ಅದೇನೇ ಇರಲಿ. ಬೇಂದ್ರೆಯವರಲ್ಲಿ ಕಾವ್ಯ ಸೃಷ್ಟಿಯ ಬಗೆಗಿನ ನಿಗೂಢತೆಯಲ್ಲಿಯ ಪರಂಪರಾಗತ ನಂಬಿಕೆ ಮುಂದುವರಿದಿದೆ. ಅದರ ಮೂಲವನ್ನು ತಾಯಿಯಲ್ಲಿ ಗುರುತಿಸಿದ್ದು ಮಾತ್ರ ಹೊಸದು. ಇದು ತಾಯಿಯ ಬಗ್ಗೆ ಅವರಿಗಿದ್ದ ಭಕ್ತಿ-ಪ್ರೀತಿಯ ಅವಿಚಾರಿತ ವಿಪರೀತ ಎನಿಸಿದರೂ, ‘ತಾಯಿ’ ಎಂಬ ಕಲ್ಪನೆಯನ್ನೇ ಬೇಂದ್ರೆಯವರು ಅಗಾಧವಾಗಿ ವಿಸ್ತರಿಸಿದ್ದಾರೆ. ‘ನಾನು’ (‘ಗಂಗಾವತರಣ’) ಎಂಬ ಕವಿತೆಯಲ್ಲಿ ಐದು ಜನ ತಾಯಂದಿರನ್ನು ಅವರು ಅಧಿಕೃತವಾಗಿ ಹೆಸರಿಸಿದ್ದಾರೆ. ಮೊದಲನೆಯವಳು ವಿಶ್ವಮಾತೆ; ಎರಡನೆಯವಳು ಭೂಮಿತಾಯಿ; ಮೂರನೆಯವಳು ಭರತಮಾತೆ; ನಾಲ್ಕನೆಯವಳು ಕನ್ನಡ ತಾಯಿ; ಐದನೆಯವಳು ಹಡೆದ ತಾಯಿ. ವಿಶ್ವದ ವಿಶಾಲ ನೆಲೆಯಿಂದ ಜನ್ಮ ಕೊಟ್ಟ ತಾಯಿಯವರೆಗಿನ ಈ ವ್ಯಾಪ್ತಿಯಲ್ಲಿ ಒಂದು ಕ್ರಮ ಇದೆ. ಆದರೆ ಇವರಲ್ಲಿ ಯಾರೂ ಹೆಚ್ಚೂ ಅಲ್ಲ. ಕಡಿಮೆಯೂ ಅಲ್ಲ.

ಐದು ಐದೆಯರೆ ಪಂಚಪ್ರಾಣಗಳಾಗಿ
ಜೀವ ದೇಹನಿಹನು|

ಪಂಚ ಪ್ರಾಣಗಳಲ್ಲಿ ಯಾವದು ಹೆಚ್ಚು ಯಾವದು ಕಡಿಮೆ? ಒಬ್ಬೊಬ್ಬರದೂ ಒಂದೊಂದು ಋಣ ಕವಿಯ ಮೇಲಿದೆ. ಒಬ್ಬೊಬ್ಬರೂ ಒಂದೊಂದು ರೀತಿಯಿಂದ ಅವನನ್ನು ರೂಪಿಸಿದ್ದಾರೆ. ಬೆಳೆಸಿದ್ದಾರೆ. ಐವರೂ ಸೇರಿ ಕವಿಯಲ್ಲಿ ಸಮನ್ವಯಗೊಂಡು ಒಂದು ಸಂಚಿತ ಶಕ್ತಿಯಾಗಿದ್ದಾರೆ. ಜೊತೆಗೆ ಹೃದಯಾರವಿಂದದಲ್ಲಿರುವ ನಾರಾಯಣನೆ ದತ್ತನಾಗಿ ಬಂದು ದೈವಕೃಪೆಯನ್ನೂ ಸೇರಿಸಿದ್ದಾನೆ. ಇದರಿಂದ ಕವಿಯ ಪ್ರಜ್ಞೆಗೆ ಆಳ ಅಗಲ ಪ್ರಾಪ್ತವಾಗಿವೆ. ಅಂತೆಯೇ-

ವಿಶ್ವದೊಳನುಡಿಯಾಗಿ ಕನ್ನಡಿಸುತಿಹನಿಲ್ಲಿ
ಅಂಬಿಕಾತನಯನಿವನು|

ಎಂದು ಹೇಳಲು ಕವಿಗೆ ವಿನಯ, ಆತ್ಮವಿಶ್ವಾಸಗಳೆರಡೂ ಒಟ್ಟಿಗೆ ಬಂದಿವೆ.

ಬರುಬರುತ್ತ ಈ ಐದೆಯರ ಬಳಗ ಬೆಳೆಯುತ್ತಲೇ ಹೋದಂತಿದೆ. ಅರವಿಂದಾಶ್ರಮದ ಮಾತೆ ಮತ್ತು ಧಾರವಾಡದ ತಾಯಿಯರೂ ಇವರಲ್ಲಿ ಸೇರಲೇಬೇಕಾದವರು. ಇನ್ನೂ ಅಷ್ಟು ಜನ ಸೇರಿದರೂ ಬೇಂದ್ರೆಯವರಿಗೆ ತೊಂದರೆಯೇನೂ ಇಲ್ಲ. ‘ನಾಲ್ವರು ತಾಯಂದಿರು’ (“ಹೃದಯ ಸಮುದ್ರ”) ಎಂಬ ಇನ್ನೊಂದು ಕವಿತೆಯಲ್ಲಿ ಮಾಹೇಶ್ವರಿ, ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿಯರನ್ನೂ ಜೀವದ ನೆಲೆ ಕಟ್ಟುತ್ತಿರುವ ನಾಲ್ಕು ಮಾತೃಶಕ್ತಿಗಳೆಂದು ಸ್ವಾಗತಿಸಿದ್ದಾರೆ. ಇದು ಅರವಿಂದರು ಪ್ರತಿಪಾದಿಸಿದ ತತ್ವ. ಮಾಹೇಶ್ವರಿ, ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿಯವರು ಆದ್ಯಶಕ್ತಿಯ ನಾಲ್ಕು ರೂಪಗಳೆಂದು ಗುರುತಿಸಿ, ಅವುಗಳನ್ನೇ ಅವರು ‘ಮಾತೆ’ ಎಂದು ಕರೆದರು. ದೈವೀ ಪರಿವರ್ತನೆ ಮಾತೆಯ ಮೂಲಕವೇ ಸಾಧ್ಯವೆಂದು ಅವರ ನಂಬಿಕೆಯಾಗಿತ್ತು. ಬೇಂದ್ರೆಯವರಲ್ಲಿ ತಾಯಿಯ ಬಗ್ಗೆ ಇದ್ದ ಕಲ್ಪನೆಗೆ ಅರವಿಂದರ ತತ್ವ ಆಧ್ಯಾತ್ಮಿಕ ಸಮರ್ಥನೆ ನೀಡಿದಂತೆ ಕಾಣುತ್ತದೆ.

ಇವರೆಲ್ಲರ ಹಿಂದಿನ ಮಾತೃತತ್ವ ಒಂದೇ ಆಗಿದೆ. ಅದೇ ತತ್ವವೇ ವಿವಿಧ ಅವತಾರಗಳಲ್ಲಿ ಪ್ರಕಟವಾಗುತ್ತದೆ. ‘ಅಂಬಿಕೆ’ ಎಂಬ ಶಬ್ದ ಈ ಎಲ್ಲ ತಾಯಂದಿರನ್ನೂ ಒಟ್ಟಿಗೆ ಹಿಡಿಯುತ್ತದೆ.

ಶರಣರ ವಚನಗಳಲ್ಲಿ, ಸ್ವರವಚನಗಳಲ್ಲಿ, ದಾಸರ ಕೀರ್ತನೆಗಳಲ್ಲಿ, ತತ್ವಪದಗಳಲ್ಲಿ ಕೃತಿಕಾರರು ತಮ್ಮ ಆರಾಧ್ಯದೈವವನ್ನು ಅಂಕಿತವಾಗಿ ಬಳಸಿಕೊಳ್ಳುವ ಪರಿಪಾಠವಿದೆಯಷ್ಟೇ? ಬೇಂದ್ರೆಯವರು ಈ ಪರಂಪರೆಗೆ ಸೇರಿದವರಂತೆ ‘ಅಂಬಿಕಾತನಯದತ್ತ’ ಎಂಬ ತಮ್ಮ ಕಾವ್ಯನಾಮವನ್ನೇ ಅಂಕಿತವಾಗಿ ಬಳಸಿಕೊಂಡು ಹಲವಾರು ಪದ್ಯಗಳನ್ನು ಬರೆದಿದ್ದಾರೆ. ಹಾಡಿನ ರಚನೆಗಳಲ್ಲಷ್ಟೇ ಅಲ್ಲದೆ ಉಳಿದ ಕವಿತೆಗಳಲ್ಲೂ ಈ ಅಂಕಿತ ಬಂದಿದೆ:

ಅಂಬಿಕಾತನಯನ ಹಾಡs
ಬೆಳದಿಂಗಳ ನೋಡs
                 (‘ಬೆಳದಿಂಗಳ ನೋಡs’ : “ನಾದಲೀಲೆ”)
ಅಂಬಿಕಾತನಯನಾ
ನಿಲಿಸಿರವ್ವ ದಿನದಿನಾ
                  (‘ನಾಲ್ವರು ತಾಯಂದಿರು’ : “ಹೃದಯ ಸಮುದ್ರ”)
ಶಂಭುಶಿವಹರನ ಚಿತ್ತೆ ಬಾ
ದತ್ತ ನರಹರಿಯ ಮುತ್ತೆ ಬಾ
ಅಂಬಿಕಾತನಯನತ್ತೆ ಬಾ
                  (‘ಗಂಗಾವತರಣ’)

***

ಸ್ವಲ್ಪ ಮುಂಚೆ ಉದಾಹರಿಸಿರುವ ‘ನಾನು’ ಕವಿತೆಯ ಕೊನೆಯ ಎರಡು ಸಾಲುಗಳು ಇವತ್ತಿನ ವರ್ತಮಾನ ಸಂದರ್ಭದಲ್ಲಿ ಬಹಳ ಮುಖ್ಯವಾಗಿವೆ :

ವಿಶ್ವದೊಳನುಡಿಯಾಗಿ ಕನ್ನಡಿಸುತಿಹನಿಲ್ಲಿ
ಅಂಬಿಕಾತನಯನಿವನು |

ವಿಶ್ವದ ಒಳನುಡಿಯಾಗಿ ಕನ್ನಡಿಸಿಕೊಳ್ಳುವ ಕೆಲಸ ಸಾಂಸ್ಕೃತಿಕವಾಗಿ ಬಹಳ ಮುಖ್ಯವಾದದ್ದು. ಇದು ಇಂದಿನ ಜಾಗತೀಕರಣದ ಅಪಾಯವನ್ನು ಎದುರಿಸುವ ಮುಖ್ಯವಾದ ತಂತ್ರ. ವಿಶ್ವದ ಅನುಭವ, ಜ್ಞಾನವನ್ನೆಲ್ಲ ಕನ್ನಡದ್ದನ್ನಾಗಿ ಮಾಡಿಕೊಂಡೇ ಬಳಸಿಕೊಳ್ಳಬೇಕಾದ ಅಗತ್ಯ ದಿನೇ ದಿನೇ ಹೆಚ್ಚಾಗುತ್ತಿದೆ. ಅದನ್ನು ಕನ್ನಡ ಭಾಷೆ, ಸಂಸ್ಕೃತಿ, ಬದುಕು, ಸಂವೇದನಾ ಶೀಲತೆಗಳಿಗೆ ಒಗ್ಗುವಂತೆ ಭಾಷಾಂತರಿಸಿಕೊಳ್ಳದೇ ಹೋದರೆ ಕನ್ನಡದಂಥ ಸಂಸ್ಕೃತಿಗಳು ತತ್ತರಿಸಿ ಹೋಗುತ್ತವೆ. ವಿಶ್ವದ ಅನುಭವದ ತುತ್ತು ದೊಡ್ಡದಿರಬಹುದು; ಕನ್ನಡದ ಬಾಯಿ ಸಣ್ಣದಿರಬಹುದು. ಆದರೆ ಕನ್ನಡದ ಸಣ್ಣ ಬಾಯಿ ಜಾಗತೀಕರಣದ ದೊಡ್ಡ ತುತ್ತನ್ನು ನುರಿಸಿ ನುಂಗಿ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳುವ ವಿವೇಕವನ್ನು ಗಳಿಸಿಕೊಳ್ಳಬೇಕಾದದ್ದು ಅನಿವಾರ್ಯ. ನಮ್ಮ ಪ್ರಾಚೀನ ಕವಿಗಳು – ಕವಿರಾಜಮಾರ್ಗಕಾರ, ಪಂಪ, ವಚನಕಾರರು, ಕುಮಾರವ್ಯಾಸ, ತತ್ವಪದಕಾರರು – ಸಂಸ್ಕೃತದ ಪ್ರಾಬಲ್ಯದ ಎದುರು ತೋರಿಸಿದ ವಿವೇಕ ಇಂಥದು. ಅದಕ್ಕಾಗಿಯೇ ನಮ್ಮ ಪರಂಪರೆಯ ಜೀವನಾಡಿಗಳನ್ನು ಮತ್ತೆಮತ್ತೆ ಮುಟ್ಟಿ ನೋಡಿ ಜೀವಂತಿಕೆಯನ್ನು ಪರೀಕ್ಷಿಸಬೇಕಾಗುತ್ತದೆ.

ಬೇಂದ್ರೆಯವರು ತಮ್ಮ ಕಾವ್ಯದಲ್ಲಿ ಮಾಡಿದ್ದು ಇದನ್ನೇ. ಅದಕ್ಕಾಗಿಯೇ ಕನ್ನಡ ಕಾವ್ಯ ಪರಂಪರೆಯೊಂದಿಗೆ ಅವರು ಇಟ್ಟುಕೊಂಡಿದ್ದ ಸಂಬಂಧಗಳನ್ನು ಅಭ್ಯಸಿಸಿ ನೋಡುವದು ಅಗತ್ಯವಾಗಿದೆ.

ಆಧುನಿಕ ಕನ್ನಡ ಸಾಹಿತ್ಯ ತನ್ನ ಹಿಂದಿನ ಪರಂಪರೆಯೊಂದಿಗಿನ ಸಂಬಂಧವನ್ನು ಕಡಿದುಕೊಂಡಿದೆ ಎಂದು ವಾದಿಸುವವರು (ಕೃಷ್ಣಮೂರ್ತಿ, ೧೯೯೪:೩೦೮) ಪಂಪನಿಗೂ ಇಂದಿನ ಕಾವ್ಯಕ್ಕೂ ಏನು ಸಂಬಂಧವಿದೆ ಎಂಬ ಪ್ರಶ್ನೆಯನ್ನು ಕೇಳುತ್ತಾರೆ (ರಾಮಚಂದ್ರನ್, ೨೦೦೧). ಇವತ್ತು ಯಾರೂ ಅಕ್ಷರವೃತ್ತಗಳನ್ನು ಬಳಸುವದಿಲ್ಲ; ರಾಮಾಯಣ – ಮಹಾಭಾರತಗಳಂಥ ದೊಡ್ಡ ಹರವಿನ ಮಾರ್ಗಕಾವ್ಯಗಳು ಈಗ ಬರುತ್ತಿಲ್ಲ; ಆ ಕಾಲದ ವೀರಕಾವ್ಯವಾಗಲಿ, ತೀರ್ಥಂಕರರ ಬದುಕನ್ನು ಕುರಿತ ಪುರಾಣಕಾವ್ಯಗಳಾಗಲಿ ಈಗ ಬರಲಾರವು ಎಂಬುದು ಈ ಗ್ರಹಿಕೆಯ ಹಿಂದಿರುವ ಕಾರಣಗಳು “ಮೌಖಿಕ ಸಾಹಿತ್ಯದ ಜಾಗದಲ್ಲಿ ಬಂದಿರುವ ಅಕ್ಷರ ಸಾಹಿತ್ಯ, ಕೇಳುಗರ ಅದಲು ಇಂದಿರುವ ಓದುಗರು, ಎರಡು-ಮೂರು ಹಸ್ತಪ್ರತಿಗಳ ಬದಲು ಇಂದು ಸಾಧ್ಯವಿರುವ ಸಾವಿರಾರು ಮುದ್ರಿತ ಪ್ರತಿಗಳು, ಧರ್ಮಕೇಂದ್ರಿತ ಸಾಹಿತ್ಯದ ಬದಲು ಇಂದು ಕೇಂದ್ರದಲ್ಲಿರುವ ಸೆಕ್ಯುಲರ್ ಸಾಹಿತ್ಯದ ಸ್ವರೂಪ, ಇಂಗ್ಲಿಷ್ ಶಿಕ್ಷಣದ ಪ್ರಭಾವದಿಂದ ಇಂದು ನಾವು ಒಪ್ಪಿಕೊಂಡಿರುವ ಜನತಂತ್ರದ ಸಂಸ್ಥೆಗಳು – ಇವೆಲ್ಲವನ್ನೂ ಗಮನಿಸಿದಾಗ, ಪಂಪ ಮತ್ತು ಕುವೆಂಪು ಅವರ ನಡುವೆ ಸಾಹಿತ್ಯಕ್ಕಿಂತ ವಿಚ್ಛಿನ್ನತೆಯೇ ಹೆಚ್ಚು ಎಂದು ನನಗೆ ಕಾಣುತ್ತದೆ” ಎಂದು ಸಿ.ಎನ್. ರಾಮಚಂದ್ರನ್ ವಾದಿಸುತ್ತಾರೆ (೨೦೦೧).

ಆದರೆ ಪರಂಪರೆಯ ಸಂಬಂಧ ಇಷ್ಟೇ ಆಗಿರಲಾರದು. ಆ ಕಾಲದಲ್ಲಿ ಕನ್ನಡವು ಸಂಸ್ಕೃತದ ಎದುರು ಅನುಭವಿಸಿದ ಸ್ಥಿತಿಯನ್ನು ಇಂದು ಇಂಗ್ಲೀಷಿನ ಎದುರು ಅನುಭವಿಸುತ್ತಿದೆ. ಪಂಪ ಎದುರಿಸಿದ ಲೌಕಿಕ-ಆಗಮಿಕಗಳನ್ನು ಬೆರೆಸುವ/ಬೇರ್ಪಡಿಸುವ ಸಮಸ್ಯೆ ಶತಮಾನಗಳ ಉದ್ದಕ್ಕೂ ಸಾಗಿಬಂದದ್ದು ಇಂದಿಗೂ ಜೀವಂತವಾಗಿದೆ. ಪಂಪದಲ್ಲಿ ಮತ್ತೆಮತ್ತೆ ಕಾಣಿಸಿಕೊಳ್ಳುವ ವರ್ಣಸಮಸ್ಯೆ ಇಂದಿಗೂ ನಮ್ಮನ್ನು ಕಾಡುತ್ತಿದೆ. ಪಂಪನೇ ಎತ್ತಿದ ಮಾರ್ಗ-ದೇಸಿಗಳ ಸಮನ್ವಯದ ಪ್ರಶ್ನೆ ಸಾಹಿತ್ಯಕವಾಗಿ ಮತ್ತು ಸಾಂಸ್ಕೃತಿಕವಾಗಿ ಇವತ್ತಿಗೂ ಪ್ರಸ್ತುತವಾಗಿದೆ. ಪರಂಪರೆಯ ಸಾತತ್ಯವನ್ನು ಹೀಗೆ ಗುರುತಿಸಬೇಕಲ್ಲದೆ ಮೇಲು ಮೇಲಿನ ಹೋಲಿಕೆಗಳಲ್ಲಿ ಅಲ್ಲ. ಈ ದೃಷ್ಟಿಯಿಂದ ನೋಡಿದಾಗ, ಪರಂಪರೆಯ ಸಾತತ್ಯವನ್ನು ಕಾಯ್ದುಕೊಳ್ಳಲು ನಮ್ಮ ಆಧುನಿಕ ಲೇಖಕರು ನಡೆಸಿದ ಪ್ರಯತ್ನಗಳನ್ನು ಗುರುತಿಸಲು ಸಾಧ್ಯ. ಬೇಂದ್ರೆಯವರಲ್ಲಂತೂ ಇಂಥ ಪ್ರಯತ್ನಗಳು ಹಲವಾರು ರೀತಿಗಳಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗಾಗಿ ಅವರು ಹಳಗನ್ನಡದ ಕವಿಗಳೊಂದಿಗೆ ನಡೆಸಿದ ಅನುಸಂಧಾನವನ್ನು ನೋಡಬಹುದು.

ಪಂಪ ಎದುರಿಸಿದ ಎರಡು ಸಮಸ್ಯೆಗಳು ಬೇಂದ್ರೆಯವರಿಗೂ ಮುಖ್ಯವಾಗಿದ್ದವೆಂಬುದು ಕುತೂಹಲಕರವಾಗಿದೆ. ಅವುಗಳಲ್ಲಿ ಮಾರ್ಗ- ದೇಸಿಗಳ ಸಮಸ್ಯೆ ಒಂದು. “ಬಗೆ ಪೊಸತಪ್ಪುದಾಗಿ ಮೃದುಬಂಧದೊಳೊಂದುವುದೊಂದಿ ದೇಸಿಯೊಳ್ ಪುಗುವುದು ಪೊಕ್ಕ ಮಾರ್ಗದೊಳೆ ತಳ್ವುದು ತಳ್ತೊಡೆ ಕಾವ್ಯಬಂಧವೊಪ್ಪುಗುಂ” ಎಂಬುದು ಪಂಪನ ಪ್ರಸಿದ್ಧ ಹೇಳಿಕೆ. ದೇಸಿಯನ್ನು ಬಳಸುವದು ಅಗತ್ಯವಾದರೂ ಮಾರ್ಗದಲ್ಲಿಯೇ ಸ್ಥಾಯಿಯಾಗಿ ನಿಲ್ಲುವದು ಪಂಪನ ಆದರ್ಶವಾಗಿರುವಂತಿದೆ. ಅವನ ಕಾವ್ಯಭಾಷೆಯಲ್ಲಿ ದೇಸಿಯ ವಿಪುಲವಾದ ಬಳಕೆಯಿದ್ದರೂ ಅಂತಿಮವಾಗಿ ಅದೆಲ್ಲ ಮಾರ್ಗದಲ್ಲಿಯೇ ಕೂಡಿಕೊಳ್ಳುತ್ತದೆ. ಈ ಪ್ರಶ್ನೆ ಬೇಂದ್ರೆಯವರಿಗೂ ಮುಖ್ಯವಾಗಿತ್ತು. ಪಂಪನನ್ನು ಕುರಿತು ಅವರು ಬರೆದಿರುವ ಎರಡನೆಯ ಕವಿತೆ – ‘ಪಂಪನಿಗೆ’ – ಈ ಸಮಸ್ಯೆಯನ್ನು ಸ್ಪಷ್ಟವಾಗಿಯೇ ಪ್ರಸ್ತಾಪಿಸುತ್ತದೆ:

ಪಸರಿಸಿದ ಮಸಳಿಸಿದ ಮತ್ತೆ ಪಸರಿಸಲಿರುವ
ನಿನ್ನ ಪುಟವಹ ಸಾಜಮಾದ ಪುಲಗಿರಿ ತಿರುಳು
ಗನ್ನಡಕೆ ದೆಸೆದೆಸೆಯ ದೇಸಿಗನ್ನಡ ಬರುವ
ಒಸಗೆ ಬೀರಲಿ ಅಚ್ಚ ಕೆಚ್ಚು ಕನ್ನಡ ಹುರುಳು
ಇಹಪರಮಹಾನುಭಾವ ವ್ಯಂಜನಗೆ ಸಾಕು
ಕನ್ನಡವು ಕನ್ನಡವ ಕನ್ನಡಿಸುತಿರಬೇಕು.
(‘ಪಂಪನಿಗೆ’, “ಗಂಗಾವತರಣ”)

ಇಲ್ಲಿಯ ಪುಲಿಗೆರೆಯ ತಿರುಳ್ಗನ್ನಡದ ಪ್ರಸ್ತಾಪ ಈ ಸಮಸ್ಯೆಯನ್ನು “ಕವಿರಾಜಮಾರ್ಗ” ದಷ್ಟು ಹಿಂದಕ್ಕೆ ಒಯ್ಯುತ್ತದೆ. “ಕಿಸುವೊಳಲಾ ವಿದಿತ ಮಹಾಕೊಪಣ ನಗರದಾ ಪುಲಿಗೆರೆಯಾ| ಸದಭಿಸ್ತುತಮಪ್ಪೊಂಕುಂದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್” ಎಂಬ ಕವಿರಾಜಮಾರ್ಗಕಾರನ ಮಾತನ್ನು ಇದು ನೆನಪಿಸುತ್ತದೆ. ಬೇಂದ್ರೆಯವರು ಈ ಸಮಸ್ಯೆಯನ್ನು ತಮ್ಮದೇ ಆದ ರೀತಿಯಲ್ಲಿ ಬಿಡಿಸಿಕೊಳ್ಳಲು ಬಹಳ ಮೊದಲಿನಿಂದಲೂ ಪ್ರಯತ್ನಿಸುತ್ತಿದ್ದರೆಂಬುದಕ್ಕೆ ಅವರು “ಗರಿ” ಕವನ ಸಂಕಲನದ ಮೊದಲ ಆವೃತ್ತಿಗೆ (೧೯೩೨) ಬರೆದ ‘ಸಹೃದಯರಿಗೆ’ ಎಂಬ ಮೊದಲ ಮಾತುಗಳಲ್ಲಿಯೇ ಪುರಾವೆಗಳಿವೆ:

ಈ ಕವನದೊಳಗಿನ ಭಾಷಾ ಶೈಲಿಯ ಬಗೆಗೆ ಒಂದು ಮಾತು. ಇಲ್ಲಿ ತುಂಗಭದ್ರೆಯ ಉತ್ತರಾಪಥದ “ದೇಸಿ”ಯ ಮಾರ್ಗವನ್ನು ಹುಡುಕುವ ಹಾಗೆಯೇ ಹುಟ್ಟಿಸುವ ಕುರುಹಿದೆ…. ಪಂಡಿತ ಪಾಮರ, ಬಡವ ಬಲ್ಲಿದ, ನಾಗರಿಕ ನಾಡಾಡಿ ಎಂಬ ಭೇದವನ್ನು ಅಲ್ಲಗಳೆದು ಕನ್ನಡ ಜೀವಾಳವು ಕನ್ನಡಿಗರಿಗಾಗಿ ಕನ್ನಡಿಸಲ್ಪಡಬೇಕಾಗಿದೆ. ಹಾದಿ ಬಹಳ ಸುತ್ತು ಸುತ್ತು ಎನಿಸಬಹುದಾದರೂ ಎಲ್ಲವನ್ನೂ ಸುತ್ತದೆ ಗತಿಯಿಲ್ಲ.

ಈ ವಿಷಯದಲ್ಲಿ ಬೇಂದ್ರೆಯವರು ತುಳಿದ ಹಾದಿ ಪಂಪನಿಗಿಂತ ಭಿನ್ನವಾದದ್ದು. ಅವರ ಕಾವ್ಯದಲ್ಲಿ ಮಾರ್ಗ-ದೇಸಿಗಳು ಕೆಲವು ಸಲ ಪ್ರತ್ಯೇಕವಾಗಿ, ಅನೇಕ ಸಲ ಒಂದರೊಳಗೊಂದು ಸೇರಿ ಹೊಸ ಬಗೆಯ ಹಲವು ಹದಗಳನ್ನು ಕಂಡುಕೊಂಡಿವೆ. ಅವರ ಸಂಕೀರ್ಣ ಸಂವೇದನೆಯಲ್ಲಿ ವಿಷ್ಣು-ಬ್ರಹ್ಮ-ಶಿವರಂಥ ಅಭಿಜಾತ ಪುರಾಣಗಳ ಮಾರ್ಗದೇವತೆಗಳಿರುವಂತೆಯೇ ಧಾರವಾಡದ ಸೋಮೇಶ್ವರ, ಕೊಪ್ಪದ ಕೆರೆಯ ದುರ್ಗಿ, ಹೊಸಯೆಲ್ಲಾಪುರದ ಮೈಲಾರಲಿಂಗಗಳಿಗೂ ಸ್ಥಳವಿದೆ.

ಲೌಕಿಕ – ಆಗಮಿಕಗಳೆಂದು ಎರಡು ಪ್ರತ್ಯೇಕ ಕಾವ್ಯಗಳನ್ನು ಬರೆದೆನೆಂದು ಪಂಪ ಅಂದುಕೊಂಡಿದ್ದರೂ ಸಮಸ್ಯೆ ಅಷ್ಟು ಸುಲಭವಾಗಿರಲಿಲ್ಲ. ಆಗಮಿಕ ಕಾವ್ಯವಾದ “ಆದಿಪುರಾಣ”ದಲ್ಲಿ ಭರತ-ಬಾಹುಬಲಿಯರ ಲೌಕಿಕ ಕಥೆಯೂ ಇತ್ತು. ಲೌಕಿಕ ಕಥೆ ಎಂದರೂ ಅದಕ್ಕೆ ಆಧ್ಯಾತ್ಮಿಕ ತೀವ್ರತೆಯೂ ಇತ್ತು. ಲೌಕಿಕ ಕಾವ್ಯವೆಂದುಕೊಂಡಿದ್ದ “ವಿಕ್ರಮಾರ್ಜುನವಿಜಯ” ದಲ್ಲಿ ಜೈನನಾದ ಪಂಪನಿಗೆ ವೈದಿಕ ದೇವರಾದ ಕೃಷ್ಣನನ್ನು ದೇವರು, ಅವತಾರಪುರುಷ ಎಂದು ಒಪ್ಪಿಕೊಳ್ಳಬೇಕಾದ ‘ಧರ್ಮಸಂಕಟ’ವಿತ್ತು. ‘ಪಂಪನಿಗೆ’ ಕವಿತೆಯಿಂದ ಮೇಲೆ ಉದಾಹರಿಸಿದ ಭಾಗದಲ್ಲಿ ಬಂದಿರುವ “ಇಹ-ಪರ-ಮಹಾನುಭಾವ ವ್ಯಂಜನೆ” ಎಂಬ ಮಾತು ಈ ಲೌಕಿಕ-ಆಗಮಿಕಗಳ ದ್ವಂದ್ವವನ್ನೇ ಸೂಚಿಸುತ್ತದೆ. ಹೀಗೆ ಜೈನನಾದ ಕವಿಯೊಬ್ಬ ವೈದಿಕ ಕೃಷ್ಣನನ್ನು ದೈವತವೆಂದು ಒಪ್ಪಿಕೊಳ್ಳುವುದರ ಅರ್ಥವಾದರೂ ಏನು? “ಕವಿ ಮತ್ತು ಗೃಹಸ್ಥಾಶ್ರಮಿ ಎಲ್ಲವನ್ನೂ ಸ್ವೀಕಾರ ಮಾಡಬೇಕು” (ಕಾಯ್ಕಿಣಿ, ೧೯೮೦:೬೭) ಎಂದು ಬೇಂದ್ರೆಯವರೇ ಇದಕ್ಕೆ ಸಮಾಧಾನ ನೀಡಿದ್ದಾರೆ. ಆಧ್ಯಾತ್ಮ, ಅನುಭಾವ, ಭಕ್ತಿಗಳಲ್ಲಿ ಮೊದಲಿನಿಂದಲೂ ಆಸಕ್ತಿ ಹೊಂದಿದ್ದ ಬೇಂದ್ರೆಯವರು ಭಕ್ತಿಪಂಥದ ಕವಿಗಳ ಉದಾರ ಜೀವನದೃಷ್ಟಿಯಲ್ಲಿ ತಮಗೆ ಬೇಕಾದ ಉತ್ತರವನ್ನು ಕಂಡುಕೊಂಡಾರು. ಬೇಂದ್ರೆಯವರ ವಿಮರ್ಶಾ ಬರಹಗಳಲ್ಲಿ ಮತ್ತೆಮತ್ತೆ ಈ ಸಮಸ್ಯೆಯ ಪ್ರಸ್ತಾಪವಿದೆ. ಅವರ ಕಾವ್ಯದಲ್ಲಿ ವಚನಕಾರರ, ದಾಸರ, ತತ್ವಪದಕಾರರ ದಟ್ಟ ನೆನಪುಗಳು ಕಾಣಿಸುವದು ಆಕಸ್ಮಿಕವಲ್ಲ.

ಹಳಗನ್ನಡದ ಕಾವ್ಯದೊಂದಿಗೆ ಬೇಂದ್ರೆಯವರು ನಡೆಸಿದ ಅನುಸಂಧಾನಕ್ಕೆ ಸ್ಪಷ್ಟ ಪುರಾವೆಗಳೇ ಬೇಕೆಂದರೆ ಅಂಥ ಕೆಲವನ್ನು ಉದಾಹರಿಸಬಹುದು.

೧.’ಪಂಪನ ನೆನೆದು’ (“ಗರಿ”) ಎಂಬ ಬೇಂದ್ರೆಯವರ ಕವಿತೆಯ ಕೊನೆಯಲ್ಲಿ ಒಂದು ಕಂದಪದ್ಯವಿದೆ.

ಒದಗಲಿ ಭುವಿಯೊಳ್ಕಿವಿಯೊಳ್
ಸದಮಲ ಕವಿಯೊಳ್ಸುಕೀರ್ತಿದುಂದುಭಿನಿನದಂ
ಕದನದೊಳಂ ಸದನದೊಳಂ
ವದನದೊಳಂ ನಿನ್ನ ಕೀರ್ತಿ ಮೆರೆಯಲಿ ಸತತಂ

ಇದು ಪಂಪನ ಭಾಷೆ-ಛಂದಸ್ಸುಗಳಲ್ಲೇ ಬೇಂದ್ರೆಯವರು ಪಂಪನಿಗೆ ಸಲ್ಲಿಸಿದ ಗೌರವ.

೨. ‘ವೃತ್ತಲಹರಿ’ (“ಜೀವಲಹರಿ”) ಎಂಬ ಪದ್ಯದಲ್ಲಿ ಮಂದಾಕ್ರಾಂತ ವೃತ್ತದಲ್ಲಿ ಬರೆದಿರುವ ಮೂರುನುಡಿಗಳಿವೆ. ಬೇಂದ್ರೆಯವರೇ ಇದನ್ನು “ಒಂದು ಸಾಹಿತ್ಯ ಕ್ರೀಡೆ” ಎಂದು ಕರೆದಿದ್ದಾರೆ.

ಗಂಗಾಸಂಗಾಕುಲಿತ ಮನವೇ ಮಾನಸೋದೀಪ್ತವಾಗಿ
ದಂಗಾದಂತೇ ಹರಿಯುತಿಹುದೈ ತನ್ನನೇ ಕೂಡಲಾಗಿ
ಒಂದಕ್ಕೊಂದಾ ಎಳೆತ ಬಲಿತೇ ಸಂದಿತೋ ಒಂದು ನೂಲು
ಸಂಧಾನಕ್ಕೇ ಕವನ ಕಲಿತೋ ಹೊಂದಿ ಬಂದಂತೆ ಸಾಲು

೩. ಇನ್ನೊಂದು ಕುತೂಹಲದ ಸಂಗತಿಯೆಂದರೆ, ಬೇಂದ್ರೆಯವರು ತಮ್ಮ ಬಾಲ್ಯದ ಗೆಳೆಯ ಶ್ರೀಧರ ಖಾನೋಳಕರರಿಗೆಂದು ಬರೆದ ‘ಶ್ರೀಧರ ತರ್ಪಣ’ (“ಮರ್ಯಾದೆ”) ಎಂಬ ಕವನದಲ್ಲಿ ಶಾರ್ದೂಲಕ್ರೀಡಿತ, ಚಂಪಕಮಾಲಾ, ಮತ್ತೇಭವಿಕ್ರೀಡಿತ ವೃತ್ತಗಳಲ್ಲಿ ರಚಿಸಿದ ನುಡಿಗಳಿವೆ ಎಂದು ಕಾಯ್ಕಿಣಿಯವರು ಗುರುತಿಸಿದ್ದಾರೆ (೧೯೮೦:೧೯).

೪. ‘ಹಕ್ಕಿ ಹಾರುತಿದೆ ನೋಡಿದಿರಾ’ (“ಗರಿ”) ಕವಿತೆಯಲ್ಲಿ ಬರುವ-

ಮುಟ್ಟಿದೆ ದಿಜ್ಮಂಡಲಗಳ ಅಂಚ
ಆಚೆಗೆ ಚಾಚಿದೆ ತನ್ನಯ ಚುಂಚ
ಬ್ರಹ್ಮಾಂಡಗಳನು ಒಡೆಯಲು ಎಂದೊ….

ಎಂಬ ಸಾಲುಗಳಲ್ಲಿಯ ಕಲ್ಪನೆಗೆ ನಾಗವರ್ಮನ “ಕಾವ್ಯಾವಲೋಕನಂ”ದಲ್ಲಿ ಉದಾಹರಣೆಯಾಗಿ ಬಂದಿರುವ “ಕುಡಿದಂಬೋಧಿಗಳೇಳುಮಂ ತವಿಪುದೇ… ಆ ಬ್ರಹ್ಮಾಂಡಮಂ ಚುಂಚುವಿಂದೊಡೆದೀಡಾಡುವುದೇ ವಿಹಂಗಮವಿದು…” ಎಂಬ ಪದ್ಯದಿಂದ ಬೇಂದ್ರೆಯವರು ಸ್ಫೂರ್ತಿ ಪಡೆದಿರಬಹುದೆ – ಎಂದು ತೀ.ನಂ. ಶ್ರೀಕಂಠನಯ್ಯವರು ಶಂಕಿಸಿದ್ದಾರೆ (೧೯೫೪:೩೬). ಬೇಂದ್ರೆಯವರ ಕವಿತೆಯಲ್ಲಿಯ ‘ಬ್ರಹ್ಮಾಂಡ’, ‘ಚುಂಚ’, ‘ಒಡೆ’ ಎಂಬ ಶಬ್ದಗಳು, ಜೊತೆಗೆ ‘ಹಕ್ಕಿ’ (ವಿಹಂಗಮ) ನಾಗವರ್ಮ ಉದಾಹರಿಸಿದ ಪದ್ಯದಲ್ಲೂ ಇರುವುದು ಕುತೂಹಲಕರವಾಗಿದೆ.

೫.’ಬೆಳಗು'(“ಗರಿ”) ಕವಿತೆಯಲ್ಲಿಯ –

ಗಿಡಗಂಟೆಯಾ ಕೊರಳೊಳಗಿಂದ
ಹಕ್ಕೀಗಳ ಹಾಡು
ಹೊರಟಿತುಹಕ್ಕೀಗಳ ಹಾಡು

ಎಂಬ ಸಾಲುಗಳು ಮಾಸ್ತಿಯವರ ವಿಶ್ಲೇಷಣೆಯಿಂದಾಗಿ ಪ್ರಸಿದ್ಧವಾಗಿವೆಯಷ್ಟೇ? ಇಲ್ಲಿಯ ಕಲ್ಪನೆಗೂ, ನಾಗಚಂದ್ರನ “ಮಲ್ಲಿನಾಥ ಪುರಾಣ”ದಲ್ಲಿ ಬರುವ-

ಆನಿರ್ದ ಬನದೊಳುಳಿದುವ
ನೇನಮ್ ನೃಪ ನೋಳ್ಪೆ ಬರ್ಪುದೆಂಬಂದದಿಂ
ದೇನುಲಿದುದೊ ಪಿಕಮಧರ
ಧ್ವಾನದಿನಾರಕ್ತ ಕೋರಕಂ ಸಹಕಾರಂ” (೧೫)

ಎಂಬ ಸಾಲುಗಳ ಕಲ್ಪನೆಗೂ ಇರುವ ಹೋಲಿಕೆಯನ್ನು ಜಿ.ಎಸ್. ಶಿವರುದ್ರಪ್ಪನವರು ನೆನಪಿಸಿದ್ದಾರೆ (೧೯೬೫:೧೯೫). ಆದರೆ ಅವರು ಪ್ರೇರಣೆ-ಪ್ರಭಾವಗಳ ಮಾತನ್ನು ಇಲ್ಲಿ ಎತ್ತಿಲ್ಲ.

ಇದಕ್ಕಿಂತ ಕುತೂಹಲಕರವಾದ ಹೋಲಿಕೆ ಅಲ್ಲಮನ ವಚನವೊಂದರ ಸಾಲಿನಲ್ಲಿ ಸಿಗುತ್ತದೆ. “ಸತ್ತ ಕೋಳಿ ಎದ್ದು ಕೂಗಿತ್ತ ಕಂಡೆ” ಎಂದು ಆರಂಭವಾಗುವ ವಚನದ ೨ನೇ ಸಾಲು “ಮೊತ್ತದ ಮಾಮರನಲಿಯಿತ್ತ ಕಂಡೆ” ಎಂದಿದೆ. ಇಲ್ಲಿ ಮಾಮರದಲ್ಲಿ ಕುಳೀತ ಹಕ್ಕಿಗಳಲ್ಲ. (ಹಕ್ಕಿಗಳು ಕುಳಿತ) ಮಾಮರವೇ ಉಲಿಯುತ್ತದೆ. ವಚನದ ಮುಂದಿನ ಸಾಲುಗಳಲ್ಲಿ-“ಕತ್ತಲೆ ಬೆಳಗಾಗುತ್ತ ಕಂಡೆ | ಹೊತ್ತಾರೆ ಎದ್ದು ಹೊಲುಬುಗೆಟ್ಟಿತ್ತ ಕಂಡೆ”- ‘ಬೆಳಗಿ’ನ ಸೂಚನೆಯೂ ಇರುವದು ಇನ್ನೂ ಕುತೂಹಲಕರವಾಗಿದೆ. ಬೆಳಗಿನ ಜಾವದಲ್ಲಿ ಹಕ್ಕಿಗಳು ಮಾಮರದಲ್ಲಿರುವದು ಸಹಜವೇ ಆಗಿದೆ.

ಜನ್ನನ “ಯಶೋಧರ ಚರಿತೆ”ಯಲ್ಲಿ ಕಳೆಗುಂದಿದ ಯಶೋಧರನ ಮುಖವನ್ನು ನೋಡಿ ಅವನ ತಾಯಿ ಚಂದ್ರಮತಿ “ಏಕೆ ಕಂದ, ಪಗಲೊಗೆದಿಂದುವಿನಂತಾಯ್ತು ನಿನ್ನ ಮಂಗಲವದನಂ?” ಎಂದು ಕೇಳುವ ಪ್ರಸಂಗ ಬರುತ್ತದೆ. ಇಲ್ಲಿಯ ಹೋಲಿಕೆ ಬೇಂದ್ರೆಯವರ ‘ನೀ ಹಿಂಗ ನೋಡಬ್ಯಾಡ ನನ್ನ’ (“ನಾದಲೀಲೆ”) ಎಂಬ ಕವಿತೆಯಲ್ಲಿಯ “ಹುಣ್ಣಿವೀ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲತ ಹಗಲ” ಎಂಬ ಪ್ರಸಿದ್ಧ ಸಾಲನ್ನು ತಟ್ಟನೆ ನೆನಪಿಸುವಂತಿದೆ. ಜನ್ನನಲ್ಲಿಯ ಹೋಲಿಕೆ ಸಾಧಾರಣೀಕೃತಗೊಂಡದ್ದು. ಬೇಂದ್ರೆಯವರಲ್ಲಿ ಅದು ಖಚಿತ ವಿವರಗಳನ್ನು ಒಳಗೊಂಡ ರೂಪಕವಾಗಿದೆ. ಚಂದಿರ ಇಲ್ಲಿ ಹುಣ್ಣಿವೀ ಚಂದಿರವಾಗಿದ್ದರಲ್ಲಿ ಹೆಚ್ಚಿನ ಔಚಿತ್ಯವಿದೆ. ಹುಣ್ಣಿವೆಯ ಚಂದಿರ ಮುಂಜಾವಿನಲ್ಲೂ ಸ್ವಲ್ಪ ಕಾಲ ಕಾಣಿಸುವದು ಸಹಜ ಸಂಗತಿ. ಹುಣ್ಣಿವೆಯ ರಾತ್ರಿ ಅತ್ಯಂತ ಕಾಂತಿಯುಕ್ತನಾಗಿರುವ ಚಂದಿರ ಹಗಲಿನಲ್ಲಿ ಕಾಂತಿಹೀನವಾಗಿ ಕಾಣುವುದರಲ್ಲಿ ವೈದೃಶ್ಯ ಹೆಚ್ಚು ಸ್ಪಷ್ಟವಾಗಿದೆ. ಹಗಲಿನಲ್ಲಿ ಅವನು ತನ್ನ ಪ್ರಭೆಯನ್ನು ಕಳೆದುಕೊಂಡು ಹೆಣವಾಗುವ ವಿವರ ಹೊಸ ದೃಶ್ಯಪ್ರತಿಮೆಯಾಗಿ ಒಡಮೂಡಿದೆ. ನೀರಲ್ಲಿ ಮುಳುಗಿ ಮೂರು ದಿನಗಳ ನಂತರ ತೇಲತೊಡಗಿದ ಹೆಣದ ನೆನಪನ್ನು ಇದು ತರುತ್ತದೆ. ಮಗು ಸಾಯುತ್ತದೇನೊ ಎಂಬ ಆತಂಕ ತುಂಬಿದ ಕವಿತೆಯ ವಾತಾವರಣದಲ್ಲಿ ಅದು ನಾಯಕನ ಹೆಂಡತಿಯ ಮುಖದ ಮೇಲೆ ಮೂಡಿದ ಸಾವಿನ ಭಯವನ್ನು ಪರಿಣಾಮಕಾರಿಯಾಗಿ ಸೂಚಿಸುತ್ತದೆ. ಹೀಗೆ, ಹೋಲಿಕೆ ಹಳೆಯದಾದರೂ ಅದು ಸೇಂದ್ರಿಯ ವಿವರಗಳ ಜೊತೆಗೆ ಹೊಸ ಔಚಿತ್ಯವನ್ನು ಗಳಿಸಿಕೊಂಡಿದೆ. ಇದು, ಬೇಂದ್ರೆಯವರು ಹಳೆಯದನ್ನು ಹೊಸತುಗೊಳಿಸಿಕೊಳ್ಳುವ, ಸಾಮಾನ್ಯವನ್ನು ಸಂಕೀರ್ಣಗೊಳಿಸಿಕೊಳ್ಳುವ ಒಂದು ರೀತಿಯಾಗಿದೆ.

ಚಂದ್ರಶೇಖರ ಕಂಬಾರರು ಬೇಂದ್ರೆ ಮತ್ತು ಹರಿಹರರ ಸಂಬಂಧವನ್ನು ಗುರುತಿಸುತ್ತ ಒಂದು ಮಹತ್ವದ ಒಳನೋಟ ನೀಡಿದ್ದಾರೆ: “ಬೇಂದ್ರೆಯವರ ಒಟ್ಟು ಕೃಷಿಯನ್ನು ಗಮನಿಸಿದಾಗ, He is on the wheel of endless becoming ಎಂದು ಅನಿಸುತ್ತದೆ. ಕನ್ನಡದ ಇನ್ನೊಬ್ಬ ಇಂಥ ಕವಿ ಹರಿಹರ. ಎಷ್ಟೊಂದು ಶರಣರ ಮೈಹೊಕ್ಕು ಭಕ್ತಿ ಯನ್ನನುಭವಿಸಿದರೂ, ಎಷ್ಟೊಂದು ಜೀವಸಂದರ್ಭಗಳಲ್ಲಿ ಹೊಕ್ಕು ಭಕ್ತಿರಸಾಯನವುಂಡರೂ, ತೃಪ್ತನಾಗುವ ಜೀವ ಆತನದು” (೧೯೭೫:೮). ಬೇಂದ್ರೆಯವರಲ್ಲೂ ಅನುಭವದ ಬಗ್ಗೆ ಇಂಥ ತೀರದ ದಾಹ ಕಾಣಿಸುತ್ತದೆ. ಅವರು ವಸ್ತು, ರೀತಿ, ಭಾಷೆ, ಲಯ, ಛಂದಸ್ಸುಗಳಲ್ಲಿ ನಡೆಸಿದ ನಿರಂತರ ಹುಡುಕಾಟ ಮತ್ತು ಸಾಧಿಸಿದ ವೈವಿಧ್ಯ ಇದಕ್ಕೊಂದು ಉದಾಹರಣೆಯಾಗಿದೆ. ಜೊತೆಗೆ, ಬೇಂದ್ರೆಯವರು ಹರಿಹರನ ಕಾವ್ಯದೊಂದಿಗೆ ನಡೆಸಿದ ಅನುಸಂಧಾನಕ್ಕೆ ಒಂದು ಕುತೂಹಲಕರವಾದ ಉದಾಹರಣೆ ಸಿಗುತ್ತದೆ.

“ಗಿರಿಜಾ ಕಲ್ಯಾಣ ಮಹಾಪ್ರಬಂಧಂ”ದ ಒಂದು ಪದ್ಯದಲ್ಲಿ ಗಿರಿಜೆಯ ದೃಷ್ಟಿ ಶಿವನ ತಲೆಯಿಂದ ಪಾದದವರೆಗೆ ಹರಿದಾಡಿ ಅವನ ಅಂಗಾಂಗಗಳನ್ನೆಲ್ಲ ಸ್ಪರ್ಶಿಸಿ ಸುಖಿಸಿದ ಸುಂದರವಾದ ವರ್ಣನೆ ಇದೆ:

ಪೊಸ ಜೆಡೆಯೊಳ್ ತೊಂಡಂಕಿ, ನೊಸಲೊಳ್ ನಡೆಪಾಡಿ, ಕಪೋಲಭಾಗದೊಳ್
ಪಸರಿಸಿ, ಲೋಚನಂಗಳೊಳಮರ್ಚಿ, ತದಾಸ್ಯದೊಳೊಂದಿ, ಕಂಠದೊಳ್
ಮಿಸುಗಿ, ಭುಜಾಗ್ರದೊಳ್ ತೊಳಗಿ, ವಕ್ಷದೊಳಾಳ್ದು, ಕರಂಗಳೊಳ್ ವಿರಾ
ಜಿಸಿ, ಪದದಲ್ಲಿ ಬಿಳ್ದುವು ಭವಾನಿಯ ಮಾನಿಯ ದೈನ್ಯದೃಷ್ಟಿಗಳ್||(೮೬)

ಇಲ್ಲಿಯ ವಿವರಗಳಲ್ಲಿ ಚಲನೆಯ ಸೂಚನೆಗಳಿದ್ದರೂ, ಕ್ರಿಯಾಪದಗಳು ದೃಷ್ಟಿಯೇ ಎಲ್ಲ ವಾಕ್ಯಾಂಗಗಳಿಗೆ ಕರ್ತೃವೆಂಬುದನ್ನು ಸ್ಪಷ್ಟವಾಗಿಯೇ ಹೇಳುತ್ತವೆ. ಈ ಗ್ರಹಿಕೆಯನ್ನು ಇಟ್ಟುಕೊಂಡೇ, ದೃಷ್ಟಿಯು ಮಾಡಬಹುದಾದ ವಿವಿಧ ಕ್ರಿಯೆಗಳು ವರ್ಣಿಸಲ್ಪಟ್ಟಿವೆ. ಅದು ಸ್ಪರ್ಶೇಂದ್ರಿಯದಂತೆ ಕೆಲಸ ಮಾಡುತ್ತಿದೆ ಎಂಬ ಅಸ್ಪಷ್ಟ ಸೂಚನೆಯೂ ಇದೆ. ಇಲ್ಲಿಯ ಸಂದರ್ಭವೂ ಮುಖ್ಯವಾದದ್ದು. ಶಿವನನ್ನು ಒಲಿಸುವದಕ್ಕಾಗಿ ಗಿರಿಜೆ ತಪಸ್ಸು ಮಾಡುತ್ತಿದ್ದಾಳೆ. ಸ್ವತಃ ತಪಸ್ಸಿನಲ್ಲಿ ಮಗ್ನನಾಗಿರುವ ಶಿವನನ್ನು ಎಚ್ಚರಿಸಬೇಕೆಂದು ದೇವತೆಗಳೆಲ್ಲ ಕೂಡಿ ಕಾಮನನ್ನು ಮುಂದೆ ಮಾಡಿ ನಡೆಸಿದ ಪ್ರಯೋಗ ವಿಫಲವಾಗಿದೆ. ತಾರಕಾಸುರನ ಸಂಹಾರಕ್ಕಾಗಿ ಶಿವನ ತಪಸ್ಸು ಭಂಗವಾಗಲೇಬೇಕಾಗಿದೆ. ಅದಕ್ಕಾಗಿ ಗಿರಿಜೆಯ ತಪಸ್ಸು ಫಲಿಸಿ, ಶಿವ ಎಚ್ಚೆತ್ತು, ಅವಳನ್ನು ವರಿಸಿ, ಕುಮಾರಸಂಭವವಾಗಬೇಕಾಗಿದೆ. ಅಂತೆಯೇ ಅವಳ ದೃಷ್ಟಿಯಲ್ಲಿ ಕಾಮ ಕೈಮೀರಿ ಪ್ರಕಟವಾಗಿದೆ.

ಹರಿಹರನ ಈ ಪದ್ಯದ ಪ್ರೇರಣೆಯಿಂದ ತಾವು ‘ಶಿವದೃಷ್ಟಿ’ ಎಂಬ ಕವಿತೆಯನ್ನು ಬರೆದಿರುವದಾಗಿ ಬೇಂದ್ರೆಯವರು ಕವಿತೆಯ ಸಂದರ್ಭ ಮತ್ತು ಪ್ರೇರಣೆಗಳನ್ನು ತಾವೇ ಸೂಚಿಸಿದ್ದಾರೆ. ಆ ಕವಿತೆ ಹೀಗಿದೆ:

ಅವನ ನೋಟ ಅವಳ ಕೂಟ ಏನೋ ಆಟವಾಡಿತು |
ಏನೇನೋ ಮಾಡಿತು ||


ಕೂದಲನ್ನು ಹಣಿಗೆಯಂತೆ ಹಿಕ್ಕಿ ಹಿಕ್ಕಿ ಬಾಚಿತು |
ಕರುಳಿಗೆ ಕುಡಿ ಚಾಚಿತು||

ಎಂದು ಆರಂಭವಾಗುವ ಈ ಕವಿತೆಯಲ್ಲಿ ಹರಿಹರನ ‘ಗಿರಿಜಾದೃಷ್ಟಿ’ ‘ಶಿವದೃಷ್ಟಿ’ಯಾಗಿ ಬದಲಾಗಿದೆ. ಮೇಲು ಮೇಲಿನ ಹೋಲಿಕೆಗಳನ್ನು ಕಂಡೊಡನೆ ‘ಪ್ರಭಾವ’ ಎಂದು ಅವಸರದ ತೀರ್ಮಾನಕ್ಕೆ ಬರುವ ಸಂಶೋಧನೆಗೆ ಇದಕ್ಕೂ ಹೆಚ್ಚಿನದು ಕಾಣಲಾರದು*[1]. ದೃಷ್ಟಿಯ ಬದಲಾವಣೆಯ ಆಚೆಗೆ ಇನ್ನೂ ಅನೇಕ ವಿಷಯಗಳ ಬಗ್ಗೆ ಈ ಕವಿತೆ ನಮ್ಮ ಗಮನವನ್ನು ಅಪೇಕ್ಷಿಸುತ್ತದೆ. ಮೊದಲನೆಯದಾಗಿ, ಹರಿಹರನ ಪದ್ಯದಲ್ಲಿಯ ಶಿವ – ಗಿರಿಜೆಯರು ಬೇಂದ್ರೆಯವರ ಕವಿತೆಯಲ್ಲಿ ಕೇವಲ ‘ಅವನು-ಅವಳು’ ಎಂಬ ಸರ್ವನಾಮಗಳಾಗಿದ್ದಾರೆ. ಅದರಿಂದಾಗಿ ಕವಿತೆ ಸಾರ್ವತ್ರಿಕತೆಯ ಕ್ರಿಯಾಪದಗಳು ಹರಿಹರನಲ್ಲಿಯ ದೃಷ್ಟಿಯ ಕರ್ತೃತ್ವವನ್ನು ಮಸುಕುಗೊಳಿಸಿ, ಸ್ಪರ್ಶೇಂದ್ರಿಯದ ಗುಣವಿದೆಯಾದರೂ ಬೇಂದ್ರೆಯವರಲ್ಲಿ ಅದೇ ಒಡೆದು ಕಾಣುತ್ತದೆ. ಎಷ್ಟರ ಮಟ್ಟಿಗೆ ಎಂದರೆ, ಇಲ್ಲಿ ಕೆಲಸ ಮಾಡುತ್ತಿರುವದು ಕೈಗಳಂದೇ ಅನಿಸುತ್ತದೆ. ಎರಡನೆಯ ಸಾಲಿನ “ಏನೇನೋ ಮಾಡಿತು” ಎಂಬ ಮಾತಿನಲ್ಲಿಯೇ ಆ ಅರ್ಥ ಹೊಳೆದು. “ಕೂದಲನ್ನು ಹಣಿಗೆಯಂತೆ ಹಿಕ್ಕಿ ಹಿಕ್ಕಿ ಬಾಚಿತು” ಎಂಬ ಮಾತಿನಲ್ಲಿ ಅದು ದೃಢಪಡುತ್ತದೆ. ಪರಿಣಾಮವಾಗಿ, ಇಲ್ಲಿ ನಡೆಯುತ್ತಿರುವದು ದೃಷ್ಟಿಯ ಹರಿದಾಟವಷ್ಟೇ ಅಲ್ಲ, ಅದು ದೈಹಿಕ ಸಂಬಂಧವಾಗಿ ಬೆಳೆಯುತ್ತದೆ. ಅವಳ ತಲೆಗೂದಲನ್ನು ಹಿಕ್ಕುವುದರಿಂದ ಆರಂಭವಾಗಿ, ಹಣೆಗೆ ಮುತ್ತು ಕೊಟ್ಟು, ಕಣ್ಣಲ್ಲಿ ಕಣ್ಣಿಟ್ಟು ನೋಡಿ, ತುಟಿ ಮುಟ್ಟಿ, ಕೊರಳಿಗೆ ಜೋತುಬಿದ್ದು, ಕೈ ಕೈ ಹಿಸುಕಿ ಎದೆಯ ಆಳದಲ್ಲಿ ಮುಳುಗಿ,

ಪಕ್ಕೆಗಳಿಗೆ ತೆಕ್ಕೆ ಬಿದ್ದು ಕಂಕುಳವನ್ನು ಸೋಂಕಿತು |
ಬೆನ್ನ ಕಟ್ಟಿ ನೂಂಕಿತು ||
ನಡುವಿಗೆ ನಡುಪಟ್ಟೆಯಾಗಿ ತೊಡೆಗಳಲ್ಲಿ ತಂಗಿತು |
ಧ್ಯಾನದಲ್ಲಿ ಇಂಗಿತು ||

ಅಂತಿಮವಾಗಿ ಅದು ಲೈಂಗಿಕ ಕ್ರಿಯೆಯಾಗಿ ಬೆಳೆಯುತ್ತದೆ:

ಅಡಿಯಿಂದಲು ಮುಡಿಯವರೆಗು ಅಳೆದು ಬೆಳೆದು ಹೊಳೆದಿತು|
ಮೈಯನೆಲ್ಲ ತೊಳೆದಿತು||

ವಿವರಗಳು ಅಷ್ಟು ಮೂರ್ತವಾಗಿವೆ. ಇದೊಂದು ಕೇವಲ ಲೌಕಿಕ ಅನುಭವವೇನೊ ಎಂದುಕೊಳ್ಳುವಷ್ಟರಲ್ಲಿ “ಧ್ಯಾನದಲ್ಲಿ ಇಂಗಿತು” ಮತ್ತು-

ಅಂತರಂಗದಲ್ಲಿ ತರತ್ತರಂಗವಾಗಿ ಮೂಡಿತು|
ಅಂತರಾತ್ಮಗೂಡಿತು||

ಎಂಬ ಸಾಲುಗಳಲ್ಲಿ ಹರಿಹರನ ಮೂಲ ಪದ್ಯದ ಹಿಂದಿನ ದೈವಸಂಕಲ್ಪದ ಸೂಚನೆಯನ್ನೂ ಕವಿತೆ ಉಳಿಸಿಕೊಂಡಿದೆ. ಅಂತೆಯೇ ಮೂರನೆಯದಾಗಿ, ಅದು ‘ಶಿವ’ (ಮಂಗಳ) ದೃಷ್ಟಿಯಾಗಿದೆ. ಈ ದೃಷ್ಟಿಯಿಂದಲೇ ಹರಿಹರನ ‘ಗಿರಿಜಾದೃಷ್ಟಿ’ ಬೇಂದ್ರೆಯವರಲ್ಲಿ ‘ಶಿವದೃಷ್ಟಿ’ಯಾಗಿರುವದರ ಔಚಿತ್ಯವನ್ನು ಗಮನಿಸಬೇಕು.

ಹೀಗೆ, ಹರಿಹರನ ‘ಆಗಮಿಕ’ ಪಠ್ಯದ ವಿವರಗಳನ್ನು ‘ಲೌಕಿಕ’ ವಿವರಗಳಾಗಿ ಬೆಳೆಸುವ/ ಪರಿವರ್ತಿಸುವ ಮೂಲಕ ಬೇಂದ್ರೆಯವರ ಕವಿತೆ ಜಗತ್ತಿನ ಮಾತಾಪಿತರಾದ ಪಾರ್ವತಿ-ಪರಮೇಶ್ವರರ ಸಂಬಂಧವನ್ನು ತನ್ನ ಅರ್ಥದಲ್ಲಿ ಉಳಿಸಿಕೊಂಡು, ಇನ್ನಷ್ಟು ಅರ್ಥಪೂರ್ಣವಾಗುತ್ತದೆ. ಲೌಕಿಕ-ಆಗಮಿಕಗಳ ಸಮಸ್ಯೆಯನ್ನು ಬೇಂದ್ರೆಯವರು ಎದುರಿಸಿದ ಒಂದು ರೀತಿ ಇದು. ರೀತಿಯಲ್ಲಾಗಲಿ, ಪರಿಣಾಮದಲ್ಲಿಯಾಗಲಿ, ಶಿವ-ಪಾರ್ವತಿಯರ ದೇವಕಾಮಕ್ಕೂ, ‘ಅವನ-ಅವಳ’ ಜೀವಕಾಮಕ್ಕೂ ವ್ಯತ್ಯಾಸವಿಲ್ಲವೆಂದು ಬೇಂದ್ರೆಯವರ ಕವಿತೆ ಧ್ವನಿಸುತ್ತದೆ.

ಇದೇ ಸಂದರ್ಭದಲ್ಲಿ, ಹರಿಹರನ ಪದ್ಯವನ್ನು ಅನುಸರಿಸಿದಂತಿರುವ ಒಂದು ಪದ್ಯ ಆಂಡಯ್ಯನ “ಕಬ್ಬಿಗರ ಕಾವಂ”ದಲ್ಲಿ ರತಿಯು ಮನ್ಮಥನನ್ನು ನೋಡಿದ ರೀತಿಯಲ್ಲಿ ಬಂದಿರುವದನ್ನು ಗಮನಿಸಬಹುದು:

 ನಗೆಮೊದದೊಳ್ ತೆರಂಬೊಳೆದು, ನುಣ್ದುಟಿಯೊಳ್ ಮೊಗವಿಕ್ಕಿ, ಗಲ್ಲದೊಳ್
ಜಗುಳ್ದು, ಕೊಡಂಕೆಯೊಳ್ ನುಸುಳ್ದು, ಪೇರುರದೊಳ್ ಸುಳಿದಾಡಿ, ತೋಳ್ಗಳೊಳ್
ಸೊಗಯಿಸಿ ಸೊರ್ಕಿ, ಪೊರ್ಕಳೊಳಡಂಗಿ, ತೊಳಪ್ಪುಡೆಯೊಳ್ ಸಡಿಲ್ದು, ಕಾ
ಲುಗುರ್ಗಳೊಳ್ಯೆದೆ ಮಾರ್ಪೊಳೆದುವಾಕೆಯ ಡಾಳಮನಾಂತ ದಿಟ್ಟಿಗಳ್||*[2]
(“ಕಬ್ಬಿಗರ ಕಾವಂ”: ೩೩೦)

ಬೇಂದ್ರೆಯವರು ಆಂಡಯ್ಯನ ಈ ಪದ್ಯವನ್ನು ಗಮನಿಸಿರಲೂಬಹುದು. ಆದರೆ ರತಿ-ಮನ್ಮಥರ ಸಂಬಂಧಕ್ಕಿಂತ ಶಿವ-ಪಾರ್ವತಿಯರ ಸಂಬಂಧವೇ ಅವರಿಗೆ ಹೆಚ್ಚು ಅರ್ಥಪೂರ್ಣವಾಗಿ ಕಂಡಿರಬೇಕು. ಅವರ ಈ ಆಯ್ಕೆ ಮಹತ್ವದ್ದಾಗಿದೆ. ಅವರ ಕವಿತೆ ಹರಿಹರನ ವರ್ಣನೆಗೆ ಹೆಚ್ಚು ಹತ್ತಿರವಾಗಿರುವದು ಸ್ಪಷ್ಟವಾಗಿಯೇ ಇದೆ. ಆದರೆ ಮುಖ್ಯವಾದ ಮಾತೆಂದರೆ, ಹರಿಹರನ ಪದ್ಯ ಬೇಂದ್ರೆಯವರ ಕೈಯಲ್ಲಿ ಹೊಸ ಜೀವ ಪಡೆಯುವಂತೆ ಆಂಡಯ್ಯನ ಕೈಯಲ್ಲಿ ಪಡೆಯುವದಿಲ್ಲ.

ಟಿ.ಎಸ್. ಎಲಿಯಟ್ ತನ್ನ “ದಿ ವೇಸ್ಟ್‌ಲ್ಯಾಂಡ್” ಕವಿತೆಯಲ್ಲಿ ಹಳೆಯ ಅಭಿಜಾತ ಪಠ್ಯಗಳಿಗೆ ಹೊರಸೂಚನೆಗಳನ್ನು (Literary allusions) ಕೊಡುವ ಇಂಥ ತಂತ್ರವನ್ನು ಅನೇಕ ಕಡೆ ಬಳಸಿದ್ದಾನೆ. ಒಂದು ಉದಾಹರಣೆ ಕೊಡುವದಾದರೆ, ಆಧುನಿಕ ಕಾಲದ ಸೊಗಸುಗಾರ ಹೆಣ್ಣೊಬ್ಬಳನ್ನು ವರ್ಣಿಸುವಾಗ, ಷೇಕ್‌ಸ್ಪಿಯರ್‌ನ “ಅಂಡ್ ಕ್ಲಿಯೋಪಾತ್ರ” ನಾಟಕದಲ್ಲಿ ಬರುವ ಕ್ಲಿಯೋಪಾತ್ರಳ ವರ್ಣನೆಯನ್ನು ಭಾಷೆ, ಲಯ, ಪ್ರತಿಮೆಗಳ ಮೂಲಕ ದಟ್ಟವಾಗಿ ನೆನಪಿಸುವ ವಿವರಗಳನ್ನು ಸೇರಿಸಿ, ಅಲ್ಲಿಗೂ ಇಲ್ಲಿಗೂ ಇರುವ ಸಂಸ್ಕೃತಿ-ಅಭಿರುಚಿ-ಮೌಲ್ಯಗಳ ವ್ಯತ್ಯಾಸವನ್ನು ಅವನು ಸೂಚಿಸುತ್ತಾನೆ. ಎಲಿಯಟ್‌ನಲ್ಲಿ ವೈದೃಶ್ಯದ ತತ್ವ ಪ್ರಧಾನವಾಗಿದ್ದರೆ, ಬೇಂದ್ರೆಯವರಲ್ಲಿ ಸಾದೃಶ್ಯದ ತತ್ವ ಪ್ರಧಾನವಾಗಿದೆ. ಇಬ್ಬರೂ ತಮ್ಮ ಟಿಪ್ಪಣಿಗಳಲ್ಲಿ ಹಿಂದಿನ ಪಠ್ಯಗಳನ್ನು ಅರ್ಥಪೂರ್ಣವಾಗಿ ಓದುಗರ ನೆನಪಿಗೆ ತರುತ್ತಾರೆ.

ಮುಖ್ಯವಾದ ಸಂಗತಿಯೆಂದರೆ, ತನ್ನಷ್ಟಕ್ಕೆ ಪ್ರತ್ಯೇಕವಾಗಿ ಓದಿದಾಗ ಸಾಮಾನ್ಯವೆಂದು ಕಾಣುವ ಬೇಂದ್ರೆಯವರ ‘ಶಿವದೃಷ್ಟಿ’ ಎಂಬ ಕವಿತೆಗೆ ಹರಿಹರನ ಪದ್ಯದ ಹಿನ್ನೆಲೆಯಲ್ಲಿ ವಿಶೇಷ ಅರ್ಥ ಬರುತ್ತದೆ. ಇದು, ಪರಂಪರೆಯನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳುವ ಒಂದು ವಿಧಾನವಾಗಿರುವಂತೆ, ಅದನ್ನು ಆಧುನೀಕರಣಗೊಳಿಸಿಕೊಳ್ಳುವ ಮುಖ್ಯ ವಿಧಾನವೂ ಆಗಿದೆ.

[1] ಸುಮತೀಂದ್ರ ನಾಡಿಗರು, ಬೇಂದ್ರೆಯವರ ಮಾತುಗಳನ್ನು ಅನುಸರಿಸಿ, ಹರಿಹರನ ಪದ್ಯವನ್ನು ಉದ್ಧರಿಸಿದ್ದಾರೆ. (೧೯೯೮:೬೬)

[2] ಈ ಪದ್ಯವನ್ನು ನನ್ನ ಗಮನಕ್ಕೆ ತಂದವರು ಡಾ. ಎಂ.ಎಂ ಕಲಬುರ್ಗಿ ಅವರು.