ಶರಣರ ಸ್ವರವಚನಗಳನ್ನು, ದಾಸರ ಕೀರ್ತನೆಗಳನ್ನು, ಕೈವಲ್ಯ ಪದಗಳು, ತತ್ವಪದಗಳು ತಮ್ಮ ರಾಚನಿಕ ವಿನ್ಯಾಸದಲ್ಲಿ ಒಂದೇ ಜಾತಿಗೆ ಸೇರಿದ ರಚನೆಗಳಾಗಿವೆ. ಇವೆಲ್ಲ ಹಾಡಿನ ಜಾತಿಯವು; ಆದ್ದರಿಂದ ಅಂಶಗಣ ಛಂದಸ್ಸನ್ನು ಪ್ರಧಾನವಾಗಿ ಬಳಸುವಂಥವು. ಎಲ್ಲವೂ ಧಾರ್ಮಿಕ, ಆಧ್ಯಾತ್ಮಿಕ, ಅನುಭಾವಿಕ ವಿಷಯಗಳನ್ನು ಕುರಿತಂಥವು. ಒಟ್ಟಿನಲ್ಲಿ ಆಗಮಿಕ ಪರಂಪರೆಗೆ ಸೇರಿದುವು.

ಸಾಮಾನ್ಯವಾಗಿ ಈ ಹಾಡುಗಳಲ್ಲಿ ‘ಪಲ್ಲವಿ’ ಅಗತ್ಯವಾಗಿದ್ದು, ‘ಅನುಪಲ್ಲವಿ’ ಐಚ್ಛಿಕವಾಗಿರುತ್ತದೆ (ಸ್ವರವಚನಗಳಲ್ಲಿ ಅನುಪಲ್ಲವಿ ಇರುವದಿಲ್ಲ). ಮುಂದೆ ನಾಲ್ಕು ಸಾಲಿನ ಮೂರು – ನಾಲ್ಕು ನುಡಿಗಳು ಬಂದು, ಕೊನೆಯ ಅಥವಾ ಅದರ ಹಿಂದಿನ ಸಾಲಿನಲ್ಲಿ ಕೃತಿಕಾರ‍ನ ಅಧಿದೈವತದ ಹೆಸರಿನಲ್ಲಿ ಅಂಕಿತವಿರುತ್ತದೆ. ಪ್ರತಿಯೊಂದು ನುಡಿಯ ಕೊನೆಗೂ ಪಲ್ಲವಿ-ಅನುಪಲ್ಲವಿಗಳನ್ನು ಸೇರಿಸಬೇಕಾಗುತ್ತದೆ. ಇವೆಲ್ಲ ‘ಹಾಡು’ಗಳ ಲಕ್ಷಣವಾಗಿದ್ದು, ‘ಪಲ್ಲವಿ’, ‘ಅನುಪಲ್ಲವಿ’ ಎಂಬ ಶಬ್ದಗಳು ಸಂಗೀತದಿಂದ ಬಂದವುಗಳಾಗಿವೆ. ಅನೇಕ ಹಾಡುಗಳಿಗೆ ರಾಗ-ತಾಳಗಳನ್ನು ಸಹ ಸೂಚಿಸಲಾಗಿದೆ. ಈ ಹಾಡುಗಳ ಮುಖ್ಯ ರಾಚನಿಕ ವಿನ್ಯಾಸವೆಂದರೆ, ಇಡೀ ಹಾಡಿನ ಮುಖ್ಯ ಸಂದೇಶ ಅದರ ಪಲ್ಲವಿ-ಅನುಪಲ್ಲವಿಗಳಲ್ಲಿ ಸಾರರೂಪದಲ್ಲಿ ಪ್ರಕಟವಾಗಿ ಬಿಡುತ್ತದೆ. ಅವುಗಳನ್ನು ಹಿಂಬಾಲಿಸಿ ಬರುವ ನುಡಿಗಳು ಆ ಮುಖ್ಯ ಸಂದೇಶದ ಅರ್ಥವನ್ನು ವಿಸ್ತರಿಸುತ್ತ, ಉದಾಹರಿಸುತ್ತ ಹೋಗುತ್ತವೆ. ಉದಾಹರಣೆಗಾಗಿ ಕನಕದಾಸರ ‘ತಲ್ಲಣಿಸದಿರು ಕಂಡ್ಯ ತಾಳು ಮನವೆ’ ಎಂಬ ಕೀರ್ತನೆಯನ್ನು ನೋಡಬಹುದು:

ರಾಗ: ಕೇದಾರ ಗೌಳ, ತಾಳ: ಝಂಪೆ

ತಲ್ಲಣಿಸದಿರು ಕಂಡ್ಯ ತಾಳು ಮನವೆ ||||
ಎಲ್ಲರನು ಸಲಹುವನು ಇದಕ್ಕೆ ಸಂಶಯವಿಲ್ಲ ||..||

ಬೆಟ್ಟದಾ ತುದಿಯಲ್ಲಿ ಹುಟ್ಟಿದಾ ವೃಕ್ಷಕ್ಕೆ
ಕಟ್ಟೆಯನು ಕಟ್ಟಿ ನೀರೆರೆದವರು ಯಾರೊ
ಹುಟ್ಟಿಸಿದ ದೇವ ತಾ ಹೊಣೆಗಾರನಾಗಿರಲು
ಗಟ್ಯಾಗಿ ರಕ್ಷಿಪನು ಇದಕೆ ಸಂಶಯವಿಲ್ಲ|| ತಲ್ಲಣಿಸದಿರು….

ಅಡವಿಯೊಳಗಾಡುವ ಮೃಗಪಕ್ಷಿಗಳಿಗೆಲ್ಲ
ಅಡಿಗಡಿಗೆ ಆಹಾರವಿತ್ತವರು ಯಾರೊ
ಹಡೆದ ಜನನಿಯ ತೆರದೆ ಸ್ವಾಮಿ ಹೊಣೆಗೀಡಾಗಿ
ಬಿಡದೆ ರಕ್ಷಪನಿದಕೆ ಸಂದೇಹ ಬೇಡ ||| ತಲ್ಲಣಿಸದಿರು….

ಕಲ್ಲಿನಲಿ ಹುಟ್ಟಿ ತಾ ಕೂಗುವ ಕಪ್ಪೆಗೆ
ಅಲ್ಲಿ ಆಹಾರವನು ತಂದೀಯುವವರ್ಯಾರೊ
ಬಲ್ಲಿದನು ಕಾಗಿನೆಲೆಯಾದಿಕೇಶವ ರಾಯ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ|| ತಲ್ಲಣಿಸದಿರು….

ಹುಟ್ಟಿಸಿದ ದೇವರು ಎಲ್ಲರನ್ನೂ ಸಲಹುತ್ತಾನೆ, ಅದಕ್ಕಾಗಿ ತಲ್ಲಣಗೊಳ್ಳುವ ಕಾರಣವಿಲ್ಲ ಎಂಬ ಭರವಸೆಯ ಸಂದೇಶ ಈ ಹಾಡಿನ ಪಲ್ಲವಿ-ಅನುಪಲ್ಲವಿಗಳಲ್ಲೇ ಬಂದು ಬಿಡುತ್ತದೆ. ಮುಂದಿನ ಮೂರು ನುಡಿಗಳು ಉದಾಹರಣೆಗಳೊಂದಿಗೆ ಅದೇ ಮಾತನ್ನು ಮತ್ತೆಮತ್ತೆ ದೃಢಪಡಿಸುತ್ತ ಹೋಗುತ್ತವೆ.

ಬೇಂದ್ರೆಯವರು ಈ ಮಾದರಿಯ ಅನೇಕ ಹಾಡುಗಳನ್ನು ಬರೆದಿದ್ದಾರೆ. ಪಲ್ಲವಿ-ಅನುಪಲ್ಲವಿಗಳನ್ನು ಬಳಸಿಕೊಂಡಿದ್ದಾರೆ. ಮತ್ತು, ಪಲ್ಲವಿಯ ಅರ್ಥವನ್ನು ವಿಸ್ತರಿಸುವ ಇಲ್ಲವೆ ದೃಢಪಡಿಸುವ ರಚನೆಯನ್ನೂ ಕೆಲವು ಕಡೆ ಅನುಸರಿಸಿದ್ದಾರೆ. ‘ಜಾನಪದ ಅನುಭಾವಿಯ ಹಾಡು’ (“ಸಂಚಯ”)’, ‘ಹರಗೋಣ ಬಾ ಹೊಲ’ (“ಮುಕ್ತಕಂಠ”)’, ‘ಆಡಿ ಫಲವೇನು?’ (“ಸೂರ್ಯಪಾನ”) ಮುಂತಾದವು ಈ ಬಗೆಯ ಹಾಡುಗಳು. ಕೆಲವು ಕಡೆ ರಾಗ-ತಾಳಗಳನ್ನೂ ಸೂಚಿಸಿದ್ದಾರೆ: ಉದಾಹರಣೆಗೆ ‘ಶುಭ ನುಡಿಯೆ ಶಕುನದ ಹಕ್ಕಿ’ (“ನಾದಲೀಲೆ”). ಕೆಲವು ಹಾಡುಗಳಲ್ಲಿ ‘ಅಂಬಿಕಾತನಯ’ ಎಂಬ ಕಾವ್ಯನಾಮವನ್ನು ಅಂಕಿತವಾಗಿ ಬಳಸಿದ್ದಾರೆ. ಉದಾಹರಣೆಗೆ ‘ಬೆಳದಿಂಗಳ ನೋಡs’ (“ನಾದಲೀಲೆ”), ‘ಗಂಗಾವತರಣ’ ಇತ್ಯಾದಿ. ಈ ದೃಷ್ಟಿಯಿಂದ ‘ಎದೆಯ ಒಕ್ಕಲಿಗೆ’ ಎಂಬ ಹಾಡು ಕುತೂಹಲಕರವಾಗಿದೆ. ಈ ಪದ್ಯ –

ಬೆದೆಯರಿತು ಹದಮಾಡು ಹೃದಯದೀ ಹೊಲವನ್ನು
ಹದಬೆದೆಯನರಿತಂಥ ಹೃದಯವಾಸೀ || ||

ಎಂಬ ಪಲ್ಲವಿಯಿಂದ ಆರಂಭವಾಗುತ್ತದೆ. ಈ ಪಲ್ಲವಿಯ ಮೊದಲ ಸಾಲಿನಲ್ಲಿ ಹೃದಯವೆಂಬ ಹೊಲ ಹದಗೆಟ್ಟಿರುವ ಸಂಗತಿ ಇದೆ. ಎರಡನೆಯ ಸಾಲಿನಲ್ಲಿ ಹೃದಯವಾಗಿಯಾಗಿರುವ ಗುರು ಆ ಹೊಲವನ್ನು ಹದಮಾಡಬೇಕೆಂಬ ಪ್ರಾರ್ಥನೆ ಇದೆ. ಪಲ್ಲವಿಯಲ್ಲಿ ಪ್ರಕಟವಾಗಿರುವ ಆ ಆಶಯವೇ ಇಡೀ ಕವಿತೆಯ ಅರ್ಥವಾಗಿದೆ. ಮುಂದಿನ ಮೂರು ನುಡಿಗಳಲ್ಲಿ ಅದೇ ಆಶಯವೇ ಇನ್ನಷ್ಟು ವಿವರಗಳೊಂದಿಗೆ ಮತ್ತೆಮತ್ತೆ ಪ್ರಕಟವಾಗಿದೆ:

ಗರುವ ಗ್ರಹಿಕೆಗಳೆಂಬ ಹುಲ್ಲು ಕರಿಕೆಗಳಿಂದ
ಸರುವವೂ ಕೆಟ್ಟಿಹುದು ನಟ್ಟು ಬೆಳೆದು
ಬರುವ ಸುಗ್ಗಿಯ ಬೆಳೆಯು ಭರದಿಂದ ಬರುವಂತೆ
ಗುರುವೆ! ಮಾಡೋ! ಕಲ್ಪತರುವೆ! ಮಾಡೋ

ಈ ಮೊದಲ ನುಡಿಯ ಮೊದಲೆರಡು ಸಾಲುಗಳು ಪಲ್ಲವಿಯಲ್ಲಿಯ ಮೊದಲ ಸಾಲಿನಲ್ಲಿಯ ಹದಗೆಟ್ಟ ಹೊಲದ ಸ್ಥಿತಿಯನ್ನು ಹುಲ್ಲುಕರಿಕೆ ಮತ್ತು ನಟ್ಟು ಬೆಳೆದ ಪ್ರತಿಮೆಗಳಿಂದ ಮಾರ್ತಗೊಳಿಸುತ್ತದೆ. ಇನ್ನೆರಡು ಸಾಲುಗಳು ಈ ಹೊಲವನ್ನು ಫಲವತ್ತಾಗಿ ಮಾಡುವಂತೆ ಆ ಗುರುವನ್ನು ಪ್ರಾರ್ಥಿಸುತ್ತವೆ. ಎರಡನೆಯ ನುಡಿಯಲ್ಲಿ ಮತ್ತೆ ಎದೆಯ ಹೊಲದ ವರ್ಣನೆಯೆ ಇದೆ. ಜೊತೆಗೆ ಅಸಹಾಯಕತೆಯ ದನಿ ಮುಂದುವರಿದಿದೆ:

ಕಾಡಿನಂದದಿ ಕರಲು, ಕಲ್ಲಿನಂದದಿ ಎದೆಯು
ಕಾಡುವದು ಕಾಣದೇ ಹಗಲು ಇರುಳೂ
ಮಾಡಿದ್ದ ಬೇಸಾಯ ಮಣ್ಣುಗೂಡುವದಯ್ಯೊ
ಮಾಡಬೇಕಿನ್ನೇನು ಕೈ ಸಾಗದಯ್ಯಾ.

ಕೊನೆಯ ನುಡಿಯಲ್ಲಿ ಗುರುವಿನೊಂದಿಗೆ ಕವಿ ಮಾಡಿಕೊಂಡಿರುವ ಒಪ್ಪಂದವನ್ನು ಅವನಿಗೆ ನೆನಪು ಮಾಡಿಕೊಡಲಾಗಿದೆ.

ಕೋರ ಪಾಲಿನ ಮಾತು ಮಾಡಿಕೊಟ್ಟೆನು ನಿನಗೆ
ಯಾರೇಕೆ ಮಧ್ಯಸ್ಥರಿಲ್ಲಿ ಬೇಕು?
ಪಾರುಮಾಡ್ಯೆ ಹೊಟ್ಟಿಗಿಲ್ಲದೇ ಸಾಯುವೆನು
ತೋರು ಕರುಣದ ಕಸಬು ಎದೆ ಒಕ್ಕಲಿಗಾ        (“ನಾದಲೀಲೆ”)

ಆದರೆ ಪಲ್ಲವಿಯಲ್ಲಿ ಸೂಚಿತವಾಗುವ ಅರ್ಥ ಬೆಳೆಯುವುದಿಲ್ಲ. ಬದಲಾಗುವದೂ ಇಲ್ಲ. ಆದಿಪ್ರಾಸವನ್ನು ಒಳಗೊಂಡು, ಪಲ್ಲವಿ, ನುಡಿ, ಅರ್ಥದ ರಚನೆ ಇತ್ಯಾದಿ ವಿಷಯಗಳಲ್ಲಿ ಇದು ಒಂದು ವಿಶಿಷ್ಟ ಹಾಡೇ ಆಗಿದೆ. ಅರ್ಥಾತ್ ಹಾಡುಗಳ ಪರಂಪರೆಗೆ ಸೇರಿದೆ.

ಈ ಹಾಡು ಸರ್ಪಭೂಷಣ ಶಿವಯೋಗಿಗಳ “ಶರೀರವೆಂದೆಂಬುವ ಹೊಲನ” ಎಂಬ ಹಾಡನ್ನು ನೆನಪಿಸುತ್ತದೆ:

ರಾಗ: ಸುರಟಿ

ಶರೀರವೆಂದೆಂಬುವ ಹೊಲನ ಹಸನ ಮಾಡಿ
ಪರತತ್ವ ಬೆಳೆಯನೆ ಬೆಳೆದುಣ್ಣಿರೋ ||||

ಶಮದಮೆಯೆಂದೆಂಬುವೆರಡೆತ್ತುಗಳ ಹೂಡಿ
ವಿಮಲ ಮಾನಸವ ನೇಗಿಲನೆ ಮಾಡಿ
ಮಮಕಾರವೆಂದೆಂಬ ಕರಿಕೆಯ ಕಳೆದಿಟ್ಟು
ಸಮತೆಯೆಂದೆಂಬ ಗೊಬ್ಬರವ ಚೆಲ್ಲಿ ||

ಗುರುವರನುಪದೇಶವೆಂಬ ಬೀಜವ ಬಿತ್ತಿ
ಮೆರೆವ ಸಂಸ್ಕಾರದೃಷ್ಟಿಯ ಬಲದಿ
ಅರಿವೆಂಬ ಪೈರನೆ ಬೆಳೆಸುತ್ತೆ ಮುಸುಕಿರ್ದ
ದುರಿತ ದುರ್ಗಣವೆಂಬ ಕಳೆಯ ಕಿತ್ತು ||

ಸ್ಥಿರಮುಕ್ತಿಯೆಂದೆಂಬ ಧಾನ್ಯವ ಬೆಳೆದುಂಡು
ಪರಮಾನಂದದೊಳು ದಣ್ಣನೆ ದಣಿದು
ಗುರುಸಿದ್ಧನಡಿಗಳಿಗೆರಗುತ್ತೆ ಭವವೆಂಬ
ಬರದನು ತಮ್ಮ ಸೀಮೆಗೆ ಕಳುಹಿ||

ಈ ಎರಡು ಹಾಡುಗಳಲ್ಲಿ ರಾಚನಿಕ ಸಾಮ್ಯ ಸ್ಪಷ್ಟವಾಗಿಯೇ ಇದೆ. ಎರಡರ ವಸ್ತುವಿನಲ್ಲೂ ಒಕ್ಕಲುತನದ ರೂಪಕ ಕೇಂದ್ರಸ್ಥಾನದಲ್ಲಿದೆ ಎಂಬುದು ವಿಶೇಷ ಸಂಗತಿ. ಒಕ್ಕಲುತನದ ವಿವಿಧ ಹಂತ/ ವಿವರಗಳನ್ನು ಬೆಳೆಸಿ ಅವುಗಳಿಗೆ ಆಧ್ಯಾತ್ಮಿಕ ಅಂಶಗಳನ್ನು ಜೋಡಿಸಲಾಗಿದೆ. ಹೀಗೆ ಒಂದು ಕೇಂದ್ರರೂಪಕವನ್ನು ಇರಿಸಿಕೊಂಡು ಅದರ ಉಪಮಾನ-ಉಪಮೇಯಗಳಲ್ಲಿಯ ಸಮಾನ ಅಂಶಗಳನ್ನು ಸಮೀಕರಿಸುತ್ತ ಹೋಗುವ ರಚನೆಗಳು ತತ್ಪಪದ ಇತ್ಯಾದಿಗಳಲ್ಲಿ ಹೇರಳವಾಗಿ ಸಿಗುತ್ತವೆ. ಉಪಮಾನ-ಉಪಮೇಯಗಳನ್ನು ‘ಎಂಬ’, ‘ಎಂದೆಂಬ’ – ಮೊದಲಾದ ಸಂಬಂಧಕಾವ್ಯಗಳ ಮೂಲಕ ಜೋಡಿಸಿ ರೂಪಕದ ಹೊಸ ನಮೂನೆಯನ್ನು ಬಳಕೆಗೆ ತಂದಿರುವ ರೀತಿಯು ಗಮನಾರ್ಹವಾಗಿದೆ. “ಗರುವ ಗ್ರಹಿಕೆಗಳೆಂಬ ಹುಲ್ಲುಕರಿಕೆಗಳಿಂದ” ಎಂಬ ಮಾತಿನಲ್ಲಿ ಬೇಂದ್ರೆಯವರೂ ಅದನ್ನು ಅನುಸರಿಸಿದ್ದಾರೆ. ತತ್ವಪದಗಳನ್ನು ನೆನಪಿಸಬೇಕೆಂಬ ಉದ್ದೇಶದಿಂದಲೇ ಅವರು ಈ ತಂತ್ರವನ್ನು ಬಳಸಿದಂತಿದೆ. ಸರ್ಪಭೂಷಣ ಶಿವಯೋಗಿಗಳ ಹಾಡಿನಲ್ಲಿ ಅನುಭಾವದ ಅಂಶ ಬಹಳ ದಟ್ಟವಾಗಿದೆ. ಬೇಂದ್ರೆಯವರ ಹಾಡಿನಲ್ಲಿಯೂ “ಅವರವರ ಎದೆಯಲ್ಲಿ ಒಕ್ಕಲಾಗಿ ನಿಂತ ಅವರವರ ಕ್ಷೇತ್ರಜ್ಞ ಒಬ್ಬನಿದ್ದಾನೆ; ಅವನಿಗೆ ನಮ್ಮ ನಮ್ಮ ಹೊಲ ನಾವು ಒಪ್ಪಿಸಬೇಕು” (ಬೇಂದ್ರೆ, ೧೯೩೮: ii) ಎಂಬ ಅವರ ಮಾತಿನಲ್ಲಿ ಆಧ್ಯಾತ್ಮಿಕ ಸೂಚನೆ ಇದ್ದರೂ ಲೌಕಿಕದ್ದೇ ಒಂದು ಕೈ ಮೇಲಾಗಿದೆ ಎನ್ನಬಹುದು.

ಹೀಗೆ ‘ಹಾಡಿನ’ ಪರಂಪರಾಗತ ರೂಪಗಳನ್ನು ಬೇಂದ್ರೆಯವರು ಅನುಸರಿಸಿದ್ದರೂ, ಆ ಮಾದರಿಗಳನ್ನು ಮುರಿಯುವ ಹಾಡುಗಳೂ ಅವರ ಕಾವ್ಯದಲ್ಲಿ ಸಾಕಷ್ಟಿವೆ. ತೋರಿಕೆಗೆ ಪಲ್ಲವಿ-ಅನುಪಲ್ಲವಿ, ಅಂಶೀ ಛಂದಸ್ಸು, ಹಾಡಿನ ಗತಿ ಇತ್ಯಾದಿಗಳನ್ನು ಉಳಿಸಿಕೊಂಡು ಅವರು ಬೇರೆ ರೀತಿಯ ಹಾಡುಗಳನ್ನೂ ಬರೆದಿದ್ದಾರೆ. ಉದಾಹರಣೆಗೆ ‘ನಾದಲೀಲೆ’ ಎಂಬ ಕವಿತೆಯನ್ನು ನೋಡಬಹುದು.

ಕೋಲು ಸಖೀ, ಚಂದ್ರಮುಖೀ, ಕೋಲೆ ನಾದಲೀಲೆ ||||

ಮುಂಜಾವದ ಎಲರ ಮೂಸಿ ನೋಡುತಿಹವೆ ನಲ್ಲೆ
ತರಳ ಎರಳೆ, ಚಿಗುರ ಬಿಗುರೆ, ಹೂವೆ ಹೂವು ಹುಲ್ಲೆ,
ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ |
ಅತ್ತಣಿಂದ ಬೇಟೆಗಾರ ಬರುವ ನಾನು ಬಲ್ಲೆ.
ಮುಂಜಾವದ ಎಲರ ಮೂಸಿ ನೋಡುತಿಹವೆ ನಲ್ಲೆ
    ಕೋಲು ಸಖೀ…..

ಹೀಗೆ ಮುಂದುವರಿಯುವ ಹಾಡು ತನ್ನ ಕಾವ್ಯಮಯತೆಯಲ್ಲಿ ಯಾವದೇ ತತ್ವಪದ/ಕೀರ್ತನೆಗಿಂತ ಭಿನ್ನವಾಗಿದೆ. ಇಲ್ಲಿಯ ಪಲ್ಲವಿ ಕವಿತೆಯ ಸಂದೇಶವನ್ನು ಬಿಟ್ಟುಕೊಡುವದಿಲ್ಲ. ನುಡಿಗಳು ಪಲ್ಲವಿಯ ಸುತ್ತಲೇ ಗಿರಕಿ ಹೊಡೆಯುವ ರಚನೆಯೂ ಇಲ್ಲಿಲ್ಲ. ಕವಿತೆ ಅನುಭವದ ಬೇರೆ ಬೇರೆ ಮಗ್ಗಲುಗಳನ್ನು ತೆರೆಯುತ್ತಲೇ ಹೋಗುತ್ತದೆ. ಆಧ್ಯಾತ್ಮದ ಎಳೆಯೊಂದು ಕವಿತೆಯಲ್ಲಿ ಇದ್ದರೂ, ಅದು ಸುಪರಿಚಿತವಾದ, ಸಾಂಪ್ರದಾಯಿಕ ಆಧ್ಯಾತ್ಮಿಕತೆ ಅಲ್ಲ. ಹೀಗೆ ತತ್ಪಪದಗಳ ಪರಂಪರೆಯನ್ನು ಅನುಸರಿಸಿಯೂ, ಅದನ್ನು ಬದಲಿಸಿದ, ಬೆಳೆಸಿದ ಅನೇಕ ಕವಿತೆಗಳನ್ನು ಬೇಂದ್ರೆಯವರು ಬರೆದಿದ್ದಾರೆ. ‘ಬೆಳಚಿಂಗಳ ನೋಡs’, ‘ನೀ ಹಿಂಗ ನೋಡಬ್ಯಾಡ ನನ್ನ’ (“ನಾದಲೀಲೆ”), ‘ಗಂಗಾವತರಣ’, ‘ಕುಣಿಯೋಣು ಬಾರs’, ‘ಬಿಸಿಲುಗುದುರೆ’, ‘ಹಕ್ಕಿ ಹಾರುತಿದೆ ನೋಡಿದಿರಾ?’, ‘ಮೂವತ್ತು ಮೂರು ಕೋಟೀ’ (“ಗರಿ”), ‘ಮಾಯಾ ಕಿನ್ನರಿ’, ‘ಹುಬ್ಬಳ್ಳಿಯಾಂವಾ’, (“ಸಖೀಗೀತ”), “ಸಣ್ಣ ಸೋಮವಾರ” (“ಮುಗಿಲ ಮಲ್ಲಿಗೆ”), ‘ತುಂಬಿತ್ತು ಹಾಲಗೇರಿ’ (“ಮರ್ಯಾದೆ”), ‘ದೇಮವ್ವನ ಮೆರವಣಿಗೆ’ (“ನಾಕುತಂತಿ”) ಮೊದಲಾದ ಅವರ ಹಲವಾರು ಪ್ರಸಿದ್ಧ ಕವಿತೆಗಳು ಹಾಡುಗಳಾಗಿರುವದು ಗಮನಿಸಬೇಕಾದ ವಿಷಯ. ಇವುಗಳಲ್ಲಿ ಆಗಮಿಕ ಒಂದು ತುದಿಯಾದರೆ, ಲೌಕಿಕ ಇನ್ನೊಂದು ತುದಿ. ಈ ಎರಡು ತುದಿಗಳ ನಡುವೆ ಒಮ್ಮೆ ಆಚೆ ಒಲೆಯುತ್ತ, ಒಮ್ಮೆ ಈಚೆ ಒಲೆಯುತ್ತ, ಕೆಲವು ಸಲ ಎರಡರ ನಡುವೆ ಸಮನ್ವಯ ಸಾಧಿಸುತ್ತ ಅವರ ಕವಿತೆಗಳು ಪರಂಪರೆಯ ಜೊತೆ ಅನುಸಂಧಾನ ನಡೆಸುತ್ತವೆ.

ಪುರಂದರದಾಸರ ಒಂದು ಹಾಡು ಹೀಗೆ ಆರಂಭವಾಗುತ್ತದೆ:

ಗಿಳಿಯು ಪಂಜರದೊಳಿಲ್ಲಾ ! ಹರಿಹರಿಯೆ
ಬರಿ ಪಂಜರವಾಯಿತಲ್ಲಾ ||||

ಅಕ್ಕ ನಿನ್ನ ಮಾತು ಕೇಳಿ
ಚಿಕ್ಕದೊಂದು ಗಿಳಿಯ ಸಾಕಿದೆ
ಅಕ್ಕ ನಾನಿಲ್ಲದ ವೇಳೆ
ಬೆಕ್ಕುಕೊಂಡು ಹೋಯಿತಲ್ಲೊ|| ಗಿಳಿಯು

ಇದು ಪುರಂದರದಾಸರು ತಮ್ಮ ಮಗ ತೀರಿಕೊಂಡಾಗ ಬರೆದ ಹಾಡು ಎಂಬ ವದಂತಿ ಇದೆ. ಇಲ್ಲಿ ಗಿಳಿಯು ಜೀವಕ್ಕೆ, ಪಂಜರವು ದೇಹಕ್ಕೆ ಮತ್ತು ಬೆಕ್ಕು ಸಾವಿಗೆ ಪ್ರತೀಕಗಳಾಗಿ ಬಂದಿವೆ. ಬೇಂದ್ರೆಯವರು ತಮ್ಮ ಮಗ ಬಾಸ್ಕರ ತೀರಿಕೊಂಡಾಗ ಪುರಂದರದಾಸರ ಈ ಹಾಡಿನ ಪಲ್ಲವಿಯನ್ನೇ ತಲೆಬರಹವನ್ನಾಗಿ ಇರಿಸಿಕೊಂಡು ಒಂದು ಶೋಕಗೀತೆಯನ್ನು ರಚಿಸಿದ್ದಾರೆ. ಅವರ ಪಲ್ಲವಿ, ಪ್ರತಿಮಾ ವಿಧಾನ ಬೇರೆಯಾಗಿದೆ.:

ಏನೆಂದು ಕೂಗಲಿ ನಿನ್ನಾ ಎನ್ನಾ ಚೆನ್ನ ||||

ಮಲಗಿಸಿದೆ ಮೊಲೆಯೂಡೀ ಖೋಡೀ
ನಿದ್ದೆಹೋದೆನದೇಕೋ ಪಾಪಿಯು
ಎದ್ದು ಕಣ್ದೆರೆವನಿತರೊಳು ನಾ
ಮುದ್ದು ಕಂದಾ! ಮುಚ್ಚಿಬಿಟ್ಟೆಯೊ ಕಣ್ಣಾ || ಏನೆಂದು….
      (‘ಗಿಳಿಯು ಪಂಜರದೊಳಿಲ್ಲಾ’ : “ಗರಿ”)

ಇಲ್ಲಿ ವಿಲಾಪಿಸುತ್ತಿರುವವಳು ತಾಯಿ. ಆದರೆ ಪುರಂದರದಾಸರ ಹಾಡಿನ ಪಲ್ಲವಿಯನ್ನು ತಮ್ಮ ಹಾಡಿನ ಶೀರ್ಷಿಕೆಯಾಗಿ ಬಳಸುವ ಮೂಲಕ ಬೇಂದ್ರೆಯವರು ಕವಿತೆಯ ಪಠ್ಯದ ಹೊರಗಿನ ಇನ್ನೊಂದು ಅಂಥದೇ ಪಠ್ಯವನ್ನು ನೆನಪಿಸುತ್ತಾರೆ. ಹಾಗಾಗಿ ಅಲ್ಲಿಯ ಸಾವು, ಗಿಳಿ, ಪಂಜರ, ಬೆಕ್ಕುಗಳು ಪರೋಕ್ಷ ಪ್ರತೀಕಗಳಾಗಿ ಇಲ್ಲಿಯೂ ಸೇರಿಕೊಳ್ಳುತ್ತವೆ. ಅಂತರ್‌ಪಠ್ಯೀಯತೆಯ (Inter-textuality) ದೃಷ್ಟಿಯಿಂದ ಇಂಥ ಉದಾಹರಣೆಗಳು ಕುತೂಹಲಕರವಾಗಿವೆ.

ಇಂಥದೇ ಇನ್ನೊಂದು ಉದಾಹರಣೆ ಬೇಂದ್ರೆಯವರ ‘ಕೋಗಿಲೆ’ (“ಗರಿ”) ಎಂಬ ಹಾಡು. ಕವಿತೆಯ ಮೊದಲಿಗೇ ಕಂಸಿನಲ್ಲಿ ‘ನಿಜಗುಣ ಶಿವಯೋಗಿಗಳ ಅಜರಾಮರ ಪದದಂತೆ’ ಎಂಬ ಮಾತಿದೆ. ಹೀಗೆ ಬೇರೆ ಪ್ರಸಿದ್ಧ ಹಾಡುಗಳ ಧಾಟಿಯನ್ನು ಸೂಚಿಸುವ ಪದ್ಧತಿ ತತ್ವಪದಕಾರರಲ್ಲಿದೆ. ಹಾಡಿನ ಪಲ್ಲವಿ –

 ಕೋಗಿಲೇ, ಚೆಲ್ವs ಕೋಗಿಲೇ
ಮುದ್ದು ಕೋಗಿಲೇ, ಜಾಣs ಕೋಗಿಲೆs || ಪಲ್ಲ ||

ಎಂದಿದ್ದು, ನಿಜಗುಣ ಶಿವಯೋಗಿಗಳ ಹಾಡಿನ ಪಲ್ಲವಿಯೂ ಇದೇ ಆಗಿದೆ. ಅವರು ಮನಸ್ಸನ್ನು ಕೋಗಿಲೆಯ ಸಂಕೇತದಿಂದ ಸಂಬೋಧಿಸಿ, ವಿಷಯಗಳಿಗೆ ಎಳಸದೆ ಧ್ಯಾನದಲ್ಲಿ ನಿಲ್ಲುವಂತೆ ದೃಢವಾಗಿ ಕೇಳುತ್ತಿದ್ದಾರೆ. ಬೇಂದ್ರೆಯವರ ಕೋಗಿಲೆಯೂ ಮನಸ್ಸೇ ಆಗಿದೆ. ಆದರೆ ಅವರು ಮನಸ್ಸು ತನ್ನ ಹಲವು ಸಾಧ್ಯತೆಗಳನ್ನು ಮೂರ್ತರೂಪಗೊಳಿಸಿಕೊಳ್ಳಬೇಕೆಂದು ಆಶಿಸುತ್ತಾರೆ.

ಈ ಆಶಯ ಹೆಚ್ಚಾಗಿ ಲೌಕಿಕವಾದುದು, ಆದರೆ ಸ್ವಾರ್ಥಪರವಾದುದೇನೂ ಅಲ್ಲ:

 ಇನ್ನು ನಿದ್ದೆಯ ತೊರೆದು ತನ್ನತನವನರಿದು
ಭಿನ್ನಭಾವವ ಬಿಟ್ಟು ಕೋಗಿಲೇ!
ನನ್ನ ಕನ್ನಡ ನಾಡ ಚೆನ್ನರೇಳುವಂತೆ
ಕೂಗುವಿಯಾ ಹೇಳು ಕೋಗಿಲೆ!

ಹುಂಬ ನೀ ಹಾಡು, ಸ್ವಯಂಭು ಮೂರ್ತಿಯು ನಿನಗೆ
ಇಂಬುಗೊಟ್ಟಂತಾಡು ಕೋಗಿಲೇ!
ಅಂಬಿಕಾತನಯನ ನಂಬಿಗೆಗಿಂಬಾದ
ನಿಜಗುಣದಲಿ ಬೆರೆತು ಕೋಗಿಲೇ!

ಪಲ್ಲವಿ, ಲಯ ಸಹಿತ ಮೂಲಕ್ಕೆ ಹತ್ತಿರವಾದ ಈ ಪದ್ಯ ಕೊನೆಯ ಸಾಲಿನಲ್ಲಿ ಜಾಣತನದಿಂದ ನಿಜಗುಣರನ್ನು ನೆನೆದು ಮೂಲವನ್ನು ಸ್ಮರಿಸಿಕೊಂಡಿದೆ. ಪ್ರಭಾವಗಳನ್ನು ಮುಚ್ಚಿಟ್ಟುಕೊಳ್ಳುವ ಜಾಯಮಾನ ಇದಲ್ಲ. ಬದಲಾಗಿ, ಪರಂಪರೆಯೊಂದಿಗೆ ಸಂಬಂಧ ಬೆಳೆಸಿಕೊಳ್ಳಬೇಕೆಂಬ ಎಚ್ಚರದ ನಿದರ್ಶನ ಇದು. ಆ ಮೂಲಕ ತನ್ನ ಅಸ್ಮಿತೆಯನ್ನು ಮರೆತು ಸಾಂಸ್ಕೃತಿಕ ವಿಸ್ಮೃತಿಯಲ್ಲಿ ತೊಳಲಾಡುತ್ತಿರುವ ನಾಡಿನ ಜನರನ್ನು ಎಚ್ಚರಿಸಬೇಕೆಂಬ ಕಳಕಳಿ ಇದರ ಹಿಂದಿದೆ.

ಕಡಕೋಳ ಮಡಿವಾಳಪ್ಪ ಮತ್ತು ಶಿಶುನಾಳ ಶರೀಫ್ ಸಾಹೇಬ – ಇಬ್ಬರ ಹೆಸರಿನಲ್ಲಿಯೂ ಇರುವ ಒಂದು ಪ್ರಸಿದ್ಧ ಬೆಡಗಿನ ಹಾಡು –

ಕೋಡಗನ ಕೋಳಿ ನುಂಗಿತ್ತ | ನೋಡವ್ವ ತಂಗಿ
ಕೋಡಗನ ಕೋಳಿ ನುಂಗಿತ್ತ || ||

ಇಲ್ಲಿ ಸಣ್ಣದು ದೊಡ್ದದನ್ನು ಒಳಗೊಳ್ಳುವ ಸೋಜಿಗವಿದೆ. ಈ ಬೆಡಗನ್ನೇ ಬೇಂದ್ರೆಯವರು ಸರ್ವಜ್ಞನ ತ್ರಿಪದಿಯ ರೂಪದಲ್ಲಿ ‘ಸೂಸಲ ನಗೆಯ ಸೂಕ್ತಿಗಳು’ (“ಯಕ್ಷ-ಯಕ್ಷಿ”) ಎಂಬ ಪದ್ಯಗಳಲ್ಲಿ ಹುಡುಗಾಟಕ್ಕೆ ತಿರುಗಿಸಿದ್ದಾರೆ. ಅಂಥ ಒಂದು ಮಾದರಿ:

ಕೂಸು ಕುಂಚಗಿ ತಿಂತ್ಯು, ಹಾಸೀಗಿ ನೆಲ ತಿಂತ್ಯು
ಅಜ್ಜಯ್ಯ ಗಡ್ಡ ಇಲಿ ತಿಂತ್ಯು | ಅಡಗೂಳು
ಅಜ್ಜೀಯ ತಿಂತ್ಯು ಕಜ್ಜಾಯ ||

ಇದನ್ನೊಂದು ‘ಅಣಕವಾಡು’ ಎಂದೂ ಕರೆದರೂ ಆದೀತು. ಆದರೆ ಬೇಂದ್ರೆಯವರು ಪರಂಪರೆಯೊಂದಿಗೆ ಹೀಗೆ ಆಡಬಲ್ಲರೆಂಬುದೇ ಮಹತ್ವದ ಮಾತಾಗಿದೆ.

ಮಾರ್ಗ ಮತ್ತು ದೇಶಿಯ ಸಮಸ್ಯೆಯ ಬಗೆಗೆ ಕೂಡ ಬೇಂದ್ರೆಯವರು ತಮ್ಮದೇ ಆದ ಆಯ್ಕೆಯನ್ನು ಮಾಡಿಕೊಂಡರು. ಆಗಮಿಕ-ಲೌಕಿಕಗಳ ಎರಡು ಧ್ರುವಗಳಂತೆ ಮಾರ್ಗ-ದೇಸಿಗಳ ಎರಡು ಧ್ರುವಗಳನ್ನೂ ಅವರು ಬಳಸಿಕೊಂಡರು. ಎಂದರೆ, ಅವುಗಳನ್ನು ಎರಡು ಬಿಂದುಗಳಂತೆ ಕಲ್ಪಿಸಿಕೊಂಡು ಅಗತ್ಯಕ್ಕೆ ತಕ್ಕ ಹಾಗೆ ಅವುಗಳ ನಡುವೆ ಬೇಂದ್ರೆಯವರ ಕಾವ್ಯ ಓಲಾಡುತ್ತದೆ. ಅವುಗಳನ್ನು ಪರಸ್ಪರ ಸಂಬಂಧವಿಲ್ಲದ ಎರಡು ತೀರಗಳಂತೆ ನೋಡದೆ ಒಂದು ಬಗೆಯ Continuumದಂತೆ ಅವುಗಳನ್ನು ಬಳಸಿಕೊಂಡರು. ಹೀಗಾಗಿ, ಮಾರ್ಗಶೈಲಿಯಿಂದ ಆಡುಮಾತಿನ ದೇಶಿಯ ಶೈಲಿಯವರೆಗೆ ಅವರ ಕಾವ್ಯಶೈಲಿಯಲ್ಲಿ ಆಗಾಧ ವೈವಿಧ್ಯ ಕಾಣುತ್ತದೆ. ಅತ್ಯಂತ ಶಿಷ್ಟ ಶೈಲಿಯಿಂದ ಅತ್ಯಂತ ಆಡುಮಾತಿನ ಶೈಲಿಯವರೆಗೆ ಅವರ ಶೈಲಿಯ ಹಲವು ಸ್ತರಗಳು ನಿರ್ಮಾಣವಾಗಿವೆ. ಅದರಿಂದಾಗಿಯೇ, ಕನ್ನಡದ ಯಾವದೇ ಕವಿಯಲ್ಲಿ ಕಾಣದ ಶೈಲಿವೈವಿಧ್ಯ ಬೇಂದ್ರೆಯವರ ಕಾವ್ಯದಲ್ಲಿ ಕಾಣುತ್ತದೆ.

ಸಹಸ್ರತಂತ್ರೀ ನಿಃಸ್ವನದಂತೆ
ಮಾತರಿಶ್ವನಾ ಘನಮನದಂತೆ
ಗುಡುಗಾಡುತ್ತಿದೆ ಗಗನದ ತುಂಬ
ಪ್ರಣವ ಪ್ರವೀಣನ ನಾದಸ್ತಂಭ

***

ಸತಿಮುಖಸುಸ್ಮಿತ ಜನಿತ ಸುವೇದ
ಶರಣನ ಚಿದ್ಗತಿ ಶರಣ್ಯವೇಧ
ಮಧುರಾಭಕ್ತಿಯ ಮಧುರಾಗೀತ
ವೇಣುಧ್ವನಿಯಲ್ಲಿ ಆತ್ಮಪ್ರೀತ
       (‘ಸಹಸ್ರತಂತ್ರೀ…’ :”ಹೃದಯ ಸಮುದ್ರ”)

ಎಂಬುದು ಶಿಷ್ಟ ಶೈಲಿಯ ಒಂದು ತುದಿಯಾದರೆ,

ಹದಾ ಒಳಗs ಇಲ್ದs ತಮ್ಮಾ!
ಪದಾ ಹೊರಗs ಬರೂದಿಲ್ಲಾ
ಕದಾ ತೆರ್ಯೊದಿಲ್ಲಾ ಅಂತಃಕರಣಾ.

***

ನನ್ನ ಮಾತು ನಿನ್ನ ಮಾತು
ಇದರೊಳಗೇನು ಬ್ಯಾರೆ ತು?
ತಿಳಿಲಾರೇ ಅನ್ನಬ್ಯಾಡಾ
          (‘ಹದಾ ಇಲ್ದs ಪದಾ‘ :”ಸಮುದ್ರ“)

ಇದು ಆಡುಮಾತಿನ ಶೈಲಿಯ ಇನ್ನೊಂದು ತುದಿ. ಈ ಎರಡು ತುದಿಗಳ ನಡುವೆ ಅವರ ಕಾವ್ಯ ಜೀಕುತ್ತದೆ.

ಷಟ್ಪದಿಗಳನ್ನು ಬರೆಯುತ್ತಿದ್ದ ಕಾಲದಲ್ಲಿ ಬೇಂದ್ರೆಯವರ ಶೈಲಿ ಅನಿವಾರ್ಯವಾಗಿ ಮಾರ್ಗದ ತುದಿಯಲ್ಲಿತ್ತು. ಆದರೆ ಅದೇ ಕಾಲಕ್ಕೆ ‘ಬೆಳಗು’ದಂಥ ಜಾನಪದ ಲಯ ಮತ್ತು ಆಡುಮಾತಿನ ಶೈಲಿಯ ಕವಿತೆಯನ್ನೂ ಅವರು ಬರೆದಿದ್ದರು. ಸಹಜವಾಗಿಯೇ ಅಂಥ ಶೈಲಿಯ ಬಳಕೆಯ ಬಗ್ಗೆ ಅಧೈರ್ಯವಾಗಿರಬೇಕು. ಅಂತೆಯೇ ‘ಸದಾನಂದಿಜಂಗಮ’ ಎಂಬ ಗುಪ್ತ ಹೆಸರಿನಿಂದ ಅದನ್ನು ಪ್ರಕಟಣೆಗೆ ಕೊಟ್ಟರು. ಇಂಥ ಕವಿತೆಗಳಿಗೆ ಸಿಕ್ಕ ಪ್ರೋತ್ಸಾಹದಾಯಕ ಪ್ರತಿಕ್ರಿಯೆಯಿಂದಾಗಿ ಇನ್ನೂ ಹೆಚ್ಚು ದಿಟ್ಟವಾದ ಪ್ರಯೋಗಗಳನ್ನು ಮಾಡಲು ಬೇಂದ್ರೆಯವರಿಗೆ ಹುರುಪು ಬಂದಿರಬೇಕು.

ಇದೇ ಕಾಲದಲ್ಲಿಯೇ ಉತ್ತರ ಕರ್ನಾಟಕದಲ್ಲಿ ಜನಪದ ಸಾಹಿತ್ಯದ ಸಂಗ್ರಹ ಮತ್ತು ಪ್ರಕಟಣೆಯ ಕೆಲಸ ಆರಂಭವಾಯಿತು. ಗೆಳೆಯರ ಗುಂಪು ನಡೆಸುತ್ತಿದ್ದ ‘ಜಯ ಕರ್ನಾಟಕ’ ಪತ್ರಿಕೆಯಲ್ಲಿ ಗೆಳೆಯರು ಸಂಗ್ರಹಿಸಿ ಪ್ರಕಟಿಸಿದ “ಗರತಿಯ ಹಾಡು”, “ಮಲ್ಲಿಗೆ ದಂಡೆ”, “ಜೀವನ ಸಂಗೀತ”ಗಳ ಸಂಗ್ರಹ, ಪರಿಷ್ಕರಣ, ಪ್ರಕಟಣೆಗಳಲ್ಲಿ ಬೇಂದ್ರೆಯವರು ಉತ್ಸಾಹದಿಂದ ಪಾಲ್ಗೊಂಡಿದ್ದರು ಹೀಗಾಗಿ ಜನಪದ ಸಾಹಿತ್ಯದೊಂದಿಗೆ ಅವರ ಸಂಪರ್ಕ ಬಹಳ ನಿಕಟವಾಗಿತ್ತು. ಅಲ್ಲಿಯ ಲಯಗಳು, ಶಬ್ದಗಳು, ಆಚರಣೆಗಳು, ಹೋಲಿಕೆಗಳು, ನುಡಿಗಟ್ಟುಗಳು ಅವರನ್ನು ಆಕರ್ಷಿಸಿದವು. ಈ ಆಕರ್ಷಣೆಯಲ್ಲಿಯೇ ಬೇಂದ್ರೆಯವರು ಹಲವಾರು ಹೊಸ ರೀತಿಯ ಪ್ರಯೋಗಗಳನ್ನು ಮಾಡಿದರು.

ಬೇಂದ್ರೆಯವರ ‘ಪಾತರಗಿತ್ತಿ ಪಕ್ಕ’ದಂಥ ಕವಿತೆಗೆ ಮರಾಠಿ ಕವಿ ಕೇಶವಸುತರ ‘ಪುಲಪಾಕರೂ’ ಎಂಬ ಕವಿತೆ ಸ್ಪೂರ್ತಿ ಕೊಟ್ಟಿರಬಹುದು ಎಂದು ಸುಮತೀಂದ್ರ ನಾಡಿಗರು ಊಹಿಸುತ್ತಾರೆ (೧೯೯೮:೨೧;೨೩). ಆದರೆ ಇದರ ಲಯ ಉತ್ತರ ಕರ್ನಾಟಕದಲ್ಲಿ ಪ್ರಚಲಿತವಿರುವ ಶಿಶುಪ್ರಾಸವೊಂದರ ಲಯವನ್ನು ಹೋಲುತ್ತದೆ:

ಇತತ್ತ ಬಾ
ಇದರಿಗೆ ಬಾ
ಗೆಜ್ಜಿ ಕಟಿಗೊಂಡು
ಮಜ್ಜಿಗಿಗೆ ಬಾ

ಇದರ ಜೊತೆಗೆ ಇಟ್ಟು ನೋಡಿದರೆ ‘ಪಾತರಗಿತ್ತಿ ಪಕ್ಕ’ದ ಲಯ ಇಂಥದೇ ಎನಿಸುತ್ತದೆ:

ಪಾತರಗಿತ್ತಿ ಪಕ್ಕ
ನೋಡಿದೇನ ಎಕ್ಕ
ಹಸಿರು ಹಚ್ಚಿ ಚುಚ್ಚಿ
ಮೇಲsಕರಿಷಣ ಹಚ್ಚಿ….
    (:”ಗರಿ”)

ಬೇಕಾದರೆ ಉತ್ತರ ಕರ್ನಾಟಕದ ಇನ್ನೂ ಒಂದು ಶಿಶುಪ್ರಾಸದ ಜೊತೆಗೆ ಹೋಲಿಸಬಹುದು.

ಇಟಿಟ್ಟ ಪೂವ
ಜಾಲೀ ಹೂವ

ಆದರೆ ಬೇಂದ್ರೆಯವರು ಈ ಶಿಶುಪ್ರಾಸಗಳ ಲಯ, ಗತ್ತುಗಳನ್ನು ಬಳಸಿಕೊಂಡು ಬೇರೆಯದೇ ಆದ, ಆಧುನಿಕ ಕವಿತೆಯೊಂದನ್ನು ಕಟ್ಟುತ್ತಾರೆ. ಇನ್ನೊಂದು ಶಿಶುಪ್ರಾಸ್ತಾವನ್ನಲ್ಲ.

ಬೆನ್ನವೀರ ಕಣವಿಯವರು –

ಗಿರಿಗಿರಿ ಗಿಂಡಿ
ಇಬತ್ತಿ ಉಂಡಿ
   (“ಮಧುಚಂದ್ರ”)

ಎಂದು ಆರಂಭವಾಗುವ ಕವಿತೆಯೊಂದನ್ನು ಬರೆದಿದ್ದಾರೆ. ಇದೂ ಕೂಡ ಉತ್ತರ ಕರ್ನಾಟಕದ ಒಂದು ಶಿಶುಪ್ರಾಸ. ಇಬ್ಬರು ಹುಡಿಗೆಯರು ಪರಸ್ಪರ ಕೈಗಳನ್ನು ಕತ್ತರಿಯಾಗಿ ಹಿಡಿದುಕೊಂಡು ಗಿರಿಗಿರಿ ತಿರುಗುತ್ತ ಈ ಹಾಡು ಹಾಡುತ್ತಾರೆ. ಇದಕ್ಕೆ ‘ಉದ್ದುದ್ದೆವ್ವ’ ಎಂದು ಹೆಸರು. ಬೇಂದ್ರೆಯವರ ‘ಪಾತರಗಿತ್ತಿ ಪಕ್ಕ’ ಕವಿತೆಯನ್ನು ಓದಿ ತಮಗೆ ಈ ಪದ್ಯವನ್ನು ಬರೆಯಲು ಧೈರ್ಯ ಬಂತು ಎಂದು ಕಣವಿಯವರು ತಮ್ಮದೊಂದು ಭಾಷಣದಲ್ಲಿ ಹೇಳಿದರು. ಒಬ್ಬ ದೊಡ್ಡ ಕವಿ ಅನೇಕ ತರುಣ ಕವಿಗಳಿಗೆ ಹೊಸ ಪ್ರಯೋಗಗಳನ್ನು ಮಾಡಲು ಹೀಗೆ ಧೈರ್ಯ ಕೊಡುವದು ಸಹಜವೇ ಆಗಿದೆ.

ಜನಪದ ಕಾವ್ಯ ಮತ್ತು ಉತ್ತರ ಕರ್ನಾಟಕದ ಕನ್ನಡ ಆಡುಭಾಷೆಯನ್ನು ತೆಗೆದುಕೊಂಡು ಬೇಂದ್ರೆಯವರು ಕನ್ನಡ ಕಾವ್ಯದಲ್ಲಿ ಏನೇನು ಮಾಡಿದರು ಎಂಬುದು ಈಗಾಗಲೇ ಕತೆಯಾಗಿಬಿಟ್ಟಿದೆ. ಆದರೆ ಇಷ್ಟಾದರೂ ಬೇಂದ್ರೆ ಜನಪದ ಕವಿಯಲ್ಲ. ಆನಂದಕಂದ, ಶ್ರೀಧರ ಖಾನೋಳಕರ್ ಮೊದಲಾದ ಆ ಕಾಲದ ಇನ್ನೂ ಕೆಲವರು ಜನಪದ ಕಾವ್ಯದ ಪರಂಪರೆಯನ್ನು ಅನುಸರಿಸಿದ್ದಾರೆ. ಅವರಿಗಿಂತ ಬೇಂದ್ರೆ ಭಿನ್ನವಾಗುವದು ಮೂಲತಃ ತಮ್ಮ ಆಧುನಿಕ ಸಂವೇದನೆಯ ಮೂಲಕ. ಆಧುನಿಕ ಮನಸ್ಸಿನ ಕವಿಯಾಗಿಯೇ, ಆಧುನಿಕ ಮನಸ್ಸಿನ, ಅನುಭವ- ಸಂವೇದನೆಗಳ ಅಭಿವ್ಯಕ್ತಿಗಾಗಿಯೇ ಅವರು ಜನಪದ ಕಾವ್ಯವನ್ನು ಮತ್ತು ಆ ಮೂಲಕ ಆಡುಭಾಷೆಯನ್ನು ಬಳಸಿಕೊಂಡರು.

ಹಲಸಂಗಿಯ ಗೆಳೆಯರು ಪ್ರಕಟಿಸಿರುವ “ಜೀವನ ಸಂಗೀತ” ಎಂಬ ಲಾವಣಿಗಳ ಸಂಗ್ರಹದಲ್ಲಿ ಖಾಜಾಸಾಹೇಬನ ‘ಅಸಲ ಹೆಣ್ಣು’ ಎಂಬ ಒಂದು ಲಾವಣಿ ಇದೆ. ಡಪ್ಪು ಬಾರಿಸುತ್ತ, ತಾಳಕ್ಕೆ ಸರಿಯಾಗಿ ಹೆಜ್ಜೆ ಹಾಕುತ್ತ. ಪ್ರಾಸದ ಮೇಲೆ ಪ್ರಾಸಗಳನ್ನು ತೂರಿಬಿಡುತ್ತ. ಎತ್ತರದ ದನಿಯಲ್ಲಿ ಹಾಡಬೇಕಾದ ಹಾಡುಗಳಿವು:

 ಹೆಣ್ಣಸಲ ಜಾತ ಪದ್ಮೀನಿ
ಸುರತ ಚಂದ್ರೂಣಿ
ಹೊಂಟಿ ನಾಗೀಣಿ | ನೋಡ ತಿರಿಗಿ |
ಮರಿಗುದರಿ ಕುಣಿಸಿದಂಗ ನಾಜೂಕ ನಿನ್ನ ನಡಿಗಿ |
ಹೊಳಿ ನೀರ ತೆರಿಯ ಹೊಡಿದಂಗ ಒದುತೆ ನಿಲಗಿ |

ಬೇಂದ್ರೆಯವರ ಕಾವ್ಯವನ್ನು ಸುಮ್ಮನೇ ಓದಿದವರಿಗೂ ಕೂಡ ಅಲ್ಲಿಯ ಪ್ರಾಸವಿಲಾಸ ಮತ್ತು ವಿನ್ಯಾಸ ಇದೇ ಮಾದರಿಯವೆಂಬುದು ಅನಾಯಾಸವಾಗಿ ಕಂಡೀತು. ‘ನಾವು ಬರ್ತೇವಿನ್ನ’ (“ಹಾಡು ಪಾಡು”) ಎಂಬ ಕವಿತೆಯನ್ನು ಬೇಂದ್ರೆಯವರು ‘ಲಾವಣಿ’ ಎಂದೇ ಕರೆದಿದ್ದಾರೆ (೧೯೭೪”೫೨). “ನಾವು ಬರ್ತೇವಿನ್ನ ನೆನಪಿರಲಿ ತಾಯಿ| ನಂ ನಮಸ್ಕಾರ ನಿಮಗs || ಕಾಯ್ದಿರಿ ಕೂಸಿನ್ಹಾಂಗ ನಮಗ||” ಎಂಬಂಥ ಅಲ್ಲಿಯ ಸಾಲುಗಳು ಲಾವಣಿಯ ನಡಿಗೆಯನ್ನು ನೆನಪಿಸುತ್ತವೆ. ಲಾವಣಿಗಳ ಆಡುಮಾತು, ಕುಣಿತದ ಗತ್ತು, ಪ್ರಾಸಾನುಪ್ರಾಸಗಳ ಆವರ್ತನ, ಹುಸಿ ತಾಳಗಳ ಮುರಿತ, ನಿರರ್ಗಳ ಓಟ, ಹಾಡಿನ ಹದ, ಮಾತಿನ ಚಮತ್ಕಾರ, ವಾಚಾಳಿತನ ಬೇಂದ್ರೆಯವರನ್ನು ವಿಶೇಷವಾಗಿ ಆಕರ್ಷಿಸಿವೆ. ಆ ಗುಣಗಳನ್ನು ಅವರು ತಮ್ಮ ಕಾವ್ಯಕ್ಕೆ ಕಸಿಮಾಡಿಕೊಂಡಿದ್ದಾರೆ. ಅದರಿಂದ ಬಂದ ಹೊಸ ಕಾವ್ಯದ ಫಲ ಸಮೃದ್ಧವಾಗಿದೆ. ‘ಚಿಗರಿಗಂಗಳ ಚೆಲುವಿ’ (“ನಾದಲೀಲೆ”), ‘ಶ್ರಾವಣಾ’ (“ಹಾಡು – ಪಾಡು”), ‘ಗಮಗಮಾ ಗಮಾಡಸತಾವ ಮಲ್ಲಿಗಿ’ (“ಗಂಗಾವತರಣ”), ‘ತುಂಬಿತ್ತು ಹಾಲಗೇರಿ’ (“ಮರ್ಯಾದೆ”), ‘ತಾನದಳೋ ತಾಯಿ’ (“ಮತ್ತೆ ಶ್ರಾವಣಾ ಬಂತು”) ಮೊದಲಾದ ಕವಿತೆಗಳು ಇದಕ್ಕೆ ಸಾಕ್ಷಿ. ಇಂಥ ಪ್ರಾಸಮಾಲೆಗಳ ಕವಿತೆಗಳಲ್ಲಿ ಪ್ರಾಸಗಳನ್ನು ತರುವುದಕ್ಕಾಗಿಯೇ ವಾಕ್ಯರಚನೆಯ ಕ್ರಮವನ್ನು ಬಹಳ ಸಲ ಮುರಿಯಬೇಕಾಗಿ ಬಂದಿದೆ.