ಕನ್ನಡ ನವೋದಯ ಸಾಹಿತ್ಯದ ಆರಂಭ ಕಾಲದಲ್ಲಿ ಕರ್ನಾಟಕ ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಹಲವು ಭಾಗಗಳಲ್ಲಿ ಹಂಚಿಹೋಗಿತ್ತು. ಅವುಗಳಲ್ಲಿ ಮುಖ್ಯವಾಗಿ ಒಂದು ಕಡೆ ಮಂಗಳೂರು, ಇನ್ನೊಂದು ಕಡೆ ಮೈಸೂರು, ಮತ್ತೊಂದು ಕಡೆ ಧಾರವಾಡ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಪುನರುಜ್ಜೀವನದ ಕೆಂದ್ರಗಳಾಗಿ ಕೆಲಸ ಮಾಡಿದವು. ಕವಿತೆ, ಸಣ್ಣಕತೆ, ಕಾದಂಬರಿಗಳಂಥ ಹೊಸ ಸಾಹಿತ್ಯಪ್ರಕಾರಗಳು ಯಾವ ಭಾಗದಲ್ಲಿ ಮೊದಲು ಆರಂಭವಾದವೆಂಬ ಬಗ್ಗೆ ಚರ್ಚೆ ಇನ್ನೂ ನಡೆಯುತ್ತಲೇ ಇದೆಯಾದರೂ, ಈ ಮೂರು ಭಾಗಗಳಲ್ಲಿ ಹೆಚ್ಚು-ಕಡಿಮೆ ಏಕಕಾಲಕ್ಕೆ ಹೊಸ ಬರವಣಿಗೆ ಆರಂಭವಾಯಿತೆಂಬುದು ಮಹತ್ವದ ವಿಷಯವಾಗಿದೆ.

ಈ ಮೂರು ಭಾಗಗಳಿಂದ ಬಂದ ಸಾಹಿತ್ಯ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ, ಭೌಗೋಳಿಕ ಕಾರಣಗಳಿಂದಾಗಿ ಸಾಕಷ್ಟು ಭಿನ್ನವಾಗಿತ್ತು. ಆದರೂ ಆ ಭಿನ್ನತೆಯನ್ನು ಮೀರಿದ ಒಂದು ಐಕ್ಯವೂ ಇತ್ತು. ದೇಶದ ಸ್ವಾತಂತ್ರ್ಯ ಚಳವಳಿ, ಗಾಂಧೀವಾದ, ಕರ್ನಾಟಕ ಏಕೀಕರಣ, ಭಾಷೆ-ಸಂಸ್ಕೃತಿಗಳ ಪುನರುಜ್ಜೀವನ, ಸುಧಾರಣಾವಾದ, ಉದಾರ ಮಾನವತಾವಾದ, ಇಂಗ್ಲಿಷ್ ರೊಮ್ಯಾಂಟಿಕ್ ಕಾವ್ಯದ ಪ್ರಭಾವ – ಇತ್ಯಾದಿಗಳು ಆ ಕಾಲದ ಸಾಹಿತ್ಯಕ್ಕೆ ಒಟ್ಟಿನಲ್ಲಿ ವಿಶಾಲವಾದ ಏಕತೆಯನ್ನು ಒದಗಿಸಿದವು. ನಮ್ಮ ನವೋದಯ ಸಾಹಿತ್ಯದ ಬಗ್ಗೆ ನಡೆದಿರುವ ಚರ್ಚೆಯಲ್ಲಿ ಈ ಏಕತೆಯ ಅಂಶಗಳ ಮೇಲೆ ಸ್ವಲ್ಪ ಹೆಚ್ಚೆನಿಸುವಷ್ಟೇ ಒತ್ತು ಬಿದ್ದಿದೆ. ಅದರಲ್ಲೂ ವಿಶೇಷವಾಗಿ, ಮೈಸೂರು ಭಾಗದಲ್ಲಿ ಕಾಣಿಸಿಕೊಂಡ ಸಾಹಿತ್ಯಿಕ ಲಕ್ಷಣಗಳನ್ನೇ ಇಡಿಯ ನವೋದಯ ಸಾಹಿತ್ಯದ ಲಕ್ಷಣಗಳೆಂಬಂತೆ ಸಾರ್ವತ್ರಿಕಗೊಳಿಸಿ ಚರ್ಚಿಸಲಾಗಿದೆ.

ಇದರಿಂದಾಗಿ, ನವೋದಯದ ಸಾಮಾನ್ಯ ಅಂಶಗಳು ಪ್ರಕಟವಾದ ರೀತಿಗಳು ಆಯಾ ಭಾಗಗಳಿಗೆ ವಿಶಿಷ್ಟವಾಗಿದ್ದವು ಎಂಬ ಅಂಶದ ಮೇಲೆ ಹೋಗಬೇಕಾದಷ್ಟು ಗಮನ ಹೋಗಿಲ್ಲ. ಆಯಾ ಭಾಗಗಳು ಎದುರಿಸಿದ ಅಭಿವ್ಯಕ್ತಿಯ ಬಿಕ್ಕಟ್ಟುಗಳು ಮತ್ತು ಅವುಗಳ ತೀವ್ರತೆ ಬೇರೆಯಾಗಿದ್ದವು. ಹಾಗೆಯೇ, ಅಭಿವ್ಯಕ್ತಿಯ ಹಿಂದಿನ ಪ್ರೇರಣೆಗಳೂ ಬೇರೆಯಾಗಿದ್ದವು. ಪಶ್ಚಿಮದಿಂದ ಸ್ವೀಕರಿಸಿದ ಹೊಸದನ್ನು ಪರಂಪರೆಯೊಂದಿಗೆ ಹೊಂದಿಸಿಕೊಂಡ ತಂತ್ರಗಳು ಮತ್ತು ಬಿಕ್ಕಟ್ಟುಗಳಿಗೆ ಕಂಡುಕೊಂಡ ಪರಿಹಾರಗಳೂ ಬೇರೆಯಾಗಿದ್ದವು. ಈ ಭಿನ್ನತೆಗಳಿಂದಾಗಿಯೇ ಅವುಗಳ ಕಾವ್ಯಸತ್ವ ಹಾಗೂ ಒಳರಚನೆಗಳಲ್ಲಿ ಸೂಕ್ಷ್ಮವಾದ ಹಲವಾರು ವ್ಯತ್ಯಾಸಗಳು ಕಾಣಿಸಿಕೊಂಡಿವೆ. ಕನ್ನಡ ಕಾವ್ಯಪರಂಪರೆಯ ಅಭ್ಯಾಸದ ದೃಷ್ಟಿಯಿಂದ ಈ ವ್ಯತ್ಯಾಸಗಳು ಮಹತ್ವದವಾಗಿವೆ.

ಈ ದೃಷ್ಟಿಯಿಂದ ಕರ್ನಾಟಕ ಸಾಹಿತ್ಯ ಅಕಾಡೆಮಿ ನವೋದಯದ ಒಂದೊಂದು ಕೇಂದ್ರವನ್ನು ಕುರಿತು ಆಯಾ ಭಾಗದಲ್ಲಿ ಒಂದೊಂದು ವಿಚಾರಸಂಕಿರಣವನ್ನು ನಡೆಸಬೇಕೆಂದು ಯೋಜನೆ ಹಾಕಿಕೊಂಡಿತ್ತು. ೧೯೮೮ರಲ್ಲಿ ಡಾ|| ಜಿ.ಎಸ್. ಶಿವರುದ್ರಪ್ಪನವರು ಅಧ್ಯಕ್ಷರಾಗಿದ್ದಾಗ, ಧಾರಾವಾಡದಲ್ಲಿ ಇಂಥ ಮೊದಲ ವಿಚಾರಸಂಕಿರಣ ಏರ್ಪಾಡಾಗಿತ್ತು. ಅಲ್ಲಿ ಮಂಡನೆಯಾದ ಪ್ರಬಂಧಗಳು ನನ್ನ ಸಂಪಾದಕತ್ವದಲ್ಲಿ “ಆಧುನಿಕ ಕನ್ನಡ ಕಾವ್ಯ : ಉತ್ತರ ಕರ್ನಾಟಕದ ಕೊಡುಗೆ” ಎಂಬ ಹೆಸರಿನ ಪುಸ್ತಕದಲ್ಲಿ ಪ್ರಕಟವಾಗಿವೆ. ಆ ಅವಧಿಯಲ್ಲಿ ಮತ್ತು ನಂತರ, ಉಳಿದೆರಡು ಭಾಗಗಳಲ್ಲಿ ನಡೆಯಬೇಕಾಗಿದ್ದ ಇನ್ನೆರಡು ವಿಚಾರಸಂಕಿರಣಗಳು ನಡೆಯಲಿಲ್ಲ. ಅಪೂರ್ಣವಾಗಿದ್ದ ಈ ಯೋಜನೆಯನ್ನು ನಮ್ಮ ಅವಧಿಯಲ್ಲಿ ಮುಗಿಸಲು ಸಾಧ್ಯವಾದುದಕ್ಕಾಗಿ ನನಗೆ ಸಂತೋಷವಾಗಿದೆ.

೧೯೯೮ರಲ್ಲಿ “ಕನ್ನಡ ನವೋದಯ ಕಾವ್ಯ : ಮೈಸೂರು ಕೇಂದ್ರ” ಎಂಬ ವಿಷಯವನ್ನು ಕುರಿತು ಮೈಸೂರಿನಲ್ಲಿ ಒಂದು ವಿಚಾರಸಂಕಿರಣ ನಡೆಯಿತು. ಅಲ್ಲಿ ಮಂಡಿತವಾದ ಪ್ರಬಂಧಗಳು ಇನ್ನೂ ಪುಸ್ತಕರೂಪದಲ್ಲಿ ಬರಬೇಕಾಗಿದೆ. ಸದ್ಯಕ್ಕೆ ೧೯೯೯ರ ನವೆಂಬರ್ ತಿಂಗಳ ೧೩-೧೪ರಂದು ಪುತ್ತೂರಿನಲ್ಲಿ “ಕನ್ನಡ ನವೋದಯ ಕಾವ್ಯ : ಮಂಗಳೂರು ಕೇಂದ್ರ” ಎಂಬ ವಿಷಯವನ್ನು ಕುರಿತು ನಡೆದ ಎರಡು ದಿನಗಳ ವಿಚಾರಸಂಕಿರಣದಲ್ಲಿ ಮಂಡಿಸಲ್ಪಟ್ಟ ಪ್ರಬಂಧಗಳನ್ನು ಪ್ರಕಟಿಸಲು ಸಾಧ್ಯವಾಗಿರುವದೊಂದು ಸಮಾಧಾನದ ಸಂಗತಿ.

೨೦ನೆಯ ಶತಮಾನದ ಆರಂಭದಿಂದಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಣಿಸಿಕೊಂಡ ನವೋದಯದ ಸ್ವರೂಪ ಹಲವು ರೀತಿಯಿಂದ ಭಿನ್ನವಾಗಿತ್ತು. ಈ ಭಿನ್ನತೆಯ ಸ್ವರೂಪವನ್ನು – ಈ ಭಾಗದ ಹನ್ನೆರಡು ಜನ ಕವಿಗಳ ಅಭ್ಯಾಸದ ಮೂಲಕ – ಗುರುತಿಸುವ ಪ್ರಯತ್ನವನ್ನು ಇಲ್ಲಿಯ ಪ್ರಬಂಧಗಳಲ್ಲಿ ಮಾಡಲಾಗಿದೆ.

ಮೂಲಭೂತವಾಗಿ, ಭಾಷೆಯ ದೃಷ್ಟಿಯಿಂದ ಈ ಭಾಗದ ಕವಿಗಳು ಎದುರಿಸಿದ ಸಮಸ್ಯೆಯನ್ನು ಬೇರೆ ಭಾಗದ ಕವಿಗಳು ಎದುರಿಸಬೇಕಾದ ಪರಿಸ್ಥಿತಿ ಇರಲಿಲ್ಲ. ಈ ಭಾಗದ ಹೆಚ್ಚಿನ ಕವಿಗಳಿಗೆ ಕನ್ನಡ ಮಾತೃಭಾಷೆಯಲ್ಲ; ಪರಿಸರದ ಭಾಷೆಯೂ ಅಲ್ಲ. ತುಳು ಇಲ್ಲವೆ ಕೊಂಕಣಿ ಇವರ ಮನೆಮಾತು. ಪರಿಸರದಲ್ಲಿ ಇದ್ದದ್ದೂ ಇವೇ ಭಾಷೆಗಳು. ಈ ಭಾಷೆಗಳನ್ನು ಬಿಟ್ಟು ಶಾಲೆಯಲ್ಲಿ ಕಲಿತ ಎರಡನೆಯ ಭಾಷೆಯಾದ ಕನ್ನಡದಲ್ಲಿ ಬರೆಯಬೇಕಾದ ಅನಿವಾರ್ಯತೆ ಈ ಕವಿಗಳಿಗಿತ್ತು. ಇದು ಕನ್ನಡದ ಸಂದರ್ಭದಲ್ಲಿ ತೀರ ಹೊಸ ವಿದ್ಯಮಾನವೇನೂ ಅಲ್ಲ. ಬೇಂದ್ರೆ, ಮಾಸ್ತಿ, ಡಿ.ವಿ.ಜಿ., ಪು.ತಿ.ನ. ಮೊದಲಾದವರಿಗೂ ಕನ್ನಡ ಎರಡನೆಯ ಭಾಷೆಯೇ ಆಗಿತ್ತು. ಆದರೆ ಇವರಿಗೆ ಕನ್ನಡ ಪರಿಸರದ ಭಾಷೆಯಾಗಿದ್ದರಿಂದ ಅದು ಆಡುನುಡಿಯಾಗಿ ಅವರಿಗೆ ಸಿಕ್ಕಿತ್ತು. ಜೊತೆಗೆ ಶಾಲೆಯಲ್ಲಿ ಕಲಿತ ಕನ್ನಡ ಅದನ್ನು ಬೆಳೆಸಿತು. ಆದರೆ ದಕ್ಷಿಣ ಕನ್ನಡದ ಕವಿಗಳಿಗೆ ಕನ್ನಡ ಆಡುಭಾಷೆಯಾಗಿ ಲಭ್ಯವಿರಲಿಲ್ಲ. ಅದು ಶಾಲೆಯಲ್ಲಿ ಪುಸ್ತಕಗಳ ಓದಿನ ಮೂಲಕವೇ ದೊರಕಿಸಿಕೊಂಡಿದ್ದ ಲಿಖಿತ ಕನ್ನಡವಾಗಿತ್ತು. ಅದರಿಂದಾಗಿಯೇ ಅವರು ಮಾತಾಡುತ್ತಿದ್ದ ಕನ್ನಡ ಲಿಖಿತ ಕನ್ನಡಕ್ಕೆ ಸಮೀಪವಾಗಿತ್ತು. ಹೀಗಾಗಿ, ದಕ್ಷಿಣ ಕನ್ನಡದ ಕಾವ್ಯಭಾಷೆಗೆ ಕನ್ನಡದ ಆಡುಮಾತಿನ ಆಯಾಮ ಅಷ್ಟಾಗಿ ಸೇರಿಕೊಳ್ಳಲಿಲ್ಲ.

ಆದರೆ ಈ ಕವಿಗಳು ಈ ಕೊರತೆಯನ್ನು ಸರಿತೂಗಿಸಲೋ ಎಂಬಂತೆ, ತಾವು ಕಲಿತ ಪುಸ್ತಕದ ಕನ್ನಡವನ್ನೇ ತಲಸ್ವರ್ಶಿಯಾಗಿ ಅಭ್ಯಾಸ ಮಾಡಿದರು. ಈ ಅಭ್ಯಾಸವನ್ನು ಹಳಗನ್ನಡದವರೆಗೂ ತೆಗೆದುಕೊಂಡು ಹೋದರು. ಇವರಲ್ಲಿ ಕೆಲವರಿಗೆ ಇಂಗ್ಲಿಷ್ ಅಭ್ಯಾಸ ಕೂಡ ಆಗಿರಲಿಲ್ಲ. ಆ ಕಾಲಕ್ಕೆ ಅಸ್ತಿತ್ವದಲ್ಲಿದ್ದ ಕನ್ನಡ ಪಂಡಿತ ಪರೀಕ್ಷೆಗೆ ಕುಳಿತು ಹಳಗನ್ನಡ ಕಾವ್ಯ, ವ್ಯಾಕರಣ, ಛಂದಸ್ಸು, ಅಲಂಕಾರ-ಇತ್ಯಾದಿಗಳನ್ನು ದಕ್ಕಿಸಿಕೊಂಡರು. ಇಲ್ಲಿದ್ದಷ್ಟು ಕನ್ನಡ ಪಂಡಿತರು ನಮಗೆ ಬೇರೆ ಭಾಗಗಳಲ್ಲಿ ಸಿಗುವುದಿಲ್ಲ. ಈ ಓದಿನಿಂದ ಅವರು ತಮ್ಮ ಕಾವ್ಯಭಾಷೆಗೆ ಈ ಭಾಗಕ್ಕೆ ವಿಶಿಷ್ಟವಾದ ಪಂಡಿತ ಪರಂಪರೆಯ ಗುಣವೊಂದನ್ನು ತಂದುಕೊಟ್ಟರು. ಈಗ ಬಳಕೆಯಲ್ಲಿಲ್ಲದ ಹಳಗನ್ನಡದ ಅನೇಕ ಶಬ್ದಗಳು ಮತ್ತು ರೂಪಗಳು ಇಲ್ಲಿಯ ಕಾವ್ಯದಲ್ಲಿ ಮತ್ತೆ ಮತ್ತೆ ಕಾಣಿಸುತ್ತವೆ. ಮುದ್ದಣ, ಗೋವಿಂದ ಪೈ, ಮುಳಿಯ ತಿಮ್ಮಪ್ಪಯ್ಯ, ಸೇಡಿಯಾಪು ಕೃಷ್ಣಭಟ್ಟ, ಕೊಳಂಬೆ ಪುಟ್ಟಣ್ಣಗೌಡ ಇವರ ಕಾವ್ಯದಲ್ಲಿ ಇದರ ಹೇರಳ ದೃಷ್ಟಾಂತಗಳು ಸಿಗುತ್ತವೆ. ಕಾವ್ಯದ ಸ್ವರೂಪದಲ್ಲೂ ಅವರು ಹಳಗನ್ನಡದ ಕಥನಕಾವ್ಯದ ಪರಂಪರೆಯನ್ನು ಮುಂದುವರಿಸುವ ಹಾದಿಯಲ್ಲಿದ್ದಾರೆ. ಇಂಥ ಪ್ರಯತ್ನಗಳು ಬೇರೆ ಭಾಗಗಳಲ್ಲಿ ನಡೆದಿಲ್ಲವೆಂದಲ್ಲ. ಆದರೆ ಹಳಗನ್ನಡದಿಂದ ಕಸಿಗೊಂಡ ಹೊಸಗನ್ನಡವನ್ನು ಆಧುನಿಕ ಕಾವ್ಯಕ್ಕೆ ಬಳಸುವಲ್ಲಿ ಇಲ್ಲಿಯ ಕವಿಗಳು ಪಡೆದ ಯಶಸ್ಸು ಅನನ್ಯವಾದದ್ದು.

ಸಂಸ್ಕೃತದ ಒಂದು ಶಬ್ದವನ್ನೂ ಬಳಸದೆ, ಅಚ್ಚಗನ್ನಡದಲ್ಲೇ ಕಾವ್ಯ ರಚಿಸಬೇಕೆಂಬ ಪ್ರಯಾಸಕರ ಪ್ರಯತ್ನ ಆಂಡಯ್ಯನಿಗೇ ಕೊನೆಯಾಯಿತು ಎಂದುಕೊಂಡಿದ್ದಾಗ, ದಕ್ಷಿಣ ಕನ್ನಡದ ಇಬ್ಬರು ಕವಿಗಳು ಆ ಪ್ರಯತ್ನವನ್ನು ಮುಂದುವರಿಸಿದ್ದು ಕುತೂಹಲಕರವಾಗಿದೆ. ಮುಳಿಯ ತಿಮ್ಮಪ್ಪಯ್ಯನವರ “ಸೊಬಗಿನ ಬಳ್ಳಿ” ಮತ್ತು ಕೊಳಂಬೆ ಪುಟ್ಟಣ್ಣಗೌಡರ “ಕಾಲೂರ ಚೆಲುವೆ”, “ನುಡಿವಣಿಗಳು” ಇಂಥ ಪ್ರಯತ್ನಗಳಾಗಿವೆ. ಇಂಥ ಪ್ರಯತ್ನಗಳು ಬೇರೆ ಭಾಗಗಳಲ್ಲಿ ನಡೆಯಲಿಲ್ಲವೆನ್ನುವದೂ ಗಮನಿಸಬೇಕಾದ ಸಂಗತಿ. ಬಹುಶಃ ಅವರು ಶ್ರಮವಹಿಸಿ ಆರ್ಜಿಸಿಕೊಂಡಿದ್ದ, ತಮ್ಮ ಮಾತೃಭಾಷೆಯಲ್ಲದ ಕನ್ನಡದ ಮೇಲೆ ಸಾಧಿಸಿದ್ದ ಪ್ರಭುತ್ವದ ಅಭಿವ್ಯಕ್ತಿಯಾಗಿ ಇದು ಬಂದಿರಬಹುದು. ಅಥವಾ, ಆ ಕಾಲದಲ್ಲಿ ವ್ಯಾಪಕವಾಗಿ ಕಾಣಿಸಿಕೊಳ್ಳತೊಡಗಿದ್ದ ಇಂಗ್ಲಿಷ್ ಭಾಷೆಯ ಪ್ರಭಾವವನ್ನು ಅಚ್ಚಗನ್ನಡದ ಮೂಲಕ ಎದುರಿಸುವ ಒಂದು ಹುನ್ನಾರವಾಗಿರಬಹುದು. ಆಂಡಯ್ಯನಂತೆ, ಸಂಸ್ಕೃತವಿಲ್ಲದೆ ಕನ್ನಡ ಬದುಕಬಲ್ಲದೆಂಬುದನ್ನು ಸಾಧಿಸಿ ತೋರಿಸುವ ತುರ್ತು ಅವಶ್ಯಕತೆ ಮಾತ್ರ ಈ ಕವಿಗಳಿಗೆ ಇರಲಿಲ್ಲವೆಂಬುದು ಸ್ಪಷ್ಟ. ಯಾಕೆಂದರೆ ಆ ಕಾಲದಲ್ಲಿ ಸಂಸ್ಕೃತ ಕನ್ನಡಕ್ಕೆ ಅಂಥ ಸವಾಲನ್ನೇನೂ ಒಡ್ಡಿರಲಿಲ್ಲ. ಪ್ರತಿಯಾಗಿ, ಇಂಗ್ಲೀಷಿನ ಹೊಸ ಸವಾಲನ್ನು ಎದುರಿಸಲು ಸಂಸ್ಕೃತ, ಕನ್ನಡಗಳೆರಡೂ ಒಟ್ಟಿಗೆ ಕೆಲಸ ಮಾಡಬೇಕಾಗಿತ್ತು. ಹೀಗಾಗಿ, ಈ ಭಾಗದ ಆರಂಭದ ಕವಿಗಳು ಕನ್ನಡದ ಜೊತೆಗೆ ಸಂಸ್ಕೃತವನ್ನೂ ಅಭ್ಯಾಸ ಮಾಡಿದ್ದರು. ಅವೆರಡರ ಹದವಾದ ಪಾಕದಲ್ಲಿ ತಮ್ಮ ಕಾವ್ಯ ಭಾಷೆಯನ್ನು ರೂಪಿಸಿಕೊಂಡರು.

ತಮ್ಮ ಮಾತೃಭಾಷೆಯಾದ ತುಳುವನ್ನು ಬಿಟ್ಟು ಕನ್ನಡದಲ್ಲಿ ಬರೆಯಬೇಕಾದ ನಿರ್ಧಾರವನ್ನು ಇಲ್ಲಿಯ ಕವಿಗಳು ತೆಗೆದುಕೊಂಡರಾದರೂ, ತುಳು ಸಂಸ್ಕೃತಿಯ ಬೇರುಗಳನ್ನು ಕಡಿದುಕೊಳ್ಳಲಿಲ್ಲ ಎಂಬುದು ಬಹಳ ಮಹತ್ವದ ವಿಷಯ. ಮೌಖಿಕವಾಗಿ ಲಭ್ಯವಿದ್ದ ತುಳು ಜಾನಪದ ಹಾಡುಗಳು, ಕಥೆಗಳು, ಭೂತ ಕೋಲ ಮುಂತಾದ ಧಾರ್ಮಿಕ ಆಚರಣೆಗಳು ಸಾಂಸ್ಕೃತಿಕ ನೆನಪುಗಳಾಗಿ ಇವರ ಕಾವ್ಯದಲ್ಲಿ ದಟ್ಟವಾಗಿ ಹೆಣೆದುಕೊಂಡಿವೆ. ಕೋಟಿ-ಚಿನ್ನಯ, ಭೂತಾಳ ಪಾಂಡ್ಯ ಮೊದಲಾದ ಕಥೆಗಳು ಪೌರಾಣಿಕ ರೂಪಕಗಳಾಗಿ ಕೆಲಸ ಮಾಡಿವೆ. ತುಳು ಜಾನಪದ ಹಾಡುಗಳ ಮಟ್ಟುಗಳು, ಲಯಗಳು ಇಲ್ಲಿಯ ಕಾವ್ಯದಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡಿವೆ. ಉತ್ತರ ಕರ್ನಾಟಕದ ಕವಿಗಳಿಗೆ ಅಲ್ಲಿಯ ಕನ್ನಡ ಜಾನಪದ ಒದಗಿದಂತೆ ದಕ್ಷಿಣ ಕನ್ನಡದ ಕವಿಗಳಿಗೆ ತುಳು ಜಾನಪದ ಒದಗಿದೆ. ವಿಷಯದಲ್ಲಿ ಇಲ್ಲಿಯ ಕವಿಗಳು ತೋರಿಸಿದ ಸ್ಥಳೀಯ ಸಂಸ್ಕೃತಿಯ ಬಗೆಗಿನ ಎಚ್ಚರ, ಪ್ರೀತಿ ವಿಶೇಷವಾದುವು.

ಕರ್ನಾಟಕದ ಉಳಿದ ಭಾಗದ ಕವಿಗಳಿಗೆ ಭಾರತಮಾತೆ ಎಂಬ ಕಲ್ಪನೆಯೊಂದಿಗೆ ಕನ್ನಡ ಮಾತೆಯ ಕಲ್ಪನೆಯನ್ನು ಅಳವಡಿಸಿಕೊಳ್ಳುವ ಒಂದು ಸಮಸ್ಯೆ ಇತ್ತು. ಕನ್ನಡ ಮಾತೆಯನ್ನು “ಭಾರತಮಾತೆಯ ತನುಜಾತೆ” ಎಂದು ನಿರ್ವಚಿಸಿ ಅವರು ಈ ಸಮಸ್ಯೆಯನ್ನು ಪರಿಹರಿಸಿಕೊಂಡರು. ಆದರೆ ದಕ್ಷಿಣ ಕನ್ನಡದ ಕವಿಗಳಿಗೆ ಈ ಇಬ್ಬರೂ ಮಾತೆಯರೊಂದಿಗೆ ‘ತುಳು ಮಾತೆ’ಯನ್ನೂ ಒಪ್ಪಿಕೊಳ್ಳಬೇಕಾದ ವಿಶಿಷ್ಟ ಸನ್ನಿವೇಶವಿತ್ತು. ಇದನ್ನವರು ಯಾವ ಗೊಂದಲವೂ ಇಲ್ಲದೆ ಪರಿಹರಿಸಿಕೊಂಡರು. ಭಾರತದ ಬಹುರಾಷ್ಟ್ರೀಯತೆಯ ಸಮಸ್ಯೆಗೆ ಅವರು ಕಂಡುಕೊಂಡ ಈ ಪರಿಹಾರ ಸಾಂಸ್ಕೃತಿಕವಾಗಿ ಬಹಳ ಮಹತ್ವದ್ದು.

ಇಲ್ಲಿಯ ಕವಿಗಳಿಗೆ ಸಾರ್ವತ್ರಿಕವಾಗಿ ಕನ್ನಡ ಆಡುಭಾಷೆಯಾಗಿ ಲಭ್ಯವಿಲ್ಲದಿದ್ದರೂ ಕೋಟ-ಕುಂದಾಪುರಗಳ ಕನ್ನಡ, ಅಲ್ಲಲ್ಲಿ ಉಳಿದುಕೊಂಡಿದ್ದ ಹವ್ಯಕ ಕನ್ನಡ ತಕ್ಕಮಟ್ಟಿಗಾದರೂ ಅವರ ಲಿಖಿತ ಕನ್ನಡಕ್ಕೆ ವಿಶಿಷ್ಟ ಬಣ್ಣವನ್ನು ತಂದಿವೆ. ಈಚಿನ ದಿನಗಳಲ್ಲಿ ಕಾವ್ಯ, ಗದ್ಯಗಳೆರಡರಲ್ಲೂ ಈ ಕನ್ನಡಗಳ ಲಯ, ವಾಕ್ಯರಚನೆ, ಶಬ್ದಗಳು ಸ್ವಷ್ಟವಾಗಿ ಕಾಣಿಸಿಕೊಳ್ಳತೊಡಗಿವೆ.

ಕೆ.ವಿ. ಸುಬ್ಬಣ್ಣನವರು ಒಂದೆಡೆ ಗುರುತಿಸುವಂತೆ, “ಇಲ್ಲಿಯ ಎಲ್ಲಾ ಜಾತಿ-ವರ್ಗ ಅಂತಸ್ತುಗಳ ಜನರಿಗೂ ಸಮಾನವಾಗಿ, ಬಹು ಸಹಜವೂ ಅನಿವಾರ್ಯವೂ ಆಗಿರುವ ಪದಾರ್ಥ ಯಕ್ಷಗಾನ. ಈ ಜನರ ಮಾತು ನಡಾವಳಿಗಳಲ್ಲಿ, ನಿತ್ಯ ವ್ಯವಹಾರಗಳಲ್ಲಿ, ನೆನಪುಗಳಲ್ಲಿ ಕೂಡಾ ಯಕ್ಷಗಾನದ ದಾಟಿ ಲಯಗಳು ಮಿಂಚಿ ಕಾಣುತ್ತವೆ”. ಈ ಜಿಲ್ಲೆಯ ಸಂಸ್ಕೃತಿಯನ್ನು ವಿಶಿಷ್ಟವಾಗಿ ರೂಪಿಸಿರುವ ಯಕ್ಷಗಾನ ಇಲ್ಲಿಯ ಕಾವ್ಯದ ಮೇಲೆ ಪ್ರಭಾವ ಬೀರದೆ ಇರಲು ಸಾಧ್ಯವೆ ಇರಲಿಲ್ಲ. ಮುದ್ದಣ್ಣ, ಕೊಳಂಬೆ ಪುಟ್ಟಣ್ಣಗೌಡರಂಥವರು ಸ್ವತಃ ಯಕ್ಷಗಾನಗಳನ್ನು ರಚಿಸಿದವರು. ಕೆಲವರು ಭಾಗವತಿಕೆಯನ್ನು, ಇನ್ನು ಕೆಲವರು ಅರ್ಥಗಾರಿಕೆಯನ್ನು ಮಾಡಿದವರು. ಮುಳಿಯ ತಿಮ್ಮಪ್ಪಯ್ಯನವರು ಪ್ರಸಿದ್ಧ ಯಕ್ಷಗಾನ ಲೇಖಕನಾದ ಪಾರ್ತಿ ಸುಬ್ಬನನ್ನು ಕುರಿತು ಪಾಂಡಿತ್ಯಪೂರ್ಣವಾದ ಕೃತಿಯನ್ನು ರಚಿಸಿದರು. ಕಲಿತವರು, ಕಲಿಯದವರು – ಎಲ್ಲರೂ ಯಕ್ಷಗಾನದ ಮೋಡಿಗೆ ಒಳಗಾದ ಪ್ರೇಕ್ಷಕರು. ಹೀಗಾಗಿ ಯಕ್ಷಗಾನದ ಮಟ್ಟುಗಳು, ಲಯಗಳು, ಮಾತಿನ ರೀತಿಗಳು ಇಲ್ಲಿಯ ಕಾವ್ಯದಲ್ಲಿ ಹಾಸು-ಹೊಕ್ಕಾಗಿ ಸೇರಿಕೊಂಡಿವೆ. ಇತ್ತೀಚಿನ ಗೋಪಾಲಕೃಷ್ಣ ಅಡಿಗರ ಕಾವ್ಯದವರೆಗೂ ಈ ಪ್ರಭಾವದ ಹರವು ಇದೆ. ಉತ್ತರ ಕರ್ನಾಟಕದ ಕವಿಗಳ ಮೇಲೆ “ಶ್ರೀ ಕೃಷ್ಣ ಪಾರಿಜಾತ”, “ಸಂಗ್ಯಾಬಾಳ್ಯಾ”, ಲಾವಣಿಗಳು ಬೀರಿದ ಪ್ರಭಾವಕ್ಕಿಂತಲೂ ಇಲ್ಲಿ ಯಕ್ಷಗಾನದ ಪ್ರಭಾವ ಹೆಚ್ಚು ವ್ಯಾಪಕವಾಗಿದೆ.

ಈ ಮತ್ತು ಇಂಥ ಇನ್ನೂ ಅನೇಕ ಸಂಗತಿಗಳು ಈ ಭಾಗದ ಕಾವ್ಯಕ್ಕೆ ಅದರದೇ ಆದ ಅನನ್ಯತೆಯನ್ನು ಒದಗಿಸಿವೆ. ಈ ಸಂಕಲನದಲ್ಲಿ ಸೇರಿರುವ ಪ್ರಬಂಧಗಳು ಇಂಥ ವಿಶಿಷ್ಟ ಅಂಶಗಳ ಮೇಲೆ ಬೆಳಕು ಚೆಲ್ಲಲು ಯತ್ನಿಸಿವೆ. ಈ ಪ್ರಬಂಧ ಸಂಕಲನದ ಮುಖ್ಯ ಉದ್ದೇಶ ಇಂಥ ವಿಶಿಷ್ಟ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಹಿಂದಿನ ದಕ್ಷಿಣ ಕನ್ನಡ ಜಿಲ್ಲೆಯ ಹತ್ತು ಜನ ಕವಿಗಳ ಅಭ್ಯಾಸವಾಗಿದೆ. ಈ ರೀತಿ ಒಂದು ವಿಶಿಷ್ಟ ಸಂಸ್ಕೃತಿಯ ಪ್ರದೇಶಕ್ಕೆ ಸೀಮಿತಗೊಳಿಸಿಕೊಂಡು ಅಭ್ಯಾಸಕ್ಕೆ ತೊಡಗಿದಾಗ, ಇಡಿಯಾಗಿ ಕನ್ನಡ ಕಾವ್ಯದ ಬಗ್ಗೆ ಪ್ರಚಲಿತವಿರುವ ಹೇಳಿಕೆಗಳು ಮರುಪರಿಶೀಲನೆಗೆ ಒಳಗಾಗುತ್ತವೆ. ಅಲಕ್ಷ್ಯಕ್ಕೊಳಗಾದ, ಆದರೆ ಅನೇಕ ದೃಷ್ಟಿಯಿಂದ ಮುಖ್ಯರಾದ ಕೆಲವು ಕವಿಗಳನ್ನಾದರೂ ವಿಶೇಷವಾಗಿ ಗಮನಿಸಲು ಸಾಧ್ಯವಾಗುತ್ತದೆ. ಜೊತೆಗೆ, ಭಿನ್ನಭಿನ್ನವೆಂದು ತೋರುವ ಕವಿಗಳ ಹಿಂದಿನ ಏಕಸೂತ್ರತೆ ಒಂದು ಪರಂಪರೆಯ ಹಿನ್ನಲೆಯಲ್ಲಿ ಒಡೆದು ಕಾಣುತ್ತದೆ. ಹಾಗೆಯೇ ಒಂದೇ ರೀತಿಯಾಗಿ ಕಾಣುವ ಕವಿಗಳ ಹಿಂದಿನ ಭಿನ್ನತೆಯೂ ಕೂಡ.

ಇಲ್ಲಿ ಅಭ್ಯಾಸಕ್ಕೊಳಗಾಗಿರುವ ಕವಿಗಳಲ್ಲಿ ಕೆಲವರ ಬಗ್ಗೆ ಈವರೆಗೆ ಒಂದು ಗಮನಾರ್ಹ ವಿಮರ್ಶೆಯೂ ಬಂದಿರಲಿಲ್ಲ ಎನ್ನುವದು ವಿಚಿತ್ರವಾದರೂ ನಿಜ. ಹಟ್ಟಿಯಂಗಡಿ ನಾರಾಯಣರಾಯರು, ಪಂಜೆ ಮಂಗೇಶರಾಯರು, ಸೇಡಿಯಾಪು ಕೃಷ್ಣಭಟ್ಟರು, ಕೊಳಂಬೆ ಪುಟ್ಟಣ್ಣಗೌಡರು ಮುಂತಾದವರ ಕಾವ್ಯದ ಬಗ್ಗೆ ಇಲ್ಲಿ ನಡೆದಿರುವ ಚರ್ಚೆ ಇನ್ನೂ ಮುಂದುವರಿಯಬೇಕಾಗಿದೆ. ಆದರೆ, ಈ ಭಾಗದ ಎಲ್ಲ ಕವಿಗಳನ್ನೂ ಇಲ್ಲಿ ಒಳಗೊಳ್ಳಲು ಸಾಧ್ಯವಾಗಿಲ್ಲ. ಇದು ಒಂದು ತೋರುಬೆರಳಿನ ಪ್ರಯತ್ನ ಮಾತ್ರ.

– ೨೦೦೧

* ಇದೇ ಹೆಸರಿನ ಲೇಖನ ಸಂಕಲನಕ್ಕೆ (ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ೨೦೦೧) ಬರೆದ ಸಂಪಾದಕೀಯ