆ ಕನಸಿನ ಕಥಾನಕಕ್ಕೆ ಹೇಗೆ ಮುಕ್ತಾಯ= ಎಂಬುದು ತಿಳಿಯದೆ, ಕೊನೆಯಲ್ಲಿ, ಕನಸಿಗೆ ಹೊರತಾದ ಒಂದು ಪ್ಯಾರಾದಲ್ಲಿ ಅವನ ಸಾವನ್ನು ಸೂಚಿಸಿ ಮುಗಿಸಲಾಗಿದೆ. ದಿವ್ಯಾಗ್ನಿಯನ್ನು ತಂದ ಉದ್ದೇಶ ಸಫಲವಾಗಲಿಲ್ಲ ಎಂಬ ಅರಿವು ಜಡಭರತರಿಗೂ ಇತ್ತು. ಅದನ್ನು ಅವರು ‘ಚಿತ್ರಕ್ಕೆ ಚೌಕಟ್ಟಿ’ನಲ್ಲಿ ಹೇಳಿಯೂ ಇದ್ದಾರೆ (೧೯೪೯:೧೦)’.

ಒಟ್ಟಿನಲ್ಲಿ ಇಲ್ಲಿಯ ಕನಸಿನ ದ್ರವ್ಯಕ್ಕೆ ಎಚ್ಚರದ ಕಲ್ಪಕತೆಯೂ ಸಾಕಷ್ಟು ಪ್ರಮಾಣದಲ್ಲಿ ಕೂಡಿಕೊಂಡಿದೆ. ಹೀಗಾಗಿ ಇದು ಕನಸು-ಎಚ್ಚರಗಳು ಕೂಡಿಕೊಂಡು ರಚಿಸಿದ ಕೃತಿಯಾಗಿದೆ. ಕಬ್ಬಿಣವನ್ನು ಹದ ಮಾಡಿ ತಯಾರಿಸಿದ ಉಕ್ಕಿನಂತೆ ಕನಸುಗಳು ಇಲ್ಲಿ ಹೊಸ ರೂಪ-ಗುಣ ಪಡೆದುಕೊಂಡಿವೆ. ಅದೇನೇ ಇದ್ದರೂ, ಇಂಥ ಅಪರೂಪದ ಕನಸುಗಳನ್ನು ಕಂಡ ಮತ್ತು ಅವುಗಳನ್ನು ನೆನಪಿಟ್ಟು ಬರೆದ ಮನಸ್ಸು-ವ್ಯಕ್ತಿತ್ವಗಳು ಸಣ್ಣವಲ್ಲ ಎಂಬುದಂತೂ ನಿಜ. ಕನ್ನಡದಲ್ಲಿ ಇಂಥದು ಇದೊಂದೇ ಕೃತಿ.

ಜಡಭರತರಿಗೆ ಕೊನೆಯ ಕನಸು ಬಿದ್ದುದ್ದು ೧೯೩೩ರಲ್ಲಿ. ಅಲ್ಲಿಂದ ಅವು ಹಲವು ಬಗೆಯ ಸಂಸ್ಕಾರ ಪಡೆದು “ಜಡಭರತನ ಕನಸುಗಳು” ಪ್ರಕಟವಾಗಲು ೧೬ವರ್ಷಗಳೇ ಬೇಕಾದವು(೧೯೪೯). ಅದಕ್ಕೆ ಮೌಲಿಕವಾದ ‘ಮುನ್ನುಡಿ’ ಬರೆದ ಬೇಂದ್ರೆಯವರು ಆಗಲೇ ಈ ಕೃತಿಯ ಮಹತ್ವವನ್ನು ಗುರುತಿಸಿದ್ದರು. ಈ ಕನಸುಗಳು ಅನೇಕರ ಮೆಚ್ಚಿಗೆಗೆ ಪಾತ್ರವಾಗಿದ್ದರೂ, ಆ ಕಾಲದಲ್ಲಿ ಹೆಚ್ಚಿನ ವಿಮರ್ಶೆಯೇನೂ ನಡೆದಂತೆ ಕಾಣುವುದಿಲ್ಲ. ನಂತರ ಕುರ್ತಕೋಟಿಯವರು “ನಡೆದು ಬಂದ ದಾರಿ”ಯ ಕಾದಂಬರಿ ಸಮೀಕ್ಷೆಯಲ್ಲಿ ಇದರ ಅನನ್ಯತೆಯನ್ನು ಎತ್ತಿ ಹೇಳಿದರು (೧೯೬೨:೨೫೪-೫೫). ನಂತರ ಅವರೇ “ಬಯಲು-ಆಲಯ”ದಲ್ಲಿ ಒಂದು ಸುದೀರ್ಘ ಲೇಖನವನ್ನು ಬರೆದರು (೧೯೯೨). ಬೇಂದ್ರೆಯವರು ಫ್ರಾಯಿಡನ ಸ್ವಪ್ನಸಿದ್ಧಾಂತಗಳ ಹಿನ್ನೆಲೆಯನ್ನು ಒದಗಿಸಿದ್ದರೆ, ಕುರ್ತಕೋಟಿಯವರು ಯಂಗ್‌ನ ಸಾಮೂಹಿಕ ಸುಪ್ತಚಿತ್ತ (Collective unconscious)ದ ಹಿನ್ನೆಲೆಯಲ್ಲಿ ವಿವರಿಸಿ, ಈ ಕನಸುಗಳ ಆಧ್ಯಾತ್ಮಿಕ ಸ್ವರೂಪದ ಬಗ್ಗೆಯೂ ಗಮನ ಸೆಳೆದಿದ್ದಾರೆ. ಈಚೆಗಷ್ಟೇ ಈ ಕೃತಿ ಮತ್ತೆ ಕೆಲವು ವಿಮರ್ಶಕರಿಂದ ಚರ್ಚೆಗೊಳಗಾಗಿರುವುದು ಸಂತೋಷದ ವಿಷಯ. ಜಿ.ಎಸ್.ಆಮೂರ ಅವರು ಆತ್ಮಜ್ಞಾನವೆಂಬ ವೇದಾಂತದ ಪರಿಭಾಷೆಯಲ್ಲಿ, ಬಿ.ಟಿ. ದೇಸಾಯಿಯವರು ಮಾಧ್ವ ತತ್ವಜ್ಞಾನದ ಆಧಾರದಲ್ಲಿ, ಆರ್ಯ ಅವರು ಬ್ರಹ್ಮಜಿಜ್ಞಾಸೆಯ ಹಿನ್ನೆಲೆಯಲ್ಲಿ ಮತ್ತು ಎಂ.ಜಿ. ಹೆಗಡೆಯವರು ಭಾವೋದ್ರಕ್ತ ರಾಷ್ಟ್ರೀಯತೆಯ ಅಭಿವ್ಯಕ್ತಿಯಾಗಿ ಈ ಕೃತಿಯನ್ನು ಅರ್ಥೈಸಲು ಯತ್ನಿಸಿದ್ದಾರೆ. ಇವರೆಲ್ಲರ ಲೇಖನಗಳೂ “ಜಿ.ಬಿ. ಶತಮಾನ” (ಜೋಶಿ, ೨೦೦೪)ದಲ್ಲಿ “ಸೇರಿವೆ, ಈ ವಿವರಣೆಗಳು ಕೃತಿಯ ವಿವಿಧ ಮಗ್ಗಲುಗಳ ಮೇಲೆ ಬೆಳಕು ಚೆಲ್ಲುತ್ತವೆಯೇ ಹೊರತು ಒಂದು ಇನ್ನೊಂದನ್ನು ತಿರಸ್ಕರಿಸುವ ಕಾರ‍ಣವಿಲ್ಲ.

“ಜಡಭರತನ ಕನಸುಗಳು” ಕೃತಿಯನ್ನು ಕೇವಲ ಕನಸುಗಳ ಸಂಗ್ರಹವೆಂದು ಗ್ರಹಿಸಬೇಕೋ ಅಥವಾ ಒಂದು ಸಾಹಿತ್ಯಕೃತಿಯೆಂದು ನೋಡಬೇಕೋ ಎಂಬ ಜಿಜ್ಞಾಸೆ ಹೆಚ್ಚಿನ ವಿಮರ್ಶಕರನ್ನೆಲ್ಲ ಕಾಡಿದೆ. ಸಾಹಿತ್ಯ ಮತ್ತು ಸಾಹಿತ್ಯೇತರ ಕೃತಿಗಳ ನಡುವಿನ ಮತ್ತು ಸಾಹಿತ್ಯದಲ್ಲಿ ವಿವಿಧ ಪ್ರಕಾರಗಳ ನಡುವಿನ ವ್ಯತ್ಯಾಸಗಳೇ ತೀವ್ರವಾಗಿ ನಿರಾಕೃತವಾಗುತ್ತಿರುವ ಇಂದಿನ ಆಧುನಿಕ್ಕೋತ್ತರ ಚಿಂತನೆಗಳ ಹಿನ್ನೆಲೆಯಲ್ಲಿ ಈ ಪ್ರಶ್ನೆಗೆ ಈಗ ಅಷ್ಟು ಮಹತ್ವ ಉಳಿದಿಲ್ಲವೆಂದೇ ಹೇಳಬೇಕು.

ಈ ಕೃತಿ ಆ ಕಾಲದ ವಿಮರ್ಶಕರನ್ನು ಅಷ್ಟಾಗಿ ಪ್ರಚೋದಿಸದಿದ್ದರೂ, ಕೆಲವು ಜನ ಸೃಜನಶೀಲ ಲೇಖಕರನ್ನು ಆಕರ್ಷಿಸಿತು ಎಂಬುದು ಕುತೂಹಲದ ವಿಷಯ. “ಜಡಭರತನ ಕನಸುಗಳು” ಪುಸ್ತಕರೂಪದಲ್ಲಿ ಪ್ರಕಟವಾಗುವುದಕ್ಕಿಂತ ೧೨ ವರ್ಷಗಳಷ್ಟು ಮೊದಲೇ ರಂ.ಶ್ರೀ. ಮುಗಳೀಯವರು ಇವುಗಳಲ್ಲಿ ನಾಲ್ಕು ಕನಸುಗಳನ್ನು ನಾಟ್ಯೀಕರಿಸಿ ೧೯೩೭ರಲ್ಲಿ “ಪಾವನ ಪಾವಕ” ಎಂಬ ಹೆಸರಿನಲ್ಲಿ ಪ್ರಕಟಿಸಿದ್ದರು. ಸ್ಟ್ರಿಂಡ್‌ಬರ್ಗ್‌ನ “A Dream Play” ದಂಥ ಸ್ವಪ್ನನಾಟಕದ ಹೊಸ ಸಾಹಿತ್ಯ ಮಾದರಿಯೊಂದನ್ನು ಕನ್ನಡಕ್ಕೆ ಪರಿಚಯಿಸುವ ಆಶಯ ಅವರದಾಗಿತ್ತು. “ಪಾವನ ಪಾವಕ” ಎಂಬುದು ‘Scared Fire’ ಎಂಬುದರ ನೇರ ಅನುವಾದವಾಗಿದ್ದರೂ, ಅದಕ್ಕೆ ‘ದಿವ್ಯಾಗ್ನಿ’ಗಿರುವ ಧ್ವನಿ ಶ್ರೀಮಂತಿಕೆಯಾಗಲಿ, ಭಾರತದ ಪ್ರಾಚೀನ ತತ್ವಚಿಂತನದ ಸ್ಮೃತಿಗಳಾಗಲಿ ಇಲ್ಲ. ಮೊದಲಿನಿಂದಲೂ ಜಡಭರತರ ಕನಸುಗಳೊಂದಿಗೆ ಸೃಜನಶೀಲ ಮತ್ತು ಆತ್ಮೀಯ ಸಂಬಂಧ ಹೊಂದಿದ್ದ ಕುರ್ತಕೋಟಿಯವರು ಅವುಗಳ ಕೇಂದ್ರಕಥಾನಕವನ್ನು ಇರಿಸಿಕೊಂಡು ‘ಸ್ವಪ್ನದರ್ಶಿ’ ಎಂಬ ಗೀತನಾಟಕವನ್ನು ಬರೆದು (೧೯೫೩) ಪ್ರಕಟಿಸಿದರು (೧೯೫೫).

ಈಗ ಈ ಸಂಪುಟದಲ್ಲಿ “ಜಡಭರತನ ಕನಸುಗಳ”ಲ್ಲಿ ಪ್ರಕಟವಾಗಿದ್ದ ೧೮ ಕನಸುಗಳ ಜೊತೆಗೆ (ವಾಸ್ತವವಾಗಿ, ಕೆಲವು ಕನಸುಗಳಲ್ಲಿ ಒಳಗನಸುಗಳು ಸೇರಿ ಸಂಖ್ಯೆ ಹೆಚ್ಚೇ ಆಗುತ್ತದೆ.) ಅವರ ಹಸ್ತಪ್ರತಿಗಳಲ್ಲಿ ಸಿಕ್ಕ ಎಲ್ಲ ಅಪ್ರಕಟಿತ ಕನಸುಗಳನ್ನೂ ಪ್ರತ್ಯೇಕವಾಗಿ ಕೊಡಲಾಗಿದೆ. ಇಂಗ್ಲೀಷಿನಲ್ಲಿದ್ದ ಕೆಲವು ಕನಸುಗಳನ್ನು ಇಂಗ್ಲೀಷಿನಲ್ಲಿಯೇ ಉಳಿಸಿಕೊಳ್ಳಲಾಗಿದೆ. ಪ್ರಕಟಿಸದೆ ಬಿಟ್ಟ ಕನಸುಗಳು ಹೇಗಿದ್ದವು- ಎಂಬ ಬಗ್ಗೆ ಈವರೆಗಿದ್ದ ಓದುಗರ ಕುತೂಹಲಕ್ಕೆ ಇದು ಸಮಾಧಾನ ನೀಡಬಹುದು.

ಇದೇ ೧೯೨೭ರಿಂದ ೧೯೩೩ರ ನಡುವಿನ ಅವಧಿಯಲ್ಲಿ ಜೋಶಿಯವರು ಕವಿತೆಗಳನ್ನೂ ಬರೆಯುತ್ತಿದ್ದರು. ಏಳೆಂಟು ಕವಿತೆಗಳು ಕನ್ನಡದಲ್ಲಿದ್ದರೆ ಬಹಳಷ್ಟು ಕವಿತೆಗಳು ಮೂಲದಲ್ಲಿ ಇಂಗ್ಲೀಷಿನಲ್ಲಿದ್ದವು. ಈ ಇಂಗ್ಲೀಷ್ ಕವಿತೆಗಳಿಗೆ ಅವರು “My Childish Poems” ಎಂದು ಹೆಸರು ಕೊಟ್ಟಿದ್ದರೆಂದು ಹಸ್ತಪ್ರತಿಯಿಂದ ತಿಳಿದುಬರುತ್ತದೆ. ಪ್ರಕಟವಾಗದೆ ಉಳಿದಿದ್ದ ಈ ಕವಿತೆಗಳಿಗೆ ಮೋಕ್ಷ ದೊರೆಯುವ ಒಂದು ಅವಕಾಶ ಬಂತು. ಬೇಂದ್ರೆಯವರ ೬೧ನೇ ಹುಟ್ಟುಹಬ್ಬದ ನಿಮಿತ್ತ ಧಾರವಾಡದಲ್ಲಿ ನಡೆದ ಸತ್ಕಾರ ಸಮಾರಂಭದಲ್ಲಿ ಕಾಣಿಕೆಯಾಗಿ ಅರ್ಪಿಸಲೆಂದು ಜೋಶಿಯವರು ಕನ್ನಡ ಕವಿತೆಗಳ ಜೊತೆಗೆ ಇಂಗ್ಲೀಷ್ ಕವಿತೆಗಳನ್ನು ಕುರ್ತಕೋಟಿಯವರಿಂದ ಕನ್ನಡಕ್ಕೆ ಅನುವಾದ ಮಾಡಿಸಿ ಕೈಬರಹದ ಹಸ್ತಪ್ರತಿಯನ್ನು ತಯಾರಿಸಿ ಅರ್ಪಿಸಿದರು. ಇದೇ ಮುಂದೆ ೧೯೨೩ರಲ್ಲಿ “ಜೀವಫಲ” ಎಂಬ ಹೆಸರಿನಿಂದ ಪ್ರಕಟವಾಯಿತು. ಇದು ಪ್ರಕಟವಾದದ್ದು ೫೭ರಲ್ಲಿಯಾದರೂ ಕವಿತೆಗಳು ಮೂಲದಲ್ಲಿ ರಚನೆಯಾಗಿದ್ದು ೧೯೩೨ರ ಮುಂಚೆ.

ಮೋಜಿನ ಸಂಗತಿಯೆಂದರೆ, ಈ ಪುಸ್ತಕದ ಮುಖಪುಟದ ಮೇಲೆ ‘ಜಡಭರತ’ರ ಒಂದೇ ಹೆಸರಿದ್ದರೆ, ಒಳಗಿನ ಅದರ ತಲೆಬರಹದ ಪುಟ (Title Page)ದಲ್ಲಿ ಜಡಭರತರ ಹೆಸರಿನ ಕೆಳಗೆ ‘ಕೀರ್ತಿನಾಥ’ರ ಹೆಸರೂ ಇದೆ- ಅನುವಾದಕರೆಂದಲ್ಲ, ಸಹಕವಿಯೆಂಬಂತೆ. ಈ ಸಂಕಲನದಲ್ಲಿ ಕುರ್ತಕೋಟಿಯವರ ಸ್ವತಂತ್ರ ಕವಿತೆಗಳು ಸೇರಿಲ್ಲ. ಅವರು ಮಾಡಿದ್ದು ಜಡಭರತರ ಕವಿತೆಗಳ ಅನುವಾದ ಮಾತ್ರ. ಆದರೂ ಅವರಿಗೆ ಸಹಕವಿಯ ಸ್ಥಾನವನ್ನು ಕೊಟ್ಟದ್ದನ್ನು ನೋಡಿದರೆ, ಇಲ್ಲಿಯ ಕವಿತೆಗಳ ಸ್ವರೂಪದಲ್ಲಿ ಅವರ ಪಾತ್ರ ಏನಿರಬಹುದು ಎಂಬುದನ್ನು ಊಹಿಸಬಹುದು.

‘ಸಂಪಾದಕ’ ಎಂಬ ಹೆಸರಿನಿಂದ ಜೋಶಿಯವರೇ ಬರೆದಿರುವ ‘ಹಿನ್ನೆಲೆ’ ಲೇಖನದಿಂದ ಇದರಲ್ಲಿಯ ‘ಏಳೆಂಟು’ ಕವಿತೆಗಳು ಮೂಲದಲ್ಲಿಯೇ ಕನ್ನಡದಲ್ಲಿದ್ದವೆಂದೂ, ಉಳಿದವು ಅವರ ‘ಸ್ನೇಹಿತ’ ಇಂಗ್ಲೀಷಿನಿಂದ ಮಾಡಿದ ಅನುವಾದಗಳೆಂದೂ ತಿಳಿದುಬರುತ್ತದೆ. ಆದರೆ ಈ ಸ್ನೇಹಿತ ಯಾರೆಂದು ಸಂಪಾದಕರು ಬಿಚ್ಚಿ ಹೇಳುವುದಿಲ್ಲ. ಈ ‘ಸ್ನೇಹಿತ’ ಕುರ್ತಕೋಟಿಯವರು ಎಂದು ತಿಳಿಯುವುದಕ್ಕೆ ಕೀರ್ತಿನಾಥರು ಬರೆದ ‘ಹಿನ್ನುಡಿ’ಯನ್ನು ಅವಲಂಬಿಸಬೇಕು. ಇಷ್ಟಾಗಿಯೂ, ಈ ಸಂಕಲನದಲ್ಲಿರುವ ಕವಿತೆಗಳಲ್ಲಿ ಮೂಲದಲ್ಲಿಯೇ ಕನ್ನಡದಲ್ಲಿದ್ದವು ಯಾವವು. ಅನುವಾದವಾಗಿರುವವು ಯಾವವು ಎಂಬುದರ ಬಗ್ಗೆ ಯಾವ ಮಾಹಿತಿಯೂ ಸಿಗುವುದಿಲ್ಲ. ಈಗ ‘ಜಡಭರತ’ರು ಬಿಟ್ಟು ಹೋಗಿರುವ ಹಸ್ತಪ್ರತಿಗಳ ಗಂಟಿನಲ್ಲಿ ಮೂಲ ಇಂಗ್ಲಿಷ್ ಕವಿತೆಗಳ ಕಟ್ಟೂ ಸಿಕ್ಕಿದೆ. ಆ ಅಪ್ರಕಟಿತ ಇಂಗ್ಲಿಷ್ ಕವಿತೆಗಳನ್ನು ಈ ೨ನೇ ಸಂಪುಟದಲ್ಲಿ “ಜೀವಫಲ”ದ ಜೊತೆಗೇ ಪ್ರಕಟಿಸಲಾಗಿದೆ. ಇದರಿಂದಾಗಿ ಅನುವಾದಗಳನ್ನೂ ಮೂಲ ಕನ್ನಡ ಕವಿತೆಗಳನ್ನೂ ಪ್ರೆತ್ಯೇಕಿಸಿ ಗುರುತಿಸಲು ಸಾಧ್ಯವಾಗಿದೆ. “ಜೀವಫಲ”ದ ಕವಿತೆಗಳನ್ನು ಜಡಭರತರೇ ಬರೆದರೆ, ಅಥವಾ ಕುರ್ತಕೋಟಿಯವರು ಇವುಗಳಿಗೆ ಕಾಯಕಲ್ಪ ಚಿಕಿತ್ಸೆ ನೀಡಿದರೆ-ಎಂದು. ಈಗ ಇಲ್ಲಿಯ ಕವಿತೆಗಳನ್ನು ಇಂಗ್ಲಿಷ್ ಮೂಲಗಳೊಂದಿಗೆ ಹೋಲಿಸಿ ನೋಡಿ ಎಲ್ಲ ಸಂದೇಹಗಳಿಗೂ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಕುರ್ತಕೋಟಿಯವರು ತಮ್ಮ ಸಾಹಿತ್ಯಜೀವನದ ಆರಂಭ ಕಾಲದಲ್ಲಿ ಸ್ವತ: ಕವಿತೆಗಳನ್ನು ಬರೆದಿದ್ದರು. ಅವು ಪ್ರತ್ಯೇಕವಾಗಿ ಪುಸ್ತಕರೂಪದಲ್ಲಿ ಪ್ರಕಟವಾಗಿಲ್ಲವಾದರೂ, “ಗಾನಕೇಳಿ” (೧೯೪೮) ಎಂಬ ಮೂರು ಜನ ಕವಿಗಳು (ಕೀರ್ತಿನಾಥ, ಶಂಕರ ಮೊಕಾಶಿ, ಗೋವಿಂದ ಕಣೇಕಲ್ಲ) ಸೇರಿ ವಿದ್ಯಾರ್ಥಿ ದೆಸೆಯಲ್ಲಿ ಪ್ರಕಟಿಸಿರುವ ಒಂದು ಕವನ ಸಂಕನಲದಲ್ಲಿ ಮಾದರಿಯಾಗಿ ಅವರ ೧೦ ಕವಿತೆಗಳು ಸಿಗುತ್ತವೆ. “ನಡೆದು ಬಂದ ದಾರಿ”ಯ ೧ನೇ ಸಂಪುಟದಲ್ಲಿ ಮಾದರಿಗಾಗಿ ಅವರ ೧೦ ಕಥಾನಕವೂ ಇದೆ. ಅವರು ಪ್ರಕಟಿಸಲು ಹಿಂದೆ-ಮುಂದೆನೋಡುತ್ತಿದದ್ದ ಇನ್ನೂ ಕೆಲವು ಕವಿತೆಗಳು ಹಸ್ತಪ್ರತಿಯಲ್ಲೂ ಇವೆ.* ಅವರ ಗೀತನಾಟಕಗಳಲ್ಲಿಯೂ ಅವರ ಕಾವ್ಯಶಕ್ತಿಯು ಹೊಳಹನ್ನು ಕಾಣಬಹುದಾಗಿದೆ. ಕುರ್ತಕೋಟಿಯವರಿಗೆ ಕಾವ್ಯದ ಭಾಷೆ, ಲಯ, ಛಂದಸ್ಸು, ಪ್ರತಿಮಾ ಸಂಯೋಜನೆಗಳ ಮೇಲೆ ಹಿದಿತವಿತ್ತು. ಇದು ಅವರ “ಜೀವಫಲ”ದ ಕವಿತೆಗಳ ಅನುವಾದದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಎಲ್ಲ ಅನುವಾದಗಳಲ್ಲೂ ನಿಯತ ಛಂದಸ್ಸಿದೆ, ಪ್ರಾಸಗಳ ನಿರಾಯಾಸ ಸಂಯೋಜನೆ ಇದೆ. ಭಾವಪೂರ್ಣವಾದ ಲಲಿತ ಭಾಷೆ ಇದೆ. ಅನೇಕ ಕಡೆ ಇವು ಬಿ.ಎಂ. ಶ್ರೀಕಂಠಯ್ಯನವರ “ಇಂಗ್ಲಿಷ್ ಗೀತಗಳ”ಲ್ಲಿಯಾ ಅನುವಾದಗಳನ್ನು ನೆನಪಿಗೆ ತರುತ್ತವೆ. (ಇಲ್ಲಿಯ ಅನುವಾದದ ಕೆಲಸ ೧೯೫೬ರಲ್ಲಿ – ಕನ್ನಡ ನವೋದಯ ಕಾವ್ಯ ಆಗಲೇ ಪ್ರಬುದ್ಧತೆ ಸಾಧಿಸಿದ್ದ ಕಾಲದಲ್ಲಿ – ನಡೆದದ್ದು ಎಂಬುದನ್ನು ಮಾತ್ರ ಇಲ್ಲಿ ಮರೆಯಬಾರದು) ಅನೇಕ ಸಂದರ್ಭಗಳಲ್ಲಿ ಇಲ್ಲಿಯ ಅನುವಾದಗಳು ಮೂಲಕ್ಕಿಂತ ಸುಂದರವಾಗಿವೆ. ಹೊಸ ಪ್ರತಿಮೆಗಳು ಸೇರಿಕೊಂಡಿವೆ. ಭಾವ ಪ್ರಬುದ್ಧತೆ ಪಡೆದಿದೆ. ಅನುವಾದದ ಶ್ರಮವೇ ಕಾಣದಂತೆ ಇವು ಸ್ವತಂತ್ರ ಕವಿತೆಗಳೆಂದೇ ಓದಿಸಿಕೊಳ್ಳುತ್ತವೆ. ಈ ಕವನಸಂಕಲನಕ್ಕೆ “ಜೀವಫಲ” ಎಂಬ ಹೆಸರನ್ನು ಕೊಟ್ಟವರೂ ಕುರ್ತಕೋಟಿಯವರೆ ಇರಬೇಕು. ಯಾಕೆಂದರೆ ಅದು ಅವರ ಅತ್ಯಂತ ಪ್ರೀತಿಯ ಕವಿ ಬೇಂದ್ರೆಯವರ ‘ನಾನು ಬಡವಿ’ (“ನಾದಲೀಲೆ”) ಕವಿತೆಯ “ಹೊಟ್ಟಿಗಿತ್ತ ಜೀವಫಲದ | ತುಟಿಗೆ ಹಾಲು ಜೇನು’ ಎಂಬ ಸಾಲುಗಳಿಂದ ತೆಗೆದುಕೊಂಡದ್ದು.

ಕುರ್ತಕೋಟಿಯವರು ಜಡಭರತರ ಕವಿತೆಗಳ ಅನುವಾದದಲ್ಲಿ ಏನೇನು ಮಾಡಿದ್ದಾರೆ ಎಂಬುದಕ್ಕೆ ಮೂಲದ ‘Mountains’ ಎಂಬ ಪದ್ಯದೊಂದಿಗೆ ‘ಬೆಟ್ಟಗಳು’ ಎಂಬ ಅನುವಾದವನ್ನು ಹೋಲಿಸಿ ನೋಡಿದರೆ ಗೊತ್ತಾಗುತ್ತದೆ. ಮೂಲದಲ್ಲಿಯ ಎಂಟು ಸಾಲಿನ ಸಾಮಾನ್ಯ ಪದ್ಯ ಅನುವಾದದಲ್ಲಿ ಅಷ್ಟ-ಷಟ್ಪದಿಯಾಗಿ ಬೆಳೆದಿದೆ. ಬೆಟ್ಟಗಳೊಂದಿಗೆ ತಾಯಿಯ ಹೋಲಿಕೆ ಮತ್ತು ಬೆಟ್ಟಗಳಿಗಿಂತ ತಾಯಿ ದೊಡ್ಡವಳೆಂಬ ಭಾವ ಮೂಲದಲ್ಲಿರುವಂತೆ ಅನುವಾದದಲ್ಲೂ ಇದೆ. ಆದರೆ ತಾಯಿಯ ಪ್ರತಿಮೆ ಅನುವಾದದಲ್ಲಿ ಸಂಕೀರ್ಣವಾಗಿ ಬೆಳೆದುಬಂದಿರುವ ರೀತಿ ಮತ್ತು “ತಾಯ ಹೃದಯಂಗಮ ಕಾವ್ಯವಾಗಿ ಪರಿವರ್ತಿಸಿದೆ. ಒಂದು ರೀತಿಯಲ್ಲಿ ಇದು ಅನುವಾದವೇ ಅಲ್ಲ, ಮೂಲದ ಅರ್ಥವನ್ನು ಲಕ್ಷ್ಯದಲ್ಲಿಟ್ಟುಕೊಂಡು ಬರೆದ ಸ್ವತಂತ್ರ ಕವಿತೆ-Transcreation. ‘My Days are Near’ ಎಂಬ ಮೂಲ ಕವಿತೆ, ಜಡಭರತರೇ ತಮ್ಮ ಹಸ್ತಪ್ರತಿಯಲ್ಲಿ ಸೂಚಿಸಿರುವಂತೆ ಕನಸಿನಲ್ಲಿ ಕಾಣಿಸಿಕೊಂಡ ಸಂಬಂಧವಿರದ (Unconnected) ಸಾಲುಗಳ ಸಂಗ್ರಹ. ಅದು ಅನುವಾದದಲ್ಲಿ ‘ಸಾವು ಬಂತು ಹತ್ತರ’ ಎಂಬ ಸುಸಂಬದ್ಧ ಭಾವಗೀತೆಯಾಗಿ ಪರಿವರ್ತಿತವಾಗಿದೆ. ಹೀಗೆ ಅನೇಕ ಕಡೆ ಕುರ್ತಕೋಟಿಯವರು ಜಡಭರತರನ್ನು ಮೀರಿಸಿಬಿಟ್ಟಿದ್ದಾರೆ. ಅಂತೆಯೇ “ಜೀವಫಲ” ಜಡಭರತ ಮತ್ತು ಕೀರ್ತಿನಾಥರ ಜೋಡಿ ಹೆಸರಿನಲ್ಲಿ ಪ್ರಕಟವಾಗಿರುವುದು ನ್ಯಾಯವೇ ಆಗಿದೆ.

* ’ಜಿ.ಬಿ. ಜೋಶಿ ಸಮಗ್ರ-೨ (ಜಿ.ಬಿ.ಜೋಶಿ ಮೆಮೋರಿಯಲ್ ಟ್ರಸ್ಟ್, ಧಾರವಾಡ, ೨೦೦೪) ಸಂಪುಟಕ್ಕೆ ಬರೆದ ಸಂಪಾದಕೀಯ.