“ಜೀವಫಲ”ದ ಕವಿತೆಗಳಲ್ಲಿ ಕುರ್ತಕೋಟಿಯವರ ಕೈವಾಡವನ್ನು ಕುರಿತು ಇಷ್ಟೆಲ್ಲ ಹೇಳಿದರೂ, ‘ನಾದ’, ‘ದುರ್ದಿನ’, ‘ಹೊಳೆ’, ‘ಕನಸು’ ಮೊದಲಾದ ಜಡಭರತರ ಸ್ವತಂತ್ರ ಕನ್ನಡ ಕವಿತೆಗಳಲ್ಲಿಯ ಕಾವ್ಯಶಕ್ತಿಯ ಹೊಳಹುಗಳನ್ನು ಅವಗಣಿಸಬೇಕಾಗಿಲ್ಲ; ಇದಕ್ಕೆ ಬರೆದ ‘ಹಿನ್ನುಡಿ’ಯಲ್ಲಿ ಕುರ್ತಕೋಟಿಯವರು ಮಾಡಿರುವಂತೆ ಅತಿಯಾಗಿ ಸಂಭ್ರಮಿಸಬೇಕಾಗಿಯೂ ಇಲ್ಲ. ಒಟ್ಟಿನಲ್ಲಿ ಈ ಕವಿತೆಗಳು ದೊಡ್ದ ಕವಿಯೊಬ್ಬನ ಆಗಮನದ ಸೂಚನೆಯನ್ನು ಕೊಡುವುದಿಲ್ಲವಾದರೂ ಇವು ರಚನೆಯಾಗಿದ್ದು ಆಧುನಿಕ ಕನ್ನಡ ಕಾವ್ಯ ಅದೇ ಆಗ ಕಣ್ಣು ತೆರೆಯುತ್ತಿದ್ದ ೧೯೨೦ರ ದಶಕದಲ್ಲಿ (೧೯-೨೬-೩೨) ಎಂಬುದನ್ನು ಮರೆಯುವಂತಿಲ್ಲ.

“ಜೀವಫಲ”ದ ಕವಿತೆಗಳು ಮೂರು ಕಾರಣಗಳಿಗಾಗಿ ಗಮನ ಸೆಳೆಯುತ್ತವೆ. ಮೊದಲನೆಯದಾಗಿ, ಇವು ನವೋದಯದ-ಅದರಲ್ಲೂ ವಿಶೇಷವಾಗಿ ‘ಗೆಳೆಯರ ಗುಂಪಿ’ನ ಪ್ರಕೃತಿಪ್ರೇಮ, ಪ್ರೀತಿ, ಸ್ನೇಹ, ಮಾತೃವಾತ್ಸಲ್ಯ, ದೈವಭಕ್ತಿ, ಆಧ್ಯಾತ್ಮ, ಕನಸುಗಾರಿಕೆ, ಸಾವು ಮೊದಲಾದ ವಿಶಿಷ್ಟ ವಸ್ತು ಮತ್ತು ಆಶಯಗಳನ್ನು ಪ್ರತಿಬಿಂಬಿಸುತ್ತವೆ. ಎರಡನೆಯದಾಗಿ, ಈ ಕವಿತೆಗಳಿಗೂ ಜಡಭರತರ ಪ್ರಕಟಿತ-ಅಪ್ರಕಟಿತ ಕನಸುಗಳಿಗೂ ಇರುವ ಸಂಬಂಧ ಅಭ್ಯಾಸಯೋಗ್ಯವಾಗಿದೆ. ಈ ಅವಧಿಯಲ್ಲಿ ಕನಸುಗಳೇ ಜಡಭರತರ ಸೃಜನಶೀಲತೆಯ ಮೂಲ ಸೆಲೆಯಾಗಿದೆ ಎಂಬ ನನ್ನ ಪ್ರಮೇಯವನ್ನು ಇವು ಬಲಪಡಿಸುತ್ತವೆ. ಮೂರನೆಯದಾಗಿ, ಜಡಭರತ ಮತ್ತು ಕುರ್ತಕೋಟಿಯವರ ನಡುವಿನ ಸೃಜನಶೀಲ ಸಂಬಂಧಗಳ ಮೇಲೆ ಇವು ಬೆಳಕು ಚೆಲ್ಲುತ್ತವೆ.

ಈಗಾಗಲೇ ಸೂಚಿಸಿರುವಂತೆ, ಜಡಭರತರ ‘My Days are Near’ ಎಂಬ ಕವಿತೆಯ ಸಾಲುಗಳು-ಬೇಂದ್ರೆಯವರಿಗೆ ಆಗುತ್ತಿದ್ದಂತೆ-ಅವರಿಗೆ ಕನಸಿನಲ್ಲಿ ದತ್ತವಾಗಿ ಬಂದವು. ತಮ್ಮ ಹಸ್ತಪ್ರತಿಯಲ್ಲಿ “I remember to have babbled out these unconnected lines in my dream” ಎಂದು ಅವರು ವಿವರಣೆ ನೀಡಿದ್ದಾರೆ. ಒಂದು ಕವಿತೆಯ ಹೆಸರು ‘ಎಚ್ಚರದ ಕನಸು’ ಎಂದಿದರೂ ಅದು “ಜಡಭರತನ ಕನಸುಗಳ”ಲ್ಲಿಯ ‘ಸುವರ್ಣಕಲಶ’ ಎಂಬ ಕನಸಿನ ಉತ್ತರಾರ್ಧದ ಕಾವ್ಯರೂಪವಾಗಿದೆ. ‘ಕನಸು’ ಎಂಬ ಕವಿತೆಯಲ್ಲಿ ಬರುವ ಕನಸಿನ ವಾತಾವರಣ ‘ಛಾಯಾಪುರುಷ’ ಎಂಬ ಕನಸನ್ನು ನೆನಪಿಸುತ್ತದೆ. ‘ನಾದ’, ‘ಬೆಳದಿಂಗಳ ರಾಜ’, ‘ ಕನಸು’, ‘ಒಳನೋಟ’ ಮೊದಲಾದ ಕವಿತೆಗಳ ದ್ರವ್ಯವೂ ಕನಸಿನದೇ ಆಗಿದೆ.

ಇವುಗಳಿಗಿಂತ ಹೆಚ್ಚಾಗಿ “ಜೀವಫಲ”ದ ‘ಹಿನ್ನೆಲೆ’ಯಲ್ಲಿ ಸಂಪಾದಕ ಜೋಶಿಯವರು (ಜಡಭರತರಲ್ಲ!) ಕಲ್ಪಿಸಿಕೊಟ್ಟಿರುವ ಸುಂದರ ಕನಸೂ ಒಂದಿದೆ. ಇದನ್ನು ‘ಕಲ್ಪಿಸಿದ ಕನಸು’ ಎಂದು ಏಕೆ ಕರೆಯುತ್ತಿದ್ದೇನೆಂದರೆ, ಜಡಭರತನಿಗೆ ೧೯೩೩ರಲ್ಲಿ; ಅದೂ ಜಡಭರತರಿಗಿಲ್ಲ, ಸಂಪಾದಕರಿಗೆ. ಈ ಕನಸಿನ ಕಾವ್ಯಮಯತೆ ಅಪೂರ್ವವಾದದ್ದು. ಈ ಕನಸಿನಲ್ಲಿ ಜಿ.ಬಿ. ಜೋಶಿಯವರು ಕುರ್ತಕೋಟಿಯವರನ್ನೂ ಎಳೆದು ತಂದದ್ದು ಸಾಂಕೇತಿಕವಾಗಿ ಮಹತ್ವದ ವಿಷಯವಾಗಿದೆ. ಮುಂದೆ ಅವರಿಬ್ಬರೂ ಸೇರಿ ಕಂಡ ಕನಸುಗಳನ್ನು ಮತ್ತು ಅವುಗಳನ್ನು ಕೃತಿಗಿಳಿಸಲು ಮಾಡಿದ ಸಾಹಸಗಳನ್ನು ಕನ್ನಡ ಸಾಹಿತ್ಯಲೋಕವೆಲ್ಲ ಬಲ್ಲದು.

ಜಡಭರತರು ಬರೆದದ್ದು ಒಂದೇ ಕಾದಂಬರಿ – “ಧರ್ಮಸೆರೆ”, “ಜಡಭರತನ ಕನಸುಗಳು” ಮೊದಲ ಮುದ್ರಣದ ಕೊನೆಯಲ್ಲಿ ಕೊಟ್ಟಿರುವ ಮನೋಹರ ಗ್ರಂಥಮಾಲೆಯ ಮುಂಬರುವ ಪ್ರಕಟಣೆಗಳಲ್ಲಿ ಅವರ “ಮೂಕಬಲಿ” ಮತ್ತು “ಸಂಪಾದಕ” ಎಂಬ ಇನ್ನೆರಡು ಸಾಮಾಜಿಕ ಕಾದಂಬರಿಗಳ ಹೆಸರುಗಳಿವೆ. ಅವರು “ಮೂಕಬಲಿ” ಯನ್ನು ಮೊದಲು ಕಾದಂಬರಿಯಾಗಿ ಬರೆಯಲು ಆರಂಭಿಸಿ ಒಂದು ಅಧ್ಯಾಯವನ್ನೂ ಬರೆದಿದ್ದರು. ಆದರೆ ಅದು ಸರಿಬೀಳದೆ, ನಂತರ ನಾಟಕವಾಗಿ ಬರೆದರು. “ಸಂಪಾದಕ” ಕಾದಂಬರಿಯ ಸುಳಿವೇ ಸಿಗುವುದಿಲ್ಲ ಅವರ ಹಸ್ತಪ್ರತಿಗಳ ಗಂಟಿನಲ್ಲೂ ಅದರ ಕುರುಹುಗಳಿಲ್ಲ. (ಅವರು ಅನೇಕ ಕೃತಿಗಳ ತಲೆಬರಹಗಳನ್ನು ಮಾತ್ರ ಬರೆದಿದ್ದರೆಂದೂ, ಅದಕ್ಕಾಗಿ ಅವರಿಗೆ ‘Titler’ ಎಂಬ ಬಿರುದು ಕೊಡಲಾಗಿತ್ತೆಂದೂ ಅವರ ಮಗ ರಮಾಕಾಂತ ಹೇಳುತ್ತಾರೆ.)

“ಧರ್ಮಸೆರೆ” ಪ್ರಕಟವಾದದ್ದು ೧೯೩೪ರಲ್ಲಿ. ರಚನೆಯಾದದ್ದು ಮೂರು-ನಾಲ್ಕು ವರ್ಷಗಳ ಹಿಂದೆ ಇರಬೇಕು. ಯಾಕೆಂದ್ರೆ ಅದು ರಂ.ಶ್ರೀ. ಮುಗಳಿಯವರ ಕೈಯಲ್ಲಿ ಸಂಸ್ಕಾರಗೊಂಡು ಬಂದಿರುವುದಾಗಿ ಜಡಭರತರು ‘ಮುನ್ನುಡಿ’ಯಲ್ಲಿ ತಿಳಿಸಿದ್ದಾರೆ. ಅದರ ರಚನೆಯ ಕಾಲವನ್ನು ಒತ್ತಿ ಹೇಳುತ್ತಿರುವುದರಲ್ಲಿ ನನ್ನ ಉದ್ದೇಶವೆಂದರೆ, ಈ ಕಾದಂಬರಿಯ ಕಲ್ಪನೆ ಮತ್ತು ರಚನೆ ನಡೆದದ್ದು ೧೯೩೩ರ ಮುಂದೆ, ಅರ್ಥಾತ್ ಜಡಭರತನು ಕನಸುಗಳ ಪ್ರಭಾವದಲ್ಲಿ ಇದ್ದ ಕಾಲದಲ್ಲಿ ಎಂಬುದರ ಮೇಲೆ ಒತ್ತು ಕೊಡುವುದು.

“ಧರ್ಮಸೆರೆ”ಯಲ್ಲಿ ಕನಸಿನ ಪ್ರಭಾವವನ್ನು ಗುರುತಿಸುವುದಕ್ಕಾಗಿ ಸೂಕ್ಷ್ಮ ಸೂಚನೆಗಳನ್ನು ಹುಡುಕಿ ಎಳೆದಾಡಬೇಕಾದ ಅವಶ್ಯಕತೆಯೇ ಇಲ್ಲ. ಅದರ ಮೊದಲ ಭಾಗವೇ ‘ಸ್ವಪ್ನಲೋಕ’ ಎಲ್ಲಿ ಕಾಲೇಜಿನಲ್ಲಿ ಓದುತ್ತಿರುವ ಇಬ್ಬರು ತರುಣ ಗೆಳೆಯರಿದ್ದಾರೆ. ಅವರಲ್ಲಿ ಒಬ್ಬ ರಾಘವೇಂದ್ರ- ಕವಿ; ಇನ್ನೊಬ್ಬ ಬಿಂದುಮಾಧವ – ಕನಸುಗಾರ (‘Dreamer’). ಕಾದಂಬರಿಯಲ್ಲಿ ಬರುವ ಇವರಿಬ್ಬರ ನಡುವಿನ ಸಂಬಂಧಕ್ಕೂ, ಜೋಶಿಯವರು ರಂ.ಶ್ರೀ. ಮುಗಳಿಯವರ ವ್ಯಕ್ತಿಚಿತ್ರದಲ್ಲಿ (‘ನೆರಳು ಕಂಡ ಬೆಳಕು’) ಕೊಟ್ಟಿರುವ ವಿವರಗಳಿಗೂ ಇರುವ ಹೋಲಿಕೆಯನ್ನು ಗಮನಿಸಿದರೆ ನಿಜಜೀವನದಲ್ಲಿ ರಾಘವೇಂದ್ರ ಮುಗಳಿಯವರೆಂದೂ, ಬಿಂದುಮಾಧವ ಜಡಭರತರೆಂದೂ ಸ್ವಷ್ಟವಾಗಿ ಗೊತ್ತಾಗುತ್ತದೆ. ಬಿಂದುಮಾಧವ ದೈಹಿಕ ಸ್ವರೂಪದಲ್ಲೂ, ಕನಸುಗಾರಿಕೆಯಲ್ಲೂ ಜಡಭರತನನ್ನೇ ಹೋಲುತ್ತಾನೆ. ಜಡಭರತರಿಗೆ ಬಿದ್ದಂತೆ ಬಿಂದುಮಾಧವನಿಗೂ ಕನಸುಗಳು ಬೀಳುತ್ತವೆ. ಅವರಂತೆ ಇವನೂ ಅವುಗಳನ್ನು ಬರೆದಿಡುತ್ತಾನೆ. ‘Dreamer’ ಎಂಬ ಹೆಸರಿನಲ್ಲಿ ಕಾಲೇಜ್ ಮಿಸೆಲನಿಯಲ್ಲಿ ಒಂದು ಕನಸನ್ನು ಪ್ರಕಟಿಸಿದ್ದಾನೆ. ಕಾದಂಬರಿಯ ಮೊದಲ ಅಧ್ಯಾಯದಲ್ಲಿ ಗೆಳೆಯರ ಒತ್ತಾಯಕ್ಕೆ ಮಣಿದು ತನ್ನದೊಂದು ಕನಸನ್ನು ಓದಿ ತೋರಿಸುತ್ತಾನೆ. ಅದು “ಜಡಭರತನ ಕನಸುಗಳ”ಲ್ಲಿರುವ ‘ಸುವರ್ಣಕಲಶ’ ಎಂಬ ಕನಸಿನ ಸಂಕ್ಷಿಪ್ತ ರೂಪ, ಒಟ್ಟಿನಲ್ಲಿ ಕಾದಂಬರಿಯ ‘ಸ್ವಪ್ನಲೋಕ’ ಎಂಬ ಭಾಗ ಕನಸು, ಕಾವ್ಯ, ಸಂಗೀತ, ಗೆಳೆತನ, ಪ್ರೀತಿಗಳ ಆದರ್ಶ ವಾತಾವರಣದಿಂದ ತುಂಬಿಹೋಗಿದೆ. ಇದು ‘ಗೆಳೆಯರ ಗುಂಪಿ’ನ ಪ್ರಭಾವದಂತೆಯೂ ಕಾಣುತ್ತದೆ.

ಮುಂದಿನ ‘ಸತ್ಯಸೃಷ್ಟಿ’ ಎಂಬ ಭಾಗ ಪೂರ್ತಿಯಾಗಿ ವಾಸ್ತವದ ನೆಲಕ್ಕೆ ಇಳಿಯುತ್ತದೆ. ರಾಘವೇಂದ್ರ, ಬಿಂದುಮಾಧವ, ಮೀನಾಕ್ಷಿಯರ ಮೂರು ಬದುಕುಗಳು ಮೂರು ಅನಿರೀಕ್ಷಿತ ಹಾದಿ ಹಿಡಿಯುತ್ತವೆ. ಅಲ್ಲಿ ಕಾವ್ಯವೂ ಇಲ್ಲ. ಕನಸೂ ಇಲ್ಲ, ಸಂಗೀತವೂ ಇಲ್ಲ. ಇದೇ ಒಂದು ಬೇರೆ ಕಥೆ. ಜಡಭರತನು ಎಲ್ಲೋ ಕೇಳಿದ್ದ ಧರ್ಮಸೆರೆಯ ಕಥೆ. ಬಿಂದುಮಾಧವ ಅಕಸ್ಮಾತ್ತಾಗಿ ಧರ್ಮಸೆರೆ ಬಿಡಿಸುವ ನಿಮಿತ್ತವಾಗಿ ಲೀಲೆಯ ಜೊತೆಗೆ ವನಮಾಲಿಯೆಂಬ ಅಂಗವಿಕಲ ಮೂಕಿಯನ್ನು ಮದುವೆಯಾಗಬೇಕಾದ ಮತ್ತು ಅದರ ಪರಿಣಾಮಗಳ ಪ್ರಸಂಗ ಇಲ್ಲಿ ಪ್ರಾಮುಖ್ಯತೆ ಪಡೆಯುತ್ತದೆ. ‘ಸ್ವಪ್ನಲೋಕ’ಕ್ಕೂ ಈ ಕಥೆಗೂ ಇರುವ ಸಂಬಂಧದ ಒಂದು ಎಳೆ ಎಂದರೆ-ರಾಘವೇಂದ್ರ ಬಿಂದುಮಾಧವನ ಕನಸುಗಳನ್ನು ಆಧರಿಸಿ ‘Dreamer’s World’ ಎಂಬ ಚಲನಚಿತ್ರವನ್ನು ತಯಾರಿಸುವುದು ಮತ್ತು ಬಿಂದುಮಾಧವ ಅದನ್ನು ನೋಡುವುದು. ಈ ಚಲನಚಿತ್ರದಲ್ಲಿ ಚಿತ್ರಿತವಾಗಿರುವುದು “ಜಡಭರತನ ಕನಸುಗಳ”ಲ್ಲಿಯ ‘ದಿವ್ಯಸಂದೇಶ’, ‘ದಿವ್ಯಾಗ್ನಿ’, ‘ಪ್ರತಿರೂಪ’ಎಂಬ ಕನಸುಗಳೇ. ಇದನ್ನು ನೋಡಿ ಬಿಂದುಮಾಧವನಿಗೆ ವನಮಾಲಿಯ ಮೇಲೆ ಪ್ರೀತಿ ಹುಟ್ಟುತ್ತದೆ. ಅದರ ಫಲವಾಗಿ ಅವಳಿಗೆ ಮಗುವಾಗುತ್ತದೆ.

ಮುಂದಿನ ‘ಸಮ್ಮೀಲನ’ ಎಂಬ ಭಾಗದಲ್ಲಿ ಮತ್ತೆ ರಾಘವೇಂದ್ರ, ಬಿಂದುಮಾಧವ, ಮೀನಾಕ್ಷಿಯರು ಒಂದೆಡೆ ಸೇರುವ ಸನ್ನಿವೇಶಗಳಿವೆ.

“ಧರ್ಮಸೆರೆ” ಯಶಸ್ವಿ ಕಾದಂಬರಿಯೇನೂ ಅಲ್ಲ. ಕಾದಂಬರಿಯ ಸನ್ನಿವೇಶಗಳ ನಿರ್ವಹಣೆಯಲ್ಲಿ ಸಂಯಮ ಏಕರೂಪದಲ್ಲಿ ಕೆಲಸ ಮಾಡಿಲ್ಲ. ‘ಸ್ವಪ್ನಲೋಕ’ದಲ್ಲಿ ಆದರ್ಶ ಪ್ರಿಯತೆಯ ಕೃತಕತೆ ಇದೆ. ‘ಸತ್ಯಸೃಷ್ಟಿ’ಯಲ್ಲಿ ವನಮಾಲಿ ಮದುವೆಯ ನಂತರ ಗಂಡನ ಬೆನ್ನು ಹತ್ತಿ ಬರುವ ಸನ್ನಿವೇಶದಂಥ ಸಮರ್ಥ ಚಿತ್ರಗಳಿದ್ದರೂ ಮೇಲೋಡ್ರಮ್ಯಾಟಿಕ್ ಸನ್ನಿವೇಶಗಳು ತಲೆಹಾಕಿವೆ. ‘ಸಮ್ಮಿಲನ’ ಆಕಸ್ಮಿಕಗಳ ಭಾರದಲ್ಲಿ ನಲುಗಿದೆ. ಇದನ್ನು ಆಧರಿಸಿ ಪುಟ್ಟಣ್ಣ ಕಣಗಾಲರು ನಿರ್ದೇಶಿಸಿದ ಚಲನಚಿತ್ರವೂ ಯಶಸ್ವಿಯಾಗಲಿಲ್ಲ.

“ಮೂಕಬಲಿ” ನಾಟಕ ೧೯೫೮ರಲ್ಲಿ ಪ್ರಕಟವಾಗಿದ್ದರೂ, ಅದರ ಹೊಳವು ಹುಟ್ಟಿದ್ದು ಮತ್ತು ಅದಕ್ಕೆ ಆಕಾರ ಕೊಡುವ ಪ್ರಯತ್ನ ನಡೆದದ್ದು ಇದೇ ಕನಸುಗಳ ಕಾಲಾವಧಿಯಲ್ಲಿ. ಮುಗಿಸಿದ್ದರೆಂಬುದನ್ನು ಈಗಾಗಲೇ ಹೇಳಿಯಾಗಿದೆ. ಈಗ ‘ಒಂದು ಹಳವಂಡ’ ಎಂಬ ಹೆಸರಿನಲ್ಲಿ “ಮೂಕಬಲಿ” ನಾಟಕಕ್ಕೆ ಹಿನ್ನೆಲೆಯಾಗಿ ಪ್ರಕಟವಾಗಿರುವ ಬರಹ ಆ ಪ್ರಕರಣವೇ ಆಗಿದೆ. ಕುತೂಹಲದ ಸಂಗತಿಯೆಂದರೆ, ಈ ಪ್ರಕರಣವೂ ಒಂದು ಕನಸಿನ ರೂಪದಲ್ಲಿರುವುದು. ಆ ಕನಸಿಗೂ “ಜಡಭರತನ ಕನಸುಗಳಿಗೂ” ನೇರ ಸಂಬಂಧವಿಲ್ಲವಾದರೂ, ಕನಸುಗಳು ಹೇಗೆ ಅವರ ಸೃಜನಶೀಲ ಮನಸ್ಸನ್ನು ಈ ಅವಧಿಯಲ್ಲಿ ಆವರಿಸಿಕೊಂಡಿದ್ದವೆಂಬುದಕ್ಕೆ ಇದು ಇನ್ನೊಂದು ಪುರಾವೆಯನ್ನು ಒದಗಿಸುತ್ತದೆ. ಆದರೆ ಇಲ್ಲಿ ಕನಸು ಬರವಣಿಗೆಯ ವಸ್ತುವಾಗಿ ಬರದೆ, ನಿರೂಪಣೆಯ ತಂತ್ರವಾಗಿ ಬಳಕೆಯಾಗಿರುವುದು ಒಂದು ಹೊಸ ಬೆಳವಣಿಗೆಯಾಗಿದೆ.

ಇದೇ ಕಾಲಾವಧಿಯಲ್ಲಿ ಜಡಭರತನು ಏಳೆಂಟು ಸಣ್ಣಕತೆಗಳನ್ನು ಬರೆದಿದ್ದಾರೆ. ಇವುಗಳಲ್ಲಿ ‘ಡೂಗಜ್ಜನ ಬಹಿಷ್ಕಾರ’ ೧೯೩೩ರಲ್ಲಿ ಮನೋಹರ ಗ್ರಂಥಮಾಲೆ ಪ್ರಕಟಿಸಿದ “ನವಿಲುಗರಿ” ಸಂಕಲನದಲ್ಲಿ ಬಂದಿದೆ. ಉಳಿದ ಕತೆಗಳು ಪ್ರಕಟವಾಗುತ್ತಿರುವುದು ಬಹುಶಃ ಇದೇ ಮೊದಲು. ಜಡಭರತರ ಹಸ್ತಪ್ರತಿಯ ಗಂಟುಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಈ ಕತೆಗಳನ್ನು ಹುಡುಕಿ ತೆಗೆದು ಈ ಸಂಪುಟದಲ್ಲಿ ಸೇರಿಸಲಾಗಿದೆ.

ನವೋದಯದ ಬಹಳಷ್ಟು ಲೇಖಕರು ಸಾಮಾನ್ಯವಾಗಿ ಒಂದು ಸಾಹಿತ್ಯಪ್ರಕಾರವನ್ನು ತಮ್ಮ ಅಭಿವ್ಯಕ್ತಿಯ ಮುಖ್ಯ ಮಾಧ್ಯಮವನ್ನಾಗಿ ಬೆಳೆಸಿಕೊಂಡು, ಉಳಿದ ಸಾಹಿತ್ಯಪ್ರಕಾರಗಳಲ್ಲೂ ಅಷ್ಟಿಷ್ಟು ಕೆಲಸ ಮಾಡಿದಂತೆ, ಜಡಭರತನು ಇನ್ನೂ ತಮ್ಮ ಮುಖ್ಯ ಮಾಧ್ಯಮ ಯಾವುದೆಂದು ಕಂಡುಕೊಳ್ಳುವ ಮೊದಲು ಅನೇಕ ಸಾಹಿತ್ಯಪ್ರಕಾರಗಳಲ್ಲಿ ಕೈಯಾಡಿಸಿದ್ದಾರೆ. ಇವುಗಳಲ್ಲಿ ‘ಆಶೆಗೆ ಸಾವುಂಟೆ?’ ಎಂಬ ಕತೆ ಟಾಲ್‌ಸ್ಟಾಯ್‌‍ನ ‘ಒಬ್ಬ ಮನುಷ್ಯನಿಗೆ ಎಷ್ಟು ಭೂಮಿ ಬೇಕು?’ ಎಂಬ ಕತೆಯ ರೂಪಾಂತರ. (ಆದರೆ ಹಾಗೆಂದು ಸೂಚಿಸಿಲ್ಲ.) ‘ಅರಾಯುಷೀ’ ಮತ್ತು ‘ತಿಳಿಯದ ಮಾತು’ ಎಂಬ ಕತೆಗಳು ಒಂದೇ ಕತೆಯನ್ನು ಬೇರೆ ಬೇರೆಯಾಗಿ ಬೆಳೆಸಿದ ಉದಾಹರಣೆಗಳು. (ಇದು ಜೋಶಿಯವರ ಒಂದು ವೈಶಿಷ್ಟ್ಯವೇ ಆಗಿದೆ.) ‘ಡೂಗಜ್ಜನ ಬಹಿಷ್ಕಾರ’, ‘ಮೀಸಿ ಮುತ್ಯಾ’ ಮೊದಲಾದ ಕತೆಗಳಲ್ಲಿ ಆ ಕಾಲದ ನವೋದಯದ ಕತೆಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿದ್ದ ‘ಚೌಕಟ್ಟಿನ ಕತೆ’ (Frams Story)ಯ ತಂತ್ರವನ್ನು ಬಳಸಲಾಗಿದೆ. ‘ಮೀಸಿ ಮುತ್ಯಾ’ ತನ್ನ ವಸ್ತುವಿನ ವಿಲಕ್ಷಣತೆಯಿಂದಾಗಿ ಗಮನ ಸೆಳೆಯುತ್ತದೆ.

ಈ ಕತೆಗಳಲ್ಲೂ ಮುಂದುವರಿದಿರುವ ಒಂದು ಅಂಶವೆಂದರೆ ಕನಸುಗಳ ಬಳಕೆ, ‘ತಿಳಿಯದ ಮಾತು’, ‘ಆಶೆಗೆ ಸಾವುಂಟೆ?’, ‘ಅದೃಷ್ಟ’ ಕತೆಗಳಲ್ಲಿ ಕನಸುಗಳು ತಲೆಹಾಕಿವೆ. ಇವುಗಳಿಗೂ “ಜಡಭರತನ ಕನಸುಗಳಿ”ಗೂ ಸಂಬಂಧವಿಲ್ಲ. ಅವು ಕತೆಗಳ ಕೇಂದ್ರದ್ರವ್ಯವೂ ಆಗಿಲ್ಲ. ನಿರೂಪಣೆಯ ಭಾಗವಾಗಿ ಅವು ಕಾಣಿಸಿಕೊಂಡಿವೆ. ಮುಂದೆ ನಡೆಯಲಿರುವ ದುರಂತದ ಸೂಚನೆ ಕೊಡುವ ಸಾಂಪ್ರದಾಯಿಕ ಉದ್ದೇಶಕ್ಕಾಗಿ ಅವು ಬಳಕೆಯಾಗಿವೆ.

ಒಟ್ಟಿನಲ್ಲಿ ಈ ಕತೆಗಳು ಅಂಥ ಮೇಲುಮಟ್ಟದವೇನೂ ಅಲ್ಲ. ಅದರಲ್ಲೂ ವಿಶೇಷವಾಗಿ ಇಲ್ಲಿಯ ಭಾಷೆಯ ಬಳಕೆ ನಿರಾಶಾದಾಯಕವಾಗಿದೆ. “ಮೂಕಬಲಿ”, “ಕದಡಿದ ನೀರು” ನಾಟಕಗಳಲ್ಲಿ ಆಡುಮಾತನ್ನು ಕಾವ್ಯಾತ್ಮಕ ತೀವ್ರತೆಯಿಂದ ಬಳಸುವುದರಲ್ಲಿ ಸಾಧಿಸಿದ ಅಪೂರ್ವ ಯಶಸ್ಸಿನ ಯಾವ ಮುನ್ಸೂಚನೆಯೂ ಇಲ್ಲಿ ಸಿಗುವುದಿಲ್ಲ. ಆಡುಮಾತಿನ ಬಳಕೆಯಲ್ಲಿ ಮತ್ತು ಅದನ್ನು ನಿರೂಪಣಾ ಗದ್ಯದೊಂದಿಗೆ ಸಮನ್ವಯಗೊಳಿಸುವುದರಲ್ಲಿ ಅವರಿಗೆ ಹದ ಸಿಕ್ಕಿಲ್ಲ. ಅಲ್ಲಲ್ಲಿ ಆಡುಮಾತಿನ ನಡುವೆ ಶಿಷ್ಟಭಾಷೆ ನುಸುಳಿ ತುತ್ತಿನಲ್ಲಿ ಹರಳು ಕಡಿದಂತಾಗಿತ್ತು.

ಜಡಭರತರು ಬರೆದ ಹರಟೆಗಳೂ ಸಿಕ್ಕಿವೆ. ‘ಇನ್ನೊಂದು ಪುರಾಣ’ ಮನೋಹರ ಗ್ರಂಥಮಾಲೆ ೧೯೩೯ರಲ್ಲಿ ಪ್ರಕಟಿಸಿದ “ಸುಳಿವು ಹೊಳವು” ಎಂಬ ಪ್ರಬಂಧ ಸಂಕಲನದಲ್ಲಿ ಬಂದಿತ್ತು. ‘ಒಂದು ಹರಟೆ’ಯೂ ಎಲ್ಲೋ ಪ್ರಕಟವಾಗಿತ್ತು. ಉಳಿದವು ಮೊದಲ ಸಲ ಗಂಟಿನಿಂದ ಹೊರಗೆ ಬರುತ್ತಿವೆ. ಇವುಗಳನ್ನು ಲಲಿತಪ್ರಬಂಧಗಳೆನ್ನುವುದಕ್ಕಿಂತ ಹರಟೆಗಳೆಂದು ಕರೆಯುವುದೇ ಒಳ್ಳೆಯದು. ಬಹಳಷ್ಟು ಹರಟೆಗಳಲ್ಲಿ ಕಥಾನಾತ್ಮಕ ನಿರೂಪಣೆ ಇದೆ. ಮೊದಲಿನಿಂದ ಕೊನೆಯವರಿಗೆ ಒಂದು ಸನ್ನೀವೇಶಗಳನ್ನು ಬೆಳೆಸಿ ಅದರಿಂದ ಸಾಂದರ್ಭಿಕ ಹಾಸ್ಯವನ್ನು ಹೊರಡಿಸುವ ಪ್ರಯತ್ನವಿದೆ.

ಜೋಶಿಯವರ ವ್ಯಕ್ತಿತ್ತ್ವದಲ್ಲಾಗಲಿ, ನಾಟಕಗಳಲ್ಲಾಗಲಿ ಅಷ್ಟಾಗಿ ಕಾಣದ ಹಾಸ್ಯಪ್ರಜ್ಞೆ ಈ ಹರಟೆಗಳಲ್ಲಿ ಕಾಣುವುದು ಒಂದು ವಿಶೇಷವೆಂದೇ ಹೇಳಬೇಕು. ‘ನನ್ನ ಅಳೇತನ’, ‘ನನ್ನ ದೇವರ ಪೂಜೆ’, ‘ನನ್ನ ಒಂದು ಕನಸು’, ‘ಅಂಟಿನ ಉಂಡಿ’ ಮೊದಲಾದ ಹರಟೆಗಳು ನವಿರಾದ ಹಾಸ್ಯದಿಂದ ಲಘುವಾಗಿ ಓದಿಸಿಕೊಳ್ಳುತ್ತವೆ. ಕೆಲವು ಸಲ ಅವರು ತಮ್ಮನ್ನೇ ಹಾಸ್ಯಕ್ಕೊಡ್ಡಿಕೊಳ್ಳುವದೂ ಮೋಜಿನದಾಗಿದೆ. ‘ದ.ರಾ.ಬೇಂದ್ರೆ’ ಎಂಬ ಬಿಡಿ ಬರಹ ಇದಕ್ಕೊಂದು ಒಳ್ಳೆಯ ಉದಾಹರಣೆ. ಹಾಗೆಯೇ ಈ ಹರಟೆಗಳ ಭಾಷೆಯೂ ಜೋಶಿಯವರು ಉಳಿದ ಕಡೆ ಬಳಸಿದ ಭಾಷೆಗಿಂತ ಭಿನ್ನವೂ, ಲವಲವಿಕೆಯದೂ ಆಗಿದೆ.

ಬೇರೆಬೇರೆ ಸಾಹಿತ್ಯಪ್ರಕಾರಗಳಲ್ಲಿ ಕೆಲಸ ಮಾಡುವುದರ ಒಂದು ಮುಖ್ಯ ಪ್ರಯೋಜನವೆಂದರೆ, ಅವು ಲೇಖಕನ ವ್ಯಕ್ತಿತ್ವದ ಬೇರೆಬೇರೆ ಮುಖಗಳನ್ನು ಅನಾವರಣಗೊಳಿಸುತ್ತವೆ ಮತ್ತು ಭಾಷೆಯ ಬೇರೆಬೇರೆ ಸ್ತರಗಳನ್ನು ಬಳಸಿಕೊಳ್ಳುವ ಅವಕಾಶ ಒದಗಿಸುತ್ತವೆ.

ಈ ಹರಟೆಗಳಲ್ಲಿಯೂ ವಿಶೇಷವಾಗಿ ಗಮನ ಸೆಳೆಯುವ ಒಂದು ಬರಹವೆಂದರೆ- ‘ನನ್ನ ಒಂದು ಕನಸು’. ಇದು “ಜಡಭರತನ ಕನಸುಗಳು” ಪ್ರಕಟವಾಗುವುದಕ್ಕಿಂತ ಬಹಳ ಮೊದಲೇ ಬರೆದುದಾಗಿರಬೇಕು. ಇದರ ಮುಖ್ಯ ಹೂರಣವಾದ ಕನಸು ಅಲ್ಲಿಯ ‘ಮುದುಕಪ್ಪರಾಜ’ ಎಂಬುದರದೇ ಆಗಿದೆ. ಆದರೆ ಅದಕ್ಕೆ ಒದಗಿಸಿರುವ ಚೌಕಟ್ಟು ಹರಟೆಯದಾಗಿದೆ. ಇದರಿಂದಾಗಿ ಅಲ್ಲಿಯ ಕನಸಿನ ಗಂಭೀರ ಅನುಭವ ಇಲ್ಲಿ ನಗೆಚಾಟಿಕೆಗೆ ಒಳಗಾಗಿದೆ. ತಮ್ಮ ಕನಸುಗಳಿಗೆ ಇಂಥ ಪ್ರತಿಕ್ರಿಯೆಯೂ ಸಾಧ್ಯ ಎಂಬುದನ್ನು ಜೋಶಿಯವರು ಊಹಿಸಿದ್ದರೆಂಬುದಕ್ಕೆ ಇದೊಂದು ನಿದರ್ಶನ.

ಇದಕ್ಕಿಂತ ಹೆಚ್ಚಾಗಿ, ಜಡಭರತ-ಜೋಶಿಯವರ ಸೃಜನಶೀಲತೆಯ ಸ್ವರೂಪವನ್ನು ಮತ್ತು ಅವರ ಬರವಣಿಗೆಯ ಕ್ರಮವನ್ನು ತಿಳಿದುಕೊಳ್ಳಲು ಈ ಹರಟೆ ಬಹಳಷ್ಟು ಸಹಾಯ ಮಾಡುತ್ತದೆ. ಜಡಭರತರ ತಲೆಯಲ್ಲಿ ಕನಸುಗಳಿದ್ದವು. ಹಾಗೆಯೇ ಬೇರೆ ವಸ್ತು-ಕಥೆಗಳೂ ಇದ್ದವು. ಆದರೆ ಅವುಗಳಿಗೆ ಹೇಗೆ ಆಕಾರ ಕೊಡಬೇಕು. ಅವುಗಳನ್ನು ಯಾವ ಸಾಹಿತ್ಯ ಪ್ರಕಾರದಲ್ಲಿ ಅಳವಡಿಸಬೇಕು-ಎಂಬುದರ ಬಗ್ಗೆ ಅವರಿಗೆ ತೀವ್ರ ಗೊಂದಲಗಳಿದ್ದವು. ಎಷ್ಟರಮಟ್ಟಿಗೆ ಎಂದರೆ-ಅವರಿಗೆ ತಮ್ಮ ಬರವಣಿಗೆಯ ಶಕ್ತಿಯ ಬಗ್ಗೆ ಆತ್ಮವಿಶ್ವಾಸವೇ ಇರಲಿಲ್ಲ. ಹೀಗಾಗಿ ಬರೆದುದನ್ನು ಪ್ರಕಟಿಸದೆ ಗಂಟುಕಟ್ಟಿ ಇಡುವುದು, ಬರವಣಿಗೆಯನ್ನು ಆರಂಭಿಸಿ ಅರ್ಧಕ್ಕೆ ಕೈಬಿಡುವುದು, ಒಂದು ರೀತಿಯಲ್ಲಿ ಬರೆದು ಅಸಮಾಧಾನವಾಗಿ ಇನ್ನೊಂದು ರೀತಿಯಲ್ಲಿ ಪ್ರಯತ್ನಿಸುವುದು, ಬರೆದುದನ್ನು ಅವರಿವರಿಗೆ ತೋರಿಸಿ ಅವರ ಸಲಹೆಗಳನ್ನು ಒಪ್ಪಿಕೊಂಡು ತಿದ್ದುಪಡಿ ಮಾಡುವುದು, ತಿದ್ದಿ ತೀಡಿ ಮತ್ತೆಮತ್ತೆ ಬರೆಯುವುದು- ಇವೆಲ್ಲ ಅವರಿಗೆ ಸಾಮಾನ್ಯವಾಗಿತ್ತು. ಕೆಲವು ವಸ್ತುಗಳಿಗೆ ಹೇಗೆ ರೂಪ ಕೊಡಬೇಕೆಂಬುದು ಬಗೆಹರಿಯದೆ ಬಿಟ್ಟುಕೊಟ್ಟದ್ದೂ ಉಂಟು. ಇಂಥ ಒಂದು ವಸ್ತುವನ್ನು ಕುರ್ತಕೋಟಿಯವರಿಗೆ ಕೊಟ್ಟು ಅವರಿಂದ “ಆ ಮನಿ” ನಾಟಕವನ್ನು ಬರೆಸಿದ ಉದಾಹರಣೆ ಇದೆ. ಈ ಸಮಸ್ಯೆಯನ್ನೇ ಜಡಭರತರು ‘ನನ್ನ ಒಂದು ಕನಸು’ ಎಂಬ ಹರಟೆಯಲ್ಲಿ ಲಘು ಧಾಟಿಯಲ್ಲಿ ಚಿತ್ರಿಸಿದ್ದಾರೆ. ತನಗೆ ಬಿದ್ದ ಒಂದು ಕನಸನ್ನು ಕವಿತೆಯಾಗಿ ಬರೆಯಬೇಕೋ, ಕತೆಯಾಗಿ ಬರೆಯಬೇಕೋ ಎಂಬ ಗೊಂದಲದಲ್ಲಿ ಬಿದ್ದಿರುವ ಹರಟೆಯ ನಾಯಕ (‘ನಾನು’) ಕೊನೆಗೆ ಅದನ್ನು ನಾಟಕರೂಪದಲ್ಲಿ ಬರೆಯಲು ನಿಶ್ಚಯಿಸುತ್ತಾನೆ. ಆಗಲೂ ವಸ್ತು ನಾಟಕದ ಯಾವ ಸಿದ್ಧಪ್ರಕಾರದ ಶಿಸ್ತಿಗೂ ಹೊಂದಿಕೊಳ್ಳದೆ ಗೊಂದಲವಾಗುತ್ತದೆ. ಕಷ್ಟಪಟ್ಟು ಒತ್ತಾಯದಿಂದ ಆರಂಭಿಸಿದ ಬರವಣಿಗೆ ಮುಂದುವರಿಯಲು ನಿರಾಕರಿಸಿ ನಿಂತುಬಿಡುತ್ತದೆ. ಕೊನೆಗೂ ಅವನಿಗೆ ಸಾಧ್ಯವಾದದ್ದು ತನಗೆ ಬಿದ್ದ ಕನಸನ್ನು ಕನಸಾಗಿ ಮಾತ್ರ ಗೆಳೆಯರ ಮುಂದೆ ಹೇಳುವುದಕ್ಕೆ. ಅದು ಅವರ ಹಾಸ್ಯಕ್ಕೆ ಈಡಾಗುತ್ತದೆ. ಎಲ್ಲವೂ (ಕನಸನ್ನಷ್ಟು ಬಿಟ್ಟು) ಲಘು ಧಾಟಿಯಲ್ಲಿ ನಿರೂಪಿತವಾಗಿದ್ದರೂ ಇದು ಜಡಭರತರು ಅನುಭವಿಸಿದ ಸೃಜನಶೀಲತೆಯ ಅತ್ಯಂತ ಗಂಭೀರವಾದ ಬಿಕ್ಕಟ್ಟನ್ನು ಸೂಚಿಸುತ್ತದೆ.

ಸುದೈವದಿಂದ ಜಡಭರತರಿಗೆ ಒಳ್ಳೆಯ ಹೊತ್ತಿನಲ್ಲಿ ಕುರ್ತಕೋಟಿಯವರು ಸಿಕ್ಕರು. ಕುರ್ತಕೋಟಿಯವರು ಈವರೆಗೆ ಪ್ರಕಟಿಸಿರುವ ಸೃಜನಶೀಲವೆನ್ನಬಹುದಾದ ಕೃತಿಗಳನ್ನು ಅಭ್ಯಸಿಸಿದರೆ (ಹೇಗೆ ನೋಡಿದರೆ ಅವರ ವಿಮರ್ಶೆಯೇ ಸೃಜನಶೀಲವಾದದ್ದು) ಅವುಗಳಲ್ಲಿ ಸ್ವತಂತ್ರವಸ್ತು ನಿರ್ಮಾಣಕ್ಷಮತೆ ಅಷ್ಟಾಗಿ ಕಂಡುಬರುವುದಿಲ್ಲ. ಆದರೆ ಸಿಕ್ಕ ವಸ್ತುಗಳಿಗೆ ಆಕಾರ ಕೊಡುವ, ಆ ವಸ್ತುವಿನ ಹಲವಾರು ಸಾಧ್ಯತೆಗಳನ್ನು ಗುರುತಿಸಿ ಅರ್ಥಪೂರ್ಣ ಪ್ರಬುದ್ಧ ಕೃತಿಯನ್ನಾಗಿ ಪುನರ್ರಚಿಸುವ ಸೃಜನಶೀಲತೆಯ ಇನ್ನೊಂದು ಶಕ್ತಿ ಅವರಲ್ಲಿ ಅಪಾರವಾಗಿತ್ತು. ಅದು ಸದಾಕಾಲ ಜಡಭರತರ ನೆರವಿಗೆ ಬಂತು. ಜಡಭರತರ ಕೃತಿಗಳಿಗೆ ಕುರ್ತಕೋಟಿಯವರು ಏನೇನು ಮಾಡಿರಬಹುದೆಂದು ಊಹಿಸಲು ಈಗ ನಮಗೆ ಸಿಗುವ ಏಕೈಕ ಆಧಾರ ಅವರು ಮಾಡಿರುವ “ಜೀವಫಲ”ದ ಕವಿತೆಗಳ ಅನುವಾದ. “ಜೀವಫಲ”ದಿಂದ ಆರಂಭಿಸಿ, ಅವರ ಇತ್ತೀಚಿನ ನಾಟಕವಾದ “ಪರಿಮಳದವರು” ವರೆಗಿನ ಜಡಭರತರ ಎಲ್ಲ ಮುಖ್ಯ ಕೃತಿಗಳಿಗೆ ಒಂದಲ್ಲ ಒಂದು ರೀತಿಯಿಂದ ಕುರ್ತಕೋಟಿಯವರ ಸೃಜನಶೀಲ ಪ್ರತಿಭೆಯ ಸಹಾಯ ಸಿಕ್ಕಂತಿದೆ. ಜಡಭರತರಿಗೆ ಅವರ ಸೃಜನಶೀಲ ಸ್ವರೂಪವನ್ನು ಅರ್ಥಮಾಡಿಕೊಟ್ಟು, ಅವರಲ್ಲಿ ಆತ್ಮವಿಶ್ವಾಸ ಕುಂದದಂತೆ ನೋಡಿಕೊಂಡು, ಕೃತಿರಚನೆ ಮುಂದುವರೆಯುವಂತೆ ಮಾಡಿದ ಶ್ರೇಯಸ್ಸು ಕುರ್ತಕೋಟಿಯವರಿಗೆ ಸಲ್ಲಬೇಕು. ಪರಸ್ಪರ ಪೂರಕವಾದ ಸೃಜನಶೀಲತೆಯ ಎರಡು ಶಕ್ತಿಗಳು ಕೈಗೂಡಿಸಿ ಫಲಪ್ರದವಾಗಿ ಕೆಲಸ ಮಾಡಿದ ಅಪೂರ್ವ ಉದಾಹರಣೆ ಇದು.

ಈ ಸಂಪುಟದ ನಾಲ್ಕನೆಯ ಭಾಗದಲ್ಲಿ ಸೇರಿರುವ ೧೨ ಲೇಖನಗಳು ತೀರ ಈಚಿನವು. ಮೇಲೆ ಚರ್ಚಿಸಿದ ೧೯೨೭ರಿಂದ ೧೯೩೩ರ ಕಾಲಾವಧಿಗೆ ಸೇರಿದುವಲ್ಲ. ಇವುಗಳಲ್ಲಿ ಮೊದಲಿನ ನಾಲ್ಕು ಲೇಖನಗಳು ಈ ಮುಂಚೆ ಪ್ರಕಟವಾಗಿದ್ದವು. ಉಳಿದವು ಪ್ರಕಟವಾಗುತ್ತಿರುವುದು ಇದೇ ಮೊದಲು. ಇಲ್ಲಿಯ ಯಾವ ಲೇಖನದಲ್ಲಿಯೂ ಕನಸುಗಳ ಪ್ರಸ್ತಾಪವಿಲ್ಲ. ಜಡಭರತರ ಸಣ್ಣಕತೆ-ಹರಟೆಗಳಲ್ಲಿ ಕಾಣುವ ಭಾಷೆಯ ವಿಷಮತೆ, ಹೊಯ್ದಾಟಗಳು ಈ ಲೇಖನಗಳಲ್ಲಿಲ್ಲ. ಭಾಷೆ, ಆಕೃತಿ ಮತ್ತು ವೈಚಾರಿಕತೆಗಳಲ್ಲಿ ಒಂದು ಬಗೆಯ ಪರಿಣತಿ ಕಾಣುತ್ತದೆ.

ಇಲ್ಲಿಯ ಲೇಖನಗಳು ಒಂದೇ ಜಾತಿಯವಲ್ಲ. ವ್ಯಕ್ತಿಚಿತ್ರ, ನೆನಪು, ಚಿಂತನ, ದಿನಚರಿ, ಭಾಷಣ, ವಿಚಾರ – ಹೀಗೆ ಇವುಗಳ ಆಕೃತಿ ಮತ್ತು ಸಾಮಗ್ರಿ ಬೇರೆಬೇರೆಯಾಗಿದೆ. ರಂ.ಶ್ರೀ. ಮುಗಳಿಯವರನ್ನು ಕುರಿತ ‘ನೆರಳು ಕಂಡ ಬೆಳಕು’ ಎಂಬ ವ್ಯಕ್ತಿಚಿತ್ರ ತನ್ನ ಆಪ್ತತೆ ಮತ್ತು ಸ್ವಯಂಪೂರ್ಣ ಆಕೃತಿಯಿಂದ ಗಮನ ಸೆಳೆಯುತ್ತದೆ. ಬಿ.ಎಂ.ಶ್ರೀ. ಅವರನ್ನು ಕುರಿತ ಎರಡು ನೆನಪುಗಳೂ ಅವರ ವ್ಯಕ್ತಿತ್ವದ ಮೇಲೆ ಬೆಳಕು ಚೆಲ್ಲುವಂತಿದೆ. ಬೇಂದ್ರೆಯವರನ್ನು ಕುರಿತ ಭಾಷಣದಲ್ಲಿ ಜಡಭರತನ ಮುಂದೆ ಬೇಂದ್ರೆಯವರು ಮಾಡಿದ ಕಾವ್ಯವಾಚನ ಮತ್ತು ಭೀಮಸೇನ ಜೋಶಿಯವರು ಹಾಡಿದ ಸಂಗೀತದ ಪ್ರಸಂಗಗಳಲ್ಲಿ ಜಡಭರತರು ತಮ್ಮನ್ನೇ ತಾವು ಚಿತ್ರಿಸಿಕೊಂಡ ಹಾಸ್ಯಮಯ ರೀತಿ ಅಪರೂಪದ್ದಾಗಿದೆ. ‘ಭಾರತೀಯತೆಯ ಅರ್ಥ’ ವೈಚಾರಿಕವಾಗಿ ಪ್ರಬುದ್ಧವಾಗಿದೆ. *[1]

ಜಡಭರತರ ನಾಟಕಗಳ ಅಭ್ಯಾಸದ ದೃಷ್ಟಿಯಿಂದ ಮಹತ್ವದ್ದಾದ ಲೇಖನ ‘ಹವ್ಯಾಸಿ ರಂಗಭೂಮಿ: ನಾಟಕಕಾರ’. ಇದರಲ್ಲಿ ಅವರು ಮುಖ್ಯವಾಗಿ ತಮ್ಮ ನಾಟಕಗಳಲ್ಲಿ ಉತ್ತರ ಕರ್ನಾಟಕದ ಆಡುಮಾತನ್ನು ಹದಗೊಳಿಸಿಕೊಳ್ಳುವಲ್ಲಿ ಎದುರಿಸಿದ ಸಮಸ್ಯೆಗಳನ್ನು ಚರ್ಚಿಸಿದ್ದಾರೆ. ಈ ಲೇಖನದ ಜೊತೆಗೆ ನನ್ನ ವೈಯಕ್ತಿಕ ಸಂಬಂಧವೂ ಇದೆಯೆಂಬುದು ಒಂದು ಸಂತೋಷದ ವಿಷಯ. ೧೯೭೯ರ ಅಕ್ಟೋಬರ್ ತಿಂಗಳಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ವತಿಯಿಂದ, ಅದರ ಸದಸ್ಯನಾಗಿದ್ದ ನಾನು, ಕಲಬುರ್ಗಿಯಲ್ಲಿ ಏಳು ದಿನಗಳ ಒಂದು ನಾಟಕೋತ್ಸವವನ್ನು ಸಂಘಟಿಸಿದ್ದೆ. ಅದರ ಅಂಗವಾಗಿ ಏರ್ಪಡಿಸಿದ್ದ “ಹವ್ಯಾಸಿ ರಂಗಭೂಮಿಯ ಸಮಸ್ಯೆಗಳು” ಎಂಬ ವಿಚಾರಸಂಕಿರಣದಲ್ಲಿ ಜಿ.ಬಿ. ಜೋಶಿಯವರು ಈ ಪ್ರಬಂಧವನ್ನು ಮಂಡಿಸಿದ್ದರು. ನಂತರ ನಾನು ಮತ್ತು ಚಂದ್ರಕಾಂತ ಕಸನೂರರು ಸಂಪಾದಕರಾಗಿ ಅಕಾಡೆಮಿಯಿಂದ ಪ್ರಕಟಿಸಿದ ಅದೇ ಹೆಸರಿನ ಪುಸ್ತಕದಲ್ಲಿ ಈ ಲೇಖನ ಪ್ರಕಟವಾಗಿತ್ತು (೧೯೮೦).

“ಜಡಭರತನ ಕನಸುಗಳು” ಪ್ರಕಟವಾದಾಗ ಮನೋಹರ ಗ್ರಂಥಮಾಲೆಯ ಸಂಪಾದಕರಾಗಿ ಜಿ.ಬಿ. ಜೋಶಿಯವರು ‘ಜಡಭರತ’ರು ತೀರಿಕೊಂಡು ಬಿಟ್ಟರೆಂದು ಒಂದು ಕತೆ ಕಟ್ಟಿದ್ದರು. ಜೋಶಿಯವರಿಗೆ ಕನಸು ಬೀಳುವದು ನಿಂತು ಹೋದುದಕ್ಕೆ ಅದು ಸಾಂಕೇತಿಕವಾಗಿತ್ತು. ಜೊತೆಗೆ, ಜಡಭರತರ ಹಸ್ತಪ್ರತಿಗಳದೊಂದು ಗಂಟು ತಮ್ಮ ವಶಕ್ಕೆ ಬಂದುದಾಗಿಯೂ ತಿಳಿಸಿದ್ದರು. ಈ ಕಥೆಯನ್ನೇ “ಜೀವಫಲ”ದ ‘ಹಿನ್ನೆಲೆ’ ಲೇಖನದಲ್ಲಿ ಮುಂದುವರಿಸಿ, ಇಂಗ್ಲಿಷ್- ಕನ್ನಡ ಕವಿತೆಗಳನ್ನು ಜಡಭರತರ ಆ ಗಂಟಿನಿಂದಲೇ ಆಯ್ದು ತೆಗೆದು ಪ್ರಕಟಿಸುತ್ತಿರುವುದಾಗಿ ಬರೆದಿದ್ದರು. ಜೋಶಿಯವರು ಕವಿತೆ ಬರೆಯುವುದನ್ನು ನಿಲ್ಲಿಸಿದ್ದಕ್ಕೆ ‘ಜಡಭರತ’ರ ಸಾವು ಇಲ್ಲಿಯೂ ಸಾಂಕೇತಿಕವಾಗಿತ್ತು. ಈಗ ಸಂಪಾದಕ ಜೋಶಿಯವರೂ ಇಲ್ಲ. ಕನಸುಗಾರ ‘ಜಡಭರತ’ರೂ ಇಲ್ಲ. ಆದರೆ ‘ಜಡಭರತ’ರ ಹಸ್ತಪ್ರತಿಗಳ ಗಂಟು ಹಾಗೇ ಉಳಿದಿತ್ತು. ಜೋಶಿಯವರು ತೀರಿಕೊಂಡ ನಂತರ ಅದು ಅವರ ಮಗ ರಮಾಕಾಂತ ಜೋಶಿಯವರ ಕೈಗೆ ಬಂದಿತ್ತು. ಆ ಗಂಟಿನಿಂದ ಇನ್ನಷ್ಟು ಬರಹಗಳನ್ನು ಹುಡುಕಿ ತೆಗೆದು, ಜಡಭರತರ ಪ್ರಕಟಿತ ಕೃತಿಗಳ ಜೊತೆಗೆ ಸೇರಿಸಿ ಈ ಸಂಪುಟದಲ್ಲಿ ಪ್ರಕಟಿಸಲಾಗುತ್ತಿದೆ. ಈ ಲೇಖನಗಳನ್ನು ಅಂಕಲಿಸುವುದರಲ್ಲಿ ರಮಾಕಾಂತರ ಪಾತ್ರವೇ ದೊಡ್ಡದು. ಹಾಗಿದ್ದೂ ಈ ಸಂಪುಟದ ಸಂಪಾದಕತ್ವದ ಹೊಣೆಯನ್ನು ವಹಿಸಲು ನನ್ನನ್ನು ಕೇಳಿದ್ದಕ್ಕೆ ಅವರಿಗೆ ನನ್ನ ಮೇಳಿರುವ ಪ್ರೀತಿ-ವಿಶ್ವಾಸಗಳೇ ಕಾರಣ.

ಜಡಭರತರ ಒಟ್ಟು ಸಮಸ್ತ್ರ ಅಧ್ಯಯನಕ್ಕೇ ಈ ಸಂಪುಟದಿಂದ ವಿಶೇಷ ಸಹಾಯವಾದೀತೆಂದು ನಂಬಿದ್ದೇನೆ.

ಉಲ್ಲೇಖಗಳು

೦೧.   ಆಮೂರ, ಜಿ.ಎಸ್. (೨೦೦೪), “ನಿಂದ ಹೆಜ್ಜೆ”, ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು.

೦೨.   ಕುರ್ತಕೋಟಿ, ಕೀರ್ತಿನಾಥ (೧೯೫೬), “ಸ್ವಪ್ನದರ್ಶಿ ಮತ್ತು ಇತರ ಗೀತನಾಟಕಗಳು”, ಮನೋಹರ ಗ್ರಂಥಪ್ರಕಾಶನ ಸಮಿತಿ, ಧಾರವಾಡ.

೦೩.   ಕುರ್ತಕೋಟಿ, ಕೀರ್ತಿನಾಥ (೧೯೬೨), “ಯುಗಧರ್ಮ ಹಾಗೂ ಸಾಹಿತ್ಯದರ್ಶನ”, ಮನೋಹರ ಗ್ರಂಥಮಾಲಾ, ಧಾರವಾಡ.

೦೪.   ಕುರ್ತಕೋಟಿ, ಕೀರ್ತಿನಾಥ (೧೯೬೨), “ಬಯಲು ಮತ್ತು ಆಲಯ”, ಕನ್ನಡ ವಿಶ್ವವಿದ್ಯಾಲಯ, ಹಂಪಿ

೦೫.   ಜೋಶಿ, ರಮಾಕಾಂತ *(೨೦೦೪), “ಜಿ.ಬಿ.ಶತನಮನ”, ಜಿ.ಬಿ.ಜೋಶಿ ಮೆಮೋರಿಯಲ್ ಟ್ರಸ್ಟ್, ಧಾರವಾಡ.

೦೬.   ಬೇಂದ್ರೆ, ದ.ರಾ. (೧೯೪೯), ಮುನ್ನುಡಿ- “ಜಡಭರತನ ಕನಸುಗಳು”, ಮನೋಹರ ಗ್ರಂಥಪ್ರಕಾಶನ ಸಮಿತಿ, ಧಾರ‍ವಾಡ.

೦೭.   ಮುಗಳಿ ರಂ.ಶ್ರೀ. (೧೯೩೭), “ಪಾವನ ಪಾವಕ”, ಮನೋಹರ ಗ್ರಂಥ ಪ್ರಕಾಶನ ಸಮಿತಿ, ಧಾರವಾಡ.

– ೨೦೦೪

[1] ಈಚೆಗೆ ಈ ಲೇಖನ ಕುರ್ತುಕೋಟಿಯವರ ಮರಣೋತ್ತರ ’ಭಾಷೆ ಮತ್ತು ಸಂಸ್ಕೃತಿ’ (೨೦೦೬) ಎಂಬ ಲೇಖನ ಸಂಕಲನದಲ್ಲಿ ಕುರ್ತಕೋಟಿಯವರ ಹೆಸರಿನಲ್ಲಿ ಪ್ರಕಟವಾಗಿರುವುದು ಕುತೂಹಲಕರವಾಗಿದೆ. ಈ ಲೇಖನ ಮೊದಲು ’ಭಾರತೀಯತೆ ಮತ್ತು ಕನ್ನಡ ಲೇಖಕ’ ಎಂಬ ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಕಟಣೆಯಲ್ಲಿ (೧೯೮೨) ಜಿ.ಬಿ. ಜೋಶಿಯವರ ಹೆಸರಿನಲ್ಲಿ ಪ್ರಕಟವಾಗಿತ್ತು.