ವೃತ್ತಿಯಿಂದ ಇಂಗ್ಲಿಷ್ ಅಧ್ಯಾಪಕರಾಗಿದ್ದುಕೊಂಡು ಕನ್ನಡದಲ್ಲಿ ಕೃತಿ ರಚನೆ ಮಾಡಿದ ಲೇಖಕರ ದೊಡ್ಡ ಪರಂಪರೆಯೇ ಕನ್ನಡದಲ್ಲಿದೆ. ಈ ಪರಂಪರೆಯ ಆದ್ಯ ಪ್ರವರ್ತಕರು ಬಿ.ಎಂ. ಶ್ರೀಕಂಠಯ್ಯನವರು, ಕಲಿಸುವ ವಿಷಯ ಯಾವುದೇ ಇದ್ದರೂ, ಬರವಣಿಗೆಯನ್ನು ಕನ್ನಡದಲ್ಲಿ ಮಾಡುವದರ ಮೂಲಕ ಕನ್ನಡದಲ್ಲಿ ಭಾಷೆ ಮತ್ತು ಸಾಹಿತ್ಯಗಳನ್ನು ಸಮೃದ್ಧಗೊಳಿಸಬೇಕೆಂಬ ವಾತಾವರಣವನ್ನು ನಿರ್ಮಿಸಿ, ತಮ್ಮಂತೆ ತಮ್ಮ ಶಿಷ್ಯರಲ್ಲೂ ಕನ್ನಡದಲ್ಲಿ ಬರೆಯುವ ಉತ್ಸಾಹವನ್ನು ಅವರು ಕುದುರಿಸಿದರು. ತಕ್ಷಣವೇ ಎಸ್.ವಿ. ರಂಗಣ್ಣ, ಎ.ಎನ್. ಮೂರ್ತಿರಾವ್, ಎಂ.ರಾಮರಾವ್, ಎಲ್.ಎಸ್. ಶೇಷಗಿರಿರಾವ್ ಮೊದಲಾದವರು ಈ ಸೆಳೆತಕ್ಕೆ ಒಳಗಾಗಿ ಕನ್ನಡ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಧಾರವಾಡದ ಕಡೆ ವಿ.ಕೃ. ಗೋಕಾಕ, ವಿ.ಎಂ. ಇನಾಂದಾರ, ಕೆ.ಆರ್. ಮಹಿಷಿ ಮೊದಲಾದವರು ಇದೇ ಹಾದಿಯನ್ನು ತುಳಿಯತೊಡಗಿದ್ದರು. ನವೋದಯದ ನಂತರ ಕನ್ನಡದಲ್ಲಿ ಬರೆಯತೊಡಗಿದ ಇಂಗ್ಲಿಷ್ ಅಧ್ಯಾಪಕರ ಸಂಖ್ಯೆ ಇನ್ನಷ್ಟು ದೊಡ್ಡದಾಯಿತು. ಗೋಪಾಲಕೃಷ್ಣ ಅಡಿಗ, ಜಿ.ಎಸ್. ಆಮೂರ, ಕೀರ್ತಿನಾಥ ಕುರ್ತಕೋಟಿ, ಎಂ.ಜಿ. ಕೃಷ್ಣಮೂರ್ತಿ, ಯು.ಆರ್. ಅನಂತಮೂರ್ತಿ, ಶಂಕರ ಮೊಕಾಶಿ – ಪುಣೇಕರ್, ಶಾಂತಿನಾಥ ದೇಸಾಯಿ, ಪಿ.ಲಂಕೇಶ್, ಕೆ.ನರಸಿಂಹಮೂರ್ತಿ, ಎ.ಕೆ. ರಾಮಾನುಜನ್, ಸುಮತೀಂದ್ರನಾಡಿಗ, ಪಿ.ಶ್ರೀನಿವಾಸರಾವ್, ಮೊದಲಾದವರು ನವ್ಯ ಸಾಹಿತ್ಯದ ಮುಂಚೂಣಿಯಲ್ಲಿದ್ದ ಲೇಖಕರಾದರೆ, ಸಿ.ಎನ್. ರಾಮಚಂದ್ರನ್, ಡಿ.ಎ. ಶಂಕರ್, ಚಂದ್ರಶೇಖರ ಪಾಟೀಲ, ನಾನು, ಕೆ.ವಿ. ತಿರುಮಲೇಶ್, ರಾಮಚಂದ್ರದೇವ, ಎಚ್.ಎಸ್. ಶಿವಪ್ರಕಾಶ, ರಾಜೇಂದ್ರ ಚೆನ್ನಿ, ಟಿ.ಪಿ. ಅಶೋಕ, ಓ.ಎಲ್. ನಾಗಭೂಷಣಸ್ವಾಮಿ ಮತ್ತು ಇನ್ನೂ ಹಲವರು ನಂತರದ ಪೀಳಿಗೆಗೆ ಸೇರಿದವರು. ನವ್ಯದ ಕಾಲದಲ್ಲಿ ಇಂಥವರ ಸಂಖ್ಯೆ ಎಷ್ಟಿತ್ತೆಂದರೆ, ನವ್ಯರೆಲ್ಲ ಇಂಗ್ಲಿಷ್ ಅಧ್ಯಾಪಕರು, ಇಂಗ್ಲಿಷ್ ಅಧ್ಯಾಪಕರೆಲ್ಲ ನವ್ಯರು ಎಂಬ ಭ್ರಮೆಯನ್ನು ಕೂಡ ಹುಟ್ಟಿಸಿತ್ತು. ಇಂಗ್ಲಿಷ್ ಅಧ್ಯಾಪಕರು ಕನ್ನಡದಲ್ಲಿ ಬರೆಯುವ ಪ್ರವೃತ್ತಿ ಇಂದು ಕೂಡಾ ಮುಂದುವರೆದಿದೆ.

ಹಿರಿಯ ಪೀಳಿಗೆಯ ಇಂಗ್ಲಿಷ್ ಅಧ್ಯಾಪಕರು ತಮ್ಮ ವೃತ್ತಿಗೆ ಸೇರಿದ ನಂತರ ಬಿ.ಎಂ.ಶ್ರೀ. ಅವರಿಂದ ಪ್ರೇರಣೆ ಪಡೆದು ಕನ್ನಡದ ಆಕರ್ಷಣೆಗೆ ಒಳಗಾದರು. ಕನ್ನಡದ ಬಗೆಗೆ ತಮಗಿರಬೇಕಾದ ಕರ್ತವ್ಯವನ್ನು ನೆನಪಿಸಿಕೊಂಡು ಇತ್ತ ಬಂದರು. ಹಳಗನ್ನಡದ ಸಾಹಿತ್ಯವನ್ನು ಸಹ ಶ್ರದ್ಧೆಯಿಂದ ಓದಿಕೊಂಡರು. ಅನೇಕರಿಗೆ ಮನೆಯಲ್ಲಿ ಸಂಸ್ಕೃತದ ತರಬೇತಿಯೂ ಇತ್ತು. ಇಂಗ್ಲಿಷ್, ಸಂಸ್ಕೃತ, ಕನ್ನಡಗಳ ಅಭ್ಯಾಸದಿಂದ ಅವರ ದೃಷ್ಟಿಗೆ ಒಂದು ರೀತಿಯ ಸಮಗ್ರತೆ ಬಂತು. ಬರುಬರುತ್ತ, ಕನ್ನಡದಲ್ಲಿ ಬರೆಯಬೇಕೆಂಬ ಛಲದಿಂದಲೇ ಇಂಗ್ಲಿಷ್ ಅಧ್ಯಾಪಕ ವೃತ್ತಿಯನ್ನು ಆಯ್ದುಕೊಳ್ಳುವವರ ಸಂಖ್ಯೆ ಹೆಚ್ಚಾಯಿತು. ಆದರೆ ಸಂಸ್ಕೃತದ ಹಿನ್ನೆಲೆ ದುರ್ಬಲವಾಗುತ್ತ ಹೋಯಿತು; ಹಳಗನ್ನಡ ಕೃತಿಗಳ ಅಭ್ಯಾಸವೂ ಕಡಿಮೆಯಾಯಿತು.

ಅದೇನೇ ಇದ್ದರೂ, ಇಂಗ್ಲಿಷ್ ಅಧ್ಯಾಪಕರು ಕನ್ನಡದಲ್ಲಿ ಬರೆಯತೊಡಗಿದ್ದರಿಂದ ಕನ್ನಡ ಸಾಹಿತ್ಯಕ್ಕೆ ಹಲವು ಬಗೆಯ ಲಾಭಗಳಾದವು:

೧. ಪಶ್ಚಿಮದ ಸಾಹಿತ್ಯದಲ್ಲಿ ಪ್ರಚುರವಾಗಿದ್ದ, ಕನ್ನಡ ಸಾಹಿತ್ಯಕ್ಕೆ ಅಪರಿಚಿತವಾಗಿದ್ದ ಅನೇಕ ಸಾಹಿತ್ಯ ಪ್ರಕಾರಗಳನ್ನು ಇವರು ಕನ್ನಡಕ್ಕೆ ಪರಿಚಯಿಸಿದರು. ಭಾವಗೀತೆ, ಕಾದಂಬರಿ, ಸಣ್ಣಕತೆ, ಲಲಿತಪ್ರಬಂಧ, ದುರಂತ ನಾಟಕ, ವಿಮರ್ಶೆ ಮೊದಲಾದವು ಮೊದಲ ಬಾರಿಗೆ ಆಧುನಿಕ ರೂಪದಲ್ಲಿ ಕನ್ನಡದಲ್ಲಿ ಕಾಣಿಸಿಕೊಂಡವು. ಇಂಥ ಬರವಣಿಗೆಯ ಹಿಂದೆ ಪಾಶ್ಚಾತ್ಯ ಸಾಹಿತ್ಯದ ಪ್ರಭಾವವಿದ್ದರೂ, ಅದನ್ನು ಭಾರತೀಯ ಸಾಹಿತ್ಯಪರಂಪರೆಗೆ ಪಳಗಿಸಿಕೊಳ್ಳುವ ಕೆಲಸವನ್ನೂ ಅವರು ಸಮರ್ಥವಾಗಿ ನಿರ್ವಹಿಸಿದರು. ಮಾಸ್ತಿಯವರ ಸಣ್ಣಕತೆಗಳಲ್ಲಿ, ಆರಂಭ ಕಾಲದ ಕನ್ನಡ ಕಾದಂಬರಿಗಳಲ್ಲಿ, ಶ್ರೀರಂಗರ ಈಚಿನ ನಾಟಕಗಳಲ್ಲಿ ಇಂಥ ಪೂರ್ವ- ಪಶ್ಚಿಮಗಳ ಅನುಸಂಧಾನದ ಮಾರ್ಗಗಳನ್ನು ಗುರುತಿಸಬಹುದು.

೨. ಇಂಗ್ಲೀಷಿನ ಮೂಲಕ ಇಡಿಯ ಯುರೋಪಿನ, ಅಮೇರಿಕದ, ಆಫ್ರಿಕದ – ಒಟ್ಟಿನಲ್ಲಿ ಜಾಗತಿಕ ಸಾಹಿತ್ಯದ ಮುಖ್ಯ ಪ್ರವೃತ್ತಿಗಳೆಲ್ಲ ಇಂಗ್ಲಿಷ್ ಅಧ್ಯಾಪಕರ ಮೂಲಕ ಲಭ್ಯವಾದುದರಿಂದ ಬೇರೆ ಕಡೆ ಸಾಹಿತ್ಯದಲ್ಲಿ ನಡೆಯುತ್ತಿದ್ದ ಹೊಸ ಪ್ರಯೋಗಗಳ ಮತ್ತು ಬೆಳವಣಿಗೆಗಳ ಬಗ್ಗೆ ಕನ್ನಡ ಸಾಹಿತ್ಯ ಅತ್ಯಂತ ಸೂಕ್ಷ್ಮ ಗ್ರಾಹಿಯಾಯಿತು. ಇಂಗ್ಲಿಷ್ ಅಧ್ಯಾಪಕರು ಈ ಹೊಸ ಬೆಳವಣಿಗೆಗಳಿಗೆ ಸೃಜನಶೀಲವಾಗಿ ಮತ್ತು ವಿಮರ್ಶಾತ್ಮಕವಾಗಿ ಸ್ಪಂದಿಸಿದರು.

೩. ಜಾಗತಿಕ ಸ್ತರದಲ್ಲಿ ಅತ್ಯಂತ ತೀವ್ರವಾಗಿ ಬದಲಾಗುತ್ತಿದ್ದ ವಿಮರ್ಶೆಯ ಸಿದ್ಧಾಂತಗಳನ್ನು ಹೆಚ್ಚಾಗಿ ಇಂಗ್ಲಿಷ್ ಅಧ್ಯಾಪಕರೇ. ಆಧುನಿಕ ಕನ್ನಡ ವಿಮರ್ಶೆಯಲ್ಲಿ ಅತ್ಯಂತ ಹೆಚ್ಚು ಕ್ರಿಯಾಶೀಲರಾಗಿರುವವರು ಇವರು.

೪. ಜಗತ್ತಿನ ಅತ್ಯಂತ ಮುಖ್ಯ ಕೃತಿಗಳನ್ನು ಇವರು ಕನ್ನಡಕ್ಕೆ ಭಾಷಾಂತರಿಸಿ ಕೊಟ್ಟರು. ಆ ಮೂಲಕ ಕನ್ನಡ ಓದುಗರಲ್ಲಿ ಸಾಹಿತ್ಯದ ಬಗೆಗಿನ ತಿಳಿವನ್ನು ವಿಸ್ತರಿಸಿದರು ಮತ್ತು ಜಾಗತಿಕ ಸಾಹಿತ್ಯದ ಮಾನದಂಡಗಳನ್ನು ಒದಗಿಸಿದರು.

೫. ಕನ್ನಡದ ಹಲವಾರು ಮಹತ್ವದ ಕೃತಿಗಳನ್ನು ಇಂಗ್ಲೀಷಿಗೆ ಅನುವಾದಿಸಿದ ಶ್ರೇಯಸ್ಸಿನ ಬಹು ದೊಡ್ಡ ಪಾಲು ಇಂಗ್ಲಿಷ್ ಅಧ್ಯಾಪಕರಿಗೆ ಸಲ್ಲಬೇಕು. ಇಂಥ ಅನುವಾದಗಳಿಂದಾಗಿಯೇ ಆಧುನಿಕ ಕನ್ನಡ ಸಾಹಿತ್ಯದ ಬಗೆಗೆ ಕನ್ನಡೇತರ ಭಾಷಿಕರಲ್ಲಿ – ವಿಶೇಷವಾಗಿ ಭಾರ‍ತದ ಸಂದರ್ಭದಲ್ಲಿ – ವಿಶೇಷ ತಿಳುವಳಿಕೆ ಮೂಡುವದು ಸಾಧ್ಯವಾಯಿತು. ಕನ್ನಡಕ್ಕೆ ಏಳು ಜ್ಞಾನಪೀಠ ಪ್ರಶಸ್ತಿಗಳು ಬಂದುದರ ಹಿನ್ನೆಲೆಯಲ್ಲಿ ಈ ಅನುವಾದಗಳ ಕಾಣಿಕೆಯನ್ನು ನಿರ್ಲಕ್ಷಿಸುವಂತಿಲ್ಲ. ಏ.ಕೆ.ರಾಮಾನುಜನ್ ಅವರ ಇಂಗ್ಲಿಷ್ ಅನುವಾದದಿಂದ ವಚನಗಳಿಗೆ ಜಾಗತಿಕ ಮನ್ನಣೆ ದೊರೆತದ್ದನ್ನೂ ಇಲ್ಲಿ ನೆನೆಯಬಹುದು.

೬. ಈ ಇಂಗ್ಲಿಷ್ ಅಧ್ಯಾಪಕರು ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ, ಕನ್ನಡ ಸಾಹಿತ್ಯವನ್ನು ಪರಿಣಾಮಕಾರಿಯಾಗಿ ಪ್ರತಿನಿಧಿಸುವ ಮೂಲಕ ಅದರ ಗೌರವವನ್ನು ಹೆಚ್ಚಿಸಿದ್ದಾರೆ. ಇದರಿಂದಾಗಿ ಕನ್ನಡ ಸಾಹಿತ್ಯಕ್ಕಷ್ಟೇ ಅಲ್ಲ, ಕನ್ನಡದ ವಿದ್ವತ್ತಿಗೂ ಗೌರವ ಬಂದಿದೆ.

ಈ ಎಲ್ಲ ಕೆಲಸಗಳನ್ನು ಮಾಡಿದ್ದು ಕೇವಲ ಇಂಗ್ಲಿಷ್ ಅಧ್ಯಾಪಕರು ಮಾತ್ರವಲ್ಲ. ಉಳಿದವರು ಕೂಡ ಈ ಬಗೆಯ ಕೆಲಸ ಮಾಡಿದ್ದಾರೆ. ಆದರೆ ಇಂಗ್ಲಿಷ್ ಅಧ್ಯಾಪಕರಿಗೆ ಇಂಥ ಕೆಲಸಗಳನ್ನು ಮಾಡುವ ಹಾದಿಯನ್ನು ತೋರಿಸಿಕೊಟ್ಟವರು ಬಿ.ಎಂ. ಶ್ರೀಕಂಠಯ್ಯನವರು ಎಂಬುದಂತೂ ನಿಜ.

ಇಂಗ್ಲಿಷ್ ಅಧ್ಯಾಪಕರಾಗಿ, ಇಂಗ್ಲಿಷ್ ಸಾಹಿತ್ಯದ ಅಭ್ಯಾಸಿಯಾಗಿ ಶ್ರೀಕಂಠಯ್ಯನವರು ಮಾಡಿದ ಅತ್ಯಂತ ಮಹತ್ವದ ಕೆಲಸವೆಂದರೆ ಇಂಗ್ಲಿಷ್ ಭಾವಗೀತೆ (Lyrics)ಗಳನ್ನು ಕನ್ನಡಕ್ಕೆ ಅನುವಾದಿಸಿ ಕೊಟ್ಟದ್ದು. ಭಾವಗೀತೆಗಳ ಲಕ್ಷಣಗಳನ್ನು ಹೋಲುವ ವಚನ, ಸ್ವರವಚನ, ಕೀರ್ತನೆ, ತತ್ವಪದಗಳು ಕನ್ನಡಕ್ಕೆ ಪರಿಚಿತವಾಗಿದ್ದರೂ, ಅಲ್ಲಿ ಬಿಡಿಬಿಡಿಯಾಗಿದ್ದ ಲಕ್ಷಣಗಳನ್ನು ಕ್ರೋಡೀಕರಿಸಿಕೊಂಡ ಆಧುನಿಕ ಭಾವಗೀತೆಯ ಸ್ವರೂಪ ಖಚಿತಗೊಂಡಿರಲಿಲ್ಲ. ಆಯ್ದ ಇಂಗ್ಲಿಷ್ ಪದ್ಯಗಳನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಶ್ರೀಕಂಠಯ್ಯನವರು ಭಾವಗೀತೆ(ಕವಿತೆ)ಯ ವಿಶಿಷ್ಟ ಕಾವ್ಯಪ್ರಕಾರವನ್ನು ಕನ್ನಡಕ್ಕೆ ಪರಿಚಯಿಸಿದರು.

೧೯೧೯ಕ್ಕೆ ಬಹಳ ಮುಂಚೆಯೇ ಶ್ರೀಕಂಠಯ್ಯನವರು ಇಂಗ್ಲಿಷ್ ಭಾವಗೀತೆಗಳನ್ನು ಅನುವಾದಿಸಲು ಆರಂಭಿಸಿದ್ದರೆಂದು ತಿಳಿದುಬರುತ್ತದೆ. ೧೯೧೯ರಲ್ಲಿ ಅವರ ಹೆಂಡತಿ ತೀರಿಕೊಂಡ ಮೇಲೆ ಈ ಕೆಲಸದ ಬಗ್ಗೆ ಉದಾಸೀನರಾಗಿ, ತಾವು ಅನುವಾದಿಸಿದ ಕವಿತೆಗಳನ್ನು ಪ್ರಕಟಿಸದೆ ಹಾಗೇ ಇಟ್ಟುಕೊಂಡಿದ್ದರೆಂದು ಕಾಣುತ್ತದೆ. ಅವರ ಗುರುಗಳಾಗಿದ್ದ ಬಾಪೂ ಸುಬ್ಬರಾಯರಿಗೆ ಈ ವಿಷಯ ಗೊತ್ತಿತ್ತು. ತಾವು ಪ್ರಕಟಿಸುತ್ತಿದ್ದ ‘ವಿದ್ಯಾದಾಯಿನಿ’ ಎಂಬ ಮಾಸಪತ್ರಿಕೆಯಲ್ಲಿ ಮೂರು ಅನುವಾದಿತ ಪದ್ಯಗಳನ್ನು ೧೯೧೯ರಲ್ಲಿ ಮೊದಲ ಬಾರಿ ಪ್ರಕಟಿಸಿದರು. ನಂತರ ತಮ್ಮ ಗ್ರಂಥಮಾಲೆಯಲ್ಲಿ ೧೨ ಪದ್ಯಗಳನ್ನು ಪುಸ್ತಕ ರೂಪದಲ್ಲಿ ೧೯೨೧ರಲ್ಲಿ ಹೊರತಂದರು. ಆಧುನಿಕ ಕನ್ನಡ ಸಾಹಿತ್ಯದ ಆರಂಭವೆಂದು ಈ ವರ್ಷವನ್ನೇ ಗುರುತಿಸುವ ಪರಿಪಾಠ ಇದೆ. ಆಮೇಲೆ ಡಿ.ವಿ. ಗುಂಡಪ್ಪನವರು ತಮ್ಮ ‘ಕರ್ನಾಟಕ ಜನಜೀವನ’ ಪತ್ರಿಕೆಯಲ್ಲಿ ೧೯೨೪ರಲ್ಲಿ ಮತ್ತೆ ೨೪ ಕವಿತೆಗಳನ್ನು ಪ್ರಕಟಿಸಿದರು. ೬೦ ಅನುವಾದಿತ ಕವಿತೆಗಳೊಂದಿಗೆ ೩ ಸ್ವತಂತ್ರ ಕವಿತೆಗಳನ್ನೂ ಸೇರಿಸಿ ೧೯೨೬ರಲ್ಲಿ “ಇಂಗ್ಲಿಷ್ ಗೀತಗಳು” ಎಂಬ ಹೆಸರಿನ ಅಧಿಕೃತ ಆವೃತ್ತಿಯನ್ನು ಪ್ರಕಟಿಸಿದರು ಬೆಂಗಳೂರು ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘದವರು. ಮೊದಲ ಸಲ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದಾಗಲೇ ಕುವೆಂಪು, ತೀ.ನಂ. ಶ್ರೀಕಂಠಯ್ಯ, ಮೊದಲಾದವರು ಈ ಅನುವಾದಗಳನ್ನು ಓದಿ, ಅವುಗಳ ಸರಳ ಸೊಬಗಿನಿಂದ ಆಕರ್ಷಿತರಾಗಿದ್ದರೆಂಬುದಕ್ಕೆ ದಾಖಲೆಗಳು ದೊರೆಯುತ್ತವೆ. ೧೯೨೬ರ ಸಮಗ್ರ ಆವೃತ್ತಿಯ ಪ್ರಕಟಣೆಯಿಂದ ಆಧುನಿಕ ಕನ್ನಡ ಕಾವ್ಯದ ಮೇಲೆ ಈ ಕೃತಿಯ ಪ್ರಭಾವ ವ್ಯಾಪಕವಾಗಿ ಕಾಣಿಸಿಕೊಂಡಿತು. ಅದರಲ್ಲೂ ಹಳೆಯ ಮೈಸೂರಿನ ಭಾಗದಲ್ಲಿ ಈ ಪ್ರಭಾವ ವಿಶೇಷವಾಗಿತ್ತು.

ಶ್ರೀಕಂಠಯ್ಯನವರಿಗಿಂತ ಮೊದಲು ಕನ್ನಡ ಇಂಗ್ಲಿಷ್ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸುವ ಪ್ರಯತ್ನಗಳು ನಡೆದಿದ್ದವು. ಹಟ್ಟಿಯಂಗಡಿ ನಾರಾಯಣರಾಯರು ಮಾಡಿದ್ದ ಅನುವಾದಗಳು ಧಾರವಾಡದ ‘ವಾಗ್ಭೂಷಣ’ ಪತ್ರಿಕೆಯಲ್ಲಿ ‘ಆಂಗ್ಲ ಕವಿತಾಸಾರ’ ಎಂಬ ಹೆಸರಿನಲ್ಲಿ ೧೯೧೮ರಲ್ಲಿಯೇ ಪ್ರಕಟವಾಗಿದ್ದವು. ೧೯೧೯ರಲ್ಲಿ “ಆಂಗ್ಲ ಕವಿತಾವಳಿ” ಎಂಬ ಹೆಸರಿನ ಪುಸ್ತಕವಾಗಿ ಆ ಅನುವಾದಗಳು ಪ್ರಕಟವಾದವು. ಎಂ.ಡಿ. ಅಳಸಿಂಗ್ರಾಚಾರ್, ಎಸ್.ಜಿ. ಗೋವಿಂದಚಾರ್ಯ, ಎಂ.ಎನ್. ಕಾಮತ್, ಎಂ.ಅನಂತರಾವ್, ಕಡೇಕಾರು ರಾಜಗೋಪಾಲಕೃಷ್ಣರಾಯ ಮೊದಲಾದವರೂ ಇಂಗ್ಲಿಷ್ ಕವಿತೆಗಳ ಅನುವಾದದ ಕೆಲಸಕ್ಕೆ ಕೈ ಹಾಕಿದ್ದರು (ಪಂಡಿತಾರಾಧ್ಯ, ೧೯೮೫). ಎಸ್.ಜಿ. ನರಸಿಂಹಚಾರ್ಯ, ಪಂಜೆ ಮಂಗೇಶರಾವ್, ಗೋವಿಂದ ಪೈ, ದ.ರಾ. ಬೇಂದ್ರೆ ಮೊದಲಾದವರ ಸ್ವತಂತ್ರ ಕವಿತೆಗಳೂ ಪ್ರಕಟವಾಗಿದ್ದವು. ಆದರೆ ಬೇರೆ ಬೇರೆ ಕಾರಣಗಳಿಂದಾಗಿ ಈ ಪ್ರಯತ್ನಗಳು ಅಷ್ಟಾಗಿ ಜನರ ಗಮನಕ್ಕೆ ಬಂದಿರಲಿಲ್ಲ. ಬಂದಿದ್ದರೂ ಹೊಸ ಮಾರ್ಗವೊಂದನ್ನು ಕಟ್ಟಿಕೊಡುವ ರೀತಿಯಲ್ಲಿ ಅವು ಯಶಸ್ವಿಯಾಗಿರಲಿಲ್ಲ. ಆ ಭಾಗ್ಯ ಶ್ರೀಕಂಠಯ್ಯನವರ “ಇಂಗ್ಲಿಷ್ ಗೀತಗಳು” ಎಂಬ ಸಂಕಲನಕ್ಕೆ ಮೀಸಲಾಗಿತ್ತು.

ಸಾಮಾನ್ಯವಾಗಿ ಅನುವಾದಿತ ಕೃತಿಯೊಂದಕ್ಕೆ ಯುಗಪ್ರವರ್ತಕನ ಸ್ಥಾನ ದೊರೆಯುವುದು ಬಹಳ ಅಪರೂಪ. ಹಾಗೆಯೇ ಅನುವಾದಿತ ಕೃತಿಯೊಂದರ ಬಗ್ಗೆ ವ್ಯಾಪಕ ಚರ್ಚೆ ನಡೆಯುವದೂ ಅಪರೂಪ. “ಇಂಗ್ಲಿಷ್ ಗೀತಗಳು” ಇದಕ್ಕೊಂದು ಅಪವಾದ. ಶ್ರೀಕಂಠಯ್ಯನವರು ಪ್ರಭಾವ ಬೀರಲು ಅನುಕೂಲವಾಗುವಂಥ ಅಧಿಕಾರಸ್ಥಾನದಲ್ಲಿದ್ದರೆಂಬುದೊಂದೇ ಇದಕ್ಕೆ ಕಾರಣವಲ್ಲ. ತನ್ನ ಆಂತರಿಕ ಸತ್ವದಿಂದಾಗಿಯೂ ಅದು ಸಹಜವಾಗಿ ಮಹತ್ವ ಪಡೆದುಕೊಂಡಿತು. ಜೊತೆಗೆ ಕಾಲವೂ ಕೂಡ ಅದಕ್ಕೆ ಅನುಕೂಲಕರವಾಗಿತ್ತು. ಇಡಿಯ ಒಂದು ಪೀಳಿಗೆಯೆ ಕಾವ್ಯದ ಹೊಸ ಅಭಿವ್ಯಕ್ತಿ ಮಾರ್ಗದ ಹುಡುಕಾಟದಲ್ಲಿದ್ದಾಗ “ಇಂಗ್ಲಿಷ್ ಗೀತಗಳು” ಆ ಅವಶ್ಯಕತೆಯನ್ನು ಯಶಸ್ವಿಯಾಗಿ ಪೂರೈಸಿತು. ಈ ಎಲ್ಲ ದೃಷ್ಟಿಯಿಂದ ಈ ಕೃತಿ ಕೇವಲ ಅನುವಾದವಲ್ಲ ಎನ್ನುವುದು ಎದ್ದು ಕಾಣುತ್ತದೆ.

ಈ ಸಂಗ್ರಹ ಭಾವಗೀತೆಯ ಆಧುನಿಕ ರೂಪವನ್ನು ಮೊದಲ ಬಾರಿಗೆ ಕನ್ನಡಕ್ಕೆ ಪರಿಚಯಿಸಿದ್ದು ಇದರ ಮೊದಲ ಹೆಚ್ಚುಗಾರಿಕೆ. ನಮ್ಮಲ್ಲಿ ಆಗಲೇ ಪರಿಚಿತವಾಗಿದ್ದ ಭಾವಗೀತದ ರೂಪಕ್ಕಿಂತ ಭಿನ್ನವಾದ, ಕವಿಯ ವೈಯಕ್ತಿಕ ಭಾವನೆಗಳ ಆದ್ಯತೆ ಕೊಡುವ ಪದ್ಯರೂಪವೊಂದು ಇಲ್ಲಿ ಕಾಣಿಸಿಕೊಂಡಿತು.

ಆಧುನಿಕ ಭಾವಗೀತೆಯಲ್ಲಿ ಕಾಣಿಸಿಕೊಳ್ಳುವ ಅನೇಕ ಮುಖ್ಯ ವಿಷಯಗಳ ಮಾದರಿಗಳನ್ನು ಈ ಕವಿತೆಗಳು ಒದಗಿಸಿದವು. “ಯುದ್ಧ, ಪ್ರೇಮ, ಮರಣ, ದೇಶಭಕ್ತಿ, ದೈವಭಕ್ತಿ, ಸೌಂದರ್ಯ, ಮಾನವ ಜನ್ಮದ ಸುಖದುಃಖಗಳು, ರಾಗದ್ವೇಷಗಳು. ಶ್ರೀಕಂಠಯ್ಯನವರೇ ಹೇಳಿರುವಂತೆ, ಇಂಗ್ಲಿಷ್ ಕವಿಗಳು ಶೃಂಗಾರರಸವನ್ನು ಹೇಗೆ ಗಂಭೀರವಾಗಿಯೂ ಸೂಕ್ಷ್ಮವಾಗಿಯೂ, ಸ್ವಾಭಾವಿಕವಾಗಿಯೂ ತೋರಿಸುವರೆಂಬುದನ್ನು ತಿಳಿಸುವುದಕ್ಕಾಗಿ ಆ ಬಗೆಯ ಗೀತಗಳು ಕೊಂಚ ಹೆಚ್ಚಾಗಿ ಬಂದಿವೆ” (ಶ್ರೀ, ೧೦೨೭: ಅರಿಕೆ).

ಈ ಹೊಸ ವಸ್ತುಗಳ, ವೈಯಕ್ತಿಕ ಆಶೆ-ಆಕಾಂಕ್ಷೆಗಳ ಅಭಿವ್ಯಕ್ತಿಗೆ ಅವಶ್ಯವಾದ ಹೊಸ ಕಾವ್ಯಭಾಷೆಯನ್ನು ರೂಪಿಸಿಕೊಟ್ಟದ್ದು ಈ ಕವಿತೆಗಳ ಅತ್ಯಂತ ಮುಖ್ಯವಾದ ಸಾಧನೆ ಎನ್ನಬಹುದು. ಆಧುನಿಕ ಸಂವೇದನೆಯ ಅಭಿವ್ಯಕ್ತಿ ಹೊಸ ರೂಪವನ್ನು ಬಯಸುವಂತೆ ಹೊಸ ನುಡಿಗಟ್ಟನ್ನೂ ಅಪೇಕ್ಷಿಸುತ್ತದೆ. ಒಂದು ಬದಲಾಗಿ ಇನ್ನೊಂದು ಬದಲಾಗದಿರುವದು ಅಭಾಸಕ್ಕೆ ಕಾರಣವಾಗುತ್ತದೆ. ಹಟ್ಟಿಯಂಗಡಿ ನಾರಾಯಣರಾಯರ ಅನುವಾದಗಳನ್ನು (ಪಂಡಿತಾರಾಧ್ಯ, ೧೯೮೫) ಮತ್ತು ಬೇಂದ್ರೆಯವರ ಆರಂಭದ ಷಟ್ಪದಿಗಳನ್ನು (“ಗರಿ”, ೧೯೩೨) ನೋಡಿದರೆ ಇದರ ಕಷ್ಟ ಏನೆಂದು ಅರ್ಥವಾದೀತು. ಹಳಗನ್ನಡ-ನಡುಗನ್ನಡಗಳ ಭಾಷಿಕ ರೂಪಗಳನ್ನು ಬಿಟ್ಟುಕೊಟ್ಟು, ಅಚ್ಚ ಕನ್ನಡದ ಆಧುನಿಕ ನುಡಿಗಟ್ಟನ್ನು ಬಳಕೆಗೆ ತಂದದ್ದು ಈ ಸಂಕಲನದ ಹೆಚ್ಚುಗಾರಿಕೆ. ಶ್ರೀಯವರು ಸಂಸ್ಕೃತಮಯವೂ ಅಲ್ಲದ, ಗ್ರಾಮ್ಯವೂ ಅಲ್ಲದ, ತಮ್ಮದೇ ಆದ ಒಂದು ಅನನ್ಯವಾದ ಮಧ್ಯಮಶೈಲಿಯನ್ನು ಇಲ್ಲಿ ರೂಪಿಸಿಕೊಂಡಿದ್ದಾರೆ. ಈ ಭಾಷೆಯಲ್ಲಿ ಸಂಸ್ಕೃತ ಶಬ್ದಗಳು ಇಲ್ಲವೆನ್ನುವಷ್ಟು ಕಡಿಮೆ. ‘ಮೇಲುನೋಟಕೆ ಮೆರೆಯಲಾರಳು’, ‘ಬಿಂಕದ ಸಿಂಗಾರಿ’, ‘ಕಾಳಗದ ಪದ’ ಮೊದಲಾದ ಅನೇಕ ಕವಿತೆಗಳಲ್ಲಿ ಒಂದೂ ಸಂಸ್ಕೃತ ಶಬ್ದವಿಲ್ಲ. ‘ಮಾದ-ಮಾದಿ’ಯಲ್ಲಿ “ವೈದ್ಯ”, ‘ನನ್ನ ಪ್ರೇಮದ ಹುಡುಗಿ’ಯಲ್ಲಿ “ಪ್ರೇಮ” ಒಂದೊಂದೇ ಸಂಸ್ಕೃತ ಶಬ್ದ, ಸಂಸ್ಕೃತ ಶಬ್ದಗಳನ್ನೂ ಬಳಸಿದಾಗಲೂ ಒಣ ಆಡಂಬರವಿಲ್ಲ. ಸಂಸ್ಕೃತ ಶಬ್ದಗಳನ್ನು ಬಳಸಲೇಬಾರದೆಂಬ ಪ್ರತಿಜ್ಞೆಯೂ ಶ್ರೀಕಂಠಯ್ಯನವರಿಗೆ ಇಲ್ಲ. ಸಂಸ್ಕೃತ ಶಬ್ದಗಳನ್ನು ತಪ್ಪಿಸಲು ಕೃತಕ ತದ್ಭವಗಳನ್ನು ಅವರು ಸೃಷ್ಟಿಸುವುದಿಲ್ಲ. ಆ ಕಾಲದ ಕವಿಗಳು ಮತ್ತು ಲೇಖಕರು ತಮ್ಮ ಬರವಣಿಗೆಗಾಗಿ ಹೊಸ ಭಾಷೆಯನ್ನು ರೂಪಿಸಿಕೊಳ್ಳಲು ನಡೆಸಿದ್ದ ಪ್ರಯತ್ನಗಳಿಗೆ ಹೋಲಿಸಿದಾಗ ಶ್ರೀಯವರ ಭಾಷೆಯು ಸರಳವೂ ಸಹಜವೂ ಓಜಸ್ವಿಯೂ ಆಗಿರುವಂತೆ ಪ್ರಬುದ್ಧವೂ ಆಗಿ ಕಾಣುತ್ತದೆ. ಮುಂದಿನ ಕವಿಗಳ ಮೇಲೆ ಈ ಭಾಷೆ ಸಾಕಷ್ಟು ಪ್ರಭಾವ ಬೀರಿದೆ.

“ಇಂಗ್ಲಿಷ್ ಗೀತಗಳು” ಪಡೆದಿರುವ ಐತಿಹಾಸಿಕ ಮಹತ್ವಕ್ಕೆ ಇನ್ನೊಂದು ಮುಖ್ಯಕಾರಣ, ಅದು ಬಳಕೆಗೆ ತಂದ ಹೊಸ ಛಂದೋರೂಪಗಳು. ಅವರ ಸಮಕಾಲೀನರಾದ ಅನೇಕ ಕವಿಗಳು ಕಂದ, ವೃತ್ತ, ಷಟ್ಪದಿಗಳಲ್ಲೇ ಕಾವ್ಯರಚನೆಗೆ ತೊಡಗಿದ್ದ ಕಾಲ ಅದು. ದ್ವಿತೀಯಾಕ್ಷರ ಪ್ರಾಸವನ್ನು ಕೈ ಬಿಡುವುದೇ ಒಂದು ಕ್ರಾಂತಿಕಾರಕ ನಿರ್ಧಾರವೆನಿಸಿದ್ದ ಕಾಲವೂ ಅದಾಗಿತ್ತು. ಶ್ರೀ ಅವರು ದ್ವಿತೀಯಾಕ್ಷರ ಪ್ರಾಸದ ಬಗ್ಗೆ ಹೆಚ್ಚು ಯೋಚನೆಯನ್ನೇ ಮಾಡಲಿಲ್ಲ. ಸಾಧ್ಯವಾದ ಕಡೆ ಇಟ್ಟುಕೊಂಡಿದ್ದಾರೆ, ಅನೇಕ ಕಡೆ ಬಿಟ್ಟಿದ್ದಾರೆ, ಕೆಲವು ಕಡೆ ಸಾಲುಗಳ ಕ್ರಮ ತಪ್ಪಿಸಿ ಬಳಸಿದ್ದಾರೆ. ರಗಳೆ, ಷಟ್ಪದಿಗಳ ಮೂಲ ಮಾತ್ರಾಗಣಗಳನ್ನೇ ಮಾದರಿಯಾಗಿ ಇರಿಸಿಕೊಂಡು, ಇಂಗ್ಲೀಷಿನ ಛಂದೋರೂಪಗಳನ್ನು (Stanzaic forms) ಮಾದರಿಯಾಗಿ ಇರಿಸಿಕೊಂಡು ಅವುಗಳನ್ನು ಹೊಸ ರೀತಿಯಲ್ಲಿ ಅಳವಡಿಸಿದರು. ‘ಕನಕಾಂಗಿ’, ‘ಬಿಂಕದ ಸಿಂಗಾರಿ’ಯಂಥ ಕವಿತೆಗಳು ಸಾಂಪ್ರದಾಯಿಕ ಷಟ್ಪದಿಗಳೇ ಆಗಿದ್ದರೂ, ಆದಿಪ್ರಾಸವನ್ನು ಬಿಟ್ಟು, ಆರು ಸಾಲಿನ ಬದಲು ನಾಲ್ಕು ಸಾಲಿಗೆ ಇಳಿದು, ಅಂತ್ಯಪ್ರಾಸವನ್ನು ಸೇರಿಸಿಕೊಂಡು ಸರಳವಾಗಿ ಹೊಸ ರೂಪ ಪಡೆದುಬಿಟ್ಟಿವೆ. ಈಗ ನೋಡಿದರೆ ಅವು ಷಟ್ಪದಿಗಳೆಂಬ ಅನುಮಾನ ಕೂಡ ಬರುವುದಿಲ್ಲ. ಅನುವಾದದಲ್ಲಿ ಅಂತ್ಯಪ್ರಾಸವನ್ನು ನಿಯತವಾಗಿ ಬಳಸುವದು ಎಷ್ಟು ಕಷ್ಟದ್ದೆಂದು ಅಂಥ ಪ್ರಯತ್ನ ಮಾಡಿದ ಯಾರಿಗಾದರೂ ತಿಳಿದೀತು. ಈ ಪ್ರಯೋಗಗಳನ್ನು ಕುರಿತು ತೀ.ನಂ. ಶ್ರೀಕಂಠಯ್ಯನವರು “ಇಂಗ್ಲಿಷ್ ಗೀತಗಳು” ೧೯೫೩ರ ಆವೃತ್ತಿಗೆ ಬರೆದ ಪ್ರಸ್ತಾವನೆಯಲ್ಲಿ ದೀರ್ಘವಾಗಿ ಮತ್ತು ಬಹಳ ಸಮರ್ಪಕವಾಗಿ ಚರ್ಚಿಸಿರುವುದರಿಂದ ಅದನ್ನು ಮತ್ತೆ ಚರ್ಚಿಸುವುದು ಧಾರ್ಷ್ಟ್ಯದ ಮಾತು. ಒಟ್ಟಿನಲ್ಲಿ ಶ್ರೀ ಅವರ ಈ ಪ್ರಯೋಗಗಳು ಮುಂದಿನ ಕವಿಗಳಿಗೆ ಪ್ರಯೋಗಶೀಲತೆಯ ಹಲವಾರು ದಾರಿಗಳನ್ನು ತೆರೆದವೆಂಬುದು ಈಗ ಇತಿಹಾಸ.

ಅನುವಾದದ ಪ್ರಕ್ರಿಯೆಯನ್ನು ಕುರಿತು ಈ ಕಾಲದಲ್ಲಿ ಅನೇಕ ಸಿದ್ಧಾಂತಗಳು ಬೆಳಕಿಗೆ ಬಂದಿವೆ. ಭಾಷೆ ಕೂಡ ನಮ್ಮ ಭಾವನೆ ಹೇಳಿಕೊಳ್ಳಬಹುದಾದ ಒಮ್ಮತವಿಲ್ಲ. ಒಂದು ಭಾಷೆಯ ಕೃತಿಯನ್ನು ಇನ್ನೊಂದು ಭಾಷೆಗೆ ಅನುವಾದಿಸುವಾಗ ಉದ್ದೇಶಗಳು ಭಿನ್ನವಾಗಿರುತ್ತವೆ. ಉದ್ದೇಶಗಳಿಗೆ ಅನುಗುಣವಾಗಿ ವಿಧಾನಗಳೂ ಭಿನ್ನವಾಗಿರುತ್ತವೆ. ಕನ್ನಡದಲ್ಲಿಯೂ ಹಳಗನ್ನಡ ಕಾಲದಿಂದ ಅದರದೇ ಆದ ಒಂದು ಅನುವಾದ ಸಿದ್ಧಾಂತ ರೂಪುಗೊಂಡಿದೆ. ಪಂಪನ “ವಿಕ್ರಮಾರ್ಜುನ ವಿಜಯ”, ಕುಮಾರವ್ಯಾಸನ “ಕರ್ಣಾಟಭಾರತ ಕಥಾಮಂಜರಿ” ಮೊದಲಾದ ಕೃತಿಗಳನ್ನು ಈ ಸಿದ್ಧಾಂತದ ಮುಖ್ಯ ಉದಾಹರಣೆಗಳೆಂದು ಗುರುತಿಸಬಹುದು. ಈ ಎರಡೂ ಕೃತಿಗಳೂ ವ್ಯಾಸನ ಮೂಲಭಾರತದ ಅನುವಾದಗಳಾಗಿದ್ದರೂ. ಹಾಗೆಂದು ಆ ಕವಿಗಳು ಸ್ಪಷ್ಟವಾಗಿ ಹೇಳಿದ್ದರೂ, ನಾವು ಅವುಗಳನ್ನು ವ್ಯಾಸಭಾರತದ ಅನುವಾದಗಳೆಂದು ಚರ್ಚಿಸುತ್ತಿಲ್ಲ. ಕ್ರಮವಾಗಿ ಅವುಗಳನ್ನು “ಪಂಪಭಾರತ”, “ಕುಮಾರವ್ಯಾಸ ಭಾರತ” ಎಂದು ಸ್ವತಂತ್ರ ಕೃತಿಗಳಂತೆಯೇ ನೋಡುತ್ತಿದ್ದೇವೆ. ಪಂಪ-ಕುಮಾರವ್ಯಾಸರು ವ್ಯಾಸಭಾರತದಿಂದ ಮಾಡಿಕೊಂಡ ಬದಲಾವಣೆಗಳನ್ನು ದೋಷಗಳೆಂದು ಪರಿಗಣಿಸದೆ ಆ ಕವಿಗಳ ಸ್ವೋಪಜ್ಞತೆಯ ಲೆಕ್ಕಕ್ಕೆ ಸೇರಿಸುತ್ತೇವೆ. ಇದಕ್ಕೆ ಮುಖ್ಯ ಕಾರಣವೆಂದರೆ, ಪಂಪ, ಕುಮಾರವ್ಯಾಸರು ವ್ಯಾಸಭಾರತದ ಮೂಲ ಕಥೆಯನ್ನು ತಮ್ಮ ಸ್ವಂತ ದರ್ಶನದ ಅಭಿವ್ಯಕ್ತಿಗಾಗಿ, ಅರ್ಥಾತ್ ಸ್ವಾಭಿವ್ಯಕ್ತಿಗಾಗಿ ಬಳಸಿಕೊಂಡಿರುವುದು. ಅದಕ್ಕಾಗಿ ಅವರ ಕೃತಿಗಳು ಸ್ವತಂತ್ರ ಕೃತಿಗಳಾಗಿಯೇ ಚರ್ಚೆಗೊಳಗಾಗಿವೆ.

ಕನ್ನಡದ ಈ ವಿಶಿಷ್ಟ ಅನುವಾದ ಪರಂಪರೆಗೆ ಬಿ.ಎಂ.ಶ್ರೀ. ಅವರ “ಇಂಗ್ಲಿಷ್ ಗೀತಗಳು” ಕೃತಿಯನ್ನು ಸೇರಿಸಬಹುದೆ? ‘ಪ್ರಾರ್ಥನೆ’, ‘ಜೀವ’, ‘ಹೇಳದಿರು ಹೋರಾಡಿ ಫಲವಿಲ್ಲವೆಂದು’, ‘ಎರಡು ಮನಸ್ಸು’ (ಇದು ಶ್ರೀಯವರೇ ಮೂಲದಲ್ಲಿ ಇಂಗ್ಲೀಷಿನಲ್ಲಿ ಬರೆದಿದ್ದ ‘TWO moods’ ಎಂಬ ಕವಿತೆಯ ಅನುವಾದ), ‘ಪೆಡಾಸುದಾರಿ’, ‘ಹಳೆಯ ಪಳಕೆಯ ಮುಖಗಳು’, ‘ ಮನಸ್ತಾಪ’, ‘ಕಳೆದ ಹಿಂದಿನ ದಿನಗಳು’ ಮೊದಲಾದ ಅನೇಕ ವಿಶಾದಮಯ ಕವಿತೆಗಳಲ್ಲಿ ಶ್ರೀಯವರು ತಮ್ಮ ವೈಯಕ್ತಿಕ ನೋವನ್ನು ತೋಡಿಕೊಳ್ಳುತ್ತಿರುವಂತೆ ಆಪ್ತವಾಗಿ, ಪ್ರಾಮಾಣಿಕವಾಗಿ ಕಾಣುತ್ತವೆ. ‘ಮುದ್ದಿನ ಕುರಿಮರಿ’, ‘ನನ್ನ ಪ್ರೇಮದ ಹುಡುಗಿ’, ‘ ಮಾದ-ಮಾದಿ’, ‘ಮೇಲುನೋಟಕೆ ಮೆರೆಯಲಾರಳು’, ‘ಬಿಂಕದ ಸಿಂಗಾರಿ’, ‘ಹೆದರುವೆನು ನಾ ನಿನ್ನ ಬಿನ್ನಾಣಕೆಲೆ ಹೆಣ್ಣೆ’, ‘ಒಂದು ಮಾತನು ಲೋಕ ಹೊಲೆಗೆಡಿಕೊಂಡಿಹುದು’, ‘ದುಃಖಸೇತು’ ಮೊದಲಾದ ಅನೇಕ ಕವಿತೆಗಳು ಕನ್ನಡದವೇ ಎನಿಸುವಷ್ಟು ಸಹಜವಾಗಿ ಬಂದಿವೆ. ಇವುಗಳನ್ನೂ ಸುತ್ತಿ ಬಳಸಿ ಸ್ವಾಭಿವ್ಯಕ್ತಿಯ ಲೆಕ್ಕದಲ್ಲೇ ಸೇರಿಸಿಕೊಳ್ಳಬಹುದು. ಯಾಕೆಂದರೆ. ಇವತ್ತು ನಾವು ಈ ಕವಿತೆಗಳನ್ನು ಮೂಲ ಕವಿಗಳ ಹೆಸರು ನೆನಪಿಸಿಕೊಳ್ಳದೆ ಓದಬಹುದು. ಆ ಮೂಲ ಕವಿಗಳಲ್ಲಿ ಕೆಲವರು ಬಹಳ ಪರಿಚಿತರೇನೂ ಅಲ್ಲ. ಶ್ರೀಯವರ ಅನುವಾದದಲ್ಲಿಯೇ ಆ ಕವಿತೆಗಳು ನೆನಪಿನಲ್ಲಿ ಉಳಿದಿರುವದು. ಇದನ್ನೆಲ್ಲ ಗಮನಿಸಿದಾಗ ಶ್ರೀಯವರು ಪಂಪ-ಕುಮಾರವ್ಯಾಸರ ಪರಂಪರೆಯಲ್ಲೇ ಇದ್ದಾರೆ ಎನಿಸುತ್ತದೆ.

ಆದರೆ ಈ ಹಿನ್ನೆಲೆಯಲ್ಲಿ ‘ರಾವುತರ ದಾಳಿ’, ‘ರಾಯಲ್ ಜಾರ್ಜ್ ಮುಳಗಿ ಹೋದದ್ದು’, ‘ಇಂಗ್ಲೆಂಡ್ ನಾವಿಕರು’, ‘ಆಳೌ ಬ್ರಿಟಾನಿಯಾ!’, ‘ಇಂಗ್ಲೆಂಡ್’, ‘ಬ್ಲೆನ್ ಹೀಮ್ ಕದನ’ ಮೊದಲಾದ ಇಂಗ್ಲೆಂಡನ್ನು ಹಾಡಿ ಹೊಗಳುವ ಕವಿತೆಗಳನ್ನು ಹೇಗೆ ಅರ್ಥೈಯಿಸುವುದು? ಇಲ್ಲಿಯೂ ಸ್ವಾಭಿವ್ಯಕ್ತಿಯೇ ಪ್ರಕಟವಾಗಿದೆಯೆ? ಹೌದೆಂದು ಒಂದು ಬಲವಾದ ವಾದವಿದೆ. ಶ್ರೀಯವರ ಶಿಷ್ಯರಾದ ಎಸ್.ವಿ. ರಂಗಣ್ಣನವರು, ಶ್ರೀ ಅವರಿಗೆ ಗಾಂಧೀಜಿಯ ಬಗೆಗಾಗಲಿ, ಸ್ವಾತಂತ್ರ್ಯ ಚಳವಳಿಯ ಬಗೆಗಾಗಲಿ ಗೌರವವಿರಲಿಲ್ಲವೆಂದೆ ಸ್ಪಷ್ಟವಾಗಿಯೇ ಹೇಳಿದ್ದಾರೆ: “ಈ ಬ್ರಿಟಿಷ್ ಸಂಬಂಧ ನಮಗೆ ಬಂದದ್ದು ನಿಜವಾಗಿಯೂ ದೈವಿಕವಾಗಿ….. ಅದನ್ನು ನಾವು ಕಳೆದುಕೊಳ್ಳಬಾರದು, ಅವರ ನೇತೃತ್ವದಲ್ಲಿ ನಾವು ಮುಂದೆ ಹೋಗಬೇಕು” ಎಂದು ಶ್ರೀಯವರು ಪ್ರತಿಪಾದಿಸುತ್ತಿದ್ದರೆಂತೆ (೧೯೮೪:೪೧೧). ಇನ್ನೊಬ್ಬ ಶಿಷ್ಯರಾದ ಎ.ಎನ್. ಮೂರ್ತಿರಾವ್ ಅವರು ಈ ವಿಷಯವನ್ನು ಸ್ವಲ್ಪ ಮುಜುಗರದಿಂದಲೇ ಪ್ರಸ್ತಾಪಿಸುತ್ತ, ತಾನು ನಾಲ್ಕಾರು ಜನರಿಂದ ಕೇಳಿದ ಸಂಗತಿಯೊಂದನ್ನು ದಾಖಲಿಸಿದ್ದಾರೆ. ಶ್ರೀಯವರು, “ನಾನು ಸತ್ತ ಮೇಲೆ ನನ್ನ ಹೃದಯವನ್ನು ತೆರೆದು ನೋಡಿದರೆ, ಅದರ ಮೇಲೆ ‘ಇಂಗ್ಲೆಂಡ್’ ಎಂದು ಬರೆದುದನ್ನು ಕಾಣಬಹುದು” ಎಂದು ಹೇಳುತ್ತಿದ್ದರಂತೆ (೧೯೪೨:೩೦). ಈ ಮನೋಧರ್ಮಕ್ಕೆ ಇಂಗ್ಲೆಂಡಿನ ಮೇಲಿನ ಕವನಗಳ ಅನುವಾದವೂ ಸ್ವಾಭಿವ್ಯಕ್ತಿಯ ಒಂದು ರೂಪವೇ ಆಗಿ ಒದಗಿ ಬಂದಿದ್ದರೆ ಆಶ್ಚರ್ಯವೇನೂ ಇಲ್ಲ. ಈ ಹಿನ್ನೆಲೆಯಲ್ಲಿ “ಇಂಗ್ಲಿಷ್ ಕವಿಗಳ ದೇಶಭಕ್ತಿಯ ಮಾದರಿಯನ್ನು ನಮ್ಮ ಮುಂದಿಡಬೇಕೆಂಬುದೇ ‘ಶ್ರೀ’ ಅವರ ಉದ್ದೇಶ, ತಮ್ಮ ‘ಬ್ರಿಟಿಷ್ ವ್ಯಕ್ತಿ’, ‘ಇಂಗ್ಲೆಂಡ್ ಪ್ರೇಮ’ವನ್ನು ಮೆರೆಸುವದಲ್ಲ” ಎಂಬ ಎಂ.ವಿ. ಸೀತಾರಾಮಯ್ಯನವರು (೨೦೦೬: vii) ಮಾತನ್ನು ಒಪ್ಪಲಿಕ್ಕಾಗುವುದಿಲ್ಲ.

ಶ್ರೀ ಅವರಿಗೆ ಇಂಗ್ಲೆಂಡಿನ ಬಗ್ಗೆ ನಿಜವಾದ ಭಕ್ತಿ, ಅಭಿಮಾನಗಳಿದ್ದವೆಂಬ ಬಗ್ಗೆ ಅವರ ‘ಭರತಮಾತೆಯ ವಾಕ್ಯ’ ಎಂಬ ಸ್ವತಂತ್ರ ಕವಿತೆ ಇನ್ನಷ್ಟು ಬಲವಾದ ಪುರಾವೆಯನ್ನು ಒದಗಿಸುತ್ತದೆ. ೧೯೨೬ರ “ಇಂಗ್ಲಿಷ್ ಗೀತಗಳು” ಆವೃತ್ತಿಯಲ್ಲೇ ಸೇರಿದ್ದ ಈ ಕವಿತೆಯಲ್ಲಿ ಶ್ರೀ ಅವರು ಭಾರತ ದೇಶದ ಉಜ್ವಲ ಪರಂಪರೆಯನ್ನು ನೆನೆಯುತ್ತ. ಭರತಮಾತೆ ಮತ್ತೆ ಎಂದು ತಲೆಯೆತ್ತಿ ನಿಲ್ಲುವಳು? ಎಂದು ಕಳಕಳಿಯಿಂದ ಕೇಳಿದ್ದಾರೆ. ಆದರೆ ಭರತಮಾತೆ ಆ ಪ್ರಶ್ನೆಗೆ ಕೊಡುವ ಉತ್ತರ ಕುತೂಹಲಕರವಾಗಿದೆ:

ಕಡೆಗೆ ನೆನೆದೆನು ನನ್ನ ಮನೆತನ ನೇರವಾಗುವ ತೆರವನು,
ಕಡಲ ರಾಣಿ ಬ್ರಿಟಾನಿಯಳ, ನನ್ನಿನಿಯ ತಂಗಿಯ ನೆರವನು:-
ಗೆಲಿದು ನಾಡನು ಬೆಳೆದಳುನೆಲ
ದೊಲುಮೆಕಟ್ಟನು ಹೊಸೆದಳು.

ಸಕಲ ಧರ್ಮದ ತಿರುಳ ಹೊರೆದಳು, ಸಕಲ ಜ್ಞಾನದ ತೆರೆದಳು,
ಸಕಲ ಸೀಮೆಯ ಬಳಕೆಗೆಳೆದಳು, ಸಕಲ ಕುಶಲವನೊರೆದಳು;-
ಅವಳ ಗುಣವನು ಮೆರೆಯಿರಿಕಳೆ
ದವಳ ಕೊರೆತೆಯ ಮರೆಯಿರಿ.

ಭರತಮಾತೆಯ ಬಗ್ಗೆ ಅವರಿಗೆ ಸಾಕಷ್ಟು ಗೌರವವಿದೆ. ಆದರೆ ಅವಳ ಉದ್ಧಾರವಾಗಬೇಕಾದರೆ ಅವಳ ತಂಗಿ ಬ್ರಿಟಾನಿಯಳ ಸಹಾಯ ಬೇಕೇಬೇಕು.

ಹೀಗೆ ಅನುವಾದವನ್ನು ಸ್ವಾಭಿವ್ಯಕ್ತಿಯ ಮಾಧ್ಯಮವಾಗಿ ಬಳಸಿಕೊಂಡ ರೀತಿಯಲ್ಲಿ ಶ್ರೀಯರ “ಇಂಗ್ಲಿಷ್ ಗೀತಗಳು” ಪಂಪ-ಕುಮಾರವ್ಯಾಸರ ಪರಂಪರೆಯಲ್ಲಿಯೇ ಇದೆ ಎನ್ನಬಹುದು. ಆ ಕಾರಣಕ್ಕಾಗಿಯೂ ಅದೊಂದು ಮಹತ್ವದ ಕೃತಿಯೆಂದು ಚರ್ಚಿಸಲ್ಪಟ್ಟಿದೆ. ಈ ಕವಿತೆಗಳ ಮೂಲ ಕವಿಗಳು ಯಾರು ಯಾರೋ ಇದ್ದಾರೆ. ಅವರಲ್ಲಿ ಷೇಕ್ ಸ್ಪಿಯರ್, ವರ್ಡ್ಸ್ ವರ್ಥ್, ಷೆಲಿ, ಬರ್ನ್ಸ್, ಟೆನಿಸನ್, ಬ್ರೌನಿಂಗ್ ಮೊದಲಾದವರಂತೆ ಕೆಲವರು ಪ್ರಸಿದ್ದರು; ಅನೇಕರು ಅಪ್ರಸಿದ್ದರು. ಶ್ರೀಯವರ ಅನುವಾದಗಳನ್ನು ಓದುವಾಗ ಇವರ್ಯಾರೂ ನಮ್ಮ ನೆನಪಿಗೆ ಬರುವದೇ ಇಲ್ಲ. ಅನೇಕ ಸಾಮಾನ್ಯ ಕವಿತೆಗಳು ಶ್ರೀಯವರ ಅನುವಾದದಲ್ಲಿ ಹೊಸ ಜೀವ ಪಡೆದಿವೆ. ಕೊನೆಗೂ ನಾವು ಈ ಕವಿತೆಗಳನ್ನು ಶ್ರೀಯವರ, ಕನ್ನಡದ ಕವಿತೆಗಳೆಂದೇ ಓದಿಕೊಳ್ಳುತ್ತಿದ್ದೇವೆ.

ಇಂಥ ಓದಿಗೆ ಕುಮ್ಮಕ್ಕು ಕೊಡುವ ಇನ್ನೊಂದು ವಿಶೇಷ ಅಂಶ ಇಲ್ಲಿದೆ. ಇಲ್ಲಿ ಅನುವಾದಗೊಂಡಿರುವ ಕವಿಗಳಲ್ಲಿ ಅಲ್ಲ. ಷೇಕ್ ಸ್ಪಿಯರ್ ೧೬ನೇ ಶತಮಾನದವನು. ಕೆಲವರು ರೊಮ್ಯಾಂಟಿಕ್ ಕಾವ್ಯದ ಮೊದಲ ಅವಧಿಗೆ ಸೇರಿದವರು. ಇನ್ನು ಕೆಲವರು ವಿಕ್ಟೋರಿಯನ್ ಯುಗಕ್ಕೆ ಸೇರಿದವರು. ರೊಮ್ಯಾಂಟಿಕ್ ಯುಗಕ್ಕಿಂತ ಮುಂದೆಯೇ ಬಂದ ಬರ್ನ್ಸ್‌ನೂ ಇಲ್ಲಿದ್ದಾನೆ. ಮೂಲದಲ್ಲಿ ಇವರಿಗೆಲ್ಲ ಅವರವರದೇ ಆದ ವಿಶಿಷ್ಟ ಭಾಷಾಶೈಲಿಗಳಿದ್ದವು. ಬರ್ನ್ಸ್ ಬರೆದದ್ದು ಸ್ಕಾಟಿಷ್ ಉಪಭಾಷೆಯಲ್ಲಿ. ಸ್ಕಾಟ್ ಕೂಡ ಸ್ವಲ್ಪ ಹಾಗೆಯೇ. ಷೇಕ್ಸ್ ಪಿಯರನದು ಸಾಕಷ್ಟು ಹಳೆಯ ರೀತಿಯ ಭಾಷೆ. ಇವರ ಕವಿತೆಗಳು ಶ್ರೀಯವರ ಕೈಯಲ್ಲಿ ಕನ್ನಡಕ್ಕೆ ಅನುವಾದವಾಗುವಾಗ ತಮ್ಮ ಮೂಲ ಭಾಷೆ-ಶೈಲಿಗಳ ವ್ಯಕ್ತಿ ವಿಶಿಷ್ಟತೆಗಳನ್ನು ಕಳೆದುಕೊಂಡು ಏಕರೂಪತೆ ಪಡೆದುಕೊಂಡಿವೆ. ಅಲ್ಲಿರುವುದು ಷೇಕ್ ಸ್ಪಿಯರ್, ಬರ್ನ್ಸ್, ವರ್ಡ್ಸ್‌ವರ್ಥ್ರ ಭಾಷೆ-ಶೈಲಿಗಳಲ್ಲ, ಶ್ರೀಯವರವು. ಒಬ್ಬ ಕವಿ ಹಲವು ಕವಿಗಳನ್ನು ಒಟ್ಟಿಗೆ ಅನುವಾದಿಸುವಾಗ ಹೀಗಾಗುವುದು ಸಹಜವೆಂದು ಕಾಣುತ್ತದೆ. ಕಳೆದ ಶತಮಾನದ ನೂರು ಇಂಗ್ಲಿಷ್ ಕವಿತೆಗಳನ್ನು ಅನುವಾದಿಸಿದಾಗ ರಾಮಚಂದ್ರಶರ್ಮರು ಹೇಳಿದ ಮಾತುಗಳು – “ಇವು ನೇರ ಅನುವಾದಗಳಲ್ಲ; ರೂಪಾಂತರಗಳು. ಒಂದು ದೃಷ್ಟಿಯಲ್ಲಿ ಪುನಃ ಸೃಷ್ಟಿಗಳೆಂದರೂ ತಪ್ಪಾಗದೇನೋ. ನನಗೇ ಹೊಳೆದು ಇವನ್ನು ನಾನು ಕನ್ನಡದಲ್ಲಿ ಬರೆದಿದ್ದರೆ ಹೇಗೆ ಬರೆಯುತ್ತಿದ್ದೆ ಎಂದು ಅನೇಕ ಸಲ ಕೇಳಿಕೊಂಡ ಪ್ರಶ್ನೆಗೆ ಇವು ಉತ್ತರ ರೂಪವಾಗಿ ಬಂದಿವೆಯೆನ್ನಬಹುದು. ಈ ಮಾತಿನ ಅರ್ಥ, ಮೂಲದ ಅನುಭವವನ್ನು ಹಾಗೂ ಬಂಧ ಪ್ರಾಸಾನುಪ್ರಾಸಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದೇನೆಂದಲ್ಲ. ಸಾಕಷ್ಟು ಸ್ವಾತಂತ್ರ್ಯವನ್ನು ತೆಗೆದುಕೊಂಡಿರುವುದಂತೂ ನಿಜ. ಕೆಲವೊಂದು ರೂಪಾಂತರಗಳು ಮೂಲ ಕವನಗಳಿಗೆ ಹತ್ತ ಹತ್ತಿರದಲ್ಲಿದ್ದರೆ ಇನ್ನು ಕೆಲವು ಸುಮಾರು ದೂರದಲ್ಲಿವೆ. ಎರವಲು ತಂದದ್ದರ ಮೇಲೆ ನನ್ನತನದ ಮುದ್ರೆ ಒತ್ತಿದ ಪ್ರಯತ್ನ ಇದು. ಇಲ್ಲಿರುವ ರೂಪಾಂತರಗಳನ್ನು ಕನ್ನಡದ ಪದ್ಯಗಳಾಗಿ ನಿಲ್ಲಬಲ್ಲವೇ ಅನ್ನುವ ಪ್ರಶ್ನೆಯೊಂದೇ ಸಮಂಜಸವಾದದ್ದು” (೧೯೮೨: ‘ನನ್ನ ನಾಲ್ಕು ಮಾತುಗಳು’) – ಶ್ರೀಯವರ ಇಂಗ್ಲಿಷ್ ಗೀತಗಳಿಗೂ ಸರಿಯಾಗಿ ಹೊಂದುತ್ತವೆ. ಹಾಗೆ ನೋಡುವುದಾದರೆ, ರಾಮಚಂದ್ರಶರ್ಮರು ಶ್ರೀಯವರ ಮಾತುಗಳನ್ನೇ ಬೇರೆ ಶಬ್ದಗಳಲ್ಲಿ ಹೇಳಿದ್ದಾರೆ. ಅನುವಾದದಲ್ಲಿ ಶ್ರೀಯವರ ಮಾರ್ಗವನ್ನೇ ಅನುಸರಿಸಿದ್ದಾರೆ. ಈ ಕಾರಣಗಳಿಂದಲೇ ಶ್ರೀಯವರು ಅನುವಾದಿಸಿದ ಎಲ್ಲ ಕವಿತೆಗಳ ಮೇಲೆ ಅವರ ಭಾಷೆ- ವ್ಯಕ್ತಿತ್ವಗಳ ಛಾಪು ಢಾಳಾಗಿ ಬಿದ್ದಿದೆ. ಹಾಗಾಗಿ ಅವು ಅವರ ಕವಿತೆಗಳೆಂದೇ ಅನಿಸುತ್ತದೆ.

ಇಷ್ಟಿದ್ದರೂ ಸಹ, “ಇಂಗ್ಲಿಷ್ ಗೀತಗಳ”ನ್ನು ವಿಮರ್ಶಿಸುವಾಗ ನಮ್ಮ ವಿಮರ್ಶಕರಲ್ಲಿ ಎರಡೂ ಬಗೆಯಿಂದ ನೋಡಿದ ಅನೇಕ ಉದಾಹರಣೆಗಳಿವೆ. ಇವು ಅನುವಾದಗಳಲ್ಲ. ರೂಪಾಂತರಗಳು, ಪುನಃಸೃಷ್ಟಿಗಳು ಎಂದು ನೋಡಿದರೆ ಇವುಗಳನ್ನು ಕನ್ನಡದ ಕವಿತೆಗಳೆಂದೇ ಓದಿಕೊಳ್ಳುವುದು ಸಾಧ್ಯ. ಆಗ ಹೆಚ್ಚಿನ ಸಮಸ್ಯೆಗಳು ಏಳುವುದಿಲ್ಲ. ಬರಿ ಅನುವಾದಗಳೆಂದು ನೋಡಿದಾಗ ಅನೇಕ ಸಮಸ್ಯೆಗಳು ಏಳುತ್ತವೆ.

೧. ಮೊದಲನೆಯ ಸಮಸ್ಯೆ ಎಂದರೆ, ಈ ಅನುವಾದಗಳು ಮೂಲಕ್ಕೆ ಎಷ್ಟರಮಟ್ಟಿಗೆ ನಿಷ್ಠವಾಗಿವೆ ಎಂಬುದು ಪುನಃಸೃಷ್ಟಿ ಎಂದಾಗ ಏಳದ ಈ ಪ್ರಶ್ನೆ ಅನುವಾದವೆಂದಾಗ ಧುತ್ತೆಂದು ಏಳುತ್ತದೆ. ಆಗ ಮೂಲದ ಸಾಲುಸಾಲುಗಳೊಂದಿಗೆ ಕನ್ನಡ ಅನುವಾದವನ್ನು ಹೋಲಿಸಿ ನೋಡಿ, ಇಂಥಲ್ಲಿ ಮೂಲಕ್ಕೆ ಸಮನಾಗಿದೆ, ಇಂಥಲ್ಲಿ ಮೂಲದ ಚೆಲುವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ, ಇಂಥಲ್ಲಿ ಮೂಲದ ಅರ್ಥ ಬಂದಿಲ್ಲ. ಇಂಥಲ್ಲಿ ಅರ್ಥ ತಪ್ಪಾಗಿದೆ. ಇಂಥಲ್ಲಿ ಮಾಡಿಕೊಂಡ ಬದಲಾವಣೆ ಮೂಲಕ್ಕೆ ಹೊಂದಿಕೆಯಾಗುವುದಿಲ್ಲ, ಇದು ಮೂಲ ಕವಿಯ ಭಾಷೆಯಲ್ಲ – ಎಂಬಂಥ ಮಾತುಗಳು ಹೇಗಿದೆಯೋ ಹಾಗೆ ಕನ್ನಡಿಸಬೇಕು ಎಂಬುದೇ ನಿರೀಕ್ಷೆ. ಕಡಿಮೆಯಾದರೆ ಅದು ಅಯಶಸ್ವಿ. ಮೂಲಕ್ಕಿಂತ ಸುಂದರವಾದರೂ ಅದು ತಪ್ಪೇ: ಯಾಕೆಂದರೆ ಅದು ಮೂಲನಿಷ್ಠೆಯಾಗುವುದಿಲ್ಲ. ಮೂಲದ ಗುಣಾವಗುಣಗಳನ್ನು ಇದ್ದಕ್ಕಿದ್ದ ಹಾಗೆಯೇ ಅನುವಾದ ಭಟ್ಟಿ ಇಳಿಸಬೇಕು. ಮೂಲದ ತಪ್ಪುಗಳನ್ನು ತಿದ್ದಲು ಇವನ್ಯಾರು? ಈ ಬಗೆಯ ವಿಮರ್ಶೆಯನ್ನು ಆರಂಭಿಸಿದವರು ತೀ.ನಂ. ಶ್ರೀಕಂಠಯ್ಯನವರೇ. ೧೯೫೩ರ “ಇಂಗ್ಲಿಷ್ ಗೀತಗಳು” ಆವೃತ್ತಿಗೆ ಬರೆದ ಪ್ರಸ್ತಾವನೆಯಲ್ಲಿ ಅವರು ಈ ರೀತಿ ಹೋಲಿಸಿ ನೋಡಿ ಯಶಸ್ವಿ ಮತ್ತು ಅಯಶಸ್ವಿ ಅನುವಾದಗಳ ಪಟ್ಟಿ ಮಾಡಿದ್ದಾರೆ. ಮೂಲವನ್ನು ಸುಂದರಗೊಳಿಸಿದ ಉದಾಹರಣೆಗಳನ್ನು ಅವರು ಯಶಸ್ಸಿನ ಲೆಕ್ಕಕ್ಕೆ ಸೇರಿಸಿದ್ದಾರೆಂಬುದೊಂದು ವಿಶೇಷ. ಇದೇ ಕ್ರಮವನ್ನು ಮುಂದುವರಿಸಿದ ಸಿ.ವಿಶ್ವೇಶ್ವರ (೧೯೬೪) ಅವರು ಅಯಶಸ್ವಿ ಅನುವಾದಗಳ ಪಟ್ಟಿಯನ್ನು ಇನ್ನಷ್ಟು ಬೆಳೆಸಿದ್ದಾರೆ. ಹೀಗಾಗಿ “ಇಂಗ್ಲಿಷ್ ಗೀತಗಳ” ಗುಣಮಟ್ಟದ ಬಗ್ಗೆ ಅವರ ತಕರಾರುಗಳು ಹೆಚ್ಚಾಗಿವೆ. ಮೂಲದೊಂದಿಗೆ ಹೋಲಿಸದೆ ಓದಿಕೊಂಡರೆ ಚೆಂದವಾಗಿಯೇ ಕಾಣುವ ‘ದುಃಖಸೇತು’ ದಂಥ ಕವಿತೆಗಳ ಬಗ್ಗೆ ಕೂಡ ಅವರ ತಕರಾರಿದೆ. ‘ಕರುಣಾಳು ಬಾ ಬೆಳಕೆ’ ಯಶಸ್ವಿ ಅನುವಾದ ಎಂದು ಒಪ್ಪಿಕೊಂಡರೂ ಅದರ ಕಾವ್ಯಗುಣ ಅಷ್ಟಕಷ್ಟೆ ಎಂದುಬಿಡುತ್ತಾರೆ. “ಇಂಗ್ಲಿಷ್ ಗೀತಗಳ” ಐತಿಹಾಸಿಕ ಮಹತ್ವ ಮತ್ತು ಅವುಗಳ ವಸ್ತು, ಭಾಷೆ, ರೀತಿ, ಛಂದಸ್ಸುಗಳ ಹೊಸತನವನ್ನು ಒಪ್ಪಿಕೊಂಡೂ, ಅವುಗಳನ್ನು ಕೇವಲ ಅನುವಾದಗಳೆಂದು ನೋಡಿದ್ದರ ಪರಿಣಾಮ ಇದು.

೨. ಎರಡನೆಯ ಮುಖ್ಯ ತಕರಾರೆಂದರೆ, ಶ್ರೀಯವರು ಅನುವಾದಕ್ಕೆ ಆಯ್ಕೆ ಮಾಡಿಕೊಂಡ ಕವಿತೆಗಳ ಗುಣಮಟ್ಟ ಚೆನ್ನಾಗಿಲ್ಲವೆಂಬುದು. ಶ್ರೀಯವರಿಗೆ ಆ ಕಾಲದಲ್ಲಿ ಉತ್ತಮ ಕಾವ್ಯಕ್ಕೆ ಮಾದರಿಯಾಗಿದ್ದುದು ಪಾಲ್ ಗ್ರೇವ್ ನ “golden treasury” ಎಂಬ ಕವನಸಂಕಲನ, ಆ ಕಾಲದಲ್ಲಿ ಅತ್ಯಂತ ಜನಪ್ರಿಯರಾಗಿದ್ದವರು ಹತ್ತೊಂಬತ್ತನೆ ಶತಮಾನದ ರೊಮ್ಯಾಂಟಿಕ್ ಕವಿಗಳು. ಅವರಲ್ಲಿ ವ್ಹಿಕ್ಟೋರಿಯನ್ ಯುಗದ ಕವಿಗಳೂ ಸೇರಿದ್ದರು. ಶಾಲೆ-ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಇವರನ್ನೇ ಕಲಿಸಲಾಗುತ್ತಿತ್ತು. ಶ್ರೀಯವರು ಅನುವಾದಕ್ಕೆ ಆರಿಸಿಕೊಂಡದ್ದು ಇಂಥ ಕವಿಗಳನ್ನು. ಇಂಥ ಕವಿತೆಗಳು ಕನ್ನಡದಲ್ಲಿ ಬರಬೇಕೆಂದು ಅನೇಕರಂತೆ ಅವರೂ ಆಸೆ ಪಟ್ಟಿದ್ದರು. ಇಂಗ್ಲಿಷ್ ಕಾವ್ಯದ ಮಹತ್ವದ ಕವಿಗಳ ಮಹತ್ವದ ಕವಿತೆಗಳನ್ನೆಲ್ಲ ಅನುವಾದಿಸಿ, ಇಂಗ್ಲಿಷ್ ಕಾವ್ಯದ ಸಂಪತ್ತನ್ನು ತೋರಿಸಬೇಕೆಂಬ ಮಹತ್ವಾಕಾಂಕ್ಷೆಯೇನೂ ಅವರಿಗಿರಲಿಲ್ಲ. ಇಂಥ ಕವಿತೆಗಳ ಕೆಲವು ಮಾದರಿಗಳನ್ನು ಪರಿಚಯಿಸಬೇಕೆಂಬುದು ಅವರ ಉದ್ದೇಶವಾಗಿತ್ತು. “ಇಲ್ಲಿ ಕೊಟ್ಟಿರುವ ಕವನಗಳೆಲ್ಲಾ ಇಂಗ್ಲಿಷ್ ಕಾವ್ಯಮಾಲೆಯ ನಾಯಕರತ್ನಗಳೆಂದು ಅಂದುಕೊಂಡವಲ್ಲ. ಉತ್ತಮರಾದ ಕವಿಗಳೂ ಇಲ್ಲಿ ಎಲ್ಲರೂ ಇಲ್ಲ. ಆಗಾಗ್ಗೆ ಓದುತ್ತಿರುವಾಗ ನನ್ನ ಮನಸ್ಸಿಗೊಪ್ಪಿ, ನನ್ನ ಕೈಮೀರದುವಾಗಿ ಕಂಡು ಬಂದ ಗೀತಗಳಿವು” ಎಂದು ಶ್ರೀಯವರು ‘ಅರಿಕೆ’ಯಲ್ಲಿ ಹೇಳಿಕೊಂಡಿರುವ ಮಾತುಗಳು ಸಾಕಷ್ಟು ಪ್ರಸಿದ್ಧವಾಗಿವೆ. ಆದರೂ ಅವರು ಮಾಡಿಕೊಂಡಿರುವ ಕವಿಗಳ ಮತ್ತು ಕವಿತೆಗಳ ಆಯ್ಕೆಯ ಬಗ್ಗೆ ಅನೇಕ ತಕರಾರುಗಳು ಬಂದಿವೆ. ಮುಖ್ಯವಾಗಿ, ಈ ತಕರಾರು ಬಂದದ್ದು ನವ್ಯರ ಕಾಲದಲ್ಲಿ. ಇಂಥ ತಕರಾರುಗಳನ್ನು ಎತ್ತಿದರವರಲ್ಲಿ ಸಿ.ವಿಶ್ವೇಶ್ವರ (೧೯೬೪) ಮತ್ತು ಎಂ.ಜಿ. ಕೃಷ್ಣಮೂರ್ತಿ (೧೯೬೭) ಮುಖ್ಯರು. ನವ್ಯರಿಗೆ ರೊಮ್ಯಾಂಟಿಕ್ ಕವಿಗಳ ಬಗ್ಗೆ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಇಂಗ್ಲಿಷ್ ವಿಮರ್ಶಕರು ಅವರನ್ನು ವಿಶೇಷವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಈ ಕವಿಗಳ ಭಾವಪ್ರಾಧಾನ್ಯವನ್ನು ಅವರು ಟೀಕಿಸಿದ್ದರು. ಷೆಲಿಯ ಕಾವ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ರೊಮ್ಯಾಂಟಿಕ್ ಕವಿಗಳಲ್ಲಿ ಕೀಟ್ಸನ ಬಗ್ಗೆ ಅವರಿಗೆ ಆದರವಿತ್ತು. ಅಂಥದರಲ್ಲಿ ಶ್ರೀಯವರು ಷೆಲಿಯ ಒಂಭತ್ತು ಕವಿತೆಗಳನ್ನು (ಅತಿ ಹೆಚ್ಚು) ಆರಿಸಿಕೊಂಡು, ಕೀಟ್ಸ್‌ನ ಒಂದೂ ಕವಿತೆಯನ್ನು ಆರಿಸಿಕೊಳ್ಳಲಿಲ್ಲವೆಂದರೆ ಏನರ್ಥ? ಇಂಗ್ಲಿಷ್ ವಿಮರ್ಶಕರು ಕಾವ್ಯದಲ್ಲಿ ಸಂಕೀರ್ಣತೆಯನ್ನು ಎತ್ತಿಹಿಡಿಯುತ್ತಿದ್ದರು. ಶ್ರೀಯವರು ಆರಿಸಿಕೊಂಡ ಕವಿತೆಗಳು ಸರಳವಾದುವು. ಕವಿತೆಗಳ ಆಯ್ಕೆಯ ಬಗ್ಗೆ ಶ್ರೀಯವರೇ ಹೇಳಿಕೊಂಡಿರುವ ಮಾತುಗಳನ್ನು ನಮ್ಮ ನವ್ಯ ವಿಮರ್ಶಕರು ಗಣನೆಗೆ ತೆಗೆದುಕೊಳ್ಳಲಿಲ್ಲ. ಶ್ರೀಯವರು ವಿಮರ್ಶಕರಲ್ಲದ್ದರಿಂದ ಒಳ್ಳೆಯ ಕವಿಗಳನ್ನು ಮತ್ತು ಒಳ್ಳೆಯ ಕವಿತೆಗಳನ್ನು ಆರಿಸಲಿಲ್ಲ, ನಮ್ಮ ಕಾವ್ಯಪರಂಪರೆಗೆ ನಿಕಟ ಸಂಬಂಧವಿಲ್ಲದ ರೊಮ್ಯಾಂಟಿಕ್ ಕಾವ್ಯದ ಸರಳ ಕವನಗಳಿಗೇ ಪ್ರಾಮುಖ್ಯ ಕೊಟ್ಟರು ಎಂದು ಕೃಷ್ಣಮೂರ್ತಿ ಆಪಾದಿಸಿದರು (೧೯೭೦:೨೬೧). ಅದರ ಪರಿಣಾಮವಾಗಿ ನಮ್ಮಲ್ಲೂ ರೊಮ್ಯಾಂಟಿಕ್ ಕಾವ್ಯ ಬೆಳೆಯಿತು ಎಂಬುದೂ ಅವರದೇ ವಿಷಾದದ ಮಾತು. ಆದರೆ ಇಲ್ಲಿ ಕೇಳಿಕೊಳ್ಳಬೇಕಾದ ಪ್ರಶ್ನೆಗಳೆಂದರೆ, ಇಂಗ್ಲಿಷ್ ರೊಮ್ಯಾಂಟಿಕ್ ಕಾವ್ಯ ಮತ್ತು ನಮ್ಮ ನವೋದಯ ಕಾವ್ಯ ಒಂದೇ ರೀತಿಯವೆ? ನಮ್ಮ ನವೋದಯ ಕಾವ್ಯವನ್ನು ಕೇವಲ ರೊಮ್ಯಾಂಟಿಕ್ ಕಾವ್ಯ ಎಂದು ಕರೆಯಬಹುದೆ? ಹೋಗಲಿ, ಶ್ರೀಯವರು ಉನ್ನತ ಗುಣಮಟ್ಟದ ಕವಿತೆಗಳನ್ನು ಆರಿಸಿಕೊಂಡಿದ್ದರೆ ಅದರ ಪರಿಣಾಮ ಈಗಿನದಕ್ಕಿಂತ ಭಿನ್ನವಾಗಿರುತ್ತಿತ್ತೇ? ನಂತರ ಬಂದ ನಮ್ಮ ನವೋದಯದ ಅನೇಕ ಕವಿಗಳಿಗೆ “ಇಂಗ್ಲಿಷ್ ಗೀತಗಳ”ಲ್ಲಿ ಬಂದಿದ್ದ ಕವಿತೆಗಳಿಗಿಂತ ಶ್ರೇಷ್ಠ ಕವಿತೆಗಳನ್ನು ಬರೆಯಲು ಅವು ಸ್ಫೂರ್ತಿ ನೀಡಲಿಲ್ಲವೆ? ಶ್ರೀಯವರು ಮಾಡಿದ್ದು ಒಂದು ಕೈಮರದ ಕೆಲಸ, ದಾರಿಯನ್ನು ತೋರಿಸುವ ಕೆಲಸ. ದಾರಿಯನ್ನು ನಿರ್ಮಿಸಿಕೊಂಡವರು ನಮ್ಮ ನವೋದಯದ ಕವಿಗಳು. ಇದರಲ್ಲಿ ಇಬ್ಬರೂ ಯಶಸ್ವಿಯಾಗಿದ್ದಾರೆ. ನಮ್ಮ ನವೋದಯ ಕಾವ್ಯ ಇಂಗ್ಲಿಷ್ ರೊಮ್ಯಾಂಟಿಕ್ ಕಾವ್ಯಕ್ಕಿಂತ ಬಹಳ ಭಿನ್ನವಾದುದು, ಹೆಚ್ಚು ಶ್ರೀಮಂತವಾದುದು ಮತ್ತು ಹೆಚ್ಚು ವೈವಿಧ್ಯಪೂರ್ಣಾವೂ ಸತ್ವಶಾಲಿಯೂ ಆದುದು. ಶ್ರೀಯವರದು ಒಂದು ಆರಂಭ. ಎಲ್ಲವನ್ನೂ ಅವರೇ ಮಾಡಿ ತೋರಿಸಬೇಕಾಗಿತ್ತು ಎನ್ನುವುದು ಅತಿಯಾದ ನಿರೀಕ್ಷೆ. “ರೊಮ್ಯಾಂಟಿಕ್ ಕವಿತೆಯ ಅಸಮರ್ಪಕ ಪರಿಚಯವೆಂದು ಹೇಳಬಹುದಾದ ಈ ಸಂಗ್ರಹದಿಂದಾದ ಪರಿಣಾಮ ಕನ್ನಡ ಕಾವ್ಯದ ದುರ್ದೈವ” ಎಂದು ಎಂ.ಜಿ. ಕೃಷ್ಣಮೂರ್ತಿ ಹೇಳುತ್ತಾರೆ (೧೯೭೦: ೨೬೦). ಅಡಿ ಟಿಪ್ಪಣಿಯಲ್ಲಿ ಕನ್ನಡ ಕವಿಗಳಿಗೆ ಇಂಗ್ಲಿಷ್ ರೊಮ್ಯಾಂಟಿಕ್ ಕವಿಗಳ ಉತ್ತಮ ಕವನಗಳ ಪರಿಚಯವಿತ್ತು ಎಂದು ಒಪ್ಪಿಕೊಳ್ಳುತ್ತಾರಾದರೂ, ಅವರ ಮೇಲೆ ಬಿದ್ದ ಪ್ರಭಾವ ಇಂಗ್ಲಿಷ್ ರೊಮ್ಯಾಂಟಿಕ್ ಕವಿಗಳ ಸಾಧಾರಣ ಕವಿತೆಗಳದ್ದು ಎಂದು ವಾದಿಸುತ್ತಾರೆ. ಈ ಮಾತುಗಳನ್ನು ಒಪ್ಪುವದು ಕಷ್ಟ. ಈ ಪ್ರಭಾವವನ್ನು ಆಧರಿಸಿಕೊಂಡೇ ಬೇಂದ್ರೆಯವರು ಯಾವ ಇಂಗ್ಲಿಷ್ ರೊಮ್ಯಾಂಟಿಕ್ ಕವಿಯೂ ಬರೆಯದ ಶ್ರೇಷ್ಠ ಕಾವ್ಯವನ್ನು ಬರೆದರು. ನಮ್ಮ ನವೋದಯದ ಕವಿಗಳು ಕೇವಲ ಪ್ರಭಾವ ಸ್ವೀಕರಿಸುವ, ಅನುಕರಣೆ ಮಾಡುವ ನೆಲೆಯಲ್ಲೇ ನಿಲ್ಲಲಿಲ್ಲ. ಅವರು ಪ್ರಬುದ್ಧ ಹಂತದಲ್ಲಿ ಕೊಟ್ಟ ಕಾವ್ಯದ ನೆಲೆಗಳೇ ಬೇರೆಯಾಗಿವೆ.

೩. ಶ್ರೀಯವರು ಆರಿಸಿಕೊಂಡ ಕವಿಗಳು ಇಂಗ್ಲಿಷ್ ಕಾವ್ಯದ ಪ್ರಾತಿನಿಧಿಕ ಕವಿಗಳಲ್ಲ ಎನ್ನುವುದು ಇನ್ನೊಂದು ಆಪಾದನೆ. ಶ್ರೀಯವರೇ ಈ ಮಾತನ್ನು ಹೇಳಿಬಿಟ್ಟಿದ್ದಾರೆ. ಆದರೂ ಎಂ.ಜಿ. ಕೃಷ್ಣಮೂರ್ತಿಯವರು ೧೭ನೇ ಶತಮಾನದ ಬ್ರಿಟಿಷ್ ಮೆಟಫಿಜಿಕಲ್ ಕವಿಗಳನ್ನು ಶ್ರೀಯವರು ಅನುವಾದಿಸಲಿಲ್ಲವೆಂದು ಆಪಾದಿಸಿದ್ದಾರೆ. ಹಾಗೆ ಮಾಡಿದ್ದರೆ, “ಬ್ರಿಟಿಷ್ ಮೆಟಫಿಜಿಕಲ್ ಕವಿಗಳಿಗೂ ಮತ್ತು ೧೨ನೆಯ ಶತಮಾನದ ಅತ್ಯುತ್ತಮ ವೀರಶೈವ ಅನುಭಾವ ಕವಿಗಳಿಗೂ ಇರುವ ಗಮನಾರ್ಹ ಹೋಲಿಕೆಗಳು ಕನ್ನಡದಲ್ಲಿ ಬರೆಯುತ್ತಿದ್ದ ಕವಿಯನ್ನು ತನ್ನ ಸಂಪ್ರದಾಯದ ಪುನರ್ವಿಮರ್ಶೆ ಮತ್ತು ಸಂಪ್ರದಾಯದಲ್ಲಿ ಉಪಯೋಗಕ್ಕೆ ತಕ್ಕ ಅಂಶಗಳ ಹುಡುಕುವಿಕೆಯತ್ತ ದೂಡುತ್ತಿದ್ದುವು” (೧೯೭೧:೨೬೧). ಈ ಮಾತುಗಳನ್ನು ಯಾವ ರೀತಿಯಿಂದಲೂ ಸಮರ್ಥಿಸಲು ಸಾಧ್ಯವಿಲ್ಲ. ೧೭ನೇ ಶತಮಾನದ ಇಂಗ್ಲಿಷ್ ಮೆಟಫಿಜಿಕಲ್ ಕವಿಗಳನ್ನು ಇಂಗ್ಲಿಷ್ ಕಾವ್ಯದ ಮುಖ್ಯಧಾರೆಯಿಂದ ತೆಗೆದುಹಾಕಿ ಮುನ್ನೂರು ವರ್ಷಗಳೇ ಆಗಿದ್ದವು. ಅವರನ್ನು ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಅವರಿಗೆ ಪ್ರಾಮುಖ್ಯ ದೊರೆತದ್ದು ಎಚ್.ಜೆ.ಸಿ.ಗ್ರಾಯರ‍್ಸನ್ ಸಂಪಾದಿಸಿ, ವಿಮರ್ಶಾತ್ಮಕ ಮುನ್ನುಡಿಯೊಂದಿಗೆ ೧೯೨೧ರಲ್ಲಿ ಪ್ರಕಟಿಸಿದ “Metaphysical lyrics and poems” ಎಂಬ ಪುಸ್ತಕ ಬಂದ ನಂತರ. ಅದನ್ನು ಇನ್ನಷ್ಟು ಗಟ್ಟಿಗೊಳಿಸಿದಿದ್ದು ಅದೇ ವರ್ಷ ಪ್ರಕಟವಾದ ಟಿ.ಎಸ್. ಎಲಿಯಟ್ ನ ‘the metaphysical poets’ ಎಂಬ ಲೇಖನ. ಶ್ರೀಯವರ ಇಂಗ್ಲಿಷ್ ಗೀತಗಳ ಅನುವಾದದ ಕೆಲಸ ಆ ಹೊತ್ತಿಗೆ ಮುಗಿದು ಹೋಗಿತ್ತು. ಆ ವರ್ಷ ಹನ್ನೆರಡು ಕವಿತೆಗಳ ಅವರ ಒಂದು ಸಂಕಲನ ಕೂಡ ಪ್ರಕಟವಾಗಿತ್ತು. ಸ್ವತಃ ಇಂಗ್ಲಿಷ್ ವಿಮರ್ಶಕರಾಗಲಿ, ಕವಿಗಳಾಗಲಿ ಗಮನಿಸದೆ ಇದ್ದ ಡನ್, ಜಾರ್ಜ್ ಹರ್ಬರ್ಟ್, ಆಡ್ರ್ಯೂ ಮಾರ್ವೆಲ್, ಹೆನ್ರಿ ವಾನ್ ಮೊದಲಾದ ಮೆಟಫಿಜಿಕಲ್ ಕವಿಗಳನ್ನು ಶ್ರೀಯವರು ಅನುವಾದಿಸಬೇಕಾಗಿತ್ತೆಂದು ಅಪೇಕ್ಷಿಸುವದು ಎಷ್ಟರ ಮಟ್ಟಿಗೆ ಸರಿ? ಎಂ.ಜಿ. ಕೃಷ್ಣಮೂರ್ತಿಯವರು ಓದುವ ಮತ್ತು ಬರೆಯುವ ಹೊತ್ತಿಗೆ ಮೆಟಫಿಜಿಕಲ್ ಕವಿಗಳ ಅಭ್ಯಾಸ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಆರಂಭವಾಗಿತ್ತು. ಶ್ರೀಯವರ ಕಾಲದಲ್ಲಿ ಇದ್ದಿದ್ದರೆ ಎಂ.ಜಿ.ಕೆ. ಯವರಿಗಾದರೂ ಈ ಕವಿಗಳ ಬಗ್ಗೆ ಗೊತ್ತಿರಲು ಸಾಧ್ಯವಿತ್ತೆ? ಈ ಕವಿಗಳನ್ನು ಅನುವಾದಿಸಿದ್ದರೆ ಅವರಿಗೂ ವಚನಕಾರರಿಗೂ ಇರುವ ಸಂಬಂಧಗಳು ಹೊಳೆದು ಕನ್ನಡ ಕಾವ್ಯಪರಂಪರೆಯೊಂದಿಗೆ ಆಧುನಿಕ ಕನ್ನಡ ಕಾವ್ಯ ಅರ್ಥಪೂರ್ಣ ಅನುಸಂಧಾನ ಮಾಡಿಕೊಳ್ಳಬಹುದಾಗಿತ್ತೆಂಬುದು ಸರಿ. ಆದರೆ ಶ್ರೀಯವರು ಆ ಕವಿಗಳನ್ನು ಅನುವಾದಿಸದಿದ್ದುದರಿಂದ ಆಧುನಿಕ ಕನ್ನಡ ಕಾವ್ಯ ತನ್ನ ಪರಂಪರೆಯೊಂದಿಗೆ ಅನುಸಂಧಾನ ನಡೆಸುವದೇನೂ ನಿಲ್ಲಲಿಲ್ಲ. ಬೇಂದ್ರೆ, ಮಧುರಚೆನ್ನ ಮೊದಲಾದ ಕವಿಗಳು ವಚನಕಾರರಿಂದ ಸಾಕಷ್ಟು ಪ್ರಭಾವಿತರಾದರು ಮತ್ತು ಅನುಭಾವ ಕಾವ್ಯದ ಪರಂಪರೆಯನ್ನು ಅರ್ಥಪೂರ್ಣವಾಗಿ ಮುಂದುವರಿಸಿದರು. ಮತ್ತೊಮ್ಮೆ ಹೇಳುವುದಾದರೆ, ಎಲ್ಲವನ್ನೂ ಶ್ರೀಯವರೇ ಮಾಡಬೇಕಾಗಿತ್ತು ಎನ್ನುವುದು ಅತಿಯಾದ ನಿರೀಕ್ಷೆ. ಇಂಗ್ಲಿಷ್ ಕಾವ್ಯದ ಸ್ವರೂಪವನ್ನು ಕನ್ನಡದಲ್ಲೂ ತರಬೇಕು ಎಂದು ಅಲ್ಲಲ್ಲಿ ಚೆದುರಿದ ಪ್ರಯತ್ನಗಳೂ ಆರಂಭವಾಗಿದ್ದವು. ಶ್ರೀಯವರು ಶೂನ್ಯದಲ್ಲೇನೂ ಆರಂಭಿಸಲಿಲ್ಲ. ಆದರೆ ಆ ಪ್ರಯತ್ನಕ್ಕೆ ಅವರು ಒಂದು ಖಚಿತ ರೂಪ ಕೊಟ್ಟು ತೋರಿಸಿದರು. ಆ ಮಾದರಿಯನ್ನು ಕನ್ನಡ ಕಾವ್ಯ ಒಪ್ಪಿಕೊಂಡಿತು. ಅಲ್ಲಿಂದ ಆಧುನಿಕ ಕನ್ನಡ ಕಾವ್ಯ ಇಂಗ್ಲೀಷಿನ ಮಾದರಿಯ ಬುನಾದಿಯ ಮೇಲೆ ತನ್ನದೇ ಆದ ಸ್ವಂತದ ಭವನವನ್ನು ನಿರ್ಮಿಸಿಕೊಂಡಿತು.

“ಇಂಗ್ಲಿಷ್ ಗೀತಗಳ” ಅನುವಾದದಲ್ಲಿ ಏನೇ ಕೊರತೆಗಳಿದ್ದರೂ, ಅವು ಯಾವವೂ ಆಧುನಿಕ ಕನ್ನಡ ಕಾವ್ಯದ ಸಂದರ್ಭದಲ್ಲಿ ಈ ಸಂಕಲನಕ್ಕೆ ಇರುವ ಮಹತ್ವವನ್ನು ಕಡಿಮೆ ಮಾಡುವುದಿಲ್ಲ. ಅಥವಾ ಈ ಕೊರತೆಗಳನ್ನು ತುಂಬಿಕೊಂಡಿದ್ದರೆ ಅದರ ಮಹತ್ವ ಹೆಚ್ಚಾಗುತ್ತಿತ್ತೆಂದೂ ಅನಿಸುವುದಿಲ್ಲ. ಮೂಲಕವಿತೆಗಳ ಗುಣಮಟ್ಟವಾಗಲಿ, ಅನುವಾದದ ನಿಕಟತೆಯಾಗಲಿ ಇಲ್ಲಿ ಮುಖ್ಯವಾಗುವುದಿಲ್ಲ. ಹೊಸ ವಸ್ತುಗಳನ್ನು ಕನ್ನಡ ಕಾವ್ಯಕ್ಕೆ ಪರಿಚಯಿಸಿದ್ದರಲ್ಲಿ, ಹೊಸ ಸಂವೇದನೆಗೆ ಸೂಕ್ತ ಭಾಷೆ-ಶೈಲಿಗಳನ್ನು ರೂಪಿಸಿ, ತೋರಿಸಿದ್ದರಲ್ಲಿ, ಛಂದೋರೂಪಗಳ ಪ್ರಯೋಗಶೀಲತೆಯ ಮೂಲಕ ಕನ್ನಡ ಛಂದಸ್ಸಿಗೆ ಬಿಡುಗಡೆ ತಂದುದರಲ್ಲಿ ಇದರ ಯಶಸ್ಸಿದೆ.

ಮುಖ್ಯವಾಗಿ, “ಇಂಗ್ಲಿಷ್ ಗೀತಗಳ”ನ್ನು ಕೇವಲ ‘ಅನುವಾದ’ ಎಂಬ ನೆಲೆಯಲ್ಲಿ ನೋಡುವದೇ ಸರಿಯಾಗಿ ಕಾಣುವುದಿಲ್ಲ. ಅವುಗಳನ್ನು ಪುನಃಸೃಷ್ಟಿಗಳೆಂದು, ಕನ್ನಡದ ಕವಿತೆಗಳೆಂದು ನೋಡುವದೇ ಸರಿಯಾದ ಮಾರ್ಗ. ಹಾಗೆ ಬಿ.ಎಂ.ಶ್ರೀ. ಕನ್ನಡ ಪ್ರಾಚೀನ ಕಾವ್ಯ ಅನುಸರಿಸಿದ ಮಾರ್ಗದಲ್ಲೇ ಇದ್ದಾರೆ.

ಒಟ್ಟಿನಲ್ಲಿ ಶ್ರೀ ಅವರಿಗೆ ಎರಡು ಮುಖ್ಯ ಉದ್ದೇಶಗಳಿದ್ದವು. ‘ಕಾಣಿಕೆ’ ಎಂಬ ಪದ್ಯದ ಅತ್ಯಂತ ಜನಪ್ರಿಯವಾಗಿರುವ ಸಾಲುಗಳಲ್ಲಿ ಈ ಉದ್ದೇಶಗಳನ್ನು ಅವರು ಸ್ವಷ್ಟವಾಗಿಯೇ ಹೇಳಿದ್ದಾರೆ.

ಇವಳ ಸೊಬಗನವಳು ತೊಟ್ಟು,
ನೋಡಬಯಸಿದೆ;
ಅವಳ ತೊಡಿಗೆ ಇವಳಿಗಿಟ್ಟು
ಹಾಡಬಯಸಿದೆ.

ಇವುಗಳಲ್ಲಿ ಅವಳ ತೊಡಿಗೆಯನ್ನು ಇವಳಿಗಿಟ್ಟು ಹಾಡ ಬಯಸುವ ಉದ್ದೇಶ ಯಶಸ್ವಿಯಾಗಿ ಈಡೇರಿದೆ. ಇವಳ (ಕನ್ನಡದ) ಸೊಬಗನ್ನು ಅವಳು (ಇಂಗ್ಲಿಷ್ ಕಾವ್ಯ) ಉಟ್ಟು ನೋಡುವ ಇನ್ನೊಂದು ಉದ್ದೇಶದ ಬಗ್ಗೆ ಅವರು ಪ್ರಯತ್ನವನ್ನೇ ಮಾಡಲಿಲ್ಲ. ಈ ಎರಡನೆಯ ಉದ್ದೇಶವನ್ನು ಅವರು ಈಡೇರಿಸಲಿಲ್ಲವೆಂಬುದನ್ನು ಶ್ರೀಯವರ ಲೋಪವೆಂದು ಪರಿಗಣಿಸಬೇಕಾಗಿಲ್ಲ.

ಉಲ್ಲೇಖಗಳು

೦೧.   Eliot, t.s (1953), ‘the metaphysical poets’, selected prose, penguin books.

೦೨.   krishnamurthy, m.g. (1967), modern kannada fiction, university of wisconsin, madison.

೦೩.   ಕೃಷ್ಣಮೂರ್ತಿ, ಎಂ.ಜಿ. (೧೯೭೦), “ಆಧುನಿಕ ಭಾರತೀಯ ಸಾಹಿತ್ಯ”, ಅಕ್ಷರ ಪ್ರಕಾಶನ, ಸಾಗರ.

೦೪.   griersoN h.j.c. (1921), metaphysical lyrics and poems.

೦೫.   ನಾಯಕ ಜಿ.ಎಚ್., (೧೯೮೮), ‘ಬಿ.ಎಂ.ಶ್ರೀ. ಕಾವ್ಯ’, “ನಿಜದನಿ”, ಅಕ್ಷರ ಪ್ರಕಾಶನ, ಹೆಗ್ಗೋಡು.

೦೬.   ಪಂಡಿತಾರಾಧ್ಯ, ಎಂ.ಎನ್.ವಿ.(ಸಂ) (೧೯೮೫), “ಆಂಗ್ಲ ಕವಿತಾವಳಿ”, ಪ್ರಭೋಧ ಪುಸ್ತಕ ಮಾಲೆ, ಮೈಸೂರು.

೦೭.   ಮೂರ್ತಿರಾವ್, ಎ.ಎನ್.(೧೯೮೨), “ಬಿ.ಎಂ. ಶ್ರೀಕಂಠಯ್ಯ”, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು (ಪ್ರ.ಮು.೧೯೭೫).

೦೮.   ರಾಮಚಂದ್ರಶರ್ಮ (೧೯೮೨), “ಈ ಶತಮಾನದ ನೂರು ಇಂಗ್ಲಿಷ್ ಕವನಗಳು”, ಪ್ರಿಂಟರ್ಸ್ ಪ್ರಕಾಶನ, ಬೆಂಗಳೂರು.

೦೯.   ರಂಗಣ್ಣ, ಎಸ್.ವಿ (೧೯೬೪), “ಪ್ರಬುದ್ಧ ಕರ್ನಾಟಕ” ಶ್ರೀ ಸಂಚಿಕೆ.

೧೦.   ವಿಶ್ವೇಶ್ವರ, ಸಿ. (೧೯೬೪), ‘ಶ್ರೀ’ಯವರ “ಇಂಗ್ಲಿಷ್ ಗೀತಗಳು”, ಸಂಕ್ರಮಣ : ೩,

೧೧.   ಶ್ರೀಕಂಠಯ್ಯ, ತೀ.ನಂ. (೧೯೫೩) ‘ಪ್ರಸ್ತಾವನೆ’, “ಇಂಗ್ಲಿಷ್ ಗೀತಗಳು”.

೧೨.   ಶ್ರೀಕಂಠಯ್ಯ, ಬಿ.ಎಂ. (೧೯೨೬), “ಇಂಗ್ಲಿಷ್ ಗೀತಗಳು”, ಕರ್ನಾಟಕ ಸಂಘ, ಸೆಂಟ್ರಲ್ ಕಾಲೇಜು, ಬೆಂಗಳೂರು.

೧೩.   ಸೀತಾರಾಮಯ್ಯ, ಎಂ.ವಿ. (೨೦೦೬) ‘ಮುನ್ನುಡಿ’, “ಇಂಗ್ಲಿಷ್ ಗೀತಗಳು”, ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನ, ಬೆಂಗಳೂರು (ಮೊ.ಮು.೧೯೮೫).

– ೨೦೦೬

* ಹಂಪಿ ಕನ್ನಡ ವಿಶ್ವವಿದ್ಯಾಲಯ ಸೆಪ್ಟಂಬರ್‌೧೧-೧೨, ೨೦೦೬ರಂದು ಬೆಂಗಳೂರಿನಲ್ಲಿ ನಡೆಸಿದ ’ಇಂಗ್ಲಿಷ್ ಗೀತಗಳು: ಸಾಂಸ್ಕೃತಿಕ ಮುಖಾಮುಖಿ’ ವಿಚಾರಸಂಕಿರಣದ ಸಮಾರೋಪ ಭಾಷಣ.