ನಾನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾದ ಹೊಸದರಲ್ಲಿ ಒಂದು ಸಲ ಮಂಗಳೂರಿನ ಸೇಂಟ್ ಎಲೋಷಿಯಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಗೆಳೆಯ ಡಾ|| ನಾ.ದಾಮೋದರ ಶೆಟ್ಟಿಯವರು ಭೆಟ್ಟಿಯಾದರು. ಹಿಂದಿನ ವರ್ಷ ಅವರ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಕನ್ನಡ ಅಧ್ಯಾಪಕರಿಗಾಗಿ ಆಧುನಿಕ ವಿಮರ್ಶಾ ಸಿದ್ಧಾಂತಗಳನ್ನು ಕುರಿತು ಒಂದು ವಿಚಾರ ಸಂಕಿರಣ ನಡೆದಿತ್ತು. ಅದರಲ್ಲಿ ನಾನೂ ಭಾಗವಹಿಸಿ ರೂಪನಿಷ್ಠ ವಿಮರ್ಶೆಯ ಬಗ್ಗೆ ಮಾತಾಡಿದ್ದೆ. ದಾಮೋದರ ಶೆಟ್ಟಿಯವರು ಹೇಳಿದರು; ‘ಕಳೆದ ವರ್ಷದ ವಿಚಾರ‍ಸಂಕಿರಣದಲ್ಲಿ ಮತ್ತು ವಿವಿಧ ವಿಶ್ವವಿದ್ಯಾಲಯಗಳು ನಡೆಸಿದ ರಿಫ್ರೆಷರ್ ಕೋರ್ಸುಗಳಲ್ಲಿ ಆಧುನಿಕ ವಿಮರ್ಶಾ ಸಿದ್ಧಾಂತಗಳ ಬಗ್ಗೆ ಸಾಕಷ್ಟು ಉಪನ್ಯಾಸಗಳು ನಡೆದಿವೆ. ಆದರೆ ಆ ಸಿದ್ಧಾಂತಗಳನ್ನು ಕೃತಿಗಳ ಅಭ್ಯಾಸದಲ್ಲಿ ಹೇಗೆ ಅನ್ವಯಿಸಬೇಕು-ಎಂಬುದರ ಬಗ್ಗೆ ಯಾರೂ ಹೇಳುತ್ತಿಲ್ಲ. ಅಧ್ಯಾಪಕರು ಈ ಬಗ್ಗೆ ಕೇಳುತ್ತಿದ್ದಾರೆ. ನಮ್ಮ ಅನೇಕ ವಿಶ್ವವಿದ್ಯಾಲಯಗಳ ಕನ್ನಡ ಮತ್ತು ಇಂಗ್ಲಿಷ್ ಎಂ.ಎ. ತರಗತಿಗಳ ಅಭ್ಯಾಸಕ್ರಮದಲ್ಲಿಯೂ ಈ ಸಿದ್ಧಾಂತಗಳನ್ನು ಕಲಿಸಲಾಗುತ್ತಿದೆ. ಆದರೆ ಅಲ್ಲಿಯೂ ಅವುಗಳನ್ನು ಅನ್ವಯಿಸುವ ಕೆಲಸ ನಡೆಯುತ್ತಿಲ್ಲ. ಈ ಸಿದ್ಧಾಂತಗಳ ಅನ್ವಯವನ್ನೇ ಮುಖ್ಯ ಗುರಿಯಾಗಿ ಇಟ್ಟುಕೊಂಡು ಅಕಾಡೆಮಿ ಒಂದು ವಿಚಾರ ಸಂಕಿರಣವನ್ನು ಯಾಕೆ ಏರ್ಪಡಿಸಬಾರದು?’

ನಾನೂ ಈ ದಿಸೆಯಲ್ಲಿ ಯೋಚಿಸುತ್ತಿದ್ದವನೇ. ಅವರ ಸಲಹೆ ನನಗೆ ಹಿಡಿಸಿತು. ಅಲ್ಲಿಯೇ ಯೋಜನೆಯನ್ನು ಸಿದ್ಧಪಡಿಸಿದೆವು. ದೇವನೂರ ಮಹಾದೇವರ “ಕುಸುಮಬಾಲೆ” ಮತ್ತು ಪೂರ್ಣಚಂದ್ರ ತೇಜಸ್ವಿಯವರ “ಕಿರಗೂರಿನ ಗಯ್ಯಾಳಿಗಳು” ಕೃತಿಗಳನ್ನು ಆಧಾರಪಠ್ಯಗಳನ್ನಾಗಿ ಇಟ್ಟುಕೊಳ್ಳಬೇಕು; ಪ್ರತಿಯೊಬ್ಬ ಪ್ರಬಂಧಕಾರನೂ ಒಂದೊಂದು ವಿಮರ್ಶಾ ಸಿದ್ಧಾಂತವನ್ನು ಮೊದಲು ಸಂಕ್ಷಿಪ್ತವಾಗಿ ವಿವರಿಸಿ, ನಂತರ ಆ ಸಿದ್ಧಾಂತವನ್ನು ಎರಡರಲ್ಲಿ ಒಂದು ಪಠ್ಯಕ್ಕೆ ಅನ್ವಯಿಸಿ ವಿಶ್ಲೇಷಿಸಬೇಕು-ಎಂದು ಯೋಜನೆ ಹಾಕಲಾಯಿತು.

ಈ ಯೋಜನೆಯನ್ನು ನೋಡಿ ಕೆಲವರು-ನಮಗೇ ಇದ್ದ-ಕೆಲವು ಅನುಮಾನಗಳನ್ನು ವ್ಯಕ್ತಪಡಿಸಿದರು: ಈ ವಿಮರ್ಶಾ ಸಿದ್ಧಾಂತಗಳಲ್ಲಿ ಕೆಲವನ್ನು ಅನ್ವಯ ಮಾಡಲು ಬರುತ್ತದೆಯೆ, ಅವು ಕೇವಲ ಸಿದ್ಧಾಂತಗಳಲ್ಲವೆ, ಅನ್ವಯಿಕ ವಿಮರ್ಶೆಯ ಉಪಕರಣಗಳನ್ನಾಗಿ ಬಳಸಲೆಂದು ಈ ಸಿದ್ಧಾಂತಗಳನ್ನು ರೂಪಿಸಲಾಗಿದೆಯೇ? ಹಾಗೆ ಅನ್ವಯಿಸಿ ನೋಡುವುದು ಕೇವಲ ಅಕಾಡೆಮಿಕ್ ಆಸಕ್ತಿಯ ಕೆಲಸವಾಗುವುದಿಲ್ಲವೇ? ಇತ್ಯಾದಿ. ಆದರೆ ಅನ್ವಯಿಸಲು ಬಾರದಂಥ ಸಿದ್ಧಾಂತಗಳಿದ್ದಾದರೂ ಏನು ಪ್ರಯೋಜನ ಎಂಬುದೂ ಒಂದು ವಾದವಾಗಬಹುದಲ್ಲವೆ? ಜೊತೆಗೆ, ಇಂಥ ಪ್ರಯತ್ನಗಳು ಅಕಾಡೆಮಿಕ್ ಆಸಕ್ತಿಗೆ ಸೀಮಿತವಾದರೂ, ಅವುಗಳ ಮೂಲಕ ವಿದ್ಯಾರ್ಥಿಗಳಿಗಾದರೂ ಉಪಯೋಗವಾದರೆ, ಅಲ್ಲಿಂದಲೇ ಬರುವ ಹೊಸ ವಿಮರ್ಶಕರಿಗೆ ಮಾರ್ಗದರ್ಶಕವಾದರೆ ತಪ್ಪೇನು? – ಎಂಬ ವಾದವನ್ನೂ ಎದುರಿಗಿರಿಸಬಹುದು.

ಅಂತೂ, ೧೯೯೮ರ ಡಿಸೆಂಬರ್ ತಿಂಗಳ ೫ನೇ ತಾರೀಖಿನಂದು ಮಂಗಳೂರಿನ ಸೇಂಟ್ ಎಲೋಷಿಯಸ್ ಕಾಲೇಜಿನ ಸಭಾಂಗಣದಲ್ಲಿ “ಓದುವ ದಾರಿಗಳು” ವಿಚಾರಸಂಕಿರಣ ನಡೆಯಿತು. ಈ ವಿಚಾರಸಂಕಿರಣದಲ್ಲಿ ಮಂಡಿಸಿದ ಪ್ರಬಂಧಗಳ ಜೊತೆಗೆ ಇನ್ನೂ ಕೆಲವನ್ನು ಹೊಸದಾಗಿ ಬರೆಸಿ ಈ ಸಂಕಲನವನ್ನು ಸಿದ್ಧಪಡಿಸಲಾಗಿದೆ. ಈಗಿರುವಂತೆ ಈ ಯೋಜನೆಯ ಸ್ವರೂಪ ಹೀಗಿದೆ:

೧.        ಆಶಯ ಭಾಷಣ – ಸಿ.ಎನ್. ರಾಮಚಂದ್ರನ್

೨.        ರೂಪನಿಷ್ಠ ಓದು- ಎಂ.ಜಿ. ಹೆಗಡೆ

೩.        ರಚನಾವಾದಿ ಓದು – ಕೆ.ವಿ. ತಿರುಮಲೇಶ

೪.        ಮಾರ್ಕ್ಸ್‌ವಾದಿ ಓದು – ಶಿವರಾಮ ಪಡಿಕ್ಕಲ್

೫.        ಸ್ತ್ರೀವಾದಿ ಓದು – ಬಿ.ಎನ್. ಸುಮಿತ್ರಾಬಾಯಿ

೬.        ವಾಚಕನಿಷ್ಠ ಓದು – ಸಿ.ಎನ್. ರಾಮಚಂದ್ರನ್

೭.        ನಿರಚನವಾದಿ ಓದು – ರಾಜೇಂದ್ರ ಚೆನ್ನಿ

೮.        ಕಥನಶಾಸ್ತ್ರೀಯ ಓದು – ಓ.ಎಲ್. ನಾಗಭೂಷಣಸ್ವಾಮಿ

೯.        ದೇಸಿ ಓದು – ಕೆ.ವಿ. ನಾರಾಯಣ

ಈ ಸಂಕಲನದಲ್ಲಿ ಸೇರಿರುವ ಪ್ರಬಂಧಗಳನ್ನು ಕುರಿತು ಒಂದೆರಡು ಮಾತುಗಳನ್ನು ಹೇಳಬೇಕಾಗಿದೆ.

ಇಲ್ಲಿ ಮಂಡಿತವಾಗಿರುವ ವಿಮರ್ಶಾ ಪ್ರಸ್ಥಾನಗಳ ಪರಿಚಯವಿದ್ದರೂ ಕೂಡ ಕನ್ನಡ ವಿಮರ್ಶೆ ಯಾವ ಪ್ರಸ್ಥಾನವನ್ನೂ ಶುದ್ಧಾಂಗವಾಗಿ, ಪ್ರತ್ಯೇಕವಾಗಿ ಅನುಸರಿಸಿಲ್ಲ. ಕನ್ನಡದ ನವ್ಯವಿಮರ್ಶೆ ಅಮೆರಿಕದ ‘ನ್ಯೂ ಕ್ರಿಟಿಸಿಜಂ’ನ ಅನುಕರಣೆ ಎಂದು ಕೆಲವರು ಗಂಭೀರವಾಗಿ ಆರೋಪಿಸಿದರೂ ಅದು ಹಾಗಿಲ್ಲ ಎಂಬುದು ಈಗ ವಾದಗ್ರಸ್ಥವಾಗಿ ಉಳಿದಿಲ್ಲ. ನಮ್ಮಲ್ಲಿ ಕೆಲವರನ್ನು ಮಾರ್ಕ್ಸ್‌ವಾದಿ ವಿಮರ್ಶಕ, ಸ್ತ್ರೀವಾದಿ ವಿಮರ್ಶಕ ಎಂದು ಸ್ಥೂಲವಾಗಿ ಗುರುತಿಸಬಹುದಾದರೂ ಅಲ್ಲಿಯೂ ಆ ಸಿದ್ಧಾಂತಗಳನ್ನು ಭಾರತೀಯ ಸಂದರ್ಭದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಪ್ರಯತ್ನಗಳು ನಡೆದಿವೆ. ಇನ್ನುಳಿದಂತೆ, ನಮ್ಮ ಯಾವ ವಿಮರ್ಶಕರನ್ನೂ ಶುದ್ಧಾಂಗವಾಗಿ ರಾಜನಿಕ ವಿಮರ್ಶಕ, ನಿರಚನಾವಾದಿ ವಿಮರ್ಶಕ, ವಾಚಕನಿಷ್ಠ ವಿಮರ್ಶಕ ಎಂದು ಕರೆಯಲು ಸಾಧ್ಯವಿಲ್ಲ. ವಿವಿಧ ಸಿದ್ಧಾಂತಗಳನ್ನು ಕುರಿತು ಇಲ್ಲಿ ಪ್ರಬಂಧಗಳನ್ನು ಬರೆದಿರುವ ವಿಮರ್ಶಕರು ಆಯಾ ಸಿದ್ಧಾಂತಗಳ ನಿಷ್ಠ ಪ್ರತಿಪಾದಕರಾಗಲಿ, ಅನುಯಾಯಿಗಳಾಗಲಿ ಅಲ್ಲ (ಸ್ವಲ್ಪ ಮಟ್ಟಿಗೆ ಪಡಿಕ್ಕಲ್, ಸುಮಿತ್ರಾಬಾಯಿಯವರು ಇದಕ್ಕೆ ಅಪವಾದ) – ಎಂಬುದನ್ನು ಇಲ್ಲಿ ಗಮನಿಸಬೇಕು.

ಮೊದಲನೆಯದಾಗಿ, ನವ್ಯವಿಮರ್ಶೆ ಹಾಕಿಕೊಟ್ಟ ವಿಶ್ಲೇಷಣೆ, ಕೃತಿಯ ಭಾಷಿಕ ಸ್ವರೂಪ, ವಸ್ತು ಪಡೆದುಕೊಳ್ಳುವ ಆಕೃತಿಗಳ ಪರಿಕಲ್ಪನೆ ಇನ್ನೂ ಆಳವಾಗಿ, ಸೂಕ್ಷ್ಮವಾಗಿ ಕೆಲಸ ಮಾಡುತ್ತಲೇ ಇವೆ. ಕೃತಿಯ ಸ್ವಾಯತ್ತತೆ, ಸ್ವಯಂಪೂರ್ಣತೆಗಳ ಪರಿಕಲ್ಪನೆಗಳನ್ನು ಮೊದಲೂ ನಮ್ಮ ವಿಮರ್ಶೆ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಈಗಲೂ ಅಷ್ಟೇ, ಕೃತಿಯ ಸಾಮಾಜಿಕ, ಸಾಂಸ್ಕೃತಿಕ, ನೈತಿಕ ಆಯಾಮಗಳ ಚರ್ಚೆ ನವ್ಯವಿಮರ್ಶೆಯ ಕಾಲಕ್ಕೂ ನಡೆದಿತ್ತು. ಬಂಡಾಯದ ದಿನಗಳಲ್ಲಿ ಮಾತ್ರ ಸಾಮಾಜಿಕ ಜವಾಬ್ದಾರಿಯ ಮೇಲೆ ಹೆಚ್ಚಿನ ಒತ್ತು ಬಿದ್ದು. ಸ್ವಲ್ಪ ಕಾಲ ರೂಪಾಧಾರಿತ ವಿಶ್ಲೇಷಣೆ ಹಿಂದುಳಿಯಿತು.

ಮಾರ್ಕ್ಸ್‌ವಾದಿ ಮತ್ತು ಸ್ತ್ರೀವಾದಿ ವಿಮರ್ಶೆಗಳು ಕೃತಿಯ ಆಕೃತಿಗಿಂತ ವಸ್ತು ಮತ್ತು ಅದರ ಬಗೆಗಿನ ಲೇಖಕನ ನಿಲುವುಗಳೇ ಮುಖ್ಯವೆಂದು ಹೊರಟರೂ, ಅಂತಿಮವಾಗಿ ಇವೆಲ್ಲ ಮೂರ್ತಗೊಳ್ಳುವುದು ಕೃತಿಯ ಭಾಷಿಕ ಸ್ವರೂಪದಲ್ಲೇ ಎಂದು ಕಂಡುಕೊಂಡು, ತಮ್ಮ ವಿಶ್ಲೇಷಣೆಯಲ್ಲಿ ಈ ತಿಳುವಳಿಕೆಯನ್ನು ಅಳವಡಿಸಿಕೊಂಡಿವೆ ಎಂದರೆ, ಭಾಷೆ-ಆಕೃತಿಗಳ ವಿಶ್ಲೇಷಣೆಯ ಮೂಲಕವೇ ವಸ್ತು-ನಿಲುವುಗಳ ಹುಡುಕುವಿಕೆ ನಡೆದಿದೆ.

ಕನ್ನಡ ವಿಮರ್ಶೆಯ ಮುಖ್ಯಧಾರೆ ಇವತ್ತು ಯಾವುದೇ ಒಂದು ನಿರ್ದಿಷ್ಟ ವಿಮರ್ಶಾ ಸಿದ್ಧಾಂತಕ್ಕೆ ಕಟ್ಟುಬಿದ್ದಿಲ್ಲ. ಅನೇಕ ಸಿದ್ಧಾಂತಗಳು ಒದಗಿಸಿರುವ ಒಳನೋಟಗಳನ್ನು ಬಳಸಿಕೊಂಡು, ಅದು ತನ್ನದೇ ಆದ ಒಂದು ಇಕ್ಲೆಕ್ಟಿಕ್ (Ecletic) ಮಾದರಿಯನ್ನು ಪ್ರಜ್ಞಾಪೂರ್ವಕವಾಗಿ ರೂಪಿಸಿಕೊಳ್ಳುತ್ತಿರುವಂತೆ ಕಾಣುತ್ತಿದೆ. ಇದರಲ್ಲಿ ಪಾಶ್ಚಾತ್ಯ ಮಾದರಿಗಳ ಜೊತೆಗೆ ದೇಶೀ ಮಾದರಿಗಳೂ ಸೇರಿಕೊಂಡಿವೆ. ಈ ಸಿದ್ಧಾಂತಗಳು ಎಷ್ಟೋ ಸಂದರ್ಭಗಳಲ್ಲಿ ಒಂದನ್ನೊಂದು ಆಧರಿಸಿ, ಪೂರಕವಾಗಿ (ಕೆಲವು ಸಲ ವಿರೋಧಿಸಿ) ಬೆಳೆದು ಬಂದುವಾದ್ದರಿಂದ ಅವುಗಳ ಪರಿಭಾಷೆಯಲ್ಲಿ ಸಾಮ್ಯಗಳಿವೆ. ಅಷ್ಟೇ ಅಲ್ಲ, ಅವು ನೀಡುವ ಒಳನೋಟಗಳಲ್ಲೂ ಸಾಮ್ಯಗಳಿವೆ.

ಈ ಸಂಕಲನದ ಪ್ರಬಂಧಗಳನ್ನು ಬರೆಸುವಾಗ, ಆಯಾ ಸಿದ್ಧಾಂತಗಳ ವಿಶಿಷ್ಟ ನಿಲುವುಗಳನ್ನು, ತತ್ವಗಳನ್ನು ಎತ್ತಿ ತೋರಿಸಬೇಕು ಎಂಬ ಉದ್ದೇಶವಿತ್ತು. ಆ ಉದ್ದೇಶ ಬಹಳ ಮಟ್ಟಿಗೆ ಈಡೇರಿದೆ. ಈ ಸಿದ್ಧಾಂತಗಳ ಬಗ್ಗೆ ಕನ್ನಡದಲ್ಲಿ ಈಗಾಗಲೇ ತಕ್ಕಮಟ್ಟಿನ ಕೆಲಸ ನಡೆದಿದೆ. ನಾಗಭೂಷಣಸ್ವಾಮಿಯವರ “ವಿಮರ್ಶೆಯ ಪರಿಭಾಷೆ”ಯ ಪರಿಷ್ಕೃತ ಆವೃತ್ತಿ (೧೯೯೮), ಸಿ.ಎನ್. ರಾಮಚಂದ್ರನ್ ಅವರ “ಸಾಹಿತ್ಯ ವಿಮರ್ಶೆ”ಯ ಪರಿಷ್ಕೃತ ಮೂರನೆಯ ಆವೃತ್ತಿ (೨೦೦೦), ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಸಾಹಿತ್ಯ ಪಾರಿಭಾಷಿಕ ಮಾಲೆ’ಯ ಕೃತಿಗಳು ಈ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದೆ. ಆದ್ದರಿಂದ ಇಲ್ಲಿ ಗೊಂದಲಗಳಿಗೆ ಅಷ್ಟಾಗಿ ಅವಕಾಶವಿಲ್ಲ. ಗೊಂದಲವಿದ್ದರೆ ಅದು ಪಾರಿಭಾಷಿಕ ಶಬ್ದಗಳ ಬಳಕೆಯಲ್ಲಿ ಮಾತ್ರ.

ಈ ಸಿದ್ಧಾಂತಗಳನ್ನು ಅನ್ವಯಿಸುವಾಗ, ಆ ಸಿದ್ಧಾಂತ ಮಾತ್ರ ಅನಾವರಣಗೊಳಿಸಬಹುದಾದ ಕೃತಿಯ ವಿಶಿಷ್ಟ ಅಂಶಗಳು ಯಾವವು. ಅದು ಕೃತಿಯ ಮೇಲೆ ಚೆಲ್ಲುವ ಹೊಸ ಬೆಳಕು ಯಾವುದು, ಅದು ಮುಟ್ಟುವ ಭಾಗವೆಷ್ಟು, ಮುಟ್ಟದೆ ಬಿಡುವ ಭಾಗವೆಷ್ಟು-ಎಂಬುದನ್ನು ಕಂಡುಕೊಳ್ಳಬೇಕೆಂಬ ಇನ್ನೊಂದು ಮುಖ್ಯ ಉದ್ದೇಶ ಅಷ್ಟು ನಿರ್ದಿಷ್ಟವಾಗಿ ಈಡೇರಿಲ್ಲವೆಂದೇ ಅನಿಸುತ್ತದೆ.

ಇದಕ್ಕೆ ಮುಖ್ಯ ಕಾರಣವೆಂದರೆ, ನಮ್ಮ ಪ್ರಬಂಧಕಾರರು ಸಿದ್ಧಾಂತಗಳ ಅನ್ವಯದ ಸಂದರ್ಭದಲ್ಲಿ ಆಯಾ ಸಿದ್ಧಾಂತಕ್ಕೆ ಮಾತ್ರ ಸೀಮಿತರಾಗದೆ, ಉಳಿದ ಸಿದ್ಧಾಂತಗಳಿಗೂ ಕೈಚಾಚಿದ್ದಾರೆ. ಸಸ್ಯೂರ್ ಮತ್ತು ಬಾಖ್ತಿನ್ ಎರಡು-ಮೂರು ಪ್ರಬಂಧಗಳಲ್ಲಿ ಮತ್ತೆ ಮತ್ತೆ ಸಹಾಯಕ್ಕೆ ಬಂದಿದ್ದಾರೆ. ಅನ್ವಯದಲ್ಲಿ ಸಿದ್ಧಾಂತಗಳು ಒಂದರಲ್ಲಿ ಒಂದು ನುಸುಳಿಕೊಂಡಿವೆ. ಹಾಗೆಯೇ, ಅದೇ ಒಳನೋಟಗಳು ಬೇರೆಬೇರೆ ಸಿದ್ಧಾಂತಗಳ ಅನ್ವಯದಲ್ಲೂ ಕಾಣಿಸಿಕೊಂಡಿವೆ. ಇದು ನಮ್ಮ ವಿಮರ್ಶೆಯ ಇಕ್ಲೆಕ್ಟಿಕ್ ಮಾದರಿಯ ಪ್ರಭಾವದಿಂದ ಆದದ್ದು ಎನ್ನಬಹುದು. ಇಲ್ಲಿ ಪ್ರಬಂಧಗಳನ್ನು ಬರೆದಿರುವ ವಿದ್ವಾಂಸರಿಗೂ ಅದು ಗೊತ್ತಿದೆ. ತಮ್ಮ “ವಿಶ್ಲೇಷಣೆಯನ್ನು ಓದಿದವರಿಗೆ ರಚನಾವಾದವು ಇತರ ವಾದಗಳ ಒಳನೋಟಗಳನ್ನೂ ಇತರ ವಾದಗಳು ರಚನಾವಾದದ ಒಳನೋಟಗಳನ್ನೂ ಸಾಹಿತ್ಯದ ಓದಿನಲ್ಲಿ ಅಳವಡಿಸಿಕೊಳ್ಳುವುದು ಸಾಧ್ಯ”ವೆಂದು ಕಂಡೀತೆಂದು ಕೆ.ವಿ. ತಿರುಮಲೇಶರು ತಮ್ಮ ಪ್ರಬಂಧದಲ್ಲಿ ಸ್ಪಷ್ಟವಾಗಿಯೇ ಹೇಳಿದ್ದಾರೆ.

ಬೇರೆಬೇರೆ ಸಿದ್ಧಾಂತಗಳು ಕೃತಿಯಲ್ಲಿ ಕಂಡುಕೊಳ್ಳುವ ಅರ್ಥಗಳು, ಕಾಣಿಸುವ ಒತ್ತುಗಳು, ಕಟ್ಟಿಕೊಳ್ಳುವ ಪಠ್ಯಗಳು ಬೇರೆಬೇರೆಯಾಗಿವೆಯೆ ಎಂದರೆ ಹಾಗೂ ಕಾಣುತ್ತಿಲ್ಲ ಉದಾಹರಣೆಗೆ, ಎಂ.ಜಿ. ಹೆಗಡೆಯವರ ರೂಪನಿಷ್ಟ ಓದು, ಸುಮಿತ್ರಾಬಾಯಿಯವರ ಸ್ತ್ರೀವಾದಿ ಓದು, ಮತ್ತು ನಾಗಭೂಷಣಸ್ವಾಮಿಯವರ ಕಥನಶಾಸ್ತ್ರೀಯ ಓದುಗಳು ತೇಜಸ್ವಿಯವರ “ಕಿರಗೂರಿನ ಗಯ್ಯಾಳಿಗಳು” ಕೃತಿಯಲ್ಲಿ ಕಾಣಿಸುವ ಒಳನೋಟಗಳಲ್ಲಿ, ತಲುಪುವ ನಿರ್ಣಯಗಳಲ್ಲಿ ಆಶ್ಚರ್ಯಕರವಾದ ಸಾಮ್ಯಗಳಿವೆ. ಹಾಗೆಯೇ ಅವು ಬಳಸುವ ಪರಿಕರಗಳಲ್ಲೂ ವಿಶೇಷ ವ್ಯತ್ಯಾಸಗಳಿಲ್ಲ. ವಿಮರ್ಶಕರಲ್ಲಿ ಲಿಂಗಭೇದವೂ ಇಲ್ಲಿ ಕೆಲಸ ಮಾಡಿಲ್ಲ. ಹಾಗೆಯೇ, ತಿರುಮಲೇಶರ ರಾಚೈಕ ಓದು, ರಾಮಚಂದ್ರನ್‌ರ ವಾಚಕನಿಷ್ಠ ಓದು, ಚೆನ್ನಿಯವರ ನಿರಚನವಾದಿ ಓದುಗಳು ದೇವನೂರರ “ಕುಸುಮಬಾಲೆ”ಯಲ್ಲಿ ಗುರುತಿಸುವ ಓದಿನ ತೊಡಕುಗಳಲ್ಲಿ. ಅವುಗಳಿಗೆ ಸೂಚಿಸುವ ಕಾರಣಗಳಲ್ಲಿ, ಕೃತಿಯ ವೈಶಿಷ್ಟ್ಯಗಳನ್ನು ಗುರುತಿಸುವ ರೀತಿಗಳಲ್ಲಿ, ಕಾಣಿಸುವ ಒಳನೋಟಗಳಲ್ಲಿ ಆಶ್ಚರ್ಯಕರವಾದ ಸಾಮ್ಯಗಳಿವೆ. ಪರಿಭಾಷೆಯಲ್ಲಿ ಇವುಗಳಿಗಿಂತ ಭಿನ್ನವಾಗಿ ಕಾಣುವ ಪಡಿಕ್ಕಲ್‌ರ ಮಾರ್ಕ್ಸ್‌ವಾದ ಓದು ತಲುಪುವ ನಿರ್ಣಯಗಳೂ ಬಹಳ ಭಿನ್ನವಾಗೇನೂ ಇಲ್ಲ.

ಈ ಸಂಗತಿಗಳಿಂದ ಕೆಲವು ಮುಖ್ಯ ಅನುಮಾನಗಳನ್ನು ಹೊರಡಿಸಬಹುದು:

೧. ವಿಮರ್ಶೆಯ ಸಿದ್ಧಾಂತ ಯಾವುದೇ ಇದ್ದರೂ, ಅದರ ಅನ್ವಯದಲ್ಲಿ ಸೂಕ್ಷ್ಮ ಸಂವೇದನಾಶೀಲ ವಿಮರ್ಶಕ ಅದರ ಮಿತಿಗಳನ್ನು ಮೀರಿ, ಕೃತಿಯ ಅರ್ಥವನ್ನು ಸರಿಯಾಗಿ ಗ್ರಹಿಸಬಲ್ಲ

೨. ನಮ್ಮ ವಿಮರ್ಶೆ ಯಾವುದೇ ಒಂದು ಸಿದ್ಧಾಂತಕ್ಕೆ ಶುದ್ಧಾಂಗವಾಗಿ ಕಟ್ಟುಬೀಳಲು ತಯಾರಿಲ್ಲ; ಒಂದು ಕೃತಿಯನ್ನು ಅರ್ಥಮಾಡಿಕೊಳ್ಳಲು ಬೇಕಾದ ಒಳನೋಟಗಳು ಯಾವ ಸಿದ್ಧಾಂತದಲ್ಲಿ ದೊರಕಿದರೂ ಅಲ್ಲಿಂದ ಅದು ಎತ್ತಿಕೊಳ್ಳುತ್ತದೆ. ಇಲ್ಲವಾದರೆ, ಹೆಗಡೆಯವರ ರೂಪನಿಷ್ಠ ಓದು ಮತ್ತು ನಾಗಭೂಷಣಸ್ವಾಮಿಯವರ ಕಥನಶಾಸ್ತ್ರೀಯ ಓದುಗಳು ಸ್ತ್ರೀವಾದಿ ಓದುಗಳೂ ಆಗಿರುವುದು ಹೇಗೆ ಸಾಧ್ಯ?

೩. ವಿಮರ್ಶೆಯ ಸಿದ್ಧಾಂತಗಳು ತಮ್ಮ ಮಿತಿಗಳನ್ನು ಮೀರುವುದು ಅನಿವಾರ್ಯವಾಗುವಂತೆ ಪಠ್ಯಗಳೂ ಪ್ರಚೋದನೆ ಒದಗಿಸಬಲ್ಲವು. ಯಾವುದೇ ವಿಮರ್ಶೆಯೂ “ಕುಸುಮಬಾಲೆ”ಯ ನಿರೂಪಣೆಯಲ್ಲಿಯ ದೇಶೀ ಅಂಶಗಳನ್ನೂ “ಕಿರಗೂರಿನ ಗಯ್ಯಾಳಿಗಳು” ದಲ್ಲಿಯ ಸ್ತ್ರೀಪರ ದೃಷ್ಟಿಕೋನವನ್ನೂ ಅಲಕ್ಷಿಸಲು ಆಗುವುದೇ ಇಲ್ಲ. ಅದಕ್ಕಾಗಿಯೇ ಸಿದ್ಧಾಂತಗಳು ತಮ್ಮ ಹೊರಗಿನ ಮಾದರಿಗಳ ನೆರವನ್ನೂ ಪಡೆಯಬೇಕಾಗುತ್ತದೆ.

೪. ಕಾಲಕಾಲಕ್ಕೆ ಹೊಸದಾಗಿ ಹುಟ್ಟಿಕೊಳ್ಳುವ ವಿಮರ್ಶೆಯ ಸಿದ್ಧಾಂತಗಳು ತಮ್ಮ ಹಿಂದಿನ ಸಿದ್ಧಾಂತಗಳನ್ನು ಸಂಪೂರ್ಣವಾಗಿ ಹೊಡೆದುಹಾಕಿ, ಆ ಜಾಗೆಯನ್ನು ತಾವು ಆಕ್ರಮಿಸಿಕೊಳ್ಳುವುದಿಲ್ಲ. ಹಿಂದಿನ ಸಿದ್ಧಾಂತಗಳು ಒದಗಿಸಿದ ಒಳನೋಟಗಳನ್ನು ಬಳಸಿಕೊಂಡೇ ಮುಂದುವರಿಯುತ್ತವೆ. ಹೊಸ ಒಳನೋಟಗಳನ್ನು ಒದಗಿಸುವದರ ಜೊತೆಗೆ ಹಿಂದಿನವುಗಳಿಗೆ ಬೇರೆ ಪರಿಪ್ರೇಕ್ಷ್ಯವನ್ನು ಒದಗಿಸುತ್ತವೆ. ಸಿ.ಎನ್. ರಾಮಚಂದನ್ ಗುರುತಿಸಿರುವಂತೆ, ಈವರೆಗೆ ಲಕ್ಷ್ಯಕ್ಕೆ ಬಾರದಿದ್ದ ಕೆಲವು ವಿಷಯಗಳನ್ನು ಮುನ್ನೆಲೆಗೆ ತರುತ್ತವೆ.

೫. ಹೊಸದಾಗಿ ಕಾಣುವ ಯಾವದೇ ಒಳನೋಟ ಒಂದು ನಿರ್ದಿಷ್ಟ ಸಿದ್ಧಾಂತದಿಂದ ಮಾತ್ರ ಹೊಳೆಯುತ್ತದೆ ಎನ್ನುವಂತಿಲ್ಲ. ಬೇರೆ ಸಿದ್ಧಾಂತಗಳ ಅನ್ವಯದಲ್ಲೂ ಅದು ಹೊಳೆಯುವದು ಸಾಧ್ಯ. ಕೆ.ವಿ. ನಾರಾಯಣ ಅವರು ಗುರುತಿಸಿರುವಂತೆ, ದೇಸಿ ಓದಿನಲ್ಲಿ ಕಾಣುವ ಒಳನೋಟ ಕಥನಶಾಸ್ತ್ರೀಯ ಓದಿನಿಂದಲೂ ಸಿಗಬಹುದು.

೬. ಹೊಸ ಸಿದ್ಧಾಂತಗಳು ಬಳಕೆಗೆ ತರುವ, ಹೊಸವೆಂಬಂತೆ ಕಾಣುವ ಪರಿಕಲ್ಪನೆಗಳು ಎಲ್ಲೋ ಹೊರಗಿನಿಂದ ರೂಪಿಸಿ ಹೇರಿದುವಲ್ಲ; ಸಾಹಿತ್ಯ ಕೃತಿಗಳಲ್ಲಿ ಮೊದಲಿನಿಂದಲೂ ಅಂತರ್ಗತವಾಗಿದ್ದವುಗಳು. ಸಿದ್ದಾಂತಗಳು ಅವುಗಳಿಗೆ ಪಾರಿಭಾಷಿಕ ಶಬ್ದಗಳನ್ನು ಕೊಟ್ಟು, ಸ್ಪಷ್ಟತೆ, ನಿಖರತೆ ಒದಗಿಸುತ್ತವೆ. ಅದರಿಂದ ಮುಂದಿನ ಅಭ್ಯಾಸಗಳಿಗೆ ಒಂದು ಹೊಸ ಚೌಕಟ್ಟು ದೊರೆಯುತ್ತದೆ.

ಇದನ್ನೆಲ್ಲ ನೋಡಿ, ನಮ್ಮ ವಿಮರ್ಶೆ ಗೊಂದಲಗಳ ಗೂಡಾಗಿದೆಯೇನೋ ಎಂದು ಸಂದೇಹಪಡಬೇಕಾದ ಕಾರಣವೇನೂ ಇಲ್ಲ. ವಿಮರ್ಶೆ ಯಾವದೋ ಒಂದು ಮಾದರಿಗೆ ಜೋತುಬೀಳುವ ಅವಶ್ಯಕತೆ ಇಲ್ಲ. ನಮ್ಮ ವಿಮರ್ಶೆ ರೂಪಿಸಿಕೊಳ್ಳಲು ಯತ್ನಿಸುತ್ತಿರುವ ಇಕ್ಲೆಕ್ಟಿಕ್ ಮಾದರಿ ಆರೋಗ್ಯದ ಲಕ್ಷಣವೆಂದೇ ನಾನು ಭಾವಿಸಿದ್ದೇನೆ ಇದರ ಜೊತೆಗೆ ದೇಶೀವಾದಿ ಚಿಂತನೆಗಳು ಇನ್ನಷ್ಟು ಖಚಿತಗೊಳ್ಳಬೇಕಾದ ಅವಶ್ಯಕತೆಯೊ ಇದೆ.

– ೨೦೦೨

* ಇದೇ ಹೆಸರಿನ ಕೃತಿಗೆ (ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ೨೦೦೨) ಬರೆದ ಸಂಪಾದಕೀಯ ಟಿಪ್ಪಣಿಗಳು.