ಪಿ.ರಾಜಗೋಪಾಲ ಆಚಾರ್ಯ ‘ಆರ್ಯ’ ಅವರು ಧಾರವಾಡದಲ್ಲಿ ನೆಲೆನಿಂತು ಹಲವಾರು ವರ್ಷಗಳೇ ಆದವು ಅವರು ಸಿಂಡಿಕೇಟ್ ಬ್ಯಾಂಕಿನ ಉದ್ಯೋಗಿಯಾಗಿ ಕೆಲಸ ಮಾಡಲು ಆರಂಭಿಸಿದ ಮೇಲೆ ಹಲವು ಜನ ಅವರ ಸಂಪರ್ಕದಲ್ಲಿ ಬಂದಿದ್ದಾರೆ. ಇಲ್ಲಿಯ ಜನ, ಭಾಷೆ, ಪರಿಸರದೊಂದಿಗೆ ಅವರು ಎಷ್ಟು ಆತ್ಮೀಯ ಸಂಬಂಧಗಳನ್ನು ಬೆಳೆಸಿಕೊಂಡಿದ್ದಾರೆಂದರೆ, ಉದ್ಯೋಗದಲ್ಲಿ ಬಡ್ತಿ ಸಿಕ್ಕು ಧಾರವಾಡದಿಂದ ದೂರದ ಊರಿಗೆ ಹೋಗಬೇಕಾದ ಸಂದರ್ಭ ಬಂದಾಗ, ಆ ಬಡ್ತಿಯನ್ನೇ ತಿರಸ್ಕರಿಸಿ, ಧಾರವಾಡದಲ್ಲಿ ಉಳಿಯುವ ಏರ್ಪಾಡು ಮಾಡಿಕೊಂಡರು. ಮುಂಬಯಿಯ ಪತ್ರಕರ್ತೆ, ಆಕಸ್ಮಿಕವಾಗಿ ಧಾರವಾಡ ಹುಡುಗಿಯೂ ಆಗಿದ್ದ, ಒಂದು ಕಾಲದಲ್ಲಿ ನನ್ನ ವಿದ್ಯಾರ್ಥಿಯೂ ಆಗಿದ ವಿದ್ಯಾ-ನೀಲಕೆಣಿ ಅವರನ್ನು ಪ್ರೀತಿಸಿ ಮದುವೆಯಾಗಿ, ಧಾರವಾಡದ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಂಡರು. ವಿದ್ಯಾ ಅಕಾಲ ಮರಣಕ್ಕೆ ತುತ್ತಾದ ಮೇಲೂ ಧಾರವಾಡದ ಮೇಲಿನ ಅವರ ಪ್ರೀತಿ ಕಡಿಮೆಯಾಗಲಿಲ್ಲ. ಇನ್ನೂ ಹಲವು ವರ್ಷಗಳ ನೌಕರಿಯ ಅವಕಾಶವಿದ್ದಾಗಲೇ ಸ್ವಯಂ ನಿವೃತ್ತಿ ಪಡೆದುಕೊಂಡು ಧಾರವಾಡದಲ್ಲಿ ಗಟ್ಟಿಯಾಗಿ ನೆಲೆ ನಿಂತರು.

ಈ ಗಡಿಬಿಡಿಯಲ್ಲಿ ಅವರಿಗೆ ಅರುವತ್ತು ವರ್ಷ ತುಂಬಿದ ಸಂಗತಿ ಬಹಳ ಜನಕ್ಕೆ ಗೊತ್ತೇ ಇರಲಿಲ್ಲ. ಆರ್ಯರ ಆತ್ಮೀಯ ಸ್ನೇಹಿತರಾದ ಕಲಾವಿದ ಮಧು ದೇಸಾಯಿ ಮತ್ತು ರಮಾಕಾಂತ ಜೋಶಿ ಹೇಗೋ ಇದರ ಸುಳಿವು ಹಿಡಿದು, ಆರ್ಯರಿಗೆ ಅರುವತ್ತು ತುಂಬಿದ ನೆನಪಿಗೆ ಒಂದು ಅಭಿನಂದನ ಸಮಾರಂಭವನ್ನು ಏರ್ಪಡಿಸಬೇಕೆಂದು ತಮ್ಮ ಸ್ನೇಹಿತರೊಂದಿಗೆ ಮಾತಾಡಿಕೊಳ್ಳ ತೊಡಗಿದರು.

ಈ ಸಮಾಚಾರ ಇನ್ನೂ ನನ್ನ ತನಕ ಬಂದಿರಲಿಲ್ಲ. ಒಂದು ಮುಂಜಾನೆ ಆರ್ಯ ಅವರು ನಮ್ಮ ಮನೆಗೆ ಬಂದು ಗಂಟೆ ಬಾರಿಸಿದರು. ನೋಡಿದರೆ ಆತಂಕದಲ್ಲಿದ್ದಂತೆ ಕಾಣುತ್ತಿದ್ದರು. ‘ಕೆಲವು ಜನ ಗೆಳೆಯರು ಸೇರಿ ನನಗೊಂದು ಅಭಿನಂದನ ಸಮಾರಂಭ ಏರ್ಪಡಿಸಲು ಸಿದ್ಧತೆ ನಡೆಸಿದ್ದಾರೆ. ಇಷ್ಟರಲ್ಲೇ ಈ ಬಗ್ಗೆ ನಿಮ್ಮನ್ನು ಸಂಪರ್ಕಿಸಲಿದ್ದಾರೆ.’ ಎಂದು ಮಾತು ತೆಗೆದರು. ಓಹೊ, ಆ ಸಮಾರಂಭಕ್ಕೆ ನಾನೂ ಸಹಕಾರ ಕೊಡಬೇಕೆಂದು ಇವರು ಕೇಳಲು ಬಂದಿದ್ದಾರೆಂದು ಸಂಶಯ ಏಳುತ್ತಿದ ಹಾಗೇ ಆರ್ಯರು ಆತಂಕದಿಂದ ತಮ್ಮ ಮಾತು ಮುಂದುವರಿಸಿದರು; ನನಗೆ ಇದು ಎಳ್ಳಷ್ಟೂ ಇಷ್ಟವಿಲ್ಲ. ಅಭಿನಂದನ ಸಮಾರಂಭದ ಏರ್ಪಾಟು ಮಾಡಬೇಡಿ, ಅಭಿನಂದನ ಸಮಾರಂಭ ಮಾಡಿಸಿಕೊಳ್ಳುವಷ್ಟು ನಾನು ದೊಡ್ದ ಮನುಷ್ಯನಲ್ಲ. ನನ್ನ ಸ್ನೇಹಿತರಿಗೂ ತಿಳಿಸಿ ಹೇಳಿ ಅದನ್ನು ಕೈ ಬಿಡುವಂತೆ ಮಾಡಿ.’

ನನಗೆ ಆಶ್ಚರ್ಯವಾಯಿತು, ಸಾಮಾನ್ಯವಾಗಿ ಎಲ್ಲರೂ ತಮ್ಮ ಅಭಿನಂದನ ಸಮಾರಂಭಕ್ಕೆ ತಾವೇ ಮುಂದಾಗಿ, ಜನರನ್ನು ಕೂಡಿಸಿ, ಹಣ ಕೂಡಿಸಿ, ತಾವೇ ಒಂದಿಷ್ಟು ಕೈಯಿಂದ ಹಾಕಿ ವೈಭವದಿಂದ ಸಮಾರಂಭ ಏರ್ಪಡಿಸಿಕೊಳ್ಳುವ ಇಂದಿನ ದಿನಗಳಲ್ಲಿ ಇಂಥವರೂ ಇರುತ್ತಾರೆಯೆ? ಆದರೆ ಅದು ಆರ್ಯರಿಗೆ ಸಹಜವಾದ ನಡತೆ.

‘ಹೀಗೆ ಸನ್ಮಾನ, ಅಭಿನಂದನ ಬೇಡವೆನ್ನುವದೂ ಒಂದು ರೀತಿಯ ಪ್ರಚ್ಛನ್ನ ವೈಭವೀಕರಣವೇ ಆದೀತಲ್ಲವೇ? ‘ ಎಂದು ನಾನು ತಿರುಗಿ ತುಂಟತನದ ಪ್ರಶ್ನೆ ಕೇಳಿದೆ. ಆದರೆ ಆರ್ಯರ ಪ್ರಾಮಾಣಿಕತೆ ಪ್ರಶ್ನಾತೀತವಾದದ್ದು ಎಂಬುದು ಅವರನ್ನು ಬಲ್ಲ ಎಲ್ಲರಿಗೂ ಗೊತ್ತು. ಆದರೂ ಬೇಕೆಂತಲೇ ಆ ಪ್ರಶ್ನೆ ಕೇಳಿದೆ. ಆರ್ಯರಿಗೆ ಏನು ಹೇಳಬೇಕೋ ತಿಳಿಯಲಿಲ್ಲ. ‘ಅಭಿನಂದನ ಬೇಡವಾದರೆ, ಬೇರೆ ರೀತಿಯ ಕಾರ್ಯಕ್ರಮ ಏರ್ಪಡಿಸೋಣ’ ಎಂದೆ. ಅವರು ನಿರ್ವಾಹವಿಲ್ಲದೆ ಒಪ್ಪಿಕೊಂಡರು. ತಮ್ಮ ಕೃತಿಗಳ ವಿಮರ್ಶೆ ನಡೆಯುವುದಾದರೆ ಅಡ್ಡಿ ಇಲ್ಲ ಎಂದರು.

ಆರ್ಯರಿಗೆ ಆತ್ಮೀಯವಾದ ಗೆಳೆಯರ ದೊಡ್ಡ ಬಳಗವೇ ಇದೆ. ಅನೇಕ ಜನ ನಿವೃತ್ತ, ಕಾರ್ಯನಿರತ ಹಿರಿಯ ಅಧಿಕಾರಿಗಳೂ ಅವರಲ್ಲಿದ್ದಾರೆ. ಅವು ಜಾತಿ-ಮತಗಳನ್ನು ಮೀರಿದ ಸಂಬಂಧಗಳು. ಅವರ ಜೊತೆಗೆ ಆಪ್ತ ಪ್ರಸಂಗಗಳನ್ನು ಏರ್ಪಡಿಸಿ ಚರ್ಚೆ, ಹರಟೆಗಳಲ್ಲಿ ಭಾಗವಹಿಸುವುದು ಆರ್ಯರ ಬಹಳ ಪ್ರೀತಿಯ ಹವ್ಯಾಸ. ತಮ್ಮ ಒಂಟಿ ಬದುಕನ್ನು ಸಂಗೀತವನ್ನು ಕೇಳುತ್ತ, ಚಿತ್ರಗಳನ್ನು ಬಿಡಿಸುತ್ತ, ಕಥೆ-ನಾಟಕಗಳನ್ನು ಬರೆಯುತ್ತ, ಪುಸ್ತಕಗಳನ್ನು ಓದುತ್ತ, ವ್ಯಾಪಕವಾಗಿ ಪ್ರವಾಸ ಮಾಡುತ್ತ ಕಳೆಯುವುದರ ಜೊತೆಗೆ ಆಗಾಗ ಹತ್ತಿರದ ಸ್ನೇಹಿತರನ್ನು ಮನೆಗೆ ಆಮಂತ್ರಿಸಿ, ಅತಿಥಿ ಸತ್ಕಾರವನ್ನು ಏರ್ಪಡಿಸುವದರಲ್ಲಿ ಅವರು ವಿಶಿಷ್ಟ ಸುಖ ಕಾಣುವವರು. ಆದರೂ ಇಷ್ಟೆಲ್ಲದರ ನಡುವೆ ಅವರಿಗೆ ಏಕಾಂತವೆಂದರೆ ಪ್ರೀತಿ. ಗುಂಪಿನಲ್ಲಿ ಚಿಕ್ಕ ಹುಡುಗನಂತೆ ಓಡಾಡುವಾಗಲು ಅವರು ನಾಚುಬುರುಕ. ತನ್ನ ಬಗ್ಗೆ ಎಂದಿಗೂ ಜಂಭ ಕೊಚ್ಚಿಕೊಂಡವರಲ್ಲ. ಯಾವದೇ ಸಭೆ-ಸಮಾರಂಭದಲ್ಲೂ ಮೇಲೆ ಬಿದ್ದು ಮುಂದೆ ಬರುವವರಲ್ಲ. ಪ್ರಚಾರವೆಂದರೆ ಹತ್ತು ಮಾರು ಹಿಂದೆ ಸರಿದು ಮುದುಡಿಕೊಳ್ಳುವವರು. ಅಂಥವರು, ತಮಗೆ ಅಭಿನಂದನ ಸಮಾರಂಭ ಬೇಡವೆಂದು ಹೇಳಿದ್ದರಲ್ಲಿ ಯಾವ ಕೃತಕ ವಿನಯವೂ ಇರಲಿಲ್ಲ; ಅದು ಆರ್ಯರಿಗೇ ವಿಶಿಷ್ಟವಾದ, ಅವರಿಗೇ ಸಹಜವಾದ ನಡವಳಿಕೆ.

ಆದರೆ ಈ ನಾಚುಬುರುಕ ಆರ್ಯರ ನಿಜವಾದ ಯೋಗ್ಯತೆ ಏನೆಂದು ನಮಗೆಲ್ಲಾ ಗೊತ್ತಿರುವ ಸಂಗತಿ. ಕತೆಗಾರ‍ರಾಗಿ, ನಾಟಕಕಾರರಾಗಿ, ಚಿತ್ರಕಲಾವಿದರಾಗಿ ಅವರು ಮಾಡಿರುವ ಕೆಲಸ ಬಹಳ ದೊಡ್ಡದು. ದೇಶ-ವಿದೇಶಗಳಲ್ಲಿ ಅವರ ಕಲಾಕೃತಿಗಳ ಪ್ರದರ್ಶನಗಳು ನಡೆದಿವೆ. ಅವರ ಸಾಧನೆಯನ್ನು ಗುರುತಿಸಿ ಕರ್ನಾಟಕ ಲಲಿತ ಕಲಾ ಅಕಾಡೆಮಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ. ಜಿ.ಎಸ್. ಶೈಣೈ ಹೆಸರಿನ ಪ್ರಶಸ್ತಿಯೂ ಬಂದಿದೆ. ಆದರೂ ಇಲ್ಲಿಗಿಂತ ವಿದೇಶಗಳಲ್ಲಿಯೇ ಅವರ ಕಲಾಕೃತಿಗಳು ಹೆಚ್ಚಿನ ಮನ್ನಣೆ ಗಳಿಸಿವೆ. ಅವರ ಚಿತ್ರಪ್ರದರ್ಶನಗಳ ವಿಮರ್ಶೆ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಆದರೆ ಅವರ ಸಾಹಿತ್ಯ ಕೃತಿಗಳ ಬಗ್ಗೆ ಕನ್ನಡದಲ್ಲಿ ಹೆಚ್ಚಿನ ಚರ್ಚೆ ನಡದೇ ಇಲ್ಲ. ವಿರಳವಾಗಿ ಅವರ ಕೆಲವು ನಾಟಕಗಳು ರಂಗದ ಮೇಲೆ ಬಂದಿವೆ. ಆದರೂ ಆರ್ಯ ಅವರು ತಾವೊಬ್ಬ ನಿರ್ಲಕ್ಷಿತ ಲೇಖಕ ಎಂದು ಎಂದೂ ಗೊಣಗಿಕೊಂಡವರಲ್ಲ. ಹೀಗೆ ಅಕ್ಷರಶಃ ಎಲೆಮರೆಯ ಕಾಯಿಯಂತೆ ಬದುಕಿರುವ ಈ ಆತ್ಮೀಯ ಮನುಷ್ಯನ ಬಗ್ಗೆ ಏನಾದರೂ ಮಾಡಬೇಕೆಂದು ಸ್ನೇಹಿತರೆಲ್ಲಾ ಯೋಚನೆ ಮಾಡಿದ್ದು ಸಹಜವೇ ಆಗಿತ್ತು.

ಅಭಿನಂದನ ಸಮಾರಂಭ ಬೇಡವೆಂದರೆ, ಈ ಪ್ರಸಂಗವನ್ನು ಬೇರೆ ರೀತಿಯಿಂದ ಮಾಡುವದು ಹೇಗೆ ಎಂಬ ಬಗ್ಗೆ ಸ್ನೇಹಿತರಲ್ಲಿ ದೀರ್ಘ ಚರ್ಚೆಯಾಗಿ ಒಂದು ಯೋಜನೆಯನ್ನು ತಯಾರಿಸಲಾಯಿತು. ಆ ಯೋಜನೆಯಂತೆ ‘ಸನ್ಮಾನ ಸಮಾರಂಭ’ ಎನ್ನುವದು ಇರುವುದಿಲ್ಲ; ಬದಲಾಗಿ, ಅವರ ಕೃತಿಗಳ ಚರ್ಚೆ ನಡೆಸುವುದಕ್ಕೆ ಆರ್ಯರ ಅಭ್ಯಂತರ ಇರಬೇಕಾಗಿಲ್ಲ. ಮುಖ್ಯವಾಗಿ ಆರ್ಯರ ಸಾಹಿತ್ಯ ಮತ್ತು ಕಲಾಕೃತಿಗಳ ಬಗೆಗೆ ಚರ್ಚೆ ನಡೆಸಬೇಕು ಎಂದು ಯೋಚಿಸಿ, ಒಂದು ಅನೌಪಚಾರಿಕ ಸಮಿತಿಯನ್ನು ರಚಿಸಲಾಯಿತು.

ಈ ಯೋಜನೆಯಂತೆ, ಆರ್ಯರಿಗೆ ಅರುವತ್ತು ತುಂಬಿದ ನಿಮಿತ್ತ (ಅವರಿಗೆ ೭-೧೨-೨೦೦೫ ರಂದು ಅರುವತ್ತು ತುಂಬಿದವು) ೨೦೦೫ ರಿಂದ ಡಿಸೆಂಬರ್ ೧೮ರಂದು ಧಾರವಾಡದಲ್ಲಿ ಒಂದು ಇಡೀ ದಿನದ ಕಾರ್ಯಕ್ರಮವನ್ನು ರೂಪಿಸಲಾಯಿತು. ಆರ್ಯರ ಕಾವ್ಯ, ಕಾದಂಬರಿ, ಸಣ್ಣಕತೆ, ನಾಟಕ, ಮಕ್ಕಳ ಸಾಹಿತ್ಯ, ಅಂಕಣ ಸಾಹಿತ್ಯ ಹಾಗೂ ಚಿತ್ರಕಲಾಕೃತಿಗಳನ್ನು ಕುರಿತು ಎರಡು ಗೋಷ್ಠಿಗಳನ್ನು ಏರ್ಪಡಿಸಬೇಕು; ಅವರ ಕಲಾಕೃತಿಗಳ ಪ್ರದರ್ಶನವನ್ನು ಹಮ್ಮಿಕೊಳ್ಳಬೇಕು; ಅವರಿಗೆ ಪ್ರಿಯವಾದ ಸಂಗೀತದ ಕಾರ್ಯಕ್ರಮವನ್ನು ಸೇರಿಸಬೇಕು; ಮತ್ತು ನಾಚುಬರುಕ ಆರ್ಯರನ್ನು ಒಂದಿಷ್ಟು ಬಯಲಿಗೆ ಎಳೆದು, ಅವರೊಂದಿಗೆ ಒಂದು ಅರ್ಥಪೂರ್ಣವಾದ ‘ಸಂವಾದ’ವನ್ನು ನಡೆಸಬೇಕು. ಇದು ಕಾರ್ಯಕ್ರಮದ ರೂಪರೇಷೆ.

ಇದರ ಜೊತೆಗೆ, ಬಹಳ ಮುಖ್ಯವಾಗಿ, ಆರ್ಯರನ್ನು ಕುರಿತು-‘ಸಂಭಾವನಾ ಗ್ರಂಥ’ವನ್ನಲ್ಲ-ವಿಮರ್ಶಾತ್ಮಕ ಗ್ರಂಥವೊಂದನ್ನು ಹೊರತರಬೇಕೆನ್ನುವದು ಒಂದು ಯೋಜನೆ. ಈ ಗ್ರಂಥಕ್ಕೆ ಮಧು ದೇಸಾಯಿ ಮತ್ತು ರಮಾಕಾಂತ ಜೋಶಿ ಸಂಪಾದಕರಾಗಿ ಕೆಲಸ ಮಾಡಲು ಮುಂದೆ ಬಂದರು. ತಮ್ಮ ಜೊತೆಗೆ ನನ್ನದೂ ಒಂದು ಹೆಸರಿರಲಿ ಎಂದು ಅವರು ಒತ್ತಾಯಿಸಿದ್ದರಿಂದ-ನನಗೂ ಪ್ರಿಯವಾದ – ಈ ಕೆಲಸದಲ್ಲಿ ನಾನೂ ಕೈಗೂಡಿಸಿದ್ದೇನೆ.

ಮೇಲೆಯೇ ಹೇಳಿದಂತೆ, ಇದು ಆರ್ಯರನ್ನು ಕುರಿತ ಒಂದು ವಿಮರ್ಶಾತ್ಮಕವಾದ ಗ್ರಂಥ. ಹಾಗಾಗಿ ಇಲ್ಲಿ ಯಾವ ಹಿಂಜರಿಕೆಯೂ ಇಲ್ಲದೆ ಆರ್ಯರ ಸಾಹಿತ್ಯ ಹಾಗೂ ಚಿತ್ರಕಲಾಕೃತಿಗಳ ವಸ್ತುನಿಷ್ಠ ವಿಮರ್ಶೆ ನಡೆದಿದೆ.

ಆರ್ಯರು ತಮ್ಮ ಸನ್ಯಾಸಾಶ್ರಮದ ಕಾಲದಿಂದಲೂ ಸಾಹಿತ್ಯ, ಸಂಗೀತ, ಚಿತ್ರಕಲೆಗಳಲ್ಲಿ ತೀವ್ರವಾದ ಆಸಕ್ತಿಯನ್ನು ಹೊಂದಿದರು. ಬಹುಶಃ ಲೌಕಿಕ ಬದುಕಿನ ಬಗ್ಗೆ ನಿರಾಸಕ್ತಿ ತಾಳಲೇಬೇಕಾದ ಸನ್ಯಾಸಕ್ಕೂ, ಜೀವನಾವ್ಯಾಮೋಹಿಯಾದ ಕಲೆಗಳಿಗೂ ಹೊಂದಿಕೆಯಾಗಲಿಲ್ಲವೆಂದು ಕಾಣುತ್ತದೆ. ಅವರಲ್ಲಿ ಕಲಾಭಿವ್ಯಕ್ತಿಯ ತುಡಿತಗಳೇ ಮೇಲುಗೈ ಪಡೆದವು. ಹಾಗಾಗಿ ಅವರು ಸನ್ಯಾಸವನ್ನು ತೊರೆದು ಬದುಕಿನಲ್ಲಿ, ಆ ಮೂಲಕ ಕಲೆಗಳಲ್ಲಿ ತಮ್ಮನ್ನು ಗಂಭೀರವಾಗಿ, ಮುಕ್ತವಾಗಿ ತೊಡಗಿಸಿಕೊಂಡರು. ಅಲ್ಲಿಂದ ಅವರ ಸೃಜನಶೀಲತೆಗೆ ಹೆಚ್ಚಿನ ಪ್ರಖರತೆ, ವೈಪುಲ್ಯ, ಸ್ವಾತಂತ್ರ್ಯ ದೊರೆತವು.

ಆರ್ಯರ ಸಾಹಿತ್ಯ ಮತ್ತು ಚಿತ್ರಗಳನ್ನೆಲ್ಲ ಒಟ್ಟಿಗೆ ನೋಡಿದಾಗ ಸ್ಪಷ್ಟವಾಗಿ ಕಾಣುವ ವಿಶಿಷ್ಟ ಅಂಶಗಳೆಂದರೆ-ಅವರ ಪ್ರಯೋಗಶೀಲತೆ ಮತ್ತು ಬುದ್ಧಿಪ್ರಧಾನತೆ. ತಮ್ಮ ಸಾಹಿತ್ಯ ಕೃತಿಗಳಲ್ಲಿ ಮತ್ತು ಚಿತ್ರಕಲೆಗಳಲ್ಲಿ ಅವರು ನಿರಂತರವಾಗಿ ಹೊಸಹೊಸ ಪ್ರಯೋಗಗಳನ್ನು ಮಾಡುತ್ತ ಬಂದಿದ್ದಾರೆ. ಪಶ್ಚಿಮದಲ್ಲಿ ಸಾಹಿತ್ಯ ಹಾಗೂ ಚಿತ್ರಕಲೆಗಳಲ್ಲಿ ಕಾಲಕಾಲಕ್ಕೆ ಬಂದ ಹೊಸ ಸಿದ್ಧಾಂತಗಳನ್ನು ಅವರು ಸೂಕ್ಷ್ಮವಾಗಿ ಅಭ್ಯಾಸ ಮಾಡಿದ್ದಾರೆ ಮತ್ತು ತಮ್ಮ ಕೃತಿಗಳಲ್ಲಿ ಅವುಗಳನ್ನು ತಂದುಕೊಂಡಿದ್ದಾರೆ. ಆದರೆ ಅವರಿಗೆ ಭಾರತೀಯ ತಾತ್ವಿಕ ಚಿಂತನೆಗಳ ಹಿನ್ನೆಲೆಯೂ ಇರುವುದರಿಂದ ಪಶ್ಚಿಮಕ್ಕೆ ಭಾರತೀಯತೆಯ ದೀಕ್ಷೆಯನ್ನು ಕೊಟ್ಟಿದ್ದಾರೆ. ವಿಶೇಷವಾಗಿ, ಅವರ ಚಿತ್ರಗಳಲ್ಲಿ ವ್ಯಾಪಕವಾಗಿ ಬಳಕೆಯಾಗಿರುವ ಜಾನಪದ ಆಶಯಗಳನ್ನು ಗಮನಿಸಬಹುದು. ಸಾಮಾನ್ಯವಾಗಿ, ಸದಾ ಹೊಸಹೊಸ ಪ್ರಯೋಗಗಳನ್ನು ಮಾಡುತ್ತ ಹೋಗುವ ಲೇಖಕ/ಕಲಾವಿದನ ಕೃತಿಗಳು ಕಾಲಕಾಲಕ್ಕೆ ಹೊಸ ರೂಪವನ್ನೇ ಪಡೆದು ಅವು ಒಬ್ಬನೇ ರಚಿಸಿದ ಕೃತಿಗಳೋ, ಬೇರೆಬೇರೆಯವರು ರಚಿಸಿದವೋ ಎಂಬ ಸಂದೇಹ ಕೂಡ ಬರುವಂತಿರುತ್ತದೆ. ಆದರೆ ಆರ್ಯರ ಕೃತಿಗಳಲ್ಲಿ ಹಾಗಾಗುವುದಿಲ್ಲ ಎಂಬುದೊಂದು ವಿಶೇಷ ಸಂಗತಿ. ಸಾಹಿತ್ಯಕೃತಿಗಳೇ ಇರಲಿ, ಓದಿದ/ನೋಡಿದ ಕೂಡಲೇ ‘ಇದು ಆರ್ಯರ ಕೃತಿ’ ಎಂದು ತಕ್ಷಣ ಗುರುತಿಸಬಹುದಾದ ಆಸ್ಮಿತೆ ಅವುಗಳಿಗೆ ಇರುತ್ತದೆ. ಎಲ್ಲ ಪ್ರಯೋಗಗಳ ನಡುವೆಯೂ ಆರ್ಯರು ಉಳಿಸಿಕೊಂಡು ಬಂದಿರುವ ಈ ಸ್ವಂತಿಕೆ, ತನ್ನತನ ಅಪರೂಪದ್ದು, ಜೊತೆಗೆ, ಅವರಿಗೆ ಸಾಹಿತ್ಯದಲ್ಲಾಗಲಿ, ಚಿತ್ರಕಲೆಯಲ್ಲಾಗಲಿ ಅಕಾಡೆಮಿಕ್ ತರಬೇತಿ ಇರಲಿಲ್ಲವೆಂಬುದು ಗಮನಿಸಬೇಕಾದ ವಿಶೇಷ ಸಂಗತಿ.

ಅವರ ಎಲ್ಲ ಕೃತಿಗಳೂ ಬುದ್ಧಿಪ್ರಧಾನವಾದುವು. ಅವುಗಳಲ್ಲಿ ಭಾವುಕತೆಯ ಅಂಶ ಕಡಿಮೆ. ಅದರಿಂದಾಗಿಯೇ ಅವರ ಕೃತಿಗಳಲ್ಲಿ ಅಮೂರ್ತತೆ ವಿಶೇಷವಾಗಿ ವಿಜೃಂಭಿಸುತ್ತದೆ. ಅವರ ಚಿತ್ರಕೃತಿಗಳನ್ನು ನೋಡಿದವರು ಕಡಿಮೆ, ಆದರೆ ಅವರು ಮನೋಹರ ಗ್ರಂಥಮಾಲೆಯ ಹಲವಾರು ಪುಸ್ತಕಗಳಿಗೆ ಬರೆದಿರುವ ಮುಖಚಿತ್ರಗಳು ಅನೇಕರ ಕಣ್ಣಿಗೆ ಬಿದ್ದಿವೆ. ಆರ್ಯರ ಹೆಸರು ಇರದಿದ್ದರೂ, ಇದು ಅವರದೇ ಚಿತ್ರ ಎಂದು ಗುರುತಿಸುವಷ್ಟು ಅವು ಪರಿಚಿತವಾಗಿವೆ. ಆದರೂ ಅವುಗಳಲ್ಲಿ ಅಂಥ ಏಕತಾನತೆ ಇಲ್ಲ. ಸದಾ ಹೊಸತನ್ನು ತರಬೇಕೆಂಬ ಆರ್ಯರ ತುಡಿತದಿಂದಾಗಿ ಅವು ಭಿನ್ನವಾಗಿದ್ದೂ ಆರ್ಯತನವನ್ನು ಉಳಿಸಿಕೊಂಡಿವೆ. ಇದು ಅವರ ಸಾಹಿತ್ಯಕೃತಿಗಳಿಗೂ ಅನ್ವಯಿಸುವ ಮಾತು. ಅಮೂರ್ತ ಬೌದ್ಧಿಕತೆಯನ್ನು ಮೂರ್ತಗೊಳಿಸಲು ಅವರು ಚಿತ್ರಗಳಲ್ಲಿ ಗೆರೆ, ಬಣ್ಣ, ಆಕೃತಿಗಳನ್ನು ಬಳಸಿಕೊಳ್ಳುವಂತೆ ಸಾಹಿತ್ಯಕೃತಿಗಳಲ್ಲಿ ಪ್ರತಿಮೆ, ವಿವರಗಳನ್ನು ಬಳಸುತ್ತಾರೆ. ಆದರೆ ವಿಚಾರಗಳನ್ನು ಮೂರ್ತಗೊಳಿಸಲು ಅವರು ಏನೆಲ್ಲ ಪ್ರಯತ್ನ ಮಾಡಿದರೂ ಒಟ್ಟಿನ ಪರಿಣಾಮ -ಅಮೂರ್ತ ಸಂದಿಗ್ಧತೆ ಮತ್ತು ಅರ್ಥಮಾಡಿಕೊಳ್ಳಲು ಕಷ್ಟವಾಗುವ ದುರೂಹ್ಯತೆ. “ಮನುಷ್ಯ” ಸಂಗ್ರಹದ ಕವಿತೆಗಳಲ್ಲಿ ಇದು ತೀರಾ ಒಡೆದು ಕಾಣುತ್ತದೆ. “ಗುರು” ಕಾದಂಬರಿಯೂ ಇದಕ್ಕೆ ಹೊರತಲ್ಲ. ಅವರ ಚಿತ್ರಗಳನ್ನು ನೋಡಿದಾಗ ಸಂತೋಷವೆನಿಸಿದರೂ, ಅರ್ಥಕ್ಕೆ ಮಹತ್ವವಿಲ್ಲ ಎಂದರೂ, ಸಾಹಿತ್ಯದಲ್ಲಿ ಅದೊಂದು ಸಮಸ್ಯೆಯಾಗಬಲ್ಲದು.

ಆರ್ಯರ ನಾಟಕಗಳಲ್ಲಿಯೂ ಇಂಥ ಸಮಸ್ಯೆಗಳಿವೆ. ಅದರಲ್ಲೂ ವಿಶೇಷವಾಗಿ, ಅಸ್ತಿತ್ವವಾದ, ಅಸಂಗತತೆಯಂಥ ತಾತ್ವಿಕತೆ ಅಮೂರ್ತತೆಯ ಕಡೆಗೆ ಜಗ್ಗುತ್ತ ಅರ್ಥವನ್ನು ದುರೂಹ್ಯಗೊಳಿಸಿದೆ. ಆದರೆ ಅವರ “ಪಾತಾಳಗರುಡಿ”, “ಯಜ್ಞ”ದಂಥ ನಾಟಕಗಳಲ್ಲಿ ಇಂಥ ಸಮಸ್ಯೆ ಅಷ್ಟಾಗಿ ಕಾಡುವುದಿಲ್ಲ. ಇಂಥ ಕೃತಿಗಳ ಚರ್ಚೆ, ರಂಗಪ್ರಯೋಗ ಹೆಚ್ಚುಹೆಚ್ಚಾಗಿ ನಡೆಯಬೇಕಾಗಿದೆ.

ಆರ್ಯರ ಈಚಿನ ಸಾಹಿತ್ಯ ಕೃತಿಗಳು ಈ ಸಮಸ್ಯೆಯಿಂದ ಹೊರಬರಲು ಸಾಕಷ್ಟು ಪ್ರಯತ್ನ ಮಾಡಿವೆ. “Oh Master” ಸಂಕಲನದ ಇಂಗ್ಲಿಷ್ ಕವಿತೆಗಳು ಅದೇ ಹೆಸರಿನ ಅವರ ಚಿತ್ರಕೃತಿಮಾಲಿಕೆಯ ಉಪ‌ಉತ್ಪನ್ನಗಳಾಗಿದ್ದರಿಂದಲೋ ಏನೊ, ಅಲ್ಲಿ ಮತ್ತೆ ದುರೂಹ್ಯತೆ ಕಾಣಿಸಿಕೊಂಡಿದೆ. ಇದನ್ನು ಬಿಟ್ಟರೆ ಅವರ “ದೇಸೀ ಪರದೇಸಿ ಕತೆಗಳು” ಮತ್ತು “ಹೈಬ್ರಿಡ್ ಕತೆಗಳು” ತೀರಾ ಭಿನ್ನವಾದ ಕೃತಿಗಳು. ಈ ಕತೆಗಳಲ್ಲಿ ಆರ್ಯರ ತಾಂತ್ರಿಕ ಮತ್ತು ಭಾಷಿಕ ಪ್ರಯೋಗಗಳು ಹಸಿಬಿಸಿಯಾಗಿ ಕಂಡರೂ ಸಾಂಸ್ಕೃತಿಕವಾಗಿ ಇವು ಮಹತ್ವದ ಪ್ರಯೋಗಗಳಾಗಿವೆ. ಜಾಗತೀಕರಣದ ಆತಂಕವನ್ನೆದುರಿಸುತ್ತಿರುವ ಇಂದಿನ ಸಂದರ್ಭದಲ್ಲಿ ಪೂರ್ವ-ಪಶ್ಚಿಮಗಳ ಸಂಪರ್ಕದಲ್ಲಿ ಹೊರಡಬಹುದಾದ ಹೊಸ ಸಮನ್ವಯದ, ಅವೆರಡೂ ಪರಸ್ಪರರಿಂದ ಕಲಿತು ರೂಢಿಸಿಕೊಳ್ಳಬಹುದಾದ ಹೊಸ ಸಾಧ್ಯತೆಗಳ ಶೋಧನೆಯ ಪ್ರಯತ್ನವನ್ನು ಆರ್ಯರು ಈ ಕತೆಗಳಲ್ಲಿ ನಡೆಸಿದ್ದಾರೆ. ಜಾಗತೀಕರಣವನ್ನು ಸಕಾರಾತ್ಮಕವಾಗಿ ಗ್ರಹಿಸುವ ಇಲ್ಲಿಯ ರೀತಿ ಭಿನ್ನವಾದುದು. ಆ ಕಾರಣಕ್ಕಾಗಿ ಅಭ್ಯಾಸಯೋಗ್ಯವಾದದ್ದು. ಬಹುಶಃ ಇಂಥ ಪ್ರಯತ್ನದಲ್ಲಿ ಬರವಣಿಗೆಯ ಹಸಿಬಿಸಿತನ ಅನಿವಾರ್ಯವೇನೊ! ಈ ಬದಲಾವಣೆಯನ್ನು-ಇಂದಿನ ಫ್ಯಾಷನೆಬಲ್ ಪರಿಭಾಷೆಯಲ್ಲಿ-ಆಧುನಿಕೋತ್ತರ ಚಿಂತನೆಯ ಕಡೆಗಿನ ಒಲವು ಎಂದು ಗುರುತಿಸಬಹುದು.

ಈ ಗ್ರಂಥದ ಯೋಜನೆ ಆರಂಭವಾದದ್ದು ಬಹಳ ತಡವಾಗಿ, ಲೇಖನಗಳ ಸ್ವರೂಪ, ವ್ಯಾಪ್ತಿಗಳನ್ನು ನಿರ್ಧರಿಸಿ, ತಕ್ಕವರಿಂದ ಲೇಖನಗಳನ್ನು ಬರೆಸುವ ಕೆಲಸ ಆರಂಭವಾದಾಗ ಲೇಖಕರಿಗೆ ಸಾಕಷ್ಟು ಕಾಲಾವಕಾಶ ಕೊಡಲು ಸಾಧ್ಯವಾಗಲಿಲ್ಲ. ಮೇಲಾಗಿ, ಆರ್ಯರ ಅನೇಕ ಸಾಹಿತ್ಯಕೃತಿಗಳು ಸುಲಭವಾಗಿ ಲಭ್ಯವಿರಲಿಲ್ಲ. ಕಲಾಕೃತಿಗಳಂತೂ ಸರಿಯೇ. ಆದರೂ ನಾವು ವಿನಂತಿಸಿಕೊಂಡ ಲೇಖಕರೆಲ್ಲ ಸಕಾಲಕ್ಕೆ ಲೇಖನಗಳನ್ನು ಬರೆದುಕೊಟ್ಟು ಉಪಕರಿಸಿದ್ದಾರೆ. ಸಂಪಾದಕನಾಗಿ ನನ್ನ ದೀರ್ಘಕಾಲದ ಅನುಭವದಲ್ಲಿ ಇದೊಂದು ಅಪರೂಪದ-ಸಂತೋಷದ ಪ್ರಸಂಗ. ಇದಕ್ಕೆಲ್ಲ ಆ ಲೇಖಕರಿಗೆ ಆರ್ಯರ ಬಗ್ಗೆ ಇರುವ ಪ್ರೀತಿ, ವಿಶ್ವಾಸ, ಗೌರವಗಳೇ ಕಾರ‍ಣ ಎಂದರೆ ಅತಿಶಯೋಕ್ತಿಯಲ್ಲ. ಜೊತೆಗೆ, ರಮಾಕಾಂತ ಜೋಶಿ, ಮಧು ದೇಸಾಯಿ, ಸಮೀರ ಜೋಶಿಯವರ ನಿರಂತರ ಪ್ರಯತ್ನಗಳೂ ಸೇರಿಕೊಂಡಿವೆ. ಇಲ್ಲಿಯ ಬಹುಪಾಲು ಲೇಖನಗಳು ಆರ್ಯರ ಕೃತಿಗಳನ್ನು ಕುರಿತು ಬಂದ ಮೊದಲ ಮಹತ್ವದ ಬರಹಗಳಾಗಿವೆ. ಜೊತೆಗೆ ಅವರ ಕೃತಿಗಳ ಬಗ್ಗೆ ಗಂಭೀರ ಚರ್ಚೆಯನ್ನು ಬೆಳೆಸುವ ತಾಕತ್ತಿನವಾಗಿವೆ. ಈ ಲೇಖಕರಿಗೆಲ್ಲ ಸಂಪಾದಕ ಮಂಡಳಿಯ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು.

ಈ ಪುಸ್ತಕಕ್ಕೆ ಅಭಿನಂದನ ಗ್ರಂಥದ ವಾಸನೆ ಬಡಿಯದಂಥ ಒಂದು ಹೆಸರು ಬೇಕಾಗಿತ್ತು. ಅದಕ್ಕೆ, ವೈಭವೀಕರಣವಿಲ್ಲದ, ತಟಸ್ಥವಾದ ಹೆಸರಿಗಾಗಿ ಹುಡುಕಾಡುತ್ತಿದ್ದೆವು. ‘ಆರ್ಯಾವರ್ತ’ ಎಂಬ ಅರ್ಥದೊಂದು ಹೆಸರನ್ನು ಸೂಚಿಸಿದವರು ಸಮಿತಿಯ ಗೌರವಾಧ್ಯಕ್ಷರಾದ ಹಿರಿಯ ಕವಿ ಶ್ರೀ ಚೆನ್ನವೀರ ಕಣವಿಯವರು. ಅವರಿಗೂ ನಮ್ಮ ಕೃತಜ್ಞತೆಗಳು.

-೨೦೦೫

* ಆರ್ಯರಿಗೆ ಅರವತ್ತು ತುಂಬಿದಾಗ ಹೊರತಂದ “ಆರ್ಯವರ್ತ’ ಸಂಪುಟಕ್ಕೆ (ಜಡಭರತ ಪ್ರಕಾಶನ, ಧಾರವಾಡ 2005) ಬರೆದ ಸಂಪಾದಕೀಯ.