ಸಾಹಿತ್ಯ ಮತ್ತು ಸಂಸ್ಕೃತಿಗಳ ಸಂಕಥನದಲ್ಲಿ ‘ಮಾರ್ಗ’ ಮತ್ತು ‘ದೇಸಿ’ ಎಂಬ ಶಬ್ದಗಳ ಬಳಕೆ ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿದೆ. ಇವುಗಳ ಸಂಬಂಧ ಪರಸ್ಪರ ಅವಲಂಬಿತವಾದದ್ದು. ಒಂದನ್ನು ವಿವರಿಸಲು ಇನ್ನೊಂದರ ವಿವರಣೆಯೂ ಅವಶ್ಯವಾಗಿದೆ. ಇವೆರಡರಲ್ಲಿ ‘ಮಾರ್ಗ’ವೇ ಹೆಚ್ಚು ಪ್ರಾಚೀನವಾಗಿರುವಂತಿದೆ. ಆದರೂ ಅದರ ಅರ್ಥನಿರ್ದಿಷ್ಟತೆ ಕಾಲದಿಂದ ಕಾಲಕ್ಕೆ ಬದಲಾಗುತ್ತ ಬಂದಿದೆ.

ಭಾಷೆಗಳನ್ನು ‘ಮಾರ್ಗ’ ಮತ್ತು ‘ದೇಸಿ’ ಎಂದು ವರ್ಗೀಕರಿಸುವ ಕ್ರಮ ಬಹಳ ಪ್ರಾಚೀನವಾದುದು. ಆರಂಭದಲ್ಲಿ ವೇದಭಾಷೆಯನ್ನು (ವೈದಿಕ ಸಂಸ್ಕೃತ) ‘ಮಾರ್ಗ’ವೆಂದೂ, ಸಂಸ್ಕೃತ-ಪ್ರಾಕೃತಗಳನ್ನು ‘ದೇಸಿ’ಗಳೆಂದೂ ಪರಿಗಣಿಸಲಾಗಿತ್ತು. ವೇದಭಾಷೆಯ ಮೇಲೆ ಕ್ರಮೇಣ ಧರ್ಮ-ಆಧ್ಯಾತ್ಮಿಕತೆಗಳ ಭಾರ ಹೆಚ್ಚುತ್ತ ಹೋಗಿ, ಅದರ ಛಂದಸ್ಸು, ಸಂಧಿ ಸಮಾಸಗಳು, ಧ್ವನಿಶಾಸ್ತ್ರ, ವ್ಯಾಕರಣ, ಅರ್ಥವಿಜ್ಞಾನಗಳು ಸ್ಥಿರಗೊಂಡು, ಅದರ ಶುದ್ದಿಯ ಕಲ್ಪನೆ ಬಿಗಿಗೊಳ್ಳತೊಡಗಿದ್ದರಿಂದ ಆ ಭಾಷೆ ಧಾರ್ಮಿಕ ಸಂಕಥನಕ್ಕೆ ಸೀಮಿತವಾಗಿ ಉಳಿದು, ಹೆಚ್ಚು ವಿಕಸನಶೀಲವಾಗಿದ್ದ ಸಂಸ್ಕೃತ, ಪ್ರಾಕೃತ ಭಾಷೆಗಳಲ್ಲಿ ಸೃಜನಶೀಲ ಸಾಹಿತ್ಯದ ರಚನೆ ಹೆಚ್ಚಾಗತೊಡಗಿತು. ಬರುಬರುತ್ತ ಸಂಸ್ಕೃತ ಭಾಷೆಯೂ ಧಾರ್ಮಿಕ ಸ್ವರೂಪ ಪಡೆದು, ಪಾಣಿನಿಯ “ಅಷ್ಟಾಧ್ಯಾಯಿ” ಯಲ್ಲಿ ಸ್ಥಿರಗೊಂಡ ಮೇಲೆ ಅದಕ್ಕೂ ವೈದಿಕ ಸಂಸ್ಕೃತದ ಗತಿಯೇ ಒದಗುವಂತಾಯಿತು. ಮೇಲಾಗಿ ಸಂಸ್ಕೃತವು ಜನಸಮುದಾಯದ ಆಡುಭಾಷೆಯಾಗಿ ಬೆಳೆಯಲಿಲ್ಲವಾದ್ದರಿಂದ ಅದರ ಅಧ್ಯಯನ ಮತ್ತು ಅದರ ಮೇಲಿನ ಪ್ರಭುತ್ವ ಕಠಿಣವಾಗಿ, ಅದು ಜನರಿಂದ ದೂರ ಸರಿಯಿತು. ಆಗ ಸಂಸ್ಕೃತವೇ ‘ಮಾರ್ಗ’ದ ಪಟ್ಟವೇರಿತು. ಜೈನ ಮತ್ತು ಬೌದ್ಧ ಧರ್ಮಗಳು ಸಂಸ್ಕೃತವನ್ನು ಕೈಬಿಟ್ಟು ಜನರಾಡುವ ಪಾಲಿ, ಪ್ರಾಕೃತಗಳಲ್ಲಿ ತಮ್ಮ ಧಾರ್ಮಿಕ ವಿಚಾರಗಳನ್ನು ಮಂಡಿಸತೊಡಗಿದವು. ಆ ಭಾಷೆಗಳಲ್ಲಿ ಸೃಜನಶೀಲ ಕೃತಿಗಳೂ ರಚನೆಯಾಗತೊಡಗಿದವು. ಆದರೂ ಸಂಸ್ಕೃತಕ್ಕೆ ವಿಶೇಷ ಮನ್ನಣೆ ಇದ್ದೇ ಇತ್ತು. ಸಂಸ್ಕೃತದಲ್ಲಿ ಬೌದ್ಧಿಕ, ಆಧ್ಯಾತ್ಮಿಕ, ಧಾರ್ಮಿಕ ಚರ್ಚೆಗಳು ನಡೆದೇ ಇದ್ದವು. ಸಂಸ್ಕೃತ ಬಲ್ಲವರಿಗೆ ಸಮಾಜದಲ್ಲಿ ಪ್ರತಿಷ್ಠೆಯ ಸ್ಥಾನವಿತ್ತು. ಸಂಸ್ಕೃತ ಸ್ವತಃ ಆಡುಭಾಷೆಯಾಗಿ ಇರದಿದ್ದರಿಂದಲೋ ಏನೊ, ಅದಕ್ಕೆ ಆಡುಮಾತಾಗಿ ಬಳಕೆಯಲ್ಲಿದ್ದ ಭಾಷೆಗಳಿಗಿದ್ದ ಕೆಲವು ಸೌಲಭ್ಯಗಳನ್ನು ಬಳಸಿಕೊಳ್ಳಬೇಕೆಂಬ ಆಕರ್ಷಣೆಯಿಂದ ಮಾತ್ರ ಅದು ಮುಕ್ತವಾಗಲಿಲ್ಲ. ಸಂಸ್ಕೃತ ನಾಟಕಗಳಲ್ಲಿ ಸ್ತ್ರೀ ಮತ್ತು ನೀಚ (ಕೆಳವರ್ಗದ) ಪಾತ್ರಗಳು ಪ್ರಾಕೃತದಲ್ಲಿ ಮಾತಾಡಬೇಕೆಂಬ ನಿಯಮವೇ ಇತ್ತು.

ನಂತರದ ಬೆಳವಣಿಗೆಯೆಂದರೆ, ಪ್ರಾಕೃತಗಳೂ ಒಂದು ರೀತಿಯಲ್ಲಿ ‘ಮಾರ್ಗ’ದ ಪ್ರತಿಷ್ಠೆಯನ್ನು ಗಳಿಸಿಕೊಂಡದ್ದು. ಸಂಸ್ಕೃತ, ಪ್ರಾಕೃತಗಳ ವರ್ಣ, ಅಕ್ಷರ, ಶಬ್ದಗಳ ನಿರುಕ್ತ ಲಿಪಿ, ಸಂಧಿ-ಸಮಾಸ, ವಾಕ್ಯರಚನೆ ಇತ್ಯಾದಿಗಳನ್ನು ವಿವರವಾಗಿ ಅಭ್ಯಸಿಸಿ, ವ್ಯವಸ್ಥಿತ ವ್ಯಾಕರಣಗಳನ್ನು ರಚಿಸಲಾಯಿತು. ಹಾಗೆಯೇ, ಆ ಭಾಷೆಗಳಲ್ಲಿ ರಚನೆಯಾಗುತ್ತಿದ್ದ ಕೃತಿಗಳನ್ನು ಸೂಕ್ಷ್ಮವಾಗಿ ಅಭ್ಯಸಿಸಿ, ಅವುಗಳ ವರ್ಗೀಕರಣ ಮಾಡಿ, ಸಾಹಿತ್ಯಪ್ರಕಾರಗಳನ್ನು ಗಮನಿಸಿ, ಅವುಗಳ ಸ್ವರೂಪ-ಲಕ್ಷಣ-ವೈಶಿಷ್ಟ್ಯಗಳನ್ನು ನಿರೂಪಿಸುವ ಕೆಲಸವೂ ವ್ಯಾಪಕವಾಗಿ ನಡೆಯಿತು. ಸಂಸ್ಕೃತ ಕಾವ್ಯ-ನಾಟಕಗಳ ಛಂದಸ್ಸು, ಅಲಂಕಾರ, ಧ್ವನಿ, ರಸ ಇತ್ಯಾದಿಗಳನ್ನು ಚರ್ಚಿಸಲಾಯಿತು. ಎಲ್ಲದಕ್ಕೂ ಒಂದು ವ್ಯವಸ್ಥಿತವಾದ ಶಾಸ್ತ್ರ ನಿರ್ಮಾಣವಾಯಿತು. ಹೀಗೆ ಶಾಸ್ತ್ರಬದ್ಧವಾದದ್ದೇ ‘ಮಾರ್ಗ’ವಾಯಿತು. ಇಂಥ ವ್ಯವಸ್ಥಿತ ಅಧ್ಯಯನಗಳಿಗೆ ಒಳಗಾಗದ ಜನಸಮುದಾಯದ ಆಡುಭಾಷೆಗಳು ಮತ್ತು ಅವುಗಳಲ್ಲಿ ಮೌಖಿಕವಾಗಿ ರಚನೆಯಾದ ಸೃಜನಶೀಲ ಕೃತಿಗಳು ‘ದೇಸಿ’ ಎನಿಸಿಕೊಂಡವು.

ಹಿಂದೆಯೇ ಹೇಳಿದಂತೆ, ‘ಮಾರ್ಗ’ ಮತ್ತು ‘ದೇಸಿ’ಗಳನ್ನು ಭಿನ್ನವೆಂದು ಗುರುತಿಸಲಾಗಿದ್ದರೂ ಅವು ಪರಸ್ಪರ ಅವಲಂಬಿಗಳಾಗಿ, ಒಂದು ಮತ್ತೊಂದನ್ನು ಒಳಗೊಳ್ಳುವ, ಒಂದರ ಸೂಕ್ಷ್ಮಗಳನ್ನು ಇನ್ನೊಂದರಲ್ಲಿ ಹಿಡಿಯುವ, ಒಂದು ಇನ್ನೊಂದರಿಂದ ಪ್ರಭಾವಿತವಾಗುವ ಪ್ರಕ್ರಿಯೆ ಕಾಲಕಾಲಕ್ಕೆ ನಡೆಯುತ್ತಲೇ ಬಂದಿದೆ.

ಭಾರತದಲ್ಲಿ ಸಾಮ್ರಾಜ್ಯಗಳು ತಮ್ಮ ಅಖಿಲ ಭಾರತ ವ್ಯಾಪ್ತಿಯನ್ನು ಕಳೆದುಕೊಂಡು ಪ್ರಾದೇಶಿಕ ಮಿತಿಗಳಿಗೆ ಒಳಗಾಗುತ್ತ ಬಂದಂತೆ, ಅವುಗಳಿಗೆ ತಮ್ಮದೇ ಆದ ಭಾಷಿಕ ಅಸ್ಮಿತೆಯನ್ನು ಕಂಡುಕೊಳ್ಳುವ ಅಗತ್ಯ ಒದಗಿತು. ಬಹುಸಂಖ್ಯಾತರಿಗೆ ಗೊತ್ತಿಲ್ಲದ ಸಂಸ್ಕೃತದಲ್ಲಿ ರಾಜಕೀಯ ಆಡಳಿತ ನಡೆಸುವುದು ಅವ್ಯವಹಾರಿಕವಾಯಿತು. ಹೀಗಾಗಿ ಈ ಪ್ರಾದೇಶಿಕ ಸಾಮ್ರಾಜ್ಯಗಳು ಸಂಸ್ಕೃತದ ಬಳಕೆಯನ್ನು ಕಡಿಮೆ ಮಾಡುತ್ತ, ಪ್ರಾದೇಶಿಕ ಭಾಷೆಗಳನ್ನು ಹೆಚ್ಚುಹೆಚ್ಚಾಗಿ ಬಳಸತೊಡಗಿದವು. ಕರ್ನಾಟಕದ ಚಾಲುಕ್ಯ. ರಾಷ್ಟ್ರಕೂಟ ರಾಜ್ಯಾಡಳಿತಗಳಲ್ಲಿ ಬರೆಸಲಾದ ಶಾಸನಗಳಲ್ಲಿ ಸಂಸ್ಕೃತದ ಬಳಕೆ ಕಡಿಮೆಯಾಗುತ್ತ ಕನ್ನಡದ ಬಳಕೆ ಹೆಚ್ಚಾಗುತ್ತ ಹೋದದ್ದನ್ನು ಮುಖ್ಯ ನಿದರ್ಶನವೆಂದು ಇಲ್ಲಿ ತೆಗೆದುಕೊಳ್ಳಬಹುದು.

ಒಂಭತ್ತನೆ ಶತಮಾನದ ಕರ್ನಾಟಕದ ರಾಷ್ಟ್ರಕೂಟ ಸಾಮ್ರಾಜ್ಯದಲ್ಲಿ ನಡೆದ ವಿದ್ಯಮಾನಗಳು ಬೇರೆ ಕಡೆಗೂ ನಡೆದ ಬೆಳವಣಿಗೆಗಳನ್ನು ಪ್ರತಿನಿಧಿಸುವಂತಿವೆ. ಅಮೋಘವರ್ಷ ನೃಪತುಂಗನ ಕಾಲದಲ್ಲಿ ಕನ್ನಡ ನಾಡಿನ ಸೀಮೆಗಳು ಕಾವೇರಿಯಿಂದ ಗೋದಾವರಿಯವರೆಗೆ ವಿಸ್ತರಿಸಿದ್ದವಷ್ಟೇ? (ಇದನ್ನು ತೀರ ಅಕ್ಷರಶಃ ನಿಜವೆಂದು ಭಾವಿಸಬೇಕಾಗಿಲ್ಲ.) ನೃಪತುಂಗನ ಸಾಮ್ರಾಜ್ಯವೂ ಕನ್ನಡ ಭಾಷೆ ಬಳಕೆಯಲ್ಲಿದ್ದ ಈ ಭೂಭಾಗವನ್ನು ಆವರಿಸಿದ್ದಂತೆ ಕಾಣುತ್ತದೆ. ರಾಜ್ಯಾಡಳಿತದ ಅನುಕೂಲಕ್ಕಾಗಿ ನೃಪತುಂಗನಿಗೆ ಕನ್ನಡ ಭಾಷೆಯನ್ನು ಬಳಸಬೇಕಾಗಿತ್ತು. ಅದಕ್ಕಾಗಿ ಕನ್ನಡ ಭಾಷೆಯನ್ನು ಈ ಉದ್ದೇಶಕ್ಕೆ ತಕ್ಕುದಾಗಿ ಬೆಳೆಸಬೇಕಾದ ಅವಶ್ಯಕತೆಯಿತ್ತು. ಅದಕ್ಕೆ ರಾಜಾಶ್ರಯವನ್ನು ಒದಗಿಸಿ, ಎಲ್ಲ ರೀತಿಯ ಉತ್ತೇಜನ ನೀಡಿ, ಅದಕ್ಕೂ ‘ಮಾರ್ಗ’ದ ಪ್ರತಿಷ್ಠೆಯನ್ನು ಒದಗಿಸಬೇಕಾಗಿತ್ತು. ಅರ್ಥಾತ್, ಕನ್ನಡದಲ್ಲಿ ಆಗಲೇ ಆರಂಭವಾಗಿದ್ದ ಸೃಜನಶೀಲ ಕೃತಿರಚನೆಗೆ ಗೌರವದ ಸ್ಥಾನ ಕೊಟ್ಟು, ಅವುಗಳಿಗೆ ವಿಶಿಷ್ಟವಾದ ಕಾವ್ಯಮೀಮಾಂಸೆಯೊಂದನ್ನು ನಿರ್ಮಿಸಬೇಕಾಯಿತು. ಪ್ರಾದೇಶಿಕವಾಗಿ/ಭೌಗೋಳಿಕವಾಗಿ ಅನೇಕ ಉಪಭಾಷೆಗಳಲ್ಲಿ ಹಂಚಿಹೋಗಿದ್ದ ಕನ್ನಡಕ್ಕೆ ಒಂದು ಪ್ರಮಾಣ (Standard) ಭಾಷೆಯನ್ನು ಕೊಡಬೇಕಾಗಿತ್ತು. ಅದರ ಧ್ವನಿ, ಅಕ್ಷರ, ಸಂಧಿ, ಸಮಾಸ, ವಾಕ್ಯರಚನೆಗಳಿಗೆ ವ್ಯವಸ್ಥಿತ ವ್ಯಾಕರಣವನ್ನು ತಯಾರಿಸಬೇಕಿತ್ತು.

ಆ ಜವಾಬ್ಚಾರಿಯನ್ನು ಸ್ವತಃ ನೃಪತುಂಗನೇ ವಹಿಸಿಕೊಂಡ. ಶ್ರೀವಿಜಯನೆಂಬ ಕವಿಗೆ ಆಸ್ಥಾನದ ಗೌರವವನ್ನು ಕೊಟ್ಟು, ಅವನಿಂದ “ಕವಿರಾಜಮಾರ್ಗ” ಎಂಬ ಕೃತಿಯನ್ನು ಬರೆಸಿದ. ಈ ಕೃತಿಯನ್ನು ಬರೆದವನು ನೃಪತುಂಗನೋ ಶ್ರೀವಿಜಯನೋ ಎಂಬ ಬಗ್ಗೆ ವಿದ್ವಾಂಸರಲ್ಲಿ ಸಂದೇಹಗಳಿದ್ದರೂ, ಶ್ರೀವಿಜಯನೇ ಅದರ ಕರ್ತೃವೆಂದು ಒಪ್ಪಿದಂತಾಗಿದೆ. ಆದರೂ ಆ ಕೃತಿಯಲ್ಲಿ ನೃಪತುಂಗನ ಕೈವಾಡವೂ ಸಾಕಷ್ಟು ಇರುವಂತಿದೆ. ಹೀಗಾಗಿ ಈ ಕೃತಿ ನೃಪತುಂಗ -ಶ್ರೀವಿಜಯರ ಪರಸ್ಪರ ಚರ್ಚೆಯಿಂದ ಹುಟ್ಟಿಕೊಂಡಂತೆ ಕಾಣುತ್ತದೆ. ಹೀಗೆ ಇದೊಂದು ಸಂಯುಕ್ತ ಲೇಖನದ ಕೃತಿಯೆನ್ನಬಹುದು.

ಇಲ್ಲಿ ನೃಪತುಂಗನ ಪಾತ್ರ ಏಕೆ ಮುಖ್ಯವಾಗಿದೆಯೆಂದರೆ, ಈ ಕೃತಿಯ ಹಿಂದೆ ಒಂದು ರಾಜಕೀಯ ಇಚ್ಛಾಶಕ್ತಿಯ ಒತ್ತಡವೂ ಇದೆ. ಇದು ರಾಜಕೀಯ ಒತ್ತಡವಾಗಿರುವಂತೆ, ಭಾರತದ ದೇಶಭಾಷೆಗಳು ತಮ್ಮ ಅಸ್ಥಿತೆಯನ್ನು ಕಂಡುಕೊಳ್ಳಲು ನಡೆಸಿದ ಪ್ರಯತ್ನವಾಗಿಯೂ ಮುಖ್ಯವಾಗಿದೆ. ಭಾರತದ ಭಕ್ತಿಪಂಥದ ಕವಿಗಳು ದೇಶಭಾಷೆಗಳನ್ನು ಸ್ವೀಕರಿಸಿ ಕೃತಿರಚನೆ ಮಾಡಲು ತೊಡಗಿದ್ದರ ಬಹು ಮುಂಚೆಯೇ ಇಂಥ ಪ್ರಯತ್ನಗಳು ರಾಜಕೀಯ ಅಗತ್ಯವಾಗಿ ನಡೆದದ್ದನ್ನು ಇಲ್ಲಿ ಗಮನಿಸಬಹುದು.

“ಕವಿರಾಜಮಾರ್ಗ” ಭಾಮಹನ “ಕಾವ್ಯಾಲಂಕಾರ”ವನ್ನು ಸ್ವಲ್ಪಮಟ್ಟಿಗೆ, ದಂಡಿಯ “ಕಾವ್ಯಾದರ್ಶ”ವನ್ನು ಬಹುಮಟ್ಟಿಗೆ ಆಧರಿಸಿ ಬರೆದಿರುವ ಒಂದು ಅಲಂಕಾರಗ್ರಂಥ. ಆದರೆ ಇದು ‘ಸಂಸ್ಕೃತ ಕವಿರಾಜಮಾರ್ಗ’ವಲ್ಲ ‘ಕನ್ನಡ ಕವಿರಾಜಮಾರ್ಗ’ ಎಲ್ಲವನ್ನೂ ಕನ್ನಡದ ನೆಲೆಯಲ್ಲಿ ಮರುಪರಿಶೀಲನೆಗೆ ಒಳಪಡಿಸಿದ ವಿಶಿಷ್ಟ ಕೃತಿ. ತನ್ನ ಜಾಗೃತ ಪ್ರಜ್ಞೆಯನ್ನು ಸದಾ ಎಚ್ಚರದಲ್ಲಿಟ್ಟುಕೊಂಡು, ಕನ್ನಡವು ಸಂಸ್ಕೃತದಿಂದ ಹೇಗೆ ಭಿನ್ನವಾಗುತ್ತದೆ, ಕನ್ನಡದ ವೈಶಿಷ್ಟ್ಯಗಳೇನು ಎಂಬುದನ್ನು ದಾಖಲಿಸುತ್ತದೆ. ಸಂಸ್ಕೃತದಲ್ಲಿ ಇಲ್ಲದ, ಕನ್ನಡದಲ್ಲಿ ಮಾತ್ರ ಪ್ರಚಲಿತವಿರುವ ಚಿತ್ತಾಣ, ಬೆದಂಡೆಗಳಂಥ ದೇಶಿ ಕಾವ್ಯ ಪ್ರಕಾರಗಳನ್ನು ಎತ್ತಿ ಹೇಳಿ, ಅವುಗಳಿಗೆ ಅಧಿಕಾರದಿಂದ ಅಧಿಕೃತತೆಯನ್ನು ಒದಗಿಸುತ್ತದೆ. ಒಂದು ಉದಾಹರಣೆಯನ್ನು ಕೊಡುವದಾದರೆ, ಕನ್ನಡದ ಕವಿಗಳು ಸಂಸ್ಕೃತದ ಅಕ್ಷಕ ವೃತ್ತಗಳನ್ನು ಬಳಸಿದರೂ, ಅವುಗಳಿಗೆ ತಮ್ಮದೇ ನಿಯಮಗಳನ್ನು ಅಳವಡಿಸಿಕೊಂಡಿದ್ದಾರೆ. ಸಂಸ್ಕೃತದ ಅಕ್ಷರವೃತ್ತಗಳಲ್ಲಿಲ್ಲದ ಆದಿಪ್ರಾಸವನ್ನು ಕನ್ನಡ ಕವಿಗಳು ನಿಯತವಾಗಿ ಬಳಸುತ್ತಾರೆ ಮತ್ತು ಅದನ್ನು ಪಾಲಿಸಲೆಂದು ಸಂಸ್ಕೃತ ಛಂದಸ್ಸಿನಲ್ಲಿರಬೇಕಾದ ಯತಿಯನ್ನು ಉಲ್ಲಂಘಿಸಿದ್ದಾರೆ. ಇಂಥ ವಿಷಯಗಳನ್ನು ವಿವರಿಸುವದರ ಜೊತೆಗೆ, ಕವಿರಾಜಮಾರ್ಗಕಾರ ಇಂಥ ಭಿನ್ನತೆಗಳನ್ನು ಸಮರ್ಥಿಸುತ್ತಾನೆಂಬುದೇ ಮುಖ್ಯ ಸಂಗತಿ.

ಕನ್ನಡ ಸಾಹಿತ್ಯದಲ್ಲಿ ‘ಮಾರ್ಗದ’ದ ಪ್ರಸ್ತಾಪ ಮೊದಲು ಕಾಣಿಸಿಕೊಳ್ಳುವದು “ಕವಿರಾಜಮಾರ್ಗ”ದಲ್ಲಿ. ದಂಡಿಯ “ಕಾವ್ಯಾದರ್ಶನ”ವನ್ನು ಅನುಸರಿಸಿ ಕವಿರಾಜಮಾರ್ಗಕಾರನೂ ಕನ್ನಡ ಕಾವ್ಯದಲ್ಲಿ ಉತ್ತರ (ಗೌಡಿ) ಮತ್ತು ದಕ್ಷಿಣ (ವೈದರ್ಭಿ) ಮಾರ್ಗಗಳನ್ನು ಗುರುತಿಸಿ, ಅವುಗಳಿಗೆ ನಿರ್ದಿಷ್ಟ ಗುಣಗಳನ್ನು ಆರೋಪಿಸುತ್ತಾನೆ. ಗುಣಗಳನ್ನು ಹೀಗೆ ಪ್ರಾದೇಶಿಕವಾಗಿ ಹಂಚಿದ ದಂಡಿಯ ಕ್ರಮವೇ ಪ್ರಶ್ನೆಗೀಡಾಗಿದೆ. ಕನ್ನಡದಲ್ಲಿಯಂತೂ, “ಕವಿರಾಜಮಾರ್ಗ”ಕ್ಕಿಂತ ಹಿಂದಿನ ಕಾವ್ಯಗಳೇ ದೊರೆತಿಲ್ಲವಾದ್ದರಿಂದ ಕರ್ನಾಟಕದ ಉತ್ತರ-ದಕ್ಷಿಣ ಮಾರ್ಗಗಳನ್ನು ಗುರುತಿಸಿ, ಲಕ್ಷಣಗಳನ್ನು ಹೇಳುವುದಕ್ಕೆ ಆಧಾರಗಳು ಕಾಣುತ್ತಿಲ್ಲ. ಆದರೂ ಗುಣಗಳನ್ನು ಪ್ರಾದೇಶಿಕ ವೈಶಿಷ್ಟ್ಯಗಳೆಂದು ಗುರುತಿಸುವ ಈ ಕ್ರಮವೇ ಕುತೂಹಲಕಾರಿಯಾಗಿದೆ. ಇದು ದಂಡಿಯ ಅಂಧಾನುಕರಣೆಯ ಪರಿಣಾಮವೇ? ಅಥವಾ ಆ ಕಾಲದ ಕನ್ನಡ ದೇಶಭಾಷೆಗೆ ಮಾರ್ಗದ ಪ್ರತಿಜ್ಞೆಯನ್ನು ತಂದುಕೊಡಲು ಮಾಡಿದ ಪ್ರಯತ್ನವೇ? ಕವಿರಾಜಮಾರ್ಗದ ಅಂಧಾನುಕರಣಿಯಾಗಿರಲಿಲ್ಲ ಎಂಬುದಂತೂ ನಿಜ.

ಕವಿರಾಜಮಾರ್ಗಕಾರನ ಮೇಲೆ ಒಂದು ದೊಡ್ಡ ಜವಾಬ್ದಾರಿ ಇತ್ತು. ಕನ್ನಡಕ್ಕೆ ಮಾರ್ಗದ ಶ್ರೇಯಸ್ಸನ್ನು ತಂದುಕೊಡುವುದು ಒಂದಾದರೆ, ಕರ್ನಾಟಕದ ವಿಭಿನ್ನ ಪ್ರದೇಶಗಳಲ್ಲಿ ಪ್ರಚಲಿತವಿದ್ದ ಅಸಂಖ್ಯ ಉಪಭಾಷೆಗಳಲ್ಲಿ ಒಂದನ್ನು ಪ್ರಮಾಣಭಾಷೆಯನ್ನಾಗಿ ಗುರುತಿಸುವುದು ಇನ್ನೊಂದು. ಈಗಿನ ಉತ್ತರ ಕರ್ನಾಟಕದ ಒಕ್ಕುಂದ, ಪಟ್ಟದಕಲ್ಲು, ಕೊಪ್ಪಳ. ಲಕ್ಷ್ಮೇಶ್ವರ- ಈ ನಾಲ್ಕು ಊರುಗಳ ಬಿಂದುಗಳನ್ನು ಜೋಡಿಸುವ ಚತುಷ್ಕೋಣದ ನಡುವಿನ ಪ್ರದೇಶವನ್ನು ಅವನು ‘ತಿರುಳ್‌ಗನ್ನಡದ ನಾಡು’ ಎಂದು ಕರೆಯುತ್ತಾನೆ. ಹಲವು ಉಪಭಾಷೆಗಳಲ್ಲಿ ಈ ಪ್ರದೇಶದ ಉಪಭಾಷೆಯನ್ನೇ ಯಾಕೆ ‘ಪ್ರಮಾಣಭಾಷೆ’ ಎಂದು ಗುರುತಿಸಲಾಯಿತು ಎಂಬುದಕ್ಕೆ ಸ್ಪಷ್ಟ ಉತ್ತರ ಸಿಗುವುದಿಲ್ಲ. ಆ ಭಾಗ ರಾಜಕೀಯವಾಗಿ ರಾಷ್ಟ್ರಕೂಟ ಸಾಮ್ರಾಜ್ಯದ ಕೇಂದ್ರಭಾಗವಾಗಿತ್ತೆ – ಎಂದರೆ ಹಾಗೂ ಇಲ್ಲ. ಯಾಕೆಂದರೆ ರಾಷ್ಟ್ರಕೂಟ ಅರಸು ನೃಪತುಂಗನ ರಾಜಧಾನಿ ಈ ಪ್ರದೇಶದ ಹೊರಗೆ, ದೂರದ ಮಳಖೇಡದಲ್ಲಿತ್ತು. ಅದೇನಿದ್ದರೂ, ಕವಿರಾಜಮಾರ್ಗಕಾರನ ನಂತರ ಬಂದ ಪಂಪ, ಪೊನ್ನ, ರನ್ನ ಮೊದಲಾದ ಮಹತ್ವದ ಕವಿಗಳು ಅವನ ಮಾತನ್ನು ಸಮರ್ಥಿಸುವುದನ್ನು ನೋಡಿದರೆ ಅದರಲ್ಲಿ ಸತ್ಯವಿರುವಂತೆ ಕಾಣುತ್ತದೆ.

ಅಂತೂ, ಕನ್ನಡಕ್ಕೆ ‘ಮಾರ್ಗದ’ ವರ್ಚಸನ್ನು ತಂದುಕೊಡುವ ಕೆಲಸ “ಕವಿರಾಜಮಾರ್ಗ” ದಿಂದ ಆರಂಭವಾಗಿ ಪಂಪ, ಪೊನ್ನ, ರನ್ನರ ಕಾವ್ಯಗಳಲ್ಲಿ ಒಂದು ನೆಲೆ ಕಂಡಿತು. ಆದರೆ ಹೀಗೆ ‘ಮಾರ್ಗ’ವಾಗಿ ಸ್ಥಿರತೆಯನ್ನು ಪಡೆದದ್ದು ಹಳಗನ್ನಡ. ಈ ಹಳಗನ್ನಡವು ಪ್ರಾದೇಶಿಕ ಉಪಭಾಷೆಗಳಿಗಿಂತ ಧ್ವನಿಶಾಸ್ತ್ರ, ಶಬ್ದಕೋಶ, ವ್ಯಾಕರಣಗಳಲ್ಲಿ ಬಹಳ ಭಿನ್ನವಾದದ್ದು. ಇದು ಎಂದಾದರೂ ಎಲ್ಲಿಯಾದರೂ ಆಡುಭಾಷೆಯಾಗಿತ್ತೆಂದು ಹೇಳುವಂತಿಲ್ಲ. ಹೀಗಾಗಿ ಹಳಗನ್ನಡದ ಮತ್ತು ಪ್ರಾದೇಶಿಕ ಉಪಭಾಷೆಗಳ ನಡುವೆ ಡೈಗ್ಲಾಸಿಯ ಸ್ಥಿತಿ (Diglossia situation) ನಿರ್ಮಾಣವಾಯಿತು. ಕೇಶಿರಾಜ ತನ್ನ ಪ್ರಸಿದ್ಧ ವ್ಯಾಕರಣ ಗ್ರಂಥ “ಶಬ್ದಮಣಿದರ್ಪಣ”ವನ್ನು ಬರೆದದ್ದು ಹಳಗನ್ನಡ ಭಾಷೆಗೆ, ಪ್ರಾದೇಶಿಕ ಉಪಭಾಷೆಗಳಲ್ಲಿದ್ದ ರೂಪವೈವಿಧ್ಯಗಳು (Formal diversity) ಗೊಂದಲಗೆಡಿಸುವಷ್ಟು ಅಸ್ತವ್ಯಸ್ತವಾಗಿ ಕಂಡವು. ಅವುಗಳಿಗೆ ವ್ಯಾಕರಣವೇ ಇಲ್ಲ ಎನಿಸಿತು. ಅನೇಕ ರೂಪಗಳು ದೋಷಗಳೆಂದು ಪರಿಗಣಿತವಾದವು. ಅವುಗಳ ದೋಷಗಳನ್ನು ಎಣಿಸಿ ಹೇಳಲು ಆದಿಶೇಷನಿಗೂ ಬೇಸರವಾಗುತ್ತದೆಂದು “ಕವಿರಾಜಮಾರ್ಗ” ಹೇಳುತ್ತದೆ.

ಹತ್ತನೆಯ ಶತಮಾನದ ಹೊತ್ತಿಗೆ ಮಾರ್ಗಕಾವ್ಯದ ಪರಂಪರೆ ಕನ್ನಡದಲ್ಲಿ ಭದ್ರವಾಗಿ ಪ್ರತಿಷ್ಠಿತವಾಗಿತ್ತು. ಅದಕ್ಕೆ ತಾತ್ವಿಕ ಹಿನ್ನೆಲೆಯನ್ನು ಒದಗಿಸಿದವನು ಪಂಪ. ಪಂಪನಲ್ಲಿಯೇ ಮೊದಲ ಬಾರಿಗೆ ‘ಮಾರ್ಗ’ ಮತ್ತು ‘ದೇಸಿ’ ಪರಿಕಲ್ಪನೆಗಳ ಪ್ರಸ್ತಾಪ ಕಾಣಿಸಿಕೊಳ್ಳುತ್ತದೆ. ಹಳಗನ್ನಡದ ಮಾರ್ಗಪರಂಪರೆಯಲ್ಲಿ ಕೃತಿರಚನೆ ಮಾಡಿದರೂ ಅದಕ್ಕೇ ದೇಸಿಯ ಆಡುನುಡಿಯನ್ನು ಕಸಿಮಾಡಿಕೊಳ್ಳುವುದು ಅಗತ್ಯವೆಂದು ಪಂಪನಿಗೆ ಮನವರಿಕೆಯಾಗಿತ್ತು. “ದೇಸಿಯೊಳ್ ಪುಗುವುದು, ಪೊಕ್ಕಮಾರ್ಗದೊಳೆ ತಳ್ಳುದು, ತಳ್ತೊಡೆ ಕಾವ್ಯಬಂಧವೊಪ್ಪುಗುಂ” ಎಂಬುದು ಪಂಪನ ಪ್ರಸಿದ್ಧ ಹೇಳಿಕೆ. ದೇಸಿಯಲ್ಲಿ ಪ್ರವೇಶಿಸಿದರೂ ಅದರಲ್ಲೇ ನಿಲ್ಲುವುದು ಪಂಪನ ಉದ್ದೇಶವಲ್ಲ. ಮಾರ್ಗದಲ್ಲೇ ನಿಂತು ದೇಸಿಗೆ ಕೈಹಾಕುವದು, ದೇಸಿಯನ್ನು ಉಚಿತ ಸಂಸ್ಕಾರದೊಂದಿಗೆ ಮಾರ್ಗಕ್ಕೆ ಅಳವಡಿಸಿಕೊಳ್ಳುವದು ಅವನ ಆದರ್ಶ.

ದೇಸಿಯನ್ನು ಮಾರ್ಗಕ್ಕೆ ಅಳವಡಿಸಿಕೊಂಡ ಪ್ರಕ್ರಿಯೆಯನ್ನು ಪಂಪ ಮೂರು ಮುಖ್ಯ ನೆಲೆಗಳಲ್ಲಿ ನಿರ್ವಹಿಸುತ್ತಾನೆ:

೧. ಮೊದಲನೆಯದಾಗಿ, ಸಂಸ್ಕೃತ ಮಾರ್ಗಕಾವ್ಯದ “ಮಹಾಭಾರತ”ವನ್ನು ಕನ್ನಡದಲ್ಲಿ ಮರುಸೃಷ್ಟಿ ಮಾಡುವುದು. ಸಂಸ್ಕೃತದ ಎದುರು ಕನ್ನಡ ‘ದೇಸಿ’ಯಾದುದರಿಂದ ಒಂದು ರೀತಿಯಲ್ಲಿ ಇದು ದೇಸೀಕರಣ, ಇನ್ನೊಂದು ರೀತಿಯಲ್ಲಿ ಕನ್ನಡದಲ್ಲಿಯೇ ಮಾರ್ಗವನ್ನು ಸೃಷ್ಟಿಸಿಕೊಳ್ಳುವ ಪ್ರಯತ್ನ. ವ್ಯಾಸಭಾರತವನ್ನು ಹೆಚ್ಚು-ಕಡಿಮೆ ಸಮಗ್ರವಾಗಿ ದೇಸೀ ಭಾಷೆಗೆ ಅನುವಾದಿಸಿಕೊಂಡ ಮೊದಲ ಕವಿ ಪಂಪ (ಪಂಪನಿಗಿಂತ ನೂರು ವರ್ಷಗಳಷ್ಟು ಹಿಂದೆ ಪಲ್ಲವರಾಜ ನಂದಿವರ್ಮನ ಆಸ್ಥಾನ ಕವಿಯೊಬ್ಬ ಭಾರತವನ್ನು ತಮಿಳಿಗೆ ಅನುವಾದಿಸಿದ್ದನೆಂದು ತಿಳಿದುಬರುತ್ತದಾದರೂ ಅದರ ಪೂರ್ಣ ಪಠ್ಯ ಇನ್ನೂ ಸಿಕ್ಕಿಲ್ಲ.)

೨. ಪಂಪ ತನ್ನ ಕೃತಿಯನ್ನು ‘ಸಮಸ್ತ ಭಾರತ’ ಎಂದು ಕರೆದಿದ್ದಾನೆ. ಇದು ವ್ಯಾಸಭಾರತದ ಸಂಪೂರ್ಣ ಅನುವಾದವಲ್ಲ. ಸಂಕ್ಷಿಪ್ತ ಆದರೂ ಸಮಗ್ರವಾದದ್ದು. ಇದರ ಬಹಳ ಮುಖ್ಯ ವೈಶಿಷ್ಟ್ಯವೆಂದರೆ ಭಾರತ ಕಥೆಯ ಸ್ಥಳೀಕರಣ, ಕನ್ನಡ ನೆಲದ ಕಥೆಯನ್ನಾಗಿ ಪರಿವರ್ತಿಸುವ ಪ್ರಯತ್ನ. ಇಲ್ಲಿ ಮಹಾಭಾರತದ ನಾಯಕ ಅರ್ಜುನ. ಈ ಅರ್ಜುನನೊಂದಿಗೆ ಪಂಪ ತನ್ನ ಆಶ್ರಯದಾತನಾದ ಅರಿಕೇಸರಿಯನ್ನು ಸಮೀಕರಿಸಿಕೊಂಡು ಕಥೆಯನ್ನು ತನ್ನ ಪ್ರದೇಶಕ್ಕೆ ಅಷ್ಟೇ ಅಲ್ಲ, ತನ್ನ ಕಾಲಕ್ಕೂ ತಂದುಕೊಳ್ಳುತ್ತಾನೆ. ಅದಕ್ಕಾಗಿಯೇ ಪಂಪನ ಭಾರತ “ವಿಕ್ರಮಾರ್ಜುನವಿಜಯ” ವಾಗಿರುವುದು. ಈ ಕ್ರಮವನ್ನು ಅನೌಚಿತ್ಯ ಎಂದು ಕೆಲವು ವಿಮರ್ಶಕರು ಟೀಕಿಸುದ್ದುಂಟು. ಆದರೆ ಈಚಿನ ಸಾಂಸ್ಕೃತಿಕ ಅಧ್ಯಯನಗಳ ಹಿನ್ನೆಲೆಯಲ್ಲಿ ಇದಕ್ಕೆ ಹೊಸ ಅರ್ಥ ಬಂದಿದೆ. ಇದು ಒಬ್ಬ ಸಾಮಾನ್ಯ ಸಾಮಂತ ದೊರೆಯನ್ನು ವೈಭವೀಕರಿಸುವ ಮಾದರಿಯಲ್ಲ; ಪುರಾಣಕಥೆಯಲ್ಲಿ ಸಮಕಾಲೀನ ರಾಜಕೀಯವನ್ನು ಚಿತ್ರಿಸಲು ರೂಪಿಸಿಕೊಂಡ ಹೊಸ ತಂತ್ರ.

೩. ಮೂರನೆಯದಾಗಿ, ಮಾರ್ಗವನ್ನು ಅನುಸರಿಸಿಯೂ ಪಂಪ ದೇಸಿಯತ್ತ ಹೊರಳುವ ದಿಟ್ಟತನ ತೋರುತ್ತಾನೆ. ಜಡವಾಗುತ್ತ ಹೋಗುವ ‘ಮಾರ್ಗ’ವನ್ನು ಆಡುಮಾತಿನ ನುಡಿಗಟ್ಟು ಮತ್ತು ಜನಪದರ ರೀತಿ-ನೀತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಜೀವಂತಗೊಳಿಸಬೇಕಾದ ಅವಶ್ಯಕತೆಯನ್ನು ಪಂಪ ಮನಗಂಡಿದ್ದಾನೆ. ಪಂಪನ ದೇಸಿ ಅನೇಕ ರೀತಿಯಿಂದ ವಿಮರ್ಶಕರ ಗಮನ ಸೆಳೆದಿದೆ.

ಪದ್ಯ ಮತ್ತು ಗದ್ಯಗಳನ್ನು ಇದೇ ಸಮನ್ವಯ ತತ್ವದಲ್ಲಿ ಬಳಸಿಕೊಂಡ ಪಂಪ ಚಂಪೂಕಾವ್ಯದ ಹೊಸ ಮಾದರಿಗೂ ಕಾರಣನಾದ.

ಹೀಗೆ, ದೇಶಭಾಷೆಯಾದ ಕನ್ನಡವನ್ನು ಮಾರ್ಗದ ನೆಲೆಯಲ್ಲಿ ಪುನರ್ರಚಿಸಿಕೊಳ್ಳುವ ಪ್ರಯತ್ನ ಪಂಪನಲ್ಲಿ ಬಹಳ ಸಂಕೀರ್ಣವಾಗಿದೆ. ಈ ಕ್ರಮ ಮುಂದಿನ ಅನೇಕ ಕವಿಗಳಿಗೂ ಆದರ್ಶವಾಯಿತು.

ಇಲ್ಲಿಂದ ಹನ್ನೆರಡನೆಯ ಶತಮಾನದಲ್ಲಿ ಒಂದು ಕ್ರಾಂತಿಕಾರಕ ಬದಲಾವಣೆ ಕಾಣಿಸಿಕೊಂಡಿತು. ಸಂಸ್ಕೃತ-ಪ್ರಾಕೃತಗಳ ಮಾರ್ಗಧರ್ಮಗಳಿಗೆ ಎದುರಾಗಿ, ಕರ್ನಾಟಕದಲ್ಲಿ ಸ್ವೀಕರಿಸಿತು. ಅದು, ಧರ್ಮಶಾಸ್ತ್ರೀಯವೆನ್ನಬಹುದಾದ (Theological) ಸಾಹಿತ್ಯಕ್ಕೆ ಅಷ್ಟಾಗಿ ಗಮನ ಕೊಡದೆ, ಚಂಪೂಗಿಂತ, ಪ್ರಚಲಿತವಿದ್ದ ಯಾವುದೇ ಸಾಹಿತ್ಯಪ್ರಕಾರಕ್ಕಿಂತ ತೀರ ಭಿನ್ನವಾದ ‘ವಚನ’ ಎಂಬ ಹೊಸ ಸಾಹಿತ್ಯಪ್ರಕಾರವನ್ನು ಹುಟ್ಟುಹಾಕಿತು. ಛಂದಸ್ಸು, ಕಥನಾತ್ಮಕ ರೂಪಗಳನ್ನು ಕೈಬಿಟ್ಟು, ಮುಕ್ತಛಂದಸ್ಸಿನ ಲಘುಭಾವಗೀತ ಪ್ರಕಾರವೊಂದನ್ನು ಬೆಳೆಸಿತು. ಇದರ ಭಾಷೆ ಚಂಪೂವಿನ ಮಾರ್ಗಭಾಷೆಗಿಂತ ತೀರಾ ಭಿನ್ನವಾದದ್ದು ಮತ್ತು ಇಂದಿನ ಆಡುಮಾತಿಗೆ ಬಹಳ ಹತ್ತಿರವಾದದ್ದು. ಇದು ಉದ್ದೇಶಪೂರ್ವಕವಾಗಿ ‘ಸಾಹಿತ್ಯ’ವೆಂದು ಸೃಷ್ಟಿಯಾದದ್ದಲ್ಲ, ಆ ಕಾಲದ ರಾಜಕೀಯ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಒತ್ತಡಗಳಲ್ಲಿ ಹುಟ್ಟಿಕೊಂಡದ್ದು. ಇಂದು ನಾವು ಅದನ್ನು ಕನ್ನಡದ ವಿಶಿಷ್ಟ ಮತ್ತು ಶ್ರೇಷ್ಥ ಕಾವ್ಯಸಾಹಿತ್ಯ ಎಂದು ಅಭ್ಯಸಿಸುತ್ತೇವೆ. ಸಾಹಿತ್ಯಕವಾಗಿ ವಚನಸಾಹಿತ್ಯದ ಮುಖ್ಯ ಸಾಧನೆಯೆಂದರೆ, ಚಂಪೂಮಾರ್ಗದ ಸಂಸ್ಕೃತಭೂಯಿಷ್ಠ ಅಖಿಲಭಾರತ ಕಥಾನಾತ್ಮಕ ಚೌಕಟ್ಟನ್ನು ಮುರಿದದ್ದು ಮತ್ತು ದೇಸೀ ಮಾದರಿಯ ಹೊಸ ಸಾಹಿತ್ಯಪ್ರಕಾರವೊಂದನ್ನು ಸೃಷ್ಟಿಸಿಕೊಂಡದ್ದು.

ಈ ಹೊಸ ರಾಜಕೀಯ-ಧಾರ್ಮಿಕ-ಸಾಮಾಜಿಕ ಸಂದರ್ಭಗಳಲ್ಲಿ ಕನ್ನಡದ ಮೇಲಿನ ಸಂಸ್ಕೃತದ ಮತ್ತು ಮಾರ್ಗಕಾವ್ಯದ ಅಧಿಕಾರ‍ (Hegemony) ದುರ್ಬಲವಾಯಿತು. ಕನ್ನಡ ಭಾಷೆ ಹಳಗನ್ನಡದಿಂದ ನಡುಗನ್ನಡಕ್ಕೆ ಪರಿವರ್ತನೆಯಾಯಿತು.

ಮುಂದಿನ ಶತಮಾನಗಳ ವಚನಗಳ ರಚನೆ ಕಡಿಮೆಯಾದರೂ ಅವುಗಳ ಪ್ರಭಾವ ಹಲವು ರೂಪಗಳಲ್ಲಿ ಪ್ರಕಟವಾಯಿತು. ಮುಖ್ಯವಾಗಿ ಕನ್ನಡವು ತನ್ನ ಅಸ್ಮಿತೆಯನ್ನು ಎಂದಿಲ್ಲದಂತೆ ಸ್ಥಾಪಿಸಿಕೊಳ್ಳಲು ವಚನಗಳು ಕಾರಣವಾದವು. ಇದೇ ಕಾವಿನಲ್ಲಿಯೇ ಹರಿಹರ ಶುದ್ಧ ದೇಸೀಯಾದ ರಗಳೆ ಮಾತ್ರಾ ಛಂದಸ್ಸನ್ನು ರೂಢಿಸಿಕೊಂಡು, ಶರಣರ ಕಥನಗಳಿಗೆ ಕಿರುಕಥನಕಾವ್ಯದ ಹೊಸ ರೂಪವನ್ನು ಬೆಳಕಿಗೆ ತಂದ. ಈ ಪ್ರಕಾರದಲ್ಲಿ ಶರಣರ ಜೀವನಚರಿತ್ರೆಗಳನ್ನು ಹೇಳುವ ಹೊಸ ವಸ್ತು-ತಂತ್ರಗಳನ್ನು ಕಂಡುಕೊಂಡ. ಅವನ ಪ್ರಯೋಗಗಳಿಂದ ಧೈರ್ಯಪಡೆದ ಅವನ ಅಳಿಯ ರಾಘವಾಂಕ ಷಟ್ಪದಿಯನ್ನು ಮಾಧ್ಯಮವಾಗಿ ಬಳಸಿಕೊಂಡು ಕಥನಕಾವ್ಯದ ಮಹಾಕಾವ್ಯಪರಂಪರೆಗೆ ಹೊಸ ತಿರುವು ಕೊಟ್ಟ. ಅಲ್ಲಿಗೆ ನಡುಗನ್ನಡವೇ ಮಾರ್ಗವಾಗಿ ಪ್ರತಿಷ್ಟಿತವಾಯಿತು. ಮುಂದೆ ತಿರುವು ಕೊಟ್ಟ, ಮುಂದೆ ಬಂದ ಕುಮಾರವ್ಯಾಸ, ಲಕ್ಷ್ಮೀಶ, ನರಹರಿ ಮೊದಲಾದವರು ಈ ಮಾರ್ಗವನ್ನು ಮುಂದುವರಿಸಿದರು. ಈ ಕಾಲದಲ್ಲೂ ದೇಸಿ ಆಡುನುಡಿಯೊಂದಿಗೆ, ಸಮಕಾಲೀನ ರೀತಿ-ನೀತಿಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಪ್ರಯತ್ನಗಳು ನಡೆದೇ ಇದ್ದವು. ಕುಮಾರವ್ಯಾಸನ “ಕರ್ನಾಟ ಭಾರತ ಕಥಾಮಂಜರಿ” ಭಾರತದ ಕಥೆಗೆ ಸ್ಥಳೀಯ ಆವರಣವನ್ನು ನಿರ್ಮಿಸುವಲ್ಲಿ ಸಾಧಿಸಿದ ಯಶಸ್ಸು ಪಂಪನಿಗೆ ಹೋಲಿಸಬಹುದಾದದ್ದು. ಇಲ್ಲಿಯ ಸನ್ನಿವೇಶ, ಪಾತ್ರ, ಭಾಷೆಗಳು ದೇಸೀಯ ಪಡಿಯಚ್ಚಿನಲ್ಲಿ ಹಾಕಿ ತೆಗೆದಂಥವು. ಮಾರ್ಗದ ಬಿಗುನಿಂದ ಮುಕ್ತವಾಗಿ, ಇಲ್ಲಿ ಕಥೆ ಸಹಜಗತಿಯಿಂದ ನಿರರ್ಗಳವಾಗಿ ಓಡುತ್ತದೆ. ಪಾತ್ರಗಳು ನಮ್ಮ ಸುತ್ತು-ಮುತ್ತಲಿನ ಜನಗಳಷ್ಟು ಪರಿಚಿತರಾಗುತ್ತಾರೆ. ಇಂದು ಕರ್ನಾಟಕದ ಜನಮಾನಸದಲ್ಲಿ ಆತ್ಮೀಯವಾಗಿ ನಿಂತಿರುವುದು ಕುಮಾರವ್ಯಾಸ ಭಾರತ, ವ್ಯಾಸನದೂ ಅಲ್ಲ. ಪಂಪನದೂ ಅಲ್ಲ.

ಜನಪದ ಕಾವ್ಯದಲ್ಲಿ ಬಳಕೆಯಲ್ಲಿದ್ದ ಸಾಂಗತ್ಯ, ತ್ರಿಪದಿಗಳಂಥ ಅಂಶಗಣ ಪ್ರಧಾನವಾದ ಛಂದೋರೂಪಗಳು ಮಾರ್ಗದ ಗೌರವ ಪಡೆದದ್ದು ಇದೇ ಕಾಲದಲ್ಲಿ ರತ್ನಾಕರವರ್ಣಿ ಸಾಂಗತ್ಯದ ಛಂದಸ್ಸಿನಲ್ಲೇ “ಭರತೇಶವೈಭವ” ದಂಥ ಮಹಾಕಾವ್ಯವನ್ನು ಬರೆದದ್ದು ಇದಕ್ಕೊಂದು ಮಹತ್ವದ ಉದಾಹರಣೆ.

ಈ ನಡುವೆ ‘ಹಾಡು’ಗಳ ಶುದ್ಧ ದೇಸೀ ಪರಂಪರೆಯೊಂದು ಸದ್ದಿಲ್ಲದೆ ಬೆಳೆಯತೊಡಗಿತು. ಹನ್ನೆರಡನೆಯ ಶತಮಾನದ ಶರಣರು ‘ಸ್ವರವಚನ’ಗಳೆಂದು, ಹದಿನೈದು -ಹದಿನಾರನೆಯ ಶತಮಾನಗಳ ಹರಿದಾಸರು ‘ಕೀರ್ತನೆ’ಗಳೆಂದು ‘ಹಾಡಿ’ನ ಹೊಸ ರೂಪವೊಂದನ್ನು ಬಳಕೆಗೆ ತಂದರು. ಅಂಶೀ ಛಂದಸ್ಸನ್ನು, ಸಂಗೀತವನ್ನು ಆಧಾರವಾಗಿಟ್ಟುಕೊಂಡ ರಚನೆಗಳಿವು. ಹದಿನೆಂಟು-ಹತ್ತೊಂಭತ್ತನೆಯ ಶತಮಾನಗಳಲ್ಲಿ ‘ತತ್ವಪದಗಳು’ ಎಂಬ ಹೆಸರು ಪಡೆದುಕೊಂಡ ಇಂಥ ಹಾಡುಗಳ ರಚನೆಯಲ್ಲಿ ಮುಸ್ಲಿಮರನ್ನು ಒಳಗೊಂಡು ಸಮಾಜದ ಎಲ್ಲ ಜಾತಿ-ವರ್ಗಗಳು ಭಾಗವಹಿಸಿದ್ದು ಒಂದು ಅಪರೂಪದ ಸಂಗತಿ. ಇಲ್ಲಿ ದೇಸಿಯೇ ಒಂದು ಸ್ವತಂತ್ರ ರೂಪವಾಗಿ ಬೆಳೆಯುವ ಕ್ರಮ ಕಾಣುತ್ತದೆ. ವೀರಶೈವ, ಸೂಫಿ, ನಾಥ, ವೈದಿಕ ಸಂಪ್ರದಾಯಗಳೆಲ್ಲ ಒಟ್ಟಿಗೆ ಯೋಚನೆ ಮಾಡುತ್ತವೆ. ಈ ಪರಂಪರೆಯನ್ನು ಕಟ್ಟಿ ಬೆಳೆಸಿದವರು ಹೆಚ್ಚಾಗಿ ಅನಕ್ಷರಸ್ಥರಾದ ಸಾಮಾನ್ಯ ಜನ. ಕರ್ನಾಟಕದ ಮೂಲೆ-ಮೂಲೆಗಳಲ್ಲೂ (ಬಹುಶಃ ಉತ್ತರ-ದಕ್ಷಿಣ ಕನ್ನಡ ಜಿಲ್ಲೆಗಳನ್ನು ಬಿಟ್ಟು) ಜನಪದ ನುಡಿಗಟ್ಟಿನಲ್ಲಿ ಕನ್ನಡದ ವಿವಿಧ ಉಪಭಾಷೆಗಳಲ್ಲಿ ಇಂಥ ಹಾಡುಗಳನ್ನು ರಚಿಸಿ ಹಾಡಿಕೊಳ್ಳುವ ಭಜನಾಮೇಳಗಳನ್ನು ಕಾಣಬಹುದು. ತೀರ ಇತ್ತೀಚಿನವರೆಗೆ ಸಾಹಿತ್ಯಿಕ ವಲಯಗಳು ಈ ಹಾಡುಗಳ ಬಗ್ಗೆ ಲಕ್ಷ್ಯವನ್ನು ಕೊಟ್ಟಿರಲಿಲ್ಲ. ಈಗ ಅವುಗಳನ್ನು ಸಂಗ್ರಹಿಸಿ ಪ್ರಕಟಿಸುವ ಕಾರ್ಯ ಭರದಿಂದ ನಡೆದಿದೆ. ಶೈಕ್ಷಣಿಕ ಕ್ಷೇತ್ರದ ವಿದ್ವಾಂಸರು ಅವುಗಳ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಒಳ ಅರ್ಥಗಳನ್ನು ಅಭ್ಯಾಸ ಮಾಡತೊಡಗಿದ್ದಾರೆ. ಸಾಹಿತ್ಯವೆಂದೂ ಅವುಗಳಿಗೆ ಮನ್ನಣೆ ದೊರೆಯತೊಡಗಿದೆ. ಶಿಶುನಾಳ ಶರೀಫ, ಕಡಕೋಳ ಮಹಾದೇವಪ್ಪ ಮೊದಲಾದವರಿಗೆ ಸಾಹಿತ್ಯದ ಮನ್ನಣೆಯೂ ಸಿಕ್ಕಿದೆ. ವಿಶೇಷವಾಗಿ, ಕರ್ನಾಟಕದ ಆ ಕಾಲದ ರಾಜಕೀಯ-ಧಾರ್ಮಿಕ ಒತ್ತಡಗಳಿಗೆ ತಮ್ಮದೇ ರೀತಿಯ ಪ್ರತಿರೋಧವನ್ನು ರೂಪಿಸಿಕೊಂಡದ್ದು ತತ್ವಪದಕಾರರ ಮಹತ್ವದ ಸಾಧನೆಯಾಗಿದೆ. ಇದು ಇಂದಿನ ಜಾಗತೀಕರಣದ ಹಲ್ಲೆಯನ್ನು ಎದುರಿಸಲು ಒಂದು ಮಾದರಿಯಾಗಿ ಮುಖ್ಯವಾಗಿದೆ.

ಆದಾಗ್ಯೂ, ಲಿಖಿತ ಕನ್ನಡ ಮತ್ತು ಆಡುಮಾತಿನ ನಡುವಿನ ಡೈಗ್ಲಾಸಿಯದ ಸಂದರ್ಭ ಇನ್ನೂ ಮುಂದುವರಿದಿದೆ. ಒಂದು ಕಾಲಕ್ಕೆ ಹಳಗನ್ನಡ ಭಾಷೆ ಅಶಿಕ್ಷಿತ ಜನರಿಗೆ ಎಷ್ಟೂ ಅರ್ಥವಾಗದಂಥ ಸ್ಥಿತಿ ಇತ್ತು. ನಡುಗನ್ನಡದ ಹೊತ್ತಿಗೆ ಇದು ಸ್ವಲ್ಪ ತಿಳಿಯಾದರೂ ಪಂಡಿತರು ಇಂಥ ಕಾವ್ಯಗಳನ್ನು ಓದಿ ಹೇಳಿ ಅರ್ಥವನ್ನು ವಿವರಿಸುತ್ತಿದ್ದರು. ಈ ಕೆಲಸಕ್ಕಾಗಿ ಪ್ರವಚನಕಾರ ಒಂದು ವರ್ಗವೇ ನಿರ್ಮಾಣವಾಯಿತು. ಕಾಲಕಾಲಕ್ಕೆ ಲಿಖಿತ ಕನ್ನಡವನ್ನು ಆಡುಮಾತಿಗೆ ಹತ್ತಿರ ತರುವ  ಪ್ರಯತ್ನಗಳು ನಡೆದರೂ ಅವೆರಡರ ನಡುವಿನ ಅಂತರ ಉಳಿದೇ ಇತ್ತು. ಈಗಲೂ ಇದೆ. ಆಧುನಿಕ ಕನ್ನಡ ಸಾಹಿತ್ಯ ಆರಂಭದಿಂದಲೂ ಈ ಸಮಸ್ಯೆಯನ್ನು ಎದುರಿಸಬೇಕಾಯಿತು. ಈ ಸಂದರ್ಭದಲ್ಲಿದ್ದ ಒಂದು ಒಳ್ಳೆಯ ಅಂಶವೆಂದರೆ, ಲಿಖಿತ ಮತ್ತು ಆಡುಮಾತಿನ ಕನ್ನಡಗಳ ವರ್ಣ-ಶಬ್ದ-ವಾಕ್ಯವ್ಯವಸ್ಥೆಗಳಲ್ಲಿ ಗಮನಾರ್ಹವಾದ ವ್ಯತ್ಯಾಸಗಳಿದ್ದರೂ ಅವುಗಳ ನಡುವಿನ ಪರಸ್ಪರ ಅರ್ಥವಾಗುವಿಕೆ ಬೆಳೆಯುತ್ತಲೇ ಇತ್ತು. ಇವತ್ತು ಒಬ್ಬ ಅಶಿಕ್ಷಿತ ಹಳ್ಳಿಗನೂ ಆಧುನಿಕ ಕನ್ನಡದ ಗದ್ಯ ಬರಹವನ್ನು ಯಾರಾದರೂ ಓದಿ ಹೇಳಿದರೆ ಸಾಮಾನ್ಯವಾಗಿ ಅರ್ಥಮಾಡಿಕೊಳ್ಳಬಲ್ಲ.

ಇಪ್ಪತ್ತನೆ ಶತಮಾನದಲ್ಲಿ, ಭಾರತದ ಭಾಷೆಗಳಂತೆ ಕನ್ನಡವೂ ಇಂಗ್ಲಿಷ್ ಸಾಹಿತ್ಯ ಪ್ರಭಾವಕ್ಕೆ ಒಳಗಾಯಿತು. ಅನೇಕ ಸಾಹಿತ್ಯ ಪ್ರಕಾರಗಳನ್ನು ಆಮದು ಮಾಡಿಕೊಂಡಿತು. ಆದರೆ ಆಮದು ಸಾಕಷ್ಟು ಎಚ್ಚರಿಕೆಯದಾಗಿತ್ತು. ಭಾವಗೀತೆ ಇಂಗ್ಲೀಷಿನಿಂದ ಬಂದಿದ್ದರೂ ಅದು ಕನ್ನಡ ಸಾಹಿತ್ಯದಲ್ಲಿದ್ದ ವಚನ, ಕೀರ್ತನೆಗಳಲ್ಲಿ ತನ್ನ ಪೂರ್ವಜರನ್ನು ಗುರುತಿಸಿಕೊಳ್ಳುವುದನ್ನು ಮರೆಯಲಿಲ್ಲ. ಶೇಕ್ಸ್‌ಪಿಯರ್‌ನ ದುರಂತ ನಾಟಕಗಳು ಕನ್ನಡದಲ್ಲಿ ಸುಖಾಂತವಾಗಿ ರೂಪಾಂತರಗೊಂಡವು. ಸಣ್ಣಕತೆಯಲ್ಲಿ ಶ್ರೀನಿವಾಸರು ಭಾರತೀಯ ನಿರೂಪಣಾ ತಂತ್ರವನ್ನು ಹೊಸ ಎಚ್ಚರದಿಂದ ನಿಯೋಗಾತ್ಮಕ (functional) ವಾಗಿ ಬಳಸಿಕೊಂಡರು.  ಬಹುಮುಖಿ ದೃಷ್ಟಿಕೋನದಿಂದ ಕಥೆ ಹೇಳುವ ಕ್ರಮವನ್ನು ರೂಢಿಸಿಕೊಂಡರು.

ಕನ್ನಡದಲ್ಲಿ ಅನೇಕ ಭೌಗೋಳಿಕ ಮತ್ತು ಜಾತ್ಯಾಧಾರಿತ ಉಪಭಾಷೆಗಳಿದ್ದರೂ, ತುಂಗಭದ್ರಾ ನದಿಯ ಆಚೆ-ಈಚಿನ ಎರಡು ಉಪಭಾಷೆಗಳು ಸಾಮಾಜಿಕವಾಗಿ, ಸಾಹಿತ್ಯಿಕವಾಗಿ,  ರಾಜಕೀಯವಾಗಿ ಮಹತ್ವ ಪಡೆದವು. ಒಂದು ಮೈಸೂರು ಕನ್ನಡ, ಇನ್ನೊಂದು ಉತ್ತರ ಕರ್ನಾಟಕದ ಕನ್ನಡ. ಇದಕ್ಕೆ ಐತಿಹಾಸಿಕ ಕಾರಣಗಳೂ ಇದ್ದವು. ಇದು ’ಕವಿರಾಜಮಾರ್ಗ’ ಹೆಸರಿಸಿದ ಉತ್ತರ-ದಕ್ಷಿಣ ಶೈಲಿಗಳನ್ನು ನೆನಪಿಸುತ್ತದಾದರೂ, ಅಲ್ಲಿ ಸೂಚಿಸಿರುವ ಗುಣಗಳು ಇಲ್ಲಿ ತಾಳೆಯಾಗುವುದಿಲ್ಲ. ದಕ್ಷಿಣ ಕರ್ನಾಟಕ ಮೈಸೂರನ್ನು ರಾಜಧಾನಿಯನ್ನಾಗಿ ಇರಿಸಿಕೊಂಡು, ಅರಸರ ಆಶ್ರಯವನ್ನು ಪಡೆದುಕೊಂಡಿತ್ತು. ಮೈಸೂರು ಅರಸರು ಸಂಸ್ಕೃತಿಪ್ರಿಯರಾಗಿದ್ದರಿಂದ ಸಾಹಿತ್ಯರಚನೆಯನ್ನು ಪ್ರೋತ್ಸಾಹಿಸಿದರು. ಅನೇಕ ಸಂಸ್ಕೃತ ಅಭಿಜಾತ ಕೃತಿಗಳು ಕನ್ನಡಕ್ಕೆ ಅನುವಾದವಾದವು. ಉತ್ತರ ಕರ್ನಾಟಕಕ್ಕೆ ಅಂಥ ರಾಜಾಶ್ರಯವಿರಲಿಲ್ಲ. ಒಂದು ಕಡೆ ನಿಜಾಮನಿಂದ, ಇನ್ನೊಂದು ಕಡೆ ಮರಾಠರಿಂದ ತೀವ್ರ ಆಕ್ರಮಣವನ್ನು ಎದುರಿಸಿತು. ಆದರೂ ಮುಂಬಯಿ ಕರ್ನಾಟಕದ ಜನ ಬಹಳ ಬೇಗ ಎಚ್ಚೆತ್ತು ತಮ್ಮ ಭಾಷೆಯ ಅಸ್ಮಿತೆಯನ್ನು ಕಾಪಾಡಿಕೊಳ್ಳಲು ತೀವ್ರ ಸ್ವರೂಪದ ಆಂದೋಲನವನ್ನೇ ನಡೆಸಬೇಕಾಯಿತು. ಪರಿಣಾಮವಾಗಿ ಈ ಭಾಗದ ಜನ ಕನ್ನಡ ಸಾಹಿತ್ಯ ಪರಂಪರೆಯ ಬಗ್ಗೆ ಮತ್ತು ತಮ್ಮ ಭಾಷೆಯ ಬಗ್ಗೆ ವಿಶೇಷ ಅಭಿಮಾನವನ್ನು ತಳೆದರು.

ಕನ್ನಡದ ಈ ಎರಡು ಮುಖ್ಯ ಉಪಭಾಷೆಗಳು ಅನೇಕ ರೀತಿಯಿಂದ ಭಿನ್ನವಾಗಿದ್ದರೂ ಪರಸ್ಪರ ಪೂರಕವಾಗಿವೆ. ಮೈಸೂರು ಕನ್ನಡ ಸೌಮ್ಯ, ಸುಸಂಸ್ಕೃತ, ಹೆಣ್ಣಿನಂತೆ ಕೋಮಲ, ಲಿಖಿತ ಭಾಷೆಗೆ ಸಮೀಪವಾಗಿದ್ದರೆ, ಉತ್ತರದ ಕನ್ನಡ ಶಕ್ತಿಶಾಲಿ, ಗ್ರಾಮ್ಯ, ಗಂಡಸಿನಂತೆ ಒರಟು ಮತ್ತು ಲಿಖಿತ ಭಾಷೆಗಿಂತ ಬಹಳ ಭಿನ್ನ. ಹಲವು ಆಡಳಿತ ಘಟಕಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡನಾಡನ್ನು ರಾಜಕೀಯವಾಗಿ ಒಂದುಗೂಡಿಸಲು ಕನ್ನಡದ ಹಲವು ಉಪಭಾಷೆಗಳನ್ನು ಪರಸ್ಪರ ಸಮೀಪಕ್ಕೆ ತರುವುದು ಅವಶ್ಯವಾಗಿತ್ತು. ಅದರಿಂದಾಗಿ, ಅನೇಕ ಲೇಖಕರು ಎಲ್ಲ ಪ್ರದೇಶಗಳ ಎಲ್ಲ ಉಪಭಾಷೆಗಳ ಜನರಿಗೂ ಅರ್ಥವಾಗುವಂಥ, ಉಪಭಾಷೆಗಳ ಲಕ್ಷಣಗಳಿಂದ ಮುಕ್ತವಾಗಿರುವಂಥ ತಟಸ್ಥ ಕನ್ನಡದಲ್ಲಿ ಬರೆಯುವುದು ಅಗತ್ಯವೆಂದು ಭಾವಿಸಿದರು. ಅತ್ಯಂತ ಕಡಿಮೆ ಸಂಖ್ಯೆಯ ಜನ ಮಾತಾಡುವ ಕೋಟ ಪ್ರದೇಶದ ಕನ್ನಡದಲ್ಲಿ ಬರೆಯುವದು ವ್ಯಾವಹಾರಿಕವಲ್ಲವೆಂದು ಶಿವರಾಮ ಕಾರಂತರಂಥವರು ಭಾವಿಸಿದರು. ಉತ್ತರ ಕರ್ನಾಟಕದ ಆಡುನುಡಿಯನ್ನು ಅತ್ಯಂತ ಶಕ್ತಿಪೂರ್ಣವಾಗಿ ವೈವಿಧ್ಯಮಯವಾಗಿ ಬಳಸಿ ಹೊಸದೊಂದು ಶೈಲಿಯನ್ನೇ  ನಿರ್ಮಿಸಿದ ಬೇಂದ್ರೆಯವರಿಗೆ ಸಹ ಎಲ್ಲರಿಗೂ ಅರ್ಥವಾಗುವಂಥ ಕನ್ನಡದ ಅವಶ್ಯಕತೆ ಇದೆ ಎನಿಸಿತು. ತಮ್ಮ ಮೊದಲ ಸಂಕಲನವಾದ “ಗರಿ”ಯ ‘ಸಹೃದಯರಿಗೆ’ ಎಂಬ ಮಾತಿನಲ್ಲಿ “ಪಂಡಿತ ಪಾಮರ, ಬಡವ ಬಲ್ಲಿದ, ನಾಗರಿಕ ನಾಡಾಡಿ ಎಂಬ ಭೇದವನ್ನಲ್ಲಗಳೆದು ಕನ್ನಡ ಜೀವಾಳವು ಕನ್ನಡಿಗರಿಗಾಗಿ ಕನ್ನಡಿಸಲ್ಪಡಬೇಕಾಗಿದೆ… ಮೈಸೂರು, ಧಾರವಾಡ, ಮಂಗಳೂರು ಎಂಬ ಭೇದವಡಗಿ, ಹಳ್ಳಿಪಳ್ಳಿಗಳಲ್ಲಿಯೂ ಹೆಣ್ಣು ಗಂಡು ಎಲ್ಲರೂ ಒಂದೇ ಕನ್ನಡವನ್ನು ಆಡಬೇಕು” ಎಂದು ಅವರು ಆಶಿಸಿದ್ದಾರೆ. ಈ ಗುರಿಯನ್ನು ಸಾಧಿಸಲು ಕನ್ನಡದ ವಿವಿಧ ಉಪಭಾಷೆಗಳ ಬಳಕೆಯಿಂದಲೇ ಆರಂಭವಾಗಬೇಕೆಂದು ಅವರ ಅಭಿಪ್ರಾಯವಾಗಿತ್ತು. ಬೇಂದ್ರೆಯವರಿಗೆ ಅಪಾರ‍ ಆತ್ಮವಿಶ್ವಾಸವಿತ್ತು. ತಾವು ಮಾಡುತ್ತಿರುವುದು ಸರಿಯೆಂದೆ ಖಾತ್ರ ಇತ್ತು. ಧಾರವಾಡದ ಕನ್ನಡ ಉಪಭಾಷೆಯನ್ನು ಅವರು ತಮ್ಮ ಕಾವ್ಯದಲ್ಲಿ ವ್ಯಾಪಕವಾಗಿ ಬಳಸಿದರು. ಅನುಭವದ ಎಂಥ ಸೂಕ್ಷ್ಮ ಛಾಯೆಗಳನ್ನೂ ಇಂಥ ಭಾಷೆಯಲ್ಲೂ ಪ್ರಕಟಿಸಬಹುದೆಂದು ತೋರಿಸಿಕೊಟ್ಟರು.

ಬೇಂದ್ರೆಯವರು ಹಾಕಿಕೊಟ್ಟ ಮೇಲ್ಪಂಕ್ತಿಯನ್ನು ಉಳಿದವರೂ ಅನುಸರಿಸತೊಡಗಿದರು. ಉತ್ತರ ಕರ್ನಾಟಕದ ನಾಟಕಕಾರರು ನಾಟಕಗಳಲ್ಲಿ ಸಂಭಾಷಣೆಗಳಿಗೆ ತಮ್ಮ ಉಪಭಾಷೆಯನ್ನೇ ಬಳಸಿದರು. ಕಥೆ-ಕಾದಂಬರಿಕಾರರು ಸಹ ನಿರೂಪಣಾ ಭಾಗದಲ್ಲಿ ಲಿಖಿತ ಕನ್ನಡವನ್ನು ಬಳಸಿದರೂ, ಸಂಭಾಷಣೆಗಳಲ್ಲಿ ಆಡುಮಾತನ್ನೇ ಇಟ್ಟುಕೊಂಡರು. ನಾಟಕ, ಕಥೆ, ಕಾದಂಬರಿಗಳಲ್ಲಿ ಅವರು ಅನುಸರಿಸಿದ ವಾಸ್ತವವಾದಿ ಶೈಲಿಯೂ ಸಹಜವಾದ ಆಡುಮಾತಿನ ಬಳಕೆಯನ್ನು ಅಪೇಕ್ಷಿಸಿತ್ತು.

ಮೈಸೂರು ಭಾಗದಲ್ಲಿಯೂ ಇಂಥ ಕೆಲವು ಪ್ರಯತ್ನಗಳು ಅಪರೂಪವಾಗಿ ನಡೆದವು. ತಮ್ಮ ಸಾಮಾಜಿಕ ನಾಟಕಗಳಲ್ಲಿ ಕೈಲಾಸಂ ಮತ್ತು ಎಂಡ್ಕುಡ್ಕ ರತ್ನನ ಪದಗಳಲ್ಲಿ ಜಿ.ಪಿ.ರಾಜರತ್ನಂ ತಮ್ಮ ಭಾಗದ ಆಡುಮಾತಿನ ಉಪಭಾಷೆಯನ್ನು ಪ್ರಯೋಗಿಸಿದರು. ಅವರ ಪ್ರಭಾವ ಅಷ್ಟು ವ್ಯಾಪಕವಾಗೇನೂ ಹಬ್ಬಲಿಲ್ಲ.

ಇತ್ತೀಚೆಗೆ ಆಡುಮಾತಿನ ಪರವಾಗಿ ಅನೇಕ ಬದಲಾವಣೆಗಳು ಕಾಣಿಸಿಕೊಳ್ಳತೊಡಗಿವೆ. ಜನ ತಮ್ಮ ಪ್ರದೇಶ ಮತ್ತು ಜಾತಿಗಳ ಬಗ್ಗೆ ಹೆಚ್ಚಿನ ಅರಿವಿನಿಂದ ಬರೆಯತೊಡಗಿದ್ದಾರೆ. ತಮ್ಮ ಉಪಭಾಷೆಗಳ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕೆಂಬ ಎಚ್ಚರ ಮೂಡಿದೆ. ಈಚೆಗೆ ಬೆಳಕು ಕಂಡ “ಮಲೆಮಾದೇಶ್ವರ”, “ಜುಂಜಪ್ಪ” ಮೊದಲಾದ ಜಾನಪದ ಮಹಾಕಾವ್ಯಗಳು ಉಪಭಾಷೆಗಳ ಬಳಕೆಯ ಬಗ್ಗೆ ಹೊಸ ನಿರೀಕ್ಷೆಗಳನ್ನು ಹುಟ್ಟಿಸಿವೆ. ಅವುಗಳ ಪ್ರಭಾವ ಉಪಭಾಷೆಗಳ ಬಳಕೆಯ ವ್ಯಾಪ್ತಿಯನ್ನು ಹೆಚ್ಚಿಸಿವೆ.

ಹೈದರಾಬಾದ ಕರ್ನಾಟಕ ಮತ್ತು ಮಂಗಳೂರು ಕಡೆಯ ಲೇಖಕರು ತಮ್ಮ ಪಾತ್ರಗಳನ್ನು ಅಧಿಕೃತಗೊಳಿಸುವ ಉದ್ದೇಶದಿಂದ ತಮ್ಮ ಭಾಗದ ಉಪಭಾಷೆಗಳನ್ನು ಕಥೆ-ಕಾದಂಬರಿಗಳಲ್ಲಿ ವ್ಯಾಪಕವಾಗಿ ಬಳಸಲು ಆರಂಭಿಸಿದ್ದಾರೆ. ಹೀಗಾಗಿ ಕನ್ನಡದ ಎಲ್ಲ ಉಪಭಾಷೆಗಳೂ ಸಾಹಿತ್ಯದಲ್ಲಿ ಪ್ರವೇಶ ಪಡೆದಿವೆ. ಕೇವಲ ಸಂಭಾಷಣೆಗಳಿಗೆ ಸೀಮಿತವಾಗಿದ್ದ ಉಪಭಾಷೆಗಳ ಬಳಕೆ ನಿರೂಪಣಾ ಭಾಗಗಳನ್ನೂ ಆವರಿಸತೊಡಗಿದೆ. ಇಡೀ ಕತೆಯೇ ಆಡುಭಾಷೆಯಲ್ಲಿ ರಚನೆಯಾಗಿರುವ ಉದಾಹರಣೆಗಳೂ ಕಾಣಿಸಿಕೊಂಡಿವೆ.

ಸಾಹಿತ್ಯಕೃತಿಗಳಲ್ಲಿ ಉಪಭಾಷೆಗಳ ವ್ಯಾಪಕ ಬಳಕೆಯ ಹಿಂದಿರುವ ಇನ್ನೊಂದು ಪ್ರೇರಣೆ ಎಂದರೆ, ಜಾಗತೀಕರಣದ ಮೂಲಕ ಇಂಗ್ಲೀಷಿನಂಥ ಭಾಷೆಗಳು ಕನ್ನಡದಂಥ ಭಾಷೆಗಳ ಮೇಲೆ ನಡೆಸಿರುವ ಹಲ್ಲೆಯನ್ನು ಎದುರಿಸುವ ಉದ್ದೇಶದಿಂದ ಆರಂಭವಾಗಿರುವ ‘ದೇಶೀವಾದ’. ಜಾಗತೀಕರಣ ಹುಟ್ಟಿಸಿರುವ ತಲ್ಲಣವನ್ನು ಎದುರಿಸಲು ಲೇಖಕರು ಹೆಚ್ಚುಹೆಚ್ಚಾಗಿ ರಕ್ಷಣಾತ್ಮಕ ನಿಲುವು ತಳೆಯತೊಡಗಿದ್ದಾರೆ. ಲೇಖಕರಾಗಿ ತಮ್ಮ ಭಾಷೆಗಳನ್ನಷ್ಟೇ ಅಲ್ಲ. ಉಪಭಾಷೆಗಳನ್ನೂ ರಕ್ಷಿಸಿಕೊಳ್ಳುವುದು ತಮ್ಮ ನೈತಿಕ ಹೊಣೆಯೆಂದು ಅವರು ಭಾವಿಸತೊಡಗಿದ್ದಾರೆ.

ಆದರೆ ಈ ಎಲ್ಲ ಪ್ರಯತ್ನಗಳು ‘ಮಾರ್ಗ’ ಮತ್ತು ‘ದೇಸಿ’ಗಳ ನಡುವಿನ ಅಂತರವನ್ನು ಅಳಿಸಿಹಾಕುವಲ್ಲಿ ಯಶಸ್ವಿಯಾಗಿಲ್ಲ. ಮಾರ್ಗ-ದೇಸಿ, ಮಹಾಪರಂಪರೆ-ಕಿರುಪರಂಪರೆ, ಉಚ್ಚ-ನಿಮ್ಮಗಳಂತಹ ಜೋಡಿಗಳಲ್ಲಿ ಎರಡನೆಯದಕ್ಕೆ ಅಂಟಿಕೊಂಡಿದ್ದ ಕೀಳ್ಮೆ ಬಹುಮಟ್ಟಿಗೆ ಕಡಿಮೆಯಾಗಿದ್ದರೂ ಮೊದಲನೆಯದಕ್ಕಿರುವ ಪ್ರತಿಷ್ಠೆಯೇನೂ /ಕಡಿಮೆಯಾಗಿಲ್ಲ. ಡೈಗ್ಲಾಸಿಯದ ಸಂದರ್ಭ ಇನ್ನೂ ಕ್ರಿಯಾಶೀಲವಾಗೇ ಇದೆ. ಲಿಖಿತ ಮತ್ತು ಮೌಖಿಕ ಕನ್ನಡಗಳು ಪರಸ್ಪರ ಪೂರಕವಾಗಿ, ಒಂದು ಇನ್ನೊಂದನ್ನು ಪ್ರಭಾವಿಸುತ್ತ ಒಟ್ಟಿಗೇ ಅಸ್ತಿತ್ವದಲ್ಲಿವೆ.

– ೨೦೦೪

* ತಿರೂರಿನ (ಕೇರಳ) ತುಂಜನ್ ಮೆಮೋರಿಯಲ್ ಟ್ರಸ್ಟ್ ನಡೆಸಿದ ’Geography and Literature ವಿಚಾರ ಸಂಕಿರಣದಲ್ಲಿ ಮಾಡಿದ, ಗೋಷ್ಠಿಯೊಂದರ ಭಾಷಣದ ಕನ್ನಡ ಅನುವಾದ.